ಬೆಂಬಲಿಗರು

ಸೋಮವಾರ, ಏಪ್ರಿಲ್ 12, 2021

ಮೂಸೆ ಬ್ಯಾರಿಯೂ ವಿಷು ಹಬ್ಬವೂ

 ಮೂಸೆ ಬ್ಯಾರಿಯೂ ವಿಷು ಹಬ್ಬವೂ 

ಕನ್ನಡದಲ್ಲಿ ಒಂದು ಗಾದೆ ಇದೆ ಗೋಕುಲಾಷ್ಟಮಿಗೂ ಇಮಾಮ್ ಸಾಹೇಬರಿಗೂ ಏನು ಸಂಬಂಧ ?ಮೇಲ್ನೋಟಕ್ಕೆ ಇದು ಸರಿ ಎನಿಸಿದರೂ ನಮ್ಮ ದೇಶದಲ್ಲಿ ಎಲ್ಲಾ  ಧರ್ಮಗಳ ಆಚರಣೆ ಹಬ್ಬಗಳಲ್ಲಿಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ಧರ್ಮದವರ ಕೊಡುಗೆ ಇದ್ದೇ ಇದೆ . ಗೊರೂರು ರಾಮ ಸ್ವಾಮಿ ಅಯ್ಯಂಗಾರ್ ಅವರ ಹಳ್ಳಿಯ ಚಿತ್ರಣಗಳಲ್ಲಿ ಇದನ್ನು ಕಾಣ ಬಹುದು .

ನನ್ನ ಬಾಲ್ಯದಲ್ಲಿ ನಮ್ಮ ಅಂಗ್ರಿ ಮನೆಯಲ್ಲಿ ಮೂಸೆ ಬ್ಯಾರಿ ಎಂಬ ಒಕ್ಕಲು ಇದ್ದರು ,ನಮ್ಮ ಆಸ್ತಿಯ ಒಂದು ತುದಿ ,ಅದಕ್ಕೆ ನೇರಳೆ ಕೋಡಿ ಎಂದು ಕರೆಯುವರು .ನಮ್ಮ ಮನೆಯಿಂದ ಅಲ್ಲಿಗೆ ಒಂದು ಮೈಲು ಇರಬಹುದು .ಮೊದಲು ಒಬ್ಬರೇ ಒಕ್ಕಲು ಇದ್ದು ,ಆ ಮೇಲೆ ಅನಂತ ಮೂಲ್ಯ ಮತ್ತು ಪಕ್ರು ಮೂಲ್ಯ ಎಂಬುವರು ಬಂದರು . ಇವರು ಒಕ್ಕಲು ಎಂದರೆ ವಾಸಕ್ಕೆ ಮನೆ ಮಾತ್ರ ನಮ್ಮ ಜಾಗದಲ್ಲಿ .ಗೇಣಿ ಬೇಸಾಯ ಇಲ್ಲ .ಅವರ ಮನೆಯವರು ನಮ್ಮ ಮನೆಗೆ ಕೆಲಸಕ್ಕೆ ಬರುವರು . 

ಮೂಸೆ ಬ್ಯಾರಿ ಅವರು  ನಮ್ಮ ಗುಡ್ಡದ ಗೇರು ಬೀಜದ ಮರಗಳ ಫಸಲನ್ನು ಕೆಲವು ವರ್ಷ ಗೇಣಿಗೆ ತೆಗೆದು ಕೊಳ್ಳುವರು .ಅದರಿಂದ ಅವರಿಗೆ ಹೆಚ್ಚು ಆದಾಯ ಬಂದಂತೆ ಇಲ್ಲ ,ಆದರೂ ಬೀಡಿ ಖರ್ಚು ಬಂದಿರಬಹುದು . ನಮ್ಮ ಒಕ್ಕಲುಗಳು ,ಕೆಲಸಕ್ಕೆ ಬರುವ ಇತರರು ವಿಷು ಹಬ್ಬದ ದಿನ ಹಣ್ಣು ತರಕಾರಿ  ಕಾಣಿಕೆ ತಂದು ನಮ್ಮ ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡುವರು .  ಅವರಿಗೆ ಹಬ್ಬದ ಸಣ್ಣ ಕೊಡುಗೆ ಮತ್ತು ಪಲಹಾರ ಕೊಟ್ಟು ಕಳುಹಿಸುವರು . ಮೂಸೆ ಬ್ಯಾರಿ ಪ್ರತಿ ವರ್ಷ ವಿಷುವಿಗೆ  ಹಸಿ (ಗೇರು )ಬೀಜ ತಂದು ಕೊಡುವರು ಮತ್ತು ಅದರ ಪಾಯಸ ವಿಶುವಿಗೆ ವಿಶೇಷ . ಆದುದರಿಂದ  ಒಮ್ಮೊಮ್ಮೆ  ವಿಷುವಿನ  ದಿನ ಮೂಸೆ ಬ್ಯಾರಿಯವರ ನೆನಪು ಆಗುವುದು .

ಮೂಸೆ ಬ್ಯಾರಿ ಅವರಿಗೆ ಮೂರೋ ನಾಲ್ಕೋ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಮಗ .ಅವನು ನನ್ನ ಅಣ್ಣನ ಸರೀಕ ,ಆಟಕ್ಕೆ ಜತೆಗಾರ .ಮುಂದೆ ಮುಂಬಯಿ ,ಆಮೇಲೆ ವಾಣಿಜ್ಯ ಹಡಗಿನಲ್ಲಿ ಕೆಲಸಕ್ಕೆ  ಹೋಗಿ ಸಂಪಾದಿಸಿ ಮಂಜೇಶ್ವರ ದಲ್ಲಿ  ಮನೆ ಮಾಡಿ ಕುಟುಂಬದವರನ್ನು ಅಲ್ಲಿಗೆ ಕರೆಸಿಕೊಂಡನು .

ಮೂಸೆ ಬ್ಯಾರಿಯವರ ಒಬ್ಬರು ಮಗಳು ಕೈಜಮ್ಮ .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ನಾನು ತುಂಬಾ ಸಣ್ಣವನಿದ್ದಾಗ ಅಂಗೈ ಸುಟ್ಟು ಗಾಯ ಮಾಡಿಕೊಂಡಾಗ ನನ್ನ ಆರೈಕೆ ಮುತುವರ್ಜಿ ವಹಿಸಿ ಮಾಡಿದ್ದರು ಎಂದು ನನ್ನ ತಾಯಿ ಆಗಾಗ ಹೇಳುತ್ತಿದ್ದರು . ಮುಂದೆ ಅವರನ್ನು ಮದುವೆ ಮಾಡಿ  ನಮ್ಮದೇ ಗ್ರಾಮದ ಪೊಡಿಯ ಬ್ಯಾರಿ ಅವರಿಗೆ ಕೊಟ್ಟರು .ಪೊಡಿಯ ಬ್ಯಾರಿ  ಸಮಾರಂಭ ಗಳಿಗೆ  ಅಡುಗೆ ಕೆಲಸ ಮಾಡುತ್ತಿದ್ದು ,ಅವರ ನೈ ಚೋರ್ ಪ್ರಸಿದ್ದ ಆಗಿತ್ತು . ನಾವು ಶಾಲೆಗೆ ಹೋಗುವಾಗ ಕೆಲವೊಮ್ಮೆ ಅವರ ಮನೆಯ ಪಕ್ಕದ ದಾರಿಯಲ್ಲಿ ಹೋಗುತ್ತಿದ್ದು ,ನಮ್ಮ ಸುಖ ದುಖ ವಿಚಾರಿಸುವರು . ಈಗಲೂ ಆಸ್ಪತ್ರೆಗೆ ಯಾರಾದರೂ ಕೈಜಮ್ಮ ಹೆಸರಿನವರು ಬಂದಾಗ ಅವರ ನೆನಪು ಆಗುವುದು ಮತ್ತು ಅವರಿಗೆ ಪ್ರತ್ಯುಪಕಾರ ಎಂದು ಕೊಂಡು ಬಂದವರ  ಚಿಕಿತ್ಸೆ ಮಾಡುವೆನು .

ನನ್ನ ತರಗತಿಯಲ್ಲಿ 5 ರಿಂದ ಹತ್ತನೇ ವರೆಗೆ ಬಂದಿತಡ್ಕ ಸೂಫಿ ಬ್ಯಾರಿ ಮತ್ತು ರಾಜು ಬೆಳ್ಛಾಡ ಕೊನೇ ಬೆಂಚಿನಲ್ಲಿ (ನಾವು ಎತ್ತರ ಇದ್ದೆವು ) ಅಕ್ಕ ಪಕ್ಕದಲ್ಲಿ  ಕುಳಿತು ಕೊಳ್ಳುತ್ತಿದ್ದೆವು .ಸೂಫಿ ಅವರಿಗೆ ಬಂಡಿತಡ್ಕ ದಲ್ಲಿ  ಒಂದು ಅಂಗಡಿ ಇತ್ತು .ಅವನು ಅಂಗಡಿಯಿಂದ ಸಣ್ಣ ಪೆನ್ಸಿಲಿನ್ ವಯಲ್ ನಲ್ಲಿ  ಪಾಚಿ ಎಣ್ಣೆ (ಆಗ ಪ್ರಸಿದ್ದ ಹೇರ್ ಆಯಿಲ್ )ತಂದು ನಮಗೆ ಕೊಡುತ್ತಿದ್ದನು . ಮದುವೆ ಮದರಂಗಿ ಸಮಯದಲ್ಲಿ ಹಾಡುತ್ತಿದ್ದ ಮೈಲಾಂಜಿ ಹಾಡುಗಳನ್ನು ಅವನು ಗುಣುಗುಣಿಸುತ್ತಿದ್ದು ಕೆಲವು ಸಾಲುಗಳು ನನಗೂ ಬಾಯಿಪಾಠ  ಬರುತ್ತಿದ್ದವು .'ಮಣಿ ಮುತ್ತೆ ಮಧು ಹರಣಂ ಪೂಮೋಳೆ ,ನಿಂದೆ ಉಪ್ಪಾನ್ದೆ ಕಣಿಯಾಲೆ ತೆ ಮೋಳೆ" (ತಪ್ಪಿದ್ದರೆ ಕ್ಷಮಿಸಿ )ಇಂತಹ ಹಾಡುಗಳನ್ನು  ನಾನು ಮೂಸೆ ಬ್ಯಾರಿ ಮತ್ತು ಅವರ ಮನೆಯವರ ಮುಂದೆ ಹಾಡಿ ತೋರಿಸುತ್ತಿದ್ದೆ;ಅದನ್ನು ಕೇಳಿ ಅವರು ನಗುವರು .

ಸೂಫಿ ಮುಂದೆ ಸೌದಿ ಅರೇಬಿಯಾ ಕ್ಕೆ  ಹೋಗಿ ಸಂಪಾದಿಸಿ ,ತೊಕ್ಕೊಟ್ಟಿನಲ್ಲಿ ಒಂದು ವಾಹನ ವರ್ಕ್ ಷಾಪ್ ಹಾಕಿದ್ದರೆ ರಾಜು ಪೋಲೀಸು ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿ ನಿವೃತ್ತ ನಾಗಿರುವನು .

ಭಾನುವಾರ, ಏಪ್ರಿಲ್ 11, 2021

ಕಂತು ಪಿತ

                      ಕಂತು ಪಿತ 

ಏತರ  ಭಯ ನಿನಗೆ ಕಂತು ಪಿತನ ದಯೆ ಇರಲು 

ಈ ತರಹದ  ದೇವರ ನಾಮ ಕೇಳಿದಾಗ ಎಲ್ಲಾ ಕುತೂಹಲ . ಯಾರು ಈ ಕಂತು ?ವೆಂಕಟಸುಬ್ಬಯ್ಯ ನವರ ನಿಘಂಟಿನಲ್ಲಿ  ಮನ್ಮಥ ನಿಗೆ  ಕಂತು ಎಂದು ಕರೆವರು ಎಂದು ಬರೆದಿರುವರಂತೆ .ಆದರೆ ಈ ಹೆಸರಿನ ಮೂಲ ಏನು ಎಂಬುದು ಸಂಶೋಧನೆಗೆ ಯೋಗ್ಯ ಎಂದು ಹೇಳುವರು . 

ನಮಗೆ  ಸಾಮನ್ಯವಾಗಿ ಕಂತು ಎಂದರೆ ಹಣ ಇಲ್ಲ ,ಕೊಳ್ಳುವ ಅಸೆ ಇದೆ ಎಂಬ  ಪರಿಸ್ಥಿತಿಯಲ್ಲಿ  ಹಂತ ಹಂತವಾಗಿ ಪಾವತಿ ಮಾಡಿ ಕೊಳ್ಳುವ ವ್ಯವಸ್ಥೆ . ಉದಾಹಣೆಗೆ ನಾನು ನನ್ನ ಮೊದಲ ಟಿ ವಿ  ಕೊಂಡದ್ದು ಕಂತಿನಲ್ಲಿ .ಅಂಗಡಿಯವರಿಗೆ ಬಾಕಿ ಹಣವನ್ನು  ಪೋಸ್ಟ್ ಡೇಟೆಡ್ ಚೆಕ್ ಕೊಟ್ಟು ಸಾಮಗ್ರಿ ಮನೆಗೆ ತರುವುದು .ಒಂದು ರೀತಿಯ ಸಾಲವೇ ಅನ್ನಿ . ಕೊಳ್ಳಲು ನಿಜವಾಗಿ ಅರ್ಹತೆ ಇಲ್ಲ ,ಕಂತು ದೇವನ ಕೃಪೆಯಿಂದ ಅದು ಬರುವದು . 

ಅದರಂತೆ  ನಿಜವಾದ ಕಂತು (ಮನ್ಮಥ ) ಒಬ್ಬ ಯುವಕ (ಮತ್ತು ಯುವತಿ ವೈಸ್ ವರ್ಸಾ )ನಿಗೆ  ಯುವತಿಯ ಮೇಲೆ  ಆಸೆ ಹುಟ್ಟಿಸುವನಲ್ಲದೆ ಆಕೆಯ ಸ್ನೇಹ ಸಂಪಾದಿಸಸಲು ಇವನಲ್ಲಿ ಇಲ್ಲದ ಆಕರ್ಷಣೆಯನ್ನು ತುಂಬಿಕೊಳ್ಳಲು ಕಂತಿನಲ್ಲಿ ಕೆಲವು ಚಮತ್ಕಾರಗಳನ್ನು (ಉದಾ ವಾಟ್ಸ್ ಅಪ್ ಆಕರ್ಷಕ  ಸಂದೇಶ ಕಳುಹಿಸುವ )  )ತುಂಬುವನು . 

 ಇ. ಸಾ .ಬೇ .    QED

ಅಪತ್ಭಾಂಧವರು

                                   ಅಪತ್ಭಾಂಧವರು

 ನಾನು ನಿನ್ನೆ ನೆಹರು ನಗರದ ಬಾಲಕೃಷ್ಣ  ಅವರ ಬಗ್ಗೆ ಬರೆದುದನ್ನು ಬಹಳ ಸಹೃದಯರು ಮೆಚ್ಚಿದ್ದಾರೆ ಎಂಬುದು ಸಮಾಧಾನ .ಇಂದು ಮುಂಜಾನೆ ವಾಕಿಂಗ್ ಹೋಗುವಾಗ ಯಥಾ ಪ್ರಕಾರ ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಗುಡಿಸುತ್ತಿದ್ದರು . ಅವರಿಗೆ ನಾನು ಫೇಸ್ಬುಕ್ ನಲ್ಲಿ ಅವರ ಬಗ್ಗೆ ಭಾವ ಚಿತ್ರ ಸಹಿತ ಬರೆದುದು ,ಜನ ಅದನ್ನು ಮೆಚ್ಚಿದ್ದು ಹೇಳಿ ಸಾಂಕೇತಿಕವಾಗಿ ಒಂದು ಸಣ್ಣ ಸಿಹಿ ತಿಂಡಿ ಪೊಟ್ಟಣ ಕೊಟ್ಟೆ . ನಿರ್ವಿಕಾರ ಮನೋಭಾವ ದಿಂದ ಅವರು ಸ್ವೀಕರಿಸಿ ಮಹಾಲಿಂಗೇಶ್ವರ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿ ತಮ್ಮ ಸ್ವಚ್ಚತಾ ಕೆಲಸದಲ್ಲಿ ಪುನಃ ತೊಡಗಿಸಿ ಕೊಂಡರು . 


 ಇಂದು ಇನ್ನೊಬ್ಬರ ಬಗ್ಗೆ ಬರೆಯುವೆನು . 

ನಾನು ಬೆಂಗಳೂರಿಗೆ ಹೋಗುವುದಿದ್ದರೆ  ಬಸ್ ಅಥವಾ ಟ್ರೈನ್ ನಲ್ಲಿ . ಆದರೆ ಕೋವಿಡ್  ಹಾವಳಿ ಇದ್ದುದರಿಂದ ಕೆಲವು ತಿಂಗಳ ಹಿಂದೆ ಕಾರ್ ನಲ್ಲಿಯೇ ಹೊರಟೆ . ನನ್ನ ಸಹೋದರಿ ಕೂಡಾ ತುರ್ತು ಕೆಲಸದಲ್ಲಿ ಬೆಂಗಳೂರಿಗೆ ಹೊರಟವರು  ನನ್ನೊಡನೆ ಇದ್ದರು . ಉಪ್ಪಿನಂಗಡಿ ಶಿರಾಡಿ  ರಸ್ತೆ ತುಂಬಾ ಹೊಂಡ  ಗುಂಡಿಗಳು ಇದ್ದವು .ನೆಲ್ಯಾಡಿ ದಾಟಿ ಸ್ವಲ್ಪ ದೂರ ಹೋಗುವಾಗ  ಒಂದು ರಸ್ತೆ ಹೊಂಡದಲ್ಲಿ ಇಳಿದ ಕಾರನ್ನು   ಪುನಃ ಏರಿಸಲು ನೋಡಿದಾಗ ಕ್ಲಚ್ ಕೇಬಲ್ ತುಂಡಾಗಿದ್ದುದರಿಂದ ಗಾಡಿ ನಡೆಸುವುದು ಅಸಾಧ್ಯ ಆಯಿತು .ಮುಂಜಾನೆ ಹತ್ತೂವರೆ ಸಮಯ ,ಚಳಿಗಾಲದ ಬಿಸಿಲು .ರಸ್ತೆ ತುಂಬಾ ಧೂಳು . 

ಅದು ಭಾನುವಾರ ವಾದುದರಿಂದ  ಕಂಪನಿ ಸರ್ವಿಸ್ ಸೆಂಟರ್ ಗೆ ರಜೆ . ನಿಂತ ಸ್ಥಳದಲ್ಲಿ  ಮೊಬೈಲ್ ಸಿಗ್ನಲ್ ಕೂಡಾ ಸರಿ ಇರಲಿಲ್ಲ .ರೋಡ್ ಸೈಡ್ ಅಸ್ಸಿಸ್ಟನ್ಸ್ ಗೆ ಫೋನ್ ಮಾಡಿದರೆ ಒಂದು ಒತ್ತಿರಿ ,ಎರಡು ಒತ್ತಿರಿ ಇತ್ಯಾದಿ ,ನಡುವೆ ಸಿಗ್ನಲ್ ಕಟ್ . 

ಆಗ ಇಬ್ಬರು ಯುವಕರು ನಮ್ಮನ್ನು ಕಂಡು ಏನು ತೊಂದರೆ ಸರ್ ಎಂದು ಕೇಳಿ "ನೀವು ಚಿಂತೆ ಮಾಡ ಬೇಡಿ ,ನೆಲ್ಯಾಡಿಯಲ್ಲಿ ಒಬ್ಬರು ಮೆಕ್ಯಾನಿಕ್ ಇದ್ದಾರೆ .ಅವರನ್ನು  ಕರೆಸುತ್ತೇವೆ . "ಎಂದು ನನ್ನ ಗಾಡಿಯನ್ನು ದೂಡಿ  ರಸ್ತೆ ಬದಿಯಲ್ಲಿ ನಿಲ್ಲಿಸಿ "ನೀವು ಕಾರಿನ ಒಳಗೆ ಕುಳಿತು  ಕೊಳ್ಳಿ "ಎಂದರು . ನನ್ನ ಕಾರ್ ನಲ್ಲಿ ಸಿಟಿ ಆಸ್ಪತ್ರೆ ವೈದ್ಯರು ಎಂದು ಕೋವಿಡ್ ಪರ್ಮಿಟ್ ಅಂಟಿಸಿತ್ತು .(ನಾನು ಇತರ ಸಮಯದಲ್ಲಿ ವೈದ್ಯರು ಎಂಬ  ಸ್ಟಿಕರ್ ಅಂಟಿಸುವುದಿಲ್ಲ )ಸಾರ್ ನಾವು ನಿಮ್ಮ ಆಸ್ಪತ್ರಗೆ ಹಲವು ಭಾರಿ ಬಂದಿದ್ದೇವೆ ,ನಿಮ್ಮ ಉದ್ಯೋಗಿ ಜಲೀಲ್ ನಮ್ಮ ಮಿತ್ರ ಎಂದು ಸಾಂತ್ವನದ ಮಾತು ಹೇಳಿದರು . 

ಸ್ವಲ್ಪ ಹೊತ್ತಿನಲ್ಲಿ  ಒಬ್ಬರು ಮೆಕ್ಯಾನಿಕ್ ಬಂದು ಕೇಬಲ್ ಇಲ್ಲಿ ಸಿಗದು ,ಭಾನುವಾರ ಆದ ಕಾರಣ  ಪುತ್ತೂರಿನಿಂದ ತರಿಸುವ ಹಾಗೂ ಇಲ್ಲ ಎಂದರು . ಅವರ ಹಿಂದೆಯೇ ಬಂದ  ಶ್ರೀ ಟಿಪ್ಪು ಸುಲ್ತಾನ್ ಎಂಬ ಸಜ್ಜನರು 'ಸಾರ್ ನಿಮ್ಮ ಗಾಡಿಯನ್ನು ಟೋ  ಮಾಡಿ ಹತ್ತಿರದ ಗ್ಯಾರೇಜು ಗೆ ತಲುಪಿಸುತ್ತೇನೆ "ಎಂದಾಗ ನನ್ನ ಒಂದು ಸಮಸ್ಯೆ ಪರಿಹಾರ ಆದರೂ ಬೆಂಗಳೂರಿಗೆ ಹೋಗುವ ಬಗೆ ಹೇಗೆ ? ಜತೆಗೆ ತಂಗಿಯೂ ಇರುವಳು .ಅದಕ್ಕೆ ಅವರು ನನ್ನ ಗಾಡಿ ಕೊಡುವೆನು ನೀವು ಹೋಗಿ ಬನ್ನಿ ಎಂದರು .ಗೊತ್ತು ಪರಿಚಯ ಇಲ್ಲದ ಟಿಪ್ಪು ಸುಲ್ತಾನ್ ಅವರಿಗೆ ನನ್ನ ಕಾರಿನ ಕೀ ಒಪ್ಪಿಸಿ ಬದಲಿ ಕಾರ್ ನಲ್ಲಿ ಬೆಂಗಳೂರರಿಗೆ ತೆರಳಿದೆ . ಹಾಸನಕ್ಕೆ ತಲುಪುವಾಗ ಸುಲ್ತಾನ್ ಫೋನ್ ಮಾಡಿ "ಸಾರ್  ನಿಮ್ಮ ಕಾರಿನ  ಸರ್ವಿಸ್  ಬೆಳ್ತಂಗಡಿ  ಶಾಖೆ ತೆರೆದಿದೆ .ಅಲ್ಲಿ ಕೊಂಡು ಹೋಗಿ ರಿಪೇರ್ ಮಾಡಿಸಿ ತರುವೆನು "ಎಂದರು . 

ನಾನು ನನ್ನ ಬೆಂಗಳೂರು ಕೆಲಸ ನಿಶ್ಚಿಂತೆಯಿಂದ ನೆರವೇರಿಸಿ ಮರುದಿನ ಸಾಯಂಕಾಲ ನೆಲ್ಯಾಡಿಗೆ ತಲುಪಿದಾಗ  ಗಾಡಿ ರೆಡಿ  ಯಾಗಿತ್ತು .ಅವರ ಸೇವೆಗೆ ಸೂಕ್ತ  ಸಂಭಾವನೆ ನೀಡಿದೆ . ಟಿಪ್ಪು ಸುಲ್ತಾನ್ ಇನ್ನೊಂದು ಕಡೆ  ಘಾಟ್ ಸೆಕ್ಷನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ ವಾಹನಕ್ಕೆ ಸಹಾಯ ಮಾಡಲು ಹೋಗಿದ್ದರಿಂದ ಫೋನ್ ನಲ್ಲಿಯೇ  ಕೃತಜ್ಞತೆ ಸಲ್ಲಿಸಿದೆ . 

 ಇದನ್ನು ಬರೆಯಲು ಕಾರಣ ಏನೆಂದರೆ ಈ ದಾರಿಯಲ್ಲಿ ,ಮುಖ್ಯವಾಗಿ ಶಿರಾಡಿ ,ಬಿಸಲೆ ಘಾಟ್ ನಲ್ಲಿ ಯಾವುದಾದರೂ  ತೊಂದರೆ ಆದರೆ ಇವರನ್ನು ಸಂಪರ್ಕಿಸ ಬಹುದು . ಇವರ ದೂರವಾಣಿ ಸಂಖ್ಯೆ  8105300131. ಅವರ ಬಳಿ ಟೋಯಿಂಗ್ ಕ್ರೇನ್ ಇದೆ ,ಎಲ್ಲಾ ಗ್ಯಾರೇಜು ಗಳ  ಮಾಹಿತಿ ಕೂಡಾ . ಸೇವೆ ಉಚಿತ ಅಲ್ಲ ಆದರೆ ಸಮಯೋಚಿತ . 

ಟಿಪ್ಪು ಸುಲ್ತಾನ್ ಮತ್ತು ಅವರ ತಂಡಕ್ಕೆ  ನನ್ನ ಕೃತಜ್ಞತೆ ಈ ಮೂಲಕ ಸಲ್ಲಿಸುತ್ತೇನೆ ,

                  



 

ಶನಿವಾರ, ಏಪ್ರಿಲ್ 10, 2021

ನಾನು ಮೆಚ್ಚಿದ ಬಾಲಕೃಷ್ಣರು

 ನಾನು ಮೆಚ್ಚಿದ ಬಾಲಕೃಷ್ಣರು 

 

 

ಇವರು ಪುತ್ತೂರಿನಲ್ಲಿ ಆಟೋ ರಿಕ್ಷಾ ಓಡಿಸುವ ಶ್ರೀ ಬಾಲಕೃಷ್ಣ ಅವರು .ನೆಹರೂ ನಗರ ದ ಸ್ಟಾಂಡ್ ಅವರ ಸಾಗಾಟದ ಉಗಮ ಸ್ಥಾನ . ಇವರು ಇಷ್ಟೇ ಆಗಿದ್ದಲ್ಲಿ ನನ್ನ ಗಮನ ಕ್ಕೆ  ಬರುತ್ತಿರಲಿಲ್ಲವೋ ಏನೋ ?

ನಗರ ಬಸ್ ಸ್ಟಾಪ್ ನಿಂದ  ವಿವೇಕಾನಂದ ಕಾಲೇಜ್ ಗೆ ಹೋಗುವ ಮಾರ್ಗದಲ್ಲಿ ಒಂದು ಅಗಲ ಕಿರಿದಾದ ರೈಲ್ವೇ ಮೇಲ್ಸೇತುವೆ ಇದೆ .ಇದು ತಗ್ಗಿನಲ್ಲಿ ಇದ್ದು ಮಳೆ ಬಂದೊಡನೆ ನೀರು ತುಂಬುವುದು .ರಸ್ತೆಯ ಬದಿಯಲ್ಲಿ ನಡೆಯುವ ವಿದ್ಯಾರ್ಥಿಗಳು ಮತ್ತು ನಾಗರೀಕರಿಗೆ  ಕೊಳಕು ನೀರು ಪ್ರೋಕ್ಷಣೆ ಆಗುವುದು . ನೇರು ಕೆಳಗೆ ಹೋಗಲು ಸೇತುವೆಯಲ್ಲಿ ಒಂದು ಸಣ್ಣ ರಂದ್ರ ಮಾಡಿರುವರು .ಆದರೆ ಕಸ ತುಂಬಿ ಆಗಾಗ ಅದು ಬ್ಲಾಕ್ ಆಗುವುದು . ನಮ್ಮ ಬಾಲಕೃಷ್ಣರು ಆಗಾಗ ಅಲ್ಲಿಗೆ ತೆರಳಿ ಕೈಹಾಕಿ ಅದನ್ನು ಸ್ವಚ್ಛ ಮಾಡಿ ನೀರು ಹರಿದು ಹೋಗುವಂತೆ ಮಾಡುವರು .ಇದು ಯಾರ ಹೊಗಳಿಕೆಗೆ ಅವರು ಮಾಡುವುದಲ್ಲ ,ಆತ್ಮ ಸಾಕ್ಷಿಗನುಗುಣವಾಗಿ  ಮಾಡುವರು .

ಇದರೊಡನೆ ಮುಂಜಾನೆ  ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಇರುವ ಕಸ ಕಡ್ಡಿ ತಾನೇ ಗುಡಿಸಿ ಬೆಂಕಿ ಹಾಕಿ ಕಾಯುವರು .ಬೆಳಗಾದಾಗ  ಬೀದಿ ದೀಪ ಆರಿಸುವರು .ನಗರ ಸಭೆಯ  ನೀರು ಸರಬರಾಜು ಕೆಲಸದಲ್ಲಿ ಬೋರ್ ವೆಲ್ ಒನ್ ಆಫ್ ಮಾಡುವುದು ,ನೀರಿನ ವಾಲ್ವ್ ನಿರ್ವಹಣೆ ಕೂಡಾ ಮಾಡುವರು .

ಇಂತಹವರೆ ನಿಜವಾದ ನಾಡೋಜರು 




 

ಶುಕ್ರವಾರ, ಏಪ್ರಿಲ್ 9, 2021

ನಮ್ಮ ಹೆಮ್ಮೆಯ ನಿಶ್ಚಿತ್

                                            

                    ನಮ್ಮ ಹೆಮ್ಮೆಯ ನಿಶ್ಚಿತ್

ಈ ಚಿತ್ರದಲ್ಲಿ ಇರುವ ಯುವಕ ನಿಶ್ಚಿತ್ . ನಮ್ಮ ನೆರೆ (ಹೊರೆಯಂತೂ ಅಲ್ಲವೇ ಅಲ್ಲ )ಕರೆ ಯಲ್ಲಿ  ಅವನ ಮನೆ . ತಾಯಿ ನಿವೃತ್ತ ಬಿ ಎಸ ಏನ್ ಎಲ್ ಉದ್ಯೋಗಿ . ಹುಟ್ಟುವಾಗಲೇ ವಾಕ್ ಮತ್ತು ಶ್ರವಣ  ಶಕ್ತಿ ಇಲ್ಲ . ಆದರೆ ದೃತಿ ಕೆಟ್ಟು ಮನೆಯಲ್ಲಿ ಕೂರಿಸಲಿಲ್ಲ .ವಾಮನೂರಿನ ಮಂಗಳ ಜ್ಯೋತಿ  ವಿಕಲ ಚೇತನ ಸಂಯೋಜಿತ ಶಾಲೆಯಲ್ಲಿ  ಅಕ್ಷರಾಭ್ಯಾಸ ಮಾಡಿ ಈಗ  ಅಲ್ಲಿಯೇ ಪಕ್ಕದ  ಪದ್ಮಾ ಆಟೋ ಗ್ಯಾರೇಜು ನಲ್ಲಿ ಕೆಲಸ .ಬೆಳಗ್ಗೆ ಪುತ್ತೂರಿನಿಂದ ಬಸ್ ಹಿಡಿದು ಮಂಗಳೂರು ,ಅಲ್ಲಿಂದ ಇನ್ನೊಂದರಲ್ಲಿ  ವಾಮ೦ಜೂರಿಗೆ  ಹೋಗಿ ಬರುವನು .ದಾರಿಯಲ್ಲಿ ನಾನು ಆಸ್ಪತ್ರೆಗೆ ಹೋಗುವಾಗ  ಮುಗುಳ್ನಗೆ ಮತ್ತು ನಮಸ್ಕಾರ . ಮೇಯ್ನ್ ರೋಡ್ ವರೆಗೆ  ಕಾರಿನಲ್ಲಿ ಬಿಡುವೆನು ಎಂದರೆ ಬೇಡ ಬೇಡ ನಡೆದೇ ಬರುವೆನು ಎನ್ನುವನು . 

  ಇವನಿಗೆ ಹೀಗೆ ಆಯಿತು ಎಂದು ಬೇಸರವೇ ಎಂದು ಕೇಳಿದ್ದಕ್ಕೆ "ಖಂಡಿತಾ ಇಲ್ಲ ,ನಮಗೆ ಮಹಾಲಿಂಗೇಶ್ವರ ದೇವರೇ ಇಷ್ಟು ಒಳ್ಳೆಯ ಮಗ ಕೊಟ್ಟಿದ್ದಾನೆ "ಎನ್ನುವರು ತಾಯಿ ಶ್ರೀಮತಿ ರತ್ನಾ . 

ಕರಾಟೆ  ತರಬೇತಿ ಕೂಡಾ ಪಡೆದಿರುವ ಈತ ಬ್ಲಾಕ್ ಬೆಲ್ಟ್ . 

ನನ್ನ  ಪಕ್ಕದ ಮನೆ ಸನ್ಮಿತ್ರ ಈತ  ಎನ್ನಲು ನನಗೆ ಹೆಮ್ಮೆ . 




 

ಗುರುವಾರ, ಏಪ್ರಿಲ್ 8, 2021

ಹಿರಿಯರ ಆಶೀರ್ವಾದ

                     ಹಿರಿಯರ ಆಶೀರ್ವಾದ 

ಇಂದು ನನಗೊಂದು  ಅಚ್ಚರಿ ಕಾದಿತ್ತು .ಅಂಚೆಯಲ್ಲಿ ಒಂದು ಓಲೆ .ಈಗ ಕಾಗದ ಬರೆಯುವವರೇ ಕಡಿಮೆ . ಆದರೆ 'ಯಿಂದ' ಕಲಂ ನಲ್ಲಿ ವಕೀಲರ ಹೆಸರು ಇತ್ತು .ನನಗೆ ಸ್ವಲ್ಪ ಗಾಬರಿ ಆಯಿತು .ನನ್ನ ಪತ್ನಿ ನನ್ನನ್ನು ಮೊದಲೇ ಎಚ್ಚರಿಸಿದ್ದರು ."ನಿಮಗೆ ಯಾಕೆ ಇದೆಲ್ಲಾ ಬರೆಯುವ ಉಸಾಬರಿ ,ಈಗ ಎಲ್ಲರೂ ತುಂಬಾ ಸೆನ್ಸಿಟಿವ್ "  ಯಾರಾದರೂ ವಕೀಲರ ನೋಟಿಸ್ ಕಳುಹಿಸಿದ್ದಾರೋ ?

ಧೈರ್ಯದಲ್ಲಿ ತೆರೆದು ಓದಿದರೆ ಅದು ಜಿಲ್ಲೆಯ ಹಿರಿಯ ವಕೀಲ ಪುಂಡಿಕಾಯ್ ನಾರಾಯಣ ಭಟ್ ಅವರ ಆಶೀರ್ವಾದ ಪೂರ್ವಕ ಪತ್ರ .  ಅವರು ಸಾಹಿತ್ಯ ಸಂಗೀತ ಮತ್ತು ಕಲೆಗಳಲ್ಲಿ ಅಭಿರುಚಿ ಇರುವವರು ಎಂದು ನಾನು ಬಲ್ಲೆ .ಅವರ ಮಗ ಪ್ರಸಿದ್ದ ವೈದ್ಯ ರಾಮರಾಜ್ ಕೂಡಾ . ತಮ್ಮ ಪುಂಡಿಕಾಯ್ ಗಣಪಯ್ಯ ಸಾಹಿತ್ಯ ಮತ್ತು ಇತಿಹಾಸ  ಕ್ಷೇತ್ರದಲ್ಲಿ ಹೆಸರು ಮಾಡಿದವರು .ನನ್ನ ಫೇಸ್ ಬುಕ್ ಬರಹಗಳನ್ನು  ಮೆಚ್ಚಿ ಒಳ್ಳೆಯ ಅಭಿಪ್ರಾಯ ಬರೆದಿದ್ದಾರೆ . ಅವರಿಗೆ ನಾನು ಗೌರವ ಪೂರ್ವಕವಾಗಿ ವಂದಿಸುತ್ತೇನೆ .




ಬುಧವಾರ, ಏಪ್ರಿಲ್ 7, 2021

shramajeevi sathyanna

   ಶ್ರಮ ಜೀವಿ ಸತ್ಯಣ್ಣ 


 


 ೧೯೮೬ ರಿಂದ ೧೯೮೯ ವರೆಗೆ ಮೂರು  ವರ್ಷ ರೈಲ್ವೆ  ವೈದ್ಯಾಧಿಕಾರಿ ಆಗಿ ಪುತ್ತೂರಿನಲ್ಲಿ (ರೈಲ್ವೆ ಭಾಷೆಯಲ್ಲಿ ಕಬಕ ಪುತ್ತೂರು )ಇದ್ದೆನು . ಹಾರಾಡಿ ರೈಲ್ವೆ ಕಾಲೋನಿ ಯಲ್ಲಿ ಮನೆ .ನಮ್ಮ ಮನೆಗೆ ಹೊಳ್ಳರ ಅಂಗಡಿಯಿಂದ ದಿನ ಪತ್ರಿಕೆ ಬರುತ್ತಿತ್ತು .ಹಾಕುತ್ತಿದ್ದವರು ಸತ್ಯನಾರಾಯಣ ಭಟ್ ಅಥವಾ  ಸತ್ಯಣ್ಣ . 

  ಮುಂದೆ ನಾನು ದೇಶ ವಿದೇಶ ಸುತ್ತಿ (ಕೊಂಕಣ ಸುತ್ತಿ ಮೈಲಾರಕ್ಕೆ ಬಂದ  ಹಾಗೆ )

ಪುತ್ತೂರಿಗೆ ೨೦೧೦ ರಲ್ಲಿ ಬಂದು ನೆಲೆಸಿದೆನು . ಒಂದು ದಿನ ಅದೇ ಸೈಕಲ್  ಸತ್ಯಣ್ಣ ಹಾಲಿನ ಕ್ಯಾನ್  ತುಂಬಿಕೊಂಡು ರಸ್ತೆಯಲ್ಲಿ ಹೋಗುವುದು ಕಂಡೆ .ಅವರು  ಡಾ ಎಂ ಎಸ್  ಭಟ್ ಅವರ ಹಾಲಿನ ಡೈರಿಯಿಂದ ಹಾಲು ಸರಬರಾಜು ಮಾಡುವ ವೃತ್ತಿಗೆ ಸೇರಿದ್ದರು .ಬಿಸಿಲು ಮಳೆಯೆನ್ನದೆ  ದಿನದಲ್ಲಿ ಎರಡು ಹೊತ್ತು ಹಾಲು ತುಂಬಿದ ಸೈಕಲ್ ತುಳಿದು (ಮತ್ತು ದೂಡಿ )ಪ್ರಾಮಾಣಿಕ ಜೀವನ ಸಾಗಿಸುವ ಶ್ರಮ ಜೀವನ .. ದಾರಿಯಲ್ಲಿ ಕಂಡಾಗ ಒಂದು ಮುಗುಳ್ನಗು .. 

ಅವರನ್ನು ಕಂಡು ಒಂದು ಭಾವ ಚಿತ್ರ ತೆಗೆದುಕೊಳ್ಳಲು ಇಂದು ಡೈರಿಗೆ ಹೋಗಿ ಬಂದು ಬರೆಯುತ್ತಿದ್ದೇನೆ . ಕಾಯಕವೇ ಕೈಲಾಸ ಎಂದು ಬದುಕುವ ಇಂಥವರನ್ನು ಕಂಡರೆ ನನಗೆ ಪ್ರೀತಿ ಮತ್ತು ಗೌರವ .