ಅಧ್ಯಾಪಕ
ನಿರಂತರ ಅಧ್ಯಯನ ಒಳ್ಳೆಯ ಅಧ್ಯಾಪಕನ ಅವಶ್ಯಕತೆ . ಬಿ ಎಡ್ ಸೇರಿ ಪದವಿ ಸ್ನಾತಕೋತ್ತರ ಪದವಿ ಪಿ ಎಚ್ ಡಿ ಇದ್ದರೆ ಸಾಕು ಎಂಬ ನಂಬಿಕೆ ಇದೆ . ದೊಡ್ಡ ಡಿಗ್ರಿ ಇದ್ದಷ್ಟು ಅಧಿಕ ವೇತನ ಶ್ರೇಣಿ . ಶಿಕ್ಷಣ ವಾಣಿಜ್ಯೀಕರಣ ಆಗಿರುವ ಈ ದಿನಗಳಲ್ಲಿ ಪದವಿಗಳ ಮೌಲ್ಯಾಂಕನವೇ ಪ್ರಶ್ನಾರ್ಹ ಆಗಿರುವಾಗ ಪದವಿಯ ತೂಕ ನೋಡಿ ಅಧ್ಯಾಪಕನ ನಿಜ ಮೌಲ್ಯ ನಿರ್ಧರಿಸುವುದು ತಪ್ಪಾಗುತ್ತದೆ . ಒಂದು ವಿಷಯದಲ್ಲಿ ಸ್ನಾತಕ ,ಸ್ನಾತಕೋತ್ತರ ಪದವಿ ಮಾತ್ರ ಇರುವ ವ್ಯಕ್ತಿ ಪಿ ಎಚ್ ಡಿ ಉಪಾಧಿ ಇರುವವರಿಗಿಂತ ಒಳ್ಳೆಯ ಅಧ್ಯಾಪಕ ನಾಗಿ ಇರ ಬಹುದು . ಒಂದು ಪದವಿ ಗಳಿಸಿದ ಮೇಲೆ ಅಧ್ಯಯನ ಅನಾವಶ್ಯಕ ಎಂಬ ನಂಬಿಕೆ ಸಾರ್ವತ್ರಿಕ ಅಗಿದೆ. ಇನ್ನು ವೈದ್ಯಕೀಯ ರಂಗವೂ ಸೇರಿ ತಥಾ ಕಥಿತ ನಿರಂತರ ಕಲಿಕಾ ಕಾರ್ಯಕ್ರಮಗಳು ಹರಕೆ ಸಂದಾಯ ಕಾರ್ಯಕ್ರಮಗಳೂ ,ಪ್ರದರ್ಶನ ವೇದಿಕೆಗಳೂ ಆಗಿ ಮಾರ್ಪಡುತ್ತಿವೆ ಎಂಬುದು ವಿಷಾಧನೀಯ .ಅಧ್ಯಾಪಕ ವೃತ್ತಿಗೆನೈಜ ಆಸಕ್ತಿ ಇರುವವರು ಮಾತ್ರ ಬರಬೇಕು ಕೇವಲ ಸಂಬಳ ಸಾರಿಗೆ ಗಾಗಿ ಅಲ್ಲ .ಮತ್ತು ತನ್ನ ಅಧ್ಯಯನ ಶೀಲತೆ ಕುಂದಿದಾಗ ಈ ವೃತ್ತಿಗೆ ವಿದಾಯ ಹೇಳ ಬೇಕು.
ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳಲ್ಲಿ ಎರಡು ವಿಧದ ಅಧ್ಯಾಪಕರು ಇದ್ದರು . ಪಾಠ ವಿಷಯವನ್ನು ಚೆನ್ನಾಗಿ ಓದಿ ಮನನ ಮಾಡಿ ತರಗತಿಗೆ ಬರುವವರು ಒಂದು ವರ್ಗ . ಮತ್ತು ಹಾಗೆಯೇ ಕ್ಲಾಸ್ ಗೆ ಬಂದು ಪಠ್ಯ ಪುಸ್ತಕ ಓದುವವರು ಎರಡನೇ ವರ್ಗ . ಇವರು ಪಠ್ಯ ಪುಸ್ತಕ ಕೂಡಾ ಯಾವುದಾದರೂ ವಿದ್ಯಾರ್ಥಿಯ ಕೈಯ್ಯಿಂದ ತೆಗೆದು ಕೊಳ್ಳುವವರು, "ನಿನ್ನೆ ನಾವು ಎಲ್ಲಿ ಇದ್ದೆವು ?ಎಂದು ವಿದ್ಯಾರ್ಥಿಗಳನ್ನೇ ಕೇಳಿ ಅಲ್ಲಿಂದ ಮುಂದುವರಿಕೆ .ಒಂದು ವಾಕ್ಯ ಓದಿ ಅದರ ಪೂರ್ವಾರ್ಧ ಪ್ರಶ್ನಾರ್ಥಕ ವಾಗಿ ಪುನರುಕ್ತಿ . ಉದಾ ಅಶೋಕನು ಸಾಲು ಮರಗಳನ್ನು ನೆಡಿಸಿದನು . ಎಂದು ಓದಿ ಅಶೋಕನು ಸಾಲು ಮರಗಳನ್ನು ? ಎಂಬ ಪ್ರಶ್ನೆ .ಮಕ್ಕಳು ಒಕ್ಕೊರಲಿನಿದ ನೆಡಿಸಿದನು ಎನ್ನಬೇಕು . ಪಠ್ಯ ಪುಸ್ತಕದಲ್ಲಿ ಮುದ್ರಣ ತಪ್ಪು ಇದ್ದರೂ ಅವರ ಗಮನಕ್ಕೆ ಬಾರದು .ಉದಾಹರಣೆಗೆ ನನ್ನ ಸಮಾಜ ಅಧ್ಯಾಪಕರು ಪುಸ್ತಕದಲ್ಲಿ ಇದ್ದುದನ್ನು ಓದುತ್ತಾ "ಕಾರ್ನ್ ವಾಲೀಸ ನು 1799 ನೇ ಫೆಬ್ರುವರಿ 30 ರಂದು ನಾಲ್ಕನೇ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ ನನ್ನು ವಧಿಸಿದನು ' ಎಂಬುದನ್ನು ಹಾಗೆಯೇ ಓದಿ ಪುರರುಕ್ತಿ ಮಾಡಿಸುವಾಗ ಒಬ್ಬ ವಿದ್ಯಾರ್ಥಿ ಸಾರ್ ಫೆಬ್ರುವರಿ ಯಲ್ಲಿ ಮೂವತ್ತು ಇಲ್ಲವಲ್ಲಾ ಎಂದು ಹೇಳಿದಾಗ ಅವರು ತಬ್ಬಿಬ್ಬು .ಇಲ್ಲಿ ಪಠ್ಯ ವಿಷಯ ತಮಗೇ ಸರಿಯಾಗಿ ಮನನ ಆಗದಿದ್ದರೂ ಯು ಅಂಡರ್ ಸ್ಟಾಂಡ್ ?ಯು ಅಂಡರ್ ಸ್ಟಾಂಡ್ ?ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸುವರು .
ಪ್ರಸಿದ್ದ ವೈದ್ಯ ಪ್ರಾಧ್ಯಾಪಕ ಡಾ ಕೆ ವಿ ತಿರುವೆಂಗಡಮ್ ' ಕಲಿಸುವುದು ಕಲಿಕೆಯ ಉತ್ತಮ ಮಾರ್ಗ . ಯಾವತ್ತೂ ನಿನಗೆ ತಿಳಿದಿರುವ ಜ್ನಾನ ವನ್ನು ಇನ್ನೊಬ್ಬರಿಗೆ ತಿಳಿಸುತ್ತಲಿರು .ನಿನ್ನ ಜ್ನಾನವೂ ವೃದ್ದಿಸುವುದು "ಎನ್ನುತ್ತಿದ್ದರು .ಅದನ್ನು ತಮ್ಮ ಜೀವನದಲ್ಲಿ ಮಾಡಿ ತೋರಿಸಿದರು ತಮ್ಮ ಇಳಿ ವಯಸ್ಸಿನಲ್ಲೂ ವೈದ್ಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಲಾಸ್ ತೆಗೆದು ಕೊಳ್ಳುತ್ತಿದ್ದರು .
ಇದೆಲ್ಲಾ ಆಲೋಚನೆ ಬರಲು ಕಾರಣ ಮೊನ್ನೆ ನಿಧನರಾದ ನನ್ನ ಗುರು ಕಮ್ಮಜೆ ಸುಬ್ಬಣ್ಣ ಭಟ್ ಅವರ ನೆನಪು . ನೈಜ ಅಧ್ಯಯನ ಶೀಲ ಅಧ್ಯಾಪಕ ರನ್ನು ಮೊದಲು ನಾನು ಕಂಡುದು ಅವರಲ್ಲಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ