ಬಿಬೇಕ್ ದೇಬ್ ರಾಯ್ ಅವರ ಮಹಾಭಾರತ ದಲ್ಲಿ ಗೀತೋಪದೇಶ ಓದುತ್ತ್ತಿದ್ದೆ . ಎಲ್ಲಾ ವೇದಾಂತಿಗಳು ಪುರಾವರ್ತಿಸುವ ಫಲಾ ಪೇಕ್ಷೆ ನಿನ್ನ ಕರ್ತವ್ಯ ಮಾಡು , ಸುಖ ಬಂದಾಗ ಅತಿ ಹಿಗ್ಗದಿರು ,ಕಷ್ಟ ಬಂದಾಗ ಕುಗ್ಗದಿರು ,ಅದೇ ನೈಜ ಯೋಗವಸ್ಥೆ ಇತ್ಯಾದಿ ವಾಕ್ಯಗಳ ರಿವಿಶನ್ ಆಯಿತು .ಲೋಕದಲ್ಲಿ ಇದನ್ನು ಬೋಧಿಸುವ ಪ್ರಾಜ್ಞರು ಸನ್ಯಾಸಿಗಳು ಬಹಳ ಮಂದಿ ಇದ್ದಾರೆ .ಆದರೆ ತಮ್ಮ ನಡವಳಿಕೆಯಲ್ಲಿ ಇದನ್ನು ಅಳವಡಿಸಲು ಅವರಿಗೂ ಸಾಧ್ಯವಾಗುವುದಿಲ್ಲ . ಷಡ್ವೈರಿ ಗಳಿಂದ ದೂರವಿರಿ ಎಂದು ವೇದಿಕೆಯಿಂದ ಪ್ರಚಿಸುವವರು ತಮ್ಮ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಹುಲು ಮಾನವರಂತೆ ಕೋಪಾವೇಶದಿಂದ ಶಾಪ ಹಾಕುವರು , ಆಸ್ತಿಗಾಗಿ ಕೋರ್ಟ್ ಕಟ್ಟಳೆ ಅಲೆ ಯುವರು .
ಇದನ್ನೆಲ್ಲಾ ಮೀರಿದ ಯೋಗಾವಸ್ಥೆ ಅಪರೂಪಕ್ಕೆ ಕಂಡರೆ ಅದು ಜನ ಸಾಮಾನ್ಯರಲ್ಲಿಯೇ .ಮೊನ್ನೆ ನಾನು ಓದಿದ ಬನ್ನಂಜೆ ಯವರ ಆತ್ಮ ಚರಿತ್ರೆ ಯಲ್ಲಿ ತಮ್ಮ ಆತ್ಮೀಯರಾದ ಉದ್ಯಮಿ ಒಬ್ಬರ ಹೋಟೆಲ್ ಅಗ್ನಿಗೆ ಆಹುತಿ ಆದಾಗ ಅಲ್ಲಿದ್ದ ಹತ್ತು ಲಕ್ಷ ರೂಪಾಯಿ ಭಸ್ಮ ವಾಯಿತು ;ಅದನ್ನು ತಿಳಿದು ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ,ಹಿಂದಿನ ದಿನ ಅದನ್ನು ಯಾರಾದರೂ ಬಡವರಿಗೆ ಕೊಡ ಬಹುದಿತ್ತು ಎಂದು ಕೊಂಡರಂತೆ .
ನನ್ನ ಕೈ ಎಣಿಕೆಯ ರೋಗಿಗಳಲ್ಲಿ ಇಂತಹ ಸ್ಥಿತ ಪ್ರಜ್ಞತೆ ಕಂಡಿದ್ದೇನೆ .ಹಿಂದೆ ಕ್ಯಾನ್ಸರ್ ಪೀಡಿತ ಓರ್ವ ಮಹಿಳೆ ಬಗ್ಗೆ ಬರೆದಿದ್ದೆ . ಇಂತಹದೇ ಓರ್ವ ಮಹಾ ಮಹಿಮ ದಿ ವಿಶ್ವನಾಥ ಸಾಲಿಯಾನ್ ಮತ್ತು ಅವರ ಪತ್ನಿ ದಿ ಪಾರ್ವತಿ .,ಇವರು ಪುತ್ತೂರಿನ ಮಂಜಲ್ ಪಡ್ಪು ವಿನಲ್ಲಿ ಹೋಟೆಲ್ ವಿಶ್ವಾಸ್ ಎಂಬ ಉದ್ಯಮ ನಡೆಸುತ್ತಿದ್ದು ಜನಪ್ರಿಯ ರಾಗಿದ್ದರು . ಜನ ಸಾಮಾನ್ಯರ ಮೆಚ್ಚಿನ ಹೋಟೆಲ್ . ಹಿಂದೆ ಕಟ್ಟಿಗೆಯಲ್ಲಿ ಅಡಿಗೆ ಇದ್ದಾಗ ಹೊಗೆ ಸೇವನೆಯಿಂದ ಇರ ಬೇಕು .ಅವರಿಗೆ ತೀವ್ರತರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು . ಕಾಯಿಲೆ ಎಷ್ಟೇ ತೀವ್ರವಾಗಿ ಇರಲಿ ಒಂದೇ ಒಂದು ದಿನ ಅವರು ಮುಖ ಗಂಟು ಹಾಕಿದ್ದಾಗಲಿ ,ಗೊಣಗಿದ್ದಾಗಲೀ ಇಲ್ಲ . ಕೃತಜ್ಞತಾ ಭಾವ ಸೂಚಿಸುವ ಮುಖಭಾವ ಮಾತ್ರ ನಾನು ಕಂಡದ್ದು . ರೋಗ ತೀವ್ರವಾಗಿ ಅವರು ಅಸು ನೀಗಿದಾಗ ಅವರನ್ನು ಬಲ್ಲವರು ಕಂಬನಿ ಮಿಡಿದರು . ಇವರ ಪತ್ನಿ ದಿ ಪಾರ್ವತೀ ಅಮ್ಮ ನವರು ಗುಣದಲ್ಲಿ ಇವರದೇ ಪಡಿಯಚ್ಚು . ವರ್ಷಗಳ ಹಿಂದೆ ಭಾರೀ ಮಳೆಗೆ ಧರೆ ಕುಸಿದು ಇವರೂ ಜತೆಗೆ ಮಲಗಿದ್ದ ಮೊಮ್ಮಗ ಧನುಷ್ ಅಸು ನೀಗಿದಾಗ ಊರಿಗೆ ಊರೇ ಮರುಗಿತ್ತು .ಒಳ್ಳೆಯವರಿಗೆ ಯಾಕೆಇಂತಹ ಪರೀಕ್ಷೆ ?
ಈಗ ಮಗ ಮಹೇಶ್ ಹೋಟೆಲ್ ಮುಂದುವರಿಸುತ್ತಿತ್ತು ಹಿರಿಯರ ಸದ್ಗುಣಗಳು ಅವರಲ್ಲಿಯೂ ಎದ್ದು ಕಾಣುತ್ತದೆ .