ನಾನು ಮೊದಲು ವಿಮಾನದಲ್ಲಿ ಪ್ರಯಾಣ ಮಾಡಿದ್ದು ೨೦ ವರ್ಷಗಳ ಹಿಂದೆ . ಅದೂ ಕೊಲ್ಲಿ ರಾಷ್ಟ್ರಕ್ಕೆ ಹೋಗುವ ಅಂತರ ರಾಷ್ಟೀಯ ಪ್ರಯಾಣ . ಆದಾಗಲೇ ೯/೧೧ ರ ಭಯೋತ್ಪಾದಕ ಕೃತ್ಯ ಆಗಿದ್ದು ವಿಮಾನ ನಿಲ್ದಾಣಗಳಲ್ಲಿ ಸುರಕ್ಷಾ ಕ್ರಮಗಳು ಕಠಿಣ ವಾಗಿದ್ದವು .ಪ್ರಯಾಣಿಕರು ಮೂರು ಗಂಟೆ ಮೊದಲೇ ನಿಲ್ದಾಣಕ್ಕೆ ತಲುಪಿ ಲಗ್ಗೇಜ್ ಪರಿಶೋಧಕ ಮೂಲಕ ತಪಾಸಣೆ ನಡೆಸಿ ,ಆಮೇಲೆ ಒಳಗಡೆ ಹೋಗುವಾಗ ಪುನಃ ಲೋಹ ಪರಿಶೋಧಕ ದಿಂದ ಸ್ಪೋಟಕ ಇದೆಯೋ ಎಂದು ನೋಡುವ ಪದ್ಧತಿ ಜಾರಿಗೆ ಬಂದಿತ್ತು .
ನಾನು ಪ್ರಯಾಣಿಸಿದ ವಿಮಾನದಲ್ಲಿ ಕೋಟ್ ಟೈ ಧಾರಿಗಳಿಂದ ಹಿಡಿದು ಮುಂಡು ಬನಿಯನ್ ಕೊರಳಿಗೆ ಒಂದು ಕರ್ಚೀಫ್ ಸುತ್ತಿದ ಸಾಮಾನ್ಯರ ವರೆಗೆ ಇದ್ದು ನಿಜವಾದ ಸಮಾಜವಾದದ ಪ್ರತೀಕ ಎಂಬಂತಿತ್ತು . ಇವರಲ್ಲಿ ಬಹಳ ಮಂದಿ ಜನ ಸಾಮಾನ್ಯರಾಗಿದ್ದು ಉದ್ಯೋಗಾಕಾಂಕ್ಷಿ ಗಳಾಗಿ ಕನಸು ತುಂಬಿ ಕೊಂಡು ಹೋಗುತ್ತಿದ್ದವರು . ನನಗೂ ಮೊದಲನೇ ಅಂತರಿಕ್ಷ ಪಯಣ .
ವಿಮಾನ ಹೊರಡುವುದಕ್ಕೆ ಮೊದಲು ಗಗನ ಸಖಿ ಬಂದು ಸೀಟ್ ಬೆಲ್ಟ್ ಕಟ್ಟುವ ಕ್ರಮದ ಬಗ್ಗೆ (ಆಗೆಲ್ಲಾ ಕಾರ್ ಗಳಲ್ಲಿ ಸೀಟ್ ಬೆಲ್ಟ್ ಬಂದಿರಲಿಲ್ಲ ,ಕಾರಣ ನಮಗೆ ಅದೂ ಹೊಸತು ) ತಿಳಿಸುವರು .ಆಮೇಲೆ ವಿಮಾನ ಒಂದು ವೇಳೆ ನೀರಿನಲ್ಲಿ ಲ್ಯಾಂಡ್ ಆಗ ಬೇಕಾಗಿ ಬಂದರೆ ಲೈಫ್ ಜಾಕೆಟ್ ಸೀಟ್ ನ ಕೆಳಗೆ ಇರುವುದು .ಅದನ್ನು ಹಾಕಿ ಕೊಂಡು ಬಾಯಲ್ಲಿ ಊದಿದರೆ ಅದು ಉಬ್ಬಿಕೊಳ್ಳುವುದು ಎಂದು ಹೇಳುವರು .ಅದನ್ನು ಊಹಿಸಿ ಒಂದು ಕ್ಷಣ ನಮಗೆ ಗಾಬರಿ ಯಾಗಿ ಮಧೂರು ವಿಘ್ನೇಶ್ವರ ನಿಂದ ಹಿಡಿದು ಪುತ್ತೂರು ಮಹಾಲಿಂಗೇಶ್ವರ ನ ವರಗೆ ಎಲ್ಲಾ ದೇವರ ನೆನಪು ಆಗುವುದು . ಈ ಪಾಠ ವನ್ನು ನಂತರದ ಅನೇಕ ಯಾನದಲ್ಲಿಯೂ ಕೇಳಿದ್ದೇನೆ . ಆದರೆ ಅಂತಹ ಪರಿಸ್ಥಿತಿ ಬಂದರೆ ನಿಜಕ್ಕೂ ಜಾಕೆಟ್ ಉಪಯೋಗಕ್ಕೆ ಬರುವುದು ಸಂಶಯ . ಅಲ್ಲದೆ ವಿಮಾನದ ತುರ್ತು ಬಾಗಿಲಿಂದ ಹೊರ ಬರುವ ಮೊದಲೇ ಉಬ್ಬಿದ ಜಾಕೆಟ್ ಧರಿಸಿದರೆ ಹೊರ ಬರುವುದು ಕಷ್ಟವಾಗ ಬಹುದು .ಅಂದ ಹಾಗೆ ನಾವು ಊದಿದ ಗಾಳಿಯಿಂದ ಜಾಕೆಟ್ ಉಬ್ಬುವುದಲ್ಲ ಅಂತೆ .ಅದರಲ್ಲಿ ಇರುವ ರಾಸಾಯನಿಕಗಳು ನಾವು ಮುಚ್ಚಳ ತೆಗೆದೊಡನೆ ಕ್ರಿಯಾಶೀಲ ಗೊಂಡು ಅನಿಲ ಉತ್ಪನ್ನ ಮಾಡುವವು .
ವಿಮಾನ ನಿಂತ ಕೂಡಲೇ ಸಿಬ್ಬಂದಿ ಸೂಚನೆ ಬರುವ ಮೊದಲೇ ಇಳಿಯಲು ತರಾತುರಿ ಮಾಡುವ ನಾವು ಇಂತಹ ಸೂಚನೆಗಳನ್ನು ಎಷ್ಟು ಪಾಲಿಸಿಯೇವು ?
ಇನ್ನೊಂದು ಗಿಣಿ ಪಾಠ ಆಮ್ಲಜನಕ ದ ಮಾಸ್ಕ್ ಬಗ್ಗೆ .ನಿಮಗೆ ತಿಳಿದಂತೆ ವಿಮಾನ ಆಗಸದಲ್ಲಿ ಬಲು ಎತ್ತರಕ್ಕೆ ಹಾರುತ್ತಲಿರುವುದು .ಮೇಲೆ ಹೋದಂತೆ ಗಾಳಿಯಲ್ಲಿ ಆಮ್ಲಜನಕ ದ ಒತ್ತಡ ಕಡಿಮೆ ಆಗುವುದು .ವಿಮಾನದಲ್ಲಿ ಅದನ್ನು ಮನುಷ್ಯನಿಗೆ ಬೇಕಾದ ಒತ್ತಡದಲ್ಲಿ ಕೊಡುವ ವ್ಯವಸ್ಥೆ ಇದ್ದು ,ಅದು ವಿಫಲ ಆದರೆ ಅಥವಾ ವಿಮಾನ ಬಹಳ ಎತ್ತರಕ್ಕೆ ಹೋದರೆ ಪ್ರಾಣ ವಾಯು ಕಡಿಮೆ ಆದ ಸೂಚನೆ ಬರುವುದು . ಕೂಡಲೇ ಪ್ರಯಾಣಿಕರ ಮೇಲಿಂದ ಆಮ್ಲಜನಕ ದ ಮಾಸ್ಕ್ ಇಳಿದು ಬರುವುದು(ವಾಯು ದೇವ ) .ಇಲ್ಲಿ ಕೂಡಾ ಇದು ಕೆಲವು ಕ್ಷಣಗಳಿಗೆ ಮಾತ್ರ ಲಭ್ಯ ವಿದ್ದು ಅಷ್ಟರಲ್ಲಿ ಪೈಲಟ್ ವಿಮಾನವನ್ನು ಕೆಳಕ್ಕೆ ತರುವನು . ವಿಮಾನದಲ್ಲಿ ಆಮ್ಲಜನಕದ ಅಂಡೆ ಇರದೇ ಮಾಸ್ಕ್ ಮತ್ತು ಗಾಳಿ ಚೀಲಕ್ಕೆ ಹೊಂದಿಕೊಂಡು ಕೆಲವು ರಾಸಾಯನಿಕಗಳು ಆಮ್ಲ ಜನಕ ಉತ್ಪತ್ತಿ ಮಾಡುವ ವ್ಯವಸ್ಥೆ . ಇದರಲ್ಲಿ ಒಂದು ಸೂಚನೆ ಇರುತ್ತದೆ .'ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ತಮ್ಮ ಗತಿ ಗಮನಿಸಿ ಕೊಳ್ಳಿ' ಎಂದರೆ ನೀವು ಸ್ವಾರ್ಥಿಗಳು ಆಗಿರಿ ಎಂದಲ್ಲ . ಒಡನೇ ಸ್ವಯಂ ಆಮ್ಲಜನಕ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಇನ್ನೊಬ್ಬರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ನೀವು ಇರಲಾರಿರಿ ಎಂದು ಅರ್ಥ .
ಇನ್ನು ವಿಮಾನ ಏರುವಾಗ ಮತ್ತು ಇಳಿಯುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಿರಿ .ನಿಮ್ಮ ಮೊಬೈಲ್ ಏರೋಪ್ಲೇನ್ ಮೋಡ್ ನಲ್ಲಿ ಅಥಾವ ಆಫ್ ಮಾಡಿ ಇಡಿ ,ಸೀಟ್ ಮುಂದಕ್ಕೆ ತನ್ನಿರಿ ,ಕಿಟಿಕಿ ಗಾಜು ತೆರೆಯಿರಿ ಇತ್ಯಾದಿ ತಿಳಿದ ವಿಚಾರವನ್ನು ಮೊದಲನೇ ಬಾರಿ ಹೇಳುವಂತೆ ನಿಷ್ಠೆಯಿಂದ ಸಿಬ್ಬಂದಿ ಹೇಳುತ್ತಿದ್ದರೂ ಬಹಳ ಮಂದಿ ತಿಳಿದೂ ಅದನ್ನು ಪಾಲಿಸರು . ಪರಿಚಾರಿಕೆ ಬಂದು ಗದರಿಸ ಬೇಕು .
ಮೊದಲ ಯಾನದಲ್ಲಿ ಅಕ್ಕ ಪಕ್ಕದವರು ಮಾಡಿದ ಹಾಗೇ ನೋಡಿ ಮಾಡುವುದು ,ವಾತಾಯನ ವ್ಯವಸ್ಥೆ ಹೇಗೆ ತಿರಿಗಿಸುವುದು ,ಪರಿಚಾರಿಕೆಯನ್ನು ಕರೆಯುವ ಗುಂಡಿ ಒತ್ತುವುದು ,ಹೇಗೆ ಊಟ ಮಾಡುವುದು ಇತ್ಯಾದಿ . ವಾಷ್ ರೂಮ್ ನಲ್ಲಿ ಮಾತ್ರ ನಾವು ಮಾತ್ರ ಇರುವ ಕಾರಣ ಭಯ ;ಯಾವುದನ್ನು ಮುಟ್ಟಿದರೆ ಏನು ಆಗುವುದೋ ?
ವಿಮಾನದಲ್ಲಿ ನಮ್ಮಂತವರು ಪ್ರಯಾಣಿಸುವ ಇಕೋನೋಮಿ ಕ್ಲಾಸ್ ನಲ್ಲಿ ಸೀಟ್ ಗಳು ಬಹಳ ಹತ್ತಿರ ಹತ್ತಿರ ಇದ್ದು ನನ್ನಂತಹ ಉದ್ದದವರಿಗೆ ಕಷ್ಟ . ಮುಂದಿನ ಸೀಟಿನ ವ್ಯಕ್ತಿ ಧಡೂತಿ ಆಸಾಮಿ ಯಾಗಿದ್ದು ಪುಶ್ ಬ್ಯಾಕ್ ಮಾಡಿದರೆ ನಮ್ಮ ಮೊಣಕಾಲು ಚಟ್ನಿ . ಈಗ ಬಸ್ ಮತ್ತು ಟ್ರೈನ್ ನಲ್ಲಿ ಅಕ್ಕ ಪಕ್ಕದವರ ಜತೆ ಸಂಭಾಷಣೆಯಲ್ಲಿ ಯಾರೂ ತೊಡಗುವದಿಲ್ಲ .ವಿಮಾನದಲ್ಲಿ ಅದು ಸ್ವಲ್ಪ ಮೊದಲೇ ಬಂದಿರಬೇಕು .
ಒಮ್ಮೆ ನಾವು(ನಾನು ಮತ್ತು ಪತ್ನಿ ) ಅಮೆರಿಕಾದಲ್ಲಿರುವ ಮಗನ ಭೇಟಿಗಾಗಿ ಬೆಂಗಳೂರಿನಿಂದ ದುಬೈ ಮೂಲಕ ಸಿಯಾಟಲ್ ಪಟ್ಟಣಕ್ಕೆ ಹೋಗುವ ಎಮಿರೇಟ್ ವಿಮಾನದಲ್ಲಿ ಬೆಂಗಳೂರಿನಿಂದ ಪಯಣ ಆರಂಭಿಸಿದೆವು .ದುಬೈಯಲ್ಲಿ ಇಳಿದು ವಿಮಾನ ಬದಲಿಸ ಬೇಕು .ದುಬೈ ಯಲ್ಲಿ ಬೋರ್ಡಿಂಗ್ ಮಾಡುವ ವೇಳೆ ನಮ್ಮ ಟಿಕೆಟ್ ನೋಡಿ ತಡೆದು ಬದಿಗೆ ನಿಲ್ಲುವಂತೆ ಹೇಳಿದರು .ನನಗೋ ಭಯ ;ನಮ್ಮ ಮೇಲೆ ಯಾರಾದರೂ ಲುಕ್ ಔಟ್ ನೋಟೀಸ್ ಜ್ಯಾರಿ ಮಾಡಿದ್ದಾರೋ ?ಸ್ವಲ್ಪ ಸಮಯದ ಬಳಿಕ ಪರಿಚಾರಿಕೆ ಓರ್ವಳು ಬಂದು ನಿಮ್ಮಿಬ್ಬರ ಟಿಕೆಟ್ ನ್ನು ಬ್ಯುಸಿನೆಸ್ ಕ್ಲಾಸ್ ಗೆ ಏರಿಸಿದ್ದೇವೆ ಎಂದು ನಮ್ಮನ್ನು ಸೀಟ್ ನ ಬಳಿಗೆ ಒಯ್ದಳು . ಅಲ್ಲಿ ದಂತ ವೈದ್ಯರ ಚೇರ್ ನಂತೆ ಇರುವ ಸೀಟ್ .ಕಾಲು ಚಾಚಿ ಮಲಗ ಬಹುದು . ,ಮೇಲೆ ಕೆಳಗೆ ಮಾಡ ಬಹುದು . ಕುರ್ಚಿಯಲ್ಲಿ ಕುಳಿತ ಒಡನೆ ಮಕ್ಕಳಂತೆ ಸ್ವಿಚ್ ಗಳನ್ನು ಅದುಮಿ ಏನೇನು ಅಡ್ಜಸ್ಟ್ಮೆಂಟ್ ಇದೆ ಎಂದು ನೋಡಿದೆವು . ಅಕ್ಕ ಪಕ್ಕದಲ್ಲಿ ಇದ್ದ ಪ್ರಯಾಣಿಕರು ಗಂಭೀರವಾಗಿ ವಿಸ್ಕಿ ಸೇವಿಸುತ್ತಾ ಲ್ಯಾಪ್ ಟಾಪ್ ಇಲ್ಲವೇ ಪುಸ್ತಕದಲ್ಲಿ ಮಗ್ನವಾಗಿದ್ದರು . ಆಗಾಗ ಸ್ವಿಚ್ ಒತ್ತಿ ಏನೇನೋ ತರಿಸಿ ತಿನ್ನುವರು . ನಾನು ಎಕಾನಮಿ ಕ್ಲಾಸ್ ನಲ್ಲಿ ಬರುವಂತೆ ಸಮಯಕ್ಕೆ ಸರಿಯಾಗಿ ಊಟ ಕೊಡುವರೆಂದು ಕಾದದ್ದೇ ಬಂತು .ಹಸಿವು ತಡೆಯದೆ ಹೆಂಡತಿ ನೀವು ಊಟ ಕೇಳಿ ಎಂದಾಗ ;'ಸ್ವಲ್ಪ ತಾಳು ಈಗ ತಂದಾರು 'ಎಂದು ಸಮಾಧಾನ ಮಾಡಿದೆ .ಇನ್ನು ಸ್ಪೆಷಲ್ ಆಗಿ ಆರ್ಡರ್ ಮಾಡಿದರೆ ಡಾಲರ್ ನಲ್ಲಿ ಸಿಕ್ಕಾ ಬಟ್ಟೆ ಚಾರ್ಜ್ ಮಾಡಿದರೆ ?ಎಂದು ಭಯ . ಕೊನೆಗೆ ತಡೆಯಲಾರದೆ ಪ್ಯಾಂಟ್ರಿ ಬಳಿಗೆ ಹೋಗಿ ಊಟ ?ಎಂದೆ .ನಿಮಗೆ ಇಂತಹ ಆಹಾರ ಬೇಕು ಎಂದು ನಾನು ಅದುವರೆಗೆ ಕೇಳದೇ ಇದ್ದ ಐಟಂ ಗಳ ಹೆಸರು ಗಳನ್ನು ಹೇಳಲು ವೆಜ್ ವೆಜ್ ಮೀಲ್ಸ್ ಎಂದು ಬಡ ಬಡಿಸಿದೆ . ಉಪ್ಪು ಹುಳಿ ಖಾರ ಇಲ್ಲದ ಅನ್ನ ದಿಂದ ಮಾಡಿದ ಏನಂತಹದೋ ಒಂದು ತಂದು ಕೊಟ್ಟುದನ್ನು ಮುಖ ಸಿಂಡರಿಸಿ ಕೊಂಡು ತಿಂದೆವು . ದುಬೈ ಯಿಂದ ಸಿಯಾಟಲ್ ಗೆ ಹೀಗೇ ಹನ್ನೊಂದು ಗಂಟೆ ಸುಖಾಸೀನ ವಿದ್ದರೂ ಅತೃಪ್ತ ಉದರ ದೊಂದಿಗೆ ಪ್ರಯಾಣಿಸಿದೆವು . ಮಗನ ಬಳಿ ಹೇಳಲು ನೀವು ಅದೃಷ್ಟವಂತರು ,ಹೆಚ್ಚು ವೆಚ್ಚ ಇಲ್ಲದೆ ಮೇಲ್ವರ್ಗ ದಲ್ಲಿ ಪ್ರಯಾಣ ,ಒಮ್ಮೆ ಅವರೇ ಕ್ಲಾಸ್ ಅಪ್ಗ್ರೇಡ್ ಮಾಡಿದರೆ ಅದರ ಎಲ್ಲಾ ಸೌಲಭ್ಯಗಳನ್ನೂ ಪಡೆಯ ಬಹುದು ಎಂದ
ಏನೇ ಹೇಳಿ ನನಗೆ ನಮ್ಮೂರಿನ ಬಸ್ ಮತ್ತು ಟ್ರೈನ್ ಯಾತ್ರೆಯೇ ವಿಮಾನ ಯಾನಕ್ಕಿಂತ ಸುಖ ಎನಿಸುತ್ತದೆ .
ಬಾಲಂಗೋಚಿ : ಹಿಂದೆ ವಿಮಾನ ಪ್ರಯಾಣಿಕರಿಗೆ ಕೊಂಪ್ಲಿ ಮೆಂಟರಿ ಆಗಿ ಚಾಕ್ಲೆಟ್ ನೀಡುತ್ತಿದ್ದು ,ನನ್ನ ಅಮ್ಮ ತಾನು ತಿನ್ನದಿದ್ದರೂ ಮೊಮ್ಮಕ್ಕಳಿಗೆ ಎಂದು ಚೀಲಕ್ಕೆ ಹಾಕಿ ತರುತ್ತಿದ್ದರು .