ಬೆಂಬಲಿಗರು

ಶುಕ್ರವಾರ, ನವೆಂಬರ್ 22, 2024

ಹೃದಯಾಘಾತ ಬಗ್ಗೆ  ಎಲ್ಲರೂ ಕೇಳಿದ್ದೇವೆ .ಹೃದಯದ ಮಾಂಸಖಂಡ ಗಳಿಗೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಹಠಾತ್ ಬಂದ್ ಆದರೆ ಹೃದಯದ ಕಾರ್ಯದಲ್ಲಿ ವ್ಯತ್ಯಯ ಆಗಿ , ರಕ್ತ ತಡೆಯ ಗಂಭೀರತೆಯನ್ನು ಹೊಂದಿಕೊಂಡು  ಎದೆ ನೋವಿನಿಂದ ಹಿಡಿದು ಸಾವು ಕೂಡಾ ಸಂಭವಿಸುವುದು . ಸಂಭವದ ಕ್ಷಿಪ್ರತೆಯಿಂದ ಆಘಾತ ಎಂಬ ವಿಶೇಷಣ .

ಅದರಂತೆ ಮೆದುಳಿನ ಆಘಾತ ಅಥವಾ ಸ್ಟ್ರೋಕ್  ಎಂಬ ಕಾಯಿಲೆ ಇದೆ . ಇಲ್ಲಿ ಮಾತ್ರ ಮೂರು ಮುಖ್ಯ ಪ್ರಭೇದ ಇವೆ .ಒಂದು ; ಹೃದಯಾಘಾತದಲ್ಲಿ ಆಗುವಂತೆ ಮೆದುಳಿನ ರಕ್ತ  ನಾಳಗಳು ಕೊಬ್ಬು ಶೇಖರಣೆಯಿಂದ ಸ್ಥಳೀಯ ವಾಗಿ ರಕ್ತ ಹೆಪ್ಪು ಗಟ್ಟುವಿಕೆಗೆ ಆಹ್ವಾನ ಕೊಟ್ಟು ರಕ್ತ ಸರಬರಾಜಿನಿಂದ ವಂಚಿತವಾದ ಸುತ್ತ ಮುತ್ತಲಿನ ಮೆದುಳಿನ ಜೀವಕೋಶಗಳು ನಿಷ್ಕ್ರಿಯ ಗೊಳ್ಳುವವು . ಎರಡು ; ರಕ್ತ ನಾಳಗಳು ಹಠಾತ್ ಒಡೆದು ಮೆದುಳಿನ ರಕ್ತಸ್ರಾವ ಆಗುವುದು . ಮೂರು ; ಕೆಲವು  ಕಾಯಿಲೆಗಳಲ್ಲಿ ಹೃದಯ ಒಳಗೆ ಹೆಪ್ಪು ಗಟ್ಟಿದ ರಕ್ತದ ತುಣುಕುಗಳನ್ನು ಮೆದುಳಿಗೆ ಹೋಗುವ ರಕ್ತ ನಾಳಗಳ ಮೂಲಕ ಹೋಗಿ ತಟಸ್ಥ ಉಂಟು ಮಾಡುವುದು .

 ಬಲ ಬಾಗದ ದೊಡ್ಡ ಮೆದುಳು ಶರೀರದ  ಎಡ   ಭಾಗವನ್ನೂ  ಮತ್ತು  ಎಡ ಪಾರ್ಶ್ವದ ದೊಡ್ಡ ಮೆದುಳು ಬಲ ಭಾಗ ಮತ್ತು ಮಾತನ್ನು ನಿಯಂತ್ರಿಸುತ್ತವೆ.  ಎಡ ಮೆದುಳು ಆಘಾತ ಆದರೆ ಬಲ ಪಾರ್ಶ್ವ ವಾಯು ಅಥವಾ ಲಕ್ವಾ ಉಂಟಾಗುತ್ತದೆ . ಅದೇ ತರಹ ಎಡ ಮೆದುಳಿನ ಕ್ಷಮತೆ ಕುಂದಿದಾಗ ಮಾತಾಡುವ, ಅರ್ಥ ಮಾಡಿಕೊಳ್ಳವ ಶಕ್ತಿ ಬೀಳ ಬಹುದು . ಅದೇ ರೀತಿ  ಹಿಮ್ಮೆದುಳಿಗೆ ಹಾನಿ ಆದರೆ ದೃಷ್ಟಿ ಹೋಗ ಬಹುದು . ಕಣ್ಣುಗಳು ಸರಿ ಇದ್ದರೂ ದೃಷ್ಟಿ ಗ್ರಹಣ  ವ್ಯತ್ಯಯದಿಂದ ಬರುವ ಕುರುಡು ತನ.ಸಿಟಿ ಸ್ಕ್ಯಾನ್  ಅಥವಾ ಎಂ ಆರ್ ಐ ಯಿಂದ ಮೆದುಳಿನ ಆಘಾತ ವನ್ನು ಪತ್ತೆ ಮಾಡುವರು .

ಅಧಿಕ ರಕ್ತದ ಒತ್ತಡ ,ಕೊಲೆಸ್ಟ್ರಾಲ್ ಇತ್ಯಾದಿ ಮೆದುಳಿನ ಆಘಾತಕ್ಕೆ ಸಾಮಾನ್ಯ ಕಾರಣಗಳು .ಹೃದಯಾಘಾತದಲ್ಲಿ ಮಾಡುವಂತೆ ಔಷಧಿ ನೀಡಿ ಹೆಪ್ಪು ಕರಗಿಸುವುದು ಮತ್ತು ರಕ್ತ ನಾಳಗಳ ಮೂಲಕ ಕೊಳಾಯಿ ಹಾಯಿಸಿ ಹೆಪ್ಪು ತೆಗೆದು ಸ್ಟೆಂಟ್ ಹಾಕುವುದು ಇಲ್ಲಿಯೂ ಇದೆ . ಮೆದುಳಿನ ಆಘಾತದಲ್ಲಿ ಕಾಯಿಲೆ ಮೆದುಳಿನಲ್ಲಿ ಇದ್ದರೂ ರೋಗ ಲಕ್ಷಣ ಅವಯವಗಳಲ್ಲಿ  ಇರುವುದು . ಕೈಕಾಲುಗಳು ಉಪಯೋಗಿಸದೆ ಮರಗಟ್ಟಿ ಹೋಗದ ಹಾಗೆ ಅವಕ್ಕೆ ಪಿಸಿಯೋ ತೆರಪಿ ಅಥವಾ ವೈಜನಿಕ ವ್ಯಾಯಾಮ  ಕೊಡುವರದರೂ ಮುಖ್ಯ ಚಿಕಿತ್ಸೆ ಮೆದುಳಿಗೆ ಆಗ ಬೇಕು . ಫ್ಯೂಸ್ ಹೋದಾಗ ಅದನ್ನು ಸರಿಪಡಿದೇ ಬಲ್ಬ್ ಹಾಕಿ ಪ್ರಯೋಜನ ವಿಲ್ಲ .

 

ಬುಧವಾರ, ನವೆಂಬರ್ 20, 2024

ಬಿಬೇಕ್ ದೇಬ್ ರಾಯ್ ಅವರ ಮಹಾಭಾರತ ದಲ್ಲಿ ಗೀತೋಪದೇಶ ಓದುತ್ತ್ತಿದ್ದೆ . ಎಲ್ಲಾ ವೇದಾಂತಿಗಳು ಪುರಾವರ್ತಿಸುವ ಫಲಾ ಪೇಕ್ಷೆ  ನಿನ್ನ ಕರ್ತವ್ಯ ಮಾಡು , ಸುಖ ಬಂದಾಗ ಅತಿ ಹಿಗ್ಗದಿರು ,ಕಷ್ಟ ಬಂದಾಗ ಕುಗ್ಗದಿರು ,ಅದೇ ನೈಜ ಯೋಗವಸ್ಥೆ ಇತ್ಯಾದಿ ವಾಕ್ಯಗಳ ರಿವಿಶನ್  ಆಯಿತು .ಲೋಕದಲ್ಲಿ ಇದನ್ನು ಬೋಧಿಸುವ ಪ್ರಾಜ್ಞರು ಸನ್ಯಾಸಿಗಳು ಬಹಳ ಮಂದಿ ಇದ್ದಾರೆ .ಆದರೆ ತಮ್ಮ ನಡವಳಿಕೆಯಲ್ಲಿ ಇದನ್ನು ಅಳವಡಿಸಲು ಅವರಿಗೂ ಸಾಧ್ಯವಾಗುವುದಿಲ್ಲ .  ಷಡ್ವೈರಿ ಗಳಿಂದ ದೂರವಿರಿ ಎಂದು ವೇದಿಕೆಯಿಂದ ಪ್ರಚಿಸುವವರು ತಮ್ಮ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಹುಲು ಮಾನವರಂತೆ  ಕೋಪಾವೇಶದಿಂದ ಶಾಪ ಹಾಕುವರು , ಆಸ್ತಿಗಾಗಿ ಕೋರ್ಟ್ ಕಟ್ಟಳೆ ಅಲೆ ಯುವರು . 

ಇದನ್ನೆಲ್ಲಾ ಮೀರಿದ ಯೋಗಾವಸ್ಥೆ ಅಪರೂಪಕ್ಕೆ  ಕಂಡರೆ ಅದು  ಜನ ಸಾಮಾನ್ಯರಲ್ಲಿಯೇ .ಮೊನ್ನೆ ನಾನು ಓದಿದ ಬನ್ನಂಜೆ ಯವರ ಆತ್ಮ ಚರಿತ್ರೆ ಯಲ್ಲಿ ತಮ್ಮ ಆತ್ಮೀಯರಾದ  ಉದ್ಯಮಿ ಒಬ್ಬರ ಹೋಟೆಲ್ ಅಗ್ನಿಗೆ ಆಹುತಿ ಆದಾಗ ಅಲ್ಲಿದ್ದ ಹತ್ತು ಲಕ್ಷ ರೂಪಾಯಿ ಭಸ್ಮ ವಾಯಿತು ;ಅದನ್ನು ತಿಳಿದು ಅವರು ಯಾವುದೇ ಉದ್ವೇಗಕ್ಕೆ ಒಳಗಾಗದೆ ,ಹಿಂದಿನ ದಿನ ಅದನ್ನು ಯಾರಾದರೂ ಬಡವರಿಗೆ ಕೊಡ ಬಹುದಿತ್ತು ಎಂದು ಕೊಂಡರಂತೆ . 

ನನ್ನ ಕೈ ಎಣಿಕೆಯ ರೋಗಿಗಳಲ್ಲಿ ಇಂತಹ ಸ್ಥಿತ ಪ್ರಜ್ಞತೆ ಕಂಡಿದ್ದೇನೆ .ಹಿಂದೆ ಕ್ಯಾನ್ಸರ್ ಪೀಡಿತ ಓರ್ವ ಮಹಿಳೆ ಬಗ್ಗೆ ಬರೆದಿದ್ದೆ . ಇಂತಹದೇ ಓರ್ವ ಮಹಾ ಮಹಿಮ ದಿ  ವಿಶ್ವನಾಥ ಸಾಲಿಯಾನ್ ಮತ್ತು ಅವರ ಪತ್ನಿ ದಿ ಪಾರ್ವತಿ .,ಇವರು ಪುತ್ತೂರಿನ ಮಂಜಲ್ ಪಡ್ಪು ವಿನಲ್ಲಿ ಹೋಟೆಲ್ ವಿಶ್ವಾಸ್ ಎಂಬ  ಉದ್ಯಮ ನಡೆಸುತ್ತಿದ್ದು ಜನಪ್ರಿಯ ರಾಗಿದ್ದರು . ಜನ ಸಾಮಾನ್ಯರ ಮೆಚ್ಚಿನ ಹೋಟೆಲ್ . ಹಿಂದೆ ಕಟ್ಟಿಗೆಯಲ್ಲಿ ಅಡಿಗೆ ಇದ್ದಾಗ ಹೊಗೆ ಸೇವನೆಯಿಂದ ಇರ ಬೇಕು .ಅವರಿಗೆ ತೀವ್ರತರ  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು .  ಕಾಯಿಲೆ ಎಷ್ಟೇ ತೀವ್ರವಾಗಿ ಇರಲಿ ಒಂದೇ ಒಂದು ದಿನ ಅವರು ಮುಖ ಗಂಟು ಹಾಕಿದ್ದಾಗಲಿ ,ಗೊಣಗಿದ್ದಾಗಲೀ ಇಲ್ಲ . ಕೃತಜ್ಞತಾ ಭಾವ ಸೂಚಿಸುವ ಮುಖಭಾವ ಮಾತ್ರ ನಾನು ಕಂಡದ್ದು . ರೋಗ ತೀವ್ರವಾಗಿ ಅವರು ಅಸು ನೀಗಿದಾಗ ಅವರನ್ನು ಬಲ್ಲವರು ಕಂಬನಿ ಮಿಡಿದರು . ಇವರ ಪತ್ನಿ ದಿ ಪಾರ್ವತೀ ಅಮ್ಮ ನವರು ಗುಣದಲ್ಲಿ ಇವರದೇ ಪಡಿಯಚ್ಚು . ವರ್ಷಗಳ ಹಿಂದೆ ಭಾರೀ ಮಳೆಗೆ ಧರೆ ಕುಸಿದು ಇವರೂ ಜತೆಗೆ ಮಲಗಿದ್ದ ಮೊಮ್ಮಗ ಧನುಷ್ ಅಸು ನೀಗಿದಾಗ ಊರಿಗೆ ಊರೇ ಮರುಗಿತ್ತು .ಒಳ್ಳೆಯವರಿಗೆ ಯಾಕೆಇಂತಹ ಪರೀಕ್ಷೆ ?

ಈಗ ಮಗ ಮಹೇಶ್ ಹೋಟೆಲ್ ಮುಂದುವರಿಸುತ್ತಿತ್ತು ಹಿರಿಯರ ಸದ್ಗುಣಗಳು ಅವರಲ್ಲಿಯೂ ಎದ್ದು ಕಾಣುತ್ತದೆ .





ಮಂಗಳವಾರ, ನವೆಂಬರ್ 19, 2024



ನಮಗೆ ಬಾಲ್ಯದಲ್ಲಿ ವಿಶಷ್ಟವಾದ ಕೆಲವು ಅನುಕೂಲ ಇದ್ದವು . ನಮ್ಮ ಅಜ್ಜನ ಮನೆ ಅಜ್ಜ ಅಜ್ಜಿಗೆ ನಮ್ಮ ಅಮ್ಮ ಒಬ್ಬಳೇ ಮಗಳು . ಅವರು ದೊಡ್ಡವರು .ಮೂರು ಜನ ತಮ್ಮಂದಿರು . ನನ್ನ ದೊಡ್ಡ ಅಣ್ಣ ಅವರರಿಗೆ ಕ್ರಮವಾಗಿ  ಡಿ ಎಂ (ದೊಡ್ಡ ಮಾವ ).ಎನ್ ಎಂ (ನಾರಾಯಣ ಮಾವ )ಮತ್ತು ಪಿ ಎಂ (ಪುಟ್ಟು ಮಾವ ) ಎಂಬ ಹೃಸ್ವ ನಾಮ ಇಟ್ಟಿದ್ದು ನಾವೂ ಕೆಲವೊಮ್ಮೆ ಹಾಗೆ ಕರೆಯುತ್ತಿದ್ದೆವು .ನಮ್ಮ ಮಾವಂದಿರಿಗೆ ನಮ್ಮ ತಾಯಿ ಮಾತ್ರ ಸಹೋದರಿ ಆದ ಕಾರಣ ,ಮತ್ತು ಅವರು ಹಿರಿಯಕ್ಕ ಆದ ಕಾರಣ ಅಲ್ಲಿಗೆ ಅಜ್ಜನ ಮನೆಯ ಹಕ್ಕು ಸ್ಥಾಪಿಸಲು ನಾವು ಮಾತ್ರ . ತನ್ನ ಎಳವೆಯಲ್ಲಿಯೇ ಅಜ್ಜ ತೀರಿ ಹೋದ ಕಾರಣ ,ಕುಟುಂಬದ ಭಾರ ಬಿದ್ದು ದೊಡ್ಡ ಮಾವ ವೆಂಕಟ ಕೃಷ್ಣ ಜೋಯಿಸ ಸ್ವಲ್ಪ ಎದುರು ಕೋಪ ಮೈಗೂಡಿಸಿ ಗೊಂಡಿದ್ದು ಅವರ ಲ್ಲಿ ಪ್ರೀತಿಗಿಂತಲೂ ಭಯ ಜಾಸ್ತಿ ;ಅಕ್ಕನ ಮಕ್ಕಳಿಗಿಂತಲೂ ಅವರ ಮಕ್ಕಳಿಗೆ ಅದರ ಅನುಭವ ಅಧಿಕ .ಮಕ್ಕಳ ಮತ್ತು ಬಂಧುಗಳ ಮೇಲೆ ಪ್ರೀತಿ ಇದ್ದರೂ ಅವರು ತೋರಿಸಿ ಕೊಳ್ಳರು ಎರಡನೇ ಯವರು ಮುಲ್ಕಿ ವಿಜಯಾ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ಪ್ರಾಧ್ಯಾಪಕರು . ಇವರು ಸಾಧು ;ಸ್ನೇಹ ಪ್ರವೃತ್ತಿಯವರು .ನಮ್ಮ ಬಂಧುಗಳ ಮಕ್ಕಳು ಅನೇಕರು ,ಮುಖ್ಯವಾಗಿ ಹುಡುಗಿಯರು ಇವರ ಸುಪರ್ದಿಯಲ್ಲಿ ಈ ಕಾಲೇಜಿನಲ್ಲಿ ಅಧ್ಯಯನ ಭಾಗ್ಯ ಪಡೆದಿರುವರು . ಸ್ವಲ್ಪ ಹಾಸ್ಯ ಪ್ರವೃತ್ತಿ ,ಯಾವುದೇ ಭಿಡೆ ಯಿಲ್ಲದೆ ಇವರ ಜತೆ ದೊಡ್ಡವರು ಮತ್ತು ಮಕ್ಕಳು ವ್ಯವಹರಿಸ ಬಹುದು . 

ನಮ್ಮ ಮೂಲ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ .ಅವರಿಗೆ ಈಶ್ವರ ಮಂಗಲ ಸಮೀಪ ಸಾರು ಕೂಟೇಲು ಎಂಬಲ್ಲಿ ಒಂದು ಆಸ್ತಿಯೂ ಇದ್ದು ,ಆರಂಭದಲ್ಲಿ ನನ್ನ  ಅಮ್ಮನ ಸೋದರ ಮಾವ ಶಂಭು ಭಟ್ ಅದನ್ನು ನೋಡಿಕೊಳ್ಳುತ್ತಿದ್ದರು . ಅವರು ತುಂಬಾ ಸಾಧು ಸಜ್ಜನ .ನನ್ನ ಸಣ್ಣ ಮಾವ ಶಂಕರ ಜೋಶಿ (ಪಿ ಎಂ ) ದೊಡ್ಡವರಾದ ಮೇಲೆ ಆಸ್ತಿಯನ್ನು ಅವರ ಸುಪರ್ದಿಗೆ ಬಿಟ್ಟು ಬೆಳ್ತಂಗಡಿ ಸಮೀಪ ಬೊಲ್ಪಾಲೆ ಎಂಬಲ್ಲಿ ನೆಲಸಿದರು . ಮದುವೆಯಾಗುವ ತನಕ ಅಜ್ಜಿ ಮತ್ತು ಮಾವ ಮಾತ್ರ ಇದ್ದು ಆಮೇಲೆ ಅತ್ತೆ ಬಂದು ಸೇರಿದರು .ಈ ಮಾವ ಕಲಿಕೆಯಲ್ಲಿ ಬುದ್ದಿವಂತ ಆಗಿದ್ದರೂ ಅಸ್ತಿ ನೋಡಿಕೊಳ್ಳಲು ಓದು ನಿಲ್ಲಿಸಿದವರು . 

ಎಲ್ಲಾ ಮಾವಂದಿರಿಗೂ ಅಕ್ಕನಲ್ಲಿ ಪ್ರೀತಿ ಮತ್ತು ಗೌರವ .ಅಜ್ಜನ ಶ್ರಾದ್ಧ ಮತ್ತು ಇತರ ಸಮಾರಂಭ ಗಳು ಇದ್ದಾಗ ಅವರಲ್ಲಿ ಒಬ್ಬರು ದಿನ ಮುಂದಾಗಿ ಬಂದು ಅಕ್ಕನನ್ನು ಕರೆದೊಯ್ಯುವರು . ನಮ್ಮ ಅಮ್ಮ ತಮ್ಮಂದಿರಲ್ಲಿ ಯಾವತ್ತು  ಕುಂದು ಕಾಣರು ,ಯಾರಾದರೂ ಎತ್ತಿ ತೋರಿಸಿದರೆ ಅದಕ್ಕೆ ಸಕಾರಣ ಕೊಡುವರು . 

ಹಾಗೆ ಎರಡು ಅಜ್ಜನ ಮನೆ ಭಾಗ್ಯ (ಮುಲ್ಕಿ ವಸತಿ ಗೃಹ ಸೇರಿಸಿದರೆ ಮೂರು ). ದೊಡ್ಡ ರಜೆಯಲ್ಲಿ ಹೋಗಲು . ನಮಗೆ ಹೆಚ್ಚಿನ ಆಕರ್ಷಣೆ ಕೊನೆಯ ಮಾವ ಇದ್ದ ಸಾರು ಕೂಟೇಲು . ಕಾರಣ  ಅಲ್ಲಿ ಇದ್ದ ಅಜ್ಜಿ  ಮತ್ತು  ನಮ್ಮ ಮಾವನ ಪುಸ್ತಕ ಸಂಗ್ರಹ .ಮಾವ ನಿಗೆ ಓದುವ ಹವ್ಯಾಸ ಇದ್ದು ಕಾರಂತ ,ಭೈರಪ್ಪ ,ತ್ರಿವೇಣಿ ಮುಂತಾದವರ ಹೊಸ ಹೊಸ ಪುಸ್ತಕಗಳು ಅಲ್ಲಿ ಇದ್ದವು . ಆದರಿಂದ ರಜೆಯಲ್ಲಿ ಅಲ್ಲಿಗೆ ದಾಳಿ .ಮಾವನೂ ನಮ್ಮೊಡನೆ ಮಿತ್ರರಾಗಿ ಇರುತ್ತಿದ್ದರು . ಈಗ ಈ ಮಾವ ಅಸ್ತಿ ಮಾರಿ ಪುತ್ತೂರಿನಲ್ಲಿ ನೆಲೆಸಿದ್ದು ಓದುವ ಹವ್ಯಾಸ ಮುಂದುವರಿಸಿದ್ದಾರೆ .ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ  . 

ಕೆಲವೊಂದು ದೊಡ್ಡ ರಜೆಯಲ್ಲಿ ನಾವು  ನಮ್ಮ ದೊಡ್ಡ ಅಕ್ಕನ ಮನೆಯಲ್ಲಿ .ಅಲ್ಲಿ ನಮಗೆ ಬೋರ್ ಆಗದಿರಲಿ ಎಂದು ಒಂದು ಟೆಲಿ ಫಂಕನ್ ರೇಡಿಯೋ ಭಾವ ತಂದಿಟ್ಟಿದ್ದು ,ಉಪ್ಪಿನಂಗಡಿ ಗೆ ಹೋದಾಗ ದಿನ ಪತ್ರಿಕೆ ,ಸುಧಾ ಇತ್ಯಾದಿ ತರುತ್ತಿದ್ದರು . ಅಲ್ಲಿ ಕುಮಾರ ವ್ಯಾಸ ಭಾರತ ಮತ್ತು ದೇರಾಜೆ ರಾಮಾಯಣ ಎರಡು ಗ್ರಂಥಗಳು ಮಾತ್ರ ಇದ್ದ ನೆನಪು . ಹಾಗೆ ನಮಗೆ ಬೇಸರವಾಗದಿರಲಿ ಎಂದು ಅಕ್ಕ ಮತ್ತು ಭಾವ ನಾನು ಹುಬ್ಬಳ್ಳಿಯಲ್ಲಿ ಎಂ ಬಿ ಬಿ ಎಸ್ ಕಲಿಯುತ್ತಿರುವಾಗ ನನ್ನ  ಸಲಹೆಯಂತೆ ಒಂದು ಲೈಬ್ರರಿ ಮಾಡಿದರು ,ಹುಬ್ಬಳ್ಳಿ ಸಾಹಿತ್ಯ ಭಂಡಾರ ದಿಂದ ಆಯ್ದ ಮಾಸ್ತಿ ,ಕಾರಂತ ,ಭೈರಪ್ಪ ,ಕುವೆಂಪು ,ರಾವ್ ಬಹಾದ್ದೂರ್ ಮುಂತಾದವರ ಪುಸ್ತಕಗಳನ್ನು ಆಯ್ದು ಸಿ ಪಿ ಸಿ ಲೋರಿ ಯಲ್ಲಿ ಪಾರ್ಸೆಲ್ ಮಾಡಿದ್ದೆ .ಸಾಹಿತ್ಯ ಭಂಡಾರದಲ್ಲಿ ನನ್ನ ಪರಿಚಯದ ಓರ್ವ ಉದ್ಯೋಗಿ ಇದ್ದು ನನ್ನ ಅಭಿರುಚಿ ಅವರಿಗೆ ತಿಳಿದಿತ್ತು
 

ಸೋಮವಾರ, ನವೆಂಬರ್ 18, 2024

ಕೆಲವು ಅನುಭವ ಗಳು

  ವೈದ್ಯಕೀಯ ಪದವಿ ಪಡೆದ ಮೇಲೆ  ದೇಶ ವಿದೇಶ ಗಳಲ್ಲಿ ಬೇರೆ ಬೇರ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದೇನೆ . ಎಲ್ಲಾ ಕಡೆಯೂ ಮುಂಜಾನೆ ಎಂಟು ಗಂಟೆಗೆ ನಾನು ಹಾಜರ್ .ರೈಲ್ವೆ ಅರೋಗ್ಯ ಕೇಂದ್ರಗಳಲ್ಲಿ ನನಗೆ ಮೇಲ್ವಿಚಾರಕರು ಇರಲಿಲ್ಲ ,ಹಾಜರಿ ಪುಸ್ತಕ ಇಲ್ಲ .ಆದರೂ  ಆ ಸಮಯಕ್ಕೆ ಹಾಜರ್ . ಮುಂದೆ ಪೆರಂಬೂರು  ರೈಲ್ವೆ ಆಸ್ಪತ್ರೆ ಯಲ್ಲಿ ಇದ್ದಾಗ ಅಲ್ಲಿ  ಮುಖ್ಯಸ್ಥರೂ ಸೇರಿ ಬಹುತೇಕ ವೈದ್ಯರು ಏಳೂ ಮುಕ್ಕಾಲಿಗೇ ಹಾಜರ್ .ಅಲ್ಲಿಯೂ ಹಾಜರಿ ಪುಸ್ತಕ ಇಲ್ಲ . ಆದರೆ ಶಿಸ್ತು ಪಾಲನೆ ಅಯಾಚಿತವಾಗಿ ನಡೆಯುತ್ತಿದ್ದು ಆಗಿನ ಅಲ್ಲಿನ ಕೆಲಸ ಸಂಸ್ಕೃತಿ ನಾನು ಮತ್ತೆಲ್ಲಿಯೂ ಕಂಡಿಲ್ಲ . 

ಈಗಲೂ ರೋಗಿಗಳು ಇರಲಿ ಇಲ್ಲದಿರಲಿ ನಾನು  ಎಂಟು ಎಂಟು ಕಾಲಿಗೆಲ್ಲಾ ಆಸ್ಪತ್ರೆಗೆ ಹಾಜರ್ ಆಗುತ್ತೇನೆ .ನನ್ನ ಮನೆಯವರಿಗೆ ಇದು ಸ್ವಲ್ಪ ಕಿರಿ ಕಿರಿಯಾದರೂ ಅಭ್ಯಾಸವಾಗಿ ಸಹಿಸಿ ಕೊಳ್ಳುತ್ತಿದ್ದಾರೆ . ಸರ್ವಿಸ್ ನಲ್ಲಿ ಇದ್ದಾಗ ನಾನು ರಜೆ ಹಾಕಿದ್ದು ಕಡಿಮೆ ,ರೈಲ್ವೆ ಯಲ್ಲಿ ಉಚಿತ ಪಾಸ್ ಇದ್ದರೂ ಊರು ತಿರುಗಿದ್ದು ಕಡಿಮೆ . ರೈಲ್ವೆ ಬಿಡುವಾಗ ನನ್ನ ಹಕ್ಕಿನಲ್ಲಿ ಇದ್ದ ರಜೆಗೆ ವೇತನ ಕೊಟ್ಟರು .ಮುಂದೆ ನಾನು ಮಧ್ಯ ಪ್ರಾಚ್ಯ ದ  ದೇಶ ವೊಂದರಲ್ಲಿ ಸರಕಾರಿ ಕೆಲಸಕ್ಕೆ ಸೇರಿ ಬಿಟ್ಟು ಬಂದಾಗ ನನ್ನ ರಜಾ ವೇತನವೆಂದು ದೊಡ್ಡ ಮೊತ್ತವನ್ನು ನಾನು ಕೇಳದೆಯೇ ನನ್ನ ವಿಳಾಸಕ್ಕೆ ಕಳುಸಿದರು . 

ನಾನು ಎರಡು ವೈದ್ಯಕೀಯ ಕಾಲೇಜು ಗಳಲ್ಲಿ ಅಧ್ಯಾಪನ ಮಾಡಿದ್ದು ,ಅಲ್ಲಿ ನಾನು ಬಳಸದೇ ಇದ್ದ ವೇತನ ಸಹಿತ ರಜೆ (ಇದು ಸಾಮಾನ್ಯವಾಗಿ ತುಂಬಿ ಇರುತ್ತಿತ್ತು )ಯ  ವೇತನ ಪಾವತಿಸುವ ಸೌಜನ್ಯ ಮಾಡಲಿಲ್ಲ( ಅಥವಾ ಅವರ ಆರ್ಥಿಕ  ಸ್ಥಿತಿ ಸಮ್ಮತಿಸಲಿಲ್ಲ ). 

ನಾನು ಆಸ್ಫತ್ರೆಯಲ್ಲಿ ಸಲಹೆಗೆ ಲಭ್ಯವಿರುವೆನೋ ಎಂದು ತಿಳಿಯ ಬೇಕಾದರೆ ಆಸ್ಪತ್ರೆಗೆ ಫೋನ್ ಮಾಡಿದರೆ ಸಾಕು .ಆದರೂ ಕೆಲವರು ನನ್ನ ಫೋನ್ ಗೆ ಕರೆ ಮಾಡಿ ನೀವು ನಾಳೆ ಇದ್ದಿರೋ ನಾಡಿದು ಇದ್ದೀರೋ ಎಂದು ಕೇಳಿ ನನಗೆ ಕರ ಕರೆ ಮಾಡುವರು . ರೋಗಿಯನ್ನು ಪರೀಕ್ಷೆ ಮಾಡುತ್ತಿರುವಾಗ  ಏಕಾಗ್ರತೆ ತಪ್ಪಿ ವಿಶ್ವಾಮಿತ್ರನ ತಪಸ್ಸಿನ ನಡುವೆ ಮೇನಕೆಯ ಡಾನ್ಸ್ ನಂತೆ ಆಗುತ್ತದೆ .ಅಂತಹ ಕರಕರೆ ಆದರೂ ನೋಡಿ ಸಂತೋಷ ಪಡಬಹುದು .ಆದರೆ ನೀವು ಇದ್ದೀರಾ ಕರೆಗಳಿಗೆ ಕಳಶವಿಟ್ಟಂತೆ ಇನ್ಸೂರೆನ್ಸ್ , ಸಾಲ ಬೇಕೇ ಸಲ ಬೇಕೇ ಸಾಲಿಗ ಬ್ಯಾಂಕ್ ಗಳು, ನಿಮ್ಮ ಟೆಲಿಫೋನ್ ಕಡಿತ ಮಾಡಲಾಗುವುದು ,ಬ್ಯಾಂಕ್ ಖಾತೆ ಸ್ಥಗಿತ ಗೊಳಿಸಲಾಗುವುದು ,ನಿಮ್ಮ ಪಾರ್ಸೆಲ್ ನಲ್ಲಿ ಮದ್ದು ಇದೆ ಇತ್ಯಾದಿ ನಮ್ಮ ಸ್ಥಿ ಮಿತ ತಪ್ಪಿಸುವಲ್ಲಿ ಯಶಸ್ವಿ ಆಗುವವವು

ಭಾನುವಾರ, ನವೆಂಬರ್ 17, 2024

                 ಕಾಡೂರು  ಸೀತಾರಾಮ ಶಾಸ್ತ್ರಿಗಳು 

 .ನಿನ್ನೆ ನಟರಾಜ ವೇದಿಕೆಯಲ್ಲಿ ಬಡಗು ತಿಟ್ಟಿನ ಯಕ್ಷಗಾನ ಸುಧನ್ವ ಮೋಕ್ಷ ಮತ್ತು ಗದಾ ಯುದ್ಧ ನೋಡಿ ಆನಂದಿಸಿದೆ .ನಿರೀಕ್ಷೆಯಂತೆ ಚೆನ್ನಾಗಿ ಬಂತು  ಹಿಂದೆ ಪುತ್ತೂರಿನಲ್ಲಿ ವ್ಯವಸಾಯೀ  ಮೇಳಗಳ ಯಕ್ಷಗಾನ ಬಯಲಾಟಗಳು ಸಾಕಷ್ಟು ಆಗುತ್ತಿದ್ದು ಜಾತ್ರೆ ಸಮಯವಂತೂ ಆರೇಳು ಆಟಗಳು ಒಂದೇ ದಿನ ಆದದ್ದು ಇದೆ .ಯಾಕೋ ಈ ಗ ಕಟೀಲು ಮೇಳದ ಹರೆಕೆ ಆಟ ಬಿಟ್ಟರೆ ಡೇರೆ ಮೇಳಗಳ ಆಟ ಬರುವುದೇ ಇಲ್ಲ .ಯಕ್ಷಗಾನ ಪ್ರೇಕ್ಷಕರು  ಎಲ್ಲಿ ಮಾಯವಾದರು ?

ಇಂತಹ  ಬರಗಾಲ ಹೋಗಲಾಡಿಸಲು   ಕೆಲವು ಕಲಾ ಪ್ರೇಮಿಗಳು ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ . ಅವರ ಪೈಕಿ ಕಾಡೂರು ಸೀತಾರಾಮ ಶಾಸ್ತ್ರಿ ಗಳು ಅಗ್ರಗಣ್ಯರು .ಶಾಸ್ತ್ರೀ ಅಂಡ್ ಕೋ ಎಂಬ ಅಡಿಕೆ ಮಾರಾಟ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ಇವರು ಯಕ್ಷಗಾನ ತಾಳ ಮದ್ದಳೆ ,ಬಯಲಾಟ ಇತ್ಯಾದಿಗಳನ್ನು ವರ್ಷವೂ ನಡೆಸಿಕೊಂಡು ಬರುತ್ತಿದ್ದು ,ಪುತ್ತೂರಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ  ಯಾವತ್ತೂ ಕಂಡು ಬರುವ ಮುಖ . ತಾವು ಆನಂದಿಸಿದ ಕಲಾಪ್ರಕಾರ ಗಳನ್ನು  ಉಳಿದವರೂ ನೋಡಿ ಸಂತಸ ಪಡಲಿ ಎಂಬ ಧ್ಯೇಯ .ತಮ್ಮ ಗಳಿಕೆಯ ಒಂದು ಭಾಗ ಇದಕ್ಕೆ ಮೀಸಲು . ಅದಕ್ಕೆ ಸಮಾನ ಮನಸ್ಕರ ತಂಡ . ಕಳೆದ ವರ್ಷದ ವರೆಗೆ ಪುತ್ತೂರು ದಸರಾ ಕಾರ್ಯಕ್ರಮದಲ್ಲಿಯೂ ಇವರ ಸಕ್ರಿಯ ಪಾಲು . ಆಪತ್ ಸ್ಥಿತಿಯಲ್ಲಿ ಸಿಲುಲುಕಿದ ಅನೇಕರಿಗೆ ಇವರು ಸಹಾಯ ಮಾಡಿದ್ದು ,ಪ್ರಚಾರದಿಂದ ದೂರ . 

ಪುತ್ತೂರಿನಲ್ಲಿ ಹಿಂದೆ ಉದ್ಯಮಿಗಳಾದ ದಿ ಮಾಧವ ನಾಯಕ್ ,ಜಿ ಎಲ್ ಆಚಾರ್ಯ ಮುಂತಾದವರು ಸ್ವಯಂ ಕಲಾಸಕ್ತರಾಗಿ ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು .ಜಿ ಎಲ್ ಆಚಾರ್ಯ ಅವರ ಶತಮಾನೋತ್ಸವ ಕಾರ್ಯಕ್ರಮ  ಇಂದು ಆರಂಭ ಗೊಳ್ಳಲಿದೆ . ಈಗಿನ ತಲೆಮೊರೆಯ ಡಾ ಹರಿಕೃಷ್ಣ ಪಾಣಾಜೆ ,ಡಾ ಶ್ರೀಪ್ರಕಾಶ್ ಬಂಗಾರಡ್ಕ ,ಡಾ ಶ್ರೀಶ ಕುಮಾರ್ ಮತ್ತು ರಾಘವೇಂದ್ರ ಹಾಲ್ಕೆರೆ ಮುಂತಾದವರನ್ನು ನೆನಪಿಸಿ ಕೊಳ್ಳ ಬಯಸುತ್ತೇನೆ 



ಶುಕ್ರವಾರ, ನವೆಂಬರ್ 15, 2024


 


ಬನ್ನಂಜೆ ಗೋವಿಂದಾಚಾರ್ಯ ರ  ಆತ್ಮಕತೆ ಆತ್ಮ ನಿವೇದನ ಓದಿ ಮುಗಿಸಿದೆ. ಅವರ ನಿರೂಪಣೆ ,ವೀಣಾ ಬನ್ನಂಜೆ ಅವರ ಬರಹ  . ಬಾಲ್ಯದಲ್ಲಿ ಉದಯವಾಣಿ ಪ"ತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ' ಕಿಷ್ಕಿಂಧಾ ಕಾಂಡ "ಅಂಕಣವನ್ನು ತಪ್ಪದೇ ಓದುತ್ತಿದ್ದೆ . ಪ್ರಜಾವಾಣಿಯಲ್ಲಿ ಟಿ ಎಸ್ ಆರ್ ಅವರ 'ಛೂಬಾಣ" ದಂತೆ ಹಾಸ್ಯ ಲೇಪಿತ ವಿಡಂಬನಾತ್ಮಕ ಬರಹಗಳು . ಮಂಗಳೂರು ಶ್ರೀನಿವಾಸ ಹೋಟೆಲ್ ನಲ್ಲಿ ಅವರ ಪ್ರವಚನಗಳನ್ನೂ ಕೇಳಿದ್ದೆ. 

ಬನ್ನಂಜೆ ಶಿವರಾಮ ಕಾರಂತರಂತೆ ಬಯಲು ವಿಶ್ವ ವಿದ್ಯಾಲಯದಲ್ಲಿ ಕಲಿತವರು. ಶಿಷ್ಟ ಕಾಲೇಜು ಶಿಕ್ಷಣ ಕ್ಕೆ ಹೊರತಾದುದು ತಮಗೆ ಲಾಭವೇ ಆಯಿತು ಎಂದು ಹೇಳುತ್ತಾರೆ  .ಕಾರಂತರಂತೆ ಎಲ್ಲವನ್ನೂ ಪ್ರಶ್ನಿಸಿ ಸ್ವೀಕರಿಸುವವವರು . 

ಈ ಕೃತಿಯ ಕೆಲವು ವಾಕ್ಯಗಳನ್ನು ಉದ್ದರಿಸುತ್ತೇನೆ .ಅವರ ಒಂದು ಭಾಷಣ ದಿಂದ ;'ನಮ್ಮ ದೇಶದಲ್ಲಿ ಎರಡು ರೀತಿಯ ಜನರಿದ್ದಾರೆ .ಕೆಲವರು ತಮ್ಮನ್ನು ಆಸ್ತಿಕರೆಂದು ತಿಳಿದುಕೊಂಡವರು .ಕೆಲವರು ತಮ್ಮನ್ನು ನಾಸ್ತಿಕರೆಂದು ತಿಳಿದುಕೊಂಡವರು.ವಸ್ತುತಃ ಈ ದೇಶದಲ್ಲಿ ಆಸ್ತಿಕರೂ ಇಲ್ಲ .ನಾಸ್ತಿಕರೂ ಇಲ್ಲ ಎಡೆಬಿಡಂಗಿಗಳು ಇರುವುದು 'ಎಂದೆ .'ಆಸ್ತಿಕರು ವೇದಪುರಾಣ ಗಳನ್ನು ನಂಬುತ್ತೇವೆ ಎಂದರೆ ಏಕೆ ನಂಬುತ್ತಾರೆ ?ಓದದಿರುವುದರಿಂದ .ನಾಸ್ತಿಕರು ದೇವರನ್ನು ವೇದವನ್ನು ನಂಬೋದಿಲ್ಲ ,ಯಾಕೆಂದರೆ ಓದಲಿಲ್ಲ ಅದಕ್ಕೆ .ನಮ್ಮ ನಂಬಿಕೆಗೆ ಮೂಲ ಅಜ್ಞಾನ .ಆದ್ದರಿಂದ ಆಸ್ತಿಕರ ವಾದಕ್ಕೂ ಅರ್ಥ ಇಲ್ಲ .ನಾಸ್ತಿಕರ ವಾದಕ್ಕೂ ಅರ್ಥ ಇಲ್ಲ ."

ತಾವು ಸದಾ ನಿರುದ್ಯೋಗಿ ಆಗಿದ್ದು ಅಧ್ಯಯನ ಶೀಲ ವಿದ್ಯಾರ್ಥಿ ಆಗಿರಬೇಕು ಎಂಬುದು ಅವರ ಜೀವನ ಆಶಯ . 

ವಿದ್ಯಾರ್ಥಿ ,ಗೃಹಸ್ಥ ,ಪತ್ರಕರ್ತ ,ಪ್ರವಾಚಕ ,ಲೇಖಕ ,ಚಲಚಿತ್ರ ಸಾಹಿತಿ,ಗುರು ಮತ್ತು ಮಾರ್ಗದರ್ಶಕ  ಹೀಗೆ ತನ್ನ ಜೀವನದ ಹಲವು ಮಜಲುಗಳು ಮತ್ತು ಮುಖಗಳ ಮತ್ತು ತಮ್ಮ  ಪರಿಚಯ ವಲಯಕ್ಕೆ ಬಂದ  ಹಿರಿಯ ಲೇಖಕರು ಮತ್ತು ವ್ಯಕ್ತಿಗಳ ಚಿತ್ರಣ ಇದೆ . ಕೆಲವೊಂದು ವಿಚಾರಗಳ ಪುನರಾವೃತ್ತಿ ಆದದ್ದು ಬಿಟ್ಟರೆ  ಒಟ್ಟಿನಲ್ಲಿ ಇಷ್ಟವಾದ ಓದು


ಭಾನುವಾರ, ನವೆಂಬರ್ 10, 2024

 

ವೈದ್ಯಕೀಯ ಇಂಟರ್ನ್ ಶಿಪ್

 ಎಂ ಬಿ ಬಿ ಎಸ್ ಅಧ್ಯಯನ ಕಾಲದಲ್ಲಿ ರೋಗ ಚರಿತ್ರೆ ವಿಶ್ಲೇಷಣೆ ,ರೋಗಿಯ ಪರೀಕ್ಷೆ , ಪ್ರಯೋಗಾಲಯ ಪರೀಕ್ಷೆಗಳು ,ರೋಗದ ಪತ್ತೆ ಮತ್ತು ಚಿಕಿತ್ಸೆಯನ್ನು ಶಾಸ್ತ್ರೀಯ ವಾಗಿ ಕಲಿಸುತ್ತಾರೆ . ಅಸಂಖ್ಯಾತ ರೋಗಗಳು ,ಅಷ್ಟೇ ಪರೀಕ್ಷೆಗಳು ಮತ್ತು ಔಷಧಿಗಳು . ಯಾವ ಹೊಸ ರೋಗದ ಬಗ್ಗೆ ಓದುವಾಗಲೂ ತಮಗೂ ಅದು ಇರ ಬಹುದೇ ಎಂಬ ಸಂಶಯ . ಇದು ಟಿ ಬಿ , ಕುಷ್ಟ ,ಸಿಫಿಲಿಸ್ ,ಹೃದಯಾಘಾತ ,ನರ ದೌರ್ಬಲ್ಯ ಕಾಯಿಲೆ ಅಥವಾ ಗರ್ಭವತಿ ಯಾಗುವುದು ಯಾವುದೇ ಇರ ಬಹುದು . ಮೆಡಿಕಲ್ ಸ್ಟೂಡೆಂಟ್ಸ್ ಸಿನ್ಡ್ರೋಮ್ ಎಂದು ತಮಾಷೆಗೆ ಹೇಳುವರು .

 ಅಂತಿಮ ಎಂ ಬಿ ಬಿ ಎಸ್ ಪಾಸ್ ಆಗಿ ಇಂಟರ್ನ್ ಶಿಪ್ ಅಥವಾ ಹೌಸ್ ಸರ್ಜೆಂಸಿ  ಒಂದು ವರ್ಷ ಕಡ್ಡಾಯ ಮಾಡ ಬೇಕು .ಇದಕ್ಕಾಗಿ ವಾಹನ ಚಲಾವಣೆಗೆ ಲರ್ನಿಂಗ್ ಲೈಸೆನ್ಸ್ ಕೊಡುವಂತೆ ವೈದ್ಯಕೀಯ ಪರಿಷತ್ ತಾತ್ಕಾಲಿಕ ನೋಂದಣಿ ನೀಡುವುದು .ಇದನ್ನು ಹಿಡಿದುಕೊಂಡು ರೋಗಿ ಪರೀಕ್ಷೆಗೆ ತೊಡಗುವ ವೈದ್ಯನ ಸ್ಥಿತಿ ವಾಹನ ಕಲಿಯುವವನ್ನು  ನಗರದ ಕೇಂದ್ರದಲ್ಲಿ ಒಬ್ಬನೇ ಬಿಟ್ಟಂತೆ ಆಗುವುದು .ಇನ್ನು ಕೆಲವರು ಚಕ್ರ ವ್ಯೂಹ ಹೊಕ್ಕ ಅಭಿಮನ್ಯು ವಿನಂತೆ ಆಗುವರು .  ಪರಿಶೀಲನೆ ಮಾಡುವಾಗ ರೋಗಿಗೆ ತನ್ನ ದೌರ್ಬಲ್ಯ ತಿಳಿಯದಂತೆ ಹುಸಿ ಗಾಂಭೀರ್ಯ ,ಟೊಳ್ಳು ಧೈರ್ಯ ಮುಖದಲ್ಲಿ ನಟಿಸ ಬೇಕು .ಏನೂ ತಿಳಿಯದಿದ್ದರೆ ಒಂದಿಷ್ಟು ರಕ್ತ ಪರೀಕ್ಷೆ ಬರೆದು ಬಿಟ್ಟು ,ರೋಗಿ ಅತ್ತ ಹೋದಾಗ ಪಿ ಜಿ ಗಳ ಬಳಿ ಕೇಳಿ ತಿಳಿದು ಕೊಳ್ಳುವುದು .ಇನ್ನು ಕೆಲವರು ಬೇರೆಯವರಲ್ಲಿ ಕೇಳುವುದು ಮರ್ಯಾದೆಗೆ ಕಮ್ಮಿ ಎಂದು ಏನಾದರೂ ಒಂದು ಬರೆದು ಕೊಡುವರು .

ಇಂಟರ್ನ್ ಶಿಪ್ ಅವಧಿಯಲ್ಲಿ ಒಂದು ವರ್ಷವನ್ನು ಬೇರೆ ಬೇರೆ ವಿಭಾಗ ದಲ್ಲಿ ಹಂಚಿ ಹಾಕುವರು ,. ಇದರಲ್ಲಿ ಮುಖ್ಯ ವಿಭಾಗ ಗಳೆಂದು ಪರಿಗಣಿತ  ಸರ್ಜರಿ ,ಮೆಡಿಸಿನ್ ,ಮತ್ತು ಗೈನೆಕೋಲೊಜಿ ಗೆ ಸಿಂಹ ಪಾಲು . ಮಕ್ಕಳ ವಿಭಾಗ ,ಕಣ್ಣು ,ಕಿವಿ ,ಮೂಳೆ, ಚರ್ಮ ಇತ್ಯಾದಿ ವಿಭಾಗ ,ಕಮ್ಯೂನಿಟೀ ಮೆಡಿಸಿನ್ ಎಂದು ಉಪಕೇಂದ್ರ ಗಳಲ್ಲಿ ಎಂದು ಉಳಿದ ಸಮಯವನ್ನು ಹಂಚಿ ಹಾಕುವರು .

ಒಳ್ಳೆಯ ವೈದ್ಯನಾಗಲು ಹಿರಿಯರ ಮಾರ್ಗ ದರ್ಶನದಲ್ಲಿ ಎಲ್ಲ ವಿಭಾಗಗಳಲ್ಲಿ ಹಗಲಿರುಳು ಆತ್ಮಾರ್ಥಕ ವಾಗಿ ಕೆಲಸ ಮಾಡ ಬೇಕು . ಹಿಂದೆ ರೋಗ ನಿರ್ಧರಣ ,ಕೇಸ್ ಶೀಟ್ ಬರೆಯುವುದು ,ಇಂಜೆಕ್ಷನ್ ಕೊಡುವುದು ,ಡ್ರೆಸ್ಸಿಂಗ್ ಮಾಡುವುದು ,ಶಸ್ತ್ರೆ ಚಿಕಿತ್ಸೆಯಲ್ಲಿ ಸಹಕರಿಸುವುದು ,ರಕ್ತ ಗ್ರೂಪ್ ,ಕ್ರಾಸ್ ಮ್ಯಾಚಿಂಗ್ ಮಾಡಿ ರಕ್ತ ಸಂಗ್ರಹ ಮಾಡುವುದು , ಎಕ್ಸ್ ರೇ ಸ್ಕ್ರೀನಿಂಗ್ ಮಾಡುವುದು ,ಪ್ರಯೋಗಾಲಯದಿಂದ ರಿಪೋರ್ಟ್ ಗಳನ್ನು ಸಂಗ್ರಹಿಸುವುದು , ಸಾಧಾರಣ ಹೆರಿಗೆ ಮಾಡಿಸುವುದು ಇತ್ಯಾದಿ ಅಲ್ಲದೆ ರೋಗಿ ಡಿಶ್ಚಾರ್ಜ್ ಆಗುವಾಗ ಸಮ್ಮರಿ ಬರೆದು ಕೊಡುವುದು ಇತ್ಯಾದಿ ಮುಗಿಯದ ಕೆಲಸ .ಆದರೆ ತಮ್ಮ ಅನುಭವ ಅಧಿಕವಾಗಿ ಆತ್ಮ ವಿಶ್ವಾಸ ಹೆಚ್ಚುತ್ತಿರುವ ಸಂತೋಷ . ತಮ್ಮ ಕೆಲಸದಿಂದ ಪ್ರಾಧ್ಯಾಪಕರಿಂದ ಸೈ ಎನಿಸಿ ಕೊಳ್ಳುವ ಕಾತುರ . ಇಲ್ಲಿ ಹಿರಿಯ ನರ್ಸ್  ,ಡ್ರೆಸ್ಸರ್ ಮತ್ತು ಅಟ್ಟೆಂಡರ್ ಎಲ್ಲರಿಂದಲೂ ಕಲಿಯುವುದು ಸಾಕಷ್ಟು ಇತ್ತು .

 

ಈಗ ಎಂ ಬಿ ಬಿ ಎಸ್ ಪಾಸ್ ಆದ ಒಡನೆಯೇ ಪಿ ಜಿ ನೀಟ್ ಅಥವಾ ಪಿ ಜಿ ಪ್ರವೇಕ್ಷಾ ತಯಾರಿಯ  ಜಂಜಡ ದಲ್ಲಿ ಇಂಟರ್ನ್ ಶಿಪ್ ನ ನೈಜ ಉದ್ದೇಶ ಮರೆಯಾಗಿದೆ . ತಾವು ಹೌಸ್ ಸರ್ಜೆಂಸಿ ಮಾಡುತ್ತಿರುವ  ವಿಭಾಗದ ವಿಷಯ ಬಿಟ್ಟು ನೀಟ್ ಅಧ್ಯಯನ ಗೈಡ್ ಗಳಲ್ಲಿ ತಲ್ಲೀನರಾಗಿ ಇರುತ್ತಾರೆ .ಯಾವುದಾದರೂ ಪ್ರೊಫೆಸರ್ ಕಟ್ಟು ನಿಟ್ಟು ಇದ್ದರೆ ಆಫೀಸಿನಲ್ಲಿ ಹೋಗಿ ಬೇರೆ ರವರ ವಿಭಾಗಕ್ಕೆ ಹಾಕಿಸಿ ಕೊಳ್ಳುತ್ತಾರೆ .ಎಲ್ಲಾ ವೈದ್ಯಕೀಯ ಶಾಖೆಗಳಲ್ಲಿ ಯೂ ವೈದ್ಯನಾದವನಿಗೆ ಸರಾಸರಿ ಜ್ನಾನ ಬೇಕು ಎಂಬ ಉದ್ದೇಶ ಮರೆಯಾಗುತ್ತಿದೆ . ಇಂದು ಸ್ಪೆಷಾಲಿಟಿ ,ಸೂಪರ್ ಸ್ಪೆಷಾಲಿಟಿ ಯ ಕಾಲ . ಬೇಕಾದಷ್ಟು ಸ್ಕ್ಯಾನ್ ,ರಕ್ತ ಪರೀಕ್ಷೆ ,ಇಂಟರ್ನೆಟ್ ,ವ್ಹಾಟ್ಸಪ್ಇತ್ಯಾದಿ ಇವೆ .ಆದರೆ ರೋಗಿಯೊಡನೆ ಸಂಹವನ ,ಪರೀಕ್ಷಣ ,ಚಿಕಿತ್ಸೆ ಮಾಡುವಾಗ ರೋಗಿಯ ಆರ್ಥಿಕ ಸ್ಥಿತಿ ಪರಿಗಣನೆ ಇತ್ಯಾದಿ ಗಳ ಪರಿಗಣನೆ ಬೇಡವೇ ಎಂಬ ಪ್ರಶ್ನೆ ಇದೆ .

ವಿಲಿಯಂ ಒಸ್ಲರ್ ಎಂಬ ವೈದ್ಯ ಪಿತಾಮಹ ಈ ರೀತಿ ಹೇಳಿದ್ದಾನೆ .ರೋಗ ಜ್ನಾನ ವೆಂಬ ಮಹಾ ಅಧ್ಯಯನ ವನ್ನು ಸೂಕ್ತ ಗ್ರಂಥಗಳ ಸಹಾಯ ವಿಲ್ಲದೆ ಮಾಡುವುದು ದಿಕ್ಸೂಚಿಯ ಸಹಾಯವಿಲ್ಲದೆ ಸಮುದ್ರ ಯಾನ ಮಾಡಿದಂತೆ ಆದರೆ ,ಆಸ್ಪತ್ರೆಯಲ್ಲಿ ನಿಜ ರೋಗಿಗಳ ರೋಗ ನಿಧಾನ ಮತ್ತು ಚಿಕಿತ್ಸೆ ಅಧ್ಯಯನ ಮಾಡದೇ ಇರುವುದು ಸಮುದ್ರ ತಟಕ್ಕೇ ಹೋಗದೆ ಇರುವಂತೆ .

 ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಯ ಪರೀಕ್ಷಾ ವಿಧಾನ ತಿಳಿಸುವ  ಹಚಿಸನ್ ಕ್ಲಿನಿಕಲ್ ಮೆಥಡ್ಸ್ ಎಂಬ ಪುಸ್ತಕ ಇದೆ .ಅದರ ಆರಂಭದಲ್ಲಿ ಒಂದು ಪ್ರಾರ್ಥನೆ ಹೀಗಿದೆ .

“ಅನಾರೋಗ್ಯ ವಿಲ್ಲದವರನ್ನು  ಅವರಷ್ಟಕ್ಕೆ ಬಿಡದಿರುವ (ಅನವಶ್ಯಕ ಚಿಕಿತ್ಸೆ ನೀಡುವ)

ಹೊಸತರ ಬಗ್ಗೆ ಅತೀವ ಮೋಹ ಮತ್ತು ಹಳೆಯದೆಲ್ಲ ಕೀಳು  ಎಂಬ   ತಾತ್ಸಾರ ತೋರುವ   .ಜ್ಞಾನವನ್ನು ವಿವೇಕದ ಮುಂದೆ , ವಿಜ್ಞಾನವನ್ನು ಕಲೆಯ ಮುಂದೆ

ಮತ್ತು  ಬುದ್ದಿಮತ್ತೆಯನ್ನು   ಸಾಮಾನ್ಯ ಜ್ಞಾನ ದ ಮುಂದೆ ಇಡುವ ,ರೋಗಿಗಳನ್ನು 

ಮನುಷ್ಯರಾಗಿ ಎಣಿಸದೆ ಕೇಸ್ ಎಂದು ನೋಡುವ ,ಮತ್ತು  ನಮ್ಮ ಚಿಕಿತ್ಸೆಯು 

ರೋಗವನ್ನು  ಬಳಲುವುದಕ್ಕಿಂತಲೂ ಅಸಹನೀಯವಾಗದಂತೆ  ಮಾಡುವುದರಿಂದ

ನಮ್ಮನ್ನು ರಕ್ಷಿಸು.”