ಬೆಂಬಲಿಗರು

ಗುರುವಾರ, ನವೆಂಬರ್ 5, 2020

ಅಂಗ್ರಿ ನೆನಪುಗಳು , 2 ನಮ್ಮ ಅಜ್ಜ

ನಮ್ಮ  ಅಜ್ಜ  ಅಂಗ್ರಿ ಮಹಾಬಲ ಭಟ್ಟರು .ವರ್ಣ ರಂಜಿತ ವ್ಯಕ್ತಿತ್ವ .ನಮಗೆ  ಅರಿವು ಬರುವ ವೇಳೆ ಮನೆಯ ಉಸ್ತುವಾರಿ  ಚಿಕ್ಕಪ್ಪನಿಗೆ ಬಿಟ್ಟು ಕೊಟ್ಟು ವಿಶ್ರಾಂತ ಜೀವನ ನಡೆಸುತ್ತಿದ್ದರು .ಹೆಚ್ಚು ಓದಿದವರಲ್ಲದಿದ್ದರೂ ಜ್ನಾನಿಗಳು,ಮಹಾಭಾರತ ಕಾವ್ಯವನ್ನು ಓದಿ ಅರ್ಥ ಹೇಳುವಷ್ಟು .(ನಮಗೇ ಅದು ಕಬ್ಬಿಣದ ಕಡಲೆ ಅನಿಸುತ್ತಿತ್ತು.   

     


                                                             

        ದೊಡ್ಡಪ್ಪ ,ಅಜ್ಜ ಅಜ್ಜಿ.  

ಹಜಾರದ ಒಂದು ಮೂಲೆ ಅಜ್ಜನ ಆಫೀಸ್ ಮತ್ತು ಬೆಡ್ ರೂಮ್ .ಅಜ್ಜನ ಬಳಿ ಒಂದು ಗೋದ್ರೇಜ್ ಕಪಾಟು ,ಅದರೊಳಗೆ ಕೆಲವು ಟಾನಿಕ್ ಬಾಟಲಿಗಳು ಮತ್ತು ಕೆಲವು ಕಾಗದ ಪತ್ರ .ಕಾಗದ ,ಪತ್ರಿಕೆಗಳಿಗೆ ಅಜ್ಜನ ಭಾಷೆಯಲ್ಲಿ ಗಜೆಟ್ ಎನ್ನುವರು .ಅಜ್ಜನ ಕೈಯಲ್ಲಿ ಒಂದು ಚಂದದ ಊರುಗೋಲು .ತೋಟಕ್ಕೆ ಹೋಗುವಾಗ ಹಾಕಲೆಂದು ಖಾಕಿ ಪ್ಯಾಂಟ್ ಮತ್ತು ಶೂ ಕೂಡ ಇದ್ದವು . 

ಮನೆಯಲ್ಲಿ ಯಾವಾಗಲೂ ಒಂದು ಹಸುಗೂಸು  ಇದ್ದೇ  ಇರುತ್ತಿದ್ದ ಕಾಲ .ಅಜ್ಜ ಮನಸು ಬಂದರೆ ಮಗುವಿನ ಬಳಿ ಕುಳಿತು ತಾ ತಾ ಗುಬ್ಬಿ ತಾವನ ಗುಬ್ಬಿ ಎಂದು ಹಾಡುವರು . ಯಾವಾಗಲೂ ಬಾಯಲ್ಲಿ ಹರಿ ನಾರಾಯಣ ಹರಿ ನಾರಾಯಣ ಎಂದು ಜಪಿಸುತ್ತಿದ್ದರು .ಓರ್ವ ನಾಸ್ತಿಕ ಕೃಪಣನ  ಬಾಯಲ್ಲಿ ಹರಿಯ ಹೆಸರು ಬರಲು ಮಕ್ಕಳು ರೂಪಾಯಿ ನೋಟನ್ನು ಹರಿಯ ತೊಡಗಿದರು ,ಅದನ್ನು ಕಂಡ ಈತ ಹರಿಯ ಬೇಡ ಹರಿಯ ಬೇಡ ಎಂದಾಗ ಅವನ ಬಾಯಲ್ಲಿ ಹರಿ ಎಂಬ ಶಬ್ದ ಬಂದು ಪಾಪ ಎಲ್ಲಾ ಪರಿಹಾರ ಅದ ಕತೆ ನಮಗೆ ಹೇಳುತ್ತಿದ್ದರು . 

ಮಧ್ಯಾಹ್ನ ಊಟ ಅದ ಮೇಲೆ ನಿದ್ದೆ ಮಾಡುವರು .ಆ ವೇಳೆ ನಾವು ಮಕ್ಕಳು ಗಲಾಟೆ ಮಾಡಿ ಎಚ್ಚರ ಆದರೆ ಕೋಪ ಗೊಂಡು ಬೈಯ್ಯುವರು ,ತನ್ನ ಎದೆ ಮೇಲೆ ಹೊಡೆದ ಹಾಗೆ ಆಯಿತು ಎನ್ನುತ್ತಿದ್ದರು .ಈಗ ನಮಗೆ ವಯಸ್ಸು ಆದಾಗ ಅದರ ಅರ್ಥ ಆಗುತ್ತದೆ . ಅವರು  ಕೋಪ ಬಂದಾಗ ಉಪಯೋಗಿಸುತ್ತಿದ್ದ  ಒಂದು ಶಬ್ದ  "ಕಂತಾ ಮೂಟೆ" ಕೆಳಗೆ ಮೇಲೆ ಎಂಬ ಅರ್ಥ ಇರ ಬಹುದು .ಅಲ್ಲೋಲ ಕಲ್ಲೋಲ ಇರ ಬಹುದು . 

   ಆದರೂ ಅಜ್ಜ ನನಗೆ ತುಂಬಾ ಇಷ್ಟ .ಯಾಕೆಂದರೆ ಅವರು  ಪುರಾಣದ ಕತೆಗಳನ್ನು  ಪುಂಖಾನುಪುಂಖ ವಾಗಿ ವರ್ಣ ರಂಜಿತವಾಗಿ ಹೇಳುತ್ತಿದ್ದರು .ಅವುಗಳನ್ನು ಸಮಕಾಲೀನ  ವಿದ್ಯಮಾನಗಳಿಗೆ ತಳಕು ಹಾಕುತ್ತಿದ್ದರು .ಬಚ್ಚಲು ಮನೆಯಲ್ಲಿ ಒಲೆಗೆ ಬೆಂಕಿ ಹಾಕಿ  ಮೈಗೆ ಎಣ್ಣೆ ಹಚ್ಚಿ ಕುಳಿತಿರುವಾಗ  ಅವರ ಕತೆಗಳು ಮೂಡ್ ಹೊಂದಿಕೊಂಡು  ಹೊರ ಬರುತ್ತಿದ್ದವು .ನಡುವೆ ನಾವು ಬಾಯಿ ಹಾಕ ಬಾರದು .ಭಗವದ್ಗೀತೆಯಲ್ಲಿ  ಶ್ರೀ ಕೃಷ್ಣ  "ನೀನು ಎಂಬುದು ನಿಮಿತ್ತ ,ಎಲ್ಲವೂ ನನ್ನ ಇಚ್ಛೆಯಂತೆ ನಡೆಯುವುದು "ಎಂಬ ವಾಕ್ಯ ಆಗಾಗ ಹೇಳುವರು . 


ಅಜ್ಜನಿಗೆ ಮೂವರು ಗಂಡು ಮಕ್ಕಳು .ಹಿರಿಯವರು ಕನ್ನಡ ಸಿನೆಮಾ ನಟರಾಗಿದ್ದ  ಗಣಪತಿ ಭಟ್ ,ನಂತರ ನನ್ನ ತಂದೆ ಮತ್ತು ಚಿಕ್ಕಪ್ಪ ಶಂಕರ ನಾರಾಯಣ ಭಟ್ . 

ಅಜ್ಜನ ಸುಪರ್ದಿಯಲ್ಲಿ  ಒಂದು ಜರ್ಮನ್ ಗೋಡೆ ಗಡಿಯಾರ ,ಅದಕ್ಕೆ ಕೀ ಕೊಡುವುದು ಮತ್ತು  ಆಗಾಗ ಅದರ ಸರ್ವೀಸ್ ಮಾಡುವುದು ಅವರ ಪ್ರಿಯ ಕಾರ್ಯ .ಮಂಗಳೂರು ನಿವಾಸರ ಅಂಗಡಿಯಿಂದ ತಂದುದು ಎಂದು ಹೇಳುತ್ತಿದ್ದರು .

ನಮ್ಮ ತಂದೆಯವರು ಯಾವಾಗಲೂ ಕೃಷಿ ಮತ್ತು ಪಶು ಸಂಗೋಪನೆಯಲ್ಲಿ ಬ್ಯುಸಿ ಯಾಗಿ ಇರುತ್ತಿದ್ದರಿಂದ  ಶಾಲೆಯ ಪ್ರೋಗ್ರೆಸ್ ರಿಪೋರ್ಟ್ ಗೆ ಅಜ್ಜನ ಸಹಿ ಹಾಕಿಸಿ ಕೊಳ್ಳುತ್ತಿದ್ದೆವು .ಅಜ್ಜನ ಜೊತೆ ವಿಟ್ಲ ಜಾತ್ರೆಗೆ ಹೋಗುತ್ತಿದ್ದ ನೆನೆಪು ಸವಿಯಾಗಿದೆ .ಸಂಜೆ ಹೊತ್ತು ವಿಟ್ಲ ತಲುಪಿ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು ಅವರು ಕೇಕುಣ್ಣಾಯರ ಹೋಟೆಲ್ನಲ್ಲಿ ಒಂದು ಬೆಂಚ್ ನಲ್ಲಿ ವಿಶ್ರಮಿಸುವರು .ಹೋಟೆಲ್ ಧನಿಗೆ ಈ ಮಕ್ಕಳು ಬಂದಾಗ ಕೇಳಿದ ತಿಂಡಿ ಕೊಡಿ ಎಂದು ಸ್ಟ್ಯಾಂಡಿಂಗ್ ಇನ್ಸ್ತ್ರಕ್ಷನ್ .ನಾವು ಜಾತ್ರೆ ಗದ್ದೆಗೆ ಒಮ್ಮೆ ಹೋಟೆಲ್ ಗೆ ಒಮ್ಮೆ ,ಬೆಳಗಾಗುವ ವರೆಗೂ .ಮಕ್ಕಳೇ ನೀವು ಚಿಕ್ಕವರಾಗಿದ್ದಾಗ ಬಂಧುಗಳು ನಿಮ್ಮ ಕೈಯ್ಯಲ್ಲಿ ಇಟ್ಟ  ಹಣ ನಾವು ತೆಗೆದು ಕೊಂಡಿದ್ದೆವು .ಅದನ್ನೇ ನಿಮಗೆ ಈಗ ಮರಳಿಸುವುದು ,ಎಂದು ಹೇಳುವರು . 

  ನಮ್ಮ ಅಜ್ಜಿ ಯವರ ತಾಯಿ ಮನೆ  ಕುಂಬ್ಳೆ ಸೀಮೆಯ ಚೆಕ್ಕೆಮನೆ .ಅಜ್ಜನವರು ತರುಣದಲ್ಲಿ  ಪೆಲತಡ್ಕ ರಾಮ ಭಟ್ಟರ ಸಾಲ ತೀರಿಸಲಾಗದೆ ಆಸ್ತಿ ಏಲಂ ಆಗಿ ಮಕ್ಕಳು ಮರಿಗಳ ಕೂಡಿ  ಅಜ್ಜಿಯ ತವರು ಮನೆಯಲ್ಲಿ ವನವಾಸ ಇದ್ದ ಕತೆ ಅಜ್ಜ ಮತ್ತು ಅಪ್ಪ ಆಗಾಗ ಹೇಳುತ್ತಿದ್ದರು. ಈ ಘಟನೆಗಳನ್ನು ಪಾಂಡವರ ಅಜ್ಞಾತವಾಸದಂತೆ  ರಸವತ್ತಾಗಿ ವಿವರಿಸುತ್ತಿದ್ದರು .ಬಂಧುಗಳು ಕಷ್ಟದಲ್ಲಿ ಇರುವಾಗ ,ಅಥವಾ ನಮ್ಮ ಸಹಾಯ ಅವಶ್ಯ ಬಿದ್ದಾಗ ಹಿಂದೆ ಮುಂದೆ ನೋಡದೆ ಒಬ್ಬರಿಗೊಬ್ಬರು ಆಗುತ್ತಿದ್ದ ಕಾಲ .ಅದೆಲ್ಲಾ ಸುಖಮಯ ವಾಗಿ ಇರಬೇಕು ಎಂದು ಇಲ್ಲ .ಆಮೇಲೆ  ನಮ್ಮ ದೊಡಪ್ಪನವರ ಮೈನರ್ ಹಕ್ಕಿನ ಆಸರೆಯಿಂದ ಆಸ್ತಿ ಪುನಃ ಸಿಕ್ಕಿತು . ..ಕೋರ್ಟ್  ಕೇಸುಗಳಿಗೆ ಆಗಾಗ ಎಡತಾಕುತ್ತಿದ್ದರಿಂದ  ಕೈಪೇತು (caveat ),ಹೆರಿಂಗ್ (ಹಿಯರಿಂಗ್ ),ಪೈಂಟ್ (ಪಾಯಿಂಟ್ )ಇತ್ಯಾದಿ  ಶಬ್ದಗಳು ಆಗಾಗ್ಗೆ ಬರುತ್ತಿದ್ದವು .ಮಂಗಳೂರಿನ ಸೋಮ ಶೇಖರ ರಾವ್ ,ಪುತ್ತೂರಿನ ಸದಾಶಿವ ರಾವ್ ಮತ್ತು ಹೈ ಕೋರ್ಟ್ ನಲ್ಲಿ  ಕೆ ಆರ್  ಕಾರಂತ ಅಜ್ಜನ ವಕೀಲರು .ಅವರ ನಾಮಸ್ಮರಣೆ ಮೇಲಿಂದ ಮೇಲೆ ಆಗುತ್ತಿತ್ತು .ಅಜ್ಜನ ಬಾಯಿಯಿಂದ  ಕೋರ್ಟ್ ನಲ್ಲಿಯ ವಾದ ವಿವಾದಗಳನ್ನು  ತೆರೆದ ಬಾಯಿಯಿಂದ ನಾವು ಕೇಳುತ್ತಿದ್ದೆವು . 

ಅಜ್ಜನಿಗೆ ಹೇಳಿಕೊಳ್ಳುವ ಅನಾರೋಗ್ಯ ಏನೂ ಇರಲಿಲ್ಲ .ಆದರೂ ಯಾವುದಾದರೂ ಕಾಯಿಲೆಯನ್ನು ಆರೋಪಿಸಿ ಕೊಂಡು  ಮಂಗಳೂರಿನಲ್ಲಿ ಡಾ ವೆಂಕಟ ರಾವ್ ,ಡಾ ಚಾರಿ ಮುಂತಾದ ಪ್ರಸಿದ್ಧ ವೈದ್ಯರನ್ನು ಕಂಡು ಅವರು ಪರೀಕ್ಷಿದ ಪರಿಯನ್ನು ,ಅಲ್ಲಿ ಕುಟ್ಟಿದರು ಇಲ್ಲಿ ಕುಟ್ಟಿದರು ಎಂದು ಸವಿವರವಾಗಿ ಹೇಳುವರು ಮತ್ತು ಚಾರಿಯವರ ಕಷ್ಟ ಪಟ್ಟು ಕನ್ನಡ ಮಾತನಾಡುತ್ತಿದ್ದುದನ್ನು ವಿವರಿಸುವರು .ಪುತ್ತೂರಿನಲ್ಲಿ ಅವರ ವೈದ್ಯರು ಸುಂದರ ರಾಯರು .ಈ ಡಾಕ್ಟರುಗಳು ಕೊಟ್ಟ  ಟಾನಿಕ್ ಗಳನ್ನು ಬಹಳ ಶ್ರದ್ದೆಯಿಂದ  ಭಕ್ತಿಯಿಂದ ಕುಡಿಯುವರು . 

 ಅಜ್ಜನ ಜತೆ ಜಾತ್ರೆ ,ನೆಂಟರ ಮನೆಗೆ ಹೋಗುವುದು ಬಹಳ ಖುಷಿ .ಆದರೆ ಬಸ್ ಹಿಡಿಯಲು  ಗುಡ್ಡ ಹತ್ತಿ ಒಂದೂವರೆ ಕಿಲೋಮೀಟರು ದೂರದ ಬೈರಿಕಟ್ಟೆಗೆ ಹೋಗ ಬೇಕು .ಆಗ ನಮ್ಮನ್ನು ಮುಂದೆ ಓದಿ ಹೋಗಿ ಬಸ್ ಬಂದಾಗ ಹಿಂದೆ ಅಜ್ಜ ಬರುತ್ತಿದ್ದಾರೆ ,ಸ್ವಲ್ಪ ನಿಲ್ಲಿಸಿ ಎಂದು ಡ್ರೈವರ್ ನಲ್ಲಿ ಬೇಡಿಕೊಳ್ಳಲು ಹೇಳುವರು .ಕೆಲವೊಮ್ಮೆ ಅವರು ಒಪ್ಪಿ ಸ್ವಲ್ಪ ಕಾಯುವರು . 

ಪುತ್ತೂರು ಪೇಟೆಯಲ್ಲಿ ವಕೀಲಸದಾಶಿವ ರಾವ್ ಮನೆಗೆ ತಿರುಗುವಲ್ಲಿ ಕುಂಬ್ಳೆಕಾರ್ ಅವರ ಬಟ್ಟೆ ಅಂಗಡಿ .ಅಜ್ಜನನ್ನು ಕಂಡ ಒಡನೆ 'ನಮಸ್ಕಾರ ಮಹಾಬಲ ಭಟ್ಟರೇ ಹೊಸಾ ಕೋಮಣ (ಲಂಗೋಟಿ )ಬಟ್ಟೆ ಬಂದಿದೆ ಬನ್ನಿ "ಎಂದು ಕರೆಯುತ್ತಿದ್ದುದುದು ಮಾಮೂಲಿ .ಹಾಗೆಯೇ ವಿಟ್ಲದ ನಾಯ್ಕರ ಅಂಗಡಿ ,ಮಂಗಳೂರಿನ ಬಂಡಸಾಲೆ ಯ ಧಣಿಗಳು ಅಜ್ಜನ ಮಿತ್ರರು .

 ಅಜ್ಜಿ ಪರಮೇಶ್ವರಿ  ಮಿತ ಭಾಷಿ, ಸ್ಥಿತಪ್ರಜ್ನೆ.ಅವರ ಆರೋಗ್ಯ ಸರಿ ಇರುವ ವರೆಗೆ ಮೊಸರು ಕಡೆಯುವುದು ,ಮಾಂಬಳ ಎರೆವುದು ಇತ್ಯಾದಿ ಮಾಡುತ್ತಿದ್ದರು.  ಅಡಿಗೆ ಇತ್ಯಾದಿಗಳಲ್ಲಿ ಅಮ್ಮ ಚಿಕ್ಕಮ್ಮ ಅವರ ಸಲಹೆ ಸೂಚನೆ ಪಡೆಯುತ್ತಿದ್ದರು .ಅದು ಒಂದು ಪ್ರೋಟೋಕಾಲ್ ಮಾತ್ರ . ಅಜ್ಜಿಯ ಸೌಮ್ಯ ಗುಣ ನನ್ನ ತಂದೆಯವರಿಗೆ  ಬಂದುದು . ಬೆನ್ನಿನ  ಡಿಸ್ಕ್ ತೊಂದರೆಯಯಿಂದ  ಹಲವು ವರ್ಷ ಹಾಸಿಗೆ ಹಿಡಿದರು . ನಾನು ದಿನಾಲೂ ಅಜ್ಜ ಅಜ್ಜಿಯರ  ಪಾದಕ್ಕೆ ನಮಸ್ಕರಿಸುವ ಪದ್ದತಿ  ರೂಡೀಕರಿಸಿದ್ದು ಎಲ್ಲರಿಗೂ ಒಂದು ತಮಾಷೆ  ಕಾಣುತ್ತಿತ್ತು . ಅಜ್ಜಿವರಿಗೆ ಆಸೌಖ್ಯ ಆದ ಮೇಲೆ ಚಾವಡಿಯ ಮೂಲೆಯಲ್ಲಿ ಒಂದು  ಪರದೆ ಕಟ್ಟಿ ಅದರ ಒಳಗೆ ಚಾಪೆಯಲ್ಲಿ ಮಲಗುತ್ತಿದ್ದರು . ನಾನೂ ಹಲ ವರ್ಷ ಪಕ್ಕದಲ್ಲಿ ರಾತ್ರಿ ಅವರೊಡನೆ ಮಾತನಾಡಿಕೊಂಡು  ಮಲಗುತ್ತಿದ್ದೆ . ಅವರು ಕಾಲಕ್ಕಿಂತ  ತುಂಬಾ ಮುಂದುವುರಿದ ಒಬ್ಬರು  ಫಿಲೋಸಫರ್  ನಂತೆ  ನನಗೆ ಕಾಣುತ್ತಿದ್ದು , ನಾನು ಕಂಡ ಸ್ತ್ರೀ ರೂಪಗಳಲ್ಲಿ  ಅತ್ಯಂತ ಪಕ್ವ ಮನಸಿನ ಮೂರ್ತಿ ಆಗಿದ್ದರು .

 

                                 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ