ಬೆಂಬಲಿಗರು

ಶುಕ್ರವಾರ, ಜುಲೈ 19, 2013

ಪ್ರಾಸ್ಟೇಟ್ ಗ್ರಂಥಿಯ ಸಾಮಾನ್ಯ ಊತ(Benign hyperplasia of Protate)

                                                    prostarte
ಗಂಡಸರಲ್ಲಿ ಪ್ರಾಸ್ಟೇಟ್ ಎಂಬ ಗ್ರಂಥಿಯಿದೆ.ಮುತ್ರಾಶಯದ ಹಿಂದೆ ಮತ್ತು ಗುದ ನಾಳದ ಮುಂದೆ ಇರುವ ಈ ಗ್ರಂಥಿಯು ಮೂತ್ರ

ನಾಳವನ್ನು ಸುತ್ತುವರಿಯುತ್ತದೆ.ಕ್ಷಾರಯುಕ್ತವಾದ ಇದರ ಸ್ರಾವ  ವೀರ್ಯಾಣುಗಳ ರಕ್ಷಣೆ ಮಾಡುತ್ತದೆ.ಮಧ್ಯ ವಯಸ್ಸು ಕಳೆದಂತೆ ಈ

ಗ್ರಂಥಿಯು ಉಬ್ಬಿಕೊಳ್ಳುತ್ತದೆ.ಇದನ್ನೇ ಪ್ರಾಸ್ಟೇಟ್ ನ ಸಾಮಾನ್ಯ ಊತ ಎಂದು ಕರೆಯುತ್ತಾರೆ.

ಪ್ರಾಸ್ಟೇಟ್ ಊತದ ಲಕ್ಷಣಗಳು .
೧.ಆಗಾಗ್ಗೆ ಮೂತ್ರ ವಿಸರ್ಜನೆ ಆಗುವುದು.ಮೂತ್ರ  ಹಿಡಿದಿಟ್ಟುಕೊಳ್ಳಲು ಆಗದಿರುವುದು.
೨ ಮೂತ್ರ ಕಟ್ಟಿ ಕಟ್ಟಿ ಹೋಗುವುದು.

೩ ಮೂತ್ರ ವಿಸರ್ಜನೆಯ ನಂತರವೂ ಮೂತ್ರಾಶಯದಲ್ಲಿ  ತುಂಬಾ ಮೂತ್ರ ಉಳಿಯುವುದು.

೪ ಆಗಾಗ್ಗೆ  ಮೂತ್ರದ ಸೋಂಕು ಆಗಿ ಉರಿ ಮೂತ್ರ ,ಅದರಿಂದ ಜ್ವರ ಬರುವುದು.

೫.  ಕೆಲವು ಬಾರಿ ಏಕಾ ಏಕಿ ಮೂತ್ರ ಬಂದ್ ಆಗಿ ಕೆಳ ಹೊಟ್ಟೆ ನೋವಿನಿಂದ ಊದುವುದು

  ಮಧ್ಯ ವಯಸ್ಸಿನ ಗಂಡಸು ಮೇಲಿನ  ಲಕ್ಷಣಗಳೊಡನೆ ಬಂದರೆ ವೈದ್ಯರು ಪ್ರಾಸ್ಟೇಟ್ ನ ಊತ ವನ್ನು ಶಂಕಿಸುವರು.

ಗುದ ನಾಳದಲ್ಲಿ ಬೆರಳಿಟ್ಟು ಪರೀಕ್ಷಿಸಿದಾಗ   ಪ್ರಾಸ್ಟೇಟ್  ಉಬ್ಬಿದುದನ್ನು ಕಂಡು ಹಿಡಿಯ ಬಲ್ಲುದಲ್ಲದೆ ,ಅನುಭವದಿಂದ  ಪ್ರಾಸ್ಟೇಟ್ ನ

ಗಂಭೀರ ಕಾಯಿಲೆ ಕ್ಯಾನ್ಸರ್ ನ್ನೂ ಶಂಕಿಸ ಬಹುದು.

ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕ ಪ್ರಾಸ್ಟೇಟ್ ನ ಗಾತ್ರ ಹೆಚ್ಚು ಕಡಿಮೆ ನಿಖರವಾಗಿ ಗೊತ್ತು ಮಾಡ ಬಹುದು.ಮೂತ್ರ ವಿಸರ್ಜನೆಯ

ನಂತರ  ಮುತ್ರಾಶಯದಲ್ಲಿ  ಉಳಿಯುವ ಮೂತ್ರದ ಪ್ರಮಾಣವನ್ನೂ ಸ್ಕ್ಯಾನ್ ಮೂಲಕ ನಿರ್ದರಿಸುತ್ತಾರೆ. ಈ ಅಳತೆ ೫೦ ಎಂ.ಎಲ್

ಗಿಂತ  ಜಾಸ್ತಿ ಇದ್ದರೆ ಮೂತ್ರ ವಿಸರ್ಜನೆಗೆ ಪ್ರಾಸ್ಟೇಟ್ ಊತದಿಂದ  ತಡೆಯಾಗುತ್ತಿದೆ ಎಂದು ಅರ್ಥ .

ಚಿಕಿತ್ಸೆ

ಮೂತ್ರ ವಿಸರ್ಜನೆ ಸಂಪೂರ್ಣ ಬ್ಲಾಕ್ ಆದರೆ ತತ್ಕಾಲಕ್ಕೆ ಕೃತಕ ನಾಳ (ಕ್ಯಾತಿಟರ್ ) ಹಾಕುವರು.

                 ಪ್ರಾಸ್ಟೇಟ್ ಊತವನ್ನು ಕಮ್ಮಿ ಮಾಡುವ ಮಾತ್ರೆಗಳು ಲಭ್ಯವಿವೆ.ಇವುಗಳಲ್ಲಿ ಆಲ್ಫಾ ಎಡ್ರಿನರ್ಜಿಕ್ ಬ್ಲೋಕೆರ್ಸ್ ಉದಾ

ಪ್ರಜೊಸಿನ್ ,ತಮ್ಸುಲೋಸಿನ್ ಇತ್ಯಾದಿ .ಪ್ರಾಸ್ಟೇಟ್ ಗ್ರಂಥಿಯ  ಊತಕ್ಕೆ ಗಂಡು ಹಾರ್ಮೋನ್ ಗಳೂ ಕಾರಣ ವಾದುದರಿಂದ

ಈ ಹಾರ್ಮೋನ್ ಗಳನ್ನು ಕಮ್ಮಿ ಮಾಡುವ ಔಷಧಿಗಳೂ ಬಳಕೆಯಲ್ಲಿ ಇವೆ.

ಔಷಧಿಯಿಂದ  ಕಾಯಿಲೆ ಹತೋಟಿಗೆ ಬರದಿದ್ದರೆ  ಶಸ್ತ್ರಚಿಕಿತ್ಸೆ ಮಾಡುತ್ತಾರೆ .ಇದರಲ್ಲಿ ಮೂತ್ರ ನಾಳದ ಮೂಲಕ ಉಪಕರಣ ಹಾಯಿಸಿ

ಮೂತ್ರ ನಾಳಕ್ಕೆ  ಉಬ್ಬಿರುವ ಪ್ರಾಸ್ಟೇಟ್ ನ ಅಂಶವನ್ನು ಕತ್ತರಿಸುವ  ಟ್ರಾನ್ಸ್  ಯುರೆತ್ರಿಕ್ ಪ್ರಾಸ್ಟೇಟಿಕ್  ರಿಸೆಕ್ಕ್ಶನ್ (ಟಿ.ಯು.ಆರ್.ಪಿ)

ಜನಪ್ರಿಯ. ಇತ್ತೀಚಿಗೆ ಪ್ರಾಸ್ಟೇಟ್ ಕತ್ತರಿಸಲು ಲೇಸರ್ ನ್ನೂ ಬಳಸುತ್ತಾರೆ. ಇಡೀ ಪ್ರಾಸ್ಟೇಟ್ ನ್ನು ತೆಗೆಯುವ ಶಸ್ತ್ರ ಚಿಕಿತ್ಸೆಯೂ ಇದೆ.

ಸೋಮವಾರ, ಜುಲೈ 15, 2013

ಅಸ್ತಮಾ ಕಾಯಿಲೆ


ಅಸ್ಥಮಾ ಕಾಯಿಲೆ ಅನುವಂಷಿಕ ಹಾಗೂ ಅಲರ್ಜಿ ಯಿಂದ ಬರುತ್ತದೆ.ಅಲರ್ಜಿ ಉಂಟು ಮಾಡುವ ವಸ್ತುಗಳಿಗೆ ಅಲ್ಲರ್ಜನ್

ಎಂದು ಕರೆಯುತ್ತಾರೆ.ಇಂತಹ ವಸ್ತುಗಳ ಸಂಖ್ಯೆ ಈಗ ಹೆಚ್ಚುತ್ತಿದೆ.ವಾಯು ಕಲ್ಮಶಗಳು ,ಹೂವಿನ ಪರಾಗ ಇತ್ಯಾದಿ ವಸ್ತುಗಳು ಅಲರ್ಜಿ ಕಾರಕಗಳು


ಅಸ್ಥಮಾ ಕಾಯಿಲೆಯಲ್ಲಿ ಶ್ವಾಸ ನಾಳಗಳ ಒಳಪದರ ಉಬ್ಬಿಕೊಂಡು  ನಾಳದ ರಂದ್ರ ಸಂಕುಚಿತ ಗೊಳ್ಳುತ್ತದೆ .ಆದುದರಿಂದ

ಶ್ವಾಸ ಕೋಶದಿಂದ ಉಸಿರು ಹೊರ ಹೋಗುವಾಗ ತಡೆ ಉಂಟಾಗಿ ದಮ್ಮು ಕಟ್ಟಿದ ಅನುಭವ  ಮತ್ತು ಸುಯಿ ಸುಯಿ ಎಂಬ

ಶಬ್ದ ಉಂಟಾಗುತ್ತದೆ.ಸಣ್ಣ ನಳಿಗೆ ಯೋಳಗಿಂದ  ಜೋರಾಗಿ ಗಾಳಿ ಊದಿ ಶಬ್ದ ಬರಿಸುವ ಆಟ ಮಕ್ಕಳು ಆಡುತ್ತಾರಲ್ಲವೇ

ಅಂತೆಯೇ.
                                                                 
                                   ನಾರ್ಮಲ್              ಆಸ್ತಮಾ ರೋಗಿ  ಶ್ವಾಸ ನಾಳ      
                                                              




 ಇತ್ತೀಚಿಗೆ ಅಸ್ಥಮಾ ರೋಗ ಹೆಚ್ಚಾಗುತ್ತಿದೆ. ವಾತಾವರಣ ,ಆಹಾರ  ಪ್ರದೂಷಣ ಇದಕ್ಕೆ ಕಾರಣ ಇರಬಹುದು.ಮಕ್ಕಳು  ನಮ್ಮ

ಹಾಸಿಗೆಯಲ್ಲಿ ಧೂಳು ಕ್ರಿಮಿ (dust mite) ಎಂಬ ಅಲರ್ಜಿ ಕಾರಕ  ಕುಳಿತು ಕೊಳ್ಳುತ್ತದೆ.ಹಿಂದೆ ಮಲಗಿದ ಚಾಪೆ  ಮಡಿಚಿ ಇಡುತ್ತಿದ್ದರು .ಈಗ

ಕಡಿಮೆ.ಆದ್ದುದರಿಂದ ಈ ಕ್ರಿಮಿಗಳು ಹಾಸಿಗೆಯಲ್ಲಿ ಹೆಚ್ಚು ಹೆಚ್ಹು ತಳವೂರಿ ನಾವು ಮಲಗುವಾಗ ತಮ್ಮ ಪ್ರತಿಭೆ ತೋರಿಸುತ್ತವೆ.

ಇದಲ್ಲದೆ ಸೊಳ್ಳೆ ಓಡಿಸಲೆಂದು ಫ್ಯಾನ್ ಹಾಕಿ ಮಲಗುತ್ತ್ತೇವೆ. ಇದರಿಂದ ಗಾಳಿ ಯಲ್ಲಿ  ಈ ಕ್ರಿಮಿಗಳು ಸೇರಿಕೊಳ್ಳುವವು  ಅಲ್ಲದೆ ಫ್ಯಾನ್ ಗಾಳಿಯಿಂದ ಶ್ವಾಸ ನಾಳದ ನೈಸರ್ಗಿಕ

ಆರ್ದ್ರತೆಯನ್ನು ಕಡಿಮೆ ಆಗುವುದು .ಇದೂ ಶ್ವಾಸ ನಾಳದ ಉತ್ಪ್ರೇಕ್ಷಿತ ಪ್ರತಿಕ್ರಿಯೆ ಗೆ (Hyper responsiveness) ಕಾರಣ ಇರ

ಬಹುದು.


ಅಸ್ತಮಾ ರೋಗಿಗೆ ಉಸಿರಾಟ ಕಷ್ಟವಾಗುವುದು .ಅಲ್ಲದೆ  ಶಬ್ದದಿಂದ ಕೂಡಿರುವುದು.


ಚಿಕತ್ಸೆ

ಇತ್ತೀಚೆಗೆ ಅಸ್ಥಮಾ ಕಾಯಿಲೆಗೆ  ಒಳ್ಳೆಯ ಔಷಧಿಗಳು ಬಂದಿವೆ.ಶ್ವಾಸನಾಳಗಳನ್ನು ವಿಕಸಿಸಿಸುವಂತಹ ಔಷಧಿಗಳಿಗೆ

ಇಂಗ್ಲಿಷ್ ನಲ್ಲಿ ಬ್ರೊಂಕೋ ಡಯ ಲೇಟರ್   ಎನ್ನುತ್ತಾರೆ .ಉದಾ ; ಸಾಲ್ಬು ಟಮೋಲ್, ಟರ್ಬುಟಲಿನ್ .ಇವು ಗುಳಿಗೆ ,ಸೇದುವ

ಮಾತ್ರೆ ,ಮತ್ತು ಸೇದುವ ಗಾಳಿ (ಇನ್ಹೆಲ ರ್ ) ರೂಪದಲ್ಲಿ ಬರುತ್ತವೆ.ಇದರಲ್ಲಿ  ಸೇದುವ ಮಾರ್ಗ ಉತ್ತಮ. ಏಕೆಂದರೆ

ಈ ವಿಧಾನದಲ್ಲಿ ಔಷಧ ನೇರ ಶ್ವಾಸಕೋಶಕ್ಕೆ ಹೋಗಿ ಸಂಕುಚನ ಗೊಂಡ ನಾಳವನ್ನು ಕೂಡಲೇ ವಿಕಸನ ಗೊಳಿಸುವುದು.

ಮಾತ್ರೆಗಲಾದರೋ  ಹೊಟ್ಟೆಯಿಂದ ರಕ್ತಕ್ಕೆ ಸೇರಿ ನಿದಾನವಾಗಿ  ಶ್ವಾಸನಾಳಕ್ಕೆ ತಲುಪುವವು.ಅಲ್ಲದೆ ಈ ವಿಧಾನದಲ್ಲಿಔಷಧ  ಶರೀರದ ಎಲ್ಲಾ ಅಂಗಗಳಿಗೆ ಅನಾವಶ್ಯಕ ಹೋಗುವುದು.ಸೇದುವ ಮಾತ್ರೆ ಮತ್ತು ಇನ್ಹಲರ್ ನಲ್ಲಿ ಔಷಧಿ  ಮೈಕ್ರೋ

ಗ್ರಾಂ ಅಂದರೆ ಮಿಲಿಗ್ರಾಂ ನ ಸಾವಿರದ ಒಂದು ಭಾಗದಷ್ಟು ಇದ್ದರೆ ತಿನ್ನುವ ಮಾತ್ರೆಗಳಲ್ಲಿ ಮಿಲಿಗ್ರಾಂ ನಲ್ಲಿ ಇರುತ್ತವೆ,ಆದರಿಂದ
ತಿನ್ನುವ ಮಾತ್ರೆಗಳೇ ಹೆಚ್ಚು ಸ್ಟ್ರಾಂಗ್.ಅಡ್ಡ ಪರಿಣಾಮಗಳು ಸೇದುವ ರೂಪದಲ್ಲಿ ಕಡಿಮೆ.

ರೋಗಿಗೆ ತೀವ್ರ ಅಸ್ತಮಾ ಇದ್ದಾರೆ ನೆಬುಲೈಸರ್ ಎಂಬ ಯಂತ್ರದ ಮುಖಾಂತರ  ಔಷಧಿ ದ್ರಾವಣದ ಆವಿ ಕೊಡುವ ಪದ್ಧತಿಇದೆ.

ಶ್ವಾಸನಾಳದ ವಿಕಸಕ ಔಷಧಿಗಳೊಂದಿಗೆ ಅಲರ್ಜಿ ಚಟ ತೆಗೆಯಲು ಸ್ಟೀರಾಯ್ಡ್ ಗಳನ್ನೂ ಕೊಡುತ್ತಾರೆ.ಇವೂ ಮೇಲೆ ಹೇಳಿದ

ವಿವಿಧ  ರೂಪಗಲ್ಲಿ ಸಿಗುತ್ತವೆ.ಕೆಲವರು  ಸ್ಟೀರಾಯ್ಡ್ ಎಂದರೆ ಬೆಚ್ಚಿ  ಬೀ ಳುತ್ತಾರೆ. ಆದರೆ ಯಾವುದೇ ಔಷಧಿ ಹಿತ ಮಿತದಲ್ಲಿ

ಇದ್ದರೆ ತೊಂದರೆ ಇಲ್ಲ. ಆಸ್ತಮಾದ  ತೊಂದರೆಗಿಂತ ಚಿಕ್ಕ ಪುಟ್ಟ ಅಡ್ಡ ಪರಿಣಾಮ ಲೇಸು.

                                         
                                                          Inhaler(ಇನ್ಹೆಲರ್ )
                                                     
                                                        ಸೇದುವ ಮಾತ್ರೆ ಮತ್ತು ಉಪಕರಣ

                                                ನೆಬುಲೈಸರ್


ಔಷಧಿಗೆ ಹೆದರಿ ಅಸ್ತಮಾ ಕಾಯಿಲೆಗೆ ಸರಿ ಚಿಕಿತ್ಸೆ ಮಾಡದಿದ್ದರೆ  ಶರೀರದ ಅಂಗಾಂಗ ಗಳಿಗೆ  ಆಮ್ಲ ಜನಕ ಸರಿಯಾಗಿಸಿಗದೆ ಮೆದುಳು ಮತ್ತು ಶರೀರದ ಬೆಳವಣಿಗೆ ಕುಂಠಿತ ವಾಗುವುದು.
ಚಳಿ ಗಾಲದಲ್ಲಿ  ಆಸ್ತಮಾ ಭಾದೆ ಜಾಸ್ತಿ ಆಗುವುದು .ತಂಪು ಹವೆಯಲ್ಲಿ ವಾತಾವರಣದ  ನೀರಾವಿ ಸಾಂದ್ರಗೊಂಡು ಕೆಳಗೆ ಬರುವುದು .ತನ್ನೊಡನೆ ಅದು ಧೂಳು ,ಕಲ್ಮಶಗಳನ್ನೂ ಕೆಳಗೆ ಒಯ್ಯುವುದು .(ಇಂದ್ರನನ್ನು ಎಳೆದು ಕೊಂಡು ಬಂದ ತಕ್ಷಕ ನಂತೆ )ಇದುವೇ ನಾವು ಕರೆಯುವ ಮಂಜು .ಉಸಿರಿನ ಮೂಲಕ ಒಳಹೋಗಿ ಕಿತಾಪತಿ ಮಾಡುವುದು .ಇದನ್ನು ತಡೆಗಟ್ಟಲು ಮಾಸ್ಕ್ ಸ್ವಲ್ಪ ಉಪಯೋಗ ಆಗಬಹುದು ;ಟೋಪಿಯಲ್ಲ .ಚಳಿಗಾಲದಲ್ಲಿ ಶುಷ್ಕತೆಯಿಂದ ಶ್ವಾಶ ನಾಳದ ನೈಸರ್ಗಿಕ ,ಮತ್ತು ರಕ್ಷಣಾ ಆರ್ದ್ರತೆ ಕಮ್ಮಿ ಇರುವುದರಿಂದ  ವೈರಿಗಳಿಗೆ ನೇರ ಪ್ರವೇಶ ಸಿಗುವುದು 


ಬಾಲಂಗೋಚಿ .  

ಅಸ್ತಮಾ  ಎಲ್ಲಾ  ಶ್ವಾಸ ಕೋಶ ಸಂಬಂದಿ ಅಲ್ಲ .ಕೆಲವು ಹೃದಯ ಕಾಯಿಲೆಯಲ್ಲೂ ಅಸ್ತಮಾ ಬರುವುದು.

ಇನ್ಹಲರ್ ತಿನ್ನುವ ಮಾತ್ರೆಗಿಂತ ಸ್ಟ್ರಾಂಗ್ ಅಲ್ಲ.ಒಮ್ಮೆ  ಇನ್ಹೇಲರ್ ಉಪಯೋಗಿಸಿದರೆ ಯಾವಾಗಲೂ ಬೇಕಾಗುತ್ತದೆಯೇಮ್ಬುದು ತಪ್ಪು ಕಲ್ಪನೆ.

ಮೇಲಿನ ಚಿತ್ರಗಳ ಮೂಲಕ್ಕೆ ಅಭಾರಿ.ರೋಟ ಹೇಲರ್ ಚಿತ್ರ ಉದಾಹರಣೆಗೆ ಮಾತ್ರ ,ಪ್ರಚಾರಕ್ಕೆ ಅಲ್ಲ .ಅದರಲ್ಲಿ

ಹೆಸರಿಸಿದ ಕಂಪೆನಿ ಔಷಧಿಯ ಪ್ರಚಾರ ವಲ್ಲ

ಭಾನುವಾರ, ಜುಲೈ 14, 2013

ನಮ್ಮನ್ನು ನಾವೇ ಕೊಲ್ಲುವ ಪರಿ


ಮನುಷ್ಯನಿಗೆ ಸ್ವಯಂ ವಿನಾಶಕಾರಿ ಪ್ರವೃತ್ತಿ ಒಂದಿದೆ ಅನ್ನಿಸುತ್ತದೆ. 

                                                                      ನಮ್ಮ ಆಹಾರವನ್ನೇ ತೆಗೆದು ಕೊಳ್ಳೋಣ .ಆಹಾರ ಧಾನ್ಯ ಗಳಲ್ಲಿ

ಗುಗ್ಗುರು ಆಗ ಬಾರದೆಂದು ಅಲ್ಯೂಮಿನಿಯಂ ಫೋಸ್ಪೈದ್ ಬೇರೆಸುತ್ತೇವೆ.ರಾಸಾಯನಿಕ ವಿಷ ಬೆರೆಸಿದ ತರಕಾರಿಗಳು ನಮಗೆ ಮೆಚ್ಚು.ಉದಾಹರಣೆಗೆ ವಿಶದಲ್ಲಿ ಅದ್ದಿದ  ಕಾಲಿಫ್ಲವರ್ ನಲ್ಲಿ  ಹುಳ ಇಲ್ಲ ಎಂದು ಸಂಭ್ರಮದಿಂದ ಕೊಂಡು ಅದಕ್ಕೆ ರುಚಿ ಬರಲು ಇನ್ನಸ್ಟು ರಾಸಾಯನಿಕ ಬೆರಸಿ ಮಂಚೂರಿ ಮಾಡಿ ತಿನ್ನುತ್ತೇವೆ. ಹಣ್ಣುಗಳು ವರ್ಣಮಯವಾಗಲು ಕ್ಯಾಲ್ಸಿಯಂ ಕಾರ್ಬೈಡು ಹಾಕುತ್ತೇವೆ.ಉಪ್ಪು ಎಣ್ಣೆ ಕೂಡಿದ ಕುರುಕುಲು ತಿಂಡಿ ಮಕ್ಕಳ ಮೊದಲ ಆಹಾರ.(ರಕ್ತದ ಒತ್ತಡ ,ಹೃದಯ ಕಾಯಿಲೆ ,ಮೂತ್ರದ ಕಲ್ಲುಗಳಿಗೆ ಆಹ್ವಾನ.)ಎಳೆಮಗು ವಿಗೆ  ಹೇಳಿ ಮಾಡಿಸಿದ ಮೊಲೆ ಹಾಲಿಗೆ ಬದಲು ಕೃತಕ ಹುಡಿ ಗಳನ್ನು ತಿನ್ನಿಸುತ್ತೇವೆ.

ದೇಹದಲ್ಲಿ ನಿಸರ್ಗ ಕೊಟ್ಟ ರಕ್ಷಣಾ ವ್ಯವಸ್ತೆ ಇದೆ.ಚರ್ಮ ,ಬಾಯಿ ,ಕರುಳುಗಳಲ್ಲಿ  ಉಪಯುಕ್ತ ಬ್ಯಾಕ್ಟೀರಿಯಾ ಗಳಿವೆ. ವರ್ಣ ರಂಜಿತ ಜಾಹಿರಾತುಗಳ ಉಪದೇಶದಂತೆ  ಸುಕ್ಷ್ಮಾಣುಗಳನ್ನು ನಾಶ ಪಡಿಸುವ  ಸಾಬೂನು ಗಳು ,ಲೋಷನ್ ಗಳನನ್ನು ಬಳಸಿ ಇವುಗಳನ್ನು ಕೊಲ್ಲುತ್ತೇವೆ. ಇತ್ತೀಚಿಗೆ ಪಾತ್ರೆ ತೊಳೆಯುವ ಸಾಬೂನು ,ಪುಡಿಗಳಲ್ಲೂ  ಇಂತಹ ರಾಸಾಯನಿಕಗಳನ್ನು
ಸೇರಿಸುತ್ತಾರೆ.ಅವುಗಳಲ್ಲಿನ ಆಹಾರ ಸೇವಿದರೆ  ಕಾಮ್ಮೆನ್ಸಾಲ್ ಎಂಬ ನಿರುಪದ್ರವಿ ಬ್ಯಾಕ್ಟೀರಿಯಾ ಗಳನ್ನು ನಾಶ ಪಡಿಸುತ್ತವೆ. ಹಲ್ಲು ಉಜ್ಜುವ ಪೇಸ್ಟ್ ನಲ್ಲೂ ಇದೇ ಸಮಸ್ಯೆ.ಇದೆಲ್ಲ ಸಾಲದೆಂದು ಸಾಮಾನ್ಯ ವೈರಲ್ ಕಾಯಿಲೆಗಳಿಗೂ ಆಂಟಿಬಯೋಟಿಕ್ ಬಳಸಿ ಈ ಸಮಸ್ಯೆಯನ್ನು ಇನ್ನಸ್ಟು ಉಲ್ಬಣ ಗೊಳಿಸುವಂತೆ ಮಾಡುತ್ತೇವೆ.ಒಳ್ಳೆಯ ಸೂಕ್ಷ್ಮಾಣುಗಳ  ನಾಶ ರೋಗಾಣುಗಳಿಗಳಿಗೆ ದಾರಿ ಮಾಡಿ ಕೊಡುತ್ತದೆ.

ಇನ್ನು ನಮ್ಮ ಜಠರದಲ್ಲಿ ದೇವರು ಆಮ್ಲ ಇಟ್ಟಿದ್ದಾನೆ.ಇದು ಜೀರ್ಣ ಕ್ರಿಯೆಗೆ ಸಹಕಾರಿಯಲ್ಲದೆ ,ರಕ್ತ ಉತ್ಪಾದನೆಗೆ ಬೇಕಾದ
ಬೇಕಾದ ಕಬ್ಬಿಣದ ಜೀರ್ಣಕ್ಕೂ ಆಸಿಡ್ ಅಗತ್ಯ.ರೋಗಾಣುಗಳನ್ನೂ ಕೊಳ್ಳುತ್ತದೆ.ನಾವು ಹೊಟ್ಟೆಯ ಎಲ್ಲಾ  ಸಂಕಟ ಗಳಿಗೂ
ಗ್ಯಾಸ್ಟ್ರಿಕ್ ಎಂದು  ನೈಸರ್ಗಿಕವಾಗಿ ಇರುವ ರಕ್ಷಣೆಯನ್ನು ಕಳೆದು ಕೊಳ್ಳುತ್ತಿದ್ದೇವೆ.

ಇನ್ನು ತಿನ್ನುವುದು ಹೆಚ್ಚಾಗಿದ್ದು ವ್ಯಾಯಾಮ ಇಲ್ಲದಾಗಿದೆ. ನಡೆಯುವುದು ಅಭಿಮಾನಕ್ಕೆ ಕುಂದು ಎಂಬ ಒಣ ಪ್ರತಿಷ್ಟೇ ಆವರಿಸಿದೆ.
ನಡೆದಾಡುವುದು ಒಂದೇ ಬಹಳ ಮಂದಿಗೆ ಇದ್ದ ವ್ಯಾಯಾಮ. ಶಾಲೆಗೆ ಹೋಗುವ ಮಕ್ಕಳನ್ನು ಎಷ್ಟು ಹತ್ತಿರ ಶಾಲೆ ಇದ್ದರೂ ವಾಹನದಲ್ಲೇ ಕಳುಹಿಸಬೇಕು.ವೈದ್ಯರು ವಕೀಲರು ನಡೆಯುವುದು ಕಂಡರೆ ಅದ್ಬುತ ಕಂಡಂತೆ ಮಾಡುತ್ತಾರೆ.

ವಾಹನ ಗಳ ಜಂಗುಳಿಯಿಂದ ವಾಯು ,ಶಬ್ದ ಮಾಲಿನ್ಯ ಹೆಚ್ಚಾಗಿದೆ.ಇದರ ಬಗ್ಗೆ ಗೊಡವೆ ಇದ್ದಂತಿಲ್ಲ .ಎಳೆಯ ಮಕ್ಕಳಲ್ಲೇ
ದಮ್ಮು ,ರಕ್ತದ ಒತ್ತಡ ಸುರುವಾಗಿದೆ.ಯಾವುದಾದರೂ ಸೋಂಕು ರೋಗ ಧಾಳಿಯಿಟ್ಟಾಗ ಶುಚಿತ್ವ ಅಭಿಯಾನದ ಪ್ರಹಸನ ನಡೆಯುತ್ತದೇ.ಮಿಕ್ಕಂತೆ ಕಂಡಲ್ಲಿ ಉಗುಳುತ್ತೇವೆ,ಕಸ ಹಾಕುತ್ತೇವೆ.ಗಟ್ಟಿಯಾಗಿ ದ್ವನಿ ವರ್ಧಕ ,ಹಾರ್ನ್ ,ಟಿ ವಿ . ಬಳಸಿ ಶಬ್ದ ಮಾಲಿನ್ಯಕ್ಕೆ ನಮ್ಮದೂ ಕೊಡುಗೆ ಇರಲಿ ಎಂದು  ಸ್ಪರ್ದಿಸುತ್ತೇವೆ.
ಹೀಗೆ ಇನ್ನೂ ಎಷ್ಟೋ ಇದೆ.ನೀವೇ ಹೇಳಿ ಇದು ಸೆಲ್ಫ್  ಡಿಷ್ಟ್ರಕ್ತಿವ್ (ಸ್ವಯಂ ವಿನಾಶಕಾರಿ )
ಪ್ರವೃತ್ತಿ ಅಲ್ಲದೆ ಇನ್ನೇನು?

ಶನಿವಾರ, ಜುಲೈ 13, 2013

ಮರೆಯಾಗದ ಮಹನೀಯರು -ಎಸ್ ವಿ ಪರಮೇಶ್ವರ ಭಟ್ಟ

SVP

ಮಂಗಳೂರಿನಲ್ಲಿ  ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದಾಗ ಅದರ ನಿರ್ದೇಶಕರಾಗಿ ಬಂದವರು

 

ಕಾಣದ  ಖ್ಯಾತ ಕವಿ ,ಅಧ್ಯಾಪಕ ಎಸ್ ವಿ ಪರಮೇಶ್ವರ ಭಟ್ಟರು .ಏನೂ ಇಲ್ಲದ  ಕೊಣಾಜೆ ಬೋಳು ಗುಡ್ಡೆಯಲ್ಲಿ ಸಂಸ್ಥೆಯನ್ನು

 

ಭಗೀರಥ ಪ್ರಯತ್ನದಿಂದ ಕಟ್ಟಿ ಬೆಳಸಿ ಇಂದಿನ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಿದವರು.ಆಗಿನ್ನೂ ಪೂರ್ಣ ಪ್ರಮಾಣದಲ್ಲಿ

 

ಕಟ್ಟಡಗಳು ನಿರ್ಮಾಣ ವಾಗದಿದ್ದ ಕಾರಣ ಮಂಗಳೂರು ಪೇಟೆಯಲ್ಲಿ ಕೇಂದ್ರದ ಕಚೇರಿ ಇತ್ತು.ತರಗತಿಗಳು ಕೆ ಎಂ ಸಿ ಇತ್ಯಾದಿ ಕಾಲೇಜ್

 

ಗಳಲ್ಲಿ ನಡೆಯುತ್ತಿದ್ದವು.ಭಟ್ಟರು ನಡೆದಾಡಿ ಕೊಂಡೇ ಇಲ್ಲೆಲ್ಲಾ ಸಂಚರಿಸುತ್ತಿದ್ದುದನ್ನು ನಾನು ನೋಡಿದ್ದೇನೆ.ಜೊತೆ ಜೊತೆಗೆ ಕೊಣಾಜೆ

 

ಕ್ಯಾಂಪಸ್ ಅಭಿವೃದ್ಧಿ ಅವಲೋಕನ.ಅವರು ಮಾಡಿದ್ದ ಸೇವೆಯ ಗಹನತೆ ನಾವು ನೆನಪಿಟ್ಟು ಕೊಳ್ಳ ಬೇಕು .

 

ಇದರ  ಜೊತೆಗೆ ಉತ್ತಮ ಭಾಷಣ ಕಾರ ಆಗಿದ್ದ ಅವರಿಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ .ಶಾಲಾ ಕಾಲೇಜ್ ಗಳ ವರ್ಧಂತಿ ಉತ್ಸವ

 

ಸಾಹಿತ್ಯ ಕೂಟ ,ಯಕ್ಷಗಾನ  ಎಲ್ಲಾ ಕಡೆ ಅವರೇ ಬೇಕು .ಇಲ್ಲ ಎನ್ನದೆ ಹೋಗುತ್ತಿದ್ದರು.ಸ್ವತಹ ಜೀವನದಲ್ಲಿ ಬಹಳ ನೋವು

 

ಅನುಭವಿಸಿದರೂ ತಮ್ಮ ಹಾಸ್ಯ ಚಟಾಕಿಗಳಿಂದ ಎಲ್ಲರನೂ ನಗಿಸಿದರು.

 

ಅಭಿನವ ಕಾಳಿದಾಸ ಎಂದು ಪ್ರಸಿದ್ದರಾಗಿದ್ದ ಅವರು ಕಾಳಿದಾಸನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಸ್ವಯಂ ಪ್ರಕಟಿಸಿದರು .

 

ಹಲವು ಕಾವ್ಯ ಸಂಕಲನಗಳನ್ನೂ ಪ್ರಕಟಿಸಿದ್ದಾರೆ ,ಅವರ ಕವನ ತಿಳಿ ಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನ ಬಹಳ  ಜನಪ್ರಿಯ .

 

ಕುವೆಂಪು ಸಾಹಿತ್ಯದ ಸಮಗ್ರ ಅವಲೋಕನ ಮಾಡುವ ಬೃಹತ್ ಗ್ರಂಥಗಳನ್ನು ರಚನೆ ಮಾಡಿದ್ದಾರೆ.

 

ರೈತ ಹೋರಾಟ ಗಾರ  ಕಡಿದಾಳ್ ಶಾಮಣ್ಣ ತನಗೆ ಕಾಲೇಜ್ ನಲ್ಲಿ ಸೀಟ್ ಕೊಡಿಸಿದ್ದುದು ಎಸ್ ವಿ ಪಿ ಎಂದು ಸ್ಮರಿಸಿದ್ದ್ದಾರೆ

 

ಅದರಂತೆ     ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಶ್ರೀಮಾನ್ ವಿವೇಕ ರೈ ಯಾವಾಗಲೂ ತಮ್ಮ ಗುರುಗಳನ್ನು

 

ಕೃತಜ್ಞತೆಯಿಂದ ಸ್ಮರಿಸುತ್ತಾರೆ.

 

ಶ್ರೀ ಎಹ್ ಕೆ ರಂಗನಾಥ್  ಮತ್ತು ಅವರ ತಮ್ಮ ಖ್ಯಾತ ಬರಹಗಾರ ವೈದ್ಯ ಡಾ ಎಚ್ ಕೆ ನಜುಂಡ ಸ್ವಾಮಿ ಅವರ ಪತ್ನಿಯ

 

ಸಹೋದರರು .ತಮ್ಮ ಸಾಹಿತ್ಯ ಸೇವೆಗೆ ಭಾವನವರ ಸ್ಪೂರ್ತಿ ನೆನೆಯುತ್ತಾರೆ,

 

ಎಸ್ ವಿ ಪಿ ಮತ್ತು ಏರ್ಯ ಲಕ್ಷ್ಮಿನಾರಾಯಣ ಆಳ್ವ ರ  ಮುಂದಾಳತ್ವದಲ್ಲಿ ಅದ್ದೂರಿಯಾಗಿ ಮತ್ತು ಅಚ್ಚು ಕಟ್ಟಾಗಿ ನಡೆದ ಪಂಜೆ ಮಂಗೇಶ

 

ರಾಯರ ಶತಮಾನೋತ್ಸವ ಕಾರ್ಯಕ್ರಮ  ನ ಭೂತೋ ನ ಭವಿಷ್ಯತಿ ಎಂಬಂತೆ ಮಂಗಳೂರಿನಲ್ಲಿ ನಡೆದುದನ್ನು ಸಾಹಿತ್ಯ ಪ್ರಿಯರು

 

ಇನ್ನೂ ನೆನಪಿಸಿ ಕೊಳ್ಳುತ್ತಾರೆ.

 

ಪ್ರೊ. ಎಸ್ ವಿ ಪರಮೇಶ್ವರ  ಭಟ್ಟರ ಶತಮಾನೋತ್ಸವ ಕಾರ್ಯಕ್ರಮ ವನ್ನು ಅವರ ಶಿಷ್ಯರು  ಮತ್ತು ಸಾಹಿತ್ಯಾಸಕ್ತರು ಮತ್ತು

 

ಅಭಿಮಾನಿಗಳು ಸೇರಿ ಈ ವರ್ಷ ನೆರವೇರಿಸಲು  ಹಮ್ಮಿಕೊದಿದ್ದಾರೆ. ಇದಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ರೂ

 

ಒಂದು ಸಾವಿರಕ್ಕ್ಕೆ ಕಮ್ಮಿಯಿಲ್ಲದಂತೆ ಕರ್ನಾಟಕ ಬ್ಯಾಂಕ್ ಖಾತೆ 4762500102483101 ಕ್ಕೆ ವರ್ಗಾಯಿಸಿ

 

ಡಾ ನರಸಿಂಹ ಮೂರ್ತಿ ,ಕಾರ್ಯದರ್ಶಿ ಪ್ರೊಫ್ ಎಸ್ ವಿ ಪರಮೇಶ್ವರ ಭಟ್ಟ ಜನ್ಮ ಶತಮಾನೋತ್ಸವ ಸಮಿತಿ ,ಮಾಣಿಕ್ಯ ,ಗಾಂಧಿನಗರ

 

ಕಾವೂರು ಅಂಚೆ .ಮಂಗಳೂರು ೫೭೫೦೧೫ ಕ್ಕೆ ತಿಳಿಸ ಬಹುದು .ಹೆಚ್ಚಿನ ಮಾಹಿತಿಗೆ ದೂ 9448191249, 9449283283

 

ಸಂಪರ್ಕಿಸ ಬಹುದು.

ಪಲ್ಮನರಿ ಎಂಬೋಲಿಸಂ ಎಂಬ ಮಾರಣಾಂತಿಕ ಕಾಯಿಲೆ.

ದೇಹದಲ್ಲಿ ರಕ್ತ ಚಲನೆಯಲ್ಲಿ ಇರ ಬೇಕು .ಶುದ್ಧ ರಕ್ತ  ಹೃದಯದಿಂದ ಅಪಧಮನಿಗಳ ಮೂಲಕ ದೇಹದಾದ್ಯಂತ ಚಲಿಸಿ ಆಹಾರ

ಮತ್ತು ಆಮ್ಲಜನಕ ಸರಬರಾಜು ಮಾಡಿದರೆ ,ಅಭಿಧಮನಿಗಳ ಮೂಲಕ ಅಶುದ್ದ ರಕ್ತ ಹೃದಯಕ್ಕೆ ಬಂದು ಅಲ್ಲಿಂದ

ಶುದ್ದೀಕರಣಕ್ಕಾಗಿ ಶ್ವಾಸಕೋಶಕ್ಕೆ ರವಾನೆ ಆಗುವುದು.ಇದು ನಿರಂತರ ಕ್ರಿಯೆ.ಅದೇ ರೀತಿ ರಕ್ತನಾಳಗಳಿಗೆ ಗಾಯವಾದರೆ


ಕೂಡಲೇ ರಕ್ತ ಹೆಪ್ಪು ಗಟ್ಟಿ ರಕ್ತ ಸೋರುವಿಕೆ ನಿಲ್ಲ ಬೇಕು .ಈ ಹೆಪ್ಪು ಗಟ್ಟಲು ಬೇಕಾದ ಕಚ್ಚಾ ವಸ್ತುಗಳು ರಕ್ತದಲ್ಲಿಯೇ


ಅಡಕವಾಗಿವೆ.ಚಲನೆ ಮತ್ತು ಹೆಪ್ಪುಗಟ್ಟುವ ಕ್ರಿಯೆಯ ಸಮತೋಲನ ಆರೋಗ್ಯಕ್ಕೆ ಅತೀ ಆವಶ್ಯ.


ಕೆಲವು ಸಂದರ್ಭಗಳಲ್ಲಿ ಕಾಲಿನ ಮೀನ ಖಂಡದ   ಅಭಿಧಮನಿಗಳಲ್ಲಿ ರಕ್ತ  ಹೆಪ್ಪುಗಟ್ಟುವುದು.ಉದಾ;ರೋಗದಿಂದ ಕಾಲಿನ


ಚಲನೆಯಿಲ್ಲದೆ ಮಲಗಿರುವವರು ( ಮೂಳೆ ಮುರಿತ,ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದವರು ,),ಹೆಪ್ಪು ಗಟ್ಟುವಿಕೆಯ ಅಂಶ


ಹೆಚ್ಹು ಇರುವ ಗರ್ಬಿಣಿ ಸ್ತ್ರೀಯರು,ಗರ್ಭ ನಿರೋಧಕ ಗುಳಿಗೆ ಸೇವಿಸುವವರು,ಕೆಲವು ಕ್ಯಾನ್ಸರ್ ಕಾಯಿಲೆಯಿಂದ ಬಳಲುವವರು

.

ಇಂತಹವರಲ್ಲಿ ಹೆಪ್ಪುಗಟ್ಟಿದ ರಕ್ತ ದ  ಗಟ್ಟಿ ಅಬಿಧಮನಿಗಳ ಮೂಲಕ ಹೃದಯವನ್ನು ಹಾಯ್ದು ಶ್ವಾಶ ಕೋಶದ  ಅಪಧಮನಿ


ಪ್ರವೇಶಿಸಿ ಶ್ವಾಸ ಕೋಶಕ್ಕೆ ರಕ್ತ ಸಂಚಾರ ವ್ಯತ್ಯಯ ಮಾಡುವುದು.ಇದನ್ನೇ ಪಲ್ಮನರಿ ಎಂಬೋಲಿಸಂ ಎಂದು ವೈದ್ಯಕೀಯ


ಭಾಷೆಯಲ್ಲಿ ಕರೆಯುತ್ತಾರೆ.ಇಲ್ಲಿ ರಕ್ತದ ಗಟ್ಟಿ ಸಾಕಷ್ಟು ದೊಡ್ಡದಿದ್ದರೆ ಶ್ವಾಸ ಕೋಶದ ರಕ್ತ ಸರಬರಾಜು ಸಂಪೂರ್ಣ ನಿಂತು


ಸೆಕೆಂಡುಗಳಲ್ಲಿ ರೋಗಿ ಸಾವನ್ನಪ್ಪುವನು.

ರೋಗ ಲಕ್ಷಣಗಳು 



 ಕಾಲಿನ ರಕ್ತ ನಾಳಗಳಲ್ಲಿ ರಕ್ತ ಹೆಪ್ಪು ಗಟ್ಟಿದರೆ ಕಾಲು ಊದಿ ಕೊಂಡು ನೋವು ಇರಬಹುದು.ಅಥವಾ  ಯಾವುದೇ ಲಕ್ಷಣ


  ಇಲ್ಲದೇ  ಇರಬಹುದು. ಸಂಶಯ ಬಂದಾಗ ಡಾಪ್ಲರ್ ಪರೀಕ್ಷೆಯೆಂಬ



ಸ್ಕ್ಯಾನ್ ಮಾಡಿ ಪತ್ತೆ ಹಚ್ಚ ಬಹುದು.


ಶ್ವಾಸ ಕೋಶದ ರಕ್ತ ನಾಳ ಬ್ಲಾಕ್ ಆದರೆ  ಏಕಾ ಏಕಿ ದಮ್ಮು ಕಟ್ಟುವುದು.ಆಮ್ಲ ಜನಕ ಕಮ್ಮಿಯಾಗಿ ಶರೀರ ನೀಲ ವರ್ಣಕ್ಕೆ



ತಿರುಗಿ ರೋಗಿ ಸಾವನ್ನೂ ಅಪ್ಪ ಬಹುದು .ಆದುದರಿಂದ ಮೇಲೆ ಹೇಳಿದ ವ್ಯಕ್ತಿಗಳಲ್ಲಿ ಯಾವುದೇ ಕಾರಣವಿಲ್ಲದೆ,(ಅಂದರೆ

ಮೊದಲೇ ಅಸ್ಥಮಾ ,ಹೃದಯ ಕಾಯಿಲೆ ಇಲ್ಲದಿದ್ದರೆ ) ದಮ್ಮು ಕಟ್ಟಲು ಶುರುವಾದರೆ ಪಲ್ಮನರಿ ಎಂಬೋಲಿಸಂ ಇರಬಹುದೆಂದು


ಸಂಶಯಿಸ ಬೇಕು. ರೋಗ ಪರೀಕ್ಷಣೆಗೆ  ಸಮಯ ಕೊಟ್ಟರೆ ರಕ್ತ ಪರೀಕ್ಷೆ ,ಸಿ ಟಿ ಸ್ಕ್ಯಾನ್ ,ಎಂ ಅರ ಐ ಸ್ಕ್ಯಾನ್ ಮೂಲಕ


ರೋಗ  ಖಚಿತ ಪಡಿಸಿ ಕೊಳ್ಳ ಬಹುದು .


ಚಿಕಿತ್ಸೆ.

ರೋಗವು ಚಿಕಿತ್ಸೆಗೆ ಸಮಯ ಕೊಟ್ಟರೆ ಕೂಡಲೇ ತುರ್ತು ಚಿಕಿತ್ಸಾ ಕೊಡದಿಯಲ್ಲಿ ಅಮ್ಲನಕ ಕೊಟ್ಟು, ಹೆಪ್ಪು ಕರಗಿಸುವ ಔಷಧಿ

ಆರಂಬಿಸುವರು.

ದೀರ್ಘ ಕಾಲ ಚಲನೆಯಿಲ್ಲದೆ ಇರುವ ರೋಗಿಗಳಿಗೆ ಹೆಪಾರಿನ್ ಎಂಬ ಹೆಪ್ಪು ಪ್ರತಿ ಬಂಧಕ ಔಷಧಿ ಕೊಡುವರು.ಇದರಿಂದ

ಕಾಲಿನಲ್ಲಿ ರಕ್ತ  ಹೆಪ್ಪುಗಟ್ಟುವುದನ್ನು ತಡೆಗಟ್ಟಿ ಪಲ್ಮನರಿ ಎಂಬೋಲಿಸಂ ಬರದಂತೆ ನೋಡಿಕೊಳ್ಳ ಬಹುದು.

ಗಮನಿಸಿ

                ಕೆಲವೊಮ್ಮೆ ಗರ್ಬಿಣಿ ಸ್ತ್ರೀ ಗಳಲ್ಲಿ(ಮತ್ತು ಹೆಪ್ಪುಗಟ್ಟುವ ಆತಂಕವಿರುವ ಇತರರಲ್ಲಿ) ಈ ರೋಗ ಪ್ರಕಟವಾಗಿ 

ನೋಡುವುದರೊಳಗೆ ಸಾವನ್ನಪ್ಪ ಬಹುದು .ಆಗ  ಅದಕ್ಕಿಂತ ಸ್ವಲ್ಪ ಮೊದಲು ಕೊಟ್ಟ ಇಂಜೆಕ್ಷನ್ ,ಅಥವಾ ಇನ್ನಾವುದೋ 

ಮಾಮೂಲಿ ಔಷಧಗಳೋ ಇದಕ್ಕೆ ಕಾರಣ ಎಂದು ರೋಗಿಗಳ ಬಂಧುಗಳು ತಿಳಿಯುವುದುಂಟು.



ಶುಕ್ರವಾರ, ಜುಲೈ 12, 2013

ನನ್ನ ಅಜ್ಜ ಮತ್ತು ಪುತ್ತೂರು ಪೇಟೆ


ಹಿಂದೆ ಹಳ್ಳಿಯಲ್ಲಿ ಆಢ್ಯ ವ್ಯಕ್ತಿಗಳು ನಗರಕ್ಕೆ ಆಗಾಗ ಭೇಟಿ ಕೊಡಲು ಒಂದೋ ಎರಡನೇ ಸಂಭಂಧ ,ಇಲ್ಲವಾದರೆ ಕೋರ್ಟ್ ಕೇಸ್

ಇಟ್ಟುಕೊಳ್ಳುತ್ತಿದ್ದರು.ಕೆಲವರಿಗೆ ಎರಡೂ ಇತ್ತು.ಆಗಿನ ಸನ್ನಿವೇಶದಲ್ಲಿ ಎರಡೂ ಅಸ್ಟು ವಿಚಿತ್ರವೆನಿಸುತತ್ರಲಿಲ್ಲ.

ನನ್ನ ಅಜ್ಜನೂ ಎರಡನೇ ವ್ಯಸನ ಇದ್ದವರು.ಕೋರ್ಟ್ ಕೇಸ್ ಗೆ ಇಲ್ಲದ ನೀರಿನ ಮೂಲವೋ ,ಬೇಡದ ನಿರುಪದ್ರವಿ ಮರದ ಮೇಲಿನ ಹಕ್ಕು

ಸಾಧನೆಯೋ ಸಾಕಾಗುತ್ತಿತ್ತು.ನಮ್ಮ ಗದ್ದೆಗೆ ತಾಗಿ ಒಂದು ನೀರಿನ ಮೂಲ ಇತ್ತು.ಅದು ನಮ್ಮದೆಂದು ಅಜ್ಜನೂ ,ಅವರದೆಂದು ಪಕ್ಕದ

ಮನೆಯವರದೂ ವಾದ .ಸರಿ ,ಪುತ್ತೂರು ಕೋರ್ಟ್ ಹತ್ತಿತು ವಿವಾದ.ಕೇಸ್ ನ ಹಿಯರಿಂಗ್ ಗೆ ಅಜ್ಜ ಹೋಗಿ ಬಂದು ರಾತ್ರಿ ಸ್ನಾನದ


ಮನೆಯಲ್ಲಿ ಅಲ್ಲಿಯ ಕತೆಗಳನ್ನು ರೋಚಕವಾಗಿ ಹೇಳುವರು.ನಾವು ಬಿಸಿ ನೀರ ಒಲೆಯ ಬಳಿ ಮೈ ಕಾಯಿಸುತ್ತಾ ಕಣ್ಣು ಬಾಯಿ ಬಿಟ್ಟು


ಕೇಳುತ್ತಿದ್ದೆವು.ಸದಾಶಿವ ರಾಯರು ಹಾಕಿದ ಪೈಂಟಿಗೆ(point) ಜಡ್ಜರು ತೆರೆದ ಬಾಯಿ ಮುಚ್ಚಲೇ ಇಲ್ಲ ಎನ್ನುವರು.ಅವರ ಲೀಗಲ್


ವೊಕ್ಯಾಬುಲರಿ ಯಲ್ಲಿ  ಹೆರಿಂಗ್ ,ಕೈಪೇತು(ಕೇವಿಯಟ್),ಕ್ರಾಸ್ (ಕ್ರಾಸ್ ಎಕ್ಷ್ಜಾಮಿನೇಶನ್),ಡಿಕ್ರೀ,ಇಂಜಕ್ಶನ್ ಇಂತಾದ ಶಬ್ದಗಳು


ಮೇಲಿಂದ ಮೇಲೆ ಬರುತ್ತಿದ್ದವು.ವಕೀಲರ ಮನೆಗೆ ಹೋಗುವಾಗ ಫೀಸಿನ ಜತೆ ಬಾಳೆಗೊನೆ ,ಮನೆಯಲ್ಲಿ ಬೆಳೆದ ತರಕಾರಿ

ಕೊಂದೊಯ್ಯುವುದೂ ಇತ್ತು.ವಕೀಲ ಕಕ್ಷಿ ಸಂಬಂಧದಲ್ಲಿ ಒಂದು ಆತ್ಮೀಯತೆ ಇತ್ತು.


ವಕೀಲ ಸದಾಶಿವ ರಾಯರ ಮನೆ ದಾರಿಯಲ್ಲಿ ಕುಂಬ್ಳೆಕಾರ್ಸ್ ಎಂಬ ಬಟ್ಟೆ ಅಂಗಡಿ ಇತ್ತು. ಅದರ ಎದುರಿಂದ ಹಾಯುವಾಗ


ಅಂಗಡಿ ಧಣಿಗಳು  ‘ಭಟ್ರೇ ಒಳ್ಳೆಯ ಕೋಮಣ ಬಟ್ಟೆ ಬಂದಿದೆ ಕೊಂಡು ಹೋಗುವಿರೋ ಎಂದು ಈಗಿನ ಮೊಬೈಲ್ ಅಂಗಡಿಯವರು


ಹೊಸ ಮಾಡೆಲ್ ಬಂದಿದೆ ಎಂದು ಗಿರಾಕಿಗಳನ್ನು ಸೆಳೆಯುವಂತೆ ಕೇಳುತ್ತಿದ್ದರು. ಕೌಪೀನ ಹಳ್ಳಿಯ ಅಧಿಕೃತ ಉಡುಪು ಆಗಿದ್ದ ಕಾಲ.


ಕೆಲವೊಮ್ಮೆ ಅಜ್ಜನ ಜೊತೆ ನಾವೂ ಪುತ್ತೂರಿಗೆ ಬರುವುದಿತ್ತು.ಬಸ್ ಸ್ಟಾಂಡ್ ನ ಎದುರು ಜನತಾ ಫುಟ್ ವೇರ್ ಅಂದಡಿಯಿತ್ತು .ಈಗಲೂ


ಇದೆ .ಅಲ್ಲಿ ಅಬ್ದುಲ್ ಖಾದರ್ ಎಂಬ ಸಜ್ಜನ ಇದ್ದರು.ಮಕ್ಕಳನ್ನು ಸುಮ್ಮನೆ ನಡೆಸುವುದು ಬೇಡ ಎಂದು ನಮ್ಮನ್ನು ಈ ಅಂಗಡಿಯಲ್ಲಿ

ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೋದವರು ಗಂಟೆ ಯಾದರೂ ಬರುತ್ತಿರಲಿಲ್ಲ .ನಮಗೋ ಪೇಟೆಯವರನ್ನು ಕಂಡರೆ ಭಯ.

ಆಗ ಇಂತಹ ಅಂಗಡಿಗಳು ಹಳ್ಳಿಯವರ ಕ್ಲಾಕ್ ರೂಂ ಗಳೂ ಆಗಿರುತ್ತಿದ್ದವು.ಅಂಗಡಿಯವರು ಅಲ್ಲಿ ಇಟ್ಟ ಸಾಮಗ್ರಿಗಳನ್ನು ಯಾವುದೇ


ಫೀ ಇಲ್ಲದೆ ಜೋಪಾನ ವಾಗಿ ಇಡುತ್ತಿದ್ದರು.ಈ ಜನಾಬ್ ಅಬ್ದುಲ್ ಖಾದರ್ ಬಗ್ಗೆ ಒಂದು ಮಾತು ಹೇಳಬೇಕು .ನಾವು ರಜೆಯಲ್ಲಿ


ನೆಂಟರ ಮನೆಗೆ ಹೋಗುವ ದಾರಿಯಲ್ಲಿ ಚಪ್ಪಲಿ ಬೇಕೆನಿಸಿದರೆ ಸೀದಾ ಅವರ ಅಂಗಡಿಗೆ ಹೋಗಿ ಇಂತಹ ಚಪ್ಪಲಿ ಬೇಕೆಂದು ಆಯ್ದು


ಕಾಲಿಗೆ ಹಾಕಿ ಕೊಂಡು ಹೋಗುವುದೇ.ಹಣ ತಂದೆ ಕೊಡುತ್ತಾರೆ ಎಂದು ಹೇಳುತ್ತಿದ್ದೆವು .ನಿಮ್ಮ ತಂದೆ ಯಾರು ,ಯಾವಾಗ ಕೊಡುತ್ತಾರೆ

ಎಂದು ಅವರು ಕೇಳಿದವರಲ್ಲ.ಅದೇ ರೀತಿ ಬಸ್ ಸ್ಟಾಂಡ್ ನಲ್ಲಿ ಕಿತ್ತಳೆ ಮಾರುವ ಮಹನೀಯರಿದ್ದರು.ಹಳ್ಳಿಯವರಿಗೆ ಅವರವರಿಗೆ ಬೇಕಾದ


ಬಸ್ ತೋರಿಸುವರು.ಅವರ ಸಮಾಜ ಸೇವೆ ಸ್ಮರಿಸುವಂತಹುದು.


ನನ್ನ ಅಜ್ಜ ಇಳಿ ವಯಸ್ಸಿನಲ್ಲೂ ಕೈಯಲ್ಲಿ ಬೆತ್ತ ಹಿಡಿದು ಪುತ್ತೂರು ಪೇಟೆಯಿಡೀ ನಡೆದೇ ಹೋಗುತ್ತಿದ್ದರು.ಬಹಳ ದಿನ ಕೋರ್ಟ್

ಕೇಸ್ ಇಲ್ಲದಿದ್ದರೆ ಇಲ್ಲದ ಕಾಯಿಲೆಯನ್ನು ಊಹಿಸಿ ಕೊಂಡು ಕೋರ್ಟ್ ರಸ್ತೆಯ ಪ್ರಸಿದ್ದ್ದ ವೈದ್ಯ ಸುಂದರ ರಾಯರ ಬಳಿಗೆ ಸವಾರಿ ಇಡುತ್ತಿದ್ದರು.

 . ಡಾಕ್ಟರ್ ಅಲ್ಲಿ ಮುಟ್ಟಿ ನೋಡಿದರು ,ಇಲ್ಲಿ ಕುಟ್ಟಿ ನೋಡಿದರು ಎಂದು ವರ್ಣಮಯವಾಗಿ ವಿವರಿಸುತ್ತಿದ್ದರು.ಸುಂದರ ರಾಯರು


 ಕೊಟ್ಟ ಟಾನಿಕ್ ಶ್ರದ್ದೆಯಿಂದ ಕುಡಿಯುತ್ತಿದ್ದರು.

ಮೊಮ್ಮಕ್ಕಳನ್ನು ಹೋಟೆಲ್ ಗೆ ಕರೆದೊಯ್ದು  ಇವರಿಗೆ ಬೇಕಾದ್ದೆಲ್ಲ ಕೊಡಿ ಎಂದು ಅದೇಶಿಸುತ್ತಿದರು.

ಬಾಲಂಗೋಚಿ.:

ವಕೀಲ ಸದಾಶಿವ ರಾಯರು ಇಳಿ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.ಅವರು ನಡೆದೇ

ಹೋಗುತ್ತಿದ್ದರು .ಅವರ  ನಂತರದ ತಲೆಮಾರಿನ ಬೋಳಂತ ಕೋಡಿ  ಈಶ್ವರ ಭಟ್ಟರೂ ಕನ್ನಡ ಸಂಘದ ಕಾರ್ಯ ಕೋರ್ಟ್ ಆಫೀಸ್

ಪತ್ರಿಕೋದ್ಯಮ ಕೆಲಸ ಎಂದು ನಡೆದು ಕೊಂಡೆ ಓಡಾಡಿದವರು .ಶಿವರಾಮ ಕಾರಂತರು  ಪರ್ಲಡ್ಕ ಮನೆಯಿಂದ ಪೇಟೆಗೆ ನಡೆದು


ಬಂದು ಹೋಗುತ್ತಿದ್ದರು.ಈಗ ನಮಗೆ ನಡೆಯುವುದಕ್ಕೆ ಅಭಿಮಾನ ಬಿಡುವುದಿಲ್ಲ.ಒಂದು ವೇಳೆ ಬಿಟ್ಟರೆ ರಸ್ತೆಯಲ್ಲಿ ಪಾದಚಾರಿಗಳಿಗೆ


ನಡೆಯಲು ಫುಟ್ ಪಾತ್ ಇಲ್ಲ ನಾನು ಈಗ ಎಲ್ಲಿಯಾದರೂ ಪೇಟೆಯಲ್ಲಿ ನಡೆಯುವುದು ಕಂಡ ಪರಿಚಿತರು  ಡಾಕ್ಟರ್ ಕಾರ್


ತರಲಿಲ್ಲವೆ ಎಂದು ಕೇಳುತ್ತಾರೆ ,ಕೆಲವರು ಏನು ನಡೆಯುವುದು ,ಪ್ರಾಕ್ಟೀಸ್ ಸರಿಯಾಗಿ ನಡೆಯುತ್ತ ಇಲ್ಲವೇ ಎಂದು ಪ್ರಶಿಸುತ್ತಾರೆ.

ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು.ನಮ್ಮ ಮತ್ತು ಅಜ್ಜನ ಸಂಭಾಷಣೆಯಂತೆ.
ಬಾಲಂಗೋಚಿ 
ಇದನ್ನು ಪೋಸ್ಟ್ ಮಾಡಿದ ಮೇಲೆ ಈಗಿನ ತಲೆಮಾರಿನ ಕೆಲವರು ಕೋಮಣ ಎಂದರೆ ಏನೂ ಎಂದು ನನ್ನಲ್ಲಿ ವಿಚಾರಿಸಿದರು .ಇದು ಆಗ ನಾವು ಮಾನ ಮುಚ್ಚಲು  ಬಳಸುತ್ತಿದ್ದ  ಬಟ್ಟೆ  ಮಕ್ಕಳು ಹಳೇ ಬಿಳಿ ಪಂಚೆಯನ್ನು ಆಯತ ಆಕಾರದಲ್ಲಿ ಕಟ್ ಮಾಡಿ ಉಡಿದಾರಕ್ಕೆ ಸಿಕ್ಕಿಸಿ ಕೊಳ್ಳುತ್ತಿದ್ದೆವು .ಹಿರಿಯರು  ಈ ಆಕಾರದ ಕೋರಾ ಬಟ್ಟೆಯ ಸಿದ್ದ ವಸ್ತ್ರ .ಮತ್ತು ಹೆಚ್ಚು ಜನಪ್ರಿಯ ಚೌಕಕಾರದ ಕೆಂಪು ಬಿಳಿ ಬಣ್ಣದ  ಕೌಪೀನ (ಸಂಸ್ಕೃತ) ಉಡುತ್ತಿದ್ದರು .
              ಕೆಳಗೆ ತೋರಿಸಿದ  ಡಿಸೈನ್ ಆಕಾರ ಚೌಕ
ಈ ಚೌಕ  ಬಟ್ಟೆ ಬಹುಪಯೋಗಿ .ಉಟ್ಟರೆ ಕೌಪೀನ ವಾದೆ ,ಕರದಲ್ಲಿ ಕರವಸ್ತ್ರ ವಾದೆ ,ತಲೆಗಿಟ್ಟರೆ ಟೋಪಿಯದೆ ,ಅಡಿಗೆ ಮನೆಯಲ್ಲಿ ಚಹಾ ,ಕಾಯಿ ಹಾಲು ಸೋಸು ವ  ಅರಿಪ್ಪೆಯಾದೆ .ನೀ ನಾರಿ ಗಾದೆಯೋ ಎಲೆ ಮನವಾ -ಇದನ್ನು ನೀನು ಅರಿಗಾದೆಯೋ ,ನೀ  ನಾರಿ(ಹೆಣ್ಣು )ಗಾದೆಯೋ ಎಂದು ಅವರವರ ಭಾವಕ್ಕೆ ಸರಿಯಾಗಿ ವಿಮರ್ಶೆ ಮಾಡುವರು.  ಕೌಪೀನ ಮತ್ತು ಮೇಲೆ ಒಂದು ತುಂಡು ಬಟ್ಟೆ ಕೃಷಿಕರಿಗೆ   ಬಹಳ ಅನುಕೂಲ .ಅದೇ  ನಮ್ಮ ಕಾಲದ ವಿ ಐ ಪಿ ,ಜೋಕಿ .ಅದನ್ನು ಉಟ್ಟು ಕೊಂಡು ನಾವು ಕ್ರಿಕೆಟ್ ,ಕಬಡ್ಡಿ ಆಡಿದ್ದೇವೆ .
ನಮ್ಮ ಅಜ್ಜಿ ಮಾಂಬಳ ಎರೆದು ಒಣಗಿಸಿ ಆಯತ  ಕೋಮಣ ರೂಪದಲ್ಲಿ ತುಂಡು ಮಾಡಿ ಶೇಖರಿಸುತ್ತಿದ್ದರು ನಾವು ಅವರನ್ನು ನನಗೊಂದು ಕೋಮಣ ನನಗೊಂದು ಎಂದು ಪೀಡಿಸುತ್ತಿದ್ದೆವು ..ನೀವು ನಮ್ಮನ್ನು ತಮಾಷೆ ಮಾಡಬೇಡಿ .ಈ ತುಂಡು ಬಟ್ಟೆ ಆಗ ನಮ್ಮ ಮಾನ ಸರಿಯಾಗಿ  ಮುಚ್ಚುತ್ತಿತ್ತು .ಈಗಿನ ಫ್ಯಾಷನ್ ಬಟ್ಟೆಗಳು ಮುಚ್ಚುವುದಕ್ಕಿಂತ ಹೆಚ್ಚು ಪ್ರದರ್ಶಿಸುತ್ತವೆ ಎಂದು ಅಜ್ಜರ ಸಂಘದ ಆರೋಪ .
ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ

ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ

ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ

ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ

 

ಡೆಂಗು (ಡೆಂಗೆ) ಜ್ವರ


ಇತ್ತೀಚಿಗೆ  ಸುದ್ದಿಯಲ್ಲಿ ಇರುವ ವ್ಯಾಧಿ. ಇದು ವೈರಸ್ ನಿಂದ ಬರುವ ಕಾಯಿಲೆ .ರೋಗ ಪೀಡಿತ

ವ್ಯಕ್ತಿಯ ರಕ್ತ ಹೀರಿದ  ಈಡಿಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವ ಕಾಯಿಲೆ.


ಸೊಳ್ಳೆ ಕಡಿದು ನಾಲ್ಕರಿಂದ ಏಳು ದಿನಗಳಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತವೆ.
ರೋಗ ಲಕ್ಷಣಗಳು

ಜ್ವರ ,ತಲೆ ನೋವು ,ಮೈಕೈ ನೋವು ,ಸಂಧಿ ನೋವು ,ಹೊಟ್ಟೆ ನೋವು ,ವಾಂತಿ ಮುಖ್ಯ

ಲಕ್ಷಣಗಳು.ಎಲುಬೇ ಒಡೆದು ಹೋಗುವಷ್ಟು ನೋವು ಇರುತ್ತಾದ್ದರಿಂದ ಬ್ರೇಕ್ ಬೋನ್ ಫೀವರ್

ಎಂದೂ ಈ ರೋಗವನ್ನು ಕರೆಯುವುದುಂಟು.ಕೆಲವರಿಗೆ ಮೈಮೇಲೆ ಕೆಂಪು ಬೀಳ ಬಹುದು.ಅದು

ತುರಿಕೆ ಉಂಟು ಮಾಡಲೂ ಬಹುದು.ತೀವ್ರ ತರ ರೋಗ ದಲ್ಲಿ ರಕ್ತ ಸ್ರಾವ ,ರಕ್ತದ ಒತ್ತಡ ಕುಸಿತ

ಉಂಟಾಗ ಬಹುದು.
                                         
                                                           ಡೆಂಗು ವಿನಲ್ಲಿ ಬಿದ್ದ ಕೆಂಪು

ಪರೀಕ್ಷಣಗಳು

ರಕ್ತದಲ್ಲಿ ಬಿಳಿ ಕಣಗಳು ,ಪ್ಲೇಟಿಲೆಟ್ ಕಣಗಳು ಕಮ್ಮಿಯಾಗಿರುತ್ತವೆ. ಡೆಂಗು ರೋಗದ ಕಾರ್ಡ್

ಟೆಸ್ಟ್ ಸಾಮಾನ್ಯವಾಗಿ ಎಲ್ಲೆಡೆ ಲಭ್ಯವಿರುತ್ತದೆ. ಇದು ರೋಗ ಲಕ್ಷಣ ಗಳನ್ನು ಗಮನಕ್ಕೆ

ತೆಗೆದುಕೊಂಡು ನಿರ್ದರಿಸಿದರೆ ವಿಶ್ವಾಸಾರ್ಹ .ಇದರಲ್ಲಿ NS1 ಆಂಟಿಜನ್ ರೋಗ ಲಕ್ಷಣಗಳು

ಕಂಡೊಡನೆ  ಪೋಸಿಟಿವ್ ಆಗಿರುವುದು.    IgM ಆಂಟಿಬಾಡಿ ನಂತರ ಬರುವುದು.ಕೊನೆಗೆ

ದಿನಗಳ ನಂತರ IgM  ಆಂಟಿಬಾಡಿ ಕಂಡು ಬಂದು ರೋಗ ಗುಣವಾದ ಮೇಲೂ ವರ್ಷಗಳ

ತನಕ ರಕ್ತದಲ್ಲಿ ಇರುವುದು.ಆದುದರಿಂದ IgG ಮಾತ್ರ ಪೊಸಿಟಿವ್ ಇದ್ದರೆ ಅದನ್ನು ಈಗಿನ

ಕಾಯಿಲೆಯ ಅಧಾರ ಆಗಿ ಪರಿಗಣಿಸುವುದು ಕಷ್ಟ.ಇದೇ ಅಂಶಗಳನ್ನು ಎಲಿಸಾ ಎಂಬ

ಪರೀಕ್ಷೆಯಲ್ಲಿ ಮಾಡುತ್ತಾರೆ ,ಇದು ಹೆಚ್ಚು ವಿಶ್ವಾಸಾರ್ಹ .ಈ ಪರೀಕ್ಷನವನ್ನೇ ಸರಕಾರವೂ

ಅಂಕಿ ಅಂಶಗಳಿಗೆ ಪರಿಗಣಿಸುತ್ತದೆ.

ರೋಗದ ಉಪಚಾರ
ಇದು ವೈರಸ್ ನಿಂದ ಉಂಟಾಗುವ ಕಾಯಿಲೆ .ಹೆಚ್ಚಿನವರಲ್ಲಿ ತನ್ನಿಂದ ತಾನೇ ಗುಣವಾಗುವುದು.

ಜ್ವರ ಮೈಕೈ ನೋವಿಗೆ ಪ್ಯಾರಸಿಟಮಾಲ್ ಮಾತ್ರೆ ಕೊಡುತ್ತಾರೆ. ದೈಕ್ಲೊಫೆನಕ್,ಇಬುಫ್ರೋಫೇನ್

ನಂತಹ  ಔಷಧಿಗಳು ಪ್ಲಾಟಿಲೆಟ್ ಕಣಗಳ ಮೇಲೆ ವ್ಯತಿರಿಕ್ತ  ಪರಿಣಾಮ ಬೀರುವುದರಿಂದ

ಅವುಗಳನ್ನು ದೂರವಿಡಬೇಕು.ಅತಿ ವಾಂತಿ ಇದ್ದರೆ ಡ್ರಿಪ್ ಮೂಲಕ ಆಹಾರ ಕೊಡುವರು.

ಆಂಟಿಬಯೋಟಿಕ್ ಗಳು ಪರಿಣಾಮ ಕಾರಿ ಅಲ್ಲ.ಚರ್ಮದಲ್ಲಿ ತೀವ್ರ ತುರಿಕೆ ಇದ್ದರೆ ಶಮನಕ್ಕೆ

ಮಾತ್ರೆ ಕೊಡುವರು.ರಕ್ತ ಸ್ರಾವ ಇದ್ದರೆ ಮತ್ತು ಪ್ಲಾಟಿ ಲೆಟ್ ಬಹಳ ಕಡಿಮೆ ಆದರೆ –(ಎಂದರೆ

ಘನ ಮಿಲಿ ಲೀ ಯಲ್ಲಿ ೧೦೦೦೦ ಕ್ಕಿಂತ ಕಡಿಮೆ- ) ಪ್ಲಾಟಿ ಲೆಟ್ ಕೊಡಬೇಕಾಗ ಬಹುದು.

ವಿಶ್ವ ಆರೋಗ್ಯ ಸಂಘ ದ ಮಾರ್ಗ ಸೂಚಿಯಂತೆ ರಕ್ತ ಸ್ರಾವ ಮುಂತಡೆಯಲು ಪ್ಲಾಟಿ ಲೆಟ್

ಕೊಡುವ ಅವಶ್ಯವಿಲ್ಲ .

ಪ್ಲಾಟಿಲೆಟ್ ಗಳ ಬಗ್ಗೆ ನನ್ನ ಬ್ಲಾಗ್ “ಪ್ಲಾಟಿಲೆಟ್  ಗಳೆಂಬ ರಕ್ತ ಸ್ಥಂಭಕ “ ಓದಿರಿ.

ಕೆಲವೊಮ್ಮೆ ಡೆಂಗು ಜ್ವರದಲ್ಲಿ ರಕ್ತ ನಾಳ ಗಳಿಂದ ನೀರು ಸೋರಿ ಹೊಟ್ಟೆ ,ಎದೆಗಳಲ್ಲಿ

ತು೦ಬುವುದಲ್ಲದೆ ರಕ್ತ ದೊತ್ತದ ಕುಸಿದು ರೋಗಿ ಅಪಾಯ ಕ್ಕೊಳಗಾಗುವನು .ಇಂತಹವರನ್ನು

ತೀವ್ರ ನಿಗಾ ದ ಲ್ಲಿ ಇಟ್ಟು ಉಪಚರಿಸುವರು.ಆದರೆ ಇಂತಹ ಸಂಭವ ಬಹು ಕಡಿಮೆ.

ಡೆಂಗು ಜ್ವರ  ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ .ಒಮ್ಮೆ ಡೆಂಗು ಬಂದರೆ ಆ

ಜಾತಿಯ ಡೆಂಗು ಪುನಃ ಬರುವುದು ಕಮ್ಮಿ.ಆದರೆ ವೈರಾಣುಗಳು ಆಗಾಗ್ಗೆ ವೇಷ

ಬದಲಿಸುತ್ತಿರುವುದರಿಂದ  ಇನ್ನೊಮ್ಮೆ ಬರದು ಎನ್ನಲಾಗದು.ಪಥ್ಯ ದ ಅಗತ್ಯ ಇಲ್ಲ.

ರೋಗ ಬರದಂತೆ ಚುಚ್ಚು ಮದ್ದು ಇಲ್ಲ. ಸೊಳ್ಳೆ ಕಚ್ಚದಂತೆ ನೋಡಿ ಕೊಳ್ಳಬೇಕು.

ಈಡಿಸ್ ಸೊಳ್ಳೆಯ ಬಗ್ಗೆ ನನ್ನ ಬ್ಲಾಗ್ ಓದಿರಿ.