ಬೆಂಬಲಿಗರು

ಗುರುವಾರ, ಅಕ್ಟೋಬರ್ 28, 2021

ಅಗಲಿದ ಮೇರು ನಟ ನೆಡುಮುಡಿ ವೇಣು

 ಅಗಲಿದ ಮೇರು ನಟ  ನೆಡುಮುಡಿ ವೇಣು 

 Nedumudi Venu - Wikipedia                                                                                                                     ೧೯೯೯೦ ರಲ್ಲಿ ಇರಬೇಕು .ನಾನು ಮಂಗಳೂರು ರೈಲ್ವೆ ಅರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಆಗಿದ್ದೆ . ಅಮೃತ್ ಟಾಕೀಸ್ ನಲ್ಲಿ ಒಂದು ಮಲಯಾಳಿ ಸಿನೆಮಾ ಬಂದಿತ್ತು ;"ಹಿಸ್ ಹೈನೆಸ್ ಅಬ್ದುಲ್ಲಾ "ಅದರ ಶೀರ್ಷಿಕೆ . ಕುತೂಹಲದಿಂದ ನೋಡಲು ಹೋದೆವು .ನನ್ನ ಮಟ್ಟಿಗೆ ಹೇಳುವುದಾದರೆ ನಾನು ಅತ್ಯಂತ ತೀವ್ರವಾಗಿ ಆನಂದಿಸಿದ ಒಂದು ಚಿತ್ರ . ನಟನೆ ,ಸಂಗೀತ ಮತ್ತು ಮೆಲೋಡ್ರಾಮ ಎಲ್ಲವೂ ಸಹಜವಾಗಿ ಸಮ್ಮಿಳಿತ. ಸಿಬಿ ಮಲಯಿಲ್ ನಿರ್ದೇಶನ ದಲ್ಲಿ ನಟ ಮೋಹನಲಾಲ್ ನಿರ್ಮಿಸಿ ಸ್ವತಃ ನಟಿಸಿದ ಸಿನೆಮಾ ಹಲವು ಪ್ರಶಸ್ತಿ ಗಳನ್ನು ಸಹಜವಾಗಿ ತನ್ನದಾಗಿಸಿತು . ನನಗೆ ಅತೀ ಇಷ್ಟವಾದ ಪಾತ್ರ ಉದಯ ವರ್ಮ (ರಾಜ )ನಾಗಿ ಅಭಿನಯಿಸಿದ ನೆಡು ಮುಡಿ ವೇಣು ಅವರದು . ಪಾತ್ರಕ್ಕೆ ಬೇಕಾದ ರಾಜ ಗಾಂಭೀರ್ಯ ,ಸಿನೆಮಾದಲ್ಲಿ ಯಥೇಚ್ಛ ಇರುವ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಹಾವ ಭಾವ . ನನಗೆ ಒಂದು ಪ್ರತಿಭಾವಂತ ನಟನನ್ನು ಪರಿಚಯಿಸಿತು . ಮುಂದೆ ಭರತನ್ ,ತೆನ್ಮಾವಿನ್ ಕೊಂಬಾತ್ ,ಚಮರಂ  ಮಾರ್ಗಂ ಇಂತಹ ಅನೇಕ ಚಿತ್ರಗಳಲ್ಲಿ ಅವರ ಅಭಿನಯ ನೋಡಿ ಆನಂದಿಸಿದೆ .ಚಿತ್ರಂ ಎಂಬ ಚಿತ್ರದಲ್ಲಿ ಅವರು ಮೋಹನಲಾಲ್ ಹಾಡುವಾಗ ಮೃದಂಗ ನುಡಿಸುವರು .ಸ್ವಯಂ ಮೃದಂಗ ವಾದಕರಾದ ಇವರ ನಟನೆ ಅಷ್ಟು ಸಹಜವಾಗಿತ್ತು . ಇವರು ಮಿಂಚಿದ್ದು ಪೋಷಕ ನಟನಾಗಿ . ನಾಟಕ ,ಟಿವಿ ಸೀರಿಯಲ್   ,ಜನಪದ ಸಂಗೀತ ಹೀಗೆ ಕಲೆಯ ಹಲವು ರಂಗಗಳಲ್ಲಿ ಕೈ ಆಡಿಸಿದ್ದ ಅವರು ಎರಡು ವಾರಗಳ ಹಿಂದೆ ತೀರಿ ಕೊಂಡಾಗ ಸಿನೆಮಾ ಮತ್ತು ಕಲಾ ರಸಿಕರು ಮತ್ತು ಕಲಾವಿದರು "ಇದು ತುಂಬಲಾರದ ನಷ್ಟ' ಎಂದು ಕಂಬನಿ ಮಿಡಿದುದು ಉತ್ಪ್ರೇಕ್ಷೆ ಅಲ್ಲ . 

ಅವರನ್ನು ಕಲಾ ಲೋಕಕ್ಕೆ ಪರಿಚಯಿಸಿದವರು ಪ್ರಸಿದ್ದ ನಟ ,ಕವಿ

ನಾರಾಯಣ ಪಣಿಕ್ಕರ್ . ಇಂಟರ್ನೆಟ್ ಜಾಲಾಡುವಾಗ ಈ ಗುರು ಶಿಷ್ಯರ ಒಂದು ವೀಡಿಯೋ ಸಿಕ್ಕಿತು . ಅದನ್ನು ನೋಡಿರಿ .

 https://youtu.be/eJ2YSqgtk-I

ಬುಧವಾರ, ಅಕ್ಟೋಬರ್ 27, 2021

ಪರಿಚಾರಕರ ನೆನಪು

                                      ಕಾರ್ಕಳ: ಎಂ. ಆರ್ ಎಂದೇ ಚಿರಪರಿಚಿತರಾಗಿದ್ದ ಸಾಹಿತಿ, ಪ್ರೊ. ಎಂ ರಾಮಚಂದ್ರ ವಿಧಿವಶ |  udayavani

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರದ ಕನ್ನಡ ಸಂಘ ಒಂದು ಸಜೀವ ಸಕ್ರಿಯ ಆಗಿದ್ದರೆ ಅದು ಕಾರ್ಕಳ ಸಾಹಿತ್ಯ ಸಂಘ .ಅದರ ರೂವಾರಿ ದಿ .ರಾಮಚಂದ್ರ .ಅವರ ಬಗ್ಗೆ ಹಿಂದೆಯೇ ಒಮ್ಮೆ ಬರೆದಿದ್ದೇನೆ .

ಇಂದಿಗೆ ಸರೀ ಎರಡು ವರ್ಷ ಮೊದಲು (26.10.2019) ಅದರ ವೇದಿಕೆಯಲ್ಲಿ  ಆರೋಗ್ಯ ವಿಚಾರ ಬಗ್ಗೆ ಮಾತನಾಡುವ ಅವಕಾಶ ನನಗೆ ದೊರಕಿತ್ತು . ಅಲ್ಲಿಯ ಕೆಲವು ಸಭೆಗಳಿಗೆ ನಾನು ಹಾಜರಾಗಿದ್ದೇನೆ. ಸಮಯ ಪಾಲನೆ ಮತ್ತು  ಒಳ್ಳೆಯ ಸಂಖ್ಯೆಯ ಆಸಕ್ತ ಕೇಳುಗರು ಅಲ್ಲಿಯ ವಿಶೇಷ .ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿ ಕೊಳ್ಳುವರು .

ನನ್ನ ಜತೆ ಡಾ ವರದರಾಜ ಚಂದ್ರಗಿರಿ ಬಂದಿದ್ದರು.ಹಿಂತಿರುಗುವಾಗ ರಾತ್ರಿ ಆಗುವುದರಿಂದ ಟ್ಯಾಕ್ಸಿ ಮಾಡಿಕೊಂಡು ಹೋಗಿದ್ದೆವು . ರಾಮ ಚಂದ್ರರು ಕಾರ್ಯಕ್ರಮ ಮುಗಿದು ವಾಪಾಸು ತೆರಳುವಾಗ ನನ್ನ ಪತ್ನಿಗೆ ಎಂದು ತಿಂಡಿ ಕಟ್ಟಿ ಕೊಟ್ಟುದಲ್ಲದೆ ಗಂಟೆಗೆ ಒಮ್ಮೆ ನಾವು ಮನೆಗೆ ತಲುಪಿದೆವೋ ಎಂದು ಫೋನ್ ಮಾಡಿ ವಿಚಾರಿಸುವರು .ನಾವು ಮನೆಗೆ ತಲುಪದೆ ಅವರು ನಿದ್ದೆ ಮಾಡರು.ನನ್ನ ಭಾಷಣ ಕಾರ್ಯಕ್ರಮಕ್ಕೆ ನನಗೆ ಕೊಟ್ಟ ಸಂಭಾವನೆ ಅವರ ಸಂಗ್ರಹದಲ್ಲಿ ಇದ್ದ ಅಮೂಲ್ಯ  ಪತ್ರಗಳ ಪ್ರಕಟನಾ  ಕಾರ್ಯಕ್ಕಾಗಿ  ಕೊಟ್ಟಿದ್ದೆ . ಸ್ವಲ್ಪವಾದರೂ  ತೆಗೆದು ಕೊಳ್ಳ ಬೇಕಿತ್ತು ಎಂದು ಪುನಃ ಪುನಃ ಹೇಳಿದರು .ಪುತ್ತೂರಿನ ನಮ್ಮ ಮನೆಗೆ ಬಂದು ಆತಿಥ್ಯ  ಸೀಕರಿಸುವ  ಆಶ್ವಾಸನೆ  ಕೊಟ್ಟಿದ್ದರು .ಆದರೆ ಅದು ನೆನಸು  ಆಗಲಿಲ್ಲ .ಎರಡು ತಿಂಗಳಲ್ಲಿ  ಹಠಾತ್ ತೀರಿ ಕೊಂಡರು .ಸಾಯುವ  ಮುನ್ನಾ ದಿನ ಹತ್ತು ನಿಮಿಷ ನನ್ನೊಡನೆ  ಫೋನಿನಲ್ಲಿ  ಮಾತನಾಡಿದ್ದರು .


 

ಮಂಗಳವಾರ, ಅಕ್ಟೋಬರ್ 26, 2021

ಆತಿಥ್ಯದ ಕೆಲ ನೆನಪುಗಳು

                            ಅತಿಥಿ ದೇವೋ ಭವ

ನಾನು ಮಂಗಳೂರಿನಲ್ಲಿ ವಾಸವಿದ್ದ ಸಮಯ .ಕೆ ಎಸ ಹೆಗ್ಡೆ  ಮೆಡಿಕಲ್ ಕಾಲೇಜು ನಲ್ಲಿ ಅಧ್ಯಾಪನ ಮಾಡುತ್ತಿದ್ದೆ . ನಮ್ಮ ವಿದ್ಯಾರ್ಥಿಗಳು ಮದುವೆಗೆ ಅಹ್ವಾನ ನೀಡಿದಾಗ ಸಂತೋಷದಿಂದ ಹೋಗುತ್ತಿದ್ದೆವು . ಸಾಮಾನ್ಯವಾಗಿ ನಾನು ಮತ್ತು ಡಾ ಪ್ರಕಾಶ್ (ಈಗ  ಕ್ಷೇಮಾ ದ  ಡೀನ್ )ಜತೆಗೆ  ಅವರ ಸ್ಕೂಟರ್ ನಲ್ಲಿ ಹೋಗುವುದು ;ಊರ ಹೊರಗೆ ಇದ್ದರೆ  ನನ್ನ ಕಾರ್ ನಲ್ಲಿ . ಒಮ್ಮೆ ನಮ್ಮ ಶಿಷ್ಯ ನಾಗರಾಜ ತನ್ನ ಸಹೋದರಿ ಯ ಮದುವೆ ಗೆ ಅಹ್ವಾನ ನೀಡಿದ್ದು .ಅದು ಒಂದು ಭಾನುವಾರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ದಲ್ಲಿ ಇದ್ದಿತು . ಸರಿ ಭಾನುವಾರ ಹೇಗೂ ರಜೆ ,ನಾವಿಬ್ಬರೂ ಯಥಾಪ್ರಕಾರ ಕುದ್ರೋಳಿ ದೇವಳದ ಒಳಗೆ ಇರುವ ಕಲ್ಯಾಣ ಮಂಟಪಕ್ಕೆ ಹಾಜರ್ . ಅಲ್ಲಿ ನೋಡಿದರೆ ಪರಿಚಯದವರು ಯಾರೂ ಇಲ್ಲ .ನಾವು ಮೆಲ್ಲಗೆ ಹೊರ ಬಂದು  ದೇವಳದ ಕಚೇರಿಗೆ  ಬಂದು ಇಂತಹ ಮದುವೆ ಎಲ್ಲಿ ಎಂದಾಗ 'ಸರ್ ಅದು ಮುಂದಿನ ಭಾನುವಾರ ,ಇವತ್ತು ಬೇರೇ ಪಾರ್ಟಿ ಯದ್ದು 'ಎಂದಾಗ ಸರೀ ಕಾಗದ ನೋಡದೆ ಬಂದುದಕ್ಕೆ ನಮ್ಮನ್ನೇ ಹಳಿದುಕೊಂಡು ವಾಪಸು ಹೋಗುವಾ ಎನ್ನುತ್ತಿರಲು ಕಚೇರಿಯ ವ್ಯಕ್ತಿ "ಸರ್ ಇಲ್ಲಿ ಬಂದ ಮೇಲೆ ನಿಮ್ಮನ್ನು ಊಟ ಮಾಡದೇ ಹೋಗಲು ಬಿಡುವುದಿಲ್ಲ .ಇಲ್ಲಿಯೇ ದೇವಸ್ಥಾನದ ಊಟ ಇದೆ ,ಸ್ವಯಂ ಸೇವೆ .ಆದರೂ ನೀವು ಹಿರಿಯರು ಕುಳಿತುಕೊಳ್ಳಿ ನಾನೇ ತಂದು ಕೊಡುತ್ತೇನೆ "ಎಂದು ಉಪಚರಿಸಿ ಊಟ ಮಾಡಿಸಿಯೇ ಕಳುಹಿಸಿದ . ದೇವರು ಎಂದು ನಾವು ಹೇಳಿಕೊಳ್ಳುವುದು ಇಂತಹ ಸಂಸ್ಕಾರ ಯುಕ್ತ ಮನಸುಗಳ ಒಳಗೆ ಇರುವನು . 

          ಇನ್ನೊಂದು ಭಾರಿ ನಾನು ಸಕುಟುಂಬ ಕಾಸರಗೋಡಿನ ಒಂದು ಪ್ರಸಿದ್ಧ ದೇವಳದ ಹಾಲಿನಲ್ಲಿ ನಡೆದ ಸಂಗೀತೋತ್ಸವ ಕ್ಕೆ ಹೋಗಿದ್ದೆ. ಬೆಳಗಿನಿಂದ ಸಂಜೆ ತನಕ .ನಾವು ಮಂಗಳೂರಿನಿಂದ  ಬೇಗನೇ ನಾಷ್ಟಾ ಮಾಡಿ ಹೋಗಿದ್ದೆವು .ಕಚೇರಿಯ ಆರಂಭದಿಂದ ಊಟದ ವಿರಾಮದ ವೇಳೆ ತನಕ ಒಮ್ಮೆಯೂ ಏಳದೆ ಕುಳಿತು ಕೇಳಿ ಆನಂದಿಸಿದೆವು .ಆಯೋಜಕರು ,ಭಾಗವಹಿಸಿದವರು ಎಲ್ಲಾ ಪರಿಚಿತರೇ . ಊಟದ ವಿರಾಮ ಆಗುವಾಗ ಎಲ್ಲರೂ ದಡಬಡನೆ ಎಲ್ಲೋ ಧಾವಿಸಿದರು .ನಮ್ಮೊಡನೆ ಸೌಜನ್ಯಕ್ಕೆ ಕೂಡಾ ಬರುವಂತೆ ಹೇಳಲಿಲ್ಲ .ಅಲ್ಲಿಯೇ ಮೂಲೆಯಲ್ಲಿ ಕುಳಿದಿದ್ದ ಒಬ್ಬರು ಮಲಯಾಳಿ ನಮ್ಮ ಬಳಿಗೆ ಬಂದು ಮಲಯಾಳ ಮಿಶ್ರಿತ ಕನ್ನಡದಲ್ಲಿ "ಸಾರ್ ನಿಮ್ಮ ಊಟೆ ?'ಎಂದು ವಿಚಾರಿಸಿದರು .ನಾವು ಹೊರಗೆ ಹೋಟೆಲ್ ಒಂದಕ್ಕೆ ಹೋಗಿ ಹೊಟ್ಟೆ ತುಂಬಿಸಿ ಕೊಂಡೆವು . ಇಂತಹದೇ ಅನುಭವ ನಿಟ್ಟೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ದಲ್ಲಿ ಆಗಿತ್ತು .ನಾ ಮೊಗಸಾಲೆ ಅಧ್ಯಕ್ಷರು .ಮಂಗಳೂರಿನಿಂದ ಬಸ್ಸಿನಲ್ಲಿ ಹೋಗಿದ್ದೆ .ಹಲವು ಪರಿಚಯದವರು ಸಭೆಯಲ್ಲಿ ಇದ್ದರು .ಊಟದ ವೇಳೆ ಆಹ್ವಾನಿತರು ಎಲ್ಲಾ ಊಟದ ಚಪ್ಪರಕ್ಕೆ  ಕೂಡಾ  ಹೋದರು. ...ಅದು ವರೆಗೆ ನನ್ನಲ್ಲಿ ಮಾತನಾಡಿಕೊಂಡು ಇದ್ದವರೂ ಕೂಡಾ ಸೌಜನ್ಯಕ್ಕಾಗಿಯಾದರೂ "ಬನ್ನಿ".  ಎನ್ನಲಿಲ್ಲ . ಪುಣ್ಯಕ್ಕೆ ಅಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸುವ ಒಂದು ಕ್ಯಾಂಟೀನ್ ಇದ್ದು ,ನನ್ನ ವಿದ್ಯಾರ್ಥಿಗಳು ಇಂಟರ್ನ್ ಆಗಿ ಇದ್ದವರು ಸಿಕ್ಕಿ ಅವರೊಡನೆ ಊಟ ಮಾಡಿದೆನು . 

ಸಂಗೀತ ,ಸಾಮೂಲಕ ಹಿತ್ಯ ಕೂಟಗಳಲ್ಲಿ ಉಚಿತ ಊಟ ತಿಂಡಿ  ನೀಡುವುದಕ್ಕೆ ಆದ್ಯತೆ ನೀಡುವುದು ,ಅದಕ್ಕೆ ಹಣ ಖರ್ಚುಮಾಡುವುದಕ್ಕೆ  ನನ್ನ ಸಹಮತ ಇಲ್ಲ . ಇನ್ನು ಈಗಿನ ಸಾಹಿತ್ಯ ಮೇಳಗಳಲ್ಲಿ ಕ್ರಾಸ್ ಸಬ್ಸಿಡಿ ಮೂಲಕ ಸಭೆಯನ್ನು ಚಂದಗಾಣಿಸಲು ಹಲವರನ್ನು ಕರೆಯುವರು .ಅವರ ಖರ್ಚು ವೆಚ್ಚ ಸಾಮಾನ್ಯ ಪ್ರತಿನಿಧಿಗಳು ಭರಿಸ ಬೇಕು . ಅವರ ಭಾಷಣ ಇತ್ಯಾದಿ ಇರದು ,ಆದರೆ ಭಾಷಣ ನಂತರದ ಚರ್ಚೆ ಇತ್ಯಾದಿಯಲ್ಲಿ ಅವರ ಅವಶ್ಯ ಇದೆ ಎಂಬ ಆಶಯ ಇರ ಬೇಕು .ಸಾಮಾನ್ಯ ಎಲ್ಲಾ ಕಡೆಯೂ ವಿಶೇಷ ಆಹ್ವಾನಿತ  ಖಾಯಂ ಪ್ರತಿನಿಧಿಗಳನ್ನು (ವಿಶ್ವ ಸಂಸ್ಥೆಯ ಖಾಯಂ ಸದಸ್ಯರಂತೆ )ನಾನು ಕಂಡಿದ್ದೇನೆ . 

ಆದರೂ ಒಟ್ಟಿಗೇ ಕುಳಿತು ಮಾತನಾಡುತ್ತಿದ್ದು ಊಟಕ್ಕೆ ಆಗುವಾಗ ಕಂಡೇ ಇಲ್ಲ ಎಂದು ಓಡುವವರನ್ನು ಕಂಡಾಗ ಸ್ವಲ್ಪ ಬೇಸರ ಆಗುವುದು

 ಬಾಲಂಗೋಚಿ : ಕೆಲವು ಬಂಧು ಮಿತ್ರರು ಸಮಾರಂಭಗಳಲ್ಲಿ ವ್ಹಾಟ್ಸಪ್ಪ್ ನಲ್ಲಿ ಸಿಕ್ಕಾಗ ನೀವು ನಮ್ಮ ಮನೆಗೆ ಬರುವುದೇ ಇಲ್ಲಾ ಎಂದು ಗೋಗೆರೆಯುವರು . ನೀವು ಅವರ ಊರಿಗೆ ಹೋಗಿದ್ದು  ಇಲ್ಲೇ ಇದ್ದೇನೆ ಎಂದು ವ್ಹಾಟ್ಶಪ್ಪ್ ಫೇಸ್ಬುಕ್ ನಲ್ಲಿ ಹಾಕಿದರೆ ಜಾಣ ಮೌನ ವಹಿಸುವರು .

 

ಭಾನುವಾರ, ಅಕ್ಟೋಬರ್ 24, 2021

ಗುರುವಿನ ಗುಲಾಮ ನಾಗುವ ತನಕ

                      ಗುರುವಿನ ಗುಲಾಮ ನಾಗುವ ತನಕ 

ಹಿಂದೆ  ಬಹಳ ಅಧ್ಯಾಪಕರು ಪ್ರಾಧ್ಯಾಪಕರು ಎಲ್ಲಾ  ಬಲ್ಲವರು ಆಗಿದ್ದರು . ಅವರು ಹೇಳಿದ್ದನ್ನು ಪ್ರಶ್ನಿಸಿದರೆ ಸಹಿಸರು . ತಮಗೆ ತಿಳಿದಿಲ್ಲ ಎಂದು ಅವರ ಬಾಯಿಯಲ್ಲಿ ಬರುವುದು ಅಪರೂಪ . ಯಾವುದೇ ವಿಷಯದಲ್ಲಿ  ಹಲವು ಅಭಿಪ್ರಾಯ ಇದ್ದರೆ ಅವರು ಹೇಳಿದ್ದೇ ಅಂತಿಮ . 

ವೈದ್ಯಕೀಯ ಕಾಲೇಜು ಗಳಲ್ಲಿ ಇದು ಸಾಮಾನ್ಯವಾಗಿತ್ತು . ಪ್ರಾಧ್ಯಾಪಕರಿಗೆ ಅಂಜಿ ನಡೆಯ ಬೇಕಿತ್ತು .ಅವರ ಅವಕೃಪಗೆ ಒಳಗಾದರೆ ನೀವು ಪರೀಕ್ಷೆಯಲ್ಲಿ ಎಷ್ಟು ಒಳ್ಳೆಯದು ಮಾಡಿದರೂ ಉತ್ತೀರ್ಣ ಆಗುವುದಿಲ್ಲ . ವೈವಾ ಮತ್ತು ಪ್ರಾಕ್ಟಿಕಲ್ಸ್ ನಲ್ಲಿ  ಪರೀಕ್ಷಕರ ಜತೆ ಚರ್ಚೆಗೆ ಇಳಿಯುವುದು ಗಂಡಾಂತರ ಮೈ ಮೇಲೆ ಎಳೆದು ಕೊಂಡಂತೆ . 

ಜಸ್ಪಾಲ್ ಭಟ್ಟಿ ಅವರ ಧಾರವಾಹಿ ಹಿಂದೆ ದೂರ ದರ್ಶನ ದಲ್ಲಿ ಜನಪ್ರಿಯ ವಾಗಿತ್ತು .ಅದರಲ್ಲಿ ಪ್ರೊಫೆಸ್ಸರ್ ತನ್ನ ಮಾರ್ಗ ದರ್ಶನ ದಲ್ಲಿ  ಪಿ ಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿಯ ಶೋಷಣೆ ಮಾಡುವುದನ್ನು ಚೆನ್ನಾಗಿ ಚಿತ್ರಿಸಿದ ನೆನಪು . ವಿದ್ಯಾರ್ಥಿ ತನ್ನ ಸಂಶೋಧನಾ ಕಾರ್ಯ ಬದಿಗಿಟ್ಟು ಪ್ರಾಧ್ಯಾಪಕರು ,ಅವರ ಕುಟುಂಬದವರ ಸೇವೆ ಮಾಡಿದರೆ ಮಾತ್ರ ಪಾಸ್ . ಅವರ ಮನೆ ಸಾಮಾನು ತರುವುದು ,ನಾಯಿಯನ್ನು  ವಾಕಿಂಗ್ ಕರೆದು ಕೊಂಡು ಹೋಗುವುದು ಇತ್ಯಾದಿ . 

 ಇತ್ತೀಚೆಗೆ ವಾತಾವರಣ ಸ್ವಲ್ಪ ಬದಲಾಗಿದೆ ; ಆದರೂ   (ನನ್ನನ್ನೂ ಸೇರಿ )ನಮ್ಮಲ್ಲಿ  ಯಾರಾದರೂ ಕಿರಿಯರು ಪ್ರಶ್ನೆ ಕೇಳಿದರೆ ನನಗೆ ತಿಳಿಯದು ಎಂದು ಒಪ್ಪಿ ಕೊಳ್ಳುವ ಪ್ರಾಜ್ಞರು ಕಡಿಮೆಯೇ ಎಂದು ಹೇಳ ಬೇಕು . 

 https://youtu.be/JCy9BfqMw2c

ಬಾಲ್ಯದ ಶಿಕ್ಷೆಗಳು

 ಸಾಫ್ಟ್ವೇರ್ ಕಂಪನಿಯವರು ಕ್ಯಾಂಪಸ್ ನಲ್ಲಿ ಆಯ್ಕೆ ಮಾಡಿ ಇನ್ನೂ ಕೆಲಸಕ್ಕೆ ತೆಗೆದುಕೊಂಡು ಇರದಿದ್ದರೆ ಬೆಂಚ್ ನಲ್ಲಿ ಇದ್ದಾನೆ ಎನ್ನುತ್ತಿದ್ದರು .ಈಗಲೂ ಇದೆಯೇ ಎಂದು ಗೊತ್ತಿಲ್ಲ .ನಾವು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಏನಾದರೂ ಮಂಗ ಚೇಷ್ಟೆ ಮಾಡಿದರೆ ,ಮನೆ ಕೆಲಸ ಮಾಡದಿದ್ದರೆ ಮತ್ತು ಸರಿಯಾದ ಉತ್ತರ ಕೊಡದಿದ್ದರೆ ಬೆಂಚ್ ಮೇಲೆ ನಿಲ್ಲಿಸುತ್ತಿದ್ದರು .ನಾನೂ ಈ ಗೌರವಕ್ಕೆ ಹಲವು ಭಾರಿ  ಭಾಜನ ನಾಗಿದ್ದೇನೆ . ತರಗತಿಯಲ್ಲಿ ಎಲ್ಲರೂ ಕುಳಿತುವಾಗ ನಾವು ಮಾತ್ರ ಬೆರ್ಚಪ್ಪ ಗಳಂತೆ ಬೆಂಚಿನ ಮೇಲೆ ನಿಲ್ಲಲು ಸ್ವಲ್ಪ ಅವಮಾನ ಆಗುತ್ತಿತ್ತು . ಒಂದೇ ಮನೆಯವರು ಹಲವರು ಶಾಲೆಯಲ್ಲಿ ಇರುವಾಗ ನಮಗೆ ಆದ ಶಿಕ್ಷೆ ಮನೆಯವರಿಂದ ಮುಚ್ಚಿ ಇಡುವುದು ಸಾಧ್ಯವಿರಲಿಲ್ಲ .ಅಮ್ಮನಿಗೆ ತಿಳಿದರೆ ಇನ್ನೂ ಎರಡು ಬಿಗಿಯ ಬೇಕಿತ್ತು ನಿನಗೆ ಬುದ್ದಿ ಬರಲು ಎನ್ನುತ್ತಿದ್ದರು . 

ನಮ್ಮಲ್ಲಿ ಕೆಲವು ಮಕ್ಕಳು ಬೆಂಚಿನ ಮೇಲೆ ನಿಲ್ಲಿಸಿದರೂ ಏನೂ ಆಗದವರಂತೆ ಸ್ಥಿತ ಪ್ರಜ್ಞರಾಗಿ ಮುಗುಳ್ನಗುತ್ತಾ ನಿಂತು ಅಧ್ಯಾಪಕರ ಕೋಪಕ್ಕೆ ತುಪ್ಪ ಸುರಿಯುತ್ತಿದ್ದರು . ಅವರಿಗೆ ಅದು ವಿಕ್ಟರಿ ಸ್ಟಾಂಡ್ ನಂತೆ ತೋರುತ್ತಿರ ಬೇಕು . 

ನಾವು ಹೈ ಸ್ಕೂಲಿಗೆ ಬಂದಾಗ ಈ ಶಿಕ್ಷೆ ಇರಲಿಲ್ಲ .ನಮ್ಮಂತಹ ಟೊಣಪರ ಭಾರ ಬಡಕಲು ಬೆಂಚ್ ಗಳು ಹೊರಲಾರವು ಎಂದು ಇರ ಬೇಕು .

ಇತರ ಜನ (ಶಿಕ್ಷಕ )ಪ್ರಿಯ ಶಿಕ್ಷೆಗಳು ಬಸ್ಕಿ ಹೊಡೆಸುವುದು ,ಕಿವಿ ಹಿಂಡುವುದು ಮತ್ತು ಬೆತ್ತದಲ್ಲಿ ಹೊಡೆಯುವುದು . 

ಈ ತರಹ ದೈಹಿಕ ಶಿಕ್ಷೆ ಕೊಡುತ್ತಿರುವವರು  ತಮ್ಮ ಶಿಷ್ಯ ಉದ್ದಾರ ವಾಗುವುದಿಲ್ಲವಲ್ಲಾ ಎಂಬ ಹತಾಶೆ ಯಿಂದ  ಇದ್ದವರೇ ಹೆಚ್ಚು ವಿನಃ ಪರ ಹಿಂಸಾ ಸಂತೋಷಿಗಳು ಕಡಿಮೆ .An indulgent teacher is better than indifferent one. ಏನು ಬೇಕಾದರೂ ಮಾಡಿ ಸಾಯಲಿ ,ನನಗೆ ಹೇಗೂ ಸಂಬಳ ಬರುತ್ತದೆ ಎಂದು ಅಹಿಂಸಾ ತತ್ವ ಅಳವಡಿಸಿ ಕೊಳ್ಳುವವರು ಶಿಕ್ಷಿಸಲು ಹೋಗರು.

ಎಸ್ ವಿ ಪರಮೇಶ್ವರ ಭಟ್ ಅವರು ಹೇಳುತ್ತಿದ್ದ ಜೋಕ್: ತರಲೆ ವಿದ್ಯಾರ್ಥಿಗೆ ಅಧ್ಯಾಪಕ "ಕತ್ತೆ,ನೀನು  ನನ್ನೆದುರು ನಿಲ್ಲಲು ಅಯೋಗ್ಯ ,ನಡಿ ಹೆಡ್ ಮಾಸ್ಟೆರ್ ಅವರ ಬಳಿಗೆ "

ಶುಕ್ರವಾರ, ಅಕ್ಟೋಬರ್ 22, 2021

ಅಂಚೆ ಪತ್ರಗಳು

                ಅಂಚೆ ಪತ್ರಗಳು 

ಹಿಂದೆ ಅಂಚೆ ಇಲಾಖೆ ಜನರ ಜೀವ  ನಾಡಿ ಆಗಿತ್ತು . ಪತ್ರಗಳು ,ಮನಿ ಆರ್ಡರ್ ಮತ್ತು ಟೆಲಿಗ್ರಾಂ ಅವಲಂಬಿಸದವರು ಕಡಿಮೆ ಇದ್ದರು . ನಮ್ಮ ಮನೆಗೆ ಅಂಚೆ ಕಚೇರಿ ಕನ್ಯಾನ ..ಕನ್ಯಾನ ಗ್ರಾಮದ ಪೂರ್ವದ ಗಡಿಯಲ್ಲಿ ನಮ್ಮ ಮನೆ . ಪೋಸ್ಟ್ ಮ್ಯಾನ್ ಪತ್ರ ತಲುಪಿಸಲು ಬಹಳ ನಡೆಯ ಬೇಕು . ಆದುದರಿಂದ ಎರಡು ಮೂರು ದಿನದ ಅಂಚೆ (ಇದ್ದರೆ )ಒಟ್ಟಿಗೆ ತಂದು ಕೊಡುವುದು .ನಮಗೆ ಶಾಲೆ ಇರುವಾಗ ಶಾಲೆಗೆ ಬಂದು ನಮ್ಮಲ್ಲಿಯೇ ಕೊಡುತ್ತಿದ್ದನು . ಹೆಚ್ಚಾಗಿ ಅಂಚೆ ಬ್ಯಾಗ್ ತೆರೆದು  ಪೋಸ್ಟ್ ಆಫೀಸ್ ಸೀಲ್ ಹಾಕುವಾಗ ನಾವು ಅಲ್ಲಿಗೆ ಹೋಗುವೆವು ;ಪೋಸ್ಟ್ ಮಾಸ್ಟರ್ ಪ್ರತಿಯೊಂದು ಪತ್ರದ ಅಡ್ರೆಸ್ ಗಟ್ಟಿಯಾಗಿ ಓದುವರು ,ನಮ್ಮ ಮನೆಯವರ ಹೆಸರು ಬಂದಾಗ ನಾವು ಕೈ ಒಡ್ದುವೆವು .ನಮ್ಮದು ಆಗ ಬ್ರಾಂಚ್ ಪೋಸ್ಟ್ ಆಫೀಸ್ ಆಗಿದ್ದು ಅಂಶ ಕಾಲಿಕ  ಉದ್ಯೋಗಿಗಳು ಇದ್ದರು . ಮೊದಲು ಕಿರಾಣಿ ಅಂಗಡಿ ಸಾಯಿಬ್ಬರು ಪೋಸ್ಟ್ ಮಾಸ್ಟರ್ ,ಅವರ ಅಂಗಡಿಯೇ ಪೋಸ್ಟ್ ಆಫೀಸ್ ಆಗಿದ್ದು ,ಮುಂದೆ ತನ್ನದೇ ಅದ (ಬಾಡಿಗೆಗೆ )ಆಫೀಸ್ ಹೊಂದಿತು . ನಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕರು ಮಂಜುನಾಥ ಪುರುಷ ಪೋಸ್ಟ್ ಮಾಸ್ಟರ್ ಆದರು . 

ಹೆಚ್ಚಾಗಿ ಬಳಕೆಯಲ್ಲಿ ಇದ್ದುದ್ದು ಪೋಸ್ಟ್ ಕಾರ್ಡ್ ಮತ್ತು ಇನ್ಲ್ಯಾಂಡ್ ಲೆಟರ್ . ಪೋಸ್ಟ್ ಕಾರ್ಡ್ ತೆರೆದ ಅಂಚೆ .ತೆರೆದ ಅಂಚೆ ಹರಿದ ಪಂಚೆ ಎಂಬ ಮಾತು  ಇದೆ .ಯಾರು ಬೇಕಾದರೂ ಓದ ಬಹುದು  .ನನ್ನ ದೊಡ್ಡ ಅಣ್ಣ ಪೋಸ್ಟ್ ಕಾರ್ಡ್ ಹೆಚ್ಚಾಗಿ ಉಪಯೋಗ ಮಾಡುವರು ಮತ್ತು ಅದರ  ಒಂದು ಮಿಲಿ ಮೀಟರು ಕೂಡಾ ವ್ಯರ್ಥ ಆಗದಂತೆ ಮೂಲೆ ಮೂಲೆಗಳಲ್ಲಿ ,ಅಡ್ಡ ಸಾಲು ಉದ್ದ ಸಾಲು ಬರೆಯುವರು . 

ಶ್ರಾದ್ಧ ,ಸತ್ಯನಾರಾಯಣ ಪೂಜೆ ಇತ್ಯಾದಿಗಳಿಗೆ ದಿನ ಮುಂದಾಗಿ  ಬರಬೇಕು ಎಂಬ ಅಹ್ವಾನ ಗಳು  ಕಾರ್ಡ್ ಮೂಲಕ ಬರುತ್ತಿದ್ದವು .ಕೋರ್ಟ್ ನಲ್ಲಿ ಕೇಸ್ ವಾಯಿದೆ ಇದ್ದಾಗ ಕಾರ್ಡಿನಲ್ಲಿ "ನಿಮ್ಮ ಕೇಸ್ ಇಂತ ದಿನ  ವಾಯಿದೆ ಇಟ್ಟಿದ್ದು ತಪ್ಪದೇ ಹಾಜರಾಗುವುದು ,ಬರುತ್ತಾ ವಕೀಲರ ಫೀಸು ಬಾಬತ್ತು ರೂಪಾಯಿ ನೂರು ಮಾತ್ರ ಮರೆಯದೇ  ತರುವದು "ಎಂಬ  ಒಕ್ಕಣೆ ಸಾಮಾನ್ಯ . 

ಮಿಕ್ಕಂತೆ ಇನ್ಲ್ಯಾಂಡ್ ಲೆಟರ್ ಬಳಕೆ ಜಾಸ್ತಿ .ಹಾಸ್ಟೆಲ್ ನಲ್ಲಿ ಇರುವ ಮಕ್ಕಳಿಗೆ ,ಮತ್ತು ವೈಸ್ ವೆರ್ಸಾ ,ಗಂಡ ಹೆಂಡತಿಗೆ  ಇತ್ಯಾದಿ ಬರೆಯುವಾಗ ಇದು ಉಪಯೋಗಿ . ಓಪನ್ ಮಾಡದೇ ಓದುವುದು ಕಷ್ಟ . ಮಕ್ಕಳು ಮನೆಗೆ ಬರೆಯುವಾಗ 'ತೀರ್ಥರೂಪರಲ್ಲಿ ಬೇಡುವ ಆಶೀರ್ವಾದಗಳು ,ನಾನು ಕ್ಷೇಮ ನೀವೂ ಹಾಗೆಯೇ ಎಂದು ತಿಳಿಯುತ್ತೇನೆ . ನಾನು ಚೆನ್ನಾಗಿ ಓದುತ್ತಿರುವೆನು .ನಿಮ್ಮ ನೆನಪು ಆಗುತ್ತಿದೆ . ನನಗೆ ಖರ್ಚಿಗೆ ರೂಪಾಯಿ ಅರುವತ್ತು ಕಳುಹಿಸಿರಿ . ಹಿರಿಯರಲ್ಲಿ ಬೇಡುವ ಆಶೀರ್ವಾದಗಳು ,ಕಿರಿಯಿರಿಗೆ ಆಶೀರ್ವಾದಗಳು . ಗೌರಿ ಕರು ಹಾಕಿದೆಯೇ ?ಹಲಸಿನ ಹಣ್ಣು ಮಾವಿನ ಹಣ್ಣು ಮುಗಿಯಿತೋ ?" ಇತ್ಯಾದಿ . ಆದರೂ ಪತ್ರಗಳಿಗೆ ಕಾಯುವದು ಮತ್ತು ಬಂದಾಗ ಪುನಃ ಪುನಃ ಅದನ್ನು ಓದುವುದರಲ್ಲಿ ಒಂದು ಸುಖ ಇತ್ತು . 

  ನನ್ನ ಮಿತ್ರರ ಪ್ರಕಾರ ಹಿಂದೆ ಪತ್ರಗಳಲ್ಲಿ ಭಾವನೆಗಳು ಪೂರ್ಣ ರೂಪ ತಾಳಿ  ಬರುತ್ತಿದ್ದವು ;ತಿಂಗಳು ತುಂಬಿದ ಹೆರಿಗೆಯಂತೆ .ಈಗಿನ ವಾಟ್ಸಪ್ಪ್ ,ಫೇಸ್ ಬುಕ್ ಇತ್ಯಾದಿಗಳಲ್ಲಿ ಅದರ  ಪ್ರಿ ಮೆಚೂರ್ ಡೆಲಿವರಿ ಆಗುತ್ತದೆ . 

ಕನ್ನಡದಲ್ಲಿ ಪತ್ರ ಸಾಹಿತ್ಯ ಕೃತಿಗಳು ಬಂದಿವೆ . ಎ ಎನ್ ಮೂರ್ತಿ ರಾಯರ ಚಿತ್ರಗಳು ಪತ್ರಗಳು ,ಕೃಷ್ಣಾನಂದ ಕಾಮತ್ ಅವರ ಪತ್ರ ಪರಾಚಿ ,ಪ್ರೇಯಸಿಗೆ ಪತ್ರಗಳು ,ತೇಜಸ್ವಿ ಅವರ ತೇಜಸ್ವಿ ಪತ್ರಗಳನ್ನು ಉಲ್ಲೇಖಿಸ ಬಹುದು .ರಾಜೇಶ್ವರಿ ತೇಜಸ್ವಿ ಅವರ 'ನನ್ನ ತೇಜಸ್ವಿ 'ಯಲ್ಲಿ ತಮ್ಮ ಪತಿಯ ಪತ್ರಗಳನ್ನು ಸಂದರ್ಭಾನುಸಾರ ತಂದಿದ್ದಾರೆ. ಕಾರ್ಕಳ ಎಂ ರಾಮಚಂದ್ರ  ಅವರ ಬಳಿ ಸಾಹಿತಿಗಳ ಅನೇಕ ಅಮೂಲ್ಯ ಪತ್ರ ಸಂಗ್ರಹ ಇದ್ದು ಅದನ್ನು ಪ್ರಕಟಿಸುವ ಮುನ್ನ ತೀರಿ ಕೊಂಡುದು ಬೇಸರ ದ ಸಂಗತಿ . ಇನ್ನು ಇಂಗ್ಲಿಷ್ ನಲ್ಲಿ ಜವಾಹಲಾಲ ನೆಹರು ಮಗಳಿಗೆ ,ಮುಖ್ಯ ಮಂತ್ರಿಗಳಿಗೆ ಬರೆದ ಪತ್ರಗಳು ಜ್ನಾನ ಭಂಡಾರ ಗಳೇ ಆಗಿವೆ .

ಮಾಸ್ತಿಯವರ ಸಣ್ಣ ಕತೆ ರಂಗಪ್ಪನ ಕೋರ್ಟ್ ಶಿಪ್ ನೀವು ಓದಿರ ಬಹುದು . ಹೊಸದಾಗಿ  ಮದುವೆಯಾಗಿ ದೂರ ಇರುವ ರಸಿಕ ಗಂಡನ ಪತ್ರಕ್ಕೆ ಹಿಂದಿನ ಸಂಪ್ರಾಯವಾದಿ ಪರಿಸರದ ಹೆಣ್ಣು ಮಗಳು ಬರೆಯುವ ಉತ್ತರ ಹೇಗಿರುತ್ತದೆ ಎಂಬ ನವಿರು ಹಾಸ್ಯದ ಚಿತ್ರಣ .

                      

                                            



 






ಸೋಮವಾರ, ಅಕ್ಟೋಬರ್ 18, 2021

ಸ್ನೇಹದ ಪರ್ಮನೆಂಟ್ ವೇ

                   ಬಾಳ ಪಯಣಕ್ಕೆ ಸ್ನೇಹದ     ಪರ್ಮನೆಂಟ್ ವೇ 

ರೈಲ್ವೇ ಯಲ್ಲಿ ಹಳಿಗೆ ಪೆರ್ಮನೆಂಟ್ ವೇ ಎಂದು ಕರೆಯುವರು . ಹಿಂದೆ ಕೆಲವು ದಿನಗಳ ಸಾಗಣೆಗೆ (ಉದಾ ಮರದ ದಿಮ್ಮಿ ) ತಾತ್ಕಾಲಿಕ ಹಳಿ ಹಾಕುತ್ತಿದ್ದರು . ಅದರಿಂದ ಈ ಹೆಸರು .

ರೈಲು ಹಳಿ ನಿರ್ವಹಣೆ ಮಾಡಲು ಅಲ್ಲಲ್ಲಿ ನಿರೀಕ್ಷರು ಇದ್ದಾರೆ.ಅವರಿಗೆ ಪೆರ್ಮನೆಂಟ್ ವೇ ಇನ್ಸ್ಪೆಕ್ಟರ್ ಎನ್ನುತ್ತಿದ್ದರು .(ಈಗ ಎಂಜಿನಿಯರ್ ಎಂದು ಬದಲಾಯಿಸಿರ ಬೇಕು ). ಅವರದು ದೊಡ್ಡ ಸಾಮ್ರಾಜ್ಯ .ಅವರ ಕೆಳಗೆ ಅಸ್ಸ್ಟಂಟ್ PWI ಗಳು ಇರುವರು ..ಸುಪರ್ಧಿಯಲ್ಲಿ ಇರುವ ಹಳಿ ಯನ್ನು  ನಿಗದಿತ ಅಂತರಕ್ಕೆ ಒಂದು ಗ್ಯಾಂಗ್ ಎಂದು ಇದ್ದು ,ಅದಕ್ಕೆ ಒಬ್ಬ ನಾಯಕ ಗ್ಯಾಂಗ್ ಮೇಟ್ ಅಥವಾ ಮೇಸ್ತ್ರಿ ನಾಯಕ ,ಅವನ ಕೆಳಗೆ ಹಲವು ಗ್ಯಾಂಗ್ ಮೆನ್ ಗಳು .ಇವರು ತಮ್ಮ ಪರಿಧಿಯಲ್ಲಿ  ಬರುವ ಹಳಿ ಮತ್ತು ಅದರ  ಜಲ್ಲಿ ಹಾಸಿಗೆ ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವರು . ಇವರಲ್ಲದೆ ಕೀ ಮಾನ್ ಎಂಬವರು ಹಳಿಯುದ್ದಕ್ಕೂ ನಡೆದು ಬೋಲ್ಟ್ ನಟ್ ಸಡಿಲವಾದದ್ದನ್ನು ಗಟ್ಟಿ ಗೊಳಿಸುವರು . ಕರಾವಳಿ ,ಮಲೆನಾಡಿನಲ್ಲಿ  ಮುಂಗಾರು ಸಮಯ ರಾತ್ರಿ ಹಳಿ ಕಾವಲು ಮಾಡುತ್ತಾರೆ .ಇದಕ್ಕೆ ನೈಟ್ ಪೆಟ್ರೋಲ್ ಎನ್ನುವರು .ನೀವು ರೈಲು ಪ್ರಯಾಣ ಮಾಡುವಾಗ ದಾರಿಯಲ್ಲಿ ಇವರ ಸಿಳ್ಳೆ ಕೇಳಿರ ಬಹುದು .

ಹಳಿ ನಿರ್ವಹಣೆ ಪರಿಶೀಲನೆ ಮಾಡಲು ನಿರೀಕ್ಷಕರಿಗೆ ಟ್ರಾಲಿ ಸೌಲಭ್ಯ ಇದ್ದು ಅದನ್ನು ನಡೆಸುವವರಿಗೆ ಟ್ರಾಲಿ ಮ್ಯಾನ್ ಎನ್ನುವರು .ಇದರಲ್ಲಿ ತಳ್ಳು ಟ್ರಾಲಿ ಮತ್ತು ಮೋಟಾರ್ ಟ್ರಾಲಿ ಎಂದು ಎರಡು ವಿಧ ಇದೆ . 

ನಾನು ಪುತ್ತೂರು ರೈಲ್ವೇ ಆರೋಗ್ಯ ಕೇಂದ್ರದಲ್ಲಿ ಇದ್ದಾಗ ಶ್ರೀ ನಾಗರಾಜಪ್ಪ ಎಂಬ ವರು PWI ಆಗಿದ್ದು ನನ್ನ ಪಕ್ಕದ  ಕ್ವಾಟರ್ಸ್ ನಲ್ಲಿ ವಾಸವಿದ್ದು ಅವರು ಮತ್ತು ಅವರ ಕುಟುಂಬ ನಮಗೆ ಬಹಳ ಆತ್ಮೀಯ ರಾಗಿದ್ದರು .

ಅವರಿಗೆ ಮೂವರು ಮಕ್ಕಳು ಕಿರಣ್ ,ಸಂದೇಶ್ ಮತ್ತು ಮಮತಾ . ನಾಗರಾಜಪ್ಪ ಅವರ ಪತ್ನಿ ಪ್ರೇಮಾ . ಪ್ರೇಮಾ ಅವರ ಅಕ್ಕನ ಮಗಳ ಗಂಡ ಡಾ ಮಲ್ಲಿಕಾರ್ಜುನ್ ಸ್ವಾಮಿ ವಿಟ್ಲ ಸಿ ಪಿ ಸಿ ಆರ್ ಐ ಗೆ ವಿಜ್ಞಾನಿ ಆಗಿ ಬಂದಿದ್ದವರು ಕೆಲ ತಿಂಗಳು ಇವರ ಜತೆ ಇದ್ದು ನಮಗೂ ಆಪ್ತರಾದರು . ಸ್ವಾಮಿ ಅವರ ಪತ್ನಿ ಪ್ರಮೀಳಾ ,ಮಗ ಭಾನು ಪ್ರಕಾಶ್ ,ಜತೆಗೆ ಸ್ವಾಮಿ ಅವರ ಅಣ್ಣನ ಮಗ ಪ್ರದೀಪ್ (ದೀಪು )ಕೂಡಾ ಶಾಲೆಗೆ ಹೋಗಲು ಎಂದು ಇದ್ದ. ಈ ಮಕ್ಕಳು ಕಿರಣ್ ಮತ್ತು ಸಂದೇಶ್ ನನ್ನು  ಕಿರಣ್ ಮಾಮ ,ಸಂದೇಶ್ ಮಾಮ ಎಂದು ಕರೆಯುತ್ತಿದ್ದು ನಾವೂ ಕಿರಣ್ ಮಾಮ ಎಂದು ಕರೆಯಲಾರಂಬಿಸಿ ಈಗಲೂ ಹಾಗೇ ಕರೆಯುತ್ತೇವೆ . 

ಕಿರಣ್ ಮಾಮ (ನನಗಿಂತ ಎಷ್ಟೋ ಸಣ್ಣವನು )ಐ ಟಿ ಐ ಮಾಡಿ ,ಆಗ ತಾನೇ ಜನಪ್ರಿಯ ಆಗುತ್ತಿದ್ದ ಟಿ ವಿ ಸೆಟ್ ದುರಸ್ತಿ ಇತ್ಯಾದಿ ಯಲ್ಲಿ ತರಬೇತು ಹೊಂದಿದ . ಅವನದು ಬಾಲ್ಯದಲ್ಲಿಯೇ ವಾಹನ ,ಯಂತ್ರ ಇತ್ಯಾದಿ ನಿರ್ವಹಣೆ ಯಲ್ಲಿ ಆಸಕ್ತಿ .ಈಗ ಮೈಸೂರಿನಲ್ಲಿ  ಯಶಸ್ವೀ ಕೇಬಲ್ ನೆಟ್ವರ್ಕ್ ಉದ್ಯಮಿ . ತಮ್ಮ ಸಂದೇಶ   ಸಂತ ಫಿಲೋಮಿನಾ ಕಾಲೇಜು ಗೆ ಪಿ ಯು ಸಿ ಗೆ ಹೋಗುತ್ತಿದ್ದು ,ಹಾರಾಡಿಯಿಂದ  ದರ್ಭೆಗೆ ನಡೆದೇ ಹೋಗುವುದು .ಆತ ಮುಂದೆ ಕಂಪ್ಯೂಟರ್ ಪದವಿ ಮಾಡಿದರೂ ,ವೃತ್ತಿಯಾಗಿ  ಸಿಮೆಂಟ್ ಬ್ಲಾಕ್ ತಯಾರು ಮಾಡುವ ಉದ್ಯಮ .ಸಹೋದರಿ ಮಮತಾ ಮದುವೆ ನಾವು ಪುತ್ತೂರಿನಲ್ಲಿ ಇದ್ದಾಗಲೇ ನಡೆದು ನಾವೆಲ್ಲ ಸಂತೋಷದಿಂದ ಪಾಲು ಗೊಂಡಿದ್ದೆವು . 

ನಾಗರಾಜಪ್ಪ ಮನೆಯಲ್ಲಿ ಒಂದು ಸಣ್ಣ ಕಪ್ಪು ಬಿಳುಪು ಟಿ ವಿ ಇದ್ದು ಮನೆ ಪಕ್ಕದ ಎತ್ತರದ ಮರಕ್ಕೆ ಆಂಟೆನ್ನಾ ಹಾಕಿದ್ದರು .ಭಾನುವಾರ ಅವರ ಮನೆಯಲ್ಲಿ ಕುಳಿತು ರಾಮಾಯಣ ನೋಡುವುದು ,ಹರಟೆ ಹೊಡೆಯುವುದು ಮತ್ತು ಪ್ರೇಮಾ ಆಂಟಿ ಮಾಡಿ ಕೊಡುತಿದ್ದ ರಾಗಿ ರೊಟ್ಟಿ ,ಚಹಾ ಮೆಲ್ಲುವದು . ಸಂಜೆ ನಾವು ಮಕ್ಕಳೆಲ್ಲಾ ಪೇಟೆಗೋ ,ಜಾತ್ರೆ ಸಮಯದಲ್ಲಿ ಜಾತ್ರೆಗೂ ಒಟ್ಟಾಗಿ ಹೋಗುವುದು . ನಾನು ಹೊಸದಾಗಿ ಬೈಕ್ ಕೊಂಡಾಗ ನನಗೆ ಧೈರ್ಯಕ್ಕೆ ಕಿರಣ್ ಮತ್ತು ಸಂದೇಶ್ ಮಾಮ . ನನ್ನ ಮದುವೆ ಸಮಾರಂಭದಲ್ಲಿ ನಾಂದಿ ಯಿಂದ ಹಿಡಿದು ಕೊನೆಯ ವರೆಗೂ ಮನೆಯವರಂತೆ ಸಂಭ್ರಮಿಸಿತು ಆ ಕುಟುಂಬ . ಹಬ್ಬ ಹರಿದಿನಗಳಲ್ಲಿ ನಮ್ಮ ಮನೆಯಲ್ಲಿ ಇಲ್ಲ ಅವರಲ್ಲಿ ಜತೆಯಾಗಿ ಊಟ . ಪುನಃ ನೆನಪಿಸುತ್ತೇನೆ ,ಆಗ ಅರೆಯುವ ಕಲ್ಲು ,ಸೀಮೆ ಎಣ್ಣೆ ಸ್ಟವ್ .,ಬೇಕೆಂದಷ್ಟು ಹಾಲು ಸಿಗದು .ಆದರೂ ಅವೆಲ್ಲಾ ಗಣನೆಗೆ ಬಾರವು . 

ಈಗ ನಾಗರಾಜಪ್ಪ ,ಪ್ರೇಮಾ ಆಂಟಿ ಇಬ್ಬರೂ ಇಲ್ಲ ,ಆದರೆ ನೆನಪು ಹಸಿರಾಗಿದೆ .ಮಲ್ಲಿಕಾರ್ಜುನ ಸ್ವಾಮಿ ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ .ಮಗ ಭಾನು ಕೆನಡಾ ದಲ್ಲಿ ಇಂಜಿನಿಯರ್ ,ಪ್ರದೀಪ್ ಇಂಜಿನಿಯರ್ ಆಗಿ ಅಮೆರಿಕಾ ದಲ್ಲ್ಲಿ ಇದ್ದು ಈಗ ಊರಿಗೆ ಮರಳಿ ಮೈಸೂರಿನಲ್ಲಿ ಇದ್ದಾನೆ .ಈ ಮಕ್ಕಳನ್ನು ನಾವು ಪ್ರೀತಿಯಿಂದ ತರಲೆಗಳು ಎಂದು ಕರೆಯುತ್ತಿದ್ದೆವು . 

ನನ್ನ ಜೀವನದಲ್ಲಿ ದೊರೆತ ನಿಸ್ವಾರ್ಥ ನಿರ್ಮಲ ಸ್ನೇಹ ದ  ಕತೆ ಇದು . ( ಕಿರಣ್ ಮದುವೆ ಚಿತ್ರದಲ್ಲಿ ಮಮತಾ ದಂಪತಿಗಳು ,ಸಂದೇಶ್ ,ಪ್ರೇಮಾ ಆಂಟಿ ಮತ್ತು ಶ್ರೀ ನಾಗರಾಜಪ್ಪ )

                    




ಪ್ರಾತಃ ಸ್ಮರಣೀಯರು

TS Venkannaiah - Wikipediaತ. ಸು ಶಾಮರಾಯ | ಸಂಸ್ಕೃತಿ ಸಲ್ಲಾಪ 

                      



 

 ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ

ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ.


ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ,

ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತ ಕೃತ್ಯನಂ

ಧನ್ಯನಂ ಮಾಡಿ. ನೀಮುದಯರವಿಗೈತಂದು

ಕೇಳಲೆಳಸಿದಿರಂದು. ಕಿರುಗವನಗಳನೋದಿ

ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ 

------

ಇದು ಕುವೆಂಪು ತಮ್ಮಮೆಚ್ಚಿನ  ಗುರು ವೆಂಕಣ್ಣಯ್ಯ ಅವರಿಗೆ ರಾಮಾಯಣ ದರ್ಶನಂ ಕೃತಿ ಅರ್ಪಣೆ ಮಾಡಿದ ಸಾಲುಗಳಿಂದ . ವೆಂಕಣ್ಣಯ್ಯ ಅವರ ತಮ್ಮ ತ ಸು ಶಾಮರಾಯ ಕುವೆಂಪು ಅವರ ಶಿಷ್ಯ .ಅವರು ತಮ್ಮ ಕುಟುಂಬದ ಬಗ್ಗೆ ರಚಿಸಿದ "ಮೂರು ತಲೆಮಾರು "ಪ್ರಸಿದ್ಧ ಕೃತಿ . ವೆಂಕಣ್ಣಯ್ಯ ಮತ್ತು ಶಾಮರಾಯ ವಿದ್ಯಾರ್ಥಿಗಳಿಗೆ ಒಳ್ಳೆಯ ಗುರುಗಳು ಮಾತ್ರವಲ್ಲದೆ ಹಸಿದವರಿಗೆ ಅನ್ನವಿಟ್ಟವರು . ಇವರ ಮನೆಯಲ್ಲಿ ವಾರಾನ್ನ ಉಂಡು ಓದಿದವರು ಅನೇಕರು . 

ಮೂರು ತಲೆಮಾರು ಕೃತಿಯಲ್ಲಿ ಒಂದು ಪ್ರಸಂಗ ನೆನಪಿಸಿಕೊಳ್ಳುತ್ತಾರೆ .ವೆಂಕಣ್ಣಯ್ಯ ಬೆಂಗಳೂರಿನಲ್ಲಿ ಅಧ್ಯಾಪನ ಮಾಡಿಕೊಂಡಿದ್ದ ದಿನಗಳು . ದಿನಸಿ ಅಂಗಡಿಯಲ್ಲಿ ಯಾವಾಗಲೂ ಸಾಲ ಇರುತ್ತಿತ್ತು . ಒಂದು ಬಾರಿ ಅದನ್ನು ತೀರಿಸಲು ಚಾಮರಾಜಪೇಟೆಯ ಬ್ಯಾಂಕ್ ಒಂದರಿಂದ ಮುನ್ನೂರು ರೂಪಾಯಿ ಸಾಲ ತೆಗೆದು ಕೊಂಡು ವೆಂಕಣ್ಣಯ್ಯ ಮನೆಗೆ ಬರುತ್ತಾರೆ . ದಾರಿಯಲ್ಲಿ ಸಿಕ್ಕಿದ ವಿ ಸೀತಾರಾಮಯ್ಯ ಕೂಡಾ ಜತೆಯಲ್ಲಿ ಇರುತ್ತಾರೆ .ಮನೆಯ ಗೇಟ್ ಹೊಕ್ಕೊಡನೆ ಒಬ್ಬ ವ್ಯಕ್ತಿ ಓಡೋಡಿ ಬಂದು ವೆಂಕಣ್ಣಯ್ಯ ಇದ್ದಾರೇನ್ರಿ ಎಂದು ಕೇಳುತ್ತಾನೆ . ನಾನೇ ಎನ್ನುತ್ತಾರೆ ಇವರು .'ನಿಮ್ಮ ಜತೆ ಸ್ವಲ್ಪ ಪ್ರತ್ಯೇಕವಾಗಿ ಮಾತನಾಡಬೇಕಿತ್ತು' ಎನ್ನುತ್ತ್ತಾರೆ ಬಂದವರು . 'ಪರವಾಗಿಲ್ಲ  ,ಇಲ್ಲೇ ಹೇಳಿ ಇವರು ನಮ್ಮವರೇ ಎಂದು ವಿ ಸೀ ಬಗ್ಗೆ ಹೇಳುತ್ತಾರೆ .ಬಂದವರು ತಮ್ಮ ತಾಯಿ ತೀರಿಕೊಂಡಿರುವರು ,ಅಂತ್ಯ ಕ್ರಿಯೆಗೆ ಹಣವಿಲ್ಲ ,ನಿಮ್ಮಲ್ಲಿ ಕೇಳಿದರೆ ಸಿಗಬಹುದು ಎಂದರು . ವೆಂಕಣ್ಣಯ್ಯ ಅಯ್ಯೋ ಪಾಪ ಎಷ್ಟು  ದುಡ್ಡು ಬೇಕಾದೀತು ಎಂದು ವಿಚಾರಿಸುತ್ತಾರೆ . ಒಂದು ಇನ್ನೂರೈವತ್ತು ಸಾಕಾದೀತು ಎನ್ನುವರು .ವೆಂಕಣ್ಣಯ್ಯ ತಾವು ಸಾಲ ಮಾಡಿ ತಂದ ಮುನ್ನೂರು ರೂಪಾಯಿ ಕವರ್ ಆತನ ಕೈಗೆ ಇಟ್ಟು' ಎಲ್ಲಿ ಸಾಲುತ್ತದಪ್ಪಾ ಇದನ್ನು ಇಟ್ಟು ಕೊಳ್ಳಿರಿ ,ಕಾರ್ಯಕ್ರಮ ಸಾಂಗವಾಗಿ ನೆರವೇರಿಸಿ .ಸಾವಕಾಶವಾಗಿ ಬನ್ನಿ .ದುಡ್ಡು ಎಲ್ಲಿಗೂ ಹೋಗುವುದಿಲ್ಲ 'ಎಂದರಂತೆ .ಅದನ್ನು ನೋಡಿ ವಿ ಸೀ ಸಾಲವಾಗಿ ತಂದ ಹಣವನ್ನು ಈ ರೀತಿ ಕೊಟ್ಟುದನ್ನು ನೋಡಿ ಮೈ ಉರಿದು ಹೋಯಿತು ಎಂದರಂತೆ . 

ತ ಸು ಶಾಮರಾಯರು ಜಿ ಎಸ ಶಿವರುದ್ರಪ್ಪ ಅವರ ಗುರುಗಳು .ತಾವು ಬರೆದ ಕವನಗಳನ್ನು ಜಿ ಎಸ್ ಎಸ್ ಗುರುಗಳಿಗೆ ಓದಿ ಹೇಳುತ್ತಿದ್ದರಂತೆ . ಅವನನ್ನು ಉದ್ದೇಶಿಸಿ ಬರೆದ ಗೀತೆಯೇ ಪ್ರಸಿದ್ದವಾದ "ಎದೆ ತುಂಬಿ ಹಾಡಿದೆನು "ಎಂದು ಪ್ರತೀತಿ .. https://youtu.be/RQ9UW0QPviQ

 

ಭಾನುವಾರ, ಅಕ್ಟೋಬರ್ 17, 2021

ಎದುರಿಸಿದ ಕಾರ್ಪಣ್ಯಗಳು

 ಎದುರಿಸಿದ ಕಾರ್ಪಣ್ಯಗಳು 

ವಾಚಕ ಮಹಾಶಯರು ಇವನೇನು ತನ್ನ ಗೋಳನ್ನು ವೈಭವೀಕರಿ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದಾನೆ ಎಂದು ತಿಳಿದು ಕೊಳ್ಳ ಬಾರದು . ನಾವು ವಿದ್ಯಾರ್ಜನೆಗೆ ಪಟ್ಟ ಕಷ್ಟದ ಚಿತ್ರಣ ಕಂಡು ಈಗ ಅಂತಹ ಸ್ಥಿತಿಯಲ್ಲಿ ಇರುವವರು ನನ್ನಂತಹ" ಖ್ಯಾತ " ವೈದ್ಯರೂ ಕೂಡ ಪ್ರತಿಕೂಲ ಪರಿಸ್ಥಿತಿ ಎದುರಿಸಿ ಮುಂದೆ ಬಂದವರು ಎಂಬ ಫಿಲೊಸೊಫಿಕಲ್ ಸಾಂತ್ವನ ಪಡೆದು ಧೈರ್ಯಶಾಲಿಗಳಾಗಲಿ ಎಂಬ ಉದ್ದೇಶ . 

ನನಗೆ ಮೆಡಿಕಲ್ ಸೀಟ್ ಸಿಕ್ಕಿದ ಸಮಯ ಅಡಿಕೆ ಬೆಲೆ ನೆಲ ಕಚ್ಚಿತ್ತು ,ಇದ್ದ ಅಡಿಕೆಯೂ ಕೊಳೆ ರೋಗದಿಂದ ಉದುರಿತ್ತು . ತೋಟದಲ್ಲಿ ಎಲ್ಲೆಲ್ಲೂ ಉರುವೆ ನಾನಿಲ್ಲಿರುವೆ ಎಂದು ಅಣಕಿಸುತ್ತಿತ್ತು . ಅದೇ ಸಮಯ ವಾರಣಾಶಿ ಸುಬ್ರಾಯ ಭಟ್ ಕ್ಯಾಮ್ಕೋ  ಸಂಸ್ಥೆ ಸ್ಥಾಪಿಸಿದರು ಎಂದು ನೆನಪು . ನಮ್ಮ ಮನೆಯಲ್ಲಿ ಸಂಬಳ ಬರುವವರು ಯಾರೂ ಇರಲಿಲ್ಲ . ತಂದೆ ಹತಾಶರಾಗಿ ಒಡಿಯೂರು ಭೀಮ ಭಟ್ಟರ ಮನೆಯಿಂದ ಕೊಕ್ಕೋ ತಂದು ನೆಟ್ಟರು .ಪ್ರಗತಿ ಪರ ಕೃಷಿಕರಾದ ಭೀಮ ಭಟ್ಟರು ಈ ಕೃಷಿಯಲ್ಲಿ ಯಶಸ್ಸು ಕಂಡಿದ್ದರು . ಕೊಕ್ಕೋ ನೆಡುವಾಗ ಮುಂದೆ ನಮ್ಮ ಕಷ್ಟಗಳು ಎಲ್ಲಾ ಪರಿಹಾರ ಮಾಡಿ ಕಾಪಾಡುವುದು ಎಂಬ ಕನಸು ಕಂಡರು .ಇಲ್ಲಿ ಒಂದು ವಿಷಯ ಹೇಳ ಬೇಕು ,ನಮ್ಮಂತಹವರಲ್ಲಿ ಒಳ್ಳೆಯ ಬೆಳೆ ,ಒಳ್ಳೆಯ ದರ ಇದ್ದಾಗ ಹಣ ಉಳಿಸಿ ಬ್ಯಾಂಕ್ ನಲ್ಲಿ ಯೋ ,ಫೈನಾನ್ಸ್ ಕಂಪನಿ ಯಲ್ಲೋ ಇಡುವ ಯೋಚನೆ ಇನ್ನೂ ಇದ್ದಿಲ್ಲ .ಇರಬೇಕಿತ್ತು ಎಂದು ನಾನು ಹೇಳುವುದೂ ಇಲ್ಲ .ಕೈಯಲ್ಲಿ ಸ್ವಲ್ಪ ಹಣ ಓಡಾಡಿದರೆ ಸತ್ಯ ನಾರಾಯಣ ಪೂಜೆ ,ತ್ರಿಕಾಲ ಪೂಜೆ ಇತ್ಯಾದಿ ಗೌಜಿಯಾಗಿ ಮಾಡಿ ಹುಡಿ ಹಾರಿಸುವುದು ಸಾಮಾನ್ಯ ಆಗಿತ್ತು . 

ತಂದೆ ನೆಟ್ಟ ಕೊಕ್ಕೋ ಪಸಲು ಕೊಡುವಾಗ ಅದರ ಬೆಲೆ ಕೂಡಾ ಪಾತಾಳ ತಲುಪಿತ್ತು .ಅದನ್ನು ಬೆಳೆಸಲು ಪ್ರೋತ್ಸಾಹಿಸಿದ ಖಾಸಗಿ ಕಂಪನಿಯ ಆಟ ಎಂದು ಜನರು ಅಡಿ ಕೊಂಡರು .ಮುಂದೆ ಸುಬ್ರಾಯ ಭಟ್ ಚಾಕಲೇಟ್ ಫ್ಯಾಕ್ಟರಿ ಆರಂಭಿಸಲು ಕಾರಣ ಆಯಿತು .ಸುಬ್ರಾಯ ಭಟ್ ಅವರನ್ನು ಎಷ್ಟು ನೆನೆಸಿ ಕೊಂಡರೂ ಕಡಿಮೆ . ನಮ್ಮ ತಂದೆ ಯವರು ಕೊಕ್ಕೋ ಗಿಡಗಳನ್ನು ಕಡಿದು ಎಸೆದರು ,ಅವು ಅಡಿಕೆ ಮರದ ಸಾರ ಹೀರುವವವು ,ರೇಟೂ ಇಲ್ಲ ಎಂದು . ಅಡಿಕೆ ಬೆಳೆಗಾರರು ಮಂಗಳೂರಿನ ಬಂಡಸಾಲೆ ಗೆ ಅಡಿಕೆ ಹಾಕುತ್ತಿದ್ದರಷ್ಟೇ ,ಹಣಕ್ಕೆ ಕೈ ಕಟ್ಟಿದಾಗ ಅವರಿಂದ ಅಡ್ವಾನ್ಸ್ ತೆಗೆದು ಕೊಳ್ಳುತ್ತಿದ್ದರು . ನಮಗೆ ಒತ್ತಾಸೆ ಆದಾಗ ಅವರೂ ಕೈ ತೊಳೆದು ಕೊಂಡು ಬಿಟ್ಟರು . 

         ನನಗೆ ಹಾಸ್ಟೆಲ್ ಫೀಸ್ ಇತ್ಯಾದಿ ಖರ್ಚಿಗೆ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ ದ  ಸ್ಟೂಡೆಂಟ್ ಲೋನ್ ಗೆ ಅರ್ಜಿ ಹಾಕಿದೆನು .ಆಗ ಶ್ರೀ  ಜನಾರ್ಧನ ಪೂಜಾರಿ ಅವರ ಕೃಪೆಯಿಂದ  ಎಂದು ಕಾಣುತ್ತದೆ ,ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಶೇಕಡಾ ೪ ರಂತೆ ಸಾಲ ಕೊಡುತ್ತಿದ್ದರು . ಹುಬ್ಬಳ್ಳಿ  ಎಸ ಬಿ ಐ ಯಲ್ಲಿ ಅರ್ಜಿ ಹಾಕಿದೆ ,ಅದಕ್ಕೆ ಬೇಕಾದ ಜಾಮೀನು ಎಲ್ಲ ಹೊಂದಿಸಿ .ಲೋನ್ ಸ್ಯಾಂಕ್ಷನ್ ಆಗಿ ಬಂತು .ಆದರೆ ಅಲ್ಲಿ ಲಕ್ಷ್ಮೀಶ್ವರ ಎಂಬ ಲೋನ್ ಕ್ಲರ್ಕ್ ಇದ್ದರು; ಇಂದು ಬಾ ನಾಳೆ ಬಾ ಎಂದು ಸತಾಯಿಸ ತೊಡಗಿದರು . ನಾನು ಊಟದ ಬಿಡುವಿನಲ್ಲಿ ದೂರದಲ್ಲಿ ಇದ್ದ ಬ್ಯಾಂಕ್ ಶಾಖೆಗೆ ಹೋಗುವುದು ,ಪೆಚ್ಚು ಮೋರೆ ಹಾಕಿಕೊಂಡು ಬರುವಾಗ ಊಟ ಖಾಲಿ . ಒಂದು ದಿನ ತಡೆಯಲಾರದೆ ಸೀದಾ ಮ್ಯಾನೇಜರ್ ರೂಮಿಗೆ ನುಗ್ಗಿದೆ .ನನ್ನ ಪುಣ್ಯಕ್ಕೆ ಅದೇ ದಿನ ಪರಿಶೀಲನೆಗೆ ಮೇಲಧಿಕಾರಿಗಳು ಬಂದಿದ್ದು ಅವರೆದುರು ನನ್ನೆಲ್ಲಾ ಕೋಪ ತಾಪ ಸಂಕಟಗಳನ್ನು ಕಕ್ಕಿದೆ . ಎಲ್ಲರೂ ನನ್ನನ್ನು ಸಮಾಧಾನ ಮಾಡಿ ಅಂದೇ ಹಣ ಸಿಗುವಂತೆ ಮಾಡಿದರು ..ನನ್ನಿಂದ ಲಂಚ ನಿರೀಕ್ಷಿಸುತ್ತಿದ್ದ ಕ್ಲಾರ್ಕ್ ಕೂಡಾ ಅಂದಿನಿಂದ ಯಾವುದೇ ತೊಂದರೆ ಕೊಡಲಿಲ್ಲ .ಅಲ್ಲಿ ಮ್ಯಾನೇಜರ್ ಆಗಿದ್ದ ಚೆರಿಯನ್ ಎಂಬುವರ ಮಗಳು ನಮ್ಮ ಕಾಲೇಜು ನಲ್ಲಿ ನನ್ನ ಜೂನಿಯರ್ ಆಗಿದ್ದ ವಿಚಾರ ಆಮೇಲೆ ತಿಳಿಯಿತು . ನನ್ನ ಸಂಪೂರ್ಣ ಸಾಲವನ್ನು ಬಡ್ಡಿ ಸಮೇತ ಎಂ ಬಿ ಬಿ ಎಸ್ ತೇರ್ಗಡೆ ಆದ ಒಂದು ವರ್ಷದಲ್ಲಿ ಕಟ್ಟಿದೆನು . 

ಓದುಗರೇ ಈ ಅವಧಿಯಲ್ಲಿ ಬ್ಯಾಂಕ್ ಗಳು ಯಾವುದೇ ಸಾಲ ನೀಡಲು ನಿರ್ಬಂಧ ಇತ್ತು . ಚಿನ್ನ ಅಡಮಾನ ಸಾಲ ಮಾತ್ರ ಕಷ್ಟದಲ್ಲಿ ಸಿಗುತ್ತಿದ್ದು  ತಾಯಿಯವರ ಚೈನ್ ವಿಟ್ಲ ವಿಜಯಾ ಬ್ಯಾಂಕ್ ನಲ್ಲಿ ಇಟ್ಟು ಸಾಲ ತೆಗೆದು ಕೊಂಡರು ;ಮನೆಯಲ್ಲಿ ಒಳ್ಳೆಯ ಹಾಲು ಕೊಡುತ್ತಿದ್ದ ಮುರ ಎಮ್ಮೆ ಇತ್ತು ;ತಂದೆ ನಮ್ಮ ವಿದ್ಯಾಭ್ಯಾಸ ಕ್ಕೆ ಹಣ ಜೋಡಿಸಲು ಒಲ್ಲದ ಮನಸಿನಲ್ಲಿ ಅದನ್ನು ಮಾರಿದರು . ತಾಯಿಯವರು ಅದರ ಹಾಲಿನಿಂದ ತುಪ್ಪ ಮಾಡಿ ಪೇಟೆಯಲ್ಲಿ ಮಾರಲು ನನ್ನ ಅಣ್ಣನವರಲ್ಲಿ ಕೊಡುತ್ತಿದ್ದರು .ಜತೆಗೆ ತಮ್ಮ ಹಲಸಿನ ಬೇಳೆ ,ಗೇರು ಬೀಜ ,ಉರುವೆ ಅಡಿಕೆ ಇತ್ಯಾದಿ ಬಾರ್ಟರ್ ಇಲ್ಲವೇ ಮಾರಾಟ ಮಾಡಿ ಅಲ್ಪ ಸ್ವಲ್ಪ ಹಣ ಕೂಡಿಸುತ್ತಿದ್ದರು .ನಾನು ಹಿಂದೆ ನಮ್ಮ ಅಮ್ಮ ನಮ್ಮನ್ನು  ಶಿಕ್ಷಿಸುತ್ತಿದ್ದ ಬಗ್ಗೆ ಬರೆದಿದ್ದೆ ;ನಮ್ಮ ರಕ್ಷೆಗೆ ಅವರು ಪಟ್ಟ ಪಾಡು ನೆನಪಾಗುತ್ತದೆ . 

ಒಮ್ಮೊಮ್ಮೆ ಹಣ ಇದ್ದಾಗ ಬ್ಯಾಂಕ್ ಎಂ ಟಿ ಮೂಲಕ ಹಣ ಕಳುಹಿಸುತ್ತಿದ್ದರು .ಮೆಸ್ಸ್ ಬಿಲ್ ಕಟ್ಟುವ ದಿನ ಬಂದಾಗ ನಾವು ಪಾಸ್ ಬುಕ್  ತೆಗೆದು ಕೊಂಡು ಬ್ಯಾಂಕ್ ಗೆ ಹೋಗಿ ಹಣ ಬಂತೋ ಹಣ ಬಂತೋ ಎಂದು ಕೇಳುವುದು ,ಅವರು ಕನಿಕರದಿಂದ ಇಲ್ಲ ಎಂದು ಹೇಳುವುದು ಸಾಮಾನ್ಯ ಆಗಿತ್ತು ..ನಮಗೆ ಬರುತ್ತಿದ್ದ ಸ್ಕಾಲರ್ಶಿಪ್ ಹಣ ವರ್ಷಾಂತ್ಯ ದಲ್ಲಿ ಬರುತ್ತಿದ್ದು ಮುಂದಿನ ವರ್ಷಕ್ಕೆ ಸಹಾಯ ಆಗುತ್ತಿತ್ತು . ಅಂತೂ ಇಂತೂ ಎಂ ಬಿ ಬಿ ಎಸ ಮುಗಿಸಿದೆ .

ಬಾಲಂಗೋಚಿ : ಬಡತನ ಬೇಕು ಜೀವನ ಅರಿಯಲು .ಆದರೆ ನಿಮ್ಮಲ್ಲಿ ಲಕ್ಷ್ಮಿ  ಸ್ವಲ್ಪವೂ ಇಲ್ಲದಿದ್ದರೆ ಯಾರಿಗೂ ನೀವು ಬೇಡ ; ಸಂಬಂಧಿಕರು ಮಿತ್ರರು ನಿಮ್ಮನ್ನು ಕಡೆಗಣಿಸುವರು .

ಶನಿವಾರ, ಅಕ್ಟೋಬರ್ 16, 2021

ಒಂದು ಜಿಜ್ನಾಸೆ

              ಒಂದು ಜಿಜ್ನಾಸೆ 

ದಿನಗಳ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ವಿಡಿಯೋ ತುಣುಕು ಮೆಚ್ಚಿ ನಿಮ್ಮೊಡನೆ ಹಂಚಿ ಕೊಂಡಿದ್ದೆ . ಅದರಲ್ಲಿ ಸ್ಪರ್ಧಿ ಒಬ್ಬರು" ತಾವು ಆರ್ಥಿಕ ಬಡತನದಲ್ಲಿ ಇದ್ದರೂ ಸಂತೋಷವಾಗಿ ಇದ್ದೆವು ;ತನ್ನ ಅಣ್ಣ ಸಿಗುತ್ತಿದ್ದ ಅಲ್ಪ ಸಂಬಳದಲ್ಲಿ ನನ್ನ ಪ್ರಾಥಮಿಕೋತ್ತರ  ಅಧ್ಯಯನ ಸಾಂಗವಾಗಿ ನಡೆಯುವಂತೆ ನೋಡಿಕೊಂಡನು "ಎನ್ನುತ್ತಾರೆ .ಅಮಿತಾಭ್ ಬಚ್ಚನ್  ಪ್ರೇಕ್ಷಕರ ನಡುವೆ ಇದ್ದ ಅಣ್ಣನ ಕಡೆಗೆ ನೋಡಿ ಹೌದೇ ಎಂದು ಸಂತೋಷದಿಂದ ಕೇಳುತ್ತಾರೆ .ಅದಕ್ಕೆ ಅಣ್ಣ 'ಹೌದು ಸಾರ್ ಬಡತನ ನಮ್ಮನ್ನು ಏನಾದರೂ ಒಳ್ಳೆಯದನ್ನು ಮಾಡುವಂತೆ ಪ್ರೇರೇಪಿಸುತ್ತದೆ ಎನ್ನುತ್ತಾರೆ . 

         ನಾನು ಹಿಂದೆ ತಿಳಿಸಿದಂತೆ ನಮ್ಮ ಹೆತ್ತವರಿಗೆ ನಾವು ಹತ್ತು ಮಕ್ಕಳು . ಎಲ್ಲರೂ ವಿದ್ಯಾಭ್ಯಾಸದ ಒಂದೊಂದು ಹಂತದಲ್ಲಿ ಇದ್ದೆವು . ಕಷ್ಟ ಕಾಲ ಬಂತು  . ನನ್ನ ದೊಡ್ಡ ಅಣ್ಣ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿ ಎಚ್ ಡಿ ಮಾಡುತ್ತಿದ್ದವನು ಅದನ್ನು ಮೊಟಕು ಗೊಳಿಸಿ ಸಾಮಾನ್ಯ ಸಂಬಳದ ಕೆಲಸಕ್ಕೆ ಸೇರಿದನು .ಎರಡನೇ ಅಣ್ಣ ನಮ್ಮ ಪೈಕಿ ಬಹಳ ಪ್ರತಿಭಾಶಾಲಿ ಯನ್ ಐ ಟಿ ಕೆ ಯಲ್ಲಿ   ರಾಂಕ್ ಸಹಿತ ಬಿ ಈ ಮಾಡಿ ಮದ್ರಾಸ್ ಐ ಐ ಟಿ ಯಲ್ಲಿ ಎಂ ಟೆಕ್ ಮಾಡುತ್ತಿದ್ದವನು ಒಂದೇ ವರ್ಷದಲ್ಲಿ ಮೊಟಕು ಗೊಳಿಸಿ ಆಗ ತಾನೇ ಆರಂಭವಾದ  ಎಂ ಸಿ ಎಫ್ ಗೆ ಸೇರಿ ಕೊಂಡ .ನನ್ನ ಪಿ ಯುಸಿ ಮತ್ತು ಮುಂದೆ ಮೊನ್ನೆ ಮೊನ್ನೆಯ ವರೆಗೆ ನನಗೆ ಆರ್ಥಿಕ ಸಹಾಯ ಮಾಡುತ್ತಿದ್ದ .ನನಗೆ ಎಂ ಬಿ ಬಿ ಎಸ ಅಡ್ಮಿಶನ್ ಸಿಕ್ಕಾಗ ದೊಡ್ಡಣ್ಣ ತಾನು ಸ್ವಯಂ  ಅನುಕೂಲದಲ್ಲಿ ಇಲ್ಲದಿದ್ದರೂ ಆಗಿನ ಕಾಲಕ್ಕೆ ದೊಡ್ಡದಾದ ಅಡ್ಮಿಶನ್ ಫೀಸ್ ರೂಪಾಯಿ ೩೩೦  ಕೂಡಿಸಿ ಕೊಟ್ಟ . ತಮ್ಮ  ಉಶಾರಿ ಎಂಬ ಅಭಿಮಾನ .  ತಾಯಿಯಂತೆ ಇರುವ ನಮ್ಮ ಅತ್ತಿಗೆಯವರು ನಮಗೇ  ತತ್ವಾರ ಇರುವಾಗ ಈ ಉಸಾಬರಿ ಏಕೆ ಎಂದು ಕೇಳದೆ ಸಂತೋಷ ಪಟ್ಟು ಕೊಡುವಂತೆ ಹೇಳಿದರು . ನಮ್ಮ ಸಮೀಪದ ಹಣವಂತ ಬಂಧುಗಳು ಸಹಾಯಕ್ಕೆ ಬರಲಿಲ್ಲ . ಮುಂದೆ ನಾನು ಡಾಕ್ಟರ್ ಆಗಿ ಹಣ ಸಂಪಾದನೆ ಮಾಡದಿದ್ದರೂ ಕಷ್ಟದಲ್ಲಿ ಇರುವ ಕೆಲವರಿಗೆ ಸಹಾಯ ಮಾಡಿದ ತೃಪ್ತಿ ಇದೆ . 

ನಿನ್ನೆ ಒಂದು ಅಜ್ಜಿ ತಪಾಸಣೆಗೆ ಬಂದಿದ್ದರು . ಸುಂದರಿ ಎಂದು ಹೆಸರು . ತುಂಬಾ ಸ್ಥಿತಿ ವಂತರು ಅಲ್ಲ .ಆದರೆ ಅಜ್ಜಿಯನ್ನು  ಮಗ ಮತ್ತು ಮೊಮ್ಮಗ  ಪ್ರೀತಿಯಿಂದ ಕರೆದು ಕೊಂಡು ಬಂದಿದ್ದರು .ಅಜ್ಜಿ ಅಜ್ಜರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳುವ  ಸ್ಥಿತಿವಂತರು ಮತ್ತು ವಿದ್ಯಾವಂತರು (?)ಈಗ  ಬಹಳ ಕಡಿಮೆ ಆಗಿದ್ದಾರೆ ಎಂದು ಆಸ್ಪತ್ರೆಯ ನನ್ನ ಅನುಭವದಿಂದ ಕಂಡು ಕೊಂಡಿದ್ದೇನೆ . ಈ ಸುಂದರಿ ಅಜ್ಜಿ ನಿಜವಾಗಿಯೂ ಪುಣ್ಯವಂತೆ ಮತ್ತು ಶ್ರೀಮಂತೆ  ಎಂದು ಕೊಂಡೆನು

ಭಾನುವಾರ, ಅಕ್ಟೋಬರ್ 3, 2021

ಪೆನ್ಸಿಲಿನ್ ಎಂಬ ರಾಮ ಬಾಣ

                       ಪೆನ್ಸಿಲಿನ್ ಎಂಬ ರಾಮ ಬಾಣ 

                       

 Penicillin G Potassium, Packaging Type: Bottle, | ID: 18645150530  ಇಂಗ್ಲೆಂಡ್ ದೇಶದ ಅಲೆಕ್ಸಾಂಡರ್ ಫ್ಲೆಮಿಂಗ್ ಎಂಬ ಸೂಕ್ಷ್ಮಾಣು ಶಾಸ್ತ್ರಜ್ಞ ೧೯೨೮ ರಲ್ಲಿ ಎರಡು ವಾರ ರಜೆಯ ನಂತರ ತನ್ನ ಪ್ರಯೋಗಾಲಯ ಕ್ಕೆ  ಬಂದಾಗ ತಾನು  ಬೆಳೆಯ ಹಾಕಿದ್ದ ಬ್ಯಾಕ್ಟೀರಿಯಾ ಬೆಳೆಸುವ ಮಾಧ್ಯಮ ( ಕಲ್ಚರ್ ಮೀಡಿಯಂ )ದಲ್ಲಿ ಫಂಗಸ್ ಬೆಳೆದಿತ್ತು .ನಮ್ಮ ಲ್ಲಿ ಉಪ್ಪಿನಕಾಯಿ ,ಪೆರಟಿ ಇತ್ಯಾದಿಗಳ ಮೇಲೆ ಬೆಳೆಯುವಂತೆ . ಆದರೆ ಈ ಫಂಗಸ್ ಸುತ್ತ ಬ್ಯಾಕ್ಟೀರಿಯಾ ಗಳ  ಸಮ್ರಾಜ್ಯ ವಿಸ್ತಾರ ಕುಂಠಿತ ಗೊಂಡಿತ್ತು . ಕುತೂಹಲದಿಂದ ಅಧ್ಯಯನ ಮಾಡಿ ಆ ಫಂಗಸ್ ನಿಂದಲೇ ಪೆನಿಸಿಲಿನ್ ಎಂಬ ಆಂಟಿಬಯೋಟಿಕ್ ಅಭಿವೃದ್ಧಿ ಪಡಿಸಿ ಚಿಕಿತ್ಸೆಗಾಗಿ ಉಪಯೋಗಿಸ ತೊಡಗಿದರು .. ಎರಡನೇ ಮಹಾ ಯುದ್ಧ ದಲ್ಲಿ  ಲಕ್ಷಾಂತರ ಮಂದಿಯ ಪ್ರಾಣ ಕಾಪಾಡಿತು ಈ ರಾಮಬಾಣ  . 

                    ಗಂಟಲು ನೋವು ,ಟಾನ್ಸಿಲ್ಲೈಟಿಸ್ ,ರುಮ್ಯಾಟಿಕ್ ಜ್ವರ  ,ಕುರು ಇತ್ಯಾದಿ ಉಂಟು ಮಾಡುವ ಸ್ಟೆಪ್ಟೋಕೋಕೈ ಗೆ ಹೇಳಿದ ಔಷಧ . ಸಿಫಿಲಿಸ್ ಎಂಬ ಲೈಂಗಿಕ  ರೋಗಕ್ಕೆ ಹಿಂದೆ ಸರಿಯಾದ ಔಷಧಿ ಇರಲಿಲ್ಲ . ಪಾದರಸ ವನ್ನು ಕೊಡುತ್ತಿದ್ದು ಅದು  ಪೂರ್ಣ ಪರಿಣಾಮ ಕಾರಿಯಾಗಿರಲಿಲ್ಲ ,ಮತ್ತು ಅಡ್ಡ ಪರಿಣಾಮ ಅಧಿಕ . ರತಿಯೊಂದಿಗೆ ಒಂದು ರಾತ್ರಿಗೆ ಜೀವನ ಪರ್ಯಂತ ಪಾದರಸ ಎಂಬ ಗಾದೆ ಇತ್ತು.A night with Venus( ಕಾಮ ದೇವತೆ ಅಥವಾ ಒಂದು ಗ್ರಹ)  and lifelong with Mercury (ಒಂದು ಗ್ರಹ ಅಥವಾ ದ್ರವ ಲೋಹ ). ಪೆನಿಸಿಲಿನ್ ಇಂಜೆಕ್ಷನ್ ನಲ್ಲಿ ಈ ರೋಗ ಪೂರ್ಣ ಗುಣಮುಖವಾಗುವುದು . ಅದೇ ತರಹ ಗೊನೊರಿಯಾ ಎಂಬ ವ್ಯಾಧಿಯೂ . ಸಿಫಿಲಿಸ್ ಉಂಟಮಾಡುವ ರೋಗಾಣುವಿನ ಜಾತಿಗೆ ಸೇರಿದ ಇಲಿ ಜ್ವರ  ರೋಗಾಣುವಿಗೂ ಇದೇ ಔಷದಿ ಬಳಸುವರು . 

ಪೆನಿಸಿಲಿನ್ ಅಗ್ಗ ;ಅಡ್ಡ ಪರಿಣಾಮಗಳು ಕಡಿಮೆ. 0.03%ರಲ್ಲಿ ಮಾತ್ರ ತೀವ್ರ ತರ ಅಲರ್ಜಿ ಇರಬಹುದು (Reaction). ಹಿಂದೆ ಸರಕಾರಿ ಆಸ್ಪತ್ರೆ ಓ ಪಿ ಡಿ  ಯಲ್ಲಿ ಹೆಚ್ಚಿನವರಿಗೆ ಇದನ್ನೇ ಕೊಡುತ್ತಿದ್ದರು .ಬಂದವರಿಗೆಲ್ಲ ಇಂಜೆಕ್ಷನ್ ಪಿ ಪಿ 4 (Procaine Penicillin 4 lakh units) ಕೊಡುವರು .ನಾವು ಮೆಡಿಕಲ್ ಕಾಲೇಜು ನಲ್ಲಿ ಕಲಿಯುವಾಗ ಕೂಡಾ ಹಾಗೆಯೆ . ದಿನಕ್ಕೆ ಇಷ್ಟೆಂದು ಸ್ಟೋರ್ ನಿಂದ ರಿಲೀಸ್ ಮಾಡುವರು .ಫಸ್ಟ್ ಕಮ್ ಫಸ್ಟ್ ಸರ್ವ್ . ಮೊದಲು ಬಂದವರಿಗೆ ಸಿಗುವುದು ,ಆಮೇಲೆ ಬಂದವರಿಗೆ ನಿರಾಸೆ . ಪೆನಿಸಿಲಿನ್ ಪೌಡರ್ ಗೆ ನೀರು ಹಾಕಿ ಕರಗಿಸಿ ಕೊಡ ಬೇಕು .ಕೆಲವೊಮ್ಮೆ ಸಿರಿಂಜ್ ಬ್ಲಾಕ್ ಆಗಿ ನಮ್ಮ ಮುಖ ಮತ್ತು ಅಂಗಿಗೆ ಸಿಡಿಯುವುದು . 

ಇತ್ತೀಚಿಗೆ  ರಿಯಾಕ್ಷನ್ ನ ಉಸಾಬರಿ ಬೇಡ ಎಂದು ಮತ್ತು ಏಡ್ಸ್ ಬಂದ ಮೇಲೆ ಇಂಜೆಕ್ಷನ್ ಗಳನ್ನು ಕಡಿಮೆ ಮಾಡಿರುವರು .ಆದರೂ ಇಂದಿಗೂ ತನ್ನ ರೋಗಾಣು ದಮನ ಶಕ್ತಿಯನ್ನು ಉಳಿಸಿ ಕೊಂಡಿರುವ  ಆಂಟಿ ಬಯೋಟಿಕ್ ಪೆನಿಸಿಲಿನ್ . 

ಬಾಲಂಗೋಚಿ : ಪೆನಿಸಿಲಿನ್ ಇಂಜೆಕ್ಷನ್ ರಸಿಕರ ರಾಜ ಆಗಿತ್ತು . ಹೊರಗಿನ ಸಂತೋಷಕ್ಕೆ ಹೋಗುವವರು ಮತ್ತು ಹೋಗಿ ಬಂದವರು ರಕ್ಷಣೆಗೆ ಇದನ್ನು ಕೊಡಿ ಎಂದು ವೈದ್ಯರಲ್ಲಿಗೆ ಬರುತ್ತಿದ್ದರು ,

ಶನಿವಾರ, ಅಕ್ಟೋಬರ್ 2, 2021

ನಮ್ಮ ನಳ ಮಹಾರಾಜರು

 

 ನಮ್ಮ  ನಳ ಮಹಾರಾಜರು 

ಹಿಂದೆ ನಮ್ಮಲ್ಲಿ ಯಾವುದೇ ಮಂಗಳ ಕಾರ್ಯ ,ಧಾರ್ಮಿಕ ಕಾರ್ಯಕ್ರಮ ಇದ್ದರೂ ಇಬ್ಬರು ಮುಖ್ಯ .ಒಂದು ಪೂಜೆ ಭಟ್ಟರು ಅಥವಾ ಪುರೋಹಿತರು ,ಇನ್ನೊಂದು ಅಡುಗೆ ಭಟ್ಟರು . ಅದರಲ್ಲಿ ಎರಡೆನೇ ವರ್ಗಕ್ಕೆ ಅದಕ್ಕೆ ಸಿಗ ಬೇಕಾದ ಮನ್ನಣೆ ದೊರೆತಿಲ್ಲ ಎಂಬುದು ನನ್ನ ಭಾವನೆ . 

ನಮ್ಮ ಮನೆಗೆ ವಿಟ್ಲ ದಿಂದ ಸುಬ್ರಾಯ ನಾವಡ (ಸುಬ್ರಾಯಣ್ಣ )ಮತ್ತು ಅವರ ಮಗ ವಾಸುದೇವ ನಾವಡ (ವಾಸು ಅಣ್ಣ )ಪಾಜಕ ಕ್ಕೆ  ಬರುತ್ತಿದ್ದವರು . ಕಾಶೀಮಠ ದಲ್ಲಿ ಅವರ ಮನೆ ,ಅಲ್ಲಿಗೆ ಹೋಗಿ ಆಮಂತ್ರಣ ನೀಡುವುದು .ಸಾಮನ್ಯವಾಗಿ ಸ್ವೀಟ್ ಏನು ಎಂಬುದನ್ನು ಮೊದಲೇ ಕೇಳಿ ತಿಳಿದು ಕೊಳ್ಳುವರು . 

ಕಾರ್ಯಕ್ರಮದ ಮುನ್ನಾ ದಿನ ಸಂಜೆ ಅವರು ಮತ್ತು ಅವರ ತಂಡ ಹಾಜರು .ಅವರ ಹೆಗಲ ಜೋಳಿಗೆಯಲ್ಲಿ ಹೋಳಿಗೆ ಕೋಲು ಅಥವಾ ಲಡ್ಡು ಮಾಡಲು ಕಡಲೇ ಬೇಳೆ ಬೂಂದಿ ಜಾಲರಿ ತಲೆ ಹೊರ ಹಾಕಿರುವುದು . ವಾಸು ,ಸುಬ್ರಾಯಣ್ಣ ಅವರ ಮನೆ ಮಾತು ಕೋಟ ಆದರೂ ಅಸ್ಖಲಿತ ಹವ್ಯಕ ಭಾಷೆ ಮಾತನಾಡುವರು .ಅವರ ಜತೆ ಅವರ ತಂಡವೂ ಬೇರೆ ಬೇರೆ ಕಡೆಯಿಂದ ಬಂದು ಸೇರಿ ಕೊಳ್ಳುವುದು ..ದೂರ ವಾಣಿ ಇಲ್ಲದ ಈ ಕಾಲದಲ್ಲಿ ಹೇಗೆ ಇವರನ್ನು ಒಗ್ಗೂಡಿಸುತ್ತಿದ್ದರು ಎಂಬ ಸೋಜಿಗ ಇದೆ . 

            ಮನೆಗೆ ಬಂದವರೇ ಉಭಯ ಕುಶಲೋಪರಿ ಆದ ಮೇಲೆ ವಿಶೇಷ ಅಡಿಗೆ ಕೊಟ್ಟಿಗೆ ಯ ಚಾರ್ಜ್ ತೆಗೆದುಕೊಳ್ಳುವರು . ಪೆಟ್ರೋಮ್ಯಾಕ್ಸ್ ಬೆಳಕು ,ಹೊಗೆ ಉಗುಳುವ ಕಟ್ಟಿಗೆ ಒಲೆ .ಬಾವಿಯಿಂದ ನೀರು ಸೇದಿ ತರುವದು .ಅರೆಯುವ ಕಾರ್ಯ ಕಲ್ಲಿನಲ್ಲಿ .ಇದನ್ನೆಲ್ಲಾ ನೆನಪಿಸಲು ಕಾರಣ ಈಗಿನ ಅಡುಗೆ ಮನೆಯೊಡನೆ ಹೋಲಿಸಲು .. ಊರ ಸುದ್ದಿ ಮಾತನಾಡುತ್ತಾ ಅಡುಗೆ ಕಾರ್ಯ ಮಾಡುವರು .ಚಿನ್ನದ ಬಣ್ಣದ ಹೋಳಿಗೆ ಹೂರಣ ಮೈದಾ ಹಿಟ್ಟಿನ ಒಳಗೆ ಸೇರಿಸಿ ,ಲಟ್ಟಿಸಿ ,ಬೇಯುಸುತ್ತಿದ್ದುದನ್ನು ನಾವು ಬೆರಗು ಮತ್ತು ಆಸೆಯಿಂದ ನೋಡುತ್ತಿದ್ದೆವು . ಹೋಳಿಗೆಗಳು ಮಾಂತ್ರಿಕ ಕೈಗಳಿಂದ ಕೆರಶಿ (ತಡ್ಪೆ)ಯಲ್ಲಿ ಪವಡಿಸಲ್ಪಡುತ್ತಿದ್ದವು . ಕಾರ್ಯಕ್ರಮ ಆಗುವ ವರೆಗೆ ತಿನ್ನುವಂತಿಲ್ಲ . 

ಮುಂಜಾನೆ ತಿಂಡಿ ಅವಲಕ್ಕಿ ಸಜ್ಜಿಗೆ .ಈಗಿನ ಹಾಗೆ ಇಡ್ಲಿ ದೋಸೆ ಇತ್ಯಾದಿ ಮಾಡುವ ಕ್ರಮ ಇರಲಿಲ್ಲ . ಅಡುಗೆಯವರು ಮಾಡುವ ಅವಲಕ್ಕಿ ಸಜ್ಜಿಗೆಗೆ ವಿಶೇಷ ರುಚಿ . 

ಅಡುಗೆ ಮನೆಯ ದೃಶ್ಯ ;ಮುಖ್ಯ ಅಡುಗೆಯವರು ಆರ್ಕೆಸ್ಟ್ರ ದ ಬ್ಯಾಂಡ್ ಮಾಸ್ಟೆರ್ . ಮಿಕ್ಕವರು ಮುಖ್ಯ ಮತ್ತು ಪಕ್ಕ ವಾದ್ಯದವರು ,ಒಂದು ಕಡೆ ಅರೆತ ,ಇನ್ನೊಂದು ಕಡೆ ಕೊರೆತ  ,ಮತ್ತೊಂದು ಕಡೆ ಕಾಯಿ ಕೆರೆತ ,ಪಾತ್ರೆ  ಕೊಪ್ಪರಿಗೆಯಲ್ಲಿ ನೀರು ಕೊತ ಕೊತ . ಮದುವೆಯಂತ ದೊಡ್ಡ ಸಮಾರಂಭ ದಲ್ಲಿ ಅವರ ಕಣ್ಣು ಸೇರುತ್ತಿರುವ ಜನ ಸಂಖ್ಯೆಯ ಮೇಲೆ ಒಂದೆಡೆ ಯಾದರೆ ,ಕಾರ್ಯಕ್ರಮ ಯಾವ ಘಟ್ಟಕ್ಕೆ ಬಂದಿದೆ ಎಂಬುದು ಇನ್ನೊಂದು ಕಡೆ ,. ನಿರೀಕ್ಷೆಗಿಂತ ಹೆಚ್ಚು ಅತಿಥಿಗಳು ಬಂದರೆ ಸುಧಾರಿಸುವರು ,ಮನೆಯವನ ಮರ್ಯಾದೆ ಉಳಿಸುವರು ,ಡೈನಮಿಕ್ ಮ್ಯಾನೇಜ್ಮೆಂಟ್ .ಹಲವು ಓಲೆಗಳ ಮೇಲೆ ತರತರ ವ್ಯಂಜನ ಗಳು ಬೇರೆ ಬೇರೆ ಹಂತಗಳಲ್ಲಿ ಇರುವುದನ್ನು ಮಾನಿಟರ್ ಮಾಡುವುದು ನಮ್ಮ ಐ ಸಿ ಯು ಮಾನಿಟರ್ ಗಿಂತ ಕಷ್ಟ . ಒಂದಕ್ಕೆ ಉಪ್ಪು ,ಇನ್ನೊಂದಕ್ಕೆ ಬೆಲ್ಲ ,ಮತ್ತೊಂದಕ್ಕೆ ಹುಳಿ  ಅಯಾಚಿತವಾಗಿ ಕೈ ಹಾಕಿ ನೆನಪಿಡುವುದು .

ಊಟದ ವೇಳೆ ಬಡಿಸುವವರಿಗೆ ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿ ಕೊಡುವುದು ,ತಾವು ಮಾತ್ರ ಕೊನೇ ಪಂಕ್ತಿಯಲ್ಲಿ ಒಂಡು ,ತಮ್ಮ ಸಂಬಾವನೆ ,ಎರಡು ತೆಂಗಿನ ಕಾಯಿ ಸ್ವೀಕರಿಸಿ ಮುಂದಿನ ಮನೆಗೆ ಬದುಕು ಜಟಕಾ ಬಂಡಿ ಎಂದು ತೆರಳುವ ಬಾಣಸಿಗ ಬಂಧುಗಳ  ,ಆ ದಿನಗಳಲ್ಲಿ ಸೌಕರ್ಯಗಳ  ಕೊರತೆಯಲ್ಲಿಯೂ ಅವರು ಸುಧಾರಿಸುತ್ತಿದ್ದುದು ನೆನಪು ಬರುವುದು .

ಬಾಲಂಗೋಚಿ . ಕಾಂತಡ್ಕದಲ್ಲಿಯೂ ಶ್ರೀ ನರಸಿಂಹ ಭಟ್ (ಹೆಸರು ಬೇರೆ ಇರ ಬಹುದು )ಎಂಬ ಬಾಣಸಿಗರು ಇದ್ದು ಅವರ ಹೋಳಿಗೆ ರುಚಿಗೆ ಪ್ರಸಿದ್ದವಾಗಿತ್ತು ಎಂದು ನೆನಪು .