ಬೆಂಬಲಿಗರು

ಶುಕ್ರವಾರ, ಅಕ್ಟೋಬರ್ 22, 2021

ಅಂಚೆ ಪತ್ರಗಳು

                ಅಂಚೆ ಪತ್ರಗಳು 

ಹಿಂದೆ ಅಂಚೆ ಇಲಾಖೆ ಜನರ ಜೀವ  ನಾಡಿ ಆಗಿತ್ತು . ಪತ್ರಗಳು ,ಮನಿ ಆರ್ಡರ್ ಮತ್ತು ಟೆಲಿಗ್ರಾಂ ಅವಲಂಬಿಸದವರು ಕಡಿಮೆ ಇದ್ದರು . ನಮ್ಮ ಮನೆಗೆ ಅಂಚೆ ಕಚೇರಿ ಕನ್ಯಾನ ..ಕನ್ಯಾನ ಗ್ರಾಮದ ಪೂರ್ವದ ಗಡಿಯಲ್ಲಿ ನಮ್ಮ ಮನೆ . ಪೋಸ್ಟ್ ಮ್ಯಾನ್ ಪತ್ರ ತಲುಪಿಸಲು ಬಹಳ ನಡೆಯ ಬೇಕು . ಆದುದರಿಂದ ಎರಡು ಮೂರು ದಿನದ ಅಂಚೆ (ಇದ್ದರೆ )ಒಟ್ಟಿಗೆ ತಂದು ಕೊಡುವುದು .ನಮಗೆ ಶಾಲೆ ಇರುವಾಗ ಶಾಲೆಗೆ ಬಂದು ನಮ್ಮಲ್ಲಿಯೇ ಕೊಡುತ್ತಿದ್ದನು . ಹೆಚ್ಚಾಗಿ ಅಂಚೆ ಬ್ಯಾಗ್ ತೆರೆದು  ಪೋಸ್ಟ್ ಆಫೀಸ್ ಸೀಲ್ ಹಾಕುವಾಗ ನಾವು ಅಲ್ಲಿಗೆ ಹೋಗುವೆವು ;ಪೋಸ್ಟ್ ಮಾಸ್ಟರ್ ಪ್ರತಿಯೊಂದು ಪತ್ರದ ಅಡ್ರೆಸ್ ಗಟ್ಟಿಯಾಗಿ ಓದುವರು ,ನಮ್ಮ ಮನೆಯವರ ಹೆಸರು ಬಂದಾಗ ನಾವು ಕೈ ಒಡ್ದುವೆವು .ನಮ್ಮದು ಆಗ ಬ್ರಾಂಚ್ ಪೋಸ್ಟ್ ಆಫೀಸ್ ಆಗಿದ್ದು ಅಂಶ ಕಾಲಿಕ  ಉದ್ಯೋಗಿಗಳು ಇದ್ದರು . ಮೊದಲು ಕಿರಾಣಿ ಅಂಗಡಿ ಸಾಯಿಬ್ಬರು ಪೋಸ್ಟ್ ಮಾಸ್ಟರ್ ,ಅವರ ಅಂಗಡಿಯೇ ಪೋಸ್ಟ್ ಆಫೀಸ್ ಆಗಿದ್ದು ,ಮುಂದೆ ತನ್ನದೇ ಅದ (ಬಾಡಿಗೆಗೆ )ಆಫೀಸ್ ಹೊಂದಿತು . ನಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕರು ಮಂಜುನಾಥ ಪುರುಷ ಪೋಸ್ಟ್ ಮಾಸ್ಟರ್ ಆದರು . 

ಹೆಚ್ಚಾಗಿ ಬಳಕೆಯಲ್ಲಿ ಇದ್ದುದ್ದು ಪೋಸ್ಟ್ ಕಾರ್ಡ್ ಮತ್ತು ಇನ್ಲ್ಯಾಂಡ್ ಲೆಟರ್ . ಪೋಸ್ಟ್ ಕಾರ್ಡ್ ತೆರೆದ ಅಂಚೆ .ತೆರೆದ ಅಂಚೆ ಹರಿದ ಪಂಚೆ ಎಂಬ ಮಾತು  ಇದೆ .ಯಾರು ಬೇಕಾದರೂ ಓದ ಬಹುದು  .ನನ್ನ ದೊಡ್ಡ ಅಣ್ಣ ಪೋಸ್ಟ್ ಕಾರ್ಡ್ ಹೆಚ್ಚಾಗಿ ಉಪಯೋಗ ಮಾಡುವರು ಮತ್ತು ಅದರ  ಒಂದು ಮಿಲಿ ಮೀಟರು ಕೂಡಾ ವ್ಯರ್ಥ ಆಗದಂತೆ ಮೂಲೆ ಮೂಲೆಗಳಲ್ಲಿ ,ಅಡ್ಡ ಸಾಲು ಉದ್ದ ಸಾಲು ಬರೆಯುವರು . 

ಶ್ರಾದ್ಧ ,ಸತ್ಯನಾರಾಯಣ ಪೂಜೆ ಇತ್ಯಾದಿಗಳಿಗೆ ದಿನ ಮುಂದಾಗಿ  ಬರಬೇಕು ಎಂಬ ಅಹ್ವಾನ ಗಳು  ಕಾರ್ಡ್ ಮೂಲಕ ಬರುತ್ತಿದ್ದವು .ಕೋರ್ಟ್ ನಲ್ಲಿ ಕೇಸ್ ವಾಯಿದೆ ಇದ್ದಾಗ ಕಾರ್ಡಿನಲ್ಲಿ "ನಿಮ್ಮ ಕೇಸ್ ಇಂತ ದಿನ  ವಾಯಿದೆ ಇಟ್ಟಿದ್ದು ತಪ್ಪದೇ ಹಾಜರಾಗುವುದು ,ಬರುತ್ತಾ ವಕೀಲರ ಫೀಸು ಬಾಬತ್ತು ರೂಪಾಯಿ ನೂರು ಮಾತ್ರ ಮರೆಯದೇ  ತರುವದು "ಎಂಬ  ಒಕ್ಕಣೆ ಸಾಮಾನ್ಯ . 

ಮಿಕ್ಕಂತೆ ಇನ್ಲ್ಯಾಂಡ್ ಲೆಟರ್ ಬಳಕೆ ಜಾಸ್ತಿ .ಹಾಸ್ಟೆಲ್ ನಲ್ಲಿ ಇರುವ ಮಕ್ಕಳಿಗೆ ,ಮತ್ತು ವೈಸ್ ವೆರ್ಸಾ ,ಗಂಡ ಹೆಂಡತಿಗೆ  ಇತ್ಯಾದಿ ಬರೆಯುವಾಗ ಇದು ಉಪಯೋಗಿ . ಓಪನ್ ಮಾಡದೇ ಓದುವುದು ಕಷ್ಟ . ಮಕ್ಕಳು ಮನೆಗೆ ಬರೆಯುವಾಗ 'ತೀರ್ಥರೂಪರಲ್ಲಿ ಬೇಡುವ ಆಶೀರ್ವಾದಗಳು ,ನಾನು ಕ್ಷೇಮ ನೀವೂ ಹಾಗೆಯೇ ಎಂದು ತಿಳಿಯುತ್ತೇನೆ . ನಾನು ಚೆನ್ನಾಗಿ ಓದುತ್ತಿರುವೆನು .ನಿಮ್ಮ ನೆನಪು ಆಗುತ್ತಿದೆ . ನನಗೆ ಖರ್ಚಿಗೆ ರೂಪಾಯಿ ಅರುವತ್ತು ಕಳುಹಿಸಿರಿ . ಹಿರಿಯರಲ್ಲಿ ಬೇಡುವ ಆಶೀರ್ವಾದಗಳು ,ಕಿರಿಯಿರಿಗೆ ಆಶೀರ್ವಾದಗಳು . ಗೌರಿ ಕರು ಹಾಕಿದೆಯೇ ?ಹಲಸಿನ ಹಣ್ಣು ಮಾವಿನ ಹಣ್ಣು ಮುಗಿಯಿತೋ ?" ಇತ್ಯಾದಿ . ಆದರೂ ಪತ್ರಗಳಿಗೆ ಕಾಯುವದು ಮತ್ತು ಬಂದಾಗ ಪುನಃ ಪುನಃ ಅದನ್ನು ಓದುವುದರಲ್ಲಿ ಒಂದು ಸುಖ ಇತ್ತು . 

  ನನ್ನ ಮಿತ್ರರ ಪ್ರಕಾರ ಹಿಂದೆ ಪತ್ರಗಳಲ್ಲಿ ಭಾವನೆಗಳು ಪೂರ್ಣ ರೂಪ ತಾಳಿ  ಬರುತ್ತಿದ್ದವು ;ತಿಂಗಳು ತುಂಬಿದ ಹೆರಿಗೆಯಂತೆ .ಈಗಿನ ವಾಟ್ಸಪ್ಪ್ ,ಫೇಸ್ ಬುಕ್ ಇತ್ಯಾದಿಗಳಲ್ಲಿ ಅದರ  ಪ್ರಿ ಮೆಚೂರ್ ಡೆಲಿವರಿ ಆಗುತ್ತದೆ . 

ಕನ್ನಡದಲ್ಲಿ ಪತ್ರ ಸಾಹಿತ್ಯ ಕೃತಿಗಳು ಬಂದಿವೆ . ಎ ಎನ್ ಮೂರ್ತಿ ರಾಯರ ಚಿತ್ರಗಳು ಪತ್ರಗಳು ,ಕೃಷ್ಣಾನಂದ ಕಾಮತ್ ಅವರ ಪತ್ರ ಪರಾಚಿ ,ಪ್ರೇಯಸಿಗೆ ಪತ್ರಗಳು ,ತೇಜಸ್ವಿ ಅವರ ತೇಜಸ್ವಿ ಪತ್ರಗಳನ್ನು ಉಲ್ಲೇಖಿಸ ಬಹುದು .ರಾಜೇಶ್ವರಿ ತೇಜಸ್ವಿ ಅವರ 'ನನ್ನ ತೇಜಸ್ವಿ 'ಯಲ್ಲಿ ತಮ್ಮ ಪತಿಯ ಪತ್ರಗಳನ್ನು ಸಂದರ್ಭಾನುಸಾರ ತಂದಿದ್ದಾರೆ. ಕಾರ್ಕಳ ಎಂ ರಾಮಚಂದ್ರ  ಅವರ ಬಳಿ ಸಾಹಿತಿಗಳ ಅನೇಕ ಅಮೂಲ್ಯ ಪತ್ರ ಸಂಗ್ರಹ ಇದ್ದು ಅದನ್ನು ಪ್ರಕಟಿಸುವ ಮುನ್ನ ತೀರಿ ಕೊಂಡುದು ಬೇಸರ ದ ಸಂಗತಿ . ಇನ್ನು ಇಂಗ್ಲಿಷ್ ನಲ್ಲಿ ಜವಾಹಲಾಲ ನೆಹರು ಮಗಳಿಗೆ ,ಮುಖ್ಯ ಮಂತ್ರಿಗಳಿಗೆ ಬರೆದ ಪತ್ರಗಳು ಜ್ನಾನ ಭಂಡಾರ ಗಳೇ ಆಗಿವೆ .

ಮಾಸ್ತಿಯವರ ಸಣ್ಣ ಕತೆ ರಂಗಪ್ಪನ ಕೋರ್ಟ್ ಶಿಪ್ ನೀವು ಓದಿರ ಬಹುದು . ಹೊಸದಾಗಿ  ಮದುವೆಯಾಗಿ ದೂರ ಇರುವ ರಸಿಕ ಗಂಡನ ಪತ್ರಕ್ಕೆ ಹಿಂದಿನ ಸಂಪ್ರಾಯವಾದಿ ಪರಿಸರದ ಹೆಣ್ಣು ಮಗಳು ಬರೆಯುವ ಉತ್ತರ ಹೇಗಿರುತ್ತದೆ ಎಂಬ ನವಿರು ಹಾಸ್ಯದ ಚಿತ್ರಣ .

                      

                                            



 






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ