ಬೆಂಬಲಿಗರು

ಬುಧವಾರ, ಜೂನ್ 8, 2022

ಇತ್ತೆ ಬರ್ಪೆ ಸಿ0ಡ್ರೋಮ್

 ಒಂದು ಒಳ್ಳೆಯ ಸಂಗೀತ ಕಚೇರಿ . ತುಂಬಿದ ಸಭಾಂಗಣ . ತನ್ಮಯನಾಗಿ ಕೇಳುತ್ತಿದ್ದೆ .ನನ್ನ ಪಕ್ಕದಲ್ಲಿ ಕುಳಿತಿದ್ದ ಮಿತ್ರರು ಈಗ ಬರುತ್ತೇನೆ ಸೀಟ್ ನೋಡಿಕೊಳ್ಳಿ ಎಂದು ಎದ್ದು ಹೋದರು .ವಾಶ್ ರೂಮ್ ಗೋ ಟೀ ಸೇವನೆಗೋ ಇರಬೇಕು ಎಂದು ಕೊಂಡೆ . ಎಷ್ಟು ಹೊತ್ತಾದರೂ ಆಸಾಮಿ ಕಾಣೆ .ಖಾಲಿ ಸೀಟ್ ಇದೆ ಎಂದು ಲೇಟ್ ಆಗಿ ಬಂದ ಅನೇಕರು 'ಇಲ್ಲಿ ಯಾರಾದರೂ ಇದ್ದಾರೆಯೇ ?"ಎಂದು ನನ್ನನ್ನು ಕೇಳುವರು .ಇಲ್ಲ ಇದ್ದಾರೆ ಎಂದು ನಾನು ಅನ್ನುವೆನು . ನನ್ನ ಏಕಾಗ್ರತೆಗೆ ಭಂಗ ಬರುತ್ತಿದ್ದುದು ಮಾತ್ರವಲ್ಲ ,ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಉಳಿದವರು ತಿಳಿಯುವರು . ಕಾರ್ಯಕ್ರಮ ಆಸ್ವಾದ ಸಾಧ್ಯವಾಗದೆ ನಾನೇ ಕೊನೆಗೆ ಎದ್ದು ಹೋಗ ಬೇಕಾಯಿತು . 

       ಹಾಗೆ ನನ್ನಲ್ಲಿ ಸೀಟ್ ನೋಡಿಕೊಳ್ಳಲು ಹೇಳಿ ಹೋದವರು ಪತ್ನಿಯ ಒತ್ತಾಯಕ್ಕೆ ಬಂದವರು ,ಅವರಿಗೆ ಸಂಗೀತದಲ್ಲಿ ಅಭಿರುಚಿ ಇರಲಿಲ್ಲ . ಅವರ ಮನೆಯವರು ಹೆಣ್ಣು ಮಕ್ಕಳ ಸಾಲಿನಲ್ಲಿ ಇದ್ದು ತಲ್ಲೀನರಾಗಿ ಇದ್ದರು . ನನ್ನ ಬಳಿ ಹೇಳಿ ಹೋದವರು ಪೇಟೆ ಇಡೀ ಸುತ್ತಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಬಂದರಂತೆ . 

                   ಹಿಂದೆ ಬಸ್ ನಲ್ಲಿ ಈ ರೀತಿ ಆಗುತ್ತಿತ್ತು .ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರುವಾಗ 'ಈಗ ಬರುತ್ತೇನೆ 'ಎಂದು ಪಕ್ಕದವರಲ್ಲಿ ಹೇಳಿ ಹೋಗುವರು .ಆಮೇಲೆ ಬಸ್ ಹೊರಡುವಾಗ ಅವರು ಕಾಣೆ . ಒಪ್ಪಿ ಕೊಂಡವರಿಗೆ ಟೆನ್ಶನ್ . 

ಬಸ್ ಸ್ಟಾಂಡ್ ಅನ್ನುವಾಗ ಕೆಲ ವರ್ಷಗಳ ಹಿಂದಿನ ದಿನಗಳು ನೆನಪಾಗುವವು . ಸ್ಟಾಂಡ್ ಗೆ ಬೇರೆ ಊರಿನಿಂದ ಬಸ್ ಬಂದೊಡನೆ ಒಳಗೆ ಇರುವವರನ್ನು  ಹೊರಗೆ ಇರುವವರು ತಮ್ಮ ಶಾಲು ,ಬೈರಾಸು ,ಚೀಲ ಇತ್ಯಾದಿ ಒಳ ತುರುಕಿ ಒಂದು ಸೀಟ್ ಇಡಿರಿ ಎಂದು ಅಂಗಲಾಚುವರು . ಆಮೇಲೆ ಹೇಗೋ ತುರುಕಿ ಕೊಂಡು ಒಳ ಬಂದು ಆಸೀನರಾದಾಗ ರಾಜ್ಯ ಗೆದ್ದ ಹೆಮ್ಮೆ . ಹಲವು ಬಾರಿ ಒಂದೇ ಸೀಟಿಗೆ ಇಬ್ಬರು ಹಕ್ಕು ಪ್ರತಿಪಾದಿಸಿ ಜಗಳ ಆಗುತ್ತಿದ್ದು ಬಸ್ಸಿನ ಒಳಗಿನ ಸೆಖೆಯ ತಾಪವನ್ನು ಏರಿಸುತ್ತಿತ್ತು .

ಸೋಮವಾರ, ಜೂನ್ 6, 2022

ವಿದ್ಯಾಭೂಷಣ


ನಿನ್ನೆ  ಟಿ ವಿ ಯಲ್ಲಿ ಉಡುಪಿಯಿಂದ  ವಿದ್ಯಾಭೂಷಣ ಅವರ ಸಂಗೀತ ಲೈವ್ ಆಗಿ  ಬರುತ್ತಿತ್ತು .ಭಾರೀ ಸೆಖೆ (ದಕ್ಷಿಣ ಕನ್ನಡದ್ದು "ಶೆಖೆ "ಎಂದು ವಿದ್ಯಾಭೂಷಣ ರೇ ಕಚೇರಿ ನಡುವೆ  ಮುಖ ಒರಸಿ ಕೊಂಡು ಹೇಳಿದರು )ನಡುವೆಯೂ ತುಂಬಿದ ಸಭಾಂಗಣ ,ಕೊನೆಯ ವರೆಗೂ . ವಿದ್ಯಾಭೂಷಣ ಅವರ  ಸಾಹಿತ್ಯ ಶುದ್ದಿ ,ಮತ್ತು  ಯುಕ್ತ ಉಗಾಭೋಗ ದೊಂದಿಗೆ ಕೀರ್ತನೆ ಪ್ರಸ್ತುತಿ ,ಮತ್ತು ಅವರ ಧ್ವನಿಯಲ್ಲಿಯೇ  ಇರುವ ದೈವೀಕತೆ   ಮತ್ತು ಎಲ್ಲಕ್ಕೂ ಕಳಶವಿಟ್ಟಂತೆ ಅವರ ಸರಳತೆ  ಇದು ಅವರ ಆಕರ್ಷಣೆಯ ಗುಟ್ಟು . 

 ನಿನ್ನೆಯ ಕಚೇರಿಯಲ್ಲಿ ಶ್ರೀ ಪ್ರಾದೇಶ್  ಆಚಾರ್ ಅವರ ವಯೊಲಿನ್  ಬಹಳ ಖುಷಿ ಕೊಟ್ಟಿತು . ಅವರ ನಗು ಮುಖ ,ಗಾಯಕ ಮತ್ತು ಸಾಹಿತ್ಯದ ಮನೋಧರ್ಮ ದ  ಚಂದ ಅನುಸರಣೆ  ಚೇತೋಹಾರಿ . ಬಹಳ ಪ್ರತಿಭಾವಂತ ರಾದ ಈ  ಯುವಕನಿಗೆ ಒಳ್ಳೆಯ ಭವಿಷ್ಯ ಇದೆ . 

ನನ್ನ ಮದುವೆ ಆದ ವರ್ಷ ,ಮನೆಯವರು ಸುಬ್ರಹ್ಮಣ್ಯ ಕ್ಕೆ ಹೋಗುವ ಆಸೆ ವ್ಯಕ್ತ ಪಡಿಸಿದ್ದರಿಂದ ಒಂದು ಸಂಜೆ ಅಲ್ಲಿಗೆ ಹೋಗಿದ್ದೆವು . ಆಗಿನ್ನೂ ವಿದ್ಯಾಭೂಷಣ ಅವರು ಮಠ ದಲ್ಲಿ  ಸ್ವಾಮಿಗಳಾಗಿ ಇದ್ದರು .ಗಾಯಕರಾಗಿ ಪ್ರಸಿದ್ದಿ ಪಡೆದಿದ್ದರು .ಸುಬ್ರಹ್ಮಣ್ಯ ದರ್ಶನ ಆದ ಮೇಲೆ ವಿದ್ಯಾಭೂಷಣ ರನ್ನು ಕಾಣುವ ಆಸೆ ವ್ಯಕ್ತ ಪಡಿಸಿದಾಗ ಒಡನೆಯೇ ಒಪ್ಪಿಗೆ ಸಿಕ್ಕಿ ಕಂಡು ಮಾತನಾಡಿಸಿದೆವು .ಅವರ ನೈಜ ಸರಳತೆ ಗೆ ಮಾರು ಹೋದೆವು .ಅಂದು ಏಕಾದಶಿ ಆಗಿದ್ದುದರಿಂದ ನಮಗೆ ಊಟ ಹಾಕಲು ಆಗುವುದಿಲ್ಲವಲ್ಲಾ ಎಂದು ಬೇಸರ ಪಟ್ಟು ಕೊಂಡರು . 

ಹಿಂದೆ ಹೆಚ್ಚಾಗಿ ಅವರಿಗೆ ಎಂ ಎಸ ಗೋವಿಂದಸ್ವಾಮಿ ವಯೊಲಿನ್ ನಲ್ಲಿ ಮತ್ತು  ದಿ ಎಂ ಆರ್ ಸಾಯಿನಾಥ್(ಇವರೂ ಇವರ ಮಕ್ಕಳೂ ನನ್ನ ಆಪ್ತರು ) ಮೃದಂಗ ದಲ್ಲಿ ಸಾಥ್ ಕೊಡುತ್ತಿದ್ದರು

ಶನಿವಾರ, ಜೂನ್ 4, 2022

ಬಯಕೆ

ಒಂದು ಮಲಯಾಳ ಸಿನಿಮಾ ಹೆಸರು ಮರೆತು ಹೋಗಿದೆ .ಹೊಸತಾಗಿ ಮದುವೆ ಆದ ತರುಣದಲ್ಲಿ ಪತ್ನಿ ಗರ್ಭಿಣಿ ಎಂದು ತಿಳಿದಾಗ ಗಂಡ ಅವಳನ್ನು ಸರ್ಪ್ರೈಸ್ ಆಗಿ ಖುಷಿ ಪಡಿಸುವಾ ಎಂದು ಊರೆಲ್ಲಾ ಹುಡುಕಿ ಹುಳಿ ಮಾವಿನ ಕಾಯಿ ತಂದು ಕೊಡುತ್ತಾನೆ .ಅದನ್ನು ಕಂಡು ಆಕೆ 'ಇದು ಯಾಕೆ ತಂದಿರಿ ,ನನಗೆ ಇದು ಬೇಡ "ಎನ್ನುತ್ತಾಳೆ .ಮತ್ತೇನು ತಿನ್ನಲು ಆಸೆ ಎನ್ನಲು 'ಮಸಾಲೆ ದೋಸೆ 'ಎನ್ನುತ್ತಾಳೆ . ಒಬ್ಬೊಬ್ಬರಿಗೆ ಒಂದೊಂದು ಬಯಕೆ . ಬಯಕೆಗಳಲ್ಲಿ ಎರಡು ವಿಧ .ಒಂದು ಆಹಾರ ವಸ್ತುಗಳಾದ ಹುಳಿ ವಸ್ತುಗಳು ,ಐಸ್ ಕ್ರೀಮ್ ,ಚಾಕಲೇಟ್ ಇತ್ಯಾದಿ ಆದರೆ ಇನ್ನೊಂದು ಅಹಾರೇತರ ವಸ್ತುಗಳಾದ  ಮಣ್ಣು ,ಇದ್ದಲು ಇತ್ಯಾದಿ . ಈ ತರಹದ ಬಯಕೆ ಗರ್ಭಿಣಿಯಲ್ಲಿ ಕೊರತೆ ಇರುವ ವಸ್ತುಗಳ ಪರೋಕ್ಷ ವಾದ ಬೇಡಿಕೆಗಳು ಎಂದು ತಿಳಿದಿದ್ದರು . ಗರ್ಭಿಣಿಯರ ಸೀಮಂತ ಶಾಸ್ತ್ರಕ್ಕೆ ನಮ್ಮಲ್ಲಿ ಬಯಕೆಯ  ಮದುವೆ ಎಂದು ಕರೆಯುತ್ತಾರೆ 

 ಆರೋಗ್ಯವಂತ ಗಂಡು ಹೆಣ್ಣು ಇಬ್ಬರಲ್ಲೂ ಪ್ರಾಯಕ್ಕೆ ಬಂದಾಗ ಮದುವೆಯ ಬಯಕೆ ಆಗುತ್ತದೆ .ಅದಕ್ಕೆ ನಮ್ಮಲ್ಲಿ   ಮೂಲ ಪ್ರವೃತ್ತಿ (ಸಂತಾನ ಅಭಿವೃದ್ಧಿ ,ರಕ್ಷಣೆ ಇತ್ಯಾದಿ )ಜನಕ  ಹಾರ್ಮೋನ್ ಗಳೇ ಕಾರಣ . 

ಮೊದಲು ಮದುವೆಯ ಬಯಕೆ ,ಆಮೇಲೆ ಬಯಕೆಯ ಮದುಮ್ಮೆ

ಶುಕ್ರವಾರ, ಜೂನ್ 3, 2022

ತಂದ ಪಾಪ ಕೊರೆದು ಪರಿಹಾರ

'ಹಲಸಿನ ಹಣ್ಣಿನ ಮೇಲೆ ಪ್ರೀತಿ ಜತೆಗೆ ಅಂಟು  ಮಯಣದ ಭೀತಿ "ಇದು ನನ್ನ ಗಾದೆ . ಮಿತ್ರರು ಪ್ರೀತಿಯಿಂದ ಒಂದು ಹಲಸಿನ ಹಣ್ಣು ಕೊಟ್ಟಿದ್ದರು . ನನ್ನ ಪತ್ನಿಯ ಒಂದು ಕಂಡೀಶನ್ ಇದೆ ;ಹಣ್ಣು ಎಷ್ಟು ಬೇಕಾದರೂ ಇರಲಿ ಅದನ್ನು ಕೊರೆಯಲು ಸೇರಬೇಕು .ನಾನೂ ಹೇಗೂ ವಿವಿದೋದ್ದೇಶ ಸಹಕಾರಿ ಸಂಘದ ಹಾಗೆ ಎಲ್ಲದಕ್ಕೂ ತಯಾರು . 

ಹಿಂದೆ ಹುಟ್ಟೂರಿನಲ್ಲಿ ಹಲಸಿನ ಹಣ್ಣು ಕೊರೆದು ಕಡಿಯಿಂದ ಬೇರೆ ಮಾಡಲು ಬೇಕಾದಷ್ಟು ಮಕ್ಕಳ ಸೈನ್ಯ ಇರುತ್ತಿತ್ತು . ಕೆಲವರು ತುಂಡು ಮಾಡಲು ,ಕೆಲವರು ಸ್ವಚ್ಚ ಮಾಡಲು ಮತ್ತು ಇನ್ನು ಒಬ್ಬಿಬ್ಬರು ಹಾಳೆಯಲ್ಲಿ ಅದನ್ನು ಬಾಳು ಅಥವಾ ಮಚ್ಚು ವಿನಿನಿಂದ ಕೊಚ್ಚಲು. ಇನ್ನು ಕೆಲವರು ಬಾಳೆ ಎಲೆಯಲ್ಲಿ ಹಣ್ಣು ಮತ್ತು ಅಕ್ಕಿ ಹಿಟ್ಟು ಕಲಸಿ ಮಡಿಸುವರು  .ಹಲಸಿನ ಹಣ್ಣಿನ ಸೀಸನ್ ನಲ್ಲಿ ಸೊಳ್ಳೆಗಳು ಕೂಡಾ ಇರುತ್ತಿದ್ದು ನಮ್ಮ ಕೈ ಮಯಣ ಮಾಯವಾಗುವ ವರೆಗೆ ಕಾದು ಬಂದು ಬೆನ್ನಿಗೆ ಕಚ್ಚುತ್ತಿದ್ದವು . ನಾವು ಮರು ಆಕ್ರಮಣ ಮಾಡುವಂತಿಲ್ಲ . ರಥ ಉರುಳಿದ ಕರ್ಣನ ಮೇಲೆ ಅರ್ಜುನ ಧಾಳಿ ಮಾಡಿದಂತೆ .ಇಲ್ಲಿ ಯುದ್ಧ ಧರ್ಮ ಇಲ್ಲ . ಯಾರಾದರೂ ಹಲಸಿನ ಹಣ್ಣಿಗೆ ಕೈ ಹಾಕದೇ ಇದ್ದವರು ಇದ್ದರೆ ಸೊಳ್ಳೆ ಹೊಡೆಯಲು ಹೇಳುತ್ತಿದ್ದು ಅವರು ಬೇಕೆಂದೇ ಜೋರಾಗಿ ಬಡಿಯುವರು . ಈಗ ಮೊಬೈಲ್ ರಿಂಗ್ ಆದರೆ ಮುಟ್ಟುವಂತಿಲ್ಲ 

ಹಲಸಿನ ಮಯಣವನ್ನು ಒಂದು ಕೋಲಿನ ತುದಿಯಲ್ಲಿ ಉಂಡೆ ಮಾಡಿ  ಬಡವರ ಫೆವಿಕಾಲ್ ನಂತೆ ಬಳಸುತ್ತಿದ್ದರು . ಬೇಳೆ ಮುಂದೆ ಖರ್ಚಿಗೆ ,ಬಾರ್ಟರ್ ವ್ಯವಹಾರಕ್ಕೆ ಶೇಖರಣೆ ,ರೆಚ್ಚೆ  ಹಟ್ಟಿಗೆ ಹಾಕಿದರೆ ದನಗಳು ಮೆಲ್ಲುತ್ತಿದ್ದವು . 

ಈಗ ಪೇಟೆಯಲ್ಲಿ ಈ ರೆಚ್ಛೆ ಇತ್ಯಾದಿ ಗಳನ್ನು  ಡಿಸ್ಪೋಸ್ ಮಾಡುವುದೇ ದೊಡ್ಡ ಚಿಂತೆ . 

ಇಷ್ಟೆಲ್ಲಾ ಪಟ್ಟ  ಕಷ್ಟ  ಅಟ್ಟಿನಳಗೆ ಯಲ್ಲಿ ಹಲಸಿನ ಹಣ್ಣಿನ ಕೊಟ್ಟಿಗೆ ಅಥವಾ ಕಡುಬು ಬೇಯುವಾಗ ಬರುವ ಪರಿಮಳ ದೊಡನೆ ಆವಿಯಾಗಿ ಹೋಗುವದು . 

 Why Jackfruit Might Save the World

ಒಂದು ವಿಚಾರ

ಜೀವಂತ ವ್ಯಕ್ತಿಯ ಅಂಗಾಂಶ ವನ್ನು   ಹೊರ ತೆಗೆದು ರೋಗ ಪತ್ತೆಗಾಗಿ ವೈಜ್ಞಾನಿಕ ಪರೀಕ್ಷಣೆಗೆ ಒಳ ಪಡಿಸುವುದನ್ನು ಬಯಾಪ್ಸಿ  ಎನ್ನುತ್ತಾರೆ . ಮರಣಾ ನಂತರ ಮಾಡುವುದಕ್ಕೆ ಅಟಾಪ್ಸಿ ಎನ್ನುವರು . ವೈದ್ಯಕೀಯ ಕ್ಷೇತ್ರದಲ್ಲಿ  ರೋಗಗಳ ಬಗ್ಗೆ ಅಧ್ಯಯನ ದಲ್ಲಿ ಅಟಾಪ್ಸಿ  ಮುಖ್ಯ ಸ್ಥಾನ ವಹಿಸಿದೆ .ನಮ್ಮ ದೇಶದಲ್ಲಿ ಮಾತ್ರ ಇದು ಇನ್ನು ವ್ಯಾಪಕವಾಗಿ ಇಲ್ಲ .ರೋಗಿಯ ಸಂಬಂದಿಕರ ವಿರೋಧ ಮತ್ತು ವೈದ್ಯಕೀಯ ರಂಗದವರ ಅನಾಸ್ಥೆ  ಎರಡೂ ಕಾರಣ . 

ಹಠಾತ್ ಯಾರು ಮರಣ ಹೊಂದಿದರೂ ಹೃದಯಾಘಾತ ಎಂದು ಕರೆದು ಕೈ ತೊಳೆದು ಬಿಡುತ್ತೇವೆ . ಆದರೆ ಸಂಭವಿಸುತ್ತಿರುವ ,ಅದೂ ಸಾಯುವ ವಯಸ್ಸಲ್ಲ ಎನ್ನುವ ಮರಣಗಳ ಕಾರಣ ವ್ಯಕ್ತಿಯ ಅಂತ್ಯ ಕ್ರಿಯೆಯೊಡನೆ ಅಂತ್ಯ ಕಾಣುವುದು ದುರ್ದೈವ್ಯ ,ಅಲ್ಲದೆ ವೈಜ್ಞಾನಿಕ ಪ್ರಗತಿಗೆ ಮಾರಕ . 

ರೋಗಿಯ ಸಂಬಂದಿಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನುರಿತ ಮರಣೋತ್ತರ ಪರೀಕ್ಷಾ ತಜ್ಞರ ತಯಾರಿ ನಮ್ಮ ದೇಶದಲ್ಲಿ ಬಹಳ ಅವಶ್ಯ .

ಗುರುವಾರ, ಜೂನ್ 2, 2022

ಕೆರೆ ಕಟ್ಟೆ

 


ಫ್ರಾನ್ಸಿಸ್ ಬುಕನನ್ ಅವರ "ಮೈಸೂರು ,ಕೆನರಾ ಮತ್ತು ಮಲಬಾರ್ ಪ್ರಾಂತ್ಯಗಳ ಮೂಲಕ ಮದ್ರಾಸಿನಿಂದ ಒಂದು ಪಯಣ "ಸಂಪುಟ 1 ಓಡುತ್ತಿದ್ದೇನೆ . ಕೆನರಾ ವಿವರ ಇದರಲ್ಲಿ ಬರುವುದಿಲ್ಲ . ಶೈಲಜಾ ಕೆ ಪಿ ಚೆನ್ನಾಗಿ ಅನುವಾದ ಮಾಡಿರುವರು .

  ಬೆಂಗಳೂರು  ಬಳಿ ಬಿಡದಿ ಯ ವರ್ಣನೆ ಯ ಒಂದು ಪ್ಯಾರ ಹೀಗಿದೆ .

ಜಲಾಶಯಗಳು 

"ಇಲ್ಲಿ ಕೆಲವು ಚಿಕ್ಕ ಜಲಾಶಗಳಿವೆಯಾದರೂ ,ಅವುಗಳ್ಳಿನ ನೀರು ದನಕರುಗಳ ದಾಹ ತಣಿಸಲಿಕ್ಕೆ ಮಾತ್ರ ಸಾಲುವಷ್ಟಿದೆ. ಕರ್ನಾಟಕದ ಭಾಷೆಯಲ್ಲಿ ಇಂತಹ ಚಿಕ್ಕ ಜಲಾಶಯಗಳನ್ನು 'ಕಟ್ಟೆ' ಎನ್ನುತ್ತಾರೆ .ಜಮೀನುಗಳಿಗೆ ನೀರು ಹರಿಸುವ ದೊಡ್ಡ ಜಲಶಯಗಳಿಗೆ' ಕೆರೆ ' ಎಂಬ ಹೆಸರಿದೆ . "

                      ಇದನ್ನು ಓದಿದಾಗ ನನಗೆ ತೋರಿದ್ದು ನಮ್ಮ ಊರಿನ "ಕಟ್ಟ " ಎಂಬ ಕಿರು ಜಲಾಶಯಗಳು ಮತ್ತು ಈ" ಕಟ್ಟೆ "ಒಂದೇ ಇರ ಬಹುದು .


ಬುಧವಾರ, ಜೂನ್ 1, 2022

ನೋವನ್ನು ವೇದಾಂತ ಮಾಡುವ ಕೈವಲ್ಯ


ರೋಗಿಗಳ ಸಹನಾ ಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಇರುತ್ತದೆ . ಅದು ಅವರವರ ಪ್ರಕೃತಿ ,ಇದಕ್ಕೆ ಪೂರಕವಾಗಿ ದೇಹದಲ್ಲಿ ಹಲವು ರಾಸರಾಯನಿಕಗಳು ಬೇರೆ ಬೇರೆ ಪ್ರಮಾಣದಲ್ಲಿ ಉತ್ಪತ್ತಿ ಆಗುವುದು ಒಂದು ಕಾರಣ .ಕೆಲವರು ಸಣ್ಣ ನೋವು ಜ್ವರಕ್ಕೂ ಹೊಡಚಾಡಿದರೆ ಇನ್ನು ಕೆಲವರು ಹೆರಿಗೆ ನೋವು ಸಹಿತ ಭಾರೀ ನೋವನ್ನೂ ಸ್ಥಿತಪ್ರಜ್ಞರಾಗಿ ಮೌನವಾಗಿ ಸಹಿಸುವರು . 

ಜೀವವನದಲ್ಲಿ  ಎದುರಿಸುವ ಸಮಸ್ಯೆಗಳೂ ಹಾಗೆಯೇ . ಒಳ್ಳೆಯ ಸಾಹಿತ್ಯ ಮನುಷ್ಯನಿಗೆ ಪ್ರಕೃತಿ ದತ್ತವಲ್ಲದ ದಾರ್ಶನಿಕ ಮನಸು ಕೊಡುವುದರಿಂದ ಇಂತಹ ಕಷ್ಟಗಳ  ತೀವ್ರತೆ ಸಾಪೇಕ್ಷವಾಗಿ ಕಡಿಮೆ ಆಗುವುದು .ಸಂಗೀತ ಕಲೆ ಕೂಡಾ ಹಾಗೆಯೆ . 

 ಹಳೆಯ ಮಲಯಾಳಂ ಸಿನೆಮಾ' ಸರ್ಗಮ್ ' ನಲ್ಲಿ  ಕವಿ ಯೂಸುಫ್ ಅಲಿ ಕೆಚೇರಿ ಬರೆದ ಸಂಗೀತಮೇ ಅಮರ ಸಲ್ಲಾಪಮೆ ಎಂಬ  ಪ್ರಸಿದ್ಧ ಹಾಡು ಇದೆ . ಇದರ ಲ್ಲಿ  ವೇದನೆಯನ್ನು ಕೂಡಾ ವೇದಾಂತವನ್ನಾಗಿಸುವ ನಾದಾ ನುಸಂಧಾನ ಕೈವಲ್ಯವೇ ಸಂಗೀತ ಎಂದು ಕವಿ ವರ್ಣಿಸುತ್ತಾನೆ .ಅದೇ ಶಕ್ತಿ ಸಾಹಿತ್ಯ ಮತ್ತು ಕಲೆಗೂ ಇದೆ ಎಂಬುದು ಬಲ್ಲವರ ಅನುಭವ .

 https://youtu.be/nh1D6PFl8pI