ಹಿಂದೆ ಯಕ್ಷಗಾನ ಬಯಲಾಟವೇ ಹಳ್ಳಿಯವರಿಗೆ ಮನೋರಂಜನೆ . ವಿಟ್ಲ ಪುತ್ತೂರು ಜಾತ್ರೆಗೆ ಹೋದಾಗ ಟಿಕೆಟ್ ಸಿಕ್ಕಿದರೆ ಆಟ ನೋಡುವುದು ಇತ್ತು . ವಿಟ್ಲ ಜಾತ್ರೆಗೆ ಶಾಲೆಗೆ ರಜೆ ಇದ್ದು ಪುತ್ತೂರು ಜಾತ್ರೆ ದೊಡ್ಡ ರಜೆಯಲ್ಲಿಯೇ ಬರುವುದರಿಂದ ಶಾಲೆ ಹಾಜರಿಗೆ ತೊಂದರೆ ಆಗುತ್ತಿರಲಿಲ್ಲ . ಪುತ್ತೂರು ಜಾತ್ರೆಗೆ ಆರೇಳು ಮೇಳಗಳ ಆಟಗಳು ಬರುತ್ತಿದ್ದವು . ಸಂಜೆ ಜಾತ್ರೆಗೆ ಬಂದವರಿಗೆ ವಾಪಸು ಹೋಗಲು ಬಸ್ ಮರುದಿನವೇ ಆದುದರಿಂದ ರಾತ್ರಿ ಕಳೆಯಲು ಒಳ್ಳೆಯ ಮಾರ್ಗ .ಈಗಿನಂತೆ ಸ್ವಂತ ವಾಹನಗಲ್ಲಿ ಬಂದು ಹೋಗುವವವರು ಬೆರಳೆಣಿಕೆ ಯಲ್ಲಿ ಇದ್ದರು .
ಇನ್ನು ನಮ್ಮ ಮನೆ ಪಕ್ಕ ಬೈರಿಕಟ್ಟೆ ಯಲ್ಲಿ ವರ್ಷಕ್ಕೆ ಒಂದೋ ಎರಡೋ ಆಟಗಳು ಬರುತ್ತಿದ್ದವು . ಕನ್ಯಾನದಲ್ಲಿ ಹೆಚ್ಚು ಬರುತ್ತಿದ್ದರೂ ಹೋದದ್ದು ಕಡಿಮೆ .
ಪುರಾಣದ ಕತೆಗಳನ್ನು ನಮ್ಮ ಅಜ್ಜ ರಂಜಿಸಿ ಹೇಳುತ್ತಿದ್ದರಿಂದ ಮಹಾಭಾರತ ದ ಕತೆ ಚೆನ್ನಾಗಿ ತಿಳಿದಿತ್ತು ,ರಾಮಾಯಣ ಕತೆ ಯಾಕೋ ಅಜ್ಜ ಹೇಳುತ್ತಿದುದು ಕಡಿಮೆ .ಆದರೆ ಶಾಲೆಯಲ್ಲಿ ಅಧ್ಯಾಪಕರಿಂದ ಮತ್ತು ಚಂದಮಾಮ ಇತ್ಯಾದಿ ಓದಿ ಅದರ ಜ್ಞಾನವೂ ಇತ್ತು . ಪುರಾಣ ಪಾತ್ರಗಳು ಮೈವೆತ್ತು ಬರುವ ಯಕ್ಷಗಾನ ನಮಗೆಲ್ಲಾ ವಿಶೇಷ ಆನಂದಾನುಭವ .
ಸರಿ ಆಟ ಇರುವ ದಿನ ಸಂಜೆ ಆರೇಳು ಗಂಟೆಗೆಲ್ಲಾ ಚೆಂಡೆ ಶಬ್ದ ಕೇಳ ತೊಡಗಿ ,ನಮ್ಮ ರಕ್ತದಲ್ಲಿ ಎಡ್ರಿನಾಲಿನ್ ಹರಿವು ಏರುವುದು ,ಮನಸ್ಸಿನಲ್ಲಿಯೇ ರಿಂಗಣ ಕುಣಿಯುವುದು . ಚಿಕ್ಕಪ್ಪ ಹಣ ಸ್ಯಾಂಕ್ಷನ್ ಮಾಡುವರು .ನಮಗೆಲ್ಲಾ ತಲೆಗೆ ತಲಾ ಒಂದು ರೂಪಾಯಿ . ಅದರಲ್ಲಿ ನೆಲ ಟಿಕೆಟ್ ಗೆ ಎಂಟಾಣೆ ,ಉಳಿದದ್ದು ನೆಲಕಡಲೆ ,ಕಟ್ಲಿಸ್ ಇತ್ಯಾದಿ ಕೊಂಡು ತಿನ್ನಲು .ಎಲ್ಲರ ಮೊತ್ತದ ಹಣ ಅಣ್ಣ ಗಣಪತಿ ಬಳಿ ,ಅವನು ಕೊಟ್ಟ ಮೇಲೆ ನಮಗೆ . ರಾತ್ರಿ ಬೇಗ ಊಟ ಮಾಡಿ ಸೂಟೆ ಬೆಳಕಿನಲ್ಲಿ ಗುಡ್ಡದ ದಾರಿಯಲ್ಲಿ ಬೈರಿಕಟ್ಟೆಗೆ .(ಒಂದು ಮೈಲು ದಾರಿ ) ದಾರಿಯುದ್ದಕ್ಕೂ ಎಂಟಾಣೆಯಲ್ಲಿ ಏನೆಲ್ಲಾ ಕೊಳ್ಳಬಹುದು ಎಂಬ ಲೆಕ್ಕಾಚಾರ .ಆಟದ ಟೆಂಟಿನ ಹೊರಗೆ ಕಡಲೆ ,ಚಿಕ್ಕಿ ,ಚಹಾ ಸೋಜಿ ,ನೀರುಳ್ಳಿ ಬಜೆ ಅಂಗಡಿಗಳು ಸಾಮಾನ್ಯವಾಗಿ ಇರುವವು .
ಟೆಂಟಿನ ಒಳಗೆ ಈಸಿ ಚೇರ್ ಎಕ್ಸಿ ಕ್ಯುಟಿವ್ ಕ್ಲಾಸ್ ,ಪುಣ್ಯವಂತರಿಗೆ . ನಮಗೆ ಅವರಲ್ಲಿ ಅಸೂಯೆ ಇರಲಿಲ್ಲ ,ಅದರ ಹಿಂದೆ ಪ್ಲಾಸ್ಟಿಕ್ ಕುರ್ಚಿ ಮತ್ತು ಕೊನೆಯಲ್ಲಿ ಬೆಂಚ್ . ರಂಗಸ್ಥಳದ ಇಕ್ಕಡೆಯಲ್ಲಿ" ನೆಲ "ಕ್ಲಾಸ್ . ಬಲಬದಿಯಲ್ಲಿ ಸ್ತ್ರೀಯರು ,ಎಡಬದಿ ಪುರುಷರು .ನಾವು ಮಕ್ಕಳು ಎಲ್ಲಿ ಬೇಕಾದರೂ ಹೋಗ ಬಹುದು . ನೆಲ ಕ್ಲಾಸ್ ರಂಗಸ್ಥಳಕ್ಕೆ ಹತ್ತಿರ ಇದ್ದುದರಿಂದ ವೇಷಗಳನ್ನು ಸಮೀಪದಿಂದ ನೋಡ ಬಹುದು . ಹಾಸ್ಯಗಾರರು ನಮ್ಮನ್ನು ಸಂದರ್ಭ ಬಂದಾಗ ಮಾತನಾಡಿಸುವರು .ಕಿಷ್ಕಿಂದಾ ಕಾಂಡದ ಕತೆ ಇದ್ದರೆ ನಮ್ಮನ್ನು ತೋರಿಸಿ ನೋಡಲ್ಲಿ ಕೆಲವು ಮರಿ ಕಪಿಗಳು ನಿದ್ದಿಸುತ್ತಿವೆ ,ಇನ್ನು ಕೆಲವು ಬಾಯಲ್ಲಿ ಏನೋ ಜಗಿಯುತ್ತಿವೆ ಎನ್ನುವರು .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ತ್ಯಾಂಪ ಪೂಜಾರಿ ,ಅಣ್ಣು ಮೂಲ್ಯ ಎಲ್ಲಾ ನಮ್ಮ ಪಕ್ಕದಲ್ಲಿಯೇ ಇದ್ದು ಕುಣಿತದ ವೇಷ ಬಂದಾಗ ನಿದ್ದೆಗೆ ಜಾರಿದ್ದ ನಮ್ಮನ್ನು ಅಣ್ಣೆರೆ ಲಕ್ಲೇ ಎಂದು ಏಳಿಸುವರು . ಯುದ್ಧದ ಸೀನು ,ಹಾಸ್ಯಗಾರರ ಕುಣಿತ ನಮಗೆ ಅಪ್ಯಾಯಮಾನ .ಶೃಂಗಾರ ರಸದ ರುಚಿ ಬರುವ ಪ್ರಾಯ ಅಲ್ಲ . ನಮ್ಮ ಅಕ್ಕ ಪಕ್ಕದ ಹಿರಿಯರು ಅದನ್ನು ಆಸ್ವಾದಿಸುತ್ತಿರುವಾಗ ನಾವು ನಿದ್ದೆಗೆ ಜಾರುತ್ತಿದ್ದೆವು . ನೆಲ ಕ್ಲಾಸ್ ಜಾತಿ ,ಅಂತಸ್ತು ಗಳನ್ನು ಸಮಾನ ಮಾಡುವ ಸ್ಟಳ ..ಇಲ್ಲಿಯ ಪ್ರೇಕ್ಷಕರೇ ನಿಜ ಕಲೆಯ ಆಸ್ವಾದಕರು . ನಮ್ಮ ಹಳ್ಳಿಯ ನಿರಕ್ಷರಕುಕ್ಷಿಗಳು ಕೂಡಾ ಪುರಾಣ ಕತೆಗಳನ್ನು ಅರಿತವರಾಗಿ ಸಮಯೋಚಿತವಾಗಿ ಅದನ್ನು ಮಾತಿನಲ್ಲಿ ಉಪಯೋಗಿಸುವರು . "ರಾಮ ದೇವೇರೆ ಕಾಡುಗು ಪೋವೊ ಡಾಂಡು ,ನಮ್ಮವು ಎಂಚಿನ ಲೆಕ್ಕ 'ಇತ್ಯಾದಿ .
ಹೀಗೆ ಬೇರೆಯೇ ಲೋಕದಲ್ಲಿ ವಿವಾಹಿರಿಸುತ್ತಿದ್ದ ನಾವು ಬೆಳಗು ಹರಿದು ಮಂಗಳ ಹಾಡಿದ ಮೇಲೆ ಹೊರ ಬಂದಾಗ ವಾಸ್ತವ ಲೋಕಕ್ಕೆ ಬರುತ್ತಿದ್ದೆವು . ಬೀಡಿ ಪರಿಮಳವನ್ನು ನಮ್ಮ ಉಡುಪುಗಳಲ್ಲಿ ಸೇರಿಸಿ ,ಪಾತ್ರ ವಿಮರ್ಶೆ ಮಾಡಿಕೊಂಡು ಮನೆಯ ಕಡೆಗೆ .
ನಡೆ ನುಡಿ ನಿದ್ದೆ ಕೆಟ್ಟವರ ಹಾಗೆ ಇದ್ದೆರೆ 'ನೀನೇನು ಆಟಕ್ಕೆ ಹೋದವರ ಹಾಗೆ ಮಾಡುತ್ತಿ 'ಎಂದು ಕೇಳುವ ಕ್ರಮ ಇದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ