ಸರಕಾರ ಆಧಾರ್ ಕಾರ್ಡ್ ಪದ್ದತಿ ಜಾರಿಗೆ ತಂದಾಗ ವ್ಯಕ್ತಿಯ ಗುರುತು ಖಾತರಿ ಪಡಿಸುವ ಉದ್ದೇಶ ಮಾತ್ರ ಇತ್ತು . ಉದಾ- ಯಾವುದೇ ಸರಕಾರಿ ಯೋಜನೆಯ ಪ್ರಯೋಜನ ಪಡೆಯುವಾಗ ನಿರ್ದಿಷ್ಟ ವ್ಯಕ್ತಿಗೆ ಸಿಗುವಂತೆ ಖಾತರಿ ಮಾಡಿಕೊಳ್ಳುವುದು . ಆಧಾರ್ ರಾಷ್ಟ್ರೀಯತೆಯನ್ನು ಖಾತರಿ ಮಾಡುವುದಿಲ್ಲ . ಈಗ ಬ್ಯಾಂಕ್ ಖಾತೆ ,ಅಸ್ತಿ ನೋಂದಣಿ ,ಗ್ಯಾಸ್ ಕನೆಕ್ಷನ್ ,ಆಸ್ಪತ್ರೆಯಲ್ಲಿ ದಾಖಲು ಎಲ್ಲಾ ಕಡೆ ಆಧಾರ್ ಕೇಳುತ್ತಾರೆ .ದಿನಗಳ ಹಿಂದೆ ಗ್ಯಾಸ್ ಏಜನ್ಸಿ ಯವರು ಆಧಾರ್ ಬೆರಳಚ್ಚು ದೃಡೀಕರಣ ಮಾಡಲು ಸಂದೇಶ ಕಳುಸಿದರು . ನನಗೆ ಗ್ಯಾಸ್ ಸಬ್ಸಿಡಿ ಇಲ್ಲ .ಆದರೂ ದೃಢೀಕರಣ ಏಕೆ ?ಏಜನ್ಸಿ ಯವರಲ್ಲಿ ಕೂಡಾ ಉತ್ತರ ಇರಲಿಲ್ಲ .. ಕುರುಡು ಕಾನೂನುಗಳು . ಬದುಕಲು ಮತ್ತು ಸಾಯಲೂ ಆಧಾರ ಬೇಕು .
ನಿಮ್ಮ ಗ್ರಾಹಕರನ್ನು ಅರಿಯಿರಿ (Know your customer) ಅಥವಾ ಸದಾ ಕಾಡುವ ಕೆ ವೈ ಸಿ ಒಂದು ಕಾಟ ವಾಗಿ ಮಾರ್ಪಟ್ಟಿದೆ . ಅದಕ್ಕೂ ಆಧಾರ ಬೇಕು . ಬ್ಯಾಂಕ್ ,ಫೋನ್ ,ಗ್ಯಾಸ್ ,ಫಾಸ್ಟಾಗ್ ,ಆಸ್ತಿ ನೋಂದಣಿ ,ಬಸ್ ಟಿಕೆಟ್ ಇತ್ಯಾದಿ ಇತ್ಯಾದಿ . ಮೋಸ ಮಾಡುವವರು ಕೆ ವೈ ಸಿ ಅಪ್ಡೇಟ್ ಎಂದು ಮೆಸೇಜ್ ಲಿಂಕ್ ಕಳುಹಿಸಿ ಪಂಗ ನಾಮ ಹಾಕುವ ಸುದ್ದಿ ಕೇಳುತ್ತಿರುತ್ತೇವೆ . ನಿಮ್ಮ ಆಧಾರ್ ನಂಬರ್ ನಲ್ಲಿ ಬುಕ್ ಮಾಡಿದ ಪಾರ್ಸೆಲ್ ನಲ್ಲಿ ನಿಷೇಧಿತ ವಸ್ತುಗಳಿವೆ ಎಂಬ ಸಂದೇಶ ಕಳುಹಿಸಿ ಬೆದರಿಸಿ ಇ -ದರೋಡೆ ಮಾಡುವವರೂ ಇದ್ದಾರೆ . ಬ್ಯಾಂಕ್ ಗಳಲ್ಲಿ ನೀವು ಕೆ ವೈ ಸಿ ಅಪ್ಡೇಟ್ ಮಾಡಿ ಸ್ವತಃ ಹೋದರೆ ಅಲ್ಲಿ ನಿಮ್ಮನ್ನು ಗುರುತಿಸಿ ಸ್ವಾಗತಿಸುವವರು ಯಾರೂ ಇರರು .ಮುಖ ಎತ್ತಿ ನಿಮ್ಮನ್ನು ನೋಡಿದರೆ ಪುಣ್ಯ . ಇದು ನೊ ಯುವರ್ ಕಸ್ಟಮರ್ ಮಹಿಮೆ .
ಇನ್ನು ಸರಕಾರಿ ಕಚೇರಿಗಳಲ್ಲಿ ಲಂಚ ತೆಗದು ಕೊಳ್ಳುವಾಗ ,ಸಾಮಾನ್ಯವಾಗಿ ಹೇಳುವ ಮಾತು "ಇದು ನಮಗಲ್ಲ ಮೇಲಿನವರಿಗೂ ಪಾಲು ಹೋಗಬೇಕು " ಆದುದರಿಂದ ಅದನ್ನೂ ಆಧಾರ್ ಗೆ ಲಿಂಕ್ ಮಾಡಿದರೆ ನೈಜ ಫಲಾನುಭವಿ ಯಾರು ಎಂದು ಕೊಟ್ಟವನಿಗೆ ತಿಳಿದೀತು ..
ಆಧಾರ್ ಕಾರ್ಡ್ ,ವೋಟರ್ ಕಾರ್ಡ್ , ಎಟಿಎಂ ಕಾರ್ಡ್ ,ರೇಷನ್ ಕಾರ್ಡ್,ಆಸ್ಪತ್ರೆ ಕಾರ್ಡ್ .ಐಡಿ ಕಾರ್ಡ್ ಇತ್ಯಾದಿ ಕಾರ್ಡ್ ಗಳೂ ಅವುಗಳ ಜೆರಾಕ್ಸ್ ಕಾಪಿಗಳೂ ಎಲ್ಲರ ಜೋಳಿಗೆಗಳಲ್ಲಿ ರಾರಾಜಿಸುವ ಈ ಕಾಲದಲ್ಲಿ ಕೆಲವು ರೋಗಿಗಳು ರೋಗ ವಿವರ ಇರುವ ನಮ್ಮ ಚೀಟಿ ಕೇಳಿದರೆ ಎಲ್ಲವನ್ನೂ ನಮ್ಮ ಮುಂದೆ ಸುರುವಿ ಹುಡುಕ ಹೇಳುವರು.
ಆಧಾರ್ ಇದ್ದರೆ ಸಾಲದು . ಅದಕ್ಕೆ ಜೋಡಣೆ ಆಗ ಬೇಕು . ಪಾನ್ ಕಾರ್ಡ್ ,ಬ್ಯಾಂಕ್ ಅಕೌಂಟ್ , ಡಿಮ್ಯಾಟ್ ಅಕೌಂಟ್ ,ರೇಷನ್ ಕಾರ್ಡ್ ಎಲ್ಲದಕ್ಕೂ . ವರ್ಷಗಳ ಹಿಂದೆ ಸೀತಾ ಪರಿತ್ಯಾಗ ಯಕ್ಷಗಾನದಲ್ಲಿ ಅಗಸನ ಪಾತ್ರ ಮಾಡಿದವರು ಹೆಂಡತಿಯೊಡನೆ ಕೋಪದಲ್ಲಿ ಮನೆ ಬಿಟ್ಟು ಎಂದು ಹೇಳಲು ಆಕೆ ನೀವು ಮದುವೆಯಾಗಿ ಕರೆದು ಕೊಂಡು ಬಂದಕ್ಕೆ ಆಧಾರ ಇದೆ ಎಂದು ತಾಳಿ ಯನ್ನು ತೋರಿಸಿದಾಗ ಆತ ಆಧಾರ ಇದ್ದರೆ ಸಾಲದು ಅದು ಜೋಡಣೆಯಾಗಿಯೋ ಎಂದು ಪ್ರಶ್ನಿಸುತ್ತಾನೆ . ಮುಂದೆ ಮದುವೆಯಾಗುವ ಮೊದಲು ಗಂಡು ಹೆಣ್ಣಿನ ಆಧಾರ ಜೋಡಣೆ ಯಾಗಬೇಕು ಎಂದು ಕಾನೂನು ಬಂದೀತು.
ಆದುದರಿಂದ ಆಧಾರ್ ಕಾರ್ಡ್ ಯಾವತ್ತೂ ಜೋಪಾನವಾಗಿ ಇಟ್ಟಿರಿ :ನಿರಾಧಾರ ಆಗದಿರಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ