ಬೆಂಬಲಿಗರು

ಭಾನುವಾರ, ಅಕ್ಟೋಬರ್ 4, 2020

ಕಳಚಿದ ಮಹಾ ಜ್ನಾನ ವೃಕ್ಷ

                                     

 

                                                        


ಕಳೆದ ವಾರ ನನ್ನ ಪ್ರಾಥಮಿಕ ಶಾಲೆಯ ಅಧ್ಯಾಪಕರ ಬಗ್ಗೆ ಬರೆದಿದ್ದೆ .ಇಂದು ನನ್ನ ವೈದ್ಯ ಶಾಸ್ತ್ರದ  ಮಹಾಗುರು  ಡಾ ತಿರುವೆಂಗಡನ್ ಅವರ ಬಗ್ಗೆ ಬರೆಯ ಬೇಕಾಗಿದೆ .ನಿನ್ನೆ ತಾನೇ ಅವರು  ತೀರಿ ಕೊಂಡ ವಾರ್ತೆ ಬಂದಿದೆ .ಅವರ ಬಗ್ಗೆ ಬಹಳ ಹಿಂದೆ  ಇಂಗ್ಲೀಷ್ ನಲ್ಲಿ ಒಂದು ಬ್ಲಾಗ್ ಬರೆದಿದ್ದೆ .

ಇವರು  ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ  ವೈದ್ಯ ಶಾಸ್ತ್ರ  ಪ್ರಾಧ್ಯಾಪಕ ರಾಗಿ  ಬಹಳ ಪ್ರಸಿದ್ದ ರಾಗಿ  ಒಂದು ದಂತ ಕಥೆಯೇ ಆಗಿದ್ದರು .ಅವರ  ಬೆಡ್ ಸೈಡ್  ಪಾಟ ಗಳಿಗೆ  ವಿದ್ಯಾರ್ಥಿಗಳು  ಇರುವೆ ಗಳಂತೆ  ಮುತ್ತುತ್ತಿದ್ದರು .ರೋಗಿಯ  ಸಮಸ್ಯೆ ಗಳ  ವಿವರ ಶೇಖರಿಸುತ್ತಿದ್ದ  ವಿಧಾನ  ,ಕ್ರಮ ಬದ್ದವಾಗಿ  ರೋಗಿಯನ್ನು  ಪರೀಕ್ಷೆ  ಮಾಡುತ್ತಿದ್ದ ಪರಿ  ಬಹಳ ಪ್ರಸಿದ್ದ ಆಗಿತ್ತು .ರೋಗದ ಇತಿಹಾಸ ಮತ್ತು ಪರೀಕ್ಷೆ ಯಲ್ಲಿಯೇ  ಬಹುತೇಕ  ಡಯಾಗ್ನೋಸಿಸ್ ಮಾಡುತ್ತಿದ್ದರು. ಸದ್ಯ ಅಮೆರಿಕದಲ್ಲಿ ಇರುವ ಖ್ಯಾತ ಲೇಖಕ ವೈದ್ಯ ಅಬ್ರಹಾಂ ವರ್ಗೀಸ್ ಸೇರಿ  ಚೆನ್ನೈ ನ  ಮತ್ತು ದಕ್ಷಿಣ ಭಾರತದ  ಘಟಾನುಘಟಿ  ವೈದ್ಯರು ಹಲವಾರು  ಅವರ ಶಿಷ್ಯರು ,ಅವರನ್ನು  ಪೊಫೆಸರ್  ರ  ಪ್ರೊಫೆಸರ್  ಎಂದು ಕರೆಯುತ್ತಿದ್ದರು .

  ಸರಕಾರಿ  ಸೇವೆಯಿಂದ ನಿವೃತ್ತಿ  ಆದಮೇಲೂ  ಅವರ  ಅಧ್ಯಾಪನ ಪ್ರೇಮ ಅವರನ್ನು ಬಿಡಲಿಲ್ಲ  .ರೈಲ್ವೇ ಆಸ್ಪತ್ರೆ ಪೆರಂಬೂರ್ ಮತ್ತು  ಕೆ ಜೆ ಆಸ್ಪತ್ರೆಯಲ್ಲಿ ಅವರು ವೈದ್ಯ ವಿದ್ಯಾರ್ಥಿಗಳಿಗೆ  ಯಾವುದೇ ಆರ್ಥಿಕ ಪ್ರತಿಫಲ ತೆಗೆದು ಕೊಳ್ಳದೆ ಪಾಠ ಮಾಡಲು ಬರುತ್ತಿದ್ದರು .ಅವರ ಮನೆ ಟಿ ನಗರ .ಪೆರಂಬೂರ್ ಮತ್ತೊಂದು ತುದಿ .ತಪ್ಪದೇ ಬರುವರು .ನಾನೂ ಅವರ ವಿದ್ಯಾರ್ಥಿ .ಮದ್ರಾಸ್ ನ  ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು  ಬರುತ್ತಿದ್ದರು .ಅವರದು ಮೆಲು  ದ್ವನಿ ,ಆದರೆ  ಸ್ಪಷ್ಟ .ಹಾಸ್ಯ ಪ್ರಜ್ನೆ ಯೂ ಇತ್ತು .ರೋಗಿಯೊಡನೆ  ವಿವರ ಸಂಗ್ರಹಿಸುವ ಪರಿ ಮತ್ತು  ಪರೀಕ್ಷಾ ವಿಧಾನ ಅವರದೇ ಛಾಪು .ನೆನಪು ಶಕ್ತಿ ಅಗಾಧ .ಈ ವಾರ ಚರ್ಚಿಸಿದ  ರೋಗಿಯ ಬಗ್ಗೆ ಮುಂದಿನ ವಾರ ರೋಗ ಸ್ಥಿತಿ ,ಎಕ್ಸ್ ರೇ ರಕ್ತ ಪರೀಕ್ಷೆ ,ಸ್ಕ್ಯಾನ್ ಫಲಿತಾಂಶ ಕೇಳುವರು .ತಮ್ಮ ಪೂರ್ವ ಭಾವೀ ರೋಗ ನಿಧಾನ ಸರಿಯೇ ಎಂದು ಖಚಿತ ಪಡಿಸುವರು .ಅದು ಬಹುತೇಕ ಸರಿ ಇರುತ್ತಿತ್ತು .ಇಲ್ಲದಿದ್ದರೆ  ಚಡಪಡಿಸುವರು ,ಯಾವುದು ತಮ್ಮ ಪರೀಕ್ಷೆಯಲ್ಲಿ ತಪ್ಪಿತು ಎಂದು ? 

 ಸದಾ ಅಧ್ಯಯನ ನಿರತರು .ಯಾವುದೋ ಒಂದು ವೈದ್ಯಕೀಯ ಲೇಖನ ಅಥವಾ ಹೊಸತಾಗಿ ಬಂದ  ಔಷಧಿ ಬಗ್ಗೆ  ನಮಗೆ ಓದಲು ಸೂಚಿಸುವರು ಮತ್ತು ಇನ್ನೊಂದು ದಿನ ಅದರ ಬಗ್ಗೆ ಚರ್ಚಿಸ ಹೇಳುವರು .

ರೋಗಿಯನ್ನು ಇಡಿಯಾಗಿ  ನೋಡಿರಿ ,ಬಿಡಿ ಬಿಡಿ ಯಾಗಿ ಅಲ್ಲ ಎನ್ನುವುದು ಅವರ ಉಪದೇಶ .ಎಂದರೆ ತಲೆ ನೋವು ಎಂದು ಬಂದವನ ಕಾಲು ಕೂಡ ಪರೀಕ್ಷಿಸದೆ ಬಿಡ ಬಾರದು .

ಅವರು ರಾಷ್ಟ್ರಪತಿ  ವೆಂಕಟರಾಮನ್ ಅವರ ಗೌರವ ವೈದ್ಯರಾಗಿ ಇದ್ದರು .ಪದ್ಮಶ್ರೀ , ಬಿಸಿ ರಾಯ್ ಅವಾರ್ಡ್  ವಿಜೇತರು .ಕ್ರಿಕೆಟ್ ಮತ್ತು ಶಾಸ್ಟ್ರೀಯ ಸಂಗೀತ ದಲ್ಲಿ  ಆಸಕ್ತಿ .

ನಾನು  ಅವರ ಜತೆ ಕೆಲವು ದಿನ ಕಾರಿನಲ್ಲಿ ಪಯಣಿಸಿದ್ದೇನೆ .ಆಗಲೂ ಅವರು ನಾವು ಚರ್ಚಿಸಿದ ರೋಗಿಯ ಬಗ್ಗೆಯೋ ಸಂಗೀತ ದ  ಬಗ್ಗೆಯೋ ವಿವರಿಸುವರು .ವಿನಮ್ರತೆ ಅವರಿಗೆ ಸಹಜ ವಾಗಿತ್ತು .

ಕಲಿಸುವುದು  ಕಲಿಯಲು ಅತ್ಯುತ್ತಮ ಮಾರ್ಗ ಎಂದು ಹೇಳುತ್ತಿದ್ದರು ,ಟೀಚಿಂಗ್ ಈಸ್ ಬೆಸ್ಟ್ ವೇ ಆಫ್ ಲರ್ನಿಂಗ್ .ನಮಗೆ ತಿಳಿದ ಹೊಸ ಜ್ನಾನವನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವಾಗ ನಾವು ಅರಿವಿಲ್ಲದೆಯೇ ನಮ್ಮ ಜ್ನಾನವನ್ನು ಹೆಚ್ಚ್ಕಿಸಿ ಕೊಳ್ಳುತ್ತೇವೆ '

 ನನಗೆ ಅವರಿಂದ ಒಂದು  ಸರ್ಟಿಫಿಕೇಟ್  ಬೇಕಿತ್ತು .ಅವರು ಒಂದು ಖಾಲಿ ಹಾಳೆಯಲ್ಲಿ ಬರೆದು ಕೊಡುವರು .ಅದನ್ನು  ನಮ್ಮ ಡಿಪಾರ್ಟ್ಮೆಂಟ್ ನ ಬಾಲು ಟೈಪ್ ಮಾಡಿ ಕೊಡುವರು .ಅದನ್ನು ಪುನಃ ಓದಿ ಕೆಲವು ತಿದ್ದು ಪಡಿ ಮಾಡುವರು.ಆಮೇಲೆ  ಅವರ  ಲೆಟರ್ ಹೆಡ್  ಕಾಗದ ದಲ್ಲಿ  ಟೈಪ್  ಮಾಡಿಸುವರು ಮತ್ತು ಸಹಿ ಹಾಕುವರು .ಅದನ್ನು  ಕೊಳ್ಳಲು ಅವರ ಮನೆಗೆ  ಹೋಗಿದ್ದೆ .ಸಣ್ಣವನಾದ ನನಗೆ ಕುಡಿಯಲು  ಜ್ಯೂಸ್ ಮಾಡಿಸಿ ಕೊಡಿಸಿ ಬಾಗಿಲ ವರೆಗೆ ಬಂದು ಬೀಳ್ಕೊಡುವರು .

ಪ್ರೊಫೆಸ್ಸರ್  ಕೆ ವಿ ಟಿ ಎಂದೇ  ಪ್ರಸಿದ್ದರಾದ ಅವರ ನೆಪಪಿಗೆ  ವಂದನೆಗಳು

 https://youtu.be/JhcRy-DImvM

 https://youtu.be/O2foCZT4vdQ

ಭಾನುವಾರ, ಸೆಪ್ಟೆಂಬರ್ 27, 2020

ಶಿಷ್ಯ ಪ್ರೀತಿ

 

ಮೇಲಿನ  ಚಿತ್ರ ನನ್ನ  ಪ್ರಾಥಮಿಕ ಶಾಲೆ ಅಧ್ಯಾಪಕರಾಗಿದ್ದ  ಶ್ರೀ ಜನಾರ್ಧನ ಶೆಟ್ಟಿ  ಅವರದು .ನಿನ್ನೆ ತಾನೇ  ದೈವಾಧೀನ ರಾದ  ಸುದ್ದಿ ಇಂದಿನ ಪತ್ರಿಕೆಯಲ್ಲಿ  ಬಂದಿದೆ .ನಮ್ಮ ಬಾಲ್ಯದಲ್ಲಿ  ಅಧ್ಯಾಪಕರು ಅನೇಕರು  ಹೊಟ್ಟೆ ಪಾಡಿಗಾಗಿ  ಈ ಕೆಲಸಕ್ಕೆ ಬಂದವರು .ಆದರೆ ಬಹುತೇಕ ಹೆಚ್ಚಿನವರು ಪ್ರಮಾಣಿಕರು .ಅಧ್ಯಯನ ಶೀಲರೂ

ವೃತ್ತಿಯನ್ನು  ಗಂಭೀರವಾಗಿ  ತೆಗೆದು ಕೊಂಡವರು ಬೆರಳೆಣಿಕೆ ಯಲ್ಲಿ ಇದ್ದರು.ಅವರ ಪೈಕಿ  ಜನಾರ್ಧನ ಶೆಟ್ಟಿ  ಮಾಸ್ಟ್ರು ಒಬ್ಬರು .ಇವರು  ಓದಿ ಬಂದು ಪಾಠ ಮಾಡುವರು .ಸುಶ್ರಾವ್ಯ ವಾಗಿ  ಕವನ ವಾಚನ  ಮಾಡುತ್ತಿದ್ದರು.ಒಂದು ಸಾರಿ  ಕ್ಲಾಸ್ ಪರೀಕ್ಷೆಯಲ್ಲಿ  ನನಗೆ  50 ರಲ್ಲಿ  48 ಅಂಕ ಬಂದಿತ್ತು .ಒಂದು ಉತ್ತರ ತಪ್ಪು ಎಂದು  2 ಮಾರ್ಕ್ ಕಳೆದಿದ್ದರು .ಆದರೆ ನಾನು ನೋಡಿದಾಗ  ನನ್ನ ಉತ್ತರ  ಸರಿಯಿತ್ತು ,ಅವರ ಮಾದರಿ ಉತ್ತರ ತಪ್ಪಾಗಿತ್ತು .ನಾನು ಅಧ್ಯಾಪಕರ ಕೊಠಡಿ ಗೆ  ಹೋಗಿ ಇದನ್ನು ಅವರ ಗಮನಕ್ಕೆ ತಂದೆ .ಅವರು ಅದನ್ನು ಪರಿಶೀಲಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡದ್ದಲ್ಲದೆ ಬಹಳ ಪ್ರೀತಿಯಿಂದ  ನನ್ನ ಕೈ ಹಿಡಿದು  ತನ್ನ ತಾಯಿಯ ಬಗ್ಗೆ ವಿಚಾರಿಸಿದರು .ತಾಯಿ ತಾನೇ ಮೊದಲ ಗುರು .

ನಾನು ವೈದ್ಯನಾಗಿ ಮಂಗಳೂರಿನ  ವೈದ್ಯಕೀಯ  ಕೋಲೇಜ್ ಒಂದರಲ್ಲಿ ಅಧ್ಯಾಪನ ವೃತ್ತಿ  ಕೈಗೊಂಡಿದ್ದೆ .ಒಂದು ದಿನ ಯಾವುದೋ ಕಾರ್ಯಕ್ರಮ ಕ್ಕೆ  ಹುಟ್ಟೂರಿಗೆ  ಹೋಗಿದ್ದವನು  ಕನ್ಯಾನ ಸಮೀಪ ಬಂದಿತಡ್ಕ  ರಸ್ತೆ ಬದಿಯಲ್ಲಿ  ವಾಸವಾಗಿದ್ದ  ಗುರುಗಳನ್ನು  ಕಂಡು ಬರೋಣ ಎಂದು ಮನೆಯ ಬಾಗಿಲು ತಟ್ಟಿದೆ .ಅವರು ಇರಲಿಲ್ಲ .ಅವರ ಮನೆಯವರು ನನ್ನನ್ನು ಪ್ರೀತಿಯಿಂದ  ಉಪಚರಿಸಿ ಕಳುಹಿಸಿದರು .

ಇದಾದ  ಕೆಲವು ದಿನಗಳಲ್ಲಿ  ವಯೋ ವೃದ್ದ ರಾದ  ಗುರುಗಳು  ಮಂಗಳೂರಿನ ನಮ್ಮ ಕೋಲೇಜ್ ಗೆ  ನನ್ನನ್ನು ಹುಡುಕಿ ಬಂದರು .ಕೈಯಲ್ಲಿ  ಒಂದು ಬಾಟಲ್ ಜೇನು ತುಪ್ಪ ಮತ್ತು  ಗೇರು ಬೀಜದ  ಕಟ್ಟು .ನಾನು ಅವರ ಮನೆಗೆ ಬಂದಾಗ ಅವರು ಇಲ್ಲದಿದ್ದುಕ್ಕೆ ತಾವೇ ನನ್ನನ್ನು ಹುಡುಕಿ ಕೊಂಡು ಬಂದುದಲ್ಲದೆ  ಕೈಯಲ್ಲಿ  ಉಡುಗೊರೆ .ನಾನು ಅವರಿಗೆ ನಮಸ್ಕರಿಸಿ  ,ಕುಶಲೋಪರಿ  ಮಾತನಾಡಿಸಿ  ಕಳುಹಿಸಿ ಕೊಟ್ಟೆ .ಎಂತಹ  ಶಿಷ್ಯ ಪ್ರೀತಿ ,ಎಂತಹ ಸಂಸ್ಕಾರ .ಆ ಮೇಲೆ ಒಂದೆರಡು ಬಾರಿ ಅವರ ದರ್ಶನ  ಆಗಿತ್ತು .

ಇಂದು ಅವರ ನಿಧನ ವಾರ್ತೆ ನೋಡಿದಾಗ  ಹಳೆಯ ನೆನಪುಗಳು ಬರುತ್ತಿವೆ .

  ಆಚಾರ್ಯ ದೇವೋ ಭಾವ ಎಂಬ ವಾಕ್ಯ ಅನ್ವರ್ಥ ಮಾಡಿದವರು .ಎಂದರೋ ಮಹಾನುಭಾವುಲುಅಂದರಿಕಿವಂದನಮುಲು  .

                         



                                    

                                                                                   

ಶನಿವಾರ, ಸೆಪ್ಟೆಂಬರ್ 26, 2020

ಡೆಂಗು ಜ್ವರವೂ ಕಿವಿ ಹಣ್ಣೂ

                                                   kiwi | Description, Nutrition, & Facts | Britannica 

 

ಕಿವಿ  ನ್ಯೂಜಿ ಲ್ಯಾಂಡ್  ದೇಶದ ಹಕ್ಕಿ . ಅಲ್ಲಿ ಬೆಳೆಯುವ  ಹಣ್ಣಿಗೂ ಅದೇ  ಹೆಸರು .ನಮ್ಮ ದೇಶಕ್ಕೆ ಬಹುತೇಕ  ನ್ಯೂಜಿಲಂಡ್ ,ಚಿಲಿ ಮತ್ತು ಇರಾನ್ ದೇಶದಿಂದ  ಆಮದು ಆಗುವುದು .ಆದುದರಿಂದ  ದುಬಾರಿ .

ಈ ಹಣ್ಣನ್ನು  ಡೆಂಗು ರೋಗಿಗಳ ಬಳಿ ಯಾವಾಗಲೂ ಕಾಣುವೆನು .ನಾವು ವೈದ್ಯರು  ಸಲಹೆ ಮಾಡದಿದ್ದರೂ 

ಸದ್ದಿಲ್ಲದೇ ಅವರ ಆಹಾರದಲ್ಲಿ ಸೇರಿ ಹೋಗುವುದು .ಡೆಂಗು ಜ್ವರ ಕ್ಕೆ  ಈ ಹಣ್ಣಿನಲ್ಲಿ ಔಷಧಿ ಏನೂ ಇಲ್ಲ .

ಕಾಯಿಲೆಯಲ್ಲಿ  ಪ್ಲಾಟೆಲೆಟ್ ಕಣಗಳು ಕಮ್ಮಿ ಆದರೆ  ಅದನ್ನು ವರ್ಧಿಸಲು  ಇದು ರಾಮ ಬಾಣ ಎಂದು  ಯಾರೋ 

ಹೇಳಿದ್ದು  ಈಗ ವೇದ ವಾಕ್ಯ ಆಗಿದೆ . ಈ ನಂಬಿಕೆಗೆ  ಯಾವುದೇ  ವೈಜ್ನಾನಿಕ ಆಧಾರ ಇಲ್ಲ .ಎಲ್ಲಾ  ಹಣ್ಣುಗಳಂತೆ 

ಆರೋಗ್ಯಕ್ಕೆ  ಒಳ್ಳೆಯದು ಅಷ್ಟೇ .

ತಮಾಷೆಯೆಂದರೆ  ಈ ಹಣ್ಣಿನ ಬಗ್ಗೆ  ಕೆಲವು  ಸಣ್ಣ ಸಂಶೋದನೆಗಳು  ಇದು ಪ್ಲಾಟೆಲೆಟ್  ಕ್ಷಮತೆಯ  ವಿರೋಧೀ

ಗುಣಗಳನ್ನು   ಹೊಂದಿದ್ದು  ಹೃದಯಾಘಾತ  ತಡೆಗಟ್ಟ ಬಹುದು ಎಂದು ಸೂಚನೆ ನೀಡಿವೆ . ನಿಮಗೆ ತಿಳಿದಂತೆ 

ಪ್ಲಾಟೆಲೆಟ್  ಕಣಗಳು  ರಕ್ತ ಸ್ತಂಭಕ  ಆಗಿದ್ದು  ರಕ್ತ  ಹಪ್ಪು ಗಟ್ಟಲು ಸಹಾಯ ಮಾಡುವವು .ಹೃದಯದ  ರಕ್ತ ನಾಳಗಳಲ್ಲಿ   ಕೊಲೆಸ್ಟ್ರಾಲ್  ಕುಳಿತು  ಪ್ಲಾಟೆಲೆಟ್ ಕಣಗಳನ್ನು  ಆಹ್ವಾನಿಸುತ್ತದೆ .ಅವು ಒಟ್ಟು ಸೇರಿ  ರಕ್ತ  ಹೆಪ್ಪು ಗಟ್ಟಿಸಿ   ರಕ್ತನಾಳ  ವನ್ನು  ಬಂದ್ ಮಾಡಿದಾಗ  ಹೃದಯಾಘಾತ  ಆಗುವುದು .ಇದನ್ನು ತಡೆ ಗಟ್ಟಲು  ಆಸ್ಪಿರಿನ್  ನಂತಹ    ಪ್ಲಾಟೆಲೆಟ್  ವಿರೋಧೀ  ಔಷಧ ಕೊಡುವರು.  ಅಂತಹದೇ  ಕೆಲಸ ಸಣ್ಣ ಪ್ರಮಾಣದಲ್ಲಿ  ಕಿವಿ ಹಣ್ಣು  ಮಾಡುವುದು  ಎಂಬ  ಸೂಚನೆ .ಹೃದ್ರೋಗಕ್ಕೆ  ಪ್ಲಾಟೆಲೆಟ್  ವಿರೋಧೀ  ಡೆಂಗು  ಕಾಯಿಲೆಯಲ್ಲಿ  ಅದರ  ಸ್ನೇಹಿ 

ಆಗುವುದು  ಹೇಗೆ ?ಇಲ್ಲಿಯೂ  ಸಲ್ಲುವುದು  ಅಲ್ಲಿಯೂ ಸಲ್ಲುವುದುಎಂದರೆ  ನಂಬುವುದು ಕಷ್ಟ .

ಆದುದರಿಂದ ಡೆಂಗು ಜ್ವರಕ್ಕೆ  ದುಬಾರಿಯದ  ಕಿವಿ ಹಣ್ಣು ತಿನ್ನಬೇಕಿಲ್ಲ .ನಮ್ಮಲ್ಲೇ ಬೆಳೆಯುವ  ಹಣ್ಣು ಹಂಪಲು ಸಾಕು .ಆಧಾರ ರಹಿತ  ನಂಬಿಕೆ  ಬಹು ಬೇಗ  ಹಬ್ಬುತ್ತದೆ .ಆದರೆ  ಇದು ದುಬಾರಿ ನಂಬಿಕೆ.

ಶನಿವಾರ, ಸೆಪ್ಟೆಂಬರ್ 12, 2020

ಮಳೆಗಾಲದ ಬಗ್ಗೆ ಒಂದು ಪ್ರಬಂಧ

 ಮಳೆಗಾಲ  ಆರಂಭವಾಗುತ್ತಲೇ  ಕೊಡೆ  ಗೊರಬೆಗಳು ಹೊರ ಬರುತ್ತವೆ .ಇಂದಿನ ಕೊಡೆಗಳಂತೆ  ತರಾವಳಿ

ಗೊರಬೆಗಳನ್ನು ಮಾಡುವವರು ಹಳ್ಳಿಯಲ್ಲಿ ಇದ್ದರು.ಅವರಿಗೆ ಹಣವೇ ಆಗಬೇಕಿಲ್ಲ .ಹಲಸಿನ ಬೀಜವೊ 

ನೀರಡಿಕೆಯೋ ಕೊಟ್ಟರೆ ಆದೀತು .ಒಟ್ಟಿನಲ್ಲಿ ಆತ್ಮನಿರ್ಭರ  ಗ್ರಾಮಗಳು ಗೊರಬೆ ಬೆನ್ನು ಮತ್ತು ತಲೆಯ 

ಹಿಂಬಾಗ ಬೆಚ್ಚಗೆ ಇಟ್ಟೀತು.ಮುಂಬಾಗಕ್ಕೆ ವರುಣನ ಅಪ್ಪುಗೆ ಭಾಗ್ಯ .ಗಾಳಿ ಮಳೆಯಲ್ಲಿ ಕೊಡೆಯ ಅವಸ್ಥೆ

 ಇದಕ್ಕಿಂತಲೂ ಕಡೆ .

  ಉಳಿದ ಕಾಲಗಳಲ್ಲಿ ಅಡಿಕೆಯ ಹೊದಿಕೆ ಇದ್ದ ಮನೆಯ ಅಂಗಳ ಮಳೆಯ ಚಳಿಗೆ ಅಡಿಕೆ ಸೋಗೆಯ 

ಮರೆ ಹೋಗುತ್ತದೆ .ಉಳಿದೆಡೆ ಪಾಚಿ ಹಾಸು .ಕಾಲಿಟ್ಟರೆ ಜಾರುವುದು ಅದರ ಮೇಲೆ  ನಡೆದಾಡಲು 

ಅಡಿಕೆ ಮರದ ನೆಲ ಸೇತು .ಅಭ್ಯಾಸ ಇದ್ದವರಿಗೆ ಅದರ ಮೇಲಿನ ನಡಿಗೆ  ಸುಲಭ .ಇಲ್ಲದಿದ್ದವರು 

ಸರ್ಕಸ್ ಹಗ್ಗದ ಮೇಲೆ ನಡೆದಂತೆ ಆಗುವುದು .ವರ್ಷಕಾಲದ   ಉತ್ತರಾರ್ಧ ದಲ್ಲಿ  ಅಂಗಳ ತುಂಬಾ 

ತರಕಾರಿ ಬೆಳೆ.ಮುಳ್ಳು ಸೌತೆ ,ಪಡುವಲ,ಹೀರೆ ,ಬೆಂಡೆ. ಮತ್ತು ಅಲಸಂದೆ.

ನೆಂಟರು ಬರುವುದು ಕಡಿಮೆ .ರಾತ್ರಿ ಕಪ್ಪೆ ಜೀರುಂಡೆಗಳ ಹಿಮ್ಮೇಳದಲ್ಲಿ  ಮಳೆರಾಯನ ಜೋಗುಳಕ್ಕೆ 

ಸುಖ ನಿದ್ರೆ .

ಶಾಲೆಗೆ  ಹೋಗುವ  ಮಕ್ಕಳಿಗೆ  ಕಷ್ಟ  ಆದರೂ ಮಳೆ ಇಷ್ಟ .ಜೋರಾಗಿ ಮಳೆ ಬಂದರೆ ಶಾಲೆಗೆ ರಜೆ .

ಮಾಡಿನಿಂದ ಸುರಿವ ಜಲಧಾರೆಯಲ್ಲಿ ಕೈಕಾಲು,ಬುತ್ತಿಪಾತ್ರೆತೊಳೆಯಬಹುದು.ನೀರುಹುಡುಕಿ ಓಡ ಬೇಕಿಲ್ಲ ,

ಬಾವಿಯಿಂದ ಸೇದ ಬೇಕಿಲ್ಲ .ಶಾಲೆಯ ದಾರಿ ಗುಂಟ  ಹುಲುಸಾಗಿ ಬೆಳೆದಿರುವ ನೀರ ಕಡ್ಡಿ  ಸ್ಲೇಟು 

 ಒರೆಸಲು  ಸುಲಭ ಸಾಧನ .ಕಾಲ ಬೆರಳುಗಳ  ನಡುವೆ ನೀರ ಕಜ್ಜಿ .

 

ಮಳೆಗಾಲದಲ್ಲಿ ಅಜ್ಜ ಅಜ್ಜಿಯರಿಗೆ ಬೇಡಿಕೆ .ಸಮಯ ಹೋಗದಿರುವಾಗ ಕತೆ ಹೇಳಲು ,ತಮ್ಮ 

ಭಂಡಾರದಿಂದ ಹಲಸಿನ ಬೀಜ ,ಹಪ್ಪಳ ಇತ್ಯಾದಿ ಪಿಂಕಿಸಲು.

ಮಳೆಗಾಲಕ್ಕೆ ಬೇಕಾದ ಅಕ್ಕಿ ಬೇಳೆ ಇತ್ಯಾದಿ ಮೊದಲೇ ಶೇಖರಣೆ ಆಗಿರುತ್ತದೆ .ಅದರಂತೆ ಉರುವಲು 

ಸೌದೆ ,ತೆಂಗಿನ ಗರಿ ,.ಮಳೆಗಾಲಕ್ಕೆ ಪೂರ್ವ ತಯಾರಿ ಒಂದು ಹಬ್ಬ .ಕೆಲವೊಮ್ಮೆ  ಸಂಕಟ  ಮತ್ತು 

ಸವಾಲು .

ಶೇಖರ ಮಾಡಿದ ಉಪ್ಪಿನ ಕಾಯಿ ,ಹಲಸಿನ ಹಣ್ಣಿನ ಪೆರಟಿ ,ಮಾವಿನ ಮಾಂಬಳ  ಕಾಪಿಡಲು ಹಾರ 

ಸಾಹಸ .ಬೆಚ್ಚಗೆ  ಮುಚ್ಚಿ ಇಡಬೇಕು .ಆದರೂ ಬರುವುದು  ಕೆಲವೊಮ್ಮೆ  ಫಂಗಸ್ಸಿನ ಗಡ್ಡ ಮೀಸೆ .

ಬಟ್ಟೆ  ಒಣಗಿಸುವುದು ಹರ ಸಾಹಸ .ಬಾಳಂತಿ ಮಗು ಇದ್ದರೆ ಇನ್ನೂ ಕಷ್ಟ .ಬಚ್ಚಲು ಮನೆ  ಮತ್ತು 

ಅಡಿಗೆ  ಮನೆ , ಖಾಲಿ  ಓಲೆ ಮೇಲೆ ,ಬೆಚ್ಚನೆ ಹಂಡೆ ಮೇಲೆ  ಒಣಗಿಸಲ್ಪಟ್ಟ ಬಟ್ಟೆಗಳಿಗೆ ಹೊಗೆಯ ಸೆಂಟ್ .



ಶನಿವಾರ, ಆಗಸ್ಟ್ 29, 2020

ಓದದಿದ್ದರೆ ಕಳೆದು ಹೋಗು ತ್ತಿದ್ದ ಕೃತಿ ರತ್ನ

 വേരുകൾ | Verukal by Malayattoor Ramakrishnanಲೋಕ್ ಡೌನ್  ಅವಧಿಯಲ್ಲಿ  ಓದಿದ  ಬಹಳ ಶ್ರೇಷ್ಠ  ಕಾದಂಬರಿ .ಮಲಯಾಳಂ ಭಾಷೆಯಲ್ಲಿ  ವೇರುಕಳ್ ಅಂದರೆ ಬೇರುಗಳು ಎಂಬ ಹೆಸರಿನಲ್ಲಿ ಪ್ರಕಟವಾದ  ಮಲಯಾತ್ತೂರ್  ರಾಮಕೃಷ್ಣನ್ ಅವರ ಪ್ರಸಿದ್ದ ಕಾದಂಬರಿ .

ಕಥಾನಾಯಕ  ರಾಜಧಾನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದು ಅವನ ಹೆಂಡತಿ ಶ್ರೀಮಂತರ ಮನೆಯಿಂದ ಬಂದವಳು .ನಗರದಲ್ಲಿ  ಹೊಸ ಮನೆ ಕಟ್ಟುವ  ಉದ್ದೇಶ .ನಾಯಕ ತನ್ನ ಆದಾಯ ಕ್ಕೆ  ಅನುಗುಣವಾದ ಮತ್ತು ವಾಸಕ್ಕೆ ಅವಶ್ಯವಿರುವಷ್ಟು  ದೊಡ್ಡ ಮನೆ ಸಾಕೆಂಬ ಮನೋ ಭಾವನೆಯವನು ;ಹೆಂಡತಿಗೆ ಮಾತ್ರ  ದೊಡ್ಡ ಬಂಗಲೆಯೇ ಬೇಕೆಂಬ ಹಟ. ಹೆಚ್ಚಿನ ವೆಚ್ಚ ಸರಿದೂಗಿಸಲು  ಊರಿನಲ್ಲಿ ಇರುವ ಪಿತ್ರಾರ್ಜಿತ ಆಸ್ತಿ ಮಾರುವಂತೆ  ಅವಳ ಸೂಚನೆ .

ಅದರಂತೆ  ಒಲ್ಲದ ಮನಸ್ಸಿನಲ್ಲಿ  ಊರಿಗೆ ಹೊರಡುತ್ತಾನೆ .ಅಲ್ಲಿ ಅವನ ಪಾಲಿನ ಆಸ್ತಿಯನ್ನು ಸಹೋದರಿಯರು ನೋಡಿಕೊಳ್ಳುತ್ತಿರುತ್ತಾರೆ .ಊರ ಸರಹದ್ದು ಹೊಕ್ಕ ಒಡನೆ  ಕಾದಂಬರಿ ಆರಂಭ . ಊರಿನ ದೇವಸ್ಥಾನ ,ಕೆರೆ ,ತೋಟ ,ತಿರುವುಗಳು ,

ಬಾಲ್ಯದಲ್ಲಿ  ಒಡನಾಡಿದ ವ್ಯಕ್ತಿಗಳು  ಜ್ನಾಪಕ ಚಿತ್ರ ಶಾಲೆಯನ್ನೇ ತೆರೆದಿಡುತ್ತವೆ .

ತನ್ನ ಮನದ ಆಳದೊಳಗೆ ಮಡಿಚಿ ಇಟ್ಟ ಬಾಲ್ಯ ಯೌವನ ದ  ನೋವು ನಲಿವು ,ಕನಸುಗಳು ,ನಿರಾಶೆ ,ಪ್ರೀತಿ ಪ್ರಣಯ ಒಂದೊಂದೇ ತಿರುವಿನಲ್ಲಿ ತೆರೆದಿಡುತ್ತವೆ .ಮನುಷ್ಯನಿನಿಗೆ  ಭೌತಿಕ ಹೇಗೋ  ಮಾನಸಿಕ ಅಸ್ತಿತ್ವ ಮುಖ್ಯ .ಅದರ ಬೇರುಗಳು ತನ್ನ ಹುಟ್ಟಿದ ಊರಿನಲ್ಲಿಯೇ ಇವೆ .ಇದನ್ನು ಮಾರಿದರೆ  ಮೂಲ ಕತ್ತರಿಸಿದಂತೆ ಎಂದು ಆಸ್ತಿ ಮಾರುವ ಯೋಚನೆ ಬದಲಿಸಿ ಮರಳುವ ಕಥೆ .ಮೂಲ ಮಲಯಾಳಂ 

ಕೃತಿಯನ್ನು  ವಿ ಅಬ್ದುಲ್ಲಾ ಸೊಗಸಾಗಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ .

ಮರಗಳಂತೆ ಮನುಷ್ಯನ  ತನ್ನ ತನವೂ ಬೇರುಗಳನ್ನು ಅವಲಂಬಿಸಿ ಅದರ ಮೂಲಕ ಜೀವಿಸುತ್ತದೆ .

ಬುಧವಾರ, ಆಗಸ್ಟ್ 26, 2020

ಕೆಲವು ಆರೋಗ್ಯ ವಿಚಾರಗಳು


ವೈದ್ಯ  ಶಾಸ್ತ್ರ ದಲ್ಲಿ  ಗಮನೀಯ ಬೆಳವಣಿಗೆ ಆಗಿದ್ದರೂ  ಹಲವು ನಂಬಿಕೆಗಳು  ಯಾವುದೇ ವೈಜ್ನಾನಿಕ ಆಧಾರ ಇಲ್ಲದೆ ಪ್ರಚಲಿತ ವಾಗಿ  ನಿಂತಿವೆ .ಅವುಗಳಲ್ಲಿ  ಕೆಲವನ್ನು ಆರಿಸಿ ವಿಶ್ಲೇಷಿಸುವ ಪ್ರಯತ್ನ .

ಇತ್ತೀಚೆಗೆ ನಮ್ಮ ಊರಿನಲ್ಲಿ ಡೆಂಗ್ಯೂ ಜ್ವರದ ಹಾವಳಿ ಇತ್ತು .ಇದು ಸೊಳ್ಳೆಗಳಿಂದ ಹರಡುವ  ವೈರಸ್ ಜನ್ಯ ಕಾಯಿಲೆ .ಈ ಜ್ವರದಲ್ಲಿ ರಕ್ತ ಸ್ಥಂಭಕ ಕಣಗಳಾದ ಪ್ಲಾಟೆಲೆಟ್ ಗಳು  ಕಡಿಮೆ ಆಗುತ್ತವೆ .ಆದರೆ  ಈ ಕಾಯಿಲೆ  ಗಂಭೀರ ವಾಗುವುದು ಈ ಕಾರಣಕ್ಕೆ ಅಲ್ಲ . ಬದಲಾಗಿ ರಕ್ತ ನಾಳ ಗಳಿಂದ  ದ್ರವಾಂಶ ಸೋರಿ ಹೋಗಿ  ರಕ್ತದ ಒತ್ತಡ  ದಿಡೀರೆಂದು ಕುಸಿಯುವುದು ;ಇದನ್ನು ಡೆಂಗ್ಯೂ ಶೋಕ್ ಎನ್ನುವರು .ಆದರೆ ಸಾಮಾಜಿಕ ಮತ್ತು ಸಮೂಹ  ಮಾಧ್ಯಮ ಗಳಲ್ಲಿ  ಪ್ಲಾಟೆಲೆಟ್ ಕೊರತೆಯಿಂದಲೇ ಸಾವು ಸಂಭವಿಸಿದೆ ಎಂದು ಬಿಂಬಿಸುತ್ತಾರೆ .ಡೆಂಗ್ಯೂ ಕಾಯಿಲೆಯಲ್ಲಿ  ಕಡಿಮೆ ಆದ ಪ್ಲಾಟೆಲೆಟ್ ಕಣಗಳು  ತಂತಾನಾಗಿಯೇ ಸರಿ ಆಗುವವು .ಅದು ಹತ್ತು ಸಾವಿರ ಕ್ಕಿಂತ  ಕಡಿಮೆ ಆದರೆ (ನಾರ್ಮಲ್ 1.5 ಲಕ್ಷ ದಿಂದ 4.5 ಲಕ್ಷ ಡೆಸಿ ಲೀಟರ್ ರಕ್ತ ಕ್ಕೆ )ಅಥವಾ ರಕ್ತ  ಸ್ರಾವ ದ ಲಕ್ಷಣ ಗಳು  ಇದ್ದರೆ ಮಾತ್ರ  ಪ್ಲಾಟೆಲೆಟ್ ಕೊಡ ಬೇಕಾಗಿ ಬರುವುದು .ಇದಕ್ಕಾಗಿ ಪ್ರತ್ಯೇಕ  ಹಣ್ಣು (ದುಬಾರಿಯಾದ ಕಿವಿ ಹಣ್ಣು ,ಅಥವಾ ಪಪ್ಪಾಯಿ ಇತ್ಯಾದಿ )ತಿನ್ನುವ ಅವಶ್ಯ ಇಲ್ಲ ಮಾತ್ರವಲ್ಲ ಪ್ರತ್ಯೇಕ ಉಪಯೋಗವೂ ಇಲ್ಲ .ಯಾವುದೇ ಸುಲಭ ವಾಗಿ  ಸಿಗುವ ಹಣ್ಣು ಹಂಪಲೇ ಸಾಕು .ದಿನಕ್ಕೆ ಎರಡು ಮೂರು  ಭಾರಿ ರಕ್ತ ಪರೀಕ್ಷೆ ಮಾಡುವುದೂ ಬೇಕಾಗಿಲ್ಲ .

ಡೆಂಗ್ಯೂ ಕಾಯಿಲೆಯಲ್ಲಿ ರಕ್ತ ನಾಳದಿಂದ  ದ್ರವಾಂಶ ಸೋರಿ ರಕ್ತದ ಒತ್ತಡ ಕಡಿಮೆ ಆಗುವುದು ಎಂದೆನಷ್ಟೆ .ಇದೇ ತರಹದ ಪರಿಣಾಮ ಡೆಂಗ್ಯೂ ಇಲ್ಲದವರಲ್ಲಿ  ಶರೀರ ದಿಂದ  ರಕ್ತ ಸ್ರಾವ ಆದರೆ ,ತೀವ್ರ ಅತಿಸಾರ ದಿಂದ ಆಗ ಬಹುದು .ಮತ್ತು ಹೃದಯದ ವೈಫಲ್ಯದಲ್ಲಿ  ರಕ್ತ ಸಾಕಷ್ಟು  ಪಂಪ್  ಆಗದೆ  ಬಿ ಪಿ ಕುಸಿಯ ಬಹುದು .ಇದು ಬಿಟ್ಟು ಲೋ ಬಿ ಪಿ  ಎಂಬ ಕಾಯಿಲೆ ಪ್ರತ್ಯೇಕ ಇಲ್ಲ .ನಮ್ಮ ರಕ್ತದ ಒತ್ತಡ 120/80 ಎಂದು ಇದ್ದರೂ  ಹಲವರಲ್ಲಿ ಅದು 100/80 ,90/70 ಇತ್ಯಾದಿ ಇರ ಬಹುದು ಮತ್ತ್ತು ಅವರು ಯಾವುದೇ ತೊಂದರೆ ಇಲ್ಲದೆ ಓಡಾಡಿ ಕೊಂಡು ಇರುವರು .ಆದುದರಿಂದ ಅದು ಕಾಯಿಲೆ ಅಲ್ಲ .

ಅಧಿಕ ರಕ್ತದ ಒತ್ತಡ ಸಾಮಾನ್ಯ ಕಾಯಿಲೆ .ಬಹು ಮಂದಿಯಲ್ಲಿ ರೋಗ ಲಕ್ಷಣ ಇರುವುದಿಲ್ಲ .ಆದರೆ ಚಿಕಿತ್ಸೆ ಅವಶ್ಯ .ಇಲ್ಲದಿದ್ದರೆ ಹೃದಯ ,ಮೂತ್ರ ಪಿಂಡ ಮತ್ತು ಮೆದುಳಿಗೆ ಹಾನಿ ಆಗ ಬಹುದು .ಆಸ್ಪತ್ರೆಗೆ  ಹೊಸದಾಗಿ ಬಂದವರ  ಮೊದಲ ಬಿ ಪಿ ನಾರ್ಮಲ್ ಗಿಂತ ಸ್ವಲ್ಪ ಜಾಸ್ತಿ ಇರುತ್ತದೆ .ಆಗ ನಾವು ಸ್ವಲ್ಪ ಸಮಯ ಬಿಟ್ಟು ಪುನಃ ರಕ್ತದ ಒತ್ತಡ ನೋಡುತ್ತೇವೆ .ಮತ್ತೂ ಸಂದೇಹ ಇದ್ದರೆ ಇನ್ನೊಂದು ದಿನ ಬರ ಹೇಳುತ್ತೇವೆ .ಆಸ್ಪತ್ರೆಯ ಮೊದಲ ಭೇಟಿಯ ರಕ್ತದ ಒತ್ತಡ ಏರಿಕೆಗೆ ಬಿಳಿ ಕೋಟ್ ರಕ್ತದೊತ್ತಡ ಎನ್ನುವರು .ಇದಕ್ಕೆ ಚಿಕಿತ್ಸೆ ಬೇಡ ,ಪುನಃ ಪರಿಶೋದಿಸುವಾಗ ತೊಂದರೆ ಇದ್ದರೆ ಚಿಕಿತ್ಸೆ .ಇದಲ್ಲದೆ ಆಸ್ತಮಾ ಕಾಯಿಲೆ ,ಮೂತ್ರದ ಕಲ್ಲು . ಮೈಗ್ರೈನ್ ತಲೆ ನೋವು ಇತ್ಯಾದಿ ಜಾಸ್ತಿ ತೊಂದರೆ ಕೊಡುತ್ತಿರುವಾಗ ಬಿ ಪಿ ಪರಿಶೋದನೆ ಮಾಡಿದರೆ ಸ್ವಲ್ಪ ಜಾಸ್ತಿಯೇ ಇರುವುದು .ಮೂಲ ಕಾಯಿಲೆ ಶಮನ ಆಗುವಾಗ ಬಿ ಪಿ ತಾನೇ ಇಳಿಯುವುದು . ರಕ್ತ ಹೆಪ್ಪು ಗಟ್ಟಿ  ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆದಾಗ ರಕ್ಷಣಾತ್ಮಕ ವಾಗಿ  ಬಿ ಪಿ ಏರುವುದು .ಅದನ್ನು ಕೂಡಲೇ ಕಡಿಮೆ ಮಾಡಿದರೆ ಮೆದುಳಿಗೆ ಇನ್ನಷ್ಟು ಹಾನಿ ಆಗುವುದು .

ಬಹಳ ಮಂದಿ ತಿಳಿದಂತೆ ತಲೆ ನೋವಿಗೆ  ಅಧಿಕ ರಕ್ತದೊತ್ತಡ ಸಾಮಾನ್ಯ ಕಾರಣ ಅಲ್ಲ .ತಲೆ ತಿರುಗುವುದಕ್ಕೂ ಅಲ್ಲ .ಯಾವುದೇ ಸೋಂಕು ರೋಗ ಅಥವಾ ಮೆದುಳಿನ ಗಡ್ಡೆ ಇತ್ಯಾದಿಗಳನ್ನು ಹೊರತು ಪಡೆಸಿದರೆ  ತಲೆನೋವಿಗೆ ಮುಖ್ಯ ಕಾರಣ ಉದ್ವೇಗ ಎರಡನೇ ಸ್ಥಾನದಲ್ಲಿ ಮೈಗ್ರೈನ್ ಇದೆ .ಕಣ್ಣಿನ ದೃಷ್ಟಿ ದೋಷವೂ ತಲೆ ನೋವು ಉಂಟು ಮಾಡುವುದು ಕಮ್ಮಿ .ತಲೆ ತಿರುಗುವುದಕ್ಕೆ ಮುಖ್ಯ ಕಾರಣ ಶರೀರದ ಸಮತೋಲನ ಕಾಪಾಡುವ  ಕಿವಿ ಯೊಳಗೆ  ಅಂತರ್ಗತ  ಅಂಗದ ಕಾರ್ಯ ವ್ಯತ್ಯಯ .ಈ ತರಹ ತಲೆ ತಿರುಗುವಾಗ ಬಿ ಪಿ ನೋಡಿದರೆ ಸ್ವಲ್ಪ ಜಾಸ್ತಿ ಇದ್ದೀತು.ಆದರೆ ಮೊದಲ ಚಿಕಿತ್ಸೆ ಮೂಲ ರೋಗಕ್ಕೆ .

ಸಕ್ಕರೆ ಕಾಯಿಲೆ ಈಗ ಸಾಮಾನ್ಯ ಮತ್ತು ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿ ಕೊಳ್ಳುವುದು .ಇದಕ್ಕೆ ಮೊದಲ ಉಪಚಾರ ಪಥ್ಯ. ಗಮನಿಸ ಬೇಕಾದ ಅಂಶ ಎಂದರೆ ನಾವು ಉಪಯೋಗಿಸುವ ಏಕ ದಳ ಧಾನ್ಯಗಳಾದ ಅಕ್ಕಿ ,ಗೋದಿ ,ರಾಗಿ ,ಜೋಳ ಇತ್ಯಾದಿಗಳ ಸಕ್ಕರೆ ಪ್ರಮಾಣದಲ್ಲಿ ಗಮನೀಯ ವ್ಯತ್ಯಾಸ ಇಲ್ಲ .ಕರುಳಿನಿಂದ ರಕ್ತಕ್ಕೆ ಸಕ್ಕರೆ ಸೇರುವ ಸಮಯ ಅಲ್ಪ ಸ್ವಲ್ಪ ಹೆಚ್ಚು ಕಡಿಮೆ ಇದ್ದೀತು .ಹಾಗಲ ಕಾಯಿ ,ಉಪ್ಪಿನ ಕಾಯಿತಿಂದರೆ ರಕ್ತದ ಸಕ್ಕರೆ ಕಡಿಮೆ ಆಗದು .ಸಕ್ಕರೆ ಕಾಯಿಲೆಗೆ ಕೊಡುವ ಮಾತ್ರೆಯ ಪವರ್ ಅದರ ಗಾತ್ರವನ್ನು ಮತ್ತು  ಮಿಲ್ಲಿ ಗ್ರಾಂ ,ಗ್ರಾಂ ಗಳ ಮೇಲೆ ನಿರ್ಧಾರ ಆಗದೆ ಔಷಧಿ ಯ ಮೇಲೆ ಇರುವುದು .ಇತರ ಕಾಯಿಲೆಗಳಿಗೂ .ಉದಾಹರಣೆಗೆ ಡಯಬಿಟಿಸ್ ಗೆ ಕೊಡುವ ಮೆಟ್ ಫೋರ್ಮೀನ್ ಎಂಬ ಮಾತ್ರೆ ನೋಡಲು ದೊಡ್ಡದು ಇದ್ದು 500 ಮಿಲಿಗ್ರಾಂ 10000 ಮಿಲಿಗ್ರಾಂ ಪ್ರಮಾಣದಲ್ಲಿ ಬರುತ್ತವೆ .ಆದರೆ ಇದು ಗ್ಲಿಮಿ ಪೇರೈಡ್ ಎಂಬ 1 ಮಿಲಿಗ್ರಾಂ ನ ಸಣ್ಣ ಮಾತ್ರೆಗಿಂತ  ಎಸ್ಟೋ ಕಡಿಮೆ ಪವರ್ ನದು .

 

ಕಾಮಾಲೆ ರೋಗ ಎನ್ನುವರು .ಆದರೆ ಕಾಮಾಲೆ ಜ್ವರ ,ತಲೆನೋವು ,ಕೆಮ್ಮು ಇವುಗಳಂತೆ ಒಂದು ರೋಗ ಲಕ್ಷಣ ಮಾತ್ರ .ಹಳದಿ ರೋಗ ಎಂಬುದು ನಮ್ಮ ಕೆಂಪು ರಕ್ತ ಕಣಗಲ  ವ್ಯತ್ಯಯ ಗೊಂಡ ಉತ್ತರ ಕಾಂಡ .ಕೆಂಪು ಕಣಗಳು ಆಯುಸ್ಸು ಮುಗಿದೊಡನೆ ಜೀರ್ಣ ಗೊಂಡು ಬಿಲಿರುಬಿನ್ ಎಂಬ ಹಳದಿ ವಸ್ತು ಲಿವರ್ ,ಪಿತ್ತ ಕೋಶ ,ಪಿತ್ತ ನಾಲಗಳ ಮೂಲಕ ಕರುಳಿಗೆ ಸಾಗಿ ವಿಸರ್ಜನೆ ಗೊಳ್ಳುವುದು .ಮಲದ  ಹಳದಿ ಬಣ್ಣಕ್ಕೆ ಕಾರಣ ಇದು.ಕೆಂಪು ರಕ್ತದ ಕಣಗಳು ಕೆಲವು ಕಾಯಿಲೆಗಳಲ್ಲಿ ಆಯುಸ್ಸು ಮುಗಿಯುವ ಮುಂಚೆಯೇ ಅತಿಯಾಗಿ ನಶಿಸುತ್ತವೆ .ಆಗಲೂ ರಕ್ತದಲ್ಲಿ ಬಿಲಿರುಬಿನ್ ಜಾಸ್ತಿ ಆಗಿ ಹಳದಿ ಕಾಣುವುದು .ಇನ್ನು ವಾಡಿಕೆಯಲ್ಲಿ ಕಾಮಾಲೆ ಎಂದು ಕರೆಯುವ ಕಾಯಿಲೆ ಲಿವರ್ ನ ವೈರಸ್ ಸೋಂಕು .ಹೆಪಟೈಟೀಸ್ ಎ ,ಬಿ ,ಸಿ ,ಡಿ ,ಇ ಇತ್ಯಾದಿ ವೈರಸ್ ಯಕೃತ್ (ಲಿವರ್)ಕಾಡುವ ವೈರಸ್ ಗಳು .ಎ ಮತ್ತು ಇ ನೀರು ಆಹಾರದ ಮೂಲಕ  ಹರಡಿದರೆ ಬಿ ಮತ್ತು ಸಿ  ರಕ್ತದ ಮೂಲಕ . ಮುಂದೆ ಲಿವರ್ ದಾಟಿ ಕರುಳಿನ ದಾರಿಯಲ್ಲಿ ಯಾವುದಾದರೂ ಗಡ್ಡೆ  ಅಥವಾ ಪಿತ್ತ ನಾಳದ ಕಲ್ಲು ಬಿಲಿರುಬಿನ್  ಹರಿವಿಗೆ  ತಡೆ ಒಡ್ಡಿದರೂ ಕಾಮಾಲೆ ಬರುವುದು .ಇನ್ನು ಮಲೇರಿಯಾ ,ಇಲಿ ಜ್ವರಗಳು  ಲಿವರ್ ,ಕೆಂಪು ರಕ್ತ ಕಣಗಳಿಗೆ ಹಾನಿ ಮಾಡಿ ಜಾಂಡಿಸ್ ಬರ ಬಹುದು . ಇವುಗಳಿಗೆ ಎಲ್ಲಾ ಪ್ರತ್ಯೇಕ ಚಿಕಿತ್ಸೆ ಇದೆ .ವಾಡಿಕೆಯಲ್ಲಿ ಇರುವ ಕಠಿಣ ಪಥ್ಯ ವೂ ಬೇಡ .ವೈರಸ್ ನಿಂದ ಬಂದ ಸೋಂಕು ಬಹುತೇಕ ತಾನೇ ಶಮನ ಗೊಂಡರೂ ಮಲೇರಿಯಾ ,ಇಲಿ ಜ್ವರ ,ಪಿತ್ತ ನಾಳದ ಕಲ್ಲು ಇತ್ಯಾದಿ ಸಮಸ್ಯೆಗಳಿಗೆ ಅವುಗಳದೆ ಚಿಕಿತ್ಸೆ  ಇವೆ ಕಾಮಾಲೆ ಎಂದು ಹಳ್ಳಿ ಮದ್ದು ಮಾಡಿ ಕುಳಿತರೆ ಅಪಾಯ .

 

    ಹೃದಯದ ಆಘಾತ ಎಲ್ಲರೂ ಕೇಳಿದ್ದೇವೆ .ಹಠಾತ್ ರಕ್ತ  ಪೂರೈಕೆ ವ್ಯತ್ಯಯ ಆಗಿ ಅಂಗ ದ  ಕಾರ್ಯ ವೈಫಲ್ಯ ವೇ  ಆಘಾತ .ಇಂತಹುದೇ ಸಮಸ್ಯೆ ಮೆದುಳಿನಲ್ಲಿ ಬಂದಾಗ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆಗುವುದು .ಇದು ಮೆದುಳಿನ ರಕ್ತನಾಳಗಳ ರಕ್ತ ಹೆಪ್ಪು ಗಟ್ಟುವಿಕೆ ಯಿಂದ  ಅಥವಾ ರಕ್ತ ಸ್ರಾವದಿಂದ ಬರ ಬಹುದು ,ಎಡದ ಮೆದುಳಿನ ಆಘಾತದಿಂದ  ಬಲ ದ ಕೈ ಕಾಲು ಬಲ ಹೀನ ವಾಗ ಬಹುದು  ,ಮಾತು ಬೀಳ ಬಹುದು .ಇಲ್ಲಿ ಕಾಯಿಲೆ ಇರುವುದು ಮೆದುಳಿನಲ್ಲಿ ,ಆದುದರಿಂದ ಮೂಲ ಚಿಕಿತ್ಸೆ ಅದಕ್ಕೆ .ಉಪಯೋಗಿಸದೆ ಮರಗಟ್ಟುವುದನ್ನು ತಡೆಗಟ್ಟಲು ಕೈ ಕಾಲಿಗೆ ವ್ಯಾಯಾಮ ಮಾಡಿಸುವರು .ಮೆದುಳಿನ ರಕ್ತ ಹೆಪ್ಪು ಕರಗಿಸುವ ಔಷಧಿಗಳು ಲಭ್ಯವಿವೆ .ಆದರೆ ಮೂರು ನಾಲ್ಕು ಗಂಟೆಗಳ ಒಳಗೆ ಕೊಟ್ಟರೆ ಹೆಚ್ಚು ಪರಿಣಾಮ .

ಸರ್ಪ ಸುತ್ತು ಎಂದು ಕರೆಯಲ್ಪಡುವ  ಕಾಯಿಲೆ ವೈರಸ್ ನರಕ್ಕೆ ಆದಾಗ ಬರುವ ಕಾಯಿಲೆ .ಇದನ್ನು ನರ ಕೋಟಲೆ ಎನ್ನುವುದು ಉತ್ತಮ .ಆಧುನಿಕ ವೈದ್ಯ ಪದ್ದತಿ ಯಲ್ಲಿ  ಇದಕ್ಕೆ ಉತ್ತಮ ಔಷಧಿ ,ಇದೆ .ಆರಂಭದಲ್ಲಿಯೇ ಕೊಟ್ಟರೆ ಹೆಚ್ಚು ಪರಿಣಾಮ ಕಾರಿ .ಇದು ಸರ್ಪದೋಷ ಅಥವಾ ಯಾವುದೇ ಶಾಪದಿಂದ ಬರುವ ಜಡ್ಡು ಅಲ್ಲ .ಸರಿ ಉಪಚಾರ ಮಾಡದಿದ್ದಲ್ಲಿ  ಹುಣ್ಣು ಮಾದರೂ ನೋವು ಉಳಿಯುವುದು .

   ಇನ್ನು ಸಂಕ್ಷಿಪ್ತ ವಾಗಿ  ಕೆಲವು ವಿಚಾರಗಳು .

ಆಸ್ತಮಾ ಕಾಯಿಲೆಗೆ ತಿನ್ನುವ ಮಾತ್ರೆಗಳಿಂತ ಸೇದುವ ಔಷಧಿ ಉತ್ತಮ .ಹೆಚ್ಚು ಪರಿಣಾಮಕಾರಿ ,ಕಡಿಮೆ ಅಡ್ಡ ಪರಿಣಾಮ .ತಿನ್ನುವ ಮಾತ್ರೆಗಳ ಸಾವಿರದ ಒಂದು ಪ್ರಮಾಣದ ಔಷದಿ ಸಾಕಾಗುವುದು .ಬಹಳ ಮಂದಿ ಸೇದುವ ಔಷಧಿ (ಇನ್ಹೇಲರ್)ಹೆಚ್ಕು  ಸ್ಟ್ರಾಂಗ್ .ಒಮ್ಮೆ ಆರಂಬಿಸಿದರೆ ಅಭ್ಯಾಸ ಆಗುವುದು ,ಎಂಬಿತ್ಯಾದಿ  ಅಪನಂಬಿಕೆ ಹೊಂದಿರುತ್ತಾರೆ .ಇದು ಸರಿಯಲ್ಲ .

ಆಹಾರದಲ್ಲಿ ಹಣ್ಣಿನ ರಸಕ್ಕಿಂತ ಇಡೀ ಹಣ್ಣು ತಿನ್ನುವುದು ಒಳ್ಳೆಯದು .ಹಣ್ಣಿನ ನಾರು ಕರುಳ ಚಲನೆಗೆ ಸಹಾಯಕ .ಹಣ್ಣು ತಿನ್ನುವ ಶಕ್ತಿ ಇಲ್ಲದವರು ಮಾತ್ರ ಜ್ಯೂಸ್ ಮಾಡಿ ಸೇವಿಸಿರಿ .ಕೇವಲ ಅಕ್ಕಿ ಹಾಕಿ ಮಾಡುವ ತಿಂಡಿಗಳಿಂತ ಉದ್ದು ಸೇರಿಸಿ ಮಾಡುವ ಇಡ್ಲಿ ಇತ್ಯಾದಿ ಹೆಚ್ಕು ಸಮತೂಕ .ಏಕೆಂದರೆ ದ್ವಿದಳ ಧಾನ್ಯಗಳಲ್ಲಿ ಸಸಾರ ಜನಕ ಅಧಿಕ .ಬ್ರೆಡ್ ಮತ್ತು ಎಳನೀರು ಗಳಲ್ಲಿ  ಸಾಮಾನ್ಯವಾಗಿ ತಿಳಿದುಕೊಂಡಂತಾ ಆರೋಗ್ಯ ಸ್ನೇಹಿ ಅಥವಾ ರೋಗ ಪ್ರತಿ ಬಂಧಕ  ಅಂಶಗಳು ಇಲ್ಲ .

ಹೆಚ್ಚಿನ ಕಾಯಿಲೆಗಳಿಗೆ ಪಥ್ಯ ಅವಶ್ಯವಿಲ್ಲ .ಸಕ್ಕರೆ ಕಾಯಿಲೆ ,ಹೃದಯ ರೋಗ ಇತ್ಯಾದಿಗಳಲ್ಲಿ ವೈದ್ಯರ ಸಲಹೆ ಮೇರೆ ಆಹಾರ ಕ್ರಮ ಬದಲಾಯಿಸ ಬೇಕು .ಬಾಳಂತಿಯರು  ಸಮ ತೂಕದ ಆಹಾರ ಸೇವಿಸುವುದು ಮುಖ್ಯ .ಅವರ ಆಹಾರದಲ್ಲಿ ದ್ವಿದಳ ಧಾನ್ಯ ,ಬೀಜಗಳು ,ಮಾಂಸ ಮೀನು ಹಣ್ಣು ತರಕಾರಿ  ಸೇರಿದ್ದರೆ ಉತ್ತಮ ,ನಮ್ಮಲ್ಲಿ ಅದು ನಂಜು ಇದು ನಂಜು ಎಂದು ಅವರ ಬಾಯಿ ಕಟ್ಟಿ ಬರೀ ಅನ್ನ ,ಹಾಲು ತುಪ್ಪ ಕೊಡುವರು .ಇದು ತಪ್ಪು .

ಬೊಜ್ಜು ಒಂದು ಕಾಯಿಲೆ .ಎಳವೆಯಲ್ಲಿ ಸ್ಥೂಲ ಕಾಯವು  ಮುಂದೆ ಹೃದ್ರೋಗ ,ಸಂದಿ ವಾತ ,ಸಕ್ಕರೆ ಕಾಯಿಲೆ, ಮನೋ ಖಿನ್ನತೆ ಮತ್ತು ಕೆಲವೊಮ್ಮೆ ಕಾನ್ಸರ್ ಗೂ ಕಾರಣ ವಾಗ  ಬಲ್ಲುದು. ಕಾಳಿದಾಸನು ಕಮಲೇ ಕಮಲೋತ್ಪತ್ತಿ ಎಂದಂತೆ  ಸ್ಥೂಲ ಕಾಯೆ ಸ್ಥೂಲ ಕಾಯೋತ್ಪತ್ತಿ ಎನ್ನ ಬಹುದು .ಒಮ್ಮೆ ಬೊಜ್ಜು ಬಂದರೆ ವ್ಯಾಯಾಮ ಕಷ್ಟವೆನಿಸುವುದು .ಇನ್ನಷ್ಟು ಬೊಜ್ಜು ಬರುವುದು .ತಪ್ಪಿದ ಆಹಾರ ಕ್ರಮ ಅಥವಾ ಕ್ರಮ ವಿಲ್ಲದ ಆಹಾರ ,ಇಲ್ಲದ ವ್ಯಾಯಾಮ ಇದಕ್ಕೆ ಮೂಲ ಕಾರಣ .ನಡೆಯುವುದು ಮತ್ತು ಶ್ರಮ ಜೀವನ ಪ್ರತಿಷ್ಟೆಗೆ ಕುಂದು  ಎಂಬ ಮನೋಭಾವ  ಮತ್ತು ಇದರಿಂದ ವಾಹನ ಅವಲಂಬನೆ ಅಪಾಯಕಾರಿ .

ಮಂಜು ಎಂದರೆ ಹವೆ ತಂಪು ಆದಾಗ  ವಾತಾವರಣದ ನೀರಾವಿ ಸಾಂದ್ರ ಗೊಂಡು ಭಾರವಾಗಿ ಕೆಳಗೆ ಇಳಿಯುವುದು .ಅದಷ್ಟೇ ಆದರೆ ಅಡ್ಡಿಯಿಲ್ಲ ,ಆದರೆ ಅದು ತನ್ನೊಡನೆ ಧೂಳು ,ವಾಹನ ಗಳ  ಹೊಗೆಯ ರಸಾಯನಿಕಗಳು  ಇತ್ಯಾದಿಗಳನ್ನು ಜತೆಗೆ ತರುವುದರಿಂದ  ಅಲ್ಲರ್ಜಿ ಮತ್ತು ಶೀತ ಇತ್ಯಾದಿ ಆಗುವುದು .ಅದಕ್ಕೆ ತಲೆಗೆ ಟೊಪ್ಪಿ ಇಟ್ಟರೆ ಪ್ರಯೋಜನ ಇಲ್ಲ ,ಮಾಸ್ಕ್ ಹಾಕ ಬಹುದು .ಅದರಂತೆ ಬಹಳ ಮಂದಿ ತಾವು ಯಾವುದೋ ಸಮಾರಂಭದಲ್ಲಿ ಶರಭತ್ ಕುಡಿದು ಅಥವಾ ಐಸ್ ಕ್ರೀಂ ತಿಂದು ಕೆಮ್ಮು  ಬಂತು ಎನ್ನುವರು .ಇಲ್ಲಿ ಶ್ವಾಸ ಸಂಬಂಧಿ ರೋಗಗಳು ಬಹುತೇಕ  ಗಾಳಿಯಲ್ಲಿ ಹರಡುವಂತವು.ಶೀತ  ಕೆಮ್ಮು ಇರುವವರ ಬಳಿ ಮಾತನಾಡುವುದರಿಂದ ಮತ್ತು ಅವರ ಸೀನು ಕೆಮ್ಮು ವಿನ ವೈರಸ್ ಗಳು  ಕಲ್ಯಾಣ ಮಂಟಪದಲ್ಲಿ ಯಥೇಚ್ಛ ಇರುವುವು .

ಸೋಮವಾರ, ಆಗಸ್ಟ್ 17, 2020

ಅಲ್ಲಿ ಪಾಸಿಟಿವ್ ಇಲ್ಲಿ ನೆಗೆಟಿವ್?

(ವಾಚಕರೆ  ನಿಮಗೆ ನನ್ನ ಬ್ಲಾಗ್ ಉಪಯುಕ್ತ ಅನಿಸಿದರೆ  ಫಾಲೋ  ಚಿನ್ಹೆ  ಒತ್ತಿರಿ ಮತ್ತು ಬಲದ  ತುದಿಯಲ್ಲಿ ನಿಮ್ಮ  ಈ ಮೇಯಿಲ್  ವಿಳಾಸ ದಾಖಲಿಸಿರಿ .ನಾನು ಹೊಸ ಲೇಖನ ಪೋಸ್ಟ್  ಮಾಡಿದ ಒಡನೆ ನಿಮಗೆ ಸೂಚನೆ ಬರುವುದು )

 

ದೃಶ್ಯ ಮಾಧ್ಯಮದಲ್ಲಿ   ನೀವು ನೋಡಿರ ಬಹುದು .ಒಂದು ಕಡೆ ಕೋವಿಡ್  ಪೋಸಿಟಿವ್ ಇನ್ನೊಂದು ಕಡೆ ಕೋವಿಡ್ ಇಲ್ಲ ? ಇದೆಂಥಾ ಕಥೆ ? ಇದೆಂತಹ ಮೋಸ ?ಇತ್ಯಾದಿ .

ಆದರೆ ಇದರಲ್ಲಿ ಸೋಜಿಗ ಇಲ್ಲ .ಯಾಕೆಂದರೆ ಮನುಷ್ಯ ನಿರ್ಮಿತ ಟೆಸ್ಟ್ ಗಳು ನೂರಕ್ಕೆ ನೂರು ನಿಖರ ಇರುವುದಿಲ್ಲ .

ಯಾವುದೇ ಟೆಸ್ಟ್ ನ  ವಿಶ್ವಾಸರ್ಹತೆ  ಕುರಿತು ಎರಡು ಮಾಪನ ಇರುತ್ತವೆ .ಒಂದು ಸೂಕ್ಷ್ಮತೆ  (sensitivity) ಮತ್ತೊಂದು  ನಿರ್ಧಿಷ್ಟತೆ (specificity).ನಿಜವಾಗಿ ಒಂದು ಕಾಯಿಲೆ ಇರುವುದು ಟೆಸ್ಟ್  ಅವಗಣನೆ ಮಾಡದೆ ಇರುವುದು ಸೂಕ್ಷ್ಮತೆ . ಯಾರಿಗೆ ಕಾಯಿಲೆ ಇಲ್ಲಾ ಎಂದು ಸರಿಯಾಗಿ ಹೇಳುವುದು ನಿರ್ಧಿಷ್ಟತೆ .ಬಹಳ ಟೆಸ್ಟ್ ಗಳು 

ನೂರಕ್ಕೆ ನೂರು  ಸೂಕ್ಷ್ಮ ಅಥವಾ ನಿರ್ದಿಷ್ಟ ಆಗಿರುವುದಿಲ್ಲ .

ಅದಲ್ಲದೆ ಟೆಸ್ಟ್ ಮಾಡಲು  ರಕ್ತ ,ಗಂಟಲು ದ್ರವ ಅಥವಾ ಇನ್ನಿತರ ಮಾದರಿ ಯನ್ನು ಹೇಗೆ ಸಂಗ್ರಹ ಮಾಡಿದ್ದೇವೆ ,ಹೇಗೆ ಸಾಗಣೆ ಮಾಡಿದ್ದೇವೆ ಎಂಬುದು ಮುಖ್ಯ .ಅವೈಜ್ನಾನಿಕ ಮಾದರಿ ಶೇಖರಣೆ ಮತ್ತು  ಸಾಗಣೆ  ತಪ್ಪು ಫಲಿತಾಂಶ ಕೊಡುವುದು .

ಕೆಲವೊಮ್ಮೆ  ಸಂಗ್ರಹಿಸಿದ  ಮಾದರಿಯ  ಪ್ರಮಾಣ ಸಾಕಷ್ಟು ಇಲ್ಲದಿರ ಬಹುದು .ಶೇಖರಣೆ ಮಾಡಿದ  ಅಂಗಾಂಶ ದಲ್ಲಿ  ರೋಗಾಣು  ಸಾಂದ್ರತೆ ಕಮ್ಮಿ ಇರ ಬಹುದು .ಇಂತಹ ವೇಳೆ  ತಪ್ಪಾಗಿ ಕಾಯಿಲೆ ಇಲ್ಲ ಎಂಬ ರಿಪೋರ್ಟ್ ಬರ ಬಹುದು .