ಬೆಂಬಲಿಗರು

ಗುರುವಾರ, ಫೆಬ್ರವರಿ 26, 2015

ಒಂದು ಕಣದ ಪುರಾಣ

ನನ್ನ  ಹೆಸರು  ಪ್ಲೇಟ್ ಲೆಟ್ ,ತ್ರೋಮ್ಬೋ ಸೈಟ್  ಎಂದೂ ಕರೆಯುವರು .ನಾನು ಮಹಾಭಾರತದ ವಿದುರನಂತೆ ತೆರೆಯ

 ಮರೆಯ  ಸಂಭಾವಿತ.ನಿಮಗೆಲ್ಲಾ ಕೆಂಪು ಮತ್ತು ಬಿಳಿ ರಕ್ತ ಕಣಗಳ ಬಗ್ಗೆ ಸರಿಯಾಗಿ ಗೊತ್ತು .ಕೆಂಪು ರಕ್ತ ಕಣಗಳು

 ಶ್ವಾಸಕೋಶ ದಿಂದ ಜೀವಕೋಶ ಗಳಿಗೆ  ಆಮ್ಲಜನಕ ಸಾಗಿಸುದು ,ಬಿಳಿ ಕಣಗಳು  ರೋಗಾಣುಗಳನ್ನು ಆಕ್ರಮಿಸಿ

ಕೊಳ್ಳುವುದು ಇತ್ಯಾದಿ.ಆದರೆ ನನ್ನ ಬಗ್ಗೆ ನಿಮಗೆ ಏನು ತಿಳಿದಿದೆ ?ಏನೂ ಇಲ್ಲ .ನಾನೇ ಹೇಳುತ್ತೇನೆ .ನಿಮ್ಮ ಶರೀರದಲ್ಲಿ

ಒಂದು ಗಾಯವಾಯಿತು ಎಂದುಕೊಳ್ಳಿ .ಆಗ ನಾನು ಮತ್ತು ನನ್ನ  ಹಿಂಡು ಆ ಜಾಗಕ್ಕೆ ಧಾವಿಸಿ  ನಮ್ಮಗಳ ದೇಹಗಳನ್ನೇ

ಅಡ್ಡವಿರಿಸಿ ರಕ್ತನಾಳಗಳಿಂದ ರಕ್ತ ಸೋರದಂತೆ ತಡೆಗಟ್ತುತ್ತೇವೆ. ಅ  ಮೇಲಿಂದ ಹೆಪ್ಪುಗಟ್ಟಿಸುವ ಸಾಧನಗಳು ಬಂದು

ಗಾಯವನ್ನು ಸೀಲ್ ಮಾಡುವುದು .ನೀವು  ಪುರಾಣದ ಉದ್ಧಾಲಕನ ಕತೆ ಕೇಳಿದ್ದಿರಲ್ಲವೇ? ನಾನು ನಿಮ್ಮ ಶರೀರದ

 ಉದ್ದಾಲಕ .ನಾನು ಮತ್ತು ನನ್ನ ಮಿತ್ರರು ಇಲ್ಲದಿದ್ದಲ್ಲಿ ನೀವು ಸಣ್ಣ ಗಾಯ ಆದರೂ ರಕ್ತ ಸ್ರಾವದಿಂದ ಸಾಯುವಿರಿ .


 ಕೆಲವೊಮ್ಮೆ  ಅಪದ್ಧ ಸಂಭವಿಸುವುದು ಉಂಟು .ಹೃದಯದ ರಕ್ತ ನಾಳಗಳಲ್ಲಿ  (coronary artery) ನೀವು ಮಿತಿ ಮೀರಿ

ತಿಂದ ಕೊಬ್ಬು ಸೇರಿಕೊಂಡು  ನಮ್ಮನ್ನು ಆಹ್ವಾನಿಸಿದರೆ ನಾವೇನು ಮಾಡಬೇಕು ?ನಮ್ಮ ಹಿಂಡು ಅಲ್ಲಿ ಒಟ್ಟು ಸೇರಿ

ಕೊಳವೆ ಬಂದ್ಹ್ ಮಾಡುವ ಆಟ ಆಡುತ್ತೇವೆ .ಅದರಿಂದ ನಿಮ್ಮ ಹೃದಯಕ್ಕೆ ರಕ್ತ ಸಿಗದೇ ನಿಮ್ಮ  ಹೃದಯಕ್ಕೆ ಆಘಾತ ಆದರೆ

ಅದು ನಿಮ್ಮದೇ ತಪ್ಪಲ್ಲವೇ?ನಮ್ಮನ್ನು ಬೇರೆ ಬೇರೆ ಮಾಡಲು ನೀವುಗಳು ಆಸ್ಪಿರಿನ್ ಇತ್ಯಾದಿ  ಔಷಧಿ  ಪ್ರಯೋಗಿಸುವಿರಿ .

ನನ್ನಂತಹ ಗುಬ್ಬಿಯ ಮೇಲೆ ಎಂತೆಂತಹ ಬ್ರಹ್ಮಾಸ್ತ್ರ ? ಕ್ಲೋಪಿದೊಗ್ರೆಲ್ ,ಅಬಿಕ್ಷಿಮಾಬ್ ,ತಿಕ್ಲೋಪಿದೀನ್ ,ಇನ್ನೂ ಏನೇನು

ಔಷಧಿಗಳು ?

ನನ್ನನ್ನು ದ್ವೇಷಿಸುತ್ತಿರುವ ನಿಮಗೆ ನನ್ನ   ಪ್ರಾಮುಖ್ಯತೆ ಅರಿಯಲು ಎಂದೇ  ದೇವರು ನಮ್ಮ ಪ್ರಾರ್ಥನೆ ಕೇಳಿ ಡೆಂಗು

ಜ್ವರವನ್ನು ಸೃಷ್ಟಿಸಿದ. ಡೆಂಗುವಿನಿಂದ ನೀವು ನನ್ನ್ನ ಇರುವಿಕೆ ಬೆಗ್ಗೆ ಅರಿತಿರಿ .ನಿಮ್ಮ ಪತ್ನಿ ಕೆಲವೊಮ್ಮೆ ಜಗಳವಾಡುವಾಗ

ನಾನು ಇಲ್ಲವಾದರೇ ಬುದ್ಧಿ  ಬರುವುದು ಎನ್ನುವರಲ್ಲವೇ ?ಹಾಗೆ .


ಆದರೆ ಒಂದು ಗುಟ್ಟು ನಾನು ಹೇಳುವೆನು .ಡೆಂಗು ಜ್ವರದಲ್ಲಿ ನಾನು ಎಷ್ಟು ನಶಿಸಿದರೂ ಫೇನಿಕ್ಷ್ ನಂತೆ ಮೇಲೆದ್ದು

ಬರುವೆನು .ಅದಕ್ಕೆಂದು ಹೊರಗಿನಿಂದ ಪ್ಲೇಟ್ ಲೆಟ್  ತರಿಸುವ ಅವಶ್ಯಕತೆ ಇಲ್ಲ .ನನ್ನ ಮಹಿಮೆ ಎಸ್ಟಿದೆ  ಎಂದರೆ  ಸುಮಾರು

ಮೂರುವರೆ ಲಕ್ಷವಿರುವ ನಮ್ಮ ಸೈನ್ಯ ಐದು ಸಾವಿರಕ್ಕೆ ಇಳಿದರೂ ನಾವು ಪರಿಸ್ತಿತಿ ನಿಭಾಯಿಸುವೆವು .ಸಾಧಾರಣ ವೈರಲ್

ಜ್ವರಗಳಲ್ಲೂ ನಮ್ಮ ಸಂಖ್ಯೆ ಸ್ವಲ್ಪ ಕುಗ್ಗ ಬಹುದು .ಅದಕ್ಕೆಲ್ಲ್ಲಾ ನೀವು ಹೆದರುವ ಅವಶ್ಯಕತೆ ಇಲ್ಲಾ.

ಬುಧವಾರ, ಫೆಬ್ರವರಿ 25, 2015

ಪ್ರಸಿದ್ದ ವೈದ್ಯರು

ಅಷ್ಟೇನು ಪ್ರಾಕ್ಟೀಸ್ ಇಲ್ಲದ ನನಗೆ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ಹೋಗುವ ಭಾಗ್ಯ ಸಿಗುತ್ತದೆ .ಅಲ್ಲಿ

ಅತಿಥೇಯರು ನನ್ನನ್ನು ಪ್ರಸಿದ್ದ ವೈದ್ಯರು ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಬಂದಿರುತ್ತಾರೆ

ಎಂದು ಪರಿಚಯಿಸುವಾಗ ಮುಜುಗರ ಆಗುತ್ತದೆ . ನನ್ನಲ್ಲಿಗೆ ಬರುವ ರೋಗಿಗಗಳು ನಗರದ ಪ್ರಸಿದ್ಧ ವೈದ್ಯರ ಹೆಸರು ಹೇಳಿ

ಅಲ್ಲಿ ಬಹಳಷ್ಟು ಕ್ಯೂ ಇರುವುದರಿಂದ ತತ್ಕಾಲಕ್ಕೆ ನಿಮ್ಮ ಕೈಗುಣ ನೋಡೋಣ ಎಂದು ಬಂದೆವೆಂದು ಓಪನ್ ಆಗಿ ಹೇಳುವರು .

ನಾನು ಸುಮ್ಮನೆ ಕತೆ ಪುಸ್ತಕ ಓದುತ್ತಲೋ ಕಂಪ್ಯೂಟರ್ ಕುಟ್ಟುತ್ತಲೋ ಇರುವುದು ಜನನಿತ ವಾದ ವಿಚಾರ ,


ಮತ್ತೆ ನನಗೆ ರೋಗಿಗಳು ಬರುವುದಾದರೂ ಹೇಗೆ ?ನನಗೆ ಓರ್ವ ಧರ್ಮ ಪತ್ನಿ ಇದ್ದಾರೆ .( ಧರ್ಮ ಪತ್ನಿ ಎಂದು ಏಕೆ

ಕರೆಯುತ್ತಾರೆ ಎಂದು ಇದು ವರೆಗೆ ತಿಳಿದಿಲ್ಲ .ಅಧರ್ಮ ಪತ್ನಿ ಯರಿಂದ ಬೇರ್ಪಡಿಸಲು ಆ ತರಹದ ಪತ್ನಿಯರೇ ಇಲ್ಲವಲ್ಲ

.ನಾವು ಜಗಳವಾಡುವಾಗ ಹೆಂಡತಿ ನಾನು ಧರ್ಮಕ್ಕೆ ಸಿಕ್ಕಿದವಳೋ ಎಂದು ಲಾ ಪಾಯಿಂಟ್ ಹಾಕುವುದುಂಟು )

ಈಕೆ ವಾರಕ್ಕೆ ಒಂದು ದಿನ  ಲಲಿತಾ ಸಹಸ್ರನಾಮ ವನ್ನೂ .ಇನ್ನೊಂದು ದಿನ  ವಿಷ್ಣು ಸಹಸ್ರನಾಮವನ್ನೂ ,ಮಿಕ್ಕುಳಿದ

ದಿನಗಳಲ್ಲಿ  ನನಗೆ ಸಹಸ್ರ ನಾಮವನ್ನೂ ಮಾಡುತ್ತಾಳೆ .ದೈವ ಭಕ್ತೆಯಾದ ಆಕೆ ಈ ಸಹಸ್ರನಾಮದ  ಕೊನೆಗೆ  ಸರ್ವೇ ಜನಾ

ಸುಖಿನೋಭವಂತು  ಎಂದು ಪ್ರಾರ್ಥಿಸುವುದು ವಾಡಿಕೆ .ಇದರಿಂದಾಗಿ  ಪಕ್ಕದ ಸರ್ವೇ (ಒಂದು ಊರಿನ ಹೆಸರು ),

ಕಾಣಿಯೂರು ಪ್ರದೇಶದಲ್ಲಿ ಎಲ್ಲರೂ ಆರೋಗ್ಯವಂತರಾಗಿ  ನನ್ನ  ಪ್ರಾಕ್ಟೀಸ್ ಗಣನೀಯವಾಗಿ  ಇಳಿಯಿತು .ಇದನ್ನು ಅವಳಿಗೆ

ಹೇಳಿದರೆ ಸರ್ವೇ ಜನಾ ಬಿಟ್ಟು ಲೋಕ ಸಮಸ್ತಾ ಸುಖಿನೋ ಭವಂತು ಎನ್ನ ತೊಡಗಿ ನಾಲ್ದೆಸೆ ಯಿಂದ  ನನಗೆ  ಇದ್ದ

ರೋಗಿಗಳೂ ಇಲ್ಲದಂತಾಯಿತು .


ನನಗೆ ಬರುವ ಮುಜುಗರ ನನ್ನ ವೈರಿಗಳಿಗೂ ಬೇಡ .ಒಂದು ಮುಂಜಾನೆ ನಿವೃತ್ತ ಪ್ರಿನ್ಸಿಪಾಲ್ ಓರ್ವರು ತಮ್ಮ ಪತ್ನಿ

ಸಮೇತವಾಗಿ ಬಂದು ತನಗೆ ಗ್ಯಾಸ್ಟ್ರಿಕ್ ,ಒಳ್ಳೆಯ ಔಷಧಿ ಕೊಡಿ ಎಂದು ಹೇಳಿದರು ,ಆದರೆ ಅವರ ರೋಗ ಲಕ್ಷಣ

ನೋಡುವಾಗ ನನಗೆ ಸಂಶಯ ಬಂದು ಇ ಸಿ ಜಿ ಮಾಡಿ ನೋಡಿದರೆ  ಅವರಿಗೆ ಲಘು ಹೃದಯಾಘಾತ ಆಗಿತ್ತು .ಅದನ್ನು

ಅವರಿಗೆ ತಿಳಿಸಿ( ಒಳ್ಳೆ ಡಯಾಗ್ನೋಸಿಸ್ ಮಾಡಿದ ಹೆಮ್ಮೆಯಲ್ಲಿ  )ದಾಗ   ಆ ದಂಪತಿಗಳ  ಮರು  ಪ್ರಶ್ನೆ  :ಒಳ್ಳೇ ಡಾಕ್ಟರ್


ಯಾರಿದ್ದಾರೆ ? ನಾನು  ಒಳ್ಳೆಯ ಡಾಕ್ಟರ್ ಎಂದು ನಾನೆ  ಹೇಗೆ ಹೇಳಿಕೊಳ್ಳುವುದು ?


 ನನ್ನ ಗುರುಗಳಾದ  ಡಾ ಎಂ ಕೆ ಮಣಿಯವರು ಸಾವಿರಾರು ಔಷಧಿಗಳು ಇರುವುದರಿಂದ  ಯಾವುದೇ ಒಂದನ್ನು ಬರೆಯುವ

ಮೊದಲು ಅದರ ಸರಿಯಾದ ಡೋಸ್ ಮತ್ತು ಅಡ್ಡ  ಪರಿಣಾಮಗಳ ಬಗ್ಗೆ  ಸಂದೇಹ ಇದ್ದರೆ  ಅದರ ಮಾಹಿತಿ ಇರುವ

ಪುಸ್ತಕವನ್ನು ಓದಿ ಕೊಡಿರಿ ಎಂದು ಹೇಳುತ್ತಿದ್ದರು .ಅದನ್ನು ಶಿರಸಾವಹಿಸಿ  ಪಾಲಿಸುತ್ತಿದ್ದ ನನ್ನನ್ನು ನೋಡಿ ರೋಗಿಗಳು ಇವನು


ಪುಸ್ತಕ ನೋಡಿ  ಔಷಧಿ ಕೊಡುವ ಡಾಕ್ಟರ ಎಂದು ಪುಕ್ಕಟೆ ಪ್ರಚಾರ ಮಾಡಿದ  ಪರಿಣಾಮ ನನ್ನ ಪಾಡು ಹೇಳ ತೀರದಾಯಿತು

.ಈಗ  ನಾನು ಪುಸ್ತಕದ ಬದಲಿಗೆ  ಕಂಪ್ಯೂಟರ್ ಉಪಯೋಗಿಸ  ತೊಡಗಿದ್ದೇನೆ .ಪರಿಸ್ಥಿತಿ  ಕೊಂಚ ಸುಧಾರಿಸಿದೆ .


ಮತ್ತೊಂದು ಸಮಸ್ಯೆ ಇದೆ .ನಾನು ಬಂಧು ಮಿತ್ರರ ಮನೆ ಮದುವೆ ಸಮಾರಂಭಗಳಿಗೆ ಮುಹೂರ್ತಕ್ಕೆ ಸರಿಯಾಗಿ

ಹೋಗುತ್ತಿದ್ದೆ ಅಲ್ಲಿ  ಬಂದ ಕೆಲವೇ ಮಂದಿ ನನ್ನನ್ನು ಸಖೇದಾಶ್ಚರ್ಯ ಮತ್ತು ಮರುಕದಿಂದ ನೋಡಿ ಏನು ಡಾಕ್ಟ್ರೆ ಪೇಶೆ೦ಟ್ಸ್

ಇಲ್ಲವೇ ಎಂದು  ಪ್ರಶ್ನಿಸುತ್ತಿದ್ದರು .ಆ ಮೇಲೆ ನನ್ನ ಹಿತೈಷಿಗಳು ಇಂತಹ ಕಾರ್ಯಕ್ರಮಗಳಿಗೆ  ಊಟದ ಸಮಯಕ್ಕೆ

ಹಾಜರಾಗುವುದೇ ಮರ್ಯಾದೆ ಎಂದು ಹೇಳಿದರು.
   

   ಮೊನ್ನೆ ಒಬ್ಬರು ಬಂದರು .ನಮ್ಮ ಪಕ್ಕದ ಓಣಿಯಲ್ಲಿ  ವಾಹನಗಳ  ಬಿಡಿಭಾಗ ಮಾರುವ ಅಂಗಡಿ ಉಧ್ಘಾಟನೆ ಕಾರ್ಯಕ್ರಮ .

ಒಂದೆರಡು ಸ್ಥಳೀಯ   ಪ್ರಮುಖರ ಹೆಸರು  ಹೇಳಿ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಕರೆದಾಗ ತಾವು ತುಂಬಾ ಬ್ಯುಸಿ

ಎಂದೂ ನನ್ನನ್ನು ಕೇಳಿನೋಡಿ ಅವರಿಗೆ ಹೆಚ್ಚು ಕೆಲಸ ಇರುವುದಿಲ್ಲ ಎಂದು ಹೇಳಿದರೆಂದು .ಮತ್ತೇನು ಮಾಡಲಿ

ಯೋಗ್ಯರಾದವರು  ಯಾರೂ ಸಿಗುತ್ತಿಲ್ಲ  ನೀವು ಬಂದರೆ ಆಗುತ್ತಿತ್ತು ಎಂದರು !ಮತ್ತೊಮ್ಮೆ  ಒಂದು ಪುಸ್ತಕ ಪ್ರದರ್ಶನ

ಉದ್ಘಾಟನೆಗೆ  ನಿಗದಿತ ಮುಖ್ಯ ಅತಿಥಿ ಕೊನೆ ಗಳಿಗೆಯಲ್ಲಿ ಕೈಕೊಟ್ಟಾಗ  ಅದರ ಪ್ರಾಯೋಜಕರು ಏನು ಮಾಡುವುದು ಸಾರ್

ಹೊತ್ತು ಬಂದಾಗ ಕತ್ತೆ ಕಾಲು ಹಿಡಿ ಎಂಬಂತೆ ನಿಮ್ಮನ್ನು ಕೇಳಿಕೊಳ್ಳುತ್ತೇವೆ ಎಂದು ಅಂಗಲಾಚಿದರು .                                          


ನನಗೊಂದು ಭಯ ಮತ್ತು ಆಸೆ .ಇತ್ತೀಚಿಗೆ ಮದುವೆ ಮಂಟಪದಿಂದ ವರನ ನಾಪತ್ತೆ  ಎಂಬ ವಾರ್ತೆಗಳನ್ನು  ಮೇಲಿಂದ ಮೇಲೆ

ಓದುತ್ತಿರುತ್ತೇವೆ .ಎಲ್ಲಿಯಾದರೂ ಅಂತಹ ಸಂದರ್ಭದಲ್ಲಿ  ನನಗೆ ಏನಾದರೂ ಬದಲಿ ವರನಾಗಿ  ನನಗೆ  ಚಾನ್ಸ್

ಸಿಗಬಹುದೋ ಎಂಬ ಆಸೆ ಮನದಲ್ಲಿ ಇದೆ .ದಯವಿಟ್ಟು  ಈ ವಿಚಾರವನ್ನು ನನ್ನ ಹೆಂಡತಿಗೆ ಹೇಳಬೇಡಿ .

ಸೋಮವಾರ, ಫೆಬ್ರವರಿ 23, 2015

ದಂತ ಕತೆ

ಮೊನ್ನೆ ನಗರದ ದಂತ ವೈದ್ಯ ಸಂಘದವರ ವರ್ಷದ ಮೊದಲ ಸಭೆಗೆ ಮುಖ್ಯ                                         ಅತಿಥಿಯಾಗಿ ಕರೆದಿದ್ದರು .ದಂತ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅನುಭವ 
ಇದ್ದರೂ ಇಂತಹ ಸಭೆಯಲ್ಲಿ ಮೊದಲ ಭಾರಿ ಭಾಗವಹಿಸುತ್ತಿರುವುದರಿಂದ 
ಪ್ರಥಮ ಚುಂಬನದಲ್ಲಿ ದಂತ ಭಗ್ನವಾಗುವ ಒಳ ಭಯ . ಹಾಗೇನಾದರೂ 
ಆದಲ್ಲಿ ದಂತ ವೈದ್ಯರೇ ಇದ್ದರಲ್ಲಾ  ಎಂಬ ಧೈರ್ಯದಿಂದ ಒಪ್ಪಿಕೊಂಡೆ                                                      .ಅಂತೂ ಕಾರ್ಯಕ್ರಮ ಸಾಂಗವಾಗಿ ನೆರವೇರಿತು ಎನ್ನಿ. ದಂತ ವೈದ್ಯರು ,ಪ್ರತಿಭಾ ವಂತರು 
ಏಕಕಾಲದಲ್ಲಿ ವಿಜ್ಞಾನಿಗಳೂ ಕಲಾಕಾರರೂ ಆಗಿರಬೇಕಾಗುತ್ತದೆ .

ನನಗೆ ಈ ದಂತ ವೈದ್ಯರ ಮೇಲೆ ಒಂದು ಸಿಟ್ಟು ಇದೆ .ಪರಿಣತ ಹಲ್ಲಿನ
ವೈದ್ಯರಿ0ದಾಗಿ ಚಕ್ಕುಲಿ ಚಿಪ್ಸ್ ಗಳ ಕ್ರಯ ಗಗನಕ್ಕೆ ಏರಿದೆ.ಹಣ್ಣು ಹಣ್ಣು
ಮುದುಕರೂ ಕೃತಕ ಹಲ್ಲುಗಳನ್ನು ಇಟ್ಟು ಇವುಗಳನ್ನು ಸವಿಯ ತೊಡಗಿದ
ಮೇಲೆ ಇವುಗಳನ್ನು ತಯಾರಿಸುವರ ಅದೃಷ್ಟ ಖುಲಾಯಿಸಿದೆ .ಅಲ್ಲದೆ  ಅಡಿಕೆಗೆ
ಇಷ್ಟು ಕ್ರಯ ಬರುವಲ್ಲಿ ಹಲ್ಲಿನ ವೈದ್ಯರ ಪಾಲೂ ಗಣನೀಯ ಎಂಬುದನ್ನು
ಮರೆಯ ಬಾರದು .
ಇನ್ನೊಂದು ದೂರು ಈಗ ಪ್ರಾಯವಾದವರು ಕಾಣ ಸಿಗುವುದೇ ಇಲ್ಲ .ದಾಳಿಂಬೆ
ಹಣ್ಣಿನಂತಹ  ಕೃತಕ ಹಲ್ಲುಗಳು ಮತ್ತು ಬಣ್ಣ ಹಾಕಿದ ಕೇಶಗಳಿಂದ
ಅಲಂಕೃತರಾಗಿ ಯಾರು ಹಿರಿಯರು ಯಾರು ಕಿರಿಯರು ಎಂದು ಮೇಲ್ನೋಟಕ್ಕೆ
ತಿಳಿಯುವುದಿಲ್ಲ .ಮೊನ್ನೆ ಮನೆಯಲ್ಲಿ ಒಂದು ಧಾರ್ಮಿಕ
ಕಾರ್ಯಕ್ರಮ .ಪುರೋಹಿತರು  ಹಿರಿಯಲ್ಲರಿಗೆ ನಮಸ್ಕಾರ ಮಾಡಿ ಬನ್ನಿ
ಎಂದರು .ಸಭೆಯಲ್ಲಿ ನೋಡಿದರೆ ಎಲ್ಲರೂ ಕಿರಿಯರಂತೆ ಕಾಣುತ್ತಾರೆ !ನನ್ನ
ಪೇಚು ಯಾರಿಗೂ ಬೇಡ .
ದೇವಲೋಕದಿಂದ ರಂಭೆ ಉರ್ವಶಿಯರನ್ನು ಭೂಲೋಕದಲ್ಲಿ ತಪಸ್ವಿಯರ
ತಪೋಭಂಗ ಮಾಡಲು ಹೋಗ ಹೇಳಿದಾಗ ಅಲ್ಲಿ ಚಿರಯವ್ವನೆಯರಾದ  ತಮಗೆ
ವೃದ್ದಾಪ್ಯ ಬರುವುದನ್ನು ಸಹಿಸಲು ಆಗುವುದಿಲ್ಲ ,ಆದುದರಿಂದ ನಾವು
ಹೋಗಲಾರೆವು ಎಂದು ಅಪ್ಸರೆಯರು  ಮುಷ್ಕರ ಹೂಡಿದರಂತೆ.ಅದಕ್ಕೆಂದೇ
ದೇವೆಂದ್ರನು ಅವರ ಸಮಾಧಾನಕ್ಕೆ  ದಂತವೈದ್ಯರನ್ನು ಸೃಷ್ಟಿಸಿದನೆಂಬ ದಂತ
ಕತೆಯಿದೆ.
ಕೃತಕ ಹಲ್ಲಿನ ಬಲದಿಂದ ಆ ವಯಸ್ಸಿಗೆ ತಿನ್ನ ಬಾರದ್ದೆನ್ನಲ್ಲ ತಿಂದು ಹೊಟ್ಟೆ
ಬಾಧೆಯಿಂದ ನೆರಳುವವರನ್ನು ಚಿಕಿತ್ಸುವ  ಕೆಲಸ ನಮ್ಮ ಮೇಲೆ .!
ಅಜ್ಜ ಅಜ್ಜಿಯರು ನನಗೆ ಹಸಿವೇ ಇಲ್ಲ (ಮೊದಲಿನ ಹಾಗೆ ತಿನ್ನಲು ಆಗುವುದಿಲ್ಲ )
ಎಂದರೆ ದೇವರು ನಮ್ಮ ಶರೀರಕ್ಕೆ ಬೇಕಷ್ಟು ಮಾತ್ರ ತಿನ್ನುವ ಹಸಿವೆ
ಕೊಡುತ್ತಾನೆ .ಅಲ್ಲದೆ ನಿಮಗೆ ಹಸಿವು ಹೆಚ್ಚಿಸುವ  ಔಷಧಿ ಕೊಟ್ಟು ನಿಮ್ಮ ಸೊಸೆ
ಮಕ್ಕಳ ಶಾಪ ಕೇಳಬೇಕಾದೀತು .(ಇವರ ಆಹಾರ ಬೇಡಿಕೆ ಈಡೇರಿಸುವರು
ಅವರಲ್ಲವೇ?)ಎಂಬ ಸಿದ್ದ ಉತ್ತರ ಕೊಡುವೆನು . ಅದರಂತೆ ವಯಸ್ಸಾದವರು 
ಕಿವಿ ಕೇಳಿಸುವುದಿಲ್ಲ ಎಂದರೆ  ಮಕ್ಕಳು ಮೊಮ್ಮಕ್ಕಳು ಬೈಯ್ಯುವುದನ್ನು
ಕೇಳಿಸದಿರಲಿ ಎಂದು ದೇವರೇ ಕೇಳುವ ಶಕ್ತಿ ಕಸಿದುಕೊಂಡು ಉಪಕಾರ
ಮಾಡುತ್ತಾನೆ ಎನ್ನುತ್ತೇನೆ .
ಅಂತೂ ಇಂತೂ ದಂತ ವೈದ್ಯರು ಮತ್ತು ಸೌಂದರ್ಯ ತಜ್ಞ ರಿಂದಾಗಿ  ಎನಗಿಂತ

ಹಿರಿಯರಿಲ್ಲ ಎಂದು ಪರಿತಪಿಸುವಂತಾಗಿದ್ದಂತೂ  ನಿಜ 

ಶನಿವಾರ, ಜನವರಿ 11, 2014

ಕನ್ಯಾನ ಬಾಲ್ಯದ ನೆನಪುಗಳು

ನಮ್ಮ ಶಾಲೆಯಲ್ಲಿ ಹೆಸರಿಗೆ ಒಂದು ವಾಚನಾಲಯ ಇತ್ತು.ಸ್ಟಾಫ್ ರೂಂ ನ ಒಂದು ಕಪಾಟಿನಲ್ಲಿ ಪುಸ್ತಕಗಳು ಭದ್ರವಾಗಿ

ಇದ್ದವು .ಮಕ್ಕಳಿಗೆ ಅದನ್ನು ಓದಲು ಕೊಡುತ್ತಿರಲಿಲ್ಲ.ಓದುವ ಗೀಳು ಹಚ್ಚಿಕೊಂಡಿದ್ದ ನಾನು ಪಂಚಾಯತ್ ಲೈಬ್ರರಿ ಯ ಆಶ್ರಯ

ಪಡೆಯ ಬೇಕಾಯಿತು .ಪಂಚಾಯತ್ ಕಾರ್ಯದರ್ಶಿಯವರೇ ಲೈಬ್ರರಿಯನ್ .ಅವರು ಫೀಲ್ಡ್ ಕೆಲಸಕ್ಕೂ ಹೋಗುತ್ತಿದ್ದುದರಿಂದ

ನಾವು ಹೋದಾಗಲೆಲ್ಲ ಸಿಗುತಿರಲಿಲ್ಲ .ಹಲವು ಭಾರಿ ನಿರಾಶೆಯಿಂದ ಮರಳಿದ್ದು ಉಂಟು.ಈ ವಾಚನಾಲಯದಿಂದ ನಾನು

ಏನ್ ನರಸಿಂಹಯ್ಯ ನವರ ಪತ್ತೇದಾರಿ ಕಾದಂಬರಿ ಗಳಿಂದ ತೊಡಗಿ ಕಾರಂತ ,ಅ ನ ಕೃ,ಬೀಚಿ ,ಭೈರಪ್ಪ ,ರಾವ್ ಬಹಾದ್ದೂರ್

ಕುವೆಂಪು ,ಮಾಸ್ತಿ ಯವರ ಬರವಣಿಗೆಗಳನ್ನು ಓದುವ ಅವಕಾಶ ಸಿಕ್ಕಿತು.ಮುಂದೆ ಪುತ್ತೂರು ನಗರ ಗ್ರಂಥಾಲಯ ,ಹುಬ್ಬಳ್ಳಿ

ನಗರ ಗ್ರಂಥಾಲಯ ,ಮೈಸೂರ್ ,ಹಾಸನ ,ಸಕಲೇಶಪುರ ,ಮಡಿಕೇರಿ ನಗರ ಗ್ರಂಥಾಲಯ ಗಳು  ,ಮದ್ರಾಸ್ ಅಯನಾವರಂ ಕನ್ನಡ ಸಂಘ

ವಾಚನಾಲಯ ,ಮದ್ರಾಸ್ ಡಿಸ್ಟ್ರಿಕ್ಟ್ ಲೈಬ್ರರಿ ,ಕೋನ್ನೆಮಾರ ಕೇಂದ್ರ ಗ್ರಂಥಾಲಯ ,ಮದ್ರಾಸ್ ಬ್ರಿಟಿಶ್ ಕೌನ್ಸಿಲ್ ಲೈಬ್ರರಿ


ಪಾಲ್ಘಾಟ್,ಕಲ್ಲಿಕೋಟೆ ನಗರ ವಾಚನಾಲಯಗಳ ಸದಸ್ಯ ನಾಗಿ ಓದುವುದನ್ನು ಮುಂದುವರೆಸಲು ನಮ್ಮ ಪಂಚಾಯತ್

ಲೈಬ್ರರಿ ಓನಾಮ ಹಾಕಿತು .

                   ಕನ್ಯಾನ ಶಾಲೆಯ ಹಿಂದೆ ಒಂದು ಬೋರ್ಡಿಂಗ್ ಇತ್ತು ,ರಾಮ ಭಟ್ ಎಂಬುವರು ಅದನ್ನು ನಡೆಸಿಕೊಂಡು


ಬರುತ್ತಿದ್ದರು .ಅವರೂ ಅವರ ಕುಟುಂಬದ ಸದಸ್ಯರೂ ದುಡಿದು ಈ ಊಟದ ಮನೆ ನಡೆಸುತ್ತಿದ್ದರು.ದೂರದಿಂದ ಬರುತ್ತಿದ್ದ

ಮಕ್ಕಳು ಮಧ್ಯಾಹ್ನದ  ಊಟಕ್ಕೆ ಇಲ್ಲಿ ಬರುತ್ತಿದ್ದರು .ರಾಮ ಭಟ್ಟರು ಒಳ್ಳೆಯ ಜ್ಞಾನಿಯೂ ಆಗಿದ್ದರು .ಊಟ ಬಡಿಸುವ ಸಮಯ

ಅಧ್ಯಾಪಕರುಮತ್ತು ಅವರ ಮಧ್ಯೆ ಸರಸ ಸಂಭಾಷಣೆ ನಡೆಯುತ್ತಿದ್ದ್ದು ನಾವು ಎಳೆಯರು ಅದನ್ನು ಆಸ್ವಾದಿಸುತ್ತಿದ್ದೆವು .ವಾರ

ಎರಡು ವಾರಗಳಿಗೊಮ್ಮೆ ನಮ್ಮ ಮನೆಗೂ ಬಾಳೆ ಎಲೆ ಕೊಂಡು ಹೋಗಲು ಬರುತ್ತಿದ್ದರು.ಅವರ ಬೋರ್ಡಿಂಗ್ ಗೆ ಪ್ರತ್ಯೇಕ

ಬಾವಿ ಇರಲಿಲ್ಲ .ಊರ ಬಾವಿಯೋ ಫಾರ್ಲಾಂಗ್ ದೂರ .ಸರದಿಯಲ್ಲಿ ಅಲ್ಲಿಂದ ನೀರು ಸೇದಿ ತಂದು ಅಡಿಗೆ,ಸ್ನಾನ ,ಕೈ

 ತೊಳೆಯುವ ನೀರು ಶೇಖರಿಸುತ್ತಿದ್ದರು .ಈಗ ಬೋರ್ಡಿಂಗ್ ಕಟ್ಟಡ ಇಲ್ಲ.ರಾಮ ಭಟ್ಟರ ಕುಟುಂಬ ವೂ ಊರು ಬಿಟ್ಟು

ಹೋಗಿದೆ .ಆ ಜಾಗದಲ್ಲಿ ಬಿಸಿ ಊಟದ ಕಟ್ಟಡ ಎದ್ದಿದೆ .

ಭಾರತ ಸೇವಾಶ್ರಮ

   ನಾವು ಪ್ರೈಮರಿ ಶಾಲೆಯಲ್ಲಿ ಇದ್ದಾಗ ಧೀರೇಂದ್ರನಾಥ ಭಟ್ಟಾಚಾರ್ಯ ಎಂಬುವರ ಆಗಮನ ಕನ್ಯಾನ ಕ್ಕೆ ಆಯಿತು .ಅವರು


ಕಲಂಜಿಮಲೆಯಲ್ಲಿ ಅದಿರು ಶೋಧನೆಗಾಗಿ ಕಾರ್ಯ ನಿಮಿತ್ತ ಬಂದವರು ,ಕನ್ಯಾನದಲ್ಲಿ ನೆಲೆಸಿ ಭಾರತ ಸೇವಾಶ್ರಮ

ಆರಂಬಿಸಿದರು.ಅನಾಥ .ಬಡ ಮಕ್ಕಳಿಗೆ ಆಸರೆಯಾದರು.ಇವರಿಗೆ ಉದ್ದನೆಯ ಗದ್ದವಿದ್ದು ರವೀಂದ್ರನಾಥ ಟಾಗೂರ್ರನ್ನು

ಹೋಲುತ್ತಿದರು . ಕೈಯಲ್ಲಿ ಯಾವಾಗಲು ಒಂದು ಬೀಡಿ.ಊರು ಪರವೂರಲ್ಲಿ ಬೇಡಿ ಸಂಸ್ಥೆ ಕಟ್ಟಿದರು .ಈಗ

ಇದು ಬೆಳೆದು ಬೈರಿಕಟ್ಟೆ ಸಮೀಪ ಇನ್ನೊಂದು ವಿಶಾಲವಾದ ಇನ್ನೊಂದು ಕ್ಯಾಂಪಸ್ ಹೊಂದಿದೆ ,ಅನಾಥಾಶ್ರ ಮ  ದೊಡನೆ

ವೃದ್ಧಾಶ್ರಮ ನಡೆಸಿಕೊಂಡು ಬರುತ್ತಿದೆ .ಆಶ್ರಮ ವಾಸಿ ಗಳು  ಅಗರ ಬತ್ತಿ ತಯಾರಿಸಿ ಮಾರಿ ಆಶ್ರಮದ ಆರ್ಥಿಕ ಕತೆಗೆ

ತಮ್ಮ ಕೊಡುಗೆ ನೀಡುತ್ತಿದ್ದರು .ಕೇವಲ ಬೀಡಿ ಕಟ್ಟುವುದನ್ನು ಮಾತ್ರ ಕಂಡಿದ್ದ ನಮ್ಮ ಹಳ್ಳಿಗರಿಗೆ ಇದೊಂದು ಸೋಜಿಗ.

ಈ ಆಶ್ರಮ ದಿಂದ ನಮ್ಮ ಶಾಲೆಗೆ ಮಕ್ಕಳು ಬರುತ್ತಿದ್ದರು.ಇವರ ಪೈಕಿ ಒಬ್ಬರಾದ ಶ್ರೀ ಈಶ್ವರ ಭಟ್ ಭಟ್ಟಾಚಾರ್ಯರ

ಮಗಳನ್ನು ವಿವಾಹವಾಗಿ ಈಗ ಸಂಸ್ತೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಜಾತಿ ಭೇಧ ವಿಲ್ಲದೆ

ಒಂದಾಗಿ ಬಾಳ ಬಹುದು ಎಂದು ತೋರಿಸಿ ಕೊಟ್ಟ ಆಶ್ರಮ.
.(ಮುಂದುವರಿಯುವುದು)


ಶುಕ್ರವಾರ, ಜನವರಿ 10, 2014

ಕನ್ಯಾನ ಪೇಟೆ

  ಕಳ೦ಜಿ ಮಲೆಯ ದಕ್ಷಿಣ ತಟಕ್ಕೆ ಸುತ್ತು ಹಾಕಿ ಕೊಂಡು ಪಶ್ಚಿಮಕ್ಕೆ ಬಂದ ರಸ್ತೆ ಕನ್ಯಾನದಲ್ಲಿ ಕವಲೊಡೆದು  ಒಂದು ಉಪ್ಪಳಕ್ಕೂ

ಇನ್ನೊಂದು ಮಂಜೆಶ್ವರಕ್ಕೂ ಹೋಗುತ್ತವೆ.ಉಪ್ಪಳ ರೋಡಿನ ಎಡ ಬದಿ ಎತ್ತರದಲ್ಲಿ  ಪ್ರಾಥಮಿಕ ಶಾಲೆ .ಮಾರ್ಗಕ್ಕೆ

ಹೊಂದಿಕೊಂಡು  ಸಾರ್ವಜನಿಕ ಬಾವಿ .ಶಾಲೆಗೂ ಅದುವೇ ನೀರು  ಪೂರೈಸುವುದು. ಶಾಲಾ ಕಟ್ಟಡ ದ ನಂತರ ಬರುವುದು

ಆಟದ ಮೈದಾನ . ಮುಂದೆ  ಎತ್ತರದಲ್ಲಿ ಹೈ ಸ್ಕೂಲ್ . ಉಪ್ಪಳ ರಸ್ತೆಯ ಬಲ ಬದಿಗೆ ಶೇಕಬ್ಬನವರ ಜೀನಸು ಅಂಗಡಿ

,ಅದಕ್ಕೆ ತಾಗಿಕೊಂಡು ರೇಶನ್ ಅಂಗಡಿ .ಮುಂದೆ ಮಹಾದೇವ ಶಾಸ್ತ್ರಿಗಳ ಮೆಡಿಕಲ್ ಶಾಪ್. ಜವುಳಿ ಶೆಟ್ಟರ ಅಂಗಡಿ .

ಜವುಳಿ ಅಂಗಡಿ ಎದುರು ಒಬ್ಬರು ಸಾಹಿ ಬ್ಬರು ಮತ್ತು ಶಾಸ್ತ್ರಿಗಳ ಹೊಲಿಗೆ  ಮಣೆ.ಇನ್ನೂ ಮುಂದುವರಿದರೆ ಕೋಡಿ ಭಟ್ರ

ಹೋಟೆಲ್ ,ಬಾಳೆಕೊಡಿ ಭಟ್ರ  ಗೂಡ೦ಗಡಿ. ಮಮ್ಮುನ್ಹಿ ಬ್ಯಾರಿಯ ಮನೆ .

             ಎರಡು ರಸ್ತೆ ಕೂಡುವಲ್ಲಿ ಪಶ್ಚಿಮಕ್ಕೆ  ಸಾಹಿಬರ ಅಂಗಡಿ ,ಮಮ್ಮುನ್ಹಿ ಅಂಗಡಿ. ಮುಂದೆ ಮಂಜೇಶ್ವರ ರಸ್ತೆಯಲ್ಲಿ

ಕೆಲವು ಸಣ್ಣ ಅಂಗಡಿಗಳು ,ಪಂಚಾಯತ್ ಆಫೀಸ್ .

ಶಾಲೆಯ ಅಂಗಳದಲ್ಲಿ ನಿಂತರೆ ಉತ್ತರಕ್ಕೆ ತಲೆಯೆತ್ತಿ ನಿಂತ ಕಳಂಜಿ ಮಲೆ.ದಕ್ಷಿಣಕ್ಕೆ ಹೈ ಸ್ಕೂಲ್ ಗುಡ್ಡೆ ,ಪಿಲಿಂಗುಲಿ ಗುಡ್ಡೆ

ಕಾಣುವವು .ಬ್ರಹ್ಮಗಿರಿಯಿಂ ಪುಷ್ಪಗಿರಿ ವರೆ ಇರುವ ಕೊಡಗಿನಂತೆ.

  ದೈಯೇಂದ್ರೆ ಪಕೀರಪ್ಪ ಶೆಟ್ಟರನ್ನು  ಜವುಳಿ ಶೆಟ್ತರೆಂದೆ ಕರೆಯುತ್ತಿದ್ದರು .ಅವರದ್ದು ಒಂದೇ ಬಟ್ಟೆ ಅಂಗಡಿ .ಇದಲ್ಲದೆ

ಶಾಲಾ ಮಕ್ಕಳಿಗೆ ಬೇಕಾದ ನೋಟ್ ಪುಸ್ತಕಗಳು ,ಸ್ಲೇಟು ,ಕಡ್ಡಿ ,ಪೆನ್ಸಿಲ್ ,ಶ್ಯಾಯಿ ಅಲ್ಲಿ ಸಿಗುತ್ತಿದ್ದವು . ನಾವು ಫೌಂಟನ್

ಪೆನ್ನನ್ನು ಒಯ್ದು ಒಂದು ಪೈಸೆಯ ಶಾಯಿ ಹಾಕಿಸಿ ಕೊಳ್ಳುತ್ತಿದ್ದೆವು.ಶೆಟ್ಟರು ಸುಸಂಸ್ಕೃತ ವ್ಯಕ್ತಿ , ಕಲಾ ಸಾಹಿತ್ಯ ಪ್ರೇಮಿ

ಗುಣ ಪಕ್ಷಪಾತಿ. ಅವರ ಮಗ ರಘುರಾಮ ನನ್ನ ಸಹಪಾಟಿ ,ಈಗ ಪಂಚಾಯತ್ ಅಧ್ಯಕ್ಷ .

ಅವರ ಅಂಗಡಿ ಮೇಲೆ ಕೊಟಡಿಯಲ್ಲಿ ನಮ್ಮ ಹೆಡ್ ಮಾಸ್ಟರ್  ಕೃಷ್ಣ ಭಟ್ಟರ ವಾಸ .

ಮಹಾದೇವ ಶಾಸ್ತ್ರಿಗಳು ಊರಿನ ಡಾಕ್ಟರ್,ಮೃದು ಭಾಷಿ ,ಅವರ ಮಕ್ಕಳೂ ನಮ್ಮ ಶಾಲೆಯಲ್ಲಿ ಓದುತ್ತಿದ್ದರು .

ಸಿರಿಂಜ್ ಕುದಿಸಿ ಸೂಜಿ ಜೋಡಿಸಿ ಇಂಜೆಕ್ಷನ್ ಕೊಡುತ್ತಿದ್ದ ದೃಶ್ಯ ಇನ್ನೂ ಕಣ್ಣ ಮುಂದೆ ಇದೆ .ಅವರಿಗೆ ಕಂಪನಿ ಯವರು

ಕೊಡಿತ್ತಿದ್ದ blotting ಪೇಪರ್ ಕೇಳಿ ಕೊಂಡು ಉಪಯೋಗಿಸುತ್ತಿದ್ದೆವು .

 ಟೇಲರ್ ಸಾಹೇಬರು ನಮ್ಮ ಅಧಿಕೃತ ಟೇಲರ್ .ನಮಗೆ ಅಣ್ಣ ತಮ್ಮಂದಿರಿಗೆ ಒಂದು ರೀಮು ಬಟ್ಟೆ ಕೊಂಡು ಕೊಂಡು

ಹೋಲಿಯ ಹಾಕುತ್ತಿದ್ದೆವು.ಹಾಗೆ ನಾವೆಲ್ಲಾ ಅಂಗ್ರಿ ಮನೆಯ ಯುನಿಫಾರ್ಮ್ ಹಾಕಿದವರಂತೆ ಇರುತ್ತಿದ್ದೆವು .ಶಾಲೆಯಲ್ಲಿ

ಸಮವಸ್ತ್ರ ಇರಲಿಲ್ಲ .

ಸಾಯಂಕಾಲ    ಕೋಡಿ ಭಟ್ಟರ ಹೋಟೆಲ್ ನಿಂದ ನೀರುಳ್ಳಿ ಬಜೆಯ ಪರಿಮಳ ಆಟದ ಮೈದಾನದ ವರೆಗೆ ಬಂದು

ನಮ್ಮ ಬಾಯಲ್ಲಿ ನೀರೂರಿರಿಸುತ್ತಿತ್ತು .ಅವರ ಮೊಮ್ಮ್ಮಗ ಕೇಶವ ನನ್ನ  ಕ್ಲಾಸ್ .ಕೆಲವೊಮ್ಮೆ ತಿಂಡಿ ತಂದು ನಮ್ಮೊಡನೆ

ಹಂಚಿ ಕೊಳ್ಳುತ್ತಿದ್ದನು ,
(ಮುಂದುವರಿಯುವುದು)


ಗುರುವಾರ, ಜನವರಿ 9, 2014

ಸಕ್ಕರೆ ಸೂಚ್ಯಂಕ

                ಸೇವನೆಯ ಬಳಿಕ   ಆಹಾರ ವಸ್ತುವೊಂದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಶಕ್ತಿಗೆ  ಸಕ್ಕರೆ ಸೂಚ್ಯಂಕ

(Glycemic index) ಎನ್ನುವರು.ಹೆಚ್ಚು ಸೂಚ್ಯಂಕ  ಇರುವ ಆಹಾರ ವಸ್ತುಗಳನ್ನು ಕಡಿಮೆ ಸೇವಿಸಿದಸ್ಟು ಸಕ್ಕರೆ

ಕಾಯಿಲೆಯವರಿಗೆ ಕ್ಷೇಮ

     ಹಣ್ಣುಗಳು 

  1.              ಸೇಬು          ೩೮
  2.               ಕಿತ್ತಳೆ           ೪೪
  3.               ದ್ರಾಕ್ಷಿ            ೪೬
  4.              ಬಾಳೆಹಣ್ಣು      ೫೫
  5.              ಪಪ್ಪಾಯಿ        ೫೮
  6.             ಅನನಾಸ್        ೬೬
  7.             ಕಲ್ಲಂಗಡಿ         ೭೨
  8.              ಖರ್ಜೂರ         ೭೮-೧೦೨
      ಧಾನ್ಯಗಳು 
       0.       ಮೆಂತೆ                       ೫
  1.           ಕಡಲೆ ಬೇಳೆ          ೧೧ 
  2.            ಹೆಸರು ಬೇಳೆ         ೩೮
  3.            ಉದ್ದು                   ೪೩
  4.           ಇಡಿ ಗೋಧಿ            ೪೦
  5.             ಹುರುಳಿ                ೫೧
  6.            ಮೈದಾ                 ೫೫-೬೦
  7.            ಕುಚ್ಚಲಕ್ಕಿ               ೫೫
  8.            ಬೆಳ್ತಿಗೆ ಅಕ್ಕಿ             ೬೦-೬೪
  9.            ಜೋಳ                   ೭೭
     10         ರಾಗಿ                     ೮೮
   

        ನಾರು ಇರುವ ಖಾದ್ಯ ವಸ್ತುಗಳು ರಕ್ತದ ಸಕ್ಕರೆ ಸೇರುವಿಕೆಯ ವೇಗ ಮತ್ತು ಪ್ರಮಾಣ ತಗ್ಗಿಸುತ್ತವೆ.ಹಾಗಲ ಕಾಯಿ .ಬೇವಿನ ಎಲೆಗಳನ್ನುಕಷ್ಟಪಟ್ಟು ತಿನ್ನುವುದರ ಬದಲು ಯಾವುದೇ ಸಹ್ಯ ಎಲೆ ತಿನ್ನ ಬಹುದು. .ನಮ್ಮ ಆಹಾರ ಮಿಶ್ರ ಮೂಲಗಳಿಂದ ಕೂಡಿದ ಕಾರಣ ಲೆಕ್ಕಾಚಾರ  ಸ್ವಲ್ಪ ಸಂಕೀರ್ಣ ಆಗಿರುತ್ತದೆ .


          

ಬುಧವಾರ, ಜನವರಿ 8, 2014

ನಮ್ಮ ಶಾಲೆ ಯಲ್ಲಿ ಶತ ಸಂಭ್ರಮ

ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಆಯಿತು.ಈಗ ಅದರ ಹೆಸರು


ದ ಕ ಜಿಲ್ಲಾ ಪರಿಷದ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ನಮ್ಮ ಮನೆಯಿಂದ ಎರಡುವರೆ ಮೈಲು ದೂರ . ಆಗ ಶಾಲೆಯಲ್ಲಿ


ವಿದ್ಯುತ್ ಸಂಪರ್ಕ ,ನಳ್ಳಿ ನೀರು ಮತ್ತು ಶೌಚಾಲಯ ಇರಲಿಲ್ಲ .ಅದು ದೊಡ್ಡ ಕೊರತೆಯೆಂದು ಆಗ ಅನಿಸುತ್ತಿರಲಿಲ್ಲ.


ತಮ್ಮ ವೃತ್ತಿಯನ್ನು ಪ್ರೀತಿಸುತ್ತಿದ್ದ ಅಧ್ಯಾಪಕ ಗಣ ಇತ್ತು.


ಈ ವರ್ಷ ಶಾಲೆ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ .ಅದರ ಉದ್ಘಾಟನಾ ಕಾರ್ಯಕ್ರಮ  ೬.೧.೨೦೧೪ ರಂದು

ನೆರವೇರಿತು.ಮಕ್ಕಳು ಉತ್ಸಾಹದಲ್ಲಿದ್ದರು. ಮೊದಲಾಗಿ ಬ್ಯಾಂಡ್ ವಾದ್ಯಗಳೊಡನೆ ಊರ ಬೀದಿಗಳಲ್ಲಿ  ಮೆರವಣಿಗೆ ,ಪುಟಾಣಿ

ಮಕ್ಕಳೊಡನೆ ಹೆಜ್ಜೆ ಹಾಕುವಾಗ ನಮ್ಮ ಬಾಲ್ಯದ ನೆನಪುಗಳು ಬಂದುವು..

                                             


                                                                        
                                                                   

                                                      
          ನನ್ನ ಪುಣ್ಯ .ನನ್ನ ಇಬ್ಬರು ಅಧ್ಯಾಪಕರು ಕಾರ್ಯಕ್ರಮಕ್ಕೆ ಬಂದಿದ್ದರು .ಶ್ರೀ ಜನಾರ್ಧನ ಶೆಟ್ಟಿ ಮತ್ತು  ಅರ್ಪಿಣಿ

ಕೊರಗಪ್ಪ ರೈ.ರಾಷ್ಟ್ರಕವಿ  ದಿ ಶಿವರುದ್ರಪ್ಪನವರು ತಮ್ಮ ಗುರು ಕುವೆಂಪು ಬಗ್ಗೆ ಬರೆದ ಕವನ ನೆನಪಾಯಿತು

                          
ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ!
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ,
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸಹುಟ್ಟುಗಳ ಹಾಕುತ್ತ.



                 ಹಾಗೆಯೇ ಕುವೆಂಪು ಪಂಜೆ ಮಂಗೇಶರಾಯರ ಬಗ್ಗೆ  'ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ ಕಚ್ಚಿದರೆ

 ಕಬ್ಬಾಗಿ ಹಿಂಡಿದರೆ ಜೇನಾಗಿ  ನಿಮ್ಮುತ್ತಮಿಕೆಯ   ಮೆರೆದಿರಯ್ಯ ' ಎಂದು ಬರೆದ ಸಾಲುಗಳು ನೆನಪಾದುವು