ವೈದ್ಯಕೀಯ ಸೇವೆ ಸಂಧಿಕಾಲದಲ್ಲಿ ಇದೆ . ವೈದ್ಯ ರೋಗಿ ಸಂಬಂಧ ಶಿಥಿಲ ಗೊಂಡಿದೆ . ವೈದ್ಯರೂ ಕೂಡಾ ಹಲವು ಸ್ಪೆಷ್ಯಾಲಿಟಿ ,ಸೂಪರ್ ಸ್ಪೆಷ್ಯಾಲಿಟಿ ಗಳಲ್ಲಿ ಹಂಚಿ ಹೋಗಿ ,ಒಬ್ಬ ವ್ಯಕ್ತಿ ಒಬ್ಬ ಮನುಷ್ಯನಾಗಿ ಕಾಣದೆ ಹಲವು ಅಂಗಗಳ ಒಕ್ಕೂಟ ವಾಗಿ ಬಿಟ್ಟಿದ್ದಾನೆ . ನಮ್ಮ ಕುಟುಂಬದ ,ಅರೋಗ್ಯ ಮತ್ತು ಆರ್ಥಿಕ ಸಾಮಾಜಿಕ ಹಿನ್ನಲೆ ಬಲ್ಲ ಕುಟುಂಬ ವೈದ್ಯರು ಅಪರೂಪ ಆಗಿದ್ದರೆ ,ಇದ್ದರೂ ನೇರವಾಗಿ ಎಲ್ಲರೂ ಸ್ಪೆಷಲಿಸ್ಟ್ ಬಳಿ ಓಡುವರು . ಹೋಗುವುದಕ್ಕೂ ಮೊದಲೇ ತಾವೇ ಸ್ವಯಂ ವೈದ್ಯ ಮಾಡಿರುವರು .
ವೈದ್ಯರ ಸೇವೆ ಕೂಡಾ ಒಂದು ವಾಣಿಜ್ಯ ಸೇವೆ ಆಗಿದ್ದು ಗ್ರಾಹಕ ಕಾನೂನುಗಳಿಗೆ ಒಳಪಡುವದು . ಚಿಕಿತ್ಸೆಯ ಪರಿಣಾಮದಲ್ಲಿ ಸಣ್ಣ ಪುಟ್ಟ ಏರು ಪೇರು ಆದರೂ ನ್ಯಾಯಾಲಯದ ಕಟಕಟೆ ಏರುವ ಅಭ್ಯಾಸ ಆರಂಭ ಆಗಿದೆ .ಅದನ್ನು ವಿರೋಧಿಸುತ್ತಿಲ್ಲ ,ಅವರ ಹಕ್ಕು . ಇದರ ನಾರಾಯಣ ಹರಿ ಎಂದು ಕರೆಯುತ್ತಿದ್ದ ವೈದ್ಯರು ಹಠಾತ್ ವೈರಿಗಳಾಗಿ ,ದನುಜರಂತೆ ಕಾಣುವರು .ಅವರ ಮೇಲೆ ದೈಹಿಕ ಹಲ್ಲೆ ಕೂಡಾ ನಡೆಯುವುದು .
ಇವುಗಳ ಅಡ್ಡ ಪರಿಣಾಮ ರಕ್ಷಣಾತ್ಮಕ ವೈದ್ಯಕೀಯ ಸೇವೆ .ಮೊದಲು ರೋಗಿ ಕಾಯಿಲೆಯಿಂದ ಬಂದೊಡನೆ ವೈದ್ಯರು ಅವನನ್ನು ಎಷ್ಟು ಬೇಗ ಗುಣ ಪಡಿಸುವುದು ಅಥವಾ ಬದುಕಿಸುವುದು ಎಂಬ ಚಿಂತನೆ ಮಾತ್ರ ಮಾಡುತ್ತಿದ್ದರು .ಬೇರೆಲ್ಲಾ ಗೌಣ . ಈಗ ಹಾಗಲ್ಲ ; ಮುಂದೆ ತನ್ನ ಮೇಲೆ ಬರ ಬಹುದಾದ ಸಂಭಾವಿತ ಅರೋಪಗಳನ್ನು ಹೇಗೆ ತಡೆಗಟ್ಟುವುದು ಎಂಬ ಯೋಚನೆ ,ರೋಗಿಯ ಪರೀಕ್ಷೆ ಮಾಡುವಾಗ ಸಮಾನಾಂತರ ವಾಗಿ ಬರುತ್ತದೆ . ಇದರಿಂದ ಸಣ್ಣ ವೈರಲ್ ಕಾಯಿಲೆಗೂ ಹಲವು ರಕ್ತ ಪರೀಕ್ಷೆ ,ಎಕ್ಷ ರೇ ಸ್ಕ್ಯಾನ್ ಇತ್ಯಾದಿ ಮಾಡುವರು . ಗರ್ಭಿಣಿಯರಲ್ಲಿ ಸಾಮಾನ್ಯ ಹೆರಿಗೆ ಆಗಲಿ ಎಂದು ಕಾದು ಏನಾದರೂ ತೊಂದರೆ ಆದರೆ ಎಂದು ಸಣ್ಣ ಏರು ಪೇರು ಇದ್ದರೂ ಸಿಸೇರಿಯನ್ ಮಾಡುವರು . ವೈದ್ಯರು ಎಲ್ಲರಿಗೂ ಸಿಸೇರಿಯನ್ ಮಾಡುವರು ಎಂದು ಆರೋಪಿಸುವರು ಅದನ್ನು ತಡಮಾಡಿ ತಾಯಿ ಮಗುವಿಗೆ ತೊಂದರೆ ಆದರೆ ತಾವೇ ಮೊದಲಾಗಿ ವೈದ್ಯರನ್ನು ದೂಷಿಸುವರು .
ಈ ವಿಶ್ವಾಸ ಕೊರತೆಯ ಪರಿಣಾಮ .
ವೈದ್ಯರು ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ .ಒತ್ತಡ ದಲ್ಲಿ ಕೆಲಸ ಮಾಡುವಾಗ ನಮ್ಮ ಕಾರ್ಯ ಕ್ಷಮತೆ ಕಡಿಮೆ ಆಗುವುದು . ವೈದ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುವುದು .
ಪುತ್ತೂರಿನಂತಹ ಊರಿನಲ್ಲಿ ಚಿಕಿತ್ಸೆ ಮಾಡ ಬಹುದಾದಂತಹ ಕಾಯಿಲೆಗಳ ರೋಗಿಗಳನ್ನು ಮಂಗಳೂರಿಗೆ ಕಳುಹಿಸ ಬೇಕಾಗುತ್ತ್ತದೆ . ಇಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಮೊದಲೇ ಕಳುಹಿಸಲಿಲ್ಲ ಏಕೆ ಎಂಬ ಪ್ರಶ್ನೆ ಬರುತ್ತದೆ .ಈ ಹೆಚ್ಚು ಕಮ್ಮಿ ಮಂಗಳೂರಿನಲ್ಲೂ ಆಗಬಹುದು . ಇದರಿಂದ ಸಂಬಂಧಿಕರಿಗೆ ಕಷ್ಟ ,ವೆಚ್ಚ ಅಧಿಕ ವಾಗುವದು .
ರೋಗ ಪತ್ತೆಗೆ ನೇರವಾಗಿ ಬೇಕಾದ ಪರೀಕ್ಷಣಗಳಲ್ಲದೆ ಇನ್ನೂ ಹಲವು ಮಾಡ ಬೇಕಾಗಿ ಬಂದು ರೋಗಿಯ ಬಿಲ್ಲಿಗೆ ಇದು ಸೇರುವದು .ಇನ್ನು ಜಾಲ ತಾಣಗಳನ್ನು ನೋಡಿ ರೋಗಿಗಳೇ ಕೆಲವು ಪರೀಕ್ಷೆಗಳನ್ನು ಮಾಡುವಂತೆ ಹೇಳುವರು . ಬಿಲ್ ಹೆಚ್ಚಾದಂತೆ ರೋಗಿ ಮತ್ತು ಸಂಬಂದಿಕರ ಅಸಮಾಧಾನ ಇನ್ನೂ ಹೆಚ್ಚುವುದು .
ಈ ಪರಿಸ್ಥಿತಿ ನಿರ್ಮಾಣವಾಗಲು ರೋಗಿ ,ವೈದ್ಯ ,ಸಮಾಜ ಮತ್ತು ಸರಕಾರ ಎಲ್ಲರೂ ತಮ್ಮ ತಮ್ಮ ಕೊಡುಗೆ ನೀಡಿದ್ದಾರೆ .ಇದನ್ನು ಸರಿಪಡಿಸುವದು ಹೇಗೆ ಎಂಬುದೇ ಚಿಂತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ