ಮೂತ್ರ ಅಂಗ ಸಂಬಂದಿ ಕಲ್ಲುಗಳು
ಇತ್ತೀಚೆಗೆ ಮೂತ್ರ ಅಂಗ ಗಳಿಗೆ ಸಂಬಂದಿಸಿದ ಕಲ್ಲು ಗಳ ಹಾವಳಿ ಹೆಚ್ಚಾಗಿದೆ .ಇವು ಮೂತ್ರ ಪಿಂಡಗಳ ಲ್ಲಿ ಹುಟ್ಟಿ ಅಲ್ಲೇ ಬೆಳೆದು ನಮಗೆ ಅರಿವಿಲ್ಲದಂತೆ ಮೂತ್ರ ಪಿಂಡಕ್ಕೆ ಹಾನಿ ಉಂಟು ಮಾಡ ಬಲ್ಲವು .ಅಥವಾ ಸ್ವಲ್ಪ ಸಣ್ಣ ಕಲ್ಲುಗಳು ಒಳ ಮೂತ್ರನಾಳಕ್ಕೆ(ureter ) ಜಾರಿ ಅಲ್ಲಿಂದ ಮೂತ್ರಕೋಶ (bladder ) ನಂತರ ಹೊರ ಮೂತ್ರ ನಾಳ (urethra )ಮೂಲಕ ಹೊರ ಹಾಕಲ್ಪಡುವವು .ಕೆಳಕ್ಕೆ ಜಾರುವ ವೇಳೆ ಅತೀವ ನೋವು ವಾಂತಿ ಉಂಟಾಗಬಹುದು .ಈ ನೋವು ಬೆನ್ನಿನಿಂದ ಹೊಟ್ಟೆ ಕೆಳಗೆ ತೊಡೆ ಬುಡ ಮತ್ತು ಗಂಡಸರಲ್ಲಿ ವೃಷಣಕ್ಕೂ ಹರಡಿ ರೋಗಿಗೆ ಕಾಯಿಲೆ ಮೂಲ ಎಲ್ಲಿ ಎಂದು ಗಲಿ ಬಿಲಿ ಆಗುವುದು .ಕೆಲವೊಮ್ಮೆ ಈ ಕಲ್ಲುಗಳು ಮೂತ್ರ ನಾಳದಲ್ಲಿ (ಒಳ ಮತ್ತು ಹೊರ )ಅತೀವ ತೊಂದರೆ ಕೊಡುವವು .ಒಳ ಮೂತ್ರ ನಾಳದಲ್ಲಿ ಸಿಲುಕಿದರೆ ಮೂತ್ರ ನಾಳಕ್ಕೆ ಕಟ್ಟೆ ಕಟ್ಟಿದಂತೆ ಆಗಿ ಮೂತ್ರ ಶೇಖರಣೆ ಗೊಂಡು ಸೋಂಕು ಆಗಬಹುದು .ಆದರೆ ಮೂತ್ರ ಬಂದ್ ಆಗುವುದಿಲ್ಲ ಏಕೆಂದರೆ ಇನ್ನೊಂದು ಕಿಡ್ನಿ ಮತ್ತು ಒಳ ಮೂತ್ರ ನಾಳ ಇದೆಯಲ್ಲ .ಮೂತ್ರಾಶಯ ಅಥವಾ ಬ್ಲಾಡರ್ ದ ಬಾಯಿಯಲ್ಲಿ ಅಥವಾ ಅಲ್ಲಿಂದ ಹೊರ ಹೋಗುವ ನಾಳದಲ್ಲಿ ಸಿಲುಕಿದರೆ ಮೂತ್ರ ಬಂದ್ ಆಗುವುದು .
ಮೂತ್ರದ ಕಲ್ಲುಗಳಲ್ಲಿ ಅವುಗಳಲ್ಲಿ ಇರುವ ರಾಸಾಯನಿಕ ವಸ್ತುಗಳ ಮೇಲೆ ಹೊಂದಿ ಕೊಂಡು ಬೇರೆ ಬೇರೆ ತರಾವಳಿ ಇವೆ .
೧. ಕ್ಯಾಲ್ಸಿಯಂ ಕಲ್ಲುಗಳು (ಕ್ಯಾಲ್ಸಿಯಂ ಆಕ್ಸಲೇಟ್ ಮತ್ತು ಫಾಸ್ಫೇಟ್ )ಇವು ೭೫% ಕಲ್ಲುಗಳಿಗೆ ಕಾರಣ ಇದರಲ್ಲೂ ಬಹುಪಾಲು ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು .ಧಾರಾಳ ನೀರು ಕುಡಿಯುವುದರೊಂದಿಗೆ ಉಪ್ಪು ಮತ್ತು ಸಸಾರ ಜನಕ ಆಹಾರದಲ್ಲಿ ಕಡಿಮೆ ಮಾಡುವುದು ಇವುಗಳ ತಡೆಗಟ್ಟುವಿಕೆಗೆ ಮುಖ್ಯ .ಜನರು ತಿಳಿದು ಕೊಂಡಂತೆ ಕ್ಯಾಲ್ಸಿಯಂ ಆಹಾರದಲ್ಲಿ ಕಡಿಮೆ ಮಾಡ ಬಾರದು .ಆಹಾರದಲ್ಲಿ ಕಡಿಮೆ ಕ್ಯಾಲ್ಸಿಯಂ ಹೆಚ್ಚು ಮೂತ್ರ ಕಲ್ಲಿಗೆ ದಾರಿ .ಆಕ್ಸಲೇಟ್ ಕಲ್ಲಿಗೆ ಬೀನ್ಸ್ ಬಿಯರ್ ಬೀಟ್ರೂಟ್ ,ಬಸಳೆ ,ಗೆಣಸು ,ಪುನರ್ಪುಳಿ ,ಟೊಮೇಟೊ ,ವಿಟಮಿನ್ ಸಿ ಮತ್ತು ಅದು ಜಾಸ್ತಿ ಇರುವ ನೆಲ್ಲಿಕಾಯಿ ,ಕಿತ್ತಳೆ ಇತ್ಯಾದಿ ಕಮ್ಮಿ ಮಾಡಬೇಕು .ಆಕ್ಸಲೇಟ್ ಹೆಚ್ಚು ಇರುವ ಆಹಾರ ಸೇವಿಸುವಾಗ ಕ್ಯಾಲ್ಸಿಯಂ ಅಧಿಕ ಇರುವ ವಸ್ತುಗಳನ್ನು ಸೇವಿಸುವುದು ಒಳ್ಳೆಯದು (ಉದಾ ಮೊಸರು ಮಜ್ಜಿಗೆ ಮೀನು ,ಕ್ಯಾಲ್ಸಿಯಂ ಯುಕ್ತ ಬ್ರೆಡ್ ಇತ್ಯಾದಿ )ಕಲ್ಲುಗಳಲ್ಲಿ ಕ್ಯಾಲ್ಸಿಯಂ ಇರುತ್ತಾ ಅದು ಹೆಚ್ಚು ಅಧಿಕ ಇರುವ ಆಹಾರ ತೆಗೆಕೊಳ್ಳ ಹೇಳುತ್ತೀರಲ್ಲಾ ಎಂದು ಕೇಳ ಬಹುದು .ಈ ಕ್ಯಾಲ್ಸಿಯಂ ಕರುಳಿನಿಂದ ಹೀರಲ್ಪಡುವುದು ಮತ್ತು ಮೂತ್ರ ಪಿಂಡದಲ್ಲಿ ಸ್ರವಿಸಲ್ಪಡುವುದು ಸಂಕೀರ್ಣ ಕ್ರಿಯೆ .ಹೆಚ್ಚು ವಿವಿರ ಬೇಕಿದ್ದಲ್ಲಿ ಕೆಳಗೆ ಕೊಟ್ಟ ಲಿಂಕ್ ಗೆ ಲಾಗ್ ಮಾಡಿ ಓದಿರಿ
https://www.ncbi.nlm.nih.gov/pmc/articles/PMC1455427/
ಹಾಗೆಂದು ಕ್ಯಾಲ್ಸಿಯಂ ಅಧಿಕ ಇರುವ ಆಹಾರ ಸಾಕು .ವಯಸ್ಸಾದ ಮಹಿಳೆಯರು ಮೂಳೆ ಸವೆತಕ್ಕೆ ತಿನ್ನುವ ಕ್ಯಾಲ್ಸಿಯಂ ಮುಂದುವರಿಸ ಬಹುದು
೨.ಮೆಗ್ನೀಷಿಯಂ ಅಲ್ಯೂಮಿನಿಯಂ ಫಾಸ್ಫೇಟ್ ಕಲ್ಲುಗಳು . ೧೫ % ಕಲ್ಲುಗಳಿಗೆ ಕಾರಣ .ಆಗಾಗ ಆಗುವ ಮೂತ್ರ ಇನ್ಫೆಕ್ಷನ್ (ಸೋಂಕು )ಇದಕ್ಕೆ ಮೂಲ .ಪುನರಪಿ ಮೂತ್ರ ಸೋಂಕು ಯಾಕೆ ಎಂದು ಕಂಡು ಹಿಡಿದು ಚಿಕಿತ್ಸೆ ಮಾಡಬೇಕು .
೩.ಯೂರಿಕ್ ಆಸಿಡ್ ಕಲ್ಲುಗಳು ೬% ಕಲ್ಲುಗಳಿಗೆ ಹೇತು .ಮೀನು ,ಮಾಂಸ ,ಬೀನ್ಸ್ ,ಸೋಯಾ ,ಬಟಾಣಿ ,ನೆಲಗಡಲೆ ಇತ್ಯಾದಿ ಆಹಾರದಲ್ಲಿ ಕಡಿಮೆ ಮಾಡಬೇಕು
೪. ಸಿಸ್ಟಿನ್ ಕಲ್ಲುಗಳು .ಶೇಕಡಾ ಎರಡಕ್ಕಿಂತ ಕಡಿಮೆ ಕಲ್ಲುಗಳಿಗೆ ಕಾರಣ .
ಇಷ್ಟೆಲ್ಲಾ ಬರೆದರೂ ಕಲ್ಲು ಹೊರ ಬಂದರೆ ತಾನೇ ಅದರ ರಾಸಾಯನಿಕ ಮೂಲ ಕಂಡು ಹಿಡಿಯ ಬಹುದು .ಕೆಲವು ಕಲ್ಲುಗಳ ಆಕಾರ ಸ್ಕ್ಯಾನ್ ಮತ್ತು ಎಕ್ಷ ರೇ ಮೂಲಕ ಅಂದಾಜು ಮಾಡ ಬಹುದು .ಅಲ್ಲದೆ ಮುಕ್ಕಾಲು ಪ್ರಮಾಣಕ್ಕಿಂತಲೂ ಹೆಚ್ಚು ಕ್ಯಾಲ್ಸಿಯಂ ಕಲ್ಲುಗಳೇ ಇರುವುದರಿಂದ ಅವೇ ಕಾರಣ ಎಂದು ಬೇರೆ ಸುಳಿವು ಸಿಗುವ ವರೆಗೆ ತಿಳಿದು ಕೊಳ್ಳ ಬಹುದು .
ಕಲ್ಲು ಕಿಡ್ನಿ ಯಿಂದ ಒಳ ಮೂತ್ರ ನಾಳಕ್ಕೆ ಜಾರಿದೊಡನೆ ನೋವು ಬರುವುದು .ಇದು ಮಗುವನ್ನು ಹೊರ ಹಾಕುವ ಹೆರಿಗೆ ನೋವಿನಂತೆ .ಈ ನೋವು ಇರುವಾಗ ಕೆಲವರಿಗೆ ಮೂತ್ರ ಶಂಕೆ ಆಗುವುದು ಆದರೆ ಮಾಡಲು ಬರುವುದಿಲ್ಲ ,ಮಲ ಶಂಕೆ ಯೂ ಆಗ ಬಹುದು .ನೋವಿಗೆ ಔಷಧಿ ಕೊಟ್ಟಾಗ ನೋವಿನೊಡನೆ ಅವೂ ಪರಿಹಾರ ಕಾಣುವುವು .
ಕಲ್ಲು ಇದೆಯೇ ಎಂದು ಕಂಡು ಕೊಳ್ಳಲು ಅಲ್ಟ್ರಾ ಸೌಂಡ್ ಸ್ಕ್ಯಾನ್ ಸರಳ ಮತ್ತು ಉತ್ತಮ ಸ್ಕ್ಯಾನ್ ಮಾಡುವಾಗ ಮೂತ್ರ ಕೋಶದಲ್ಲಿ (bladder )ತುಂಬಾ ಮೂತ್ರ ಇದ್ದರೆ ಕಲ್ಲು ಚೆನ್ನಾಗಿ ಕಾಣುವುದು . ಇಲ್ಲದಿದ್ದಲ್ಲಿ ಕೆಲವು ಸಣ್ಣ ಕಲ್ಲುಗಳು ಕಣ್ತಪ್ಪಿ ಹೋದಾವು
ಸಾಮಾನ್ಯ ೮ ಮಿ ಮಿ ಒಳಗಿನ ಕಲ್ಲುಗಳು ಔಷಧಿ ಮತ್ತು ನೀರು ಸೇವನೆಯಿಂದ ಹೊರ ಹೋಗುವವು .ಇವುಗಳ ನಿರ್ಗಮನದ ವೇಗೋತ್ಕರ್ಷಕ್ಕೆ ಒಳ್ಳೆಯ ಔಷಧಿ ಇವೆ .ಇದರೊಂದಿಗೆ ಕಡಿಮೆ ಉಪ್ಪು ಮತ್ತು ಎಲ್ಲಕ್ಕಿಂತ ಹೆಚ್ಚು ನೀರು ಸೇವಿಸ ಬೇಕು .ಮತ್ತೊಮ್ಮೆ ಹೇಳುತ್ತೇನೆ ಬರೀ ನೀರು .ಬಾರ್ಲಿ ನೀರು ,ಎಳನೀರು ,ಬಾಳೆ ದಂಡು ನೀರು ಎಲ್ಲಕ್ಕಿಂತಲೂ ಬರೀ ನೀರು ಉತ್ತಮ. ಯಾಕೆಂದರೆ ಕಡಿಮೆ ಸಾಂದ್ರತೆ ಇರುವ ದ್ರವ ಅದು ತಾನೇ. ಖರ್ಚು ಉಳಿಯಿತು .
ದೊಡ್ಡ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮತ್ತು ಹುಡಿ ಮಾಡಿ ತೆಗೆಯುವ ವಿಧಾನ ಇವೆ .
ಬಾಲಂಗೋಚಿ : ಹಿಂದೆ ನಾವು ಊಟದ ಅಕ್ಕಿಯಲ್ಲಿ ಎಷ್ಷ್ಟು ಆರಿಸಿದರೂ ಕಲ್ಲುಗಳು ಇರುತ್ತಿದ್ದವು .ನಾವು ಬಟ್ಟಲಲ್ಲಿ ಅನ್ನವನ್ನು ತೀಡಿ ತೀಡಿ ಕಲ್ಲಿನ ಶಬ್ದ ದಿಂದ ಅದನ್ನು ಹಿಡಿದು ಬೇರ್ಪಡಿಸಿ ಉಣ್ಣುತ್ತಿದ್ದೆವು ,ಈಗಿನ ಹಾಗೆ ಡಿ ಸ್ಟೊನ್ಡ್ ಅಕ್ಕಿ ಸಿಗುತ್ತಿರಲಿಲ್ಲ ,ರೇಷನ್ ಅಕ್ಕಿಯಲ್ಲಿ ಅಂತೂ ಅಕ್ಕಿಗಿಂತ ಕಲ್ಲೇ ಜಾಸ್ತಿ .ಅಷ್ಟೆಲ್ಲ ಕಲ್ಲು ತಿಂದರೂ ಮೂತ್ರ ಕಲ್ಲು ಪಿತ್ತ ಕೋಶ ಕಲ್ಲು ಇಷ್ಷ್ಟು ಜಾಸ್ತಿ ಇರಲಿಲ್ಲ .(ಇದು ತಮಾಷೆಗೆ ಬರೆದದ್ದು ಆ ಕಲ್ಲಿಗೂ ಈ ಕಲ್ಲಿಗೂ ಸಂಬಂಧ ಇಲ್ಲ . )
ಒಂದು ರೀತಿಯಲ್ಲಿ ಇದು ಶಿಲಾಯುಗ .ಆಗಾಗ ಕಲ್ಲು ಆಗುವ ಹುಡುಗಿ ಶಿಲ ಬಾಲಿಕೆ ಎಂದು ಕರೆಯ ಬಹುದೇನೋ .ಕೆಲವು ಪಾಸಿಟಿವ್ ಥಿಂಕಿಂಗ್ ರೋಗಿಗಳು ಕೂಟದಲ್ಲಿ ತಮಗೆ ಮೂತ್ರದ ಕಲ್ಲು ನಾಲ್ಕು ಬಾರಿ ,ಪಿತ್ತ ಕೋಶದ ಕಲ್ಲು ಎರಡು ಬಾರಿ ಆಗಿದೆ ಎಂದು ಏನೋ ಮುತ್ತು ಹವಳದ ಕಲ್ಲು ಸಂಪಾದಿಸಿದಂತೆ ಮಾತನಾಡುವರು .
(ಇನ್ನೊಂದು ಕತೆ .ಕಲ್ಲಿಕೋಟೆ ಮೆಡಿಕಲ್ ಕಾಲೇಜು ನಲ್ಲಿ ಇಬ್ಬರು ನಮ್ಮ ಊರಿನ ಭಟ್ ಡಾಕ್ಟರು ಇದ್ದರು ,ಒಬ್ಬರು ಕಣ್ಣಿನ ಡಾಕ್ಟರ್ ,ಇನ್ನೊಬ್ಬರು ಮೂತ್ರ ಅಂಗ ಸರ್ಜನ್ ..ಇಬ್ಬರೂ ಪ್ರಸಿದ್ದರು .ಅಲ್ಲಿ ಭಟ್ ಡಾಕ್ಟರು ಬೇಕು ಎಂದರೆ ನಿಮಗೆ ನೇತ್ರ ಡಾಕ್ಟ್ರು ಬೇಕೇ ಮೂತ್ರ ಡಾಕ್ಟ್ರು ಬೇಕೇ ಎಂದು ಕೇಳುತ್ತಿದ್ದರಂತೆ .)