ಬೆಂಬಲಿಗರು

ಶುಕ್ರವಾರ, ಜೂನ್ 10, 2022

ಒಂದು ನೆನಪು

 ಮನೆಗೆ ವಿಶಾಲವಾದ ಚಾವಡಿ .ಅದಕ್ಕೆ ಕಿಟಿಕಿಗಳಿಲ್ಲ . ಸರಳಿನ ದಳಿಗಳು ಮಾತ್ರ . ಇದರ ಮೂಲಕ ಬೆಕ್ಕುಗಳಿಗೆ ಪ್ರವೇಶಕ್ಕೆ ವೀಸಾ ಅವಶ್ಯವಿಲ್ಲ .ಕೆಲವೊಮ್ಮೆ ಇಲಿ ಮತ್ತು ಕೇರೆ ಹಾವುಗಳಿಗೂ . ಬಾರ್ಡರ್ ಸೆಕ್ಯೂರಿಟಿ ಗೆ ಬೆಕ್ಕು ನಾಯಿ ಇದ್ದ ಕಾರಣ ಇವುಗಳ ಹಾವಳಿ ಅಪರೂಪ . ಮುಖ್ಯ ಬಾಗಿಲು ಯಾವತ್ತೂ ತೆರೆದಿದ್ದು ರಾತ್ರಿ ಹನ್ನೊಂದರಿಂದ ಮುಂಜಾನೆ ಐದರ ವರೆಗೆ ಮಾತ್ರ ಹಾಕುವದು . 

 ರಾತ್ರಿ ಆಟ ,ಸಾಮೂಹಿಕ ಭೋಜನ ಮತ್ತೆ ಅಧ್ಯಯನ ದ  ಸೋಗು ಮುಗಿದ ಮೇಲೆ ಒಬ್ಬೊಬ್ಬರೇ ಒಳಗಿನ ಉಗ್ರಾಣದಿಂದ  ಚೇರಟೆಯಂತೆ ಮಡಿಚಿದ್ದ ತಮ್ಮ ತಮ್ಮ  ಚಾಪೆ ,ಹಾಸಿಗೆ(ಕೆಲವು ಒಲಿಯದ್ದು ,ಕೆಲವು ಹುಲ್ಲಿನದ್ದು ) ಇತ್ಯಾದಿ ತಂದು ಮಲಗುವುದು. (ಮಡಿಚಿಟ್ಟ ಚಾಪೆ ಹಾಸಿಗೆಯಲ್ಲಿ ಧೂಳು ಮತ್ತು ಧೂಳು ಕ್ರಿಮಿಗಳು ಸೇರವು .ಮತ್ತು ಈಗಿನಂತೆ ಫ್ಯಾನ್ ಹಾಕುವಾಗ ಹಾರಿ ನಮ್ಮ ಶ್ವಾಸಕೋಶ ಸೇರಿ ಅಲ್ಲರ್ಜಿ ಉಂಟು ಮಾಡುವ ಪ್ರಮೇಯ ಇರಲಿಲ್ಲ . )ಪಕ್ಕದಲ್ಲಿ ಅಜ್ಜನಿಗೆ ಮೂಡ್ ಇದ್ದರೆ ಕತೆ ಹೇಳುವರು .ಇಲ್ಲದಿದ್ದರೆ ಶಾಲೆಯ  ಮೇಷ್ಟ್ರ ಮತ್ತು ಮಕ್ಕಳ ಬಗ್ಗೆ ತಮಾಷೆ ಮಾಡುತ್ತಾ ನಿದ್ರಾ ದೇವಿಗೆ ಕಾಯುವುದು . ಕೆಲವೊಮ್ಮೆ ಹಿರಿಯರು 'ಸುಮ್ಮನೆ ಬಾಯಿ ಮುಚ್ಚಿ ಮಲಗಿರಿ 'ಎಂದು ಗದರಿಸುವರು . 

 ಬಾಗಿಲು ಇಲ್ಲದ ಚಾವಡಿಯಲ್ಲಿ ಸೊಳ್ಳೆಗಳಿಗೆ ದೊಣ್ಣೇ  ನಾಯಕನ ಅಪ್ಪಣೆ ಬೇಕೇ ?ನಾವು ಮಲಗುವುದಕ್ಕೆಯೇ ಕಾಯುತ್ತಿದ್ದು ಗಡಿಯಾಚೆಗಿನ ಭಯೋತ್ಪಾದಕರಂತೆ ಧಾಳಿ ಇಡುತ್ತಿದ್ದವು .ತಮ್ಮ ಸಂಗೀತದ ಬ್ಯಾಂಡ್ ಜತೆ .ತಡೆಯಲಾರದೆ ಕೆಲವೊಮ್ಮೆ ಅಡಿಕೆ ಸೊಪ್ಪಿನ ಅಗ್ಗಿಷ್ಟಿಕೆಯಿಂದ ಹೊಗೆ ಹಾಕುತ್ತಿದ್ದೆವು ..ನಮ್ಮ ನಖಶಿಖಾಂತ ಹೊಗೆ ಪರಿಮಳ . ರಾತ್ರಿ ಆಗಾಗ ಗುಡ್ಡದಿಂದ ಉಕ್ಕೆವೋ ಉಕ್ಕೆವೋ ಎಂದು ನರಿ ಊಳಿಡುವುದು .. ಅದಕ್ಕೆ ಮನೆಯ ನಾಯಿ ಪ್ರತಿಧ್ವನಿ ಮಾಡುವುದು . (ಪಿರಂಗಿಗೆ ಪ್ರತಿ ಪಿರಂಗಿ ). 

ಬೆಳಗ್ಗೆ  ಎದ್ದೊಡನೆ  ಮನೆ ಬಾಗಿಲ ಬಳ್ಳಿ ತೋಟದ ಅಡಿಕೆ ಮರದ ಕೊಬೆಗಳು ಕಾಣುವವು . ಬೇಸಿಗೆಯಲ್ಲಿ ಅವುಗಳ  ಹಸಿರು ಬಣ್ಣ ಹಳದಿ ಮತ್ತು ಕೆಂಪು ಬಣ್ಣಕ್ಕೆ ತಿರುಗುವುದು ಹಂತ ಹಂತವಾಗಿ  ಕಾಣುವುದು . ಮಳೆಯ ಆಗಮನ ತುಂಬಾ ವಿಳಂಬವಾದ ವರ್ಷಗಳಲ್ಲಿ ಸಂಪೂರ್ಣ ಒಣಗಿ ಸತ್ತ ದೃಶ್ಯಗಳೂ ಕಣ್ಣ ಮುಂದೆ ಇದೆ . 

ಈ ವರ್ಷ ಮಳೆ ತಡವಾಗಿದೆ ,ಆದುದರಿಂದ ಹಳೆಯ ನೆನಪುಗಳು ಬರುತ್ತಿವೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ