ಬೆಂಬಲಿಗರು

ಮಂಗಳವಾರ, ಜುಲೈ 5, 2022

ಲೆಕ್ಕಕ್ಕೆ

 ವೈದ್ಯಕೀಯ ವಿದ್ಯಾರ್ಥಿ ಆಗಿದ್ದಾಗ ಒಂದು ಮಿತ್ರ ವಿವೇಕ್ ಜತೆ ತಿಂಗಳು ಹಾಸ್ಟೆಲ್ ಪ್ರಿಫೆಕ್ಟ್ ಆಗಿದ್ದೆ . ನಿರ್ಗಮನಿಸುವ ಪ್ರಿಫೆಕ್ಟ್ ಅಡಿಗೆ ಮನೆಯ ಉಗ್ರಾಣದಲ್ಲಿ  ಉಳಿದ ಜೀನಸು ವಸ್ತುಗಳ ಚಾರ್ಜ್ ಅವುಗಳ ಬೆಲೆ ನಮೂದಿಸಿ ಹಸ್ತಾಂತರ ಮಾಡುವರು . ವಸ್ತುಗಳನ್ನು ಪರಿಶೀಲಿಸಿದಾಗ ಒಂದು ಗೋಣಿ ಅಕ್ಕಿ ,ಹಳೇ  ಮಾಲು ,ಗುಗ್ಗುರು ಹುಳಗಳ ಸಮೇತ ಇದ್ದು ಇದೇನು ?ಎಂದು ವಿಚಾರಿಸಲು ಇದು ಹೀಗೇ 'ಎರಡು ವರ್ಷದಿಂದ ಕೈ ಬದಲುತ್ತಾ ಬಂದಿದೆ ,ಅಡಿಗೆಗೆ ಉಪಯೋಗಿಸಲು ಆಗದು ;ನೀವು ಕೂಡಾ ಹ್ಯಾಂಡ್ ಓವರ್ ಮಾಡುವಾಗ ಸೇರಿಸಿ ಕೊಟ್ಟರೆ ಆಯಿತು 'ಎಂದರು . ನನಗೆ ಸಖೇದಾಶ್ಚರ್ಯ  ಆಯಿತಾದರೂ ಅವರ ಸಲಹೆಯಂತೆ ನಡೆದು ಕೊಂಡೆ . 

 ಮುಂದೆ ನಾನು ರೈಲ್ವೆ ವೈದ್ಯಕೀಯ ಸೇವೆಗೆ ಸೇರಿ ಬೇರೆ ಬೇರೆ  ಸ್ಥಳ ಗಳಲ್ಲಿ ಚಾರ್ಜ್ ತೆಗೆದು ಕೊಳ್ಳುವಾಗ ಇದೇ ಚಾಳಿ ಕಂಡು ಬಂದಿತು . ಮುರಿದ ಕುರ್ಚಿ ,ಒಡೆದ ಪ್ರಯೋಗ ಸಾಧನಗಳು ಇತ್ಯಾದಿ ಒಬ್ಬರ ತರುವಾಯ ಒಬ್ಬರು ಚಾರ್ಜ್ ತೆಗೆದು ಕೊಂಡು ಮುಂದೆ ಇನ್ನೊಬ್ಬರಿಗೆ ಕೊಟ್ಟು ಹೋಗುವರು . ಅವುಗಳು ಎಲ್ಲಾ ಟೂಲ್ಸ್ ಅಂಡ್ ಪ್ಲಾಂಟ್ಸ್ ರಿಜಿಸ್ಟರ್ ನಲ್ಲಿ ಇರುವ ಕಾರಣ ನಾವಾಗಿ ಅವನ್ನು ವಿಲೇವಾರಿ ಮಾಡುವಂತೆ ಇಲ್ಲ .ಮೇಲಧಿಕಾರಿಗಳು ಇನ್ಸ್ಪೆಕ್ಷನ್ ಗೆ ಬಂದಾಗ ಅವುಗಳನ್ನು ಕಂಡೆಮ್ ಮಾಡಿಸಿ ,ನಂತರ ಹೊಸದಕ್ಕೆ ಇಂಡೆಂಟ್ ಮಾಡ ಬಹುದು . ಕಂಡೆಮ್ ರಿಜಿಸ್ಟರ್ ಇಟ್ಟು  ಕೊಳ್ಳ ಬೇಕು . ಅಡಿಟ್ ಗೆ ಬಂದವರು ಅದನ್ನು ಪರಿಶೀಲಿಸುವರು .ಇದೆಲ್ಲಾ ರಗಳೆ ಬೇಡ ಎಂದು ಈ ಅನುಪಯುಕ್ತ ವಸ್ತುಗಳನ್ನು  ಹಾಗೇ ಇಟ್ಟುಕೊಂಡು ಮುಂದಿನವರಿಗೆ ಹಸ್ತಾಂತರಿಸಿ ಹೋಗುತ್ತಿದ್ದವರೇ ಹೆಚ್ಚು 

ಶನಿವಾರ, ಜುಲೈ 2, 2022

ಒಂದು ಚಿಂತನೆ

 ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ||
೧||

ಸೋಮೇಶ್ವರ ಶತಕದ ಮೇಲಿನ ಸಾಲುಗಳು ನನಗೆ ಬಹಳ ಇಷ್ಟ . ಅದರಲ್ಲೂ ಬಲ್ಲವರಿಂದ ಕಲ್ತುದು ಬಹಳ . ವೈದ್ಯಕೀಯ ವೃತ್ತಿಯಲ್ಲಿ ವಿದ್ಯಾರ್ಥಿ ಆಗಿದ್ದಾಗ ಅನಾಟಮಿ ,ಫಿಸಿಯೋಲಾಜಿ ಅಟೆಂಡರ್ ಗಳು ಎಷ್ಟೋ ಸಾಮಾನ್ಯ ಜ್ಞಾನದ ವಿಷಯ ಗಳನ್ನು ಅರುಹಿದ್ದರು .ಮುಂದೆ ಕ್ಲಿನಿಕಲ್ ವಿಭಾಗದಲ್ಲಿ ಅನುಭವಿ ನರ್ಸ್ ಗಳು ಇಂಜೆಕ್ಷನ್ ಕೊಡುವುದು,ಡ್ರೆಸ್ಸಿಂಗ್ ಮಾಡುವುದು ಇತ್ಯಾದಿ ,ಆಪರೇಷನ್ ಥೇಟರ್ ನಲ್ಲಿ  ವಾಶ್ ಮಾಡುವದು ,ಕತ್ತರಿ ಹಿಡಿದು ಕೊಳ್ಳುವುದು ,ಹೊಲಿಗೆ ಹಾಕುವ ವಿಧಾನ ಇತ್ಯಾದಿ ಮನವರಿಕೆ ಮಾಡಿಕೊಟ್ಟವರು . ಮೂಳೆ ವಿಭಾಗದ ಅಸಿಸ್ಟೆಂಟ್ ತಪ್ಪಿದ ಕೀಲು  ಸರಿಪಡಿಸುವದು ,ಇತ್ಯಾದಿ ಕಲಿಸಿ ಕೊಟ್ಟವರು . ಯಾವತ್ತೂ ನಮಗೆ  ಇವರಿಂದ ಎಂತ ಕಲಿಯುವುದು ಎಂಬ ಯೋಚನೆ ಬಂದೇ ಇಲ್ಲ . 

ಶಾಸ್ತ್ರಗಳ ಓದುವುದು ,ಮತ್ತು ಬೇರೆಯವರು ಹೇಳಿದ್ದನ್ನು ದೃಡೀಕರಿಸಿ ಕೊಳ್ಳುವದು ಬಹಳ ಮುಖ್ಯ .ಈಗ ಇಂಟರ್ನೆಟ್ ಬಂದು ಇದು ಸುಲಭ ಕೂಡಾ ಆಗಿದೆ .ಆದರೂ ಬಹಳ ಮಂದಿ  ಹಲವಂ ವಾಟ್ಸ್ಯಾಪ್ಪ್ ನಿಂ  ಕಂಡು ಅದರಿಂ ಬಂದದ್ದೇ ತೀರ್ಥ ಎಂದು ಸೇವಿಸುವುದು ಕಂಡು ದುಃಖ ಆಗುತ್ತದೆ . ಬಹಳ ಸಾರಿ ರೋಗಿ ಬಯಸಿದ್ದೂ ಹಾಲು ಎಂಬಂತೆ ವಾಟ್ಸಪ್ಪ್ ಗ್ರೂಪ್ ಸದಸ್ಯ ಬಯಸಿದ್ದೇ ಸದಸ್ಯರು ಸೃಷ್ಟಿಸಿ ಕೊಡುವಾಗ ಪಂಚಾಮೃತ ಎಂದು ಕಣ್ಣು ಮುಚ್ಚಿ ಸ್ವೀಕರಿಸುತ್ತಾರೆ . ಇವರಲ್ಲಿ ಬಹಳ ಮಂದಿ ವೈಯುಕ್ತಿಕವಾಗಿ ಒಳ್ಳೆಯವರು ಮತ್ತು ವಿಶಾಲ ಮನಸ್ಕರು . ಆದರೆ ವಾಟ್ಸಪ್ಪ್ ಗುಂಪುಗಳು mob ಮೆಂಟಾಲಿಟಿ ತರಹ . ಕಂಡ ಕೂಡಲೇ ಜಯ ಜಯ ಎಂದು ಫಾರ್ವರ್ಡ್ ಮಾಡಿ ಕೃತಾರ್ಥ ರಾಗುವರು . ಫ್ಯಾಕ್ಟ್ ಚೆಕ್ ಮಾಡಲೂ ಹೋಗರು . ಸಮಾಜಕ್ಕೆ  ಇದರಿಂದ  ಆಗುವ ದುಷ್ಪರಿಣಾಮ ಬಹಳ 

ಶುಕ್ರವಾರ, ಜುಲೈ 1, 2022

ಪದಾರ್ಥ

 ನಿನ್ನೆ ಹಿರಿಯ ಲೇಖಕಿ ಭುವನೇಶ್ವರಿ ಹೆಗ್ಡೆ ಅವರು ನಾನು ವಾಕಿಂಗ್ ಹೋಗಿ ಬರುವಾಗ ಚಂಡಿ ಆಗಿದ್ದೆ ಎಂಬುದನ್ನು ದಕ್ಷಿಣ ಕನ್ನಡೇತರ ರಿಗಾಗಿ  ಚಂಡಿ ಎಂದರೆ ಒದ್ದೆ ಎಂದು ವಿಶದೀಕರಿಸಿದ್ದರು . ಅದಕ್ಕೆ ಉತ್ತರವಾಗಿ ನಾನು ಸೂಕ್ತ ಪದಾರ್ಥ ಎಂದು ಬರೆದಿದ್ದೆ . ಗ್ರಾಂಥಿಕವಾಗಿ ಪದಾರ್ಥ ಎಂಬುದು ಪದದ ಅರ್ಥ .ಪಾ ವೆಂ ಆಚಾರ್ಯರ 'ಪದಾರ್ಥ ಚಿಂತಾಮಣಿ ' ಇದು ಇದೇ ಆಶಯದ ಕೃತಿ.ಪಂಜೆ  ಮಂಗೇಶ  ರಾಯರ 'ಪದಾರ್ಥವೇನು ?'ಎಂಬ  ಪ್ರಭಂದ  ಆರಂಭದಲ್ಲಿ  ಅಡಿಗೆ ಪದಾರ್ಥ ವನ್ನು ವಿವರಿಸಿದರೂ ಮುಂದೆ ಶಬ್ದ ಗಳ  ವ್ಯುತ್ಪತ್ತಿ ಯನ್ನು ವಿಶ್ಲೇಷಣೆ ಮಾಡುತ್ತದೆ . ಉದಾಹರಣೆ ಗೆ  ಬೀಳ್ಕೊಡು ಎಂಬುದು ವೀಳ್ಯ ಕೊಡು ಎಂಬುದರಿಂದ ಬಂದಿರ ಬಹುದು ಇತ್ಯಾದಿ . 

                   ಆದರೆ ವಾಡಿಕೆಯಲ್ಲಿ ಪದಾರ್ಥ ಎಂದರೆ ತಿನ್ನುವ ಅನ್ನ ,ಹೈನೇತರ  ಅಡಿಗೆ ಮಾಡಿ ತಯಾರು ಮಾಡುವ ವಸ್ತು .ತರಕಾರಿ ,ಮಾಂಸ ಮೀನು ಇತ್ಯಾದಿಗಳು ಮುಖ್ಯ ವಸ್ತುಗಳು . ತುಳುವಿನ ಕಜಿಪ್ಪು . 

ಕೆಲ ತಿಂಗಳುಗಳ ಹಿಂದೆ  ನಮ್ಮ ರಸ್ತೆ ಮೋರಿ ನಿರ್ಮಾಣಕ್ಕಾಗಿ ಬಂದ್ ಆಗಿತ್ತು . ಆದ್ದರಿಂದ  ನಾನು ಮುಖ್ಯ ರಸ್ತೆಯ ವರೆಗೆ ನಡೆದು ಆಟೋ ಹಿಡಿದು ಹೋಗುತ್ತಿದ್ದೆ . ಒಂದು ದಿನ ರಸ್ತೆಯಲ್ಲಿ ನಿತ್ಯ ಓಡಾಡುವ ಹುಡುಗಿ ಒಬ್ಬಾಕೆ ಸಿಕ್ಕಿದಳು . ವರ್ಕ್ ಶಾಪ್ ಒಂದರ ಉದ್ಯೋಗಿ . ನನ್ನನ್ನು ಕಂಡು ನಮಸ್ಕಾರ ಮಾಡಿ ಜತೆಗೇ ನಡೆಯುತ್ತಾ 'ಸಾರ್ ನೀವು ಗೋ ಡಾಕ್ಟ್ರಾ ?'ಎಂದು ಪ್ರಶ್ನೆ  ಮಾಡಿದಳು .(ನಮ್ಮ ರಸ್ತೆಯಲ್ಲಿ ಓರ್ವ ಹಿರಿಯ ಪಶು ವೈದ್ಯರು ಇದ್ದಾರೆ . )ನಾನು 'ಇಲ್ಲಕ್ಕ ಈಗ ನಡೆದೇ go ಮಾಡುವ (ನಡೆದು ಹೋಗುವ )ಡಾಕ್ರು . ನಾನು ಒಂದೇ ಪ್ರಾಣಿಯನ್ನು ಚಿಕಿತ್ಸೆ ಮಾಡ ಬಲ್ಲೆ . ಗೋ ಡಾಕ್ಟ್ರು ಹಲವು ಪ್ರಾಣಿಗಳನ್ನು ಮಾಡ ಬಲ್ಲರು . "ಎಂದೆ .ಯಾಕೆ ಕೇಳಿದ್ದು ಎಂದುದಕ್ಕೆ 'ಸುಮ್ಮನೇ ' ಎಂದಳು :ಬಹುಶಃ ಆಕೆಯ ಮನೆಯಲ್ಲಿ ಹಸು ಸಾಕುತ್ತಿರ ಬಹುದು . 

ಆಮೇಲೆ ಮಾತು ಮುಂದುವರಿಸುತ್ತಾ 'ನಿಮಗೆ ಏನು ತಿಂಡಿ?'ಎಂದಳು .ನಾನು 'ಪುಂಡಿ 'ಎಂದೆ .ಕೂಡಲೇ 'ಪದಾರ್ಥ ಎಂತದ್ದು ?'ಎಂಬ ಪ್ರಶ್ನೆ .ನಾನು' ಬಸಳೆ 'ಎಂದೆ . ಪದಾರ್ಥ ಶಬ್ದ ಕೇಳಿ ಬಹಳ ಸಂತೋಷ ಆಯಿತು .ಹೀಗೆ ಮಾತನಾಡುತ್ತಾ  ಮುಖ್ಯ ರಸ್ತೆ ಬಂದುದೇ ತಿಳಿಯಲಿಲ್ಲ . 

ಈಗಲೂ ನನಗೆ ಕಜಿಪ್ಪಿಗೆ ಪದಾರ್ಥ ಎಂದು ಏಕೆ ಹೆಸರು ಬಂತು ಎಂದು ತಿಳಿದಿಲ್ಲ .


ಬಾಲಂಗೋಚಿ ; ಕೆಲವರಿಗೆ  ದಾರಿಯಲ್ಲಿ ಈ ತರಹ ಪ್ರಶ್ನೆ ಇಷ್ಟ ಆಗುವುದಿಲ್ಲ .ಆಗ ಕೋಪದಲ್ಲಿ "ಅಂಬಟೆ ಕಾಯಿ ಕೊರಂಟು ,ನಿನಗ್ಯಾಕೆ ?"ಎನ್ನುವರು ಎಂದು ಪಂಜೆಯವರ ಪ್ರಬಂಧ ದಲ್ಲಿ ಬರುತ್ತದೆ .

Untitled


ಬುಧವಾರ, ಜೂನ್ 29, 2022


 ನಮ್ಮಲ್ಲಿ ಅನೇಕರು ಏನಾದರೂ ಸಾಧಿಸಬೇಕು ಎಂಬ ಉತ್ಸಾಹದೊಡನೆ  ಸರಕಾರಿ ಸೇವೆ ಸೇರುತ್ತೇವೆ . ಅಲ್ಪ ಸಮಯದಲ್ಲಿ ಅಲ್ಲಿನ ಜಡ ಗಟ್ಟಿದ  ಕೆಲಸ ಸಂಸ್ಕೃತಿಯಲ್ಲಿ ನಾವೂ ಒಂದಾಗಿ ಹೋಗುತ್ತೇವೆ .' ಇಲ್ಲಿ ಏನೂ ಹೊಸತು ಮಾಡಲು ಸಾಧ್ಯವಿಲ್ಲ . ನಮ್ಮ ಸಂಬಳ ಸಾರಿಗೆ ಪ್ರಮೋಷನ್ ಸರಿಯಾಗಿ ಬಂದರೆ ಸಾಕು .' ಎಂಬ ಭಾವ ಬರುತ್ತದೆ . ಬೆರಳೆಣಿಕೆಯವರು ರಾಜೀನಾಮೆ ಕೊಟ್ಟು ಹೋಗುತ್ತಾರೆ ಅಥವಾ ತಮ್ಮ ಹುದ್ದೆಗೆ ಸೀಮಿತ ಪರಿಧಿಯಯಲ್ಲಿ ಹೊಸ ಅರ್ಥ ಕೊಟ್ಟು , ಮಾಡ ಬಹುದಾದ ಸಮಾಜಮುಖಿ ಕೆಲಸ ಹುಡುಕುತ್ತಾರೆ . ಎರಡನೇ ವರ್ಗದವರು ನಮ್ಮ ಜಿಲ್ಲೆಯ ಪ್ರಸ್ತುತ  ಸೀನಿಯರ್ ಪೋಸ್ಟಲ್ ಸೂಪರಿಂಟೆಂಡೆಂಟ್ ಅಗಿರುವ ತರುಣ ಅಧಿಕಾರಿ ಶ್ರೀಹರ್ಷ ನೆಟ್ಟಾರ್ ಅವರು .ತಮ್ಮ ಖಾಸಗಿ ಸಾಫ್ಟ್ ವೇರ್ ಕೆಲಸ ಬಿಟ್ಟು ಕೇಂದ್ರ ಲೋಕ ಸೇವ ಆಯೋಗ ಪರೀಕ್ಷೆ ಉತ್ತೀರ್ಣ ರಾಗಿ ಅಂಚೆ ಇಲಾಖೆ ಸೇರಿದವರು .

ಈಗ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅಂಚೆ ಮೂಲಕ ಜನನ ಮರಣ  ಸರ್ಟಿಫಿಕೇಟ್ ಮನೆಗೇ ತಲುಪಿಸುವ ಯೋಜನೆ ಆರಂಬಿಸಿದ್ದು ಜನರು ಇದಕ್ಕಾಗಿ ಅಲೆದಾಡ ಬೇಕಿಲ್ಲ . ನಗರ ಸಭೆ ,ಕಾರ್ಪೊರೇಷನ್ ನವರಿಗೂ ತಲೆ ನೋವು ಆಗದಂತೆ ಅಂಚೆ ತಲುಪಿದ ಮೇಲೆ ಹಣ ಕೊಡುವ ವ್ಯವಸ್ಥೆ ಮಾಡಿದ್ದಾರೆ .

ಇಂತಹ ಅನೇಕ ನೂತನ ಯೋಜನೆಗಳು ಇವರ ಕಾರ್ಯವಧಿಯಲ್ಲಿ ಮೂಡಿ ಬರಲಿ .ಜನರ ಜೀವ ನಾಡಿ ಯಾಗಿದ್ದ ಅಂಚೆ ಇಲಾಖೆ ಸೇವೆಯ ಹೊಸ ಆಯಾಮಗಳನ್ನು ಕಂಡು ಕೊಳ್ಳಲಿ .

ಮಂಗಳವಾರ, ಜೂನ್ 28, 2022

ವಿಮಾನ ಯಾನ

ನಾನು ಮೊದಲು ವಿಮಾನದಲ್ಲಿ ಪ್ರಯಾಣ ಮಾಡಿದ್ದು ೨೦ ವರ್ಷಗಳ ಹಿಂದೆ . ಅದೂ ಕೊಲ್ಲಿ ರಾಷ್ಟ್ರಕ್ಕೆ ಹೋಗುವ ಅಂತರ ರಾಷ್ಟೀಯ ಪ್ರಯಾಣ . ಆದಾಗಲೇ ೯/೧೧ ರ ಭಯೋತ್ಪಾದಕ ಕೃತ್ಯ ಆಗಿದ್ದು  ವಿಮಾನ ನಿಲ್ದಾಣಗಳಲ್ಲಿ ಸುರಕ್ಷಾ ಕ್ರಮಗಳು ಕಠಿಣ ವಾಗಿದ್ದವು .ಪ್ರಯಾಣಿಕರು ಮೂರು ಗಂಟೆ ಮೊದಲೇ ನಿಲ್ದಾಣಕ್ಕೆ ತಲುಪಿ ಲಗ್ಗೇಜ್ ಪರಿಶೋಧಕ ಮೂಲಕ ತಪಾಸಣೆ ನಡೆಸಿ ,ಆಮೇಲೆ ಒಳಗಡೆ ಹೋಗುವಾಗ ಪುನಃ ಲೋಹ ಪರಿಶೋಧಕ ದಿಂದ ಸ್ಪೋಟಕ ಇದೆಯೋ ಎಂದು ನೋಡುವ ಪದ್ಧತಿ ಜಾರಿಗೆ ಬಂದಿತ್ತು . 

ನಾನು ಪ್ರಯಾಣಿಸಿದ ವಿಮಾನದಲ್ಲಿ ಕೋಟ್ ಟೈ ಧಾರಿಗಳಿಂದ ಹಿಡಿದು ಮುಂಡು  ಬನಿಯನ್ ಕೊರಳಿಗೆ ಒಂದು ಕರ್ಚೀಫ್ ಸುತ್ತಿದ ಸಾಮಾನ್ಯರ ವರೆಗೆ ಇದ್ದು ನಿಜವಾದ ಸಮಾಜವಾದದ ಪ್ರತೀಕ ಎಂಬಂತಿತ್ತು . ಇವರಲ್ಲಿ ಬಹಳ ಮಂದಿ ಜನ ಸಾಮಾನ್ಯರಾಗಿದ್ದು ಉದ್ಯೋಗಾಕಾಂಕ್ಷಿ ಗಳಾಗಿ ಕನಸು ತುಂಬಿ ಕೊಂಡು ಹೋಗುತ್ತಿದ್ದವರು . ನನಗೂ ಮೊದಲನೇ  ಅಂತರಿಕ್ಷ ಪಯಣ . 

ವಿಮಾನ ಹೊರಡುವುದಕ್ಕೆ ಮೊದಲು ಗಗನ ಸಖಿ ಬಂದು ಸೀಟ್ ಬೆಲ್ಟ್ ಕಟ್ಟುವ ಕ್ರಮದ ಬಗ್ಗೆ (ಆಗೆಲ್ಲಾ ಕಾರ್ ಗಳಲ್ಲಿ ಸೀಟ್ ಬೆಲ್ಟ್ ಬಂದಿರಲಿಲ್ಲ ,ಕಾರಣ ನಮಗೆ ಅದೂ ಹೊಸತು ) ತಿಳಿಸುವರು  .ಆಮೇಲೆ ವಿಮಾನ ಒಂದು ವೇಳೆ ನೀರಿನಲ್ಲಿ ಲ್ಯಾಂಡ್ ಆಗ ಬೇಕಾಗಿ ಬಂದರೆ ಲೈಫ್ ಜಾಕೆಟ್ ಸೀಟ್ ನ ಕೆಳಗೆ ಇರುವುದು .ಅದನ್ನು ಹಾಕಿ ಕೊಂಡು ಬಾಯಲ್ಲಿ ಊದಿದರೆ ಅದು ಉಬ್ಬಿಕೊಳ್ಳುವುದು ಎಂದು ಹೇಳುವರು .ಅದನ್ನು ಊಹಿಸಿ ಒಂದು ಕ್ಷಣ ನಮಗೆ ಗಾಬರಿ ಯಾಗಿ  ಮಧೂರು ವಿಘ್ನೇಶ್ವರ ನಿಂದ ಹಿಡಿದು ಪುತ್ತೂರು ಮಹಾಲಿಂಗೇಶ್ವರ ನ ವರಗೆ ಎಲ್ಲಾ ದೇವರ ನೆನಪು ಆಗುವುದು . ಈ ಪಾಠ ವನ್ನು ನಂತರದ ಅನೇಕ ಯಾನದಲ್ಲಿಯೂ ಕೇಳಿದ್ದೇನೆ . ಆದರೆ ಅಂತಹ ಪರಿಸ್ಥಿತಿ ಬಂದರೆ ನಿಜಕ್ಕೂ ಜಾಕೆಟ್ ಉಪಯೋಗಕ್ಕೆ ಬರುವುದು ಸಂಶಯ . ಅಲ್ಲದೆ ವಿಮಾನದ ತುರ್ತು ಬಾಗಿಲಿಂದ ಹೊರ ಬರುವ ಮೊದಲೇ ಉಬ್ಬಿದ ಜಾಕೆಟ್ ಧರಿಸಿದರೆ ಹೊರ ಬರುವುದು ಕಷ್ಟವಾಗ ಬಹುದು .ಅಂದ ಹಾಗೆ ನಾವು ಊದಿದ ಗಾಳಿಯಿಂದ ಜಾಕೆಟ್ ಉಬ್ಬುವುದಲ್ಲ ಅಂತೆ .ಅದರಲ್ಲಿ ಇರುವ ರಾಸಾಯನಿಕಗಳು ನಾವು ಮುಚ್ಚಳ ತೆಗೆದೊಡನೆ ಕ್ರಿಯಾಶೀಲ ಗೊಂಡು ಅನಿಲ ಉತ್ಪನ್ನ ಮಾಡುವವು . 

ವಿಮಾನ ನಿಂತ ಕೂಡಲೇ ಸಿಬ್ಬಂದಿ ಸೂಚನೆ ಬರುವ ಮೊದಲೇ ಇಳಿಯಲು ತರಾತುರಿ ಮಾಡುವ ನಾವು ಇಂತಹ ಸೂಚನೆಗಳನ್ನು ಎಷ್ಟು ಪಾಲಿಸಿಯೇವು ?

ಇನ್ನೊಂದು ಗಿಣಿ ಪಾಠ ಆಮ್ಲಜನಕ ದ  ಮಾಸ್ಕ್ ಬಗ್ಗೆ .ನಿಮಗೆ ತಿಳಿದಂತೆ ವಿಮಾನ ಆಗಸದಲ್ಲಿ ಬಲು ಎತ್ತರಕ್ಕೆ ಹಾರುತ್ತಲಿರುವುದು .ಮೇಲೆ ಹೋದಂತೆ ಗಾಳಿಯಲ್ಲಿ ಆಮ್ಲಜನಕ ದ  ಒತ್ತಡ ಕಡಿಮೆ ಆಗುವುದು .ವಿಮಾನದಲ್ಲಿ ಅದನ್ನು ಮನುಷ್ಯನಿಗೆ ಬೇಕಾದ ಒತ್ತಡದಲ್ಲಿ ಕೊಡುವ ವ್ಯವಸ್ಥೆ ಇದ್ದು ,ಅದು ವಿಫಲ ಆದರೆ ಅಥವಾ ವಿಮಾನ ಬಹಳ ಎತ್ತರಕ್ಕೆ ಹೋದರೆ ಪ್ರಾಣ ವಾಯು ಕಡಿಮೆ ಆದ ಸೂಚನೆ ಬರುವುದು . ಕೂಡಲೇ ಪ್ರಯಾಣಿಕರ ಮೇಲಿಂದ ಆಮ್ಲಜನಕ ದ  ಮಾಸ್ಕ್ ಇಳಿದು ಬರುವುದು(ವಾಯು ದೇವ ) .ಇಲ್ಲಿ ಕೂಡಾ ಇದು ಕೆಲವು ಕ್ಷಣಗಳಿಗೆ ಮಾತ್ರ ಲಭ್ಯ ವಿದ್ದು ಅಷ್ಟರಲ್ಲಿ ಪೈಲಟ್ ವಿಮಾನವನ್ನು ಕೆಳಕ್ಕೆ ತರುವನು . ವಿಮಾನದಲ್ಲಿ ಆಮ್ಲಜನಕದ ಅಂಡೆ ಇರದೇ ಮಾಸ್ಕ್ ಮತ್ತು ಗಾಳಿ ಚೀಲಕ್ಕೆ ಹೊಂದಿಕೊಂಡು ಕೆಲವು ರಾಸಾಯನಿಕಗಳು ಆಮ್ಲ ಜನಕ ಉತ್ಪತ್ತಿ ಮಾಡುವ ವ್ಯವಸ್ಥೆ . ಇದರಲ್ಲಿ ಒಂದು ಸೂಚನೆ ಇರುತ್ತದೆ .'ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ತಮ್ಮ ಗತಿ ಗಮನಿಸಿ ಕೊಳ್ಳಿ' ಎಂದರೆ ನೀವು ಸ್ವಾರ್ಥಿಗಳು ಆಗಿರಿ ಎಂದಲ್ಲ . ಒಡನೇ ಸ್ವಯಂ ಆಮ್ಲಜನಕ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಇನ್ನೊಬ್ಬರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ನೀವು ಇರಲಾರಿರಿ ಎಂದು ಅರ್ಥ . 

ಇನ್ನು ವಿಮಾನ ಏರುವಾಗ ಮತ್ತು ಇಳಿಯುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಿರಿ .ನಿಮ್ಮ ಮೊಬೈಲ್ ಏರೋಪ್ಲೇನ್ ಮೋಡ್ ನಲ್ಲಿ ಅಥಾವ ಆಫ್ ಮಾಡಿ ಇಡಿ ,ಸೀಟ್ ಮುಂದಕ್ಕೆ ತನ್ನಿರಿ ,ಕಿಟಿಕಿ ಗಾಜು ತೆರೆಯಿರಿ ಇತ್ಯಾದಿ ತಿಳಿದ ವಿಚಾರವನ್ನು ಮೊದಲನೇ ಬಾರಿ ಹೇಳುವಂತೆ ನಿಷ್ಠೆಯಿಂದ ಸಿಬ್ಬಂದಿ ಹೇಳುತ್ತಿದ್ದರೂ ಬಹಳ ಮಂದಿ ತಿಳಿದೂ ಅದನ್ನು ಪಾಲಿಸರು . ಪರಿಚಾರಿಕೆ ಬಂದು ಗದರಿಸ ಬೇಕು . 

ಮೊದಲ ಯಾನದಲ್ಲಿ ಅಕ್ಕ ಪಕ್ಕದವರು ಮಾಡಿದ ಹಾಗೇ ನೋಡಿ ಮಾಡುವುದು ,ವಾತಾಯನ ವ್ಯವಸ್ಥೆ ಹೇಗೆ ತಿರಿಗಿಸುವುದು ,ಪರಿಚಾರಿಕೆಯನ್ನು ಕರೆಯುವ ಗುಂಡಿ ಒತ್ತುವುದು ,ಹೇಗೆ ಊಟ ಮಾಡುವುದು ಇತ್ಯಾದಿ . ವಾಷ್ ರೂಮ್ ನಲ್ಲಿ ಮಾತ್ರ ನಾವು ಮಾತ್ರ ಇರುವ ಕಾರಣ ಭಯ ;ಯಾವುದನ್ನು ಮುಟ್ಟಿದರೆ ಏನು ಆಗುವುದೋ ?

ವಿಮಾನದಲ್ಲಿ ನಮ್ಮಂತವರು ಪ್ರಯಾಣಿಸುವ ಇಕೋನೋಮಿ ಕ್ಲಾಸ್ ನಲ್ಲಿ ಸೀಟ್ ಗಳು ಬಹಳ ಹತ್ತಿರ ಹತ್ತಿರ ಇದ್ದು ನನ್ನಂತಹ ಉದ್ದದವರಿಗೆ ಕಷ್ಟ . ಮುಂದಿನ ಸೀಟಿನ ವ್ಯಕ್ತಿ ಧಡೂತಿ ಆಸಾಮಿ ಯಾಗಿದ್ದು ಪುಶ್ ಬ್ಯಾಕ್ ಮಾಡಿದರೆ ನಮ್ಮ ಮೊಣಕಾಲು ಚಟ್ನಿ . ಈಗ ಬಸ್ ಮತ್ತು ಟ್ರೈನ್ ನಲ್ಲಿ  ಅಕ್ಕ ಪಕ್ಕದವರ ಜತೆ ಸಂಭಾಷಣೆಯಲ್ಲಿ ಯಾರೂ ತೊಡಗುವದಿಲ್ಲ .ವಿಮಾನದಲ್ಲಿ ಅದು ಸ್ವಲ್ಪ ಮೊದಲೇ ಬಂದಿರಬೇಕು . 

ಒಮ್ಮೆ ನಾವು(ನಾನು ಮತ್ತು ಪತ್ನಿ ) ಅಮೆರಿಕಾದಲ್ಲಿರುವ ಮಗನ ಭೇಟಿಗಾಗಿ ಬೆಂಗಳೂರಿನಿಂದ ದುಬೈ ಮೂಲಕ ಸಿಯಾಟಲ್ ಪಟ್ಟಣಕ್ಕೆ ಹೋಗುವ ಎಮಿರೇಟ್ ವಿಮಾನದಲ್ಲಿ ಬೆಂಗಳೂರಿನಿಂದ ಪಯಣ ಆರಂಭಿಸಿದೆವು .ದುಬೈಯಲ್ಲಿ ಇಳಿದು ವಿಮಾನ ಬದಲಿಸ ಬೇಕು .ದುಬೈ ಯಲ್ಲಿ ಬೋರ್ಡಿಂಗ್ ಮಾಡುವ ವೇಳೆ ನಮ್ಮ ಟಿಕೆಟ್  ನೋಡಿ ತಡೆದು ಬದಿಗೆ ನಿಲ್ಲುವಂತೆ ಹೇಳಿದರು .ನನಗೋ ಭಯ ;ನಮ್ಮ ಮೇಲೆ ಯಾರಾದರೂ ಲುಕ್ ಔಟ್ ನೋಟೀಸ್ ಜ್ಯಾರಿ ಮಾಡಿದ್ದಾರೋ ?ಸ್ವಲ್ಪ ಸಮಯದ ಬಳಿಕ  ಪರಿಚಾರಿಕೆ ಓರ್ವಳು ಬಂದು ನಿಮ್ಮಿಬ್ಬರ ಟಿಕೆಟ್ ನ್ನು  ಬ್ಯುಸಿನೆಸ್ ಕ್ಲಾಸ್ ಗೆ ಏರಿಸಿದ್ದೇವೆ ಎಂದು ನಮ್ಮನ್ನು ಸೀಟ್ ನ ಬಳಿಗೆ ಒಯ್ದಳು . ಅಲ್ಲಿ ದಂತ ವೈದ್ಯರ ಚೇರ್ ನಂತೆ ಇರುವ ಸೀಟ್ .ಕಾಲು ಚಾಚಿ ಮಲಗ ಬಹುದು . ,ಮೇಲೆ ಕೆಳಗೆ ಮಾಡ ಬಹುದು . ಕುರ್ಚಿಯಲ್ಲಿ ಕುಳಿತ ಒಡನೆ ಮಕ್ಕಳಂತೆ  ಸ್ವಿಚ್ ಗಳನ್ನು ಅದುಮಿ ಏನೇನು ಅಡ್ಜಸ್ಟ್ಮೆಂಟ್ ಇದೆ ಎಂದು ನೋಡಿದೆವು . ಅಕ್ಕ ಪಕ್ಕದಲ್ಲಿ ಇದ್ದ ಪ್ರಯಾಣಿಕರು ಗಂಭೀರವಾಗಿ ವಿಸ್ಕಿ ಸೇವಿಸುತ್ತಾ ಲ್ಯಾಪ್ ಟಾಪ್ ಇಲ್ಲವೇ ಪುಸ್ತಕದಲ್ಲಿ ಮಗ್ನವಾಗಿದ್ದರು . ಆಗಾಗ ಸ್ವಿಚ್ ಒತ್ತಿ ಏನೇನೋ ತರಿಸಿ ತಿನ್ನುವರು . ನಾನು  ಎಕಾನಮಿ ಕ್ಲಾಸ್ ನಲ್ಲಿ ಬರುವಂತೆ ಸಮಯಕ್ಕೆ ಸರಿಯಾಗಿ ಊಟ ಕೊಡುವರೆಂದು ಕಾದದ್ದೇ ಬಂತು .ಹಸಿವು ತಡೆಯದೆ ಹೆಂಡತಿ ನೀವು ಊಟ ಕೇಳಿ ಎಂದಾಗ ;'ಸ್ವಲ್ಪ ತಾಳು ಈಗ ತಂದಾರು 'ಎಂದು ಸಮಾಧಾನ ಮಾಡಿದೆ .ಇನ್ನು ಸ್ಪೆಷಲ್ ಆಗಿ ಆರ್ಡರ್ ಮಾಡಿದರೆ ಡಾಲರ್ ನಲ್ಲಿ ಸಿಕ್ಕಾ ಬಟ್ಟೆ ಚಾರ್ಜ್ ಮಾಡಿದರೆ ?ಎಂದು ಭಯ . ಕೊನೆಗೆ ತಡೆಯಲಾರದೆ ಪ್ಯಾಂಟ್ರಿ ಬಳಿಗೆ ಹೋಗಿ ಊಟ ?ಎಂದೆ .ನಿಮಗೆ ಇಂತಹ ಆಹಾರ ಬೇಕು ಎಂದು ನಾನು ಅದುವರೆಗೆ ಕೇಳದೇ ಇದ್ದ ಐಟಂ ಗಳ ಹೆಸರು ಗಳನ್ನು ಹೇಳಲು ವೆಜ್ ವೆಜ್ ಮೀಲ್ಸ್ ಎಂದು ಬಡ ಬಡಿಸಿದೆ . ಉಪ್ಪು ಹುಳಿ ಖಾರ ಇಲ್ಲದ ಅನ್ನ ದಿಂದ ಮಾಡಿದ ಏನಂತಹದೋ ಒಂದು ತಂದು ಕೊಟ್ಟುದನ್ನು ಮುಖ ಸಿಂಡರಿಸಿ ಕೊಂಡು ತಿಂದೆವು . ದುಬೈ ಯಿಂದ ಸಿಯಾಟಲ್ ಗೆ ಹೀಗೇ ಹನ್ನೊಂದು ಗಂಟೆ ಸುಖಾಸೀನ ವಿದ್ದರೂ ಅತೃಪ್ತ ಉದರ ದೊಂದಿಗೆ ಪ್ರಯಾಣಿಸಿದೆವು . ಮಗನ ಬಳಿ ಹೇಳಲು ನೀವು ಅದೃಷ್ಟವಂತರು ,ಹೆಚ್ಚು ವೆಚ್ಚ ಇಲ್ಲದೆ ಮೇಲ್ವರ್ಗ ದಲ್ಲಿ ಪ್ರಯಾಣ ,ಒಮ್ಮೆ ಅವರೇ ಕ್ಲಾಸ್ ಅಪ್ಗ್ರೇಡ್ ಮಾಡಿದರೆ ಅದರ ಎಲ್ಲಾ ಸೌಲಭ್ಯಗಳನ್ನೂ ಪಡೆಯ ಬಹುದು ಎಂದ 

ಏನೇ ಹೇಳಿ ನನಗೆ ನಮ್ಮೂರಿನ  ಬಸ್ ಮತ್ತು ಟ್ರೈನ್ ಯಾತ್ರೆಯೇ ವಿಮಾನ ಯಾನಕ್ಕಿಂತ ಸುಖ ಎನಿಸುತ್ತದೆ . 

ಬಾಲಂಗೋಚಿ : ಹಿಂದೆ ವಿಮಾನ ಪ್ರಯಾಣಿಕರಿಗೆ ಕೊಂಪ್ಲಿ ಮೆಂಟರಿ ಆಗಿ ಚಾಕ್ಲೆಟ್ ನೀಡುತ್ತಿದ್ದು ,ನನ್ನ ಅಮ್ಮ ತಾನು ತಿನ್ನದಿದ್ದರೂ ಮೊಮ್ಮಕ್ಕಳಿಗೆ ಎಂದು ಚೀಲಕ್ಕೆ ಹಾಕಿ ತರುತ್ತಿದ್ದರು .

ಭಾನುವಾರ, ಜೂನ್ 12, 2022

ತಲೆಯೊಳಗಿನ ಬೆಲ್ಲ

                     


ನಮ್ಮ ತಳೆಯಯೊಳಗೆ ಮೆದುಳಿನ ಬುಡದಲ್ಲಿ ಒಂದು ಕಿರು ಮೆದುಳು ಇದೆ ;ಅದನ್ನು ಸೆರೆಬೆಲ್ಲಮ್ ಎಂದು ಕರೆಯುವರು . ಲ್ಯಾಟಿನ್ ಭಾಷೆಯಲ್ಲಿ ಕಿರಿ ಮೆದುಳು ಎಂದು ಕರೆಯುವರು . ಇದು ಗಾತ್ರದಲ್ಲಿ ಕಿರಿದಾದರೂ ಕಾರ್ಯ ವ್ಯಾಪ್ತಿ ಹಿರಿದು . 

 ಈ ಭಾಗದ ರಕ್ತನಾಳದಲ್ಲಿ ರಕ್ತ ಹೆಪ್ಪು ಗಟ್ಟಿ ಅಥವಾ ರಕ್ತ ಸ್ರಾವ ವಾಗಿ ಸೆರೆಬೆಲ್ಲಮ್ ನ ಕಾರ್ಯ ವ್ಯತ್ಯಯ  ಆಗುವದು . ಆಲ್ಕೋಹಾಲ್ ಕೂಡಾ ಈ ಅಂಗವನ್ನು  ನಶಿಶ ಬಲ್ಲುದು . 

ಸೆರೆಬೆಲ್ಲಮ್ ಅನಾರೋಗ್ಯ ಗೊಂಡರೆ ಶರೀರದ ಸಮತೋಲ ತಪ್ಪುವುದು ,ಕೈ ಕಾಲುಗಳ ನಡುಕ ,ನೇರ ಕುಳಿತು ಮತ್ತು ನಿಂತು ಕೊಳ್ಳಲು ಆಗದಿರುವುದು,ನಿಂತರೂ ನಡೆ ವಾಲುವುದು ,ಮಾತು ತೊದಲುವುದು ಇತ್ಯಾದಿ ಉಂಟಾಗುವದು . 

ರೋಗಿಯ ರೋಗ ಲಕ್ಷಣ ,ಪರೀಕ್ಷೆ ಮತ್ತು (ಎಂ ಆರ್ ಐ ಉತ್ತಮ  )ಸ್ಕ್ಯಾನ್ ಮೂಲಕ ರೋಗ ಪತ್ತೆ ಮಾಡುವರು ,

ಶುಕ್ರವಾರ, ಜೂನ್ 10, 2022

ಒಂದು ನೆನಪು

 ಮನೆಗೆ ವಿಶಾಲವಾದ ಚಾವಡಿ .ಅದಕ್ಕೆ ಕಿಟಿಕಿಗಳಿಲ್ಲ . ಸರಳಿನ ದಳಿಗಳು ಮಾತ್ರ . ಇದರ ಮೂಲಕ ಬೆಕ್ಕುಗಳಿಗೆ ಪ್ರವೇಶಕ್ಕೆ ವೀಸಾ ಅವಶ್ಯವಿಲ್ಲ .ಕೆಲವೊಮ್ಮೆ ಇಲಿ ಮತ್ತು ಕೇರೆ ಹಾವುಗಳಿಗೂ . ಬಾರ್ಡರ್ ಸೆಕ್ಯೂರಿಟಿ ಗೆ ಬೆಕ್ಕು ನಾಯಿ ಇದ್ದ ಕಾರಣ ಇವುಗಳ ಹಾವಳಿ ಅಪರೂಪ . ಮುಖ್ಯ ಬಾಗಿಲು ಯಾವತ್ತೂ ತೆರೆದಿದ್ದು ರಾತ್ರಿ ಹನ್ನೊಂದರಿಂದ ಮುಂಜಾನೆ ಐದರ ವರೆಗೆ ಮಾತ್ರ ಹಾಕುವದು . 

 ರಾತ್ರಿ ಆಟ ,ಸಾಮೂಹಿಕ ಭೋಜನ ಮತ್ತೆ ಅಧ್ಯಯನ ದ  ಸೋಗು ಮುಗಿದ ಮೇಲೆ ಒಬ್ಬೊಬ್ಬರೇ ಒಳಗಿನ ಉಗ್ರಾಣದಿಂದ  ಚೇರಟೆಯಂತೆ ಮಡಿಚಿದ್ದ ತಮ್ಮ ತಮ್ಮ  ಚಾಪೆ ,ಹಾಸಿಗೆ(ಕೆಲವು ಒಲಿಯದ್ದು ,ಕೆಲವು ಹುಲ್ಲಿನದ್ದು ) ಇತ್ಯಾದಿ ತಂದು ಮಲಗುವುದು. (ಮಡಿಚಿಟ್ಟ ಚಾಪೆ ಹಾಸಿಗೆಯಲ್ಲಿ ಧೂಳು ಮತ್ತು ಧೂಳು ಕ್ರಿಮಿಗಳು ಸೇರವು .ಮತ್ತು ಈಗಿನಂತೆ ಫ್ಯಾನ್ ಹಾಕುವಾಗ ಹಾರಿ ನಮ್ಮ ಶ್ವಾಸಕೋಶ ಸೇರಿ ಅಲ್ಲರ್ಜಿ ಉಂಟು ಮಾಡುವ ಪ್ರಮೇಯ ಇರಲಿಲ್ಲ . )ಪಕ್ಕದಲ್ಲಿ ಅಜ್ಜನಿಗೆ ಮೂಡ್ ಇದ್ದರೆ ಕತೆ ಹೇಳುವರು .ಇಲ್ಲದಿದ್ದರೆ ಶಾಲೆಯ  ಮೇಷ್ಟ್ರ ಮತ್ತು ಮಕ್ಕಳ ಬಗ್ಗೆ ತಮಾಷೆ ಮಾಡುತ್ತಾ ನಿದ್ರಾ ದೇವಿಗೆ ಕಾಯುವುದು . ಕೆಲವೊಮ್ಮೆ ಹಿರಿಯರು 'ಸುಮ್ಮನೆ ಬಾಯಿ ಮುಚ್ಚಿ ಮಲಗಿರಿ 'ಎಂದು ಗದರಿಸುವರು . 

 ಬಾಗಿಲು ಇಲ್ಲದ ಚಾವಡಿಯಲ್ಲಿ ಸೊಳ್ಳೆಗಳಿಗೆ ದೊಣ್ಣೇ  ನಾಯಕನ ಅಪ್ಪಣೆ ಬೇಕೇ ?ನಾವು ಮಲಗುವುದಕ್ಕೆಯೇ ಕಾಯುತ್ತಿದ್ದು ಗಡಿಯಾಚೆಗಿನ ಭಯೋತ್ಪಾದಕರಂತೆ ಧಾಳಿ ಇಡುತ್ತಿದ್ದವು .ತಮ್ಮ ಸಂಗೀತದ ಬ್ಯಾಂಡ್ ಜತೆ .ತಡೆಯಲಾರದೆ ಕೆಲವೊಮ್ಮೆ ಅಡಿಕೆ ಸೊಪ್ಪಿನ ಅಗ್ಗಿಷ್ಟಿಕೆಯಿಂದ ಹೊಗೆ ಹಾಕುತ್ತಿದ್ದೆವು ..ನಮ್ಮ ನಖಶಿಖಾಂತ ಹೊಗೆ ಪರಿಮಳ . ರಾತ್ರಿ ಆಗಾಗ ಗುಡ್ಡದಿಂದ ಉಕ್ಕೆವೋ ಉಕ್ಕೆವೋ ಎಂದು ನರಿ ಊಳಿಡುವುದು .. ಅದಕ್ಕೆ ಮನೆಯ ನಾಯಿ ಪ್ರತಿಧ್ವನಿ ಮಾಡುವುದು . (ಪಿರಂಗಿಗೆ ಪ್ರತಿ ಪಿರಂಗಿ ). 

ಬೆಳಗ್ಗೆ  ಎದ್ದೊಡನೆ  ಮನೆ ಬಾಗಿಲ ಬಳ್ಳಿ ತೋಟದ ಅಡಿಕೆ ಮರದ ಕೊಬೆಗಳು ಕಾಣುವವು . ಬೇಸಿಗೆಯಲ್ಲಿ ಅವುಗಳ  ಹಸಿರು ಬಣ್ಣ ಹಳದಿ ಮತ್ತು ಕೆಂಪು ಬಣ್ಣಕ್ಕೆ ತಿರುಗುವುದು ಹಂತ ಹಂತವಾಗಿ  ಕಾಣುವುದು . ಮಳೆಯ ಆಗಮನ ತುಂಬಾ ವಿಳಂಬವಾದ ವರ್ಷಗಳಲ್ಲಿ ಸಂಪೂರ್ಣ ಒಣಗಿ ಸತ್ತ ದೃಶ್ಯಗಳೂ ಕಣ್ಣ ಮುಂದೆ ಇದೆ . 

ಈ ವರ್ಷ ಮಳೆ ತಡವಾಗಿದೆ ,ಆದುದರಿಂದ ಹಳೆಯ ನೆನಪುಗಳು ಬರುತ್ತಿವೆ .