ಬೆಂಬಲಿಗರು

ಗುರುವಾರ, ಜುಲೈ 11, 2013

ಈಡಿಸ್ ಈಜಿಪ್ಟಿಯಿ ಸೊಳ್ಳೆ

                                                         
ಈಡಿಸ್ ಸೊಳ್ಳೆ


ಈ ಸೊಳ್ಳೆ  ದೇವರಿಂದ ಸೃಷ್ಟಿಸಲ್ಪಟ್ಟು ಸ್ವಚ್ಚಂದವಾಗಿ ಬದುಕಿಕೊಂಡು ಇತ್ತು. ಯಾರಿಗೂ ಅದರ ಇರುವಿನ ಅರಿವು ಇರಲಿಲ್ಲ.

ಹೂವಿನ ಮಕರಂದ ಅವುಗಳ ಆಹಾರ. ಆದರೆ ಹೆಣ್ಣು  ಸೊಳ್ಳೆಗೆ ಮೊಟ್ಟೆಗಳನ್ನು ಪೋಷಿಸಲು  ಸಸ್ತನಿಗಳ 

ರಕ್ತ ಬೇಕು. ಅದಕ್ಕೆ ಸಿಕ್ಕುವುದು ಬಡಪಾಯಿ ಮನಷ್ಯರು. ಸೊಳ್ಳೆಗಳಲ್ಲಿ ಇದು ಮೇಲ್ಜಾತಿಯದು ಎನ್ನ ಬಹುದು.ಏಕೆಂದರೆ 

ಅದಕ್ಕೆ ಕೊಳಕು ನೀರು ಆಗದು .ಶುದ್ದ ನೀರೆ ಬೇಕು.ಕ್ಲೋರಿನೇಟೆದ್  ನೀರೂ ಆಗಬಹುದು.ಡಬ್ಬ ,ಹೂ ಚಟ್ಟಿ ,ಮರದ ಪೊಟರೆ

ಟಾಯ್ಲೆಟ್ ಗುಂಡಿ ಯಂತಹ ಕಡೆ ನಿಂತ ಶುದ್ದ  ನೀರಿನಲ್ಲಿ ಮೊಟ್ಟೆ ಇಡುವುದು.

ಮೊಟ್ಟೆ ,ಲಾರ್ವಾ ಹಂತ ದಾಟಿ ಸೊಳ್ಳೆ ರೂಪ ಧರಿಸುವುದು.ಹೆಣ್ಣು ಸೊಳ್ಳೆ ಮಾತ್ರ ನಮಗೆ ಕಚ್ಚುವುದು. ಅದೂ 

ತನ್ನ ಮೊಟ್ಟೆಗಳ ಆರೈಕೆಗಾಗಿ. ಈಡಿಸ್ ಸೊಳ್ಳೆ  ಸಂಗೀತ ಪ್ರೇಮಿ ಅಲ್ಲ. ಆದುದರಿಂದ ಅನಾಫಿಲಿಸ್ ಸೊಳ್ಳೆಯಂತೆ 

ನಮ್ಮ ಕಿವಿಯ  ಹತ್ತಿರ  ಆಲಾಪನೆ ಮಾಡುವುದಿಲ್ಲ.ಹಲವರು ಸೊಳ್ಳೆ ಕಡಿತವನ್ನಾದರೂ ಸಹಿಸಿಯಾರು ,ಆದರೆ 

ಅದರ ಸಂಗೀತವನ್ನಲ್ಲ.ನಸುಕು ಮತ್ತು ಸಂಧ್ಯೆ  ಇದು ರಕ್ತಕ್ಕಾಗಿ ಧಾಳಿ ಇಡುವುದು.ಮುಗಿಲು ಮತ್ತು ರಾತ್ರಿ ಮಂದ 

ಬೆಳಕು ಇದ್ದರೆ  ವೇಳೆ ತಪ್ಪಿ  ಕಡಿಯ ಬಹುದು. ಜಯಧ್ರಥನ ನೆನಪಾಗುತ್ತಿದೆಯೇ?

ಆದರೆ ಎಲ್ಲರೂ ತನ್ನ ಇರುವಿಕೆಯನ್ನು ಕಡೆಗಣಿಸಿದುದರಿಂದ  ಈಗ  ಈ ಸೊಳ್ಳೆ ತನ್ನ ಕಡಿತದೊಂದಿಗೆ 

ಡೆ೦ಗು ವೈರಸ್ ನ್ನು ಉಚಿತ ಕೊಡುಗೆ ಯಾಗಿ ಕೊಡುತ್ತಿದೆ. ಇದು(ದರ) ಕಡಿತದ ವ್ಯಾಪಾರ .ಡೆಂಗು ರೋಗಾಣುಗಳನ್ನು 

ಈಡಿಸ್ ಸೊಳ್ಳೆಗಳು ಉತ್ಪತ್ತಿ ಮಾಡಲಿಲ್ಲ . ಮಾನವನ ರಕ್ತದಿಂದಲೇ ಅದಕ್ಕೆ ಬಂದ ಬಳುವಳಿ.ಅದು 

ನಿಸರ್ಗದ ಆಣತಿಯಂತೆ ಮನುಷ್ಯನನ್ನು ಕಚ್ಚಿದಾಗ ವೈರಸ್ ಹರಡುವುದು.

ಈಡಿಸ್ ಸೊಳ್ಳೆ ತುಂಬಾ ಎತ್ತರ ,ದೂರ ಹಾರದು . ಮನುಷ್ಯನ ಕಾಲಿಗೆ ,ಕುರ್ಚಿಗಳ ರಂಧ್ರದ ಮೂಲಕ 

ತೊಡೆ  ಬಾಗಕ್ಕೆ ಕಚ್ಚುವುದು ಹೆಚ್ಚು.

ಡೆ೦ಗು ,ಚಿಕೂನ್ಗುನ್ಯಾ ಕಾಯಿಲೆ ಪ್ರಸಾರದಿಂದ ಪ್ರಸಿದ್ದಿಗೆ ಬಂದ ಈ ಸೊಳ್ಳೆಗೆ ಮನೆ ಸುತ್ತ ನೀರು ನಿಲ್ಲದಂತೆ ಮಾಡಿದರೆ 

ಒಂದು ವೇಳೆ ನೀರು ನಿಲ್ಲಲೇ ಬೇಕಾದರೆ ಗಪ್ಪಿ ಮೀನುಗಳನ್ನು  ಸಾಕಿದರೆ ಹತೋಟಿಯಲ್ಲಿ ಇದ ಬಹುದು.

ಎಲ್ಲೆಡೆ ನೀರು ನಿಲ್ಲುವ ಕರಾವಳಿ ಜಿಲ್ಲೆಯಲ್ಲಿ ಇದು ಎಷ್ಟು ಸಾಧ್ಯ?
(ಆಫ್ರಿಕಾದಲ್ಲಿ ಹಳದಿ ಜ್ವ್ರರ ಹರಡುವುದೂ ಇದೇ ಸೊಳ್ಳೆ)

ಬುಧವಾರ, ಜುಲೈ 10, 2013

ಪ್ರೊಫೆಸ್ಸರ್ ಡಾ ಕೌಲ್ ಗುಡ್

ನಾನು ಎಂ ಬಿ ಬಿ ಎಸ  ಓದಿದ್ದು ಕೆ ಎಂ ಸಿ ಹುಬ್ಬಳ್ಳಿ ಎಂದರೆ ಈಗಿನ ಕಿಮ್ಸ್ ನಲ್ಲಿ . ೧೯೭೬ -೮೧. ಅದು ಈ ಸಂಸ್ಥೆಯ ಸುವರ್ಣ

ಯುಗ ಅಂತ್ಯವಾಗುತ್ತಿದ್ದ ದಿನಗಳು.ಉತ್ತರ ಕರ್ನಾಟಕದ ಹೆಮ್ಮೆಯ ಮೆಡಿಕಲ್  ಕಾಲೇಜ್.ಅದರ ಕಟ್ಟಡಗಳು ಖ್ಯಾತ

ಸಿವಿಲ್ ಇಂಜಿನಿಯರ್ ಪ್ರೊಫ್  ಅಡ್ಕೆಯವರ ಮಾರ್ಗದರ್ಶನದಲ್ಲಿ ನಿರ್ಮಿತವಾಗಿದ್ದು ಇಡೀ ಕ್ಯಾಂಪಸ್ ನೂರಾರು ಎಕರೆ

ಪ್ರದೇಶದಲ್ಲಿ ಹರಡಿದೆ.ಹುಬ್ಬಳ್ಳಿ ಯಾ ವಿದ್ಯಾ ನಗರದ ಈ ಜಾಗ ಹೂ ತೋಟಗಳಿಂದ ತುಂಬಿ ನೋಡಲು ನಯನ ಮನೋಹರ.

ದಾರಿಯುದ್ದಕ್ಕೂ ಮೇ ಫ್ಲವರ್ ಮತ್ತು ಗುಲ್ ಮೊಹರ್ ಗಿಡಗಳು ಸರತಿಯಲ್ಲಿ ವರುಷವಿಡೀ ಹೂಗಳಿಂದ ಕಂಗೊಳಿಸುತ್ತಿದ್ದವು.

                                             ಕಾಲೇಜ್ ಕಟ್ಟಡದ ವಿಹಂಗಮ ನೋಟ                                                                                            

ಕ್ಯಾಂಪಸ್ ರಸ್ತೆಗಳು


ಕಾಲೇಜ್ ನ  ಹೆಬ್ಬಾಗಿಲು ಪ್ರವೇಶಿಸುವಾಗ ರೋಮಾಂಚನ ಆಗುತ್ತಿತ್ತು

ನಾನು ಅಲ್ಲಿ ಕಲಿಯುತ್ತಿದ್ದ ವೇಳೆ ಕೌಲ್ಗುಡ್ ಸಹೋದರರೆಂದು ಪ್ರಖ್ಯಾತರಾದ  ಡಾ ಎಸ ಆರ್ ಕೌಲ್ ಗುಡ್ ಮತ್ತು 

ಎಸ ಏನ್ ಕೌಲ್ ಗುಡ್ ನಮ್ಮ ಪ್ರಾಧ್ಯಾಪಕರಾಗಿದ್ದ್ದರು. ಮೊದಲನೆಯವರು ಸರ್ಜರಿ ವಿಭಾಗದಲ್ಲಿ ಇದ್ದರೆ 

ಇನ್ನೊಬ್ಬರು  ಗೈನಕೊಲೋಜಿ ಪ್ರೊಫೆಸ್ಸರ್.ಸರ್ಜರಿಯವರು ಸ್ತಿತ ಪ್ರಜ್ನ ,ಮಿತ ಭಾಷಿ .ಗ್ಯ್ನೆನಕೊಲೋಜಿ ಯವರು 

ಭಾವ ಜೀವಿ ,ಮಾತುಗಾರ .ಇಬ್ಬರೂ ಅತ್ಯುತ್ತಮ ಅಧ್ಯಾಪಕರೂ ,ಶಸ್ತ್ರ ಚಿಕಿತ್ಸಾ ನಿಪುಣರೂ ಆಗಿದ್ದರು.ನನ್ನ 

ಭಾಗ್ಯವೆಂದರೆ ಇವರಿಬ್ಬರ ಯೂನಿಟ್ ನಲ್ಲಿ ಮೊದಲು ವಿದ್ಯಾರ್ಥಿಯಾಗಿ ,ನಂತರ  ಹೌಸ್ ಸರ್ಜನ್ ಆಗಿ 

ಕೆಲಸ ಮಾಡುವ ಸುಯೋಗ ಲಭಿಸಿದ್ದುದು.ಇವರಲ್ಲಿ  ಡಾ ಎಸ ಆರ್ ಕೌಲ್ ಗುಡ್  ಈಗಲೂ ಧಾರವಾಡದಲ್ಲಿ 

ಸೇವೆ ಸಲ್ಲಿಸುತ್ತಿದ್ದಾರೆ.ಸರಳ ಜೀವಿಗಳು ,ಶುದ್ದ ಹಸ್ತರೂ ಆಗಿದ್ದ  ಇವರಲ್ಲಿ ಇದ್ದ ವಾಹನ ಸ್ಕೂಟರ್.

ಗ್ಯ್ನೆಕೊಲೋಜಿ  ಕೌಲ್ ಗುಡ್ ಅವರ  ಓ ಪಿ ಡಿ ಬೆಳಿಗ್ಗೆ ಎಂಟರಿಂದ ಆರಂಭವಾಗಿ   ಸಾಯಕಾಲ  ಮೂರಾದರೂ 

ಮುಗಿಯುತ್ತಿರಲಿಲ್ಲ.ಎಲ್ಲಾ ರೋಗಿಗಳಿಗೂ ಅವರೇ ಆಗ ಬೇಕು .ಎಷ್ಟು ಹೊತ್ತು ಕಾಯಲೂ ತಯಾರಿದ್ದರು.ಓ ಪಿ ಡಿ ಮುಗಿಸಿ 

ಮನೆಗೆ ತೆರಳಿ ಊಟದ ಶಾಸ್ತ್ರ ಮುಗಿಸಿ  ರೌಂಡ್ಸ್ ಗೆ ಬರುತ್ತಿದ್ದರು .ಅಶ್ಟರಲ್ಲಿ  ಪಿ.ಜಿ . ಮತ್ತು  ಇಂಟರ್ನ್ಗಳು 

ಅಡ್ಮಿಟ್ ಆದ ಕೇಸುಗಳ  ವಿವರ ರಡಿ ಮಾಡಿ ಇದ ಬೇಕು.ಸಣ್ಣ ಲೋಪಗಲಿದ್ದರೂ  ಚಾವಣಿ ಹಾರುವಂತೆ 

ಆವೇಶದಿಂದ ಬೈಯುವರು.ಅದೇ  ವಿದ್ಯಾರ್ಥಿಗಳು ಕಲಿಯುವಾಗ ಅಕಾಸ್ಮಾತ್ ದೊಡ್ಡ ತಪ್ಪುಗಳಾದರೆ ತಾಳ್ಮೆಯಿಂದ 

ಹೇಳಿಕೊಟ್ಟು ತಿದ್ದುತ್ತಿದ್ದರು.ಅವರ ರೋಗಿಗಳು ಸ್ತ್ರೀಯರು ಮಾತ್ರ .ಎಲ್ಲಿಯಾದರೂ ಗಂಡಂದಿರು ಹೆಂಡತಿಗೆ 

ರಕ್ತ ಕೊಡಲು ನಿರಾಕರಿಸಿದರೆ ಸಿಟ್ಟಿಗೆದ್ದು ಹೊಡೆದದ್ದೂ ಉಂಟು.ಇಲ್ಲವಾದರೆ ನಾನೇ ರಕ್ತ ಕೊಡುತ್ತೇನೆ ಎಂದು ಕೊಟ್ಟದ್ದು 

ನೂರಾರು ಭಾರಿ.ಇವರು ಎಷ್ಟು ಶುದ್ದ ಹಸ್ತರೆಂದರೆ  ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ಮಾಡಿದ್ದಕ್ಕೆ ಸರಕಾರ 

ಕೊಡ ಮಾಡುತ್ತಿದ್ದ ಹಣವನ್ನು ತೆಗೆದು  ಕೊಳ್ಳದೇ ಬಡ ರೋಗಿಗಳ  ನಿಧಿಗೆ ಸಮರ್ಪಿಸುತ್ತಿದ್ದರು. ಖ್ಯಾತ ಲೇಖಕಿ 

ಸುಧಾ ಮೂರ್ತಿಯವರ ಅಕ್ಕ ಸುನಂದಾ ಕುಲಕರ್ಣಿ ಇವರ ವಿಭಾಗ ದಲ್ಲಿ ಲೆಕ್ಚರರ್ ಆಗಿ ಕೆಲಸ  ಮಾಡುತ್ತಿದ್ದರು.

ಇವರು ಪಾಠ ಮಾಡುವಾಗ  I may not be that good but I am Koulgud ಎಂದು ತಮಾಷೆಗೆ ಹೇಳುತ್ತಿದ್ದರು.ಇವರು 

ಮೈಸೂರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.ಹಗಲು ರಾತ್ರಿಯೆನ್ನದೆ 

ವಿಶ್ರಾನ್ತಿಯಿಲ್ಲದೆ  ಬಡ ರೋಗಿ ಮತ್ತು (ಬಡ) ವಿದ್ಯಾರ್ಥಿಗಳ ಸೇವೆಯಲ್ಲಿ ಜೀವ ತೇದ ಅವರ ನೆನಪಿಗೆ 

ವಂದನೆಗಳು.

ಇಬ್ಬರು ಕೌಲ ಗುಡ್ ಇದ್ದುದರಿಂದ ಕನ್ಫ್ಯೂಷನ್ ಇರುತ್ತಿತ್ತು.ಅದಕ್ಕಾಗಿ ಅವರನ್ನು ಪಿ.ಆರ್  ಮತ್ತು ಪಿ ವಿ ಕೌಲ್ ಗುಡ್ ಎಂದೂ 

ವಿದ್ಯಾರ್ಥಿಗಳು ಗುರುತಿಸುತ್ತಿದ್ದರು.

ಬಾಲಂಗೋಚಿ:  ಕ್ಯಾಲಿಕಟ್ ಮೆಡಿಕಲ್ ಕಾಲೇಜ್ ನಲ್ಲಿ ಇಬ್ಬರು  ಡಾಕ್ಟರ  ಭಟ್ ಇದ್ದರು.ಒಬ್ಬರು  ಯುರೋಲೋಜಿ 

ವಿಭಾಗದಲ್ಲಿ ಇದ್ದಾರೆ ಇನ್ನೊಬ್ಬರು ಕಣ್ಣಿನ ತಜ್ಞರು. ಆದ್ದರಿಂದ  ನೀವು ಡಾ ಭಟ್ ರನ್ನು ವಿಚಾರಿಸಿದರೆ  "ನಿನ್ಗಳುಕ್ಕು 

ಮೂತ್ರ ಭಟ್ ವೇನೋ ಅಲ್ಲ ನೇತ್ರ ಭಟ್ ವೇನೋ (ನಿಮಗೆ ಮೂತ್ರ ಭಟ್ ಬೇಕೋ ಅಲ್ಲ ನೇತ್ರ ಭಟ್ ಬೇಕೋ?)

ಎಂದು ಅಲ್ಲಿಯ ಸಿಬ್ಬಂದಿ ಕೇಳುತ್ತಿದ್ದರು!

ಭಾನುವಾರ, ಜುಲೈ 7, 2013

ಹಲಸಿನ ಮೇಳ

                                                 

ಈದಿನ  ಅಡ್ಯನಡ್ಕದಲ್ಲ್ಲಿ  ಹಲಸಿನ ಮೇಳಕ್ಕೆ  ಹೋಗಿದ್ದೆ. ಬಂಧು  ಮುಳಿಯ ವೆಂಕಟ ಕೃಷ್ಣ ಶರ್ಮ ಮೊದಲೇ 

ಇಂತಹ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಿದ್ದರು. ಅವರು ಪ್ರಗತಿಪರ ಕೃಷಿಕ. ವೈಜ್ಞಾನಿಕ ವಾಗಿ  ದೊಡ್ಡ ಮಟ್ಟದಲ್ಲಿ 

ಹಲಸಿನ ಕೃಷಿ ಕೈಕೊಂಡಿದ್ದಾರೆ.ಕಳೆದ ವರ್ಷ ನ್ಯಾಚುರಲ್ ಐಸ್ ಕ್ರೀಂ ನವರಿಗಾಗಿ ೨೭ ಟನ್ ಹಲಸಿನ ಹಣ್ಣು 

ಮಾರಾಟ ಮಾಡಿದ್ದಾರೆ.ಅಡಿಕೆ ಪತ್ರಿಕೆ ,ವಾರನಾಶಿ ಪ್ರತಿಸ್ತಾನ  ಗಳ ಪ್ರಯೋಜಕತೆ ಯಲ್ಲಿ  ಖ್ಯಾತ ಪರಿಸರ ,ಕೃಷಿ ತಜ್ಞ 

ಶ್ರೀ  ಪಢ್ರೆಯ ವರ  ಮುಂದಾಳುತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಡಿ ಮಳೆಯನ್ನೂ ಲೆಕ್ಕಿಸದೆ  ಸಾವಿರಾರು ಮಂದಿ 

ಆಸಕ್ತರು ಬಂದಿದ್ದರು.

ಶ್ರೀ   ಪಢ್ರೆ

ಹಲಸು ಒಂದು ಕಲ್ಪ ವೃಕ್ಷ .ಅದರ ಎಲೆಯನ್ನು ದೊ ನ್ನೆ ತಯಾರಿಸಲು, ಕಡುಬು ಸುತ್ತಲು ,ಕಟ್ಟಿಗೆ ಹೋಮಕ್ಕೆ ,ಮರ ಬಾಗಿಲು 

ಪೀತೊಪಕರಣ  ತಯಾರಿಸಲು,  ಎಳೆಯ ಹಲಸಿನ ಕಾಯಿ ಪಲ್ಯಕ್ಕೆ ,ಬಲಿತ ಕಾಯಿ ಪಲ್ಯ,ದೋಸೆ ,ಚಿಪ್ಸ್ ,ಹಪ್ಪಳ ಇತ್ಯಾದಿ 

ಮಾಡಲು ಹಣ್ಣು ತಿನ್ನಲು ,ಪಾಯಸಕ್ಕೆ ,ಸುಟ್ಟವು, ಹಣ್ಣನ್ನು ಕಾಯಿಸಿ  ಪೆರಟಿ ಮಾಡಿ  ಕಾದಿರಿಸಿ ಪಾಯಸ ಮಾಡಿ ಇಲ್ಲವೇ ಹಾಗೆಯೇ 

ತಿನ್ನುತ್ತಾರೆ. ಇನ್ನು ಹಲಸನ್ನು ಉಪ್ಪಿನಲ್ಲಿ ಹಾಕಿ  ಶೇಖರಿಸಿದರೆ  ಅದು ಆಪತ್ಭಾಂಧವ ತರಕಾರಿ , ಅದರಿಂದ ಪಲ್ಯ ,ರೊಟ್ಟಿ

ಉಂಡಲ ಕಾಳು ಎಂಬ ತಿನಿಸು ಮಾಡುತ್ತಾರೆ.ಹಲಸಿನ  ಬೀಜವೂ ಸಸಾರಜನಕ ಯುಕ್ತ  ಪೌಸ್ತಿಕ ವಸ್ತು.ಅದನ್ನೂ 

ಪಲ್ಯ ,ಹೋಳಿಗೆ ಮಾಡಲು ಬಳಸುತ್ತಾರೆ.ಹಿಂದಿನ ಕಾಲದಲ್ಲಿ  ಮನೆ ಹೆಣ್ಣು ಮಕ್ಕಳು ಹಲಸಿನ  ಬೀಜ ಕೊಟ್ಟು 

ಒಲಿ ಚಾಪೆ ,ತಡ್ಪೆ ಇತ್ಯಾದಿಗಳನ್ನು ಬಾರ್ಟರ್ ಪದ್ದತಿಯಲ್ಲಿ ಕೊಳ್ಳುತ್ತಿದ್ದರು.ಹಲಸಿನ ಮಯಣವನ್ನು ಒಂದು ಕೋಲಿನ ತುದಿಗೆ 

ಉಂಡೆಯಾಗಿ ಶೇಖರಿಸಿ ಪಾತ್ರೆಗಳ  ತೂತು ಗಳನ್ನ ಮುಚ್ಚಲು ಬಿಸಿ ಮಾಡಿ ಬಳಸುತ್ತಿದ್ದರು .






ಎಸ್ಟೋ ಹಲಸಿನ ಹಣ್ಣುಗಳು ಕೊಳೆತು ಹೋಗುತ್ತವೆ. ಅವುಗಳ ಮೌಲ್ಯ ವರ್ಧನೆ ,ಶೇಖರಣೆ 

ಇತ್ಯಾದಿಗಳ ಬಗ್ಗೆ  ಉಪಾನ್ಯಾಸ ,ಪ್ರಾತ್ಯಕ್ಷಿಖೆ  ಗಳು ಇದ್ದವು .ಮದ್ಯಾಹ್ನ  ಊಟಕ್ಕೆ  ಹಲಸಿನ ಗಸಿ.

ಮಜ್ಜಿಗೆ ಹುಳಿ, ಹಲಸಿನ ಪಾಯಸ ,ಹಲಸಿನ ಹಣ್ಣು ,ಕೊನೆಗೆ ಎಲ್ಲರಿಗೂ  ನ್ಯಾಚುರಲ್ ಐಸ್ ಕ್ರೀಂ ಅವರ 

ಸ್ವಾದಿಸ್ಥ್ಯ ಮಾಯ ಹಲಸಿನ ಹಣ್ಣಿನ ಐಸ್ಕ್ರೀಂ.

ಹಲಸಿನ  ಹಣ್ಣಿನ  ವೈಜ್ಞಾನಿಕ ಹೆಸರು  ಆರ್ಕರ್ಟೋಕಾರ್ಪಸ್ ಹಿಟಿರೋಫಿಲಾಸ್.

ಅದರ ಲ್ಲಿ  ಇರುವ  ಅಹಾರಾಂಶಗಳು 

     
                                  
ಹಲಸಿನ ಕಾಯಿಯ  ಅಹಾರಾ೦ಶಗಳು 

Nutritional value per 100 g (3.5 oz)
Energy397 kJ (95 kcal)
Carbohydrates23.25 g
Sugars19.08 g
Dietary fiber1.5 g
Fat0.64 g
Protein1.72 g
Vitamin A equiv.5 μg (1%)
beta-carotene61 μg (1%)
lutein and zeaxanthin157 μg
Thiamine (vit. B1)0.105 mg (9%)
Riboflavin (vit. B2)0.055 mg (5%)
Niacin (vit. B3)0.92 mg (6%)
Pantothenic acid (B5)0.235 mg (5%)
Vitamin B60.329 mg (25%)
Folate (vit. B9)24 μg (6%)
Vitamin C13.7 mg (17%)
Vitamin E0.34 mg (2%)
Calcium24 mg (2%)
Iron0.23 mg (2%)
Magnesium29 mg (8%)
Manganese0.043 mg (2%)
Phosphorus21 mg (3%)
Potassium448 mg (10%)
Sodium2 mg (0%)
Zinc0.13 mg (1%



ಶನಿವಾರ, ಜುಲೈ 6, 2013

ಸ್ಟ್ರೋಕ್ ಅಥವಾ ಮೆದುಳಿನ ಆಘಾತ

ನಮ್ಮ ಶರೀರದ ಸಕಲ ಕಾರ್ಯಗಳನ್ನು ನಿಯಂತ್ರಿಸುವುದು ಮೆದುಳು. ದೊಡ್ಡ ಮೆದುಳಿನಲ್ಲಿ ಎಡ ಮತ್ತು ಬಲ ಎಂಬ ಎರಡು

ಭಾಗಗಳಿರುತ್ತವೆ.ಎಡದ ಮೆದುಳು ಶರೀರದ ಬಲದ ಭಾಗವನ್ನೂ ,ಮಾತನ್ನೂ ನಿಯಂತ್ರಿಸುತ್ತದೆ.ಬಲದ ಭ್ಹಾಗ  ಶರೀರದ ಎಡ

ಪಾರ್ಶ್ವವನ್ನು ನಡೆಸುತ್ತದೆ.ಮೆದುಳಿನ ಮುಂಬಾಗದಲ್ಲಿ ಚಲನೆಯ ಕೇಂದ್ರ ಇದ್ದರೆ ಪಾರ್ಶ್ವ ಶ್ರವಣ ,ಭಾವನೆ ಮತ್ತು ,ಸ್ಪರ್ಶದ

ಜ್ಞಾನ ಶೇಖರಿಸಿ ನಿಯಂತ್ರಿಸುತ್ತದೆ..ಹಿಂದಿನ ಭಾಗದಲ್ಲಿ ದೃಷ್ಟಿ ಗ್ರಹಣ ಕೇಂದ್ರ ಇದೆ.



ಮೆದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರ ಧಿಡಿರನೆ ವ್ಯತ್ಯಯವಾದರೆ ಸ್ಟ್ರೋಕ್ ಅಥವಾ ಮೆದುಳಿನ ಆಘಾತ 

ಸಂಭವಿಸುತ್ತದೆ.  ಅದು ಎಡ ಭಾಗದ ಚಲನ ಕೇಂದ್ರ ಕ್ಕಾದರೆ (ಮೋಟಾರ್ ಏರಿಯ )ಬಲ ಭಾಗದ ಪಾರ್ಶ್ವ ವಾಯು 

ಉಂಟಾಗುವುದು.ಮಾತೂ ನಿಲ್ಲ ಬಹುದು.ಮೆದುಳಿನ ಹಿಂಬಾಗ ದ ರಕ್ತ ಸಂಚಾರ ಚ್ಯುತಿಯಾದರೆ ಕಣ್ಣು ಸರಿಯಿದ್ದರೂ 

ದೃಷ್ಟಿ ಹೋಗುವುದು.ಇದನ್ನು ಕಾರ್ಟಿಕಲ್  ಬ್ಲೈಂಡ್ ನೆಸ್ ಎನ್ನುವರು.

ಸ್ಟೋಕ್ ಗೆ ಕಾರಣಗಳು

ಅತಿ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದಯ ಕಾಯಿಲೆಗಳು ,ಕೆಲವೊಮ್ಮೆ ಜನ್ಮತಾ 

ಮೆದುಳಿನ ರಕ್ತ ನಾಳಗಳ  ರಚನಾ ಕೊರತೆಗಳು ಕಾರಣವಾಗ ಬಹುದು.

ರೋಗ ಲಕ್ಷಣಗಳು. 

 ಧಿಡೀರನೆ ಒಂದು ಪಾರ್ಶ್ವದಲ್ಲಿ ಬಲವಿಲ್ಲದೆ ಆಗುವುದು.ಮಾತು ತೊದಲುವುದು, ಮಾತು 

ಇಲ್ಲದಾಗುವುದು,ತಲೆನೋವು, ಅಪಸ್ಮಾರ ಮತ್ತು ಪ್ರಜ್ಞೆ ತಪ್ಪುವುದು .ರಕ್ತ ಸಂಚಾರ  ತೊಡಕಾದ  ಭಾಗವನ್ನು ಹೊಂದಿ 

ಕೊಂಢು ರೋಗ ಲಕ್ಷಣ ಇರುತ್ತದೆ.

ಪರೀಕ್ಷೆಗಳು   

ವೈದ್ಯರು ರೋಗಿಯ  ಪರೀಕ್ಷೆ ಮಾಡಿ  ಸ್ಟ್ರೋಕ್ ನ   ಸಂಭವನೀಯ ಕಾರಣ ಮತ್ತು ಅದು ಆಕ್ರಮಿಸಿದ ಮೆದುಳಿನ ಭಾಗವನ್ನು 

ನಿರ್ಧರಿಸುತ್ತಾರೆ.ಸಾಮಾನ್ಯ ದೇಹ ಸ್ತಿತಿ  ,ಬಿ.ಪಿ. ರಕ್ತದ  ಸಕ್ಕರೆ ಪ್ರಮಾಣ ಇತ್ಯಾದಿ ಪರೀಕ್ಷಿಸುತ್ತಾರೆ.

ಮೆದುಳಿನ  ಸ್ಕ್ಯಾನ್  (ಸಿ.ಟಿ. ಅಥವಾ ಎಂ ಅರ ಐ ) ಮಾಡಿ ಮೆದುಳಿನಲ್ಲಿ  ಆದುದು ರಕ್ತ  ಹೆಪ್ಪುಗಟ್ಟುವಿಕೆಯೋ 


ಅಲ್ಲಾ  ರಕ್ತ ಸ್ರಾವವೋ ,ಮತ್ತು ಅದು ಆದ ಭಾಗ, ಅದರ ತೀವ್ರತೆ  ನಿಶ್ಚಯಿಸುತ್ತಾರೆ.


ಮೆದುಳಿನ ರಕ್ತ ಸ್ರಾವ  (ಸಿಟಿ ಸ್ಕ್ಯಾನ್ )



ಮೆದುಳಿನ ರಕ್ತ  ಹೆಪ್ಪುಗಟ್ಟುವಿಕೆ.

ರಕ್ತ ದ ಹೆಪ್ಪನ್ನು ತೆಗೆಯುವ ಚಿಕಿತ್ಸೆ ಈಗೆ ಇದೆ .ಆದರೆ ಕೂಡಲೇ ಆಸ್ಪತ್ರೆ ಗೆ ಬರಬೇಕು.ವೈದ್ಯರು ರಕ್ತ ಹೆಪ್ಪು ನಿರೋಧಕ 

ಔಷಧಿಗಳನ್ನು ನೀಡುವರು.ರಕ್ತ ಸ್ರಾವ  ಕ್ಕೆ  ಚಿಕಿತ್ಸೆ ಬೇರೆ.

ಮುಖ್ಯವಾಗಿ ಇಲ್ಲ್ಲಿ ಕಾಯಿಲೆ  ಇರುವುದು ಮೆದುಳಿನಲ್ಲಿ .ಅದಕ್ಕೆ ಪಾರ್ಶ್ವ ವಾಯು ಯಾದ ಅಂಗಕ್ಕೆ ಔಷಧಿ ಹಾಕಿ ಪ್ರಯೋಜನ 

ಇಲ್ಲ. ಮೇನ್  ಫ್ಯೂಸ್ ಹೋದರೆ ಬಲ್ಬ್ ಬದಲಾಯಿಸಿ ಪ್ರಯೋಜನವಿಲ್ಲ.ಆದರೆ ಮೆದುಳು ಅಘಾತದಿಂದ ಹೊರ ಬರುವ ತನಕ 

ಬಲ ಹೀನತೆಯಿರುವ ಅಂಗಾಂಗಗಳಿಗೆ ವ್ಯಾಯಾಮ ಕೊಡಬೇಕು .ಇಲ್ಲದಿದ್ದರೆ  ಅವು  ಕೆಲಸವಿಲ್ಲದೇ ಕ್ಷೀಣಿಸಿ ಮುಂದೆ 

ಮೆದುಳು ಸರಿಯಾದರೂ ತಾವು ಕೆಲಸ ಮಾಡ ಲೊಲ್ಲವು.ಅದನ್ನೇ ಪಿಸಿಯೋತೆರಪಿ ಎನ್ನುವುದು.
ಪಾರ್ಶ್ವ ವಾಯು ಅಥವಾ ಶರೀರದ ಒಂದು ಬದಿ ಬಲ ಕಡಿಮೆ ಒಂದು ರೋಗ ಲಕ್ಷಣ ವೇ ಹೊರತು ರೋಗವಲ್ಲ ,ರೋಗ ಹೆಚ್ಚಾಗಿ ಮೆದುಳಿನ ಆಘಾತ

(ಮೇಲಿನ ಚಿತ್ರಗಳ ಮೂಲಕ್ಕೆ ಆಭಾರಿ)


ಶುಕ್ರವಾರ, ಜುಲೈ 5, 2013

ಡಾ ಎಂ ಕೆ ಮಣಿ

                                       

ಡಾ ಎಂ ಕೆ ಮಣಿ 

ನಮ್ಮ ದೇಶದಲ್ಲಿ  ಮೂತ್ರಾಂಗ ಶಾಸ್ತ್ರ ದ  (ನೆಫ್ರಾಲಜಿ)  ಬೆಳವಣಿಗೆಯ ಅಧ್ವರ್ಯು ಡಾ ಎಂ ಕೆ ಮಣಿ .

ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರು ಕಿಡ್ನಿ ವೈಫಲ್ಯದಿಂದ ಬಳಲಿದಾಗ  ಚಿಕಿತ್ಸೆ ನಡೆಸಿ ಎಲ್ಲರ 

ಗಮನ ಸೆಳೆದು ಕೃತಜ್ಞತೆಗೆ ಪಾತ್ರರಾದವರು.ಆರಂಭದಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜ್ , ಮತ್ತು  ಇತರ ಸರಕಾರೀ 

ವೈದ್ಯಕೀಯ ಕಾಲೇಜ್ ಗಳಲ್ಲಿ ಭೋದನೆ. ನಂತರ  ಆಸ್ಟ್ರೇಲಿಯಾ ನಾಡಿನ ಹೆಸರಾಂತ ಗುರುಗಳ ಮಾರ್ಗದರ್ಶನದಲ್ಲಿ 

ಮೂತ್ರ ಅಂಗ ಶಾಸ್ತ್ರದಲ್ಲಿ  ಹೆಚ್ಚಿನ ಅಧ್ಯಯನ. ಭಾರತಕ್ಕೆ ಆಗಮಿಸಿ ಮೊದಲು ಮುಂಬೈ ಯಲ್ಲಿ , ಆ ಮೇಲೆ 

ಮದ್ರಾಸ್ ನ  ಅಪೊಲೊ ಆಸ್ಪತ್ರೆಯಲ್ಲಿ  ಸೇವೆ. ಕಾರ್ಪೊರೇಟ್ ಆಸ್ಪತ್ರೆ ಯಲ್ಲಿ ಇದ್ದರೂ  ವೈದ್ಯ ಕ್ಷೇತ್ರದ 

ನೀತಿ ನಿಯಮಗಳಿಗೆ ಬದ್ಧ . ವೈದ್ಯ ಕೀಯ ಕ್ಷೇತ್ರದ  ಅನಿಷ್ಟಗಳ   ವಿರುದ್ದ  ಹೋರಾಟ.

ಕಿಡ್ನಿ ಕಸಿಯಲ್ಲಿ ಕಟ್ಟು ನಿಟ್ಟು. ಸಂಬಂದಿಗಳ ಕಿಡ್ನಿ ಮಾತ್ರ ಕಸಿಗೆ  ಅನುಮತಿ.

 ವೈದ್ಯ ಗುರು ಭೀಷ್ಮಚಾರ್ಯ ಡಾ ಕೆ  ವಿ ತಿರುವೆಂಗಡಮ್ ಅವರಂತೆ ಇವರಿಗೂ ಅಧ್ಯಾಪನ ವೆಂದರೆ ಪ್ರೀತಿ. ಅಪೊಲೊ ಆಸ್ಪತ್ರೆಯಲ್ಲಿ ಪ್ರತಿ ಬುಧ ವಾರ 

ಸಂಜೆ ವಿದ್ಯಾರ್ಥಿಗಳಿಗೆ ಪ್ರವಚನ. ಸ್ನಾತಕ ಸ್ನಾತಕೋತ್ತರ ಯಾರು ಬೇಕಾದರೂ ಹೋಗ ಬಹುದು .ಸ್ವಂತ ಖರ್ಚಿನಲ್ಲಿ 

ಕಾಫೀ ತಿಂಡಿ ಮತ್ತು ಬ್ಹೊಧಪ್ರದ  ಉಪನ್ಯಾಸ  ಮತ್ತು ಪ್ರಾತ್ಯಕ್ಷಿಕೆ.

ಬಹಳಷ್ಟು ಕಿಡ್ನಿ ಕಾಯಿಲೆಗಳು  ಔಷಧಗಳ ದುಷ್ಪರಿಣಾಮದಿಂದ ಉಂಟಾಗುವುದರಿಂದ ಔಷಧ ಶಾಸ್ತ್ರ ದ ಆಳವಾದ 

ಅಧ್ಯಯನ ದ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದ್ದರು.ಅವರ ಔಷಧ ಶಾಸ್ತ್ರದ ಗುರು  ಪ್ರೊಫ್.

ಈಶ್ವರಯ್ಯ ಹೇಳುತ್ತಿದ್ದ  ಮಾತನ್ನು ಆಗ್ಗಾಗ್ಗೆ ನೆನೆಪಿಸುತ್ತಿದ್ದರು . ' ವೈದ್ಯ ರಂಗ ದಲ್ಲಿ ಮೂರು ಮುಖ್ಯ ಶಾಸ್ತ್ರಗಳು .

ಒಂದು ಶರೀರ ಕ್ರಿಯಾ ಶಾಸ್ತ್ರ (ಪಿಸಿಯೋಲೋಜಿ.),ಎರಡನೆಯದು  ಔಷಧ ಶಾಸ್ತ್ರ (ಫಾರ್ಮಕಾಲಜಿ)

ಮತ್ತು  ಮೂರನೆಯದು  ರೋಗ ಶಾಸ್ತ್ರ (ಪ್ಯಾಥಾಲಜಿ).ನೀವು  ಔಷಧ ಶಾಸ್ತ್ರ ಚೆನ್ನಾಗಿ ಅರಿತರೆ 

ರೋಗ ಶಾಸ್ತ್ರವನ್ನು ಶರೀರ ಕ್ರಿಯಾ ಶಾಸ್ತ್ರವನ್ನಾಗಿ  ಮಾರ್ಪಡಿಸ ಬಹುದು. ಇಲ್ಲದಿದ್ದರೆ  ಸಾಮಾನ್ಯ ಶರೀರ ಕ್ರಿಯಾ 

ಶಾಸ್ತ್ರವನ್ನು ರೋಗ ಶಾಸ್ತ್ರವನ್ನಾಗಿ ಪರಿವರ್ತಿಸುವಿರಿ.'

ಔಷಧಿಗಳು ಸಾವಿರಾರು ಇರುವುದರಿಂದ  ವೈದ್ಯರು ತಮ್ಮ ಮೇಜಿನ ಮೇಲೆ  ಔಷಧ ಶಾಸ್ತ್ರದ ಬಗೆಗಿನ ಪುಸ್ತಕ 

ಇಟ್ಟುಕೊಂಡು ಸಂಶಯ ಇದ್ದಾಗ ಕೂಡಲೇ ಅದರ ಬಗ್ಗೆ ಓದಿ ಔಷಧಿ ಕೊಡುವುದು ಸೂಕ್ತ ಎಂದು ಹೇಳುತ್ತಿದ್ದರು.

ಆದುದರಿದ ಪುಸ್ತಕ ಓದಿ ಔಷಧ ಕೊಡುವ ವೈದ್ಯರನ್ನು ರೋಗಿಗಳು ಕೀಳಾಗಿ ನೋಡ ಬಾರದು.

ಈ ವಿಷಯದಲ್ಲಿ ಡಾ ಮಣಿ ಯವರು ಅಮೇರಿಕಾ ದ ವೈದ್ಯರು ಬಳಸುವ   ಪಿಸಿಶಿಯನ್ಸ್ ಡೆಸ್ಕ್  ರೆಫರೆನ್ಸ್ ಎಂಬ 

ಪುಸ್ತಕ ಉತ್ತಮ , ನಿಮಗೆ ಅದು ಸಿಗದಿದ್ದರೆ ನನ್ನಲ್ಲಿಗೆ ಬನ್ನಿರಿ ನಾನು ಕೊಡುತ್ತೇನೆ ಎಂದು ಹೇಳುತ್ತಿದ್ದರು.

ಪುಸ್ತಕದ ಅಂಗಡಿಗಳಲ್ಲಿ  ಹುಡುಕಿದರೆ  ಔಟ್ ಆಫ್ ಸ್ಟಾಕ್ ಆಗಿತ್ತು. ನಾನು ನೇರ ವಾಗಿ ಅಪೊಲೊ ಆಸ್ಪತ್ರೆಯಲ್ಲಿ 

ಅವರನ್ನು ಸಂದಿಸಿದಾಗ ತುಂಬು ಸಂತೋಷದಿಂದ  ಆ ಹೊತ್ತಿಗೆಯ ಪ್ರತಿ ಯೊಂದನ್ನು ಕೊಟ್ಟರು.

ಹೃದಯಾಘಾತದಿಂದ ಚೇತರಿಸಿ ಈಗ ಮೊದಲಿನಷ್ಟು  ಕ್ರಿಯಾಶೀಲ ರಾಗಿ ಇಲ್ಲ ದಿದ್ದರೂ ಕಿಡ್ನಿ ಕಾಯಿಲೆ ತಡೆಗಟ್ಟುವ 

ಸಮೂಹ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದ್ದಾರೆ.ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಕಿಡ್ನಿ ವೈಫಲ್ಯಕ್ಕೆ 

ಪ್ರಮುಖ   ಕಾರಣ ಆಗಿರುವುದರಿಂದ ಅವುಗಳ ಹತೋಟಿಗೆ ಕಡಿಮೆ ವೆಚ್ಚದ ಔಷಧಿಗಳನ್ನು ಪ್ರಚುರ 

ಪಡಿಸುತ್ತಿದ್ದಾರೆ.

ಇವರ  ಜೀವನ ಚರಿತ್ರೆಯ ಹೆಸರು ( ಯಮ ಧರ್ಮಾಸ್  ಬ್ರದರ್ ಪ್ರ; ಭಾರತೀಯ ವಿದ್ಯಾ ಭವನ ).ಸಂಸ್ಕೃತದಲ್ಲಿ 

ಒಂದು ಶ್ಲೋಕವಿದೆ. ವೈದ್ಯ ರಾಜ ನಮಸ್ತುಭ್ಯಂ ಯಮ ರಾಜ ಸಹೋದರ ,ಯಮಂ ಹರತಿ  ಪ್ರಾಣ ನಿ  ,ವೈದ್ಯಂ ಪ್ರಾಣ೦ 

ಧನಾ೦ಚ 'ಎಂದರೆ  ' ಯಮಧರ್ಮನ ಸೋದರ  ವೈದ್ಯ ರಾಜನಿಗೆ ನಮಿಸುವೆ ,ಯಮನು ಪ್ರಾಣ ಮಾತ್ರ 

ಅಪಹರಿಸಿದರೆ  ನೀನು ಪ್ರಾಣ ಮತ್ತು ಹಣ ಎರಡನ್ನೂ  ತೆಗೆದುಕೊಂಡು ಹೋಗುವೆ!'

ಬುಧವಾರ, ಜುಲೈ 3, 2013

ಪ್ಯಾಂಕ್ರಿಯಾಟಿಟಿಸ್ ಎಂಬ ಕಾಯಿಲೆಯು

ಹೊಟ್ಟೆ ನೋವು ಎಲ್ಲ  ಗ್ಯಾಸ್ಟ್ರಿಕ್ ಅಲ್ಲ 

ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು ಬಂದರೆ  ಗ್ಯಾಸ್ಟ್ರಿಕ್ ಎಂದು ತಿಳಿಯುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಬೇರೆ 

ಗಂಭೀರ ಕಾರಣಗಳೂ ಇರ ಬಹುದು . ಉದಾ;  ಹೃದಯಾಘಾತ , ಅಪ್ಪೆಂಡಿಸೈಟಿಸ್, ಪಿತ್ತ ಕೋಶದ ಸೋಂಕು  ಮತ್ತು 

ಪ್ಯಾಂಕ್ರಿಯಾಟಿಟಿಸ್ ಕಾಯಿಲೆ.


ಪೆನ್ಕ್ರಿಯಸ್   ಅಥವಾ  ಮೇದೋಜೀರಕ ಗ್ರಂಥಿ  ಬಹು ಮುಖ್ಯ ಅಂಗ.
                                                             

ಇದರಲ್ಲಿ ಎರಡು  ಭಾಗಗಳಿವೆ .ಒಂದು ನಿರ್ನಾಳ ಗ್ರಂಥಿ , ಸಕ್ಕರೆ  ಹತೋಟಿಯಲ್ಲಿ ಇದುವ  ಇನ್ಸುಲಿನ್ ಉತ್ಪಾದನೆ ಮಾಡಿ 

ನೇರ ರಕ್ತಕ್ಕೆ ಸೇರಿಸುತ್ತದೆ .ಇನ್ನೊಂದು ಸನಾಳ ಭಾಗ , ಇದು  ಪಚನ ಕ್ರಿಯೆಗೆ ಬೇಕಾದ ರಸಗಳನ್ನು ಉತ್ಪಾದಿಸಿ 

ನಳಿಕೆ ಮೂಲಕ ಸಣ್ಣ ಕರುಳಿಗೆ  ಹರಿಸುತ್ತದೆ.

ಕೆಲವೊಮ್ಮೆ  ಇಲ್ಲಿ ಉತ್ಪಾದನೆಯಾದ ಜೀರ್ಣ ರಸಗಳು ತಮ್ಮನ್ನು ಉಂಟು ಮಾಡಿದ  ಗ್ರಂಥಿಯನ್ನೇ ಜೀರ್ಣಿಸ ತೊಡಗುತ್ತವೆ 

ಭಸ್ಮಾಸುರನಂತೆ.  ಆಗ ಉಂಟಾಗುವುದು  ಪ್ಯಾಂಕ್ರಿಯಾಟಿಟಿಸ್ .

ರೋಗ ಕಾರಣಗಳು.  ಮದ್ಯಪಾನ ,ಪಿತ್ತ ಕೋಶ ಪಿತ್ತ ನಾಳದ ಕಲ್ಲು ಇವು ಮುಖ್ಯ ಕಾರಣಗಳು.ಇದಲ್ಲದೆ ಕೆಲವು ಔಷಧಗಳು 

,ಕೆಪ್ತೆ ಟೆರಾಯ ,ಅತಿಯಾಗಿ ಏರಿದ   ತ್ರಯಿಗ್ಲಿಸೆರಿಡ್ ,ಹಲವೊಮ್ಮೆ ಏನೂ ಕಾರಣವಿಲ್ಲದೆ .

ರೋಗ ಲಕ್ಷಣಗಳು.    ತೀವ್ರ ತರ  ಮೇಲ್ ಹೊಟ್ಟೆ ನೋವು , ವಾಂತಿ  ಮುಖ್ಯ ಲಕ್ಷಣಗಳು 

ತಪಾಸಣೆ  ; ರಕ್ತ  ಪರೀಕ್ಷೆ  ಯಲ್ಲಿ   ಅಮೈಲೆಸ್  ಮತ್ತು  ಲೈಪೆಸ್  ಎಂಬುವು ಹಲವು ಪಟ್ಟು ಏರಿರುತ್ತವೆ .

ಹೊಟ್ಟೆಯ ಸ್ಕ್ಯಾನ್ ಮಾಡಿದಾಗ   ಮೆದೋ ಜಿರಕ  ಗ್ರಂಥಿ  ಊದಿರುತ್ತದೆ , ಪಿತ್ತ ಕೋಶದ ಕಲ್ಲುಗಳಿದ್ದರೆ ಕಾಣ ಬಹುದು.

ಉದರದಲ್ಲಿ , ಶ್ವಾಸಕೋಶದ ಸುತ್ತ ನೀರು ತುಂಬಿರ ಬಹುದು.

ಚಿಕಿತ್ಸೆ ;  ಈ ಕಾಯಿಲೆಯು ಕೆಲವೊಮ್ಮೆ ಮಾರಣಾಂತಿಕ ವಾಗಬಹುದು .ಆದುದರಿಂದ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ 

ಚಿಕಿತ್ಸೆ ಮಾಡುವುದು ಉತ್ತಮ. ವೈದ್ಯರು ಹೊಟ್ಟೆ ನೋವನ್ನು ಶಮನ  ಮಾಡುವ ಔಷಧಗಳನು  ನೀಡುವರು. ರೋಗಿಗೆ 

ಬಾಯಿ ಮೂಲಕ ಏನನ್ನೂ ಕೊಡದೆ ರಕ್ತ ನಾಳಗಳ ಮೂಲಕ ಆಹಾರ ಕೊಡುವರು. ಇದರ ಉದ್ದೇಶ ಮೆದೊಜಿರಕ  ಗ್ರಂಥಿಗೆ 

ವಿಶ್ರಾಂತಿ ಕೊಡುವುದು. ಹೊಟ್ಟೆಗೆ ಆಹಾರ ತೆಗೆದು ಕೊಂಡರೆ ಜೀರ್ಣ ಕ್ರಿಯೆಗೆ ರಸಗಳನ್ನು ಉತ್ಪತ್ತಿ ಮಾಡ ಬೇಕಲ್ಲವೇ ?

ಈ ರಸ  ವಿಶೇಷಗಳೇ  ತಮಗೆ ಜನ್ಮವಿತ್ತ  ಅಂಗವನ್ನು  ಜೀರ್ಣಿಸಿ ಈ ಕಾಯಿಲೆ ಉಂಟು ಮಾಡಿದ್ದು.

ಹೆಚ್ಚಿನ  ರೋಗಿಗಳು  ಈ ಉಪಚಾರದಿಂದ ಗುಣ ಮುಖರಾಗುವರು. ಕೆಲವರಿಗೆ  ರೋಗೆ ಉಲ್ಬಣಿಸಿ ಅನಾಹುತ ಆಗಬಹುದು.

 




ಸೋಮವಾರ, ಜುಲೈ 1, 2013

ವೈದ್ಯರ ದಿನಾಚರಣೆ

ಇಂದು ವೈದ್ಯರ ದಿನ. ಖ್ಯಾತ ವೈದ್ಯ ರಾಜಕಾರಿಣಿ ,ಸ್ವಾತಂತ್ರ್ಯ ಹೋರಾಟಗಾರ  ಡಾ ಬಿ ಸಿ ರಾಯ್ ಅವರ ಜನ್ಮ ದಿನ


,ಹಾಗೂ  ಗತಿಸಿದ ದಿನವೂ.

                                   
ಬಿ.ಸಿ.ರಾಯ್.

ಈ ದಿನ ವೈದ್ಯ ಗಣದ ಸೇವೆಯನ್ನು ಸಮಾಜ ಸ್ಮರಿಸುತ್ತದೆ.

ದೇವರು ನಿಜವಾದ ವೈದ್ಯ.ಭಾವ ರೋಗ ನಿವಾರಕ ಎಂದು ಅವನನ್ನು ಕರೆಯುತ್ತಾರೆ.ಒಂದು ಶ್ಲೋಕ ಇದೆ.

'ಜರ್ಜರಿ  ಭೂತೆ  ಶರೀರೆ ವ್ಯಾದಿಗ್ರಸ್ತೆ ಕಳೆವರೆ  ,ವೈದ್ಯೋ ನಾರಾಯಣಾ ಹರಿ ಔಷಧಂ  ಜಾಹ್ನವೀ ತೋಯಂ '

ದೇಹವು ಕಾಯಿಲೆಯಿಂದ ಬಳಲಿದಾಗ  ನಿಜವಾದ ಡಾಕ್ಟರು  ಹರಿ ಮತ್ತು ಔಷಧ ಗಂಗಾ ಜಲ .ಈ ಶ್ಲೋಕವನ್ನು 

ಕೆಲವರು ವೈದ್ಯರೇ ದೇವರು ಎಂದು ಅರ್ಥೈಸುತ್ತಾರೆ ,ಅದು ಸರಿಯಲ್ಲ ಎಂದು ನನ್ನ ಭಾವನೆ.

ಖ್ಯಾತ ಚಿಂತಕ ವೋಲ್ತೈರ್  ಹೇಳುತ್ತಾನೆ -"  Doctors are men who prescribe medicines of which they know

 little, to cure diseases of which they know less, in human beings of whom they know nothing.  

ವೈದ್ಯರು ಗಳೆಂದರೆ  ಸ್ವಲ್ಪ ತಿಳಿದಿರುವ ಕಾಯಿಲೆಗೆ ಅಲ್ಪ ಸ್ವಲ್ಪ ತಿಳಿದಿರುವ ಔಷಧಿಯನ್ನು ಏನೂ ತಿಳಿದಿರದ ರೋಗಿಯ ಮೇಲೆ 

ಪ್ರಯೋಗಿಸುವವನು."

ಚಿಕತ್ಸೆ ಮಾಡುವವನು ವೈದ್ಯ ವಾಸಿ ಮಾಡುವವನು ದೇವರು. 

ಡಾಕ್ಟರ ಸೇತುರಾಮನ್ ಎಂಬವರು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ರಕ್ತ ಶಾಸ್ತ್ರ ಆರಂಬಿಸಿದವರು.ಮಹಾನ್ ಮೇಧಾವಿ .ಅಷ್ಟೇ ಸರಳ ಜೀವಿ 

ಅವರ ಬಳಿ ಒಂದು ಹಳೆಯ ಸ್ಕೂಟರ್. ಜೋಲು ಪ್ಯಾಂಟ್ ಮತ್ತು ಅಂಗಿ.ನಾನು  ಪೆರ೦ಬುರ್ ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ  ಪಿ.ಜಿ.ಗಳಿಗೆ ಕ್ಲಾಸ್ 

ತೆಗೆದು ಕೊಳ್ಳಲು ಬರುತ್ತಿದ್ದರು.ಡೌನ್ ಟು ಅರ್ಥ್ ಮ್ಯಾನ್.ಅವರು ವೈದ್ಯ ಶಾಸ್ತ್ರದ ವಿಶ್ವ ಕೋಶ ಆಗಿದ್ದರು.ತಮ್ಮ ಗುರು ಪ್ರೊಫ್ ಕೆ ವಿ 

ತಿರುವೆ೦ಗಡ೦ (ಇವರ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿರುವೆ ) ಬಗ್ಗೆ ಬಾರಿ ಗೌರವ .ಯವಾಗಲೂ ವಾದ್ಯಾರು ಸೋಲ್ಲುವಾರು ವಾದ್ಯಾರ್ 

 ಸೋಲ್ಲುವಾರ್  ಎಂದು ತಮ್ಮ ಗುರುಗಳನ್ನು ನೆನೆಪಿಸಿ ಕೊಳ್ಳುವರು.

ಅದೇ ರೀತಿ ಡಾಕ್ಟರ್ ಗಿರಿ ಗೌಡ ಎಂಬ ಸರ್ಜರಿ ಪ್ರೊಫೆಸ್ಸರ್  ಕೆ ಎಂ ಸಿ ಹುಬ್ಬಳ್ಳಿಯಲ್ಲಿ ಇದ್ದರು .ಬಾರೀ ಜನಪ್ರಿಯ ಅಧ್ಯಾಪಕ.ಅವರು 

ತರಗತಿ  ಆರಂಭದಲ್ಲಿ ತಮ್ಮ ಗುರುಗಳಾದ ಪ್ರೊಫ್. ಆರ್ ಎಚ್ ಏನ್ ಶೆನೋಯ್ ,ಪ್ರೊಫ್ ಕೆ ಜಿ ನಾಯಕ್ ಅವರಿಗೆ ಮನಸಾರೆ ವಂದಿಸಿ 

ತೊಡಗುತ್ತಿದ್ದರು .

ಮೇಲೆ ಹೆಸರಿಸಿದ ವೈದ್ಯರು ತಮ್ಮ ವೃತ್ತಿಯಿಂದ  ಹಚ್ಚು ಹಣ ಮಾಡಿದವರಲ್ಲ .ಈಗಿನ ಮಾಪನದಲ್ಲಿ ಅವರು ಯಶಸ್ವೀ ವೈದ್ಯರಲ್ಲದಿರ ಬಹುದು.

ಆದರೆ ಈ ಪವಿತ್ರ ವೃತ್ತಿಗೆ ಗೌರವ ಉಳಿದಿದ್ದರೆ ಅಂತರಿಂದ . ಅಂತಹವರು ಬಹಳ ಮಂದಿ ಇದ್ದಾರೆ.ರಾಜ್ಯೋತ್ಸವ ಪ್ರಸಸ್ತಿ. ಗೌರವ ಡಾಕ್ಟರೇಟ್ 

ಪದ್ಮಶ್ರೀ ಭೂಷಣ ಇವರ ಬಳಿ ಬಂದಿರದು .


ಎಂದರೋ ಮಹಾನು ಭಾವುಲು ಅಂದರಿಕಿ ವಂದನಮುಲು