ಬೆಂಬಲಿಗರು

ಬುಧವಾರ, ಆಗಸ್ಟ್ 16, 2023

ಮುಂಜಾನೆ ಆಸ್ಪತ್ರೆಗೆ ಬರುವಾಗ ದಾರಿ ಬಳಿಯಲ್ಲಿ  ಅಮ್ಮಂದಿರು ,ಯೂನಿಫೋರ್ಮ್ ,ಷೂ ಹಾಕಿದ ಮಕ್ಕಳ ಜತೆ ಶಾಲಾ ಬಸ್ಸಿಗೆ ಕಾತರದಿಂದ ಕಾಯುತ್ತಿರುತ್ತಾರೆ .ಬಸ್ ಬರುವ ವರೆಗೆ ಮಕ್ಕಳಿಗೆ ಹಾಗೆ ಮಾಡು ಹೀಗೆ ಮಾಡು ಎಂದು ಉಪದೇಶ ನಡೆಯುತ್ತಿದ್ದು ಮಕ್ಕಳು ಅದನ್ನು ಲೆಕ್ಕಿಸದೆ ಮಾರ್ಗದಲ್ಲಿ ಹೋಗುವ ವಾಹನಗಳನ್ನು ನೋಡುತ್ತಾ ಇಂದು ಯಾವ ಆಟ ಆಡಬಹುದು ಎಂದು ಆಲೋಚಿಸುತ್ತಾ ಇರುತ್ತಾರೆ .ಸಂಜೆ ಶಾಲೆ ಬಸ್ ವಾಪಸು ಬರುವ ವೇಳೆ ಇದರ ರಿಟ್ರೀಟ್ ನಡೆವುದು .ಇಳಿದ ಕೂಡಲೇ ಮಗುವನ್ನು 'ಮಿಸ್ ಏನು ಹೇಳಿದರು ?ಪ್ರಶ್ನೆಗೆ ಎಲ್ಲಾ ಉತ್ತರ ಹೇಳಿದೆಯಾ(ಬರೆದೆಯಾ),ನಿನ್ನ ಫ್ರೆಂಡ್ ಗೆ ಎಷ್ಟು ಮಾರ್ಕ್?"ಇತ್ಯಾದಿ ಪ್ರಶ್ನೆಗಳು ಸಾಮಾನ್ಯ .

ನನಗೆ ನಮ್ಮ ಬಾಲ್ಯದ ನೆನಪು ಆಯಿತು .ಯೂನಿಫೋರ್ಮ್ ಷೂ ಇಲ್ಲಾ ,ಬರಿಗಾಲು ,ಶಾಲೆಗೆ ಬಿಡಲು ,ವಾಪಸು ಬಂದಾಗ ಸ್ವಾಗತಿಸಲು ಯಾರೂ ಇಲ್ಲ .ಹಟ್ಟಿಯಿಂದ ಬಿಟ್ಟ ಕರುಗಳ ಹಾಗೆ ಲಾಗ ಹಾಕುತ್ತಾ ಗುಡ್ಡ ಬಯಲ ದಾರಿಯಲ್ಲಿ ಶಾಲೆಗೆ ;ಬರುವಾಗ ಶಾಲೆಯ ಹೊರೆ (ಮಾನಸಿಕ )ಯನ್ನು ಅಲ್ಲಿಯೇ ಬಿಟ್ಟು  ಮನೆಗೆ . ಶಾಲೆಯ ಚಟುವಟಿಕೆ ಬಗ್ಗೆ ಕೇಳುವವರು ಯಾರೂ ಇಲ್ಲ

ಯಾರು ಹೆಚ್ಚು ಅದೃಷ್ಟ ವಂತರು ಎಂದು ಗೊತ್ತಿಲ್ಲ .

ಭಾನುವಾರ, ಆಗಸ್ಟ್ 6, 2023

ಓದಿ ಮೆಚ್ಚಿದ ಪುಸ್ತಕ ಕೀಟಲೆಯ ದಿನಗಳು

 ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಮೇಲೆ (೬೦ ರ ನಂತರ )ಬರೆಯಲಾರಂಬಿಸಿ ಮೌಲಿಕ ಕೃತಿಗಳನ್ನು ಕೊಟ್ಟವರು  ಶ್ರೀ ಶ್ರೀನಿವಾಸ ವೈದ್ಯರು . ಅವರ ಬರಹಗಳಲ್ಲಿ ಎದ್ದು ಕಾಣುವುದು  ಒಳ್ಳೆಯ ಹಾಸ್ಯ  ಪ್ರಜ್ಞೆ . ವೃತ್ತಿಯಲ್ಲಿ ಇದ್ದುಕೊಂಡೇ ಬರೆದು ಪ್ರಸಿದ್ದರಾದವರು ಶ್ರೀ ಡುಂಡಿರಾಜ್ . ಡುಂಡಿರಾಜ್ ಕೃಷಿ ಪದವೀಧರರು . ಹನಿಗವನ ಕೃಷಿ ಗೆ ಪ್ರಸಿದ್ದರಾದವರು . ಈಗ ನನ್ನ ಕೈಗೆ ಒಂದು ಕೃತಿ ಬಂದಿದೆ .ಅದರ ಲೇಖಕ ಶ್ರೀ ಏನ್ ಎಸ ಲಕ್ಷ್ಮೀನಾರಾಯಣ ಅವರು .ಕೃಷಿ ಪದವೀಧರ ,ಬ್ಯಾಂಕ್ ಉದ್ಯೋಗಿ . ೬೫ ವಯಸ್ಸಿನ ಮೇಲೆ ಅವರ' ಆಕಸ್ಮಿಕ ಆತ್ಮಕಥನ  ಕೀಟಲೆಯ ದಿನಗಳು 'ಪ್ರಕಟವಾಗಿದೆ . ಇವರು ರೈತ ಹೋರಾಟದಲ್ಲಿ ಕೂಡಾ ಸಕ್ರಿಯವಾಗಿ ಪಾಲುಗೊಂಡವರು . ಪುಸ್ತಕದುದ್ದಕ್ಕೂ ಅವರ ಹಾಸ್ಯ ಪ್ರಜ್ಞೆ ಎದ್ದು ಕಾಣುವುದು . 

ಪುಸ್ತಕದ ಮೊದಲ ಲೇಖನ ನಾಟಿಕೋಳಿ v /s ಕೆಂಟಕಿ ಫ್ರೈಡ್ ಚಿಕನ್ . ಊರಿಂದ ಬಂದ ಹಿರಿಯರು ಇನ್ನೇನು ಮರಳಿ  ಹೊರಡುತ್ತೇನೆ ಎಂದಾಗ ಅಮ್ಮ ಮಧ್ಯಾಹ್ನ ಕೋಳಿ ಸಾರು ಮಾಡುವೆ ಉಂಡು ಹೋಗಿ ಎಂದು ಒಪ್ಪಿಸಿ  ಭಾರತೀಯ ಕಾಲಮಾನ ಮುಂಜಾನೆ ಹತ್ತು ಗಂಟೆಗೆ ಮಕ್ಕಳ ಬಳಿ ಗೂಡಿನಿಂದ ಸಾಕಿದ  ಕೋಳಿ ತರಲು ಹೇಳಿ ಮಸಾಲೆ ಅರೆಯಲು ತೊಡಗುತ್ತಾರೆ . ಆದರೆ ಕೋಳಿ ತಪ್ಪಿಸಿ ಕೊಂಡು ಓಡಾಡಿ ಕೊನೆಗೂ ಸಿಕ್ಕು ಊಟ ಮುಗಿದಾಗ ಭಾರತೀಯ ಕಾಲಮಾನ ೧೫-೩೦ . (ಮಿತ್ರ ಭಾಸ್ಕರ ಕೊಡಿ೦ಬಾಳ ಅವರ ಹರಕೆಯ ಕೋಳಿ ಉಪ್ಪಿನಂಗಡಿ ಪೇಟೆಯಲ್ಲಿ ತಪ್ಪಿಸಿ ಕೊಂಡ ಕತೆ ನೆನಪಿಗೆ ಬಂತು .).

ಲೇಖಕ ಬರೆಯುತ್ತಾರೆ ''ಈ ಕೋಳಿ ಬೇಟೆ ಆ ಕಾಲದ ಮನೆ ಮನೆಯ ಕಥೆಯೇ ಆಗಿತ್ತು . 

ಆದರೆ ಈಗೆಲ್ಲಿದೆ ಆ ಸಂಭ್ರಮ ?

ಒಂದು ಫೋನ್ ಕರೆ ಸಾಕು .ಹಸಿ ಮಾಂಸವೂ ,ಕೋಳಿ ಮೀನುಗಳೂ .ಬಿಸಿ ಬಿಸಿ ದೇಶ -ವಿದೇಶಿ ಕಂಪನಿ ಗಳ  ತಿನಿಸು ಭಕ್ಷ್ಯಗಳೂ ,ಕೇವಲ ಮೂವತ್ತು ನಿಮಿಷದಲ್ಲಿ ನಿಮ್ಮ ಟೇಬಲ್ ಮೇಲೆ ಕಂಗೊಳಿಸುತ್ತವೆ .ಆ ದಿನಗಳ ಕೋಳಿ ಬೇಟೆಯೂ .ಅತಿಥಿಗಳ ಇರಿಸು ಮುರುಸೂ ,ಮಸಾಲೆ ಸಾಮಗ್ರಿಗಳನ್ನು ಹೊಂದಿಸುವ ಕಷ್ಟಗಳು ಯಾವುವೂ ಈಗಿಲ್ಲ .ದುಡ್ಡಿಗೂ ಬರವಿಲ್ಲ .ಬರವಿರುವುದು  ಆ ಆತ್ಮೀಯತೆಯಲ್ಲಿ ;ಅಡಿಗೆ ಮಾಡಿ ಬಡಿಸುವ ಸಂಭ್ರಮದಲ್ಲಿ .ಕೋಳಿ ಬೇಟೆಯ ಮಕ್ಕಳಾಟದಲ್ಲಿ .ಆ ಚಡಪಡಿಕೆಯಲ್ಲಿ .ಆ' ಇಲ್ಲದಿರುವಿಕೆಯ ಶ್ರೀಮಂತಿಕೆ ಯಲ್ಲಿ 'ಈಗಿನ 'ಇರುವಿಕೆಯ ಬಡತನದಲ್ಲಿ ಅಲ್ಲ .''

ಪುಸ್ತಕದುದ್ದಕ್ಕೂ ಹಾಸ್ಯ ಲೇಪಿತ  ಪನ್ ಗಳೂ ,ನುಡಿಗಟ್ಟುಗಳೂ ಇದ್ದು ನಗೆ ಉಕ್ಕಿಸಿದರೆ(ವೈ ಏನ್ ಕೆ ಬರಹ ನೆನಪಿಸುವ ) ,ಹೃದಯ ಭಾರವಾಗಿಸುವ ಆತ್ಮೀಯ ಘಟನೆಗಳ ಚಿತ್ರಣವೂ ಇದೆ .ಕೆಲ ನುಡಿಗಟ್ಟುಗಳ ಉದಾ : ಅಕುಡುಕ ,ಕುಡಿಯದ ಕೂಸು (ಕುಡಿಯದವನು ).ಎಲೆಮಾನವ (ಇಸ್ಪೀಟು ಎಲೆಗೆ ದಾಸ ),ಗುಂಡು ಮೇಜಿನ ಪರಿಷತ್ ,ಒಂದು ಹಣ್ಣೂ ಬಿಡದೆ ಕದಿ ಯುವ 'ಬೋಳುವಾರರು'ನಿತ್ಯ ಸಂಜೆ ಕ್ಲಬ್ ಗೆ ಭೇಟಿ ನೀಡುವ 'ಸಂಜೇವ 'ರರು ಇತ್ಯಾದಿ . 

ಒಟ್ಟಿನಲ್ಲಿ ಇತ್ತೀಚೆಗೆ ಖರೀದಿಸಿ ಓದಿದ ಸಂತೋಷ ಪಟ್ಟ ಪುಸ್ತಕ .  ಇವರಿಂದ ಇನ್ನೂ ಒಳ್ಳೆಯ ಕೃತಿಗಳನ್ನು ನಿರೀಕ್ಷಿಸ ಬಹುದು ಎಂದು ಖಂಡಿತವಾಗಿ ಹೇಳುತ್ತೇನೆ  . 




ಪತ್ರಿಕೆ ಓದುಗರಿಗೆ ಓಮ್ನಿ ಪೊಟೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ  ಒಂದು ಹೆಸರು ಪ ರಾಮಕೃಷ್ಣ ಶಾಸ್ತ್ರಿ . ಶಿಷ್ಟ ಶಿಕ್ಷಣ ಹೆಚ್ಚು ಪಡೆಯದ ,ಕುಗ್ರಾಮದಿಂದ ಬಂದ  ಇವರು  ಸಾಹಿತ್ಯದ ಎಲ್ಲಾ ಪ್ರಾಕಾರ ಗಳಲ್ಲಿ ಕೈಯ್ಯಾಡಿಸಿದ್ದೇ ಅಲ್ಲದೆ ,ಯಕ್ಷಗಾನ ,ಕೃಷಿ ,ರಾಜಕೀಯ ,ಪತ್ರಿಕಾ ರಂಗ ಇತ್ಯಾದಿ ಗಳ ಒಳ ಹೊಕ್ಕ ಅನುಭವ  ಇರುವವರು   . 

ಇಂತಹ ಸಾಧಕರಿಗೆ ಎಪ್ಪತ್ತು ತುಂಬಿದ ಅವಸರದಲ್ಲಿ "ಬದುಕು ಬರಹ ಬವಣೆ "ಎಂಬ ಹೊತ್ತಿಗೆ ಹೊರ ತಂದಿದ್ದಾರೆ . ನಿರೂಪಣೆ ಅವರ ಪತ್ರಕರ್ತ ಪುತ್ರ ಲಕ್ಷ್ಮೀ ಮಚ್ಚಿನ ಅವರದ್ದು . ಈ ಹಿರಿಯರ ಬದುಕಿನ ಅನುಭವಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಚಿತ್ರಿಸಿದ್ದಾರೆ . ಲೇಖಕ ನಾಗಿ ಜೀವನ ಸಾಗಿಸ ಬಲ್ಲೆ ಎಂದು ಅರ್ಥ ಸಂಪಾದನೆ ಕೂಡಾ ಉದ್ದೇಶವಾಗಿ ಬರೆಯಲು ಆರಂಬಿಸಿ ಸಾಹಿತಿಯಾಗಿ ರೂಪು ಗೊಂಡ ಬಗೆ ,ಕೃಷಿಕನಾಗಿ ಅನುಭವ , ಎದುರಿಸಿದ ಕಾರ್ಪಣ್ಯ ಮುಜುಗರಗಳು ,ಸಂತೋಷ ಗಳ ವಿವರ ಇದೆ . 


 ,

ಶನಿವಾರ, ಆಗಸ್ಟ್ 5, 2023

 ನಾನು ಆಸ್ಪತ್ರೆಯಲ್ಲಿ  ಗೌರವಿಸುವ ಒಂದು ನೌಕರ ವರ್ಗ ಸ್ವಚ್ಛ ಕಾರಿಣಿ ಯರದು . ಮುಂಜಾನೆ ಎಂಟು ಗಂಟೆಗೆ ನಾನು ಆಸ್ಪತ್ರೆಯಲ್ಲಿ ಹಾಜರು ಆಗುವ ವೇಳೆ ಹಗಲು ಪಾಳಿಯಯವರು ಗುಡಿಸಿ ಸಾರಿಸುತ್ತಾ ಇರುವರು . ನಾನು ಅವರೊಡನೆ ಉಭಯ ಕುಶಲೋಪರಿ ವಿಚಾರಿಸುವೆನು . ನನ್ನನ್ನು ಕಂಡ ಕೂಡಲೇ ಅವರು ಕೈಯಲ್ಲಿ ಇರುವ ಪೊರಕೆಯನ್ನು ಅಡಗಿಸುವರು ಮತ್ತು ವಂದಿಸುವರು . ಪೊರಕೆ ಅಡಗಿಸುವುದು ಬೆಳ ಬೆಳಗ್ಗೆ ನನಗೆ ಅದರ ದರ್ಶನ ಆಗದಿರಲಿ ಎಂದು ಇರ ಬೇಕು . 

ಬರಗೂರು ರಾಮಚಂದ್ರಪ್ಪ ಅವರ ಅನುಭವ ಕಥನ ಕಾಗೆ ಕಾರುಣ್ಯದ ಕಣ್ಣು ಓದಿ ಮುಗಿಸಿದೆ .. ಕೊಂಡೆತಿಮ್ಮನಹಳ್ಳಿ ಯಲ್ಲಿ ತಾವು ಹೈ ಸ್ಕೂಲ್ ಅಧ್ಯಾಪಕರಾಗಿದ್ದಾಗ ಬಾಡಿಗೆ ಮನೆಯಲ್ಲಿ  ಮುಂಜಾನೆ ಎದ್ದ ಒಡನೆ ಕಾಣುವ ಜಾಗದಲ್ಲಿ ಹಿಡಿ ಸೂಡಿ ಇಡುತ್ತಿದ್ದು  ತಮ್ಮ  ಮನೆಯಲ್ಲಿ ಮಲಗಲು ಬರುತ್ತಿದ್ದ ಪರವೂರಿನ ವಿದ್ಯಾರ್ಥಿಗಳಿಗೆ ''ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ ,ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಿಗ್ಗೆ ಎದ್ದ ಕೂಡಲೇ ಮನೆ ,ಮನೆಯ ಹೊರಗೆಲ್ಲಾ ಸ್ವಚ್ಛ ಮಾಡುವ ಪೊರಕೆಯ 'ದರ್ಶನ 'ಮಾಡಿ ಕೈ ಮುಗಿಯ ಬೇಕು .ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ ''ಎಂದು ವಿವರಿಸಿ ಮನವರಿಕೆ ಮಾಡಿ ಕೊಟ್ಟಿದ್ದೆ .''ಎಂದು ವಿವರಿಸಿರುವರು . ನನಗೂ ಇದೇ ಅಭಿಪ್ರಾಯ ಇದ್ದರೂ ಅದನ್ನು ವಿವರಿಸಿ ನನ್ನ ಸಹೋದ್ಯೋಗಿಗಳನ್ನು ಗಲಿಬಿಲಿ ಮಾಡ ಹೋಗುವುದಿಲ್ಲ . 

ಶ್ರೀ ಪುರುಷೋತ್ತಮ ಬಿಳಿಮಲೆ ಅವರು  ತಮ್ಮ ಆತ್ಮ ಚರಿತ್ರೆ ಗೆ' ಕಾಗೆ ಮುಟ್ಟಿದ ನೀರು 'ಎಂದು ಕರೆದಿದ್ದಾರೆ . ಬರಗೂರು ಆತ್ಮ ಚರಿತ್ಮಾತ್ಮಕ ವಾದ ಕೃತಿಗೆ 'ಕಾಗೆ ಕಾರುಣ್ಯ' ಎಂದು ಹೆಸರು ಇಟ್ಟಿ ರುವರು . ಕಾಗೆ ಕೋಗಿಲೆಯು ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿ ಬೆಳೆಸುವ ಕೂಡಿ ಬಾಳುವ ,ಮಮತೆ ಮತ್ತು ಸಮತೆಯ ಸಂಕೇತ ಎಂಬ ಅರ್ಥದಲ್ಲಿ ಅದನ್ನು ಬಳಸಿದ್ದಾರೆ . 

ಪುಸ್ತಕದ ಸಮರ್ಪಣೆ ಹೀಗಿದೆ -''ನನ್ನಲ್ಲಿ ಪರ್ಯಾಯ ಚಿಂತನೆಗೆ ಪ್ರೇರಣೆ ನೀಡಿದ ,ನಮ್ಮೂರು ಬರಗೂರಿನ ಕಾಗೆ ,ಕತ್ತಾಳೆ ,ಕೆರೆ ,ಕುಂಟೆ ,ಹಳ್ಳ ,ಕೊಳ್ಳ.ಗುಬ್ಬಚ್ಚಿ ,ಬೇವು,ಹೊಂಗೆ ,ಜಾಲಿಯ ಮರಗಳೇ ಮುಂತಾದ ಪ್ರಕೃತಿ ಸಂಪತ್ತಿಗೆ ಈ ಕೃತಿಯನ್ನು ಕೃತಜ್ಞತೆಯಿಂದ ಅರ್ಪಿಸುತ್ತೇನೆ ''



ಶುಕ್ರವಾರ, ಆಗಸ್ಟ್ 4, 2023

ಮಕ್ಕಳು ನಮ್ಮಿಂದ ಬಂದವರು ನಮ್ಮವರಲ್ಲ 

ರೋಗ ನಿಧಾನದಲ್ಲಿ ಕುಟುಂಬದ ಇತಿಹಾಸ ಎಂದು ಇದೆ . ಮದುವೆ ಯಾದ ಗಂಡು ಹೆಣ್ಣು ಬಂದಾಗ ಮಕ್ಕಳ ಸಂಖ್ಯೆ ವಯಸ್ಸು ಅರೋಗ್ಯ ವಿಚಾರಿಸುತ್ತೇವೆ . ವಾರಗಳ ಹಿಂದೆ ಒಬ್ಬ ತಾಯಿ (ಮಾಸ್ತಿ ಯವರು ಬಳಸುವಂತೆ -ಹೆರದಿದ್ದರೂ ಅವರು ಮಾತೆಯರೇ )ಗೆ ಮಕ್ಕಳು ಎಷ್ಟು ಎಂದು ವಿಚಾರಿಸಲು ಆಕೆಯ  ಮುಖ ಮ್ಲಾನವಾಗಿ ಕಣ್ಣಲ್ಲಿ ನೀರು ಬಂತು  .ಮದುವೆಯಾಗಿ ವರುಷ ಹತ್ತು ಆದರೂ ಮಕ್ಕಳಿಲ್ಲ ಎಂದು .ಅವರಿಗೆ ಸಮಾಧಾನ ಹೇಳಿದೆ . 

ಮಲಯಾಳ ದಲ್ಲಿ ಸತ್ಯನ್ ಅಂತಿ ಕಾಡ್ ಅವರ ಪ್ರಸಿದ್ಧ ಚಲಚಿತ್ರ ಸಂದೇಶಂ ನಲ್ಲಿ ನಿವೃತ್ತ ರೈಲ್ವೆ ನೌಕರ  ತಿಲಕನ್ ತಾನು ಕಷ್ಟ ಪಟ್ಟು  ವಿದ್ಯಾಭ್ಯಾಸ ಕೊಡಿಸಿದ ಮಕ್ಕಳು ಯಾವುದೇ ಕೆಲಸ ಮಾಡದೇ ರಾಜಕೀಯ ಎಂದು ಕಾಲ ಧನ ಹರಣ ಮಾಡಿಕೊಂಡು ,  ಇಳಿ ವಯಸಿನಲ್ಲಿ ತಮಗೆ ಆಗದೇ ಇರುವಾಗ ಮಕ್ಕಳಿಲ್ಲ ಎಂದು ಕೊರಗು ತ್ತಿದ್ದ ಪ್ರಾಣ ಮಿತ್ರ ಅಧ್ಯಾಪಕ ದಂಪತಿಗಳಿಗೆ "ನಿಮಗೆ ಮಕ್ಕಳಿಲ್ಲ ಎಂಬ ಕೊರಗು ಮಾತ್ರ ಎಂದು ಸಮಾಧಾನ ಮಾಡಿಕೊಳ್ಳಿ ,ನನಗೆ ಇರುವಂತಹ ಮಕ್ಕಳು ಆಗುವುದಕ್ಕಿಂತ ಅದುವೇ ಮೇಲು  , '  ಎಂದು ಹೇಳುವ ಸಂಭಾಷಣೆ ಇದೆ . 

 ಮಕ್ಕಳು ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ನೋಡಿ ಕೊಳ್ಳದೇ ಇರುವಾಗ ಇದು ಸರಿ ಎಂದು ತೋರುವುದು ಸಹಜ .ಆದರೆ ಮಕ್ಕಳಾಟಿಕೆ ಆನಂದಿಸುವುದೇ ಒಂದು ಭಾಗ್ಯ ;ಅದಕ್ಕೆ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ ಎಂದು ಒಂದು ವಾದ . ಖಲೀಲ್ ಗಿಬ್ರಾನ್ ಹೇಳಿದಂತೆ ನಮ್ಮ ಮಕ್ಕಳು ನಮ್ಮ ಮೂಲಕ ಬಂದವರೇ ಹೊರತು ನಮ್ಮವರಲ್ಲ . ತಲೆಮಾರು ಗಳು ದಾಟಿದಂತೆ ಹಿರಿಯರ ಜವಾಬ್ದಾರಿ ವಹಿಸಿ ಕೊಳ್ಳಬೇಕು ಎಂಬ ಮನೋಧರ್ಮ ಮಾಯವಾಗುತ್ತಿದೆ . ವೃದ್ಧರನ್ನು ಅರೆ ವೃದ್ದರು ಅರೆ ಮನಸಿಂದ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ಇದೆ .ಇದಕ್ಕೊಂದು ದಾರಿ ಸಮಾಜ ಕಂಡು ಕೊಳ್ಳ ಬೇಕಾದ ಅನಿವಾರ್ಯತೆ ಇದೆ .

ಗುರುವಾರ, ಆಗಸ್ಟ್ 3, 2023

ಕೆಲವು ದಿನಗಳ ಮಳೆ ವಿರಾಮದ ನಂತರ ನಿನ್ನೆಯಿಂದ ಮುಂಜಾನೆ ವಾಕಿಂಗ್ ಆರಂಭ ಮಾಡಿದ್ದೇನೆ . ಮನೆಯಿಂದ ಅನತಿ ದೂರದಲ್ಲಿ ರಸ್ತೆಗೆ ಬಾಗಿ ಫಲಭರಿತ ಹಲಸಿನ ಮರ ಇದ್ದು ಅದರಿಂದ ಹಣ್ಣಾಗಿ ರಸ್ತೆಗೆ ಬೀಳುತ್ತಿದ್ದು ನಡೆಯುವಾಗ ಕಾಲಿಗೆ ಮಯಣ ಮೆಟ್ಟಿದರೂ ಮೂಗಿಗೆ ಗಂಮೆಂದು ಬರುವ ಪರಿಮಳ ಹಿತವಾಗಿದೆ . ಕೆಲವು ವರ್ಷಗಳಲ್ಲಿ ಪರಿಮಳವನ್ನು ಕೂಡಾ ರೆಕಾರ್ಡ್ ಮಾಡಿ ಫೇಸ್ ಬುಕ್ ,ವಾಟ್ಸ್ ಅಪ್ ನಲ್ಲಿ ಕಳುಹಿಸುವ ತಂತ್ರ ಜ್ಞಾನ ಬರ ಬಹುದು . 

ಇಂದು ಒಂದು ಹೊಸಾ ಜಾಹಿರಾತು ಫಲಕ ಗಮನ  ಸೆಳೆಯಿತು .ಮುಕ್ರಂಪಾಡಿ ಟು ಮೆಲ್ಬೋರ್ನ್ ,ವಿದೇಶಗಳಲ್ಲಿ ಅಧ್ಯಯನ ಮಾಡಲು ಇಚ್ಚಿಸುವವರಿಗೆ ಮಾರ್ಗದರ್ಶನ ಮಾಡುವ ಸಂಸ್ಥೆ .ಯಾವುದೇ ಹೊಸ ಉದ್ದಿಮೆ ತೊಡಗುವವರಿಗೆ ಒಳ್ಳೆಯದು ಆಗಲಿ ಎಂದು ಬಯಸುತ್ತೇನೆ . 

ಮುಕ್ರಂಪಾಡಿ ಮಡಿಕೇರಿ ಮಾರ್ಗದಲ್ಲಿ ಇರುವ ಪುತ್ತೂರಿನ ಒಂದು ಭಾಗ .ಇಲ್ಲಿ ಕೆ ಎಸ ಆರ್ ಟಿ ಸಿ ಡಿಪೋ ಇದೆ . ಮೆಲ್ಬೋರ್ನ್ ಆಸ್ಟ್ರೇಲಿಯಾ ದೇಶದ ನಗರ . 

ಪಾಡಿ ಎಂಬ ಶಬ್ದ ಹಾಡಿ ಎಂಬುದರಿಂದ ಬಂದಿರ ಬೇಕು . ನಮ್ಮಲ್ಲಿ ಮಾಣಿಪ್ಪಾಡಿ ,ಕುದುರೆಪ್ಪಾಡಿ ,ಅನಂತಾಡಿ ಇತ್ಯಾದಿ ಊರುಗಳ ಮೂಲ ಇದರಿಂದ ಇರ ಬಹುದು . ಮುಕ್ರ ಎಂದರೆ ಮೂರು ಕಣ್ಣಿನ ಶಿವ ಇರ ಬಹುದು . ಇನ್ನು ಕೇವಲ ಪಾಡಿ (ಹಾಡಿ )ಎಂಬ ಊರು ಕೂಡಾ ಇದ್ದು ಬೋರ್ಡ್ ಹೈ ಸ್ಕೂಲ್ ನಲ್ಲಿ ಶ್ರೀ ಎಸ ಆರ್ ಪಾಡಿ ಎಂಬ ಒಳ್ಳೆಯ ಅಧ್ಯಾಪಕರು ಇದ್ದರು .. 


 

ಸೋಮವಾರ, ಜುಲೈ 10, 2023

 



ನಾವು ಪ್ರತಿಯೊಬ್ಬರು ತಮ್ಮ ಅಧ್ಯಯನ ಮತ್ತು ಜೀವನಾನುಭವ ದಿಂದ ಒಂದೊಂದು ವಿಚಾರಧಾರೆ ಯನ್ನು ಹೊಂದಿರುತ್ತೇವೆ ಯಾದರೂ ಹಲವಾರು ಕಾರಣಗಳಿಂದ ಅದನ್ನು ನೂರಕ್ಕೆ ನೂರು ಅದನ್ನುನಿತ್ಯ ಜೀವನದಲ್ಲಿ ಆಚರಿಸಲು ಆಗದೆ ಒಳಗೊಳಗೇ ಪರಿತಪಿಸುತ್ತಿರುತ್ತೇವೆ . ಕುಟುಂಬ ಮತ್ತು ಸಾಮಾಜಿಕ ಕಾರಣಗಳಿಂದ ಹಲವು ಕಾಂಪ್ರೊಮೈಸ್ ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ . ಇನ್ನು ಹಲವರು ಮನಸಾರೆ ಆಡುವುದೊಂದು ಮಾಡುವುದೊಂದು ಮಾಡುತ್ತಿರುತ್ತಾರೆ ;ಅದು ಆಷಾಢಭೂತಿ ತನ . ಇವೆಲ್ಲಕ್ಕೂ ಮೀರಿ ಅಪರೂಪಕ್ಕ್ಕೆ ಕೈಬೆರಳು ಎಣಿಕೆಯಲ್ಲಿ ಒಬ್ಬರು ಇದ್ದಾರೆ .ಅಂತಹವರ ಪೈಕಿ ಒಬ್ಬರು ಶ್ರೀ ಗೋಪಾಲಕೃಷ್ಣ ಉಪಾಧ್ಯಾಯರು . 

ನಿನ್ನೆ ಅವರು ತಮ್ಮ ಪೋಸ್ಟ್ ನಲ್ಲಿ  ಒಂದು ಮಾತು ಬರೆದಿರುವರು . "ತಾವು ಪ್ರಕೃತಿ ಮತ್ತು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವನು ." ಈ ವಿಷಯವನ್ನು ಅಕ್ಷರಶಃ ಜೀವನದಲ್ಲಿ ಪಾಲಿಸಿದವರು . ಬಸವಣ್ಣದವರ ಕಾಯಕವೇ ಕೈಲಾಸ . ಈಯೆರಡರಲ್ಲಿ ಚ್ಯುತಿ ಕಂಡರೆ ಕೂಡಲೇ ತಮ್ಮ ಅಸಂತೋಷ ವ್ಯಕ್ತ ಪಡಿಸುವರು . ನನಗೇ ಹಲವು ಬಾರಿ ತಾವು ಸರಕಾರಿ ನೌಕರಿಯಲ್ಲಿ ಇದ್ದು ಅನಾವಶ್ಯಕ ಅಪಾಯ ಎಳೆದು ಕೊಳ್ಳುತ್ತೋದ್ದರೋ ಎಂದು .ಆದರೆ ಅವರ ಅಭಿಪ್ರಾಯಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದರೆ ಅವರಲ್ಲಿ ಜಾತಿ ,ಪಕ್ಷ ಅಥವಾ ಲಿಂಗ ತಾರತಮ್ಯ ದ ಪೂರ್ವಾಗ್ರಹ ಗಳು ಕಾಣಿಸದೆ ವಿವೇಕಾನಂದ ,ಕುವೆಂಪು ಮತ್ತು ಎಚ್ ನರಸಿಂಹಯ್ಯ ನವರ ದಾರಿ ಯಲ್ಲಿ ನಡೆಯಯುವರಂತೆ ಕಾಣಿಸುತ್ತಾರೆ . 

ಈ ಉಪಾಧ್ಯಾಯ ಸರ್ ನೇಮ್ ಅನ್ನು ತಮಗೆ ಸಮರ್ಥವಾಗಿ ಅನ್ವರ್ಥ ಮಾಡಿಕೊಂಡವರು . (ನಾನು ಕಂಡಂತೆ ಮತ್ತು ಗೋಪಾಲ ಕೃಷ್ಣರು ಮೂಢನಂಬಿಕೆ ಎಂದು ಹೇಳಬಹುದಾದಂತೆ ಈ ಸರ್ ನೇಮ್ ಇರುವವರು ಬಹಳ ಮಂದಿ ಜೆನೆಟಿಕಲಿ ಬುದ್ದಿವಂತರು ).. ಇವರು ಒಳ್ಳೆಯ ಅಧ್ಯಾಪಕರು ಇರಬೇಕಾದಂತೆ ಸದಾ ಕಲಿಯುವುದಕ್ಕೆ ತೆರೆದು ಕೊಂಡು ಇರುವವರು . ಸುತ್ತ ಮುತ್ತ ಸಾಹಿತ್ಯ,ಸಾಂಸ್ಕೃತಿಕ  ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ   ಇವರು  ಹಾಜರಿ .ರಾಮಕೃಷ್ಣ ಮಿಷನ್ ನವರು ಸ್ವಚ್ಛ ಪುತ್ತೂರು ಅಭಿಯಾನ ನಡೆಸಿದಾಗ ತಾವೂ ಪೊರಕೆ ಹಿಡಿದು ಗುಡಿಸುವದು ನಾನೇ ಕಣ್ಣಾರೆ ಕಂಡಿದ್ದೇನೆ . ಮೃದು ಭಾಷಿ ಮತ್ತು ಹೊರನೋಟಕ್ಕೆ ಸಂಕೋಚ ಸ್ವಭಾವದವರಂತೆ ಕಾಣುವ ಇವರು ಮೊದಲೇ ತಿಳಿಸಿದಂತೆ ಒಂದು ರೀತಿಯಲ್ಲಿ ಖಡಾಖಡಿ . ಇವರ ಮನೆಯ ಹತ್ತಿರ ಇದ್ದ ಶಿವರಾಮ ಕಾರಂತರ ಗಾಳಿ ಬೀಸಿರ ಬಹುದು . 

ಒಟ್ಟಿನಲ್ಲಿ ಉಪಧ್ಯಾಯರನ್ನು ಕಂಡರೆ ನನಗೆ ಅಭಿಮಾನ ,ಸಂತೋಷ ಮತ್ತು ಸ್ವಲ್ಪ ಮಟ್ಟಿನ ಅಸೂಯೆ .ಅಸೂಯೆ ಮನಸು ಒಪ್ಪುವಂತೆ ನಡೆ ನುಡಿ ಬಾಳು ಅವರಂತೆ ನನಗೆ ನಡೆಸಲು ಆಗುತ್ತಿಲ್ಲವಲ್ಲ ಎಂದು . 

ಅರುವತ್ತು ತುಂಬಿದ ಇವರಿಗೆ ಶುಭಾಶಯಗಳು .ನಿವೃತ್ತಿ ನಂತರ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲಿ ಇನ್ನೂ ಸಕ್ರಿಯವಾಗಿ ಕಾಣಿಸಲಿ .