ಬೆಂಬಲಿಗರು

ಸೋಮವಾರ, ಮಾರ್ಚ್ 2, 2015

ಶಸ್ತ್ರಚಿತ್ಸಾ ತಜ್ಞ ಬರಹಗಾರ ಡಾ ಅಶೋಕ್ ಕುಮಾರ್

                                                                                             


                                                             
 
                       

ಮೇಲಿನ  ಚಿತ್ರದಲ್ಲಿ ರುವ ವ್ಯಕ್ತಿ   ಅಸಾಮಾನ್ಯ ವೈದ್ಯರು .ಬೆಂಗಳೂರು ರಾಜಾಜಿ 

ನಗರ ಇ ಎಸ ಐ ಆಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸಾ ನಿಪುಣ ತಜ್ಞ ಮತ್ತು ಅಧ್ಯಾಪಕ . 

ಇಷ್ಟು ಆದರೆ ಅಲ್ಲಿಗೆ ಇವರ ಪ್ರತಿಭೆ ಯ ಕತೆ ಮುಗಿಯಲಿಲ್ಲ .ಇವರೇ ಕತೆ 

ಬರೆಯುವರು,ಕವನ ಸೃಸ್ತಿಸುವರು ,ಕಾದಂಬರಿ ಹರಿಸುವರು ,ಬಹು ಭಾಷಾ 

ಪಾರಂಗತರಾಗಿರುವ ಇವರು  ಮಲಯಾಳಂ ,ತಮಿಳ್ ಬಾಷೆಯ ಶ್ರೇಷ್ಟ 

ಕೃತಿಗಳನ್ನು ಕನ್ನಡದ ಓದುಗರಿಗೆ ಭಾಷಾಂತರದ ಮೂಲಕ ಉಣ ಬಡಿಸಿ 

ಕನ್ನಡಿಗರಿಗೆ ದೊಡ್ಡ ಸೇವೆ ಮಾಡುತ್ತಿದ್ದಾರೆ .


ಮೂಲತಃ ಮಲಯಾಳಿ .ತಂದೆಗೆ  ವಾರಾಹಿ ವಿದ್ಯುತ್ ಯೋಜನೆಯಲ್ಲಿ  ಕೆಲಸ 

ಇದರಿಂದ ಕನ್ನಡ ಅಭ್ಯಾಸವೂ ಆಯಿತು .ಸಾಹಿತ್ಯ ವಾಸನೆ ಇವರನ್ನು ಅನುವಾದ 

ಕ್ಷೇತ್ರಕ್ಕೆ ಇಳಿಸಿತು .ತಾನು ಓದಿ ಸಂತೋಷ ಪಟ್ಟದ್ದನ್ನು ಇತರರೂ ಅನುಭವಿಸಲಿ 

ಎಂಬುದೇ ಇವರ ಮೂಲ ದ್ಯೇಯ .ಅನುವಾದ ಕ್ಷೇತ್ರದ ಇನ್ನೊಂದು ದಿಗ್ಗಜ  ದಿ ಕೆ ಕೆ 

ನಾಯರ್ .ಅವರೂ ಇವರೂ ರಾಮ ಲಕ್ಷ್ಮಣ ರಂತೆ ಕೂಡಿ ಬರೆದರು .ತಗಳಿ 

ಶಿವಶಂಕರ ಪಿಳ್ಳೈ ಅವರ ಬೃಹತ್ ಕಾದಂಬರಿ ಕಯರ್ ಅನ್ನು ಹಗ್ಗ  ಎಂಬ ಮೂರು 

ಸಂಪುಟದ ಪುಸ್ತಕ ರೂಪದಲ್ಲಿ ಜಂಟಿಯಾಗಿ ಅನುವಾದಿಸಿ ತಂದಿರುವರು 

.ಮಲಯಾಳದ ಹೆಸರಾಂತ ಬರಹಗಾರ ರಾದ

ಕಮಲಾದಾಸ್ ,ಶ್ರೀರಾಮನ್ ಮತ್ತು ಅನೇಕರ ಕೃತಿಗಳು ಇವರ ಲೇಖನಿಯ 

ಮೂಲಕ ಕನ್ನಡಕ್ಕೆ ಇಳಿದಿವೆ.

 ಅನುವಾದ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸಾಹಿತ್ಯ 

ಅಕಾಡೆಮಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ .

ಪ್ರಚಾರವನ್ನು ಬಯಸದೆ ಎಲೆಯ ಮರೆಯ ಕಾಯಿಯಂತೆ  ಸರಸ್ವತಿ ಸೇವೆ 

ಮಾಡುತ್ತಿರುವ ಇವರಿಗೆ  ಓದುಗ ಕನ್ನಡಿಗರು ಅಭಾರಿ .

ಖ್ಯಾತ  ವೈದ್ಯ ಲೇಖಕ ಅ೦ಟೋನ್ ಚೆಕೊವ್ ಅಂದಂತೆ   Medicine is my 


lawful wife, and literature is my mistress. When I get fed up 


with 

one, I spend the night with the other. Though it is irregular, 

it is less boring this way, and besides, neither of them loses 

anything through my infidelity."

ವೈದ್ಯ ಶಾಸ್ತ್ರ ನನ್ನ ಧರ್ಮ ಪತ್ನಿ .ಸಾಹಿತ್ಯ ಇಟ್ಟುಕೊಂಡವಳು .ಒಬ್ಬಳು 



ಸಾಕೆನಿಸಿದಾಗ ಇನ್ನೊಬ್ಬಳ ಸಂಗದಲ್ಲಿ ರಾತ್ರಿ ಕಳೆಯುವೆನು. ಇದು ಕ್ರಮ ಬದ್ದವಾಗಿ 

ನಡೆಯದಿದ್ದರೂ  ಕಡಿಮೆ ಬೋರಿಂಗ್  ಮತ್ತು ಎರಡು ಕ್ಷೇತ್ರಕ್ಕೂ ನನ್ನ 

ಅವಿಧೇಯತೆಯಿಂದ  ನಷ್ಟವಿಲ್ಲ" ಮಾತು ಇವರಿಗೆ ಪೂರ್ಣ ಅನ್ವಯಿಸುತ್ತದೆ

ಸಕ್ಕರೆ ಕಾಯಿಲೆಯ ರೋಗ ಲಕ್ಷಣಗಳು ;ವೈಜ್ಞಾನಿಕ ಅವಲೋಕನ

ನಮ್ಮ ಹೊಟ್ಟೆಯಲ್ಲಿ ಮೇದೊಜಿರಕ ಗ್ರಂಥಿ ಇದೆ.ಆಹಾರ ಪಚನಕ್ಕೆ ಬೇಕಾದ ರಸವಿಶೇಶಗಳನ್ನು ಕರುಳಿಗೂ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಇನ್ಸುಲಿನ್ ಹಾರ್ಮೋನ್ ರಕ್ತಕ್ಕೂ ಬಿಡುಗಡೆ ಮಾಡುವ ಪ್ರಾಮುಖ್ಯ ಅಂಗ .
ಇನ್ಸುಲಿನ್ ಹಾರ್ಮೋನ್ ನ ಕಾರ್ಯವೇನು ?
ಸಂಚರಿಸುವ ರಕ್ತದಿಂದ ಎಲ್ಲಾ ಜೀವಕೋಶಗಳಿಗೆ ಗ್ಲುಕೋಸ್ ಸಾಗಣೆ ಮತ್ತು
ಆಪತ್ಕಾಲದಲ್ಲಿ ಉಪಯೋಗಕ್ಕಾಗಿ ದೇಹದ ಉಗ್ರಾಣಗಳಾದ ಲಿವರ್ ಮತ್ತು ಮಾಂಸ ಖಂಡ ಗಳಲ್ಲ್ಲಿ ಸಕ್ಕರೆ ದಾಸ್ತಾನು ಮಾಡುವುದು.
ಆದುದರಿಂದ ಇನ್ಸುಲಿನ್ ಹಾರ್ಮೋನ್ ಕೊರತೆಯಾದರೆ ಜೀವಕೋಶ ಮತ್ತು ಉಗ್ರಾಣ ಗಳಿಗೆ ಹೋಗುವ ಸಕ್ಕರೆ ರಕ್ತದಲ್ಲಿ ಉಳಿದು ಸಕ್ಕರೆ ಪ್ರಮಾಣ ಏರುತ್ತದೆ .ಕವಿ ಹೇಳಿದಂತೆ 'ನೀರು ನೀರು ಎಲ್ಲೆಡೆ ನೀರು ಕುಡಿಯಲೊಂದು ಬಿಂದು  ಕಾಣೆ " .ರಕ್ತದಲ್ಲಿ ಸಕ್ಕರೆ ಇದ್ದರೂ ಜೀವಕೋಶಗಳಿಗೆ ದಕ್ಕುವುದಿಲ್ಲ .ಇದರಿಂದ ಅತೀ ಆಯಾಸ ಮತ್ತು ಹಸಿವು.

ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿದ ಪರಿಣಾಮ ಅದರ ಸಾಂದ್ರತೆ ಅಧಿಕ ಆಗುವುದು .ಮೆದುಳಿನಲ್ಲಿ ರಕ್ತದ  ಸಾಂದ್ರತಾ ಮಾಪಕ ಕೇಂದ್ರ ಇದೆ .ಕೂಡಲೇ ಪರಿಸ್ತಿತಿಯನ್ನ್ನು ಗಮನಿಸಿ ಅದು  ಮೆದುಳಿನಲ್ಲಿ ಇರುವ ದಾಹ ಕೇಂದ್ರಕ್ಕೆ  ಸೂಚನೆ ರವಾನಿಸುತ್ತದೆ .ಅದರಿಂದ ಬಾಯಾರಿಕೆ ಉಂಟಾಗುವುದು ,ದಾಹ ಆರಿಸಲು ನೀರು ಸೇವಿಸಿದರೆ ಸಾಂದ್ರತೆ ಸಾಮಾನ್ಯ ಮಟ್ಟಕ್ಕೆ ಬರಲಿ ಎಂಬ ಉದ್ದೇಶ .                                                                    ಇದರಿಂದ  ತೀರದ ದಾಹ .

ಏರಿದ ಸಕ್ಕರೆ ಯೊಂದಿಗೆ  ತನ್ನಲ್ಲ್ಲಿಗೆ ಹರಿದ ರಕ್ತದಿಂದ ಮೂತ್ರಪಿಂಡಗಳು ಸಕ್ಕರೆಯನ್ನು ಪುನಃ ಹೀರಿ ಮೂತ್ರದ ಮೂಲಕ ಸಕ್ಕರೆ ನಷ್ಟವಾಗದಂತೆ ನೋಡಿಕೊಳ್ಳುವವು.ಆದರೆ ಸಕ್ಕರೆ ಪ್ರಮಾಣ ಮಿತಿ ಮೀರಿದರೆ ಅವುಗಳ ಹಿಡಿತ ಶಿಥಿಲ ಗೊಂಡು ಮೂತ್ರದಲ್ಲಿ ಸಕ್ಕರೆ ವಿಸರ್ಜನೆ ಆಗುವುದು.ಸಕ್ಕರೆಯು ತನ್ನೊಡನೆ

ನೀರನ್ನೂ ಸೆಳೆಯುವುದರಿಂದ ಅತೀ ಮೂತ್ರ ವಿಸರ್ಜನೆ ಆಗುವುದು . ಇದರಿಂದ  ದಾಹ ಇನ್ನ ಷ್ಟು ಏರುವುದಲ್ಲದೆ
ಕ್ಷಣ ಕ್ಷಣ ಕ್ಕೂ ಮೂತ್ರ ಮಾಡ ಬೇಕೆನಿಸುವುದು .

ಇನ್ಸುಲಿನ್ ಕೊರತೆಯಿಂದ ಜೀವ ಕೋಶಗಳಿಗೆ ಸಕ್ಕರೆ ಸಿಕ್ಕದಾಗ ಶರೀರದ ಕೊಬ್ಬು ಕರಗಿ ತಾನಾದರೂ ಸ್ವಲ್ಪ ಶಕ್ತಿ ಕೊಡಲು ಯತ್ನಿಸುವುದು . ಇದರಿಂದ ತೂಕ ಇಳಿದು ಶರೀರ ಬಡವಾಗುವುದು

ಮೂತ್ರದಲ್ಲಿ ಸಕ್ಕರೆ ಯು  ಫಂಗಸ್ ಗಳಿಗೆ ಒಳ್ಳೆಯ ಆಹಾರ .ಇದರಿಂದ  ಮುತ್ರಾಂಗ ದ  ತುದಿಯಲ್ಲಿ  ಫಂಗಸ್ ಸೋಂಕು 
ಪದೇ ಪದೇ ಆಗುವುದು ಸಕ್ಕರೆ ಕಾಯಿಲೆ ಲಕ್ಷಣ

ಇನ್ಸುಲಿನ್  ಕೊರತೆಯಿಂದ ಸಕ್ಕರೆ ಕಾಯಿಲೆ .ಸಕ್ಕರೆ ಕಾಯಿಲೆಯ ರೋಗ ಚಿನ್ಹೆಗಳ ವೈಜ್ಞಾನಿಕ ಕಾರಣ ತಿಳಿಯಿತಲ್ಲವೇ ?

ಭಾನುವಾರ, ಮಾರ್ಚ್ 1, 2015

ಸೌದಿಯ ಎರಡನೇ ರಾತ್ರಿ

ಸೌದಿಯಲ್ಲಿ ಎರಡನೇ ದಿನ .ಆಶ್ರಯದಾತ ರ  ಮನೆಯಿಂದ ಎದ್ದು  ಟ್ಯಾಕ್ಸಿ ಹಿಡಿದು ಅರೋಗ್ಯ ಇಲಾಖೆಯ  ಮುದಿರಿಯಾ (ಆಫೀಸ್) ಕ್ಕೆ ಹೋಗಿ ರಿಪೋರ್ಟ್ ಮಡಿ ಕೊಂಡೆ .ಅಲ್ಲಿ ಇಂಗ್ಲಿಷ್ ಭಾಷೆ ಬರುವವರು ಕಮ್ಮಿ .ಹೆಚ್ಚಿನವರೂ ಸೌದಿ ಅರಬರು .ಕೆಲವರು ಇಜಿಪ್ತಿಯನ್ನರು ಇದ್ದಾರೆ .ಅವರಿಗೆ ಇಂಗ್ಲಿಷ್ ಬರುವುದು .ಈ ಇಜಿಪ್ತಿಯನ್ನರು ಸುಂದರಾ೦ಗರು .ಅವರಿಗೆ ಹಿಂದಿ ಸಿನೆಮಾ ,ಅಮಿತಾಭ್ ಬಚ್ಚನ್ ಅಂದರೆ ಬಲು ಇಷ್ಟ .ಆದರೆ ಬಹಳ ಮಂದಿ ಅವರನ್ನು ನಯ ವಂಚಕರೆಂದು ಕರೆಯುತ್ತಾರೆ..ಇದು ಎಷ್ಟು ಸುಳ್ಳೋ ನಿಜವೋ ತಿಳಿಯೆ.ಮುದಿರಿಯಾದಲ್ಲಿ ನಮ್ಮ ಪಾಸ್ಪೋರ್ಟ್ ತೆಗೆದು ಇಟ್ಟು ಕೊಂಡು
ನಮಗೆ ಇಕಾಮಾ ಎಂಬ ಕೆಲಸ ಪರವಾನಿಗೆ ಕೊಡುತ್ತಾರೆ .ಈ ದಾಖಲೆ ನಮ್ಮ ಕೈಯ್ಯಲ್ಲಿ ಇರ ಬೇಕು .ಏನು ಆಫೀಸ್ ಬ್ಯಾಂಕ್ ಕೆಲಸ ಇದ್ದರೂ ಈ ದಾಖಲೆ ಕೇಳುವರು .ಸೌದಿಯಲ್ಲಿ ಏನು ಕೆಲಸ ,ಉದ್ಯೋಗ ,ವ್ಯಾಪಾರ ಮಾಡುವುದಿದ್ದರೂ ನಮಗೆ ಒಬ್ಬ
ಸೌದಿ ಉದ್ಯೋಗದಾತ ,ಅಥವಾ ಆಶ್ರಯದಾತ ಬೇಕು .ಅವನಿಗೆ ಕಫೀಲ್ ಎನ್ನುವರು .ನನ್ನ ಕಫೀಲ್ ಸೌದಿ ಸರಕಾರ .ಕೆಲಸಕ್ಕೆ ಹೋದವರ ಪಾಸ್ಪೋರ್ಟ್ ಕಫೀಲ್ ನ ಕೈಯ್ಯಲ್ಲಿ ಇರುತ್ತದೆ .ಅಂದರೆ ನಮ್ಮ ಜುಟ್ಟು ಅವರ ಕೈಯ್ಯಲ್ಲಿ .

                        ಈಗ ನಾನು ತಿಂಗಳು ತಿಂಗಳು ಸಂಬಳ ಬರುವ ವೈಭವೀಕೃತ   ಜೀತದಾಳು.ನಮ್ಮ ದೇಶದಿಂದ ಖಾಸಗಿ  ಹೋದ  ಎಸ್ಟೋ ಮಂದಿ  ತಮ್ಮ ಉದ್ಯೋಗದಾತರ  ಶೋಷಣೆ ತಡೆಯಲಾರದೆ  ತಪ್ಪಿಸಿ ಓಡಿ ಹೋಗುತ್ತಾರೆ .ಆದರೆ ಅವರ ಪಾಸ್ಪೋರ್ಟ್ ಕಫೀಲ್ ಬಾಳಿ ಇರುವುದರಿಂದ ಮರಳಿ ದೇಶಕ್ಕೆ ಬರುವುದು ಅಸಾದ್ಯ .ಅಂತಹವರು  ಸೌದಿಯಲ್ಲಿಯೇ  ದೂರದ  ಊರುಗಳಿಗೆ ಓಡಿ ಹೋಗಿ  ತಮ್ಮ ಮಿತ್ರರ ಸಹಾಯದಿಂದ ಅನದಿಕೃತ ವಾಗಿ  ಬೇರೆ ಕಡೆ ಕೆಲಸ ಮಾಡುತ್ತಾರೆ .ಇವರ  ದೌರ್ಬಲ್ಯ ಅರಿತ  ಆ ಊರಿನ  ಧಣಿಗಳು ಅವರನ್ನು ಮತ್ತೂ ಶೋಷಣೆ ಮಾಡುವರು .ಇಂತಹವರು ಸಿಕ್ಕಿ ಬಿದ್ದರೆ ಜೈಲಿನಲ್ಲಿ  ಕೊಳೆಯುವರು .ಇಲ್ಲದಿದ್ದರೆ ಇವರೇ ಪೊಲೀಸರ ಕೈಗೆ ಬಿದ್ದು ತಾವು ಹಜ್ ಯಾತ್ರೆಗೆ ಬಂದವರು ಹಿಂಡು ಅಂಡಳೆದು  ಬೆಂಡಾಗಿ ಬಸವಳಿದು ನೀವೇ ಶರಣು ಎಂದು ಬಂದೆವು ಎಂದು ತಾವೇ ಬಂದನಕ್ಕೆ ಒಳಗಾಗುವರು .ಇವರನ್ನು ನಮ್ಮ ಎಂಬಸಿ ಯವರು ಎಕ್ಸಿಟ್ ವೀಸಾ ಕೊಟ್ಟು ವಾಪಸ್ಸು ಕಳಿಸುವರು.ಈ ನಾಟಕ ಹಲವು ವರ್ಷಗಳಿಂದ ನಡೆದು ಬಂದಿದೆ.
ಇದಲ್ಲದೆ ಕಾನೂನು ಬದ್ದವಾಗಿ ಕೆಲಸ ಮಾಡಿ  ಕೊನೆಗೆ ಮರಳುವಾಗಲೂ ಉದ್ಯೋಗದಾತ  ಪಾಸ್ಪೋರ್ಟ್ ನ್ನು  ವಿಮಾನ ನಿಲ್ದಾಣದಲ್ಲಿ ಒಳ ಹೊಕ್ಕ ಮೇಲೆ ನಮ್ಮ ಕೈಗೆ ಕೊಡುವನು .ಎಲ್ಲಿಯಾದರೂ ವಾಪಸು ಬಂದರೆ ಎಂಬ ಭಯ !

       ನನ್ನನ್ನ್ನು ಘರಿಯಾ ಬನಿ ಮಲಿಕ್ ಎಂಬ ಕಡೆ ಪೋಸ್ಟ್ ಮಾಡಿದ್ದರು .ಅಲ್ಲಿಯ ಜನ ಒಳ್ಳೆಯವೆಂದು ನನ್ನ ಮಿತ್ರರಿಂದ  ಕೇಳಿದ್ದರಿಂದ ಸಂತೋಷ ಆಯಿತು .ಉಪವಾಸ ಸಮಯ ಅದ್ದರಿಂದ ರಾತ್ರಿ ಉಪವಾಸ ಬಿಟ್ಟ ನಂತರ ಮಿನಿಸ್ಟ್ರಿ ಕಾರ್ ನನ್ನನ್ನು ಅಲ್ಲಿಗೆ ಒಯ್ಯುವುದು ಎಂದು ನಾನಿದ್ದ ಮನೆಯ ವಿಳಾಸ ತಗೆದು ಕೊಂಡು ಕಳುಹಿಸಿದರು .

ತಾಯಿಫ್ ಸುಂದರ ನಗರ ,ತಂಪು ಹವೆ ,ಊರು ತುಂಬಾ ಉದ್ಯಾನ ,ಮರಗಳು .ಮರುಭೂಮಿ ಛಾಯೆ ಇಲ್ಲ .ಇಲ್ಲೇ ರಾಜನ  ಬೇಸಿಗೆ ಅರಮನೆ ಇದೆ .ಇಲ್ಲಿಂದ ಮಕ್ಕಾ ಸಮೀಪ .ಟ್ಯಾಕ್ಸಿ ಸ್ಟಾಂಡ್ ನಲ್ಲಿ  ಮಕ್ಕಾ ಮಕ್ಕಾ ಎಂದು ಪ್ರಯಾಣಿಕರನ್ನು  ಆಕರ್ಷಿಸಲು  ಯತ್ನಿಸುತ್ತಿರುವ ಅರಬ್ಬೀ ಟ್ಯಾಕ್ಸಿ ಚಾಲಕರು .ಅಲ್ಲಿ ಮಕ್ಕಾ ಯಾತ್ರೆಗೆ ಸಿದ್ದರಾಗಿ  ಬರಿ ಮಯ್ಯಲ್ಲಿ ಬಿಳಿ ಶಾಲು ಹೊಡೆದು ನಿಂತಿರುವ ಶ್ವೇತ ವಸನಿ ಯಾತ್ರಿಗಳು .ನೋಡಲು ಕಣ್ಣಿಗೆ ಹಬ್ಬ .

                       ನನ್ನ ವಾಹನದ ಚಾಲಕ ರಾತ್ರಿ ಉಪವಾಸ ಮುಗಿಸಿ ,ಊಟ ಮಾಡಿ ಒಂಬತ್ತು ಗಂಟೆ ಗೆ ನನ್ನನ್ನು ಮತ್ತು ತುರಬಾ ಎಂಬ ನಗರದ ಅಸ್ಪತ್ರೆಗೆ ಪೋಸ್ಟ್ ಆಗಿದ್ದ ತಮಿಳ್ ವೈದ್ಯರನ್ನು ಕೂಡಿಸಿ ಕೊಂಡು ಹೊರಟ.ಅರಬರು ಮೂಲತಃ ಮಾತುಗಾರರು .ನಮ್ಮಲ್ಲಿ ಮಾತುಕತೆಗೆ ಯತ್ನಿಸಿ ವಿಫಲನಾದ .ನಾನು ಅಂದು ಕೊಂಡಿದ್ದೆ ತುರಬಾ ನಗರ  ಘರಿಯಾ ಕ್ಕೆ  ಹೋಗುವ ದಾರಿಯಲ್ಲಿ ಇರಬೇಕು ಎಂದು ,ಆದರೆ ಅದು ಬೇರೇ ದಿಕ್ಕಿನಲ್ಲಿ ೩೫೦ ಕಿ ಮೀ ದೂರ ವಿರುವ ನಗರ , ಮೊದಲು
ಅಲ್ಲಿಗೆ ತೆರಳಿ ಆಮೇಲೆ ೪೦೦ ಕಿ ಮೀ ದೂರದ ಘರಿಯಾ ಪ್ರಯಾಣ .ರಾತ್ರಿ ಹೊತ್ತು ,ಚಳಿಗಾಲ ,ಮರುಭೂಮಿ ರಸ್ತೆ . ಆಗಾಗ್ಗೆ  ನಗರದ  ದೀಪಗಳ ಬೆಳಕು .ನೀವೇ ಊಹಿಸಿ ನನ್ನ ಸ್ತಿತಿ .ಡ್ರೈವರ್ ಗಾಡಿಯನ್ನು ೧೫೦ -೧೮೦ ಕಿಮೀ ವೇಗದಲ್ಲಿ ಓಡಿಸುತ್ತಿದ್ದ .ವೇಗ ಮಿತಿ  ಮೀರಿದೊಡನೆ ಬೀಪ್ ಬರುತ್ತಿತ್ತು .ಸೌದಿಯಲ್ಲಿ ಕೆಲಸ ಮಾಡಿದ  ಮಹಿಳಾ  ವೈದ್ಯೆ ಡಾ  ಕ್ವಂಟಾ ಅಹ್ಮದ ಅವರ
ಇನ್ ದಿ ಲ್ಯಾಂಡ್ ಆಫ್ ಇನ್ವಿಸಿಬಲ್ ವುಮನ್ ಎಂಬ ಪುಸ್ತಕದಲ್ಲಿ  ಅರೇಬಿಯಾದ ಡ್ರೈವರ್ ಗಳ ಬಗ್ಗೆ ಹೀಗೆ ಬರೆದಿದ್ದಾರೆ.'ರಿಯಾದ್ ನಲ್ಲಿ  ವಾಹನ ಚಾಲನೆ ಮಾರಣಾಂತಿಕ .ಕ್ರಿಯಾತ್ಮಕ ಮತ್ತು ಲೈಂಗಿಕ ಹೊರದಾರಿಗಳಿಲ್ಲದ ಪುರುಷ ಹಾರ್ಮೋನ್ ಗಳಿಂದ ತುಂಬಿ ತುಳುಕುತ್ತಿರುವ ಅಲ್ಲಿಯ ಗಂಡಸರಿಗೆ ವಾಹನ ವೇಗೋತ್ಕರ್ಷ ವೇ ಉಳಿದ ದಾರಿ "ನಾನು
ಸೌದಿಯಲ್ಲಿ ಇದ್ದಷ್ಟು ಕಾಲ ಈ ವಾಕ್ಯದ ಸತ್ಯತೆ ಮನ ಗಂಡಿದ್ದೇನೆ .ಅಲ್ಲಿಯ ಯುವಕರು ತಮಗೆ ಆಲ್ ಅರೇಬಿಯ ಲೈಸನ್ಸ್ ಇದೆಯೆಂದು ರೋಡು ಬಿಟ್ಟು ಪಾದಚಾರಿಗಳ  ಕಾಲು ದಾರಿಗಳಲ್ಲೂ ವಾಹನ ಏರಿಸಿ ಚಲಿಸುವರು .ಈಗ ಈ ರೋಗ ನಮ್ಮಲ್ಲೂ ಆರಂಭವಾಗಿದೆ .

ಅಂತೂ ಇಂತೂ ಬೆಳಿಗ್ಗೆ  ೪ ಗಂಟೆಗೆ ನಾನು ಘರಿಯಾ ಆಸ್ಪತ್ರೆ ತಲುಪಿದೆ .ಅಲ್ಲಿ ಡ್ಯೂಟಿ ಯಲ್ಲಿದ್ದ ಸುಡಾನಿ ವೈದ್ಯರು ನನಗೆ ವಿಶ್ರಮಿಸಲು ಒಂದು ಕೊಟಡಿ ಒದಗಿಸಿದರು ,ಹಾಸಿಗೆಗೆ ಮೈ ತಾಕಿದ ಒಡನೆ ನಿದ್ದೆ ಆವರಿಸಿತು

ಶನಿವಾರ, ಫೆಬ್ರವರಿ 28, 2015

ರೋಗಿ ಮತ್ತು ನೆಂಟರನ್ನು ಸಂಭಾಳಿಸುವುದು

ವೈದ್ಯರನ್ನು ದೇವರೆಂದು ನಂಬುವ ಕಾಲ ಇತ್ತು.ಈಗ  ವೈದ್ಯರೂ  ಹಣಕ್ಕಾಗಿ  ಸೇವೆ ಒದಗಿಸುವ ವ್ಯಕ್ತಿ ಎಂಬ ಭಾವನೆ ಬಂದಿದೆ

ಇದಕ್ಕೆ ಕಾರಣ ಏನು ಎಂಬುದನ್ನು ಚರ್ಚಿಸಲು ನಾನು ಹೋಗುವುದಿಲ್ಲ .ಒಬ್ಬ ಜ್ವರದ ವ್ಯಕ್ತಿ  ಡಾಕ್ಟರ್ ನೋಡಿದ ಕೂಡಲೇ ತನಗೆ ಯಾವ ಜ್ವರ ಎಂದು ತಿಳಿಯ ಬಯಸುತ್ತಾನೆ .ಅದೂ ವಾಡಿಕೆಯಲ್ಲಿ ಇರುವ ಹಂದಿ ಜ್ವರ ,ಇಲಿ ಜ್ವರ , ಡೆಂಗು 

,ಟೈಫಾಯಿಡ್  ಇತ್ಯಾದಿ ಇಲ್ಲಾ ಎಂದು ನಮ್ಮ ಬಾಯಿಯಿಂದ ಹೇಳಿಸ ಬಯಸುತ್ತಾನೆ .ವೈದ್ಯ ಶಾಸ್ತ್ರ ಓದಿದವನಿಗೆ  ಯಾವುದೇಜ್ವರ ದ  ಕಾರಣ ನಿಖರವಾಗಿ ಹೇಳುವುದು ಎಷ್ಟು ಕಷ್ಟದ ಕೆಲಸ ಎಂದು ತಿಳಿದಿದೆ .ಪ್ರಚಲಿತ ವಿರುವ ಎಲ್ಲ ಜ್ವರಗಳ ಕಾರಣ

ತಿಳಿಸುವ ಪರೀಕ್ಷೆಗಳನ್ನು ನಡೆಸುವುದು ಆರ್ಥಿಕವಾಗಿ ರೋಗಿಗೆ ಭಾರವಾಗುವುದಲ್ಲದೆ ಅನವಶ್ಯಕ ವೂ  ಹೌದು .

ಇನ್ನು ಗಂಬೀರ ಕಾಯಿಲೆಗಳಾದ ಹೃದಯಾಘಾತ ,ಸ್ಟ್ರೋಕ್ ಇತ್ಯಾದಿ ಆದ ರೋಗಿಗಳ ಬಂಧುಗಳಲ್ಲಿ  ಅದನ್ನು ತಿಳಿಸಿದಾಗಬಹಳಷ್ಟು ಮಂದಿ ಸಂಭಂದಿಗಳು  ಅಷ್ಟೇ ಅಲ್ಲವಾ ಡಾಕ್ಟ್ರೆ ಬೇರೇನೂ ಇಲ್ಲವಲ್ಲ ಎನ್ನುತ್ತಾರೆ !ಆಗ ನಾನು ಬೇರೇನು ಬೇಕು

ಇದುವೇ ಸಾಕು ರೋಗಿಯ ಪ್ರಾಣ ತೆಗೆಯಲು ಎನ್ನುತ್ತೇನೆ .                                     ಇನ್ನು ಅಂತಹ ಸಂದರ್ಭದಲ್ಲಿ  ಚಿಂತಿಸಬೇಡಿ ಎಲ್ಲಾ ಸರಿ

ಹೋಗುವುದು ಎಂದು ಸಾಂತ್ವನ ಹೇಳಿದಿರೋ ಜೋಕೆ ! ರೋಗಿಗೆ ದುರದೃಷ್ಟವ್ಶಾತ್  ಏನಾದರು ಸಂಭವಿಸಿದರೆ  ನೀವೇಹೇಳಿದ್ರಲ್ಲ ಸರಿಹೋಗುತ್ತೆ ಎಂದು ಈಗ ಹೀಗೇಕೆ ಆಯಿತು ಎಂದು ಜಗಳ ಕಾಯಿವುವರು ಇದ್ದಾರೆ.


ಒಮ್ಮೆ ಹೃದಯಾಘಾತವಾದ ವ್ಯಕ್ತಿಯೋರ್ವರ  ಪತ್ನಿಗೆ ನಾನು ಚಿಂತಿಸ ಬೇಡಿ  ಎಲ್ಲಾ ಸರಿ ಹೋಗುವುದು ಎಂದುದಕ್ಕೆ

ಆಕೆ  ನನ್ನ ಗಂಡನಿಗೆ  ಹಾರ್ಟ್ ಅಟ್ಯಾಕ್ ಆದಾಗ ನಾನು ಚಿಂತೆ ಮಾಡದೆ ಮತ್ತಾರು ಮಾಡುವುದು ,ಏನು ಮಾತೂಂತ

ಹೇಳುತ್ತಿರ  ಎಂದು ನನ್ನ ಮೇಲೆ ಹರಿ ಹಾಯ್ದರು .

ವಿದೇಶದಲ್ಲಿ ಶಸ್ತ್ರ ಚಿಕಿತ್ಸೆಗಿಂತ ಮೊದಲು ವೈದ್ಯರು ಅದನ್ನು ಮಾಡುವ ವಿಧಾನ ಸಾಧಕ ಭಾಧಕ ಗಳನ್ನ ರೋಗಿಗೆ ವಿಶದ

ವಾಗಿ  ವಿವರಿಸಿ ಒಪ್ಪಿಗೆ ಸಹಿ ತೆಗೆದುಕೊಳ್ಳುವರು .ಅದಕ್ಕೆ ಇನ್ಫಾರ್ಮ್ದ್ ಕನ್ಸೆಂಟ್ ಎನ್ನುವರು .ನಮ್ಮಲ್ಲಿ ಶಸ್ತ್ರ ಚಿಕಿತ್ಸೆಯ ಚಿತ್ರಣ

ಪೂರ್ಣ ವಿವರಿಸಿದರೆ ಹೆದರಿ  ಓಡಿ ಹೋದಾರು .ಅಂತೆಯೇ ಗರ್ಭಿಣಿ ಸ್ತ್ರೀಯರಿಗೆ ಎಕ್ಲ೦ಪ್ಸಿಯ  ,ಎಂಬೋಲಿಸಂ  ,ಹೆರಿಗೆಯ ಸಮಯದಲ್ಲಿ ಬರಬಹುದಾಗ  ಸಮಸ್ಯೆಗಳನ್ನು ವಿವರಿಸಿ ಹೇಳುವುದೂ ಕಷ್ಟ

ಇತ್ತೀಚಿಗೆ ವಯಸ್ಸಾದ ರೋಗಿಗಳ ನ್ನು ನೋಡಲು ಮುಸುಂಬಿ ಆರೆಂಜ್ ತೆಗೆದು ಕೊಂದು ಅಸ್ಪತ್ರೆಗೆ ಬರುವ ನೆಂಟರ ಸಂಖ್ಯೆ

ಕಡಿಮೆ ಆಗಿದೆ .ಅಷ್ಟೇಕೆ  ಐ ಸಿ ಯು ನಲ್ಲಿ ವೃದ್ದರು ಅಡ್ಮಿಟ್ ಆದರೆ  ಡಾಕ್ಟರ್ ಹೊರಗೆ ಬರುವಾಗ ಹಿಂದೆ ಎಲ್ಲಾ ಕೊರಳುದ್ದಮಾಡಿ ಕಾಯುತ್ತಿದ್ದಂತೆ   ಇರುವ ನೆಂಟರು ಈಗ ನಾಪತ್ತೆ .ಎಷ್ಟೋ ವೇಳೆ ನಮ್ಮ ಎಲ್ಲ ಪ್ರಯತ್ನ ಗಳ ಹೊರತಾಗಿತೂ ರೋಗಿಬದುಕಿ ಉಳಿದರು ಎಂದು ಹೇಳಬೇಕಾಗುತ್ತದೆ .

ಇನ್ನು ಕೆಲವು ಪತ್ನಿಯರು ತಮ್ಮ ಗಂಡನಿಗೆ ಕುಡಿಯ ಬೇಡಿ ಎಂದು ಹೇಳಿರಿ ಡಾಕ್ಟ್ರೆ ,ನಾನು ಹೇಳಿದ್ದು ಎಂದು ಬೇಡ ,

ತಾಯಂದಿರು  ಮಕ್ಕಳಿಗೆ ಚಾಕಲೇಟ್ ತಿನ್ನಬೇಡಿ ಎಂದು ಹೇಳಿ ,ಟಿ ವಿ ನೋಡ ಬೇಡಿ ಎಂದು ಹೇಳಿ  ಎಂದು ನಮ್ಮ ಭುಜದಮೇಲಿಂದ ಶೂಟ್  ಮಾಡಲು ಯತ್ನಿಸುತ್ತಾರೆ.

ಈಗ ಮತ್ತೊಂದು ರೋಗ ಸುರುವಾಗಿದೆ .ಮೊಬೈಲ್ ಹಾವಳಿ .ಕ್ಲಿನಿಕ್ ನ  ಒಳಗೆ ಬಂದಾಗ ನಿಮಗೆ ಏನು ತೊಂದರೆ ಎಂದು

   ಕೇಳುವಷ್ಟರಲ್ಲಿ ಮೊಬೈಲ್ ರಿಂಗಿಸುತ್ತದೆ.ನಮ್ಮ ತ್ತ   ಕೈ  ಭಾಷೆ ಮಾಡಿ ನಿಮಿಷ ಗಟ್ಟಲೆ ಗಟ್ಟಿಯಾಗಿ  ಸಂಬಾಷಣೆ


ಮುಂದುವರಿಸ್ತ್ತಾರೆ .ಅವರ ಮಾತು ಮುಗಿದ ಮೇಲೆ ನಮ್ಮ ಪ್ರಶ್ನೆಗೆ ಉತ್ತರ .ಹಲವು ಬಾರಿ ದೂರದಲ್ಲಿರುವ  ಅವರ ಸಂಬಂದಿಮಿತ್ರರಿಗೆ  ಮೊಬೈಲ್ ನಲ್ಲಿ ಕನೆಕ್ಟ್ ಮಾಡಿ  ಮೊಬೈಲ್ ನ್ನು  ಕ್ರಿಕೆಟ್ ಆಟಗಾರರರು  ಪ್ಯಾಂಟಿನಲ್ಲಿ  ಉಜ್ಜುವಂತೆ ಉಜ್ಜಿ

ನೀವೊಮ್ಮೆ  ಇವರ  ಬಳಿ ನಮ್ಮ ಕಾಯಿಲೆ ಬಗ್ಗೆ ಹೇಳಿ ದಾಕ್ತ್ರೆ ಎಂದು ಆರ್ಡರ್ ಮಾಡುತ್ತಾರೆ .

ಅಂತೂ ರೋಗಿಯನ್ನು ಸಂಬಾಳಿಸಿದರೂ ಅವರ ನೆಂಟರನ್ನು ಸಂಬಾಳಿಸುವುದು ಕಷ್ಟ ಎಂಬಂತಾಗಿದೆ


ಅರಬಿ ನಾಡಿನಲ್ಲಿ ಮೊದಲ ದಿನ

ಮುಂಬೈ ನಿಂದ ರಿಯಾದ್ ಗೆ ತೆರಳುವ ಸೌದಿ ಏರ್ವೇಸ್ ವಿಮಾನ .ವಿಮಾನ ತುಂಬಾ ಲುಂಗಿ ಉಟ್ಟ ಕೂಲಿ ಕಾರ್ಮಿಕರು .ಮಲಯಾಳಿಗಳು ಮತ್ತು ಉತ್ತರ ಭಾರತದವರು .ವೈಭವೇತ ವಿಮಾನದಲ್ಲಿ ಇದು ಒಂದು ವಿಚಿತ್ರ ಸಂಯೋಗ ವಾಗಿ ಕಾಣುತ್ತಿತ್ತು.ಹೆಚ್ಚಿನವರು ಅನಕ್ಷರಸ್ಥರು.ಬಹಳ ಮಂದಿಯ ಫಾರಂ ನಾನೇ ತುಂಬಿಸಿ ಕೊಟ್ಟೆ .ವಿಮಾನದ ನಡಾವಳಿಕೆಗಳನ್ನ ಅಕ್ಕ ಪಕ್ಕದವರನ್ನು ನೋಡಿ ಮಾಡುತ್ತಿದ್ದರು .ವಿಮಾನ ತುಂಬಾ ನಿಟ್ಟುಸಿರು ಮತ್ತು ಕನಸುಗಳು ಹೆಪ್ಪುಗಟ್ಟಿದ ವಾತಾವರಣ .
ಮನೆ ಮತ್ತು ಮನೆಯವರನ್ನು ಬಿಟ್ಟು  ಅರಿಯದ ದೂರದ ನಾಡಿಗೆ ಹೋಗುವ ವ್ಯಾಕುಲ ವಾದರೆ ,ಅಲ್ಲಿ ಸಂಪಾದನೆ ಮಾಡಿ
ತಾವು ವೀಸಾ ಕ್ಕೆ ಮಾಡಿದ ಸಾಲ ತೀರಿಸಿ ,ಮಡದಿ ,ತಾಯಿ ತಂಗಿಯರಿಗೆ ಚಿನ್ನ ,ಒಂದು ಪುಟ್ಟ ಮನೆ ಯ ಕನಸು ,ಅಪರಿಚಿತ ಊರಿನ ಅವ್ಯಕ್ತ ಭಯ ಗಳು ಅಮೂರ್ತ ರೂಪದಲ್ಲಿ ಕಾಣಿಸುತ್ತಿದ್ದವು . ವಿಮಾನ ಮೇಲೆ ಹಾರುತ್ತಿದ್ದರೂ ಎಲ್ಲರೂ  ಅದೃಶ್ಯ ಹೊಕ್ಕುಳ ಬಳ್ಳಿಯಿಂದ  ಜನ್ಮ  ನಾಡಿಗೆ  ಬಂಧಿಸಲ್ಪಟ್ಟಿದ್ದರು .                                                                                            ರಮ್ಜಾನ್ ಮಾಸ ಆದುದರಿಂದ ಉಪವಾಸ ಮಾಡದವರಿಗೆ ಮಾತ್ರ ಆಹಾರ ಸರಬರಾಜು ಆಗುತ್ತಿತ್ತು .ರಿಯಾದ್ ವಿಮಾನ ನಿಲ್ದಾಣದಲ್ಲಿ ನಮ್ಮಂಥವರಿಗೆ ಬೇರೆ ಸಾಲು .ಅಮೇರಿಕಾ ಇಂಗ್ಲೆಂಡ್ ಇತ್ಯಾದಿಯವರಿಗೆ ಬೇರೆ ,ಗಲ್ಫ್ ನಾಡಿನವರಿಗೆ ಬೇರೆ ಸಾಲು .ಅಲ್ಲಿಯ ಪೊಲೀಸರು ನಯ ವಿನಯ ಶಿಷ್ಟಾಚಾರಗಳನ್ನು ನಮ್ಮಂತಹ ಹುಲು ಮಾನವರಿಗೆ ತೋರಿ  ಪೋಲು ಮಾಡುವುದು ಏಕೆ ಎಂಬ ಮನೋಭಾವದವರು .(ನಮ್ಮ ದೇಶದ ಸರಕಾರೀ ನೌಕರರು ಬಹಳ ಮಂದಿ ಇದಕ್ಕೆ ಹೊರತಲ್ಲ )
ಬಡ ಜೀವಿಗಳ ಚೀಲ ಗಳನ್ನು ಜಾಲಾಡಿ ನೋಡಿ ದಬಾಯಿಸುತ್ತಿದ್ದರು .ಏನು ಮಾಡುವುದು ?ದ್ರೌಪದಿಯ ವಸ್ತ್ರಾಪಹರಣ ನೋಡಿ ಹಲ್ಲು ಕಡಿಯುತ್ತಿದ್ದ ಪಾಂಡವರ ಪರಿಸ್ಥಿತಿ ಎಲ್ಲರದ್ದು .ನಾನು ಡಾಕ್ಟರ ಎಂದು ತಿಳಿದು ಅಲ್ಪ ಸ್ವಲ್ಪ ವಿನಾಯಿತಿ .

ಅಂತೂ ವಿಮಾನ ನಿಲ್ದಾಣ ದಲ್ಲಿ ಸ್ವಲ್ಪ ನಡೆದು ತಾಯಿಫ್ಫ್ ನಗರಕ್ಕೆ ಹೋಗುವ ವಿಮಾನಕ್ಕೆ ಹತ್ತಿದೆ .ಸಂಜೆ ಆರೂವರೆ ಗೆ ತಾಯಿಫ್ ನಗರದಲ್ಲಿ ಇಳಿಯಿತು .ತುಂತುರು ಮಳೆ ಟರ್ಮಕ್ ನಿಂದ ನಿಲ್ದಾಣ ಸೇರುವಾಗ ಒದ್ದೆ .ಹೊರಗೆ ಶೀತ ಗಾಳಿ .
ಮುಂಬೈಯಲ್ಲಿ ಏಜೆಂಟ್ ಹೇಳಿದ್ದ ,ನಿಲ್ದಾಣಕ್ಕೆ ಅರೋಗ್ಯ ಇಲಾಖೆಯವರು ಬಂದು ಸ್ವಾಗತಿಸುವರು ಎಂದು .ಹಾಗೇ ಅರ್ಧ ಗಂಟೆ ಯಾರಾದರೂ ಪ್ಲೇ ಕಾರ್ಡ್ ಹೊತ್ತು ಕಾಯುತ್ತಿದ್ದರೆಯೇ ಎಂದು ಕೊರಳುದ್ದ ಮಾಡಿ ನಿರೀಕ್ಷಿದೆ .ಸ್ವಲ್ಪ ಭಯವಾಯಿತು.ನನಗೆ ಭಾಷೆ ಬರುವುದಿಲ್ಲ .ಯಾರನ್ನು ಕೇಳುವುದು ?ರಂಜಾನ್ ಮಾಸ ಬೇರೆ ,ಎಲ್ಲರೂ ಉಪವಾಸ ಬಿಡುವ ತರಾತುರಿಯಲ್ಲಿ ಇದ್ದಾರೆ.ಕೊನೆಗೆ ಅಲ್ಲಿಯ ಟ್ರಾವೆಲ್ ಏಜೆಂಟ್ ಕೌಂಟರ್ ನಲ್ಲಿ ಮಲಯಾಳಂ ಭಾಷೆ ಕೇಳಿ ಬಂತು .ಕೂಡಲೇ ಅಲ್ಲಿ ಹೋಗಿ ನನ್ನ ಸಮಸ್ಯೆ ಹೇಳಿಕೊಂಡೆ .ಅವರು ನೀವು ಚಿಂತೆ ಮಾಡ ಬೇಡಿ ,ಅರೋಗ್ಯ ಇಲಾಖೆಯ ವಾಹನ ವಿಮಾನದಲ್ಲಿ ಬಂದಿಳಿದ ನರ್ಸ್ ನವರನ್ನು ಕೊಂಡು ಹೋಗಲು ಬರುತ್ತಿರುತ್ತದೆ .ಅವರನ್ನು ಕೇಳುವಾ ಎಂದನು .ಸ್ವಲ್ಪ ಹೊತ್ತಿನಲ್ಲಿ  ಆ ವಾಹನ ಬಂದು ಸಿಸ್ಟರ್ ಗಣ ಅದನ್ನು ಏರಿತು .ಹೆಚ್ಚಿನವರು ಮಲಯಾಳಿಗಳು .ಟ್ರಾವೆಲ್ ಏಜೆಂಟ್ ಅದರ ಡ್ರೈವರ್ ಅರಬ್ಬಿಯಲ್ಲಿ ನನ್ನನ್ನು ತೋರಿಸಿ ಅರೇಬಿಕ್ ಭಾಷೆಯಲ್ಲಿ ಏನೋ ಹೇಳಿದ .ಡ್ರೈವರ್ ಲಾ ಲಾ (ಇಲ್ಲಾ ಇಲ್ಲ ) ಎಂದು ನಿರಾಕರಿಸಿದ .ಅವನ ಕೆಲಸ ಸಿಸ್ಟರ್ ಗಳನ್ನು ಕೊಂಡೊಯ್ಯುವುದು ,ನನ್ನ ಬಗ್ಗೆ ಗೊತ್ತಿಲ್ಲ ಎಂದ .ನಮ್ಮ ಮಲಯಾಳಿ ಮಿತ್ರ ಬಿಡದೆ ವ್ಯಾನ್ ನ ಒಳಗೆ ನನ್ನನ್ನೂನನ್ನ ಬ್ಯಾಗೇಜ್ ನನ್ನು ತೂರಿ ಸಿಸ್ಟರ್ ಗಳ ಬಳಿ ಮಲಯಾಳಂ ನಲ್ಲಿ  ನನ್ನ ಬಗ್ಗೆ ಹೇಳಿದ . ಅಂತೂ ಡ್ರೈವರ್ ಅಸಹನೆಯಿಂದ ವಾಹನ ಚಾಲನೆ ಮಾಡಿದ .ಒಳಗಿದ್ದ ಸಿಸ್ಟರ್ ಗಣ (ಅವರೆಲ್ಲ್ಲ ಅನುಭವಿಗಳು ,ರಜೆ ಮುಗಿಸಿ ಮರಳುತ್ತಿದ್ದವರು )ನನ್ನನ್ನು ಬಲಿ ಕಂಬಕ್ಕೆ ಒಯ್ಯಲ್ಪಡುತ್ತಿರುವ ಕೈದಿಯನ್ನು ನೋಡುವಂತೆ ಕನಿಕರದಿಂದ ನೋಡುತ್ತಿದ್ದರು .ಒಬ್ಬಳು ಬಾಯಿ ಬಿಟ್ಟು ಕೇಳಿದಳು ಊರಿನಲ್ಲಿರುವ ಪ್ರಾಕ್ಟೀಸ್ ಬಿಟ್ಟು ಈ ನರಕಕ್ಕೆ ಏಕೆ ಬಂದಿರಿ ?ಮತ್ತೊಬ್ಬಳು ,ಸುಮ್ಮನಿರೆ, ಪಾಪ ಹೊಸದಾಗಿ ಬರುತ್ತಿದ್ದಾರೆ .ಹೆದರಿಸ ಬೇಡ ಎಂದು ಗದರಿ ನನಗೆ ಸಮಾಧಾನ ಮಾಡಿದಳು .
ಅಸ್ಟರಲ್ಲಿ ಮಾಲಿಕ್ ಫೈಸಲ್ ಆಸ್ಪತ್ರೆ ಬಂತು .ಸಿಸ್ಟರ್ ನವರು ನನ್ನನ್ನು ಅಲ್ಲಿ ಇಳಿಸುವಂತೆ  ಡ್ರೈವರ್ ಗೆ ಹೇಳಿದರು .ಈ ಆಸ್ಪತ್ರೆಯಲ್ಲಿ ಯಾರಾದರೂ ನಮ್ಮ ದೇಶದ ಡಾಕ್ಟರ ಸಿಗ ಬಹುದು .ಅವರು ನಿಮ್ಮ ಸಹಾಯಕ್ಕೆ ಬಂದಾರು ಎಂದು ಗುಡ್ ಬೈ ಹೇಳಿದರು .ಮನಸಾರೆ ಆ ದೇವತೆಗಳಿಗೆ ವಂದಿಸಿ ಆಸ್ಪತ್ರೆಯ ಕ್ಯಾಶು ವಾಲಿಟಿ ಬಳಿ ಹೋದೆ.ಮಯ್ಯಿ ಒದ್ದೆ ,ಹೊಟ್ಟೆ ಚುರು ಚುರು ಹೇಳುತ್ತಿತ್ತು .ಪಾಕಿಸ್ತಾನಿ ಡಾಕ್ಟರ್ ಒಬ್ಬರು ನನ್ನನ್ನು ಕಂಡು ಮಾತನಾಡಿಸಿ ಅವರಿಗೆ ಬಂದ ಊಟ ಮತ್ತು ಪಾನೀಯ ನನಗೆ ಸ್ವಲ್ಪ ಕೊಟ್ಟರು .ರಾತ್ರಿಗೆ ಅಲ್ಲೇ ಪಕ್ಕದಲ್ಲಿ ಒಂದು ಹೋಟೆಲ್ ಇದೆಯೆಂದೂ  ,ಅಲ್ಲಿ ವಿಶ್ರಮಿಸಿ ಬೆಳಿಗ್ಗೆ  ಅರೋಗ್ಯ ಇಲಾಖೆಯ ಕಚೇರಿ (ಮುದಿರಿಯಾ)ಕ್ಕೆ ತೆರಳ ಬಹುದು ಎಂದು ಸಲಹೆ ಮಾಡಿದರು .ಅಸ್ಟರಲ್ಲಿ ಆಂಧ್ರ ಪ್ರದೇಶ ದ ಒಬ್ಬರು ತರುಣ ವೈದ್ಯ ನಿಮಗೆ ಅಡ್ಡಿಯಿಲ್ಲ ದಿದ್ದರೆ ನನ್ನ ಮನೆಗೆ ಬಂದು ವಿಶ್ರಮಿಸಿ ಎಂದು ನನ್ನನ್ನು ಅಲ್ಪ ದೂರದಲ್ಲಿ ಇದ್ದ ಅವರ ನಿವಾಸಕ್ಕೆ ಕೊಂಡೊಯ್ದರು .ಮುಸ್ಲಿಂ ಆದ ಅವರು ಈಗ ಉಪವಾಸ ಆದುದರಿಂದ ತಾನು ಬೆಳಕು ಹರಿಯುವ ಮೊದಲೇ ಊಟ ಮಾಡುವೆನೆಂದು ,ನೀವು ಸಾವಕಾಶ ಎದ್ದು ಇಲ್ಲಿ ಇತ್ತ ಆಹಾರ ದಲ್ಲಿ ಬೇಕಿದ್ದು ತಿನ್ನಿರಿ ಎಂದರು .ಎಂತಹ ಒಳ್ಳೆಯ ಮನಸ್ಸು .ಇವರಿಗೆ  ನಾನು ಚಿರ ಋಣಿ .

ಅರಬರ ರಾಣಿ

ಸೌದಿ ಅರೇಬಿಯಾ ದಲ್ಲಿ  ಅಲ್ಲಿನ ಜನರನ್ನು ಸರಕಾರ ಸಾಕುವುದು .ಪೆಟ್ರೋಲಿಯಂ ಹಣ ಬಂದ ಮೇಲೆ ಶ್ರಮ ಜೀವನ  ಬಿಟ್ಟು ಸುಖ ಜೀವನ. ಅವರಿಗೆ  ಮನೋರಂಜನೆ ಎಂದರೆ  ಮದುವೆ ಆಗುವುದು ಮತ್ತು ಮಕ್ಕಳನ್ನು ಮಾಡುವುದು .ಸಿನಿಮಾ ,ಸಂಗೀತ,ಸ್ನೇಹ ಕೂಟಗಳಿಗೆ  ಅಲ್ಲಿ ಅವಕಾಶ ಇಲ್ಲ .ಆಫ್ಘಾನರು ರೋಟಿ (ಕುಬೂ್ಸ್) ಮಾಡಿ ಕೊಡುವರು , ಅಮೇರಿಕಾ ಕುಡಿಯಲು  ಪೆಪ್ಸಿ ಕೊಡುವುದು   .ಇದರಿಂದ ಸಕ್ಕರೆ ಕಾಯಿಲೆ ಹೃದಯ ಕಾಯಿಲೆ ಮತ್ತು ಉದರ್ ಶೂಲೆ ಸಾಮಾನ್ಯ .ಇದು ೨೦೦೪ ರ ವಿಚಾರ . ಸರಕಾರೀ
ಆಸ್ಪತ್ರೆ ಗಳಲ್ಲಿ  ಅಸಿಡಿಟಿ ಗೆ  ( Cimetidine H2 blocker) ಸಿಮೆಟಿಡಿನ್ ಮತ್ತ್ತು ರಾಣಿ ಟಿಡಿನ್ ಕೊಡುತ್ತಿದ್ದರು . ಸಿಮೆಟಿಡಿನ್  ಸರಬರಾಜು ಹೆಚ್ಚು ಇದ್ದುದರಿದ ಹೊಟ್ಟೆ ನೋವು ಇದ್ದವರಿಗೆ  ಅದನ್ನೇ ಬರೆಯುತ್ತಿದ್ದೆವು .ಈ ಔಷಧಿಗೆ  ಗಂಡು ಹಾರ್ಮೋನ್ ಪ್ರಭಾವ ತಗ್ಗಿಸುವ ಗುಣವಿದೆ. ಹೆಚ್ಚಿನ ಅರಬರು ಈ ಮಾತ್ರೆ ತಿಂದ ಮರುದಿನವೇ ಓಡಿ ಬಂದು ನಮಗೆ ಈ ಮಾತ್ರೆ ಬೇಡ ನಮಗೆ  ರಾಣಿ ಯನ್ನೇ ಕೊಡಿ ಎನ್ನುತ್ತಿದ್ದರು . ರಾಣಿ ಟಿಡಿನ್ ಗೆ ಅವರು ರಾಣಿ ಎಂದು ಕರೆಯುತ್ತಿದ್ದರು .ಅದಾ ಸಿಮೆತಿದೀನ್ ಮಾಫಿ ಕೊಯಿಸ್ ,ಲಾಜಿಮ್ ಇಬ್ಗಾ  ಹಬುಬ್ ರಾಣಿ   ದಕ್ತುರ್ ಎಂದು ಅಂಗಲಾಚುತ್ತಿದ್ದರು . ಯಾಕೆ ಎಂದು ಕೇಳಿದರೆ  ಗುದ್ ಗುದ್ ಮಾಫಿ ಎನ್ನ್ನುತ್ತಿದ್ದರು .ನಾನು ಸಿಸ್ಟರ್ ನ್ನು  ಈ ಗುದ್ ಗುದ್ ಏನಮ್ಮ ಎಂದು ಕೇಳಿದೆ .ಅದಕ್ಕೆ ಆಕೆ ಮುಸುನಗುತ್ತಾ   ಅದು  ಲೈಂಗಿಕ ದೌರ್ಬಲ್ಯ (ಲೋಸ್ ಆಫ್ ಲಿಬಿಡೋ).ಎಂದರು.  ನಾನು ಅಂದು ಕೊಂಡೆ ಸೌದಿಯ ಮಹಾರಾಜ ಬೇಕೆಂದೇ  ಪ್ರಜೆಗಳಿಗೆ ಈ ಔಷಧಿ  ನೀಡುತ್ತಿದ್ದಾನೆ .ಅದಲ್ಲದೆ  ಈ ಸಿಮೆಟಿಡಿನ್  ಮಾತ್ರೆಯ ಗುಣ ಪರೀಕ್ಷೆಗೆ ಅರಬರಿಗೆ ತಿನಿಸಿ ನೋಡಿದರೆ ಸಾಕು .
  ಅಲ್ಲದಿದ್ದರೂ ಅಲ್ಲಿಯವರಿಗೆ ಸ್ವಲ್ಪ ಗುದ್ ಗುದ್ ಜಾಸ್ತಿ ಅನ್ನಿ. ಒಬ್ಬ ಅರಬಣ್ಣ  ವಿಮಾನ ನಿಲ್ದಾಣ ದಲ್ಲಿ  ಉದ್ಯೋಗಿ. ಅವನ ಹೆಂಡತಿ ನಮ್ಮಲ್ಲಿ  ಹೆರಿಗೆಗಾಗಿ ದಾಖಲಾಗಿದ್ದರು .ಇಲ್ಲಿ  ಆಕೆ ಪ್ರಸವ ವೇದನೆ ಅನುಭವಿಸುತ್ತಿದ್ದರೆ ಆ ಕಡೆ ಆತ ಇನ್ನೊಂದು ಮದು ವೆ  ತಯಾರಿಯಲ್ಲಿ ಇದ್ದ .ನಾನು ಆರಂಭದಲ್ಲಿ ಹೋದಾಗ ಡಾಕ್ಟ್ರೆ ಹೇಗಿದ್ದೀರಿ ,ನಿಮಗೆ ಎಷ್ಟು ಹೆಂಡತಿಯರು ಎಂದು ವಿಚಾರಿಸುವುದು ಸಾಮಾನ್ಯವಾಗಿತ್ತು .ಕಂ ಹೂರ್ಮ (ಎಷ್ಟು ಪತ್ನಿಯರು).ನಾನು ಒಬ್ಬಳೇ ಎಂದರೆ ಹುಬ್ಬೆರಿಸುತ್ತಿದ್ದರು .
   ಈ ವಿಷಯ ಬರೆಯುವಾಗ  ಇನ್ನೊಂದು ನೆನಪು ಬರುತ್ತದೆ.ನನ್ನ ಪಿ  ಜಿ . ಪ್ರಾಕ್ಟಿಕಲ ಪರೀಕ್ಷೆ  ಹೈದರಾಬಾದ್ ನ ಓಸ್ಮಾನಿಯಾ ಆಸ್ಪತ್ರೆ ಯಲ್ಲಿ .ನಾನೂ ನನ್ನ ಮಿತ್ರ ಡಾ ಸಂದೀಪ್ (ಈಗ ಮಂಗಳೂರಿನ ಪ್ರಸಿದ್ದ ಗ್ಯಾಸ್ಟ್ರೊ ಎಂಟೆರಲಾಜಿಸ್ಟ್ ) ಮದ್ರಾಸಿನಿಂದ ಪರೀಕ್ಷಾರ್ಥಿ ಗಳಾಗಿ ಹೋಗಿದ್ದೆವು .ಖ್ಯಾತ ಪ್ರೊಫ್ ಬಿ ಕೆ ಸಹಾಯ  ಮುಖ್ಯ ಪರೀಕ್ಷಕರು .ಅವರು ಎಷ್ಟು ಒಳ್ಳೆಯವರೆಂದರೆ ನಮಗೆ ಕೂಲೆಜಿನ ಗೆಸ್ಟ್ ಹೌಸ್ ನಲ್ಲಿ ವಸತಿ ಕೂಡ ಏರ್ಪಡಿಸಿದ್ದರು .ಮುನ್ನಾ ದಿನ ರಾತ್ರಿ ವಿದ್ಯುತ್ ವೈಫಲ್ಯ .ಸೊಳ್ಳೆ ಕಡಿತದಿಂದ ನಿದ್ದೆಯೇ ಇಲ್ಲ .ಸೆಖೆ ಬೇರೆ .ಪರೀಕ್ಷೆಯಲ್ಲಿ ನನಗೆ ಮುಖ್ಯ ಕೇಸ್ ಆಗಿ ಓರ್ವ ಮುಸ್ಲಿಂ ಮಹಿಳೆ .ಹಿಂದಿ ಗೊತ್ತಿದ್ದುದರಿಂದ ಬಚಾವ್ .
ಕ್ಯಾ ತಕ್ಲೀಫ್ (ಏನು ತೊಂದ್ರೆ )ಎಂದು ಕೇಳಿದ್ದೆ ತಡ ಗೊಳೋ ಎಂದು ಅಳತೊಡಗಿದಳು .ಏನು ಹೇಳಲಿ ಸಾಹೇಬರೇ ನನ್ನ ಗಂಡನಿಗೆ ನಾನು ಬೇಡವಾಗಿದ್ದೇನೆ .ದೇವರಿಗೂ ಬೇಡ .ನನಗೆ ಅಸೌಖ್ಯ ಅದ  ಮೇಲೆ ಪತಿ ನನ್ನನ್ನು ಮನೆಯಿಂದ ಹೊರ ಹಾಕಿ ಎರಡನೇ  ಬೀ ಬಿ ಯೊಡನೆ ಇರುತ್ತಾರೆ .ನನ್ನನ್ನು ಕೇಳುವವರು ಅಲ್ಲಾ ಮಾತ್ರ .ಅವಳನ್ನು ಸಮಾಧಾನ ಮಾಡಿ ಪರೀಕ್ಷೆ ತೊಡಗಲು ಹರ ಸಾಹಸ ಮಾಡ ಬೇಕಾಯಿತು. ಪಕ್ಕದಲ್ಲಿ ಸಂದೀಪ್ ಗೆ ಡಯಾಬಿಟಿಕ್ ನುರೋಪತಿ ಕೇಸ್ ,ರೋಗಿ ತೆಲುಗು ಮಾತನಾಡುವ ಗಂಡಸು.ಅವರಿಗೆ  ಒಬ್ಬ ಭಾಷಾಂತರ ಸಹಾಯಕ್ಕೆ ಸಣ್ಣ ಪ್ರಾಯದ ನರ್ಸ್ .ಸಂದೀಪ್ ಹಿಸ್ಟರಿ ತೆಗೆದು ಕೊಳ್ಳುವಾಗ ರೋಗಿಗೆ ಲೈಂಗಿಕ ದೌರ್ಬಲ್ಯ ಇದೆಯೇ ಎಂದು ಕೇಳಬೇಕಿತ್ತು .ತಾನೆ ತಮಿಳ್ ಕನ್ನಡ ಮಿಶ್ರಿತ ಭಾಷೆಯಲ್ಲಿ ಕೇಳಿದ ರೋಗಿಗೆ ಅರ್ಥ ಆಗಲಿಲ್ಲ .ಆಮೇಲೆ ಸಿಸ್ಟರ್ ಗೆ  does he have impotence ಎಂದು ಕೇಳಿ ಎಂದ .ಅಕೆಗೆ ಅರ್ಥ ಆಗಲಿಲ್ಲ .ಕೈಕರಣೆ ಮಾಡಿ ತೋರಿಸಿದ .ಸುಮಾರು ಹತ್ತು ನಿಮಿಷ ಈ ನೋಟ ಸಾಗಿತ್ತು .ಪಕ್ಕದ ಬೆಡ್ ನಲ್ಲಿ ರೋಗಿಯನ್ನು ಪರಿಕ್ಷಿಸುತ್ತಿದ್ದ ನಾನು ಸಂದೀಪ್ ಗೆ ಬಿಟ್ಟು ಬಿಡಿ ಎಂದು ಸಂಜ್ಞೆ ಮಾಡಿದೆ .ಇಬ್ಬರೂ ಪಾಸು ಆದೆವೆನ್ನಿ .
ಇದೇ ಸಂದೀಪ್ ಮದ್ರಾಸ್ನಲ್ಲಿ ಬಂದ ಹೊಸದು.ಒಬ್ಬ ರೋಗಿ ಮೆಡಿಕಲ್ ಓ ಪಿ ಯಲ್ಲಿ ಕಾಲು ನೋವಿಗೆಂದು ಬಂದವನನ್ನು ಪರೀಕ್ಷೆ ಮಾಡಿ ಇದು ಎಲುಬಿನ ಸಮಸ್ಯೆ ನೀ ಪೋಯಿ ಮೂಳೆ ಡಾಕ್ಟರ ಪಾರ್ ಎಂದರು .ರೋಗಿಗೆ ಆಶ್ಚರ್ಯ .ನನಗೆ ಕಾಲು ನೋವು .ಈ ಡಾಕ್ಟರ ಮೆದುಳು ಡಾಕ್ಟರ ನೋಡಲು ಹೇಳುತ್ತಿದ್ದಾರೆ ಏಕೆ?ತಮಿಳಿನಲ್ಲಿ ಮೂಳೆ ಎಂದರೆ ಮೆದುಳು .


ಗುರುವಾರ, ಫೆಬ್ರವರಿ 26, 2015

ಎಚ್ ೧ ಏನ್ ೧ ಜಾತಕ

                                       


ವೈರಸ್ ಗಳಲ್ಲಿ  ಎರಡು ಜಾತಿ .ಡಿಎನ್ಎ ವೈರಸ್  ಮತ್ತು   ಅರ ಏನ್ ಎ ವೈರಸ್ . ಎರಡನೇ ವರ್ಗದಲ್ಲಿ  ಅರ್ತ್ಹೋ  ಮಿಕ್ಷೊ  ವೈರಸ್ ಎಂಬ ಗುಂಪು .ಈ ಗುಂಪಿನಲ್ಲಿ  ಆರು   ಒಳ ಪಂಗಡ ಗಳು ಇನ್ಫ್ಲುಯೆಂಜಾ ಎ ಬಿ ಸಿ ಮೊದಲ ಮೂರು . ಹೆಸರೇ  ಹೇಳುವಂತೆ  ಫ್ಲೂ ಉಂಟು ಮಾಡುವ ವೈರಸ್ ಗಳು .

ಈಗ  ತಾಂಡವ  ಆಡುತ್ತಿರುವ  ಏಚ೧ ಎನ೧  ಇನ್ಫ್ಲುಯೆಂಜಾ ಎ ಗುಂಪಿಗೆ ಸೇರಿದ  ರೋಗಾಣು . ಎಚ್ ಎಂದರೆ  ಹೆಮಗ್ಲುಟಿನಿನ್(Haemaglutinin)  -ಎಂದರೆ ಕೆಂಪು ರಕ್ತ ಕಣಗಳನ್ನು  ಒಟ್ಟು ಸೇರಿಸಬಲ್ಲ ವಸ್ತು , ಏನ್ ಎಂದರೆ ನ್ಯುರಮಿಡೆಸ್(Nuramidase)  ಜೀವ ಕೋಶಗಳನ್ನು ಛೇದಿಸಬಲ್ಲ  ಎನ್ ಝಯಿಂ .  ಇವೆರಡು  ಈ ರೋಗಾಣು ವಿನ  ಪ್ರಮುಖ ಅಸ್ತ್ರಗಳು . ಈ ಅಸ್ತ್ರಗಳಲ್ಲಿ

ಆಗಾಗ ವಿನ್ಯಾಸ ಬದಲಾಗುತ್ತ ಇರುತ್ತವೆ .ಇದರಿಂದ ಲೇ  H1N1 ,H1N2,H5N1 ಇತ್ಯಾದಿ .

ಈ ವೈರಸ್ ಹಂದಿಗಳಲ್ಲಿ ಸ್ವಾಶಕೋಶದ ಕಾಯಿಲೆ ಉಂಟು ಮಾಡುವುದು .ಕೆಲವೊಮ್ಮೆ ಮನುಷ್ಯನು ಸಿಕ್ಕಿ ಕೊಳ್ಳುವನು ಇದನ್ನು ಹಂದಿ ಜ್ವರ ಎಂದು ಕರೆಯುವರು. ಈ ವೈರಸ್ ನ  ಬೇರೆ  ಪ್ರಭೇದಗಳು  ಹಕ್ಕಿ ಜ್ವರ ,ನಾಯಿ ಜ್ವರ ಮತ್ತು ಕುದುರೆ ಜ್ವರ ಗಳು .ಈ ಹೆಸರುಗಳು  ಪ್ರಾಥಮಿಕ ವಾಗಿ  ಈ ರೋಗಾಣುಗಳು  ಆಕ್ರಮಿಸುವ ಜೀವಿಗಳ ಹೆಸರುಗಳು .ನಡುವೆ  ಆಗಾಗ ನರರನ್ನೂ ಕಾಡುವುವು .

೨೦೦೯ ರಲ್ಲಿ ಈ ಜ್ವರವನ್ನು ಖಂಡಾಂತರ (Pandemic) ಘೋಷಿಸಲಾಯಿತು .
ಈ ಫ್ಲೂ ಜ್ವರದ ವೈರಸ್ ಗಳು ಬಹಳ ಬುದ್ಧಿವಂತರು . ಅವು ಆಗಾಗ್ಗೆ ತಮ್ಮ ರಚನೆಯನ್ನು ಬದಲಾಯಿಸಿ ಕೊಳ್ಳುವ ಗೋಸುಂಬೆ  ಜಾತಿಯವು .ಇದರಿಂದ ಇವಕ್ಕೆ ಪರಿಣಾಮ ಕಾರಿ  ಲಸಿಕೆ ರಚನೆ ಇನ್ನೂ ಮರೀಚಿಕೆ ಯಾಗಿದೆ .