ಬೆಂಬಲಿಗರು

ಮಂಗಳವಾರ, ಡಿಸೆಂಬರ್ 6, 2022

ಒಳ್ಳೆಯ ಚಹಾ ದ ಬೆನ್ನು ಹತ್ತಿ

ಬಾಲ್ಯದಲ್ಲಿ  ನಮಗೆ ಕುಡಿಯಲು ಚಾ ಕಾಫಿ  ಕೊಡುತ್ತಿರಲಿಲ್ಲ .ಆರೋಗ್ಯಕ್ಕೆ ಹಾನಿಕಾರಕ ,ಉಷ್ಣ ಎಂದು . ತಿಂಡಿಯೊಡನೆ ಕುಡಿಯಲು ಕೊತ್ತಂಬರಿ ಕಷಾಯ .ಬೆಲ್ಲ ಹಾಕಿದ್ದು . ನಾವು ಮನಸಿಲ್ಲದ ಮನಸಿನಲ್ಲಿ ಅದನ್ನು ಕುಡಿಯುತ್ತಿದ್ದು ಯಾವಾಗ ಕಾಫಿಗೆ ಪ್ರಮೋಷನ್ ಸಿಗುವುದೋ ಎಂದು ಕನಸು ಕಾಣುತ್ತಿದ್ದೆವು . ಬೆಳಿಗ್ಗೆ ಬಿಸಿ ಕಷಾಯ ಸಿಗುತ್ತಿದ್ದರೂ ಸಾಯಂಕಾಲ ಶಾಲೆಯಿಂದ ಬರುವಾಗ ಅದು ತಣಿದು ಕೋಡಿರುತ್ತಿತ್ತು . ಅದರ ಮೇಲ್ಪದರದಲ್ಲಿ ಹಾಲಿನ ಕೆನೆ ,ಕೆಲವೊಮ್ಮೆ ಅರೆ ಜೀವಂತ ನೊಣ. ಶಾಲೆಯಿಂದ ಬಂದೊಡನೆ ಏನಾದರೂ ತಿಂದು ಕುಡಿದು ಆಟಕ್ಕೆ ಹೋಗುವ ಧಾವಂತದಲ್ಲಿ ನಮಗೆ ಅವುಗಳ ಬಗ್ಗೆ ಗಮನ ಕಡಿಮೆ ಇದ್ದುದರಿಂದ ಹೇಗೋ ನಡೆಯುತ್ತಿತ್ತು . 

ಮುಂದೆ ಹೈ ಸ್ಕೂಲ್ ಗೆ ಬಂದಾಗ ನಮಗೆ ಕಾಪಿ ಸೇವಿಸುವ ಅನುಮತಿ ಸಿಕ್ಕಿತು .ಬೆಲ್ಲದ ಕಾಫಿ .ಆಗೆಲ್ಲಾ   ವೇಯಿಟರ್ ಕಾಪಿ ಎಂಬ ಬ್ರಾಂಡ್ ಜನಪ್ರಿಯ ಆಗಿತ್ತು . ಹೇಗೆ ಕಾಪಿ ಪ್ರಿಯನಾದ ನಾನು ಎಂ ಬಿ ಬಿ ಎಸ ಕಲಿಯಲು ಹುಬ್ಬಳ್ಳಿಗೆ ಹೋದಾಗ ತಾಪತ್ರಯ ಉಂಟಾಯಿತು .ಅಲ್ಲಿ ಹಾಸ್ಟೆಲ್ ನಲ್ಲಿ ಚಹಾ ಮಾತ್ರ ,ಕಾಪಿ ಇಲ್ಲ .ಇನ್ನು ಹೊರಗೆ ಹೋಟೆಲ್ ಗಳಲ್ಲಿ ಕೂಡಾ ಒಳ್ಳೆಯ ಕಾಫಿ ಸಿಗುತ್ತಿರಲಿಲ್ಲ . ಹೀಗೆ ನಾನು ಚಹಾ ಪಕ್ಷಕ್ಕೆ ಪಕ್ಷಾಂತರ ಮಾಡ ಬೇಕಾಯಿತು . ಬೇಂದ್ರೆಯವರು ಕೂಡಾ ಚಹಾದ ಕೂಡಾ ಚೂಡಾ ದಾಂಗ ಎಂದು ಹುಬ್ಬಳ್ಳಿಯವನನ್ನು ಕರೆದಿದ್ದಾರೆ . ನಮ್ಮಲ್ಲಿ ಅದನ್ನು ಸಜ್ಜಿಗೆ ಬಜಿಲಿನೊಡನೆ ಕಾಫಿ ಯಾಂಗೆ ಎಂದು ಮಾರ್ಪಡಿಸಿ ಕೊಳ್ಳ ಬಹುದು . 

ಚಹಾ ದ  ಬ್ರಾಂಡ್ ಮಾತ್ರ ಬದಲಿಸುತ್ತಲೇ ಇದ್ದ ನನಗೆ  ೧೯೮೯ ರಲ್ಲಿ ಮಂಗಳೂರಿಗೆ ವರ್ಗವಾಗಿ ಬಂದಾಗ ನಮ್ಮ ಬಿಡಾರಕ್ಕೆ ಸಮೀಪ ಮೈದಾನ್ ರಸ್ತೆಯಲ್ಲಿ  ಇದ್ದ ಎಂ  ಪಾಯ್ಸ್ ವೈನ್ ಸ್ಟೋರ್  ನಲ್ಲಿ ಒಳ್ಳೆಯ ಚಹಾ ಪುಡಿ ಮಿತ ದರದಲ್ಲಿ ಸಿಗುವ ಸುದ್ದಿ ತಿಳಿದು ಬಂತು . ಅಲ್ಲಿ ಆಗ ಅದು ಎಸ್ಟೇಟ್ ನಿಂದ ಫ್ರೆಶ್ ಆಗಿ ಬರುತ್ತಿತ್ತು ,ಬಂದ ದಿನ  ವೈನ್ ಸ್ಟೋರ್ ನ  ಎದುರು  ಚಹಾ ಪುಡಿ ಲಭ್ಯ ಎಂದು ಬೋರ್ಡ್ ಹಾಕುತ್ತಿದ್ದರು . ಲೂಸ್ ಚಹಾ ಪುಡಿ ,ಅದನ್ನು ಅರ್ಧ ,ಒಂದು ಕಿಲೋ ಕಟ್ಟು ಮಾಡಿ ಇಡುತ್ತಿದ್ದು ,ಒಂದೆರಡು ದಿನದಲ್ಲಿ ಖಾಲಿ ಆಗುತ್ತಿತ್ತು . ಎಷ್ಟೋ ಬಾರಿ ನಿರಾಸೆಯಿಂದ ಬರಿ ಗೈಲಿ ಬಂದದ್ದು ಇದೆ .ಕೆಲವೊಮ್ಮೆ ಪಕ್ಕದ Campco ದಲ್ಲಿ ಉದ್ಯೋಗಿ ಯಾಗಿದ್ದ ನನ್ನ ಅಣ್ಣ ನನಗೆ ತಂದು ಕೊಟ್ಟದ್ದು ಇದೆ.ಈ ಚಹಾ ಎಲೆ ಕುಡಿಸುವಾಗಲೇ ಒಳ್ಳೆಯ ಪರಿಮಳ  .(ಇದೇ ರೀತಿ ಆಗ ಪೇಟೆಯಲ್ಲಿ ದುರ್ಲಭವಾಗಿದ್ದ ಹಾಲು ಕೂಡಾ ತಂದು ಕೊಡುತ್ತಿದ್ದ ). ಈಚಲು ಮರದ ಕೆಳಗೆ ಮಜ್ಜಿಗೆ ಕುಡಿದರೂ ------ಎಂಬ ಗಾದೆ ನೀವು ಕೇಳಿರ ಬಹುದು . ಹಾಗೆ ವೈನ್ ಸ್ಟೋರ್ ನಿಂದ ಚಹಾ ಪುಡಿ ಎಂದು ನೀವು ಯೋಚಿಸುತ್ತಿರ ಬಹು ದು . ಫಾಯ್ಸ್ ಟ್ರೇಡರ್ಸ್ ಅವರು ಗುಣ ಮಟ್ಟಕ್ಕೆ ಪ್ರಸಿದ್ಧ ರಾದವರು ,ಈಗಲೂ ಕೂಡಾ ಅಲ್ಲಿ ಚಹಾ ಪುಡಿ ಸಿಗುತ್ತಿರ ಬೇಕು . ಬ್ರಾಂಡೆಡ್ ಪ್ಯಾಕೆಟ್ ನಲ್ಲಿ .ಪಕ್ಕದಲ್ಲಿ ಅವರ ಜನರಲ್ ಸ್ಟೋರ್ ಕೂಡಾ ಇದೆ .

ಮುಂದೆ ಒಮ್ಮೆ ಊಟಿ ಪ್ರವಾಸಕ್ಕೆ ಹೋದಾಗ ಅಲ್ಲಿ ನೋನ್ ಸಚ್  ಟೀ ಪರಿಚಯ ಆಯಿತು . ರೈಲ್ವೆ ಯಲ್ಲಿ ಊಟಿ ಕಡೆಯ ನೌಕರರ ಮೂಲಕ ಅದನ್ನು ತರಿಸುತ್ತಿದ್ದೆ . ಮುಂದೆ ಚೆನ್ನೈ ಗೆ ಹೋದಾಗ ಒಂದು ದಿನ  ವಸ್ತು ಪ್ರದರ್ಶನ ಮೈದಾನದಲ್ಲಿ  ತಮಿಳುನಾಡು ಟೀ ಪ್ಲಾಂಟೇಶನ್ ನವರ ಸ್ಟಾಲ್ ನಲ್ಲಿ  ಟೈಗರ್ ಬ್ರಾಂಡ್ ನ ಟ್ಯಾನ್ ಟೀ ರುಚಿ ನೋಡಿ ಕಡಿಮೆ ಬೆಲೆ ಮತ್ತು ಒಳ್ಳೆಯ ಸ್ವಾದದ ಅದಕ್ಕೆ ಮಾರು ಹೋದೆವು .ಆದರೆ ಅದು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ . ಸೆಕ್ರೆಟೇರಿಯಟ್  ಬಳಿ ಅವರ ಸಣ್ಣ ಔಟ್ಲೆಟ್ ಇತ್ತು ಅಲ್ಲಿ ಹೋಗಿ ತರುವುದು . ಪುನಃ ಮಂಗಳೂರಿಗೆ ಬಂದಾಗ ಫಾಯ್ಸ್ ಅಂಗಡಿಯ ಸಿಲ್ವರ್ ಕ್ಲೌಡ್ ಚಹಾ . 

 ಈಗ ದೇವಗಿರಿ ಅವರ ಲೀಫ್ ಚಹಾ ಉಪಯೋಗಿಸುತ್ತಿದ್ದು ಅದು ಪುತ್ತೂರಿನ ಒಂದೆರಡು ಅಂಗಡಿಗಳಲ್ಲಿ ಲಭ್ಯವಿದ್ದು ಸ್ವಾದ ಚೆನ್ನಾಗಿದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ