ಬೆಂಬಲಿಗರು

ಗುರುವಾರ, ಮೇ 16, 2024

ಪರಕ್ಕೆ ಸಂದಾಪುನೆ

 

  ಅತೀವ ಕಷ್ಟ ಬಂದಾಗಬಾಲ್ಯದಲ್ಲಿ ತಾಯಿ( ಮತ್ತು ಈಗ ಪತ್ನಿ ಬಾಯಲ್ಲಿ )ಹಲವು ಬಾರಿ ನನಗೆ ಒಟ್ರಾಸಿ 'ಪರಕ್ಕೆ ಸಂದಾಪುನೆ ' ಎಂದು ಅವರು ಹೇಳಿದ ಕೆಲಸ ನಿರೀಕ್ಷಾ ಮಟ್ಟಕ್ಕೆ ಬರದಿದ್ದಾಗ ಬೈದದ್ದು ಇದೆ . ಪರಕ್ಕೆ ಸಂದಾಪುನೆ ಅಥವಾ ಹರಕೆ ಸಲ್ಲಿಸುವುದನ್ನು ಅಷ್ಟು ತಾಪು ಮಾಡುತ್ತಾರೆ ಎಂದು ನಾನು ಹಲವು ಬಾರಿ ಯೋಚಿಸಿದ್ದಿದೆ .  ,ಜನರು ಧರ್ಮಾತೀತ ವಾಗಿ ದೇವರು ,ದೈವ ಗಳಿಗೆ ಹರಕೆ ಹೇಳುವುದು ನಡೆದು ಕೊಂಡು ಅನತಿ ಕಾಲದಿಂದ ನಡೆದು ಕೊಂಡು ಬಂದಿದೆ . ಒಂದೊಂದು ರೋಗ ಮತ್ತು ಸಂಕಟಕ್ಕೂ ಪರಿಹಾರ ಕೇಳುವ ಪ್ರತ್ಯೇಕ  ಕ್ಷೇತ್ರ ಇವೆ . ಇಲ್ಲಿ ನಂಬಿಕೆ  ಭಕ್ತರಿಗೆ ಒಂದು ಪ್ಲಾಸಿಬೊ ರೀತಿಯ ಧೈರ್ಯ ನೀಡುವುದು . ಎಲ್ಲವನ್ನೂ ವೈಜ್ನಾನಿಕ ವಾಗಿ ನೋಡಲು ಆಗುವುದಿಲ್ಲ . ಅಡ್ಡ ದಾರಿಯಲ್ಲಿ ನಡೆದು ದೇವರಿಗೆ ಹರಕೆ ರೂಪದಲ್ಲಿ ಕಪ್ಪ ಕಾಣಿಕೆ ಕೊಟ್ಟರೆ ಸರ್ವ ಜ್ನಾನಿ ಭಗವಂತ ನಿಗೆ ಗೊತ್ತಾಗದೇ? ಅವನಿಗೆ ಗೊತ್ತಾಗದು ಎಂದು ತಿಳಿದರೆ ಅವನ ಮಹಿಮೆಯನ್ನೇ ಕುಗ್ಗಿಸಿ ದಂತೆ.

              ಹರಕೆ ಹೇಳಿ ಆಯಿತು . ಇಷ್ಟಾರ್ಥ ವೂ ಈಡೇರಿತು . ಆಮೇಲೆ ಜಿಜ್ನಾಸೆ . 'ಭೂತಕ್ಕೆ ಕೋಳಿ ಕೊಡುತ್ತೇನೆ ಎಂದು ಕೋಳಿ ಕೊಳ್ಳಲು ಹೋದಾಗ ಹೇಗೂ ಹರಕೆಗೆ ತಿನ್ನಲು ಅಲ್ಲ ,ಹೆಚ್ಚು ಕ್ರಯದ್ದು ಯಾಕೆ ?  '  ಗೋದಾನ ಮಾಡುತ್ತೇನೆ ಎಂದು ಹೇಳಿಕೊಂಡು ಆಗಿದೆ . ಇನ್ನೂ ತುಂಬಾ ಹಾಲು ಕೊಡುವ ದನವೇ ಆಗ ಬೇಕು ಎಂದು ಏನು ?"ಚಿನ್ನದ ತೊಟ್ಟಿಲು ಕೊಡುತ್ತೇನೆ ಎಂದದ್ದು ಹೌದು ಇಷ್ಟು ಪವನಿಂದೆ ಎಂದು ಹೇಳಿಲ್ಲವಲ್ಲ " ಇತ್ಯಾದಿ ಲೌಕಿಕ ವಿಚಾರಗಳು ಪ್ರಮಾರ್ಥಿಕತೆಯನ್ನು ಅವರಿಸುತ್ತವೆ . ಒಟ್ಟಾರೆ ಹರಕ್ಕೆ ಹೇಳಿದ್ದಕ್ಕೆ ತೀರಿಸಿ ದೇವರ ಲೆಕ್ಕ ಚುಕ್ತಾ ಮಾಡಿದರೆ ಆಯಿತು .ಈ ಅರ್ಥದಲ್ಲಿಯೇ ನನ್ನ ತಾಯಿ ಯವರು ಹೇಳುತ್ತಿದ್ದರು ಅನ್ನಿಸುತ್ತದೆ .ಯಾವುದೇ ಕೆಲಸದಲ್ಲಿ ಆತ್ಮಾರ್ಥತೆ ಇಲ್ಲದೆ ಮಾಡ ಬಾರದು ಎಂಬ ಉದ್ದೇಶ . 

ಇನ್ನೊಂದು ನುಡಿಗಟ್ಟು ಇದೆ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ .ಇಲ್ಲಿ ದಕ್ಷಿಣೆ ಕೊಡುವುದು ಯಾರು ,ತಕ್ಕಂತೆ ಪ್ರದಕ್ಷಿಣೆ ಹಾಕುವವವರು ಯಾರು ?ಯಾಕೆಂದರೆ ವಾಡಿಕೆಯಲ್ಲಿ ದಕ್ಷಿಣೆ ಹಾಕುವವರೂ ಪ್ರದಕ್ಷಿಣೆ ಹಾಕುವವರೂ ಒಬ್ಬರೇ ಆಗಿರುತ್ತಾರೆ . ಈಗಿನ ವಾತಾವರಣ]ದಲ್ಲಿ  ದಕ್ಷಿಣೆ ತಕ್ಕ ಪ್ರದಕ್ಷಿಣೆ ಹಾಕುವವರೂ ಅಪರೂಪ . ಮೇಲಿಂದ ಅಥವಾ ಕೆಳಗಿಂದ ಎಂದರೂ ಬಂದರೆ ಮಾತ್ರ ಎಂಬಂತಾಗಿದೆ . 

ನನ್ನ ಅಮ್ಮ ಹೇಳುತ್ತಿದ್ದ ಇನ್ನೊಂದು ಮಾತು ,ಏನು ಮಗ ಒತ್ತಾಯದ ಮೇಲೆ ಶಂಭಟ್ಟನ ರುಜು ಎಂಬ ಮಾತು . ಅವರ ಕಟ್ಟುಪಾಡಿಗೆ ಸಿಕ್ಕ್ಕಿ ಮನಸಿಲ್ಲದ ಮನಸಿನಲ್ಲಿ ಏನಾದರೂ ಮಾಡಿದರೆ ಹೇಳುತ್ತಿದ್ದರು 


ಬುಧವಾರ, ಮೇ 15, 2024

ಕೆಪ್ಪಟ್ರಾಯ

 ಕೆಪ್ಪಟ್ರಾಯ ಬೇಸಿಗೆಯಲ್ಲಿ  ಸೋಂಕು ರೋಗಗಳ ಹಾವಳಿ .ಇದೇ  ಸಮಯ ವಾರ್ಷಿಕ ಪರೀಕ್ಷೆಗಳೂ ನಡೆಯುವವು . ಈ ವರ್ಷ  ಮಕ್ಕಳಲ್ಲಿ ಮತ್ತು ಯುವಕರಲ್ಲಿ  ಹೆಚ್ಚಾಗಿ ಕಂಡು ಬಂದ ಕಾಯಿಲೆ ಕೆಪ್ಪಟರಾಯ ಅಥವಾ ಮಂಪ್ಸ್ . ಇದು ಒಂದು ವೈರಸ್ ಜನ್ಯ ಮತ್ತು ತಾನೇ ವಾಸಿ ಯಾಗುವ  ಕಾಯಿಲೆ . 

ಈ ಕಾಯಿಲೆ ಲಾಲಾರಸ  ಉತ್ಪತ್ತಿ  ಮಾಡುವ ಪ್ಯಾರೋಟಿಡ್ ಗ್ರಂಥಿಯನ್ನು ಮುಖ್ಯವಾಗಿ ಬಾಧಿಸುವುದಾದರೂ ಉಳಿದ ಲಾಲಾ ಗ್ರಂಥಿ ಗಳು  ,ವೃಷಣ ಬೀಜ ,ಅಂಡಾಶಯ ,ಮೇದೋಜೀರಕ ಗ್ರಂಥಿ  , ಅಪರೂಪಕ್ಕೆ ಮೆದುಳನ್ನೂ . ಒಂದು ಅಥವಾ ಎರಡು ಪ್ಯಾರೋಟಿಡ್  ಗ್ರಂಥಿ ಊದಿ  ಕೊಂಡು ವಿವರೀತ ನೋವು ,ಜ್ವರ ಬರುವುದು . ಕೆಲವರಲ್ಲಿ ವೃಷಣ ಬಾಧೆ ಪ್ಯಾರೋಟಿಡ್ ಊತ ಕಡಿಮೆ ಆದಮೇಲೆ ಅಥವಾ ತತ್ಸಮಯ ಬರಬಹುದು .ಅಂಡಾಶಯ ಅಥವಾ ಮೇದೋಜೀರಕ ಗ್ರಂಥಿ ಗೆ ಕಾಯಿಲೆ ಬಂದರೆ ಹೊಟ್ಟೆ ನೋವು ಉಂಟಾಗುವುದು 

ಈ ಕಾಯಿಲೆಗೆ ನೋವು ನಿವಾರಕಗಳನ್ನು ಕೊಟ್ಟು ವಿಶ್ರಾಂತಿ ಸಲಹೆ ಮಾಡುವರು . ಮಂಪ್ಸ್  ವೈರಸ್ ಗೆ ಔಷಧಿ ಇಲ್ಲ . ತಡೆಗಟ್ಟುವ  ಲಸಿಕೆ ಇದೆ . ಮಕ್ಕಳ ಲಸಿಕಾ ಕಾರ್ಯಕ್ರಮದಲ್ಲಿ ಎಂ ಎಂ ಆರ್ ನಲ್ಲಿ ಮೊದಲನೇ ಎಂ  ಮಂಪ್ಸ್ . ಲಸಿಕೆ ಕೊಂಡವರಲ್ಲಿ ಕೂಡಾ ಈ ವರ್ಷ ಸ್ವಲ್ಪ ತೀವ್ರತರ ನೋವು ಬಂದಂತೆ ಇದೆ . ವೈರಸ್ ರೂಪ ಬದಲಿಸುವುದು ಕಾರಣ ಇರ ಬಹುದು . 

ಲಾಲಾ ರಸದಲ್ಲಿ ವೈರಾಣು ಇರುವುದು ,ಜಲ ಬಿಂದು ರೂಪದಲ್ಲಿ ಗಾಳಿ ಮೂಲಕ ಹರಡುವುದು . 

ಎರಡೂ  ವೃಷಣಗಗಳ  ಬಾಧೆ ಬಂದರೂ ವೀರ್ಯಾಣುಗಳ ಕೊರತೆ ಅಪರೂಪದಲ್ಲಿ ಆಗ ಬಹುದಷ್ಟೇ . 

ಬಾಲಂಗೋಚಿ : ನನಗೆ ಬಾಲ್ಯದಲ್ಲಿ ಕೆಪ್ಪಟ್ರಾಯ  ಬಂದಿತ್ತು .ಆಗ ಅದಕ್ಕೆ ಗಾಮಟೆ  ತೊಗಟೆ  ಅರೆದು ಹಚ್ಚುತ್ತಿದ್ದು ಕಹಿ ಕಷಾಯ ಕೊಡುತ್ತಿದ್ದರು . ಒಮ್ಮೆ ಕಾಯಿಲೆ ಬಂದರೆ ನೈಸರ್ಗಿಕ ರೋಗ ಪ್ರತಿಬಂಧಕ ಶಕ್ತಿ ಬರುವುದು

ಶುಕ್ರವಾರ, ಮೇ 10, 2024

 ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 

ಈ ಸುಡು ಬೇಸಗೆ ಮತ್ತು   ರಾಜಕೀಯ ಬೇಗೆ ಶಮನ ಗೊಳಿಸಲು ತಣ್ಣೀರು ಮತ್ತು ಸಂಗೀತ ದ ಆಶ್ರಯ ಪಡೆಯುತ್ತೇನೆ. ಮೊನ್ನೆ ಸಂಜೆ ಪ್ರಸಿದ್ಧ ತಮಿಳು ಕೀರ್ತನೆ ಅಲೈ ಪಾಯುದೇ ಕಣ್ಣಾ ಏನ್ ಮನ ಮಿಗ ಅಲೈ ಪಾಯುದೇ  ಕೇಳುತ್ತಿದ್ದೆ .  ಕೃಷ್ಣ ನ ಕುರಿತು ಗೋಪಿಕೆ ಯ  ಹಾಡು . ನಿನ್ನ ಕೊಳಲ ಸಂಗೀತ ಅಲೆ ಅಲೆಯಾಗಿ ಬರುತ್ತಿದೆ ಎಂಬುದು ಪಲ್ಲವಿ ಅರ್ಥ ಇರಬೇಕು . ಈ ಗೀತೆಯ ಒಂದು ಸಾಲು' ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 'ಎಂದು ಆರಂಭ ವಾಗುತ್ತದೆ . ತಿಳಿ ಬೆಳದಿಂಗಳು ಕೂಡಾ ಮಟ  ಮಧ್ಯಾಹ್ನ ದಂತೆ  ಉರಿಯುತ್ತಿದೆ .(ನಿನ್ನ ಪ್ರೇಮ ತಾಪದಲ್ಲಿ ಎಂದು ಇರಬೇಕು  )ಎಂದು ಅರ್ಥ . ಇದನ್ನು ಕೇಳುತ್ತಿದ್ದ ಸಮಯ ಸಂಜೆ ಏಳು ಗಂಟೆ . ಎಂದೂ ಕಾಣದ ಸೆಖೆ . ಕೃಷ್ಣನ ಕೊಳಲ ಗಾನ ಇಲ್ಲದಿದ್ದರೂ ಪಟ್ಟ ಪಗಲ್ ಪೋಲ್ ಎರಿಯುದೇ  ಎಂದು ನನ್ನ ಮನೆಯವರಲ್ಲಿ ಹೇಳಿದೆ . 

ಇಂತಹುದೇ ಅರ್ಥ ಬರುವ ಹಳೆ ಜನಪ್ರಿಯ ಚಿತ್ರ ಗೀತೆ ಒಂದು ಇದೆ .  ನಲ್ಲ ನಲ್ಲೆಯನ್ನು ಕುರಿತು ಹಾಡುವುದು

"ಬಳಿ  ನೀನಿರಲು ಬಿಸಿಲೇ  ನೆರಳು  ಮಧುಪಾನ ಪಾತ್ರೆ  ನಿನ್ನೊಡಲು ಮಧುವಿಲ್ಲದೆ ಮದವೇರಿಪ ನಿನ್ನಂತರಂಗ ಮಧುರಂಗ " ಇಲ್ಲಿ ಸೂರ್ಯನ ತಾಪಕ್ಕೆನಲ್ಲೆಯ ಸಾನ್ನಿಧ್ಯ ತಂಪೆರೆದರೆ , ಮೇಲಿನ ಗೀತೆಯಲ್ಲಿ  ತಂಪಾದ ಬೆಳದಿಂಗಳಲ್ಲೂ ಹಗಲ  ತಾಪ . 

ಏನಿದ್ದರೂ ಇಂತಹ ಆಲಾಪಗಳಿಗೆಲ್ಲ ಈ ಉರಿ ಬೇಸಿಗೆ ಹೇಳಿದ್ದಲ್ಲ

ಭಾನುವಾರ, ಮೇ 5, 2024

ಚಿಣ್ಣರೊಂದಿಗೆ ಸ್ವಲ್ಪ ಹೊತ್ತು 



 ಯುವ  ಉದ್ಯಮ ಶೀಲ  ದಂಪತಿಗಳಾದ ಗಣೇಶ್  ಮತ್ತು  ಪ್ರಫುಲ್ಲ  ಹಲವು ವರ್ಷಗಳಿಂದ  ನನಗೆ ಪರಿಚಿತರು ;ನಮ್ಮ ಆಸ್ಪತ್ರೆಯ ಸಮೀಪ ತರಬೇತಿ ಸಂಸ್ಥೆ ಯೊಂದನ್ನು ನಡೆಸುತ್ತಿದ್ದು  ನನ್ನ ಮೇಲೆ ಅಭಿಮಾನ ಇಟ್ಟುಕೊಂಡವರು . ದಿವಸಗಳ ಹಿಂದೆ ತಮ್ಮ ಸಂಸ್ಥೆ ನಡೆಸುತ್ತಿರುವ ಮಕ್ಕಳ  ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕ್ಕೆ ಅತಿಥಿ ಗಳಾಗಿ ಬರಬೇಕು ಎಂದು ಕೇಳಿ ಕೊಂಡಾಗ ಈಗಿನ ಗೊಂದಲ ಮತ್ತು  ಬಿಸಿಲು ಎರಡರಿಂದ ಸ್ವಲ್ಪ ವಿರಾಮ ವಾಗಲಿ ಎಂದು ಒಪ್ಪಿಕೊಂಡೆನು . ನಿರಾಸೆ ಆಗಲಿಲ್ಲ 

ನಮ್ಮ ಬಾಲ್ಯದಲ್ಲಿ ಸಮ್ಮರ್ ಕ್ಯಾಂಪ್ ಅಜ್ಜನ ಮನೆಯಲ್ಲಿ . ಅಲ್ಲಿ ಅಜ್ಜಿ ,ಮಾವ ಅತ್ತೆ ,ಅವರ ಮಕ್ಕಳ ಜತೆ . ಸ್ವಂತ ಮನೆಯೇತರ ವಾತಾವರಣ ಕ್ಕೆ ಹೊಂದಿಕೊಳ್ಳುವುದು ,ತೋಟ ,ಗುಡ್ಡೆ ಅಲೆಯುವುದು ,ತನ್ಮೂಲಕ ಸಹಜ ಕಲಿಕೆಯೂ ಆಗುವುದು . ನಮ್ಮ ಭಾವಂದಿರೊಂದಿಗೆ ಅವರ ತರಗತಿಗಳಿಗೆ ಅತಿಥಿ ವಿದ್ಯಾರ್ಥಿ ಯಾಗಿ ಹೋಗಿದ್ದೂ ಇದೆ . ಕೇರಳದಲ್ಲಿ ಓಣಂ ಗೆ ಹೆಚ್ಚು ರಜೆ ಇದ್ದುದರಿಂದ ನಮ್ಮ ರಜಾ ದಿನಗಳಲ್ಲಿ ಅವರಿಗೆ ಶಾಲೆ ಇರುತ್ತಿತ್ತು . ಸ್ವಂತ ಮನೆಯ ಮಕ್ಕಳಿಗೆ ಇರುವ ಕಟ್ಟು ನಿಟ್ಟಿನ ನಿಯಮಗಳು  ಅತಿಥಿಗಳಾದ ನಮಗೆ ಕಡಿಮೆ ಅನ್ವಯ ಅಲ್ಲದೆ  ಅತಿಥಿಗಳು ಇರುವಾಗ ಮನೆ ಮಕ್ಕಳಿಗೆ ಪೆಟ್ಟು ಬೀಳುತ್ತಿದುದು ಕಡಿಮೆ . ಅಜ್ಜನ ಮನೆಯಲ್ಲಿ ಇದ್ದ ಕತೆ ಪುಸ್ತಕಗಳನ್ನು ಓದುವುದು ;ಜತೆಗೆ ನಮ್ಮ ಭಾವಂದಿರ  ಪಠ್ಯ ಪುಸ್ತಕಗಳು .. ಇಂತಹ ಸಹಜ ಶಿಬಿರಗಳು ಮಕ್ಕಳು  ಸಮಾಜ ಜೀವಿಗಳಾಗಲು ಸಹಾಯ ಎಂದು ನನ್ನ ಅನಿಸಿಕೆ . 

ಆದರೆ ಈಗ ಅಂತಹ ದೀರ್ಘ ಕಾಲದ ಅಜ್ಜಿ ಮನೆ ವಾಸ ಕಾಣೆಯಾಗಿದೆ .ಮಕ್ಕಳು ಸುಮ್ಮನೆ ಬಿಟ್ಟರೆ ಮೊಬೈಲ್ ಟಿವಿ ರಾಗುತ್ತಾರೆ .ದಿನವಿಡೀ ಆಟವಾಡಲೂ ಆಗುವುದಿಲ್ಲ . ಅದಕ್ಕೆಂದು ಬೇಸಗೆ ಶಿಬಿರಗಳನ್ನು ಏರ್ಪಡಿಸುವರು . ಇಂತಹ ಶಿಬಿರಕ್ಕೇ ಮೊನ್ನೆ ಹೋದುದು . ಈಗಿನ ಮಕ್ಕಳು ಮೇಲ್ನೋಟಕ್ಕೆ ನಾವು ಬಾಲ್ಯದಲ್ಲಿ ಇದ್ದುದಕ್ಕಿಂತ ಬಹಳ ಚೂಟಿ ಯಾಗಿರುವುದಲ್ಲದೆ  ,ಸಂಕೋಚ ,ಅತಿ ನಾಚಿಕೆ ಇಲ್ಲ . ನೀವೆಲ್ಲಾ ದೊಡ್ಡ ವರಾಗಿ ಏನು ಆಗ ಬಯಸುತ್ತೀರಿ ಎಂದುದಕ್ಕೆ ಡಾಕ್ಟರ್ ಎಂದು ಒಬ್ಬರೂ ಹೇಳಲಿಲ್ಲ . ಒಬ್ಬಳು ಹುಡುಗಿ ನನಗೆ ಆರ್ಟಿಸ್ಟ್ ಆಗಬೇಕು ಎಂದಳು