ಬೆಂಬಲಿಗರು

ಗುರುವಾರ, ಡಿಸೆಂಬರ್ 15, 2022

ಕದನ ಕುತೂಹಲ

 ನಿನ್ನೆ ಹಿರಿಯ ಮಿತ್ರರಾದ ಉಡುಪಿಯ ಶ್ರೀ ಗೋಪಾಲ ಕೃಷ್ಣ ಪ್ರಭು ಅವರು ಚೌಡಯ್ಯ ಮತ್ತು ದೊರೆ ಸ್ವಾಮಿ ಐಯ್ಯಂಗಾರ ಅವರ ಜಂಟಿ ಪ್ರಸ್ತುತಿ 'ರಘುವಂಶ ಸುಧಾ 'ವನ್ನು ಫೇಸ್ ಬುಕ್ ನಲ್ಲಿ ಹಂಚಿ ಕೊಂಡಿದ್ದರು . ನಾನು ಸಂಗೀತ ಪ್ರಿಯನಾದರೂ ಅದರ ಶಾಸ್ತ್ರ ದಲ್ಲಿ ಪಾಮರನು  .( ತಪ್ಪಿದ್ದರೆ ಹೊಟ್ಟೆಗೆ ಹಾಕಿ ಕೊಳ್ಳಿ ),ಈ ಕೃತಿ ಪಟ್ನಮ್ ಸುಬ್ರಹ್ಮಣ್ಯ ಐಯ್ಯರ್ ಅವರ ರಚನೆ .ರಾಗದ ಹೆಸರು ಕದನ ಕುತೂಹಲ . ಶ್ರೀರಾಮನನ್ನು ವರ್ಣಿಸುವ ಕೃತಿ

ರಘುವಂಶ ಸುದಾಂಬುಧಿ ಚಂದ್ರ ಶ್ರೀ ರಾಮ ರಾಮ ರಾಜೇಶ್ವರ

ಅನುಪಲ್ಲವಿ:
ಅಘ ಮೇಘ ಮಾರುತಶ್ರೀಕರ ಅಸುರೇಶ ಮರಿಗಂದ್ರ ವಾರ ಜಗನ್ನಾಥ 
 
ಚರಣ:
ಜಮಾದಗ್ನಿಚ  ಗರ್ವಕಂದನ 
ಜಯರುದ್ರಾದಿ ವಿಸ್ಮಿತಬಂಧನಾ
 
ಕಮಲಾಪ್ತಾ ನ್ವಯಮಂಡನ 
ಅಗಣಿತ ಅದ್ಭುತಶೌರ್ಯ ಶ್ರೀ ವೆಂಕಟೇಶ. 

 ಈ ರಾಗಕ್ಕೆ ಕದನ ಕುತೂಹಲ ಎಂದು ಏಕೆ ಬಂತು ಎಂಬುದು ನನಗೆ ಕುತೂಹಲ . ತಮಿಳರು ಥ ಮತ್ತು ದ ವನ್ನು ಪರಸ್ಪರ ವಿನಿಯೋಗಿಸಿವುದು ಉಂಟು .ಹಾಗೆ ಇದು ಕಥನ ಕುತೂಹಲವೋ ?

ಏನೇ ಇರಲಿ ಈ ಕೃತಿಯನ್ನು ವೇಗ ಗತಿಯಲ್ಲಿ ಪ್ರಸ್ತುತ ಪಡಿಸುವುದು ಸಾಮಾನ್ಯ ,ಕಿವಿಗೆ ಬಿದ್ದೊಡನೆ ಕಚೇರಿಯಲ್ಲಿ ಮಲಗಿದ್ದವರೂ ಎದ್ದು ಕೂರುವರು .ಪಕ್ಕ ವಾದ್ಯದವರು ಕದನ ಕುತೂಹಲಿಗಳಾಗಿ ಕಾದಾಡುವರಂತೆ ನುಡಿಸುವರು .. 
 ಮನೆಯಲ್ಲಿ ಮಡದಿ ಇರುವಾಗ ಈ ರಾಗ ದ ಕೃತಿ ಹಾಕುವುದಿಲ್ಲ ,ಸಾಮವೋ ,ಮಧ್ಯಮಾವತಿಯೂ ಲೇಸು .ಇಲ್ಲದದಿದ್ದರೆ ಕಲಹ ಏರ್ಪಟ್ಟು ಮನೆ ಶಾಂತಿ ಮತ್ತು ಮನಃ ಶಾಂತಿ ಹಾಳಾಗುವ ಅಪಾಯ ಇದೆ . 
 
ಕೆಲವು ಕದನ ಕುತೂಹಲಿ ಗಳು ಇದ್ದಾರೆ . ಅವರ ಬಳಿ ನೀವು ಹ್ಯಾಗಿದ್ದೀರಿ ಎಂದು ಕೇಳಿದರೆ "ಕಣ್ಣು ಕಾಣುವುದಿಲ್ಲವೇ ,ಕೇಳುವುದಕ್ಕೆ ಏನುಂಟು ?',ಅಥವಾ ಏನು ಒಬ್ಬರೇ ,ಮನೆಯವರು ಎಲ್ಲಿ ?ಎಂದು ಕೇಳಿದರೆ "ನಾನು ಬಂದರೆ ಸಾಲದೇ ?ಹಾಗಾದರೆ ನಾನು ವಾಪಸು ಹೋಗುತ್ತೇನೆ "ಎಂದು ಕದನ ಕಾಯಲು ಬರುವವರು .ಇವರಿಗೆ ಕದನ ಕುತೂಹಲಿ ಎನ್ನ ಬಹುದೇನೋ ?
 
ಮಂಡೋಲಿನ್ ಮಾಂತ್ರಿಕ  ಯು ಶ್ರೀನಿವಾಸ್ ನುಡಿಸಿದ ಈ ಕೃತಿ ಕೇಳಲು ಕೆಳಗಿನ ಲಿಂಕ್ ಬಳಸಿರಿ

https://youtu.be/v7q1XbrCSTw

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ