ಸಕಲೇಶ ಪುರದಲ್ಲಿ ಒಂದು ವರುಷ
ಮೈಸೂರಿನಿಂದ ಗಾಡಿ ಸಕಲೇಶಪುರಕ್ಕೆ ಹೊರಟಿತು ,ಸರಕಾರಿ ಸೇವೆಯೇ ಹಾಗೆ ಡಿ ವಿ ಜಿ ಯವರ ಜಟಕಾ ಬಂಡಿ ತರಹ ಮೇಲಿನವರು ಹೇಳಿದಲ್ಲಿಗೆ ಹೋಗಬೇಕು .ಒಂದು ತಹರ ಇದು ನಮಗೆ ಇಲ್ಲಿ ಯಾವುದೂ ಸ್ಥಿರವಲ್ಲ ಎಂಬ ವೇದಾಂತ ಕಲಿಸಿ ಕೊಡುವುದು .ವರ್ಗಾವಣೆ ಆದಾಗ ಜಾಯಿನಿಂಗ್ ಟೈಮ್ ಅಂತ ಪುಕ್ಕಟೆ ರಜೆ ಮತ್ತು ವರ್ಗ ಭತ್ಯೆ ಸಿಗುವುದು .ನಮ್ಮಂತಹ ಅವಿವಾಹಿತರಿಗೆ ಅದು ಒಂದು ಗಳಿಕೆಯೇ .
ಸಕಲೇಶ ಪುರ ರೈಲ್ವೇ ನಿಲ್ದಾಣ ಹೇಮಾವತಿ ನದಿ ದಂಡೆಗೆ ಸಮೀಪ ಇದೆ .ಸ್ಟೇಷನ್ ಹಿಂದು ಗಡೆ ಗುಡ್ಡ .ರೈಲ್ವೇ ನಿಲ್ದಾಣದಿಂದ ಪೇಟೆಗೆ ಹೋಗುವ ರಸ್ತೆ ಈ ಗುಡ್ಡ ಏರಿ ಹೋಗುವುದು .ಎರಡೂ ಕಡೆ ವಸತಿ ಗೃಹಗಳು .ಗುಡ್ಡದ ತುದಿಯಲ್ಲಿ ಕಛೇರಿಗಳು .ರೈಲ್ವೇ ಆರೋಗ್ಯ ಕೇಂದ್ರ ಕೂಡ ಎತ್ತರದಲ್ಲಿ ಇದೆ .ಅದೇ ದಾರಿಯಲ್ಲಿ ಮುಂದೆ ರೈಲ್ವೇ ಅಧಿಕಾರಿಗಳ ವಿಶ್ರಾಂತಿ ಗೃಹ ಇದೆ .ಇದರ ಅಂಗಳದಲ್ಲಿ ನಿಂತು ನೋಡಿದರೆ ಹೇಮಾವತಿ ನದಿ ಪೂರ್ವದಿಂದ ದಕ್ಷಿಣಕ್ಕೆ ವಯ್ಯಾರದಿಂದ ಹರಿವ ಮನಮೋಹಕ ದೃಶ್ಯ ಕಾಣ ಬಹುದು .ಇದು ರೈಲ್ವೇ ಹಳಿಗೆ ಕೆಲ ದೂರ ಸಮಾಂತರ ಇದ್ದು ,ರೈಲು ಸ್ಟೇಷನ್ ನಿಂದ ನಿಧಾನ ಹೊರಟಾಗ ತಾ ಮುಂದು ತಾ ಮುಂದು ಎಂದು ರೈಲು ಮತ್ತು ನದಿ ಹರಿವು ಪೈಪೋಟಿ ಮಾಡಿದಂತೆ ಕಾಣುವುದು .
ನನ್ನ ವಸತಿ ಗೃಹ ಕೂಡ ಎತ್ತರದಲ್ಲಿ ಇದ್ದು ನದೀ ದರ್ಶನ ಆಗುತ್ತಿತ್ತು .ಸಕಲೇಶ ಪುರದಲ್ಲಿ ಶ್ರೀ ರೋಹಿಡೇಕರ್ ಇಂಜಿನೀರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದು ನನಗೆ ಒಳ್ಳೆಯ ಸ್ನೇಹಿತರಾದರು .ನನ್ನ ಪಕ್ಕದ ಮನೆಯಲ್ಲಿ ರಾಜಗೋಪಾಲ ಎಂಬ ಗೃಹಸ್ಥ ರು ಕುಟುಂಬ ಸಮೇತ ಇದ್ದರು .ಅವರು ಪರ್ಮನೆಂಟ್ ವೇ (ರೈಲು ಹಳಿ )ನಿರೀಕ್ಷಕರು .ನನ್ನ ಹಿತೈಷಿಗಳಾದರು .ಅರೋಗ್ಯ ಕೇಂದ್ರದಲ್ಲಿ ಆನಂದ ಮೇಲಾಡಿ ಫಾರ್ಮಾಸಿಸ್ಟ್ ಆಗಿದ್ದು ಪ್ರಾಮಾಣಿಕರು ಮತ್ತು ನ್ಯಾಯ ನಿಷ್ಟುರರು .ಅರೋಗ್ಯ ನಿರಿಕ್ಷಕರಾಗಿ ತಮಿಳ್ನಾಡಿನ ಯುವಕ ಮುರುಗೇಶನ್ ಎಂಬವರು ಸಹಾಯಕ್ಕೆ ಇದ್ದು ಎಳೆಯ ಹುಡುಗನಾದರೂ ಕಾರ್ಯ ಕ್ಷಮತೆ ಯುಳ್ಳವರು .ಆಸ್ಪತ್ರೆಯಲ್ಲಿ ಪಾಂಡುರಂಗ ಎಂಬ ಅನುಭವಿ ಡ್ರೆಸ್ಸೆರ್ ಇದ್ದರು .
ನನ್ನ ಸಾಮ್ರಾಜ್ಯ ಹಾಸನದಿಂದ ನೆಟ್ಟಣ (ಸುಬ್ರಹ್ಮಣ್ಯ ರೋಡ್ )ವರೆಗೆ ಇತ್ತು .ವಾರದಲ್ಲಿ ಒಂದು ದಿನ ನೆಟ್ಟಣಕ್ಕೆ ಸವಾರಿ . ದಾರಿಯ ನಿಲ್ದಾಣದಲ್ಲಿ ನೌಕರರು ಮತ್ತು ಕುಟುಂಬ ರೈಲಿನೊಳಗೆ ಬಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದು ಕೊಳ್ಳುವರು .ನೆಟ್ಟಣದಲ್ಲಿ ಒಂದು ಸಣ್ಣ ಮೆಡಿಕಲ್ ಔಟ್ ಪೋಸ್ಟ್ ಇದೆ .ಅಲ್ಲಿಯೂ ನಮ್ಮ ಸೇವೆ ನಡೆಯುವುದು .ಈ ವಿಭಾಗ ಕಾಡಿನ ನಡುವೆ ಸೇತುವೆ ಮತ್ತು ಸುರಂಗ ಗಳಿಂದ ಕೂಡಿ ನಯನ ಮನೋಹರ.
ಸಕಲೇಶ ಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವೆ ದೋಣಿಗಲ್ ,ಎಡಕುಮೇರಿ ಮತ್ತು ಸಿರಿಬಾಗಿಲು ನಿಲ್ದಾಣಗಳು ಇವೆ .ಇವುಗಳ ಪೈಕಿ ಎಡ ಕುಮೇರಿ ಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ .ಇಲ್ಲಿ ನೌಕರರಿಗೆ ಏನಾದರೂ ಹಠಾತ್ ಕಾಯಿಲೆ ಆದರೆ ಟ್ರಾಲಿ ಅಥವಾಲೈಟ್ ಎಂಜಿನ್ (ಬೋಗಿಗಳಿಲ್ಲದ ಬರೀ ಎಂಜಿನ್ ಗೆ ರೈಲ್ವೆ ಭಾಷೆಯಲ್ಲಿ ಲೈಟ್ ಎಂಜಿನ್ ಎನ್ನುವರು ಅದು ಬಾರೀ ಭಾರದ ಸಾಧನ ಆದರೂ )ಮೂಲಕ ಹೋಗುವ ವ್ಯವಸ್ಥೆ ಇದ್ದಿತು .ಈ ವಿಭಾಗದಲ್ಲಿ ಹಲವು ದುರ್ಗಮ ಸೇತುವೆಗಳು ಇದ್ದ ಕಾರಣ ಸೇತುವೆ ನಿರೀಕ್ಷಕರ ಹುದ್ದೆ ಇತ್ತು .ಕೇರಳದ ಕೋಯಾ ಎಂಬುವರು ಆ ಹುದ್ದೆಯಲ್ಲಿ ಇದ್ದು ಅವರ ಮಾಪಿಳ್ಳೆ ಖಲಾಸಿಗಳು ಶೂರರು ಮತ್ತು ಸಾಹಸ ಕುಶಲ ಕಾರ್ಯ ಪ್ರವೀಣರು .ಅವರ ಬಳಿ ಮತ್ತು ಪರ್ಮನೆಂಟ್ ವೆ ಇನ್ಸ್ಪೆಕ್ಟರ್ ಬಳಿ ಟ್ರಾಲಿ ಗಳು ಇದ್ದವು .ಅದರಲ್ಲಿ ತಳ್ಳು ಟ್ರಾಲಿ ಮತ್ತು ಮೋಟಾರ್ ಟ್ರಾಲಿ ಎಂದು ಎರಡು ವಿಧ .ನಡೆಸಲು ಟ್ರಾಲಿ ಮೆನ್ ಎಂಬ ನೌಕರರು .ನಾನು ರೈಲ್ವೆ ಸೇವಕ ನಾದ್ದರಿಂದ ಸುಂದರ ಘಾಟಿ ಪ್ರದೇಶದಲ್ಲಿ ತೆರದ ಗಾಡಿಯಲ್ಲಿ ರೈಲು ಹಳಿಗಳ ಮೇಲೆ ಸಂಚರಿಸುವ ಭಾಗ್ಯ ದೊರಕಿತು .ಇದರಲ್ಲಿ ಹೋಗಲು ರೈಲು ಗಳಂತೆ ಸ್ಟೇಷನ್ ಮಾಸ್ಟರ್ ರಿಂದ ಸಿಗ್ನಲ್ ಪಡೆದೇ ಹೋಗುತ್ತಿದ್ದೆವು .
ಮಂಗಳೂರಿನಿಂದ ಬೆಂಗಳೂರಿಗೆ ಹಾಸನ ಅರಸೀಕೆರೆ ಮೂಲಕ ಪ್ರಯಾಣಿಕ ರೈಲು ಮಧ್ಯಾಹ್ನ ಒಂದು ಗಂಟೆಗೆ ಹೊರಟು ರಾತ್ರಿ ೭ ಗಂಟೆ ಸುಮಾರಿಗೆ ಸಕಲೇಶಪುರ ತಲುಪುತ್ತಲಿತ್ತು .ಘಾಟಿ ಪ್ರದೇಶ ದಲ್ಲಿ ಸುರಕ್ಷಾ ದೃಷ್ಟಿ ಯಿಂದ ಹಗಲೇ ರೈಲು ಸಂಚರಿಸ ಬೇಕಿತ್ತು .ಮುಂದೆ ಅದನ್ನು ಬದಲಾಯಿಸಿದರೆನ್ನಿ .ಈ ಸೆಕ್ಷನ್ ಒಂದು ಪ್ರವಾಸಿ ಆಕರ್ಷಣೆಯ ಮಾರ್ಗ ಆಗಿದ್ದು ಬಹಳ ಪ್ರಯಾಣಿಕರು ಅದರ ಆನಂದ ಪಡೆಯಲೆಂದೇ ಬರುತ್ತಿದ್ದರು .ನನ್ನ ಬಂಧು ಮಿತ್ರರೂ ಹಲವರು ನನ್ನ ಇರುವಿಕೆಯ ಪ್ರಯೋಜನ ಪಡೆದರು .ಬೆಂಗಳೂರಿನಿಂದ ಮಂಗಳೂರಿಗೆ ಬರುವ ಟ್ರೈನ್ ಬೆಳಿಗ್ಗೆ ಎಡಕುಮೆರಿಯಲ್ಲಿ ತಿಂಡಿ ಕಾಫಿ ಗೆ ನಿಲ್ಲುತ್ತಿತ್ತು .ಅಲ್ಲಿ ಒಬ್ಬ ಮಲಯಾಳಿ ಕಾಂಟೀನ್ ನಡೆಸುತ್ತಿದ್ದು ಅಲ್ಲಿಯ ದೋಸೆ ಬಹಳ ಜನಪ್ರಿಯ ಆಗಿತ್ತು ..ಮಂಗಳೂರಿಂದ ಬರುವ ರೈಲು ಸಾಯಂಕಾಲ ಟೀ ,ಉಪಹಾರಕ್ಕೆ ಇಲ್ಲೇ ನಿಲ್ಲುತ್ತಿತ್ತು .ಸುಮಾರು ಇಪ್ಪತ್ತು ನಿಮಿಷದ ನಿಲುಗಡೆ ಇದ್ದು ಆರಾಮವಾಗಿ ನಿಸರ್ಗ ಸೌದರ್ಯ ಸವಿಯುತ್ತಿದ್ದರು .ಮುಂದೆ ರಾತ್ರಿ ರೈಲು ಶುರುವಾಗಿ ಈ ನಿಲ್ದಾಣದ ಪ್ರಾಮುಖ್ಯತೆ ಕಡಿಮೆ ಆಯಿತು .
ಟ್ರಾಲಿ ಮತ್ತು ಲೈಟ್ ಎಂಜಿನ್
ಅರೋಗ್ಯ ಕೇಂದ್ರದಲ್ಲಿ ದಿನಕ್ಕೆ ಸರಾಸರಿ ಇಪ್ಪತ್ತು ರೋಗಿಗಳು ಬರುತ್ತಿದ್ದು ,ಸಮಯ ಕಳೆಯುವುದು ಕಷ್ಟ ಆಗಿತ್ತು .ಗ್ರಂಥ ಭಂಡಾರದಿಂದ ಪುಸ್ತಕ ತಂದು ಓದುತ್ತಿದ್ದೆನು ..ಹಾಸನ ಮಂಗಳೂರು ನಿರ್ಮಾಣ ಕಾಲದಲ್ಲಿ ಸಕಲೇಶಪುರ ಭಾರೀ ಚಟುವಟಿಕೆ ಯಿಂದ ಕೂಡಿದ ಕೇಂದ್ರ ಆಗಿತ್ತು .ಅವರು ಬಿಟ್ಟು ಹೋದ ವಾಚನಾಲಯದಲ್ಲಿ ಒಳ್ಳೆಯ ಪುಸ್ತಕಗಳು ಇದ್ದವು .ಅವನ್ನು ಮತ್ತು ಕೆಲವು ಒಳಾಂಗಣ ಕ್ರೀಡೆಗಳನ್ನು ಸೇರಿಸಿ ಒಂದು ಕ್ಲಬ್ ಆರಂಭಿಸಿದೆವು .
ರೈಲ್ವೆ ನಿಲ್ದಾಣ ದಿಂದ ನಗರಕ್ಕೆ ಹೋಗುವ ರಸ್ತೆ ಬದಿ ತುಂಬಾ ಲಂಟಾನ ಬೆಳೆದು ಸರೀಸೃಪಗಳಿಗೆ ಆಶ್ರಯ ತಾಣ ಆಗಿತ್ತು .ನಮ್ಮ ಇಲಾಖೆಯ ನೌಕರರ ಸಹಾಯದಿಂದ ಅದನ್ನು ಕಿತ್ತು ಸ್ವಚ್ಛ ಮಾಡಿದೆವು ,ಈ ಕೆಲಸದಲ್ಲಿ ನಾನೂ ನನ್ನ ಅರೋಗ್ಯ ನಿರೀಕ್ಷಕರೂ ಸ್ವಯಂ ಭಾಗಿಗಳಾಗುತ್ತಿದ್ದೆವು .ನೆಟ್ಟಣ ಅರಣ್ಯ ಇಲಾಖೆಯ ನರ್ಸರಿಯಿಂದ ಉಚಿತವಾಗಿ ಸಸಿಗಳನ್ನು ನೆಟ್ಟು ಆರೈಕೆ ಮಾಡಿದೆವು .ಅವೇ ಇಂದು ಮರಗಳಾಗಿ ದಾರಿ ಹೋಕರಿಗೆ ನೆರಳು ನೀಡುತ್ತಿವೆ .
ಈ ಮರಗಳನ್ನು ನೋಡುವಾಗ ನಮ್ಮ ಮನ ಸಾರ್ಥಕತೆ ಯಿಂದ ಮೆರೆಯುವುದು,.
ಒಂದು ಘಟನೆ ನೆನಪಿಗೆ ಬರುತ್ತಿದೆ .ರೈಲ್ವೆ ಹಳಿ ಕಾಯಲು ಹಗಲು ರಾತ್ರಿ ಗ್ಯಾಂಗ್ ಮೆನ್ ಹಳಿಯುದ್ದಕ್ಕೂ ನಡೆದು ಹೋಗುವರು .ಅವರ ಕೈಯಲ್ಲಿ ಒಂದು ಪೀಪಿ ,ಮತ್ತು ಬೋಲ್ಟ್ ನಟ್ ಟೈಟ್ ಮಾಡುವ ಉದ್ದದ ಸ್ಪಾನರ್ ಇರುತ್ತದೆ .ಒಂದು ಸಂಜೆ ಗೂಡ್ಸ್ ರೈಲೊಂದು ಇಂತಹ ನೌಕರನ ಮೇಲೆ ಹಾದು ಹೋಯಿತು ,ಸೇತುವೆ ಪಕ್ಕದ ಸುರಂಗ .ಅವನ ದೇಹ ಛಿದ್ರ ಛಿದ್ರ ಆಗಿ ಅಲ್ಲೇ ಮೃತ ಪಟ್ಟನು .ರಾತ್ರಿ ಮಂಗಳೂರಿನಿಂದ ಬರುವ ಪ್ರಯಾಣಿಕರ ಗಾಡಿಯನ್ನು ನೌಕರರು ನಿಲ್ಲಿಸಿದರು .ನಾವು ಕೂಡಲೇ ಲೈಟ್ ಎಂಜಿನ್ ನಲ್ಲಿ ಸ್ಥಳಕ್ಕೆ ಧಾವಿಸಿದೆವು .ನನಗೆ ಇಂತಹ ಸಂದರ್ಭ ಏನು ಮಾಡ ಬೇಕು ಎಂದು ತಿಳಿದಿರಲಿಲ್ಲ .ಮೇಲಿನವರಲ್ಲಿ ಕೇಳಲು ಫೋನ್ ಇಲ್ಲ .ರೈಲ್ವೆ ತಂತಿಗೆ ಸಿಕ್ಕಿಸಿ ಫೋನ್ ಕನೆಕ್ಟ್ ಮಾಡಿದರೂ ಸ್ಪಷ್ಟ ಇಲ್ಲ .ಕೊನೆಗೆ ನಾನೇ ಬಂಡು ಧೈರ್ಯದಲ್ಲಿ ಮೃತ ದೇಹವನ್ನು ಗೌರವ ಪೂರ್ವಕ ಬದಿಗೆ ಸ್ಟ್ರೆಚರ್ ನಲ್ಲಿ ಇಟ್ಟು ಪ್ರಯಾಣಿಕ ರೈಲು ಹೋಗಲು ಅನುವು ಮಾಡಿದೆನು .ಬಾಡಿ ಸಕಲೇಶಪುರಕ್ಕೆ ಸಾಗಿಸಿ ಪೋಸ್ಟ್ ಮಾರ್ಟಮ್ ಮಾಡಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು ..ಆಮೇಲೆ ಪೋಲಿಸಿನವರು ಘಟನೆ ನಡೆದ ಸ್ಟಳ ದಕ್ಷಿಣ ಕನ್ನಡವೋ ಹಾಸನ ಜಿಲ್ಲೆಯೋ ಎಂಬ ತಮ್ಮ ಕನ್ಫ್ಯೂಶನ್ ತೀರಿಸಲು ಕೆಲವು ಸಮಯ ತೆಗೆದು ಕೊಂಡು ನನ್ನ ಹೇಳಿಕೆ ತೆಗೆದುಕೊಂಡರು .ಸ್ಥಳ ಮಹಜರು ಮಾಡಬೇಕಿತ್ತು ಎಂದು ನನ್ನ ಲೋಪ ತೋರಿಸಿದರು .ರೈಲ್ವೆ ಯಲ್ಲಿ ಇಂತಹ ಘಟನೆ ಸಂಭವಿಸಿದಾಗ ಒಂದು ವಿಭಾಗೀಯ ತನಿಖೆ ನಡೆದು ಯಾರದ್ದಾದರೂ ತಲೆಗೆ ಜವಾಬ್ದಾರಿ ಹೊರಿಸುವುದು ಪದ್ಧತಿ ಅದೂ ನಡೆದು ನನ್ನ ಸಮಯ ಪ್ರಜ್ಞೆಗೆ ಪ್ರಶಂಸೆ ದೊರೆಯಿತು ..
ರೈಲ್ವೆಯಲ್ಲಿ ನಿರ್ಮಾಣ ಕಾಲದಲ್ಲಿ ಇದ್ದ ಕೆಲವು ಅಧಿಕಾರಿಗಳು ಮುಂದೆಯೂ ಅಲ್ಲಿಯೇ ಮುಂದುವರಿದಿದ್ದರು .ಹೆಚ್ಚಿನವರು ಮಲಯಾಳಿಗಳು .ಅವರ ಪೈಕಿ ಕೋಯಾ ಅವರ ಬಗ್ಗೆ ಆಗಲೇ ಸೂಚಿಸಿದ್ದೇನೆ ,ಅವರ ಬಳಿ ಕೆಲ ದಿನ ಅರೇಬಿಕ್ ಭಾಷೆ ಕಲಿತೆ .ಇನ್ನು ವಕ್ಸ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ A ಕುಟ್ಟಿ ಮತ್ತು B ಕುಟ್ಟಿ ಎಂಬ ಇಬ್ಬರು ಇದ್ದರು .ರೈಲ್ವೆ ಕಟ್ಟಡಗಳ ನಿರ್ವಹಣೆ ಅವರ ಜವಾಬ್ದಾರಿ .ಇವರು ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಮೇಲಧಿಕಾರಿಗಳು ಇನ್ಸ್ಪೆಕ್ಷನ್ ಗೆ ಬರುವಾಗ ಅವರವರ ಭಾವಕ್ಕೆ ಅನುಗುಣವಾಗಿ ಪೂಜೆಗೆ ತುಳಸಿ ,ಹಾಲಿನಿಂದ ಹಿಡಿದು ,ರಾತ್ರಿ ಊಟಕ್ಕೆ ಬೇಕಾದ ಆಲ್ಕೋಹಾಲ್ ವರೆಗೆ ತಮ್ಮದೇ ಖರ್ಚಿನಲ್ಲಿ ಕಡಿಮೆ ಸಮಯದ ಸೂಚನೆಯಲ್ಲಿ ಏರ್ಪಾಡು ಮಾಡುತ್ತಿದ್ದರು .(Addtional Works Inspector ಗೆ ಅಪರ ಕರ್ಮ ನಿರೀಕ್ಷಕ ರೆಂದು ಕರೆಯ ಬಹುದೋ ?).A ಕುಟ್ಟಿ ಸ್ನೇಹ ಪರ ವ್ಯಕ್ತಿ ,ನನಗೆ ವಾಚನಾಲಯ ಕ್ಲಬ್ ಮಾಡಲು ತುಂಬಾ ಸಹಕರಿಸಿದರು .ಅವರ ಅಂತ್ಯ ಒಂದು ದುರಂತವಾದುದು ಖೇದಕರ
ಅರೋಗ್ಯ ಕೇಂದ್ರದಲ್ಲಿ ಅನಾರೋಗ್ಯ ಇರುವವರಿಗೆ ಚಿಕಿತ್ಸೆ ಮಾಡುವುದರೊಂದಿಗೆ ಹಲವು ನೌಕರರು ರಜೆಗೆ ಬೇಕಾಗಿ ಸಿಕ್ ಆಗಿ ಬರುತ್ತಿದ್ದ್ದವರನ್ನು ನೋಡಬೇಕು .ಅಗತ್ಯ ಕೆಲಸಗಳಿಗೆ ತಮ್ಮ ವಿಭಾಗದ ಮುಖ್ಯಸ್ಥರು ರಜೆ ನಿರಾಕರಿಸಿದರೆ ನಮ್ಮ ಬಳಿಗೆ ಬಂದು ದುಂಬಾಲು ಬೀಳುವರು .ಕೆಲವರಿಗಇದುವೇ ಚಾಳಿ .ಇನ್ನು ಕೆಲವೊಮ್ಮೆ ಮೇಲಿನ ಅಧಿಕಾರಿಗಳು ತಮ್ಮ ಜವಾಬ್ದಾರಿ ತಪ್ಪಿಸಲು ರಜೆ ಕೊಡಲು ಆಗುವುದಿಲ್ಲ ಬೇಕಾದರೆ ಸಿಕ್ ಲೀವ್ ತೆಗೊ ಎಂದು ನನ್ನಲ್ಲಿಗೆ ಮೆಮೊ ಕೊಟ್ಟು ರವಾನಿಸುವರು .ಇವರನ್ನು ಕಂಡಾಗ ನನಗೆ ನಮ್ಮ ದೇಶದಲ್ಲಿ ಖಾಯಂ ಕೆಲಸ ಇಲ್ಲದೆ ದುಡಿಯುವ ಕೋಟ್ಯಂತರ ಪ್ರಜೆಗಳ ಚಿತ್ರ ಬರುವುದು .ಹೆಚ್ಚಾಗಿ ನಾನು ಈ ವಿಷಯದಲ್ಲಿ ಕಟ್ಟು ನಿಟ್ಟು .ಕೆಲವು ಅಸಂತುಷ್ಟ ನೌಕರರು ಯೂನಿಯನ್ ಮೊರೆ ಹೋಗಿ ನನ್ನ ಮೇಲೆ ಪ್ರಭಾವ ಬೀರುವರು .
ರೈಲ್ವೆ ಗೆ ತನ್ನದೇ ಆದ ದೂರವಾಣಿ ಜಾಲ ಇದೆ .ಸ್ಟೇಷನ್ ಮಾಸ್ಟರ್ ಮೈಸೂರಿನ ವಿಭಾಗೀಯ ಕಂಟ್ರೋಲ್ ರೂಮ್ ಮೂಲಕ ಸಂಪರ್ಕ ಇದೆ .ಅಲ್ಲಿಂದ ಸಂದೇಶಗಳು ಸ್ಟೇಷನ್ ಮೂಲಕ ನಮಗೆ ಬರುವವು .ಇನ್ನು ನಮ್ಮ ಅಧಿಕಾರಿಕ ಟಪ್ಪಾಲು ಫ್ರೀ ಸರ್ವಿಸ್ (ಎಫ್ ಎಸ್ )ಮೂಲಕ ಟ್ರೈನಿನಲ್ಲಿ ಹೋಗುವವು .ತಿಂಗಳು ತಿಂಗಳು ಹಾಜರಿ ಪಟ್ಟಿ ಮಾತ್ರ ಓರ್ವ ನೌಕರನ ಮೂಲಕ ಮೈಸೂರಿಗೆ ಹೋಗುವುದು .ಸಕಲೇಶಪುರದಿಂದ ಮೈಸೂರಿಗೆ ನೇರ ರೈಲು ಸಂಚಾರ ಇರಲಿಲ್ಲ .ಆದ ಕಾರಣ ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರು ಗಾಡಿ ಹಿಡಿಯಬೇಕು .ಇದರಿಂದ ನಮ್ಮ ಓಲೇಕಾರನಿಗೆ ಹೋಗಿ ಬರಲು ಮೂರು ದಿನ ಬೇಕಾಗುತ್ತಿತ್ತು .ಮೂರು ದಿನದ ಕೆಲಸ ಮತ್ತು ಟಿ ಎ ಡಿ ಎ ಸೇರಿ ನೂರಾರು ರೂಪಾಯೀ ಖರ್ಚು .ಅದಕ್ಕೆ ನಾನು ಒಂದು ಉಪಾಯ ಮಾಡಿ ಹಾಜರಿಯನ್ನು ಸರ್ವಿಸ್ ಸ್ಟ್ಯಾಂಪ್ ಹಾಲಿ ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸ ತೊಡಗಿದೆನು ಇದರ ವೆಚ್ಚ ಇಪ್ಪತ್ತು ರೂಪಾಯಿ .ನಮ್ಮ ಅಧಿಕಾರ ಶಾಹಿ ಹೇಗೆ ಇದೆಯೆಂದರೆ ಸರ್ವಿಸ್ ಸ್ಟ್ಯಾಂಪ್ ಮರು ಪೂರಣಕ್ಕೆ ಕೇಳಿದಾಗ ಇಷ್ಟು ದಿನ ಸ್ಟ್ಯಾಂಪ್ ಗೆ ಇಲ್ಲದ ಬೇಡಿಕೆ ಈಗ ಯಾಕೆ ಎಂಬ ಮೆಮೊ ಬಂತು .ಅದಕ್ಕೆ ಸಕಾರಣ ಉತ್ತರ ಕೊಟ್ಟೆ . ನಮಗೆ ಅನ್ನ ಹಾಕುವ ಸಂಸ್ಥೆ ಮತ್ತು ಅದನ್ನು ಸಾಕುವ ಜನತೆಯ ಶ್ರೇಯ ಬಯಸುವಾಗ ಪಟ್ಟ ಭದ್ರರು ಮತ್ತು ಯಥಾ ಸ್ಥಿತಿ ವಾದಿಗಳ ಕಿರಿ ಕಿರಿ ಅನುಭವಿಸ ಬೇಕಾಗುತ್ತದೆ .
ನಮ್ಮ ವಿಭಾಗದಲ್ಲಿ ಸುಮಾರು ೧೫ -೨೦ ನೌಕರರು ಇದ್ದರು ನಾನು ಸೇರಿ ಎಲ್ಲರಿಗೂ ಸಂಬಳ ನಗದು ಆಗಿ ಕೊಡುತ್ತಿದ್ದರು ,ಸಂಬಳದ ದಿನ ಮೈಸೂರಿನಿಂದ ಕ್ಯಾಶಿಯರ್ ಬಂದು ಬಟವಾಡೆ ಮಾಡುವರು .ನಗದು ಸಿಕ್ಕಿದ ಹಣ ಖಾಲಿಯಾಗುವುದು ಬೇಗ .ಅದಕ್ಕೆ ನಾನು ನಮ್ಮ ಸಿಬ್ಬಂದಿ ಗಳಿಗೆ ಖಡ್ಡಾಯ ಪೋಸ್ಟ್ ಆಫೀಸ್ ಉಳಿತಾಯ ಖಾತೆ ತೆರೆಸಿ ಅದರಲ್ಲಿ ಸಂಬಳವನ್ನು ಹಾಕಲು ತಾಕೀತು ಮಾಡಿದೆನು .ಖಾತೆ ತೆರೆಯಲು ಬೇಕಾದ ರೂಪಾಯಿ ಹತ್ತು ನಾನೇ ಪಾವತಿ ಮಾಡಿದೆನು .ಇದು ಭಾಗಷ ಯಶಸ್ವೀ ಆಯಿತು .
ಸಕಲೇಶ ಪುರದಲ್ಲಿ ಇರುವಾಗಲೇ ನಾನು ನನ್ನ ಸ್ಟೀಲ್ ಅಲ್ಮೇರಾ ಕೊಂಡದ್ದು .ಮುಖ್ಯವಾಗಿ ನನ್ನ ಪುಸ್ತಕಗಳನ್ನು ಇಡಲೆಂದು ಪುತ್ತೂರಿನ ಸೋಜ ರ ಅಂಗಡಿಯಿಂದ ಕೊಂಡ ಈ ಕಪಾಟು ಈಗಲೂ ಗಟ್ಟಿ ಮುಟ್ಟಾಗಿ ಸೇವೆ ಸಲ್ಲಿಸುತ್ತಿದೆ
ಸಕಲೇಶಪುರ ಹಳೇ ಬಸ್ ನಿಲ್ದಾಣದ ಬಳಿ ಪುತ್ತೂರಿನ ಪ್ರಸಿದ್ಧ ವೈದ್ಯರಾಗಿದ್ದ ಡಾ ಪಿ ಎಸ ಭಟ್ ಅವರ ಮಗಳು ಡಾ ಲೀಲಾವತಿ ಮತ್ತು ಅಳಿಯ ಡಾ ಜನಾರ್ಧನ ಶ್ರೀನಿವಾಸ ನರ್ಸಿಂಗ್ ಹೋಂ ನಡೆಸುತ್ತಿದ್ದು ತೀವ್ರತರ ರೋಗಿಗಳನ್ನು ಅಲ್ಲಿಗೆ ಕಳುಹಿಸುತ್ತಿದ್ದೆನು .ಅವರ ಮಗ ಡಾ ಅಲೋಕ್ ಮುಂದೆ ಕ್ಷೇಮಾ ದಲ್ಲಿ ನನ್ನ ವಿದ್ಯಾರ್ಥಿ ಆಗಿದ್ದನು .
ಒಂದು ದಿನ ಪಕ್ಕದ ಪ್ರಸಿದ್ಧ ಹಾರ್ಲೆ ಎಸ್ಟೇಟ್ ನ ಗಣಪಯ್ಯ ನವರು ತಮ್ಮ ತೋಟದ ವಾರ್ಷಿಕೋತ್ಸವ ಇದೆ ,ನೀವು ಬರ ಬೇಕು ಎಂದು ಹೇಳಿ ಕಳುಹಿಸದರು .ಸಂಜೆ ಕಾರ್ಯಕ್ರಮ .ಹೋಗಲು ನನ್ನ ಬಳಿ ವಾಹನ ಇರಲಿಲ್ಲ .ಇಲಾಖೆ ಜೀಪ್ ಕಾರ್ಯ ನಿಮಿತ್ತ ಎಲ್ಲೋ ಹೋಗಿತ್ತು .ನನ್ನ ಕಷ್ಟ ನೋಡಿ ರಾಜಗೋಪಾಲ್ ತಮ್ಮ ಲಾರಿ ಕೊಡುಗೆ ಮಾಡಿದರು .ಹಾಗೆ ಲಾರಿಯಲ್ಲಿ ಅಲ್ಲಿ ಹೋಗಿ ಸ್ವಲ್ಪ ದೂರ ನಿಲ್ಲಿಸಿ ನಡೆದು ಹೋದೆನು .ಆ ದಿನ ಮಾಜಿ ಕೇಂದ್ರ ಸಚಿವ ಸಿ ಎಂ ಪೂಣಚ್ಚ ಮುಖ್ಯ ಅತಿಥಿಯಾಗಿ ಬಂದಿದ್ದರು .ಎಸ್ಟೇಟ್ ಡೇ ಯಲ್ಲಿ ನೌಕರರ ನಾಟಕ ಇತ್ಯಾದಿ ಮನೋರಂಜನಾ ಕಾರ್ಯಕ್ರಮ ಇದ್ದು ಅವರ ಸಂತೋಷ ಉತ್ಸಾಹ ದಲ್ಲಿ ಪಾಲುಗೊಳ್ಳುವ ಅವಕಾಶ ಸಿಕ್ಕಿತು .ಗಣಪಯ್ಯ ಮತ್ತು ಅವರ ಮಗ ನನ್ನನು ಪ್ರೀತಿಯಿಂದ ಉಪಚರಿಸಿದರು.
ಹೀಗೆ ವರುಷ ಕಳೆಯುವಾಗ ಇನ್ನೊಂದು ವರ್ಗಾವಣೆ ಕಾದಿತ್ತು