ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 4, 2022

ಪುತ್ತೂರಿನ ರೋಟರಿ ಭೀಷ್ಮ ಪಿತಾಮಹ

 ಪುತ್ತೂರಿನಲ್ಲಿ ಒಬ್ಬರು ಹಿರಿಯರು ಇದ್ದಾರೆ . ಪೇಟೆಯ ರಸ್ತೆಯ ಬದಿಯ ಉದ್ದಕ್ಕೂ ಒಂದು ದೊಡ್ಡ ಕೊಡೆ ಹಿಡಿದು ಕೊಂಡು ಸ್ವಲ್ಪ ಮುಂದಕ್ಕೆ ಬಾಗಿ ನಡೆಯುತ್ತಿರುವ ದೃಶ್ಯ ಸಾಮಾನ್ಯ . ಅಕ್ಕ ಪಕ್ಕದ ಅಂಗಡಿಯವರು ಎಲ್ಲರೂ ಇವರಿಗೆ ಪರಿಚಿತರು . ಎಲ್ಲರ ವಂದನೆಗೂ ಒಂದು ಪ್ರತಿ ವಂದನೆ . 

ಇವರು ಸಾಮಾನ್ಯ ವ್ಯಕ್ತಿಯಲ್ಲ .ಪುತ್ತೂರಿನ ಅಡ್ಯ ವರ್ತಕ ಕುಟುಂಬಕ್ಕೆ ಸೇರಿದವರು ,ಪುಣ್ಯವಂತರು . ಮೊದಲ ನೋಡುಗರಿಗೆ ಅದು ಅಚ್ಚರಿ ಉಂಟು ಮಾಡ ಬಹುದಾದಷ್ಟು ಸರಳತೆ ಮತ್ತು ಆತ್ಮೀಯತೆ . ಇವರೇ ಶ್ರೀ ಕೆ ಆರ್ ಶೆಣಾಯ್ ಅಥವಾ ಕೆ ರತ್ನಾಕರ ಶೆಣಾಯ್ .  ಮೊದಲ ಸಾಲಿನ ವಾಣಿಜ್ಯೋದ್ಯಮಿ ಆಗಿದ್ದವರು . ಈಗ ಮಕ್ಕಳಿಗೆ ಬಿಟ್ಟಿರುವ ಇವರು ಪೂರ್ಣಕಾಲಿಕ ಸಮಾಜ ಕೈಂಕರ್ಯ ದಲ್ಲಿ ತೊಡಗಿರುವರು . ವಾಣಿಜ್ಯ ಸಂಘದ ಸಕ್ರಿಯ ಪದಾಧಿಕಾರಿ ಆಗಿದ್ದ ಇವರು ಈಗಲೂ ಸಣ್ಣ ದೊಡ್ಡ ಎಂದು ಭೇದ ಇಲ್ಲದೆ ಯಾರಾದರೂ ವರ್ತಕರು ,ಉದ್ದಿಮೆದಾರರು ಅನಾರೋಗ್ಯ ಇತ್ಯಾದಿ ಸಂಕಷ್ಟಕ್ಕೆ ಒಳಗಾದಾಗ ಕರೆಯದೇ ಹೋಗಿ ಅವರಿಗೆ ಸ್ಥೈರ್ಯ ತುಂಬಿ ತಮ್ಮಿಂದ ಆದ ಸಹಾಯ ಮಾಡುವರು . ನನ್ನ ಬಳಿ ಇಂತಹ ಮಿತ್ರರ ರೋಗ ಸ್ಥಿತಿಯ ಬಗ್ಗೆ ಮಾಹಿತಿ ತಿಳಿದು ಕೊಂಡದ್ದು ಇದೆ . 

         ಇನ್ನು ಇವರು ಬಹಳ ಪ್ರಸಿದ್ಧರಾಗಿರುವುದು ರೋಟರಿ ಚಳುವಳಿಯಲ್ಲಿ . ಪುತ್ತೂರಿನ ಆದ್ಯ ರೋಟರಿ ಕ್ಲಬ್ಬಿನ ಪ್ರವರ್ತಕರು ಆಗಿರುವ ಇವರ ಕಾರ್ಯಕ್ಷಮತೆ ಮತ್ತು ಸಂಘಟಕ ಶಕ್ತಿ ಒಂದು ವಿಸ್ಮಯ .ಇಂದು ಪುತ್ತೂರಿನಲ್ಲಿ ಏಳು ರೋಟರಿ ಕ್ಲಬ್ ಗಳು ಇವೆಯಂತೆ . ಎಲ್ಲಾ ರಂಗದ ಯುವಕರನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಇವರ ವಿಶೇಷ ಗುಣ . ತಮ್ಮ ತರುಣದಲ್ಲಿ ಜೇಸಿಸ್ ಸಂಘಟನೆಯಲ್ಲಿಯೂ ಇದೇ ಛಾಪು ಮೂಡಿಸಿದ್ದರಂತೆ ..ತಮ್ಮ ಮಾತೃ ಕ್ಲಬ್ ಅಲ್ಲದೆ ಪುತ್ತೂರು ಮತ್ತು ಅಕ್ಕ ಪಕ್ಕದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇವರು ಹಾಜರು .ಪುತ್ತೂರಿನ ಮಟ್ಟಿಗೆ ಇವರು ರೋಟರಿ ಪಿತಾಮಹ . 

ನಾನು ಇವರಿಗೆ ವಿಶೇಷ ಉಪಚಾರ ಏನೂ ಮಾಡಿದವನಲ್ಲ.ರೋಟರಿಯನ್ ಕೂಡಾ ಅಲ್ಲ .ಆದರೂ ಮೊನ್ನೆ ನಾನು ಸ್ವಲ್ಪ ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಬಂದು ಯೋಗ ಕ್ಷೇಮ ವಿಚಾರಿದ್ದು ಅವರ ಹೃದಯ ವೈಶಾಲ್ಯ ದ ಸೂಚಕ . ವಸುದೈವ ಕುಟುಂಬಕಂ ಮತ್ತು ಸರ್ವೇ ಜನಾಃ ಸುಖಿನೊನೋಭವಂತು ಅಕ್ಶರಶಃ ಇವರ ವೇದ ವಾಕ್ಯ . 

ಇವರ ಪತ್ನಿ  ಶ್ರೀಮತಿ ರತಿ  ಶೆಣಾಯ್ ಅವರು ಪತಿಗೆ ಅನುರೂಪ .ಸದಾ ಮುಖದಲ್ಲಿ ಮಾಸದ ನಗು . ಮನೆಗೆ ಬಂದ ಅತಿಥಿಗಳಿಗೆ ಆದರದ ಆತಿಥ್ಯ . ಈ ದಂಪತಿ ಹೀಗೇ ಒಳ್ಳೆಯ ಅರೋಗ್ಯ  ಮತ್ತು ಶಾಂತಿಯಿಂದ ಬಾಳಿ ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತಲಿರಲಿ . 



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ