ಬೆಂಬಲಿಗರು

ಭಾನುವಾರ, ಅಕ್ಟೋಬರ್ 17, 2021

ಎದುರಿಸಿದ ಕಾರ್ಪಣ್ಯಗಳು

 ಎದುರಿಸಿದ ಕಾರ್ಪಣ್ಯಗಳು 

ವಾಚಕ ಮಹಾಶಯರು ಇವನೇನು ತನ್ನ ಗೋಳನ್ನು ವೈಭವೀಕರಿ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದಾನೆ ಎಂದು ತಿಳಿದು ಕೊಳ್ಳ ಬಾರದು . ನಾವು ವಿದ್ಯಾರ್ಜನೆಗೆ ಪಟ್ಟ ಕಷ್ಟದ ಚಿತ್ರಣ ಕಂಡು ಈಗ ಅಂತಹ ಸ್ಥಿತಿಯಲ್ಲಿ ಇರುವವರು ನನ್ನಂತಹ" ಖ್ಯಾತ " ವೈದ್ಯರೂ ಕೂಡ ಪ್ರತಿಕೂಲ ಪರಿಸ್ಥಿತಿ ಎದುರಿಸಿ ಮುಂದೆ ಬಂದವರು ಎಂಬ ಫಿಲೊಸೊಫಿಕಲ್ ಸಾಂತ್ವನ ಪಡೆದು ಧೈರ್ಯಶಾಲಿಗಳಾಗಲಿ ಎಂಬ ಉದ್ದೇಶ . 

ನನಗೆ ಮೆಡಿಕಲ್ ಸೀಟ್ ಸಿಕ್ಕಿದ ಸಮಯ ಅಡಿಕೆ ಬೆಲೆ ನೆಲ ಕಚ್ಚಿತ್ತು ,ಇದ್ದ ಅಡಿಕೆಯೂ ಕೊಳೆ ರೋಗದಿಂದ ಉದುರಿತ್ತು . ತೋಟದಲ್ಲಿ ಎಲ್ಲೆಲ್ಲೂ ಉರುವೆ ನಾನಿಲ್ಲಿರುವೆ ಎಂದು ಅಣಕಿಸುತ್ತಿತ್ತು . ಅದೇ ಸಮಯ ವಾರಣಾಶಿ ಸುಬ್ರಾಯ ಭಟ್ ಕ್ಯಾಮ್ಕೋ  ಸಂಸ್ಥೆ ಸ್ಥಾಪಿಸಿದರು ಎಂದು ನೆನಪು . ನಮ್ಮ ಮನೆಯಲ್ಲಿ ಸಂಬಳ ಬರುವವರು ಯಾರೂ ಇರಲಿಲ್ಲ . ತಂದೆ ಹತಾಶರಾಗಿ ಒಡಿಯೂರು ಭೀಮ ಭಟ್ಟರ ಮನೆಯಿಂದ ಕೊಕ್ಕೋ ತಂದು ನೆಟ್ಟರು .ಪ್ರಗತಿ ಪರ ಕೃಷಿಕರಾದ ಭೀಮ ಭಟ್ಟರು ಈ ಕೃಷಿಯಲ್ಲಿ ಯಶಸ್ಸು ಕಂಡಿದ್ದರು . ಕೊಕ್ಕೋ ನೆಡುವಾಗ ಮುಂದೆ ನಮ್ಮ ಕಷ್ಟಗಳು ಎಲ್ಲಾ ಪರಿಹಾರ ಮಾಡಿ ಕಾಪಾಡುವುದು ಎಂಬ ಕನಸು ಕಂಡರು .ಇಲ್ಲಿ ಒಂದು ವಿಷಯ ಹೇಳ ಬೇಕು ,ನಮ್ಮಂತಹವರಲ್ಲಿ ಒಳ್ಳೆಯ ಬೆಳೆ ,ಒಳ್ಳೆಯ ದರ ಇದ್ದಾಗ ಹಣ ಉಳಿಸಿ ಬ್ಯಾಂಕ್ ನಲ್ಲಿ ಯೋ ,ಫೈನಾನ್ಸ್ ಕಂಪನಿ ಯಲ್ಲೋ ಇಡುವ ಯೋಚನೆ ಇನ್ನೂ ಇದ್ದಿಲ್ಲ .ಇರಬೇಕಿತ್ತು ಎಂದು ನಾನು ಹೇಳುವುದೂ ಇಲ್ಲ .ಕೈಯಲ್ಲಿ ಸ್ವಲ್ಪ ಹಣ ಓಡಾಡಿದರೆ ಸತ್ಯ ನಾರಾಯಣ ಪೂಜೆ ,ತ್ರಿಕಾಲ ಪೂಜೆ ಇತ್ಯಾದಿ ಗೌಜಿಯಾಗಿ ಮಾಡಿ ಹುಡಿ ಹಾರಿಸುವುದು ಸಾಮಾನ್ಯ ಆಗಿತ್ತು . 

ತಂದೆ ನೆಟ್ಟ ಕೊಕ್ಕೋ ಪಸಲು ಕೊಡುವಾಗ ಅದರ ಬೆಲೆ ಕೂಡಾ ಪಾತಾಳ ತಲುಪಿತ್ತು .ಅದನ್ನು ಬೆಳೆಸಲು ಪ್ರೋತ್ಸಾಹಿಸಿದ ಖಾಸಗಿ ಕಂಪನಿಯ ಆಟ ಎಂದು ಜನರು ಅಡಿ ಕೊಂಡರು .ಮುಂದೆ ಸುಬ್ರಾಯ ಭಟ್ ಚಾಕಲೇಟ್ ಫ್ಯಾಕ್ಟರಿ ಆರಂಭಿಸಲು ಕಾರಣ ಆಯಿತು .ಸುಬ್ರಾಯ ಭಟ್ ಅವರನ್ನು ಎಷ್ಟು ನೆನೆಸಿ ಕೊಂಡರೂ ಕಡಿಮೆ . ನಮ್ಮ ತಂದೆ ಯವರು ಕೊಕ್ಕೋ ಗಿಡಗಳನ್ನು ಕಡಿದು ಎಸೆದರು ,ಅವು ಅಡಿಕೆ ಮರದ ಸಾರ ಹೀರುವವವು ,ರೇಟೂ ಇಲ್ಲ ಎಂದು . ಅಡಿಕೆ ಬೆಳೆಗಾರರು ಮಂಗಳೂರಿನ ಬಂಡಸಾಲೆ ಗೆ ಅಡಿಕೆ ಹಾಕುತ್ತಿದ್ದರಷ್ಟೇ ,ಹಣಕ್ಕೆ ಕೈ ಕಟ್ಟಿದಾಗ ಅವರಿಂದ ಅಡ್ವಾನ್ಸ್ ತೆಗೆದು ಕೊಳ್ಳುತ್ತಿದ್ದರು . ನಮಗೆ ಒತ್ತಾಸೆ ಆದಾಗ ಅವರೂ ಕೈ ತೊಳೆದು ಕೊಂಡು ಬಿಟ್ಟರು . 

         ನನಗೆ ಹಾಸ್ಟೆಲ್ ಫೀಸ್ ಇತ್ಯಾದಿ ಖರ್ಚಿಗೆ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ ದ  ಸ್ಟೂಡೆಂಟ್ ಲೋನ್ ಗೆ ಅರ್ಜಿ ಹಾಕಿದೆನು .ಆಗ ಶ್ರೀ  ಜನಾರ್ಧನ ಪೂಜಾರಿ ಅವರ ಕೃಪೆಯಿಂದ  ಎಂದು ಕಾಣುತ್ತದೆ ,ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಶೇಕಡಾ ೪ ರಂತೆ ಸಾಲ ಕೊಡುತ್ತಿದ್ದರು . ಹುಬ್ಬಳ್ಳಿ  ಎಸ ಬಿ ಐ ಯಲ್ಲಿ ಅರ್ಜಿ ಹಾಕಿದೆ ,ಅದಕ್ಕೆ ಬೇಕಾದ ಜಾಮೀನು ಎಲ್ಲ ಹೊಂದಿಸಿ .ಲೋನ್ ಸ್ಯಾಂಕ್ಷನ್ ಆಗಿ ಬಂತು .ಆದರೆ ಅಲ್ಲಿ ಲಕ್ಷ್ಮೀಶ್ವರ ಎಂಬ ಲೋನ್ ಕ್ಲರ್ಕ್ ಇದ್ದರು; ಇಂದು ಬಾ ನಾಳೆ ಬಾ ಎಂದು ಸತಾಯಿಸ ತೊಡಗಿದರು . ನಾನು ಊಟದ ಬಿಡುವಿನಲ್ಲಿ ದೂರದಲ್ಲಿ ಇದ್ದ ಬ್ಯಾಂಕ್ ಶಾಖೆಗೆ ಹೋಗುವುದು ,ಪೆಚ್ಚು ಮೋರೆ ಹಾಕಿಕೊಂಡು ಬರುವಾಗ ಊಟ ಖಾಲಿ . ಒಂದು ದಿನ ತಡೆಯಲಾರದೆ ಸೀದಾ ಮ್ಯಾನೇಜರ್ ರೂಮಿಗೆ ನುಗ್ಗಿದೆ .ನನ್ನ ಪುಣ್ಯಕ್ಕೆ ಅದೇ ದಿನ ಪರಿಶೀಲನೆಗೆ ಮೇಲಧಿಕಾರಿಗಳು ಬಂದಿದ್ದು ಅವರೆದುರು ನನ್ನೆಲ್ಲಾ ಕೋಪ ತಾಪ ಸಂಕಟಗಳನ್ನು ಕಕ್ಕಿದೆ . ಎಲ್ಲರೂ ನನ್ನನ್ನು ಸಮಾಧಾನ ಮಾಡಿ ಅಂದೇ ಹಣ ಸಿಗುವಂತೆ ಮಾಡಿದರು ..ನನ್ನಿಂದ ಲಂಚ ನಿರೀಕ್ಷಿಸುತ್ತಿದ್ದ ಕ್ಲಾರ್ಕ್ ಕೂಡಾ ಅಂದಿನಿಂದ ಯಾವುದೇ ತೊಂದರೆ ಕೊಡಲಿಲ್ಲ .ಅಲ್ಲಿ ಮ್ಯಾನೇಜರ್ ಆಗಿದ್ದ ಚೆರಿಯನ್ ಎಂಬುವರ ಮಗಳು ನಮ್ಮ ಕಾಲೇಜು ನಲ್ಲಿ ನನ್ನ ಜೂನಿಯರ್ ಆಗಿದ್ದ ವಿಚಾರ ಆಮೇಲೆ ತಿಳಿಯಿತು . ನನ್ನ ಸಂಪೂರ್ಣ ಸಾಲವನ್ನು ಬಡ್ಡಿ ಸಮೇತ ಎಂ ಬಿ ಬಿ ಎಸ್ ತೇರ್ಗಡೆ ಆದ ಒಂದು ವರ್ಷದಲ್ಲಿ ಕಟ್ಟಿದೆನು . 

ಓದುಗರೇ ಈ ಅವಧಿಯಲ್ಲಿ ಬ್ಯಾಂಕ್ ಗಳು ಯಾವುದೇ ಸಾಲ ನೀಡಲು ನಿರ್ಬಂಧ ಇತ್ತು . ಚಿನ್ನ ಅಡಮಾನ ಸಾಲ ಮಾತ್ರ ಕಷ್ಟದಲ್ಲಿ ಸಿಗುತ್ತಿದ್ದು  ತಾಯಿಯವರ ಚೈನ್ ವಿಟ್ಲ ವಿಜಯಾ ಬ್ಯಾಂಕ್ ನಲ್ಲಿ ಇಟ್ಟು ಸಾಲ ತೆಗೆದು ಕೊಂಡರು ;ಮನೆಯಲ್ಲಿ ಒಳ್ಳೆಯ ಹಾಲು ಕೊಡುತ್ತಿದ್ದ ಮುರ ಎಮ್ಮೆ ಇತ್ತು ;ತಂದೆ ನಮ್ಮ ವಿದ್ಯಾಭ್ಯಾಸ ಕ್ಕೆ ಹಣ ಜೋಡಿಸಲು ಒಲ್ಲದ ಮನಸಿನಲ್ಲಿ ಅದನ್ನು ಮಾರಿದರು . ತಾಯಿಯವರು ಅದರ ಹಾಲಿನಿಂದ ತುಪ್ಪ ಮಾಡಿ ಪೇಟೆಯಲ್ಲಿ ಮಾರಲು ನನ್ನ ಅಣ್ಣನವರಲ್ಲಿ ಕೊಡುತ್ತಿದ್ದರು .ಜತೆಗೆ ತಮ್ಮ ಹಲಸಿನ ಬೇಳೆ ,ಗೇರು ಬೀಜ ,ಉರುವೆ ಅಡಿಕೆ ಇತ್ಯಾದಿ ಬಾರ್ಟರ್ ಇಲ್ಲವೇ ಮಾರಾಟ ಮಾಡಿ ಅಲ್ಪ ಸ್ವಲ್ಪ ಹಣ ಕೂಡಿಸುತ್ತಿದ್ದರು .ನಾನು ಹಿಂದೆ ನಮ್ಮ ಅಮ್ಮ ನಮ್ಮನ್ನು  ಶಿಕ್ಷಿಸುತ್ತಿದ್ದ ಬಗ್ಗೆ ಬರೆದಿದ್ದೆ ;ನಮ್ಮ ರಕ್ಷೆಗೆ ಅವರು ಪಟ್ಟ ಪಾಡು ನೆನಪಾಗುತ್ತದೆ . 

ಒಮ್ಮೊಮ್ಮೆ ಹಣ ಇದ್ದಾಗ ಬ್ಯಾಂಕ್ ಎಂ ಟಿ ಮೂಲಕ ಹಣ ಕಳುಹಿಸುತ್ತಿದ್ದರು .ಮೆಸ್ಸ್ ಬಿಲ್ ಕಟ್ಟುವ ದಿನ ಬಂದಾಗ ನಾವು ಪಾಸ್ ಬುಕ್  ತೆಗೆದು ಕೊಂಡು ಬ್ಯಾಂಕ್ ಗೆ ಹೋಗಿ ಹಣ ಬಂತೋ ಹಣ ಬಂತೋ ಎಂದು ಕೇಳುವುದು ,ಅವರು ಕನಿಕರದಿಂದ ಇಲ್ಲ ಎಂದು ಹೇಳುವುದು ಸಾಮಾನ್ಯ ಆಗಿತ್ತು ..ನಮಗೆ ಬರುತ್ತಿದ್ದ ಸ್ಕಾಲರ್ಶಿಪ್ ಹಣ ವರ್ಷಾಂತ್ಯ ದಲ್ಲಿ ಬರುತ್ತಿದ್ದು ಮುಂದಿನ ವರ್ಷಕ್ಕೆ ಸಹಾಯ ಆಗುತ್ತಿತ್ತು . ಅಂತೂ ಇಂತೂ ಎಂ ಬಿ ಬಿ ಎಸ ಮುಗಿಸಿದೆ .

ಬಾಲಂಗೋಚಿ : ಬಡತನ ಬೇಕು ಜೀವನ ಅರಿಯಲು .ಆದರೆ ನಿಮ್ಮಲ್ಲಿ ಲಕ್ಷ್ಮಿ  ಸ್ವಲ್ಪವೂ ಇಲ್ಲದಿದ್ದರೆ ಯಾರಿಗೂ ನೀವು ಬೇಡ ; ಸಂಬಂಧಿಕರು ಮಿತ್ರರು ನಿಮ್ಮನ್ನು ಕಡೆಗಣಿಸುವರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ