ಬೆಂಬಲಿಗರು

ಮಂಗಳವಾರ, ನವೆಂಬರ್ 29, 2022

ಡಾ ಜಿ ಕೆ ಸುಬ್ರಹ್ಮಣ್ಯ ಭಟ್


 ಸಂಪಾಜೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶ . ಇಲ್ಲಿಯ ಗೇಟ್ ಇತಿಹಾಸ ಪ್ರಸಿದ್ದ .ಮಳೆಗಾಲದಲ್ಲಿ ವಿಪರೀತ ಮಳೆ .ಹಿಂದೆ ನಾಗರಿಕ ಸೌಲಭ್ಯ ಗಳು ಬಹಳ ಕಡಿಮೆ ಇತ್ತು . ಮಡಿಕೇರಿ ಪುತ್ತುರಿನಂತಹ ಪೇಟೆಗಳಲ್ಲಿ ಕೂಡಾ ಆಧುನಿಕ ಪದ್ದತಿಯ ವೈದ್ಯರು ಬೆರಳೆಣಿಕೆಯಲ್ಲಿ ಇದ್ದರು. ಆ ಕಾಲದಲ್ಲಿ ಎಂ ಬಿ ಬಿ ಎಸ್ ಪದವಿ ಪೂರೈಸಿ  ಸಂಪಾಜೆಯಲ್ಲಿ ವೈದ್ಯಕೀಯ ಸೇವೆ ಆರಂಬಿಸಿದವರು ಡಾ ಜಿ ಕೆ ಸುಬ್ರಹ್ಮಣ್ಯ ಭಟ್ ಅವರು.ಹಲವು ವರ್ಷ ತಮ್ಮದೇ ಚಿಕಿತ್ಸಾಲಯ ,ನಂತರ  ಕೆ ವಿ ಜಿ ವೈದ್ಯಕೀಯ ಕಾಲೇಜ್ ನ ಸಂಯೋಗ ದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ . 

ಇವರು ಪ್ರಸಿದ್ದ ಕೋಣೆತೋಟ ಮನೆತನದವರು . ಮೃದು ಭಾಷಿ .ಸದಾ ಅಧ್ಯಯನ ಕುತೂಹಲಿ .ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಪರಿಚಯ ಮಾಡಿಕೊಂಡು ,ಅವನ್ನು ತಮ್ಮ ವೃತ್ತಿ ಸೇವೆಯಲ್ಲಿ ಅಳವಡಿಸುವ ಉದ್ದೇಶ  ಹೊಂದಿದ್ದವರು . ಸಂಪಾಜೆ ಕಲ್ಲುಗುಂಡಿ ಪರಿಸರದಲ್ಲಿ ಇವರ ಸೇವೆ ,ಸಜ್ಜನಿಕೆ ಪರಿಚಯ ಇಲ್ಲದವರು ಅಪರೂಪ .

ಸದ್ಯ ಸಂಪಾಜೆಯಲ್ಲಿ ನೆಲೆಸಿರುವ ಇವರು ವೃದ್ದಾಪ್ಯ ದ ಆರೋಗ್ಯ ಸಮಸ್ಯೆಗಳ ಕಾರಣ ವೃತ್ತಿಗೆ ವಿದಾಯ ಹೇರಿರುವರು. ಇಂತಹವರ ಸೇವೆ ಸಮಾಜ ಸದಾ ನೆನಪಿನಲ್ಲಿ ಇಟ್ಟು ಕೊಂಡಿರ ಬೇಕು.


ಶನಿವಾರ, ಅಕ್ಟೋಬರ್ 15, 2022

ಧರ್ಮಕ್ಕೆ ಸಿಗುವ ಹೊಗಳಿಕೆ ಮತ್ತು ತೆಗಳಿಕೆ

  ಕೆಲವೊಮ್ಮೆ ನಮಗೆ ಯಾವುದೇ ಶ್ರಮ ಇಲ್ಲದೆ ಹೊಗಳಿಕೆ ಸಿಗುತ್ತದೆ .ಉದಾಹರಣೆಗೆ ಒಬ್ಬ ವ್ಯಕ್ತಿ ಜ್ವರ ಬಂದು ಸಮೀಪದ ವೈದ್ಯರ ಬಳಿ ಹೋಗುತ್ತಾನೆ .ಅವರು ಪರೀಕ್ಷೆ ಮಾಡಿ ಔಷಧಿ ಕೊಡುತ್ತಾರೆ .ಮೂರು ನಾಲ್ಕು ದಿನ ಕಳೆದರೂ ಜ್ವರ ಬಿಡುವದಿಲ್ಲ . ಸರಿ ,ನಮ್ಮ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುತ್ತಾನೆ .ನಾನು ಪರೀಕ್ಷೆ ಮಾಡುವಾಗಲೂ ದೊಡ್ಡ ಕಾಯಿಲೆ ಏನೂ ಕಾಣುವುದಿಲ್ಲ . ರೋಗಿಯ ಬಯಕೆಯಂತೆ ಒಂದು ಡ್ರಿಪ್ ಹಾಕಿ ಸಾಧಾರಣ ಜ್ವರದ ಮಾತ್ರೆ ಕೊಡುತ್ತೇನೆ . ಬಂಡ ಮರುದಿನ ಜ್ವರ ಬಿಡುತ್ತದೆ . ನನಗೆ ಎಲ್ಲಾ ಕ್ರೆಡಿಟ್ ಸಿಗುತ್ತದೆ .ಹಲವು ಜ್ವರಗಳು ವೈರಸ್ ಮೂಲದವು ಆಗಿದ್ದು  ಶಮನ ಆಗಲು ವಾರ ತೆಗೆದು ಕೊಳ್ಳ ಬಹುದು . ಕೆಲವರು  ಅಂದಾಜಿಗೆ ಆಂಟಿ ಬಯೋಟಿಕ್ ಕೊಡುವರು .ಉದ್ದೇಶ ಒಳ್ಳೆಯದೇ . ಇದೇ ರೀತಿ ಭೇದಿ ಗೆ  ಮುಖ್ಯ ಕಾರಣ ವೈರಸ್ .ಇದಕ್ಕೆ ಜಲ ಪುರಾಣ ಸಾಕು . ಹೊರಗಡೆ ಎಷ್ಟೋ ಮದ್ದು ತಿಂದು ಬಂದವರು ಆಸ್ಪತ್ರೆಗೆ ಬಂದು ಒಂದೇ ದಿನದಲ್ಲಿ ಯಾವುದೇ ಹೊಸ ಔಷಧಿ ಇಲ್ಲದೆ ಗುಣ ಮುಖರಾಗುವರು . ರೋಗಿಯು ನಮ್ಮನ್ನು ಹೊಗಳುವರು . ಪ್ರಸಿದ್ಧ ಉಷ್ಣ ಪ್ರದೇಶ ರೋಗ ಶಾಸ್ತ್ರದ  ಪಠ್ಯ ಪುಸ್ತಕ ಮ್ಯಾನ್ಸನ್ ಬಾರ್ ನಲ್ಲಿ ಈ ಪ್ರದೇಶಗಳಲ್ಲಿ ಟೈಫಾಯಿಡ್ ಎಂದು ಅಂದಾಜಿಗೆ ಚಿಕಿತ್ಸಲಾಗುವ   ಹಲವು ಕೇಸ್ ಗಳು  ಮುಂದುವರಿದ ವೈರಲ್ ಕಾಯಿಲೆಗಳು ಎಂದು ಉಲ್ಲೇಖಿಸಿದ್ದನ್ನು ಓದಿದ ನೆನಪು . ಇದೇ ರೀತಿ ಡೆಂಗೂ ಜ್ವರ ದವರು ಪ್ಲಾಟೇಲೆಟ್ ಕಡಿಮೆ ಎಂದು ಬೆಂಗಳೂರು ಮಂಗಳೂರು ಇತ್ಯಾದಿ ಊರುಗಳಿಂದಲೂ ,ಸುತ್ತು ಮುತ್ತಲ ಹಳ್ಳಿಗಳಿಂದಲೂ ಬರುತ್ತಾರೆ .ನಾನು ಅದಕ್ಕೆಂದು ಏನೂ ಕೊಡುವುದಿಲ್ಲ . ತನ್ನಿಂದ ತಾನೇ ಅದು ಸರಿ ಆಗುವುದು . ಕೆಲವರು ಅದು ನಮ್ಮ ಕೈ ಗುಣದಿಂದ ಎನ್ನುವರು .ಉಳಿದವರು ತಾವು ತಿಂದ ಕಿವಿ ಮತ್ತು ಪಪ್ಪಾಯಿ ಕಾರಣ ಎನ್ನುವರು . 

ಅಯಾಚಿತ ಅನರ್ಹ ಹೊಗಳಿಕೆ ಬಂದಾಗ ತೆಗಳಿಕೆ  ಬರದೇ ಇರುತ್ತದೆಯೇ .? ಸ್ತ್ರೀ ರೋಗ ತಜ್ಞೆಯರಿಗೆ ಇದು ಬರುವದು ಹೆಚ್ಚು .ಆಸ್ಪತ್ರೆಯಲ್ಲಿ ಇಂದು ಡಿಸ್ಚಾರ್ಜ್ ಆಗುವಾಗ ಸಿಹಿ ತಿಂಡಿ ಸಿಗುವುದು ಅವರಿಗೆ ಮಾತ್ರ. ಅದರಂತೆ ಅನೀರಿಕ್ಷಿತ  ರಕ್ತಸ್ರಾವ ,ಶಿಶು ವಿನ  ಅನಾರೋಗ್ಯ ಆದಾಗ ಅವರು ತೆಗೆಳಿಕೆ ಕೇಳ ಬೇಕಾಗುತ್ತದೆ . ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದು . ಇಲ್ಲಿಯ ವರೆಗೆ ಇಂದ್ರ ಚಂದ್ರ ,ಧನ್ವನ್ತರಿ ಎಂದು ಹೊಗಳುತ್ತಿದ್ದವರಿಗೆ ಇದ್ದಕ್ಕಿದ್ದಂತೆ  ವೈದ್ಯರು ರಾಕ್ಷಸರಂತೆ ಕಾಣುತ್ತಾರೆ . ಉಳಿದ ಸ್ಪೆಸಿಯಾಲಿಟಿ ಗಳಲ್ಲಿಯೂ ಇಂತಹ ಪ್ರಕರಣ ನಡೆಯುತ್ತಲಿರುತ್ತವೆ . ಕೆಲವೊಮ್ಮೆ ವೈದ್ಯರ ಕಡೆಯಿಂದ ಲೋಪ ಆಗಿರ ಬಹುದಾದರೂ , ಬಹಳ ಕಡೆ  ಅವರು ಧರ್ಮಕ್ಕೆ ಬೈಗಳು ತಿನ್ನುವರು . ವೈದ್ಯರೂ ಮನುಷ್ಯರೇ . ತಾವು ಚಿಕೆತ್ಸೆ ಮಾಡುವ ರೋಗಿಯು ನಿರೀಕ್ಷಿತ ಸ್ಪಂದನೆ ಕೊಡದಿದ್ದರೆ ಅವರ ಸ್ಟ್ರೆಸ್ ಕೂಡಾ ಹೆಚ್ಚುವದು ,ಮನಶಾಂತಿ ಕಡಿಮೆ ಆಗುವದು . 

ಕೆಲವೊಮ್ಮೆ ನಾನು ಕೆಲಸ ಮುಗಿಸಿ ಮನೆಗೆ ಹೋದಾಗ ಮುಖ ಮ್ಲಾನ ವಾಗಿ ಇರುವುದು .ಆಗ ಮನೆಯವರು  ಸಂಜೆ ಯ  ತಿಂಡಿ ಕಾಪಿ ಸರಿಯಾಗಿಲ್ಲ ಎಂದು ತಿಳಿದು ಕೊಂಡು ನಿಮಗೆ ಹೇಗೆ ಮಾಡಿ ಹಾಕಿದರೂ ಸರಿ ಆಗುವುದಿಲ್ಲ ಎನ್ನುವರು .ವಾಸ್ತವದಲ್ಲಿ ನಾನು ಆಸ್ಪತ್ರೆಯ ರೋಗಿಯ ಬಗ್ಗೆ ಚಿಂತಿಸುತ್ತ ಇರುವೆನು .ಆಸ್ಪತ್ರೆಯ ರೋಗಿಗಳ ಮಾಹಿತಿ ಮನೆಯಲ್ಲಿ ಹೇಳುವುದಿಲ್ಲ .. ಅದು ವೈದ್ಯ ನೀತಿಗೆ ವಿರುದ್ಧ

 

ಶುಕ್ರವಾರ, ಅಕ್ಟೋಬರ್ 14, 2022

ದಾನ ವಿಧಾನಗಳು

ದಾನಿಗಳಲ್ಲಿ ಹಲವು ವಿಧ .ಕೆಲವರು ತಾವು ಕೊಡುವುದು  ಕಿಂಚಿತ್ ಆದರೂ ಊರೆಲ್ಲಾ ಜಾಹೀರು ಮಾಡಿ ಜನ ತಿಳಿಯ ಬೇಕು ಎಂದು ಬಯಸುವರು . ಈಗಂತೂ ಫೋಟೋ ,ವೀಡಿಯೋ ಮತ್ತು ಪ್ಲೆಕ್ಸ್ ಗಳು ಇದಕ್ಕೆ ಸುಲಭ ಸಹಾಯ ದಾರಿಗಳು . ಇವರಲ್ಲಿ ಕೆಲವರು ದಾನ ಪುಣ್ಯವನ್ನು ಬೇರೆ ರೀತಿ ನಗದೀ ಕರಿಸುವ ಆಸೆ ಉಳ್ಳವರು . 

ಇನ್ನು ಕೆಲವರು ದೊಡ್ಡ ಮೊತ್ತದ ಸಹಾಯ ಮಾಡಿ ಪ್ರಚಾರ ಮಾಡುವರು .ತಮ್ಮಂತೆ ಉಳಿದವರೂ ಮಾಡಲಿ ಎಂಬ ಉದ್ದೇಶ ಇರಬಹುದು . ಸಾರ್ವಜನಿಕ ಹಣ ಒಂದು ಕಡೆ ಲೂಟಿ ಮಾಡಿ ಇನ್ನೊಂದು ಕಡೆ ಬಹಿರಂಗವಾಗಿ ದಾನ ಶೂರ ಎನಿಸಿ ಕೊಂದವರು ಕೂಡಾ ಸಮಾಜದಲ್ಲಿ ಸಲ್ಲುವರು .

ಇನ್ನು ಹಲವರು ತಾವು ಒಂದು ಕೈಯ್ಯಿಂದ ಕೊಟ್ಟುದು ಇನ್ನೊಂದು ಕೈಗೆ ತಿಳಿಯ ಬಾರದು ಎಂಬ ಸಿದ್ದಾಂತ ಪಾಲಿಸುವವರು . ಇಲ್ಲಿ ದಾನ ಕೊಳ್ಳುವವನ ವೈಯುಕ್ತಿಕ ಪ್ರತಿಷ್ಠೆ ಗೆ ಕುಂದು ಬರ ಬಾರದು ಎಂದ ಸದುದ್ದೇಶ ಇದೆ .

ಪ್ರೊ ಹಿರಿಯಣ್ಣ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಇದ್ದವರು .ಇವರು ತತ್ವ ಶಾಸ್ತ್ರ ತರಗತಿಗಳನ್ನೂ ತೆಗೆದು ಕೊಳ್ಳುತ್ತಿದ್ದು ಬಹಳ ಪ್ರಸಿದ್ದ ,ಅವರ ನೋಟ್ಸ್ ಗಳು ಪುಸ್ತಕ ರೂಪದಲ್ಲಿ ಬಂದಿವೆ .ಎಸ್ ರಾಧಾಕೃಷ್ಣನ್ ಅವರ ಸಮಕಾಲೀನ ರಾಗಿದ್ದವರು.

ಡಿ ವಿ ಜಿ ಯವರು  ಜ್ನಾಪಕ ಚಿತ್ರ ಶಾಲೆಯಲ್ಲಿ ಅವರ ಬಗ್ಗೆ ಹೀಗೆ ಬರೆಯುತ್ತಾರೆ .

ಹತ್ತಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.ಅದು ಸಂತೋಷ ಪೂರ್ವಕವಾದ ಸಹಾಯ .ಆದರೆ ಒಂದು ವಿಶೇಷ .ಸಹಾಯ ತೆಗೆದು ಕೊಂಡ ಯಾರೂ ಅದನ್ನು ಮತ್ತೊಬ್ಬರಿಗೆ ಉಸುರ ಕೂಡದು .ಇದು ಕಟ್ಟಾಜ್ನೆ .ನನಗೆ ತಿಳಿದ ಒಬ್ಬ ಸಂಸ್ಕೃತ ವಿದ್ಯಾರ್ಥಿ ಎಂ ಎ ಸಂಸ್ಕೃತ ಓದುತ್ತಿದ್ದ .ಆತನ ಹೆಸರು ಹರಿ ಎಂದು ಇಟ್ಟು ಕೊಳ್ಳೋಣ .ಆತನಿಗೆ ಹಿರಿಯಣ್ಣನವರು ಗುಪ್ತವಾಗಿ ಮಾಸಾಶನ ಕೊಡುತ್ತಿದರು .ಅವನ ಸಹಪಾಠಿ ಯೊಬ್ಬ ಕಷ್ಟದಲ್ಲಿ ಇದ್ದಾಗ ಅದನ್ನು ಹರಿಯೊಡನೆ ಹೇಳಿಕೊಂಡನು .ಹರಿ ತಾನು ಹಿರಿಯಣ್ಣ ನವರಿಂದ ಪಡೆಯುತ್ತಿದ್ದ ಸಹಾಯವನ್ನು ಹೇಳಿ ಆ ಉದಾರಿಗಳನ್ನು ಆಶ್ರಯಿಸುವಂತೆ ಸಲಹೆ ಕೊಟ್ಟ .ಈ ಎರಡನೆಯ ವಿದ್ಯಾರ್ಥಿ ಹಿರಿಯಣ್ಣನವರಲ್ಲಿಗೆ ಹೋಗಿ ತನ್ನ ಕತೆಯನ್ನು ಹೇಳಿಕೊಂಡ .ಹಿರಿಯಣ್ಣನವರು ಆತನಿಗೂ ಸಹಾಯ ಕೊಡುವುದಾಗಿ ಭರವಸೆ ಕೊಟ್ಟು ಹಾಗೆಯೇ ನಡೆಸಿ ಕೊಂಡರು.

ಹರಿಗಾದರೋ ಅಂದಿನಿಂದ ಮೂರು ತಿಂಗಳ ಮಾಸಾಶನ ಕೊಡಬೇಕಾದದ್ದು ಉಳಿದಿತ್ತು .ಇನ್ನು ಮುಂದಿನ ಮೂರು ತಿಂಗಳ ಮೊಬಲಗನ್ನು ಒಟ್ಟಿಗೆ ಪೊಟ್ಟಣ ಕಟ್ಟಿ ಹರಿ ಬಂದಾಗ ಆತನ ಕೈಗೆ ಇತ್ತರು.ಆತ ಅದನ್ನು ಬಿಚ್ಚಿ ನೋಡಿ ಆಶ್ಚರ್ಯ ಸೂಚಿಸಲು ಹಿರಿಯಣ್ಣ 'ನೀವು ಈ ಸಂಗತಿಯನ್ನು ಯಾರಿಗೂ ತಿಳಿಸಬಾರದು ಎಂದು ಹೇಳಿದ್ದೆ .ನೀವು ಹೇಳಿ ಬಿಟ್ಟಿರಿ .ಒಳ್ಳೆಯದು ,ಇಲ್ಲಿಗೆ ನಾನು ಕೊಟ್ಟ ಮಾತು ನಡೆದಿದೆಯಲ್ಲಾ "ಎಂದರು .

 M. Hiriyanna.jpgBuy Outlines Of Indian Philosophy Book Online at Low Prices in India |  Outlines Of Indian Philosophy Reviews & Ratings - Amazon.in

ಗುರುವಾರ, ಅಕ್ಟೋಬರ್ 13, 2022

ಹೀರೇ ಕಾಯಿ

 Ridge gourd (Turai) - Greenoyardಮೊನ್ನೆಪೇಟೆಯಿಂದ  ಊರ ಹೀರೇ ಕಾಯಿ ತಂದಿದ್ದು ನಿನ್ನೆ ಪಲ್ಯ ಮಾಡಿದ್ದರು . ಬಹಳ ದಶಕಗಳ ನಂತರ  ಒರಿಜಿನಲ್ ಹೀರೇ ಕಾಯಿ ರುಚಿ ;ಇತ್ತೀಚೆಗೆ ಗಟ್ಟದ ಮೇಲಿನ ಮತ್ತು ಊರಿನ ಹೀರೇ ಕಾಯಿಗೆ ಕೂಡಾ ಆ ರುಚಿ ಇರಲಿಲ್ಲ . ಸಂತೋಷ ದಿಂದ  ಮನಸು ಹಿಗ್ಗಿ ಹೀರೇ ಕಾಯಿ ಆಯಿತು .ನಿಜಕ್ಕೂ ಹೀರೇ ಕಾಯಿ ಹಿಗ್ಗುವುದಿಲ್ಲ ,ಅದು ಸುಗ್ಗುವುದು (ಗಾತ್ರದಲ್ಲಿ ಕಡಿಮೆ ಆಗುವುದು ).ಒಂದು ಕಿಲೋ ಹೀರೇ ಕಾಯಿ ಗೆ ಒಂದು ಮೂರು ಮಂದಿಗೆ ಹೊತ್ತಿನ ಪಲ್ಯ ಆಗ ಬಹುದು . ಅದಕ್ಕೇ ಇರ ಬೇಕು ಮದುವೆ ಸಮಾರಂಭ ಗಳಿಗೆ ಇದರ ಪಲ್ಯ ಮಾಡುವುದು ಕಂಡಿಲ್ಲ .

ಹೀರೇ ಪದಾರ್ಥ ಮಾಡುವಾಗ ತೆಗೆದ ಸಿಪ್ಪೆಯನ್ನು ಚಟ್ನಿ ಮಾಡುತ್ತಿದ್ದರು. ನಾರಿನಿಂದ ಕೂಡಿದ ಸಿಪ್ಪೆ ಕರುಳಿನ ಆರೋಗ್ಯಕ್ಕೆ ಒಳ್ಳೆಯದು .

ಇತ್ತೀಚೆಗೆ ಊರ ಬೆಂಡೆ ಎಂದು ಮರುಕಟ್ಟೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಗುವ ತರಕಾರಿ ನೋಡಲು ಮಾತ್ರ ದೊಡ್ಡ ದಿದ್ದು ಬಾಲ್ಯದಲ್ಲಿ ಸವಿದ ಬೆಂಡೆ ಪರಿಮಳ ಕಾಣೆ .

ಲಕ್ಷ್ಮೀಶ ತೊಲ್ಪಾಡಿ ಮೆಚ್ಚಿಗೆ ಪತ್ರ


 

ಮಂಗಳವಾರ, ಅಕ್ಟೋಬರ್ 11, 2022

ಹೀಗೊಬ್ಬ ಓದುಗ ನ ಅಭಿಪ್ರಾಯ ಇಂದ್ರ ಭವನದ ಚೌ ಚೌ ಬಾತ್ ನಂತೆ

MANGALORE : Indra Bhavan at balmatta Karnataka , Mangaluru : 21/02/2018 : Hotel Indra Bhavan in Mangaluru. Photo: H_S_ Manjunath

 

ಇಂದು  ಸಂಜೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು . ನನ್ನ ಕೃತಿ ವೈದ್ಯರ ಚೌ ಚೌ ಬಾತ್ ಓದಿ ಮುಗಿಸಿದ್ದು ,ತುಂಬಾ ಮೆಚ್ಚಿ ಕೊಂಡೆ ಎಂಬ ತಾತ್ಪರ್ಯ . ಅದರಲ್ಲಿ ಹೆಸರು ಇರದ ಕಾರಣ ಧನ್ಯವಾದ ಸಮರ್ಪಿಸಿ ಅವರ ಪರಿಚಯ ಕೇಳಿದೆ .ಕೂಡಲೇ ಫೋನ್ ಬಂದು ತಾವು ಮಂಗಳೂರು ಇಂದ್ರ ಭವನದ ಮಾಲೀಕ ಪ್ರಕಾಶ ಉಡುಪ ,ನಿಮ್ಮ ಮೊದಲ ಪುಸ್ತಕ ಕೂಡಾ ಕೊಂಡು ಓದಿ ಮೆಚ್ಚಿ ಕೊಂಡಿದ್ದೇನೆ ಎಂದರು . ನನಗೆ ಆಶ್ಚರ್ಯ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು . ಆಶ್ಚರ್ಯ ,ಸ್ವಯಂ ಇಂಜಿನಿಯರ್ ಆಗಿದ್ದು ತಂದೆಯವರು ಸ್ಥಾಪಿಸಿದ ಜನಪ್ರಿಯ ಹೋಟೆಲ್ ನಡೆಸುತ್ತಿರುವ ವ್ಯಕ್ತಿಗೆ ನನ್ನಂತಹ ಅಜ್ಞಾತ ನ  ಪುಸ್ತಕ ಓದಲು ಸಮಯ,ವ್ಯವಧಾನ ಮತ್ತು ಆಸಕ್ತಿ ಹೇಗೆ ಬಂತು ?ಸಂತೋಷ ನನ್ನ ಮೆಚ್ಚಿನ ಹೋಟೆಲ್ ಇಂದ್ರ ಭವನ ವರು ಎಂದು . 

ಇಂದ್ರ ಭವನ ,ವಿಶ್ವ ಭವನ ಎಲ್ಲಾ ಮಂಗಳೂರಿನ ಐಕಾನ್ ಗಳು . ವಿಶ್ವ ಭವನ ಕೂಡಾ ಅವರೇ ನಡೆಸುತ್ತಿದ್ದರು . ಅಲ್ಲಿನ ಸಜ್ಜಿಗೆ ಬಜಿಲು ,ಬನ್ಸ್ ,ತುಪ್ಪಾ ದೋಸೆ ಪ್ರಸಿದ್ಧ . ನಮ್ಮ ಕಿಸೆಗೂ ಭಾರವಾಗದ ದರ ಪಟ್ಟಿ . ಹಿಂದೆ ಕಲೆಕ್ಟರ್ ಗೇಟ್  ಜಂಕ್ಷನ್ ನಿಂದ ಸ್ವಲ್ಪ ಮುಂದೆ ರಾಜ ರಸ್ತೆ ಬದಿಯಲ್ಲಿ ಇದ್ದು , ಈಗ ಅಲ್ಲೇ ಮುಂದೆ ಆರ್ಯ ಸಮಾಜ ರಸ್ತೆ ಆರಂಭ ಆಗುವಲ್ಲಿ ಎಡ ಬದಿಯಲ್ಲಿ ಇದೆ . ಸ್ವಚ್ಛತೆ ಮತ್ತು ಸ್ವಾದ  ಎರಡು ಸಮ್ಮಿಳಿತ .  

  ನನ್ನ ಬರಹಗಳು ಸಾಹಿತ್ಯಿಕವಾಗಿ ಗುಣ ಮಟ್ಟ ದವು ಎಂಬ ನಂಬಿಕೆ ನನಗೆ ಇಲ್ಲ . ಅವು ನನ್ನ ಮನಸಿನಲ್ಲಿ ಹರಿದಾಡುವ ಯೋಚನೆಗಳ ಮೂರ್ತ ರೂಪ .ಹಿಂದೆ ನಮ್ಮ ಅಕ್ಕ ಪಕ್ಕದ ,ಗೆಳೆಯರ ,ಮತ್ತು ಕುಟುಂಬದ ಹಿರಿ ಕಿರಿಯರ ಬಳಿ ಹಂಚಿ ಕೊಳ್ಳುತ್ತಿದ್ದಂತಹ  ,ಮೆಲುಕು ಹಾಕಿ ಕೊಳ್ಳುತ್ತಿದ್ದಂತ ವಿಷಯಗಳು  .ಈಗ ಅದನ್ನು ಯಾರಲ್ಲಿ ಹೇಳಲಿ ?ಅದಕ್ಕೆ ಬರೆಯುತ್ತಿದ್ದೇನೆ .  ಅಪರಿಚಿತ ಮತ್ತು ಪರಿಚಿತರು ಮೆಚ್ಚುಗೆ ಸೂಚಿಸಿದಾಗ ಸಂತೋಷ ಆಗುತ್ತದೆ . ಮೊನ್ನೆ ಶನಿವಾರ ಬೆಂಗಳೂರಿಗೆ ರೈಲು ಹಿಡಿಯಲು ಪುತ್ತೂರು ರೈಲ್ವೆ ನಿಲ್ದಾಣ ದಲ್ಲಿ ಕಾಯುತ್ತಿದ್ದಾಗ ಪ್ರಗತಿ ಪರ ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ ಬಹಳ ಹೊತ್ತು ಕೃತಿಯಲ್ಲಿ ತಾನು ಮೆಚ್ಚಿದ ಅಂಶಗಳನ್ನು ಫೋನ್ ಮಾಡಿ ತಿಳಿಸಿ ಸಂತಸ ವ್ಯಕ್ತ ಪಡಿಸಿದರು . ನನ್ನ ಮಗ ಸೊಸೆ ಬೆಂಗಳೂರಿಗೆ ತಲುಪಿದ್ದು ,ಅವರನ್ನು ಮತ್ತು ನಮ್ಮ ಪುಟ್ಟ ಮೊಮ್ಮಗನನ್ನು ಮಾತನಾಡಿಸಿ ಸೋಮವಾರ ಪುನಃ ಆಸ್ಪತ್ರೆ ಕೆಲಸಕ್ಕೆ ಹಾಜರ್ ಆಗಿದ್ದೇನೆ
 

ಶನಿವಾರ, ಅಕ್ಟೋಬರ್ 8, 2022

ಡಾ ಒ ಪಿ ಕಪೂರ್

 Dr. Om Prakash Kapoor (Dr. O P Kapoor's Clinic) - General Physician Doctors  - Book Appointment Online - General Physician Doctors in Fort, Mumbai -  JustDial

ಹುಟ್ಟು ಅಧ್ಯಾಪಕರು ಎಂಬ ಮಾತಿದೆ .  Born teacher ಅನ್ನುತ್ತಾರೆ . ಇವರು born to be teachers ಕೂಡಾ ಆಗಿರುತ್ತಾರೆ .ಕೆ ಎಂ ಸಿ ಹುಬ್ಬಳ್ಳಿಯಲ್ಲಿ  ಡಾ ನಾರಾಯಣ ಶೆಟ್ಟಿ ,ಕೌಲ್ಗುಡ್ ಸಹೋದರರು ,ಡಾ ಕೆ ಜಿ ನಾಯಕ್ ,ಡಾ ಗಿರಿ ಗೌಡ   ,ಮುಂದೆ ಚೆನ್ನೈ ಯಲ್ಲಿ ಡಾ ಕೆ ವಿ ತಿರುವೆಂಗಡಂ ,ಡಾ ಎಂ ಕೆ ಮಣಿ ,ಡಾ ಸೇತುರಾಮನ್ ಮುಂತಾದ ನನ್ನ ಗುರುಗಳು ಈ ಸಾಲಿಗೆ ಸೇರಿದವರು  . ಕೊನೆಯ ಮೂವರು  ಮೆಡಿಕಲ್ ಕಾಲೇಜು ನಿಂದ ನಿವೃತ್ತಿ ಬಳಿಕವೂ  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಾಠ ಮಾಡುತ್ತಿದ್ದು  ನಗರದ ಯಾವುದೇ ವಿದ್ಯಾರ್ಥಿ ಅವರ ತರಗತಿಗಳಿಗೆ ಹಾಜರಾಗ ಬಹುದಿತ್ತು . ಇವರ  ಇಂತಹ ತರಗತಿಗಳಿಗೆ ಹಾಜರಾಗುವ ಭಾಗ್ಯ ನನಗೆ ದೊರೆತಿತ್ತು . 

ಇಂತದೇ ಒಬ್ಬ ವೈದ್ಯ ಗುರು ಮೊನ್ನೆ ನಿಧನರಾದ ಡಾ ಓ ಪಿ ಕಪೂರ್ ಅವರು . ಮುಂಬೈಯ ಗ್ರಾಂಟ್ ಮೆಡಿಕಲ್ ಕಾಲೇಜ ನಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ,ಬಾಂಬೆ ಆಸ್ಪತ್ತೆಯ ಬಿರ್ಲಾ ಮಾತೋಶ್ರೀ ಸಭಾಗೃಹದಲ್ಲಿ ನಿಯತವಾಗಿ ಆಸಕ್ತ ವೈದ್ಯರಿಗಾಗಿ ಉಚಿತ ಉಪನ್ಯಾಸ ನಡೆಸುತ್ತಿದ್ದು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ಯಾವುದೇ ಕ್ಲಿಷ್ಟ ವಿಷಯವನ್ನು ಸರಳವಾಗಿ ತಿಳಿ ಹೇಳುವುದು ಅವರಿಗೆ ಕರತಾ ಮಲಕ ಆಗಿತ್ತು .ಮುಂಬೈಯಲ್ಲಿ ಬೇರೊಂದು ತರಬೇತಿಗೆ ಎರಡು ತಿಂಗಳಿಗೆ ಹೋಗಿದ್ದ ನಾನು ಇವರ ಕ್ಲಾಸ್ ಗಳಿಗೆ ಹೋಗಿ ಬಹಳ  ಕಲಿತಿರುವೆನು . 

 ಕೊರೊನ  ಸಮಯದಲ್ಲಿ ಯು ಟ್ಯೂಬ್ ಮೂಲಕ ತಮ್ಮ ಪ್ರವಚನ ಮುಂದುವರಿಸಿದ್ದ ಇವರ ವಿಡಿಯೋ ಗಳನ್ನೂ ಸಾವಿರಾರು ಮಂದಿ ವೀಕ್ಷಿಸಿದ್ದಾರೆ .ಇವರ ಓ ಪಿ ಕಪೂರ್ ಗೈಡ್ ಫಾರ್ ಜನರಲ್ ಪ್ರಾಕ್ಟಿಷನೆರ್ ಬಹು ಉಪಯುಕ್ತ ಮತ್ತು ಜನಪ್ರಿಯ . 

ಮಂಗಳೂರಿನಲ್ಲಿ ಸರ್ಜರಿ ಪ್ರಾಧ್ಯಾಪಕ ರಾಗಿದ್ದ  ಡಾ ಸಿ ಆರ್ ಬಲ್ಲಾಳ್ ಕೂಡಾ ಈ ವರ್ಗಕ್ಕೆ ಸೇರಿದ ಒಬ್ಬ ವೈದ್ಯ ಗುರು . ವಿದ್ಯಾರ್ಥಿ ಗಳು ಇದ್ದಲ್ಲಿ ಪಾಠ ಮಾಡಲು ಎವರ್ ರೆಡಿ . 

 Kapoor's Guide for General Practitioners (12 Volume Set) By Kapoor