ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 17, 2015

ವಲಸೆ ಚರಿತ್ರೆಯ ಎರಡು ಮುಖ್ಯ ದ್ವೀಪಗಳು

ಕೊಂಡೋಲಿಸಾ ರೈಸ್ ಅವರ ನೋ ಹೈಯರ್ ಹಾನರ್ ಪುಸ್ತಕ ಓದುತ್ತಿದ್ದೇನೆ .

ಜಗತ್ತಿನ ಪ್ರಮುಖ ಘಟನಾವಳಿಗಳಿಗೆ ಸಮೀಪದಿಂದ ಸಾಕ್ಷಿಯಾದವರು .ಜಾರ್ಜ್ 

ಬುಶ್ ಅವರ ಸಚಿವರಾಗಿದ್ದವರು .

ಬುಶ್ ಅವರ ಜೊತೆ ಆಫ್ರಿಕಾ ಪ್ರವಾಸ ದ ಅನುಭವ ಬಗ್ಗೆ ಬರೆಯುವಾಗ ತಮ್ಮ 

ಪ್ರಯಾಣವನ್ನು ಸೆನೆಗಲ್ ದೇಶದ ಮೂಲಕ ಆರಂಬಿಸಿದೆವು .ಅಲ್ಲಿ  ಗೋರೀ ದ್ವೀಪ 

ವಂಬುದಿದೆ.ಈ ದ್ವೀಪದ ಮೂಲಕ ಸಾವಿರಾರು ನೀಗ್ರೋ ಗುಲಾಮರನ್ನು 

ಅಮೇರಿಕಾ ದೇಶಕ್ಕೆ ಸಾಗಿಸಲಾಗುತ್ತಿತ್ತು .ರೈಸ್ ಅವರು ಈ ದ್ವೀಪದಲ್ಲಿ 

ನಡೆದಾಡುವಾಗ ಡಾ೦ಟೆ ಕವಿಯ 'ಎಲ್ಲಾ ಆಸೆ ಪ್ರತೀಕ್ಷೆಗಳಿಗೆ ಎಳ್ಳು ನೀರು ಬಿಟ್ಟು 

ಒಳಗೆ ಬಾ ಯಾತ್ರಿಕನೆ "ನೆನಪಾಯಿತು ಮತ್ತು ಇಲ್ಲಿಯ ಮುಖಾಂತರ ತನ್ನ 

ವಂಶಜರೂ ಸಾಗಿಸಲ್ಪಟ್ಟಿರ ಬಹುದೇ ಎಂಬ ಶಂಕೆಯೂ ಮೂಡಿತು ಎಂದು 

ಬರೆದಿದ್ದಾರೆ. ಇದೇ ಸಂದರ್ಭ ಅಧ್ಯಕ್ಷ ಬುಶ್ ತನ್ನ ಭಾಷಣದಲ್ಲಿ 'ಆಫ್ರಿಕಾದಿಂದ 

ಕಡಿಯಲ್ಪಟ್ಟ ಮಗ ಮತ್ತು ಮಗಳನ್ದಿರು ಅಮೆರಿಕಾದ ಆತ್ಮಸಾಕ್ಷಿಯನ್ನು 

ಬಡಿದೆಬ್ಬಿಸಿದರು.ಎಂದು ಹೇಳಿದರು ಎಂದಿದ್ದಾರೆ .

ಈ ದ್ವೀಪದಲ್ಲಿ ೧೭೮೦-೮೪ ರಲ್ಲಿ  ಕಟ್ಟಲ್ಪಟ್ಟ ಹೌಸ್ ಆಫ್ ಸ್ಲೇವ್ಸ್(ಗುಲಾಮ ಸದನ )
ಎಂಬ ಕಟ್ಟಡ ಇದೆ .ಇದರಲ್ಲಿ  ಹೊರಕಳಿಸಲು ಗುಲಾಮರನ್ನು ಕೂಡಿ ಹಾಕುತ್ತಿದ್ದರು .

ಈಗ ಈ ಕಟ್ಟಡ ಸ್ಮಾರಕವಾಗಿದೆ .





ಇದೇ ಪುಸ್ತಕದಲ್ಲಿ  ಲೈಬೇರಿಯಾ ದೇಶದ ಬಗ್ಗೆಯೂ ಒಂದು ಮಾಹಿತಿ ಸಿಕ್ಕಿದೆ .ಈ 

ದೇಶವು  ಅಮೇರಿಕಾ ಮತ್ತು ಕೆರಿಬ್ಬಿಯನ್ ದ್ವೀಪಗಳಿಂದ(ಅಮೇರಿಕಾ returnd)

ಮರಳಿದ ಆಫ್ರಿಕನರು ನಿರ್ಮಿಸಿದ ನಾಡು .ಇಲ್ಲಿಯ ಸಂವಿಧಾನ ಅಮೆರಿಕಾದ 

ಸಂವಿಧಾನವನ್ನು ಹೋಲುತ್ತದೆ .ಇಲ್ಲಿಯ ಪ್ರಮುಖ ನಗರಗಳಾದ  ಮೊನ್ರೋವಿಯಾ

ಮತ್ತು ವಾಷಿಂಗ್ಟನ್  ಅಮೆರಿಕಾದ ಮಾಜಿ ಅಧ್ಯಕ್ಷರಿಂದ ತಮ್ಮ ಹೆಸರು ಪಡೆದಿವೆ .

  

ಅದೇನೇ ಇರಲಿ .ಅಮೆರಿಕಾದ ನ್ಯೂ ಯಾರ್ಕ್ ಬಳಿ  ಇನ್ನೊಂದು ಚಾರಿತ್ರಿಕ ದ್ವೀಪ 

ಸ್ಮಾರಕ ಇದೆ .ಇತ್ತೀಚೆಗೆ ಅಮೇರಿಕಾ ಪ್ರವಾಸದ ವೇಳೆ  ಎಲ್ಲಿಸ್ ದ್ವೀಪ ಎಂದು 

ಪ್ರಸಿದ್ದಿ ಯಾಗಿರುವ ಇದನ್ನು ಸಂದರ್ಶಿಸುವ ಅವಕಾಶ ಸಿಕ್ಕಿತು .ನ್ಯೂ ಜೆರ್ಸಿ 

ಯಿಂದ  ಪ್ರವಾಸಿ ದೋಣಿ ಮೂಲಕ ಈ ದ್ವೀಪಕ್ಕೆ ಬಂದೆವು ,ದಾರಿಯಲ್ಲಿ ಸ್ವಾತಂತ್ರ್ಯ 

ದೇವತೆಯ ಮೂರ್ತಿ ಹೊತ್ತ ಇನ್ನೊಂದು ಸಣ್ಣ ದ್ವೀಪವೂ ಇದೆ .

೧೮೯೨ರಲ್ಲಿ ಎಲ್ಲಿಸ್ ದ್ವೀಪದಲ್ಲಿ ವಲಸೆಗಾರರ ಪರಿಶೀಲನಾ ಕೇಂದ್ರ 

ಆರಂಭವಾಯಿತು .ಯುರೋಪ್ ಮತ್ತು ಏಶಿಯಾದ  ಕ್ಷಾಮ ,ಕೆಟ್ಟ 

ಆಢಳಿತೆ,ನಿರೋದ್ಯೋಗ ಗಳಿಂದ  ಬಸವಳಿದು ಕನಸಿನ ನಾಡು ಅಮೆರಿಕಾಕ್ಕೆ 

ಹಡಗುಗಳ ಮೂಲಕ ಬಂದ ಹೆಂಗಸರು ,ಮಕ್ಕಳು ಮತ್ತು ಹಿರಿಯರು 

ಇಳಿಸಲ್ಪಡುತ್ತಿದ್ದ ದ್ವೀಪ .ಇಲ್ಲಿ ಬಂದವರಿಗೆ  ಕಣ್ಣಿನ ಕಾಯಿಲೆ ಟ್ರಕೋಮ ,ಕ್ಷಯ 

ಮಾನಸಿಕ ಕಾಯಿಲೆ ಇದೆಯೋ ಎಂದು ವೈದ್ಯರು ಪರಿಶೀಲಿಸಿದ ಬಳಿಕ ಅರೋಗ್ಯ 

ವಂತರನ್ನು ಮಾತ್ರ ಅಮೆರಿಕಾದ ಒಳಗೆ ಬಿಡುತ್ತಿದ್ದರು .ಕೆಲಸ ಮಾಡಲು ಆರೋಗ್ಯ 

ವಂತರು ಮಾತ್ರ ಆ ದೇಶಕ್ಕೆ ಬೇಕು.ಉಳಿದವರು ಬಂದ ದಾರಿಗೆ ಸುಂಕ ಕೊಟ್ಟು 

ವಾಪಸ್ಸು ಹೋಗಬೇಕು . ಎಷ್ಟೋ ಕುಟುಂಬಗಳು ತಮ್ಮ ಸದಸ್ಯರನ್ನು  ಖಾಯಂ 

ಆಗಿ ಕಳೆದು ಕೊಂಡುವು.ಈ ಜನರು ಪಟ್ಟ ಪಾಡುಗಳ ಬಗ್ಗೆ  ಎಲ್ಲಿಸ್ ದ್ವೀಪದ 

ಸ್ಮಾರಕದಲ್ಲಿ ಚಿತ್ರಣ ಇದೆ .ಈ ಬಗ್ಗೆ ಯಾತ್ರಿಕರಿಗೆ  ಇಲ್ಲಿ  ಸಾಕ್ಷ್ಯ ಚಿತ್ರ ತೋರಿಸುವ 

ವ್ಯವಸ್ಥೆ ಇದ್ದು ನಾವು ಅದನ್ನು ನೋಡಿದೆವು .

   


                                     ಎಲ್ಲಿಸ್ ದ್ವೀಪ 
               


     
                        ಎಲ್ಲಿಸ್ ದ್ವೀಪ ಸನಿಹ ನ್ಯೂ ಯಾರ್ಕ್ ಗಗನ ಚುಂಬಿಗಳು

      


                        ಸ್ವಾತಂತ್ರ್ಯ  ದೇವತೆಯ ಮೂರ್ತಿ

                   




ವಲಸೆಗಾರರ ಚಾರಿತ್ರಿಕ ಚಿತ್ರಗಳು 





ಗೋರೀ ದ್ವೀಪವು ಕನಸು  ಆಶೆಗಳ ಗೋರಿ ಮಾಡಿ ಶರೀರಗಳನ್ನು ಕಳುಹಿಸಿದ 

ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾದರೆ  ಎಲ್ಲಿಸ್ ದ್ವೀಪವು  ಹೊಸ ಆಸೆ 

ಕನಸುಗಳನ್ನು ಹುಟ್ಟು ಹಾಕಿದ ತಾಣ .ಎರಡೂ  ಅಮೇರಿಕಾ ನಾಡಿಗೆ 

ಕಾರ್ಮಿಕರನ್ನು ಒದಗಿಸುವುದಕ್ಕಾಗಿ  ,ಮಾರ್ಗಗಳು ಬೇರೆ ಅಷ್ಟೇ 

(ಚಿತ್ರಗಳ ಮೂಲಕ್ಕೆ ಅಭಾರಿ )

ಮಂಗಳವಾರ, ಸೆಪ್ಟೆಂಬರ್ 15, 2015

ನನ್ನ ತಂದೆಯಿಂದ ಬಂದ ಕನಸುಗಳು ಒಬಾಮಾ


ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೀವನ ಚರಿತ್ರೆ ಎನ್ನ ಬಹುದಾದ 

ಡ್ರೀಮ್ಸ್ ಫ್ರಮ್ ಮೈ ಫಾದರ್ ಪುಸ್ತಕ ಓದಿ ಮುಗಿಸಿದ್ದೇನೆ .ಇದರಲ್ಲಿ ಬಾಲ್ಯ .

ಚಿಕಾಗೊ ವೃತ್ತಿ ಜೀವನ ಮತ್ತು ಕಿನ್ಯಾ ಯಾತ್ರೆ ಎಂದು ಮೂರು ಮುಖ್ಯ 
ಕಾಂಡಗಳಿವೆ .

ಒಬಾಮಾ ಹುಟ್ಟಿದ್ದು ಹವಾಯಿ ದ್ವೀಪದ ಹೊನೊಲುಲು ನಗರದಲ್ಲಿ .ಅವರ ತಾಯಿ 

ಸ್ಟಾನ್ಲಿ ಅನ್ ಡನ್ಹ್ಯಾಮ್ ,ಈಕೆ ಬಿಳಿಯವಳಾಗಿದ್ದು ಐರಿಶ್ ಮೂಲದವಳು .ತಂದೆ 

ಕೆನ್ಯಾದ ಲುವೋ ಬುಡಗಟ್ಟು ಮೂಲದ  ಬರಾಕ್ ಹುಸ್ಸ್ಸೈನ್ ಒಬಾಮಾ.ಇವರಿಗೆ

 ಕಿನ್ಯಾದಲ್ಲಿ ಓರ್ವ ಪತ್ನಿ ಮತ್ತು ಮಕ್ಕಳು ಇದ್ದರೂ ,ಹವಾಯಿ 

ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ರಷ್ಯನ್ ಭಾಷಾ ತರಗತಿಯಲ್ಲಿ ಪರಿಚಯವಾದ 

ಆನ್ ಳನ್ನು  ಪ್ರೀತಿಸಿ ಹಿರಿಯರ ವಿರೋಧದ ನಡುವೆಯೂ ಮದುವೆ ಆಗುತ್ತಾರೆ .

ಒಬಾಮ ಜನನದ ಬಳಿಕ ವಿವಾಹ ಮುರಿದು ಬೀಳುತ್ತದೆ .ಅವರ ತಾಯಿ ಲೋ ಲೋ 

ಎಂಬ ಇಂಡೋನೇಷ್ಯನ್ ಪ್ರಜೆಯನ್ನು ವಿವಾಹವಾಗಿ ಬಾಲಕ ಒಬಾಮನೊಂದಿಗೆ 

ಜಕರ್ತಾಗೆ ತೆರಳುತ್ತಾಳೆ .ಮಲ ತಂದೆ ಒಬಾಮಾ ರನ್ನು ಚೆನ್ನಾಗಿ ನೋಡಿ 

ಕೊಳ್ಳುತ್ತಾರೆ .ಬಡತನ ,ಬಹು ಧರ್ಮೀಯ ,ಬಹು ಜನಾಂಗಿಯ ಸಂಸ್ಕೃತಿ ಯ

ಸಮೀಪ ಪರಿಚಯ ಒಬಾಮಾ ಪಡೆದು ಕೊಳ್ಳುತ್ತಾರೆ .

  ಮುಂದೆ ಅಮೇರಿಕಾ ಗೆ ಮರಳಿ  ತಾಯಿಯ ತಂದೆ ತಾಯಿ ,ಅಜ್ಜ ಅಜ್ಜಿಯರ 

ಆಶ್ರಯದಲ್ಲಿ ಅಧ್ಯಯನ ಮುಂದುವರಿಸುತ್ತಾರೆ .ಅವರೂ ಅಷ್ಟೇನೂ ಅನುಕೂಲ 

ವಂತರಲ್ಲದಿದ್ದರೂ ಮೊಮ್ಮಗನಿಗೆ ಯಾವುದೇ ಕೊರತೆ ಬರದಂತೆ ನೋಡಿ 

ಕೊಳ್ಳುತ್ತಾರೆ .ಬೆಳೆಯುವ ಹುಡುಗನಿಗೆ  ವರ್ಣ ಭೇದ ನೀತಿಯ ಭೀಕರತೆ 

ಕಣ್ಣಿಗೆ ರಾಚುತ್ತದೆ .ಕೆಲವು ಕಪ್ಪು ವರ್ಣೀಯರು ತಮ್ಮನ್ನು ಬಿಳಿ ಮಾಡಿಕೊಳ್ಳಲು 

ರಾಸಾಯನಿಕಗಳನ್ನ್ನು ಬಳಸಿ ರೋಗಿಗಳಾದುದನ್ನು ಬರೆಯುತ್ತಾರೆ ,

  ಮನಸಿನ ತುಮುಲಗಳಿಂದ ವಿಮುಖರಾಗಲು ತಾವು ಮದ್ಯ ಮತ್ತು ಮಾದಕ 

ದ್ರವ್ಯಗಳ ಮೊರೆ ಹೋದುದಾಗಿ ಬರೆಯುತ್ತಾರೆ .

ಮುಂದೆ ಲಾಸ್ ಅಂಜೆಲಿಸ್ನಲ್ಲಿ ಪದವಿ ಪಡೆದು ಸ್ವಲ್ಪ ಕಾಲ ನ್ಯೂ ಯಾರ್ಕ್ ನಗರದಲ್ಲಿ 

ಕೆಲಸ ಮಾಡುತ್ತಾರೆ ,ತಮ್ಮ ಮೊದಲ ದಿನ ಇರಲು ಜಾಗ ಇಲ್ಲದೆ ರಸ್ತೆ ಬದಿಯಲ್ಲಿ 

ಪವಡಿಸಿದ ವಿಚಾರ ಮತ್ತು ಮುಂದೆ ಪಾಕಿಸ್ತಾನಿ ಮಿತ್ರನೊಬ್ಬನ ಮನೆಯಲ್ಲಿ 

ವಾಸಿಸಿದುದ್ದನ್ನು ಹೇಳುತ್ತಾರೆ .

ಸಾಧಾರಣ ಸಂಬಳ ತರುವ ಕೆಲಸಗಳಲ್ಲಿ ಅವರ ಮನಸು ಇರಲಿಲ್ಲ .ಹಾಗೆ 

ಚಡಪಡಿಸುತ್ತಿರುವಾಗ  ಚಿಕಾಗೊ ನಗರದಲ್ಲಿ  ಸಾಮಾಜಿಕ ಸಂಘಟಕನ ಕೆಲಸ 

ಸಿಕ್ಕಿತು .ಅಲ್ಲಿಯ ನಿರ್ಲಕ್ಷಿತರ ಪರವಾಗಿ ಚರ್ಚ್ ಒಕ್ಕೂಟಗಳ ಮೂಲಕ 

ಹೋರಾಡಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದರು .

ಸಂಘಟಕನ ಬಡತನ ಅವನ  ಪ್ರಾಮಾಣಿಕತೆಯ  ಸೂಚಕ ಎಂದು ಬರೆಯುತ್ತಾರೆ .

          ಮುಂದೆ ಅವರ ತಂದೆಯ ಕಾಲಾನಂತರ  ತಮ್ಮ ಆಫ್ರಿಕಾದ ಮೂಲ 

ಹುಡುಕಿ ಕಿನ್ಯಾ ಪ್ರವಾಸಕ್ಕೆ ಹೋಗುತ್ತಾರೆ .ನೈರೋಬಿ ವಿಮಾನ ನಿಲ್ದಾಣದಲ್ಲಿ 

ಒಬಾಮ ಎಂಬ ತಮ್ಮ ಹೆಸರು ಕಂಡು ತಮ್ಮನ್ನು ಗುರುತಿಸಿದುದು ಅವರಿಗೆ 

ಸಂತೋಷ ಮತ್ತು ಆಶ್ಚರ್ಯ .ಅಮೆರಿಕಾದಲ್ಲಿ ತಾವು ಇಷ್ಟು ವರ್ಷ ಇದ್ದರೂ 

ಅಜ್ಞಾತ ,ಇಲ್ಲಿ ತಮ್ಮ ಕುಟುಂಬದ ಹೆಸರು ಎಲ್ಲರಿಗೂ ಪರಿಚಿತ !

ತಂದೆಯ ಮೊದಲ ಪತ್ನಿ ಯ ಮಗಳು ಅವುಂ ಒಬಾಮ ಅವರನ್ನು ಅತ್ತೆಯರು 


ಚಿಕ್ಕಮ್ಮ೦ದಿರು .ಅವರ ಮಕ್ಕಳು  ಎಲ್ಲರ ಮನೆಗೂ ಕೊಂಡೊಯ್ಯುತ್ತಾರೆ .ಎಲ್ಲರೂ 

ತಮ್ಮವನೆಂದು ಸಂಭ್ರಮಿಸುತ್ತಾರೆ  .ಈ ಪಯಣದಲ್ಲಿ  ಬಸ್ಸಿನಲ್ಲಿ ನಿಂತು 

ಸಂಚರಿಸಿದುದು ,ನೆಲದ ಮೇಲೆ ಚಾಪೆ ಹಾಸಿ ಮಲಗಿದ್ದುದು ಎಲ್ಲಾ ಅನುಭವ .

ಅವರ ತಂದೆ ಅಮೆರಿಕದಿಂದ  ಹಾರ್ವರ್ಡ ನಲ್ಲಿ  ಇರುವಾಗ ರುತ್ ಎಂಬ 

ಅಮೆರಿಕನ್ ಮಹಿಳೆಯನ್ನು ವಿವಾಹವಾಗಿ ತರುತ್ತಾರೆ ,ಅವಳಲ್ಲಿ ಎರಡು ಮಕ್ಕಳು .

ಎಣ್ಣೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಕಿನ್ಯಾ  ದೇಶಕ್ಕೆ ಸ್ವಾತಂತ್ರ್ಯ 

ಬಂದಾಗ ಅಧಿಕಾರದ ಹತ್ತಿರ ಬಂದು ಮಂತ್ರಾಲಯದಲ್ಲಿ ದೊಡ್ಡ ಕೆಲಸ ವಾಗುತ್ತದೆ .

ಬಂಧು ಮಿತ್ರರೆಲ್ಲಾ ಅವರ ಸಹಾಯ ಪಡೆಯುತ್ತಾರೆ .ಆದರೆ ಲುವೋ  ಬುಡಕಟ್ಟು 

ವಿಗೆ ಸೇರಿದ ಅವರು ಕಿಕುಯು ಜನಾಂಗದ ಅಧ್ಯಕ್ಷ  ಜೋಮೋ ಕೀನ್ಯಾಟರಿಂದ 

ತುಂಬಾ ಸಂಕಷ್ಟಕ್ಕೆ ಈಡಾಗುವರು.ಪತ್ನಿಯೂ ಅವರನ್ನು ತೊರೆದಾಗ ಕೆಲ ಕಾಲ ಮೊದಲ ಪತ್ನಿಯ ಜೊತೆ ಮತ್ತೆ ಒಳ್ಳೆಯ ಕಾಲ ಬಂದಾಗ ಇನ್ನೊಬ್ಬಳನ್ನು 

ಮದುವೆಯಾಗಿ ಕೊನೆಗೆ ಅವಘಡದಲ್ಲಿ ಸಾಯುವರು .

   ಒಬಾಮಾ ತಾಯಿಗೆ ಎರಡನೇ ಸಂಬಂಧದಲ್ಲಿ ಮಾಯಾ ಎಂಬ ಮಗಳು .

ಹೀಗೆ ತಮ್ಮ ಕುಟುಂಬ ಒಂದು ವಿಶ್ವಸಂಸ್ಥೆಯ೦ತೆ ಎಂದು ಒಬಾಮ ಹೇಳುತ್ತಾರೆ .

  ಮುಂದೆ ಒಬಾಮ ಹಾರ್ವರ್ಡ್ ವಿಶ್ವವಿದ್ಯಾಲಯದಿಂದಲೇ ಕಾನೂನು ಪದವಿ 

ಗಳಿಸಿ , ಮಿಚೆಲ್ ರನ್ನು ವಿವಾಹ ವಾಗಿ ವೃತ್ತಿ ಮತ್ತು ಸಂಸಾರ ಜೀವನ 
ಸಾಗಿಸುತ್ತಾರೆ .

ಒಟ್ಟಿನಲ್ಲಿ ಭಿನ್ನ  ಜೀವನ ಅನುಭವ  ಒಬಾಮಾ ಅವರನ್ನು ಸಾಮಾನ್ಯ ಜನರ ಅಧ್ಯಕ್ಷ 

ರನ್ನಾಗಿ ರೂಪಿಸುವುದಕ್ಕೆ ಕಾರಣ ವಾಗಿರ ಬೇಕು .

ಇಲ್ಲಿ ಪುಸ್ತಕದ ಹೆಸರು ತಂದೆಯ ಕನಸುಗಳಿಂದ ಎಂದು ಇದ್ದರೂ ತಂದೆ ,ತಾಯಿ 

ಮಲ ತಂದೆ .ಅಜ್ಜ ಅಜ್ಜಿ ಮತ್ತು ಬಳಗದವರು ತಮ್ಮ ಬಾಳ ಕನಸುಗಳನ್ನು ಹೇಗೆ 

ರೂಪಿಸಿದರು ಎಂಬುದನ್ನು ಹೃದಯಂಗಮವಾಗಿ ಬರೆದಿದ್ದಾರೆ


ಗುರುವಾರ, ಸೆಪ್ಟೆಂಬರ್ 10, 2015

ಅಮೇರಿಕಾ ಯಾತ್ರೆ ೫

ಡಾಲರ್ ಲೆಕ್ಕದಲ್ಲಿ ಅತೀ ಹೆಚ್ಚು ರಫ್ತು ಮೂಲಕ ಆದಾಯ ಇರುವ ,ಮತ್ತು 

ವಿಶ್ವದಾತ್ಯಂತ ಎರಡನೇ ದೊಡ್ಡ ರಕ್ಷಣಾ ಕಾಂಟ್ರಾಕ್ಟ್ ದಾರ ಕಂಪನಿ ಬೋಯಿಂಗ್ .


ಪ್ರಯಾಣಿಕ ,ಸರಕು ಸಾಗಣೆ ಮತ್ತು ಯುಧ್ಧ ವಿಮಾನ ರಂಗದಲ್ಲಿ ದೊಡ್ಡ ಹೆಸರು 

ಮಾಡಿದೆ .ಇದರ ಕಾರ್ಖಾನೆಯು ವಿಸ್ತಾರದಲ್ಲಿ ಜಗತ್ತಿನಲ್ಲಿಯೇ ಅತೀ ದೊಡ್ಡದೆಂಬ 

ಹೆಗ್ಗಳಿಕೆ ಗಳಿಸಿದೆ 

  

ಸಿಯಾಟಲ್ ಸಮೀಪ ಎವೆರೆಟ್ ಎಂಬಲ್ಲಿ ಇರುವ ಈ ಕಾರ್ಖಾನೆ ನೋಡಲು 

ಹೊರಟೆವು .ಅದಕ್ಕೆ ಮುಂಗಡ ಕಾಯ್ದಿರಿಸುವಿಕೆ ಇದೆ .ಒಳಗಡೆ ಮಾರ್ಗದರ್ಶಿ

ಸಹಿತ ತಂಡಗಳಲ್ಲಿ ಹೋಗುವ ವ್ಯವಸ್ತೆ ಕಾರ್ಖಾನೆ ವತಿಯಿಂದ ಇದೆ .ಒಳಗೆ 

ಹೋದ ಒಡನೆ ಒಂದು ವಿಮಾನಗಳಿಗೆ  ಸಂಬಂದಿಸಿದ ವಸ್ತು ಸಂಗ್ರಹಾಲಯ ಇದೆ .

ಇದರಲ್ಲಿ ವಿಮಾನದ ಮೂಲ ರಚನೆ ಮತ್ತು ಕೆಲವು ಹಳೇ ಮಾದರಿಗಳು 

ವಿಮಾನದ ಹಾಲಿ ಕೊಕ್ ಪಿಟ್ ಇತ್ಯಾದಿಗಳ ಪ್ರದರ್ಶನ .

 ಕಾರ್ಖಾನೆಯ ಸಂದರ್ಶನ ಒಂದು ಸಾಕ್ಷ್ಯ ಚಿತ್ರದ ವೀಕ್ಷಣೆ ಯೊಡನೆ ಆರಂಭ

ಸಿನೆಮಾ ನೋಡಿದ ನಂತರ ಬಸ್ಸಿನಲ್ಲಿ ನಮ್ಮನ್ನು ಫ್ಯಾಕ್ಟರಿ ಒಳಗಡೆ 

ಕೊಂಡೊಯ್ಯಲಾಯಿತು .ಇಲ್ಲಿ  ಬೋಯಿಂಗ್  ಬೇರೆ ಬೇರೆ 

ಮಾದರಿ ಗಳ ವಿವಿಧ ಹಂತದ ನಿರ್ಮಾಣದಲ್ಲಿ ಇರುವ  ವಿಮಾನಗಳ ದರ್ಶನ 

ಆಯಿತು .ಕಂಪ್ಯೂಟರ್ ಬಳಕೆ ಯಥೇಚ್ಚವಾಗಿ ಮಾಡುವುದು ಮೇಲ್ನೋಟಕ್ಕೆ 

ಕಾಣುವುದು ,ಬಿಡಿ ಭಾಗಗಳನ್ನು ಎತ್ತಲು ದೈತ್ಯ ಕ್ರೇನ್ ಗಳಿವೆ .

ಇತ್ತೀಚೆಗಿನ ಬೋಯಿಂಗ್ ೭೮೭ ಡ್ರೀಮ್ ಲೈನರ್ ಕಡಿಮೆ ಭಾರದ 

ಸಂಯುಕ್ತ ವಸ್ತುವಿನಿಂದ ತಯಾರಿಸಿದ ಕಡಿಮೆ ತೂಕದ ಬಾಡಿ ಹೊಂದಿದ್ದು 

ಇಂಧನ ಉಳಿತಾಯ ವಾಗುವುದು .

ವಿಲಿಯಂ ಬೋಯಿಂಗ್ ಎಂಬ ಇಂಜಿನಿಯರ್  ಸಿಯಾಟಲ್ ನಲ್ಲಿ ಪೆಸಿಫಿಕ್ ಏರೋ 

ಪ್ರಾಡಕ್ಟ್ಸ್ ಎಂಬ ಹೆಸರಿನಲ್ಲಿ ೧೯೧೬ರಲ್ಲಿ ಆರಂಬಿಸಿದರು ,ಅದು ವರೆಗೆ 

ಮರದ ಕಾರ್ಖಾನೆ ನಡೆಸಿದ ಅನುಭವ ಇದ್ದಿತು .ಮೊದಲು ತಯಾರಿಸಿದುದು 

ಸಮುದ್ರದಲ್ಲಿ ಇಳಿಯ ಬಹುದಾದ ಮಾದರಿ 


 ಈಗಲೂ ಸಿಯಾಟಲ್ ನಲ್ಲಿ ಸಮುದ್ರಲ್ಲಿ ಇಳಿಯುವ ವಿಮಾನಗಳು ಬರುವ ನಿಲ್ದಾಣ 

ಇದೆ .

ಮುಂದೆ ಈ ಕಂಪನಿ ಬೋಯಿಂಗ್ ಕುಟುಂಬದ  ಹತೋಟಿಯಿಂದ ಹೊರ ಬಂದು 

ಈಗ ಇರುವ ಸ್ಥಾನ ಕ್ಕೆ ಬಂದಿದೆ .

ವಿಮಾನ ಸಂಸ್ಥೆಯ ಆವರಣದಲ್ಲಿ  ನಿರ್ಮಾಣವಾದ ವಿಮಾನದ ಪರೀಕ್ಷಣಾ 

ಹಾರಾಟ ನಡೆಸಲು ಬೇಕಾದ ರನ್ ವೆ ಇದೆ .


ಅಂತೂ ವಿಮಾನದಲ್ಲಿ ಪ್ರಯಾಣಿಸಿದ್ದಲ್ಲದೆ ಅದನ್ನು ತಯಾರಿಸುವ  

ಕಾರ್ಖಾನೆಯನ್ನೂ ನೋಡಿ ಕೃತಾರ್ಥ ರಾದೆವು .

ಮಧ್ಯಾಹ್ನ ಹೊತ್ತು ನಗರದಲ್ಲಿ ಇರುವ ಪೈಕ್ ಪ್ಲೇಸ್ ಮಾರ್ಕೆಟ್ ದರ್ಶನಕ್ಕೆ 

ಹೊರಟೆವು .ಭಾನುವಾರ ವಾದ್ದರಿಂದ  ಜನ ಸಂದಣಿ ಇತ್ತು ,ಮೀನು ,ಮಾಂಸ 

ತರಕಾರಿ ಹಣ್ಣು ಇತ್ಯಾದಿಗಳನ್ನು ಕೊಳ್ಳಲು ಮತ್ತು ಬಹಳ ಮಂದಿ ನೋಡಲು 

ಬಂದಿದ್ದರು .ಒಳಗಡೆ ಹಬ್ಬದ ವಾತಾವರಣ .ಕೆಲವರು ಸಂಗೀತ ನುಡಿಸುತ್ತಿದ್ದರು .

ಆದರೆ ಎಲ್ಲೂ ಕಸ ಕಡ್ಡಿ  ಚೆಲ್ಲಿ ಕೊಂಡು ಕಾಣದು .ಇಲ್ಲಿಯೂ ಕ್ರೆಡಿಟ್ ಕಾರ್ಡ್ 

ವ್ಯವಹಾರ ದವರು ,ಕ್ಯಾಶ್ ಮಾತ್ರ ತೆಗೆದು ಕೊಳ್ಳುವವರು ಇದ್ದಾರೆ .
 ಹೊರಗಡೆ ಸ್ಟಾರ್ ಬಕ್ಹ್ಸ್ ನವರ  ಅತೀ ಹಳೆಯ ಅಂಗಡಿ ನೋಡಲು ಮತ್ತು 

ಛಾಯಾಗ್ರಹಣ ಮಾಡಲು ನೂಕುನುಗ್ಗಲು ಇತ್ತು .

ಮಂಗಳವಾರ, ಸೆಪ್ಟೆಂಬರ್ 8, 2015

ಸ್ಪಟಿಕ ಪರ್ವತ ಆರೋಹಣ -ಅಮೇರಿಕಾ ಯಾತ್ರೆ ೪

ಒಂದು ಮುಂಜಾನೆ ಸಿಯಾಟಲ್ ನಗರದ  ಆಗ್ನೇಯ ದಿಕ್ಕಿನತ್ತ ಇರುವ ಸ್ಪಟಿಕ 

ಪರ್ವತ (crystal mountain) ಚಾರಣಕ್ಕೆ ಹೊರಟೆವು . ಮಧ್ಯಾಹ್ನ ಊಟಕ್ಕೆ  

ಪುಳಿಯೋಗರೆ ಮೊಸರನ್ನ ದ ಬುತ್ತಿ .ಸಿಯಾಟಲ್ ನಿಂದ  ಸುಮಾರು ೮೦ ಮೈಲು 

ದೂರ .ಅಮೇರಿಕಾ ದೇಶದಲ್ಲಿ ಮೈಲು ಗ್ಯಾಲನ್ನೇ ಚಾಲ್ತಿಯಲ್ಲಿದೆ .ಪುಣ್ಯಕ್ಕೆ ಆಣೆ 

ಒಟ್ಟೆ ಮುಕ್ಕಾಲು ಇಲ್ಲ .

  ಗೂಗಲ್ ನ  ಜಿ ಪಿ ಎಸ್ (ಗ್ಲೋಬಲ್ ಪೊಸಿಸಶನಿಂಗ್ ಸಿಸ್ಟಮ್ )ನಲ್ಲಿ  

ನಿಮಗೆ ಹೋಗಬೇಕಾದ ಸ್ಥಳ ದ  ಹೆಸರು ದಾಖಲಿಸಿದರೆ ಸಾಕು ಅದರಲ್ಲಿರುವ 

ಅಶರೀರವಾಣಿ  ನಿಮಗೆ ದಾರಿ ತೋರುತ್ತದೆ .ಬಲಕ್ಕೆ ತಿರುಗಿ ,ಎಡಕ್ಕೆ ಹೋಗಿ 

,ಒಂದು ಮೈಲು ನಂತರ ಬಲದ ದಾರಿ ಹಿಡಿಯಿರಿ ಇತ್ಯಾದಿ .ಅತಲ ವಿತಳ ಪಾತಾಳ 

ದಲ್ಲಿ ಎಲ್ಲಿಗೆ ಹೋಗ ಬೇಕಾದರೂ ಯಾರನ್ನೂ ಕೇಳ ಬೇಕಿಲ್ಲ .ಜಿ ಪಿ ಎಸ್ ಮೊರೆ 

ಹೋದರೆ ಕೈ ಬಿಡದು .ಇಂಟರ್ನೆಟ್ ಸ೦ಪರ್ಕ ಮಾತ್ರ ಅವಶ್ಯಕ .ನಮ್ಮ ಮಗ 

ಈ ಸೌಲಭ್ಯ ಉಪಯೋಗಿಸುತ್ತಿದ್ದ .ಟ್ಯಾಕ್ಸಿ ಚಾಲಕರೂ ಅದನ್ನು ಎಲ್ಲಾ ಕಡೆ 
ಬಳಸುವರು .

ದಾರಿ ಗುಂಟ ಹಸಿರ ರಾಶಿ .ಕೆಲವು ಸಣ್ಣ ಪಟ್ಟಣ ಗಳು .ಸ್ಟಾರ್ ಬಕ್ ನಲ್ಲಿ ಒಂದು 

ಮಧುರ ಚಹಾ ಸೇವನೆ ಆಯಿತು .ಚಹಾ ಕಾಫಿ ಪ್ರಿಯರ ಮೆಚ್ಚಿನ ತಾಣ ಸ್ಟಾರ್ ಬಕ್

ಇದು ಜಗತ್ತಿನ ದೊಡ್ಡ  ಮತ್ತು ಜನಪ್ರಿಯ ಚಹಾ ಕಾಫಿ ಅಂಗಡಿ ಶೃಂಖಲೆ 

ಆರಂಭವಾದದ್ದು ಸಿಯಾಟಲ್ ನಲ್ಲಿ .

  ನಾವು ಬಂದುದು ಬೇಸಿಗೆಯಲ್ಲಿ .ಈ ಸ್ಪಟಿಕ ಪರ್ವತ ಹೆಚ್ಚಾಗಿ ಹಿಮಾಚ್ಚಿದವಾಗಿದ್ದು 

ಐಸ್ ಸ್ಕೇಟಿಂಗ್ ಪ್ರಿಯರ ತಾಣ .ನಮಗೆ ಅದನ್ನು ನೋಡುವ ಭಾಗ್ಯ ಇಲ್ಲ .

                 

ಚಳಿಗಾಲದ ನೋಟ 
ನಾವು ಹೋದಾಗ ಇದ್ದ ಬೋಳು ಬೆಟ್ಟ 

ಈ ಬೆಟ್ಟಕ್ಕೆ ಕೆಳಗಿನಿಂದ ರೋಪ್ ವೆ ನಿರ್ಮಿಸಿದ್ದಾರೆ .ಅದರ ಮೂಲಕ ಇಲ್ಲವೇ 

ನಡೆಯುತ್ತಾ  ಶಿಖರ ಎರ ಬಹುದು .ಮೇಲೆ ಗುಡ್ಡದ ತುದಿಯಿಂದ ನಯನ 

ಮನೋಹರ ದೃಶ್ಯ ಕಾಣ ಸಿಗುವುದು .ಅಲ್ಲಿ ಒಂದು ರೆಸ್ಟೋರಂಟೂ ಇದೆ .

ಈ ಶಿಖರ ದ ಮೇಲಿಂದ  ಪಕ್ಕದಲ್ಲಿರುವ  ಮೌಂಟ್ ರೈನಿಯರ್ ಎಂಬ 

ಹಿಮಚ್ಚ್ಹಾದಿತ  ಅಗ್ನಿ ಪರ್ವತ  ಮತ್ತು ಕಣಿವೆಯಲ್ಲಿ  ಹರಿಯುವ ಶ್ವೇತ ನದಿಯ 

ಮನ ಮೋಹಕ ದೃಶ್ಯ ಕಣ್ಣು ತುಂಬಿಸಿ ಕೊಳ್ಳ ಬಹುದು .




ಇಲ್ಲಿ ಕಾಣುವ ಅಗ್ನಿ ಪರ್ವತ ಈಗ ಹಿಮ ಹೊದೆದು ನಿಂತಿದೆ .ಯಾವುದೇ ಸಮಯ 

ಸಕ್ರಿಯವಾಗುವ ಅಪಾಯ ಇದೆ .

ರೋಪ್ ವೆ ಯಲ್ಲಿ ಮೇಲೆ ಹೋಗುವಾಗ ಸ್ಥಳೀಯ  ಮಹಿಳೆ ನಮ್ಮೊಡನೆ 

ಮಾತಿಗೆ ಇಳಿದರು .(ಇಲ್ಲಿ ಇದು ಅಪರೂಪ .) ನನ್ನ ಮಗನ ಉದ್ಯೋಗ 

ವಿಚಾರಿಸಿದರು .ಸಾಫ್ಟ್ ವೇರ್ ನವರಿಂದಾಗಿ ಸಿಯಾಟಲ್ ಸುತ್ತ ಮುತ್ತ 

ರಿಯಲ್ ಎಸ್ಟೇಟ್ ಮತ್ತು ಸಾಮಗ್ರಿ ಬೆಲೆ ಗಗನಕ್ಕೇರಿದೆ ಎಂದು ಬೇಸರ 

ವ್ಯಕ್ತ ಪಡಿಸಿದರು .ನಮ್ಮ ನಾಡಿನಲ್ಲೂ ಇದೇ ಸಮಸ್ಯೆ ಇದೆ ತಾನೇ .

ಮೇಲೆ ಒಂದು ಗಂಟೆ ವಿಹರಿಸಿ ಕೆಳಗೆ ಇಳಿದೆವು .ಹೊಟ್ಟೆ ಚುರುಗುಟ್ಟುತ್ತಿತ್ತು .

ಊಟ ಮಾಡಿ ಸುತ್ತ ಮುತ್ತಲು ಕೆಲವು ಸಣ್ಣ ಸರೋವರಗಳನ್ನು ನೋಡಿದೆವು .

ಪ್ರವಾಸಿ ತಾಣಗಳನ್ನು ಸ್ವಚ್ಚವಾಗಿ ಇಟ್ಟಿದ್ದಾರೆ .ಯಾರಾದರೂ ಛಾಯಾ ಚಿತ್ರ 

ತೆಗೆಯುತ್ತಿದ್ದರೆ ತಾಳ್ಮೆಯಿಂದ ಕಾಯುತ್ತಾರೆ ,ಅಡ್ಡ ಬರುವುದಿಲ್ಲ  (ಇದು ಅಮೇರಿಕಾ 

ದುದ್ದಕ್ಕೂ ಕಂಡ ಸಂಗತಿ )

ಸಾಯಂಕಾಲ ಮನೆಗೆ ಮರಳಿ  ವಿಶ್ರಾಂತಿ ತೆಗೆದುಕೊಂಡು ಬಾಹುಬಲಿ ಚಲನ ಚಿತ್ರ 

ನೋಡಲು ಸಮೀಪದ ಚಿತ್ರಮಂದಿರಕ್ಕೆ ಹೋದೆವು 

ಸೋಮವಾರ, ಸೆಪ್ಟೆಂಬರ್ 7, 2015

ಅಮೇರಿಕ ರಾತ್ರೆ ೩

ಸಿಯಾಟಲ್  ನಗರದಲ್ಲಿ ಚೀನಿಯರು ಹೆಚ್ಚು ಕಾಣ ಸಿಗುವರು .೧೯ನೆ ಶತಮಾನದ 

ಉತ್ತರಾರ್ಧದಲ್ಲಿ ಅಮೆರಿಕಾದಲ್ಲಿ ಕಾರ್ಮಿಕರ ಕೊರತೆ ಇದ್ದಾಗ ವಿದೇಶಿ 

ಕಾರ್ಮಿಕರನ್ನು ಗಣಿಗಾರಿಕೆ ,ಕೃಷಿ ,ಮೀನುಗಾರಿಕೆ ಮತ್ತು ರೈಲ್ವೆ  ಕೆಲಸಗಳಿಗಾಗಿ 

ಸ್ವಾಗತಿಸುತ್ತಿದ್ದರು .ಈ ಸಮಯ  ಪ್ರಧಾನವಾಗಿ  ಚೈನಾದ  ಬಂದರು  ಪ್ರಾಂತ 

ಗುವಂಗ್ ಜವು ದಿಂದ ಸಾವಿರಾರು ಜನರು ಸಿಯಾಟಲ್ ಗೆ ವಲಸೆ ಬಂದರು .

ಇವರು ತಮ್ಮದೇ ಕಾಲೋನಿ ಚೈನಾ ಟೌನ್ ನಿರ್ಮಿಸಿ ಕೊಂಡರು ,

               



೧೮೮೦ ರಲ್ಲಿ ಅರ್ಥಿಕ ಹಿಂಜರಿಕೆ ಇದ್ದು  ಸ್ಥಳೀಯ ಬಿಳಿಯರು ಚೀನಾದ 

ಮಂದಿ ಯಿಂದಾಗಿ ತಮಗೆ ಉದ್ಯೋಗವಕಾಶಗಳು  ಕಡಿಮೆ ಯಾಗಿವೆ ಎಂದು 

ಪ್ರತಿಭಟನೆ ಆರಂಬಿಸಿದರು .ಪರಿಣಾಮ ಉದ್ಯೋಗಗಳಿಂದ  ಚೈನೀಯರನ್ನು 

ಹೊರಗಿಡುವ ಕಾನೂನು ಜಾರಿ ಗೊಳಿಸಲಾಯಿತು .ಕೆಲಸ ಕಳೆದು ಕೊಂಡು

ಮತ್ತು ಸ್ಥಳೀಯರ ದ್ವೇಷ ಕಾರಣ  ನೂರಾರು ಚೈನಿಯರು ಸ್ವದೇಶಕ್ಕೆ ಮರಳಿದರು .

ಆದರೆ ಮುಂದೆ ಉದಾರವಾದಿಗಳು ಜನಾಂಗ ದ್ವೇಷದ  ನೀತಿಗಳನ್ನು 

ಸಡಿಲು ಗೊಳಿಸಿದ ಕಾರಣ ಪುನಃ ನೆಲೆಗೊಂಡು ದೇಶದ ಅಭಿವೃದ್ದಿಗೆ ತಮ್ಮ 

ಕಾಣಿಕೆ ನೀಡುತ್ತಿದ್ದಾರೆ .

ಇದೇ ಸಮಸ್ಯೆ ಭಾರತೀಯ ವಲಸೆ ಕಾರ್ಮಿಕರಿಗೆ ಆಫ್ರಿಕಾ ಮತ್ತು ಫಿಜಿ 

ದೇಶದಲ್ಲಿ ಬಂದಿದೆ .ಆಫ್ರಿಕಾದ ರೈಲ್ವೆ ದಾರಿ ನಿರ್ಮಾಣ ಸಮಯದಲ್ಲಿ 

ಕಾಡು ಪ್ರಾಣಿಗಳಿಗೆ ಹೆದರಿ ಸ್ಥಳೀಯರು ಮುಂದೆ ಬರದಿದ್ದಾಗ  ಭಾರತದ 

ಕಾರ್ಮಿಕರು ಬಂದು ತಮ್ಮ ಶ್ರಮ ಮತ್ತು ಬಲಿದಾನದಿಂದ ನಿರ್ಮಾಣ ಮಾಡಿದರು .

ಹಲವರು  ಆಫ್ರಿಕಾದ ಕೆನ್ಯಾ ,ಉಗಾಂಡಾ ಮುಂತಾದ ರಾಷ್ಟ್ರಗಲ್ಲಿ ನೆಲೆಸಿ 

ಶ್ರಮದಿಂದ ಮೇಲೆ ಬಂದಾಗ ಸ್ಥಳೀಯರ ಕೆಂಗಣ್ಣಿಗೆ ಗುರಿಯಾದರು .ಫಿಜಿಯ 

ಕಥೆಯೂ ಅದೇ .

( ಚಿತ್ರಗಳ ಮೂಲಗಳಿಗೆ ಅಭಾರಿ )

ಶನಿವಾರ, ಸೆಪ್ಟೆಂಬರ್ 5, 2015

ಅಮೇರಿಕಾ ಯಾತ್ರೆ ೨

ಅಂತೂ ಅಮೇರಿಕಾ ದೇಶದಲ್ಲಿ ಒಂದು ರಾತ್ರಿಯನ್ನು ಕಳೆದೆವು 

.ಜೆಟ್ ಲ್ಯಾಗ್ ನಿಂದಾಗಿ  ಹಸಿವು ನಿದ್ದೆಯ ಕ್ರಮ ಸ್ವಲ್ಪ ಅಸ್ತವ್ಯಸ್ತ 

ಆಗಿತ್ತು . ಮುಂಜಾನೆ ಎದ್ದು ಪೇಪರ್ ಓದುವ ಎಂದರೆ ಇಲ್ಲಿ ದಿನ 

ಪತ್ರಿಕೆ ಇರಲಿಲ್ಲ .ತಿಂಡಿ ತಿಂದು ಸಿಯಾಟಲ್ ನಲ್ಲಿ ನಿನ್ನೆ 

ಕಂಡುದನ್ನು ಮೆಲುಕು ಹಾಕಿದೆ .ಇದು ಬಂದರು ನಗರ .ಜನಸಂಖ್ಯೆ

ವಿರಳ .ಕೆಲವು ಗಗನ ಚುಂಬಿ ಕಟ್ಟಡಗಳು ವಿರಳ .ರಸ್ತೆಗಳು  

ವಿಶಾಲವಾಗಿದ್ದು ಪಾದಚಾರಿಗಳಿಗೆ ವಿಶೇಷ ಗೌರವ.ನಗರದಿಂದ  

ಹೊರ ಹೋಗುವ ರಸ್ತೆಗಳಲ್ಲಿ ಎರಡಕ್ಕಿಂತ ಹೆಚ್ಚು ಪ್ರಯಾಣಿಕರು 

ಸಂಚರಿಸುವ ವಾಹನಗಳಿಗೆ ಪ್ರತ್ಯೇಕ  ಲೇನ್ ಇದೆ .

   
   ನಗರದಲ್ಲಿ  ಪೋಸ್ಟರ್ಗಳು ಫ್ಲೆಕ್ಸ್ ಗಳು ಇಲ್ಲ . ,ಅಂಗಡಿಗಳ  

ನಾಮಪಲಕಗಳು  ಹತ್ತಿರ ಹೋದರೆ ಮಾತ್ರ ಕಾಣಿಸುವಂತೆ  

ಇಟ್ಟಿರುವರು .ವಾಹನಗಳ ಹಾರ್ನ್ ಅಪರೂಪ .ಕೇಳಿದರೆ 

ಅಗ್ನಿಶಾಮಕ  ವಾಹನ ದ ಸೈರನ್ .ಮಂತ್ರಿ ,ಅಧಿಕಾರಿಗಳ  ಕೆಂಪು 

ದೀಪ ಕಾಣಿಸುವುದೇ ಇಲ್ಲ.

ನಾಯಿ ಇಲ್ಲಿಯವರ ಆಪ್ತ ಪ್ರಾಣಿ .ಅದನ್ನು ಹಿಡಿದು ವಾಕಿಂಗ್ 

ಹೋಗುವವರು ,ಕೆಲಸಕ್ಕೆ ಹೋಗುವವರು ಎಲ್ಲೆಲ್ಲೂ ಕಾಣ 

ಸಿಗುವರು .ಹೋಟೆಲ್ ಗಳಲ್ಲಿ  ಅವುಗಳ ಬಾಯಾರಿಕೆ ನಿವಾರಿಸಲು 

 ಪ್ರತ್ಯೇಕ ನೀರ ತೊಟ್ಟಿಗಳ ಸೇವೆ ಉಚಿತ .ಆಫೀಸ್ ಗಳಲ್ಲಿ  ಬೇಬಿ 

ಕ್ರೆಷೆ ಗಳಂತೆ  ಶ್ವಾನ  ಪಾಲನಾ ವ್ಯವಸ್ಥೆ ಇವೆಯಂತೆ .ಈ ದೇಶದಲ್ಲಿ 

ನಾಯಿಗಳಿಗಾಗಿಯೇ  ೫ ಸ್ಟಾರ್ ಹೋಟೆಲ್ ಗಳು ಇವೆಯೆಂದು 

ಕೇಳಿದ್ದೇನೆ .ಇಲ್ಲಿಯ ನಾಯಿ ಮರಿಗಳು  ತರಬೇತಿ ಪಡೆದುವು 

ಆದುದರಿಂದ   ಅಪರಿಚಿತರ ಮೇಲೆ ಅನಾವಶ್ಯಕವಾಗಿ ಗುರ್ ಗುರ್ 

ಎನ್ನುವುದಿಲ್ಲ .

 ಸಂಜೆ  ಮಗ ಆಫೀಸ್ ನಿಂದ ಬಂದು  ನಮ್ಮನ್ನು ನಡಿಗೆಯಲ್ಲಿ  

ಅಳಿವೆ ತೀರಕ್ಕೆ  ಕರೆದು ಕೊಂಡು ಹೋದನು .ತೀರದ ಉದ್ದಕ್ಕೂ 

ನಡೆದು ಸೌಂದರ್ಯ  ಆಸ್ವಾದಿಸಿದೆವು .ಅಲ್ಲಿಂದ ಬ್ರೈನ್ ಬ್ರಿಜ್ 

ಎಂಬ ನಡುಗಡ್ಡೆಗೆ  ಯಂತ್ರಿಕ ದೋಣಿ ವಿಹಾರ ಸಂಚಾರ 


ಏರ್ಪಡಿಸಿರುವರು .ಅದರಲ್ಲಿ ಏರಿ  ತಂಗಾಳಿ ಸೇವೆ 

ಮಾಡಿಸಿಕೊಂಡು ನೀಲ ಸಲಿಲ ರಾಶಿಯ  ಅಂದ ಸವಿದೆವು .








ಇಲ್ಲಿ  ಹೆಚ್ಚಿನ  ಪ್ರವಾಸಿ ತಾಣಗಳಲ್ಲಿ  ಒಳ ಪ್ರವೇಶ ಮಾಡುವಾಗ 

ಉಚಿತ  ಛಾಯಾಗ್ರಹಣ ಮಾಡಿ ಹೊರ ಬರುವಾಗ ನಮಗೆ 

ತೋರಿಸುವರು ,ನಮಗೆ ಇಷ್ಟವಾದರೆ  ಹಣ ತೆತ್ತು  ಅದರ ಪ್ರತಿ 

ತೆಗೆದು ಕೊಳ್ಳ ಬಹುದು .ನಿರ್ಗಮನ ದಾರಿಯಲ್ಲಿ  ಒಂದು 

ಅಂಗಡಿಯೂ ಇರುವುದು .ಇದರಲ್ಲಿ ಆಯಾ ಪ್ರವಾಸ ತಾಣಕ್ಕೆ 

ಸಂಬಂದಿಸಿದ  ನೆನೆಪು ಕಾಣಿಕೆಗಳು  ಇತ್ಯಾದಿ  ಖರೀದಿಗೆ 

ಇಟ್ಟಿರುವರು .

ಶುಕ್ರವಾರ, ಸೆಪ್ಟೆಂಬರ್ 4, 2015

ನನ್ನ ಅಮೇರಿಕಾ ಯಾತ್ರೆ

ಬೆಂಗಳೂರು  ವಿಮಾನ ನಿಲ್ದಾಣದಲ್ಲಿ ಮುಂಜಾನೆ ನಾಲ್ಕು ಗಂಟೆಗೆ  ಎಮಿರೇಟ್ 

ವಿಮಾನ ಏರಿದೆವು .ಅರಬೀ ಭಾಷೆಯಲ್ಲಿ ನಮ್ಮನ್ನು ಸ್ವಾಗತಿಸಿದಾಗ ಅರೇಬಿಯಾದ 

ಹಳೇ ನೆನಪುಗಳು ಮರುಕಳಿಸಿದುವು.ಸ್ವಲ್ಪ ನಿದ್ದೆ ಮಾಡೋಣ ಎನ್ನುವಾಗ 

ಮುಂಜಾವಿನ ಊಟವೋ ತಿಂಡಿಯೋ ತಿಳಿಯದು ಬಂದು ಎಚ್ಚರಿಸಿತು .ಮತ್ತೆ 

ಯಾವಾಗಲೋ ಎಂದು ಸಿಕ್ಕಿದುದನ್ನು ತಿಂದು ಕುಡಿದೆವು .ನಿದ್ದೆ ಕಣ್ಣಿಗೆ ಹತ್ತಲಿಲ್ಲ .

ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ದುಬೈ ತಲುಪಿದೆವು .ವಿಮಾನದ ಹೊರಗೆ 

ನೀಲ ಕಡಲು ,ಆಗಸದಲ್ಲಿ  ಬಿಳಿ ಮೋಡಗಳ ನಡುವೆ ಭಾಸ್ಕರನ ಹೊಂಗಿರಣಗಳ 

ವಿಹಂಗಮ ನೋಟ ,ಒಳಗೆ ದುಬಾಯಿಯ  ಸುಂದರ ಕಟ್ಟಡಗಳ ಮಾಟ.

   ದುಬೈ ನಿಲ್ದಾಣದಲ್ಲಿ ನಮಗೆ ಭಾರತ ದೇಶದಲ್ಲಿ ಇದ್ದಂತೆ ಭಾಸವಾಗುವುದು .

ಏಕೆಂದರೆ ಅಲ್ಲಿ ಮಲೆಯಾಳಿಗಳು ,ಉತ್ತರ ಭಾರತ ದವರು ಪ್ರಯಾಣಿಕರೂ 

,ಉದ್ಯೋಗಿಗಳೂ ಬಹಳ ಮಂದಿ .ನಿಲ್ದಾಣದ ಅಂಗಡಿಗಳಲ್ಲಿ  ನಮ್ಮವರನ್ನು 

ಕಾಣಬಹುದು .ಪ್ರಾತಃವಿಧಿ ಗಳನ್ನು ಮುಗಿಸಿ  ನಿಲ್ದಾಣದ ಉಚಿತ  ವೈ ಫೈ ಸೇವೆಯ 

ಸಹಾಯದಿಂದ ಸಿಯಾಟಲ್ ನಲ್ಲಿರುವ  ಮಗನಿಗೆ ಸಂದೇಶ ರವಾನಿಸಿದೆನು .

     ದುಬಾಯಿ ಯಿಂದ ಸಿಯಾಟಲ್ ಗೆ   ಪುನಃ ಎಮಿರೇಟ್ ವಿಮಾನ .ನಮ್ಮ 

ಲಗೇಜ್ ಮೊದಲೇ ಚೆಕ್ ಇನ್ ಆಗಿದ್ದುದರಿಂದ  ಹಗುರಾಗಿದ್ದೆವು .ವಿಮಾನ 

ಏರುವಾಗ ಸಂಸ್ಥೆಯ ಉದ್ಯೋಗಿ ಓರ್ವರು  ನಮ್ಮ  ಸೀಟ್  ಎಕಾನಮಿ  ವರ್ಗದಿಂದ 

ಬಿಸಿನೆಸ್  ಕ್ಲಾಸ್ ಗೆ  ಉಚಿತವಾಗಿ  ಏರಿಸಿಲಾದ  ಶುಭ ಸುದ್ದ್ದಿ ಕೊಟ್ಟರು . 

ಇದರಿಂದ ನಮಗೆ ಕಾಲು ನೀಡಿ  ವಿಶ್ರಮಿಸುವ ಅವಕಾಶ ,ಪರಿಚಾರಿಕೆಯರಿಂದ

ರಾಜೋಪಚಾರ .೧೪ ತಾಸುಗಳ  ತಡೆ ರಹಿತ ಪ್ರಯಾಣ .ವಿಮಾನ ಏರಿ 

ನಿದ್ರಿಸುವಾ ಎಂದರೆ  ತಿಂಡಿ  ತೀರ್ಥಗಳು ಬಂದುವು .ಬಾಯಿ ಚಪ್ಪರಿಸಿ  ತಿಂದೆವು .


ಕಿಟಿಕಿ  ಹಾಕಿ ,ದೀಪಗಳನ್ನು ಆರಿಸಿ ಮಲಗಿದರೆ  ಗಾಢ ನಿದ್ರೆ .ಎಚ್ಚರ  ಆಗುವಾಗ 

ಹೊಟ್ಟೆ ಚುರು ಚುರು.ಎಕಾನಮಿ ತರಗತಿಯಂತೆ  ಸಾಮೂಹಿಕ ಊಟ  ಸರಬರಾಜು 

ಇಲ್ಲಾ ಎಂದು ತೋರುತ್ತದೆ .ಹಾಗೆ ಪರಿಚಾರಿಕೆಗೆ ಸಸ್ಯಾಹಾರಿ ಊಟ  ಇದ್ದರೆ ಕೊಡಿ 

ಎಂದೆ.ಅರೇಬಿಕ್ ಸಸ್ಯಾಹಾರಿ ಎಂದು ವರ್ಣಮಯ ಊಟ ಬಂತು ,ಬಾಯಿಗೆ 

ರುಚಿಸದು .ನಾವು ಹಾಗೇ ಬಿಟ್ಟುದು ಕಂಡು ನಮ್ಮ  ಅತಿಥೇಯರಿಗೆ ಬೇಸರ ,

ಬೇರೇನಾದರೂ ಕೊಡಲೇ ಎಂದು ನಾವು ಕೇಳಿರದ ತಿಂಡಿಗಳ ಹೆಸರು ಹೇಳಿದರು .

ನಾವು  ಕೃತಜ್ಞತಾಪೂರ್ವಕವಾಗಿ ನಿರಾಕರಿಸಿದೆವು.  ಬಿಸಿನೆಸ್ ಕ್ಲಾಸ್ ನ  ಸೀಟ್ 

ದಂತ ವೈದ್ಯರ ಚೇರ್ ನಂತೆ ಇದೆ ,ಕೀಲಿ ತಿರುಗಿಸಿ ಅದನ್ನು ಹಾಸಿಗೆಯಾಗಿ 

ಪರಿವರ್ತಿಸ ಬಹುದು .ನಾವು ಬಾಕಿ ಉಳಿದಿದ್ದ ನಿದ್ದೆಯನ್ನು  ವಸೂಲಿ ಮಾಡು 

ವವರಂತೆ  ಹೊದಿಕೆ ಹೊಡೆದು ಬಿದ್ದು ಕೊಂಡೆವು .
     
             

      

ನಿಗದಿತ  ಸಮಯಕ್ಕೆ ಸರಿಯಾಗಿ  ವಿಮಾನ ಸಿಯಾಟಲ್ ನಗರದಲ್ಲಿ ಇಳಿಯಿತು .

ದೂರ ವಿಮಾನ ಪ್ರಯಾಣ ಬಹಳ ತ್ರಾಸ ದಾಯಕ ,ಅದೂ ರಾತ್ರೆ ಹೊತ್ತಲ್ಲದ 

ಹೊತ್ತಿನಲ್ಲಿ  ಹೊರಡುವ ವಿಮಾನ ಏರಿದರೆ  ನಿದ್ದೆಯೂ ಇಲ್ಲ ,ಅವರು ಕೊಡುವ 

ಟಿ ವಿ ನೋಡಲೂ ಅಲ್ಲ .ಸಮಯವೇ ಹೋಗದು .


  ಮಧ್ಯಾಹ್ನ ಮೂರುವರೆ ಗಂಟೆ .ವಲಸೆ ಅಧಿಕಾರಿಗಳ ಪರಿಶೀಲನೆ ಮುಗಿಸಿ 

ಲಗೇಜ್ ನ್ನು  ಸುರಕ್ಷಾ ಅಧಿಕಾರಿಗಳ ಬಳಿಗೆ ಒಯ್ಯಲಾಗಿ ಇದರಲ್ಲಿ ಧಾನ್ಯ 

ತಿಂಡಿ ಏನೂ ಇಲ್ಲವಲ್ಲ ಎಂದು ನಗುತ್ತಲೇ ನಮ್ಮನ್ನು ಬಿಟ್ಟರು .ಹಣ್ಣು ತರಕಾರಿ 

ಇತ್ಯಾದಿ ಸಾಗಿಸುವಂತಿಲ್ಲ . ಸಿಯಾಟಲ್ ನಿಲ್ದಾಣದಲ್ಲಿ ಹಲವು  ಚೈನೀಸ್ 

ಮೂಲದವರನ್ನು ಕಂಡೆವು .ನಿಲ್ದಾಣದಲ್ಲಿ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ 

ಉದ್ಘೋಷಣೆ  ಮಾಡುತ್ತಲಿದ್ದುದ ಕಂಡೆ .

  ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತಿಸಲು  ಬಂದಿದ್ದ ಮಗನನ್ನು ಕಂಡು ಆಯಾಸ 

ಸ್ವಲ್ಪ ಪರಿಹಾರ ಆಯಿತು .ಅವನು ತಂದಿದ್ದ ಕಾರ್ ನಲ್ಲಿ ಲಗೇಜ್ ತುಂಬಿಸಿ 

ನಗರ ಮಧ್ಯೆ ಇರುವ ಮನೆಗೆ ಬಂದೆವು .ಮಗ ತಯಾರಿಸಿದ್ದ  ಅನ್ನ ,ಬೆಂಡೆಕಾಯಿ

ಸಾಂಭಾರ್ ಮೊಸರು ಹೊಟ್ಟೆಗೆ ಹೋದೊಡನೆ  ತೃಪ್ತಿಯಾಗಿ  ಸ್ವಲ್ಪ ಯೋಗ ಕ್ಷೇಮ 

ಮಾತನಾಡಿ ವಿಶ್ರಮಿಸಿದೆನು .ಅವನ ತಾಯಿ ಮಗನಿಗೆ ತಂದ ತಿಂಡಿಗಳನ್ನು 

ಹೊರ ತೆಗೆದು ,ಅಡುಗೆ ಮನೆ ಸರಿ ಪಡಿಸುವುದಕ್ಕೆ ಆರಂಭಿಸಿದಳು .

     ಮಲಗಿದ ನನಗೆ  ಲೋಕದಲ್ಲೇ ಇಲ್ಲದ ನಿದ್ರೆ ಆವರಿಸಿತು .ಆದರೆ ಸ್ವಲ್ಪ 

ಹೊತ್ತಿನಲ್ಲಿ ಬಂದ ಮಗ ಹಿಡಿದು ಏಳಿಸಿದ ,ನಿದ್ದೆಯ ಆಸೆಯಲ್ಲಿ ನಾನು ಸ್ವಲ್ಪ 

ಮಲಗಲೇ ಎಂದು ಯಾಚಿಸಲು ನಿರ್ದಾಕ್ಷಿಣ್ಯವಾಗಿ ಇಲ್ಲವೆಂದ .

     ಸಂಜೆ ಆರಕ್ಕೆಲ್ಲ  ನಗರದ ಹೊರವಲಯದ  ಭಾರತೀಯ ಅಂಗಡಿ ಅಪ್ನಾ 

ಬಜಾರ್ ಗೆ ಹೋಗಿ  ಬೇಕಾದ ದಿನಸು ತರಕಾರಿ ಖರೀದಿಸಿದೆವು.

 ಅಲ್ಲೇ ಸಮೀಪದಲ್ಲಿ ಸ್ನೋಕಾಲ್ಮಿನ್ ಎಂಬ ಸಣ್ಣದಾದರೂ ಸುಂದರ ಜಲಪಾತ ಇದೆ .

ಅಲ್ಲಿಗೆ ತೆರಳಿ  ಅದರ ಸೌಂದರ್ಯ ಅಸ್ವಾದಿಸಿದೆವು 

                

ಮರಳುವ ದಾರಿಯಲ್ಲಿ  ಮಲಯಾಳಿಗಳು ನಡೆಸುವ ಆಹಾರ ರೆಸ್ಟುರಾದಲ್ಲಿ 

ಅವಿಯಲ್ ,ಅನ್ನ ,ದೋಸೆ ಇತ್ಯಾದಿ ಸವಿದೆವು 
                  
ಮತ್ತೆ ಮನೆಗೆ ಮರಳಿದಾಗ  ರಾತ್ರಿ ಹತ್ತು ಗಂಟೆ ,ಸೂರ್ಯ ಈಗ ತಾನೇ ಮುಳುಗಿದ್ದ .

ಸಿಯಾಟಲ್ನಲ್ಲಿ ಬೇಸಿಗೆ ,ಹಗಲು ಧೀರ್ಘ .