ಬೆಂಬಲಿಗರು

ಬುಧವಾರ, ನವೆಂಬರ್ 4, 2015

ಗೂಗಲ್ನಲ್ಲಿ ರೋಗ ಹುಡುಕಿದರೆ?

ಆನಂದ  ಸಾಫ್ಟ್ವೇರ್ ಇಂಜಿನಿಯರ್ .ಮದುವೆ ಆಗಿಲ್ಲಬ್ಯಾಚುಲರ್.ಬೆಂಗಳೂರಿನಲ್ಲಿ  

ಮನೆ ಮಾಡಿದ್ದಾನೆ .ಸ್ವಯಂ ಪಾಕ .ಉಪ್ಪಿಟ್ಟು ಮಾಡಿದ್ದೂ  ಗೂಗಲ್ ನಲ್ಲಿ  ರೆಸಿಪ್ 

ನೋಡಿ .ಎಲ್ಲಿಯಾದರೂ ಹೊಸ ಜಾಗಕ್ಕೆ ಹೋಗುವಾಗ ಗೂಗಲ್ ನ ಜಿ ಪಿ ಎಸ 

ಉಪಯೋಗಿಸುವನು .ಮನೆಗೆ ಬೇಕಾದ ವಸ್ತುಗಳು ಈಗ ಆನ್ಲೈನ್ನಲ್ಲಿ ಸಿಗುತ್ತವೆ .

ಜೀವನ ಬೆರಳ ತುದಿಯಲ್ಲಿ ಬಂದು ನಿಂತಂತೆ .


  ಇದಕ್ಕಿಂದಂತೆ ಒಂದು ದಿನ ಅವನಿಗೆ ಸ್ವಲ್ಪ ತಲೆನೋವು ವಾಂತಿ ಆಯಿತು .

ಡಾಕ್ಟರ್ ಬಳಿ ಹೋದರೆ ಕಾಯಬೇಕು .ಅವರು ಅದೂ ಇದೂ ಅಂತ ಟೆಸ್ಟ್ ಗಳನ್ನು 

ಬರೆಯುವರು .ಗೂಗಲ್ ವೈದ್ಯ ನನ್ನೇ ಹಿಡಿದರೆ ಬಲು ಸುಲಭ ಎಂದು ಕೊಂಡು.

ತಲೆಸುತ್ತು ವಾಂತಿ ಎಂದು ಗೂಗಲ್ ಹುಡುಕು ನಲ್ಲಿ  ಟೈಪಿಸಿದ .ಕೂಡಲೇ ನೂರು 

ನೂರೈವತ್ತು  ಕಾರಣಗಳ ಮಾಲೆ ಹೊರ ಬಂತು .ಮೆದುಳಿನ ಗಡ್ಡೆ ,ಮೆದುಳಿನ 

ಸೋಂಕು ,ಮೆದುಳಿನ ರಕ್ತ ಸ್ರಾವ ಭಯಾನಕ ರೋಗಗಳು ,ಇವಕ್ಕೆ ಎಂ ಅರ್ ಐ

ಸ್ಕ್ಯಾನ್ ,ಬೆನ್ನಿನ ನೀರು ತೆಗೆದು ಪರೀಕ್ಷೆ ಇತ್ಯಾದಿ . ಅಯ್ಯೋ ತನಗೆ ಈ 

ರೋಗಗಳು ಬಂದಿರ ಬಹುದೇ ,ಇನ್ನೂ ಒಂದು ಫ್ಲಾಟ್ ಕೊಂಡಿಲ್ಲ ,ಮದುವೆ ಆಗಿಲ್ಲ .

                    ಹೆದರಿಕೆಯಿಂದ ಕೆಳಗೆ ಕಣ್ಣು ಹಾಯಿಸಿದರೆ ಉದರ ಕಾಯಿಲೆಗಳ 

ಪಟ್ಟಿ. ಹೊಟ್ಟೆ ಅಲ್ಸರ್ ,ಹೊಟ್ಟೆ ಕ್ಯಾನ್ಸರ್ ,ಅಪೆಂಡಿಸೈಟಿಸ್ ,ಲಿವರ್ ಕ್ಯಾನ್ಸರ್ .

ಎಲ್ಲವೂ ಭೂತ ಪಿಶಾಚಿಗಳಂತೆ  ತನ್ನ ಮೇಲೆ ಆಕ್ರಮಣ ಮಾಡಿದಂತೆ ತೋರಿತು .


           ಕೆಳಗೆ ಗರ್ಭಿಣಿ ಯಾಗುವುದು ಒಂದು ಕಾರಣ ಎಂದು ಕಂಡಿತು ,ಛೆ ಛೆ 

ತನಗಿನ್ನೂ ಮದುವೇನೇ ಆಗಿಲ್ಲ ,ಆದರೂ ಗರ್ಭಿಣಿ ಆಗುವುದು ಹೆಂಡತಿ ತಾನೇ 

ಎಂದು ಸಮಾಧಾನ ಮಾಡಿ ಕೊಂಡ.

     ಮುಂದೆ ನೋಡಿದರೆ ಕಿಡ್ನಿ ವೈಫಲ್ಯ ,ಲಿವರ್ ನ ಸೋಲು ಇತ್ಯಾದಿ 

ಕಾಯಿಲೆಗಳು .ತನಗೆ ಈ ರೋಗಗಳು ಇರ ಬಹುದೇ ?

ಇಷ್ಟೆಲ್ಲಾ ಆಗುವಾಗ ಊರಿನಿಂದ ಅಮ್ಮನ ಫೋನ್ ಬಂತು .ಹೆತ್ತ ತಾಯಿ ಅಲ್ಲವೇ ?

ಮಗನಿಗೆ ಸ್ವಲ್ಪ ಶೀತ ಆದರೂ ತಾಯಿ ಗೆ  ಎಲ್ಲಿದ್ದರೂ ತಿಳಿಯುವುದು .ಏನು ಮಗಾ 

ಹೇಗೆ ಇರುವಿ ?ಎಂದಳು .ತನಗೆ ವಾಂತಿ ಅದ ವಿಷಯ ತಿಳಿಸಿದ .ಅಮ್ಮ 

ಅಯ್ಯೋ ಮಗನೆ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡದೆ ಪಿತ್ತ ಆಗಿದೆ .ಎಣ್ಣೆ ಸ್ನಾನ 

ಮಾಡಿ ,ನಿಂಬೆ ಶುಂಠಿ ಬೆರೆಸಿದ ಪಾನಕ ಕುಡಿ ಎಂದು ಟೆಲಿ ಮೆಡಿಸಿನ್ ನಲ್ಲಿ 

ಹೇಳಿದಳು .ಸದ್ಯ ಬದುಕಿದೆ ಎಂದ ಆನಂದ ಕಂಪ್ಯೂಟರ್ ಶಟ್ ಡೌನ್ ಮಾಡಿ 

ಅಮ್ಮನ ಮದ್ದು ಮಾಡಿದ .


ಭಾನುವಾರ, ಅಕ್ಟೋಬರ್ 25, 2015

ಕಣ್ಣಿದ್ದೂ ಕಾಣದ ಸ್ಥಿತಿ ಮೆದುಳಿನ ಅಂಧತ್ವ

ಕಣ್ಣಿದ್ದೂ ಕಾಣರು ,ಒಳಗಿನ ಕಣ್ಣನು ತೆರೆದು ನೋಡು ಇತ್ಯಾದಿ ನಾವು ಆಗಾಗ್ಗೆ 

ಕೇಳುತ್ತಿರುತ್ತೇವೆ.ಇದರ ವಾಸ್ತವ ಅಂಶ ಏನು ?ನಮ್ಮ ಕಣ್ಣುಗಳೇ ದೃಷ್ಟಿ ನೀಡಲು 

ಸಾಕೇ?

ನಮ್ಮ ಕಣ್ಣಿನ ಅಕ್ಷಿಪಟಲದ ಮೇಲೆ ಬಿದ್ದ ಬಿಂಬವು ಸಂದೇಶ ರೂಪದಲ್ಲಿ  ನರಗಳ 

ಮೂಲಕ ಮೆದುಳಿಗೆ ಸಾಗುವುದು .ಮೆದುಳಿನ ಹಿಂಬಾಗದಲ್ಲಿ  ದೃಷ್ಟಿ ವೀಕ್ಷಕ ಕೇಂದ್ರ 

ಇದೆ .ಇಲ್ಲಿ ಕಣ್ಣಿನಿಂದ ಬಂದ ಸಂದೇಶವನ್ನು ವಿಶ್ಲೇಷಿಸಿ ಕಂಡ ಬಿಂಬದ ದ ರೂಪ 

ಗ್ರಹಣ ಆಗುವುದು .

                                     

ಕಣ್ಣು ಸರಿ ಇದ್ದರೂ ಮೆದುಳಿನ ಈ ಭಾಗ ಸರಿ ಇಲ್ಲದಿದ್ದಲ್ಲಿ  ಮನುಷ್ಯ 

ಅಂಧನಾಗುವನು.ಇದನ್ನು ಮೆದುಳಿನ ಅಂಧತ್ವ ಎನ್ನುವರು (Cortical Blindness)

ಕೆಲವು ಪರೀಕ್ಷಣ ಗಳಿಂದ ಈ ಕುರುಡನ್ನು ಕಂಡು ಹಿಡಿಯ ಬಹುದು .ಉದಾ 

ಕಣ್ಣಿನ ಮೇಲೆ ಬೆಳಕು ಹಾಯಿಸಿದಾಗ ಕಣ್ಣ ಪಾಪೆ ಕುಗ್ಗುವುದು .ಕಣ್ಣಿನ ಮಸೂರ 

,ಅಕ್ಷಿಪಟ ಅಥವಾ ನರದ ತೊಂದರೆ ಇದ್ದರೆ ಈ ಪ್ರತಿಕ್ರಿಯೆ ಕಾಣಿಸದು .ಆದರೆ

ಮೆದುಳಿನ ಅಂಧತ್ವದಲ್ಲಿ  ಇದು ಅಭಾದಿತ ವಾಗಿರುವುದು .ಆದರೂ ಏನೂ 

ಕಾಣಿಸದು .ಇದನ್ನು ಮೆದುಳಿನ ತೊಂದರೆ ಎನ್ನಿರಿ ,ಒಳಗಿನ ಕಣ್ಣಿನ ತೊಂದರೆ 

ಎನ್ನಿರಿ .

ಮೆದುಳಿನ ರಕ್ತ ನಾಳದ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸ್ರಾವ ದಿಂದ 

ಉಂಟಾಗುವ  ಮೆದುಳಿನ ಆಘಾತ (ಸ್ಟ್ರೋಕ್) ಇದಕ್ಕೆ ಮುಖ್ಯ ಕಾರಣ .

ತಲೆಯ  ಸಿ ಟಿ ಅಥವಾ  ಎಂ ಆರ್ ಐ ಸ್ಕ್ಯಾನ್ ಮೂಲಕ ಇದನ್ನು  

ದೃಡೀಕರಿಸುವರು.




ಸಿ ಟಿ ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ರಕ್ತ ಹೆಪ್ಪು ಕಟ್ಟುವಿಕೆ


MRI ಸ್ಕ್ಯಾನ್ ನಲ್ಲಿ  ದೃಷ್ಟಿ ಮೆದುಳಿನ ಆಘಾತ ಚಿತ್ರಣ .
(ಚಿತ್ರಗಳ ಮೂಲಗಳಿಗೆ ಅಭಾರಿ )

ಭಾನುವಾರ, ಅಕ್ಟೋಬರ್ 11, 2015

ತಂದೆಯ ನೆನಪು



ಅರಿವು ಬಂದಾಗ ದಿಂದ  ನನ್ನ ತಂದೆಯವರನ್ನು ನಾನು ನೆನಪಿಸಿ ಕೊಳ್ಳುವುದು 

ಓರ್ವ ಸ್ಥಿತ ಪ್ರಜ್ನ ಕರ್ಮಯೋಗಿಯಾಗಿ .ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ 

ಪಶುಗಳ ಆರೈಕೆಯಲ್ಲಿ ತೊಡಗಿಸಿ ಕೊಳ್ಳುವರು .ಅಡಿಗೆ ಮನೆಯಿಂದ ಪಶು ಆಹಾರ 

(ಮಡ್ಡಿ ಎನ್ನುತ್ತೇವೆ ) ದ ಪಾತ್ರೆಯನ್ನು ಒಂದು ಹೆಗಲಿಗೆ ಏರಿಸಿ ದನಗಳ ಕೊಟ್ಟಿಗೆಗೆ 

ಹೋಗಿ ಅವುಗಳ ಆರೈಕೆ ಮಾಡುವರು .ಅವರಿಗೆ ಅತೀ ಪ್ರಿಯವಾಗಿದ್ದ ಕೆಲಸ ಅದು .

ಆಗೆಲ್ಲ ಐದಾರು ದನಗಳೂ ,ಎರಡು ಎಮ್ಮೆ ಮತ್ತು ಎರಡು ಜತೆ ಹೋರಿಗಳೂ 

ಇರುತ್ತಿದ್ದವು  .ನನ್ನ ಬಾಲ್ಯದಲ್ಲಿ ಓಟದ ಕೋಣಗಳೂ ಇರುತ್ತಿದ್ದವು .ಹಲವು ಬಾರಿ 

ಬೆಳಗಿನ ತಿಂಡಿಗೆ ಕರೆಯುವಾಗ ಅವರ ಕೆಲಸ ಅಪೂರ್ಣವಾಗಿರುತ್ತಿದ್ದುದರಿಂದ 

ಅಸಹನೆಯ ಛಾಯೆ ಇರುತ್ತಿತ್ತು .

ಇದರ ನಡುವೆ ನಾವು ನಮ್ಮ ರಜೆ ಅರ್ಜಿ ,ಪ್ರೋಗ್ರೆಸ್ ರಿಪೋರ್ಟ್ ಗೆ ಸಹಿ 

ಮಾಡಿಸಲು ಹೋದರೆ ಕಣ್ಣು ಮುಚ್ಚ್ಚಿ ಸಹಿ ಮಾಡುವರು .ಒಂದೇ ಒಂದು ಸಾರಿ 

ಅಂಕ ಕಡಿಮೆ ಏಕೆ ಬಂತು .ಏಕೆ ಫೈಲ್ ಆದೆ ಅಂದವರಲ್ಲ .

 ತಿಂಡಿ ಕಾಫಿಯ ನಂತರ ಹಸು ಕರುಗಳನ್ನು ಮೇಯ ಬಿಟ್ಟು ತೋಟಕ್ಕೆ 

ಹೋಗುವರು .ಕಾರ್ಮಿಕರೊಡನೆ ತಾವೂ ದುಡಿಯುವರು ,ಅವರ ಉಡುಗೆ ಒಂದು 

ತುಂಡು ವಸ್ತ್ರ ಸೊಂಟಕ್ಕೆ  ಮತ್ತು ತಲೆಗೆ ಒಂದು ಬೈರಾಸಿನ ಮುಂಡಾಸು .


      ಮಧ್ಯಾಹ್ನ  ಮನೆಗೆ ಮರಳಿ ಸ್ನಾನ ,ಪೂಜೆ ,ಊಟ ಮತ್ತು ಸಣ್ಣ ನಿದ್ದೆ .ಮತ್ತೆ 

ಎದ್ದು  ತೋಟದತ್ತ .ಸಂಜೆ ಮರಳಿದಾಗ ಹಸು ಕರುಗಳು  ಗುಡ್ಡದಿಂದ ಮರಳಿ 

ಗೇಟ್ ನ ಹೊರಗೆ ಕಾಯುತ್ತಲಿರುವವು .ಅವುಗಳನ್ನು ಒಳ ಮಾಡಿ ಅವುಗಳ 

ಆರೈಕೆ .ಇಷ್ಟರಲ್ಲಿ ಮುಸ್ಸಂಜೆ .ಕೆಲಸದವರ ಲೆಕ್ಕ ಬರೆಯುವರು ,ಅವರ ಒಂದು 

ಟ್ರಂಕ್ ನಲ್ಲಿ ಲೆಕ್ಕ ಪುಸ್ತಕ ,ಪೆನ್ಸಿಲ್ ಇತ್ಯಾದಿ ಇರುತ್ತಿದ್ದುವು ,ಒಂದು ಕಾಲು 

ಪದ್ಮಾಸನ ,ಇನ್ನೊಂದು ಮೇಲಕ್ಕೆ ಮಡಿಸಿ ಅವರು ಕುಳಿತು ಲೆಕ್ಕ ಬರೆಯುತ್ತಿದ್ದುದು 

ಈಗಲೂ ಕಣ್ಣಿಗೆ ಕಟ್ಟಿದಂತಿದೆ .

ತಂದೆಯವರು ಮಕ್ಕಳಿಗೆ ಏಟು ಕೊಡರು ,ಬೆದರಿಸರು ,ತಾಯಿ ಶಿಕ್ಷಿಸುವಾಗ ನಾವು 

ರಕ್ಷಣೆಗೆ ಅವರತ್ತ ಧಾವಿಸುತ್ತಿದ್ದೆವು .ಅವರಿಗೆ ಕಿರಿ ಕಿರಿ ಎನಿಸುತ್ತಿತ್ತು ,

ರಾತ್ರಿ ತೋಟಕ್ಕೆ ಒಂದು ಸುತ್ತು ಬಂದು ಊಟ .ಆಮೇಲೆ ರೇಡಿಯೋದಲ್ಲಿ 

ಯಕ್ಷಗಾನ ತಾಳ ಮದ್ದಲೆ ಇದ್ದ ದಿನ ಆಸಕ್ತಿಯಿಂದ ಕೇಳುವರು ,ಮೊಮ್ಮಕ್ಕಳು 

ಇದ್ದಾಗ ಅವರಿಗೆ ಕತೆ ಹೇಳುವರು .

  ಸುತ್ತ ಮುತ್ತಲಿನ ಜಾತ್ರೆ ,ಭೂತ ಕೋಲ ಗಳಿಗೆ ಹೋಗುವಾಗ ಅವರೊಡನೆ 

ನಾವೂ ಹೋಗುತ್ತಿದ್ದೆವು .ಮಾಂಕಾಳಿ ಭೂತ ಮಕ್ಕಳೆಲ್ಲರೂ ಕ್ಷೆಮವೇ ಎಂದು 

ಕೇಳುವುದು .ಕೋಲದ ಸಮಯದಲ್ಲಿ ವಿದ್ಯಾಭ್ಯಾಸಕ್ಕಾಗಿ  ಊರಿಂದ ಹೊರಗೆ 

ಇರುತ್ತಿದ್ದ ಅಣ್ಣಂದಿರ ತಪ್ಪಿಗೆ ಕಾಣಿಕೆ ಹಾಕುತ್ತಿದ್ದರು .

ನಾನು ಮೊದಲ ಯಕ್ಷಗಾನ ಶ್ವೇತಕುಮಾರ ಚರಿತ್ರೆ ವಿಟ್ಲ ಜಾತ್ರೆಯಲ್ಲಿ 

ತಂದೆಯವರ ಜೊತೆಗೇ ನೋಡಿದ್ದು .ಆಗೆಲ್ಲಾ ವಿಟ್ಲ ಪುತ್ತೂರು ಜಾತ್ರೆಗೆ ಹೋದರೆ 

ಬೆಡಿಯ ನಂತರ ಯಕ್ಷಗಾನ ಬಯಲಾಟಕ್ಕೆ ಹೋಗಿ ರಾತ್ರೆ ಕಳೆದು ಬೆಳಗಿನ 

ಬಸ್ಸಿನಲ್ಲಿ ಮರಳುತ್ತಿದ್ದೆವು .

ಪುತ್ತೂರು ಜಾತ್ರೆಗೆ ಆರೇಳು ಮೇಳಗಳು ಏಕ ಕಾಲಕ್ಕೆ ಬಂದುದು ಇದೆ .ಈಗ 

ಒಂದು ಮೇಳವೂ ಬರುತ್ತಿಲ್ಲ .


   ತಂದೆಯವರು ಸುಮ್ಮನೆ ಪೇಟೆ ತಿರುಗುವರಲ್ಲ .ನಾವು ರಜೆಯಲ್ಲಿ ಅಜ್ಜನ 

ಮನೆಗೋ ಅಕ್ಕನ ಮನೆಗೋ ಹೋಗುವಾಗ ನಮಗೆ ದಾರಿ ಖರ್ಚಿಗೆ ಹಣ 

ಕೊಡುವರು ,ಯಾವಾಗಲೂ ಚಿಲ್ಲರೆ ತೆಗೆದುಕೊಂಡು ಹೋಗಲು ಹೇಳುವರು .ಚಿಲ್ಲರೆ 

ಹಣಕ್ಕೆ ಹೊಡಿ ಚುಂಗುಡಿ ಎನ್ನುತ್ತಿದ್ದರು ,ಪುತ್ತೂರು ಪೇಟೆಯಲ್ಲಿ ಬಸ್ ಸ್ಟಾಂಡ್ 

ಎದುರು ಜನತಾ ಫುಟ್ ವೇರ್ ಎಂಬ ಅಂಗಡಿ .ಅದರ ಧಣಿ ಒಬ್ಬ ಸಾಹೇಬರು .

ನಮಗೆ ಚಪ್ಪಲಿ ಬೇಕಾದಾಗ ಅವರ ಅಂಗಡಿಗೆ ಹೋಗಿ ಬೇಕಾದ್ದು ಕೊಂಡು ,ದುಡ್ಡು

ತಂದೆ ಕೊಡುತ್ತಾರೆ ಎಂದು ಬರುತ್ತಿದ್ದೆವು .ನಿಮ್ಮ ತಂದೆಯ ಹೆಸರು ವಿಳಾಸ ಏನು 

ಎಂದು ಅವರು ಕೇಳಿದ್ದಿಲ್ಲ .ತಂದೆಯವರು ಆ ಕಡೆ ಹೋದಾಗ ಸಾಲ ತಿರಿಸುವರು .

ನಂಬಿಕೆಯಲ್ಲಿ ನಡೆಯುತ್ತಿದ್ದ ವ್ಯವಹಾರಗಳು.

 ಮಕ್ಕಳು ಕಲಿತು ಡಾಕ್ಟರ ,ಇಂಜಿನಿಯರ್ ಆಗ ಬೇಕೆಂದು ಅವರು ಬಯಸಿದವರಲ್ಲ .

ವಕೀಲರು ಮತ್ತು ಅಧ್ಯಾಪಕರು ಎಂದರೆ ಅವರಿಗೆ ಗೌರವ ಇತ್ತು ,ಅವರ ಅಧ್ಯಾಪಕ 

ರಾಗಿದ್ದ ಕಾರಂತ ಮೇಸ್ಟ್ರು ಎಂಬವರು ಆಗಾಗ್ಗೆ ನಮ್ಮ ಮನೆಗೆ ರಾತ್ರಿ ಬಂದು 

ಒಂದು ದಿನ ಇದ್ದು ಹೋಗುತ್ತ್ತಿದ್ದರು ,ಆಗೆಲ್ಲ ದೂರದ ನೆಂಟರೂ ,ಅಷ್ಟೊಂದು 

ಅನುಕೂಲ ಇಲ್ಲದವರೂ ಬೇರೆಯವರ ಮನೆಗಳಿಗೆ ಹೋಗಿ ಆತಿಥ್ಯ 

ಸ್ವೀಕರಿಸುತ್ತಿದ್ದುದು ಸಾಮನ್ಯ.ಎಷ್ಟು ಬಡ ತನ ಇದ್ದರೂ ಅತಿಥಿಗಳು ಬಂದಾಗ 

ಯಾರೂ ಗೊಣಗುತ್ತಿದ್ದಿಲ್ಲ ,

ತಂದೆಯವರು ಅಡಿಕೆ ಮಾರಾಟ ಮಾಡಿದ ಹಣ ತರಲು ಮಂಗಳೂರಿಗೆ 

ಹೋಗುವ ಸಂಧರ್ಭ ಬೆಳಿಗಿನ ಮೊದಲನೇ ಬಸ್ ಹಿಡಿದು ಹೋಗುವರು .

ಮಂಗಳೂರು ಬಸ್ ಸ್ಟಾಂಡ್ ಹೋಟೆಲ್ ನಲ್ಲಿ  ಬನ್ಸ್ ಮತ್ತು ಚಹಾ ಸೇವಿಸುವರು .

ಹೋಟೆಲ್ ನಲ್ಲಿ ಅವರು ಯಾವಾಗಲೂ ಎರಡು ಚಹಾ ತರಿಸುವರು ,ಹಳ್ಳಿಯ 

ಲೆಕ್ಕದಲ್ಲಿ ಹೋಟೆಲ್ ನ ಒಂದು ಲೋಟ ಚಹಾ ಗಂಟಲು ಇಳಿಯುವಷ್ಟರಲ್ಲಿ ಮುಗಿದು 

ಹೋಗುತ್ತದೆ . ಆಮೇಲೆ ನಡೆದುಕೊಂಡು ಬಂದರು ಪ್ರದೇಶದಲ್ಲಿ ಅಡಿಕೆ ಮಂಡಿಗೆ 

ಹೋಗಿ ವ್ಯವಹಾರ ಮುಗಿಸಿ ಮರಳಿ ಬಸ್ ಸ್ಟಾಂಡ್ ಸಮೀಪದ ಗಣೇಶ ಭವನದಲ್ಲಿ 

ಊಟ ಮಾಡಿ ಸ್ವಲ್ಪ ನಿದ್ದೆ ಮಾಡಿ ವಿರಮಿಸಿ ಮನೆಗೆ ಮರಳುವರು .ಮಂಗಳೂರಿಗೆ 

ಹೋಗುವ ಅಪ್ಪ ಚಿಕ್ಕಪ್ಪ ನವರಿಗೆ  ಮನೆಯವರೆಲ್ಲ ತಮ್ಮ ತಮ್ಮ ಭಾವಕ್ಕೆ  

ಸರಿಯಾದ ಸಾಮಗ್ರಿಗಳ ಪಟ್ಟಿ ಕೊಡುತ್ತಿದ್ದೆವು .ಅದಕ್ಕೆ ಮತ್ತು ಅವರು ಮಕ್ಕಳಿಗೆ 

ತರುತ್ತಿದ್ದ ಪೆಪ್ಪರ್ ಮಿಂಟ್ ಮತ್ತು ಚಾಕಲೇಟ್ ಗಳಿಗಾಗಿ ನಾವು ಕಾಯುತ್ತಿದ್ದೆವು ,


   ನಮ್ಮ ಮನೆಯಿಂದ ಬಸ್ ಮಾರ್ಗಕ್ಕೆ ಒಂದೂವರೆ ಮೈಲು ,ಗುಡ್ಡ ಹತ್ತಿ ಇಳಿಯ

ಬೇಕು .ಬೈರಿಕಟ್ಟೆ ಎಂಬಲ್ಲಿ ಬಸ್ ಹಿಡಿಯುತ್ತಿದ್ದೆವು ,ಬಹಳಷ್ಟು ಸಾರಿ ನಾವು ಗುಡ್ಡೆ 

ಶಿಖರದಲ್ಲಿ ಇರುವಾಗ ಉದ್ದೇಶಿತ ಬಸ್ ಹೋಗುವುದು ಕಾಣಿಸುವುದು .ಮತ್ತೆ 

ಬಸ್ಸಿಗೆ ಗಂಟೆ ಗಟ್ಟಲೆ ಕಾಯ ಬೇಕು .ಅಲ್ಲಿ ಶಂಕರ ನಾರಾಯಣ ರಾಯರೆಮ್ಬುವರ

ಹೋಟೆಲ್ ಇತ್ತು .ತಂದೆಯವರ ಆಪ್ತರು .ಅಲ್ಲಿಯ ಕಾರದ ಕಡ್ಡಿ ,ಅವಲಕ್ಕಿ ಚಹಾ 

ತಂದೆಯವರಿಗೆ ಬಹಳ ಪ್ರೀತಿ .ನಾವು ಅವರೊಂದಿಗೆ ಇದ್ದರೆ ನಮಗೂ ತಿನಿಸುವರು .

     ತಮ್ಮ ಅರೋಗ್ಯ ಕೈಕೊಡುವ ವರೆಗೂ  ಕೃಷಿ ಯನ್ನು ಅಚ್ಚು ಕಟ್ಟಾಗಿ 

ನಡೆಸಿದರು .ನಾವೆಲ್ಲಾ ಕಲಿತು ಬೇರೆ ಬೇರೆ ಉದ್ಯೋಗ ಹಿಡಿದು ಹೋದ ಮೇಲೆ 

ಭೂಮಿ ಮಾರಿದೆವು .ತಂದೆಯವರಿಗೆ ನೀರು ಬಿಟ್ಟ ಮೀನಿನಂತೆ ಆಯಿತು .ಅಲ್ಪ 

ಸಮಯದಲ್ಲಿಯೆ ಮೆದುಳಿನ ರಕ್ತ ಸ್ರಾವದಿಂದ ಇಹಲೋಕ ತ್ಯಜಿಸಿದರು .

 ತಂದೆಯವರ ಜ್ಞಾಪಕ ಬರುವಾಗ  ಕರ್ಮಯೋಗಿಯ ಚಿತ್ರಣ ಕಣ್ಣ ಮುಂದೆ 

ಬರುತ್ತದೆ .

ಸಂತೋಷದಿಂದ ಅತಿಯಾಗಿ ಹಿಗ್ಗಿದುದನ್ನೂ ,ದುಃಖ ದಿಂದ ಕುಗ್ಗಿ ದ್ದನ್ನೂ 

ತಂದೆಯವರಲ್ಲಿ ನಾವು ಕಂಡದ್ದಿಲ್ಲ .ಪಶುಪಾಲನೆ ಮತ್ತು ಕೃಷಿ ,ಸಣ್ಣ ಸಣ್ಣ 

ಸಂತೋಷಗಳಲ್ಲಿ ಸಂತೃಪ್ತಿ ಪಟ್ಟವರು.





ಮಂಗಳವಾರ, ಸೆಪ್ಟೆಂಬರ್ 29, 2015

ಆಧುನಿಕ ರೋಬಿನ್ ಹುಡ್ ಕತೆ

ಇತ್ತೀಚಿಗೆ ಮುಂಬೈಗೆ ಒಂದು ಕಾರ್ಯಕ್ರಮ ನಿಮಿತ್ತ ಹೋದವನು ಮರಳುವಾಗ 

 ರಾತ್ರಿ  ಹತ್ತೂವರೆ ರೈಲು ಮೂರು ಗಂಟೆ ವಿಳಂಬ ವಿದ್ದುದರಿಂದ  ಅಸಹನೆಯಿಂದ 

ಕಾಯುತ್ತಿದ್ದೆ .ಸ್ಟೇಷನ್ ಪರಿಸರದಲ್ಲಿ  ಪ್ರಯಾಣಿಕರು ,ನಿರ್ಗತಿಕರು ,ಭಿಕ್ಷುಕರು 

 ಇತ್ಯಾದಿ   ಎಲ್ಲೆಂದರಲ್ಲಿ ಜಾಗ ಮಾಡಿಕೊಂಡು ಮಲಗಿದ್ದರು . ಸುಮಾರು ಒಂದು 

ಗಂಟೆ ಸಮಯ ಒಂದು ವ್ಯಾನ್ ಬಂದು ಸ್ಟೇಷನ್ ಪೂರ್ವ ಭಾಗದಲ್ಲಿ ನಿಂತಿತು ,

ಕೂಡಲೇ ಮಲಗಿದ್ದವರು ಹಲವರು ಎದ್ದು ಕ್ಯೂ ನಿಂತರು .ಕೆಲವರ ಕೈಯ್ಯಲ್ಲಿ ತಟ್ಟೆ .

ಗಲಾಟೆ ಇಲ್ಲ ,ಗೊಂದಲ ಇಲ್ಲ.ಮುಂಬೈ ಇಲ್ಲದಿದ್ದರೂ ಕ್ಯೂ ಗೆ ಹೆಸರಾದ ನಗರ .

 ( ಇಲ್ಲಿಯ ಜನಸಂಖ್ಯೆ ಯೂ ಇದಕ್ಕೆ ಕಾರಣ ಇರಬಹುದು .ಗೊಂದಲದ 

ನಡುವೆಯೂ ಒಂದು ಶಿಸ್ತು ಇಲ್ಲಿಯ ಜೀವನವನ್ನು ಸಹನೀಯವಾಗಿ ಮಾಡಿದೆ .)

   ವ್ಯಾನ್ ನಿಂದ ಇಳಿದ ಯುವಕರು ಎಲ್ಲರಿಗೂ ಆಹಾರ ವಿತರಣೆ ಮಾಡಿ 

ಯಾವುದೇ ಗೌಜಿ ಗದ್ದಲ ಇಲ್ಲದೆ ಮರಳಿದರು .ಉಂಡವರು ಸಂತೃಪ್ತಿಯಿಂದ ನಿದ್ದೆಗೆ 

ಜಾರಿದರು .ಅಷ್ಟರಲ್ಲಿ ನನ್ನ ಟ್ರೈನೂ ಆಗಮಿಸಿತು .ಗಣೇಶ ಹಬ್ಬವಾದ್ದರಿಂದ ರಶ್ 

ಇತ್ತು .ಕಾದಿರಿಸದ ಬೋಗಿ ಗೆ  ಹತ್ತಲು ಜನ ತಾವೇ ಕ್ಯೂ ಹಚ್ಚಿದರು .ಅಲ್ಲೂ ಒಂದು 

ಶಿಸ್ತು .

ಟ್ರೈನ್ ಏರಿದವನಿಗೆ  ಅಲ್ಲಿ ಅನ್ನ ದಾನವ ಮಾಡುತ್ತಿದ್ದವರ ದೃಶ್ಯ 

.ದಾನವರಾಗುತ್ತಿರುವ ಮನುಜರ ನಡುವೆ ಅನ್ನ ದಾನವ ಮಾಡುವ ಮನುಜರಾರು ?

ವಿಚಾರಿಸಿದಾಗ ತಿಳಿಯಿತು .ಇವರೇ ಅಧುನಿಕ ರಾಬಿನ್ ಹುಡ್ ಗಳು .ಆದರೆ  

ಇವರು ಇರುವವರನ್ನು ಲೂಟಿ ಮಾಡಿ ಇಲ್ಲದವರಿಗೆ ಕೊಡುವವರಲ್ಲ .ಇದ್ದವರಿಂದ 

ಮಿಕ್ಕದ್ದನ್ನು ಇಲ್ಲದವರಿಗೆ ಹಂಚುವವರು .ದೆಹಲಿ ನಗರದಲ್ಲಿ ಕೆಲವು ಸಹೃದಯೀ

ಯುವಕರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಹೋಟೆಲ್ ಕಲ್ಯಾಣ ಮಂಟಪಗಳಲ್ಲಿ 

ಮಿಕ್ಕ ಆಹಾರ ಸಂಗ್ರಹಿಸಿ  ನಿಗದಿತ ಜಾಗಗಳಲ್ಲಿ ಅದನ್ನು ಹಂಚುವರು .ಇದರ 

ಮುಂಬೈ ಶಾಖೆಯ ಕಾರ್ಯವನ್ನೇ ನಾನು ಕಂಡದ್ದು .ಆಹಾರ ಅಲ್ಲದೆ ಚಳಿಗಾಲದಲ್ಲಿ 

ಕಂಬಳಿ ಹಂಚುವ ಕೆಲಸವನ್ನೂ ಮಾಡುವರಂತೆ .

ಈ ಸಂಸ್ಥೆಯು ಪಾಕಿಸ್ತಾನದಲ್ಲಿಯೂ ಇದ್ದು ಮೈತ್ರಿ ಮಾಡಿ ಕೊಂಡಿವೆ .








  ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ 

ಕೈಲಾಸ ಬಿನ್ನಾಣವಕ್ಕು ಸರ್ವಜ್ಞ 

ಅವರ ಜಾಲತಾಣ ದಿಂದ ಆರಿಸಿದ ನುಡಿಮುತ್ತುಗಳು
.೧  ಉಪವಾಸದಿಂದ ಸಾಯುವವರ ಸಂಖ್ಯೆ ಕ್ಷಯ ,ಏಡ್ಸ್  ಮತ್ತು ಮಲೇರಿಯಾ 

ಕಾಯಿಲೆಗಳಿಂದ ಒಟ್ಟಾಗಿ ಸಾಯುವವರಿಗಿಂತ ಹೆಚ್ಚು .

೨.ಜಗತ್ತಿನಲ್ಲಿ ತಯಾರಿಸಿದ ಆಹಾರದಲ್ಲ್ಲಿ ಮೂರನೇ ಒಂದು  ಸೇವಿಸಲ್ಪಡುವುದೇ 

ಇಲ್ಲ .

೩.೮೨% ಉಪವಾಸ ವಿರುವವರು ಆಹಾರ ಮಿಗತೆ ಇರುವ ನಾಡಿನಲ್ಲಿಯೇ 

ಇರುವರು 

೪ ಜಗತ್ತಿನಲ್ಲಿ ಹತ್ತು ಸೆಕುಂಡುಗಳಿಗೆ ಒಂದು ಮಗು ಉಪವಾಸದಿಂದ ಸಾಯುತ್ತಿದೆ .

ಇವರ ಬಗ್ಗೆ ಹೆಚ್ಚು ಮಾಹಿತಿಗೆ robinhoodarmy.com ಗೆ ಲಾಗ್ ಮಾಡಿರಿ 
         

 ಇಂತಹ ರಾಬಿನ್ ಹುಡ್ ಗಳ ಸಂತತಿ ಸಾವಿರವಾಗಲಿ .

(ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)

ಸೋಮವಾರ, ಸೆಪ್ಟೆಂಬರ್ 21, 2015

ಅಮೇರಿಕಾ ಯಾತ್ರೆ ೮

ಸಿಯಾಟಲ್ ಸಂದರ್ಶನ ಮುಗಿಸಿ ಚಿಕಾಗೊದತ್ತ  ದಾರಿ ಬೆಳೆಸಿದೆವು .ವಿಮಾನ 

ನಿಲ್ದಾಣ ದಲ್ಲಿ ಸೆಕ್ಯೂರಿಟಿ ಯವರು  ಶ್ರೀಮತಿಯವರ ಉಡುಗೆಯಲ್ಲಿದ್ದ ಅಲಂಕಾರಿಕ 

ಜರಿಗಳು ಸ್ಕ್ಯಾನ್ ನಲ್ಲಿ  ಕಂಡುದರಿಂದ ವಿವರವಾದ ಪರಿಶೀಲನೆಗೆ ಒಳ ಪಡಿಸಿ 

ಯಾವುದೇ ಸ್ಪೋಟಕ ಇಲ್ಲ ಎಂದು ಖಾತರಿಸಿ ಒಳ ಗಡೆ ಬಿಟ್ಟರು .ನನಗೇನೋ 

ಸಂದೇಹ ,ಆಗಾಗ್ಗೆ ನನ್ನ ಮೇಲೆ ಅವರ ಸಿಟ್ಟು ಸ್ಪೋಟವಾಗುವುದು ಇದೆ .

    ಚಿಕಾಗೊ ನಿಲ್ದಾಣದಲ್ಲಿ ಇಳಿಯುವಾಗ ಸಂಜೆ ಆರು ಗಂಟೆ .ಇಲ್ಲಿನ ಬಹುತೇಕ 

ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಿವೆ .ನಮ್ಮನ್ನು 

ಕರೆದೊಯ್ಯಲು ಬಂಧು ಮುರಲೀಧರ ಕಜೆ ಕಾರ್ ಸಮೇತ  ಬಂದಿದ್ದರು .ಅವರ 

ಕಾರಿನ ನಂಬರ್ ಪ್ಲೇಟ್ನಲ್ಲೂ KAJE ಇದೆ .

  ನಗರಗಳ ಮುಖ್ಯ ಭಾಗಕ್ಕೆ ಡೌನ್ ಟೌನ್ ಎನ್ನುತ್ತಾರೆ .ಮುರಳಿಯವರ ಆಫೀಸ್ 

ಇಲ್ಲಿದೆ .ಮನೆ ಹೊರ ವಲಯದಲ್ಲಿ ಇದೆ .ಅವರು ಬ್ಯಾಂಕ್ ನಲ್ಲಿ ತಾಂತ್ರಿಕ ಅಧಿಕಾರಿ .

ಮುರಳಿ ಯವರು ತಮ್ಮ ಪದವಿ ಅಧ್ಯಯನ ಹೊರತು ಪಡಿಸಿ ಎಲ್ಲಾ ವಿದ್ಯಾಭ್ಯಾಸ

ಸತ್ಯ ಸಾಯಿ ಸಂಸ್ಥೆಗಳಲ್ಲಿ ಮಾಡಿದವರು ,ಅದರ ಛಾಪು ಅವರಲ್ಲಿ ಇದೆ .ವಿನಯ .

ಸಂಸ್ಕೃತಿ ಪ್ರೇಮ ಮತ್ತು ಅತಿಥ್ಯದಲಿ ಆನಂದ ಕಾಣುವ ಗುಣ  ಎದ್ದು ಕಾಣುವುದು .

ಚಿಕಾಗೊ ನಗರದ ಕನ್ನಡ ಕೂಟ ,ಸತ್ಯ ಸಾಯಿ ವೃಂದ ಗಳಲ್ಲಿ ಅವರು ಕ್ರಿಯಾಶೀಲ

ರಾಗಿ ಮುಂಚೂಣಿಯಲ್ಲಿದ್ದಾರೆ .

ಅವರ ಪತ್ನಿ ಸಹನಾ .ಹೆಸರಿಗೆ ತಕ್ಕಂತೆ ಸಹನಾ ಶೀಲೆ .ದಂತ ವೈದ್ಯೆಯಾದ 

ಇವರು ಕುಟುಂಬಕ್ಕೆ ಸಮುಯ ಮೀಸಲಿಡುವುದಕ್ಕಾಗಿ ಎಳೆಯ ಮಕ್ಕಳ ಶಾಲೆಯಲ್ಲಿ 

ಅಧ್ಯಾಪನ ಮಾಡುತ್ತಿದ್ದಾರೆ ,ಮಕ್ಕಳಾದ ಸಖ್ಯಂ ಮತ್ತು ಸೋಹಂ ಅವರಲ್ಲಿ 

ನಮ್ಮ ಸಂಸ್ಕೃತಿಯ ಪ್ರಭಾವ ಉಳಿಯುವಂತೆ ಪ್ರಯತ್ನ ಮಾಡುತ್ತಿದ್ದಾರೆ .

   ಅವರ ಮನೆಯ ನೆಲ ಮಾಳಿಗೆಯಲ್ಲಿ ಧ್ವನಿ ವರ್ಧಕ ಮತ್ತು ಸಂಗೀತ ಸಾಧನ 

ಗಳು ಇದ್ದು ಭಜನೆ ಇತ್ಯಾದಿ ನಡೆಯುತ್ತಿರುತ್ತವೆ .




                   ಮುರಳಿ  ಕುಟುಂಬದೊಡನೆ ನಾವು 

   ರಾತ್ರಿ ಕಳೆದು ಮರುದಿನ  ಚಿಕಾಗೋ ನಗರ ವೀಕ್ಷಣೆಗೆ ಹೊರಟೆವು ,ಕಾರು 
ಅವರದು .ಚಾಲಕ ನಮ್ಮ ಮಗ .ಮೊದಲು ಇಲ್ಲಿಯ ಪ್ರಸಿದ್ಧ  ಮತ್ಸ್ಯಾಗಾರ 

ಶೆಡ್ ಅಕ್ವೇರಿಯಂ ಗೆ ಹೋದೆವು .ರಜಾದಿನ ಆದ್ದರಿಂದ ಜನ ಸಂದಣಿ ಇತ್ತು .

,ಮೊದಲೇ ಟಿಕೆಟ್ ಕೊಂಡಿದ್ದರಿಂದ ಒಳ ಹೋದೆವು .ಮೊದಲು ಇಲ್ಲಿ ಜಲಚರಗಳ 

ಬಗ್ಗೆ 4 D ಚಿತ್ರ ಪ್ರದರ್ಶನ ನೋಡಿದೆವು .ಒಳ್ಳೆಯ ಅನುಭವ .

 ಆ ಮೇಲೆ  ಅಕ್ವಾಟಿಕ್ ಶೋ ಇದೆ ,ಇಲ್ಲಿ ತರಬೇತಿ ಹೊಂದಿದ ಬಿಳಿ ತಿಮಿಂಗಿಲ ಗಳ 

ಆಟ ಪ್ರದರ್ಶಿಸುತ್ತಾರೆ.

  




ಪೆಂಗ್ವಿನ್ ಮತ್ತು ನಾಯಿ ಮರಿಗಳ  ಆಟ ಕೂಡ ತೋರಿಸುವರು .

ಬೇರೆ ಬೇರೆ ಜಲಚರಗಳ (ಕಪ್ಪ್ಪೆ  ಮೀನು )ಪ್ರದರ್ಶನ ಕಾಣಲು ಚೆನ್ನ .

  ಮಿಷಿಗನ್ ಸರೋವರ ಚಿಕಾಗೋದ ದೊಡ್ಡ ಆಕರ್ಷಣೆ ಮತ್ತು ನಗರದ ಜಲ

ಪೂರೈಕೆಯ ತಾಣ .




ಚಿಕಾಗೊ ನಗರದ ಮೂಲಕ ಹರಿಯುವ ಚಿಕಾಗೊ ನದಿ ಗೂ ಈ ಸರೋವರಕ್ಕೂ 

ಸಂಪರ್ಕ ಇದ್ದರೂ ನದಿ ನೀರು ಇದಕ್ಕೆ ಸೇರದಂತೆ  ತಾಂತ್ರಿಕ ವ್ಯವಸ್ಥೆ ಮಾಡಿದ್ದಾರೆ.

     ಮದ್ಯಾಹ್ನ ಮನೆಯಿಂದ ತಂದಿದ್ದ  ಚಿತ್ರಾನ್ನ ,ಪುಳಿಯೋಗರೆ ತಿಂದು 

ನಗರದ  ಪ್ರಸಿದ್ಧ  ಅರ್ಕಿಟೆಕ್ಚರಲ್  ದೋಣಿ ಯಾತ್ರೆಗೆ ಹೋದೆವು .ಚಿಕಾಗೋ 

ಮುಖ್ಯ ನಗರದ ಗಗನ ಚುಂಬಿ ಗಳಲೆಲ್ಲ  ಚಿಕಾಗೊ ನದಿ ದಂಡೆಯಲ್ಲಿ ಇವೆ.

ಇವುಗಳಲ್ಲಿ ಒಂದೊಂದಕ್ಕೂ ತನ್ನದೇ ಅದ ಇತಿಹಾಸ ಇದೆ .ಯಾಂತ್ರಿಕ 

ದೋಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಾ ಕರೆದು ಒಯ್ಯುತ್ತಾರೆ .

               



ಕೆಳಗೆ  ಕಾಣುವ ಟ್ರಂಪ್ ಟವರ್ ನೋಡಿರಿ ,ಇದು  ಅಮೇರಿಕಾ ಅಧ್ಯಕ್ಷ 

ಸ್ಥಾನಕ್ಕೆ  ಪೈಪೋಟಿ ನಡೆಸುತ್ತಿರುವ  ಡೊನಾಲ್ಡ್ ಟ್ರಂಪ್  ಮಾಲಕತ್ವದ ಗಗನ 

ಚುಂಬಿ .

  
ಇಲ್ಲಿ ನದಿ ಸುತ್ತ  ಕಟ್ಟಡಗಳನ್ನು ಕಟ್ಟುವಾಗ  ಪಾದಚಾರಿಗಳಿಗೆ ಮತ್ತು  ಸೈಕಲ್ 

ಸವಾರರಿಗೆ ಎಂದು  ಜಾಗ ಬಿಡಬೇಕೆಂಬ ಕಾನೂನು ತಂದಿರುವರು .

ನದಿ ತೀರದಲ್ಲಿ ಹಾದು ಹೋಗುವ  ಮೆಟ್ರೋ ರೈಲು ಹಳಿಗಳು ಮತ್ತು ಸ್ಟೇಷನ್ 

ಗಳು  ಈ ಕಟ್ಟಡಗಳ ಕೆಳಗೆ ಇವೆ.

ಚಿಕಾಗೋದ ಅತಿ ಎತ್ತರದ ಕಟ್ಟಡ ಸಿಯರ್ರ್ಸ್ ಅಥವಾ ವಿಲ್ಲಿಸ್  ಟವರ್ 

ಈ ನದೀ ಗುಂಟವೇ ಇದೆ .ಇದರ ನಿರ್ಮಾಣದಲ್ಲಿ ಬಾಂಗ್ಲಾದೇಶ 

ಸಂಜಾತ ಇಂಜಿನಿಯರ್  ಫಜಲೂರ್ ರಹಮಾನ್ ಖಾನ್ ಅವರ ಮುಖ್ಯ ಭೂಮಿಖೆ

ಇತ್ತು .


ವಿಲ್ಲಿಸ್ ಟವರ್ .

ನದೀ ಯಾತ್ರೆ ಮುಗಿಸಿ ನಾವು ಗ್ರಾಂಟ್ ಪಾರ್ಕ್ ನತ್ತ ತೆರಳಿದೆವು .

ಶಾಲೆಗಳಿಗೆ ರಜಾದಿನಗಳು ಮತ್ತು ಶನಿವಾರ ಆದುದರಿಂದ ನಗರದಲ್ಲಿ 

ಜನಸಂದಣಿ ಇತ್ತು .

ಇಲ್ಲಿ ಬಕಿಂಗ್ ಹ್ಯಾಮ್ ಕಾರಂಜಿ ಇದೆ .
   
ಅದರ ಸನಿಹದಲ್ಲಿಯೇ ಕ್ಲೌಡ್ ಗೇಟ್ ಇದೆ .ಇದರ ರಚನೆಯಲ್ಲಿ  ಭಾರತ ಸಂಜಾತ 

ಆಶಿಶ್ ಕಪೂರ್ ಅವರ ಪಾತ್ರ ಮುಖ್ಯ ಎಂಬುದು ವಿಶೇಷ ,ಇಲ್ಲಿ  ಉಕ್ಕಿನ 

ಹಾಳೆಗಳಿಂದ ನಿರ್ಮಿಸಿದ ಚಿಕಾಗೊ ಬೀನ್ ಇದೆ .ಇದರಲ್ಲಿ ಯಾತ್ರಿಕರ ಪ್ರತಿಬಿಂಬ 

ನೋಡಲು ಚಂದ .




ನನ್ನ ಮಗನಿಗೆ ಅಲ್ಪ ಸಮಯದಲ್ಲಿ ಹೆಚ್ಚು ಹೆಚ್ಚು ಸ್ಥಳಗಳ ಪರಿಚಯ ಮಾಡಿಸುವ 

ಆಶೆ ಮತ್ತು ಹುಮ್ಮನಸು ,ಆದರೆ ನಮ್ಮ ಗಾಡಿ ಅದಕ್ಕೆ ಸರಿಯಾಗಿ ಒಡ ಬೇಕಲ್ಲ .


ಪಾರ್ಕಿಂಗ್ ಸಮಸ್ಯೆಯಿಂದಾಗಿ ನಾವು ಒಂದು ಕಡೆ ಇಟ್ಟು ಮತ್ತೆ ಎಲ್ಲಾ ಕಡೆ 

ಪಾದಯಾತ್ರೆ  ತಾನೇ .

  ಸಂಜೆಯಾಗುತ್ತಿದ್ದಂತೆ ವಿಲ್ಲ್ಸ್ ಟವರ್ ಏರಲು ಹೋದೆವು ,೧೦೮ ಮಹಡಿಗಳ 

ಇದು ಅಮೆರಿಕಾದ ಎರಡನೇ ದೊಡ್ಡ ಕಟ್ಟಡ .ಟಿಕೆಟ್ ಪಡೆದು ಮೇಲೆ ಹತ್ತ ಬಹುದು .

ಮೇಲಿನ ಅಂತಸ್ತಿನಲ್ಲಿ  ಇಡೀ ಚಿಕಾಗೊ ನಗರದ ವಿಹಂಗಮ ನೋಟ ನೋಡ 

ಸಿಗುತ್ತದೆ .ಅಲ್ಲದೆ ಗಾಜಿನ ಒಂದು ವಿಸ್ತರಿತ  ಚೇಂಬರ್ ನಲ್ಲಿ ನಿಂತು ಪ್ರಪಾತ 

ವಿಕ್ಷಣೆಗೂ ಅವಕಾಶ ಇದೆ ,ರೋಮಾಂಚಕಾರಿ ಅನುಭವ ,











ಮರಳುವಾಗ ಭಾರತ ಮತ್ತು ಪಾಕಿಸ್ತಾನ ದವರ  ಅಂಗಡಿಗಳು ಹೆಚ್ಚಾಗಿರುವ 

ದೆವೊನ್ ಅವೆನ್ಯೂ ಮೂಲಕ ಹೋದೆವು .ಮುಖ್ಯ ನಗರದಲ್ಲಿ ಕಾಣದ 

ಸೈನ್ ಬೋರ್ಡ್ ಗಳು ,ಫ್ಲೆಕ್ಸ್ ಗಳು ಇಲ್ಲಿ ಕಂಡು ಬಂದುವು ,ಮುಂದೆ ಇಲ್ಲಿಯ 

ಬಹಾಯಿ ಮಂದಿರಕ್ಕೆ ತೆರಳಿ ಅಲ್ಲಿಯ ಚಟುವಟಿಕೆ ವೀಕ್ಷಿಸಿ ದೆವು.
ಬಹಾಯಿ ಮಂದಿರ 

ಮನೆಯಲ್ಲಿ ಸಹನಕ್ಕ ತಯಾರಿಸಿದ ಭೂರಿ ಭೋಜನ ಸೇವಿಸಿ  ಪವಡಿಸಿದೆವು

ಅಮೇರಿಕಾ ಯಾತ್ರೆ ೭

ಸಿಯಾಟಲ್ ನಗರದಲ್ಲಿ ಸ್ಪೇಸ್ ನೀಡಲ್ (ಅಂತರಿಕ್ಷ ಸೂಜಿ )ಎಂಬ ಆಕರ್ಷಕ ಗಗನ 

ಚುಂಬಿ ಇದೆ .ಟಿಕೆಟ್ ಖರೀದಿಸಿ ಇದರ ಮೇಲೆ ಏರಿ ನಗರದ ವೀಕ್ಷಣೆ ಮಾಡ 

ಬಹುದು .


ಈ ಕಟ್ಟಡದ ಪ್ರತಿಬಿಂಬ ಸನಿಯದಲ್ಲಿ ಇರುವ ಗಾಜಿನ ಮನೆಯ ಗೋಲದ ಮೇಲೆ 

ಹೀಗೆ ಕಾಣುವುದು 


ಲಿಫ್ಟ್ ಮೂಲಕ ಈ ವಿಶಿಷ್ಟ ಶೈಲಿಯ ಕಟ್ಟಡ ಏರಿದೆವು ,ಅದರ ಮೇಲಿಂದ 

ಕಂಡ ಸಿಯಾಟಲ್ ನಗರದ ಕೆಲವು ದೃಶ್ಯಗಳು 



ಈ ಕಟ್ಟಡದ ಬಳಿ ಗಾಜಿನ ಕಲಾಕೃತಿಗಳ ಸಂಗ್ರಹಾಲಯ ಇದೆ .ಅದರ 

ಒಳಗೆ ಗಾಜಿನಿಂದ ತಯಾರಿಸಿದ ಮನ ಮೋಹಕ  ಕಲಾಕೃತಿಗಳು ಇವೆ .








ಈ ಕಟ್ಟಡದ ಸನಿಹದಿಂದ  ಡಕ್ ಟೂರ್ ಎಂಬ (ಬಾತುಕೋಳಿ ಯಾತ್ರೆ )

ಮೋಜು ಯಾತ್ರೆ ಏರ್ಪಡಿಸಿದ್ದಾರೆ .ಈ ವಾಹನ  ನೆಲದ ಮೇಲೂ ನೀರಿನಲ್ಲೂ

ಚಲಿಸುವುದು .ಇದರ ಚಾಲಕರು ಊರ ಪರಿಚಯ ಮಾಡಿ ಕೊಡುವುದರೊಂದಿಗೆ 

ಗಟ್ಟಿಯಾಗಿ ಹಾಡುವರು ,ಯಾತ್ರಿಕರು ಚಪ್ಪಾಳೆ ತಟ್ಟಿ ತಮ್ಮ ಹರ್ಷ ವ್ಯಕ್ತ 

ಪಡಿಸುವರು .



ನೀರಿನಲ್ಲಿ  ಈ ಬಾತುಕೋಳಿ ಸಂಚರಿಸುವಾಗ  ಸಮೀಪದಲ್ಲಿ  ದೋಣಿಯಲ್ಲಿ 

ವಿಹರಿಸುವ ಯಾತ್ರಿಗಳು .ದೋಣಿ ಮನೆಗಳು ಕಾಣ ಸಿಗುತ್ತವೆ .

ಇಲ್ಲೇ ಸಮೀಪದಲ್ಲಿ  ನೀರಿನಲ್ಲಿ ಇಳಿಯುವ ವಿಮಾನಗಳು ಬರುತ್ತಿರುತ್ತವೆ .

ಅವುಗಳೂ ನೋಡಲು ರೋಚಕ .




(ಚಿತ್ರಗಳ ಮೂಲಗಳಿಗೆ ಅಭಾರಿ )


ಗುರುವಾರ, ಸೆಪ್ಟೆಂಬರ್ 17, 2015

ಅಮೇರಿಕಾ ಯಾತ್ರೆ ೬ ನಯಾಗರಾ ಸಂದರ್ಶನ

ಚಿಕಾಗೋ ನಗರದಲ್ಲಿ ಮುರಳೀಧರ ಕಜೆ ದಂಪತಿಗಳ ಅತಿಥ್ಯ ಸವಿದು ಸಂಜೆ 

ವಿಮಾನದಲ್ಲಿ ಬಫೆಲೋ ನಗರ ಸೇರಿದಾಗ ಮೋಡ ಕವಿದ ವಾತಾವರಣ ,ತುಂತರು 

ಮಳೆ . ನಿಲ್ದಾಣದಿಂದ ಬಾಡಿಗೆ ಕಾರು ತೆಗೆದು ಕೊಂಡು ಮಗನೇ ಚಾಲಕನಾಗಿ 

ನಯಗರಾದತ್ತ ತೆರಳಿದೆವು .ಬಫೆಲೋ ದಿಂದ ನಯಾಗರಾ ಕ್ಕೆ ೨೫ ಮೈಲುಗಳು .


ಸಂಜೆ ಆರೂವರೆ ಗಂಟೆಗೆ ನಯಾಗರಾ ತಲುಪಿದಾಗ ಮಳೆ ಜೋರಾಗ ತೊಡಗಿತು .


ನಮ್ಮ ಊರಿನವರೇ ಆದ ಡಾ ಶಂಭು ಉಪಾಧ್ಯಾಯ ರು  ಬಫೆಲೋ 

ವಿಶ್ವವಿದ್ಯಾಲಯದಲ್ಲಿ  ಕಂಪ್ಯೂಟರ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು  ನಾವು 

ಬರುವ ವಿಚಾರ ಮೊದಲೇ ತಿಳಿಸಿದ್ದೆವು .ಶ್ರೀಯುತರು  ಮಾಧ್ಯಮಿಕ ಶಾಲೆಯಲ್ಲಿ 

ನನಗಿಂತ ಒಂದು ವರ್ಷ ಹಿರಿಯರು .ಆಗಲೇ ಅವರು ಜಾಣರೆಂದು ಗುರುತಿಸಿ 

ಕೊಂಡವರು.ಬಾಲಕನಾಗಿದ್ದಾಗ  ಕ್ರಿಕೆಟ್ ಮತ್ತು ಕನ್ನಡ ಚಲನಚಿತ್ರ ಗಳನ್ನು 

ಹಚ್ಚಿ ಕೊಂಡಿದ್ದವರು .

ನಾವು ನಯಗರಾದಿಂದ  ಅರ್ಧಕ್ಕೇ ಹಿಂತಿರುಗಿ  ಉಪಾಧ್ಯಾಯರ ಮನೆಗೆ  

ತೆರಳಿದೆವು .ವಿನೋದ ಪ್ರಿಯರಾದ (ಶಂಭು ಉಪಾಧ್ಯಾಯರ ಪತ್ನಿ 

ಹೆಸರು ವಿನೋದ ,ಹೆಸರಿಗೆ ತಕ್ಕಂತೆ ಮತ್ತು  ಸದಾ ಹಸನ್ಮುಖಿ ) ಉಪಾಧ್ಯಾಯರು 

ಮತ್ತು ನಾನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟೆವು .

   ಭರ್ಜರಿ ಭೋಜನ ವಾಯಿತು .ಸಂತ್ರುಪ್ತಿಯೊಡನೆ  ಮರಳಿ ನಯಾಗರ ದತ್ತ 

ತೆರಳಿದೆವು .ತುಂತುರು ಮಳೆ ಇತ್ತು .

    ನಯಾಗರಾ ಜಲಪಾತ ಅಮೇರಿಕಾ ಕೆನಡಾ ಗಡಿಯಲ್ಲಿದ್ದು  ಕೆನಡಾ ಭಾಗದಿಂದ 

ನೋಡಲು ಚಂದ .ಅದಕ್ಕೆಂದೇ ನಾವು ಕೆನಡಾ ವಿಸಾ ಮಾಡಿಸಿ ಕೊಂಡಿದ್ದೆವು ,

ರೈನ್ ಬೋ ಸೇತುವೆ  ಎರಡು ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆ .

                   


ನಾವು ವಲಸೆ ಅಧಿಕಾರಿಗಳ ಪರಿಶೀಲನೆ ಬಳಿಕ ಕೆನಡಾ ಪ್ರವೇಶಿಸಿ 

ಜಲಪಾತ ವೀಕ್ಷಣೆ ಗೆ ಹೋದೆವು .ಮಳೆಯಿದ್ದರೂ  ಬಹಳ ಯಾತ್ರಿಕರು ಇದ್ದರು .

ರಾತ್ರಿ ಜಲಪಾತಕ್ಕೆ ಬಣ್ಣದ ಬೆಳಕು ಹಾಯಿಸಿ ವರ್ಣರಂಜಿತವಾಗಿ ಕಾಣುವಂತೆ 

ಮಾಡುತ್ತಾರೆ .





ಮಳೆ ಇಲ್ಲದಿದ್ದರೆ ಇನ್ನೂ ಚೆನ್ನಾಗಿತ್ತೇನೋ ?ಅಂತೂ ರಾತ್ರಿ ಹನ್ನೊಂದಕ್ಕೆ 

ಉಪಾಧ್ಯಾಯರ  ಮನೆಗೆ ಮರಳಿದೆವು .

ಮುಂಜಾನೆ  ಹೊಟ್ಟೆ ತುಂಬಾ ಕಾಫಿ ತಿಂಡಿ ತಿಂದು ನಮ್ಮ ಅತಿಥೇಯರಿಗೆ

ವಂದಿಸಿ ಪುನಃ ನಯಾಗರಾ ದತ್ತ ತೆರಳಿದೆವು .

ಡಾ ಉಪಾಧ್ಯಾಯ ದಂಪತಿಗಳ ಜೊತೆ ಅವರ  ನಿವಾಸ ದ ಮುಂದೆ 

ನಯಾಗರಾ ವೀಕ್ಷಣೆಗೆ  ಮೆಯ್ಡ್ ಆಫ್ ಮಿಸ್ಟ್ (ಅಮೇರಿಕಾ ಬದಿಯಲ್ಲಿ )

ಎಂಬ ಯಾ೦ತ್ರಿಕ ದೋಣಿ ಯಲ್ಲಿ  ಹೋಗುವ ವ್ಯವಸ್ತೆ ಇದೆ .ಅವರೇ ಕೊಡುವ 

ನೀಲ ಬಣ್ಣದ ರೈನ್ ಕೋಟ್ ಧರಿಸಿ ದೋಣಿಯಲ್ಲಿ ನಮ್ಮನ್ನು  ಜಲಪಾತದ 

ಬುಡಕ್ಕೆ ಕೊಂಡೊಯ್ಯುವರು .ಸಮೀಪದಿಂದ ಭೋರ್ಗೆರೆದು ಬಿದ್ದು 

ರಜತ ಹನಿ ಗಳಾಗಿ ನಮ್ಮ ಮೇಲೆ  ಸಿಂಚನ ಮಾಡುವ  ದೃಶ್ಯ ಮತ್ತು 

ಅನುಭವ ರೋಚಕ .




ಕೆನಡಾ ಬದಿಯಿಂದ ಬರುವ ಯಾತ್ರಿಕರು ಕೆಂಪು ರೈನ್ ಕೋಟ್ ಧರಿಸಿರುವರು .


ಮುಂದೆ ಜಲಪಾತದ ಬಳಿಗೆ ಮೆಟ್ಟಲುಗಳ ಮೂಲಕ ಹೋಗುವ  ಕೇವ್ ಆಫ್ ವಿಂಡ್ಸ್ 

ಗೆ ಹೋದೆವು .ಇಲ್ಲಿ ನಮಗೆ ಒಂದು ಜತೆ ವಿಶೇಷ ಚಪ್ಪಲಿ ಮತ್ತು  ಹಳದಿ 

ಬಣ್ಣದ ರೈನ್ ಕೋಟ್ ಕೊಡುವರು ,ಅದನ್ನು ಧರಿಸಿ ಮಾನವ ನಿರ್ಮಿತ 

ಮೆಟ್ಟಲುಗಳ ಮೂಲಕ ಜಲಪಾತದ ಸನಿಹಕ್ಕೆ ಹೋಗಿ ನೀರ ಸಿಂಚನದ ಆನಂದ 

ಅನುಭವಿಸಿದೆವು .



ಇಷ್ಟೆಲ್ಲಾ ಆಗುವಾಗ ಮಧ್ಯಾಹ್ನ ಗಂಟೆ ಒಂದು ಆಯಿತು .ಪಂಜಾಬಿ ಹೋಟೆಲ್ 

ನಲ್ಲಿ ಭಾರತೀಯ ಬಫೆ ಊಟ ಮಾಡಿ ಪುನಃ ಕೆನಡಾ ಭಾಗಕ್ಕೆ ಹೋದೆವು .

ರಾತ್ರಿ ಕಂಡುದ್ದಕ್ಕಿಂತ ದೊಡ್ಡದಾಗಿ ಕಾಣುತ್ತಿದ್ದ ಜಲಪಾತ ದ ಬೇರೆ ಬೇರೆ 

ನೋಟವನ್ನು ಸವಿದೆವು 











ಕಣ್ಣು ತುಂಬಾ ನಯಾಗರಾ ತುಂಬಿ ಕೊಂಡು ಪುನಃ ಅಮೇರಿಕಾ ಪ್ರವೇಶಿಸಿ 

ನಮ್ಮ ಮುಂದಿನ  ತಾಣವಾದ ವಾಷಿಂಗ್ಟನ್ ಡಿ ಸಿ ಗೆ ವಿಮಾನ ಹಿಡಿಯಲು 

ಬಫೆಲೋ ನಗರದತ್ತ ತೆರಳಿದೆವು