ಬೆಂಬಲಿಗರು

ಶುಕ್ರವಾರ, ಏಪ್ರಿಲ್ 16, 2021

ಬೇಂಕುಗಳ ಕಲಸುಮೇಲೋಗರ

 ಬ್ಯಾಂಕುಗಳ ಕಲಸು ಮೇಲೋಗರ 


ಬ್ಯಾಂಕುಗಳ  ವಿಲೀನ ಪರ್ವ ನಡೆಯುತ್ತಿದೆ .ವ್ಯವಹಾರ ದೃಷ್ಟಿಯಿಂದ ಇದು ಸರಿ ಇರಬಹುದು .ಆದರೆ ಎಲ್ಲ ಸಂಸ್ಥೆ ಗಳಿಗೂ ಒಂದು ಆತ್ಮ ಇರುತ್ತದೆ . ಒಬ್ಬನು ಸಿಂಡಿಕೇಟ್ ಬ್ಯಾಂಕ್ ಗೆ  ಕೆಲಸಕ್ಕೆ ಸೇರಿ ಬೆಳೆದು ,ಅದರ ಜತೆ ತಾದಾತ್ಮ್ಯ ಹೊಂದಿದ ಮೇಲೆ ಒಂದು ದಿನ ಬೆಳಿಗ್ಗೆ  ನಿನ್ನ ಅನ್ನದಾತ ಕೆನರಾ ಬೇಂಕ್ ಎಂದರೆ ,ತನಗೆ ಸಂಬಳ ಸಾರಿಗೆ ಮೊದಲಿನಂತೆ ಬಂದರೂ ಅವನ  ಮನಸು ಹೊಂದಿಕೊಳ್ಳಲು ಸಮಯ ಬೇಕು  . ಹಳೇ  ಕೆನರಾ ಬ್ಯಾಂಕ್ ನವರಿಗೆ  ಸಿಂಡಿಕೇಟ್ ನಿಂದ ಬಂದವರು  ಹೊರಗಿನವರು .ಸಿಂಡಿಕೇಟ್ ನವರಿಗೆ  ಇದು ತಮ್ಮ ತವರು ಮನೆ ಅಲ್ಲ ಎಂಬ ಭಾವನೆ . ಮೊದಲೇ  ಬ್ಯಾಂಕುಗಳಲ್ಲಿ ಗ್ರಾಹಕರೊಡನೆ ಇದ್ದ  ವೈಯುಕ್ತಿಕ ಸಂಬಂಧಗಳು  ನಶಿಸುತ್ತಿವೆ . ಅದರ ಮೇಲೆ  ಕ್ಲರ್ಕ್ ಮತ್ತು ಮ್ಯಾನೇಜರ್ ಹುದ್ದೆಗೆ  ಬೇರೆ ರಾಜ್ಯಗಳಿಂದ ಸ್ಥಳೀಯ ಭಾಷೆ ಅರಿಯದ ಸಿಬ್ಬಂದಿ ಹೆಚ್ಚು .(ಇದು ಮೊದಲೂ ಇತ್ತು .ಆದರೆ ಅನುಪಾತ ಈಗ ಬದಲಾಗಿದೆ )

                ದಕ್ಷಿಣ ಕನ್ನಡ ದವರಿಗೆ ಒಂದು ಗುಣ ಇದೆ .ತಾವು ಹೋದಲ್ಲಿ ಭಾಷೆ ಬೇಗ ಕಲಿಯುವರು .ಹಿಂದಿ ಹೇಗೂ ಬರುವದು .ಅದರಿಂದ ನಮ್ಮ ಜಿಲ್ಲೆಯಲ್ಲಿ ಹುಟ್ಟಿಕೊಂಡ ಖಾಸಗಿ ಬ್ಯಾಂಕ್ ಗಳು  ಬೇಗ ಜನಪ್ರಿಯ ಆದವು . 

ಇನ್ನು  ಕೇಂದ್ರ ಸರಕಾರದ ಹಿಂದಿ ಜನಪ್ರಿಯ ಗೊಳಿಸುವ ಪರಿ ಪ್ರಶ್ನಾರ್ಹ . ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲಿ ಹಿಂದಿ ಅನುಷ್ಠಾನ ಇಲಾಖೆ ಮತ್ತು ಹೇರಳ ಸಿಬ್ಬಂದಿ ಇರುವರು .ಕಾಲ ಕಾಲಕ್ಕೆ ಒಂದು ಮೀಟಿಂಗ್ ಮಾಡುವುದು ,ತಿಂಡಿ ಕಾಫಿ ಕುಡಿಯುವದು ಮತ್ತು ಒಂದು ರಿಪೋರ್ಟ್ ಬರೆಯುವುದು ಇವರ ಕೆಲಸ .ಆಫೀಸ್ ಬ್ಯಾಂಕ್ ಗಳಲ್ಲಿ ಇಂದಿನ ಹಿಂದಿ ಶಬ್ದ ಎಂದು ಬರೆಯುವುದು . ನೀವು ಒಳ ಹೊಕ್ಕ ಕೂಡಲೇ  ಇಂದಿನ ಶಬ್ದ  बिल्ली means   ಬೆಕ್ಕು  ಎಂದು ಬರೆದಿರುವುದನ್ನು ಓದಿ ಯಾರು ಹಿಂದಿ ಕಲಿಯುವರು ?ಇದರಿಂದ ಹಿಂದಿ ಪ್ರಚಾರ ಮತ್ತು ಉದ್ದಾರ ಆಗದು ,ಜನರಿಗೂ ಉಪಯೋಗ ಶೂನ್ಯ . ಇದರ ಬದಲಿಗೆ ಉತ್ಪಾದಕ ಮತ್ತು ಜನೋಪಯೋಗಿ ನೌಕರಿ ಸೃಷ್ಟಿ ಮಾಡಬಹುದು .                                            ಹಳ್ಳಿಯಿಂದ  ಬಂದ  ತುಳು ,ಕನ್ನಡ ಮಾತ್ರ ಬರುವ ಗ್ರಾಹಕರು ಹೇಗೆ ವ್ಯವಹಾರ ಮಾಡ ಬೇಕು ?ಅವರಿಗೆ ಚಲನ್  ಭರ್ತಿ  ಮಾಡಲು ಹೇಳಿ ಕೊಡುವದು ಯಾರು ?

ನಿಜಕ್ಕೂ ಸರಕಾರಕ್ಕೆ ಜನರ ಕಾಳಜಿ ಇದ್ದರೆ  ಅವರು ಎಲ್ಲಾ ಕೇಂದ್ರ ಸರಕಾರದ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಸ್ಥಳೀಯ ವ್ಯಾವಹಾರಿಕ ಭಾಷೆಯನ್ನು ಹೊರಗಿನಿಂದ ಬಂದ  ಸಿಬ್ಬಂದಿಗೆ ಕಲಿಸುವ ಅಧಿಕಾರಿ ನೇಮಿಸ ಬೇಕು .ಅಂತೆಯೇ ಕಚೇರಿಗಳಲ್ಲಿ 

ಇಂದಿನ  ಶಬ್ದ  " ಬೇಲೆ  " meaning '' work" ಅಥವಾ " ಒಣಸ್ meaning ಊಟ ಎಂದು ಬರೆಯುವಂತಾಗ ಬೇಕು .

ಮೊನ್ನೆ  ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ಮ್ಯಾನೇಜರ್ ಆಗಿ ನಿವೃತ್ತರಾದ ಹಿರಿಯರು ಒಬ್ಬರು  ಈಗ ಬ್ಯಾಂಕ್ ಗೆ ಹೋದರೆ ನಮ್ಮನ್ನು ಬದಿಗೆ ನಿಲ್ಲಿ ಎಂದು ಗದರಿಸುವ ಸ್ಥಿತಿಗೆ ಬಂದಿದೆ ಎಂದು ಬೇಸರ ಹಂಚಿಕೊಂಡರು .

 

ಮಂಗಳವಾರ, ಏಪ್ರಿಲ್ 13, 2021

ವಾಚಿನ ಕತೆ

                                  


ಒಂದು  ವಾಚಿನ ಕತೆ 

 

  ಹಿಂದೆ  ಕೈ ಗಡಿಯಾರ ಸುಲಭವಾಗಿ ಸಿಗುತ್ತಿರಲಿಲ್ಲ .ಎಚ್ ಎಂ ಟಿ ವಾಚ್ ಗೆ ಬುಕ್ ಮಾಡಿ ಕಾಯಬೇಕಿತ್ತು .ಆಮದು ವಾಚ್ ಗಳು  ದುರ್ಲಭ ವಾಗಿದ್ದು  ತುಂಬಾ ತುಟ್ಟಿ ಯಾಗಿದ್ದವು . ಬ್ಲಾಕ್ ಮಾರ್ಕೆಟ್ ನಲ್ಲಿ ಸ್ವಲ್ಪ ಕಡಿಮೆಗೆ ಸಿಗುತ್ತಿದ್ದವು . (ನಾವು ಎಷ್ಟು ದೇಶ ಭಕ್ತರು ಎಂದು ಹೇಳಿ ಕೊಂಡರೂ ಬ್ಲ್ಯಾಕ್ ನಲ್ಲಿ ಏನಾದರೂ ಕಡಿಮೆಗೆ ಸಿಗುವುದಾದರೆ ಮುಗಿ ಬೀಳುವೆವು )

ಆದುದರಿಂದ ಹೈ ಸ್ಕೂಲ್ ಮತ್ತು ಪಿ ಯು ಸಿ ಯಲ್ಲಿ ನಮ್ಮ ಬಳಿ ಕೈಗಡಿಯಾರ ಇರುತ್ತಿರಲಿಲ್ಲ ,ಪಬ್ಲಿಕ್ ಪರೀಕ್ಷೆಗೆ ಹಿರಿಯರ  ವಾಚ್ ಕಟ್ಟಿಕೊಂಡು ಕೆಲವು ಅನುಕೂಲಸ್ಥ ಮನೆಯ ವಿದ್ಯಾರ್ಥಿಗಳು ಬರುವರು .ಶಾಲೆಯ ಬೀಳ್ಕೊಡುಗೆ ಸಮಾರಂಭದ  ಗ್ರೂಪ್ ಫೋಟೋದಲ್ಲಿ  ಹುಡುಗಿಯರು ಒಂದು ಜಡೆ ಮುಂದೆ ,ಇನ್ನೊಂದು ಹಿಂದೆ ಮತ್ತು ಕೈಯಲ್ಲಿ (ಹಿರಿಯರ ) ಗಡಿಯಾರದ ಡಯಲ್  ಕಾಣುವಂತೆ ನಿಂತಿರುವ ಚಿತ್ರ ಕಾಣಬಹುದು . 

 Rare Photos of Karnataka State , Bangalore and Mysore | Old pictures, Rare  photos, Karnataka

ಅಂತಿರುವಾಗ ನನಗೆ ಎಂ ಬಿ ಬಿ ಎಸ ಸೇರುವಾಗ ನನ್ನ ದೊಡ್ಡಣ್ಣ ಜನತಾ ಬಜಾರ್ ನಲ್ಲಿ  ಕ್ಯೂ ನಿಂತು ,(ಕಸ್ಟಮ್ಸ್ ನವರು ವಶ ಪಡಿಸಿ ಕೊಂಡ ಕಳ್ಳ ಮಾಲು ,ಅಲ್ಲಿ ಸಾಮಾನ್ಯ ಜನತೆಗೆ ತಲೆಗೆ ಒಂದರಂತೆ ಕೊಡುತ್ತಿದ್ದರು ) ಒಂದು ಬ್ಲೂ ಡಯಲ್  ಹೊಳೆಯುವ  ಹೆನ್ರಿ ಸ್ಯಾಂಡೋಜ್ ವಾಚ್ ತಂದು ಕೊಟ್ಟರು .ಅದು ನನ್ನ  ಬೆಲೆ ಬಾಳುವ  ಪೊಸೆಶನ್ ಆಯಿತು . ಮುಂದೆ ಸುಮಾರು ೨೫ ವರ್ಷ ನನ್ನಲ್ಲಿ ಇತ್ತು . 

  ಒಂದು ಬಾರಿ ಬೆಂಗಳೂರಿಗೆ ಹೋಗಿದ್ದವನು ಆಡುಗೋಡಿ ಬಳಿ ಫುಟ್ ಪಾತ್ ನಲ್ಲಿ  ನಡೆಯುತ್ತಿದ್ದಾಗ  ಈ ವಾಚ್ ಹೇಗೋ ಜಾರಿ ಕೆಳಗೆ ಬಿತ್ತು . ಬಿದ್ದದ್ದು ಫುಟ್ ಪಾತ್ ನ ಸ್ಲಾಬ್ ನಲ್ಲಿ ಒಂದು ಸಣ್ಣ ರಂಧ್ರದ ಮೂಲಕ ಚರಂಡಿ ಪಾಲಾಯಿತು .ನನ್ನ ನಿರಾಶೆ ಹೇಳ ತೀರದು .ಇನ್ನು ಸದ್ಯಕ್ಕಂತೂ ಕೈಗಡಿಯಾರ ಕೊಳ್ಳುವ ಸಾಧ್ಯತೆ ಇಲ್ಲ .ಆ ರಂಧ್ರದಲ್ಲಿ  ಬಗ್ಗಿ ನೋಡಿದೆ ..ಚರಂಡಿಯಲ್ಲಿ ನೀರು ಕೊಳಚೆ ಇರಲಿಲ್ಲ . ಒಳಗೆ ಸ್ವಲ್ಪ ಕತ್ತಲು . ನನ್ನ ಚಡಪಡಿಕೆ ಕಂಡು ಅಲ್ಲಿ ದಾರಿ ನಡೆಯುತ್ತಿದ್ದ ಒಬ್ಬ ಹುಡುಗ ಏನು ಸರ್ ಎಂದು ವಿಚಾರಿಸಿದ . ನಾನು ನನ್ನ ಗೋಳು ಹೇಳಿದೆ .ಆತ "ನೀವು ಚಿಂತೆ ಮಾಡ ಬೇಡಿ ನೋಡುವಾ ' ಎಂದು ಪಕ್ಕದ ಗ್ಯಾರೇಜು ನಿಂದ ಒಂದು ಸರಳಿನಂತಹ ಕಬ್ಬಿಣದ ರಾಡ್ ತಂದು ಅದರ ತುದಿಗೆ ರಸ್ತೆಯ ಪಕ್ಕದಲ್ಲಿ ಇದ್ದ ಡಾಮರಿನ  ಉಂಡೆ ಅಂಟಿಸಿ ಅದಕ್ಕೆ ಬೆಂಕಿ ಕೊಟ್ಟ .ಅದರ ಬೆಳಕಿನಲ್ಲಿ ರಂಧ್ರದ ಮೂಲಕ ಸರಳು ಒಳಗೆ ಇಳಿಸಲು  ನನ್ನ ವಾಚ್ ಕಂಡಿತು .ಡಾಮರಿನಲ್ಲಿ ಅದರ ಬೆಲ್ಟ್ ಒತ್ತಲು ಅದು ಅಂಟಿ ಕೊಂಡಿತು ,ಅದನ್ನು ಮೆಲ್ಲನೆ ಮೇಲಕ್ಕೆ ರಂಧ್ರದ ಮೂಲಕ ಮೇಲೆ ತಂದು ನನಗೆ ಕೊಟ್ಟನು .ನನಗೆ ಹೋದ ಜೀವ ಬಂದಂತಾಯಿತು . ಮತ್ತು ಆತನಿಗೆ ಸೂಕ್ತ ಬಹುಮಾನ ನೀಡಿದೆನು

ವೈದ್ಯೇತರ ಸೇವೆ

                          ವೈದ್ಯೇತರ( ಆದರೆ ವೈದ್ಯಕೀಯ) ಸೇವೆ 

ಮೊನ್ನೆ ಆದೂರು (ಕೇರಳ )ನಿಂದ ಒಬ್ಬ ಹುಡುಗ ಹೊಟ್ಟೆ ನೋವು ವಾಂತಿ ಎಂದು ಬಂದಿದ್ದ . ಪರೀಕ್ಷೆ ಮಾಡಿ ನೋಡುವಾಗ ಅವನಿಗೆ ಡೆಂಗ್ಯು ಕಾಯಿಲೆ ಇತ್ತು .ಕೆಲವೊಮ್ಮೆ ಜ್ವರ  ಇಲ್ಲದೆ ಮೈ ಕೈ ನೋವು ,ಹೊಟ್ಟೆ ನೋವು (ವಾಂತಿ ಸಹಿತ ಅಥವಾ ರಹಿತ ) ಡೆಂಗ್ಯು ಕಾಯಿಲೆಯಲ್ಲಿ ಇರುವುದುಂಟು . ಅವನಿಗೆ ಡೆಂಗ್ಯು ಇದೆಯೆಂದು ಗೊತ್ತಾದ ಮೇಲೆ ಅವನ ಮನೆ ಮತ್ತು ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಜ್ವರ ಇದ್ದ ಕಾರಣ ಕರೆದು ಕೊಂಡು ಬಂದರು .ಅವರಿಗೂ ಅದೇ ಕಾಯಿಲೆ ಇತ್ತು .ರಿಪೋರ್ಟ್ ಸಿಗುವಾಗ ಸಂಜೆ ಮೂರೂವರೆ .ಮಕ್ಕಳಲ್ಲಿ  ಸ್ವಲ್ಪ ನಿತ್ರಾಣ ಇದ್ದ ಕಾರಣ ಅವರಿಗೆ ಒಂದು ಗ್ಲುಕೋಸ್ ಡ್ರಿಪ್ ಹಾಕಿಸಿ ಹೋಗುವ ಆಸೆ .ಸಂಜೆ ಐದು ಗಂಟೆಗೆ ಅವರಿಗೆ ಇರುವ ಕೊನೇ ಬಸ್ ;ಅದು ಕುಂಟಾರಿಗೆ ಹೋಗುವುದು .ತಪ್ಪಿದರೆ  ಸ್ಪೆಷಲ್ ವಾಹನ ಮಾಡಿ ಹೋಗಬೇಕು . ಅವರ ಡ್ರಿಪ್ ಮುಗಿದಾಗ ನಾಲ್ಕು ಐವತ್ತು ,ಇನ್ನೂ ಬಿಲ್ ಕಟ್ಟಬೇಕು ,ಫಾರ್ಮೆಸಿ ಯಿಂದ ಔಷಧಿ ಕೊಂಡು ಅಲ್ಲಿಯ ಬಿಲ್ ಪಾವತಿ ಮಾಡಬೇಕು . ಬಿಲ್ ಕೌಂಟರ್ ಮತ್ತು ಫಾರ್ಮೆಸಿ ಯಲ್ಲಿ ರಶ್ ಇರುತ್ತದೆ .ಇವರ ಅವಸರ ಅವರಿಗೆ ತಿಳಿಯದು .ಅದಕ್ಕೆ ನಾನೇ ಅವರ ಹಿಂದೆ ಹೋಗಿ ಅವರ ಪಾವತಿ ಎಲ್ಲಾ ಮಾಡಿಸಿ ,ಔಷಧಿ ಕಟ್ಟು ಸ್ವತಃ ತಂದು ,ಒಂದು ಆಟೋ ತರಿಸಿ ಅವರನ್ನು ಅದರಲ್ಲಿ ತಳ್ಳಿ ,ಕಳುಹಿಸಿದೆ .ಬಸ್ ಸ್ಟಾಂಡ್ ತಲುಪುವಾಗ ಬಸ್ ಹೊರಡಲು ತಯಾರಾಗಿತ್ತಂತೆ. ಇದು ನಮ್ಮ ವೈದ್ಯೇತರ ಕೆಲಸ . ಮರುದಿನ ಅವರ ಪೈಕಿ ಬಂದವರು ನನಗೆ ಧನ್ಯವಾದ ಹೇಳಿದರು . ಹಳ್ಳಿಯ ಮುಗ್ದ ಜನ .

                   ಇನ್ನೊಮ್ಮೆ ಪೆರುವಾಯಿ ಒಬ್ಬ ಸಹೋದರಿ  ಪಾಂಕ್ರಿಯಸ್ ತೊಂದರೆಗೆ ದಾಖಲಾಗಿದ್ದರು .ಅವರನ್ನು ಎರಡು ದಿನ ಉಪವಾಸ ಇಟ್ಟು ಚೇತರಿಸಿ ಕೊಂಡ ಮೇಲೆ ,ನಾಳೆಯಿಂದ ಬರೀ ಗಂಜಿ ತೆಗೆದು ಕೊಳ್ಳಿರಿ ಎಂದೆ.ಮರುದಿನ  ಮಧ್ಯಾಹ್ನ ಅವರಿಗೆ ಭೇದಿ ಶುರು ಆಯಿತು .ವಿಚಾರಿಸಿದಾಗ ಅವರು ಬೆಳಿಗ್ಗೆ ಗಂಜಿ ಸಿಕ್ಕದು ಎಂದು ಮುಂಚಿನ ದಿನವೇ  ಹೊಟೇಲ್ ನಿಂದ ಗಂಜಿ ತರಿಸಿ ಇಟ್ಟು ಅದನ್ನು ಕುಡಿದಿದ್ದರು .ಹೊಟೇಲ್ ನಲ್ಲಿ  ಅದು ಮಧ್ಯಾಹ್ನ ಮಾಡಿದ್ದು ಇರ ಬಹುದು .ಮತ್ತೆ ಅವರಿಗೆ ಯೋಗ್ಯ ಚಿಕಿತ್ಸೆ ಸಲಹೆ ಮಾಡಿ ಮರುದಿನ ಮುಂಜಾನೆ ಆಸ್ಪತ್ರೆಗೆ ಬರುವಾಗ ನಾನೇ ಮನೆಯಲ್ಲಿ ಗಂಜಿ ಮಾಡಿಸಿ ತಂದು ಕೊಟ್ಟೆನು ,(ನನ್ನ ಮನೆಯವರು ಸಂತೋಷ ದಿಂದ ಮಾಡಿ ಕೊಟ್ಟರು) .ಗುಣ ಮುಖರಾಗಿ ಮನೆಗೆ ಹೋದರು.

ಆಸ್ಪತ್ರೆಯಲ್ಲಿ  ರೋಗಿಗಳ ಪರೀಕ್ಷೆ ಮಾಡಿ ಔಷಧಿ ಕೊಡುವುದಲ್ಲದೆ ಅವರನ್ನು ತಳ್ಳು ಗಾಲಿಯಲ್ಲಿ ಕೂರಿಸುವುದು (ಮತ್ತು ಕೆಲವೊಮ್ಮೆ ತಳ್ಳುವುದು ),ಶ್ಟ್ರೆಚರ್ ನಿಂದ ಹಾಸಿಗೆಗೆ  ಸ್ಥಳಾನಂತರಿಸುವುದು ಇತ್ಯಾದಿ ಕೆಲಸವೂ ನಾವು ಮಾಡ ಬೇಕಾಗುವುದು  ಮತ್ತು ಮಾಡುತ್ತೇವೆ . ರೋಗಿಯ ವಾಂತಿ ,ಮಲ ,ಮೂತ್ರ ತೆಗೆಯುವುದು ,ಮೃತರಾಗಿ ಬಂದ ಮತ್ತು ಆಸ್ಪತ್ರೆಯಲ್ಲಿ ಮೃತರಾದವರ ಶವ ಸಾಗಣೆಯಲ್ಲಿ ಕೂಡಾ ನಾವು ಸೇರುತ್ತೇವೆ . ಇದು ಎಲ್ಲಾ ವೈದ್ಯೇತರ ಮಾನವೀಯ ಸೇವೆ .

ಬಾಲಂಗೋಚಿ ; ಆಸ್ಪತ್ರೆ ಆರಂಭವಾದಾಗ ಬಹಳ ಮಂದಿಗೆ ನನ್ನ ಪರಿಚಯ ಇರಲಿಲ್ಲ ,ಮತ್ತು ನನಗೂ ಬಿಡುವು ಇರುತ್ತಿದ್ದು ,ನಾನು ಇಂತಹ ಕೆಲಸದಲ್ಲಿ ಹೆಚ್ಕು ಹೆಚ್ಚಾಗಿ ತೊಡಗಿಸಿ ಕೊಳ್ಳುತ್ತಿದ್ದಿದುರಿಂದ ಕೆಲವರು ನನ್ನನ್ನು ವಾರ್ಡ್ ಬಾಯ್ ಎಂದು ತಿಳಿದಿದ್ದರು .

ಸೋಮವಾರ, ಏಪ್ರಿಲ್ 12, 2021

ಮೂಸೆ ಬ್ಯಾರಿಯೂ ವಿಷು ಹಬ್ಬವೂ

 ಮೂಸೆ ಬ್ಯಾರಿಯೂ ವಿಷು ಹಬ್ಬವೂ 

ಕನ್ನಡದಲ್ಲಿ ಒಂದು ಗಾದೆ ಇದೆ ಗೋಕುಲಾಷ್ಟಮಿಗೂ ಇಮಾಮ್ ಸಾಹೇಬರಿಗೂ ಏನು ಸಂಬಂಧ ?ಮೇಲ್ನೋಟಕ್ಕೆ ಇದು ಸರಿ ಎನಿಸಿದರೂ ನಮ್ಮ ದೇಶದಲ್ಲಿ ಎಲ್ಲಾ  ಧರ್ಮಗಳ ಆಚರಣೆ ಹಬ್ಬಗಳಲ್ಲಿಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ಧರ್ಮದವರ ಕೊಡುಗೆ ಇದ್ದೇ ಇದೆ . ಗೊರೂರು ರಾಮ ಸ್ವಾಮಿ ಅಯ್ಯಂಗಾರ್ ಅವರ ಹಳ್ಳಿಯ ಚಿತ್ರಣಗಳಲ್ಲಿ ಇದನ್ನು ಕಾಣ ಬಹುದು .

ನನ್ನ ಬಾಲ್ಯದಲ್ಲಿ ನಮ್ಮ ಅಂಗ್ರಿ ಮನೆಯಲ್ಲಿ ಮೂಸೆ ಬ್ಯಾರಿ ಎಂಬ ಒಕ್ಕಲು ಇದ್ದರು ,ನಮ್ಮ ಆಸ್ತಿಯ ಒಂದು ತುದಿ ,ಅದಕ್ಕೆ ನೇರಳೆ ಕೋಡಿ ಎಂದು ಕರೆಯುವರು .ನಮ್ಮ ಮನೆಯಿಂದ ಅಲ್ಲಿಗೆ ಒಂದು ಮೈಲು ಇರಬಹುದು .ಮೊದಲು ಒಬ್ಬರೇ ಒಕ್ಕಲು ಇದ್ದು ,ಆ ಮೇಲೆ ಅನಂತ ಮೂಲ್ಯ ಮತ್ತು ಪಕ್ರು ಮೂಲ್ಯ ಎಂಬುವರು ಬಂದರು . ಇವರು ಒಕ್ಕಲು ಎಂದರೆ ವಾಸಕ್ಕೆ ಮನೆ ಮಾತ್ರ ನಮ್ಮ ಜಾಗದಲ್ಲಿ .ಗೇಣಿ ಬೇಸಾಯ ಇಲ್ಲ .ಅವರ ಮನೆಯವರು ನಮ್ಮ ಮನೆಗೆ ಕೆಲಸಕ್ಕೆ ಬರುವರು . 

ಮೂಸೆ ಬ್ಯಾರಿ ಅವರು  ನಮ್ಮ ಗುಡ್ಡದ ಗೇರು ಬೀಜದ ಮರಗಳ ಫಸಲನ್ನು ಕೆಲವು ವರ್ಷ ಗೇಣಿಗೆ ತೆಗೆದು ಕೊಳ್ಳುವರು .ಅದರಿಂದ ಅವರಿಗೆ ಹೆಚ್ಚು ಆದಾಯ ಬಂದಂತೆ ಇಲ್ಲ ,ಆದರೂ ಬೀಡಿ ಖರ್ಚು ಬಂದಿರಬಹುದು . ನಮ್ಮ ಒಕ್ಕಲುಗಳು ,ಕೆಲಸಕ್ಕೆ ಬರುವ ಇತರರು ವಿಷು ಹಬ್ಬದ ದಿನ ಹಣ್ಣು ತರಕಾರಿ  ಕಾಣಿಕೆ ತಂದು ನಮ್ಮ ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡುವರು .  ಅವರಿಗೆ ಹಬ್ಬದ ಸಣ್ಣ ಕೊಡುಗೆ ಮತ್ತು ಪಲಹಾರ ಕೊಟ್ಟು ಕಳುಹಿಸುವರು . ಮೂಸೆ ಬ್ಯಾರಿ ಪ್ರತಿ ವರ್ಷ ವಿಷುವಿಗೆ  ಹಸಿ (ಗೇರು )ಬೀಜ ತಂದು ಕೊಡುವರು ಮತ್ತು ಅದರ ಪಾಯಸ ವಿಶುವಿಗೆ ವಿಶೇಷ . ಆದುದರಿಂದ  ಒಮ್ಮೊಮ್ಮೆ  ವಿಷುವಿನ  ದಿನ ಮೂಸೆ ಬ್ಯಾರಿಯವರ ನೆನಪು ಆಗುವುದು .

ಮೂಸೆ ಬ್ಯಾರಿ ಅವರಿಗೆ ಮೂರೋ ನಾಲ್ಕೋ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಮಗ .ಅವನು ನನ್ನ ಅಣ್ಣನ ಸರೀಕ ,ಆಟಕ್ಕೆ ಜತೆಗಾರ .ಮುಂದೆ ಮುಂಬಯಿ ,ಆಮೇಲೆ ವಾಣಿಜ್ಯ ಹಡಗಿನಲ್ಲಿ ಕೆಲಸಕ್ಕೆ  ಹೋಗಿ ಸಂಪಾದಿಸಿ ಮಂಜೇಶ್ವರ ದಲ್ಲಿ  ಮನೆ ಮಾಡಿ ಕುಟುಂಬದವರನ್ನು ಅಲ್ಲಿಗೆ ಕರೆಸಿಕೊಂಡನು .

ಮೂಸೆ ಬ್ಯಾರಿಯವರ ಒಬ್ಬರು ಮಗಳು ಕೈಜಮ್ಮ .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ನಾನು ತುಂಬಾ ಸಣ್ಣವನಿದ್ದಾಗ ಅಂಗೈ ಸುಟ್ಟು ಗಾಯ ಮಾಡಿಕೊಂಡಾಗ ನನ್ನ ಆರೈಕೆ ಮುತುವರ್ಜಿ ವಹಿಸಿ ಮಾಡಿದ್ದರು ಎಂದು ನನ್ನ ತಾಯಿ ಆಗಾಗ ಹೇಳುತ್ತಿದ್ದರು . ಮುಂದೆ ಅವರನ್ನು ಮದುವೆ ಮಾಡಿ  ನಮ್ಮದೇ ಗ್ರಾಮದ ಪೊಡಿಯ ಬ್ಯಾರಿ ಅವರಿಗೆ ಕೊಟ್ಟರು .ಪೊಡಿಯ ಬ್ಯಾರಿ  ಸಮಾರಂಭ ಗಳಿಗೆ  ಅಡುಗೆ ಕೆಲಸ ಮಾಡುತ್ತಿದ್ದು ,ಅವರ ನೈ ಚೋರ್ ಪ್ರಸಿದ್ದ ಆಗಿತ್ತು . ನಾವು ಶಾಲೆಗೆ ಹೋಗುವಾಗ ಕೆಲವೊಮ್ಮೆ ಅವರ ಮನೆಯ ಪಕ್ಕದ ದಾರಿಯಲ್ಲಿ ಹೋಗುತ್ತಿದ್ದು ,ನಮ್ಮ ಸುಖ ದುಖ ವಿಚಾರಿಸುವರು . ಈಗಲೂ ಆಸ್ಪತ್ರೆಗೆ ಯಾರಾದರೂ ಕೈಜಮ್ಮ ಹೆಸರಿನವರು ಬಂದಾಗ ಅವರ ನೆನಪು ಆಗುವುದು ಮತ್ತು ಅವರಿಗೆ ಪ್ರತ್ಯುಪಕಾರ ಎಂದು ಕೊಂಡು ಬಂದವರ  ಚಿಕಿತ್ಸೆ ಮಾಡುವೆನು .

ನನ್ನ ತರಗತಿಯಲ್ಲಿ 5 ರಿಂದ ಹತ್ತನೇ ವರೆಗೆ ಬಂದಿತಡ್ಕ ಸೂಫಿ ಬ್ಯಾರಿ ಮತ್ತು ರಾಜು ಬೆಳ್ಛಾಡ ಕೊನೇ ಬೆಂಚಿನಲ್ಲಿ (ನಾವು ಎತ್ತರ ಇದ್ದೆವು ) ಅಕ್ಕ ಪಕ್ಕದಲ್ಲಿ  ಕುಳಿತು ಕೊಳ್ಳುತ್ತಿದ್ದೆವು .ಸೂಫಿ ಅವರಿಗೆ ಬಂಡಿತಡ್ಕ ದಲ್ಲಿ  ಒಂದು ಅಂಗಡಿ ಇತ್ತು .ಅವನು ಅಂಗಡಿಯಿಂದ ಸಣ್ಣ ಪೆನ್ಸಿಲಿನ್ ವಯಲ್ ನಲ್ಲಿ  ಪಾಚಿ ಎಣ್ಣೆ (ಆಗ ಪ್ರಸಿದ್ದ ಹೇರ್ ಆಯಿಲ್ )ತಂದು ನಮಗೆ ಕೊಡುತ್ತಿದ್ದನು . ಮದುವೆ ಮದರಂಗಿ ಸಮಯದಲ್ಲಿ ಹಾಡುತ್ತಿದ್ದ ಮೈಲಾಂಜಿ ಹಾಡುಗಳನ್ನು ಅವನು ಗುಣುಗುಣಿಸುತ್ತಿದ್ದು ಕೆಲವು ಸಾಲುಗಳು ನನಗೂ ಬಾಯಿಪಾಠ  ಬರುತ್ತಿದ್ದವು .'ಮಣಿ ಮುತ್ತೆ ಮಧು ಹರಣಂ ಪೂಮೋಳೆ ,ನಿಂದೆ ಉಪ್ಪಾನ್ದೆ ಕಣಿಯಾಲೆ ತೆ ಮೋಳೆ" (ತಪ್ಪಿದ್ದರೆ ಕ್ಷಮಿಸಿ )ಇಂತಹ ಹಾಡುಗಳನ್ನು  ನಾನು ಮೂಸೆ ಬ್ಯಾರಿ ಮತ್ತು ಅವರ ಮನೆಯವರ ಮುಂದೆ ಹಾಡಿ ತೋರಿಸುತ್ತಿದ್ದೆ;ಅದನ್ನು ಕೇಳಿ ಅವರು ನಗುವರು .

ಸೂಫಿ ಮುಂದೆ ಸೌದಿ ಅರೇಬಿಯಾ ಕ್ಕೆ  ಹೋಗಿ ಸಂಪಾದಿಸಿ ,ತೊಕ್ಕೊಟ್ಟಿನಲ್ಲಿ ಒಂದು ವಾಹನ ವರ್ಕ್ ಷಾಪ್ ಹಾಕಿದ್ದರೆ ರಾಜು ಪೋಲೀಸು ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿ ನಿವೃತ್ತ ನಾಗಿರುವನು .

ಭಾನುವಾರ, ಏಪ್ರಿಲ್ 11, 2021

ಕಂತು ಪಿತ

                      ಕಂತು ಪಿತ 

ಏತರ  ಭಯ ನಿನಗೆ ಕಂತು ಪಿತನ ದಯೆ ಇರಲು 

ಈ ತರಹದ  ದೇವರ ನಾಮ ಕೇಳಿದಾಗ ಎಲ್ಲಾ ಕುತೂಹಲ . ಯಾರು ಈ ಕಂತು ?ವೆಂಕಟಸುಬ್ಬಯ್ಯ ನವರ ನಿಘಂಟಿನಲ್ಲಿ  ಮನ್ಮಥ ನಿಗೆ  ಕಂತು ಎಂದು ಕರೆವರು ಎಂದು ಬರೆದಿರುವರಂತೆ .ಆದರೆ ಈ ಹೆಸರಿನ ಮೂಲ ಏನು ಎಂಬುದು ಸಂಶೋಧನೆಗೆ ಯೋಗ್ಯ ಎಂದು ಹೇಳುವರು . 

ನಮಗೆ  ಸಾಮನ್ಯವಾಗಿ ಕಂತು ಎಂದರೆ ಹಣ ಇಲ್ಲ ,ಕೊಳ್ಳುವ ಅಸೆ ಇದೆ ಎಂಬ  ಪರಿಸ್ಥಿತಿಯಲ್ಲಿ  ಹಂತ ಹಂತವಾಗಿ ಪಾವತಿ ಮಾಡಿ ಕೊಳ್ಳುವ ವ್ಯವಸ್ಥೆ . ಉದಾಹಣೆಗೆ ನಾನು ನನ್ನ ಮೊದಲ ಟಿ ವಿ  ಕೊಂಡದ್ದು ಕಂತಿನಲ್ಲಿ .ಅಂಗಡಿಯವರಿಗೆ ಬಾಕಿ ಹಣವನ್ನು  ಪೋಸ್ಟ್ ಡೇಟೆಡ್ ಚೆಕ್ ಕೊಟ್ಟು ಸಾಮಗ್ರಿ ಮನೆಗೆ ತರುವುದು .ಒಂದು ರೀತಿಯ ಸಾಲವೇ ಅನ್ನಿ . ಕೊಳ್ಳಲು ನಿಜವಾಗಿ ಅರ್ಹತೆ ಇಲ್ಲ ,ಕಂತು ದೇವನ ಕೃಪೆಯಿಂದ ಅದು ಬರುವದು . 

ಅದರಂತೆ  ನಿಜವಾದ ಕಂತು (ಮನ್ಮಥ ) ಒಬ್ಬ ಯುವಕ (ಮತ್ತು ಯುವತಿ ವೈಸ್ ವರ್ಸಾ )ನಿಗೆ  ಯುವತಿಯ ಮೇಲೆ  ಆಸೆ ಹುಟ್ಟಿಸುವನಲ್ಲದೆ ಆಕೆಯ ಸ್ನೇಹ ಸಂಪಾದಿಸಸಲು ಇವನಲ್ಲಿ ಇಲ್ಲದ ಆಕರ್ಷಣೆಯನ್ನು ತುಂಬಿಕೊಳ್ಳಲು ಕಂತಿನಲ್ಲಿ ಕೆಲವು ಚಮತ್ಕಾರಗಳನ್ನು (ಉದಾ ವಾಟ್ಸ್ ಅಪ್ ಆಕರ್ಷಕ  ಸಂದೇಶ ಕಳುಹಿಸುವ )  )ತುಂಬುವನು . 

 ಇ. ಸಾ .ಬೇ .    QED

ಅಪತ್ಭಾಂಧವರು

                                   ಅಪತ್ಭಾಂಧವರು

 ನಾನು ನಿನ್ನೆ ನೆಹರು ನಗರದ ಬಾಲಕೃಷ್ಣ  ಅವರ ಬಗ್ಗೆ ಬರೆದುದನ್ನು ಬಹಳ ಸಹೃದಯರು ಮೆಚ್ಚಿದ್ದಾರೆ ಎಂಬುದು ಸಮಾಧಾನ .ಇಂದು ಮುಂಜಾನೆ ವಾಕಿಂಗ್ ಹೋಗುವಾಗ ಯಥಾ ಪ್ರಕಾರ ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಗುಡಿಸುತ್ತಿದ್ದರು . ಅವರಿಗೆ ನಾನು ಫೇಸ್ಬುಕ್ ನಲ್ಲಿ ಅವರ ಬಗ್ಗೆ ಭಾವ ಚಿತ್ರ ಸಹಿತ ಬರೆದುದು ,ಜನ ಅದನ್ನು ಮೆಚ್ಚಿದ್ದು ಹೇಳಿ ಸಾಂಕೇತಿಕವಾಗಿ ಒಂದು ಸಣ್ಣ ಸಿಹಿ ತಿಂಡಿ ಪೊಟ್ಟಣ ಕೊಟ್ಟೆ . ನಿರ್ವಿಕಾರ ಮನೋಭಾವ ದಿಂದ ಅವರು ಸ್ವೀಕರಿಸಿ ಮಹಾಲಿಂಗೇಶ್ವರ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿ ತಮ್ಮ ಸ್ವಚ್ಚತಾ ಕೆಲಸದಲ್ಲಿ ಪುನಃ ತೊಡಗಿಸಿ ಕೊಂಡರು . 


 ಇಂದು ಇನ್ನೊಬ್ಬರ ಬಗ್ಗೆ ಬರೆಯುವೆನು . 

ನಾನು ಬೆಂಗಳೂರಿಗೆ ಹೋಗುವುದಿದ್ದರೆ  ಬಸ್ ಅಥವಾ ಟ್ರೈನ್ ನಲ್ಲಿ . ಆದರೆ ಕೋವಿಡ್  ಹಾವಳಿ ಇದ್ದುದರಿಂದ ಕೆಲವು ತಿಂಗಳ ಹಿಂದೆ ಕಾರ್ ನಲ್ಲಿಯೇ ಹೊರಟೆ . ನನ್ನ ಸಹೋದರಿ ಕೂಡಾ ತುರ್ತು ಕೆಲಸದಲ್ಲಿ ಬೆಂಗಳೂರಿಗೆ ಹೊರಟವರು  ನನ್ನೊಡನೆ ಇದ್ದರು . ಉಪ್ಪಿನಂಗಡಿ ಶಿರಾಡಿ  ರಸ್ತೆ ತುಂಬಾ ಹೊಂಡ  ಗುಂಡಿಗಳು ಇದ್ದವು .ನೆಲ್ಯಾಡಿ ದಾಟಿ ಸ್ವಲ್ಪ ದೂರ ಹೋಗುವಾಗ  ಒಂದು ರಸ್ತೆ ಹೊಂಡದಲ್ಲಿ ಇಳಿದ ಕಾರನ್ನು   ಪುನಃ ಏರಿಸಲು ನೋಡಿದಾಗ ಕ್ಲಚ್ ಕೇಬಲ್ ತುಂಡಾಗಿದ್ದುದರಿಂದ ಗಾಡಿ ನಡೆಸುವುದು ಅಸಾಧ್ಯ ಆಯಿತು .ಮುಂಜಾನೆ ಹತ್ತೂವರೆ ಸಮಯ ,ಚಳಿಗಾಲದ ಬಿಸಿಲು .ರಸ್ತೆ ತುಂಬಾ ಧೂಳು . 

ಅದು ಭಾನುವಾರ ವಾದುದರಿಂದ  ಕಂಪನಿ ಸರ್ವಿಸ್ ಸೆಂಟರ್ ಗೆ ರಜೆ . ನಿಂತ ಸ್ಥಳದಲ್ಲಿ  ಮೊಬೈಲ್ ಸಿಗ್ನಲ್ ಕೂಡಾ ಸರಿ ಇರಲಿಲ್ಲ .ರೋಡ್ ಸೈಡ್ ಅಸ್ಸಿಸ್ಟನ್ಸ್ ಗೆ ಫೋನ್ ಮಾಡಿದರೆ ಒಂದು ಒತ್ತಿರಿ ,ಎರಡು ಒತ್ತಿರಿ ಇತ್ಯಾದಿ ,ನಡುವೆ ಸಿಗ್ನಲ್ ಕಟ್ . 

ಆಗ ಇಬ್ಬರು ಯುವಕರು ನಮ್ಮನ್ನು ಕಂಡು ಏನು ತೊಂದರೆ ಸರ್ ಎಂದು ಕೇಳಿ "ನೀವು ಚಿಂತೆ ಮಾಡ ಬೇಡಿ ,ನೆಲ್ಯಾಡಿಯಲ್ಲಿ ಒಬ್ಬರು ಮೆಕ್ಯಾನಿಕ್ ಇದ್ದಾರೆ .ಅವರನ್ನು  ಕರೆಸುತ್ತೇವೆ . "ಎಂದು ನನ್ನ ಗಾಡಿಯನ್ನು ದೂಡಿ  ರಸ್ತೆ ಬದಿಯಲ್ಲಿ ನಿಲ್ಲಿಸಿ "ನೀವು ಕಾರಿನ ಒಳಗೆ ಕುಳಿತು  ಕೊಳ್ಳಿ "ಎಂದರು . ನನ್ನ ಕಾರ್ ನಲ್ಲಿ ಸಿಟಿ ಆಸ್ಪತ್ರೆ ವೈದ್ಯರು ಎಂದು ಕೋವಿಡ್ ಪರ್ಮಿಟ್ ಅಂಟಿಸಿತ್ತು .(ನಾನು ಇತರ ಸಮಯದಲ್ಲಿ ವೈದ್ಯರು ಎಂಬ  ಸ್ಟಿಕರ್ ಅಂಟಿಸುವುದಿಲ್ಲ )ಸಾರ್ ನಾವು ನಿಮ್ಮ ಆಸ್ಪತ್ರಗೆ ಹಲವು ಭಾರಿ ಬಂದಿದ್ದೇವೆ ,ನಿಮ್ಮ ಉದ್ಯೋಗಿ ಜಲೀಲ್ ನಮ್ಮ ಮಿತ್ರ ಎಂದು ಸಾಂತ್ವನದ ಮಾತು ಹೇಳಿದರು . 

ಸ್ವಲ್ಪ ಹೊತ್ತಿನಲ್ಲಿ  ಒಬ್ಬರು ಮೆಕ್ಯಾನಿಕ್ ಬಂದು ಕೇಬಲ್ ಇಲ್ಲಿ ಸಿಗದು ,ಭಾನುವಾರ ಆದ ಕಾರಣ  ಪುತ್ತೂರಿನಿಂದ ತರಿಸುವ ಹಾಗೂ ಇಲ್ಲ ಎಂದರು . ಅವರ ಹಿಂದೆಯೇ ಬಂದ  ಶ್ರೀ ಟಿಪ್ಪು ಸುಲ್ತಾನ್ ಎಂಬ ಸಜ್ಜನರು 'ಸಾರ್ ನಿಮ್ಮ ಗಾಡಿಯನ್ನು ಟೋ  ಮಾಡಿ ಹತ್ತಿರದ ಗ್ಯಾರೇಜು ಗೆ ತಲುಪಿಸುತ್ತೇನೆ "ಎಂದಾಗ ನನ್ನ ಒಂದು ಸಮಸ್ಯೆ ಪರಿಹಾರ ಆದರೂ ಬೆಂಗಳೂರಿಗೆ ಹೋಗುವ ಬಗೆ ಹೇಗೆ ? ಜತೆಗೆ ತಂಗಿಯೂ ಇರುವಳು .ಅದಕ್ಕೆ ಅವರು ನನ್ನ ಗಾಡಿ ಕೊಡುವೆನು ನೀವು ಹೋಗಿ ಬನ್ನಿ ಎಂದರು .ಗೊತ್ತು ಪರಿಚಯ ಇಲ್ಲದ ಟಿಪ್ಪು ಸುಲ್ತಾನ್ ಅವರಿಗೆ ನನ್ನ ಕಾರಿನ ಕೀ ಒಪ್ಪಿಸಿ ಬದಲಿ ಕಾರ್ ನಲ್ಲಿ ಬೆಂಗಳೂರರಿಗೆ ತೆರಳಿದೆ . ಹಾಸನಕ್ಕೆ ತಲುಪುವಾಗ ಸುಲ್ತಾನ್ ಫೋನ್ ಮಾಡಿ "ಸಾರ್  ನಿಮ್ಮ ಕಾರಿನ  ಸರ್ವಿಸ್  ಬೆಳ್ತಂಗಡಿ  ಶಾಖೆ ತೆರೆದಿದೆ .ಅಲ್ಲಿ ಕೊಂಡು ಹೋಗಿ ರಿಪೇರ್ ಮಾಡಿಸಿ ತರುವೆನು "ಎಂದರು . 

ನಾನು ನನ್ನ ಬೆಂಗಳೂರು ಕೆಲಸ ನಿಶ್ಚಿಂತೆಯಿಂದ ನೆರವೇರಿಸಿ ಮರುದಿನ ಸಾಯಂಕಾಲ ನೆಲ್ಯಾಡಿಗೆ ತಲುಪಿದಾಗ  ಗಾಡಿ ರೆಡಿ  ಯಾಗಿತ್ತು .ಅವರ ಸೇವೆಗೆ ಸೂಕ್ತ  ಸಂಭಾವನೆ ನೀಡಿದೆ . ಟಿಪ್ಪು ಸುಲ್ತಾನ್ ಇನ್ನೊಂದು ಕಡೆ  ಘಾಟ್ ಸೆಕ್ಷನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ ವಾಹನಕ್ಕೆ ಸಹಾಯ ಮಾಡಲು ಹೋಗಿದ್ದರಿಂದ ಫೋನ್ ನಲ್ಲಿಯೇ  ಕೃತಜ್ಞತೆ ಸಲ್ಲಿಸಿದೆ . 

 ಇದನ್ನು ಬರೆಯಲು ಕಾರಣ ಏನೆಂದರೆ ಈ ದಾರಿಯಲ್ಲಿ ,ಮುಖ್ಯವಾಗಿ ಶಿರಾಡಿ ,ಬಿಸಲೆ ಘಾಟ್ ನಲ್ಲಿ ಯಾವುದಾದರೂ  ತೊಂದರೆ ಆದರೆ ಇವರನ್ನು ಸಂಪರ್ಕಿಸ ಬಹುದು . ಇವರ ದೂರವಾಣಿ ಸಂಖ್ಯೆ  8105300131. ಅವರ ಬಳಿ ಟೋಯಿಂಗ್ ಕ್ರೇನ್ ಇದೆ ,ಎಲ್ಲಾ ಗ್ಯಾರೇಜು ಗಳ  ಮಾಹಿತಿ ಕೂಡಾ . ಸೇವೆ ಉಚಿತ ಅಲ್ಲ ಆದರೆ ಸಮಯೋಚಿತ . 

ಟಿಪ್ಪು ಸುಲ್ತಾನ್ ಮತ್ತು ಅವರ ತಂಡಕ್ಕೆ  ನನ್ನ ಕೃತಜ್ಞತೆ ಈ ಮೂಲಕ ಸಲ್ಲಿಸುತ್ತೇನೆ ,

                  



 

ಶನಿವಾರ, ಏಪ್ರಿಲ್ 10, 2021

ನಾನು ಮೆಚ್ಚಿದ ಬಾಲಕೃಷ್ಣರು

 ನಾನು ಮೆಚ್ಚಿದ ಬಾಲಕೃಷ್ಣರು 

 

 

ಇವರು ಪುತ್ತೂರಿನಲ್ಲಿ ಆಟೋ ರಿಕ್ಷಾ ಓಡಿಸುವ ಶ್ರೀ ಬಾಲಕೃಷ್ಣ ಅವರು .ನೆಹರೂ ನಗರ ದ ಸ್ಟಾಂಡ್ ಅವರ ಸಾಗಾಟದ ಉಗಮ ಸ್ಥಾನ . ಇವರು ಇಷ್ಟೇ ಆಗಿದ್ದಲ್ಲಿ ನನ್ನ ಗಮನ ಕ್ಕೆ  ಬರುತ್ತಿರಲಿಲ್ಲವೋ ಏನೋ ?

ನಗರ ಬಸ್ ಸ್ಟಾಪ್ ನಿಂದ  ವಿವೇಕಾನಂದ ಕಾಲೇಜ್ ಗೆ ಹೋಗುವ ಮಾರ್ಗದಲ್ಲಿ ಒಂದು ಅಗಲ ಕಿರಿದಾದ ರೈಲ್ವೇ ಮೇಲ್ಸೇತುವೆ ಇದೆ .ಇದು ತಗ್ಗಿನಲ್ಲಿ ಇದ್ದು ಮಳೆ ಬಂದೊಡನೆ ನೀರು ತುಂಬುವುದು .ರಸ್ತೆಯ ಬದಿಯಲ್ಲಿ ನಡೆಯುವ ವಿದ್ಯಾರ್ಥಿಗಳು ಮತ್ತು ನಾಗರೀಕರಿಗೆ  ಕೊಳಕು ನೀರು ಪ್ರೋಕ್ಷಣೆ ಆಗುವುದು . ನೇರು ಕೆಳಗೆ ಹೋಗಲು ಸೇತುವೆಯಲ್ಲಿ ಒಂದು ಸಣ್ಣ ರಂದ್ರ ಮಾಡಿರುವರು .ಆದರೆ ಕಸ ತುಂಬಿ ಆಗಾಗ ಅದು ಬ್ಲಾಕ್ ಆಗುವುದು . ನಮ್ಮ ಬಾಲಕೃಷ್ಣರು ಆಗಾಗ ಅಲ್ಲಿಗೆ ತೆರಳಿ ಕೈಹಾಕಿ ಅದನ್ನು ಸ್ವಚ್ಛ ಮಾಡಿ ನೀರು ಹರಿದು ಹೋಗುವಂತೆ ಮಾಡುವರು .ಇದು ಯಾರ ಹೊಗಳಿಕೆಗೆ ಅವರು ಮಾಡುವುದಲ್ಲ ,ಆತ್ಮ ಸಾಕ್ಷಿಗನುಗುಣವಾಗಿ  ಮಾಡುವರು .

ಇದರೊಡನೆ ಮುಂಜಾನೆ  ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಇರುವ ಕಸ ಕಡ್ಡಿ ತಾನೇ ಗುಡಿಸಿ ಬೆಂಕಿ ಹಾಕಿ ಕಾಯುವರು .ಬೆಳಗಾದಾಗ  ಬೀದಿ ದೀಪ ಆರಿಸುವರು .ನಗರ ಸಭೆಯ  ನೀರು ಸರಬರಾಜು ಕೆಲಸದಲ್ಲಿ ಬೋರ್ ವೆಲ್ ಒನ್ ಆಫ್ ಮಾಡುವುದು ,ನೀರಿನ ವಾಲ್ವ್ ನಿರ್ವಹಣೆ ಕೂಡಾ ಮಾಡುವರು .

ಇಂತಹವರೆ ನಿಜವಾದ ನಾಡೋಜರು