ಬೆಂಬಲಿಗರು

ಬುಧವಾರ, ಅಕ್ಟೋಬರ್ 16, 2024

ಕಾಡುವ ಸಾವಿನ ರೂಪಾಂತರ

 ಸಾವುಗಳು ಬಹುವಾಗಿ ಕಾಡುತ್ತಿವೆ . ಹಿರಿಯ ಯರಾದ  ಡಾ ಎನ್ ಟಿ ಭಟ್ ಅವರು ಒಂದು ಕಡೆ  ಇತ್ತೀಚಿಗೆ ಶುಭ ಸಮಾರಂಭ ಗಳೆಂದು ಕರೆಯಿಸಿ ಕೊಳ್ಳುವ   ಮದುವೆ ಮುಂಜಿ ಯಂತಹುಗಳಿಂದ  ವೈಕುಂಠ ಸಮಾರಾಧನೆ ,ಶ್ರಾದ್ಧ ಇತ್ಯಾದಿಗಳಲ್ಲಿ ಭಾಗವಹಿಸುವುದೇ ಹೆಚ್ಚಾಗಿದೆ ಎಂದು ಉಲ್ಲೇಖಿಸಿದ್ದ ನೆನಪು . ದಿವಂಗತ ರಾಗಿರುವ ಹಾಸ್ಯ ಪ್ರವೃತ್ತಿಯ ನಮ್ಮ ಪುರೋಹಿತರೊಬ್ಬರು ಮೊದಲನೇ ವರ್ಗಕ್ಕೆ ಸಿವಿಲ್ ಕೇಸ್ ಎಂದೂ ಮತ್ತೊಂದನ್ನು ಕ್ರಿಮಿನಲ್ ಕೇಸ್ ಎಂದೂ ವರ್ಗೀಕರಿಸಿ ಸೂಚ್ಯವಾಗಿ ಹೇಳುತ್ತಿದ್ದರು . 

ನನ್ನ ಅಜ್ಜ ಆಗಾಗ ಶ್ರೀಕೃಷ್ಣನನ್ನು ಉಲ್ಲೇಖಿಸಿ ಹೇಳುತ್ತಿದ್ದ ಮಾತು "ಆತ್ಮಕ್ಕೆ ಸಾವು ಇಲ್ಲ ,ದೇಹಕ್ಕೆ ಮಾತ್ರ ,ಸಾವಿಗೆ ಅಳಬಾರದು . ನಾನು ನಿರ್ದೇಶಿಸಿದಂತೆ ಪಾತ್ರ ನಿರ್ವಹಿಸಿ ರಂಗ ಮಂಚದಿಂದ ನಿರ್ಗಮಿಸು "

ನನಗೆ ಅರಿವು ಬಂದ ಮೇಲೆ ಮನೆಯಲ್ಲಿ ಸಂಭವಿಸಿದ ಮೊದಲ ಸಾವು ನನ್ನ ದೊಡ್ಡಪ್ಪ ,ಸಿನೆಮಾ ನಟ ಗಣಪತಿ ಭಟ್ ಅವರದ್ದು .ನನ್ನ ಎಸ್ ಎಸ್ ಪರೀಕ್ಷೆಗೆ ಕೆಲವು ದಿನಗಳು ಇನಮ್ಮನ್ನು ರುವಾಗ . ಅಜ್ಜ ಅಜ್ಜಿ  ಬದುಕಿದ್ದರು . ದೊಡ್ಡಪ್ಪನ ಶವ ವನ್ನು  ಮದ್ರಾಸ್ ನಿಂದ ಕಾರಿನಲ್ಲಿ ತಂದು ನಮ್ಮ ಹೊಲದಲ್ಲಿ ಅಂತ್ಯ ಸಂಸ್ಕಾರ . ಮನೆಯಲ್ಲಿ ಎಲ್ಲರೂ ಶೋಕ ತಪ್ತರು . ದೊಡ್ಡಪ್ಪ ವರ್ಷಕ್ಕೊಮ್ಮೆ ಮನೆಗೆ ಬರುತ್ತಿದ್ದರೂ ನಮಗೆಲ್ಲ ಅವರ ಮೇಲೆ ಪ್ರೀತಿ ಗೌರವ .  ಬಿಳಿ ಪೈಜಾಮ ಮತ್ತು ಷರಟು ,ನುಣುಪು ಮುಖ  . ತಮ್ಮಂದಿರ ಮಕ್ಕಳ ಮೇಲೆ ಮಮತೆ . ಓದಿ ಉಶಾರಿ ಆಗ ಬೇಕು ಎಂದು ಹಾರೈಸುತ್ತಿದ್ದರು . ನಿಧನದ ಸುದ್ದಿ ಕೇಳಿ ನೆರೆ ಕರೆಯವರು ,ಬಂಧುಗಳು ಮನೆಗೆ ಆಗಮಿಸಿ ಸಮಾಧಾನ ಹೇಳಿ ಹೋಗುವರು .ಮನೆ ಕೆಲಸದವರು ತಾವೇ ಶವ ಸಂಸ್ಕಾರಕ್ಕೆ ಮತ್ತು ಉತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡುವರು . ಅಳುವೂ ಹೆಚ್ಚು ,ಸಮಾಧಾನ ಮಾಡುವವರೂ ಅಷ್ಟೇ . ಎಷ್ಟು ವಯಸ್ಸಾದವರೂ ಸತ್ತರೂ ಏನೋ ಕಳಕೊಂಡ  ಮತ್ತು ಇನ್ನೂ ಸ್ವಲ್ಪ ದಿನ ಇರಬೇಕಿತ್ತು ಭಾವ. ನನ್ನ ಅಜ್ಜಿ ಮೌನವಾಗಿ ದುಃಖ ಸಹಿಸಿದರು , ಸಮಾರಂಭದಲ್ಲಿ ಮಾಡಿದ ವಿಶೇಷ ಗಳನ್ನು ತಿನ್ನಲಿಲ್ಲ . ಬಂದ ಹತ್ತಿರದ ನೆಂಟರು  ದುಃಖ ಹಂಚಿಕೊಳ್ಳಲು ಹಲವು ದಿನಗಳು ನಮ್ಮಲ್ಲಿಯೇ ಇದ್ದರು

ಇದಾದ ಮೇಲೆ ಅಜ್ಜ ,ಅಜ್ಜಿ ಇಹಲೋಕ ತ್ಯಜಿಸಿದರು . ದೊಡ್ಡಪ್ಪ ತೀರಿ ಇಪ್ಪತ್ತು ವರ್ಷಗಳ ನಂತರ ಅಪ್ಪ ತೀರಿ ಕೊಂಡರು .ಅವರು ಮೆದುಳಿನ ರಕ್ತ ಸ್ರಾವದಿಂದ ಹಠಾತ್ ಅಸ್ವಸ್ಥ ರಾಗಿ ಆಸ್ಪತ್ರೆ ಸೇರಿದಾಗ ನಾನು ಚೆನ್ನೈ ನಲ್ಲಿ ಇದ್ದು ರಾತ್ರೋ ರಾತ್ರಿ ಮಂಗಳೂರಿಗೆ ಬಂದೆ . ಮರಣೋತ್ತರ ಕಾರ್ಯಕ್ರಮ ಉಪ್ಪಿನಂಗಡಿ ದೇವಳದಲ್ಲಿ (ನಾವು ಆಗ ಆಸ್ತಿ ಮಾರಿ ಆಗಿತ್ತು ). ಬಂಧುಗಳು ಮತ್ತು ಅಂಗ್ರಿಯ ನೆರೆ ಹೊರೆಯವರು ಪ್ರೀತಿಯಿಂದ ಭಾಗವಹಿಸಿದ್ದರು . ಕೊನೆಯ ದಿನ ಪ್ರಾಜ್ಞ ರಾದ  ಶಿರಂಕಲ್ಲು ಈಶ್ವರ ಜೋಯಿಶರು ತಂದೆಯವರ ಬಗ್ಗೆ  ಮಾಡಿದ ನುಡಿ ನಮನ ಆಲಿಸಿದ  ಎಲ್ಲರ ಮಡು ಗಟ್ಟಿದ  ದುಃಖ ಕಣ್ಣಲ್ಲಿ ತುಂಬಿ ಬಂತು . ಆಗಲೂ ತಂದೆಯವರು ಇನ್ನೂ ಸ್ವಲ್ಪ ಕಾಲ ಇರಬೇಕಿತ್ತು ಎಂಬ ಭಾವನೆ . 

ಅದಾಗಿ ಇಪ್ಪತ್ತು ವರ್ಷದಲ್ಲಿ ನನ್ನ ಕಿರಿಯ ಸಹೋದರ ಶ್ರೀನಿವಾಸ ಕ್ಯಾನ್ಸರ್ ನಿಂದ ತೀರಿ ಕೊಂಡ . ನಮಗೆಲ್ಲಾ ಕಿರಿಯವನು , ಉಳಿಸಲು ಮಾಡಿದ ಪ್ರಯತ್ನ ವೆಲ್ಲಾ ವಿಫಲ ವಾಯಿತು . ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಅವನು ತೀರಿ ಕೊಂಡ ದಿನ ದುಃಖ ತಪ್ತರಾದ ಅವನ ನೂರಾರು  ಸಹೋದ್ಯಗಿಗಳನ್ನು ಸಂಭಾಳಿಸುವುದೇ ಕಷ್ಟವಾಯಿತು . ಅವನಿಗಾಗಿ ಬಂಧು ಮಿತ್ರರು  ಐವತ್ತಕ್ಕೂ ಮೀರಿ  ಯೂನಿಟ್ ರಕ್ತ ದಾನ ಸ್ವಯಂ ಪ್ರೇರಿತ  ರಾಗಿ ಕೊಟ್ಟಿದ್ದರು .  ಎಲ್ಲರಲ್ಲೂ ದುಃಖ ದ  ಛಾಯೆ . 

ಮುಂದೆ ಐದು ವರ್ಷಗಳಲ್ಲಿ ನಮ್ಮ ಅಮ್ಮ . ಈಗ ನಮ್ಮ ದೊಡ್ಡಕ್ಕ . 

ಹಿರಿಯರ ಸಾವಿಗೆ ಪ್ರತಿಕ್ರಿಯೆ ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ . ಅವರ ಅಗಲಿಕೆ ಶೋಕ ಕ್ಕಿಂತಲೂ ನಿರಾಳತೆ ಉಂಟು ಮಾಡುತ್ತಿದೆ .ಅನಾ ಯೇಸ  ಮರಣಂ ವಿನಾ ದೈನ್ಯೇನ ಜೀವಿತಂ ದೊಡ್ಡದಾಗಿ ಕೇಳಿಸುತ್ತಿದೆ  . ಉತ್ತರ ಕ್ರಿಯಾ ಕಾರ್ಯಕ್ರಮಗಳು ವೈದಿಕ ಆಚರಣೆಗೆ ಸೀಮಿತವಾಗಿ ಊಟವಾದ ಕೂಡಲೇ ಹೆಚ್ಚಿನವರು ತಮ್ಮ ತಮ್ಮ ಮನೆಗೆ . 

ಆಸ್ಪತ್ರೆಯಲ್ಲಿಯೂ ಇದರ ಪೂರ್ವ ಚಿತ್ರಣ ಕಾಣುತ್ತೇವೆ . ಗಂಭೀರ ಕಾಯಿಲೆ ಯಿಂದ ಹಲವು ದಿನಗಳು ಹಿರಿಯರು ಮಲಗಿದರೆ ನೋಡಿಕೊಳ್ಳಲು ಯಾರೂ ಇಲ್ಲ . ನೋಡಲು ಬರುವ ಬಂಧುಗಳೂ ಕಡಿಮೆ . ಕಷ್ಟದಲ್ಲಿ ಬದುಕಿದರೆ ಬಂಧುಗಳಿಗೆ ಸಂತೋಷವೋ ದುಃಖವೋ ಅರಿಯುವುದು ಕಷ್ಟ . 

ಇದರಲ್ಲಿ ಯಾರನ್ನೂ ದೂಷಿಸುವುದಕ್ಕೆ ಇಲ್ಲ . ಕೊನೆಗೆ ಭಗವಂತ ಹೇಳಿದಂತೆ ಆಪ್ತರು ಅಗಲಿದಾಗ ಶೋಕಿಸ ಬಾರದು ಎಂಬುದು ಡಿಫಾಲ್ಟ್ ಆಗಿದೆ . 

ಹಿಂದೆ ನಾನು ಹೇಳಿದಂತೆ ಬದುಕಿದ್ದಾಗ ತಂದೆ ತಾಯಿಯನ್ನು ಚೆನ್ನಾಗಿ ನೋಡಿ ಕೊಳ್ಳಲು ಆಗದಿದ್ದರೂ ವೈಕುಂಠ ಸಮಾರಾಧನೆ ಗೌಜಿಯಿಂದ ಮಾಡುತ್ತಾರೆ . ಅವರ ಆತ್ಮಕ್ಕೆ ಮತ್ತು ಲೋಕಕ್ಕೆ ಅಂಜಿ . ಮಕ್ಕಳು ಒಬ್ಬೊಬ್ಬರ ಕಡೆಯಿಂದ ಒಂದೊಂದು ಸ್ವೀಟ್ ಇರುತ್ತದೆ .ಸಕ್ಕರೆ ಕಾಯಿಲೆಯಿಂದ ಸತ್ತ ಒಬ್ಬರ ಮಗ ನಾಲ್ಕು ಸಿಹಿ ತಿಂಡಿ ಮಾಡಿಸಿದ್ದರು . ತಮ್ಮ ತಂದೆಗೆ ಎಳೆವೆಯಲ್ಲಿಯೇ ಈ ಕಾಯಿಲೆ ಬಂದು ಒಲ್ಲದ ಮನಸಿಂದ ಜೀವನವಿಡೀ ಪಥ್ಯ ಮಾಡಿದ್ದರು . ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶ

 

ಮಂಗಳವಾರ, ಅಕ್ಟೋಬರ್ 15, 2024

ಶಿಷ್ಯ ಕಣ್ಮಣಿಗಳು

 

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರವೇ ನಮಃl

ಅಜ್ನಾನ ವೆಂಬ  ದೃಷ್ಟಿ (ಕಣ್ಣ )ಪೊರೆಯನ್ನು  ಜ್ನಾನ ವೆಂಬ ಅಂಜನ ಮೂಲಕ ನಿವಾರಿಸಿ  ದೃಷ್ಟಿ  ನೀಡಿದ ಗುರುವೇ ನಿಮಗೆ ನಮಸ್ಕಾರ ,
 ಇದು ವಿದ್ಯೆ ಕಲಿಸಿದ ಗುರುಗಳನ್ನು ನೆನೆಸಿ ಕೊಳ್ಳುವ ಪ್ರಸಿದ್ದ ಶ್ಲೋಕ .
 
ಕೆಲ ವರ್ಷಗಳ ಹಿಂದೆ ಒಂದು ಸಂಜೆ ಹಠಾತ್  ನನ್ನ ಎಡಗಣ್ಣಿನ ಮುಂದೆ ಮಿಂಚು ಗಳ  ಗೊಂಚಲು ,ಆಮೇಲೆ ಹುಳಗಳು ಹರಿದಾಡಿದಂತೆ  ಕಾಣಿಸ ತೊಡಗಿದವು . ಬೆಳಗಾವಿಯಲ್ಲಿ ನೆಲೆಸಿರುವ ನನ್ನ ಮಿತ್ರ ಎಮ್ ಬಿ ಬಿ ಎಸ ಸಹಪಾಠಿ  ಡಾ ವಿವೇಕ ವಾಣಿ ಅವರಿಗೆ ಫೋನಾಯಿಸಿದಾಗ ಅದು ದೊಡ್ಡ ತೊಂದರೆ ಇರಲಿಕ್ಕಿಲ್ಲ ,ಆದರೂ ಮಂಗಳೂರಿನಲ್ಲಿ ಡಾ ಶ್ರೀಪತಿ ಕಾಮತ್  ಎಂಬ ಉತ್ಸಾಹಿ ಅಕ್ಷಿಪಟ ತಜ್ಞರು ಇದ್ದಾರೆ .ಅವರನ್ನು ತುರ್ತು ಕಾಣಿರಿ ಎಂದು ಸಲಹೆ ಮಾಡಿದರು .. ಅದರಂತೆ ವೈದ್ಯರ  ಅಪ್ಪೋಯಿಂಟ್ಮೆಂಟ್ ತೆಗೆದು ಕೊಂಡು ಅವರ ಕ್ಲಿನಿಕ್  ನೇತ್ರ ಜ್ಯೋತಿ ರೆಟಿನಾ ಸೆಂಟರ್ (ಕಲೆಕ್ಟರ್ ಗೇಟ್ ಬಳಿ ) ನನ್ನ ಸರದಿ ಬಂದಾಗ ಪರೀಕ್ಷಾ ಕೋಣೆಗೆ ಕಾಲಿಟ್ಟೆ . ನನ್ನನ್ನು ನೋಡಿದೊಡನೆ ವೈದ್ಯರು "ಸಾರ್ ನಾನು ಎಂ ಬಿ ಬಿ ಎಸ್ ನಲ್ಲಿ ನಿಮ್ಮ ವಿದ್ಯಾರ್ಥಿ ಎಂದು ಸಂತೋಷ ಮತ್ತು ಗೌರವದಿಂದ ಕೂರಿಸಿ ವಿವರವಾದ ತಪಾಸಣೆ ನಡೆಸಿ ,"ಅಕ್ಷಿ ದ್ರವ ಕುಗ್ಗಿ ಅದರ ಪೊರೆ ಅಕ್ಷಿ ಪಟವನ್ನು ಎಳೆದಾಗ ಸಣ್ಣ ಗಾಯ ಆಗಿ ಬಂದ ಸಮಸ್ಯೆ . "ಎಂದು ಲೇಸರ್ ಚಿಕಿತ್ಸೆ ಮಾಡಿ ಧೈರ್ಯ ಹೇಳಿ ಕಳುಹಿಸಿದರು . ಅದರಿಂದ ನನ್ನ ತೊಂದರೆ ಉಲ್ಬಣಿಸದೆ ಶಮನ ಆಯಿ. ತು . ಕಳಿಸಿದ ಗುರುವಿಗೆ ವೈದ್ಯೋಪಚಾರ ಮಾಡಿದ ಧನ್ಯತೆ ಅವರ ಮುಖದಲ್ಲಿ ಕಂಡೆ ,
ಈಗ ಕೆಲವು ತಿಂಗಳಿನಿಂದ ನನ್ನ ಬಲದ ಕಣ್ಣು ಸ್ವಲ್ಪ ಬಲೆ ಬಲೆ ಯಂತೆ ಆಗಲು  ವೈದ್ಯ ಮಿತ್ರ ಡಾ ಹರಿ ಕೃಷ್ಣ ಕಾಮತ್ ಅವರಿಗೆ ತೋರಿಸಲು  ಕಣ್ಣ ಪೊರೆ ಆರಂಭವಾಗಿದೆ ಎಂದರು . ಹಾಗೇ ಒಂದು ದಿನ ಕಾರ್ಯಾರ್ಥ ದೇರಳ ಕಟ್ಟೆಗೆ ಹೋಗಿದ್ದವನು ಬರುವ ದಾರಿಯಲ್ಲಿ ಮೆಲ್ಕಾರಿನಲ್ಲಿ ಅಧೋಕ್ಷಜ ನೇತ್ರಾಲಯ ನಡೆಸುತ್ತಿರುವ ನನ್ನ ಮತ್ತೊಬ್ಬ ಶಿಷ್ಯ  ಡಾ ದುರ್ಗಾ ಪ್ರಸಾದ್ ನಾಯಕ್ ಅವರಲ್ಲಿ ವಿವರವಾಗಿ ಪರೀಕ್ಷೆ ಮಾಡಿಸಿಕೊಂಡು ,ಅವರ ಸಲಹೆಯಂತೆ ವಾರದ ಹಿಂದೆ ಪೊರೆ  ನಿವಾರಣಾ ಶಸ್ತ್ರ ಕ್ರಿಯೆ ಮತ್ತು ಕೃತಕ ಲೆನ್ಸ್ ಧಾರಣೆ ಮಾಡಿಸಿಕೊಂಡೆ  .ಬಹಳ ಪ್ರೀತಿ ಮತ್ತು ಗೌರವ ದಿಂದ ನನ್ನ ಚಿಕಿತ್ಸೆ ನಡೆಸಿ ಕೊಟ್ಟರು . ಡಾ ದುರ್ಗಾ ಪ್ರಸಾದ್ ಎಂ ಬಿ ಬಿ ಎಸ್ ನಲ್ಲಿ ನನ್ನ ಯೂನಿಟ್ ನಲ್ಲಿಯೇ ಇದ್ದವರು . ಪ್ರತಿಭಾವಂತ ..ಅವರ ಶ್ರೀಮತಿ ಡಾ ಪಲ್ಲವಿ ಕೂಡಾ ನನ್ನ ವಿದ್ಯಾರ್ಥಿನಿ ಮತ್ತು ಈಗ ನೇತ್ರ ತಜ್ಞೆ . ಉಪ್ಪಳದಲ್ಲಿ ಕೂಡಾ ಚಿಕಿತ್ಸಾಲಯ ತೆರೆದಿದ್ದಾರೆ .
ಇವರೆಲ್ಲಾ ನನ್ನ ಹೆಮ್ಮೆಯ ವಿದ್ಯಾರ್ಥಿಗಳು .ಗುರುವನ್ನು ಮೀರಿದ ಶಿಷ್ಯರು . ನನ್ನ ಕಣ್ಣಿನ ತಿಮಿರೆಯನ್ನು ಹೋಗಲಾಡಿಸಿ ದೃಷ್ಟಿ ಕೊಟ್ಟವರು . ಇದಕ್ಕಿಂತ ಸಂತೋಷ ಅಧ್ಯಾಪಕನಾದವನಿಗೆ ಬೇಕೇ ?
(ಉಳಿದಂತೆ ನನ್ನ ಅಕ್ಷಿ ಆರೋಗ್ಯ ವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಡಾ ಹರಿ ಕೃಷ್ಣ ಕಾಮತ್ ಅವರಿಗೆ ಋಣಿ )
                                           ಡಾ ಶ್ರೀಪತಿ ಕಾಮತ್
                                   ಡಾ ದುರ್ಗಾ ಪ್ರಸಾದ್ ನಾಯಕ್