ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 15, 2024

ಶಿಷ್ಯ ಕಣ್ಮಣಿಗಳು

 

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರವೇ ನಮಃl

ಅಜ್ನಾನ ವೆಂಬ  ದೃಷ್ಟಿ (ಕಣ್ಣ )ಪೊರೆಯನ್ನು  ಜ್ನಾನ ವೆಂಬ ಅಂಜನ ಮೂಲಕ ನಿವಾರಿಸಿ  ದೃಷ್ಟಿ  ನೀಡಿದ ಗುರುವೇ ನಿಮಗೆ ನಮಸ್ಕಾರ ,
 ಇದು ವಿದ್ಯೆ ಕಲಿಸಿದ ಗುರುಗಳನ್ನು ನೆನೆಸಿ ಕೊಳ್ಳುವ ಪ್ರಸಿದ್ದ ಶ್ಲೋಕ .
 
ಕೆಲ ವರ್ಷಗಳ ಹಿಂದೆ ಒಂದು ಸಂಜೆ ಹಠಾತ್  ನನ್ನ ಎಡಗಣ್ಣಿನ ಮುಂದೆ ಮಿಂಚು ಗಳ  ಗೊಂಚಲು ,ಆಮೇಲೆ ಹುಳಗಳು ಹರಿದಾಡಿದಂತೆ  ಕಾಣಿಸ ತೊಡಗಿದವು . ಬೆಳಗಾವಿಯಲ್ಲಿ ನೆಲೆಸಿರುವ ನನ್ನ ಮಿತ್ರ ಎಮ್ ಬಿ ಬಿ ಎಸ ಸಹಪಾಠಿ  ಡಾ ವಿವೇಕ ವಾಣಿ ಅವರಿಗೆ ಫೋನಾಯಿಸಿದಾಗ ಅದು ದೊಡ್ಡ ತೊಂದರೆ ಇರಲಿಕ್ಕಿಲ್ಲ ,ಆದರೂ ಮಂಗಳೂರಿನಲ್ಲಿ ಡಾ ಶ್ರೀಪತಿ ಕಾಮತ್  ಎಂಬ ಉತ್ಸಾಹಿ ಅಕ್ಷಿಪಟ ತಜ್ಞರು ಇದ್ದಾರೆ .ಅವರನ್ನು ತುರ್ತು ಕಾಣಿರಿ ಎಂದು ಸಲಹೆ ಮಾಡಿದರು .. ಅದರಂತೆ ವೈದ್ಯರ  ಅಪ್ಪೋಯಿಂಟ್ಮೆಂಟ್ ತೆಗೆದು ಕೊಂಡು ಅವರ ಕ್ಲಿನಿಕ್  ನೇತ್ರ ಜ್ಯೋತಿ ರೆಟಿನಾ ಸೆಂಟರ್ (ಕಲೆಕ್ಟರ್ ಗೇಟ್ ಬಳಿ ) ನನ್ನ ಸರದಿ ಬಂದಾಗ ಪರೀಕ್ಷಾ ಕೋಣೆಗೆ ಕಾಲಿಟ್ಟೆ . ನನ್ನನ್ನು ನೋಡಿದೊಡನೆ ವೈದ್ಯರು "ಸಾರ್ ನಾನು ಎಂ ಬಿ ಬಿ ಎಸ್ ನಲ್ಲಿ ನಿಮ್ಮ ವಿದ್ಯಾರ್ಥಿ ಎಂದು ಸಂತೋಷ ಮತ್ತು ಗೌರವದಿಂದ ಕೂರಿಸಿ ವಿವರವಾದ ತಪಾಸಣೆ ನಡೆಸಿ ,"ಅಕ್ಷಿ ದ್ರವ ಕುಗ್ಗಿ ಅದರ ಪೊರೆ ಅಕ್ಷಿ ಪಟವನ್ನು ಎಳೆದಾಗ ಸಣ್ಣ ಗಾಯ ಆಗಿ ಬಂದ ಸಮಸ್ಯೆ . "ಎಂದು ಲೇಸರ್ ಚಿಕಿತ್ಸೆ ಮಾಡಿ ಧೈರ್ಯ ಹೇಳಿ ಕಳುಹಿಸಿದರು . ಅದರಿಂದ ನನ್ನ ತೊಂದರೆ ಉಲ್ಬಣಿಸದೆ ಶಮನ ಆಯಿ. ತು . ಕಳಿಸಿದ ಗುರುವಿಗೆ ವೈದ್ಯೋಪಚಾರ ಮಾಡಿದ ಧನ್ಯತೆ ಅವರ ಮುಖದಲ್ಲಿ ಕಂಡೆ ,
ಈಗ ಕೆಲವು ತಿಂಗಳಿನಿಂದ ನನ್ನ ಬಲದ ಕಣ್ಣು ಸ್ವಲ್ಪ ಬಲೆ ಬಲೆ ಯಂತೆ ಆಗಲು  ವೈದ್ಯ ಮಿತ್ರ ಡಾ ಹರಿ ಕೃಷ್ಣ ಕಾಮತ್ ಅವರಿಗೆ ತೋರಿಸಲು  ಕಣ್ಣ ಪೊರೆ ಆರಂಭವಾಗಿದೆ ಎಂದರು . ಹಾಗೇ ಒಂದು ದಿನ ಕಾರ್ಯಾರ್ಥ ದೇರಳ ಕಟ್ಟೆಗೆ ಹೋಗಿದ್ದವನು ಬರುವ ದಾರಿಯಲ್ಲಿ ಮೆಲ್ಕಾರಿನಲ್ಲಿ ಅಧೋಕ್ಷಜ ನೇತ್ರಾಲಯ ನಡೆಸುತ್ತಿರುವ ನನ್ನ ಮತ್ತೊಬ್ಬ ಶಿಷ್ಯ  ಡಾ ದುರ್ಗಾ ಪ್ರಸಾದ್ ನಾಯಕ್ ಅವರಲ್ಲಿ ವಿವರವಾಗಿ ಪರೀಕ್ಷೆ ಮಾಡಿಸಿಕೊಂಡು ,ಅವರ ಸಲಹೆಯಂತೆ ವಾರದ ಹಿಂದೆ ಪೊರೆ  ನಿವಾರಣಾ ಶಸ್ತ್ರ ಕ್ರಿಯೆ ಮತ್ತು ಕೃತಕ ಲೆನ್ಸ್ ಧಾರಣೆ ಮಾಡಿಸಿಕೊಂಡೆ  .ಬಹಳ ಪ್ರೀತಿ ಮತ್ತು ಗೌರವ ದಿಂದ ನನ್ನ ಚಿಕಿತ್ಸೆ ನಡೆಸಿ ಕೊಟ್ಟರು . ಡಾ ದುರ್ಗಾ ಪ್ರಸಾದ್ ಎಂ ಬಿ ಬಿ ಎಸ್ ನಲ್ಲಿ ನನ್ನ ಯೂನಿಟ್ ನಲ್ಲಿಯೇ ಇದ್ದವರು . ಪ್ರತಿಭಾವಂತ ..ಅವರ ಶ್ರೀಮತಿ ಡಾ ಪಲ್ಲವಿ ಕೂಡಾ ನನ್ನ ವಿದ್ಯಾರ್ಥಿನಿ ಮತ್ತು ಈಗ ನೇತ್ರ ತಜ್ಞೆ . ಉಪ್ಪಳದಲ್ಲಿ ಕೂಡಾ ಚಿಕಿತ್ಸಾಲಯ ತೆರೆದಿದ್ದಾರೆ .
ಇವರೆಲ್ಲಾ ನನ್ನ ಹೆಮ್ಮೆಯ ವಿದ್ಯಾರ್ಥಿಗಳು .ಗುರುವನ್ನು ಮೀರಿದ ಶಿಷ್ಯರು . ನನ್ನ ಕಣ್ಣಿನ ತಿಮಿರೆಯನ್ನು ಹೋಗಲಾಡಿಸಿ ದೃಷ್ಟಿ ಕೊಟ್ಟವರು . ಇದಕ್ಕಿಂತ ಸಂತೋಷ ಅಧ್ಯಾಪಕನಾದವನಿಗೆ ಬೇಕೇ ?
(ಉಳಿದಂತೆ ನನ್ನ ಅಕ್ಷಿ ಆರೋಗ್ಯ ವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಡಾ ಹರಿ ಕೃಷ್ಣ ಕಾಮತ್ ಅವರಿಗೆ ಋಣಿ )
                                           ಡಾ ಶ್ರೀಪತಿ ಕಾಮತ್
                                   ಡಾ ದುರ್ಗಾ ಪ್ರಸಾದ್ ನಾಯಕ್
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ