ಬೆಂಬಲಿಗರು

ಭಾನುವಾರ, ಮೇ 30, 2021

ವೈದ್ಯ ವಿಜ್ಣಾನಿ ಲೇಖಕ ರೋನಾಲ್ಡ್ ರಾಸ್

 ವೈದ್ಯ ವಿಜ್ನಾನಿ ಕವಿ ಲೇಖಕ ರೋನಾಲ್ಡ್  ರಾಸ್ 

 

೧೮೭೮ ರಲ್ಲಿ ಮಲೇರಿಯ ರೋಗಾಣುಗಳನ್ನು ಫ್ರೆಂಚ್ ಲಾವೆರಾನ್ ಕಂಡು ಹಿಡಿದರೆ ಅದು ಸೊಳ್ಳೆಗಳ ಮೂಲಕ ಹರಡುತ್ತದೆ ಎಂಬ ಸತ್ಯವನ್ನು ರೊನಾಲ್ಡ್ ರಾಸ್ ಭಾರತದಲ್ಲಿ ನಡೆಸಿದ ಪ್ರಯೋಗಗಳಿಂದ ಕಂಡು ಹಿಡಿದನು .ಇಬ್ಬರೂ ನೊಬೆಲ್ ಬಹುಮಾನ  ಭಾಜನರು . ರಾಸ್ ಭಾರತದ ವೈದ್ಯಕೀಯ ಸೇವೆಯಲ್ಲಿ ಇದ್ದು ಕೆಲ ವರುಷ ಬೆಂಗಳೂರಿನಲ್ಲಿಯೂ ಸೇವೆ ಸಲ್ಲಿಸಿದನು . 

 ರಾಸ್ ಬಯಸಿ ವೈದ್ಯನಾದವನಲ್ಲ ,ತಂದೆಯ ಒತ್ತಾಯಕ್ಕೆ ಆದವನು .ತಾನು ಲೇಖಕ ಅಥವಾ ಕಲಾವಿದ ಆಗಬೇಕು ಎಂಬುದು ಅವನ ಬಾಲ್ಯದ ಹಂಬಲ . ಉಷ್ಣ ವಲಯ ವ್ಯಾಧಿ ಶಾಸ್ತ್ರ  ಪಿತಾಮಹ ಪ್ಯಾಟ್ರಿಕ್ ಮ್ಯಾನ್ಸನ್ ಅವರ ಮಾರ್ಗದರ್ಶನದಲ್ಲಿ ಭಾರತದಲ್ಲಿ ನಡೆಸಿದ ಸಂಶೋಧನೆ ;ಮ್ಯಾನ್ಸನ್ ದೂರದ ಲಂಡನ್ ನಲ್ಲಿ . ನಡುವೆ ಆ ಕಾಲದಲ್ಲಿ ಇವರ ಪತ್ರ ವ್ಯವಹಾರ . ಕೊನೆಗೆ ಸಿಕ್ಕಿತು ಅಂಗೀಕಾರ . ಆದರೆ ಆರ್ಥಿಕವಾಗಿ ರೊನಾಲ್ಡ್ ರಾಸ್ ಗೆ ಹೇಳುವಂತಹ ಲಾಭ ಆಗಲಿಲ್ಲ ಮತ್ತು ಭಾರತದಿಂದ  ವಾಪಸು ಆದವನಿಗೆ ತಾನು ಎಣಿಸಿದ ಪ್ರಾಕ್ಟೀಸ್ ಆಗಲಿಲ್ಲ . 

 

  ರೊನಾಲ್ಡ್ ರಾಸ್ ಹಲವು ಕೃತಿಗಳನ್ನು ರಚಿಸಿರುವನು .ಕವಿತೆಗಳನ್ನು ಬರೆದಿರುವನು

.ಮಲೇರಿಯಾ ರೋಗ ಲಕ್ಷಾಂತರ ಮಂದಿಯನ್ನು ಬಲಿ ತೆಗೆದು ಕೊಳ್ಳುವುದನ್ನು ಕಂಡು ರಚಿಸಿದ ಕವನ . 

In this, O Nature, yield I pray to me.
I pace and pace, and think and think, and take
The fever’d hands, and note down all I see,
That some dim distant light may haply break.
The painful faces ask, can we not cure?
We answer, No, not yet; we seek the laws.
O God, reveal thro’ all this thing obscure
The unseen, small, but million-murdering cause.

                  ಓ ಪ್ರಕೃತಿಯೇ ಶರಣು ವಂದಿಸುವೆ 

                  ಯೋಚಿಸಿ ಯೋಚಿಸಿ ದಾಪುಗಾಲ ನಡೆ 

                 ತಾಪ ಹಸ್ತವ ಪಿಡಿದು ,ಕಾಂಬುದೆಲ್ಲವ ಬರೆದು 

                  ಕಂಡೀತೋ ದೂರದಲ್ಲಿ ಸಣ್ಣ ಬೆಳಕು ?

                  ಯಾತನಾ ಗ್ರಸ್ತ  ಮೊಗಗಳು ಕೇಳೆ ,ಗುಣಪಡಿಸೆವೆ ನಾವು ?

                   ನಮ್ಮ ಉತ್ತರ ಇಲ್ಲ ಇಲ್ಲ ಇನ್ನೂ ಇಲ್ಲ ;

                    ಓ ದೇವರೇ  ತೋರೆಮಗೆ ಅಸ್ಪಷ್ಟ 

                     ಅದೃಶ್ಯ ,ಬಹುಸಣ್ಣ ,ಮಿಲಿಯ ಸಂಖ್ಯೆಯ ಕೊಲೆಯ ಕಾರಣ . 

 ಕೊನೆಗೂ ಅನಾಫಿಲಿಸ್ ಸೊಳ್ಳೆಗಳ  ದೇಹದೊಳಗೆ ಮಲೇರಿಯ ರೋಗಾಣುಗಳನ್ನು ಕಂಡಾಗ ಮ್ಯಾನ್ಸನ್ ಅವರಿಗೆ ಬರೆದು ಕಳುಹಿಸಿದ ಕವನ . 

              

This day relenting God

Hath placed within my hand
A wondrous thing; and God
Be praised. At his command,

Seeking his secret deeds
With tears and toiling breath,
I find thy cunning seeds,
O million-murdering Death.

I know this little thing
A myriad men will save,
O Death, where is thy sting?
Thy victory, O Grave?

  ಕೊನೆಗೂ ಕಣ್ಣು ಬಿಟ್ಟ ಇಂದು ದೇವರು 

  ದಯಪಾಲಿಸಿದ ಅದ್ಭುತ ಜ್ಞಾನದ ಕೊಡುಗೆ 

  ಪೊಗಳುವೆ ಅವನ ಅನವರತ . 

   ಅವನ  ರಹಸ್ಯ ಕಾರ್ಯಾಚರಣೆಯ 

   ಕಣ್ಣೀರು ನಿಟ್ಟುಸಿರ ಕೂಡೆ ತಡಕಾಡೆ 

   ಸಹಸ್ರ ಸಾವುಗಳ ಕೊಲೆಗಾರ

  ಕಂಡೆನಾ ದುಷ್ಟ ಬೀಜಗಳ . 

   ಈ ಅಲ್ಪ ತಿಳಿವು  , ಅಸಂಖ್ಯ ಜನ ರಕ್ಷಿಸೆ 

   ಓ ಸಾವೇ ಎಲ್ಲಿದೆ ನಿನ್ನ ಕುಟುಕು . 

  ನಿನ್ನ ಜಯ ?ಓ ಗೋರಿಯೇ ?

(ಅನುವಾದ ನನ್ನದು ತಪ್ಪುಗಳಿಗೆ ಕ್ಷಮೆಯಿರಲಿ )

  


ಕರುಳ ಜಂತು ಪುರಾಣ

 ಹೆತ್ತ ಕರುಳು ಎಂದು ವಾಡಿಕೆಯಲ್ಲಿ ತಾಯಂದಿರಿಗೆ ಅನ್ವಯಿಸಿ ಹೇಳಿದರೂ ಗರ್ಭ ಧರಿಸಿ ಹೆರುವ ಪ್ರಕ್ರಿಯೆಗೂ ಕರುಳಿಗೂ ನೇರ ಸಂಬಂಧ ಇಲ್ಲ .ಆದರೆ ನಮ್ಮ ಕರುಳಿನಲ್ಲಿ ಪರೋಪಜೀವಿ ಜಂತುಗಳ ವಾಸ ,ಲೈಂಗಿಕ ಕ್ರಿಯೆ ಮತ್ತು ಸಂತಾನೋತ್ಪತ್ತಿ ಆಗುತ್ತಲಿರುತ್ತದೆ .ಆದುದರಿಂದ ಗಂಡಸರು ಮತ್ತು ಹೆಂಗಸರು ಎಂಬ ಭೇಧ ಇಲ್ಲದೆ ಎಲ್ಲವರೂ ಹೆತ್ತ ಕರುಳುಗಳೇ . 

ಇಂದು ಒಬ್ಬ ರೋಗಿ ಬಂದಿದ್ದರು . ತನ್ನ ಉದರದಲ್ಲಿ ಹುಳದ ಉಪದ್ರ ,ದಿನವಿಡೀ ಗೊಳ ಗೊಳ ಎಂದು ಶಬ್ದ ಮಾಡುತ್ತ ಇರುತ್ತವೆ ಎಂಬುದು ಅವರ ಆರೋಪ . ಹೊಟ್ಟೆಯಲ್ಲಿ ವಾಸಿಸುವ ಜಂತುಗಳು ಶಬ್ದ ಮಾಡುವುದಿಲ್ಲ ,ಅವು ಮೌನ ಸಾಧಕರು . ಹೊಟ್ಟೆಯಲ್ಲಿ ಕೇಳಿ ಬರುವ ಶಬ್ದ ನಮ್ಮ ತನ್ನೊಳಗಿನ   ಒಳಗಿನ ದ್ರವ ಮತ್ತು ಗಾಳಿ  ಕರುಳಿನ ಚಲನೆಯೊಡನೆ  ಓಡುವಾಗ  ಮಾಡುವ ಶಬ್ದ . 

ಇನ್ನು ಪರೋಪಜೀವಿ ಜಂತುಗಳು ಮನುಜನಿಗೆ ಮಿತ್ರರು ಎಂಬ ವಾದ ವಿಜ್ಞಾನಿಗಳಲ್ಲಿ ಇದೆ .  ಇದರ ಪ್ರಕಾರ ನಮ್ಮ ಹೊಟ್ಟೆಯ ಒಳಗೆ ಈ ಹುಳಗಳು  ಶರೀರದ ರೋಗ ಪ್ರತಿರೋಧ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ . ಇದರಿಂದ  ಅದು ಸದಾ ಸಜ್ಜಾಗಿ ಇರುವುದಲ್ಲದು ಒಂದು ಅನುಕೂಲ ಆದರೆ ,ಇನ್ನೊಂದು  ಈ ಜಂತುಗಳು  ಕೆಲವು ರಾಸಾಯನಿಕ ಸಂದೇಶಗಳನ್ನು ಕಳುಹಿಸಿ    ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಎಂದು ಪರ ವಸ್ತುಗಳ ಸಹನೆಯನ್ನು ನಮ್ಮ ಶರೀರದ ರೋಗ ಪ್ರತಿರೋಧ ವ್ಯವಸ್ಥೆಗೆ ಮೇಲಿಂದ ಮೇಲೆ ಕಳುಹಿಸುತ್ತದೆ . 

   ನಮ್ಮ ಶರೀರ ಕೆಲವೊಮ್ಮೆ ಹೊರಗಿನ ಮತ್ತು ಒಳಗಿನ ವಸ್ತುಗಳನ್ನು ವೈರಿ ಎಂದು ಪರಿಗಣಿಸಿ ಉತ್ಪ್ರೇಕ್ಷಿತ  ರೋಗ ನಿರೋಧಕ ಪ್ರಕ್ರಿಯೆ ಆರಂಬಿಸುತ್ತದೆ .ಇದರಿಂದಲೇ  ಆಸ್ತಮಾ ,ಕ್ರೋನ್ಸ್ ಕಾಯಿಲೆ(ಕರುಳ ಊತ)ಮಲ್ಟಿಪಲ್ ಸ್ಲೇರೋಸಿಸ್ ಎಂಬ ನರಾಂಗ ಶಿಥಿಲತೆ ಇತ್ಯಾದಿ ಉಂಟಾಗುವವು . ಈ ಕಾಯಿಲೆಗೆ ಚಿಕಿತ್ಸಾ ರೂಪವಾಗಿ ಪರೋಪಜೀವಿಗಳನ್ನು ಶರೀರಕ್ಕೆ  ಸೇರಿಸುವ ಪ್ರಯೋಗಗಳು ನಡೆದಿವೆ . 

 ನೈರ್ಮಲ್ಯ ರೋಗ ವಾದ ( Hygiene Hypothesis )ಎಂದು ಇದೆ .ಅತಿ ನೈರ್ಮಲ್ಯ ಇರುವ ಮುಂದುವರಿದ ದೇಶದ ಜನರಲ್ಲಿ ಸ್ವಯಂ ನಿರೋಧಕ (Autoimmune )ಕಾಯಿಲೆಗಳು ಜಾಸ್ತಿ ,ಸಣ್ಣ ಸೊಳ್ಳೆ ಕಡಿತವೂ ಅತೀವ ಅಲರ್ಜಿ ಉಂಟು ಮಾಡುವುದು . ನಮ್ಮಲ್ಲಿ ಈ ತರಹದ ಕಾಯಿಲೆಗಳು ಕೆಲವು ವರ್ಷಗಳ ಹಿಂದೆ ಬಹಳ ಕಡಿಮೆ  ಇದ್ದವು . 

                    ನಮ್ಮ ಬಾಲ್ಯದಲ್ಲಿ ಹೊಟ್ಟೆ ಹುಳಕ್ಕೆ ವರ್ಷಕ್ಕೆ ಒಮ್ಮೆ ಹರಳೆಣ್ಣೆ ಕುಡಿಸಿ ಭೇದಿ ಮಾಡಿಸುತ್ತಿದ್ದರು .ಈಗ  ಬೇರೆ ಬೇರೆ ಪರೋಪಜೀವಿಗಳಿಗೆ ಬೇರೆ ಬೇರೆ ಔಷಧಿ ಇದೆ .ಇದರಲ್ಲಿ ಕೆಲವು ಪುನಃ ಪುನಃ ಕಾಡುವವು .ಇದಕ್ಕೆ ಕಾರಣ ಮನೆಯಲ್ಲಿ ಇರುವ ಯಾರಾದರೂ ಒಬ್ಬರು ಮೂಲವಾಗಿ ಇರುವರು .ಆದುದರಿಂದ ಮನೆಯಲ್ಲಿ ಎಲ್ಲರೂ ಜತೆಗೆ ಔಷಧಿ ತೆಗೆದು ಕೊಂಡರೆ ಉತ್ತಮ

 

 

 

ಶನಿವಾರ, ಮೇ 29, 2021

ಸೋಂಕು ರೋಗ ಶಾಸ್ತ್ರ

 

                ಸೋಂಕು ರೋಗ ಶಾಸ್ತ್ರ

 ಕೋವಿಡ್  ಸಾಂಕ್ರಾಮಿಕದಿಂದ ಒಂದು ವಿಷಯ ನಾವು ಕಲಿಯ ಬೇಕು . ಸೋಂಕು ರೋಗ ಶಾಸ್ತ್ರಕ್ಕೆ ನಮ್ಮ ವೈದ್ಯಕೀಯ ಶಿಕ್ಷಣ ಮತ್ತು ರಂಗದಲ್ಲಿ  ಸಿಗ ಬೇಕಾದ ಆದ್ಯತೆ ನಾವು ಕೊಟ್ಟಿಲ್ಲ . ವೈದ್ಯಕೀಯ ಕಾಲೇಜ್ ಗಳಲ್ಲಿ  ಇದಕ್ಕೆ ಪ್ರತ್ಯೇಕ ವಿಭಾಗವೇ ಇಲ್ಲ .ಸೂಕ್ಷ್ಮಾಣು ಜೀವಿ ಶಾಸ್ತ್ರ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಸರಿಯಾದ ಸಂವಹನ ದ ಕೊರತೆ ಇದೆ . ಸಕ್ಕರೆ ಕಾಯಿಲೆ ಹೃದ್ರೋಗ ಇತ್ಯಾದಿಗಳು ಎಲ್ಲರ ಡಾರ್ಲಿಂಗ್ ಆಗಿವೆ . ಇವುಗಳ ಚಿಕಿತ್ಸೆಯಲ್ಲಿ ತುಂಬಾ ಹಣ ಹೂಡಿಕೆ ಆಗುತ್ತದೆ .ವೈದ್ಯರು ಉನ್ನತ ಶಿಕ್ಷಣ ವನ್ನು ಇಂತಹ ವಿಷಯಗಳಲ್ಲಿ ಮತ್ತು ರೇಡಿಯಾಲಜಿ ಯಂತಹ ವಿಭಾಗ ದಲ್ಲಿ ನಡೆಸಲು ಹೆಚ್ಚು ಆಸಕ್ತಿ ತೋರಿಸುವರು . ನಮ್ಮ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಸಾರ್ವಜನಿಕ ಆರೋಗ್ಯ (ಪಬ್ಲಿಕ್ ಹೆಲ್ತ್ ) ವಿಭಾಗ ಬಹಳ ಕ್ರಿಯಾಶೀಲ ಆಗಿತ್ತು . ಮಲೇರಿಯಾ ಸೊಳ್ಳೆ ಮೂಲಕ ಹರಡುವುದನ್ನು   ಮತ್ತು ಕಾಲಾ ಆಜಾರ್  ದಂತಹ ಕಾಯಿಲೆಗಳ ರೋಗಾಣುಗಳನ್ನು ಭಾರತದಲ್ಲಿಯೇ  ಕಂಡು ಹಿಡಿಯಲ್ಪಟ್ಟವು ಎಂದರೆ ನಮಗೆ ಆಶ್ಚರ್ಯ ಆಗುವುದು . 

ಆದ ಕಾರಣ  ಇಂತಹ ಹೊಸ ಸಾಂಕ್ರಾಮಿಕ ಬಂದಾಗ ಎಲ್ಲರೂ ತಮ್ಮ ತಮ್ಮ ಅರಿವಿಗೆ ತಕ್ಕಂತೆ ಅದನ್ನು ವಿಶ್ಲೇಷಿಸಲು ತೊಡಗುತ್ತಾರೆ . ಇದರಲ್ಲಿ ಹಲವರು ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಪರಿಯನ್ನು ನೆನಪಿಸುವರು . ಜನಸಾಮಾನ್ಯರು ಇದನ್ನು ಕೇಳಿ ಗೊಂದಲಕ್ಕೆ ಒಳಗಾಗುವರು  .ಸರಕಾರದ ಸೋಂಕು ರೋಗ ಸಲಹಾ ಸಮಿತಿಗೆ ಲೌಕಿಕವಾಗಿ ಯಶಸ್ವಿ ಎಣಿಸಿದ ವೈದ್ಯರನ್ನು ನೇಮಿಸುವರು .ಏನಾದರೂ ಹೆಚ್ಚು ಕಡಿಮೆ ಆದರೆ ಅವರ ನಾಮದ ಬಾಲ ಇರಲಿ ಎಂಬ ಉದ್ದೇಶ ಇರಬಹುದು . ಆದರೆ ಸೋಂಕು ರೋಗ ಗಳ  ನಿರ್ವಹಣೆಯ ಅನುಭವ ಇರುವ ಮತ್ತು ವಸ್ತು ನಿಷ್ಠ  ವೈಜ್ನಾನಿಕ  ಶಿಫಾರಸು ಮಾಡುವವರು ಅದರಲ್ಲಿ ಇದ್ದರೆ ಉತ್ತಮ .

ನಮ್ಮ ಸಾಮಾನ್ಯ ಸೋಂಕು ರೋಗ ಚಿಕಿತ್ಸೆಗೂ ಒಂದು ಗೊತ್ತು ಗುರಿ ಇದ್ದಂತಿಲ್ಲ . ಉದಾಹರಣೆಗೆ ಸಣ್ಣ ಶೀತ ಜ್ವರಕ್ಕೂ ಆಂಟಿಬಯೋಟಿಕ್ ಕೊಡುತ್ತೇವೆ ,ಕೊಡದಿದ್ದರೆ ರೋಗಿಗಳು ಮತ್ತು ಹೆತ್ತವರು ಕೇಳಿ ಪಡೆಯುತ್ತಾರೆ . ನಮ್ಮಲ್ಲಿ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಭೇದಿ ಹೆಚ್ಚಾಗಿ ವೈರಸ್ ನಿಂದ ಬರುವುದು .ಆದರೂ ಒಂದು ಭೇದಿ ಆದ ಒಡನೆ ಅಮೀಬಿಯಾಸಿಸ್ ಮತ್ತು ಬ್ಯಾಸಿಲ್ಲರಿ (ಬ್ಯಾಕ್ಟಿರಿಯಾ ದಿಂದ ಉಂಟಾಗುವ )ಗೆ ಇರುವ ಔಷಧಿ ಸೇವಿಸುತ್ತೇವೆ . ಇಲ್ಲಿ ಕೇವಲ ಜಲ ಮತ್ತು ಲವಣ ಪೂರಣ ಸಾಕು ಎಂದು ಗೊತ್ತಿದ್ದರೂ . ಒಂದು ದಿನದ ಜ್ವರಕ್ಕೆ ವೈ ಡಾಲ್  ಎಂಬ ಟೆಸ್ಟ್ ಮಾಡಿ  ಟೈಪೋಯ್ಡ್  ಗೆ ಎಂದು ಎರಡೆರಡು ಆಂಟಿಬಯೋಟಿಕ್ ತಿನ್ನುತ್ತೇವೆ . ಈ ಟೆಸ್ಟ್ ಬೇರೆ ಸಾಧಾರಣ ಕಾಯಿಲೆಗಳಲ್ಲಿಯೂ ಪಾಸಿಟಿವ್ ಇರುತ್ತದೆ ಮತ್ತು ಟೈಫಾಯಿಡ್ ನಿರ್ಧಾರಕ ಅಲ್ಲ .ನಾನು ಪುತ್ತೂರಿಗೆ ಬಂದು ಹತ್ತು ವರ್ಷದಲ್ಲಿ ಒಂದು ಟೈಫಾಯಿಡ್ ಕೇಸ್ ಮಾತ್ರ ನೋಡಿದ್ದು ಅದೂ ಕ್ಯಾಂಬೋಡಿಯಾ ಪ್ರವಾಸ ಮಾಡಿ ಬಂದ ವ್ಯಕ್ತಿಯಲ್ಲಿ . ಅನಾವಶ್ಯಕ ಔಷಧಿಗಳ ಸೇವನೆಯೂ ಅವಕಾಶ ವಾದಿ ಸೋಂಕಿಗೆ(ಉದಾ ಫಂಗಸ್ ) ಮತ್ತು ಆಂಟಿಬಯೊಟಿಕ್ ಗಳು ತಮ್ಮ  ಕ್ಷಮತೆ ಕಳೆದು ಕೊಳ್ಳಲು ಕಾರಣ ಆಗುತ್ತವೆ .

    ಸೋಂಕು ರೋಗಗಳನ್ನು ಪತ್ತೆ ಹಚ್ಚುವಲ್ಲಿ  ನಿರ್ಧಾರಕ (Definitive ) ಟೆಸ್ಟ್ ಗಳು ಎಂದು ಇವೆ .ಉದಾಹರಣೆಗೆ ಟೈಫಾಯಿಡ್ ನಲ್ಲಿ ಬ್ಲಡ್ ಕಲ್ಚರ್ ,ಕ್ಷಯ ರೋಗ ದಲ್ಲಿ ಕಫ ಪರೀಕ್ಷೆ ಮತ್ತು ಇತ್ತೀಚಿಗೆ ಪಿ ಸಿ ಆರ್ ಟೆಸ್ಟ್ ಗಳು .ಇಲ್ಲಿ  ಟೆಸ್ಟ್ ಸ್ಯಾಂಪಲ್ ಸಂಗ್ರಹ ,ಮಾಡುವ ವಿಧಾನ ಮತ್ತು ತಂತ್ರಜ್ಞರ ಪರಿಣತಿ ಮೇಲೆ ವರದಿ ಅವಲಂಬಿತ ವಾಗಿರುತ್ತದೆ .,ಇನ್ನು ಕೆಲವು ಟೆಸ್ಟ್ ಗಳು ಇವೆ ಅವು ರೋಗದ ಅಂದಾಜು ಟೆಸ್ಟ್ ಗಳು . ಉದಾ ಮೇಲೆ ಹೇಳಿದ ವೈಡಾಲ್ ,ವಿ ಡಿ ಆರ್ ಎಲ್ , ವೀಲ್ ಫೆಲಿಕ್ಸ್ ಇತ್ಯಾದಿ .ಇವು ರೋಗಾಣುಗಳ ವಿರುದ್ಧ ಶರೀರದಲ್ಲಿ ಉತ್ಪತ್ತಿ ಯಾಗುವ  ಪ್ರತಿ ವಿಷ (antibody )ಗಳನ್ನು ಗುರುತಿಸುವವು . ಉದಾಹರಣೆಗೆ ವಿ ಡಿ ಆರ್ ಎಲ್ ಎಂಬ ಟೆಸ್ಟ್ ಸಿಫಿಲಿಸ್ ಎಂಬ ಲೈಂಗಿಕ ರೋಗವನ್ನು ಪತ್ತೆ ಹಚ್ಚಲು ಮಾಡುವರು .ಆದರೆ ಅಪರೂಪಕ್ಕೆ ಇದು ಮಲೇರಿಯ ,ಕ್ಷಯ ದಂತಹ ರೋಗಗಳಲ್ಲಿಯೂ ಪಾಸಿಟಿವ್ ಇರ ಬಹುದು . ಇದಲ್ಲದೆ  ಈಗ ಕೆಲವು ಧಿಡೀರ್ ಪತ್ತೆ ಹಚ್ಚುವ ಕಾರ್ಡ್ ಟೆಸ್ಟ್ ಗಳು ಬಂದಿವೆ ,ಇವು ಕೆಲವೊಮ್ಮೆ ಇದ್ದ ಕಾಯಿಲೆಯನ್ನು ತೋರಿಸುವುದರಲ್ಲಿ ವಿಫಲ ಆಗ ಬಹುದು ,ಅಥವಾ ಇಲ್ಲದ ಕಾಯಿಲೆ ಇದೆ ಎಂದು ತೋರಿಸಲೂ ಬಹುದು . ಆಂಟಿಬಾಡಿ ಟೆಸ್ಟ್ ಮಾಡುವ ಟೆಸ್ಟ್ ಗಳು ಕಾಯಿಲೆ ವಾಸಿ ಆದ ಮೇಲೂ ಬಹು ಕಾಲ ಪಾಸಿಟಿವ್ ಆಗಿ ಉಳಿಯುತ್ತವೆ . ಆದ ಕಾರಣ ಇವುಗಳನ್ನು ಮಾತ್ರ ಅವಲಂಬಿಸಲು ಆಗದು .ನಮ್ಮ ಅನುಭವ ,ರೋಗ ಲಕ್ಷಣ ಮತ್ತು ಪರೀಕ್ಷೆ ಆದ ಮೇಲೆ ಪ್ರಯೋಗಾಲಯದ ಟೆಸ್ಟ್ ಗಳನ್ನು ಗಣನೆಗೆ ತೆಗೆದುಕೊಳ್ಳಬೇಕು . 

ಜನ ಸಾಮಾನ್ಯರು ಒಂದು ವಿಚಾರ ಗಮನಿಸ ಬೇಕು . ವೈದ್ಯರ ಜ್ಞಾನ ದ  ಹರವು ಹೆಚ್ಚಾದಂತೆ  ಅವರ ವಿನೀತ ಭಾವ ಹೆಚ್ಚುವುದು . ಮತ್ತು ಯಾವುದೇ ರೋಗವನ್ನು ರಿಪೋರ್ಟ್ ನೋಡಿ ಧಿಡೀರ್ ಡಯ ಗ್ನೋಸಿಸ್ ಮಾಡರು .ಮತ್ತು ಔಷಧಿ ಬರೆಯುವಾಗ ಹಲವು ಭಾರಿ ಯೋಚನೆ ಮಾಡುವರು .(ರೋಗಿ ಗರ್ಭಿಣಿಯೋ ,ಮಗುವಿಗೆ ಹಾಲು ಕುಡಿಸುವಳೋ ,ಸಕ್ಕರೆ ಕಾಯಿಲೆ ಇದೆಯೋ ,ಕಿಡ್ನಿ ,ಲಿವರ್ ಸಮಸ್ಯೆ ಇದೆಯೋ .ಇವರು ಈಗ ತೆಗೆದು ಕೊಳ್ಳುತ್ತಿರುವ ಔಷಧಿ ಗೂ ತಾನು ಬರೆಯುವ ಮದ್ದಿಗೂ ತಾಕಲಾಟ ಇದೆಯೋ ಇತ್ಯಾದಿ ).ಇವುಗಳ ಅರಿವು ಇಲ್ಲದವರು ಅತೀ ಆತ್ಮ ವಿಶ್ವಾಸ ದಿಂದ ಓಷಧಿ ಬರೆಯುವರು ,ಕಾಯಿಲೆಯೂ ಹೆಚ್ಚಾಗಿ ಟಂ  ಎಂದು ಗುಣವಾಗ ಬಹುದು . ಆದರೆ ನಿಮಗರಿವಿಲ್ಲದಂತೆ ನಿಮಗೆ ಅದರಿಂದ ಹಾನಿ ಆಗ ಬಹುದು . 

ಸೋಂಕು ರೋಗಗಳ ಅಧ್ಯಯನಕ್ಕೆ  ಪ್ರಾಮುಖ್ಯತೆ ಕೊಟ್ಟ ಹೆಮ್ಮೆಯ ಸಂಸ್ಥೆ ವೆಲ್ಲೋರ್ ನ  ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಎನ್ನಬಹುದು .ಈಗ ಮಣಿಪಾಲದ ಕೆ ಎಂ ಸಿ ಯಲ್ಲಿಯೂ ಸೋಂಕು ರೋಗಗಳ ವಿಭಾಗ ತೆರೆದಿದ್ದಾರೆ .ಪುತ್ತೂರಿನ ವಿಕ್ಟರ್ಸ್  ಶಾಲೆಯ ಹಳೆ ವಿದ್ಯಾರ್ಥಿನಿ  ಪ್ರತಿಭಾವಂತೆ ವೈದ್ಯೆ ಡಾ ಕವಿತಾ ಸರವು ಅದರ  ಸ್ಥಾಪಕ ಪ್ರಧ್ಯಾಪಕಿ ಮತ್ತು ಮುಖ್ಯಸ್ಥೆ ಆಗಿದ್ದು ದೇಶ ವಿದೇಶ ಗಳಲ್ಲಿ ಹೆಸರು ಗಳಿಸಿರುವರು . 

 

ಬುಧವಾರ, ಮೇ 26, 2021

ಕಣವಿ ಬೆನ್ನು ಹತ್ತಿ

 


Where literary flag flies high | Deccan Heraldಚೆನ್ನವೀರ ಕಣವಿ   ಯವರ  ಲೇಖನ ಸಂಗ್ರಹ ಸಾಹಿತ್ಯ ಸಮಾಹಿತ   ಎರಡನೇ ಓದು ಮುಗಿಸಿದೆ .ಅವರ ಕಾವ್ಯ ,ಗದ್ಯ ಮತ್ತು ನಗು ಬೆಳದಿಂಗಳ ಹಾಗೆ . ಸದಾ ತಂಪನ್ನು ಈಯುತ್ತವೆ ;ಮತ್ತು ಈಗಿನ ಸಂದಿಗ್ದ ಪರಿಸ್ಥಿತಿಯಲ್ಲಿ ಅಪ್ಯಾಯಮಾನ . ಅವರು ಪ್ರಸಿದ್ಧ ಕವನ ವಿಶ್ವ ವಿನೂತನ ನಮ್ಮ ನಾಡಗೀತೆಗಳಲ್ಲಿ ಒಂದು ,ಧಾರವಾಡ ಆಕಾಶವಾಣಿಯಲ್ಲಿ ಆಗಾಗ ಬರುತ್ತಿದ್ದು ಜನಪ್ರಿಯ .   

 https://youtu.be/CC3TVtrgGno

ಸಾಹಿತ್ಯ ಸಮಾಹಿತದ ಮೊದಲನೇ ಲೇಖನ ಮಾಸ್ತಿ :ನಾನು ಕಂಡಂತೆ . ೧೯೫೬ ರ ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವಕ್ಕೆ ಮಾಸ್ತಿ ಯಾವರನ್ನೂ  ವಚನ ಪಿತಾಮಹ ಫ ಗು ಹಳ ಕಟ್ಟಿಯವರನ್ನೂ ಕರೆಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು . ಈ ವಿಶ್ವವಿದ್ಯಾಲಯ ದಿಂದ ಗೌ ಡಾ ಪಡೆದ ಮೊದಲಿಗರು . ದಂತ ಕತೆ ಡಾ ಡಿ ಸಿ ಪಾವಟೆ ಆಗ ಉಪಕುಲಪತಿ ..ಘಟಿಕೋತ್ಸವ ಭಾಷಣ ಮಾಡುವ ಗೌರವ ಮಾಸ್ತಿಯವರಿಗೆ ಕೊಡಮಾಡಿದ್ದು ಅದನ್ನು ಅವರು ಕನ್ನಡದಲ್ಲಿಯೇ ಮಾಡಿದರು . 

"ಇದುವರೆಗೆ ಬರಿಯ ಶ್ರೀಮಾನ್ ಎಂದು ಕರೆದು ಕೊಂಡು ಇನ್ನು ಮುಂದೆ ಡಾಕ್ಟರ್ ಶ್ರೀಮಾನ್ ಎಂದು ಕರೆದುಕೊಳ್ಳಬಹುದಾಯಿತು ಎಂಬ ಭಾವನೆಯಿಂದ ನನಗೆ ಸಂತೋಷವಾಗಿದೆಯೆಂದು ಹೇಳಲಾರೆ .ಆದರೆ ನನ್ನ ತಾಯಿನಾಡು ನನ್ನ ಭಾಷಾ ಸೇವೆಯನ್ನು ಎಷ್ಟುಮಟ್ಟಿಗಾದರೂ ಮೆಚ್ಚಿ ಕೊಂಡಿತು ಎಂಬ ಭಾವನೆಯಿಂದ ಸಂತೋಷ ತುಂಬಿದೆ .ನಮ್ಮ ವಿಶ್ವ ವಿದ್ಯಾಲಯಗಳು ಇಂತಹ ಮೆಚ್ಚಿಗೆ ತೋರಿಸುವಲ್ಲಿ ನಮ್ಮ ಜನತೆಯ ಅಧಿಕೃತ ಪ್ರತಿನಿಧಿಗಳಾಗುತ್ತವೆ "ಎಂದು ಸಂತೋಷಕ್ಕೆ ಕಾರಣವನ್ನು ನಿವೇದಿಸಿದ ಮಾಸ್ತಿ ಯವರು "ಕನ್ನಡ ಜನತೆಯ ಜೀವನದಲ್ಲಿ ಕನ್ನಡದ ಸ್ಥಾನ ಯಾವುದಾಗಿರಬೇಕು ?ಕೇಳಬೇಕೇ ?ಇಂಗ್ಲಿಷ್ ಜನರ ಜೀವನದಲ್ಲಿ ಇಂಗ್ಲಿಷ್ ಭಾಷೆಗೆ ಯಾವುದೋ ,ಫ್ರೆಂಚ್ ಜನರ ಜೀವನದಲ್ಲಿ ಫ್ರೆಂಚ್ ಭಾಷೆಯ ಸ್ಥಾನ ಕನ್ನಡ ಭಾಷೆಗೆ ಇರಬೇಕು .ಈಗ ಈ ಸ್ಥಾನದ ಎಷ್ಟು ಹತ್ತಿರ ತಲುಪಿದ್ದೇವೆ ?"

ಇದು ಮಾಸ್ತಿಯವರ ೨೨ ಪುಟಗಳ ಭಾಷಣದ ಆರಂಭ .. 

ಮಾಸ್ತಿಯವರ ಜತೆ ಡಾಕ್ಟರೇಟ್ ಸ್ವೀಕರಿಸಿದ ಫ ಗು ಹಳಕಟ್ಟಿ ಯವರನ್ನು ವಚನ ಪಿತಾಮಹ ಎಂದು ಕರೆಯುತ್ತಾರೆ .

ಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ವಿಜಯಪುರ ಕ್ಕೆ ಬಂದಿಳಿದಾಗ ಒಬ್ಬರು ಕೇಳಿದರಂತೆ – “ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟವನ್ನು ನೋಡುವಿರಾ?” ಅದಕ್ಕೆ ನಕ್ಕು ಬಿ.ಎಂ.ಶ್ರೀ ಅವರು ಉತ್ತರಿಸಿದರಂತೆ “ಮೊದಲು ನಾನು ವಚನಗುಮ್ಮಟವನ್ನು ನೋಡಬೇಕಾಗಿದೆ” ಎಂದು. ಆ ವಚನ ಗುಮ್ಮಟವೇ ವಚನ ಪಿತಾಮಹರೆಂದು ಖ್ಯಾತನಾಮರಾದ ರಾವಬಹದ್ಧೂರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು. 

ತಮ್ಮ ತನು ಮನ ಧನ ವನ್ನೆಲ್ಲ ಶರಣ ಸಾಹಿತ್ಯ ಸಂಗ್ರಹ ಮತ್ತು ಪ್ರಕಟಣೆ ಮತ್ತು ಸಮಾಜಮುಖಿ ಸಂಸ್ಥೆ ಗಳಲ್ಲಿ ತೊಡಗಿಸಿದ ಅವರು ಜೇವನದಲ್ಲಿ ಕಾರ್ಪಣ್ಯ ಎದುರಿಸ ಬೇಕಾಯಿತು .ಕವಿ ಸಿದ್ದಲಿಂಗ ಪಟ್ಟಣ ಶೆಟ್ಟಿಯವರ ಮಾತುಗಳಲ್ಲಿ ಅವರ ಬಗ್ಗೆ ಕೇಳಿರಿ 

 https://youtu.be/UBBlS8IYGsQ

ಮೈಸೂರು ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ವಿಜಯಪುರ ಕ್ಕೆ ಹೋದಾಗ ಹಳಕಟ್ಟಿಯವರ ಮನೆಗೆ ಹೋಗಿ ಹೂ-ಹಣ್ಣು ಸಮರ್ಪಿಸಿ ನಮಸ್ಕರಿಸಿ ಬಂದರಂತೆ. ರಾಜ್ಯಪಾಲರ ಈ ವರ್ತನೆ ಹಳಕಟ್ಟಿಯವರ ವ್ಯಕ್ತಿತ್ವ ಅರಿಯದ ಸರಕಾರಿ ಅಧಿಕಾರಿಗಳಿಗೆ ದಂಗು ಬಡಿಸಿತು. ಸತ್ಯವಂತರಿಗಿದು ಕಷ್ಟಕಾಲವಯ್ಯ ಎಂದು ದಾಸರು ಹೇಳಿದಂತೆ ಶರಣರಿಗೆ ಕಷ್ಟ ನಿರಂತರ ಭಾದಿಸತೊಡಗಿದವು. 

 20ನೇ ಶತಮಾನದ ಶರಣ ಡಾ. ಫ.ಗು. ಹಳಕಟ್ಟಿ - Varthabharati

 

ಮಂಗಳವಾರ, ಮೇ 25, 2021

ಗೌಪ್ಯತೆಯ ಪ್ರಮಾಣ

ಗೌಪ್ಯತೆಯ  ಪ್ರಮಾಣ 

ಮೊನ್ನೆ ಕೇರಳ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮ  ಟಿ ವಿ ಯಲ್ಲಿ ನೋಡುತಿದ್ದೆ . ರ್ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ  ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ  ಭೋದಿಸುತ್ತಿದ್ದರು . ಅವರು ಬರೀ ನ್ಯಾನ್(ನಾನು ) ಎನ್ನುವರು ,ಮಂತ್ರಿಗಳು ತಮ್ಮ ಹೆಸರು ಹೇಳಿ ಪ್ರಮಾಣ ವಚನ ಸ್ವೀಕರಿಸುವರು . ಹಿಂದೆ ರಾಜ್ಯಪಾಲರು ಇಂಗ್ಲಿಷ್ ನಲ್ಲಿ ಪೂರ್ಣ ಪ್ರಮಾಣ ಓದುತ್ತಿದ್ದರು ,ಆಮೇಲೆ ಸ್ಥಳೀಯ ಭಾಷೆಯನ್ನು ಹಿಂದಿಯಲ್ಲೋ ಇಂಗ್ಲಿಷ್ ನಲ್ಲೋ ಬರೆಸಿ ಕಷ್ಟ ಪಟ್ಟು ಓದಲು ಆರಂಭಿಸಿದರು . ಈಗ ಐ ಅಥವಾ ನಾನು ಎಂದು ಬಿಟ್ಟು ನಿಲ್ಲುವರು .ಮಂತ್ರಿ ತಾನು  ಬರೆಸಿ ಕೊಟ್ಟದ್ದನ್ನು ಓದುವರು. ಕೇರಳದ ಕೆಲವು ಮಂತ್ರಿಗಳು ಅಡ್ವೋಕೇಟ್ ಎಂದು ತಮ್ಮ ಹೆಸರು ಆರಂಭಿಸಿದರು . ಇದು ಹೊಸದು . ಡಾಕ್ಟರ್ ಎಂದು ಆರಂಭಿಸಿದ್ದು ಇದೆ .ಕೇರಳದಲ್ಲಿ ವೃತ್ತಿ ಹೆಸರಿಗೆ ಸೇರಿಸುವದು ಸಾಮಾನ್ಯ; ಶೈಲಜಾ ಟೀಚರ್ ,ರಾಮಪ್ಪ ಮಾಸ್ಟರ್ ಇತ್ಯಾದಿ . 

ಅಧಿಕಾರದ ಪ್ರಮಾಣದಲ್ಲಿ ಸಂವಿಧಾನದ ಆಧಾರದಲ್ಲಿ  ಭಯ ಅಥವಾ ಪಕ್ಷಪಾತ ,ರಾಗ ಅಥವಾ ದ್ವೇಷ ಇಲ್ಲದೆ ಆಡಳಿತ ನಡುಸುತ್ತೇನೆ ಎಂದೂ  ಗೌಪ್ಯತೆಯ ಪ್ರಮಾಣದಲ್ಲಿ ಅಧಿಕಾರದ ಪರಿಧಿಯಲ್ಲಿ ಬಂದ ವಿಚಾರಗಳನ್ನು ,ಆಡಳಿತಾತ್ಮಕ ಉದ್ದೇಶಗಳಿಗೆ ಅಲ್ಲದೆ ಬೇರೆಯವರಿಗೆ ಬಹಿರಂಗ ಪಡಿಸೆನು ಎಂದೂ ಪ್ರಮಾಣ ಮಾಡುವರು . ಇದನ್ನು ಎಷ್ಟು ಪಾಲಿಸಿದ್ದಾರೆ ಎಂಬುದನ್ನು ನೀವು ನಿಮ್ಮ ಒಬ್ಬೊಬ್ಬರೇ  ನಾಯಕರ ನಡೆಯನ್ನು ನೋಡಿ ಪರಿಶೀಲಿಸಿ . 

ನಮಗೆ ವೈದ್ಯ ವೃತ್ತಿಯಲ್ಲಿಯೂ  ರೋಗಿಯ ಆರೋಗ್ಯದ ವಿವರದ ಗೋಪ್ಯತೆಯನ್ನು ಕಾಪಾಡುವ ಜವಾಬ್ದಾರಿ ಇದೆ .ಕೆಲವೊಮ್ಮೆ ಗಂಡ ನ ಅರೋಗ್ಯ ಅನಾರೋಗ್ಯ ವಿವರ ಹೆಂಡತಿಗೂ ಮತ್ತು ವೈಸ್ ವರ್ಸಾ . ನನ್ನ ಅಥವಾ ನನ್ನ ಪತ್ನಿಯ ಸಂಬಂಧಿಕರು ಆಸ್ಪತ್ರೆಗೆ ಬಂದರೆ ನಾನು ಅವರ ಕಾಯಿಲೆಯ ವಿಷಯ ಮನೆಯಲ್ಲಿ ಮಾತನಾಡುವುದಿಲ್ಲ .ಕೆಲವೊಮ್ಮೆ ಅವರು ನನ್ನ ಮನೆಯವರಿಗೆ ಫೋನ್ ಮಾಡಿ ವಿವರ ಕೇಳಿದಾಗ ಮೊದಮೊದಲು ಛೇ ನನ್ನಲ್ಲಿ ಹೇಳಲಿಲ್ಲವಲ್ಲಾ  ಎಂದು ಅವರಿಗೆ ವ್ಯಥೆಯಾಗುತ್ತಿ  ತ್ತು .ಈಗ ಅಭ್ಯಾಸ ಆಗಿದೆ . ಬಹಳ ಮಂದಿ ರೋಗಿಯ ಸಂಬಂದಿಕರು ,ಆಪ್ತರು ಎಂದು ಮುದ್ದಾಂ ಇಲ್ಲವೇ ಫೋನ್ ನಲ್ಲಿ ವಿಚಾರಿಸುತ್ತಾರೆ .ಆಗ ಎಲ್ಲವನ್ನೂ ಹೇಳಲು ಆಗುವುದಿಲ್ಲ .ನಾವು ಹೇಳಿಲ್ಲಾ ಎಂದು ಬೇಸರಿಸುತ್ತಾರೆ 

 

ನಡುವಿನ ನಾರಾಯಣರು

 

 ಶೇಕ್ಸ್ ಪಿಯರ್ ನ  ಮರ್ಚೆಂಟ್ ಆ ವೆನಿಸ್ ನಿಂದ ಆಯ್ದ ಸಂಭಾಷಣೆ 

ನೆರಿಸ್ಸಾ : ನಿಮ್ಮ ಸಂಕಷ್ಟಗಳು ಅದೃಷ್ಟ ದಷ್ಟೇ ಧಾರಾಳ ವಿರುವುದರಿಂದ ಬಸವಳಿದಿರುವಿರಿ . ನನ್ನ ಪ್ರಕಾರ ಸಿರಿ ಕಾಲು ಮುರಿದು ಕೊಂಡು ಬಿದ್ದಿರುವ ಲಕ್ಷ್ಮಿ ನಾರಾಯಣ ಮತ್ತು ಒಂದು ಹೊತ್ತು ಊಟಕ್ಕೂ ತತ್ವಾರ ಇರುವ ದರಿದ್ರ ನಾರಾಯಣ ಇಬ್ಬರೂ  ಬಳಲುವರು .ಸುಖಿಯಾಗಿ ಇರುವವರು ಇವರೆಡರ ನಡುವಿನವರು  (ನಡು ವಿನ ನಾರಾಯಣರು ).  ಅಧಿಕ  ಸಂಪತ್ತು  ಶೀಘ್ರ ಮುಪ್ಪಿಗೆ ಅಹ್ವಾನ ;ಅಲ್ಲಿಂದೆಲ್ಲಿಗೆ ಬದುಕಲು ಅನುಕೂಲ ಇರುವವರು ಧೀರ್ಘಾಯುಷಿಗಳು . 

  ಪೋರ್ಷಿಯಾ :  ಮುತ್ತಿನಂತ ಮಾತು ಸರಿಯಾಗಿ ಹೇಳಿದಿ

ನೆರಿಸ್ಸಾ : (ನುಡಿಯೊಳಗೆ ಆಗಿ )ನಡೆಯೊಳಗೆ ಆದರೆ ಇನ್ನೂ ಉತ್ತಮ . 

ಪೋರ್ಷಿಯಾ :ಒಳಿತು ಯಾವುದು ಎಂದು ಗೊತ್ತಿದ್ದೂ ಅದನ್ನು ಅನುಸರಿಸುವುಸು ಸುಲಭವಾಗಿದ್ದರೆ  ಗುಡಿಗಳು ದೊಡ್ಡ ದೇವಾಲಯಗಳಾಗಿ ಬಡವನ ಗುಡಿಸಲುಗಳು  ರಾಜಕುಮಾರನ ಅರಮನೆಗಳಾಗಿ ಬಿಡುತ್ತಿದ್ದವು. ನುಡಿದಂತೆ ನಡೆವವನು ಒಳ್ಳೆಯ ಪ್ರವಾಚಕ .  ಇಪ್ಪತ್ತು ಮಂದಿಗೆ ಒಳಿತು ಏನು ಎಂಬುದನ್ನು ಬರೀ  ಬೋಧಿಸುವುದು ,ಅವರೊಳಗೊಬ್ಬನಾಗಿ ಅದನ್ನು ಪಾಲಿಸುವುದಕ್ಕಿಂತ ಸುಲಭ . ನಮ್ಮ ಮನಸಿನ ನುಡಿಯ ಹೃದಯ ಪಾಲಿಸದು .

 ಟಿಪ್ಪಣಿ : ಈಗ ನಮ್ಮಲ್ಲಿ  ಪರಿಸ್ಥಿತಿ ಬೇರೆ ಇದೆ ಜನ ಹೇಳಿಕೊಳ್ಳುತ್ತಿದ್ದಾರೆ .ಏನೂ ಇಲ್ಲದವರಿಗೆ ಸರಕಾರ ಉಚಿತ ಆಹಾರ ಧಾನ್ಯ ಕೊಡುತ್ತಿದೆ  .ಕೋಟ್ಯಾಧಿಪತಿ ಗಳು ಸಂಕಷ್ಟದ ಬಹಳ ಸಮಯದಲ್ಲಿಯೇ ಇನ್ನೂ ಸಿರಿವಂತರಾಗುವರು . ನಡುವಿನವರು ಮೂರು ಹೊತ್ತು ಉಣ್ಣಲು ಇದ್ದವರು ಲಾಕ್ ಡೌನ್ ನಿಂದ  ಸಂಪಾದನೆ ಇಲ್ಲದೆ ಬವಣೆ ಪಡುತ್ತಿರುವರು . ಸಂಪತ್ತಿನ ನಡುವೆ ಹುಟ್ಟಿದವರು ವ್ಯಾಯಾಮ ಇಲ್ಲದೆ , ತಿನ್ನುವುದು ಹೆಚ್ಚಾದ ಕಾರಣ  ಶೀಘ್ರ ವೃದ್ಧಾಪ್ಯ ಬರುವುದು ನಿಜ .

ನಮ್ಮ ನಾಯಕರು ಮಾಸ್ಕ್ ಧರಿಸಿ ಅಂತರ ಪಾಲಿಸಿ ಎಂದು ಉಪದೇಶಿ ಸಿದ್ದೇ ಉಪದೇಶಿ ಸಿದ್ದು.ಆದರೆ ತಾವೇ ಅದನ್ನು  ಪಾಲಿಸಲಾಗಲಿಲ್ಲ 

    

NERISSA

You would be, sweet madam, if your miseries were in the same abundance as your good fortunes are. And yet for aught I see, they are as sick that surfeit with too much as they that starve with nothing. It is no mean happiness, therefore, to be seated in the mean. Superfluity comes sooner by white hairs, but competency lives longer.

PORTIA

Good sentences, and well pronounced.

NERISSA

10They would be better if well followed.

PORTIA

If to do were as easy as to know what were good to do, chapels had been churches and poor men’s cottages princes' palaces. It is a good divine that follows his own instructions. I can easier teach twenty what were good to be done than be one of the twenty to follow mine own teaching. The brain may devise laws for the blood, but a hot temper leaps o'er a cold decree. Such a hare is madness the youth—to skip o'er the meshes of good counsel the cripple. But this reasoning is not in the fashion to choose me a husband. O me, the word “choose!” I may neither choose whom I would nor refuse whom I dislike—so is the will of a living daughter curbed by the will of a dead father. Is it not hard, Nerissa, that I cannot choose one nor refuse none?

ಭಾನುವಾರ, ಮೇ 23, 2021

ರೋಗಕಾರಕ ಫಂಗಸ್ ಗಳು

 ರೋಗಕಾರಕ ಫಂಗಸ್(ಶಿಲೀಂದ್ರ) ಗಳು 

ಫಂಗಸ್ ಸೋಂಕು ಸಾಮಾನ್ಯ ,ವಿಶೇಷ ಏನೂ ಅಲ್ಲ . ನಾವೂ ಅವುಗಳು ಪರಸ್ಪರ ಸಹಯೋಗದಲ್ಲಿ ಬದುಕುತ್ತಿದ್ದೇವೆ .  ಚರ್ಮ ರೋಗಗಳಾದ ಸಿಬ್ಬ(Tenia versicolor) ಮತ್ತು ಉಗುರಿನ ಕೆಲ್ಲು(Onychomycosis) ಮತ್ತು ಮಳೆಗಾಲದಲ್ಲಿ ಕಾಲಿನ ಬೆರಳುಗಳ ನಡುವೆ ಬರುವ ನೀರು ಕಜ್ಜಿ ಎಲ್ಲವೂ ಫಂಗಸ್ ಗಳಿಂದ . ಹೆಚ್ಚಾಗಿ ಇವುಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ ಮತ್ತು ಚಿಕಿತ್ಸೆ ಮಾಡಿಸಲೂ ಹೋಗುವುದಿಲ್ಲ .                      
Onychomycosis - Dermatologic Disorders - MSD Manual Professional Edition

.

ಇತ್ತೀಚೆಗೆ ಕೋವಿಡ್ ಪರ್ವದಲ್ಲಿ ಕಪ್ಪು ಮತ್ತು ಬಿಳಿ ಫಂಗಸ್ ಎಂಬ ಹೆಸರು ಕೇಳಿ ಬರುತ್ತಿವೆ .ಯತಾರ್ಥದಲ್ಲಿ ಫಂಗಸ್ ಗಳಲ್ಲಿ ಈ ತರಹದ ವರ್ಣ ಭೇದ ಇಲ್ಲ .ಒಂದೊಂದು ವರ್ಗದ ಶಿಲೀಂದ್ರ ಉಂಟು ಮಾಡುವ ರೋಗದ ಪರಿಣಾಮ ಅಂಗಗಳಿಗೆ ಸ್ವಲ್ಪ  ಕಪ್ಪು ಅಥವಾ ಬಿಳಿ ಬಣ್ಣ ಬರ ಬಹುದು . ಅದರಿಂದ ವಾಡಿಕೆ ಯಲ್ಲಿ  ಬಂದ ಹೆಸರುಗಳು .

ಉದಾಹರಣೆಗೆ  ಕ್ಯಾಂಡಿಡಾ ಎಂಬ ಫಂಗಸ್ ಸೋಂಕಿನಿಂದ ಬಾಯಿ ಗಂಟಲು ಒಳಗೆ ಬಿಳಿ ಪೊರೆ ಉಂಟು ಮಾಡಬಲ್ಲುದು .ಅದೇ ರೀತಿ ಮ್ಯೂಕೋರ್ ಮೈಸಿಟೀಸ್ ಎಂಬ ಶೀಲಿಂದ್ರ  ಮೂಗು ಕಣ್ಣು ಬಾಯಿಗಳಲ್ಲಿ  ಸೋಂಕಿನಿಂದ ಚರ್ಮ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡ ಬಹುದು . 

 ಅವಕಾಶವಾದಿ ರೋಗಾಣುಗಳು ಎಂಬ ಪ್ರಭೇಧ  ಇದೆ  .(Opportunistic Pathogens ). ಈ ಫಂಗಸ್ ಗಳೂ ಅದೇ ಜಾತಿಗೆ ಸೇರಿದವು .ನಮ್ಮ ಮನುಷ್ಯರಲ್ಲಿಯೂ  ಬಹಳ ಮಂದಿ ಇದೇ ವರ್ಗಕ್ಕೆ ಸೇರಿದವರು ಇದ್ದೇವೆ .ನೀವು ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ಅನೇಕರನ್ನು ನೋಡಿದ್ದೀರಿ . ಮೇಲ್ನೋಟಕ್ಕೆ ಸುಭಗ ಸಂಭಾವಿತರಾದ ಇವರು ಸಮಯ ಸಿಕ್ಕಾಗ ಅರಿವಿಲ್ಲದಂತೆಯೇ ಧಾಳಿ ಮಾಡುವರು . ಅವಕಾಶ ನೋಡಿ ವೈರಿಯ ಮೇಲೆ ಆಕ್ರಮಣ ಮಾಡುವದು ಮಹಾಭಾರತ ಯುದ್ಧದಲ್ಲಿಯೂ ಕಂಡಿದ್ದೇವೆ . ಉದಾ ಕರ್ಣನ ರಥ ಮುರಿದು ಬಿದ್ದಾಗ .

ನಮ್ಮ ಅರೋಗ್ಯ ಸರಾಸರಿ ಒಳ್ಳೆಯ ಮಟ್ಟದಲ್ಲಿ ಇದ್ದರೆ ಅವಕಾಶವಾದಿ ಸೋಂಕುಗಳಿಗೆ ಶರೀರ ಅವಕಾಶ ಕೊಡುವುದಿಲ್ಲ .ಕೊಟ್ಟರೂ ತೀವ್ರತರ ಇರಲಾರದು . ಆದರೆ ಹತೋಟಿ ತಪ್ಪಿದ ಸಕ್ಕರೆ ಕಾಯಿಲೆ ,ಕ್ಯಾನ್ಸರ್ ರೋಗ ಮತ್ತು ಅದರ ಚಿಕಿತ್ಸೆ ಮತ್ತು ಈಗ ಕೋವಿಡ್ ನಂತಹ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕುಂದಿರುವಾಗ ಇವು ತಮ್ಮ ರೋಗ ಕಾರಕ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ನಿರ್ಮಾಣವಾಗುತ್ತದೆ . ಹಲವರಲ್ಲಿ  ಸಕ್ಕರೆ ಕಾಯಿಲೆಯ ಆರಂಭವೇ ಜನನಾಂಗಗಳ  ಕ್ಯಾಂಡಿಡಾ (ಬಿಳಿ ಫಂಗಸ್ )ಸೋಂಕಿನಿಂದ ಕಂಡು ಹಿಡಿಯಲ್ಪಡುತ್ತದೆ .

 Thrush | medicine | Britannica

Black fungus (COVID-19 condition) - Wikipedia


Mucormycosis - EyeWiki

 

ಶನಿವಾರ, ಮೇ 1, 2021

ಹಿಂತಿರುಗಿ ನೋಡಿದಾಗ

                       ಹಿಂತಿರುಗಿ  ನೋಡಿದಾಗ 

ನಾವು ವೈದ್ಯಕೀಯ ಕಲಿಯುವಾಗ ಎಂ ಬಿ ಬಿ ಎಸ್ ನಮ್ಮ ಗುರಿ ಆಗಿತ್ತು . ಆಮೇಲೆ ಎಲ್ಲಿಯಾದರೂ ಪ್ರಾಕ್ಟೀಸ್ ಮಾಡುವುದು ,ಅಥವಾ ಸರಕಾರಿ ಸೇವೆ . ಪಿ ಜಿ ಬಗ್ಗೆ ಆಲೋಚನೆ ಇರಲಿಲ್ಲ .ಇಂಟರ್ನ್ ಆಗಿದ್ದಾಗ ಪಿ ಜಿ‌ ಗೆ ಓದುವುದು ಅಂತ ಇಲ್ಲದೆ ರೋಗಿಗಳ ಚಿಕಿತ್ಸೆ ಬಗ್ಗೆ ಕಲಿಯುವುದರಲ್ಲಿಯೇ ಆಸಕ್ತಿ .ಆದ ಕಾರಣ ಹೆರಿಗೆ ,ಸಣ್ಣ ಶಸ್ತ್ರ ಚಿಕಿತ್ಸೆ ,ಮಕ್ಕಳ ರೋಗ ಇತ್ಯಾದಿ ಎಲ್ಲಾ ವಿಭಾಗಗಳಲ್ಲಿಯೂ ತಕ್ಕ ಮಟ್ಟಿಗೆ ಅನುಭವ ಮತ್ತು ಆತ್ಮ ವಿಶ್ವಾಸ ಇರುತ್ತಿತ್ತು .  ಎಂ ಬಿ ಬಿ ಎಸ್ ಫೀಸಿಶಿಯನ್ ಅಂಡ್ ಸರ್ಜನ್ ಎಂದು ಹಾಕಿ ಕೊಳ್ಳಲು ನಿಜಕ್ಕೂ ಅರ್ಹರಾಗಿದ್ದೆವು .ಈಗ ಎಲ್ಲರೂ ಪಿ ಜಿ ಮಾಡುವ ತರಾತುರಿಯಲ್ಲಿಯೇ ಇರುತ್ತಾರೆ ಮತ್ತು ಹೌಸ್ ಸರ್ಜನ್ ಆಗಿರುವಾಗ MCQ ಬಿಡಿಸುವುದರಲ್ಲಿಯೇ ಸಮಯ ಕಳೆಯುವರು .

ನಮ್ಮ ವಿದ್ಯಾರ್ಥಿ ಕಾಲದಲ್ಲಿ ರೇಡಿಯೋಲೋಜಿ ಯಲ್ಲಿ  ಎಕ್ಸ್ ರೇ  ಮಾತ್ರ ಇದ್ದು ಬಹಳ ಮಂದಿ ಪ್ರಾಧ್ಯಾಪಕರು  ರೇಡಿಯೇಶನ್ ನಿಂದ ಕಾನ್ಸರ್ ರೋಗಕ್ಕೆ ತುತ್ತಾಗುತ್ತಿದರು. ಉನ್ನತ ಅಭ್ಯಾಸಿಗಳಿಗೆ ಆಕರ್ಷಕ ವಿಷಯ ಆಗಿರಲಿಲ್ಲ .ಈಗ  ಬೇರೆ ಬೇರೆ ತರಹದ ಸ್ಕ್ಯಾನ್ ಗಳು ಬಂದಿದ್ದು ಈ ವಿಭಾಗ ಅತ್ಯಧಿಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ . ಮೊದಲು ಸ್ತ್ರೀ ರೋಗ ತಜ್ನರು ಕೈಯಿಂದಲೇ ಗರ್ಭಸ್ಥ ಶಿಶುವಿನ ಬಗ್ಗೆ ತಿಳಿದು ಕೊಳ್ಳಬೇಕಿತ್ತು .ಅದೇ ರೀತಿ ಹೃದ್ರೋಗ ದಲ್ಲಿ  ಎಕೋ ಕಾರ್ಡಿಯೋ ಗ್ರಫಿ ಎಂಬ ಸ್ಕ್ಯಾನ್ ನಿಂದ ಕವಾಟಗಳ ,ಹೃದಯ ಮಾಂಸ ಖಂಡಗಳ ಬಗ್ಗೆ ನಿಮಿಷಾರ್ಧದಲ್ಲಿ ನೋಡಿ ತಿಳಿಯ ಬಹುದು .ಹಿಂದೆ ಸ್ಟೇತೋಸ್ಕೋಪ್ ಮಾತ್ರ ಇದ್ದಾಗ ನಾವು ಹೃದಯದ ವಿಶೇಷ ಮರ್ಮರಗಳ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿದ್ದೆವು .

  ಎಚ್ ಐ ವಿ ಬಂದ ಮೇಲೆ ಸಿರಿಂಜ್ ಗಳನ್ನು  ಕುದಿಸಿ  ಮರು ಉಪಯೋಗಿಸುವುದು ನಿಂತು ಹೋಗಿ ದಿಸ್ಪೊಸಿಬಲ್ ಸಿರಿಂಜ್ ಬಂದುವು .ಹಿಂದಿನ ಕಾಲದ ವೈದ್ಯರು ಇಕ್ಕುಳು ಉಪಯೋಗಿಸಿ ಪಿಸ್ಟನ್ ಮತ್ತು ಸೂಜಿ ಸಿರಿಂಜ್ ಗೆ ಸಿಕ್ಕಿಸುವ ದೃಶ್ಯ ಮರೆಯಾಯಿತು .ಮಕ್ಕಳು ಮೊದಲಿನಂತೆ ಇಂಜೆಕ್ಷನ್ ಗೆ ಅಂಜುವುದಿಲ್ಲ .     ರಕ್ತದಾನ ಆಗ ಸುಲಭ ಇತ್ತು  .ತುರ್ತು ಸಂದರ್ಭದಲ್ಲಿ  ಗ್ರೂಪ್ ಕ್ರಾಸ್ ಮ್ಯಾಚಿಂಗ್ ಮಾಡಿ ನಾವೇ ರಕ್ತ ಕೊಡುತ್ತದ್ದೆವು .ಈಗ ಎಚ್ ಐ ವಿ .ಹೆಪಾಟೈಟಿಸ್ ಇತ್ಯಾದಿ ರೋಗಗಳು ಇವೆಯೇ ಎಂದು ನೋಡಿಯೇ ಕೊಡ ಬೇಕಾಗಿದೆ .   ಸರ್ಜರಿಗೆ   ಮೊದಲು ಕೂಡಾ ಈ ಟೆಸ್ಟ್ ಗಳನ್ನು  ಮಾಡಬೇಕಿದ್ದು ಖರ್ಚು ಹೆಚ್ಚು ಮಾಡುತ್ತದೆ .

ಹಿಂದೆ  ಅಧ್ಯಾಪಕರನ್ನು ಭಯ (ಇದು ಜಾಸ್ತಿ ) ಭಕ್ತಿಯಿಂದ  ನೋಡುತ್ತಿದ್ದೆವು .. ಕೆಲವರಮೇಲೆ ಪ್ರೀತಿಯೂ  ಇರುತ್ತಿತ್ತು . ಪರೀಕ್ಷೆಯಲ್ಲಿ ಪಾಸ್ ಆಗುವುದು ತುಂಬಾ ಕಷ್ಟವಲ್ಲದಿದ್ದರೂ ಸುಲಭವಾಗಿರಲಿಲ್ಲ ,ಅದೃಷ್ಟ ಬೇಕಿತ್ತು . ಈಗ  ಫೇಲ್ ಆಗುವುದಕ್ಕೇ  ಕಷ್ಟ ಪಡ  ಬೇಕಾಗುವುದು . 

ಬಹಳ ಬೇಸರದ ವಿಚಾರ ಆಗಲೂ ಈಗಲೂ ನಮ್ಮ ದೇಶದಲ್ಲಿ ತಮ್ಮ ವಿದ್ಯಾರ್ಥಿ ಒಬ್ಬ ಪ್ರಾಮಾಣಿಕ ,ಬುದ್ದಿವಂತ ಮತ್ತು ಶ್ರಮಜೀವಿ ಎಂದು ಪ್ರಾಧ್ಯಾಪಕನಿಗೆ ತಿಳಿದಿದ್ದರೂ ಅವನನ್ನು ಉನ್ನತ ವಿದ್ಯಾಭ್ಯಾಸಕ್ಕೆ ಚುನಾಯಿಸುವ ಹಕ್ಕು ಅವನಿಗೆ ಇರುವುದಿಲ್ಲ .ಒಂದೋ  ಹಣ ಇಲ್ಲವೇ ಎಂಟ್ರನ್ಸ್ ಪರೀಕ್ಷೆಯ ಅಂಕ ಇದು ಮಾತ್ರ ನಿರ್ಧಾರಕ . ಬುದ್ದಿವಂತ ನಾದವನು  ಪ್ರಾಮಾಣಿಕ ಇರ ಬೇಕೆಂದಿಲ್ಲ ,ಅಥವಾ ಇದ್ದರೂ ಶ್ರಮ ಪಟ್ಟು ಕೆಲಸ ಮಾಡುವವನು ಇರಲಾರನು .ವೈದ್ಯಕೀಯ ರಂಗದಲ್ಲಿ ಇವೆಲ್ಲಾ ಬಹಳ ಮುಖ್ಯ.

 ನಮ್ಮ ಪ್ರಾಧ್ಯಾಪಕರಲ್ಲಿ ಕೈ ಬೆರಣಿಕೆ ಯಷ್ಟು ಮಂದಿಗೆ ಮಾತ್ರ ಕಾರ್ ಇತ್ತು .ಇನ್ನು ಕೆಲವರಲ್ಲಿ ಸ್ಕೂಟರ್ . ಉಳಿದವರು ನಡೆದೇ ಮತ್ತು ಬಸ್ ನಲ್ಲಿ ಸಂಚರಿಸುತ್ತಿದ್ದರು . ಆದರೂ ಅವರು ಹೆಚ್ಚು ತೃಪ್ತ ರಂತೆ ತೋರುತ್ತಿದ್ದರು . ಈಗ ವಿದ್ಯಾರ್ಥಿಗಳೇ ದೊಡ್ಡ ಕಾರ್ ಗಳಲ್ಲಿ ಬರುವರು . ಸಂಪತ್ತು ಹೆಚ್ಚಿ ದಂತೆ  ಮಾನವೀಯ ಸ್ಪರ್ಶ ಮತ್ತು ಸಂಬಂಧಗಳು  ಭಾಗಶಃ ಮರೆಯಾದವು .ಗುರು ಶಿಷ್ಯ ಸಂಬಂಧ ವ್ಯಾವಹಾರಿಕ ಆಗಿದೆ .  .

 ರೋಗಿ ವೈದ್ಯರ ಬಾಂಧವ್ಯ ಕೆಟ್ಟಿರುವುದು ಎಲ್ಲರಿಗೂ ತಿಳಿದ ವಿಷಯ .ವೈದ್ಯ ವೈದ್ಯರ ನಡುವೆ ಸುಖ ದುಖ ,ವಿಚಾರ ವಿನಿಮಯ ಕಡಿಮೆ ಆಗಿದೆ .ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೂ ಸಂಪರ್ಕ ಕಡಿಮೆ ಆಗಿದೆ .

ಕೆ ಎಂ ಸಿ ಹುಬ್ಬಳ್ಳಿಗೆ ಇತ್ತೀಚಿಗೆ ಭೆಟ್ಟಿ ನೀಡಿದ್ದೇನೆ .ನನ್ನ ಮನದಲ್ಲಿ ಚಿರಸ್ಥಾಯಿ ಆಗಿರುವ ಅದು ನನ್ನನ್ನು ಗುರುತಿಸುವುದಿಲ್ಲ  . ವೈದ್ಯ ಶಾಸ್ತ್ರಕ್ಕೆ ಜೀವ ತುಂಬಿದ  ಅನಾಟಮಿ ವಿಭಾಗದ ಶವಗಳೇ , ನಮ್ಮನ್ನು ಅಜ್ಞಾನ ಕೂಪದಿಂದ ಎತ್ತಿದ ಫಿಸಿಯೋಲಾಜಿ ಪ್ರಯೋಗದ ಮಂಡೂಕಗಳೇ ,ವೈದ್ಯ ಶಾಸ್ತ್ರವ  ನಮಗೆ ಅರೆದು ಇಳಿಸಿದ  ಗುರುಗಳೇ  , ನಿಮ್ಮ  ಸಂಟಕದೊಡನೆ ನಮ್ಮನ್ನೂ ಸಹಿಸಿ ,ರೋಗ ನಿದಾನ ಕಲಿಯಲನುವು ಮಾಡಿದ ರೋಗಿಗಳೇ ,ನಮ್ಮ ಕಾಲೇಜು ತುಂಟಾಟದ ಹುಡುಗರೇ ,ಸೀರೆ ಉಟ್ಟ ಸಹಪಾಠಿ ಬೆಡಗಿಯರೇ ,ಸದಾ ವರ್ಣಮಯ ತೋಟದ ಹೂಗಳೇ,ಸಿ ಬೀ ಟಿ ಸಿಟಿ ಬಸ್ ಗಳೆ  ಎಲ್ಲಿ ಹೋದಿರಿ ನೀವು ನಿಮ್ಮವ ಬಂದಿರುವೆನು  ,ನನ್ನ ಗುರುತಿಸೆಯಾ ಎಂದು ನನ್ನ ಹೃದಯ ಕೂಗುವುದು .