ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 22, 2024

ಚಿರ ಸ್ಮರಣೀಯರು

 ನಿನ್ನೆ ಒಬ್ಬರು ಹಿರಿಯರು ವೈದ್ಯಕೀಯ ಸಲಹೆಗೆ  ಬಂದಿದ್ದರು .ಅವರನ್ನು ಪರೀಕ್ಷೆ ಮಾಡುವಾಗ ಚರ್ಮದ ಅಡಿಯಲ್ಲಿ ತಲೆಯಿಂದ ಉದರಕ್ಕೆ ಹಾಕಿದ ಒಂದು ಕೊಳಾಯಿ ಕೈಗೆ ಸಿಕ್ಕಿತು .ಅದನ್ನು ಪ್ರಸಿದ್ಧ ನರರೋಗ ತಜ್ಞ ದಿ  ಡಾ ಕೆ ಆರ್ ಶೆಟ್ಟಿ ಅವರ ಸಲಹೆ ಮೇರೆಗೆ ನರ ಶಸ್ತ್ರ ನಿಪುಣ ಡಿ ಡಾ ಕೋದಂಡ ರಾಮ ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ  ಅಳವಡಿಸಿದ್ದು ಎಂದು ಹೇಳಿದರು . ಇದಕ್ಕೆ ವೆಂಟ್ರಿಕ್ಯುಲೊ ಪೆರಿಟೋನಿಯಲ್ ಷಂಟ್ ಎನ್ನುತ್ತಾರೆ . ಮೆದುಳ ಸುತ್ತಲೂ ಮತ್ತು ಒಳಗೆ ಮೆದುಳ ದ್ರವ ಇದ್ದು ಇದು ಬೆನ್ನು ಹುರಿಯ ಸುತ್ತಲೂ ಪಸರಿಸಿರುತ್ತದೆ . ಯಾವುದೇ ಕಾಯಿಲೆಯಿಂದ ಇದರ  ಹರಿವಿಗೆ ತಡೆಯಾದರೆ ,ಅಥವಾ ಇದರ ಒತ್ತಡ ಜಾಸ್ತಿ ಆದರೆ ಮೆದುಳಿಗೆ ಅಪಾಯವಾಗದಂತೆ ಅದನ್ನು ಒಂದು ನಳಿಕೆ ಮೂಲಕ ಹೊಟ್ಟೆಗೆ ಸಂಪರ್ಕಿಸಿ ಬಿಡುವರು . ಹೆಚ್ಚಾದ ಮೆದುಳ ದ್ರವ ಉದರದಲ್ಲಿ ಹೀರಲ್ಪಡುವುದು . ಹೊಟ್ಟೆಗೆ ಹೋಗುವ ದಾರಿಯಲ್ಲಿ ಒಂದು ವಾಲ್ವ್ ಇದ್ದು ಇದು ಉದರ ದ್ರವ ಮೆದುಳಿಗೆ ಹೋಗದಂತೆ ತಡೆ ಗಟ್ಟುವುದು . 

ಇಲ್ಲಿ ನಾನು ಹೇಳ ಹೊರಟಿರುವುದು  ಚಿಕಿತ್ಸೆ ಮಾಡಿದ ಈ ಇಬ್ಬರು ಹಿರಿಯ ವೈದ್ಯರ ಬಗ್ಗೆ .ಡಾ ಕೆ ಆರ್ ಶೆಟ್ಟಿ ಕೆನರಾ ನರ್ಸರಿ ಖ್ಯಾತಿಯ ಕಾಪು ಮುದ್ದಣ್ಣ ಶೆಟ್ಟರ ಪುತ್ರ . ಮಂಗಳೂರಿನ ಮೊದಲ ನರ ರೋಗ ತಜ್ಞ ಎನ್ನ ಬಹುದು . ಕೆ ಎಂ ಸಿ ಯ ಪ್ರಿನ್ಸಿಪಾಲ್ ಆಗಿದ್ದರು .ಮೃದುಭಾಷಿ ,ಸರಳ ಜೀವಿ .. ಒಳ್ಳೆಯ ಓದುಗ . ದೊಡ್ಡ ಬಂಗಲೆಯನ್ನು ಬಿಟ್ಟು ಕದ್ರಿ ಬಳಿ ವಸತಿ ಸಮುಚ್ಚಯ ನಿರ್ಮಿಸಿ ಅದರೊಳು ಒಂದರಲ್ಲಿ ,( ವಿಕಸಿತ ಕೂಡು ಕುಟುಂಬ ;ಇದು ಅವರಿಟ್ಟ ಹೆಸರು )ವಾಸಿಸುತ್ತಿದ್ದರು .ನಾನು ಕೆ ಎಸ ಹೆಗ್ಡೆ  ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇಳಿ ವಯಸ್ಸಿನಲ್ಲಿಯೂ ನಮಗೆ ಮಾರ್ಗದರ್ಶನ ನೀಡುತ್ತಿದ್ದರು . 

ಇನ್ನೊಬ್ಬರು ದಂತ ಕತೆಯಾದ ನರ  ರೋಗ ಶಸ್ತ್ರಜ್ಞ  ಡಾ ಕೋದಂಡ ರಾಮ .ಇವರ ಬಗ್ಗೆ ನನಗೆ ಕೇಳಿ ಮಾತ್ರ ಗೊತ್ತು . ಈಗಿನ ಸಿ ಟಿ ಸ್ಕ್ಯಾನ್ ,ಎಂ ಆರ್ ಐ ಇತ್ಯಾದಿಗಳು ಇಲ್ಲದ ಕಾಲದಲ್ಲಿ ಕಠಿಣ ವಾದ  ಮೆದುಳ ಶಸ್ತ್ರ ಚಿಕಿತ್ಸೆಯನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರು ಮಾಡುತ್ತಿದ್ದರು ಎಂಬುದು ವಿಶೇಷ . ಇವರನ್ನು ನಾವು ಮರೆಯಬಾರದು

ಇವರಂತೆ ವೆನಲಾಕ್ ಆಸ್ಪತ್ರೆಯಲ್ಲಿ ಡಾ ಎಂ ಪಿ ಪೈ ,ಡಾ ಸಿ ಆರ್ ಬಲ್ಲಾಳ್ ಮತ್ತು ಲೇಡಿ ಗೋಷನ್ ಆಸ್ಫತ್ರೆಯಲ್ಲಿ ಡಾ ಮನೋರಮಾ ಅವರು ಸಲ್ಲಿಸಿದ ಸೇವೆ ಕೂಡಾ ಸದಾ ಸ್ಮರಣಾರ್ಹ




                                 

                                                      




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ