ಬೆಂಬಲಿಗರು

ಸೋಮವಾರ, ಏಪ್ರಿಲ್ 18, 2022

ಗ್ರಾಮೀಣ ಭಾಗದ ಅಶ್ವಿನಿ ದೇವತೆಗಳು ಡಾ ಕೆ ಪಿ ಹೊಳ್ಳ ಮತ್ತು ಸುಮತಿ ಹೊಳ್ಳ

ಡಾ

 




                                      

ವೈದ್ಯಕೀಯ ಕ್ಷೇತ್ರದಲ್ಲಿ ಒಂದು ವಿಪರ್ಯಾಸ ಇದೆ . ಹಿಂದೆ ಅನೇಕ ಆಧುನಿಕ ಪದ್ದತಿಯ ವೈದ್ಯರು ವ್ಯಾಸಂಗ ಮುಗಿಸಿ ತಮ್ಮ ಊರ ಸುತ್ತ ಮುತ್ತಲಿನ ಜನರ ಸೇವೆ ಸಲ್ಲಿಸಲು ಕಾತರಿಸುತ್ತಿದ್ದರು . ಆದರೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುವುದಿಲ್ಲ ಎಂಬ ಆರೋಪ ಇತ್ತು . ಇಂದು ಕೂಡ ಎಷ್ಟೆಲ್ಲಾ ಮೆಡಿಕಲ್ ಕಾಲೇಜು ಗಳು ಬಂದರೂ ಪರಿಸ್ಥಿತಿ ಅಂದಿಗಿಂತಲೂ ಕೆಟ್ಟಿದೆ ಎಂದೇ ಹೇಳ ಬಹುದು . 

ಕುರ್ಚಿಪಳ್ಳ ಅಥವಾ ಉಪ್ಪಳ ಒಂದು ಸಣ್ಣ ಪಟ್ಟಣ ವಾಗಿತ್ತು ..ರೈಲು ನಿಲ್ದಾಣ ಇದ್ದ ಕಾರಣ ಅಕ್ಕ ಪಕ್ಕದ ಊರಿನವರು ಮಂಗಳೂರು ರೈಲು ಹಿಡಿಯಲು ಇಲ್ಲಿಗೆ ಬರುತ್ತಿದ್ದು ರೈಲು ನಿಲ್ದಾಣ ರಸ್ತೆಯಲ್ಲಿ ಮಾತ್ರ ಕೆಲವು ಅಂಗಡಿಗಳು ಇದ್ದವು . ಮಂಗಳೂರಿಗೆ ಈಗಿನಂತೆ ಒಳ್ಳೆಯ ರಸ್ತೆ ಮತ್ತು ವಾಹನ ಸೌಲಭ್ಯ ಇರಲಿಲ್ಲ . ಆ ಕಾಲದಲ್ಲಿ  ಇಲ್ಲಿ ಪಕ್ಕದ ಕಯ್ಯಾರಿನ ಪ್ರತಿಷ್ಠಿತ ಮನೆತನದ ಡಾ ಕೆ ಪ್ರಭಾಕರ ಹೊಳ್ಳ ,ಎಂ ಬಿ ಬಿ ಎಸ  ಆಗಿ ಸರ್ಜರಿ ಯಲ್ಲಿ ಎಂ ಎಸ ಮಾಡಿದ್ದವರು  ಐದು ವರ್ಷ ಭಾರತೀಯ ವಾಯು ಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿ ಉಪ್ಪಳದಲ್ಲಿ ತಮ್ಮ ವೈದ್ಯಕೀಯ ಸೇವೆ ಆರಂಭಿಸಿದರು . ಹೆಸರಾಂತ  ಶಸ್ತ್ರ ಚಿಕಿತ್ಸಾ ತಜ್ಞ ,ಪ್ರಾಧ್ಯಾಪಕ ಮತ್ತು ಸಮಾಜ ಸೇವಕ ರಾಗಿದ್ದ ಡಾ ಎಂ ಪಿ ಪೈ  ೩೦.  ೩ . ೧೯೭೨ ರಲ್ಲಿ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿದರು .  ಆದರೆ ಆಸ್ಪತ್ರೆ ಸುಸಜ್ಜಿತವಾಗಿ  ಕಟ್ಟಲು ಹಣ ಬೇಕಲ್ಲಾ ? ಅದಕ್ಕಾಗಿ  ಇರಾನ್ ದೇಶಕ್ಕೆ ತೆರಳಿ ಎರಡು ವರ್ಷ ಅಲ್ಲಿ ಸೇವೆ ಸಲ್ಲಸಿ ಸಂಪಾದನೆಯ ಹಣವನ್ನು ಆಸ್ಪತ್ರೆಗೆ ಹಾಕಿದರು . 

ಹೀಗೆ ಈ ಹಿಂದುಳಿದ ಪ್ರದೇಶದಲ್ಲಿ ಒಂದು ಆಸ್ಪತ್ರೆ ಆರಂಭವಾಯಿತು . ಅದಕ್ಕೆ ತಮ್ಮ ತಂದೆ ನರಸಿಂಹ ಹೊಳ್ಳರ ಹೆಸರು ಇಟ್ಟರು . ಅವರ ಪತ್ನಿ ಡಾ ಸುಮತಿ ಹೊಳ್ಳರು ಸ್ತ್ರೀ ರೋಗ ತಜ್ಞೆ . ಅರಿವಳಿಕೆ  ತಜ್ಞರು ಈಗಿನಂತೆ ಲಭ್ಯವಿರದ ಆ ದಿನಗಳಲ್ಲಿ   ಹಲವು ಕಠಿಣ ತಮ ಕೇಸ್ ಗಳನ್ನು ತಾವೇ ನಿಭಾಯಿಸಿದರು .ಇಲ್ಲವಾದರೆ ಮಂಗಳೂರಿಗೆ ಹೋಗ ಬೇಕಿತ್ತು . ಕನ್ಯಾನ ,ಆನೆಕಲ್ಲು ,ಪೈವಳಿಕೆ ಬಾಯಾರು ,ಬೆರಿಪದವು ,ಕುಂಬ್ಳೆ ,ಪೆರ್ಮುದೆ ,ಮಂಜೇಶ್ವರ ,ಉಪ್ಪಳ ಮತ್ತು ಸುತ್ತ ಮುತ್ತಲಿನ ಅನೇಕ ಪ್ರದೇಶಗಳಿಂದ ಹಗಲು ರಾತ್ರಿಯೆನ್ನದೆ ರೋಗಿಗಳು ಬರುತ್ತಿದ್ದರು . ಡಾ ಕೆ ಪಿ ಹೊಳ್ಳ ಶಸ್ತ್ರ ಕ್ರಿಯಾ ತಜ್ಞರಲ್ಲದೆ , ಹಾವಿನ ವಿಷ ಚಿಕಿತ್ಸೆಯಲ್ಲಿ ಕೂಡಾ ವಿಶೇಷ ಪರಿಣತಿ ಸಂಪಾದಿಸಿ ಸಾವಿರಾರು ಪ್ರಾಣಗಳನ್ನು ಉಳಿಸಿದ್ದಾರೆ .ಇವರ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಒಳಗಾದವರು ಹಿಡಿದು ತಂಡ ಉರಗಗಳ ಒಂದು  ಸಂಗ್ರಹಾಲಯವೇ ಇದೆ . 

ಇವರ ಆಸ್ಪತ್ರೆಯಲ್ಲಿ ದಾದಿಯರ ತರಬೇತಿ ಕೇಂದ್ರ ಇದ್ದು ,ಅಲ್ಲಿ ತರಬೇತಿ ಹೊಂದಿದ ನರ್ಸ್ ಗಳು ತಮ್ಮ ಪರಿಣತಿ ಯಿಂದ ಒಳ್ಳೆಯ ಹೆಸರು ಹೊಂದಿದ್ದರು . 

ನಾನು ಕೂಡಾ ಈ ಆಸ್ಪತ್ರೆಗೆ ಸುಮಾರು  ಹತ್ತು ವರ್ಷ ಸಂದರ್ಶಕ ತಜ್ಞನಾಗಿ ಹೋಗುತ್ತಿದ್ದು , ಇಲ್ಲಿ ತುರ್ತು ನಿಗಾ ವಿಭಾಗ ಆರಂಭಿಸಿ  ಹೃದಯಾಘಾತ ದಂತಹ ಹಲವು ರೋಗಗಳನ್ನು ನಿಭಾಯಿಸಿದ್ದೇವೆ . 

ಇವರ ಒಬ್ಬ ಮಗ ಮತ್ತು ಇಬ್ಬರು ಮಗಳಂದಿರು ವೈದ್ಯರು .  ಅಸೌಖ್ಯದಿಂದ ಮಗನನ್ನು ಕಳೆದು ಕೊಂಡ ಇವರು  ವೃದ್ದಾಪ್ಯದ  ಕಾರಣ  ಆಸ್ಪತ್ರೆಯಲ್ಲಿ ನಡೆಸಲು ಒಂದು ಟ್ರಸ್ಟ್ ಮಾಡಿ ಅದಕ್ಕೆ ಹಸ್ತಾಂತರಿಸಿರುವರು . ಹುಟ್ಟೂರು ಕಯ್ಯಾರ್ ನಲ್ಲಿ ನೆಲೆಸಿರುವ ಇವರ ವೃತ್ತಿ ಜೀವನ ದ  ಬಗ್ಗೆ ಬರೆದ ಕೃತಿ ದಿನಾಂಕ 1.5.2022 ರಂದು ಕಯ್ಯಾರಿನಲ್ಲಿ ಬಿಡುಗಡೆ ಆಗಲಿದೆ . 

ಬಾಲಂಗೋಚಿ : ಇವರ ಕಿರಿಯ ಸಹೋದರ ರಾಧಾಕೃಷ್ಣ ಹೊಳ್ಳ ಬಿ ಸಿ ರೋಡ್ ನಲ್ಲಿ ವಕೀಲ ವೃತ್ತಿ ಆರಂಭಿಸಿ ಮುಂದೆ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದರು . ಬಿ ಸಿ  ರೋಡ್ ನ ಪ್ರಸಿದ್ಧ ನ್ಯಾಯವಾದಿ ಆಗಿದ್ದ ಶ್ರೀ ಅನಂತ ಸೋಮಯಾಜಿ ಇವರ ಭಾವ .ಡಾ ಹೊಳ್ಳರು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತಮ್ಮನ್ನು ತೊಡಗಿಸಿ ಕೊಂಡವರು . ಕೂಟ ಮಹಾ ಜಗತ್ತಿನ ಮುಖ್ಯಸ್ಥರಾಗಿಯೂ ಇದ್ದ ನೆನಪು .ಅವರ ಮುಂದಿನ ದಿನಗಳು ಸುಖ ಶಾಂತಿ ಯಿಂದ ಇರಲಿ ಎಂದು ಹಾರೈಕೆ

ಶುಕ್ರವಾರ, ಏಪ್ರಿಲ್ 15, 2022

ವೈದ್ಯನ ಸಂವಹನ ಶಕ್ತಿಯ ಇತಿಮಿತಿ

ವಿಜ್ಞಾನ ಮುಂದುವರಿದ ವೇಗದಲ್ಲಿ ನಮ್ಮ ಸಂವಹನ ಸಾಮರ್ಥ್ಯ ಬೆಳೆದಿಲ್ಲ .ಆಳವಾಗಿ ಬೇರೂರಿರುವ ಅವೈಜ್ಞಾನಿಕ ನಂಬಿಕೆಗಳು ಮತ್ತು  ಹಲವರು  ಹಬ್ಬುವ ಆಧಾರ ರಹಿತ ಮತ್ತು ಕಪೋಲ ಕಲ್ಪಿತ ವಿಚಾರಗಳು ನಿಜವನ್ನು  ಜನರಿಂದ ದೂರ ಇಟ್ಟಿವೆ . 

ಕಳೆದ ವಾರ ಒಂದು ದೂರದ ಹಳ್ಳಿಯಿಂದ ಒಬ್ಬ ಯುವಕ ಜಾಂಡಿಸ್ ಎಂದು ಬಂದಿದ್ದ . ಅಲೋಪತಿಯ ಮೂರು ,ಆಯುರ್ವೇದದ ಇಬ್ಬರು ,ಸಾಲದ್ದಕ್ಕೆ ಹಳ್ಳಿ ಮದ್ದು ಇಷ್ಟೆಲ್ಲಾ ಮಾಡಿ ವಾಸಿ ಆಗಿಲ್ಲ ಎಂದು ನನ್ನ ಕೈ ಗುಣ ನೋಡುವಾ ಎಂದು ಬಂದಿದ್ದನು .ಅವನ ಹಿಂದಿನ ರೆಕಾರ್ಡ್ ಎಲ್ಲಾ ಪರಿಶೀಲಿಸಲಾಗಿ , ಶರೀರದಲ್ಲಿ ಕೆಂಪು ರಕ್ತ ಕಣಗಳು ಅವಧಿ ಪೂರ್ವ ನಶಿಸುವ ಲಘು ರೋಗ ಇತ್ತು . ನಾನು ಹಿಂದೆಯೇ ಬರೆದಂತೆ ನಶಿಶಿದ ಕೆಂಪು ರಕ್ತ ಕಣಗಳ ನಿರ್ವಹಣೆಯಲ್ಲಿ ಆಗುವ ಅಡಚಣೆಯಿಂದ ಜಾಂಡಿಸ್ ಬರುವುದು .ವಾಡಿಕೆಯಲ್ಲಿ ಇದು ಲಿವರ್ ನ ವೈರಸ್ ಸೋಂಕಿನಿಂದ ಆಗುವುದಾದರೂ ,ಮಲೇರಿಯ ,ಇಲಿ ಜ್ವರ ,ಪಿತ್ತ ನಾಳದಲ್ಲಿ ಕಲ್ಲು ,ಗಡ್ಡೆ ಇತ್ಯಾದಿಯಿಂದ ಬರ ಬಹುದು . ಕೆಂಪು ರಕ್ತ ಕಣಗಳು ಅಧಿಕ ನಶಿಸುವುದರಿಂದಲೂ ಹಳದಿ ಬರ ಬಹುದು . ನನ್ನ ಬಳಿ ಬಂದವನ ಹಿಮೋಗ್ಲೋಬಿನ್ ಪ್ರಮಾಣ ನಾರ್ಮಲ್ ಇದ್ದು ಕಣ್ಣು ಸ್ವಲ್ಪ ಹಳದಿ ಬಿಟ್ಟರೆ ಅವನಿಗೆ ಹಸಿವು ಕಮ್ಮಿ ,ವಾಕರಿಕೆ ಅಥವಾ ಹೊಟ್ಟೆ ನೋವು ಇತ್ಯಾದಿ ಇರಲಿಲ್ಲ . ಅವನೇ ಅವರಿವರು ಹೇಳಿದರೆಂದು ಕಠಿಣ ಪಥ್ಯ ಮಾಡುತ್ತಿದ್ದನು .ನಾನು ಸಮಾಧಾನ ದಿಂದ ಎಲ್ಲವನ್ನೂ ಅವನಿಗೆ ವಿವರಿಸಿ ,'ಏನೂ ಚಿಂತೆ ಮಾಡುವುದು ಬೇಡ ,ಔಷಧಿ ಅಥವಾ ಪಥ್ಯ ಎಲ್ಲಾ ನಿಲ್ಲಸಿ "ಎಂದು ಹೇಳಿ ಕಳುಹಿಸಿದೆನು .ಅವನಿಗೆ ಎಷ್ಟು ಸಮಾಧಾನ ಆಯಿತೋ ಗೊತ್ತಿಲ್ಲ . ನಾನು ಇಂತಹ ವಿಷಯಗಳನ್ನು ರೋಗಿಗೆ ವಿವರಿಸುವಾಗ ಸಾಧ್ಯವಾದರೆ ಕಂಪ್ಯೂಟರ್ ಸಹಾಯದಿಂದ ಸಚಿತ್ರವಾಗಿ ವಿವರಿಸುವೆನು .ಮತ್ತು ಗಟ್ಟಿಯಾಗಿ ನಮ್ಮ ಸ್ಟಾಫ್ ಕೂಡಾ ಕೇಳುವಂತೆ ಹೇಳುವೆನು .ಜ್ಞಾನ ಎಲ್ಲರಿಂದ ಎಲ್ಲರಿಗೆ ಪ್ರಸಾರ ಆಗಲಿ ಎಂಬ ಉದ್ದೇಶ .ಆದರೆ ಮಿಥ್ಯೆ ಹರಡುವ ವೇಗದಲ್ಲಿ ಸತ್ಯ ಹರಡುವುದಿಲ್ಲ . 

ನಿನ್ನೆ ಉತ್ತರ ಭಾರತದ ಒಬ್ಬ ಯುವಕ ಬಲ ಬದಿಯಲ್ಲಿ ಮೇಲು ಹೊಟ್ಟೆ ಮತ್ತು ಸೊಂಟ ನೋವು ಎಂದು ಬಂದಿದ್ದನು .ಅವನಿಗೆ ಯಾರೋ ಅದು ಮೂತ್ರದ ಕಲ್ಲು ಇರಬೇಕು ,ಸ್ಕ್ಯಾನ್ ಮಾಡಿಸಿಕೊ ಎಂದು ಸಲಹೆ ಮಾಡಿದ್ದರು . ನಾನು ಅವನ ಅಂಗಿ ,ಬನಿಯನ್ ತೆಗೆಸಿ ಬೆಳಕಿನಲ್ಲಿ ನೋಡಲಾಗಿ  ಮೇಲು ಹೊಟ್ಟೆ ಸುತ್ತಲೂ ಬೆನ್ನಿನಿಂದ ಸಣ್ಣ ಸಣ್ಣ ಕೆಂಪು rash ಬೀಳ ತೊಡಗಿದ್ದು ಅದು ವಾಡಿಕೆಯಲ್ಲಿ ಸರ್ಪ ಸುತ್ತು ಎಂದು ಕರೆಯಲ್ಪಡುವ ನರ ಕೋಟಲೆ ಎಂದು ಅರಿವಾಯಿತು .ಅವನ ಜತೆ ಬಂದವನಿಗೆ ಅದನ್ನು ತೋರಿಸಿ ಅದರದ್ದೇ ನೋವು ಎಂದೆನು .ಹಿಂದಿಯಲ್ಲಿ ಅದಕ್ಕೆ ಏನು ಹೇಳುವರು ಎಂದು ನನಗೆ ತಿಳಿದಿಲ್ಲ . ಇನ್ನು ಸರ್ಪ ಸುತ್ತು ಎಂದು ಸಾಂಪ್ ಸಾಂಪ್ ಎಂದರೆ ಅವನು ಹೌ ಹೌಹಾರಿಯಾನು . ಅವನಿಗೆ ನನ್ನ ವಿವರಣೆ ಸಮಾಧಾನ ತರದೇ ಪತ್ತರ್ ಪತ್ತರ್ (ಕಲ್ಲು )ಎಂದು ಪುನಃ ಪುನಃ ಹೇಳುತ್ತಿದ್ದನು .ಕೊನೆಗೆ ಅವನ ಸಮಾಧಾನಕ್ಕೆ ಸ್ಕ್ಯಾನ್ ಮಾಡಿಸಲು ನಾರ್ಮಲ್ ಎಂದು ರಿಪೋರ್ಟ್ ಬಂತು . ಅವನಿಗೆ ನರ ಕೋಟಲೆಗೆ ಇರುವ ಔಷಧಿ ಕೊಟ್ಟು ಕಳುಹಿಸಿದೆನು . ಇಲ್ಲಿ ನಾನು ಅವನ ಬಟ್ಟೆ ತೆಗೆಸಿ ,ಒಳ್ಳೆಯ ಬೆಳಕಿನಲ್ಲಿ ನೋಡಿದ ಕಾರಣ ನಿಜ ಕಾಯಿಲೆ ಸುಲಭದಲ್ಲಿ ಪತ್ತೆಯಾದುದಲ್ಲದೇ ಅನಾವಶ್ಯಕ ಟೆಸ್ಟ್ ಗಳನ್ನು ಮಾಡ ಬೇಕಾಗಿ ಬರಲಿಲ್ಲ .ಮತ್ತು ಹರ್ಪಿಸ್ ಜೊಸ್ಟರ್ (ಸರ್ಪ ಸುತ್ತು ಎಂದು ಕರೆಯಲ್ಪಡುವ ನರ ಕೋಟಲೆ )ಗೆ ಆರಂಭದ ಹಂತದಲ್ಲಿಯೇ  ಔಷಧಿ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ,ಮತ್ತು ನೋವು ಉಳಿಯುವುದು ಕಡಿಮೆ . ನರದ ನೋವಿಗೆ ಕೊಡುವ ವೇದನಾ ಹರ ಔಷಧಿಗಳೂ ಬೇರೆ ಇರುತ್ತವೆ . 

ಈ ಇಬ್ಬರು ರೋಗಿಗಳಿಗೂ ಸರಿಯಾದ ಸಲಹೆ ನಾನು ನೀಡಿದ್ದರೂ ಅವರು ಅದನ್ನು ಪೂರ್ಣ ನಂಬುವಂತೆ ಮಾಡಲು ನಾನು ಪೂರ್ಣ ಶಕ್ತ ನಾದೆನು ಎಂದು ನಂಬುವುದಿಲ್ಲ . ಮೊದಲನೇ ರೋಗಿಗೆ ಹಳೆಯ ರೆಕಾರ್ಡ್ ನೋಡಿ ,ಪರೀಕ್ಷೆ ಮಾಡಿ ಯಾವುದೇ ಔಷಧಿ ನೀಡದೆ ಕಳುಹಿಸಿದ್ದರಿಂದ ನನಗಾಗಲಿ ಆಸ್ಪತ್ರೆಗಾಗಲಿ ಯಾವುದೇ ಲಾಭ ಆಗಲಿಲ್ಲ 

ಗುರುವಾರ, ಏಪ್ರಿಲ್ 14, 2022

ರೈತ ಬಂಧು ಪೂವಣಿ ನಾಯ್ಕ್ ಅಂಡ್ ಸನ್ಸ್

 

                                              



ಪುತ್ತೂರು ಸುಳ್ಯ ಬಂಟ್ವಾಳ ,ಕಾಸರಗೋಡು ತಾಲೂಕಿನ ರೈತರಿಗೆ ಅಪತ್ಬಾಂಧವ  ಆಗಿದ್ದವರು ಪೂವಣಿ ನಾಯ್ಕ್ .

ಪುತ್ತೂರು ಪರ್ಲಡ್ಕ ನಿವಾಸಿಯಾದ ಇವರು ಸ್ವಯಂ  ಕೃಷಿ ಯಂತ್ರಗಳ ದುರಸ್ತಿ ಕಲಿತು ತನ್ಮೂಲಕ ಅದರ ಪ್ರಯೋಜನ ಸಮಾಜಕ್ಕೆ ತಲುಪಿಸಿದವರು . ಹಿಂದೆ ಎಲ್ಲಿ ಪಂಪ್ ಕೆಟ್ಟರೂ ಪೂವಣಿಯವರ ಅಂಗಡಿ . ಇವರು ನೀಲಿ ಬಟ್ಟೆ ; ಬಟ್ಟೆ ಮೈಗೆ ಎಲ್ಲಾ ಆಯಿಲ್ ಗ್ರೀಸ್ ಲೇಪನ .ಬಿಡುವಿರದ ಕೆಲಸ .ಎಲ್ಲರಿಗೂ ಕೂಡಲೇ ಆಗಬೇಕು .ದೂರ ದೂರದ ಹಳ್ಳಿಯಿಂದ ಬರುವ ಗಿರಾಕಿಗಳು . ಕೆಲವೊಮ್ಮೆ ಮಧ್ಯ ರಾತ್ರಿಯ  ವರೆಗೂ ಕೆಲಸ . 

ಪೂವಣಿಯವರ ಸಹೋದರ ನಾರಾಯಣ ನಾಯ್ಕ್ ಕೂಡಾ ಸಾಥ್ .ಈಗ ಎರಡನೇ ತಲೆಮಾರಿನ ವೇಣುಗೋಪಾಲ್ ಇದ್ದಾರೆ. ಕಾರ್ಯ ವ್ಯಾಪ್ತಿ ಹಿಗ್ಗಿದಂತೆ  ವಿವಿಧ ಕೃಷಿ ಯಂತ್ರಗಳೂ ಬರಲು ಆರಂಭಿಸಿದವು . ಆದ್ದರಿಂದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಕಾರ್ಯಾಗಾರ ಆರಂಭಿಸಿದ್ದಾರೆ .

ಹಿಂದೆ ಡಾ ಸುಂದರ ರಾಯರು ಮುಟ್ಟಿದರೆ ಸಾಕು ಯಾವ ಕಾಯಿಲೆ ಇದ್ದರೂ ಪರಿಹಾರ ಆಗುವುದು ಎಂಬ ಭರವಸೆ ಇತ್ತು . ಅದೇ ತರಹ ಪೂವಣಿ ಯವರ ಬಳಿ ಹೋದರೆ ಯಾವುದೇ ಪಂಪ್ ಶೀಘ್ರ ಜೀವಕ್ಕೆ ಬರುವುದು ಎಂದು ರೈತರಲ್ಲಿ ನಂಬಿಕೆ .

ಇವರು ಯಾವಾಗಲೂ ಬೇಡಿಕೆಯಲ್ಲಿ ಇದ್ದವರು ಆದರೂ ದಿಢೀರ್ ಅದರ ಆರ್ಥಿಕ ರೂಪ ಗಳಿಸಿದಂತೆ ಇಲ್ಲ . ಸಮಾಜಕ್ಕೆ  ಆವಶ್ಯಕ ಸೇವೆಯನ್ನು ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಇವರ ಕುಟುಂಬವನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ

ಅಕ್ಕಯ್ಯ ಅತ್ತಿಗೆ


 ಮೊನ್ನೆ ಆರಕ್ಕೆ ನಮ್ಮ ಪ್ರೀತಿಯ ಅಕ್ಕಯ್ಯ ಅತ್ತಿಗೆ ವಯೋ ಸಹಜ ಸಮಸ್ಯೆಗಳಿಂದ ತೀರಿ ಕೊಂಡರು. ಅವರ ಹೆಸರು ಲಕ್ಷ್ಮಿ ಅಮ್ಮ .ನಾವೆಲ್ಲಾ ಕರೆಯುತ್ತಿದ್ದುದು ಅಕ್ಕಯ್ಯ ಎಂದು . ನಮ್ಮ ಶಿರಂಕಲ್ಲು  ಸೋದರ ಅತ್ತೆಯ ಮಗಳು . ಅವರ ತಂದೆ ಮೂಲತಃ ನೀರ್ಕಜೆ ಯವರು . ಅಕ್ಕಯ್ಯ ಅತ್ತಿಗೆ ಎಳವೆಯಲ್ಲಿಯೇ ಪುಂಡಿಕಾಯಿ ಕೃಷ್ಣ ಭಟ್ ಅವರನ್ನು ಮದುವೆ ಆಗಿ  ಬಂದವರು . ಒಂದು ಹೆಣ್ಣು ಮಗು ದುರ್ಗಾ ಪರಮೇಶ್ವರಿ ,ಮೂರು ಗಂಡು ಮಕ್ಕಳು ,ಈಶ್ವರ ಭಟ್ ,ವೆಂಕಟ್ರಮಣ ,ರಾಮ ಮೋಹನ -(ಕ್ರಮವಾಗಿ ಒಪ್ಪಕ್ಕ ,ಬಂಗಾರು ,ಒಪ್ಪಣ್ಣ ಮತ್ತ್ತು ಒಪ್ಪಿ )

ಅಕ್ಕಯ್ಯ ಅತ್ತಿಗೆಯ ಗಂಡ  ಬೇಗನೇ ತೀರಿ ಕೊಂಡು ಮನೆಯ ಉಸ್ತುವಾರಿ ,ಮಕ್ಕಳನ್ನು ಒಂದು ಹಂತಕ್ಕೆ ತರುವ ಜವಾಬ್ದಾರಿ ಯಶಸ್ವಿಯಾಗಿ ಹೊತ್ತವರು .ಮೃದು ಭಾಷಿಯಾಯದ ಅವರಿಗೆ ಬಂಧು ಬಳಗ ದವರಲ್ಲಿ ಅತೀವ ಪ್ರೀತಿ .ನಾವು ಅವರ ಸೋದರ ಮಾವಂದಿರ ಮಕ್ಕಳು ಎಂದು ಹೆಮ್ಮೆ ,ಅಜ್ಜನ ಮನೆಯ ಮೇಲೆ ಕುಂದದ ಪ್ರೀತಿ . 

ಅವರ ತಮ್ಮ ಈಗ ಅಧ್ಯಾಪನ ಮತ್ತು ಯಕ್ಷ ಲೋಕದಲ್ಲಿ ಹೆಸರು ಮಾಡಿರುವ ಪಶುಪತಿ ಶಾಸ್ತ್ರೀ .ಇವರ ಏಳಿಗೆಯಲ್ಲಿ ಈ ಅಕ್ಕನ ಪಾತ್ರ ಬಹಳ ಮುಖ್ಯ . 

ಮಕ್ಕಳು ಯಕ್ಷಗಾನ ಕಲಾ ಪೋಷಕರಾಗಿದ್ದು ,ಕೋಡಪದವಿನ  ಯಕ್ಷೋತ್ಸವ ದ  ರೂವಾರಿಗಳು .ವೆಂಕಟ್ರಮಣ ಭಟ್ ಹನುಮ ಲೈವ್ ಕ್ಯಾಸ್ಸೆಟ್ಸ್ ಎಂಬ ಹೆಸರಿನಲ್ಲಿ ಹಲವು ತಾಳಮದ್ದಳೆ ,ಮತ್ತು ಯಕ್ಷಗಾನ  ಮತ್ತು ಭಕ್ತಿ ಗೀತೆಗಳ ಸಿ ಡಿ ಗಳನ್ನು ಹೊರ ತಂದಿದ್ದು ಜನಪ್ರಿಯವಾಗಿದ್ದವು . ಕಲಾವಿದರಿಗೂ ಆರ್ಥಿಕ ವಾಗಿ ಒಂದು ಸಹಾಯ ಆಗುತ್ತಿತ್ತು . ಸೂರಿ ಕುಮೇರು ಗೋವಿಂದ ಭಟ್ಟರ ೭೦ ತಿರುಗಾಟಗಳು ಪುಸ್ತಕದಲ್ಲಿ ಇವರ ಉಲ್ಲೇಖ ಇದೆ . 

ನಾನು ವೈದ್ಯ ಬಂಧುವಾದ್ದರಿಂದ ನನ್ನ ಮೇಲೆ ವಿಶೇಷ ಅಕ್ಕರೆ ,ಅವರಿಗೆ ಮತ್ತು ಅವರ ಮನೆಯವರಿಗೆ ಕಿಂಚಿತ್ ಸೇವೆ ಸಲ್ಲಿಸಲು ಸಿಕ್ಕಿದ್ದು ನನ್ನ ಭಾಗ್ಯ . 

ಅವರ ನೆನಪಿಗೆ ನೂರು ಪ್ರಣಾಮಗಳು

 

ಬುಧವಾರ, ಏಪ್ರಿಲ್ 13, 2022

ನರದ ಬಗ್ಗೆ ನರರಲ್ಲಿ ಒಂದು ಗೊಂದಲ

 

ಈ ನರ ಜನ್ಮವೇ ಒಂದು ಗೊಂದಲದ ಗೂಡು .ಇದನ್ನು ಇನ್ನಷ್ಟು ಗೋಜಲು ಮಾಡಲು ನರರಲ್ಲಿ ಹಲವು ನರಗಳು.ಇವುಗಳ ಮತ್ತು ಇವುಗಳ ರೋಗಗಳ ಬಗ್ಗೆ ಸ್ಪಷ್ಟತೆ ಇರಬೇಕು .ಇಲ್ಲವಾದರೆ ಪೇಚಿಗೆ ಒಳಗಾಗುವುದು ಅಲ್ಲದೇ ಸುಮ್ಮನೇ ಹಣ ಮತ್ತು ಸಮಯ ಕಳೆದು ಕೊಳ್ಳ ಬೇಕಾಗುವುದು .

ನಮ್ಮಲ್ಲಿ  ನರಾಂಗ ವ್ಯೂಹ ಇದ್ದು ,ಮೆದುಳಿನಲ್ಲಿ ಮುಖ್ಯ  ಕಚೇರಿ ,ಅದರ ಸಂದೇಶ ವಾಹಕ  ಮತ್ತು  ಸಂಗ್ರಾಹಕ  ನರಗಳು  ನಖ ಶಿಖಾಂತ ಇವೆ .ಇನ್ನೂ ಕೆಲವು ನರಗಳು ಮೆದುಳಿನಿಂದ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವವು ಇವೆ . ಮೆದುಳಿನ ಕಾಯಿಲೆಗಳಾದ ಮೆದುಳಿನ ಆಘಾತ (ಸ್ಟ್ರೋಕ್ ,ಪಕ್ಷವಾತ ಉಂಟು ಮಾಡುವಂತಹವು ),ಮೆದುಳಿನ ಗಡ್ಡೆ ,ಅಪಸ್ಮಾರ ಇತ್ಯಾದಿ ಗಳಿಂದ ಹಿಡಿದು ,ನರಕೋಟಲೆ (ಸರ್ಪ ಸುತ್ತು ), ಇತ್ಯಾದಿ ಗಳು  ನರ ರೋಗ ಶಾಸ್ತ್ರದಲ್ಲಿ ಒಳಗೊಂಡಿವೆ . ಇವುಗಳ  ತಜ್ನರಿಗೆ ನ್ಯೂರೋಲೋಜಿಸ್ಟ್ ಎಂದು ಕರೆಯುವರು .

ವಾಡಿಕೆಯಲ್ಲಿ ರಕ್ತ ನಾಳಕ್ಕೂ ನರ ಎಂದು ಕರೆಯುವರು. ಕಾಲಿನಲ್ಲಿ ಅಭಿದಮನಿ ರಕ್ತ ನಾಳಗಳು  ಉಬ್ಬಿದ ರೋಗಕ್ಕೆ  ವೇರಿಕೊಸ್ ವೆಯಿನ್ ಎನ್ನುವರು .ಇವುಗಳ ಚಿಕಿತ್ಸೆ ಮಾಡುವುದು  ಶಸ್ತ್ರ ಚಿಕಿತ್ಸಾ ತಜ್ನರು ಅಥವಾ ಸರ್ಜನ್ . ಅದೇ ರೀತಿ ಇತರ ರಕ್ತ ನಾಳಗಳ ಚಿಕಿತ್ಸೆ  ಕೂಡಾ. ಈ ತರಹ  ರೋಗ ಇರುವವರು  ಆಸ್ಪತ್ರೆಗೆ ಫೋನ್  ಮಾಡಿ ನರ ರೋಗ ತಜ್ನರ  ಅಪಾಯಿಂಟ್ ಮೆಂಟ್ ಬುಕ್ ಮಾಡುವರು .ದೊಡ್ಡ ಆಸ್ಪತ್ರೆಗಳಲ್ಲಿ  ಮೊದಲೇ ಸಲಹಾ ಫೀಸ್ ಪಾವತಿ  ಮಾಡಿ ಕಾಯ ಬೇಕು .ಕಡೆಗೆ ತಮ್ಮ  ಸರದಿ ಬಂದಾಗ  ವೈದ್ಯರು  ನರ ರೋಗ ಏನೂ ಇಲ್ಲ ,ಸರ್ಜನ್ ಗೆ ತೋರಿಸಿ ಎಂದು ಚೀಟಿ ಕೊಡುವರು .ಅಲ್ಲಿ ಪುನಃ ಕಾದು ಹಣ ಕಟ್ಟಿ  ತೋರಿಸಬೇಕು . ಇದೇ ತರಹ  ಗಂಟು ನೋವು , ಉಳುಕು ಇತ್ಯಾದಿಗಳಿಗೂ ನರ ಡಾಕ್ಟ್ರು ಇದ್ದರಾ ಎಂದು ಕೇಳಿ ಕೊಂಡು ಬರುತ್ತಾರೆ .ವಾಸ್ತವದಲ್ಲಿ  ಒರ್ಥೋ ಪೇಡಿಶಿಯನ್ ಅಥವಾ ಮೂಳೆ ತಜ್ಜ್ನರನ್ನು ನೋಡ ಬೇಕು .

ಈ ಎಲ್ಲಾ ಗೊಂದಲ  ತಡೆಗಟ್ಟಲು ಒಳ್ಳೆಯ  ವಿಶ್ವಾಷಾರ್ಹ ಕುಟುಂಬ ವೈದ್ಯರ ಲ್ಲಿ ತೋರಿಸಿ ಅವರು ಸಲಹೆ ಮಾಡಿದ ತಜ್ನರಲ್ಲಿ ಹೋಗುವುದು ಉತ್ತಮ .ತುರ್ತು ಸಂದರ್ಭಗಳಲ್ಲಿ  ಆಸ್ಪತ್ರೆಯ ತುರ್ತು ವಿಭಾಗಕ್ಕೆ ಹೋದರೆ ಅವರೇ  ಯೋಗ್ಯ ವೈದ್ಯರನ್ನು ಕರೆಸುವರು .

ಇನ್ನು ಕೊಳ್ಪು (ಹೃದಯಾಘಾತ ,ಉಳುಕು ,ಮೂತ್ರ ಕಲ್ಲು ಎಲ್ಲವಕ್ಕೂ ಅನ್ವಯ ),ವಾತ  ಎಂಬ ಅಸ್ಪಷ್ಟ ರೋಗ ಲಕ್ಷಣ ಇರುವವರು ಕೂಡಾ ಫ್ಯಾಮಿಲಿ ದಾಕ್ಟ್ರ ಸಲಹೆ ಮೇರೆಗೆ ಮುಂದುವರಿಯುವುದು ಒಳ್ಳೆಯದು .

ಮಂಗಳವಾರ, ಏಪ್ರಿಲ್ 12, 2022

ನಿಮಗೆ ಹಣ ಮಾಡಲು ಬರುವುದಿಲ್ಲ

 ನಿಮಗೆ ಹಣ ಮಾಡಲು ಬರದು 

 

ನನ್ನ ಅಣ್ಣನ ಮಗ ಮುರಳಿ ಬಾಲ್ಯದಲ್ಲಿ ಕೆಲವೊಮ್ಮೆ ನನ್ನೊಡನೆ ಆಸ್ಪತ್ರೆಗೆ ಬರುತ್ತಿದ್ದ .(ಆಗ ನಾನು ರೈಲ್ವೆ ಸೇವೆಯಲ್ಲಿ ಇದ್ದೆ .) ಅವನು ಒಂದು ಮೂಲೆಯಲ್ಲಿ ಕುಳಿತು ಎಲ್ಲಾ ಗಮನಿಸುತ್ತಿದ್ದು ಮರಳಿ ಮನೆಗೆ ಹೋಗುವಾಗ "ಅಪ್ಪಚ್ಚಿ ನೀವು ಪೇಷಂಟ್ ಗಳಿಂದ ಹಣ ತೆಗೆದು ಕೊಳ್ಳುವುದಿಲ್ಲ ಯಾಕೆ ?ಎಲ್ಲರಿಂದಲೂ ಪೇಪರ್ ಪೈಸೆ (ನೋಟ್ )ತೆಗೊಳ್ಳ ಬೇಕು .ನನ್ನ ಅಪ್ಪನಂತೆ ನಿಮ್ಮಲ್ಲಿ ಹಣ ಆಗ ಬೇಡವೇ ?ಎಂದು  ಆತಂಕ ಮತ್ತು ಮುಗ್ಧತೆ ಯಿಂದ ಪ್ರಶ್ನಿಸುತ್ತಿದ್ದನು . 

ಸರ್ವಿಸ್ ನಲ್ಲಿ ಇರುವಾಗ ನಿಗದಿತ ಸಂಬಳ . ಅದು ಕಾಲಿಗೆ ಎಳೆದರೆ ತಲೆಗೆ ಇಲ್ಲ ,ತಲೆಗೆ ಎಳೆದರೆ ಕಾಲಿಗೆ ಇಲ್ಲ . ಅದರ ಮೇಲಿಂದ ಒಂದು ಗಮನಾರ್ಹ ಮೊತ್ತ ನನ್ನ ಪುಸ್ತಕ ಮತ್ತು ಪತ್ರಿಕಾ ಖರೀದಿಗೆ ಹೋಗುತ್ತಿತ್ತು .ಮುಂದೆ ನಾನು ಸರಕಾರಿ ಸೇವೆಗೆ ರಾಜೀನಾಮೆ ಕೊಟ್ಟ ಮೇಲೆ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಇಲ್ಲ . ನನ್ನ ಹೆಂಡತಿ ,ಅಕ್ಕ ಮುಂತಾದ ಹಿತೈಷಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು ."ಇವನಿ(ರಿ )ಗೆ ಹಣ ಮಾಡಲು ಬರುವುದಿಲ್ಲ " 

ಹೆಂಡತಿ ಹೇಳಲು ಕಾರಣ ಇದೆ .ನಾನು ಅವಳು ಏನು ಬೇಡಿಕೆ ಸಲ್ಲಿಸಿದರೂ ಅಕೌಂಟ್ಸ್ ಆಫೀಸರ್ ನಂತೆ ಕಡಿತ ಮಾಡಿಯೇ ಮಂಜೂರು ಮಾಡುತ್ತಿದ್ದೆ . ಉದಾ ಒಂದೂವರೆ ಸಾವಿರ ರೂಪಾಯಿಯ ಹೊಸ ಸೀರೆ ಕೊಳ್ಳಬೇಕು ಎಂದರೆ 'ನೀನು ಮೊನ್ನೆ ಮೊನ್ನೆ ಕೊಂಡದ್ದಲ್ಲವೇ ,ಈಗ ಯಾಕೆ ,ಬೇಕಾದರೆ  ಸಾವಿರದ ಒಳಗಿಂದು ಒಂದು ತೆಗೋ "ಎಂದು ಹೇಳುವೆನು . ಅವಳು ಇಂತಹ ಒರೆಂಜಾಟದಿಂದ "ಮಡುತ್ತು " ಹೋಗಿ ಆಗಾಗ ಮೇಲಿನ ಉದ್ಘಾರ ಮಾಡುವರು . 

ವೈದ್ಯರು ರೋಗಿಗಳಿಂದ ಮತ್ತು ವಕೀಲರು ಕಕ್ಷಿಗಳಿಂದ ಫೀಸು ವಸೂಲು ಮಾಡುವುದು ಒಂದು ಕಲೆ .ನನಗೆ ಅದು ಸಿದ್ಧಿಸಿಯೇ ಇಲ್ಲ ಎನ್ನ ಬಹುದು .ಕುರುಕ್ಷೇತ್ರದಲ್ಲಿ ಅರ್ಜುನನಿಗೆ 'ಎಲ್ಲರೂ ಬಂಧು ಬಾಂಧವರು ಯಾರೊಡನೆ ಹೋರಾಡುವುದು "ಎಂಬ ವೈರಾಗ್ಯ ಭರಿತ ಜಿಜ್ಞಾಸೆ ಬಂದಂತೆ ನಮಗೂ ಎಲ್ಲರೂ ಬಂಧು ಮಿತ್ರರು ,ಇನ್ನು ಕೆಲವರು ಬರೀ ಬಡವರು ಯಾರೊಡನೆ ಎಷ್ಟು ಫೀಸು ತೆಗೆದು ಕೊಳ್ಳುವುದು ?ಎಂಬ  ಗೊಂದಲ .

ಇನ್ನು ಬಂದ ಹಣದ  ಖರ್ಚಿಗೆ ನೂರಾರು ದಾರಿಗಳು ತನ್ನಿಂದ ತಾನೇ ಹುಟ್ಟಿ ಕೊಳ್ಳುತ್ತವೆ . ಬಹಳ ಮಂದಿ ಇವನು ಡಾಕ್ಟ್ರು ಭಾರೀ ಸಂಪತ್ತು ಇರಬೇಕು ಎಂದು ನಾನಾ ಕಾರಣಕ್ಕೆ ಡೊನೇಷನ್ ಗೆ ಬರುವರು .ಹಲವರಿಗೆ ನಾನು ನಯವಾಗಿ ನಿರಾಕರಿಸಿದಾಗ ಕೋಪ ಬರುವುದು. ಆದರೂ ಹಲವು ಸಂತ್ರಸ್ತರನ್ನು ಹುಡುಕಿ ಕೊಂಡು ಹೋಗಿ ಸಹಾಯ ಮಾಡಿದ ತೃಪ್ತಿ ಇದೆ . ಅದನ್ನು ದುರುಪಯೋಗ ಪಡಿಸಿಕೊಂಡವರು ಇದ್ದರೂ ಅವರ ಸಂಖ್ಯೆ ಕಡಿಮೆ .ನಾನು ಕೆಲಸ ಮಾಡಿ ಕೊಂಡಿದ್ದ ಆಸ್ಪತ್ರೆಯ  ಉದ್ಯೋಗಿ ಒಬ್ಬರು ಒಂದು ದಿನ ಬಂದು 'ಸಾರ್ ನಮ್ಮ ಹೊಸ ಮನೆಯ ಕೆಲಸ ಸ್ವಲ್ಪ ಬಾಕಿ ಇದ್ದು ಹಣದ ಕೊರತೆ .ಸ್ವಲ್ಪ ಸಾಲ ಬೇಕಿತ್ತು 'ಎಂದರು .ನಾನು ಪಾಪ ಎಂದು ಪರ್ಸ್ ನಲ್ಲಿ ಇದ್ದ ಹಣವನ್ನು ಎಲ್ಲಾ  ಕೈಗಿತ್ತು ಸಾವಕಾಶ ಹಿಂತಿರುಗಿಸಿ "ಎಂದೆ .ಕೆಲವು ದಿನಗಳ ನಂತರ ವ್ಯಕ್ತಿ  ಕಾಣೆ ;ಕೆಲಸ ಬಿಟ್ಟು ಹೋದ ಸುದ್ದಿ ಸಿಕ್ಕಿತು .ಹೋಗುತ್ತೇನೆ ಎಂದು ಹೇಳಲೂ ಇಲ್ಲ ,ವಿಚಾರಿಸಲು ಹೀಗೆ ಹಲವರಿಂದ ಸುಮ್ಮ ಸುಮ್ಮನೆ ಹಣ ತೆಗೆದು ಕೊಂಡ ವಿಚಾರ ತಿಳಿಯಿತು . ಇಲ್ಲಿ ನನಗೆ ಹಣ ಹೋದ ಬೇಸರ ಸ್ವಲ್ಪವೂ ಇಲ್ಲ .,ಆದರೆ ವಿಶ್ವಾಸ ದ್ರೋಹ ಮಾಡಿಸಿ ಕೊಂಡ ಅನೇಕರು ಮತ್ತೆ ಯಾರನ್ನೂ ನಂಬದ ಸ್ಥಿತಿ ಬರುವದು . 

ನಾನು ಸಮಾಜದ ದೃಷ್ಟಿಯಲ್ಲಿ ಧನವಂತ ಆಗದಿದ್ದರೂ ಸಂತುಷ್ಟ . ಆದರೂ ಹಿತೈಷಿಯಗಳು ನೀವು ಡಾಕ್ಟರ್ ಆಗಿಯೂ ಏನೂ ಮಾಡಲಾಗಲಿಲ್ಲ ಎಂದು  ಹಿತೈಷಿಗಳು  ಪುನಃ ಪುನಃ ಹೇಳುವಾಗ ನಿಜ ಇರ ಬಹುದು ಎನಿಸುವುದು . ಪರೀಕ್ಷಾರ್ಥಿಗಳಿಗೆ ಹೆದರ ಬೇಡಿ ಹೆದರ ಬೇಡಿ ಎಂದು ಎಲ್ಲರೂ ಹೇಳುವಾಗ ಧೈರ್ಯ ಇದ್ದವರೂ ಹೆದರುವಂತೆ .

ಬಾಲಂಗೋಚಿ : ವರ್ಷಗಳ ಹಿಂದೆ ನಾನು ಪಾಪ ಪುಣ್ಯ ನೋಡಿ ಬಹಳ ಕಡಿಮೆ ಚಾರ್ಜ್ (ಕೆಲವೊಮ್ಮೆ ಫ್ರೀ )ಮಾಡುತ್ತಿದ್ದೆ .ಹಾಗೆ ಉಪಕೃತರು ಹಲವರು ಇವನು ನಿಜವಾಗಿಯೂ ಕ್ವಾಲಿಫೈಡ್ ಸ್ಪೆಷಲಿಷ್ಟು ಇರಲಿಕ್ಕಿಲ್ಲ ,ಸಾಧಾರಣ ಡಾಕ್ಟರರು ಇರಬೇಕು ಎಂದು ಕೊಂಡಿದ್ದರು . ಒಂದು ಗಂಭೀರ ಕೇಸ್ ನಾನು ಮುತುವರ್ಜಿಯಿಂದ ಚಿಕಿತ್ಸಿಸುತ್ತಿರುವಾಗ , ಡಾಕ್ಟ್ರೇ ಸ್ಪೆಷಲಿಸ್ಟ್ ಹತ್ರ ತೋರಿಸಿದರೆ ಹೇಗೆ ?ಎಂದು ಕೇಳಿದ ವಿದ್ಯಾವಂತ ಸಂಪನ್ನರು ಇದ್ದಾರೆ .

ಸೋಮವಾರ, ಏಪ್ರಿಲ್ 11, 2022

                                                              



 

 ನಮ್ಮ  ಮನೆಯ ಅಮೂಲ್ಯ ತೂಕದ  ಅಸ್ತಿ ಕಡೆಯುವ (ಅರೆಯುವ ,ಕಡೆಪ್ಪಿ )ಕಲ್ಲು . ಇದನ್ನು ನಾವು  ಪ್ರಸಿದ್ಧ ವಾದ  ಸಂಟ್ಯಾರಿನ ಕಲ್ಲು ಶಿಲ್ಪಿಗಳಿಂದ ೧೯೮೭ ರಲ್ಲಿ ಕೊಂಡೆವು . ಇದು ನಮ್ಮೊಡನೆ ಪುತ್ತೂರು ,ಮಂಗಳೂರು ,ಚೆನ್ನೈ .ಪಾಲಕ್ಕಾಡ್ ,ಕೊಜ್ಹಿಕೋಡ್ ,ಉಪ್ಪಳ ,ಮಂಗಳೂರು  ಸಂಚರಿಸಿ ಮರಳಿ ಪುತ್ತೂರಿಗೆ ಬಂದು ಕುಳಿತಿದೆ . ನನ್ನ ಭಾರದ ಲಗೇಜ್ ಗಳಲ್ಲಿ ಪುಸ್ತಕಗಳ ಜತೆ ಇದು . 

ಅರೆಯುವ ಕಲ್ಲು ನಮ್ಮ ಹಲ್ಲಿನ ಕೆಲಸ ಹಗುರ ಮಾಡುವುದು , ಉಪ್ಪು ಮಸಾಲೆಗಳ ಸಮ ಮಿಶ್ರಣ ಮಾಡಿ ನಾಲಿಗೆಗೂ ಆಹಾರ ಹಿತಮಾಡುವದು . ಹಿಂದೆ ನಮ್ಮ ಮನೆಯಲ್ಲಿ ಇದರ ಮೂರು ಪಟ್ಟು ದೊಡ್ಡ ಕಲ್ಲು ಇದ್ದು  ದಿನವಿಡೀ ಸಕ್ರಿಯವಾಗಿ ಇರುತ್ತಿತ್ತು . ಬೆಳಗಿನ ತಿಂಡಿಗೆ ಚಟ್ನಿ ,ಮಧ್ಯಾಹ್ನ ಸಾಂಬಾರು ಮತ್ತು ಸಾರಿಗೆ ತೆಂಗಿನ ಕಾಯಿ ಮತ್ತು ಮಸಾಲೆ ಅರೆಯುವುದು .ಇದಕ್ಕೆ ಸಾಮಾನ್ಯವಾಗಿ ಏಕ ಪಾತ್ರಾಭಿನಯ .ಸಂಜೆ ಮರುದಿನದ  ತಿಂಡಿಗೆ ಸಾಮಾನ್ಯವಾಗಿ ಇಬ್ಬರು ಜತೆಯಾಗಿ ಮಾತನಾಡುತ್ತಾ ಕಡೆಯುವುದು .ನೆಂಟರಿಷ್ಟರು ಬಂದರೆ ಅಕ್ಕಿ ನೀರಿಗೆ ದುಪ್ಪಟ್ಟು ಬಿದ್ದು ಅರೆಯುವ ಸಮಯ ಹಿಗ್ಗುವುದು ;ಆದರೆ ಅತಿಥಿ ಸತ್ಕಾರ ಸಂಭ್ರಮ ದಲ್ಲಿ ಅದು ಬಹಳ ಹಗುರವಾಗುವದು . ಈ ಕೆಲಸದ ನಡುವೆ ಅಮ್ಮ ಹಾಲು ಕರೆಯಲೋ ,ಬೇರೆ ಯಾವುದೊ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಕರೆದು 'ಈಗ ಬರುತ್ತೇನೆ ನಾಕು ಸುತ್ತು ತಿರುಗಿಸು 'ಎಂದು ನಮಗೆ ನಿರ್ದೇಶಿಸುವರು . ಹಾಗೆ ನಮಗೆ ಅರೆಯುವ ಕೆಲಸದಲ್ಲಿಯೂ ಅಪ್ಪ್ರಯ್ನಟಿಸ್ ಶಿಪ್ ಆಗಿದೆ . ಒಂದು ಕೈಯ್ಯಲ್ಲಿ ಕಂಜಿ ತಿರುಗಿಸುವುದು ,ಇನ್ನೊಂದರಲ್ಲಿ ಕೂಡುವುದುದು ;ಹಿಟ್ಟು ಗಟ್ಟಿಯಾದಾಗ ನೀರು ಸೇರಿಸಿಕೊಳ್ಳುವದು ಒಂದು ಕಲೆ .ತಪ್ಪಿದರೆ ಕೈಯಲ್ಲಿ ಕಲೆ ಆದೀತು . 

ಈಗ ಮಿಕ್ಸಿ ಗ್ರೈಂಡರ್ ಬಂದು ಇದು ಮೂಲೆಗೆ ಬಿದ್ದಿದೆ .ಇದನ್ನು ಯಾರಿಗಾದರೂ ಕೊಡುವಾ ಎಂದರೆ ನಮ್ಮ ಮನೆಯವರು ಒಪ್ಪುವುದಿಲ್ಲ .ಅದು ಒಂದು ಐಶ್ವರ್ಯ ಎಂದು ಅವರ ನಂಬಿಕೆ  . ನಮ್ಮ ಮನೆ ಸಾಮಗ್ರಿಗಳ ನೋನ್ ಪ್ಲೇಯಿಂಗ್ ಕ್ಯಾಪ್ಟನ್ ಆಗಿದೆ . 

ಹಿಂದೆ ಬಾವಿಯಿಂದ ನೀರು ಸೇದಿ ,ದಿನಾಲೂ ಭಾರೀ ಕಲ್ಲು ಅರೆದು ನಮ್ಮ ಅಮ್ಮಂದಿರಿಗೆ ಕಷ್ಟ ಇತ್ತಾದರೂ ,ಅವರ ಅರಿವಿಲ್ಲದೇ ಒಳ್ಳೆಯ ಮತ್ತು ನಿಯತ ವ್ಯಾಯಾಮ ದಿಂದ ಅವರ ಆರೋಗ್ಯಕ್ಕೆ ಸಹಾಯಕಾರಿ ಆಗಿತ್ತು ಎಂದು ನನ್ನ ಭಾವನೆ . ಮನಸು ದೊಡ್ಡದಾಗಿದ್ದ ಕಾರಣ  ಕೆಲಸ  ಹಗುರ ಎನಿಸುತ್ತಿದ್ದಿರ ಬೇಕು