ಬಾಳ ಪಯಣಕ್ಕೆ ಸ್ನೇಹದ ಪರ್ಮನೆಂಟ್ ವೇ
ರೈಲ್ವೇ ಯಲ್ಲಿ ಹಳಿಗೆ ಪೆರ್ಮನೆಂಟ್ ವೇ ಎಂದು ಕರೆಯುವರು . ಹಿಂದೆ ಕೆಲವು ದಿನಗಳ ಸಾಗಣೆಗೆ (ಉದಾ ಮರದ ದಿಮ್ಮಿ ) ತಾತ್ಕಾಲಿಕ ಹಳಿ ಹಾಕುತ್ತಿದ್ದರು . ಅದರಿಂದ ಈ ಹೆಸರು .
ರೈಲು ಹಳಿ ನಿರ್ವಹಣೆ ಮಾಡಲು ಅಲ್ಲಲ್ಲಿ ನಿರೀಕ್ಷರು ಇದ್ದಾರೆ.ಅವರಿಗೆ ಪೆರ್ಮನೆಂಟ್ ವೇ ಇನ್ಸ್ಪೆಕ್ಟರ್ ಎನ್ನುತ್ತಿದ್ದರು .(ಈಗ ಎಂಜಿನಿಯರ್ ಎಂದು ಬದಲಾಯಿಸಿರ ಬೇಕು ). ಅವರದು ದೊಡ್ಡ ಸಾಮ್ರಾಜ್ಯ .ಅವರ ಕೆಳಗೆ ಅಸ್ಸ್ಟಂಟ್ PWI ಗಳು ಇರುವರು ..ಸುಪರ್ಧಿಯಲ್ಲಿ ಇರುವ ಹಳಿ ಯನ್ನು ನಿಗದಿತ ಅಂತರಕ್ಕೆ ಒಂದು ಗ್ಯಾಂಗ್ ಎಂದು ಇದ್ದು ,ಅದಕ್ಕೆ ಒಬ್ಬ ನಾಯಕ ಗ್ಯಾಂಗ್ ಮೇಟ್ ಅಥವಾ ಮೇಸ್ತ್ರಿ ನಾಯಕ ,ಅವನ ಕೆಳಗೆ ಹಲವು ಗ್ಯಾಂಗ್ ಮೆನ್ ಗಳು .ಇವರು ತಮ್ಮ ಪರಿಧಿಯಲ್ಲಿ ಬರುವ ಹಳಿ ಮತ್ತು ಅದರ ಜಲ್ಲಿ ಹಾಸಿಗೆ ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವರು . ಇವರಲ್ಲದೆ ಕೀ ಮಾನ್ ಎಂಬವರು ಹಳಿಯುದ್ದಕ್ಕೂ ನಡೆದು ಬೋಲ್ಟ್ ನಟ್ ಸಡಿಲವಾದದ್ದನ್ನು ಗಟ್ಟಿ ಗೊಳಿಸುವರು . ಕರಾವಳಿ ,ಮಲೆನಾಡಿನಲ್ಲಿ ಮುಂಗಾರು ಸಮಯ ರಾತ್ರಿ ಹಳಿ ಕಾವಲು ಮಾಡುತ್ತಾರೆ .ಇದಕ್ಕೆ ನೈಟ್ ಪೆಟ್ರೋಲ್ ಎನ್ನುವರು .ನೀವು ರೈಲು ಪ್ರಯಾಣ ಮಾಡುವಾಗ ದಾರಿಯಲ್ಲಿ ಇವರ ಸಿಳ್ಳೆ ಕೇಳಿರ ಬಹುದು .
ಹಳಿ ನಿರ್ವಹಣೆ ಪರಿಶೀಲನೆ ಮಾಡಲು ನಿರೀಕ್ಷಕರಿಗೆ ಟ್ರಾಲಿ ಸೌಲಭ್ಯ ಇದ್ದು ಅದನ್ನು ನಡೆಸುವವರಿಗೆ ಟ್ರಾಲಿ ಮ್ಯಾನ್ ಎನ್ನುವರು .ಇದರಲ್ಲಿ ತಳ್ಳು ಟ್ರಾಲಿ ಮತ್ತು ಮೋಟಾರ್ ಟ್ರಾಲಿ ಎಂದು ಎರಡು ವಿಧ ಇದೆ .
ನಾನು ಪುತ್ತೂರು ರೈಲ್ವೇ ಆರೋಗ್ಯ ಕೇಂದ್ರದಲ್ಲಿ ಇದ್ದಾಗ ಶ್ರೀ ನಾಗರಾಜಪ್ಪ ಎಂಬ ವರು PWI ಆಗಿದ್ದು ನನ್ನ ಪಕ್ಕದ ಕ್ವಾಟರ್ಸ್ ನಲ್ಲಿ ವಾಸವಿದ್ದು ಅವರು ಮತ್ತು ಅವರ ಕುಟುಂಬ ನಮಗೆ ಬಹಳ ಆತ್ಮೀಯ ರಾಗಿದ್ದರು .
ಅವರಿಗೆ ಮೂವರು ಮಕ್ಕಳು ಕಿರಣ್ ,ಸಂದೇಶ್ ಮತ್ತು ಮಮತಾ . ನಾಗರಾಜಪ್ಪ ಅವರ ಪತ್ನಿ ಪ್ರೇಮಾ . ಪ್ರೇಮಾ ಅವರ ಅಕ್ಕನ ಮಗಳ ಗಂಡ ಡಾ ಮಲ್ಲಿಕಾರ್ಜುನ್ ಸ್ವಾಮಿ ವಿಟ್ಲ ಸಿ ಪಿ ಸಿ ಆರ್ ಐ ಗೆ ವಿಜ್ಞಾನಿ ಆಗಿ ಬಂದಿದ್ದವರು ಕೆಲ ತಿಂಗಳು ಇವರ ಜತೆ ಇದ್ದು ನಮಗೂ ಆಪ್ತರಾದರು . ಸ್ವಾಮಿ ಅವರ ಪತ್ನಿ ಪ್ರಮೀಳಾ ,ಮಗ ಭಾನು ಪ್ರಕಾಶ್ ,ಜತೆಗೆ ಸ್ವಾಮಿ ಅವರ ಅಣ್ಣನ ಮಗ ಪ್ರದೀಪ್ (ದೀಪು )ಕೂಡಾ ಶಾಲೆಗೆ ಹೋಗಲು ಎಂದು ಇದ್ದ. ಈ ಮಕ್ಕಳು ಕಿರಣ್ ಮತ್ತು ಸಂದೇಶ್ ನನ್ನು ಕಿರಣ್ ಮಾಮ ,ಸಂದೇಶ್ ಮಾಮ ಎಂದು ಕರೆಯುತ್ತಿದ್ದು ನಾವೂ ಕಿರಣ್ ಮಾಮ ಎಂದು ಕರೆಯಲಾರಂಬಿಸಿ ಈಗಲೂ ಹಾಗೇ ಕರೆಯುತ್ತೇವೆ .
ಕಿರಣ್ ಮಾಮ (ನನಗಿಂತ ಎಷ್ಟೋ ಸಣ್ಣವನು )ಐ ಟಿ ಐ ಮಾಡಿ ,ಆಗ ತಾನೇ ಜನಪ್ರಿಯ ಆಗುತ್ತಿದ್ದ ಟಿ ವಿ ಸೆಟ್ ದುರಸ್ತಿ ಇತ್ಯಾದಿ ಯಲ್ಲಿ ತರಬೇತು ಹೊಂದಿದ . ಅವನದು ಬಾಲ್ಯದಲ್ಲಿಯೇ ವಾಹನ ,ಯಂತ್ರ ಇತ್ಯಾದಿ ನಿರ್ವಹಣೆ ಯಲ್ಲಿ ಆಸಕ್ತಿ .ಈಗ ಮೈಸೂರಿನಲ್ಲಿ ಯಶಸ್ವೀ ಕೇಬಲ್ ನೆಟ್ವರ್ಕ್ ಉದ್ಯಮಿ . ತಮ್ಮ ಸಂದೇಶ ಸಂತ ಫಿಲೋಮಿನಾ ಕಾಲೇಜು ಗೆ ಪಿ ಯು ಸಿ ಗೆ ಹೋಗುತ್ತಿದ್ದು ,ಹಾರಾಡಿಯಿಂದ ದರ್ಭೆಗೆ ನಡೆದೇ ಹೋಗುವುದು .ಆತ ಮುಂದೆ ಕಂಪ್ಯೂಟರ್ ಪದವಿ ಮಾಡಿದರೂ ,ವೃತ್ತಿಯಾಗಿ ಸಿಮೆಂಟ್ ಬ್ಲಾಕ್ ತಯಾರು ಮಾಡುವ ಉದ್ಯಮ .ಸಹೋದರಿ ಮಮತಾ ಮದುವೆ ನಾವು ಪುತ್ತೂರಿನಲ್ಲಿ ಇದ್ದಾಗಲೇ ನಡೆದು ನಾವೆಲ್ಲ ಸಂತೋಷದಿಂದ ಪಾಲು ಗೊಂಡಿದ್ದೆವು .
ನಾಗರಾಜಪ್ಪ ಮನೆಯಲ್ಲಿ ಒಂದು ಸಣ್ಣ ಕಪ್ಪು ಬಿಳುಪು ಟಿ ವಿ ಇದ್ದು ಮನೆ ಪಕ್ಕದ ಎತ್ತರದ ಮರಕ್ಕೆ ಆಂಟೆನ್ನಾ ಹಾಕಿದ್ದರು .ಭಾನುವಾರ ಅವರ ಮನೆಯಲ್ಲಿ ಕುಳಿತು ರಾಮಾಯಣ ನೋಡುವುದು ,ಹರಟೆ ಹೊಡೆಯುವುದು ಮತ್ತು ಪ್ರೇಮಾ ಆಂಟಿ ಮಾಡಿ ಕೊಡುತಿದ್ದ ರಾಗಿ ರೊಟ್ಟಿ ,ಚಹಾ ಮೆಲ್ಲುವದು . ಸಂಜೆ ನಾವು ಮಕ್ಕಳೆಲ್ಲಾ ಪೇಟೆಗೋ ,ಜಾತ್ರೆ ಸಮಯದಲ್ಲಿ ಜಾತ್ರೆಗೂ ಒಟ್ಟಾಗಿ ಹೋಗುವುದು . ನಾನು ಹೊಸದಾಗಿ ಬೈಕ್ ಕೊಂಡಾಗ ನನಗೆ ಧೈರ್ಯಕ್ಕೆ ಕಿರಣ್ ಮತ್ತು ಸಂದೇಶ್ ಮಾಮ . ನನ್ನ ಮದುವೆ ಸಮಾರಂಭದಲ್ಲಿ ನಾಂದಿ ಯಿಂದ ಹಿಡಿದು ಕೊನೆಯ ವರೆಗೂ ಮನೆಯವರಂತೆ ಸಂಭ್ರಮಿಸಿತು ಆ ಕುಟುಂಬ . ಹಬ್ಬ ಹರಿದಿನಗಳಲ್ಲಿ ನಮ್ಮ ಮನೆಯಲ್ಲಿ ಇಲ್ಲ ಅವರಲ್ಲಿ ಜತೆಯಾಗಿ ಊಟ . ಪುನಃ ನೆನಪಿಸುತ್ತೇನೆ ,ಆಗ ಅರೆಯುವ ಕಲ್ಲು ,ಸೀಮೆ ಎಣ್ಣೆ ಸ್ಟವ್ .,ಬೇಕೆಂದಷ್ಟು ಹಾಲು ಸಿಗದು .ಆದರೂ ಅವೆಲ್ಲಾ ಗಣನೆಗೆ ಬಾರವು .
ಈಗ ನಾಗರಾಜಪ್ಪ ,ಪ್ರೇಮಾ ಆಂಟಿ ಇಬ್ಬರೂ ಇಲ್ಲ ,ಆದರೆ ನೆನಪು ಹಸಿರಾಗಿದೆ .ಮಲ್ಲಿಕಾರ್ಜುನ ಸ್ವಾಮಿ ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ .ಮಗ ಭಾನು ಕೆನಡಾ ದಲ್ಲಿ ಇಂಜಿನಿಯರ್ ,ಪ್ರದೀಪ್ ಇಂಜಿನಿಯರ್ ಆಗಿ ಅಮೆರಿಕಾ ದಲ್ಲ್ಲಿ ಇದ್ದು ಈಗ ಊರಿಗೆ ಮರಳಿ ಮೈಸೂರಿನಲ್ಲಿ ಇದ್ದಾನೆ .ಈ ಮಕ್ಕಳನ್ನು ನಾವು ಪ್ರೀತಿಯಿಂದ ತರಲೆಗಳು ಎಂದು ಕರೆಯುತ್ತಿದ್ದೆವು .
ನನ್ನ ಜೀವನದಲ್ಲಿ ದೊರೆತ ನಿಸ್ವಾರ್ಥ ನಿರ್ಮಲ ಸ್ನೇಹ ದ ಕತೆ ಇದು . ( ಕಿರಣ್ ಮದುವೆ ಚಿತ್ರದಲ್ಲಿ ಮಮತಾ ದಂಪತಿಗಳು ,ಸಂದೇಶ್ ,ಪ್ರೇಮಾ ಆಂಟಿ ಮತ್ತು ಶ್ರೀ ನಾಗರಾಜಪ್ಪ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ