ಬೆಂಬಲಿಗರು

ಬುಧವಾರ, ಏಪ್ರಿಲ್ 7, 2021

ಬಿರುದು ಬಾವಲಿಗಳು

                          ಬಿರುದು ಬಾವಲಿಗಳು 


ಹಲ ವರುಷಗಳ ಹಿಂದೆ ನನಗೊಂದು ಪತ್ರ  ಬಂದಿತು .ಅದರಲ್ಲಿ " ನಿಮ್ಮ   ವಿಶೇಷ ಸಾಧನೆಯನ್ನು ಪರಿಗಣಿಸಿ  ಗೌರವ ಡಾಕ್ಟರೇಟ್  ಉಪಾಧಿ ಕೊಡಲು ನಿರ್ಧರಿಸಿದ್ದು ,ನ ಮ್ಮಿಂದ  ಗೌರವಿಸಲ್ಪಟ್ಟ  ಹಿಲ್ಲರಿ ಕ್ಲಿಂಟನ್ ,ಬಿಲ್ ಗೇಟ್ಸ್ (ಮತ್ತು ಕೆಲವು  ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖ ) ಅಂತಹವರ ಸಾಲಿನಲ್ಲಿ ನೀವೂ ಸೇರಿದ್ದೀರಿ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ . ನಿಮ್ಮ ಬಯೋ ಡೇಟಾ ಮತ್ತು ಇತ್ತೀಚೆಗಿನ ಭಾವ ಚಿತ್ರ ಕೆಳಗಿನ ವಿಳಾಸಕ್ಕೆ  ಕಳುಹಿಸಿ ಕೊಡುವುದು ."ಎಂದು ಬರೆದಿತ್ತು .ಜತೆಗೆ ಅವರ ಹಿಂದಿನ ಘಟಿಕೋತ್ಸವದ  ಚಿತ್ರ ,ಅದರಲ್ಲಿ ಮಾಜೀ ರಾಜ್ಯಪಾಲರು ಮುಖ್ಯ ಅತಿಥಿ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳು . (ನನ್ನ ಬಯೋ ಡೇಟಾ ಗೊತ್ತಿಲ್ಲದವರು ನನಗೆ ಗೌರವ ಪದವಿ ನೀಡುವರು !)

ನಾನು ಒಂದು ವೇಳೆ ಉತ್ತರಿಸಿದರೆ  ನನಗೆ  ಘಟಿಕೋತ್ಸವ ವೆಚ್ಚ ವೆಂದು ಇಷ್ಟು ಮೊತ್ತ ಕಳುಹಿಸಿರಿ ಎಂದು ಬರುವುದು . ಯಾವುದಾದರೂ ಒಂದು ಮಹಾನಗರದ ಹೋಟೆಲ್ ಸಭಾಂಗಣದಲ್ಲಿ  ನನಗೆ ಗೌ ಡಾ ಕೊಡಲ್ಪಟ್ಟು ಪತ್ರಿಕೆಗಳಲ್ಲಿ ನನ್ನ ಭಾವ ಚಿತ್ರ  ಬರುವುದಲ್ಲದೆ  ನನ್ನ ಹಿತೈಷಿಗಳು ಡಾ ಎ   ಪಿ ಭಟ್ ಅವರಿಗೆ ಅಭಿನಂದನೆಗಳು ಎಂದು ಹಾಕುವರು .. ಇದು ಒಂದು ಗೌರವ ಡಾಕ್ಟರೇಟ್ ದಂಧೆ . 

ಮಾಧ್ಯಮಗಳಿಗೆ ಇದು ಒಂದು ಜಾಹಿರಾತಿನ ದಾರಿ ಯಾದುದರಿಂದ  ಅದರ ಮೂಲಕ್ಕೆ ಅವು ಹೋಗವು .ಇದೇ ರೀತಿಯ ಬಹು ವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರ ಬಿರುದು ದಾಹಿಗಳಿಗೆ ನೀಡುವವರು ಹುಟ್ಟಿಕೊಂಡಿದ್ದಾರೆ

ಇನ್ನು ನಮ್ಮ ಅಧಿಕೃತ (ಯು ಜಿ ಸಿ ಅಂಗೀಕೃತ )ವಿಶ್ವ ವಿದ್ಯಾಲಯಗಳ ಸ್ಥಿತಿ ಉತ್ತಮ ಏನೂ  ಇದ್ದಂತಿಲ್ಲ . ಡಾಕ್ಟರೇಟ್ ಪದವಿಗಳು ಮಾರಾಟವಾಗುತ್ತಿವೆ  ಮತ್ತು  ವಶೀಲಿ ಬಾಜಿ ನಡೆಯುವದು ಎಂದು ತಿಳಿದವರು ಹೇಳುವರು . ಅನಧಿಕೃತ ಪದವಿ ದಾನಿಗಳು ಕೆಲವರಾದರೂ  ಅರ್ಹರಿಗೆ ಗೌ ಡಾ ಮಾರುತ್ತಿರಬಹುದು . 

ಇನ್ನು  ಸಂಘ ಸಂಸ್ಥೆ ಮತ್ತು ಸರಕಾರೀ ಇಲಾಖೆಗಳಲ್ಲಿ  ಉತ್ತಮ ಸಾಧನೆಗಾಗಿ ಕೊಡಲ್ಪಡುವ  ಬಿರುದು ಬಾವಲಿಗಳು ಬಹುತೇಕ ಅರ್ಹರು ಮತ್ತು ಪ್ರಾಮಾಣಿಕರಿಗೆ ಸಿಗುವುದಿಲ್ಲ .ಇದು ನನ್ನ ಸುಧೀರ್ಘ ವೃತ್ತಿ ಜೀವನದ ಅನುಭವ . ಛತ್ರ ಚಾಮರ ಸೇವೆ ಮಾಡಿದವರು  ಗುರುತಿಸಲ್ಪಡುವರು . ಎಲೆಯ  ಮರೆಯ ಕಾಯಿಗಳು ಅಲ್ಲಿಯೇ ಹಣ್ಣು ಆಗುವರು . 

ಇನ್ನು ಕೆಲವು ಇಲಾಖೆಗಲ್ಲಿ ಬಿರುದು ಯಾಂತ್ರಿಕವಾಗಿ ಕೊಡಲ್ಪಡುವದು .ಇತ್ತೀಚಿಗೆ ನಿಧನರಾದ  ಕರ್ನಾಟಕದ ಮಾಜಿ ಪೊಲೀಸ್ ಮಹಾ ನಿರ್ದೇಶಕ  ಎ ಪಿ ದುರೈ ತಮ್ಮ ಆತ್ಮ ಚರಿತ್ರೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿಯನ್ನು ಉಲ್ಲೇಖಿಸಿ "ನಮ್ಮ ಸೇವೆಯಲ್ಲಿ ದಡಾರ ಮತ್ತು ಕೋಟ್ಲೆ (ಮೀ ಸಲ್ಸ್ ಮತ್ತು ಚಿಕನ್ ಪೋಕ್ಸ್)ಬರುವಂತೆ ಸೇವಾ ಅವಧಿಯಲ್ಲಿ ಎಲ್ಲರಿಗೂ  ಸೇವಾ ಪದಕ ಬರುವುದು "ಎಂದು ತಮಗೆ ಪದಕ ಬಂದುದ ನನ್ನು ನೆನಪಿಸಿ ಕೊಂಡಿರುವರು 

 

  


ಒಂದು ಪ್ರಯಾಣದ ನೆನಪು

                                ಒಂದು ಪ್ರಯಾಣದ ನೆನಪು

೧೯೮೨ ಇರಬೇಕು . ಯು ಪಿ ಎಸ ಸಿ ಸಂಯುಕ್ತ ವೈದ್ಯಕೀಯ ಸೇವೆ  ರಿಟನ್ ಟೆಸ್ಟ್ ಪಾಸ್  ಆಗಿ ಇಂಟರ್ವ್ಯೂ ಗೆ  ದೆಹಲಿಗೆ ಕರೆದಿದ್ದರು .ಬೆಂಗಳೂರಿನಿಂದ ಗ್ರಾಂಡ್ ಟ್ರಂಕ್ ಎಕ್ಷ ಪ್ರೆಸ್ ರೈಲಿನಲ್ಲಿ ಹೋಗುವದು .ಈ ರೈಲು  ಬೆಳಿಗ್ಗೆ ಬೆಂಗಳೂರಿನಿಂದ ಹೊರಟು  ಮದ್ಯಾಹ್ನ ಚೆನ್ನೈಗೆ ತಲುಪುವುದು .ಅಲ್ಲಿಂದ ನಾಲ್ಕು ಗಂಟೆಗಳ ತರುವಾಯ ಡೆಲ್ಲಿಯತ್ತ . ಇಷ್ಟು ದೂರ ಒಬ್ಬನೇ ಹೋಗುವುದು ಮೊದಲ ಬಾರಿಯಾದ್ದರಿಂದ ಆತಂಕ . 

ಗ್ರ್ಯಾಂಡ್ ಟ್ರಂಕ್ ಎಕ್ಷ ಪ್ರೆಸ್ ಬಹು ಉದ್ದದ ರೈಲು . ನನ್ನ ಕಂಪಾರ್ಟ್ಮೆಂಟ್ ನಲ್ಲಿ  ಕುಂದಾಪುರ ಮೂಲದ ಒಬ್ಬ ಯುವಕ ಇದ್ದರು . ಅವರು ಬೆಂಗಳೂರಿನಲ್ಲಿ ಹೆಗ್ಡೆ ಅಂಡ್ ಗೋಲೆ  ಕೈ ಗಡಿಯಾರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ಬೇರೊಂದು ಕಂಪನಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗುವವರು . ಆಗೆಲ್ಲಾ  ಸಹ ಪ್ರಯಾಣಿಕರನ್ನು ಈಗಿನಂತೆ ಸಂದೇಹಿಸುತ್ತಿರಲಿಲ್ಲ . ಊಟ ತಿಂಡಿಗಳನ್ನು ಹಂಚಿ ತಿನ್ನುತ್ತಿದ್ದರು .ಅಲ್ಲದೆ ಸಹ ಪ್ರಯಾಣಿಕರಿಗೆ ತಮ್ಮ ವಿಳಾಸ ಫೋನ್ ನಂಬರ್ ಕೊಟ್ಟು ಸಂಪರ್ಕ ಇಟ್ಟು ಕೊಳ್ಳಲು ಹೇಳುತ್ತಿದ್ದರು . ಗ್ರಾಂಡ್ ಟ್ರಂಕ್ ರೈಲಿನಲ್ಲಿ ಲೈಬ್ರರಿ ಕೂಡಾ ಇತ್ತು ,ಸಮಯ ಕಳೆಯಲು ಪುಸ್ತಕ ಎರವಲು ಕೊಡುತ್ತಿದ್ದರು .ಪ್ಯಾಂಟ್ರಿ ಕಾರ್ ಗೆ ಹೋಗಿ ನಮಗೆ ಬೇಕಾದದ್ದನ್ನು ತಿನ್ನ ಬಹುದಾಗಿತ್ತು .ಇದೆಲ್ಲಾ ನನಗೆ ಹೊಸದು.

ಆಗ ತಾನೇ  ಏಶಿಯನ್ ಗೇಮ್ಸ್ ಗಾಗಿ ಹೊಸ ಹೋಟೆಲ್ ಗಳು ಹುಟ್ಟಿ ಕೊಂಡಿದ್ದು ಟ್ರೈನ್ ನಲ್ಲಿ  ಪರಿಚಯ ಆದ  ಯುವಕ ಮತ್ತು ನಾನು  ಸೇರಿ ಹೊಸ ದಿಲ್ಲಿ  ರೈಲ್ವೆ ಸ್ಟೇಷನ್ ಬಳಿ ಒಂದು ರೂಮ್ ಪಡೆದೆವು . 

ಟಿ ಟಿ ಕೆ ಮ್ಯಾಪ್ ಹಿಡಿದು  ಸ್ಥಳಗಳ ಅನ್ವೇಷಣೆ . ಕಿಲೋಮೀಟರ್ ದೂರದಲ್ಲಿ ಕನ್ನಾಟ್ ಪ್ಲೇಸ್ ಇತ್ತು .ಅಲ್ಲಿಯ ಮದ್ರಾಸ್ ಕೆಫೆ ಯಲ್ಲಿ ಊಟ ತಿಂಡಿ .ನನ್ನ ಇಂಟರ್ವ್ಯೂ ಇದ್ದ ಧೋಲ್ಪುರ್ ಹೌಸ್ ಗೆ ಕೂಡಾ ನಡೆದೇ ಹೋದೆನು .ಯು ಪಿ ಎಸ ಸಿ  ಸಂದರ್ಶನ  ಬಹಳ  ಚೆನ್ನಾಗಿ ,ವೈಜ್ಞಾನಿಕ ರೀತಿಯಲ್ಲಿ  ನಡೆಸುತ್ತಾರೆ .ಅದರಲ್ಲಿ ಸಾಮಾನ್ಯ ಮತ್ತು  ವಿಷಯ ತಜ್ಞರು ಇರುತ್ತಾರೆ . ಉದ್ಯೋಗಾರ್ಥಿಯನ್ನು  ಕುಶಲ ಸಂಭಾಷಣೆಗಳಿಂದ  ಮಾತನಾಡಿಸಿ ಪರಿಚಿತ ವಾತಾವರಣ ಸೃಷ್ಟಿ ಮಾಡಿ ಆಮೇಲೆ  ಅವನ ವಿಷಯದ ಮೇಲೆ ಒಳ್ಳೆಯ ಪ್ರಶ್ನೆಗಳನ್ನು ಕೇಳಿ ಅವನಲ್ಲಿ ಏನು ಜ್ಞಾನ ಇದೆ ಎಂದು ಅಳೆಯುವರು . ನಮಗೇನು ತಿಳಿದಿಲ್ಲಾ ಎಂಬುದನ್ನು ತೋರಿಸುವ ಮನೋಭಾವ ಇಲ್ಲ . ನಾನು ಜೀವ ಮಾನದಲ್ಲಿ ಎದುರಿಸಿದ ಅತ್ಯುತ್ತಮ ಸಂದರ್ಶನ ಎನ್ನ ಬಹುದು . 

ನನ್ನ ಮಿತ್ರರೂ ಅವರ ಸಂದರ್ಶನ ಮುಗಿಸಿ ,ನಾವು ಜತೆಗೇ ವಾಪಸ್ಸು ಆದೆವು . 

ಇದನ್ನು ಬರೆಯುವ ಉದ್ದೇಶ ಕಾಲ ಹೇಗೆ ಬದಲಾಗಿದೆ . ಈಗ ಸಹ ಪ್ರಯಾಣಿಕರಲ್ಲಿ  ಮಾತನಾಡಲು ಅಂಜುತ್ತೇವೆ . ಅವರು ಕೊಟ್ಟುದನ್ನು ತಿನ್ನುವ ಅಥವಾ ಕುಡಿಯುವ ಮಾತೇ  ಇಲ್ಲ .ಅಪನಂಬಿಕೆ ,ಅನಾದರ .

ಮಂಗಳವಾರ, ಏಪ್ರಿಲ್ 6, 2021

ಹಿರಿಯ ವೈದ್ಯ ಪಥ ನಿರೂಪಕ ಡಾ ವಿಟ್ಟಲ್ ಜಿ ಎನ್



 ಮೇಲಿನ  ಚಿತ್ರದಲ್ಲಿ ಕಾಣುವದು ಪುತ್ತೂರಿನ ಹಿರಿಯ ವೈದ್ಯರಾದ ಡಾ ಜಿ ಏನ್ ವಿಠ್ಠಲ್ . ಪಂಜದ ಸಮೀಪ ಕುಗ್ರಾಮ ನಾಯ್ಕೆರೆ ಯಲ್ಲಿ ೧೯೪೫ ರಲ್ಲಿ ಜನಿಸಿ ಪಂಜ ,ಪುತ್ತೂರು ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಕೆಲ ಕಾಲ ಪ್ರಸಿದ್ಧ ಪುತ್ತೂರು ಬೋರ್ಡ್ ಹೈ ಸ್ಕೂಲ್ ನಲ್ಲಿ ಅಧ್ಯಾಪನ ಮಾಡಿ  ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ  ಪೂರೈಸಿ  ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಿಷನ್ ಆಸ್ಪತ್ರೆ ಯಲ್ಲಿ ಸೇವೆ .ಆಮೇಲೆ ಅಲ್ಲಿಯೇ ಖಾಸಗಿ ಕ್ಲಿನಿಕ್ ಹಾಕಿ ಪ್ರಾಕ್ಟೀಸ್ .ಕೆಲ ಸಮಯ ಮಾನಾ  ರಾಯಪುರ ದಲ್ಲಿ ಸ್ಥಾಪಿತ  ಬಾಂಗ್ಲಾದೇಶಿ ನಿರಾಶ್ರಿತರ ಶಿಬಿರದಲ್ಲಿ ವೈದ್ಯಕೀಯ ಸೇವೆ . ೧೯೭೬ ರಲ್ಲಿ ಇರಾನ  ದೇಶಕ್ಕೆ ತೆರಳಿ ೧೯೮೯ ರ ವರೆಗೆ ಅಲ್ಲಿಯ ಸರಕಾರಿ ವೈದ್ಯಕೀಯ ಸೇವೆಯಲ್ಲಿ . ಇರಾನಿನ ಮಂಜಿಲ್ ಗಿಲಾನ್ ನಲ್ಲಿ  ಇರಾಕೀ ಯುದ್ಧ ಕೈದಿಗಳ ಅರೋಗ್ಯ ದೇಖೆ ರೇಖೆ .. 

ಆಸ್ಟ್ರಿಯಾ ದೇಶದ ವಿಯೆನ್ನಾ ದಲ್ಲಿ ಶಿಶು ರೋಗಗಳ ಬಗ್ಗೆ ವಿಶೇಷ ತರಬೇತಿ ಪಡೆದಿರುವ ಇವರು ಪುತ್ತೂರಿನ ಪ್ರಥಮ  ಅಲ್ಟ್ರಾ ಸೌಂಡ್ ಸ್ಕ್ಯಾನ್ ಕೇಂದ್ರ  ಅಪೊಲೊ ಸ್ಕ್ಯಾನ್  ಸೆಂಟರ್ ಸ್ಥಾಪಿಸಿ  ಈ ಊರಿನಲ್ಲಿ  ರೋಗ ನಿಧಾನದ  ಹೊಸ ವಿಧಾನ ಪರಿಚಯಿಸಿ  ಅದಕ್ಕೋಸ್ಕರ ಮಂಗಳೂರಿಗೆ ಹೋಗುವ ಅವಶ್ಯ ಕತೆ ನಿವಾರಿಸಿದರು . 

ಹಳ್ಳಿಯ ರೋಗಿಗಳಿಗೆ ಸದಾ  ಸಾಂತ್ವನ ಸಹಾಯ ಹಸ್ತ

ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಪುತ್ತೂರು ಸಿಟಿ ಆಸ್ಪತ್ರೆಯ ಸ್ಥಾಪಕ ಸದಸ್ಯರು ಆಗಿರುವ ಇವರು ಸದ್ಯ ವೃದ್ದಾಪ್ಯ ಮತ್ತು ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು , ಆಗಾಗ ಅವರಲ್ಲಿ ತೆರಳಿ ಗೌರವ ಸಲ್ಲಿಸಿ ಅರೋಗ್ಯ ವಿಚಾರಣೆ ಮಾಡುವೆನು

 

ಭಾನುವಾರ, ಏಪ್ರಿಲ್ 4, 2021

ವಿಟ್ಲದ ಬಲ್ಲಾಳರು ಮತ್ತು ಪುತ್ತೂರಿನ ಸಾಹೇಬರು

     ವಿಟ್ಲದ ಬಲ್ಲಾಳರು ಮತ್ತು ಪುತ್ತೂರಿನ ಸಾಹೇಬರು 

ವಿಟ್ಲ ಬಸ್ ಸ್ಟಾಂಡ್ ನಲ್ಲಿ  ಬಲ್ಲಾಳ (ಅವರ ಹೆಸರು ತಿಳಿಯದು )ರೆಂಬವರು ಇದ್ದರು.ಅವರಿಗೆ ಒಂದು ಕಾಲು ಸ್ವಲ್ಪ ಊನ . ಕಾಲು ಎಳೆಯುತ್ತಾ ನಡೆಯುತ್ತಿದ್ದರು . ಮುಂಜಾನೆ  ನಿಲ್ದಾಣ ಪರಿಸರ ದಲ್ಲಿ   ವೃತ್ತ ಪತ್ರಿಕೆ ಮಾರುವರು .ನವ ಭಾರತ (ಮತ್ತೆ ಉದಯವಾಣಿ ),ಪ್ರಜಾವಾಣಿ ,ಸಂಯುಕ್ತ ಕರ್ನಾಟಕ ,ಡೆಕ್ಕನ್ ಹೆರಾಲ್ಡ್ ಎಂದು ರಾಗ ಬದ್ದವಾಗಿ ಕೂಗಿ ಕೊಂಡು ಬರುವರು . ಹಳ್ಳಿಯವರು ಬಂದರೆ ನವಭಾರತ ಅಥವಾ ಉದಯವಾಣಿ ಮುಂದೆ ಬರುವುದು .ಪೇಟೆ ಯ  ಪ್ಯಾಂಟ್ ಷರ್ಟ್ ನವರು ಬಂದರೆ ಇಂಗ್ಲಿಷ್ ಪತ್ರಿಕೆ ಚಾಚುವರು.

ಹನ್ನೊಂದು ಗಂಟೆ ಸುಮಾರಿಗೆ  ಕಿತ್ತಳೆ ಹಣ್ಣು ,ಮುಸುಂಬಿ ವ್ಯಾಪಾರ . ಲಾಟರೀ ಟಿಕೆಟ್ ಮಾರಾಟ ಕೂಡ ಮಾಡುವರು .

ಸುತ್ತು ಮುತ್ತಲಿನ ಬಹಳಷ್ಟು ಹಳ್ಳಿಯವರು ಅವರಿಗೆ ಪರಿಚಿತ . ನನ್ನನ್ನು ಕಂಡೊಡನೆ ಮಂಜೇಶ್ವರ ಬಸ್ ಬರೆಕ್ಕಷ್ಟೆ  ಅಣ್ಣಾ ಎಂದು ಹವ್ಯಕ ಭಾಷೆಯಲ್ಲಿ ಸೂಚನೆ ಕೊಡುವರು .ಇನ್ನು ಬಹಳ ಮಂದಿಗೆ ಅವರು ಸಂದೇಶ ವಾಹಕರು . ಈರ್ನ ಅಮ್ಮೇರು ನಾಯ್ಕೇರ್ನ ಅಂಗಡಿಗು ಪೋತೇರು.ಈರು ಮೂಳು ಕಾಪೋಡಿಗೆ ಎಂದು ಮಂಗಳೂರಿನಿಂದ ಬಂದಿಳಿದ  ಹುಡುಗನಿಗೆ ತಿಳಿಸುವರು .

ಅವರ ಸದ್ದಿಲ್ಲದ  ಜನ ಸೇವೆ ಯಾವಾಗಲೂ ಕಣ್ಮುಂದೆ ಬರುವುದು .

  ಇನ್ನೊಬ್ಬರು  ಪುತ್ತೂರಿನ ಹಳೇ ಬಸ್ ಸ್ಟಾಂಡ್ ನಲ್ಲಿ  ಹಣ್ಣು ,ಪೇಪರ್ ಮಾರುತ್ತಿದ್ದ ಸಾಹೇಬರು . ಮೊನ್ನೆ ಆಸ್ಪತ್ರೆಗೆ ಹೋಗುವಾಗ ಅರುಣಾ ಥಿಯೇಟರ್ ಬಳಿ ಅವರನ್ನು ಹೋಲುವ ಒಬ್ಬರು ವೃದ್ಧರನ್ನು ಕಂಡೆ . ಆದರೆ ವಾಹನ ದಟ್ಟಣೆ ಇದ್ದುದರಿಂದ ಅವರನ್ನು ವಿಚಾರಿಸಲು ಆಗಲಿಲ್ಲ . ಅವರೂ ನಮ್ಮಂತಹ ಹಳ್ಳಿಯವರಿಗೆ  ಮಾಹಿತಿ  ಕೊಡುವ  ಉಪಕಾರಿ . ದ್ರಾಕ್ಷಿ ದ್ರಾಕ್ಷಿ ,ಕಿತ್ತಳೆ ಹಣ್ಣು ಎಂದು ಬಸ್ ಸ್ಟಾಂಡ್ ಸುತ್ತುತ್ತ , ಆಗೊಮ್ಮೆ ಈಗೊಮ್ಮೆ ತಮ್ಮ ಸರಂಜಾಮು ಇದ್ದ ಜಾಗಕ್ಕೆ ಬರುತ್ತಾ ಇರುತ್ತಿದ್ದರು . ಹಳ್ಳಿಯವರು  ಉಬಾರುಗು ಬಸ್ ಏಪಣ್ಣ ,ಪಾಣಾಜೆ ಬಸ್ ಪೊಂಡಾ ಎಂದು ಅವರನ್ನು ವಿಚಾರಿಸುವರು .ಎಲ್ಲರಿಗೂ ಬೇಸರಿಸದೇ ಉತ್ತರಿಸುವರು .                                 ಹಳೇ ಬಸ್ ಸ್ಟಾಂಡ್ ,ಹೊಳ್ಳರ ಪೇಪರ್ ಅಂಗಡಿ ,ಎದುರಿನ ಹೂವಿನ ಮಾರುಕಟ್ಟೆ ,ಅಲ್ಲಿ ಏಕ ಕಾಲಕ್ಕೆ ಹೂ ಕಟ್ಟುತ್ತಲೂ ,ಮಾರುತ್ತಲೂ ಇದ್ದ (ಬಹುತೇಕ ಕ್ರಿಶ್ಚಿಯನ್ )ಸಹೋದರಿಯರು .ಉಪ್ಪಳದಿಂದ ಬುಟ್ಟಿಯಲ್ಲಿ ಮೀನು ತಂದು ಮಾರುತ್ತಿದ್ದ ಮತ್ಸ್ಯ ಗಂಧಿಯರು ,ಪಕ್ಕದಲ್ಲಿ ನಿಲ್ಲಿಸಿದ   ಬಡೆಕ್ಕಿಲ ಶಿವರಾಮ ಭಟ್ ಡಾಕ್ಟರ ಜೀಪ್ ಎಲ್ಲಾ ಈ ಸಾಹೇಬರ ನೆನಪಿನ ಜತೆ ಸಾಲಾಗಿ ಬರುತ್ತಿದೆ .

ಜನ ಸ್ನೇಹಿ ಪರಿಚಾರಕ ವಾಸುದೇವ ಕಿಣಿ

   ಜನ ಸ್ನೇಹಿ ಪರಿಚಾರಕ ವಾಸುದೇವ ಕಿಣಿ 




ಇವರು  ಸದಾ ನಗು ಮೊಗದ ಶ್ರೀ ವಾಸುದೇವ ಕಿಣಿ . ನಾನು ಸಣ್ಣವನಿದ್ದಾಗ ಶಂಕರ ವಿಠಲ್ ಬಸ್ ನಲ್ಲಿ  ಚೆಕಿಂಗ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು . ಯಾವಾಗಲೂ ಹಸನ್ಮುಖ .ಹಳ್ಳಿಯ ಪ್ರಯಾಣಿಕರಿಗೆ ,ವೃದ್ಧರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ನೇಹ ಹಸ್ತ . 

ಮುಂದೆ ಇವರು  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಲ್ಲಿ  ಸಾರಿಗೆ ನಿಯಂತ್ರಕ ಆಗಿ ಗಿ ಸೇರಿ ಪುತ್ತೂರು ಉಪ್ಪಿನಂಗಡಿ ಗಳಲ್ಲಿ ಸೇವೆ ಸಲ್ಲಿಸಿದರು.ಸೇವಾ ದಿನಗಳಲ್ಲಿ ಕುರ್ಚಿಯಲ್ಲಿ ಆಸೀನರಾಗಿ  ಇದ್ದದ್ದು ಕಡಿಮೆ .ಅವರ ಕಣ್ಣು   ತಮ್ಮ ಊರ ಬಸ್ ಎಲ್ಲಿ ಎಂದು ಗದ್ದಲದಲ್ಲಿ ಹುಡುಕುವ ಹಳ್ಳಿಯ ಅವಿದ್ಯಾವಂತ ಪ್ರಯಾಣಿಕರ ಕಡೆಗೆ . ಕೂಡಲೇ ಅವರಲ್ಲಿ ಹೋಗಿ ನಿಮಗೆ ಎಲ್ಲಿ ಹೋಗ ಬೇಕು ಎಂದು ವಿಚಾರಿಸಿ ಸಹಾಯ ಮಾಡುವರು .ಕೆಲವೊಮ್ಮೆ ಅವರ ಗಂಟು ಮೂಟೆ ಸಾಗಿಸಲೂ . ಸಿಬ್ಬಂದಿ ಜತೆಯೂ ನಗುಮುಖದ ವ್ಯವಹಾರ .

ಈಗ ಪುತ್ತೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ .ಅವರು ಆಸ್ಪತ್ರೆಗೆ ಬಂದಾಗ ನಾನು ಸಿಬ್ಬಂದಿಗೆ ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆ ಬಗ್ಗೆ ಹೇಳುವೆನು ;ಮತ್ತು  ಅಂತವರನ್ನು ಸ್ಮರಿಸ ಬೇಕಾದುದು ನಮ್ಮ ಕರ್ತವ್ಯ . 

ಈಗ  ಪುತ್ತೂರು ಬಸ್ ನಿಲ್ದಾಣದಲ್ಲಿ  ಧ್ವನಿ ವರ್ಧಕ ಮೂಲಕ ಪ್ರಯಾಣಿಕರಿಗೆ ಸೂಚನೆ ಕೊಡುವರು ."ಪುತ್ತೂರಿನಿಂದ   ಮಾಣಿ  ಬಿ ಸಿ ರಸ್ತೆ ಮೂಲಕ ಸ್ಟೇಟ್ ಬ್ಯಾಂಕ್ ಗೆ  ಹೋಗುವ ಬಸ್ ಹತ್ತನೇ ಪ್ಲಾಟ್ಫಾರ್ಮ್ ನಲ್ಲಿ ನಿಂತಿದೆ " ಕೆಲವೊಮ್ಮೆ' ಪುತ್ತೂರಿನಿಂದ ಮಂಗಳೂರಿಗೆ ಮಾರ್ಗದ ಮೂಲಕ  ಹೋಗುವ ಬಸ್ ' ಎಂದು ಹೇಳುವರು .

ಹಳ್ಳಿಯವರು  ಕುಡ್ಲಗು  ಪೋಪುನ ಬಸ್ ಓಲುಂಡು  , ಬಿ ಸಿ ರೋಡ್ ಗು ಬಸ್ ಉಂಡಾ ಎಂದು ಕೇಳಿಕೊಂಡು  ಹುಡುಕುವರು . ಈಗಲೂ ಒಳ್ಳೆಯ ಟಿ ಸಿ ಗಳು ಇದ್ದಾರೆ . ಆದರೆ ಒಂದು ಊರ ಜನರಿಗೆ ಅವರಿಗೆ ತಿಳಿಯುವ ಭಾಷೆಯಲ್ಲಿ ತಿಳಿಸುವ ವ್ಯವಸ್ಥೆ ಇನ್ನೂ ಇಲ್ಲವೆಂದೇ ಹೇಳಬೇಕು .

ಜನರಲ್ ಮ್ಯಾನೇಜರ್ ಆಗಲಿ  ಕಚೇರಿ ಗುಡಿಸುವನಾಗಲಿ ತನ್ನ ಕಾರ್ಯವನ್ನು ಆತ್ಮಾರ್ಥತೆಯಿಂದ ಮಾಡಿದರೆ ಸಮಾಜ ಗುರುತಿಸಿ ಗೌರವಿಸ ಬೇಕು .

ಕೋರೋನಾ ಗೀತೆ

                 ಕೊರೋನ ವಾರ್ಷಿಕೋತ್ಸವ 

 ವರುಷ ತುಂಬಿದ ಕೋವಿಡಾಸುರನ ಅಟ್ಟಹಾಸ 

ಶಾಲೆ ಮರೆಯಿತು ,  ಮೊಬೈಲ್ ಮೆರೆಯಿತು                                                                                                    ಮಾಯವಾಯಿತು ಕೂಟಗಳ  ಹರ್ಷೋಲ್ಲಾಸ . 

ಎಲ್ಲೆಲ್ಲಿ ಮುಖವಾಡ, ಕೆಲವು ಏರಿತು ಹಲವು ಕಳಚಿತು ,

ಮನುಜರ ಮುಖವಾಡ ಜಾರಿ ಕಂಡಿತು  ದಾನವರ 

ನಿನ್ನೆಯ ವರೆಗೆ ನಮ್ಮವನೆಂದವನ ಇಂದು ಕಂಡು ಹೌಹಾರಿದರು . 

ಗೇಟುಗಳು ಮುಚ್ಚಿದವು ಮೊದಲು ಮನದ ,ಜತೆಗೆ ರಾಜ ಮಾರ್ಗದ .

ಕಡ್ಡಾಯ ಮಾಸ್ಕ ನಮಗೆ ನಿಮಗೆ ಹೊರಬರದೆ ಇರಲಿ ನಿಟ್ಟುಸಿರ ದಗೆ 

 ನಲ್ಲೆಗೆ ಹೇಗೆ  ತಿಳಿದೀತು ನಲ್ಲನ  ಹೂನಗೆ  ಮೆಲ್ಲುಸಿರ ಬಗೆ .. 

ಕಿಂಚಿತ್  ಊಹಿಸ ಬಹುದು ವೈರಸ್ ನಡೆ ,

 ಆದರೆ ಕಾರಣಕೆ  ನಿಲುಕದ ನಿಗೂಢ ರಾಜ ನಡೆ .

 

 

 

ಕಣ್ಮರೆಯಾಗುತ್ತಿರುವ ಖಾಸಗಿ ಬಸ್ ಏಜೆಂಟರು

 ಕಣ್ಮರೆಯಾಗುತ್ತಿರುವ ಖಾಸಗಿ ಬಸ್ ಏಜೆಂಟರು

 

ವರ್ಷಗಳ ಹಿಂದೆ ಖಾಸಗಿ ಬಸ್ ಮಾತ್ರ ಇದ್ದವು .ಪೇಟೆ ಪಟ್ಟಣಗಲ್ಲಿ ಅವುಗಳಿಗೆ ಏಜೆಂಟ್ಸ್ ಇದ್ದರು . ಒಂದೊಂದು ಕಂಪನಿ ಗೆ  ಒಬ್ಬರೋ ಇಬ್ಬರೋ ಇರುವರು . ಕೆಲವರು ಅರೆಕಾಲಿಕ  ಏಜೆಂಟರು ;ಇನ್ನು ಕೆಲವರು ಪೂರ್ಣ ಕಾಲಿಕರು .ಇವರ ಕೈಯ್ಯಲ್ಲಿ ಒಂದು ಬ್ಯಾಗ್ ,ಪೆನ್  ಮತ್ತು ಒಂದು ಪೀಪಿ .ಕೆಲವರು ಗ್ಯಾಸ್ ಲೈಟ್ ಮೆಂಟ್ಲ್ ಪೆಟ್ಟಿಗೆಯಲ್ಲಿ ಚಿಲ್ಲರೆ ,ಟಿಕೆಟ್ ಪುಸ್ತಕ ಇತ್ಯಾದಿ ಹಿಡಿರುವರು . ವಿಟ್ಲ, ಪುತ್ತೂರು ಮತ್ತು ಮಂಗಳೂರು ಬಸ್ ಸ್ಟಾಂಡ್ ನಲ್ಲಿ ಇವರನ್ನು ನಾನು ಹೆಚ್ಚಾಗಿ ಕಂಡುದು . ದೊಡ್ಡ ಊರಿನ ಸ್ಟಾಂಡ್ ಗಳಲ್ಲಿ  ಹಲವು ಜನ ಏಕ ಕಾಲಕ್ಕೆ ಕೂಗುತ್ತಿದ್ದುದರಿಂದ  ಜೀರುಂಡೆ ಗಳ  ನೆನಪು ಬರುವುದು . 

ಉದಾಹಣೆಗೆ  ವಿಟ್ಲ ಬಸ್ ಸ್ಟಾಂಡ್ ನಲ್ಲಿ ಶಂಕರ ವಿಠ್ಠಲ ಬಸ್ ಬರುವ ಹತ್ತು ನಿಮಿಷ ಮೊದಲೇ  ಏಜೆಂಟ್ ಅವರು ಆಗಮಿಸುವರು . ಕನ್ಯಾನ ಬಾಯಾರು ಕುರ್ಚಿಪಳ್ಳ ,ಕುರ್ಚಿಪಳ್ಳ ಎಂದು ಕೂಗುವರು .ಆ ಕಡೆ ಹೋಗಲು ಕಾಯುತ್ತಿರುವ ಪ್ರಯಾಣಿಕರು ಅಲರ್ಟ್  ಆಗುವರು .ಎಲೆ ಅಡಿಕೆ ಬಾಯಲ್ಲಿ ತುಂಬಿರುವವರು  ಉಗುಳಿ ಬಾಯಿ ಖಾಲಿ ಮಾಡುವರು .ಹೆಂಗಸರು ಸೀರೆ ಸೆರಗು ಸರಿ ಪಡಿಸಿ ಕೊಳ್ಳುವರು . ಚದುರಿ ಹೋದ ಮಕ್ಕಳನ್ನು ಸೇರಿಸುವರು ಮತ್ತು ತಮ್ಮ ಗಂಟು ಮೂಟೆ ಕ್ರೋಡೀಕರಿಸುವರು . 

                    ಏಜೆಂಟರು  ಟಿಕೆಟ್ ಕೊಡಲು ಆರಂಭಿಸುವಾಗ ನಾವೆಲ್ಲಾ ಕಾತುರದಿಂದ ನುಗ್ಗುವೆವು .. 

'ನೀವು ಎಲ್ಲಿಗೆ ?'

"ಬೈರಿಕಟ್ಟೆ "

ಬೈರಿಕಟ್ಟೆಯವರು ಆಮೇಲೆ ಬನ್ನಿ . ಕಮ್ಮಜೆ ,ಬಾಯಾರು ,ಪೈವಳಿಕೆ ಮುಂದೆ ಬನ್ನಿ ಎಂದು ನಮ್ಮನ್ನು ಹಿಂದೆ ತಳ್ಳುವರು . ಅವಮಾನದಿಂದ ನಾವು ಹಿಂದೆ ಸರಿಯುವೆವು . 

ಕಡೆಗೆ  ಜಾಗ ಇದ್ದರೆ  ನಾವು ಹತ್ತುವೆವು . ಡ್ರೈವರ್  ರಾಜ ಗಾಂಭೀರ್ಯ ದಿಂದ ಬಸ್ ಏರಿ  ಪೋಯಿನ್  ಪೋಯಿನ್ ಎಂದು ಹಾರ್ನ್ ಮಾಡುವರು . ತಾನು ಇಶ್ಯೂ ಮಾಡಿದ     ಟಿಕೆಟ್  ವಿವರ ಕಂಡಕ್ಟರ್ ಗೆ  ಏಜೆಂಟ್ ಟ್ರಿಪ್ ಶೀಟ್ ನಲ್ಲಿ ಎಂಟರ್ ಮಾಡಲು ಓದುವರು .

 ' 20 -21 ಕನ್ಯಾನ 1, 22 ಬಾಯಾರು 2 ,23 ಕುರ್ಚಿಪಳ್ಳ ಎರಡೂವರೆ ಹೀಗೆ ಹೋಗುವುದು .ಅಷ್ಟರಲ್ಲಿ  ಕಂಡಕ್ಟರ್ ಅದು ಅರ್ಧ ಏರ್ಯೇ ಎಂದು ವಿಚಾರಣೆ ಮಾಡುವನು .ಏಜೆಂಟ್ ಸ್ವಲ್ಪ ದೂರದ ವರೆಗೆ ಬಸ್ಸಿನಲ್ಲಿಯೇ ಬಂದು ಉಳಿದವರಿಗೆ ಟಿಕೆಟ್ ಇಷ್ಯೂ ಮಾಡಿ , ಇಳಿದು ಆಮೇಲೆ ಪೊಯ್ ರೈಟ್ ಎಂದು ಕೆಳಗೆ ಹಾರುವರು .

ಪುತ್ತೂರಿನಲ್ಲಿ ಅವರ ಸಂಖ್ಯೆ ಇನ್ನೂ ಹೆಚ್ಚು . ಬಿ ಸಿ ರೋಡ್ ,ಮಾಣಿ ,ಮಂಗಳೂರು ;

ಉಪ್ಪಿನಂಗಡಿ ಧರ್ಮಸ್ಥಳ ; ವಿಟ್ಲ , ಅಡ್ಕಸ್ಥಳ ,ಪೆರ್ಲಾ ,ಬಡಿಯಡ್ಕ ,ಕಾಸರಗೋಡ್;

ಪಾಣಾಜೆ ,ಪಾಣಾಜೆ ; ಕಾಣಿಯೂರು ಪಂಜ ಸುಬ್ರಹ್ಮಣ್ಯ  ಹೀಗೆ ಲಯ ಬದ್ದವಾಗಿ ಕೂಗುವ  ಏಜೆಂಟರು ,ಅವರೊಡನೆ ತನಿ ಆವರ್ತನಕ್ಕೆ  ಆರೆಂಜ್ ಚಿತ್ತುಪ್ಪುಳಿ ,ಐಸ್ ಕ್ಯಾಂಡಿ ,ದೂಡ್ ಕ್ಯಾಂಡಿ ಮತ್ತು ನವಭಾರತ ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್  .

ಎಲ್ಲಿ ಹೋದರು ಏಜೆಂಟ ರೆಂಬ ಗತಕಾಲ ಸಹೋದರರು ಪೊಯ್ ರೈಟ್ ಎಂದು ?