ಬೆಂಬಲಿಗರು

ಮಂಗಳವಾರ, ನವೆಂಬರ್ 19, 2024



ನಮಗೆ ಬಾಲ್ಯದಲ್ಲಿ ವಿಶಷ್ಟವಾದ ಕೆಲವು ಅನುಕೂಲ ಇದ್ದವು . ನಮ್ಮ ಅಜ್ಜನ ಮನೆ ಅಜ್ಜ ಅಜ್ಜಿಗೆ ನಮ್ಮ ಅಮ್ಮ ಒಬ್ಬಳೇ ಮಗಳು . ಅವರು ದೊಡ್ಡವರು .ಮೂರು ಜನ ತಮ್ಮಂದಿರು . ನನ್ನ ದೊಡ್ಡ ಅಣ್ಣ ಅವರರಿಗೆ ಕ್ರಮವಾಗಿ  ಡಿ ಎಂ (ದೊಡ್ಡ ಮಾವ ).ಎನ್ ಎಂ (ನಾರಾಯಣ ಮಾವ )ಮತ್ತು ಪಿ ಎಂ (ಪುಟ್ಟು ಮಾವ ) ಎಂಬ ಹೃಸ್ವ ನಾಮ ಇಟ್ಟಿದ್ದು ನಾವೂ ಕೆಲವೊಮ್ಮೆ ಹಾಗೆ ಕರೆಯುತ್ತಿದ್ದೆವು .ನಮ್ಮ ಮಾವಂದಿರಿಗೆ ನಮ್ಮ ತಾಯಿ ಮಾತ್ರ ಸಹೋದರಿ ಆದ ಕಾರಣ ,ಮತ್ತು ಅವರು ಹಿರಿಯಕ್ಕ ಆದ ಕಾರಣ ಅಲ್ಲಿಗೆ ಅಜ್ಜನ ಮನೆಯ ಹಕ್ಕು ಸ್ಥಾಪಿಸಲು ನಾವು ಮಾತ್ರ . ತನ್ನ ಎಳವೆಯಲ್ಲಿಯೇ ಅಜ್ಜ ತೀರಿ ಹೋದ ಕಾರಣ ,ಕುಟುಂಬದ ಭಾರ ಬಿದ್ದು ದೊಡ್ಡ ಮಾವ ವೆಂಕಟ ಕೃಷ್ಣ ಜೋಯಿಸ ಸ್ವಲ್ಪ ಎದುರು ಕೋಪ ಮೈಗೂಡಿಸಿ ಗೊಂಡಿದ್ದು ಅವರ ಲ್ಲಿ ಪ್ರೀತಿಗಿಂತಲೂ ಭಯ ಜಾಸ್ತಿ ;ಅಕ್ಕನ ಮಕ್ಕಳಿಗಿಂತಲೂ ಅವರ ಮಕ್ಕಳಿಗೆ ಅದರ ಅನುಭವ ಅಧಿಕ .ಮಕ್ಕಳ ಮತ್ತು ಬಂಧುಗಳ ಮೇಲೆ ಪ್ರೀತಿ ಇದ್ದರೂ ಅವರು ತೋರಿಸಿ ಕೊಳ್ಳರು ಎರಡನೇ ಯವರು ಮುಲ್ಕಿ ವಿಜಯಾ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ಪ್ರಾಧ್ಯಾಪಕರು . ಇವರು ಸಾಧು ;ಸ್ನೇಹ ಪ್ರವೃತ್ತಿಯವರು .ನಮ್ಮ ಬಂಧುಗಳ ಮಕ್ಕಳು ಅನೇಕರು ,ಮುಖ್ಯವಾಗಿ ಹುಡುಗಿಯರು ಇವರ ಸುಪರ್ದಿಯಲ್ಲಿ ಈ ಕಾಲೇಜಿನಲ್ಲಿ ಅಧ್ಯಯನ ಭಾಗ್ಯ ಪಡೆದಿರುವರು . ಸ್ವಲ್ಪ ಹಾಸ್ಯ ಪ್ರವೃತ್ತಿ ,ಯಾವುದೇ ಭಿಡೆ ಯಿಲ್ಲದೆ ಇವರ ಜತೆ ದೊಡ್ಡವರು ಮತ್ತು ಮಕ್ಕಳು ವ್ಯವಹರಿಸ ಬಹುದು . 

ನಮ್ಮ ಮೂಲ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ .ಅವರಿಗೆ ಈಶ್ವರ ಮಂಗಲ ಸಮೀಪ ಸಾರು ಕೂಟೇಲು ಎಂಬಲ್ಲಿ ಒಂದು ಆಸ್ತಿಯೂ ಇದ್ದು ,ಆರಂಭದಲ್ಲಿ ನನ್ನ  ಅಮ್ಮನ ಸೋದರ ಮಾವ ಶಂಭು ಭಟ್ ಅದನ್ನು ನೋಡಿಕೊಳ್ಳುತ್ತಿದ್ದರು . ಅವರು ತುಂಬಾ ಸಾಧು ಸಜ್ಜನ .ನನ್ನ ಸಣ್ಣ ಮಾವ ಶಂಕರ ಜೋಶಿ (ಪಿ ಎಂ ) ದೊಡ್ಡವರಾದ ಮೇಲೆ ಆಸ್ತಿಯನ್ನು ಅವರ ಸುಪರ್ದಿಗೆ ಬಿಟ್ಟು ಬೆಳ್ತಂಗಡಿ ಸಮೀಪ ಬೊಲ್ಪಾಲೆ ಎಂಬಲ್ಲಿ ನೆಲಸಿದರು . ಮದುವೆಯಾಗುವ ತನಕ ಅಜ್ಜಿ ಮತ್ತು ಮಾವ ಮಾತ್ರ ಇದ್ದು ಆಮೇಲೆ ಅತ್ತೆ ಬಂದು ಸೇರಿದರು .ಈ ಮಾವ ಕಲಿಕೆಯಲ್ಲಿ ಬುದ್ದಿವಂತ ಆಗಿದ್ದರೂ ಅಸ್ತಿ ನೋಡಿಕೊಳ್ಳಲು ಓದು ನಿಲ್ಲಿಸಿದವರು . 

ಎಲ್ಲಾ ಮಾವಂದಿರಿಗೂ ಅಕ್ಕನಲ್ಲಿ ಪ್ರೀತಿ ಮತ್ತು ಗೌರವ .ಅಜ್ಜನ ಶ್ರಾದ್ಧ ಮತ್ತು ಇತರ ಸಮಾರಂಭ ಗಳು ಇದ್ದಾಗ ಅವರಲ್ಲಿ ಒಬ್ಬರು ದಿನ ಮುಂದಾಗಿ ಬಂದು ಅಕ್ಕನನ್ನು ಕರೆದೊಯ್ಯುವರು . ನಮ್ಮ ಅಮ್ಮ ತಮ್ಮಂದಿರಲ್ಲಿ ಯಾವತ್ತು  ಕುಂದು ಕಾಣರು ,ಯಾರಾದರೂ ಎತ್ತಿ ತೋರಿಸಿದರೆ ಅದಕ್ಕೆ ಸಕಾರಣ ಕೊಡುವರು . 

ಹಾಗೆ ಎರಡು ಅಜ್ಜನ ಮನೆ ಭಾಗ್ಯ (ಮುಲ್ಕಿ ವಸತಿ ಗೃಹ ಸೇರಿಸಿದರೆ ಮೂರು ). ದೊಡ್ಡ ರಜೆಯಲ್ಲಿ ಹೋಗಲು . ನಮಗೆ ಹೆಚ್ಚಿನ ಆಕರ್ಷಣೆ ಕೊನೆಯ ಮಾವ ಇದ್ದ ಸಾರು ಕೂಟೇಲು . ಕಾರಣ  ಅಲ್ಲಿ ಇದ್ದ ಅಜ್ಜಿ  ಮತ್ತು  ನಮ್ಮ ಮಾವನ ಪುಸ್ತಕ ಸಂಗ್ರಹ .ಮಾವ ನಿಗೆ ಓದುವ ಹವ್ಯಾಸ ಇದ್ದು ಕಾರಂತ ,ಭೈರಪ್ಪ ,ತ್ರಿವೇಣಿ ಮುಂತಾದವರ ಹೊಸ ಹೊಸ ಪುಸ್ತಕಗಳು ಅಲ್ಲಿ ಇದ್ದವು . ಆದರಿಂದ ರಜೆಯಲ್ಲಿ ಅಲ್ಲಿಗೆ ದಾಳಿ .ಮಾವನೂ ನಮ್ಮೊಡನೆ ಮಿತ್ರರಾಗಿ ಇರುತ್ತಿದ್ದರು . ಈಗ ಈ ಮಾವ ಅಸ್ತಿ ಮಾರಿ ಪುತ್ತೂರಿನಲ್ಲಿ ನೆಲೆಸಿದ್ದು ಓದುವ ಹವ್ಯಾಸ ಮುಂದುವರಿಸಿದ್ದಾರೆ .ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ  . 

ಕೆಲವೊಂದು ದೊಡ್ಡ ರಜೆಯಲ್ಲಿ ನಾವು  ನಮ್ಮ ದೊಡ್ಡ ಅಕ್ಕನ ಮನೆಯಲ್ಲಿ .ಅಲ್ಲಿ ನಮಗೆ ಬೋರ್ ಆಗದಿರಲಿ ಎಂದು ಒಂದು ಟೆಲಿ ಫಂಕನ್ ರೇಡಿಯೋ ಭಾವ ತಂದಿಟ್ಟಿದ್ದು ,ಉಪ್ಪಿನಂಗಡಿ ಗೆ ಹೋದಾಗ ದಿನ ಪತ್ರಿಕೆ ,ಸುಧಾ ಇತ್ಯಾದಿ ತರುತ್ತಿದ್ದರು . ಅಲ್ಲಿ ಕುಮಾರ ವ್ಯಾಸ ಭಾರತ ಮತ್ತು ದೇರಾಜೆ ರಾಮಾಯಣ ಎರಡು ಗ್ರಂಥಗಳು ಮಾತ್ರ ಇದ್ದ ನೆನಪು . ಹಾಗೆ ನಮಗೆ ಬೇಸರವಾಗದಿರಲಿ ಎಂದು ಅಕ್ಕ ಮತ್ತು ಭಾವ ನಾನು ಹುಬ್ಬಳ್ಳಿಯಲ್ಲಿ ಎಂ ಬಿ ಬಿ ಎಸ್ ಕಲಿಯುತ್ತಿರುವಾಗ ನನ್ನ  ಸಲಹೆಯಂತೆ ಒಂದು ಲೈಬ್ರರಿ ಮಾಡಿದರು ,ಹುಬ್ಬಳ್ಳಿ ಸಾಹಿತ್ಯ ಭಂಡಾರ ದಿಂದ ಆಯ್ದ ಮಾಸ್ತಿ ,ಕಾರಂತ ,ಭೈರಪ್ಪ ,ಕುವೆಂಪು ,ರಾವ್ ಬಹಾದ್ದೂರ್ ಮುಂತಾದವರ ಪುಸ್ತಕಗಳನ್ನು ಆಯ್ದು ಸಿ ಪಿ ಸಿ ಲೋರಿ ಯಲ್ಲಿ ಪಾರ್ಸೆಲ್ ಮಾಡಿದ್ದೆ .ಸಾಹಿತ್ಯ ಭಂಡಾರದಲ್ಲಿ ನನ್ನ ಪರಿಚಯದ ಓರ್ವ ಉದ್ಯೋಗಿ ಇದ್ದು ನನ್ನ ಅಭಿರುಚಿ ಅವರಿಗೆ ತಿಳಿದಿತ್ತು
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ