ಬೆಂಬಲಿಗರು

ಮಂಗಳವಾರ, ಮೇ 31, 2022

ನಮ್ಮ ನಾಯಿ

 


 ಚಿತ್ರದಲ್ಲಿ ಕಾಣುವುದು ನಮ್ಮ ಬೀದಿ ನಾಯಿ ;ನನ್ನ ಮನೆಯವರು ಅದಕ್ಕೆ ಪ್ಯಾಚಿ ಎಂದು ಕರೆಯುವರು .ಅದರ ಸಂಗಾತಿ ಒಂದು ಇದೆ .ಅದರ ಹೆಸರು ಬೊಳ್ಳಿ. ಬೆಳಿಗ್ಗೆ  ಬ್ರೇಕ್ ಫಾಸ್ಟ್ ಮತ್ತು ಸಂಜೆ ಟಿಫಿನ್  ನಮ್ಮ ಮನೆಯಲ್ಲಿ . ಮಿಕ್ಕವು ಬೀದಿಯ ಬೇರೆ ಮನೆಗಳಲ್ಲಿ . 

ಪುಟಿನ್ ನಂತೆ ಕಂಡ ಕಂಡವರನ್ನೆಲ್ಲಾ  ವಿನಾ ಕಾರಣ ಆಕ್ರಮಿಸದೆ ತಮ್ಮ ಸುದ್ದಿಗೆ ಬಂದವರನ್ನು ಮಾತ್ರ ಉಕ್ರೇನ್ ನವರಂತೆ ಬಿಡುವುದಿಲ್ಲ .  ಪರಕೀಯರು (ಬಿಕ್ಷುಕರು ,ನೆಂಟರು ಇತ್ಯಾದಿ )ಮತ್ತು  ಸ್ವಕೀಯರು ಇಬ್ಬರಿಗೂ ಬಾಲ ಅಲ್ಲಾಡಿಸಿ ಸ್ವಾಗತಿಸುವುದು . ಯಾರೂ "ಯಾನತ್ತ ನಾಯಿ ಈ ದಾಯೆ ಕೊರೆಪ್ಪುನೆ ?"ಎಂದು ಪರಿಚಯ ಹೇಳುವ ಅವಶ್ಯಕತೆ ಇಲ್ಲ .ಹಾಲಿನವರು ,ಮೀನಿನವರು , ಗುಜರಿಯವರು  ಇತ್ಯಾದಿ  ಬರುವಾಗಲೂ ಸ್ವಾಗತಿಸುವ  ಇದು ಮತ್ತು ಇದರ  ಮಿತ್ರರು  ಪೇಪರ್ ನ  ಅಣ್ಣ ಬಂದಾಗ ಮಾತ್ರ ಅವರ ಬೈಕನ್ನು ಅಟ್ಟಿಸಿ ಕೊಂಡು ಹೋಗುವವು .ಅದೇ ಪೇಪರ್ ಅಣ್ಣ  ಮಾಸಾಂತ್ಯ  ಬಿಲ್ ಸಂಗ್ರಹಿಸಲು ಬಂದಾಗ ಸುದ್ದಿ ಇಲ್ಲ .

ಇದು ಯಾಕೆ ಹೀಗೆ ?ಎಂದು ತಲೆ ಕೆರೆದು ಕೊಂಡರೂ ಅರ್ಥವಾಗಿರಲ್ಲ . ಹಿಂದೆ ಒಬ್ಬರಿಗೆ ದಿನಾಲೂ ನಾಯಿ  ನಿದ್ರೆಯಯಲ್ಲಿ ಮೈಮೇಲೆ  ಹಾರಿ ಕಚ್ಚಿದಂತೆ  ಕನಸು  ಬೀಳುವ ಕಾರಣ  ತಿಳಿಯುವುದಕ್ಕಾಗಿ  ಬಲ್ಮೆ ಇಟ್ಟಾಗ  ಸಿಂಡಿಕೇಟ್ ಬ್ಯಾಂಕ್ ನಿಂದ ಕೊಂಡ  ಸಾಲ  ಮರು ಪಾವತಿ ಮಾಡದೇ ಇರುವುದು  ತಿಳಿದು ಬಂತು ಎಂಬ ಕತೆ ಕೇಳಿದ್ದೀರಿ .(ಆ ಬ್ಯಾಂಕ್ ನ ಲೋಗೋ ದಲ್ಲಿ ನಾಯಿ ಚಿತ್ರ ಇತ್ತು ).

ಕೊನೆಗೆ ಅರ್ಥವಾಯಿತು .ಪತ್ರಿಕೆ ಒಳ್ಳೆಯದಿದ್ದರೂ ಇತ್ತೀಚೆಗೆ ದಿನಾಲೂ ಕೆಟ್ಟ ಸುದ್ದಿಗಳೇ ತುಂಬಿರುವ ಕಾರಣ ಅದನ್ನು ಮುಂಜಾನೆ ಓದಿದವರ ತಲೆ ಹಾಳಾಗುವುದು .ಮೂಡ್ ನಷ್ಟವಾಗಿ  ಕೆಲವೊಮ್ಮೆ ನಾಯಿಯ ಮೇಲೆ ವಿನಾ ಕಾರಣ ಮಂದಿ ರೇಗುವರಲ್ಲದೆ ನಾಸ್ಟಾ   ಕೂಡಾ ಕಡಿಮೆ ಹಾಕುವರು .ನಾಯಿ ತುಂಬಾ ಸೂಕ್ಷ್ಮ ಗ್ರಾಹಿ ತಾನೇ ?

ಸೋಮವಾರ, ಮೇ 30, 2022

ಸಜ್ಜನರ ಸಂಗದಲಿ

ನಿನ್ನೆ ಸಂಜೆ  "ಪಂಚವಟಿ " ಯಲ್ಲಿ ವಾಸವಿರುವ ಹಿರಿಯರು ಶ್ರೀ ಬಲ್ನಾಡು ಸುಬ್ಬಣ್ಣ ಭಟ್ ಅವರ ಜತೆ ಕಳೆದು ನಾವು ಪುನರ್ಯವ್ವನ ಪಡೆದ ಅನುಭವ .ಸಜ್ಜನ  ವಿದ್ವದ್ಜನ ರೊಡನೆ  ಕಾಲ ಕಳೆಯುವುದೇ ಒಂದು ಟಾನಿಕ್ . 

ಈ ಹಿರಿಯರ ಬಗ್ಗೆ ಹಿಂದೆಯೇ ಬರೆದಿದ್ದೇನೆ .ಎಸ್ ಬಿ ಹೇಟ್ ಎಂಬ ಕಾವ್ಯನಾಮದಿಂದ  ತ್ರಿಪದಿ ಚೌಪದಿಗಳನ್ನು ರಚಿಸಿರುತ್ತಾರೆ  . ಹಿಂದೆ ಶಿಂಗಣ್ಣ ರಾಮಕೃಷ್ಣ ಶಾಸ್ತ್ರೀ ಅವರ ಇಂದ್ರ ಧನುಸ್ ,ಜಿ ನಾರಾಯಣ ಅವರ ವಿನೋದ ಪತ್ರಿಕೆ ಗಳಲ್ಲಿ ಇವರ ಲೇಖನ ಪದ್ಯ ಗಳು ಪ್ರಕಟವಾಗುತ್ತಿದ್ದವು .  ಗಣಿತಾಸಕ್ತಿ ಮತ್ತು ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . 

ಅವರ ಪುತ್ರ ಶ್ರೀ ಪ್ರಸನ್ನ ಮತ್ತು ಸೊಸೆ ತ್ರಿವೇಣಿ ಯವರ ಆತಿಥ್ಯ .ಹೊಟ್ಟೆ ಮತ್ತು ಮನಸು ಎರಡೂ ತಂಪಾಯಿತು .

                                             



 


ಭಾನುವಾರ, ಮೇ 29, 2022

ಪುಂಡಿಕಾಯಿ ನಾರಾಯಣ ಭಟ್


 

                              No photo description available.                                                                                                         ನಮ್ಮಲ್ಲಿ ಕೆಲವು ಸಾಹಿತ್ಯ ಕಲಾ ಪ್ರೇಮಿ ಕುಟುಂಬಗಳು ಇವೆ . ಉದಾಹರಣೆಗೆ  ವಿಟ್ಲ ಸೀಮೆಯಲ್ಲಿ  ಮುಳಿಯ ಎಂಬ ಊರು ಇದೆ . ಅನ್ಯಥಾ ಸಾಧಿಸದಿದ್ದರೆ(Unless otherwise proved ) ಇಲ್ಲಿ ಎಲ್ಲರೂ ಸಾಹಿತ್ಯ ಕಲಾ ಪ್ರಿಯರು ಮತ್ತು ಪೋಷಕರು . ಮುಳಿಯ ತಿಮ್ಮಪ್ಪಯ್ಯ ,ಮುಳಿಯ ಮಹಾಬಲ ಭಟ್(ಮುಳಿಯ ತಿಮ್ಮಪ್ಪಯ್ಯನವರ ಪುತ್ರ ವಕೀಲ ,ಬರಹಗಾರ ಯಕ್ಷಗಾನ ಅರ್ಥಧಾರಿ ) ,ಗಂಗಾ  ಪಾದೇಕಲ್(ತವರು ಮನೆ ಮುಳಿಯ ) ಇವರೆಲ್ಲಾ ಪ್ರಸಿದ್ಧ ಬರಹಗಾರರು . ಮುಳಿಯದ ಯಾವುದೇ ಮನೆಗೆ ಹೋದರೂ ಅಲ್ಲಿ ಓದುಗರು ಕಲಾ ರಸಿಕರು  ಸಿಗುವರು .

ಅದೇ ರೀತಿ ವಿಟ್ಲ ಸೀಮೆಯ  ಪುಂಡಿಕಾಯಿ ಕೋಡ ಪದವು ಬೈಲಿನವರು ಹೆಚ್ಚಿನವರು ರಸಿಕರು .ಕಲೆ ಸಾಹಿತ್ಯ ಆಸ್ವಾದಕರು ಮತ್ತು ಪೋಷಕರು . 

ಇದರಲ್ಲಿ ಓರ್ವರು ಪುಂಡಿಕಾಯಿ ನಾರಾಯಣ ಭಟ್ ಅವರು .ಇವರು ಹಿರಿಯ ವಕೀಲರು . ಸಾಹಿತ್ಯ ,ಯಕ್ಷಗಾನ ಮತ್ತು ಒಳ್ಳೆಯ  ಸಿನೆಮಾ ಗಳನ್ನು ಅರಸಿ ಆಸ್ವಾದಿಸುವರು . ಅವರ ಸಹೋದರಿ  ಮತ್ತು ನನ್ನ ಹಿರಿಯ  ಅಕ್ಕನನ್ನು ಒಂದೇ ಮ ನೆಗೆ ಮದುವೆ ಮಾಡಿ ಕೊಟ್ಟಿದ್ದು ನಾವು ಬಂಧುಗಳು ಕೂಡಾ .ಆದರೆ ನಾನು ಅವರಿಗಿಂತ ವಯಸಿನಲ್ಲಿ ಬಹಳ ಕಿರಿಯ ನಾದುದರಿಂದ  ಅಲ್ಲಿ ಅವರೊಡನೆ ಮಾತನಾಡುವ ಅವಕಾಶ ಸಿಕ್ಕಿದ್ದು ಕಡಿಮೆ . 

ನನ್ನ ಇತ್ತೀಚೆಗಿನ ಬರವಣಿಗೆಗೆ ಅವರೂ ಅವರ ಶ್ರೀಮತಿ  ಸವಿತಾ ಅಕ್ಕ ನವರೂ ತುಂಬು ಹೃದಯದಿಂದ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ . ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕ್ಕೆ  ಭಾರೀ ಮಳೆ ಇದ್ದರೂ ಬಂದು ಹರಸಿದ್ದಾರೆ . 

ಇವರ ಸಹೋದರ ಪ್ರಸಿದ್ಧ ಇತಿಹಾಸ ತಜ್ಞ ಲೇಖಕ  ಪುಂಡಿಕಾಯಿ  ಗಣಪಯ್ಯ ಭಟ್ .ಮಗ ಡಾ ರಾಮರಾಜ್  ಶಸ್ತ್ರ ಚಿಕಿತ್ಸಾ ತಜ್ಞ ;ಜತೆಗೆ  ಹಿರಿಯರ ಹವ್ಯಾಸ ಮೈಗೂಡಿಸಿ ಕೊಂಡವರು . ಇಷ್ಟೆಲ್ಲಾ ಬರೆಯಲು  ಕಾರಣ ಮೊನ್ನೆ ಈ ಹಿರಿಯ ವಕೀಲರು ತಮ್ಮೆಲ್ಲಾ ಕಾರ್ಯ ಬಾಹುಳ್ಯದ ನಡುವೆಯೂ ಬರೆದ ಒಂದು ಪತ್ರ . 

ಪುಂಡಿಕಾಯಿ ನಾರಾಯಣ ಭಟ್ 

ಹಿರಿಯ ವಕೀಲರು  ಬಿ ಸಿ ರೋಡ್ 

ರಿಗೆ ,

   ಡಾ ಎ ಪಿ ಭಟ್ 

                ನಿಮ್ಮ' ವೈದ್ಯನ ವಗೈರೆಗಳು "ಪುಸ್ತಕದಲ್ಲಿ ಪೂರ್ವ ಸೂರಿಗಳೂ ಮಹಾನ್ ವಕೀಲರೂ ಆದ ಸದಾಶಿವ ರಾವ್ ,ಕೆ ಆರ್ ಕಾರಂತ್ ಇತ್ಯಾದಿ ವಕೀಲರ ಹೆಸರು ಓದುವಾಗ ರೋಮಾಂಚನ ವಾಯಿತು . ಅವು  ವಕಾಲತ್ತಿನ ವೈಭವದ ದಿನಗಳು .ಈಗ  ಕಾಣೆಯಾಗಿದೆ ಎನ್ನಲು ಬೇಸರವಾಗುತ್ತಿದೆ .ಹಾಗೇ  ಡಾ ವೆಂಕಟ್ ರಾವ್ ,ಡಾ ಚಾರಿ ,ಡಾ ಸಿ ಆರ್ ಬಲ್ಲಾಳ್ ದಂತಕತೆಗಳು ಆದವರು . 

 ಪುಸ್ತಕದಲ್ಲಿ ಕೈಪೇತು (Caveat )ಎಂದಿದೆ .ಅದು Caveat  ಅಲ್ಲ .ಕೈಪೇತು ಎಂದರೆ Plaint (ವಾದ ಪತ್ರ ).ದಾವಾ ಸಲ್ಲಿಸುವ ಮೊದಲಿಗೆ ತನ್ನ ಸಮಸ್ಯೆಗಳನ್ನು ಕೋರ್ಟಿಗೆ ಸಲ್ಲಿಸುವ ಪ್ರಮಾಣ ಪತ್ರ .Caveat  ಪದ ಹೆಚ್ಚು ಚಾಲ್ತಿಗೆ ಬಂದದ್ದು 1976ರ C.P.Cತಿದ್ದುಪಡಿಯ ನಂತರ . 

ನಿಮ್ಮ ಗಮನಕ್ಕೆ ಈ ಪತ್ರ 

ಬಿ ಸಿ ರೋಡ್                                         ಇಂತೀ ನಮಸ್ಕಾರ 

                                                        ( ಸಹಿ ) ಪುಂಡಿಕಾಯಿ ನಾರಾಯಣ ಭಟ್

25 .5.2022                                                                             

    ಹಿರಿಯರ ಆಶಯ setting things right.ಅವರಿಗೆ ನಾನು ಋಣಿ .

ಕೈಫಿಯತ್ತು  ಪಾರ್ಸಿ ಭಾಷೆಯ ಮೂಲದಿಂದ ಬಂದದ್ದು . ಈ ಮಾತಿಗೆ ಸಮಾಚಾರ ಎಂಬುದು ಸಾಮಾನ್ಯವಾದ ಅರ್ಥ. ಇಂದೂ ನ್ಯಾಯಸ್ಥಾನಗಳಲ್ಲಿ ಸಾಕ್ಷಿ ನುಡಿಯುವವರ ಕಡೆಯಿಂದ ಪ್ರಮಾಣ ಮಾಡಿಸಿ ಪಡೆಯುವ ಹೇಳಿಕೆಗಳನ್ನು ಕೈಫೀತು ಅನ್ನುತ್ತಾರೆ. ಈ ಮಾತು ಬಿಜಾಪುರ ದ ಅದಿಲ್ ಶಾಹಿ ಗಳ ಕಾಲದಲ್ಲಿ ಕನ್ನಡ ಭಾಷೆಗೆ ಬಂದು ಸೇರಿ  ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಕನ್ನಡ ನಾಡಿನಲ್ಲೆಲ್ಲ ವಿಶೇಷವಾಗಿ ಪ್ರಚುರಗೊಂಡಿತು. ಅಂದಿಗಾಗಲೇ ಈ ಮಾತಿನ ಅರ್ಥ ವಿಶಾಲಗೊಂಡು ಚಾರಿತ್ರಿಕ ನಿರೂಪಣೆಯೆಂಬ ಬಣ್ಣವೂ ಬಂದಿತು.ಇದನ್ನೇ ನನ್ನ ಅಜ್ಜ ಆಗಾಗ ಕೈಪೇತು (ಪ್ರಮಾಣ ಪತ್ರ )ಎನ್ನುತ್ತಿದ್ದಿರ ಬೇಕು .


ಶನಿವಾರ, ಮೇ 28, 2022

ಸಾಹಿತ್ಯ (ಪುಸ್ತಕ )ಪ್ರೇಮಿ ಅಬೂಬಕರ್

                                      

                                           

      



ಇಲ್ಲಿಯ ಪುಸ್ತಕ ವೈವಿದ್ಯ ನೋಡಿ ಕಾರಂತರ  ಮರಳಿ ಮಣ್ಣಿಗೆ ,ಗೋಕಾಕರ ಸಮರಸವೇ ಜೀವನ ,ಬೈರಪ್ಪನವರ ವಂಶ ವೃಕ್ಷ ,ಚಿತ್ತಾಲರ  ಪುರುಷೋತ್ತಮ ,ಕುವೆಂಪು ಅವರ ಕಾನೂರು ಹೆಗ್ಗಡಿತಿ ;ನಾವು ಸಂಗ್ರಹಾರ್ಹ ಕೃತಿ ಗಳು ಎಂದು ಕರೆಯುವ ಪುಸ್ತಕಗಳು ಇರುವ ಇದು ಯಾವುದೋ ಕನ್ನಡ ಸಾಹಿತಿ ಪ್ರಾಧ್ಯಾಪಕರ  ಸಂಗ್ರಹ ಎಂದು ನೀವು ಊಹಿಸುತ್ತಿರ ಬೇಕು .

ಇದು ಕಬಕ ನಿವಾಸಿ ಅಬೂಬಕರ್ ಅವರ ಮನೆ ಲೈಬ್ರರಿ ಸಂಗ್ರಹ . ಇವರನ್ನು ನಾನು ವರ್ಷಗಳಿಂದ ಬಲ್ಲೆ .ಸಾರಿಗೆ ಇಲಾಖೆ ಕೆಲಸಗಳಲ್ಲಿ ಜನರಿಗೆ ಸಹಾಯ ವಾಗುತ್ತಾ ಇದ್ದವರು . ನನ್ನ ಬಳಿಗೆ ಸಣ್ಣ ಪುಟ್ಟ ತೊಂದರೆಗೆ ಔಷಧೋಪಚಾರಕ್ಕೂ ಬಂದಿದ್ದರು.ಶ್ವೇತ ವಸನ ದಾರಿ ,ಸರಳ ವ್ಯಕ್ತಿತ್ವ . ಆಸ್ಪತ್ರೆಗೆ ಬಂದರೆ  ಎಲ್ಲರಂತೆ ಸರತಿಯಲ್ಲಿ ಬರುವರು .

ಆದರೆ ಅವರ ಪುಸ್ತಕ ಪ್ರೀತಿಯ ವಾಸನೆ ನನಗೆ ಸಿಕ್ಕಿದ್ದು ಇತ್ತೀಚೆಗೆ . ಪುಸ್ತಕದ ಅಂಗಡಿಯಿಂದ ನನ್ನ ಕೃತಿ ಯನ್ನು ಖರೀದಿಸಿ ಅವರು ಮತ್ತು ಮನೆಯವರು ಎಲ್ಲರೂ ಓದಿ ಆನಂದಿಸಿದ ವಿವರ ಸಿಕ್ಕಿದಾಗ ನನಗೆ ಅಚ್ಚರಿ ;ನನ್ನ ಪರಿಚಯ ಇದ್ದ ಕಾರಣ ಇರಬೇಕು ಎಂದು ಕೊಂಡು ಅನ್ವೇಷಣೆ ಮಾಡಲು ಇವರ ಬಳಿ ಓದುಗರಿಗೆ  ಈರ್ಷೆಯಾಗುವ ದೊಡ್ಡ ಸಂಗ್ರಹವೇ ಇದೆ ಎಂಬ ವಿಚಾರ ತಿಳಿದು ಬಹಳ ಸಂತೋಷ ವಾಗಿ  ಅದನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿದ್ದೇನೆ . 

ಇಳಿ ವಯಸ್ಸಿನಲ್ಲಿ ಇರುವ ಅವರಿಗೆ ಒಳ್ಳೆಯ ಆಯುರಾರೋಗ್ಯ ಹಾರೈಸುವಾ ಮತ್ತು ಅವರ ಸಂಪತ್  ಭಂಡಾರ ಬೆಳೆಯಲಿ .

ಬುಧವಾರ, ಮೇ 25, 2022

ಪಂಜೆ ಓದು

 ಪಂಜೆಯವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿದವರು . ಸ್ವಯಂ ಅಧ್ಯಾಪಕ ,ಇನ್ಸ್ಪೆಕ್ಟರ್ ಆಗಿದ್ದ ಅವರ ಸಬ್ ಅಸಿಸ್ಟಂಟನ ಸುಳ್ಳು ಡೈರಿಯಿಂದ  ತೆಳು ಹಾಸ್ಯ ಲೇಪಿತ ,ಆದರೆ ಆಗಿನ ಅಧ್ಯಾಪಕರ ಬಡತನ ಮತ್ತು ಪ್ರಾಮಾಣಿಕತೆಗೆ ಹಿಡಿದ ಕೈ ಗನ್ನಡಿ.  ಶ್ರೀ ನಿವಾಸ ಮೂರ್ತಿಯವರ "ರಂಗಣ್ಣನವರ ಕನಸಿನ ದಿನಗಳು " ಕೂಡಾ ಇದೇ ಆಶಯ ಮತ್ತು ವೈಖರಿಯ ಕೃತಿ . (ಇದನ್ನು ಈಗ  ಹಾಸ್ಯ ಕೃತಿ ಎಂಬ ಶೀರ್ಷಿಕೆಯಲ್ಲಿ  ಪ್ರಕಟಿಸುತ್ತಿರುವುದು ಸ್ವಲ್ಪ ಬೇಸರದ ಸಂಗತಿ) . ಪಂಜೆ ಅವರು ಅವರು ಸತ್ಯ ದೀಪಿಕಾ ಎಂಬ ಪತ್ರಿಕೆಯಲ್ಲಿ ಹರಟೆಮಲ್ಲ ,ವಿಕಟ ಮಲ್ಲ ಇತ್ಯಾದಿ ಗುಪ್ತನಾಮದಿಂದ ಅಂಕಣ ಬರೆಯುತ್ತಿದ್ದರು . 

  ಹರಟೆ ಮಲ್ಲನ ಉವಾಚ 

ಮಾಸ್ತರನು  ಪಾಸು ಮಾಡಬೇಕು ;ಕಾನ್ಸ್ಟೇಬಲನು ತಪಾಸು ಮಾಡ ಬೇಕು .ಪೋಲೀಸಿನವನಿಗೆ ಕೈತುಂಬಾ ಗಂಟಾದರೂ ಉಂಟು .ಉಪಾಧ್ಯಾಯನಿಗೆ ಬೆರಳು ಗಂಟುಗಳಲ್ಲದೆ ಮತ್ತೇನೂ ಇಲ್ಲ . 

ವಿಕಟ ಮಲ್ಲನ ಉವಾಚ 

ಕಳೆದ ವರ್ಷ ಮಾತೃ ಕ್ಲೇಶ (ಮೆಟ್ರಿಕ್ಯುಲೇಷನ್)ಯಜ್ಞದಲ್ಲಿ ಅನೇಕಾನೇಕ ಹುಡುಗರನ್ನು ಆಹುತಿಯಾಗಿ ಕೊಟ್ಟರಂತೆ .ಇಂಥವರ ಪಿತೃಗಳಿಗೆಲ್ಲಾ  ಮನೋಕ್ಲೇಶ .ದೊಡ್ಡ ಉಪಾಧ್ಯಾಯರಿಗೆ ಪಶ್ಚಾತ್ತಾಪ .ಸಣ್ಣ ಉಪಾಧ್ಯಾಯರಿಗೆ ಸಂತಾಪ .ಹುಡುಗರ ಪ್ರಲಾಪ . 

 

ಶ್

ಮಂಗಳವಾರ, ಮೇ 24, 2022

"ಧೀ" ಗುಜ್ಜೆ

                                             ದೀವಿ ಹಲಸನ್ನು ಬೆಳೆಯುವುದು ಹೇಗೆ?  

ಇಂದು ಮುಂಜಾನೆ ಮಿತ್ರ ಮಣಿಲಾ ಸುಬ್ಬಣ್ಣ ಶಾಸ್ತ್ರಿಗಳು ಪ್ರೀತಿಯಿಂದ  ದೀಗುಜ್ಜೆ ಮತ್ತು  ಕಬ್ಬು ತಂದು ಕೊಟ್ಟಿದ್ದರು . ಮೊದಲನೆಯದು ಪದಾರ್ಥ ಮಾಡಲು ,ಇನ್ನೊಂದು ನಮ್ಮ ಹಿತ್ತಿಲಲ್ಲಿ ನೆಡಲು.ಅವರು ಆಗಾಗ  ಅವರಲ್ಲಿ ಬೆಳೆದುದನ್ನು  ಹಂಚಿ ಕೊಂಡು ನನ್ನನ್ನು ಚಿರ ಋಣಿ ಯಾಗಿ ಮಾಡಿದ್ದಾರೆ.

ದೀಗುಜ್ಜೆ ಕೊಟ್ಟಾಗ  ನಾನು ಬೇಡ ಎನ್ನುವುದಿಲ್ಲ . ಅದು ಧೀ ಶಕ್ತಿ ಹೆಚ್ಚಿಸುವ ಕಾರಣ ಅದಕ್ಕೆ ಆ ಹೆಸರು ಬಂದಿರಬೇಕು . ಈಗ ನೀವು ಎಲ್ಲಿ ಮದುವೆ  ಇತ್ಯಾದಿ ಸಮಾರಂಭ ಗಳಿಗೆ ಹೋದರೂ ಅದರದ್ದೇ ಸಂಭಾರು . ಮನೆಗಳಲ್ಲಿ ಸಂಜೆ ಮಳೆ ಬರುವಾಗ  ತಿನ್ನಲು ಅದರ ಪೋಡಿ ಮತ್ತು  ಚಿಪ್ಸ್ . ಎಳೆ ದೀಗುಜ್ಜೆ  ಪಲ್ಯ ಕೂಡ ತಿನ್ನಲು ರುಚಿ . 

ದೀಗುಜ್ಜೆ ಸಾಂಭಾರು ಮಿಕ್ಕರೆ ಮರುದಿನ  ಮುಂಜಾನೆ  ಆರಿಸಿ ತಿನ್ನಲು  ಬಹಳ ರುಚಿ . 

ಮಾರುತಿ ಪಿತನಿಗೂ ದೀಗುಜ್ಜೆ ಗೂ ನಂಟು ಇರುವುದರಿಂದ ಕೆಲವರು ಇದರ ಬಳಿ ಹೋಗರು.ಕಾರಣ  ಇದರಲ್ಲಿ ಬಟಾಟೆಯಂತೆ  ಶರ್ಕರ ಪಿಸ್ಟ ಜಾಸ್ತಿ ಇದ್ದು ನಮ್ಮ ಕರುಳ  ಬಾಕ್ಟೀರಿಯಾ ಗಳು ಅದನ್ನು ಒಡೆದು  ಅನಿಲ ಉತ್ಪತ್ತಿ ಮಾಡುವವು. ನಾವು ಇಂಗು ,ಓಮ ಇತ್ಯಾದಿ ಸೇರಿಸಿದರೆ  ಪಚನ ಸ್ರಾವಗಳು ಅಧಿಕ ಉತ್ಪತ್ತಿ ಆಗಿ  ಬಾಕ್ಟೀರಿಯಾ ತಲುಪುವ ಮೊದಲೇ ಅವು ಜೀರ್ಣ ಆಗಿರುವವು .

ಭಾನುವಾರ, ಮೇ 22, 2022

ತವರು ಭೇಟಿ

 ಮೊನ್ನೆ ಶನಿವಾರ ರಾತ್ರಿ ಮಡಿಯಾಲ  ಗೋಪಾಲಕೃಷ್ಣ ದೇವಸ್ಥಾನ ಸಂಭಾಂಗಣ ಕ್ಕೆ ಗೆಳೆಯ ವರದ ರಾಜ ಚಂದ್ರಗಿರಿ ಜತೆ ಹೋಗಿದ್ದೆ . ಸಂಧರ್ಭ ಮಡಿಯಾಲ  ಬಾಲಕೃಷ್ಣ ರಾವ್ ಅವರ ಮಗ ಅತುಲ್ ಅವರ ವಿವಾಹ ವಧೂ ಗೃಹ ಪ್ರವೇಶ ಮುನ್ನಾ ದಿನ . ಮದುವೆ ಇತ್ಯಾದಿ ಸಮಾರಂಭಗಳಿಗೆ ಅದೇ ದಿನ ಊಟದ ಸಮಯಕ್ಕೆ ಸರಿಯಾಗಿ ಹೋದರೆ ಯಾರನ್ನೂ ಮಾತನಾಡಿಸಲು ಆಗುವುದಿಲ್ಲ ;ಬರೀ ಯಾಂತ್ರಿಕ ಎನಿಸುತ್ತದೆ . ಹಿಂದಿನ ದಿನ ಹೋದರೆ ನೆಂಟರಿಷ್ಟರ ಜತೆ ಬೆರೆತು ಸಂತೋಷ ಆಗುವುದು . 

           ಬಾಲಕೃಷ್ಣ ರಾವ್ ಅವರ ಮನೆ ಕಿರಿಂಚಿ ಮೂಲೆ . ಅವರ ತಂದೆ ಶ್ರೀನಿವಾಸ ರಾವ್ ಮತ್ತು ಅಣ್ಣ ಶ್ರೀಪತಿ ರಾವ್ ನನ್ನ ಅಧ್ಯಾಪಕರು .ಬಾಲಕೃಷ್ಣ ರಾಯರಿಗೂ . ಬಾಲಕೃಷ್ಣ ಜೂನಿಯರ್ ಕಾಲೇಜು ಗಳಲ್ಲಿ ಅಧ್ಯಾಪನ ನಡೆಸಿ ,ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಲ್ ಆಗಿ ನಿವೃತ್ತಿ ಹೊಂದಿದವರು . ಅವರು  ಶಾಲೆಯಲ್ಲಿ ನನ್ನಿಂದ ಒಂದು ವರ್ಷ ಜೂನಿಯರ್ .ನಾವೆಲ್ಲ ಜತೆಗೆ ನಡೆದು ಕೊಂಡು ಶಾಲೆಗೆ ಹೋದವರು .ಅವರ ಅಣ್ಣ ಸುರೇಶ ನನ್ನ ಒಂದು ವರ್ಷ ಸೀನಿಯರ್ . 

  ನಾನು ಸ್ವಲ್ಪ ಬೇಗ ಪುತ್ತೂರಿನಿಂದ ತೆರಳಿ ಚಂದ್ರಗಿರಿ ಅವರಿಗೆ ನಮ್ಮ ಊರು ಸ್ವಲ್ಪ ದರ್ಶನ ಮಾಡಿಸ ಬೇಕು ಎಂದಿದ್ದೆ .ಆದರೆ ಅವರು ತಮ್ಮ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿದ್ದುದರಿಂದ ಹೊರಡುವಾಗಲೇ ರಾತ್ರಿ ಆಗಿತ್ತು . ವಿಟ್ಲ ,ಪಡಿಬಾಗಿಲು ಮೂಲಕ ಅಳಿಕೆ ಗೆ ಹೋದೆವು . ಅಳಿಕೆ ಜೂನಿಯರ್ ಕಾಲೇಜು ಇರುವ ಜಾಗಕ್ಕೆ ಹಿಂದೆ ಓಟೆ ತಿಮಾರು ಎಂದು ಕರೆಯಯುತ್ತಿದ್ದರು . ಈಗ ಪ್ರೈಮರಿ ಶಾಲೆ ಇರುವ ಸ್ಥಳ ಅಳಿಕೆ . ಹಿಂದೆ  ಇಲ್ಲಿ ಕಾಲು ದಾರಿ ಮಾತ್ರ ಇದ್ದು ನಾವು  ಕಾಸರಗೋಡು ಕಡೆ ಬಸ್ ಹಿಡಿಯಲು ನನ್ನ ಹುಟ್ಟೂರು ಅಂಗ್ರಿ ಯಿಂದ ಮೂರು ಮೈಲು ನಡೆದು ಪಡಿ ಬಾಗಿಲಿಗೆ ಬರುತ್ತಿದ್ದೆವು . 

ಅಳಿಕೆ ಪೇಟೆಗೆ ತಾಗಿ ಪಶ್ಚಿಮಕ್ಕೆ  ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನ ಇದೆ . ಅಲ್ಲಿಂದ ಪಶ್ಚಿಮಕ್ಕೆ ಒಂದು ಗುಡ್ಡೆ ಹತ್ತಿ ಇಳಿದರೆ(ಅರ್ಧ ಮೈಲು ) ನಮ್ಮ ಅಂಗ್ರಿ ಮನೆ . ನಮ್ಮ ಮನೆಯಲ್ಲಿ ದನ ಕರು ಹಾಕಿ ಶುದ್ಧದ ದಿನ ಮೊದಲ ಕರೆವಿನ ಹಾಲು ಈ ದೇವಸ್ಥಾನಕ್ಕೆ ಕೊಟ್ಟು ಮತ್ತೆ ಮನೆಯಲ್ಲಿ ಉಪಯೋಗ  ಮಾಡುತ್ತಿದ್ದೆವು . 

 ಅದಿರಲಿ ;ನಾವು ಕಲ್ಯಾಣ ಮಂಟಪ ಹೊಕ್ಕೊಡನೆ ಎಲ್ಲಾ ನನ್ನ ಬಾಲ್ಯದ ಒಡನಾಡಿಗಳು .ನನ್ನ ಕಿವಿಗೆ ಗಾಳಿ ಹೊಗ್ಗಿದ ಹಾಗೆ ಆಯಿತು .ಕಿರಿಂಚಿ ಮೂಲೆ ಚೀನಣ್ಣ ನ ಮಗ ನಾರಾಯಣ ರಾವ್ (ನನ್ನ ಅಕ್ಕನ ಕ್ಲಾಸ್ ),ಹಿಂದೆ ವಿವೇಕಾನಂದ ಕಾಲೇಜು ಜೆ ಓ ಸಿ ಯಲ್ಲಿ ಪ್ರಾಧ್ಯಾಪಕ ರಾಗಿ ಇದ್ದವರು ಮೊದಲು ಸಿಕ್ಕಿದರು .ಅವರೂ ನಮ್ಮ ಶಾಲಾ ಪಾಟಿ ,ಅವರ ಅಣ್ಣ ಶ್ರೀಧರ ರಾವ್ ನನ್ನ ಅಧ್ಯಾಪಕರು .ಅಣ್ಣ ಸೀತಾರಾಮ ಕಿರಿಂಚಿಮೂಲೆ ಯಲ್ಲಿ ಭಂಡ ಸಾಲೆ ಇಟ್ಟಿದ್ದರು .ಈಗ ಇಲ್ಲ .ಅವರ ಮಗ ಆಮೇಲೆ ಪರಿಚಯ ಆಯಿತು . ನನ್ನ ಕ್ಲಾಸ್ ಮೇಟ್ ಲಕ್ಷ್ಮಿ ನಾರಾಯಣ ಉರುಫ್ ರಾಜಣ್ಣ (,ಈಗ ಕನ್ಯಾನ ದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ ),ನ ಭೇಟಿ . ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡೆವು . 

ಬಾಲಕೃಷ್ಣ ರಾವ್ ಅವರ ಅಣ್ಣ ಶ್ರೀಪತಿ ರಾವ್ ,ಸುರೇಶ ಮತ್ತು ಅವರ ಕುಟುಂಬ .ಅವರ ಸಹೋದರಿಯರು ಎಲ್ಲಾ ಬಹಳ ಖುಷಿ ಯಿಂದ ಮಾತನಾಡಿಸಿದರು . ಸಣ್ಣ ಸಂಗೀತ ಕಾರ್ಯಕ್ರಮ ,ನಂತರ ರುಚಿಯಾದ ಊಟ .ಮನೆಗೆ ಮರಳುವಾಗ ಹೊಟ್ಟೆಯೊಡನೆ ಮನಸೂ ಸಂತೋಷದಿಂದ ತುಂಬಿತ್ತು .