ಬೆಂಬಲಿಗರು

ಭಾನುವಾರ, ಡಿಸೆಂಬರ್ 31, 2023

 


  ಬಿ ಎ  ಸಾಲೆಟೋರ್ ಎಂದು ಪ್ರಸಿದ್ಧರಾದ   ಡಾ ಭಾಸ್ಕರ ಆನಂದ ಸಾಲೆತ್ತೂರು  ೧೯೦೨ ರಲ್ಲಿ ವಿಟ್ಲ ಸಮೀಪ ಸಾಲೆತ್ತೂರಿನಲ್ಲಿ ಜನಿಸಿದರು ,ಮಂಗಳೂರು ,ಚೆನ್ನೈ ಮತ್ತು ಮುಂಬೈ ಯಲ್ಲಿ ವಿದ್ಯಾಭ್ಯಾಸ "ವಿಜಯನಗರ ಸಾಮ್ರಾಜ್ಯದಲ್ಲಿನ ಸಾಮಾಜಿಕ ಮತ್ತು  ರಾಜಕೀಯ ಜೀವನ "ಎಂಬ ಪ್ರಭುದ್ದ  ಅಧ್ಯಯನ ಕ್ಕೆ ಲಂಡನ್ ವಿಶ್ವ ವಿದ್ಯಾಲಯ ದಿಂದ  ಇತಿಹಾಸದಲ್ಲಿ ಡಾಕ್ಟರೇಟ್ . .ವಿಜಯನಗರ ಅರಸರು ಮೂಲತಃ ಕನ್ನಡಿಗರು ಎಂದು ಸಾಧಿಸಿದ ಹೆಗ್ಗಳಿಕೆ .ಮುಂದೆ ಜರ್ಮನ್ ವಿಶ್ವವಿದ್ಯಾಲಯ ಒಂದರಿಂದ ಪೊಲಿಟಿಕಲ್ ಸೈನ್ಸ್ ನಲ್ಲಿ ಎರಡನೇ ಡಾಕ್ಟರೇಟ್ ,
ವೃತ್ತಿ ಜೀವನ ವನ್ನು ಮುಂಬೈಯ ಪರ್ಷು ರಾಮ್ ಬಾವೂ ಕಾಲೇಜು ನಲ್ಲಿ ಆರಂಭಿಸಿ ,ಅಹಮದಾ ಬಾದ್ ವಿಶ್ವ ವಿದ್ಯಾಲಯ  ಅಧ್ಯಾಪನ .:ನಂತರ ಬಾಂಬೆ ವಿದ್ಯಾ ಇಲಾಖೆ (ಇದರಲ್ಲಿ ಡಿ ಸಿ ಪಾವಟೆ ಕೂಡಾ ಸೇವೆ ಸಲ್ಲಿಸಿದ್ದರು ),ಮುಂದೆ ರಾಷ್ಟ್ರೀಯ ಪತ್ರಾಗಾರ ದ ನಿರ್ದೇಶಕ . ೧೯೬೦ ರಲ್ಲಿ ನಿವೃತ್ತಿ ನಂತರ ಕರ್ನಾಟಕ ವಿಶ್ವ ವಿದ್ಯಾಲಯ ಇತಿಹಾಸ ವಿಭಾಗ   ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸ್ಸರ್ ಮತ್ತು ಮುಖ್ಯಸ್ಥ . ಮುಂದೆ ಅಲ್ಲಿಯೇ ಕನ್ನಡ ಸಂಶೋಧನಾ ಕೇಂದ್ರದ ಮುಖ್ಯಸ್ಥ . ಪ್ರಸಿದ್ಧ ಇತಿಹಾಸಜ್ಞ ರಾದ ಪ್ರೊ ಜಿ ಎಸ್ ದೀಕ್ಷಿತ್ ಮತ್ತು ಸೂರ್ಯನಾಥ ಕಾಮತ್ ಇವರ ಗರಡಿಯಲ್ಲಿ ಬೆಳಗಿದ ಪ್ರತಿಭೆಗಳು . 
೧೯೬೩ ರಲ್ಲಿ ತಮ್ಮ ೬೧ ನೇ ವಯಸಿನಲ್ಲಿ ನಿಧನರಾದರು . 
 ಹಿಂದಿನ ಶತಮಾನಗಳ ವಿದೇಶಿಯರು ,ದೇಶಪ್ರೇಮ ಇತ್ಯಾದಿ ಬಗ್ಗೆ ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ ಅವರ  ಅಭಿಪ್ರಾಯ ಗಮನಾರ್ಹ . 
"ಚರಿತ್ರೆಯಲ್ಲಿ ನಾವು ಇಂದಿನ ವಿದ್ಯಮಾನಗಳಿಂದ ಪೂರ್ವಾಗ್ರಹ  ಪೀಡಿತರಾಗಿ ವಿದೇಶಿ ಎಂಬುದರ ವ್ಯಾಖ್ಯೆ ಮಾಡುತ್ತಿದ್ದೇವೆ . ಶತ ಶತಮಾನ ಗಳಿಂದ ಬಾಹ್ಯ   ಪ್ರಭಾವಗಳಿಗೆ   ನಮ್ಮ ಇತಿಹಾಸ  ಒಳಗಾಗಿದೆ .ಇದರಿಂದ ಸಾಮಾಜಿಕ ಪರಿಶುದ್ಧತೆ ಎಂಬುದು ಒಂದು ಮಿಥ್ಯೆ ಮತ್ತು ನಮ್ಮ ಅಧ್ಯಯನದಲ್ಲಿ ಅದಕ್ಕೆ ಸ್ಥಾನ ವಿಲ್ಲ, ಅಲ್ಲದೆ ನಮ್ಮ ಸಂಸ್ಕೃತಿಯಲ್ಲಿ ನೂರಕ್ಕೆ ನೂರು ಒಂದು ವಿಭಾಗದಿಂದ ಬಂದುದು ಎಂದು ಇಲ್ಲ ,ಆದುದರಿಂದ ನಮ್ಮ ಹಿರಿಯರು ಎಲ್ಲರಿಂದ ಮತ್ತು ಎಲ್ಲದರಿಂದ ಒಳ್ಳೆಯದನ್ನು ತೆರೆದ ಮನಸಿನಲ್ಲಿ ಸ್ವೀಕರಿಸಿದಂತೆ ನಾವೂ ಹೃದಯ ವೈಶಾಲ್ಯದಿಂದ  ಸಹನೆ ಮತ್ತು ಸಹ ಬಾಳ್ವೆಯನ್ನು ನಮ್ಮದಾಗಿರಿಸಿ ಕೊಳ್ಳುವುದು ಇಂದಿನ ಅವಶ್ಯಕತೆ "



ಬುಧವಾರ, ಡಿಸೆಂಬರ್ 27, 2023

ಪುಣ್ಯ ಪುರುಷರ ದೇವ ಕಾರ್ಯ



 ಹೋದ ಭಾನುವಾರ  ಮುಂಜಾನೆ ಪುತ್ತೂರು   ರಾಮಕೃಷ್ಣ ಸೇವಾಶ್ರಮ ದ ವಾರ್ಷಿಕೋತ್ಸವ ದಲ್ಲಿ ಭಾಗಿಯಾಗುವ ಸುಯೋಗ ದೊರಕಿತ್ತು . ಈ ಸಂಸ್ಥೆಯ ಬಗೆಗೆ ಕೇಳಿ ಪಟ್ಟಿದ್ದೆ . ಪುತ್ತೂರು ಬಸ್ ನಿಲ್ದಾಣ ದ ತೊಟ್ಟು ಸನಿಹದಲ್ಲಿ ಈಶಾನ್ಯಕ್ಕೆ ಇದೆ .ನೂರಕ್ಕೆ ನೂರು ಸೇವಾ ಸಂಸ್ಥೆ .ಈಗ ಅಧ್ಯಕ್ಷರಾಗಿ ಹಿರಿಯ ರಾದ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ.ಉಪಾಧ್ಯಕ್ಷ ಡಾ ಗೌರಿ ಪೈ ಮತ್ತು ಕಾರ್ಯದರ್ಶಿ ಶ್ರೀ ಗುಣಪಾಲ ಜೈನ್  ಇದ್ದು ಅವರ ಸಹೃದಯಿ ಸದಸ್ಯರನ್ನು ಒಳಗೂಡಿದ ಕಾರ್ಯ ಕಾರಿ ಸಮಿತಿ . ಈ ಸಂಸ್ಥೆಯ ಇತಿಹಾಸ ಬಗ್ಗೆ ಶ್ರೀ ಗುಣಪಾಲ ಜೈನ್ ಅವರ ಪ್ರಸ್ತಾವಿಕ ಭಾಷಣ ಮತ್ತು ಶ್ರೀಮತಿ ವತ್ಸಲಾ ರಾಜ್ನಿ ಯವರ ವಾರ್ಷಿಕ ವರದಿಯಲ್ಲಿ ಮಾಹಿತಿ ಲಭಿಸಿತು .ಅದರ ಸಾರಾಂಶ ಕೆಳಗೆ ಕೊಟ್ಟಿರುವೆನು .

ಕಾರ್ಮಿಕರ ಮಕ್ಕಳ ಸಂಕಟ ನೋಡಿ ಹುಟ್ಟಿತು :
1953ರಲ್ಲಿ ಪುತ್ತೂರಿನ ಎ ಸಿ  ಕೋರ್ಟಿನಲ್ಲಿ ಬೆಂಚ್ ಕ್ಲಕ್ ಆಗಿದ್ದ ಬಪ್ಪನಾಡು ಲಕ್ಷ್ಮಿನಾರಾಯಣ ರಾವ್. ರಾಯರು ಕಚೇರಿಗೆ ಹೋಗುವ ದಾರಿಯಲ್ಲಿ ರಸ್ತೆಗೆ ಡಾಮರು ಹಾಕುವ ಕಾರ್ಮಿಕರ ಇಬ್ಬರು ಮಕ್ಕಳು ಜಲ್ಲಿ ಮೇಲೆ ಮಲಗಿರುವುದನ್ನು ಕಂಡು ಮರುಗಿದರು. ಕೊಯಮುತ್ತೂರು ಮೂಲದ ದಂಪತಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹಿದ ಬಿ.ಎಲ್. ರಾಯರೇ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರು. ಆಗಿನ ಹಿರಿಯ ನ್ಯಾಯವಾದಿ ಎಂ. ಸದಾಶಿವ ರಾಯರು ಬಿ.ಎಲ್. ರಾಯರ ಜೊತೆ ಸೇರಿ ಸಮಾಜಕ್ಕೆ ವಿಶಿಷ್ಟ ರೂಪು ನೀಡಿದರು. ಸದಾಶಿವ ರಾಯರು ಸ್ಥಾಪಕಾಧ್ಯಕ್ಷರಾಗಿ ಮತ್ತಷ್ಟು ಅನಾಥ ಮಕ್ಕಳನ್ನು ಸಾಕಿದರು. ಇಬ್ಬರೂ ಸೇರಿ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ದಾನಿಗಳಿಂದ ಸಂಗ್ರಹಿಸಿ ಮೊದಲ ಹಂತದಲ್ಲಿ ಒಂಬತ್ತು ಮಕ್ಕಳನ್ನು ಸಾಕಿದರೆ, ಸಂಸ್ಥೆಗೆ ತಾಯಿಯ ರೂಪದಲ್ಲಿ ಬಂದವರು ಮಂಜಕ್ಕೆ ಎಂಬವರು. 1957ರಲ್ಲಿ ಬಿ.ಎಲ್. ರಾಯರು ಆಶ್ರಮದ ಮಕ್ಕಳನ್ನು ಕೊಯ್ಲಕ್ಕೆ ಪಿಕ್ನಿಕ್‌ಗೆ ಕರೆದುಕೊಂಡು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟರು.

 55 ವರ್ಷಗಳ ಹಿಂದೆ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಬಲ್ಲ ಹಾಗೂ ಅಗತ್ಯವಾಗಿದ್ದ ನಮ್ಮ ಒಟ್ಟು ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ಯೋಗ್ಯವಾದ ಮೌಲ್ಯಾಧಾರಿತ, ವಿದ್ಯಾಭ್ಯಾಸ, ಪೋಷಣೆ, ಆರೋಗ್ಯ ನೀಡಿ ಅವರನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸಲು ಹಾಗೂ ನೆರವು ನೀಡಲು ಹುಟ್ಟಿಕೊಂಡ ಶ್ರೀ ರಾಮಕೃಷ್ಣ ಸೇವಾ ಸಮಾಜ’ ಮುಂದೆ ನಡೆದು ಬಂದಂತಹ ದಾರಿ ಸುಲಭದ್ದಾಗಿರಲಿಲ್ಲ. ಇದರ ಹಿಂದೆ ನೂರಾರು ಮಂದಿ ಸೇವಾ ಮನೋಭಾವದ ಹಿರಿಯರ ಶ್ರದ್ಧೆ, ನಿಷ್ಠೆ, ತ್ಯಾಗ ಮನೋಭಾವ ಇಲ್ಲಿ ತುಂಬಾ ಕೆಲಸ ಮಾಡಿದೆ. ಈ ಸಂಸ್ಥೆ ಸ್ಥಾಪಿಸಲು ಪ್ರಥಮದಲ್ಲಿ ತೊಡಗಿಸಿಕೊಂಡವರು ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿ| ಎಂ. ಸದಾಶಿವ ರಾವ್ ಹಾಗೂ ದಿ| ಬಿ.ಎಲ್.ರಾವ್ ಇವರ ಕನಸಿನ ಕೂಸು ನಮ್ಮ ಈ ಸಮಾಜ ಆಗಿರುತ್ತದೆ. ನಂತರ ಇವರೊಂದಿಗೆ ಕೈಜೋಡಿಸಿ ದುಡಿದವರಲ್ಲಿ ಈಗ ನಮ್ಮೊಂದಿಗೆ ಇಲ್ಲದ ದಿ|ಪಿ. ವಿಠ್ಠಲ್ ಪೈ ಮತ್ತು ದಿ| ಎಂ. ಮಾಧವ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಣಾರ್ಹ .ಆನಂದ ಆಶ್ರಮ ಸ್ಥಾಪಕಿ ಡಾ ಗೌರಿ ಪೈ ಈ ಸಂಸ್ಥೆಯಲ್ಲಿ ಕೂಡಾ ಕ್ರಿಯಾಶೀಲೆ . ಕೊಳತ್ತಾಯ ಅವರು ಇದನ್ನು ಉಲ್ಲೇಖ ಮಾಡಿ ಅವರ ಸೇವಾ ಮನೋಭಾವ ಮತ್ತು ಸಂಘಟನಾ ಚತುರತೆ ಕೊಂಡಾಡಿದರು.

 ಸಮಾಜವು ಆರ್ಥಿಕವಾಗಿ ತೀರಾ ದುರ್ಬಲರು ಹಾಗೂ ತಂದೆ/ತಾಯಿ ಇಲ್ಲದ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ರಕ್ಷಣೆ, ವಿದ್ಯೆ, ಊಟ-ಉಪಚಾರ, ವಸತಿ, ಉಡುಗೆ-ತೊಡುಗೆ, ಔಷಧಿ ಇತ್ಯಾದಿಗಳನ್ನು ಉಚಿತವಾಗಿ ನೀಡಿ ಇಂತಹ ಮಕ್ಕಳನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವಂತೆ ಹಾಗೂ ಮುಂದಕ್ಕೆ ಯೋಗ್ಯ ಪ್ರಜೆಗಳಾಗಿ ಬೆಳೆಯಲು ಅನುಕೂಲವಾಗುವಂತೆ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಈ ಸಮಾಜದಲ್ಲಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಇದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗೋಸ್ಕರ ಒಂದು ವಸತಿ ಗೃಹವನ್ನು ನಿರ್ಮಿಸಿ ಹಾಗೂ ನಮ್ಮ ಸಮಾಜದ ಇತರ ಪೂರಕ ಚಟುವಟಿಕೆಗಳನ್ನು ಕೈಗೊಂಡು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಸಹಸಂಸ್ಥೆಗಳನ್ನು ನಾವು ನಡೆಸುತ್ತಾ ಬರುತ್ತಿದ್ದಾರೆ .

1. ಸ್ವಾಮಿ ವಿವೇಕಾನಂದ ಗ್ರಂಥಾಲಯ:
2. ಮಾ ಶಾರದಾಮಣಿ ಅನಾಥಾಲಯ :
3. ಮಂಜಕ್ಕ ನಿರ್ಗತಿಕ ಕುಠೀರ:
4. ಕಸ್ತೂರ್ಬಾ ಉದ್ಯೋಗಸ್ಥ ಮಹಿಳೆಯರ ವಸತಿಗೃಹ:

ಪುತ್ತೂರಿನ ಏಳಿಗೆಯಲ್ಲಿ ಪರವೂರಿನ ಗಣ್ಯರ ಪಾತ್ರ ಬಹಳ ಹಿರಿದು .ಮೊಳ ಹಳ್ಳಿ ಶಿವ ರಾವ್ , ಶಿವರಾಮ ಕಾರಂತ ,ಮಾಯಿರ್ಪಳ್ಳಿ ಸದಾಶಿವ ರಾವು ,ಮಾಯಿರ್ಪಳ್ಳಿ ಸುಂದರ ರಾವ್ ,ಬೈಂದೂರು ಪ್ರಭಾಕರ ರಾವ್ ಹೀಗೇ ಪಟ್ಟಿ ಮಾಡುತ್ತಲೇ ಹೋಗ ಬಹುದು .

 ಕೃಶ ಕಾಯರಾದಸದಾಶಿವ ರಾಯರು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಟ್ರೇಡ್ ಮಾರ್ಕ್ ಖಾದಿ ಶರಟು ಮತ್ತು ಧೋತಿ ಉಡುಗೆಯಲ್ಲಿ ಮನೆಯಿಂದ ಆಶ್ರಮ ಕ್ಕೆ ನಡೆದು ಹೋಗುವುದನ್ನು  ದಶಕಗಳ ಹಿಂದೆ ನೋಡಿದ್ದೆ . ಮೇಲೆ ಉಲ್ಲೇಖಿಸಿದವರು ಪುತ್ತೂರಿನ ಪುಣ್ಯ ಪುರುಷರು .

ಹಿರಿಯರಾದ ಶ್ರೀ ಚೆಟ್ಟಿಯಾರ್ ,ಕೇಶವ ಭಟ್ ,ವಿದುಷಿ ನಯನ ರೈ ಶ್ರೀಮತಿ ಶಂಕರಿ ಶರ್ಮ ಇಲ್ಲಿ ಮಕ್ಕಳಿಗೆ ವಿದ್ಯಾದಾನ ಕೈಂಕರ್ಯ ಮಾಡುತ್ತಿದ್ದಾರೆ. ಇನ್ನೂ ಹಲವರ ಹೆಸರು ಉಲ್ಲೇಖವಾಯಿತು .

ವಿವೇಕಾನಂದ ರಾಮಕೃಷ್ಣ ರ ಆದರ್ಶದಲ್ಲಿ ಹುಟ್ಟಿದ ಸಂಸ್ಥೆ .ವಿವೇಕಾನಂದ ಅವರು ದರಿದ್ರ ದೇವೋ ಭವ (ಬಡವರಲ್ಲಿ ದೇವರ ಕಾಣು )ಎಂದು ಸಾರಿದವರು .ಇಲ್ಲಿ ನಡೆಯುತ್ತಿರುವುದು ಪ್ರತಿಫಲ ಮತ್ತು ಪ್ರಚಾರ  ಅಪೇಕ್ಷೆ ಇಲ್ಲದ ದೇವಕಾರ್ಯ ಎಂದು ಕೊಂಡೆನು.ವಾರ್ಷಿಕೋತ್ಸವದಲ್ಲಿ ಪುಟಾಣಿಗಳ ಹಾಡು ಕುಣಿತ ,ನಟನೆ ನೋಡಿ ಮನಸು ಮುದವಾಯಿತು . ದೊಡ್ಡ ಕೂಡು ಕುಟುಂಬದ ಸಂತೋಷವನ್ನು ಅವರು ಅನುಭವಿಸುತ್ತಿರುವಂತೆ ಕಂಡು ಬಂತು .



ಶುಕ್ರವಾರ, ಡಿಸೆಂಬರ್ 22, 2023

ಒಂದು ಸೂಕ್ಷ್ಮ ವಿಚಾರ

 ದಶಕಗಳ ಹಿಂದೆ ನಡೆದ ಘಟನೆ . ಒಂದು ಬಡ ಕುಟುಂಬ .ಅಲ್ಲಿ ಒಬ್ಬಳು ಹೆಣ್ಣು ಮಗಳು .ಆಕೆ ನನ್ನ ಪೇಷಂಟ್ . ಕಾಯಿಲೆ ಅಸ್ತಮಾ . ಚಳಿಗಾಲದಲ್ಲಿ ಜಾಸ್ತಿ . ಔಷದೋಪಚಾರ ಗಳಿಂದ ಹತೋಟಿಯಲ್ಲಿ ಇತ್ತು . ತಂದೆ ತಾಯಿ ಹುಡುಗನನ್ನು ನೋಡಿ ,ಶಕ್ತಿ ಮೀರಿ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟರು . ಪತಿ ಗೃಹದಲ್ಲಿ  ಇವಳಿಗೆ ಆಸ್ತಮಾ ಕಾಯಿಲೆ ಇರುವುದು ಕಂಡು ಗಂಡನೂ ಸೇರಿ ಎಲ್ಲರೂ ಸಿಟ್ಟಿಗೆದ್ದರು . ಶುರುವಾಯಿತು ಕಾಟ ,ರೋಗವನ್ನು ಮುಚ್ಚಿ ಬಿಟ್ಟು ಮದುವೆ ಮಾಡಿದ್ದಾರೆ . ಹೇಗೆ ಇವಳನ್ನು ಓಡಿಸುವುದು ?ಕೂತಲ್ಲಿ ನಿಂತಲ್ಲಿ ಸಹಸ್ರ ನಾಮ .ಹೊಗೆ ಒಲೆಯ ಬುಡದ ಕೆಲಸ ಇವಳೇ ಮಾಡುವಂತೆ ತಾಕೀತು ..ತಣ್ಣಿರಿನಲ್ಲಿಯೇ ಸ್ನಾನ ಮಾಡ ಬೇಕು ಇತ್ಯಾದಿ .ಬದುಕು ಅಸಹನೀಯ ಆದಾಗ ತವರು ಮನೆಗೆ ಓಡಿ ಬಂದಳು . ವರ್ಷಗಳ ನಂತರ ಒಂದು ದಿನ ಎಲ್ಲೋ ಪ್ರಯಾಣ ಮಾಡುತ್ತಿರುವಾಗ ಬಸ್ಸಿನಲ್ಲಿ ಸಿಕ್ಕಿದಳು . ಬೇರೊಂದು ಹುಡುಗನ ಜತೆ ಮದುವೆ ಆಗಿತ್ತು . ನಡುವಿನ ಮತ್ತು ನಂತರದ ಕತೆ ನನಗೆ ತಿಳಿದಿಲ್ಲ . ಸಂತೋಷವಾಗಿ ಇರಲಿ ಎಂಬ ಹಾರೈಕೆ ಮಾತ್ರ . 

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ . ಇದರಲ್ಲಿ ಸುಳ್ಳು ಹೇಳದಿದ್ದರೂ ಸತ್ಯವನ್ನು ಬಚ್ಚಿಡುವುದು  ಕೂಡಾ ಸೇರಿದೆ . ವಿವಾಹ ಬಂಧ ಮಾತುಕತೆ ಆಗುವಾಗ ಏನೆಲ್ಲಾ ಹೇಳ ಬೇಕು ?ಏನೆಲ್ಲಾ ಬಾರದು ?ಇದು ದೊಡ್ಡ ಪ್ರಶ್ನೆ . ಮೇಲೆ ಉಲ್ಲೇಖಿಸಿದ ಆಸ್ತಮಾ ಕಾಯಿಲೆ ದೊಡ್ಡ ದೇನೂ ಅಲ್ಲ .ಅದಕ್ಕೆ ಒಳ್ಳೆಯ ಔಷಧಿ ಕೂಡಾ ಇದೆ . ಅಪಸ್ಮಾರ ,ಸಕ್ಕರೆ ಕಾಯಿಲೆ ,ಮಾನಸಿಕ ಕಾಯಿಲೆ , ಮದ್ಯ ಇತ್ಯಾದಿ  ವ್ಯಸನ  ಇದ್ದರೆ ಮೊದಲೇ ಹೇಳ ಬೇಕೆ ?ಈ ವಿಚಾರ ಮುಚ್ಚಿಟ್ಟು ಅನೇಕ ಮದುವೆಗಳು ಮುರಿದಿವೆ .ವಿವಾಹ ಮೊದಲೇ ಇದ್ದ ಪ್ರೇಮ ಸಂಬಂಧ ಗಳನ್ನೂ ಸೇರಿಸ ಬಹುದು . ಈಗಂತೂ ಎಲ್ಲಾ ಸರಿ ಇದ್ದು ಆದ ವಿವಾಹ ಬಂಧಗಳೆ ಮುರಿದು ಬೀಳುತ್ತಿವೆ ,.

ಈಗ ನನ್ನ ಸಮಸ್ಯೆಗೆ ಬರೋಣ . ಮೊನ್ನೆ ಒಬ್ಬರು ಬಂದಿದ್ದರು.ಅವರ ಕುಟುಂಬ ನನ್ನ ಬಳಿಗೆ ವೈದ್ಯಕೀಯ ಸಲಹೆ ಗೆ ನನ್ನ ಬಳಿಗೆ ಬರುವುದು . ಅವರು ಒಬ್ಬ ಹುಡುಗನ (ಸ್ಥಿತಿ ವಂತನೆ )ಬಗ್ಗೆ ವಿಚಾರಿಸಿ ಅವನಿಗೆ ಆರೋಗ್ಯ ಸಮಸ್ಯೆ ಇದೆಯೇ ? ಪೊದು ಮಾತನಾಡಿಸ ಬಹುದೇ ?ಎಂದು ವಿಚಾರಿಸಿದರು .ಅವನ ಬಗ್ಗೆಯೂ ನನಗೆ ಮಾಹಿತಿ ಇದೆ .ಆದರೆ ವೈದ್ಯಕೀಯ ವೃತ್ತಿಯಲ್ಲಿ ನಾವು ಇದನ್ನು ಅನ್ಯರ ಬಳಿ ಹೇಳ ಬಾರದು.ಅದು ಗಂಭೀರ ಕಾಯಿಲೆ ಅಲ್ಲದಿದ್ದರೂ  . ಆಸ್ಪತ್ರೆಯಲ್ಲಿ ನನ್ನ ಅರಿವಿಗೆ ಬಂದ ನಮ್ಮ ಸಂಬಂದಿಕರ ಅನಾರೋಗ್ಯ ಬಗ್ಗೆ  ಕೂಡಾ ನಾನು ಮನೆಯಲ್ಲಿ ಕೂಡಾ ಪ್ರಸ್ತಾಪ ಮಾಡುವುದಿಲ್ಲ . 

    ಅರೋಗ್ಯ ವಿಮೆ ಮಾಡುವಾಗ ಇದ್ದ ಕಾಯಿಲೆಗಳನ್ನು ಘೋಷಿಸ ಬೇಕು ಎಂಬ ಷರತ್ತು ಇರುವುದು  ಮತ್ತು  ಒಂದು ಅವಧಿಯ ವರೆಗೆ ಆ ಕಾಯಿಲೆಗಳು ವಿಮಾತೀತ ಆಗಿರುತ್ತವೆ . ಅದೇ ರೀತಿ ಮದುವೆ ಸಂಬಂಧ ಏರ್ಪಡಿಸುವಾಗ ಉಭಯ ತರರೂ ಗಂಭೀರ ಅರೋಗ್ಯ ಸಮಸ್ಯೆ ಇದ್ದರೆ ಹೇಳಿ ಕೊಳ್ಳುವುದು ಉತ್ತಮ . ಇದರಲ್ಲಿ ವಂಶ ಪಾರಂಪರ್ಯ ಕಾಯಿಲೆಗಳನ್ನೂ ಸೇರಿಸ ಬಹುದು .

ಇಷ್ಟೆಲ್ಲಾ ಇದ್ದರೂ ಮದುವೆ ಪಶ್ಚಾತ್  ಮೊದಲೇ ಇದ್ದ ಕಾಯಿಲೆ ಬಗ್ಗೆ ತಿಳಿದು ಬಂದರೂ ,ಅನ್ಯೋನ್ಯವಾಗಿ ಇರುವ ದಂಪತಿ ಗಳನ್ನೂ ಕಂಡಿದ್ದೇನೆ 

ಗುರುವಾರ, ಡಿಸೆಂಬರ್ 21, 2023

ಟಿ ಎನ್ ಸೀತಾರಾಂ ಅವರ ನೆನಪಿನ ಪುಟಗಳು

                        



ಬಹಳ ದಿನಗಳ ನಂತರ ಒಂದು ಒಳ್ಳೆಯ ಕೃತಿ ಟಿ ಎನ್ ಸೀತಾರಾಂ ಅವರ ಆತ್ಮ ಚರಿತ್ರೆ 'ನೆನಪಿನ ಪುಟಗಳು " ಓದಿದ ಗುಂಗಿನಲ್ಲಿ ಇದ್ದೇನೆ .ನಿನ್ನೆ ಬಂದ ಪುಸ್ತಕ ಎಂದು ಸಂಜೆ ಗೆ ಒಂದೇ ಉಸಿರಿನಲ್ಲಿ ಎಂಬಂತೆ ಓದಿಸಿ ಕೊಂಡು ಹೋಯಿತು ಎನ್ನ ಬಹುದು 

ಆರಂಭದಲ್ಲಿ '' ಸತ್ಯವನ್ನೇ ಹೇಳುತ್ತೇನೆ .ಬದುಕಿನ ಸರ್ವ ಸತ್ಯಗಳನ್ನೂ ಹೇಳ ಲಾರೆ .ಆದರೆ ಇಲ್ಲಿ ಹೇಳಿರುವುದಷ್ಟೂ ಸತ್ಯ " ಎಂದು ಹೇಳಿ ಕೊಂಡಿದ್ದು ಉದ್ದಕ್ಕೂ  ಓದುವಾಗ ವೇದ್ಯ ವಾಗುವುದು .ಬೆನ್ನುಡಿಯಲ್ಲಿ ಜೋಗಿಯವರು 'ತನ್ನ ಕತೆಯನ್ನು ಮತ್ತೊಬ್ಬರ ಅನುಭವ ಅಗಿಸಲಿಕ್ಕೆ ಪ್ರಾಮಾಣಿಕತೆ ಇದ್ದರೆ ಸಾಕು "ಎಂದು ಬರೆದಿರುವುದು  ಪುಟ ತಿರುವುತ್ತಿದಂತೆ ಆಗುವುದು .

ವಕೀಲ ,ನಾಟಕಕಾರ ,ನಟ ,ನಿರ್ದೇಶಕ ,ಕೃಷಿಕ ,ಸಾಹಿತಿ  ,ಉದ್ಯಮಿ ಮತ್ತು ರಾಜಕಾರಿಣಿ  ಯಾಗಿ ಅವರ ಬದುಕು ವರ್ಣರಂಜಿತ ವಾಗಿ ತೋರಿದರೂ ಎದುರಿಸಿದ (ಆರ್ಥಿಕ ) ಸಂಕಷ್ಟಳೇ ಅಧಿಕ .ಮುಖ್ಯವಾಗಿ ಕೃಷಿಕನಾಗಿ ಟೊಮಾಟೊ .ಮಾವು ಮತ್ತು ಹತ್ತಿ  ಬೆಳೆ ಚೆನ್ನಾಗಿ ಬಂದರೂ ದಿಢೀರ್ ಬೆಳೆ ಕುಸಿತ ,ಅಕಾಲ ಮಳೆಯಿಂದ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಆದ ಪ್ರಸಂಗ ,ಸ್ನೇಹಿತನಿಗೆ ಸಹಾಯ ಮಾಡ ಹೋಗಿ ಕೈಗಾರಿಕೆಯ ಉರುಳು ಕೊರಳಿಗೆ ಹಾಕಿ ಕೊಂಡದ್ದು ಇತ್ಯಾದಿ . 

ರಾಜಕೀಯದ ದಿನಗಳ ಬಗ್ಗೆ ಬರೆಯುತ್ತಾ '' ಮೊದಲು ದೇಶಪ್ರೇಮ ದಿಂದ ಜನರನ್ನು ಹತ್ತಿರ ಮಾಡಿ ಕೊಳ್ಳಬೇಕು ,ಆಮೇಲೆ ಪ್ರೀತಿಯಿಂದ ಜನರನ್ನು ಹತ್ತಿರ ಮಾಡಿಕೊಳ್ಳಬೇಕು ಎನ್ನುವುದಿತ್ತು ,ಮುಂದೆ ಸ್ನೇಹ ಜನರನ್ನು ಹತ್ತಿರ ತರುತ್ತದೆ ಎಂದಾಯಿತು .ನಂತರ ಹಣ ಇದ್ದರೆ ಮಾತ್ರ ಜನ ಬರುತ್ತಾರೆ ಎಂದಾಯಿತು .ಒಂದೊಂದು ಎಲೆಕ್ಷನ್ ಗೂ ಬದಲಾವಣೆ ಆಗಿರುವುದನ್ನು ನೋಡುತ್ತಾ ಬಂದಿದ್ದೇನೆ '

'ಜನರ ಪ್ರೀತಿಯೇ ನನ್ನ ಆಸ್ತಿ 'ಎಂಬ ಶೀರ್ಷಿಕೆಯ ಒಂದು ಅಧ್ಯಾಯ ಇದೆ .ಒಟ್ಟಿನಲ್ಲಿ ಇವರು ಆರ್ಥಿಕ  ಐಶ್ವರ್ಯಕ್ಕಿಂತ  ಸ್ನೇಹ  ಸಂಪತ್ತು ಗಳಿಸಿದ್ದೇ ಹೆಚ್ಚು ಮತ್ತು ಅದಕ್ಕೆ ಸಂತಸ ಪಡುತ್ತಾರೆ . 

ಟಿ ಎನ್ ಸೀತಾರಾಂ ಅವರ ಮುಕ್ತ ಮುಕ್ತ ನಾನು ನೋಡಿದ ಬೆರಳೆಣಿಕೆ ಧಾರಾವಾಹಿ ಗಳಲ್ಲಿ ಒಂದು 

(ಕೆಲವು ಮುದ್ರಣ ತಪ್ಪುಗಳು ಇವೆ . ಕೆಲವು ಐತಿಹಾಸಿಕ ವಿವರಗಳೂ .ಉದಾ: ಇಂದಿರಾ ಗಾಂಧಿಯವರ ಚುನಾವಣೆ ಅಸಿಂಧು ತೀರ್ಪು ಕೊಟ್ಟವರು ನ್ಯಾ ಮೂ .ಕೆ ಎಸ್ ಹೆಗ್ಡೆ ಎಂದು ಬರೆದಿದ್ದು ಅದು ನ್ಯಾ ಮೂ ಸಿನ್ಹಾ ಎಂದು ಇರಬೇಕು ಅದೇ ರೀತಿ 1985 ರಲ್ಲಿ ತಾವು ಮುಖ್ಯ ಮಂತ್ರಿ ಆಗಿರುವಾಗ  ನಡೆದ ಲೋಕ ಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗ್ಡೆ ಬಾಗಲಕೋಟೆ ಕ್ಷೇತ್ರದಿಂದ ಸಿದ್ದು ನ್ಯಾಮೆ ಗೌಡರೆದುರು ಸೋತರು ಎಂದಿದೆ .ಆಗ ಅವರು ಲೋಕ ಸಭೆಗೆ ಸ್ಪರ್ದಿಸಿರಲಿಲ್ಲ .ಅವರು ಸೋತುದು 1991 ರಲ್ಲಿ  )

ಶುಕ್ರವಾರ, ಡಿಸೆಂಬರ್ 15, 2023

ಪ್ರಾರ್ಥನೆ

 

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.
 
ಇದು ಬಸವಣ್ಣ ನವರ  ಜನಪ್ರಿಯ ವಚನ . ಇಲ್ಲಿ ನಾವು ಋಣಾತ್ಮಕ ಬೇಡಿಕೆಗಳನ್ನು ಕಾಣುತ್ತೇವೆ .  ಗುರಿ ಮಾತ್ರ  ಒಳ್ಳೆಯದು .

ವೈದ್ಯ ಶಾಸ್ತ್ರದಲ್ಲಿ ಹಚಿಸನನ ಪ್ರಾರ್ಥನೆ ಎಂದು ಇದೆ . 
SP Kalantri on X: "From too much zeal for untested ...ತಾನಾಗಿಯೇ ಗುಣವಾಗುವುದು ಖಾತರಿ ಇರುವ ಕಾಯಿಲೆಗಳನ್ನು  ಹಾಗೆಯೇ ಬಿಡಲು ಬಿಡದ ಮನಸ್ಥಿತಿ(ಸುಮ್ಮನೇ ಔಷಧಿ ಕೊಡುವುದು ) ,ಹೊಸತಕ್ಕೆಲ್ಲಾ ಅಂಧ ಪುರಸ್ಕಾರ ಮತ್ತು ಹಳೆಯದೆಲ್ಲವೂ  ಗೌಣ ಎಂಬ ತಿರಸ್ಕಾರ :ವಿವೇಕವನ್ನು ಜ್ಞಾನದ ಮುಂದೆ  ,ಅಂತೆಯೇ ವಿಜ್ಞಾನವನ್ನು ಕಲೆಯ ಮುಂದೆ ,ಬುದ್ದಿವಂತಿಗೆಯನ್ನು ಸಾಮಾನ್ಯ ಜ್ಞಾನದ ಮೇಲೆ  ಇಡುವುದು :ರೋಗಿಗಳನ್ನು ಕೇಸ್ ಎಂದು ನೋಡುವದು , ನಮ್ಮ ಚಿಕಿತ್ಸೆಯು ರೋಗದ ಬಳಲುವಿಕೆಗಿಂತ ಹೆಚ್ಚು ಅಸಹನೀಯವಾಗುವಂತೆ ಮಾಡುವುದು --ದೇವರೇ ಇಂತಹುಗಳಿಂದ ನನ್ನನ್ನು ದೂರವಿಡು

ಬುಧವಾರ, ಡಿಸೆಂಬರ್ 13, 2023

ರೋಗಿ ತಾನೇ ಮೊದಲ ಗುರುವು

 


ಸರ್ ವಿಲಿಯಂ ಒಸ್ಲರ್ ಅವರನ್ನು ಆಧುನಿಕ ವೈದ್ಯ ಶಾಸ್ತ್ರದ ತಂದೆ ಎಂದು ಕರೆಯುತ್ತಾರೆ . ವೈದ್ಯಕೀಯ ಶಿಕ್ಷಣ ವನ್ನು  ನಾಲ್ಕು ಗೋಡೆಗಳ ಕ್ಲಾಸ್ ರೂಮ್ ಗಳಿಂದ  ರೋಗಿಗಳ ಬಳಿಗೆ ,ಬೆಡ್ ಸೈಡ್ ಕ್ಲಿನಿಕಲ್ ಪಾಠಗಳ ಮೂಲಕ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ . "ಪಠ್ಯ ಪುಸ್ತಕಗಳಿಲ್ಲದೆ ವೈದ್ಯ ಶಾಸ್ತ ಅಧ್ಯಯನ ,ನಕ್ಷೆಯಿಲ್ಲದ ಸಮುದ್ರ ಯಾನದಂತೆ ; ನಿಜ ರೋಗಿಗಳ ಪರೀಕ್ಷಾ ಅಧ್ಯಯನ ಸಮುದ್ರಕ್ಕೇ  ಹೋಗದಂತೆ "( He who studies medicine without books sails an uncharted sea, but he who studies medicine without patients does not go to sea at all”)

ಒಳ್ಳೆಯ ವೈದ್ಯನಾಗಿ ರೂಪಿತನಾಗಲು ವಿದ್ಯಾರ್ಥಿ ದೆಸೆಯಲ್ಲಿ  ವಿಧ ವಿಧದ ರೋಗಗಳ ರೋಗಿಗಳನ್ನು ನೋಡಿರ ಬೇಕು . ಮನವರಿಯದ್ದು  ಕಣ್ಣು  ಕಾಣದು ಎಂಬ ನುಡಿ ಗಟ್ಟು ಇದೆ . ಹಿಂದೆ ಕಂಡ ಕಾಯಿಲೆಗಳ ಪತ್ತೆ ಹಚ್ಚುವುದು ಸುಲಭ .  ಪುಸ್ತಕದಲ್ಲಿ ಓದಿದ್ದರೂ ಕಂಡಿರದ ಕಾಯಿಲೆಗಳ  ಡಯಾ ಗ್ನೋಸಿಸ್  ಸುಲಭವಲ್ಲ . 

ಸರಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಈ ವಿಷಯದಲ್ಲಿ ಅದೃಷ್ಟ ವಂತರು . ಅಲ್ಲಿ  ಹಣ ತೆತ್ತು ಚಿಕಿತ್ಸೆ ಪಡೆಯುವವರು ಕಡಿಮೆ . ಉಚಿತ ಚಿಕಿತ್ಸೆ ಪಡೆಯುವ ರೋಗಿಗಳು ವಿದ್ಯಾರ್ಥಿ ಗಳು ಪರೀಕ್ಷೆ ಮಾಡುವುದಕ್ಕೆ ಆಕ್ಷೇಪ ಮಾಡುವುದು ಕಡಿಮೆ . ರೋಗದ ವಿವಿಧ ಲಕ್ಷಣಗಳು ಇರುವ ಪೇಷಂಟ್ ಇದ್ದರೆ ಎಲ್ಲಾ ವಿದ್ಯಾರ್ಥಿಗಳೂ ಅವನ ಬಳಿ ಬಂದು ರೋಗ ಚರಿತ್ರೆ ಕೇಳುವರು .ಪರೀಕ್ಷೆ ಮಾಡುವರು .ಹೇಳಿದ್ದನ್ನೇ ಹೇಳಿ ಹೇಳಿ ಅವರೂ ಸುಸ್ತು ಆಗುವುದು ಉಂಟು .ಅಲ್ಲದೆ ಪರೀಕ್ಷಕರ ಸ್ಪರ್ಶ ,ಮರ್ದನ ಇತ್ಯಾದಿ ಗಳಿಗೆ ಒಳಗಾಗ ಬೇಕಾಗುವುದು . ಕೆಲವು ರೋಗಿಗಳು ತಪ್ಪಿಸಲು ಬಾತ್ ರೂಮ್ ನಲ್ಲಿ ಅಡಗುವರು ,ಇನ್ನು ಕೆಲವರು ತೀವ್ರ ಅಸೌಖ್ಯ ನಟಿಸುವರು . 

ವಿಶ್ವ ವಿದ್ಯಾಲಯ ಪರೀಕ್ಷೆಗೆ ಕೆಲ ದಿನ ಮೊದಲು ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ವಾರ್ಡ್ ಗೆ ಪ್ರವೇಶ ನಿಷೇಧ(Out of Bounds ) .ಪರೀಕ್ಷೆಗೆ ಇಡುವ ರೋಗಿಗಳ ವಿವರ ತಿಳಿಯದಿರಲಿ ಎಂಬ ಉದ್ದೇಶ .ಆದರೆ ರಾತ್ರೋ ರಾತ್ರಿ ವಿದ್ಯಾರ್ಥಿಗಳು ಕಣ್ಣು ತಪ್ಪಿಸಿ ಹೋಗಿ ಪರೀಕ್ಷಾ ಕೇಸ್ ಗಳನ್ನು ನೋಡುವುದುಂಟು . ಹೌಸ್ ಸರ್ಜನ್ ,ಪಿ ಜಿ ಗಳು ಇಂತಿಂತಹ ಕೇಸ್ ಇದೆ ಎಂಬ ಸೂಚನೆ ಕೊಡುವರು .ಕೆಲವೊಮ್ಮೆ ಈ ಮುನ್ಸೂಚನೆಗಳು ತಪ್ಪಾಗಿ ಪರೀಕ್ಷಾ ರ್ಥಿ  ಗಳು ಪೇಚಿಗೆ ಸಿಗುವದು ಉಂಟು . ಉದಾಹರಣೆಗೆ ಒಂದು ಸಾರಿ  ಪರೀಕ್ಷೆಗೆ ಬಲ ಬದಿಯ ಪಾರ್ಶ್ವ ವಾಯು ಕೇಸ್ ಇಟ್ಟಿದ್ದರು . ಮುನ್ಸೂಚನೆ ಕೊಡುವ ಹಿರಿಯರು ಪರೀಕ್ಷಾರ್ಥಿಗಳಿಗೆ 'ಬಲ ಬದಿ ಪಾರ್ಶ್ವ ವಾಯು ರೋಗಿಗೆ ಹೈಡ್ರೋಸೀಲ್(ವೃಷಣ ಚೀಲದ ನೀರು ) ಕೂಡಾ ಇದೆ . ತಪ್ಪಿದರೆ ಫೇಲ್ ಆದೀತು .; ಎಂಬ ಎಚ್ಚರಿಕೆ ಕೊಟ್ಟರು . ಅವರ ಮಾತು ಕೇಳಿ ಪರೀಕ್ಷಾರ್ಥಿ  ಮುಖ್ಯ ರೋಗವಾದ ಪಾರ್ಶ್ವ ವಾಯು ಗಿಂತಲೂ ಹೈಡ್ರೊ ಸೀಲ್ ನ್ನೇ ಹುಡುಕಿ ಸಿಗದೇ (ರಾತ್ರೋ ರಾತ್ರಿ ರೋಗಿಯನ್ನು ಬದಲಿಸಿದ್ದರು ) ಪರೀಕ್ಷಕರು  ಡಯ ಗ್ನೋಸಿಸ್ ಕೇಳಿದಾಗ   ರೈಟ್ ಸೈಡ್ ಹೆಮಿಪ್ಲಿಜಿಯ (ಪಾರ್ಶ್ವ ವಾಯು )ವಿಥ್ ಔಟ್ ಹೈಡ್ರೊ ಸೀಲ್ ಎಂದಾಗ ಪರೀಕ್ಷಕರಿಗೆ ಸೋಜಿಗ . 

ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು ಎಂಬಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೂ ,ವೈದ್ಯರಿಗೂ ರೋಗಿಯೇ ಮೊದಲ ಗುರು . ರೋಗಿಯಿಂದ ಪಾಠ ಕಲಿತ ವೈದ್ಯರು ಮತ್ತು ಅವರಿಂದ ಚಿಕಿತ್ಸೆ ಪಡೆಯುವವರು ಧನ್ಯರು  

ಮಂಗಳವಾರ, ಡಿಸೆಂಬರ್ 12, 2023

ಪಂಚಮಂ ಕಾರ್ಯ ಸಿದ್ದಿ

 ವಾರದ ಹಿಂದೆ  ಒಬ್ಬರು ಬಂದಿದ್ದರು . "ಡಾಕ್ತ್ರೆ ನಾನು ಜ್ವರ ತಲೆನೋವು ಎಂದು "ಗ " ಡಾಕ್ಟರ್ ಬಳಿ ಹೋಗಿದ್ದೆ . ಅವರ ಮದ್ದು ನಾಲ್ಕು ಡೋಸ್ ತಿಂದರೂ ಕಡಿಮೆ ಆಗಿಲ್ಲ ಎಂದು "ಮ " ಅವರ ಬಳಿಗೆ ಹೋದೆ .ಅವರ ಮದ್ದಿನಲ್ಲಿ  ಜ್ವರ ಸ್ವಲ್ಪ ಕಡಿಮೆ ಆಯಿತು ಆದರೂ ಉಷ್ಣ ಆಗಿ ಗ್ಯಾಸ್ತ್ರಿಕ್ ಆಯಿತು .ಹಾಗೆ "ಭಾ "ಅವರ ಬಳಿ ಹೋದೆ ,ಅವರ ಔಷಧಿ ಯಲ್ಲಿ ಏನೂ ಕಮ್ಮಿ ಇಲ್ಲ ,ಎಂದು ಹೋಮಿಯೋ ಡಾಕ್ತ್ರ ಬಳಿ ಚಿಕಿತ್ಸೆ ಮಾಡಿಸಿದೆ . ಹೊಟ್ಟೆ ನೋವು ಹಾಗೇ ಇದೆ ; ನಿಮ್ಮ ಮದ್ದು ನನಗೆ ಹಿಡಿಯುತ್ತದೆ .ಹಾಗೆ ಬಂದೆ "ಅಂದರು . ನಾನು ನಗುತ್ತಾ ಹೇಳಿದೆ ನಿಮಗೆ ಖಂಡಿತಾ ಗುಣ ಆಗುವುದು .ಯಾಕೆಂದರೆ ಹಿರಿಯರು ಹೇಳುವರು 'ಪಂಚಮಂ ಕಾರ್ಯ ಸಿದ್ಧಿ '

ಇಂತಹವರು ಎಲ್ಲಾ ವೃತ್ತಿಯವರ ಬಳಿಗೂ ಬರುವರು . ನಮ್ಮನ್ನು ಸಂತೋಷ ಪಡಿಸಲೋ ಎಂಬಂತೆ ಸ್ವಲ್ಪ ಮಸಾಲೆ ಸೇರಿಸಿ  ನಮ್ಮ ವೃತ್ತಿ ಮಿತ್ರರನ್ನು ತೆಗಳುವರು ,ನಮ್ಮನ್ನು ಹೊಗಳುವರು .ಈ  ಚಕ್ರ ಮುಂದುವರಿಯುವುದು .ರೋಗಿಗಳಿಗೆ ನನ್ನ ಸಲಹೆ ಯಾವಾಗಲೂ ವಿಶ್ವಾಸದಿಂದ ಒಬ್ಬ ವೈದ್ಯರ ಬಳಿಗೆ ಹೋಗ ಬೇಕು . ಆಮೇಲೆ ಅವರ ಉಪಚಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅವರ ಬಳಿಗೆ ಹೋಗಿ ಪರಿಹರಿಸಿ ಕೊಳ್ಳಬೇಕು . ತುರ್ತು ಪರಿಸ್ಥಿತಿ ಯಲ್ಲಿ ಬೇರೆ ಆಸ್ಪತ್ರೆಗೆ ಹೋಗ ಬಹುದು . ಒಂದು ಎರಡು ದಿನದ ಔಷಧಿ ತೆಗೆದು ಕೊಂಡು ಕೈ ನೋಡುವಾ ಎಂದು ಬಂದವರನ್ನು ನಾನು ವಿನಯದಿಂದ ಮರಳಿ ಕಳುಹಿಸಿದ್ದೇನೆ . ಕೆಲವರಿಗೆ ಇದು ಪಥ್ಯವಾಗದು. ಯಾವುದೇ ವೃತ್ತಿಯವರು ತಮ್ಮ ಬಳಿ ಬಂದು ಅನ್ಯರ ಹಳಿವವರ ಬಗ್ಗೆ ಜಾಗರೂಕ ಇರಬೇಕು .

  ಬಾಲಂಗೋಚಿ : ನಾನು ಐದನೇ ವೈದ್ಯನಾದ ಕಾರಣ ಖಂಡಿತ ಗುಣವಾಗುವುದು ಗಾದೆ ಸುಳ್ಳು ಆಗದಿದ್ದರೆ .ಅದರಂತೆ ಸರ್ಜನ್ ಒಬ್ಬರು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ರೋಗಿಗೆ ಧೈರ್ಯ ಹೇಳುತ್ತಾ' ನೀನು ಖಂಡಿತಾ ಗುಣ ಮುಖ ನಾಗುವಿ.ಸರ್ಜರಿ 100% ಸಕ್ಕೆಸ್ಸ್ . "ಎಂದಾಗ ರೋಗಿ ಅದು ಹೇಗೆ ಅಷ್ಟು ಖಡಾಕಡಿ ಹೇಳುವಿರಿ "ಎನ್ನುವರು .ಅದಕ್ಕೆ ವೈದ್ಯರು ವೈದ್ಯ ಶಾಸ್ತ್ರದ ಪ್ರಕಾರ  ಈ ಶಸ್ತ್ರ ಕ್ರಿಯೆಯ ಸಕ್ಸೆಸ್ ರೇಟ್ 10%.ನಾನು ಈಗಾಗಲೇ ಆಪರೇಷನ್ ಮಾಡಿದ ಒಂಭತ್ತು ಮಂದಿ  ಕೊಂಪ್ಲಿ ಕೇಶನ್ ನಿಂದ ದೇವರ ಪಾದ ಸೇರಿದ್ದು ನೀನು ಹತ್ತನೆಯವನು . ಆದುದರಿಂದ ನೀನು ಗುಮಾಮುಖ ನಾಗುವುದು ಶತ ಸಿದ್ಧ 


ಬುಧವಾರ, ಡಿಸೆಂಬರ್ 6, 2023

                  Madhav Gadgil - Wikipedia                                                                                                                                ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಲ್ ಅವರ ಆತ್ಮ ಚರಿತ್ಮಾತ್ಮಕ ಕೃತಿ "A Walk Up The Hill .Living With People and Nature "  ಈಗ ತಾನೇ ಓದಿ ಮುಗಿಸಿದೆ . ಪರಿಸರ ಪ್ರೇಮಿಗಳು ಅತ್ಯಾವಶ್ಯ ಓದ ಬೇಕಾದ ಕೃತಿ . 

೧೯೪೨ ರಲ್ಲಿ ಪಶ್ಚಿಮ ಘಟ್ಟಗಳ ಮಡಿಲಲ್ಲಿ ಜನಿಸಿದ ಇವರ  ವಿದ್ಯಾಭ್ಯಾಸ ಪುಣೆ ,ಮುಂಬೈ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ .ಇವರ ಪಿ ಎಚ್ ಡಿ ಪ್ರಬಂಧ ಪರಿಸರ ಗಣಿತ(Mathematical Ecology ).ಅಮೆರಿಕಾದಲ್ಲಿನ ಉದ್ಯೋಗಾವಕಾಶ ಬಿಟ್ಟು ಭಾರತಕ್ಕೆ ಬಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್  ಆಫ್ ಸೈನ್ಸ್ ನಲ್ಲಿ ೩೧ ವರ್ಷಗಳ ಸೇವೆ ಸಲ್ಲಿಸಿದ್ದು ,ಅಲ್ಲಿ ಪರಿಸರ ವಿಜ್ಞಾನ ಕೇಂದ್ರ ಸ್ಥಾಪಿಸಿದರು . ಖ್ಯಾತ ವಿಜ್ಞಾನಿ ಆಡಳಿತಗಾರ ಪ್ರೊ ಸತೀಶ್ ಧವನ್ ಇವರಿಗೆ ಬೆನ್ನೆಲುಬಾಗಿ ನಿಂತವರು . ಈ ಕೇಂದ್ರದ ಮೂಲಕ ಆದಿವಾಸಿಗಳು ,ರೈತರು ,ಕುರುಬರು ಮತ್ತು ಮೀನುಗಾರರ ಬಗ್ಗೆ ನೈಜ ಅಧ್ಯಯನ ,ಇವರು ಕುರ್ಚಿ ಗೆ ಸೀಮಿತ ವಿಜ್ಞಾನಿ ಅಲ್ಲ . ತಮ್ಮ ಅಧ್ಯಯನಕ್ಕೆ ಕಾಲ್ನಡಿಗೆ ,ಸೈಕಲ್ ಮೈಲುಗಳನ್ನು ಕ್ರಮಿಸಿ ,ತಾವು ಹೋದಲ್ಲಿ ಸಿಕ್ಕಿದ ಆಹಾರ ಪ್ರೀತಿಯಿಂದ ಸೇವಿಸಿ ಜನರೊಳಗೊಂದಾಗಿ ಮಾಹಿತಿ ಸಂಗ್ರಹ . ಕರ್ನಾಟಕ ದಲ್ಲಿ ಪಶ್ಚಿಮ ಘಟ್ಟದ ಮೂಲೆ ಮೂಲೆ ಮತ್ತು ದೇಶದಾದ್ಯಂತ ಪ್ರವಾಸ . ಭಾರತ ಸರಕಾರಕ್ಕೆ ಪರಿಸರ ವಿಷಯದಲ್ಲಿ ಸಲಹೆಗಾರ ಆಗಿ ಯೂ  ಸೇವೆ . ಮರಾಠಿಯ ಖ್ಯಾತ ಅಂತ್ರೋಪೋಲೊಜಿಸ್ಟ್ ಮತ್ತು ಲೇಖಕಿ  ಕುಟುಂಬ ಸ್ನೇಹಿತರು ಆಗಿದ್ದು ಅವರಿಂದ ಪ್ರೇರಣೆ .. ಖ್ಯಾತ ಪಕ್ಷಿ ವಿಜ್ಞಾನಿ ಸಲೀಮ್ ಅಲಿ ಕೂಡಾ ಆಪ್ತರಾಗಿದ್ದು ಅವರ ಪ್ರಭಾವ ಕೂಡಾ

ಶುಕ್ರವಾರ, ಡಿಸೆಂಬರ್ 1, 2023

 ಸಾಮೂಹಿಕ ಗಾಯ ಮಜ್ಜನ 

ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ  ರೋಗಿಗಳ ಸಂಖ್ಯೆ ಅಧಿಕ ಇರುವುದು ಸಾಮಾನ್ಯ . ವಾರ್ಡ್ ಗಳಲ್ಲಿ ಅಕ್ಯೂಟ್ ಕೇಸಸ್ ಮತ್ತು ಕ್ರಾನಿಕ್ ಕೇಸುಗಳು ಎಂದು ಎರಡು ವಿಧ . ಅಕ್ಯೂಟ್ ಅಲ್ಪ ಸಮಯದ ಇತಿಹಾಸ ಉಳ್ಳ ಕಾಯಿಲೆ . ಕ್ರಾನಿಕ್ ಎಂದರೆ ಹಲವು ದಿನ,ವಾರ ,ತಿಂಗಳು ಅಥವಾ ವರ್ಷಗಳಿಂದ ಬಳುವಳಿಯಾಗಿ ಬಂದ ರೋಗ . 

ಇದರಲ್ಲಿ ಕ್ರಾನಿಕ್ ರೋಗಿಗಳು ಪುನಃ ಪುನಃ ಆಸ್ಪತ್ರೆಗೆ ದಾಖಲು ಆಗುವರು . ಆಸ್ಫತ್ರೆಯ ಒಳ ಹೊರಗು ಅರಿತವರು . ಹೆಚ್ಚಿನವರು ಬಹಳ ಡಿಮ್ಯಾಂಡಿಂಗ್ ಟೈಪಿನವರು . ಪ್ರತಿಯೊಂದರಲ್ಲೂ ಕೊರತೆ ಕಂಡು ಹಿಡಿಯುವ ಇವರನ್ನು ಸಂಭಾಳಿಸುವುದು ಸ್ವಲ್ಪ ಕಷ್ಟ . ಹಳೆಯ ಯೋಗಿಯು ಹೊಸಾ ವೈದ್ಯನಿಂಗಿಂತ ಉತ್ತಮ ( ರೋಗದ ಬಗ್ಗೆ  ಹೆಚ್ಚು ಅರಿವು ಉಳ್ಳವನು )ಎಂಬ  ನುಡಿಗಟ್ಟು ಇದೆ . ಇವರ ಕೈಯಲ್ಲಿ ಹೊಸಾ ಹೌಸ್ ಸರ್ಜನ್ ,ನರ್ಸ್ ಸಿಕ್ಕಿದರೆ ಗೋಳು ಹೊಯ್ದು ಬಿಡುತ್ತಾರೆ . ಇಂಜೆಕ್ಷನ್ ಕುತ್ತಿದ್ದು ಸರಿಯಾಗಿಲ್ಲ ,ಮಾತ್ರೆ ಬದಲು ಆಗಿದೆ ,ಡ್ರೆಸ್ಸಿಂಗ್  ಮಾಡಿದ್ದು ತಪ್ಪಾಗಿದೆ ಇತ್ಯಾದಿ . 

ಇಂತಹ ರೋಗಿಗಳು ಒಂದು ಉಪಯೋಗಕ್ಕೆ ಬರುವರು .ಅವರನ್ನು  ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಎಕ್ಸಾಮ್ ಕೇಸ್ ಎಂದು ಇಡುವರು . ವಿದ್ಯಾರ್ಥಿಗಳು ಇವರ ರೋಗ ಇತಿಹಾಸ ಕೇಳಿ ,ಪರೀಕ್ಷೆ ಮಾಡಿ ಇಂತಹ ಕಾಯಿಲೆ ಏನು ಚಿಕಿತ್ಸೆ ಇತ್ಯಾದಿ ಹೇಳಬೇಕು . ಇಂತಹ ರೋಗಿಗಳಿಗೆ ವಿಶೇಷ ಪರೀಕ್ಷಾ ಭತ್ಯೆ ಸಿಗುವುದು ,ಕೆಲವೊಮ್ಮೆ ಅವರ ಬಾಯಿ ಸರಿಯಾಗಿ ಬಿಡಿಸಲು ಪರೀಕ್ಷಾರ್ಥಿಗಳೇ ಟಿಪ್ಸ್ ಕೊಡುವರು . ಕಾಯಿಲೆಯ ಡೈಯ ಗ್ನೋಸಿಸ್  ಕೂಡಾ ಅವರೇ ಹೇಳುವರು . ಪರೀಕ್ಷಾರ್ಥಿ ಸರಿಯಾಗಿ ಗಮನಿಸದಿದ್ದರೆ ,'ನೋಡಪ್ಪಾ ನನ್ನ ಬೆನ್ನ ಹಿಂದೆ ಒಂದು ಗಡ್ಡೆ ಇದೆ ,ಪರೀಕ್ಷಕರು ಕೇಳುವರು ,ಅದು ಲೈಪೊಮ . ಇತ್ಯಾದಿ ಹಿಂಟ್ ಕೊಡುವರು .ಕೆಲವೊಮ್ಮೆ ಇದು ತಪ್ಪು ಇರಬಹುದು . 

ಸರ್ಜಿಕಲ್ ವಾರ್ಡ್ ನಲ್ಲಿ  ಹಳೇ ಗಾಯದ  ರೋಗಿಗಳ ಸಾಲು ಇರುವುದು . ನಾವು ಹೌಸ್ ಸರ್ಜನ್ ಆಗಿದ್ದಾಗ ಮುಂಜಾನೆ ಇಂಜೆಕ್ಷನ್ ಕೊಟ್ಟಾದ ಮೇಲೆ ಸಾಮೂಹಿಕ ಗಾಯ ಸ್ನಾನ . ನಮ್ಮ ಹಿಂದೆ ಒಬ್ಬ ಡ್ರೆಸ್ಸರ್ ಒಂದು ತಳ್ಳು ಟ್ರಾಲಿ ಯಲ್ಲಿ  ಗಾಯ ತೊಳೆಯುವ ದ್ರಾವಣ ,ಪರಿಕರಗಳು ,ಮುಲಾಮು ಇತ್ಯಾದಿ ,ಇನ್ನೊಂದರಲ್ಲಿ ಕೈ ಶುದ್ಧ ಮಾಡುವ ಡೆಟಾಲ್ ದ್ರಾವಣ ಮತ್ತು ಕೈ ಒರಸುವ ಬಟ್ಟೆ ಸಹಿತ ಹಿಂಬಾಲಿಸುವರು . ಆಸ್ಪತ್ರೆಯ ಟ್ರೇಡ್ ಮಾರ್ಕ್ ವಾಸನೆ ಅಥವಾ ಪರಿಮಳ ಡೆಟಾಲ್ ಒಂದು ಕಾರಣ 

ಹಲವು ವಾರಗಳಿಂದ ಇರುವ ರೋಗಿಗಳ ನೋಟ್ಸ್ ಬರೆಯುವಾಗ  ಅಲ್ಸರ್ ರೈಟ್ ಫುಟ್  .ಕ್ಲೀನ್ ಅಂಡ್ ಡ್ರೆಸ್ ಆರಂಭದಲ್ಲಿ ಎಂದು ಆರಂಭದಲ್ಲಿ ಬರೆದರೂ ಕೊನೆ ಕೊನೆಗೆ ಶಾರ್ಟ್ ಫಾರಂ  c &d  ಎಂದು ಗೀಚುತ್ತಿದ್ದೆವು . ಅಲ್ಸರ್ ಎಂದ ಒಡನೆ ಸಿ ಅಂಡ್ ಡಿ  ಬರುತ್ತಿತ್ತು . ಒಮ್ಮೆ ಒಂದು ರೋಗಿಯು ಹಲವು ವಾರಗಳಿಂದ ಹೊಟ್ಟೆಯ ವೃಣ ಅಥವಾ ಪೆಪ್ಟಿಕ್ ಅಲ್ಸರ್ ಚಿಕಿತ್ಸೆಗೆ ಅಡ್ಮಿಟ್ ಆಗಿದ್ದರು . ಹೌಸ್ ಸರ್ಜನ್ ಆರಂಭದಲ್ಲಿ ಪೆಪ್ಟಿಕ್ ಅಲ್ಸರ್ ಎಂದು ಆರಂಭಿಸಿ ಕೊನೆಗೆ ಅಲ್ಸರ್ ಮಾತ್ರ ಬರೆಯುತ್ತಿದ್ದರು .ಹೌಸ್ ಸರ್ಜನ್ ಬದಲು ಆದಾಗ ಅವರು ಅಲ್ಸರ್  -ಕ್ಲೀನ್ ಅಂಡ್ ಡ್ರೆಸ್ ಎಂದು ಬರೆದರು ಎಂದು ಕತೆ 

ಗಾಯವನ್ನು ಸ್ವಚ್ಛ ಮಾಡಿ ಬ್ಯಾಂಡೇಜ್ ಮಾಡುವುದಕ್ಕೂ ಕ್ರಮ ಇದೆ .ತೊಳೆಯುವಾಗ ಒಳಗಿಂದ ಹೊರಕ್ಕೆ  ಎಂಬ ನಿಯಮ ಮುಖ್ಯ ,ಬ್ಯಾಂಡೇಜ್ ಗಳಲ್ಲಿ ಹಲವು ವಿಧ .ನಮಗೆ ಇದನ್ನು ಅನುಭವಿ ನರ್ಸ್ ಮತ್ತು ಡ್ರೆಸ್ಸರ್ ಗಳು ತಿಳಿಸಿ ಕೊಡುತ್ತಿದ್ದರು . 

ಈಗ ಹೌಸ್ ಸರ್ಜನ್ ಗಳು ಖಾಸಗಿ ಕಾಲೇಜು ಗಳಲ್ಲಿ ಇಂತಹ ಸಾಮೂಹಿಕ ಗಾಯ ಮಜ್ಜನ ಮಾಡುವುದು ವಿರಳ . 


ಗುರುವಾರ, ನವೆಂಬರ್ 30, 2023

 ನಮಗೆ ಆಪ್ತರಾಗಿದ್ದ ರೈಲ್ವೇ ಇಲಾಖೆಯಲ್ಲಿ ಇಂಜಿನೀಯರ್ ಆಗಿದ್ದ  ಶ್ರೀ ನಾಗರಾಜಪ್ಪ ಕುಟುಂಬ ದ ಬಗ್ಗೆ ಹಿಂದೆ ಬರೆದಿದ್ದೆ . ಅವರ ಇಚ್ಛೆಯಂತೆ  ನಿಧನಾನಂತರ ಅವರ ಶರೀರವನ್ನು  ಮೆಡಿಕಲ್ ಕಾಲೇಜು ಗೆ ದಾನ ಮಾಡಿದರು . ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಊಟ ಹಾಕಿದರು . ಇಲ್ಲಿ ಗಮನಿಸ ಬೇಕಾದ ಅಂಶ ಕೊನೆಯ ವರೆಗೂ ಮಕ್ಕಳು ಅವರನ್ನು ಚೆನ್ನಾಗಿ ನೋಡಿಕೊಂಡರು ಮತ್ತು ಮಕ್ಕಳು ಒಂದು ನೆಲೆಗೆ ಬರುವ ವರೆಗೆ ಅವರು ಬದುಕಿದ್ದರು . 

            ಇದೇ ರೀತಿ ರೈಲ್ವೆಯ ನನ್ನ ಸಹೋದ್ಯೋಗಿ ವೈದ್ಯ ಮಿತ್ರ ಡಾ ಪ್ರಸನ್ನ ಕುಮಾರ್ (ರೈಲ್ವೆ ವೈದ್ಯಕೀಯ ಸೇವೆಯ ಅತ್ಯುನ್ನತ  ಹುದ್ದೆ ಅಲಂಕರಿಸಿ ತಿಂಗಳ ಹಿಂದೆ ನಿವೃತ್ತ ರಾಗಿರುವರು ) ತಮ್ಮ ತೀರ್ಥ ರೂಪ ರನ್ನು ಕೊನೆಯ ತನಕ ಚೆನ್ನಾಗಿ ನೋಡಿಕೊಂಡು ,ಅವರ ಪುಣ್ಯ ತಿಥಿಯಂದು ಆಶ್ರಮ ವಾಸಿಗಳಿಗೆ ಊಟ ಹಾಕಿ ಆಚರಿಸುತ್ತಲಿರುವರು . 

               ನಮ್ಮಲ್ಲಿ ಈಗ ಕೆಲವು ತಂದೆ ತಾಯಿಗಳು ನಿಧನಾನಂತರ ಹೊರೆಯಾಗುವುದು ಬೇಡ ಎಂದು ತಮ್ಮ ಶರೀರ ಮೆಡಿಕಲ್ ಕಾಲೇಜು ಗೆ ದಾನ ಬರೆಯುವರು ..ಬದುಕಿರುವಾಗ ಹೆತ್ತವರನ್ನು ಕಾರಣಾಂತರ ಗಳಿಂದ ಸರಿಯಾಗಿ ನೋಡಿಕೊಳ್ಳದವರೂ ನೋಡಿ ಕೊಂಡವರೂ  ಅವರ ಉತ್ತರ ಕ್ರಿಯೆ ಇತ್ಯಾದಿ ಗಳನ್ನು ವೈಭವೋಪೇತ ವಾಗಿ  ಆಚರಿಸುವರು . ಮಕ್ಕಳು ಹಲವರು ಇದ್ದರೆ ಪ್ರತಿಯೊಬ್ಬರೂ ತಮ್ಮ ವತಿಯಿಂದ ಭೋಜನಕ್ಕೆ  ವಿಶೇಷ ಸಿಹಿತಿಂಡಿ  ಏರ್ಪಾಡು ಮಾಡುವರು .ಇಂತಹ ಕೆಲವು ಊಟಕ್ಕೆ ನಾಲ್ಕೈದು ಸಿಹಿ ತಿಂಡಿ ಇರುವುದೂ ಉಂಟು ,ಈಗ ಹೆಚ್ಚಿನವರು ಎಳೆಯ ಪ್ರಾಯದಲ್ಲಿಯೇ ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವಾಗ ಅತಿಥಿಗಳಿಗೆ ಇದು ಹೊರೆಯೇ . ಇಂತಹ ಆಚರಣೆ ನಿಜಕ್ಕೂ ಹಿರಿಯರ ಆತ್ಮಕ್ಕೆ ಶಾಂತಿ ತಂದಿತೇ ? ಸರ್ವ ಶಕ್ತನಾದ ಭಗವಂತ ಎಂದು ನಾವು ನಂಬುವುದಿದ್ದರೆ ಅವನಿಗೂ ಅದು ಇಷ್ಟವಾದೀತೇ ?

ಮಂಗಳವಾರ, ನವೆಂಬರ್ 14, 2023

ಮೊನ್ನೆ ಕುತೂಹಲದಿಂದ ತರಿಸಿದ್ದ ಶ್ರೀ ಟಿ ಜಿ ಮುಡೂರು ಅವರ' ಬೊಲ್ಪಾನಗ  ಮುಗ್ತು ' ಅರೆ ಭಾಷೆಯ ನಾಟಕದ ಕನ್ನಡ ಅನುವಾದ (ಅನು; ಡಾ ಕರುಣಾಕರ ನಿಡುಂಜಿ ). ಲೇಖಕರು ಕನ್ನಡ ತುಳು ಹವ್ಯಕ ,ಅರೆ ಭಾಷೆ ಇತ್ಯಾದಿಗಳಲ್ಲಿ ಕೃತಿ ರಚನೆ ಮಾಡಿರುವ ಉಲ್ಲೇಖ ಇದೆ . ಶಿಷ್ಯ ಗಣ ಮೆಚ್ಚಿದ ಪ್ರತಿಭಾವಂತ ,ನಿಷ್ಟಾವಂತ ಶಿಕ್ಷಕರು ಎಂದು ಕೇಳಿದ್ದೇನೆ .. ನನಗೆ ತಿಳಿದಂತೆ ಅವರ ಗರಡಿಯಲ್ಲಿ ಪಳಗಿದ ಕೆಲವು ಮಿತ್ರರು ಇದ್ದಾರೆ . ಗುರುವಿನ ಗುಣ ಶಿಷ್ಯರ ಲ್ಲಿ ಕಾಣಬಹುದು . 

ಇದೊಂದು ನಗೆ ಪ್ರಹಸನ ಎಂದು ಕರೆದಿದ್ದರೂ ಆಗಿನ ಕಾಲದ ಗ್ರಾಮೀಣ ಜೀವನದ ಚಿತ್ರಣ ಚೆನ್ನಾಗಿ  ಬಂದಿದೆ .(ಮೂಲಕೃತಿ ರಚನೆ ೧೯೫೬ ರಲ್ಲಿ ). ಲೇಖಕರು ಯಕ್ಷಗಾನ ಪ್ರಿಯರು ;ಹಲವು ಪಾತ್ರಗಳು ಸಮಯೋಚಿತವಾಗಿ  ಜನಪ್ರಿಯ ಪ್ರಸಂಗ  ದ ಸಾಲುಗಳನ್ನು ಸಂಭಾಷಣೆಯಲ್ಲಿ ಬಳಸಿವೆ .  ಬೇಟೆ ,ಬೇಟ ,ಯಕ್ಷಗಾನ ಆಟ ,ಜಾತ್ರೆಯ ಕೂಟ ,ಕೋಳಿ ಕಟ್ಟ ,ತೆಂಗಿನ ಕಾಯಿ ಕುಟ್ಟುವುದು ಇತ್ಯಾದಿ ಅಂದಿನ ಗ್ರಾಮೀಣ ಜೀವನದ ಹಾಸುಹೊಕ್ಕಾಗಿದ್ದ ಅಂಶಗಳ ಚಿತ್ರಣ ಇಲ್ಲಿ ಕಾಣಬಹುದು .

ಇದರಲ್ಲಿ ಬಂದ ಒಂದು ಗಾದೆ ನನಗೆ ಇಷ್ಟ ವಾಯಿತು .ಮಗಳ ಮದುವೆಗೆ ಹುಡುಗ ಹುಡುಕುವಾಗ ''ಮುಂದಾಸಿನವ ಸಿಗಲಿಲ್ಲ ,ಮುಟ್ಟಾಳೆ ಯವನು ಇಷ್ಟವಿಲ್ಲ "-ಎಂಬ ಧೋರಣೆಯಿಂದ ಎಲ್ಲೂ ಸರಿ ಆಗಲಿಲ್ಲ ಎಂದು .ಇದು ಮೂಲತಃ ತುಳು ಗಾದೆ ಇರ ಬೇಕು "ಮುಂಡಾಸುದಾಯೆ ತಿಕ್ಕುಜ್ಯೆ ,ಮೂಟ್ಟಾಲೆ ದಾಯೆ ಆಪುಜ್ಜಿ" ಎಂದು ಇರಬೇಕು . ದೊಡ್ಡ ಮನೆತನದವರು ಸಿಗರು ,ಬಡವರು ಆಗದು ಎಂಬ ಅರ್ಥ .

ಅರೆ ಭಾಷೆಯ ಒಂದು ಕೃತಿಯನ್ನು ಕನ್ನಡಕ್ಕೆ ಹುಡುಕಿ ತಂದು ಪ್ರಕಟಿಸಿದ ಕುವೆಂಪು ಭಾಷಾ ಪ್ರಾಧಿಕಾರದ ಕಾರ್ಯ ಮೆಚ್ಚುವಂತಹುದು

ಸೋಮವಾರ, ನವೆಂಬರ್ 13, 2023


           ಮೊನ್ನೆ ಬೆಟ್ಟಂಪಾಡಿ ಕಾಲೇಜು ನಲ್ಲಿ' ಕನಕ ದಾಸ ಬಸವ ಣ್ಣ ' ಕಮ್ಮಟಕ್ಕೆ ಹೋಗಿ ದ್ದೆ .ಬಹಳ ದಿನಗಳ ನಂತರ ಒಂದು ಒಳ್ಳೆಯ ಸಾಹಿತ್ಯ ಗೋಷ್ಠಿ . ಹಿಂದೆ ಶಾಲೆಯಲ್ಲಿ ಕಲಿತು ,ಆ ಮೇಲೆ ಪುಸ್ತಕಗಳಲ್ಲಿ ಓದಿ ಮರೆತಿತಿದ್ದ ಹಲವು ವಿಚಾರಗಳನ್ನು ಮೆಲುಕು ಹಾಕುವ ಯೋಗ . ಹಳೆಯ ಸಾಲುಗಳಿಗೆ  ಹೊಸ ಹೊಳವು ಗಳು .                                                                 ಧರ್ಮ ಎಂಬ ಶಬ್ದಕ್ಕೆ ಬೇಕಾದಂತೆ ವ್ಯಾಖ್ಯೆ ಹಣಿದು ಅದರ ಹೆಸರಲ್ಲಿ ಬಡಿದಾಡುವರ ಕಂಡಾಗ  ಬಸವಣ್ಣ ಅವರ ಈ ಸರಳ ವಚನ ಎಷ್ಟು ಆಪ್ತ ವಾಗುತ್ತದೆ . 

    ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. 

ನಾನು ಶುದ್ಧ ,ಅಶುದ್ಧ ಆದವರು ಮುಟ್ಟಿ ನನ್ನ ಪವಿತ್ರ ತೆ  ನಾಶ ಮಾಡಿದರೆ ಪೂಜಿಸುಲ್ಪಡುವ ದೇವ ಮೆಚ್ಚಲಾರ ಎಂಬ ನಂಬಿಕೆ ಗೆ ಅಕ್ಕ ಮಹಾದೇವಿ ವಚನ  ಕನ್ನಡಿ  ಹಿಡಿಯುತ್ತದೆ .ನೋಡಿ ಇದರಲ್ಲಿ ತನುಕರಗದವರಲ್ಲಿ ಎಂಬ ಮಾತು ಇದೆ . ಬೆವರಿಳಿಸಿ ದುಡಿಯದವರು ಮಾಡುವ ಪೂಜೆ ದೇವನು ಮೆಚ್ಚನು . ಬಸಣ್ಣ ಕಾಯಕವೇ ಕೈಲಾಸ ಎಂದುದು ಇದೇ ಅರ್ಥದಲ್ಲಿ .ಹೇಳಿರುವುದು

 ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾನೀನು.
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾನೀನು.
ಅರಿವುಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾನೀನು.
ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾನೀನು.
ಪರಿಣಾಮಿಗಳಲ್ಲದವರಲ್ಲಿನೈವೇದ್ಯವನೊಲ್ಲೆಯಯ್ಯಾನೀನು.
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು.
ಹೃದಯಕಮಲಅರಳದವರಲ್ಲಿ ಇರಲೊಲ್ಲೆಯಯ್ಯಾನೀನು.
ಎನ್ನಲ್ಲಿಏನುಂಟೆಂದುಕರಸ್ಥಲವನಿಂಬುಗೊಂಡೆಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ. 

ಇನ್ನು ನಿಜವಾದ ಶುದ್ದಿ ಎಂದರೆ ಏನು ?ಎಂದು ಬಸವಣ್ಣ ಸರಳವಾಗಿ ತಿಳಿಸಿರುವರು

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. 

 
ಕಮ್ಮಟದಲ್ಲಿ ಪಂಪ ಕು ವೆಂಪು ಅವರ ಪ್ರಸ್ತಾಪವೂ ಬಂತು . ಮನುಜ ಜಾತಿ ತಾನೋಂದೆ ವಲಮ್ ಎಂಬ ಪಂಪನ ಸಾಲು ಕುಲ ಕುಲ ವೆಂದು ಹೊಡೆದಡದಿರಿ ಎಂಬ ಕನಕದಾಸರ ಆಶಯಕ್ಕೆ ಇರುವ ಸಾಮ್ಯತೆ ಬಗ್ಗೆ ಹಲವರು ಎತ್ತಿ ತೋರಿದರು . ಕುವೆಂಪುಅವರ ' ಒ ನನ್ನ ಚೇತನ ಆಗು ನೀ ಅನಿಕೇತನ ಕ್ಕೂ'   ಬಸವಣ್ಣ ನವರ 'ಸ್ಥಾವರಕ್ಕಳಿವಿಲ್ಲ ಜಂಗಮಕ್ಕಳಿವುಂಟು' ವಿಗೂ  ಇದೇ ತರಹ ಇರ ಬಹುದು .

ಕನಕದಾಸರ ಈ ದೇವರನಾಮಕ್ಕೆ ಹತ್ತಿರವಾದ ಶರಣರ ವಚನಗಳು ಹಲವು ಇವೆ .

ನೀ ಮಾಯೆಯೊಳಗೊನಿನ್ನೊಳು ಮಾಯೆಯೊ
  ನೀ ದೇಹದೊಳಗೊ ನಿನ್ನೊಳು ದೇಹವೊ

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ                                                                                                                ನಯನ ಬುದ್ಧಿಯೊಳಗೊ

ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ?

 ಮನದ ಮುಂದಿನ ಆಸೆಯೇ ಹೊರತು ಹೆಣ್ಣು ಹೊನ್ನು ಮಣ್ಣು ಅಲ್ಲ ಎಂದು ಅಲ್ಲಮ ಹೇಳಿದ್ದಾನೆ

 ಬಾಲಂಗೋಚಿ :ಮನೆ ,ಕಚೇರಿ ,ಆಸ್ಪತ್ರೆ ಎಲ್ಲಾ ಕಡೆ ಹಿರಿಯರು ಇಹ ಲೋಕ ಮರೆತು ಮಕ್ಕಳು ಮೊಬೈಲ್ ನಲ್ಲಿ ಮುಳುಗಿರುವಾಗ ನಾ ಜಂಗಮ (ಮೊಬೈಲ್ )ದೊಳಗೊ  ,ಜಂಗಮ (ಮೊಬೈಲ್ )ದೊಳು ನಾನೋ ಎಂಬ ಆಲೋಚನೆ ಬರುತ್ತದೆ . ಅಂತೆಯೇ ಶಿಶುನಾಳ ಶರೀಫರ  ಕೋಡಗ ನ ಕೋಳಿ ನುಂಗಿತ್ತಾ ಎಂಬುದು  ಈಗ ಕೊಡಗನೇ ಕೋಳಿ ನುಂಗಿದ ಹಾಗೆ ಆಗಿದೆ ಅನಿಸುತ್ತದೆ .


 

ಶನಿವಾರ, ನವೆಂಬರ್ 11, 2023

ಮಂಗ ಳೂರ ಸಮಾಚಾರ ಕ0ನಡ ಸಮಾಚಾರವು ( ಕನ್ನಡದ ಮೊದಲ ಪತ್ರಿಕೆ ಹೆರ್ಮನ್ ಮ್ಯೋಗ್ಲಿಂಗ್ ಸಂಪಾದಿತ )

                                         



ಒಂದನೇ ಪುಸ್ತಕ 1843     1ನೇ ಜೂಲೈ                      ಕ್ರಯವು 1ದುಡ್ಡು 


ಪೀಠಿಕೆ 

ಮಂಗಲೂರಿನವರು  ಮೊದಲಾದ ಯೀ ದೇಶಸ್ಥರು ಕತೆಗಳ೦ನೂ ವರ್ತಮಾನಗಳ೦ನೂ ಕೇಳುವದರಲ್ಲಿಯೂ ಹೇಳುವದರಲ್ಲಿಯೂ ಬಹಳ ಯಿಚ್ಛೆ ಯುಳ್ಳ ವರಾಗಿರುತ್ತಾರೆ .

ಬೆಳಿಗ್ಗೆ ಬಂದ್ರಂದಲ್ಲ್ಯಾ ಗಲಿ ,ಕಚೇರಿ ಹತ್ತರವಾಗಲೀ  ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ಮಾತಾಡಿದರೆ ಅದ೦ನು ಬೇರೊಬ್ಬನು ಆಶ್ಚರ್ಯದಿಂದ ಹೇಳಿ ಯಿ೦ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ವೂರೆಲ್ಲ ತುಂಬಿಸುತ್ತಾರೆ . 

ಮರುದಿನ ನಿ೦ನಿನ ವರ್ತಮಾನ ಸುಳ್ಳು ಯ೦ತಾ ಕಾಣುವಷ್ಟರೊಳಗೆ ಯೆ೦ಮೆ ಮೊಲೆಯಂತೆ ಮತ್ತೆ ಹುಟ್ಟಿ ಆಯ್ತು . 

 ಯೀ ಪ್ರಕಾರವಾಗಿ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಯಿಲ್ಲಿ ವಸ್ತಿಯಾಗಿದ್ದ ಕೆಲವರು ತಿಳು ಕೊಂಡು ಯಿದರಲ್ಲಿ ಪ್ರಯೋಜನ ಪ್ರಯೋಜನ ವಿಲ್ಲವೆಂದು ಯೀ  ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ ದರಿಂದ ನಿಜ ಸಮಾಚಾರದ ಸಂಗ್ರಹವ೦ನು ಕೂಡಿಶಿ  ಪಕ್ಷಕ್ಕೆ ವೊಂದು ಕಾಗದವ೦ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸ ಬೇಕೆಂಬದಾಗಿ ನಿಶ್ಚಯಿಸಿ ಅಧೆ .




ಶನಿವಾರ, ಸೆಪ್ಟೆಂಬರ್ 30, 2023

ತ್ವರಿತ ಪ್ರತಿಕ್ರಿಯಾತ್ಮಕ ಸಂಕೇತ ಚಿಹ್ನೆ

                                                



 ಈಗ ಎಲ್ಲೆಡೆ ಪ್ರಚಲಿತ ಆಗಿರುವ Q R Code (Quick Response Code )ನ ಕನ್ನಡ  ರೂಪಾಂತರ ತ್ವರಿತ ಪ್ರತಿಕ್ರಿಯಾತ್ಮಕ ಸಂಕೇತ ಚಿಹ್ನೆ .  ಮಾರ್ಗದ ಬಳಿ ಇರುವ ಕಬ್ಬಿನ ಹಾಲಿನ ಅಂಗಡಿಯವನ ಬಳಿ ಕೂಡಾ ಒಂದು ಕೋಡ್ ಇಟ್ಟಿದ್ದು ಅದರ ಮೂಲಕ  ಫೋನ್ app ಪಾವತಿ  ಮಾಡ ಬಹುದಾಗಿದೆ . ಯಥಾರ್ಥದಲ್ಲಿ ಚಿಲ್ಲರೆ ಅಭಾವ ಇರುವಾಗ ಸಣ್ಣ ವ್ಯಾಪಾರಿಗಳಿಗೇ ಅದು ಹೆಚ್ಚು ಅವಶ್ಯಕ . 

ಆಮಂತ್ರಣ ಪತ್ರಿಕೆಗಳಲ್ಲಿ  ಸಮಾರಂಭದ ಸ್ಥಳ ದ ಕೋಡ್ ಕೊಟ್ಟಿದ್ದು ಅದನ್ನು   ಜಾಗತಿಕ ತಾಣ ನಿರ್ಧಾರಕ(ಜಿಪಿಎಸ್ )  ದ  ಮೂಲಕ ಸ್ಕ್ಯಾನ್ ಮಾಡಿ ಅಲ್ಲಿಗೆ  ಯಾರ ಸಹಾಯ ಇಲ್ಲದೆ ತಲುಪ ಬಹುದು . ಕಾನ್ಫರೆನ್ಸ್ ,ಪ್ರವೇಶ ದರ ಇರುವ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಒಳ ಬಿಡಲು ಮತ್ತು ಸಂಸ್ಮರಣಿಕೆ ಪಡೆಯಲು ಒಂದು ಕೋಡ್ ಕೊಡುವರು . ಇನ್ನು ಭೋಜನ ಶಾಲೆಗೆ  ಪ್ರವೇಶಿಸುವಾಗ  ಕಂಠ ಭೂಷಿತ  QR ಪಟ್ಟಿ ಸ್ಕ್ಯಾನ್ ಮಾಡಿಯೇ ಒಳ ಬಿಡುವರು . 

ಮದುವೆ ಇತ್ಯಾದಿ ಸಮಾರಂಭ ಗಳಲ್ಲಿ ಪುರೋಹಿತರಿಗೆ ದಕ್ಷಿಣೆ ಕೊಡಲೂ ಇದು ಬರಬಹುದು . ದಕ್ಷಿಣೆ ಕೊಡುವಾಗ ಎಲೆ ಅಡಿಕೆ ತೆಂಗಿನ ಕಾಯಿ ಇಡುವ ಕ್ರಮ ಇದೆ .ಅದನ್ನು ಸಾಂಕೇತಿಕ ವಾಗಿ ವಿಡಿಯೋ ಮಾಡಿ ಕೊಂಡು ಅದಕ್ಕೆ ಒಂದು ಕೋಡ್ ಕೊಟ್ಟರೆ ಆಯಿತು . ಊಟದ ದಕ್ಷಿಣೆ ಇತ್ಯಾದಿ ಗೆ  ಅತಿಥಿಗಳು ತಮ್ಮ ಖಾತೆಯ ಕೋಡ್ ಎಡದ ಕೈ ಮೂಲಕ ಎತ್ತಿ ಹಿಡಿದರೆ ಆತಿಥೇಯರು ಸಾಲಾಗಿ ಸ್ಕ್ಯಾನ್ ಮಾಡ ಬಹುದು . 

ಹಲವು ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು ಬಡವಾಗಿದ್ದು ಕತೆ ಕವನ ಇತ್ಯಾದಿಗಳ QR ಕೋಡ್ ಕೊಟ್ಟು ಬೇಕಾದರೆ ಸ್ಕ್ಯಾನ್ ಮಾಡಿ ಓದಿಕೊಳ್ಳಿ ಎಂದು ಕೈ ತೊಳೆದು ಬಿಡುವುದರಿಂದ ನಮ್ಮಂತಹ ವೃದ್ಧರಿಗೆ ನಿರಾಸೆ

ಬುಧವಾರ, ಆಗಸ್ಟ್ 16, 2023

ಮುಂಜಾನೆ ಆಸ್ಪತ್ರೆಗೆ ಬರುವಾಗ ದಾರಿ ಬಳಿಯಲ್ಲಿ  ಅಮ್ಮಂದಿರು ,ಯೂನಿಫೋರ್ಮ್ ,ಷೂ ಹಾಕಿದ ಮಕ್ಕಳ ಜತೆ ಶಾಲಾ ಬಸ್ಸಿಗೆ ಕಾತರದಿಂದ ಕಾಯುತ್ತಿರುತ್ತಾರೆ .ಬಸ್ ಬರುವ ವರೆಗೆ ಮಕ್ಕಳಿಗೆ ಹಾಗೆ ಮಾಡು ಹೀಗೆ ಮಾಡು ಎಂದು ಉಪದೇಶ ನಡೆಯುತ್ತಿದ್ದು ಮಕ್ಕಳು ಅದನ್ನು ಲೆಕ್ಕಿಸದೆ ಮಾರ್ಗದಲ್ಲಿ ಹೋಗುವ ವಾಹನಗಳನ್ನು ನೋಡುತ್ತಾ ಇಂದು ಯಾವ ಆಟ ಆಡಬಹುದು ಎಂದು ಆಲೋಚಿಸುತ್ತಾ ಇರುತ್ತಾರೆ .ಸಂಜೆ ಶಾಲೆ ಬಸ್ ವಾಪಸು ಬರುವ ವೇಳೆ ಇದರ ರಿಟ್ರೀಟ್ ನಡೆವುದು .ಇಳಿದ ಕೂಡಲೇ ಮಗುವನ್ನು 'ಮಿಸ್ ಏನು ಹೇಳಿದರು ?ಪ್ರಶ್ನೆಗೆ ಎಲ್ಲಾ ಉತ್ತರ ಹೇಳಿದೆಯಾ(ಬರೆದೆಯಾ),ನಿನ್ನ ಫ್ರೆಂಡ್ ಗೆ ಎಷ್ಟು ಮಾರ್ಕ್?"ಇತ್ಯಾದಿ ಪ್ರಶ್ನೆಗಳು ಸಾಮಾನ್ಯ .

ನನಗೆ ನಮ್ಮ ಬಾಲ್ಯದ ನೆನಪು ಆಯಿತು .ಯೂನಿಫೋರ್ಮ್ ಷೂ ಇಲ್ಲಾ ,ಬರಿಗಾಲು ,ಶಾಲೆಗೆ ಬಿಡಲು ,ವಾಪಸು ಬಂದಾಗ ಸ್ವಾಗತಿಸಲು ಯಾರೂ ಇಲ್ಲ .ಹಟ್ಟಿಯಿಂದ ಬಿಟ್ಟ ಕರುಗಳ ಹಾಗೆ ಲಾಗ ಹಾಕುತ್ತಾ ಗುಡ್ಡ ಬಯಲ ದಾರಿಯಲ್ಲಿ ಶಾಲೆಗೆ ;ಬರುವಾಗ ಶಾಲೆಯ ಹೊರೆ (ಮಾನಸಿಕ )ಯನ್ನು ಅಲ್ಲಿಯೇ ಬಿಟ್ಟು  ಮನೆಗೆ . ಶಾಲೆಯ ಚಟುವಟಿಕೆ ಬಗ್ಗೆ ಕೇಳುವವರು ಯಾರೂ ಇಲ್ಲ

ಯಾರು ಹೆಚ್ಚು ಅದೃಷ್ಟ ವಂತರು ಎಂದು ಗೊತ್ತಿಲ್ಲ .

ಭಾನುವಾರ, ಆಗಸ್ಟ್ 6, 2023

ಓದಿ ಮೆಚ್ಚಿದ ಪುಸ್ತಕ ಕೀಟಲೆಯ ದಿನಗಳು

 ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಮೇಲೆ (೬೦ ರ ನಂತರ )ಬರೆಯಲಾರಂಬಿಸಿ ಮೌಲಿಕ ಕೃತಿಗಳನ್ನು ಕೊಟ್ಟವರು  ಶ್ರೀ ಶ್ರೀನಿವಾಸ ವೈದ್ಯರು . ಅವರ ಬರಹಗಳಲ್ಲಿ ಎದ್ದು ಕಾಣುವುದು  ಒಳ್ಳೆಯ ಹಾಸ್ಯ  ಪ್ರಜ್ಞೆ . ವೃತ್ತಿಯಲ್ಲಿ ಇದ್ದುಕೊಂಡೇ ಬರೆದು ಪ್ರಸಿದ್ದರಾದವರು ಶ್ರೀ ಡುಂಡಿರಾಜ್ . ಡುಂಡಿರಾಜ್ ಕೃಷಿ ಪದವೀಧರರು . ಹನಿಗವನ ಕೃಷಿ ಗೆ ಪ್ರಸಿದ್ದರಾದವರು . ಈಗ ನನ್ನ ಕೈಗೆ ಒಂದು ಕೃತಿ ಬಂದಿದೆ .ಅದರ ಲೇಖಕ ಶ್ರೀ ಏನ್ ಎಸ ಲಕ್ಷ್ಮೀನಾರಾಯಣ ಅವರು .ಕೃಷಿ ಪದವೀಧರ ,ಬ್ಯಾಂಕ್ ಉದ್ಯೋಗಿ . ೬೫ ವಯಸ್ಸಿನ ಮೇಲೆ ಅವರ' ಆಕಸ್ಮಿಕ ಆತ್ಮಕಥನ  ಕೀಟಲೆಯ ದಿನಗಳು 'ಪ್ರಕಟವಾಗಿದೆ . ಇವರು ರೈತ ಹೋರಾಟದಲ್ಲಿ ಕೂಡಾ ಸಕ್ರಿಯವಾಗಿ ಪಾಲುಗೊಂಡವರು . ಪುಸ್ತಕದುದ್ದಕ್ಕೂ ಅವರ ಹಾಸ್ಯ ಪ್ರಜ್ಞೆ ಎದ್ದು ಕಾಣುವುದು . 

ಪುಸ್ತಕದ ಮೊದಲ ಲೇಖನ ನಾಟಿಕೋಳಿ v /s ಕೆಂಟಕಿ ಫ್ರೈಡ್ ಚಿಕನ್ . ಊರಿಂದ ಬಂದ ಹಿರಿಯರು ಇನ್ನೇನು ಮರಳಿ  ಹೊರಡುತ್ತೇನೆ ಎಂದಾಗ ಅಮ್ಮ ಮಧ್ಯಾಹ್ನ ಕೋಳಿ ಸಾರು ಮಾಡುವೆ ಉಂಡು ಹೋಗಿ ಎಂದು ಒಪ್ಪಿಸಿ  ಭಾರತೀಯ ಕಾಲಮಾನ ಮುಂಜಾನೆ ಹತ್ತು ಗಂಟೆಗೆ ಮಕ್ಕಳ ಬಳಿ ಗೂಡಿನಿಂದ ಸಾಕಿದ  ಕೋಳಿ ತರಲು ಹೇಳಿ ಮಸಾಲೆ ಅರೆಯಲು ತೊಡಗುತ್ತಾರೆ . ಆದರೆ ಕೋಳಿ ತಪ್ಪಿಸಿ ಕೊಂಡು ಓಡಾಡಿ ಕೊನೆಗೂ ಸಿಕ್ಕು ಊಟ ಮುಗಿದಾಗ ಭಾರತೀಯ ಕಾಲಮಾನ ೧೫-೩೦ . (ಮಿತ್ರ ಭಾಸ್ಕರ ಕೊಡಿ೦ಬಾಳ ಅವರ ಹರಕೆಯ ಕೋಳಿ ಉಪ್ಪಿನಂಗಡಿ ಪೇಟೆಯಲ್ಲಿ ತಪ್ಪಿಸಿ ಕೊಂಡ ಕತೆ ನೆನಪಿಗೆ ಬಂತು .).

ಲೇಖಕ ಬರೆಯುತ್ತಾರೆ ''ಈ ಕೋಳಿ ಬೇಟೆ ಆ ಕಾಲದ ಮನೆ ಮನೆಯ ಕಥೆಯೇ ಆಗಿತ್ತು . 

ಆದರೆ ಈಗೆಲ್ಲಿದೆ ಆ ಸಂಭ್ರಮ ?

ಒಂದು ಫೋನ್ ಕರೆ ಸಾಕು .ಹಸಿ ಮಾಂಸವೂ ,ಕೋಳಿ ಮೀನುಗಳೂ .ಬಿಸಿ ಬಿಸಿ ದೇಶ -ವಿದೇಶಿ ಕಂಪನಿ ಗಳ  ತಿನಿಸು ಭಕ್ಷ್ಯಗಳೂ ,ಕೇವಲ ಮೂವತ್ತು ನಿಮಿಷದಲ್ಲಿ ನಿಮ್ಮ ಟೇಬಲ್ ಮೇಲೆ ಕಂಗೊಳಿಸುತ್ತವೆ .ಆ ದಿನಗಳ ಕೋಳಿ ಬೇಟೆಯೂ .ಅತಿಥಿಗಳ ಇರಿಸು ಮುರುಸೂ ,ಮಸಾಲೆ ಸಾಮಗ್ರಿಗಳನ್ನು ಹೊಂದಿಸುವ ಕಷ್ಟಗಳು ಯಾವುವೂ ಈಗಿಲ್ಲ .ದುಡ್ಡಿಗೂ ಬರವಿಲ್ಲ .ಬರವಿರುವುದು  ಆ ಆತ್ಮೀಯತೆಯಲ್ಲಿ ;ಅಡಿಗೆ ಮಾಡಿ ಬಡಿಸುವ ಸಂಭ್ರಮದಲ್ಲಿ .ಕೋಳಿ ಬೇಟೆಯ ಮಕ್ಕಳಾಟದಲ್ಲಿ .ಆ ಚಡಪಡಿಕೆಯಲ್ಲಿ .ಆ' ಇಲ್ಲದಿರುವಿಕೆಯ ಶ್ರೀಮಂತಿಕೆ ಯಲ್ಲಿ 'ಈಗಿನ 'ಇರುವಿಕೆಯ ಬಡತನದಲ್ಲಿ ಅಲ್ಲ .''

ಪುಸ್ತಕದುದ್ದಕ್ಕೂ ಹಾಸ್ಯ ಲೇಪಿತ  ಪನ್ ಗಳೂ ,ನುಡಿಗಟ್ಟುಗಳೂ ಇದ್ದು ನಗೆ ಉಕ್ಕಿಸಿದರೆ(ವೈ ಏನ್ ಕೆ ಬರಹ ನೆನಪಿಸುವ ) ,ಹೃದಯ ಭಾರವಾಗಿಸುವ ಆತ್ಮೀಯ ಘಟನೆಗಳ ಚಿತ್ರಣವೂ ಇದೆ .ಕೆಲ ನುಡಿಗಟ್ಟುಗಳ ಉದಾ : ಅಕುಡುಕ ,ಕುಡಿಯದ ಕೂಸು (ಕುಡಿಯದವನು ).ಎಲೆಮಾನವ (ಇಸ್ಪೀಟು ಎಲೆಗೆ ದಾಸ ),ಗುಂಡು ಮೇಜಿನ ಪರಿಷತ್ ,ಒಂದು ಹಣ್ಣೂ ಬಿಡದೆ ಕದಿ ಯುವ 'ಬೋಳುವಾರರು'ನಿತ್ಯ ಸಂಜೆ ಕ್ಲಬ್ ಗೆ ಭೇಟಿ ನೀಡುವ 'ಸಂಜೇವ 'ರರು ಇತ್ಯಾದಿ . 

ಒಟ್ಟಿನಲ್ಲಿ ಇತ್ತೀಚೆಗೆ ಖರೀದಿಸಿ ಓದಿದ ಸಂತೋಷ ಪಟ್ಟ ಪುಸ್ತಕ .  ಇವರಿಂದ ಇನ್ನೂ ಒಳ್ಳೆಯ ಕೃತಿಗಳನ್ನು ನಿರೀಕ್ಷಿಸ ಬಹುದು ಎಂದು ಖಂಡಿತವಾಗಿ ಹೇಳುತ್ತೇನೆ  . 




ಪತ್ರಿಕೆ ಓದುಗರಿಗೆ ಓಮ್ನಿ ಪೊಟೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ  ಒಂದು ಹೆಸರು ಪ ರಾಮಕೃಷ್ಣ ಶಾಸ್ತ್ರಿ . ಶಿಷ್ಟ ಶಿಕ್ಷಣ ಹೆಚ್ಚು ಪಡೆಯದ ,ಕುಗ್ರಾಮದಿಂದ ಬಂದ  ಇವರು  ಸಾಹಿತ್ಯದ ಎಲ್ಲಾ ಪ್ರಾಕಾರ ಗಳಲ್ಲಿ ಕೈಯ್ಯಾಡಿಸಿದ್ದೇ ಅಲ್ಲದೆ ,ಯಕ್ಷಗಾನ ,ಕೃಷಿ ,ರಾಜಕೀಯ ,ಪತ್ರಿಕಾ ರಂಗ ಇತ್ಯಾದಿ ಗಳ ಒಳ ಹೊಕ್ಕ ಅನುಭವ  ಇರುವವರು   . 

ಇಂತಹ ಸಾಧಕರಿಗೆ ಎಪ್ಪತ್ತು ತುಂಬಿದ ಅವಸರದಲ್ಲಿ "ಬದುಕು ಬರಹ ಬವಣೆ "ಎಂಬ ಹೊತ್ತಿಗೆ ಹೊರ ತಂದಿದ್ದಾರೆ . ನಿರೂಪಣೆ ಅವರ ಪತ್ರಕರ್ತ ಪುತ್ರ ಲಕ್ಷ್ಮೀ ಮಚ್ಚಿನ ಅವರದ್ದು . ಈ ಹಿರಿಯರ ಬದುಕಿನ ಅನುಭವಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಚಿತ್ರಿಸಿದ್ದಾರೆ . ಲೇಖಕ ನಾಗಿ ಜೀವನ ಸಾಗಿಸ ಬಲ್ಲೆ ಎಂದು ಅರ್ಥ ಸಂಪಾದನೆ ಕೂಡಾ ಉದ್ದೇಶವಾಗಿ ಬರೆಯಲು ಆರಂಬಿಸಿ ಸಾಹಿತಿಯಾಗಿ ರೂಪು ಗೊಂಡ ಬಗೆ ,ಕೃಷಿಕನಾಗಿ ಅನುಭವ , ಎದುರಿಸಿದ ಕಾರ್ಪಣ್ಯ ಮುಜುಗರಗಳು ,ಸಂತೋಷ ಗಳ ವಿವರ ಇದೆ . 


 ,

ಶನಿವಾರ, ಆಗಸ್ಟ್ 5, 2023

 ನಾನು ಆಸ್ಪತ್ರೆಯಲ್ಲಿ  ಗೌರವಿಸುವ ಒಂದು ನೌಕರ ವರ್ಗ ಸ್ವಚ್ಛ ಕಾರಿಣಿ ಯರದು . ಮುಂಜಾನೆ ಎಂಟು ಗಂಟೆಗೆ ನಾನು ಆಸ್ಪತ್ರೆಯಲ್ಲಿ ಹಾಜರು ಆಗುವ ವೇಳೆ ಹಗಲು ಪಾಳಿಯಯವರು ಗುಡಿಸಿ ಸಾರಿಸುತ್ತಾ ಇರುವರು . ನಾನು ಅವರೊಡನೆ ಉಭಯ ಕುಶಲೋಪರಿ ವಿಚಾರಿಸುವೆನು . ನನ್ನನ್ನು ಕಂಡ ಕೂಡಲೇ ಅವರು ಕೈಯಲ್ಲಿ ಇರುವ ಪೊರಕೆಯನ್ನು ಅಡಗಿಸುವರು ಮತ್ತು ವಂದಿಸುವರು . ಪೊರಕೆ ಅಡಗಿಸುವುದು ಬೆಳ ಬೆಳಗ್ಗೆ ನನಗೆ ಅದರ ದರ್ಶನ ಆಗದಿರಲಿ ಎಂದು ಇರ ಬೇಕು . 

ಬರಗೂರು ರಾಮಚಂದ್ರಪ್ಪ ಅವರ ಅನುಭವ ಕಥನ ಕಾಗೆ ಕಾರುಣ್ಯದ ಕಣ್ಣು ಓದಿ ಮುಗಿಸಿದೆ .. ಕೊಂಡೆತಿಮ್ಮನಹಳ್ಳಿ ಯಲ್ಲಿ ತಾವು ಹೈ ಸ್ಕೂಲ್ ಅಧ್ಯಾಪಕರಾಗಿದ್ದಾಗ ಬಾಡಿಗೆ ಮನೆಯಲ್ಲಿ  ಮುಂಜಾನೆ ಎದ್ದ ಒಡನೆ ಕಾಣುವ ಜಾಗದಲ್ಲಿ ಹಿಡಿ ಸೂಡಿ ಇಡುತ್ತಿದ್ದು  ತಮ್ಮ  ಮನೆಯಲ್ಲಿ ಮಲಗಲು ಬರುತ್ತಿದ್ದ ಪರವೂರಿನ ವಿದ್ಯಾರ್ಥಿಗಳಿಗೆ ''ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ ,ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಿಗ್ಗೆ ಎದ್ದ ಕೂಡಲೇ ಮನೆ ,ಮನೆಯ ಹೊರಗೆಲ್ಲಾ ಸ್ವಚ್ಛ ಮಾಡುವ ಪೊರಕೆಯ 'ದರ್ಶನ 'ಮಾಡಿ ಕೈ ಮುಗಿಯ ಬೇಕು .ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ ''ಎಂದು ವಿವರಿಸಿ ಮನವರಿಕೆ ಮಾಡಿ ಕೊಟ್ಟಿದ್ದೆ .''ಎಂದು ವಿವರಿಸಿರುವರು . ನನಗೂ ಇದೇ ಅಭಿಪ್ರಾಯ ಇದ್ದರೂ ಅದನ್ನು ವಿವರಿಸಿ ನನ್ನ ಸಹೋದ್ಯೋಗಿಗಳನ್ನು ಗಲಿಬಿಲಿ ಮಾಡ ಹೋಗುವುದಿಲ್ಲ . 

ಶ್ರೀ ಪುರುಷೋತ್ತಮ ಬಿಳಿಮಲೆ ಅವರು  ತಮ್ಮ ಆತ್ಮ ಚರಿತ್ರೆ ಗೆ' ಕಾಗೆ ಮುಟ್ಟಿದ ನೀರು 'ಎಂದು ಕರೆದಿದ್ದಾರೆ . ಬರಗೂರು ಆತ್ಮ ಚರಿತ್ಮಾತ್ಮಕ ವಾದ ಕೃತಿಗೆ 'ಕಾಗೆ ಕಾರುಣ್ಯ' ಎಂದು ಹೆಸರು ಇಟ್ಟಿ ರುವರು . ಕಾಗೆ ಕೋಗಿಲೆಯು ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿ ಬೆಳೆಸುವ ಕೂಡಿ ಬಾಳುವ ,ಮಮತೆ ಮತ್ತು ಸಮತೆಯ ಸಂಕೇತ ಎಂಬ ಅರ್ಥದಲ್ಲಿ ಅದನ್ನು ಬಳಸಿದ್ದಾರೆ . 

ಪುಸ್ತಕದ ಸಮರ್ಪಣೆ ಹೀಗಿದೆ -''ನನ್ನಲ್ಲಿ ಪರ್ಯಾಯ ಚಿಂತನೆಗೆ ಪ್ರೇರಣೆ ನೀಡಿದ ,ನಮ್ಮೂರು ಬರಗೂರಿನ ಕಾಗೆ ,ಕತ್ತಾಳೆ ,ಕೆರೆ ,ಕುಂಟೆ ,ಹಳ್ಳ ,ಕೊಳ್ಳ.ಗುಬ್ಬಚ್ಚಿ ,ಬೇವು,ಹೊಂಗೆ ,ಜಾಲಿಯ ಮರಗಳೇ ಮುಂತಾದ ಪ್ರಕೃತಿ ಸಂಪತ್ತಿಗೆ ಈ ಕೃತಿಯನ್ನು ಕೃತಜ್ಞತೆಯಿಂದ ಅರ್ಪಿಸುತ್ತೇನೆ ''



ಶುಕ್ರವಾರ, ಆಗಸ್ಟ್ 4, 2023

ಮಕ್ಕಳು ನಮ್ಮಿಂದ ಬಂದವರು ನಮ್ಮವರಲ್ಲ 

ರೋಗ ನಿಧಾನದಲ್ಲಿ ಕುಟುಂಬದ ಇತಿಹಾಸ ಎಂದು ಇದೆ . ಮದುವೆ ಯಾದ ಗಂಡು ಹೆಣ್ಣು ಬಂದಾಗ ಮಕ್ಕಳ ಸಂಖ್ಯೆ ವಯಸ್ಸು ಅರೋಗ್ಯ ವಿಚಾರಿಸುತ್ತೇವೆ . ವಾರಗಳ ಹಿಂದೆ ಒಬ್ಬ ತಾಯಿ (ಮಾಸ್ತಿ ಯವರು ಬಳಸುವಂತೆ -ಹೆರದಿದ್ದರೂ ಅವರು ಮಾತೆಯರೇ )ಗೆ ಮಕ್ಕಳು ಎಷ್ಟು ಎಂದು ವಿಚಾರಿಸಲು ಆಕೆಯ  ಮುಖ ಮ್ಲಾನವಾಗಿ ಕಣ್ಣಲ್ಲಿ ನೀರು ಬಂತು  .ಮದುವೆಯಾಗಿ ವರುಷ ಹತ್ತು ಆದರೂ ಮಕ್ಕಳಿಲ್ಲ ಎಂದು .ಅವರಿಗೆ ಸಮಾಧಾನ ಹೇಳಿದೆ . 

ಮಲಯಾಳ ದಲ್ಲಿ ಸತ್ಯನ್ ಅಂತಿ ಕಾಡ್ ಅವರ ಪ್ರಸಿದ್ಧ ಚಲಚಿತ್ರ ಸಂದೇಶಂ ನಲ್ಲಿ ನಿವೃತ್ತ ರೈಲ್ವೆ ನೌಕರ  ತಿಲಕನ್ ತಾನು ಕಷ್ಟ ಪಟ್ಟು  ವಿದ್ಯಾಭ್ಯಾಸ ಕೊಡಿಸಿದ ಮಕ್ಕಳು ಯಾವುದೇ ಕೆಲಸ ಮಾಡದೇ ರಾಜಕೀಯ ಎಂದು ಕಾಲ ಧನ ಹರಣ ಮಾಡಿಕೊಂಡು ,  ಇಳಿ ವಯಸಿನಲ್ಲಿ ತಮಗೆ ಆಗದೇ ಇರುವಾಗ ಮಕ್ಕಳಿಲ್ಲ ಎಂದು ಕೊರಗು ತ್ತಿದ್ದ ಪ್ರಾಣ ಮಿತ್ರ ಅಧ್ಯಾಪಕ ದಂಪತಿಗಳಿಗೆ "ನಿಮಗೆ ಮಕ್ಕಳಿಲ್ಲ ಎಂಬ ಕೊರಗು ಮಾತ್ರ ಎಂದು ಸಮಾಧಾನ ಮಾಡಿಕೊಳ್ಳಿ ,ನನಗೆ ಇರುವಂತಹ ಮಕ್ಕಳು ಆಗುವುದಕ್ಕಿಂತ ಅದುವೇ ಮೇಲು  , '  ಎಂದು ಹೇಳುವ ಸಂಭಾಷಣೆ ಇದೆ . 

 ಮಕ್ಕಳು ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ನೋಡಿ ಕೊಳ್ಳದೇ ಇರುವಾಗ ಇದು ಸರಿ ಎಂದು ತೋರುವುದು ಸಹಜ .ಆದರೆ ಮಕ್ಕಳಾಟಿಕೆ ಆನಂದಿಸುವುದೇ ಒಂದು ಭಾಗ್ಯ ;ಅದಕ್ಕೆ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ ಎಂದು ಒಂದು ವಾದ . ಖಲೀಲ್ ಗಿಬ್ರಾನ್ ಹೇಳಿದಂತೆ ನಮ್ಮ ಮಕ್ಕಳು ನಮ್ಮ ಮೂಲಕ ಬಂದವರೇ ಹೊರತು ನಮ್ಮವರಲ್ಲ . ತಲೆಮಾರು ಗಳು ದಾಟಿದಂತೆ ಹಿರಿಯರ ಜವಾಬ್ದಾರಿ ವಹಿಸಿ ಕೊಳ್ಳಬೇಕು ಎಂಬ ಮನೋಧರ್ಮ ಮಾಯವಾಗುತ್ತಿದೆ . ವೃದ್ಧರನ್ನು ಅರೆ ವೃದ್ದರು ಅರೆ ಮನಸಿಂದ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ಇದೆ .ಇದಕ್ಕೊಂದು ದಾರಿ ಸಮಾಜ ಕಂಡು ಕೊಳ್ಳ ಬೇಕಾದ ಅನಿವಾರ್ಯತೆ ಇದೆ .

ಗುರುವಾರ, ಆಗಸ್ಟ್ 3, 2023

ಕೆಲವು ದಿನಗಳ ಮಳೆ ವಿರಾಮದ ನಂತರ ನಿನ್ನೆಯಿಂದ ಮುಂಜಾನೆ ವಾಕಿಂಗ್ ಆರಂಭ ಮಾಡಿದ್ದೇನೆ . ಮನೆಯಿಂದ ಅನತಿ ದೂರದಲ್ಲಿ ರಸ್ತೆಗೆ ಬಾಗಿ ಫಲಭರಿತ ಹಲಸಿನ ಮರ ಇದ್ದು ಅದರಿಂದ ಹಣ್ಣಾಗಿ ರಸ್ತೆಗೆ ಬೀಳುತ್ತಿದ್ದು ನಡೆಯುವಾಗ ಕಾಲಿಗೆ ಮಯಣ ಮೆಟ್ಟಿದರೂ ಮೂಗಿಗೆ ಗಂಮೆಂದು ಬರುವ ಪರಿಮಳ ಹಿತವಾಗಿದೆ . ಕೆಲವು ವರ್ಷಗಳಲ್ಲಿ ಪರಿಮಳವನ್ನು ಕೂಡಾ ರೆಕಾರ್ಡ್ ಮಾಡಿ ಫೇಸ್ ಬುಕ್ ,ವಾಟ್ಸ್ ಅಪ್ ನಲ್ಲಿ ಕಳುಹಿಸುವ ತಂತ್ರ ಜ್ಞಾನ ಬರ ಬಹುದು . 

ಇಂದು ಒಂದು ಹೊಸಾ ಜಾಹಿರಾತು ಫಲಕ ಗಮನ  ಸೆಳೆಯಿತು .ಮುಕ್ರಂಪಾಡಿ ಟು ಮೆಲ್ಬೋರ್ನ್ ,ವಿದೇಶಗಳಲ್ಲಿ ಅಧ್ಯಯನ ಮಾಡಲು ಇಚ್ಚಿಸುವವರಿಗೆ ಮಾರ್ಗದರ್ಶನ ಮಾಡುವ ಸಂಸ್ಥೆ .ಯಾವುದೇ ಹೊಸ ಉದ್ದಿಮೆ ತೊಡಗುವವರಿಗೆ ಒಳ್ಳೆಯದು ಆಗಲಿ ಎಂದು ಬಯಸುತ್ತೇನೆ . 

ಮುಕ್ರಂಪಾಡಿ ಮಡಿಕೇರಿ ಮಾರ್ಗದಲ್ಲಿ ಇರುವ ಪುತ್ತೂರಿನ ಒಂದು ಭಾಗ .ಇಲ್ಲಿ ಕೆ ಎಸ ಆರ್ ಟಿ ಸಿ ಡಿಪೋ ಇದೆ . ಮೆಲ್ಬೋರ್ನ್ ಆಸ್ಟ್ರೇಲಿಯಾ ದೇಶದ ನಗರ . 

ಪಾಡಿ ಎಂಬ ಶಬ್ದ ಹಾಡಿ ಎಂಬುದರಿಂದ ಬಂದಿರ ಬೇಕು . ನಮ್ಮಲ್ಲಿ ಮಾಣಿಪ್ಪಾಡಿ ,ಕುದುರೆಪ್ಪಾಡಿ ,ಅನಂತಾಡಿ ಇತ್ಯಾದಿ ಊರುಗಳ ಮೂಲ ಇದರಿಂದ ಇರ ಬಹುದು . ಮುಕ್ರ ಎಂದರೆ ಮೂರು ಕಣ್ಣಿನ ಶಿವ ಇರ ಬಹುದು . ಇನ್ನು ಕೇವಲ ಪಾಡಿ (ಹಾಡಿ )ಎಂಬ ಊರು ಕೂಡಾ ಇದ್ದು ಬೋರ್ಡ್ ಹೈ ಸ್ಕೂಲ್ ನಲ್ಲಿ ಶ್ರೀ ಎಸ ಆರ್ ಪಾಡಿ ಎಂಬ ಒಳ್ಳೆಯ ಅಧ್ಯಾಪಕರು ಇದ್ದರು .. 


 

ಸೋಮವಾರ, ಜುಲೈ 10, 2023

 



ನಾವು ಪ್ರತಿಯೊಬ್ಬರು ತಮ್ಮ ಅಧ್ಯಯನ ಮತ್ತು ಜೀವನಾನುಭವ ದಿಂದ ಒಂದೊಂದು ವಿಚಾರಧಾರೆ ಯನ್ನು ಹೊಂದಿರುತ್ತೇವೆ ಯಾದರೂ ಹಲವಾರು ಕಾರಣಗಳಿಂದ ಅದನ್ನು ನೂರಕ್ಕೆ ನೂರು ಅದನ್ನುನಿತ್ಯ ಜೀವನದಲ್ಲಿ ಆಚರಿಸಲು ಆಗದೆ ಒಳಗೊಳಗೇ ಪರಿತಪಿಸುತ್ತಿರುತ್ತೇವೆ . ಕುಟುಂಬ ಮತ್ತು ಸಾಮಾಜಿಕ ಕಾರಣಗಳಿಂದ ಹಲವು ಕಾಂಪ್ರೊಮೈಸ್ ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ . ಇನ್ನು ಹಲವರು ಮನಸಾರೆ ಆಡುವುದೊಂದು ಮಾಡುವುದೊಂದು ಮಾಡುತ್ತಿರುತ್ತಾರೆ ;ಅದು ಆಷಾಢಭೂತಿ ತನ . ಇವೆಲ್ಲಕ್ಕೂ ಮೀರಿ ಅಪರೂಪಕ್ಕ್ಕೆ ಕೈಬೆರಳು ಎಣಿಕೆಯಲ್ಲಿ ಒಬ್ಬರು ಇದ್ದಾರೆ .ಅಂತಹವರ ಪೈಕಿ ಒಬ್ಬರು ಶ್ರೀ ಗೋಪಾಲಕೃಷ್ಣ ಉಪಾಧ್ಯಾಯರು . 

ನಿನ್ನೆ ಅವರು ತಮ್ಮ ಪೋಸ್ಟ್ ನಲ್ಲಿ  ಒಂದು ಮಾತು ಬರೆದಿರುವರು . "ತಾವು ಪ್ರಕೃತಿ ಮತ್ತು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವನು ." ಈ ವಿಷಯವನ್ನು ಅಕ್ಷರಶಃ ಜೀವನದಲ್ಲಿ ಪಾಲಿಸಿದವರು . ಬಸವಣ್ಣದವರ ಕಾಯಕವೇ ಕೈಲಾಸ . ಈಯೆರಡರಲ್ಲಿ ಚ್ಯುತಿ ಕಂಡರೆ ಕೂಡಲೇ ತಮ್ಮ ಅಸಂತೋಷ ವ್ಯಕ್ತ ಪಡಿಸುವರು . ನನಗೇ ಹಲವು ಬಾರಿ ತಾವು ಸರಕಾರಿ ನೌಕರಿಯಲ್ಲಿ ಇದ್ದು ಅನಾವಶ್ಯಕ ಅಪಾಯ ಎಳೆದು ಕೊಳ್ಳುತ್ತೋದ್ದರೋ ಎಂದು .ಆದರೆ ಅವರ ಅಭಿಪ್ರಾಯಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದರೆ ಅವರಲ್ಲಿ ಜಾತಿ ,ಪಕ್ಷ ಅಥವಾ ಲಿಂಗ ತಾರತಮ್ಯ ದ ಪೂರ್ವಾಗ್ರಹ ಗಳು ಕಾಣಿಸದೆ ವಿವೇಕಾನಂದ ,ಕುವೆಂಪು ಮತ್ತು ಎಚ್ ನರಸಿಂಹಯ್ಯ ನವರ ದಾರಿ ಯಲ್ಲಿ ನಡೆಯಯುವರಂತೆ ಕಾಣಿಸುತ್ತಾರೆ . 

ಈ ಉಪಾಧ್ಯಾಯ ಸರ್ ನೇಮ್ ಅನ್ನು ತಮಗೆ ಸಮರ್ಥವಾಗಿ ಅನ್ವರ್ಥ ಮಾಡಿಕೊಂಡವರು . (ನಾನು ಕಂಡಂತೆ ಮತ್ತು ಗೋಪಾಲ ಕೃಷ್ಣರು ಮೂಢನಂಬಿಕೆ ಎಂದು ಹೇಳಬಹುದಾದಂತೆ ಈ ಸರ್ ನೇಮ್ ಇರುವವರು ಬಹಳ ಮಂದಿ ಜೆನೆಟಿಕಲಿ ಬುದ್ದಿವಂತರು ).. ಇವರು ಒಳ್ಳೆಯ ಅಧ್ಯಾಪಕರು ಇರಬೇಕಾದಂತೆ ಸದಾ ಕಲಿಯುವುದಕ್ಕೆ ತೆರೆದು ಕೊಂಡು ಇರುವವರು . ಸುತ್ತ ಮುತ್ತ ಸಾಹಿತ್ಯ,ಸಾಂಸ್ಕೃತಿಕ  ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ   ಇವರು  ಹಾಜರಿ .ರಾಮಕೃಷ್ಣ ಮಿಷನ್ ನವರು ಸ್ವಚ್ಛ ಪುತ್ತೂರು ಅಭಿಯಾನ ನಡೆಸಿದಾಗ ತಾವೂ ಪೊರಕೆ ಹಿಡಿದು ಗುಡಿಸುವದು ನಾನೇ ಕಣ್ಣಾರೆ ಕಂಡಿದ್ದೇನೆ . ಮೃದು ಭಾಷಿ ಮತ್ತು ಹೊರನೋಟಕ್ಕೆ ಸಂಕೋಚ ಸ್ವಭಾವದವರಂತೆ ಕಾಣುವ ಇವರು ಮೊದಲೇ ತಿಳಿಸಿದಂತೆ ಒಂದು ರೀತಿಯಲ್ಲಿ ಖಡಾಖಡಿ . ಇವರ ಮನೆಯ ಹತ್ತಿರ ಇದ್ದ ಶಿವರಾಮ ಕಾರಂತರ ಗಾಳಿ ಬೀಸಿರ ಬಹುದು . 

ಒಟ್ಟಿನಲ್ಲಿ ಉಪಧ್ಯಾಯರನ್ನು ಕಂಡರೆ ನನಗೆ ಅಭಿಮಾನ ,ಸಂತೋಷ ಮತ್ತು ಸ್ವಲ್ಪ ಮಟ್ಟಿನ ಅಸೂಯೆ .ಅಸೂಯೆ ಮನಸು ಒಪ್ಪುವಂತೆ ನಡೆ ನುಡಿ ಬಾಳು ಅವರಂತೆ ನನಗೆ ನಡೆಸಲು ಆಗುತ್ತಿಲ್ಲವಲ್ಲ ಎಂದು . 

ಅರುವತ್ತು ತುಂಬಿದ ಇವರಿಗೆ ಶುಭಾಶಯಗಳು .ನಿವೃತ್ತಿ ನಂತರ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲಿ ಇನ್ನೂ ಸಕ್ರಿಯವಾಗಿ ಕಾಣಿಸಲಿ . 

ಬುಧವಾರ, ಜುಲೈ 5, 2023

ಕುಟುಂಬ ನಾಮ ಪುರಾಣ

 

ನನ್ನ ಮಾತಪಿತ ರಿಗೆ  ಹತ್ತು ಮಕ್ಕಳು .ಮೊದಲನೇ ಮಗನಿಗೆ ಮನೆ ಅಜ್ಜನ ಹೆಸರು ಮಹಾಬಲ . ಅಜ್ಜಿ,ತಾಯಿ ಮತ್ತು ಚಿಕ್ಕಮ್ಮ ಅಜ್ಜನ ಹೆಸರು ಹೇಳುವಂತಿಲ್ಲ ವಾದುದರಿಂದ  ಅವನನ್ನು ಮಾಣಿ ಎಂದು ಕರೆಯುತ್ತಿದ್ದರು.ನಾವು ಕಿರಿಯರು ದೊಡ್ಡಣ್ಣ ಎಂದು .ನಂತರ ನನ್ನ ಅಕ್ಕ . ಆಕೆಗೆ ಮನೆ ಅಜ್ಜಿಯ ಹೆಸರು  ಪರಮೇಶ್ವರಿ ಎಂದು ,ನಮ್ಮನ್ನು ಸಹಿತ ಹಿರಿ ಕಿರಿಯರು ಎಲ್ಲರೂ ಅಕ್ಕ ಎನ್ನುವರು . ಇಲ್ಲಿ ಕೂಡಾ ತಾಯಿ ಚಿಕ್ಕಮ್ಮ ಅತ್ತೆ ಹೆಸರು ಹೇಳುವಂತಿಲ್ಲ ತಾನೇ . ನಂತರದವರು ಅಣ್ಣ.ಅವರಿಗೆ ಅಜ್ಜನ ಮನೆ ಅಜ್ಜನ ಹೆಸರು ಕೃಷ್ಣ ಎಂದು .ಅಜ್ಜನ ಮನೆ ಅಜ್ಜಿ ಮತ್ತು ಅಮ್ಮ ಮಾತ್ರ ಅವರನ್ನು ಮೇಲೆ ಹೇಳಿದ ಕಾರಣ ಕ್ಕಾಗಿ ಮುದ್ದು ಎಂದು ಕರೆದರೆ ಉಳಿದವರು ಹೆಸರು ಹಿಡಿದು ಕರೆಯುತ್ತಿದ್ದರು .ಕಿರಿಯರಿಗೆ ಅವರು ಪುಟ್ಟಣ್ಣ . ನಮ್ಮ ಪೈಕಿ ಬುದ್ದಿಶಾಲಿ ಯೂ ,ಮಿತ ಭಾಷಿಯೂ ಆಗಿದ್ದು ಸುರತ್ಕಲ್ ನಲ್ಲಿ ಇಂಜಿನೀರಿಂಗ್ ಮಾಡಿ  ಜಗತ್ತಿನೆಲ್ಲೆಡೆ ಕೆಲಸ ಮಾಡಿ ಈಗ ಸುರತ್ಕಲ್ ನಲ್ಲಿಯೇ  ನೆಲೆಸಿರುವರು.ಆಮೇಲೆ ಅಣ್ಣ ಗಣಪತಿ ಭಟ್ . ನಾವೆಲ್ಲಾ ಕುಞ್ಞಣ್ಣ ಎಂದು ಕರೆಯುವೆವು  , ಮೊದಲಿನವರು ನಮಗಿಂತ ವಯಸಿನಲ್ಲಿ ತುಂಬಾ ದೊಡ್ಡವರು ಆದುದರಿಂದ ನಮಗೆ ಬಹಳ  ಸಲುಗೆ ಮತ್ತು ಕ್ಲೋಸ್ ಆಗಿ ಇರಲಿಲ್ಲ ಎಂದೇ ಹೇಳ ಬಹುದು .ಪ್ರೀತಿ ,ಭಯ ಭಕ್ತಿ ಇದ್ದುವು . ಕುಞ್ಞಣ್ಣ ನನಗೆ , ಚಿಕ್ಕಪ್ಪನ ಮಕ್ಕಳೂ ಸೇರಿ ಕಿರಿಯರಿಗೆನಾಯಕ . ಶಾಲೆಗೆ ಹೋಗುವಾಗ ನಮ್ಮ ಮಕ್ಕಳ ಸೈನ್ಯ ಅವನ ಅಂಕೆಯಲ್ಲಿ .ಪೇಟೆಯಲ್ಲಿ ಏನಾದರೂ ನಮಗೆ ಕೊಳ್ಳ ಬೇಕಿದ್ದರೆ ದುಡ್ಡು ಅವನ ಬಳಿ  ಕೊಡುತ್ತಿದ್ದರು .ನಾವು ಏನಾದರೂ  ಮಂಗ ಬುದ್ದಿ ಮಾಡಿದರೆ ಮನೆಯಲ್ಲಿ ಅವನು ರಿಪೋರ್ಟ್ ಮಾಡಬೇಕಿತ್ತು . ಅವನು ಹೇಳಿಕೊಟ್ಟ ಕೆಲವು ಈಗಲೂ ನೆನಪಿವೆ .ಉದಾ ಉಪಕಾರೋಪಿ ನೀಚಾನಮ್ ಅಪಕಾರಾಯ ಕಲ್ಪತೆ ಪಯಪಾನಾಮ್ ಭುಜಂಗಮ್ ಕೇವಲ ವಿಷ ವರ್ಧನಮ್ (ಪಂಚತಂತ್ರ ದಶ್ಲೋಕ ; ನೀಚರಿಗೆ ಉಪಕಾರ ಮಾಡಿದರೆ ಅಪಕಾರವನ್ನೇ ಮಾಡುವರು . ಹಾವಿಗೆ ಹಾಲು ಎರೆದರೂ ವಿಷವು ಏರುವಂತೆ .),ಇನ್ನೊಂದು ಶ್ಲೋಕ ಅವನಿಗೆ ಅರ್ಥವಾಗದ ಕಾರಣ  ತಾನೇ ಅದನ್ನು ಮಾರ್ಪಡಿಸಿ ಹೇಳುತಿದ್ದನು . ಅದು ನಹಿ ಜ್ಜ್ನಾನೇನ ಸದೃಶಮ್ (ಮೈಸೂರ್ ವಿಶ್ವವಿದ್ಯಾಲಯ ಲಾಂಛನ ದಲ್ಲಿ ಇದೆ ).ಅದನ್ನು ಆತನು ನಹಿ ಜ್ಜ್ನಾನೇನ ಮೃಗ ಸದೃಶಮ್ ಎಂದರೇ ಜ್ನಾನ ಹೀನನು ಪಶು ಸಮಾನ ಎಂದು ವಿವರಿಸುತ್ತಿದ್ದನು .ಮೂಲ ಶ್ಲೋಕದ ಅರ್ಥ  ಅರಿವಿಗೆ ಸಮಾನವಾದ್ದು ಇಲ್ಲ ಎಂದು ಆಗ ಬೇಕು ಎಂದು ತೋರುತ್ತದೆ .ಈತನೇ ನಮ್ಮ ಕೊತ್ತಣಿಕೆ  ಕ್ರಿಕೆಟ್ ಟೀಮ್ ಕ್ಯಾಪ್ಟನ್ ಕಮ್ ಅಂಪೈರ್ .ಅವನ ಬಳಿ ಒಂದು ಬೀಗ ಹಾಕುವ  ಡೆಸ್ಕ್ ಇತ್ತು.ಅದರಲ್ಲಿ ಮಸ್ತ್ ಎಂಬ ಸೋಡಾ ಮಾತ್ರೆ ಇದ್ದು ಅದನ್ನು ನೀರಿಗೆ ಹಾಕಿದಾಗ ಬುಳುಬುಳು ಎಂದು ಗ್ಯಾಸ್ ಬಂದು ಶರ್ಬತ್ ಆಗುವದು ,ಅದನ್ನು ಕುಡಿಯುವುದು .ನಾವೆಲ್ಲಾ ನಮಗೊಂದು ಕೊಡು ಎಂದು ದುಂಬಾಲು ಬೀಳುತ್ತಿದ್ದೆವು  .ಈತನ ಕೈಬರಹ ಬಹಳ ಛಂದ(ನನ್ನದು ಕಾಗೆ ಕಾಲು ).ಲೆಕ್ಕ ಪತ್ರಗಳು ಚೊಕ್ಕ ಮತ್ತು up to date . ಮನ ಬಿಚ್ಚಿ ಕೈಕರಣ ಮಾಡಿ ಮಾತನಾಡುವನು . ಕ್ಯಾಮ್ಕೋ ಉದ್ಯೋಗಿಯಾಗಿ ನಿವೃತ್ತನಾಗಿ ನನ್ನ ಮನೆಯ ಸಮೀಪ ವಾಸವಿರುವನು. ಈಗಲೂ ನನ್ನ ಗಾರ್ಡಿಯನ್  ಆಗಿದ್ದು ನನಗೆ ಪಕ್ಕದಲ್ಲಿ ಅಣ್ಣ ಇದ್ದಾನೆ ಎಂಬ ಧೈರ್ಯ  .ಅವನ ಪತ್ನಿ ಸುಬ್ಬು ಲಕ್ಷ್ಮಿ ಅಧ್ಯಾಪಕಿ ಯಾಗಿ ಉಳ್ಳೆಯ ಹೆಸರು ಗಳಿಸಿ ಈಗ ನಿವೃತ್ತ ಜೀವನ .ನೆಹರೂ ನಗರದಿಂದ ಪುತ್ತೂರು ಪೇಟೆಗೆ ನೆಡೆದು ಕೊಂಡೇ ಹೋಗುವರು . ಮುಂಜಾನೆ ವಾಕಿಂಗ್ ಸಮಯ ನಮ್ಮ ಭೇಟಿ ಆಗುವುದು .ಅವನಿಗೆ ದಾರಿಯಲ್ಲಿ ಸಿಗುವ ಎಲ್ಲರೂ ಮಿತ್ರರು . ಅವರೊಡನೆ ಉಭಯ ಕುಶಲೋಪರಿ ಮಾಡಿಯೇ ಮುಂದುವರಿಯುವುದು . 

ಆಮೇಲೆ ನನ್ನ ಅಕ್ಕ ಭಾಗ್ಯ ಲಕ್ಷ್ಮಿ .ಅಜ್ಜನ ಮನೆ ಅಜ್ಜಿ ಹೆಸರು .ಎಲ್ಲರೂ ಒಪ್ಪಕ್ಕ ಎಂದು ಕರೆಯುವುದು .ಇವರ ಬಗ್ಗೆ ಹಿಂದೆ ಬರೆದಿದ್ದೇನೆ .ನನ್ನಿಂದಲೇ ಅಕ್ಕ ಆದ  ಕಾರಣ ನನ್ನಲ್ಲಿ ಬಳಕೆ ಹೆಚ್ಚು .ಎರಡು ಜಡೆ ಹಾಕಿಕೊಂಡು ನನ್ನ ಕೈ ಹಿಡಿದು ಜೋಪಾನವಾಗಿ ಹೆಮ್ಮೆಯಿಂದ ಶಾಲೆಗೆ ಕರೆದು ಕೊಂಡು ಹೋಗುತ್ತಿದ್ದ ಚಿತ್ರಣ ಮಸುಕು ಮಸುಕಾಗಿ ಯಾದರೂ ಆಪ್ತವಾಗಿ ನೆನಪಿದೆ . ಆಕೆಗೆ ಒತ್ತಿನ ನಾನು ಪದ್ಮನಾಭ ..ಹಿರಿಯರು ಪದ್ಮ ಎಂದೂ ಕಿರಿಯರು ಪದ್ದನ್ನ ಎಂದೂ ಕರೆಯುವರು .ಶಾಲೆಯಲ್ಲಿ ಅಂಕ ಕಡಿಮೆ ಬಂದರೆ ಪೆದ್ದಣ್ಣ ಎನ್ನುವರು ,ಈಗ ನಾನು  ಎ  ಪಿ ಭಟ್ ಆಗಿದ್ದೇನೆ . ಪಠ್ಯೇತರ ಪುಸ್ತಕಗಳನ್ನು ಓದುವ ಹುಚ್ಚು ಇದ್ದ ನಾನು ಮನೆಗೆ ಮತ್ತು ಮನೆಯವರಿಗೆ ಆಗಿ ಬಂದದ್ದು ಕಡಿಮೆ . 

ನನ್ನ ತಮ್ಮ ಲಕ್ಷ್ಮಿ ನಾರಾಯಣ .ಕರೆಯುವುದು ನಾರಾಯಣ ಎಂದು ,ಕಿರಿಯರಿಗೆ ನಾನೆಣ್ಣ  . ತುಂಬಾ ಧೈರ್ಯ ಶಾಲಿ ಮತ್ತು ಪ್ರಾಣಿ ಪ್ರಿಯ . ವ್ಯವಹಾರ ಜಾಣ  .ಎಂಜಿನೀರ್ ಆಗಿ ಉಡುಪಿಯಲ್ಲಿ ಇದ್ದು ,ನನ್ನ ಸಾಕು ನಾಯಿ ಬಗ್ಗೆ ಪುಸ್ತಕ ಬರೆದಿದ್ದು ಅದು ಆಸಕ್ತರ  ಮೆಚ್ಚುಗೆ ಗಳಿಸಿದೆ .. ಕೊನೆಯ ತಮ್ಮ ಶ್ರೀನಿವಾಸ .ಎಲ್ಲರೂ ತಮ್ಮ ಎಂದು ಕರೆಯುವರು ,ಅಕ್ಕಂದಿರ ಮಕ್ಕಳು ತಮ್ಮ ಮಾವ ಎಂದು ಕರೆಯುವರು !. ನಾವು ಎರಡು ಅಣ್ಣಂದಿರಿಗಿಂತ ಮೊದಲೇ ಕೆಲಸಕ್ಕೆ ಸೇರಿದವನು ಮಾತ್ರವಲ್ಲ ನನಗೆ ವಾಹನ ಖರೀದಿಸಲು ಹಣ ಸಹಾಯ ಮಾಡಿದ್ದಲ್ಲದೇ ನನಗೆ ಬೈಕ್ ಸವಾರಿ ಕಲಿಸಿಕೊಟ್ಟವನು . ಸಾಧು ಸ್ವಭಾವ ,ಏಲ್ಲರಿಗೂ ಸಹಾಯ ಹಸ್ತ . ಬೆಂಗಳೂರಿನಲ್ಲಿ ನೆಲೆಸಿದ್ದು ದುರದೃಷ್ಟ ವಶಾತ್ ಅನಾರೋಗ್ಯದಿಂದ ನಮ್ಮನ್ನು ಅಗಲಿದ .ಅವನ ಸರ್ ನೇಮ್ ಮೂರ್ತಿ . ಮನೆಯಲ್ಲಿ ಮತ್ತು ಬಳಗದಲ್ಲಿ ಬಹಳ ಮಂದಿ ಮೂರ್ತಿ ಎಂದು ಕರೆಯುತ್ತಿದ್ದರು . 

ಕೊನೆಗೆ ಇಬ್ಬರು ತಂಗಿಯರು ,ಪದ್ಮಾವತಿ ಮತ್ತು ವೀಣಾ . ಪದ್ಮಾವತಿ ಯ ಗಂಡ ಮುಂಬೈ ಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಇದ್ದು ಅಲ್ಲಿನ ಪ್ರತಿಷ್ಠಿತ ಬಾಂದ್ರಾ  ರಿಕ್ಲ ಮೇಷನ್ ಬಳಿ ವಸತಿ ಗೃಹದಲ್ಲಿ ಇದ್ದರು .ಮುಂಬೈ ಗೆ ಹೋದ ಅನೇಕರಿಗೆ ಉಪಚಾರ ಮಾಡಿರುವರು .ಈಗ ಪುತ್ತೂರಿನಲ್ಲಿ ನೆಲೆಸಿರುವರು . ಕೊನೆಯವಳು ವೀಣಾ ವಿಜ್ಞಾನಿ ಯಾಗಿ ಬೆಂಗಳೂರಿನಲ್ಲಿ ವಾಸ .ಇವರಿಬ್ಬರೂ ತಮ್ಮ ಹೆಸರಿನಿಂದ ಕರೆ ಯಲ್ಪಡುವರು . 

ಇದನ್ನೆಲ್ಲಾ ಬರೆಯಲು ಕಾರಣ ಇಂದು ಮುಂಜಾನೆ ಜಡಿ ಮಳೆಗೆ ಕುಞ್ಞಣ್ಣ  ಮನೆಯಲ್ಲಿ ಮಾಡಿದ ಬಿಸಿ ಬಿಸಿ ಹಲಸಿನ ಹಣ್ಣಿನ ಕೊಟ್ಟಿಗೆ (ಕಡುಬು )ತಮ್ಮನಿಗೆ ಎಂದು ತಂದು ಕೊಟ್ಟುದು ,ಅದನ್ನು ತಿನ್ನುವಾಗ ಪರಿಮಳದೊಂದಿಗೆ ಹಳೇ ನೆನಪುಗಳು ಬಂದವು ..ಕೆಳಗೆ ಇರುವುದು ಅವನ ಚಿತ್ರ 




 

 

ಸೋಮವಾರ, ಜುಲೈ 3, 2023

ಭಾಷಾಂತರ

 ನನಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ ಎಂಬ ಕೀಳರಿಮೆ ಇಲ್ಲದಿದ್ದರೂ ಬೇಸರ ವಿದೆ . ಇನ್ನೊಬ್ಬರು ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವಲ್ಲಾ ಎಂದು ಮಾತ್ರ .ಆದರೆ ಕನ್ನಡ ಚೆನ್ನಾಗಿ ಬರುವುದಿಲ್ಲ ಎಂಬುದು ಎರಡೂ ಇದೆ . ಏಕೆಂದರೆ ಅದು ಮಾತೃ ಭಾಷೆ . 

ಮೊನ್ನೆ ದುಬಾಯಿ ಯಿಂದ ಬೆಂಗಳೂರಿಗೆ ವಿಮಾನ ತಲುಪಿದಾಗ ಗಗನ ಸಖಿ ನನ್ನನ್ನು ನೋಡಿ "ಆರ್ ಯು ಕೆ ,ಆರ್ಯು ಕೆ ಎಂದು ಕೇಳಿದಳು .ನಾನು ನೋ ನೋ ಐ ಆಮ್ ಎ ಪಿ ಎಂದೆ .ಆಕೆ ತಲೆ ಅಲ್ಲಾಡಿಸಿ ಪುನಃ ಪುನಃ ಅದೇ ಪ್ರಶ್ನೆ ಕೇಳಿದಳು .ನನ್ನ ಪಕ್ಕದಲ್ಲಿ ಇದ್ದ ಪ್ರಯಾಣಿಕರು ನನ್ನ ಭಾಷಾ ಅಜ್ಞಾನ ಕ್ಕೆ ಕನಿಕರ ಪಟ್ಟು 'ಶಿ ಐಸ್ ಆಸ್ಕಿ೦ಗ್  ಆರ್ ಯು ಓಕೆ ?"ಎಂದರು .ನಾನು ಓಕೆ ಓಕೆ ಈ ಆಮ್ ಓಕೆ ಥಾಂಕ್ ಯು "ಎಂದೆ . 

ನಮ್ಮಂತಹ ಕನ್ನಡ ಮೀಡಿಯಂ ಗಿರಾಕಿಗಳ ಕಷ್ಟ ಇದು . ನಾನು ಹಿಂದೊಮ್ಮೆ ನಮ್ಮ ಪಕ್ಕದ ಮನೆಯ ಹುಡುಗಿಗೆ' ಯು ಆರ್ ಗುಡ್ ಗರ್ಲ್' ಎಂದಾಗ ಆಕೆ 'ಈ ಮಾಮನಿಗೆ ಇಂಗ್ಲಿಷ್ ಸರಿ ಬರುವುದಿಲ್ಲ ವಾಟ್ ಗರ್ಲು  ದಟ್ ಐಸ್ ಗಲ್ . ' ಅದೇ ರೀತಿ ಬರ್ಡ್ ಇತ್ಯಾದಿ ಗಳನ್ನು ಉಚ್ಚರಿಸುವಾಗ ರ ಅರ್ಧ ಮಾತ್ರ ಬರಬೇಕಂತೆ . ಒಂದು ಮಲಯಾಳ ಸಿನೆಮಾದಲ್ಲಿ  ನಟನೊಬ್ಬನು ಕೆನಡಾ ದೇಶದಲ್ಲಿ ಇಂಗ್ಲಿಷ್ ಮಾತನಾಡುವಾಗ ಬಾಯಲ್ಲಿ ಒಂದು ಚಮಚ ಇಟ್ಟುಕೊಂಡು ಮಾತನಾಡಿದರೆ ನಮ್ಮ ಇಂಗ್ಲಿಷ್ ಅವರ ಇಂಗ್ಲಿಷ್ ಆಗಿ ಮಾರ್ಪಡುವುದು ಎಂದು ತೋರಿಸಿದ್ದನ್ನು ನೋಡಿದ್ದೇನೆ . 

ಮೊನ್ನೆ ಅಮೇರಿಕಾದಲ್ಲಿ ಮಕ್ಕಳ ಜೊತೆ ವಾಕಿಂಗ್ ಹೋಗುವಾಗ ನಮ್ಮ ನಾಯಿ ಎದುರಿನಿಂದ ಬರುತ್ತಿರುವ ಅದರ ಮಿತ್ರನನ್ನು ಕಂಡು ಅದರ ಜತೆ ಲಾಗ ಹಾಕತೊಡಗಿತು .ಆಗ ಅಲ್ಲೇ ಬರುತ್ತಿದ್ದ ಸ್ಥಳೀಯ ವ್ಯಕ್ತಿ ನನ್ನ ಬಳಿ :"ದೆ ಆರ್ ಬಡ್ಡಿಸ್ ?"ಎಂದು ನಕ್ಕ . ಈ ಬಡ್ಡಿ ,ಗೈ ಡ್ಯೂಡ್ ಇತ್ಯಾದಿ ಶಬ್ದಗಳನ್ನು ನಮಗೆ ಯಾರೂ ಕಲಿಸಿಲ್ಲ ವಲ್ಲ ಎಂದು ಬೇಸರ ಪಟ್ಟೆ .ಮಾಡಿದ ಮತ್ತು ಮಾಡದ ತಪ್ಪಿಗೆ ಮಾಷ್ಟ್ರು ನಮಗೆ ಬಡ್ಡಿ ಮಗನೆ ಎಂದು ಬೆನ್ನಿಗೆ ಎರಡು ಬಿಗಿದದ್ದು ಉಂಟು . 

ಬಂಗಾಳದ ಒಬ್ಬ ಯುವತಿ ಬ್ಯಾಂಕ್ ಉದ್ಯೋಗಿ .ಬೆಂಗಾಲಿಗಳ ಜತೆ ನಾನು ಹಿಂದಿ ಮಾತನಾಡುವುದು . ಬಂಗಾಳಿಯಲ್ಲಿ ಕಾ ವನ್ನು ಕೋ ,ದಾ ವನ್ನು ದೋ ಮಾಡಿದರೆ ಆಯಿತು ಎಂದು ತಿಳಿದಿದ್ದೆ .ನೋವು ಇದೆಯಾ ಎಂದು ಕೇಳುವುದಕ್ಕೆ ದೋರ್ದ್ ಹೈ ಎಂದುದಕ್ಕೆ ಅವಳು ಇಂಗ್ಲಿಷ್ ನಲ್ಲಿ ಅದು ಸರಿಯಾದ ಶಬ್ದ ಅಲ್ಲ ,ಎಂದು ಬೇರೆ ಏನೋ ಹೇಳಿದಳು . ತಾನು ವಿಭಾಗೀಯ ಕಚೇರಿಯಲ್ಲಿ ಇರುವುದು ಅದೃಷ್ಟ ,ಭಾಷೆ ಪ್ರಶ್ನೆ ಬಾರದು ಎಂದಳು .ನಾನು "ನಿಮ್ಮ ಅದೃಷ್ಟ ವಲ್ಲ ,ಬ್ರಾಂಚ್ ನಲ್ಲಿ ಇದ್ದರೆ ನೀವು ಕಷ್ಟ ಪಟ್ಟಾದರೂ ಒಂದು ಭಾಷೆ ಕಲಿಯುತ್ತಿದ್ದೀರಿ "ಎಂದೆ .ನಗುತ್ತಾ ಹೌದು ಎಂದಳು . 

https://fb.watch/lxZ_eMZlD1/

ಶನಿವಾರ, ಜುಲೈ 1, 2023

 ಸಂಕಟದಲ್ಲಿರುವ ಜೀನ್ಸ್ 

ಕಳೆದ ಬಾರಿ ಅಮೇರಿಕಾ ದೇಶಕ್ಕೆ ಹೋಗಿದ್ದಾಗ  ನಾನು ಆಸ್ಪತ್ರೆಗೆ ಧರಿಸುವ  ಹಲವು ಜತೆ  ಪ್ಯಾಂಟ್ ಶರ್ಟ್ ಗಳನ್ನು ಚೆನ್ನಾಗಿ ಇಸ್ತ್ರಿ ಮಾಡಿ ಕೊಂಡು ಹೋದರೆ ಅವು ಬ್ಯಾಗಿನ ತೂಕ ಹೆಚ್ಚಿಸಿದವೇ ವಿನಃ ಉಪಯೋಗಕ್ಕೆ ಬಂದುದು ಕಡಿಮೆ . ಯಾಕೆಂದರೆ ಅಲ್ಲಿ ಪ್ಯಾಂಟ್ ಆಗ ಬೇಕು ಎಂದು ಇಲ್ಲ .ಚಡ್ಡಿಯೂ ನಡೆಯುತ್ತದೆ ..ಮಗನ ಚಡ್ಡಿಯೇ ಉಪಯೋಗಕ್ಕೆ ಬಂದಿತು .ಅಲ್ಲದೆ ಅಲ್ಲಿ ಇಸ್ತ್ರಿ ಹಾಕುವ ಅವಶ್ಯಕತೆ ಇಲ್ಲ .ತೊಳೆದ ಪ್ಯಾಂಟ್ ಅಂಗಿ ಹಾಗೇಯೇ ಹಾಕಿಕೊಂಡು ಹೋಗ ಬಹುದು .ಪಾಶ್ಚಾತ್ಯರು ನಮಗೆ ಕೋಟ್ ಟೈ ಇತ್ಯಾದಿ ಕಲಿಸಿ ತಾವು ಮಾತ್ರ ಕೆಲವರನ್ನು ಮತ್ತು ಕೆಲವು ಸಂದರ್ಭ ಬಿಟ್ಟರೆ ಸಾದಾ ಉಡುಗೆಯಲ್ಲಿ ಇರುತ್ತ್ತಾರೆ ,.ನಾವು ಮಾತ್ರ ಇಲ್ಲಿಯ ಸೆಖೆಯಲ್ಲಿಯೂ ಕೋಟ್ ಟೈ ಇತ್ಯಾದಿ ಗೆ ಜೋತು ಬಿದ್ದಿದ್ದೇವೆ . 

ಈ ಬಾರಿ ನಾನು ಎರಡು ಮೂರು ಜತೆ ಸಾದಾ ಉಡುಗೆಯಲ್ಲಿ ಸುಧಾರಿಸಿದೆ ..ಒಂದು ಬಾರಿಯೂ ಇಸ್ತ್ರೀ ಹಾಕಲಿಲ್ಲ . 

ನಾನು ಯಾವ ಫ್ಯಾಷನ್ ಗೂ ವಿರೋಧಿ ಅಲ್ಲ . ಅದು ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಷಯ .ಆದರೆ ನಮ್ಮಲ್ಲಿಯೂ ಈಗ ವ್ಯಾಪಕವಾಗಿರುವ ಮತ್ತು ಅಮೇರಿಕಾ ದಲ್ಲಿ ಎಲ್ಲಾ ಕಡೆ ಕಾಣುವ ಹರಿದ ಬಟ್ಟೆಯ ಫ್ಯಾಷನ್ ಮಾತ್ರ ನನಗೆ ಸೋಜಿಗ ಉಂಟು ಮಾಡಿದೆ . ಹುಡುಗರು ಮತ್ತು ಹೆಚ್ಚಾಗಿ ಹುಡುಗಿಯರು ಹರಿದ ಜೀನ್ಸ್ ಪ್ಯಾಂಟ್ ಮತ್ತು ಚಡ್ಡಿ ಹಾಕಿಕೊಂಡು ವಿಜೃಂಬಿಸುವುದು . ಮೊದಲು ಮೊದಲು ಇವರು ಸಮಾಜವಾದಿಗಳು ,ಬಡ ತನದಿಂದ  ಹರಿದ ಬಟ್ಟೆ ಹಾಕಿ ಕೊಂಡಿರುವ ಜನರೊಂದಿಗೆ ತಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡುವರು ಎಂದು ಕೊಂಡಿದ್ದೆ .ಆಮೇಲೆ ತಿಳಿಯಿತು ಅದು ಅಲ್ಲಾ ಎಂದು .ಅಂಗಾಂಗಗಳ ತುಣುಕು ತುಣುಕು ಪ್ರದರ್ಶಿಸಿ ಕುತೂಹಲ ಹುಟ್ಟಿಸುವುದು ,ಮತ್ತು ಹರಕು ಮುರುಕು ಬಟ್ಟೆಯ ಜತೆ ಹೋಲಿಸಿದಾಗ ಇರುವುದಕ್ಕಿಂತಲೂ ಸೌಂದರ್ಯ ಅಧಿಕ ಕಾಣುವದು . ಅದು ಬಿಟ್ಟು ಒಳಗೆ ಗಾಳಿಯಾಡಲಿ ಎಂದು ಇರಲಿಕ್ಕಿಲ್ಲ . ನನಗೊಂದು ಚಿಂತೆ ಈ ಉಡುಪುಗಳನ್ನು ಹೊಲಿದ ಮೇಲೆ ಹರಿಯುತ್ತಾರೋ ?ಅಲ್ಲ ಬಟ್ಟೆ ಹರಿದ ಮೇಲೆ ಹೊಲಿಯುತ್ತಾರೋ ?ಇಲ್ಲಿ ನೀವು ಕಂಡಿರಬಹುದು :ಹರಿಯುವಿಕೆಯಲ್ಲಯೂ ಒಂದು ಕ್ರಮ ಇದೆ .ಮೆಥಡ್ ಫಾರ್ ಮ್ಯಾಡ್ ನೆಸ್ ಎನ್ನುವಂತೆ . ಹರಿಯಲ್ಪಟ್ಟ ಬಟ್ಟೆಯ ಮಾರ್ಜಿನ್  ನೇರವಾಗಿ ಇರದೇ ಚಿಂದಿ ಚಿಂದಿಯಾಗಿ ಆದಷ್ಟು ಚಂದ ಎನ್ನುವರು   .ಇದನ್ನು ಡಿಸ್ಟ್ರೆಸ್ಸ್ಡ್ (ಸಂಕಟದಲ್ಲಿರುವ )ಜೀನ್ಸ್ ಬಟ್ಟೆ ಎಂದು ಕರೆಯುವರು .ಧರಿಸುವವರ ಸಂಕಟವೋ ,ನೋಡುಗರದ್ದೋ ಅಥವಾ ತಯಾರಿಸುವವರೋದ್ದೋ ನಾನರಿಯೆ .ಬಟ್ಟೆಯ  ಕೆಲವು ಭಾಗಗಳನ್ನು ಹಳತಾಗಿ ಮತ್ತು ಹರಿದಂತೆ ಮಾಡಿ ಉಡುಪು ತಯಾರು ಮಾಡುವದು . ಉಡುಪಿನ  ಕೈ ಮತ್ತು ಸೊಂಟದಲ್ಲಿ ಆಯಕಟ್ಟಿನ ಜಾಗದಲ್ಲಿ ರಂದ್ರ ಇದ್ದರೆ  ನರ್ಸ್ ನವರಿಗೆ ಇಂಜೆಕ್ಷನ್ ಕೊಡುವುದು ಸುಲಭ 

ಅಮೆರಿಕಾ ದಲ್ಲಿಯೂ ನಿರ್ಗತಿಕರು ಇದ್ದಾರೆ .ತಮ್ಮ ಹಳೇ ಉಡುಪುಗಳನ್ನು ಅವರಿಗೆ ದಾನ ಮಾಡಲು ಇಚ್ಚಿಸುವವರು  ಪೆಟ್ರೋಲ್ ಬಂಕ್ ಗಳಂತಹ  ಜಾಗಗಳಲ್ಲಿ ಇಟ್ಟಿರುವ ಪೆಟ್ಟಿಗೆಗಳಲ್ಲಿ ಅದನ್ನು ಹಾಕಿದರೆ ,.ರೋಗಾಣು ನಾಶ ಮಾಡಿ ,ತೊಳೆದು ಅರ್ಹರಿಗೆ ಕೊಡುವರಂತೆ . 

(ಚಿತ್ರಗಳು ಸಾಂಧರ್ಭಿಕ )






ಗುರುವಾರ, ಜೂನ್ 29, 2023





ನಮ್ಮ ಆಸ್ಪತ್ರೆ ಕ್ಯಾಂಟೀನ್ ಹರೀಶಣ್ಣ ಒಂದು ಮಾತು ಹೇಳಿದರು . ರೋಗಿಗಳು ಮತ್ತು ಸಂಬಂದಿಕರು ಬದನೆ ಕಾಯಿ ಮತ್ತು ಕ್ಯಾಬೇಜ್ ಸುತರಾಂ ಇಷ್ಟ ಪಡುವುದಿಲ್ಲ ಮತ್ತು ಮೂಗು ಮುರಿಯುತ್ತಾರೆ .ಆದುದರಿಂದ ಅವುಗಳ ಪದಾರ್ಥ ಮಾಡುವುದೇ ಇಲ್ಲ . ತರಕಾರಿ ಬೆಲೆ ಗಗನಕ್ಕೆ ಏರಿರುವ ಈ ದಿನಗಳಲ್ಲಿ ಇವು ನಿಜಕ್ಕೂ ಆಪತ್ ಬಾಂಧವರು . ಈ ಎರಡು ತರಕಾರಿಗಳು ಪೂರ್ವಗ್ರಹ ದಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಪಪ್ರಚಾರಕ್ಕೆ ಒಳಗೆ ಆಗಿವೆ .ಯಾವಾಗಲೂ ಅಸತ್ಯ ಬೇಗ ಹರಡುವುದು ಮತ್ತು ಜನ ಮಾನಸದಲ್ಲಿ ಗಟ್ಟಿಯಾಗಿ ನಿಲ್ಲುವುದು .ನನ್ನ ಮಾತಿನಲ್ಲಿ ವಿಶ್ವಾಸ ಇಲ್ಲದಿದ್ದರೆ ಇಂಟರ್ನೆಟ್ ಗೆ ಹೋಗಿ ಈ ತರಕಾರಿಗಳ ಬಗ್ಗೆ ಜಾಲಾಡಿರಿ .ಏನಾದರೂ ಸಿಕ್ಕಿದರೆ ತಿಳಿಸಿರಿ . 

   ಕ್ಯಾಬೇಜ್ ನಮ್ಮ ಊರಿಗೆ ಬಂದುದು ನನಗೆ ಒಂದು ಹತ್ತು ಹನ್ನೆರಡು ವರ್ಷ ಪ್ರಾಯ ವಾದ  ಮೇಲೆ . ಅಪರೂಪಕ್ಕೆ ಅದನ್ನು ತರುತ್ತಿದ್ದು ಅದರ ಸಾಂಭಾರ್ ಮತ್ತು ಪಲ್ಯ ಎಲ್ಲರಿಗೂ ಇಷ್ಟ ವಾಗಿತ್ತು .ಈಗೀಗ ಅದರ ಬಜ್ಜಿ ಮತ್ತು ಪತ್ರೊಡೆ ಕೂಡಾ ಮಾಡುವರು . ಈಗ ಮನೆಯಲ್ಲಿ ನಿತ್ಯಕ್ಕೆ ಮತ್ತು ಸಮಾರಂಭಗಳಲ್ಲಿ ಅದು ಕಾಣೆಯಾಗಿದೆ . ಅಲ್ಲದೆ ಯಾವುದೇ ಕೆಲಸ ಗೋಜಲು ಮಾಯವಾಗಿ ಮಾಡಿದರೆ ಅವನು ಅದನ್ನು ಕ್ಯಾಬೇಜ್ ಮಾಡಿದಾ ಮಾರಾಯ ;ಪೇಷಂಟ್ ಆ ಆಸ್ಪತ್ರೆಗೆ ಹೋಗಿ ಈಗ ಕ್ಯಾಬೇಜ್ ಆಗಿದ್ದಾನೆಯ ಇತ್ಯಾದಿ ಅನ್ನುವರು 

ಇನ್ನು ಬದನೆ ;ಇದನ್ನು ಮನೆಗಳಲ್ಲಿ ಈಗಲೂ ಮಾಡಿದರೂ ರೋಗಿಗಳಿಗೆ ಮತ್ತು ಬಾಳಂತಿಯರಿಗೆ ನಂಜು ಎಂದು ಕೊಡರು . ಈ ತರಕಾರಿಯ ಮೇಲೆ ಸುಖಾ ಸುಮ್ಮನೇ ನಂಜು ಕಾರಿದವರು ಯಾರು ?

ನನಗೆ ತರಕಾರಿ ಎಂದರೆ ಬಹಳ ಇಷ್ಟ .ಪಲ್ಯ ಮತ್ತು ಸಾಂಬಾರು ಹೋಳುಗಳನ್ನು ಪುನಃ ಪುನಃ ಹಾಕಿಸಿ ಕೊಳ್ಳುವೆನು .ಬಾಲ್ಯದಲ್ಲಿ ನಾನು ಊಟಕ್ಕೆ ಕುಳಿತಾಗ ಅಮ್ಮ ಎಚ್ಚರಿಸುತ್ತಿದ್ದರು 'ಮೇಲಾರ ಬಾಗ ಎಲ್ಲಾ ಮನಾರ ಮಾಡ ಬೇಡ ಮಗಾ ;ಯಾರಾದರೂ ನೆಂಟರು ಬಂದರೆ ಅವರಿಗೆ ಸ್ವಲ್ಪ ಇರಲಿ "ಆಗಿನ ಕಾಲದಲ್ಲಿ ಮನೆಯಲ್ಲಿ ಹಠಾತ್  ಆಗಮಿಸ ಬಹುದಾದ  ನೆಂಟರಿಗಾಗಿ ಯಾವತ್ತೂ ಅನ್ನ ಮತ್ತು ಪದಾರ್ಥ ತೆಗೆದು ಇಟ್ಟು ಕೊಳ್ಳುತ್ತಿದ್ದರು .ಒಂದು ವೇಳೆ ಬರದಿದ್ದರೆ ಮರುದಿನಕ್ಕೆ ತಮಗೇ . ಇನ್ನು ಕೆಲವೊಮ್ಮೆ ನನ್ನ ಅಕ್ಕ ,ಅತ್ತಿಗೆ ನಾನು ಊಟಕ್ಕೆ ಕುಳಿತಾಗ ಒಳಗೆ ಸಾಕಷ್ಟು ಶೇಖರಿಸಿಟ್ಟು ಉಳಿದುದನ್ನು ಮಾತ್ರ ನನ್ನ ಎದುರು ಇಡುವರು .ಅದಕ್ಕೆ ಪ್ರತೀಕಾರ ವಾಗಿ ನಾನು ಈಗ ದಿನಾಲೂ ಅರ್ಧ ಕಿಲೋ ಪಲ್ಯ ಮಾಡಿ ಗುಳು೦ಕಾಯಿಸುವೆನು 

ಸೋಮವಾರ, ಜೂನ್ 26, 2023


 ಇಂದು ಇಂದು ಮುಂಜಾನೆ ನಾನೇ ಅಡಿಗೆ  ಪುಸ್ತಕ  ನೋಡದೆ ತಯಾರಿಸಿದತಿಂಡಿ  ಸಜ್ಜಿಗೆ ಅವಲಕ್ಕಿ ಅಥವಾ ಸಜ್ಜಿಗೆ ಬಜಿಲು . ನಮ್ಮ ಊರಿನ ಐಕಾನ್ ತಿಂಡಿ . ಹಿಂದೆ ಮದುವೆ  ಇತ್ಯಾದಿ ಸಮಾರಂಭಗಳಲ್ಲಿ  ಮುಂಜಾನೆ ಖಡ್ಡಾಯ ಒಂದೇ ಒಂದು ತಿಂಡಿ ಅವಲಕ್ಕಿ ಸಜ್ಜಿಗೆ ಮತ್ತು ಬಾಳೆ  ಹಣ್ಣು .ಮೊಸರು ಉಪ್ಪಿನ ಕಾಯಿ ಇಲ್ಲ .ಈಗ ಅದರ ಸ್ಥಾನ  ಇಡ್ಲಿ ದೋಸೆ ಬನ್ಸ್ ಪೂರಿ  ಇತ್ಯಾದಿ ಆವರಿಸಿ ಕೊಂಡಿವೆ . ಹೋಟೆಲ್ ಗಳಲ್ಲಿ ಜನಪ್ರಿಯ ಆಗಿದ್ದ ಇದು ಮಂಗಳೂರಿನ ಇಂದ್ರ ಭವನನಂತಹ  ಹೋಟೆಲ್ ಗಳಲ್ಲಿ ಮಾತ್ರ ಸಿಗಬಹುದು . ಬೇಂದ್ರೆ ಯವರ ಇನ್ನೂ ಯಾಕೆ ಬರಲಿಲ್ಲಾವ  ಹುಬ್ಬಳ್ಳಿಯಾವ  ಕವನ ದಲ್ಲಿ  ಚಹಾ ದ ಕೂಡಾ ಚಿವುಡ (ಹುರಿದ ಮಸಾಲೆ ಅವಲಕ್ಕಿ )ದಾಂಗ ಎಂದು  ವರ್ಣಿಸಿದ ಹಾಗೆ ನಮ್ಮಲ್ಲಿ  ಚಹಾ ದ  ಕೂಡಾ ಅವಲಕ್ಕಿ ಸಜ್ಜಿಗೆ ಹಾಂಗಾ ಎಂದು ಧಾರಾಳ ಹೇಳ ಬಹುದಾದ ಕಾಲ ಒಂದಿತ್ತು

ಒಂದು ಚಿಂತನೆ

 

ಅಮೇರಿಕಾ ದಲ್ಲಿ ಮೊಮ್ಮಗ ಮಲಗಿರುವಾಗ ಸಮಯ ಕಳೆಯಲು   ಯು ಟ್ಯೂಬ್ ನಲ್ಲಿ ಸಂಗೀತ ,ಚಲನ ಚಿತ್ರ ಮತ್ತು ಸಂದರ್ಶನ ಇತ್ಯಾದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ . ಯಾವುದೋ ಮಲಯಾಳಂ ಚಾನೆಲ್ ನಲ್ಲಿ ಮಲಯಾಳಂ ನ ಹಿರಿಯ ಮತ್ತು ನನ್ನನ್ನೂ ಸೇರಿ ವೀಕ್ಷಕರ ಅಚ್ಚು ಮೆಚ್ಚಿನ ನಟಿ  ಕವಿಯೂರು ಪೊನ್ನಮ್ಮ ಅವರ ಸಂದರ್ಶನ ಬರುತ್ತಿತ್ತು . ಕನ್ನಡದಲ್ಲಿ ಹಿಂದೆ ಪಂಡರೀ ಬಾಯಿ ಇದ್ದಂತೆ ಇವರ ತಾಯಿ ಪಾರ್ಟ್ ಟ್ರೇಡ್ ಮಾರ್ಕ್ .ಮೋಹನ ಲಾಲ್ ಅವರಿಗೆ ಅನೇಕ ಚಿತ್ರಗಳಲ್ಲಿ ತಾಯಿ ಆಗಿ ಅಭಿನಯಿಸಿದ್ದಾರೆ . ಹಣೆಯಲ್ಲಿ ರುಪಾಯಿ ಗಾತ್ರದ ಕುಂಕುಮ ಬೊಟ್ಟು ,ಮುಖದಲ್ಲಿ ಮುಗ್ದ ಪರಿಶುದ್ಧ ಮಾತೃಛಾಯೆ . 

ಸಂದರ್ಶನದಲ್ಲಿ ಅವರ ತಾಯಿ ಪಾತ್ರ ಗಳ ಯಶಸ್ವಿಗೆ ಕತೆ ,ತಮ್ಮ ನಟನೆ ಯ ಜತೆ ಸಮಾಜದಲ್ಲಿ (ಮನೆಯಲ್ಲಿ ) ಹಿಂದೆ  ತಾಯಿಗೆ ಇದ್ದ  ಗೌರವ ಸ್ಥಾನ ಕೂಡಾ ಮುಖ್ಯ ಕಾರಣ ಎಂದು ಹೇಳಿದ್ದು ನನ್ನ ಮನಸಿಗೆ ನಾಟಿತು . ಅದೇ ಹಿರಿಯರ ಸ್ಥಾನಮಾನ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಈಗಿನ ತಲೆಮಾರಿನವರಿಗೆ ಅಷ್ಟೇ ಅಪೀಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ  ಎಂಬುದು ಚಿಂತನೆಗೆ ಹಚ್ಚಿತು 

ಶನಿವಾರ, ಜೂನ್ 24, 2023

ಚೌ ಚೌ ಬಾತ್

ನನ್ನ ಸಲಹಾ ಕೊಠಡಿಯ ಹೊರಗೆ ಇಲ್ಲಿ ಕಾಣಿಸಿದ ಫಲಕ ಹಾಕಿದ್ದೇನೆ . ಕಳೆದ ತಿಂಗಳು ಒಬ್ಬರು ಒಳಗೆ ಬಂದು 'ಇಲ್ಲಿ ಚೌ ಚೌ ಬಾತ್ ಸಿಗುತ್ತದೆಯೇ ;ಮಗು ಹಸಿದು ಅಳುತ್ತಿದೆ ' ಎಂದರು .ಮೊನ್ನೆ ಓರ್ವ ಮಹಿಳೆ ಇದು ಅಡಿಗೆ ಪುಸ್ತಕ ,ಇದರಲ್ಲಿ ಆರೋಗ್ಯದಾಯಕ ತಿನಿಸುಗಳ ರೆಸಿಪಿ ಇರಬಹುದು ಎಂದು ವಿಚಾರಿಸಿ ನಿರಾಸೆ ಗೊಂಡರು . 

  ನನ್ನ ಪುಸ್ತಕಗಳನ್ನು ಕುತೂಹಲದಲ್ಲಿ ಮತ್ತು ಆಸಕ್ತಿಯಿಂದ ಕೊಂಡವರು ಬಹುತೇಕ ಜನ ಸಾಮಾನ್ಯರು . ಸಾಹಿತ್ಯ ಕಲಿಯುವವರು ಮತ್ತು ಕಲಿಸುವವರು ಬಹಳ ಕಡಿಮೆ . ನನ್ನ ಬಳಿಗೆ ಸಲಹೆಗೆ ಬಂದವರ ವೃತ್ತಿ ಕನ್ನಡ ಕಲಿಸುವುದು ಎಂದಾದರೆ ನನಗೆ ಸಂತೋಷ ವಾಗಿ ಗೌರವ ಹೆಚ್ಚುವುದು .ಆದರೆ ಅವರಲ್ಲಿಯೇ ಹೆಚ್ಚಿನವರಿಗೆ ತಮ್ಮ ವೃತ್ತಿಯಲ್ಲಿ ಅಭಿಮಾನ ಆಸಕ್ತಿ ಇದ್ದಂತೆ ಕಾಣಿಸುವುದಿಲ್ಲ .ಇದು ದುರದೃ ಷ್ಟಕರ 
 

ಶುಕ್ರವಾರ, ಜೂನ್ 23, 2023

ಏಕ್ ದೊ ತೀನ್ ಚಾರ್

 ಅಮೇರಿಕಾದಲ್ಲಿ ಮಗನ ಮನೆಯ ಹತ್ತಿರ ಒಂದು  ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಇದ್ದು ನಾನು ಪ್ರತಿನಿತ್ಯ  ಅವುಗಳ ಸುತ್ತ ವಾಕಿಂಗ್ ಹೋಗುತ್ತಿದ್ದೆ .ಶಾಲಾ  ಸಮಯದಲ್ಲಿ ಕಾಂಪೌಂಡ್ ಪ್ರವೇಶಿಸ ಬಾರದು ಎಂದು ತೆಲುಗು ತಮಿಳು ಹಿಂದಿ ಚೈನೀಸ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಬೋರ್ಡ್ ಹಾಕಿರುವರು . ಉಳಿದಂತೆ ಅಲ್ಲಿ ಒಳಗೆ ಹೋಗ ಬಹುದು .ಆಟದ ಮೈದಾನದಲ್ಲಿ ಆಟ ವಾಡ ಬಹುದು .ಕ್ರೀಡೆ ಸಂಗೀತ ಮತ್ತು ನಾಟಕ ಗಳಿಗೆ ಬಹಳ ಮಹತ್ವ ನೀಡುವಂತೆ ಕಾಣುತ್ತದೆ .ಹೈ ಸ್ಕೂಲ್ ಆವರಣದಲ್ಲಿ ಶಾಲೆಯ  ನಾಮಫಲಕ ಕಂಡೆ .ಪ್ರೈಮರಿ ಯಲ್ಲಿ ಇಲ್ಲ . ಶಾಲೆಗೆ ತಾಗಿಕೊಂಡು  ರಸ್ತೆ ಬದಿಯಲ್ಲಿ ಬೇಸ್ ಬಾಲ್ ,ಫುಟ್ ಬಾಲ್ ತರಬೇತಿ ಕೊಡಲಾಗುವುದು ಸಂಪರ್ಕಿಸಿರಿ ಎಂದು ಬಹಳ ಸಣ್ಣ ಜಾಹಿರಾತು ಫಲಕಗಳನ್ನು ಕಂಡೆ . ಇಂಗ್ಲಿಷ್ ,ಗಣಿತ ,ಸಿಈ ಟಿ ಇತ್ಯಾದಿ ಟ್ಯೂಷನ್ ಗಳ ಬಗ್ಗೆ ಒಂದೂ ಕಾಣಿಸಲಿಲ್ಲ . 

ಆಟದ ಮೈದಾನದಲ್ಲಿ ಪಿ ಟಿ ಟೀಚರ್ ಒನ್ ಟೂ ಥ್ರೀ ಫೋರ್ ಎಂದು ಡ್ರಿಲ್ ಮಾಡಿಸುವಾಗ ಬಾಲ್ಯ ನೆನಪಾಯಿತು . ನಮ್ಮ  ಪಿ ಟಿ ಮಾಷ್ಟ್ರು ರಾಮರಾಯರು ಏಕ್ ದೋ ತೀನ್ ಚಾರ್ ಎಂದು ಮಾಡಿಸುತ್ತಿದ್ದರು.(ಇದನ್ನೇ ಅನುಕರಿಸಿ ನಾವು ಏಕ್ ದೋ ತೀನ್ ಚಾರ್ ಇತ್ತೆ  ಪೋಪುನೆ ಕಾಣಿಚಾರ್ ಎಂದು ಶಾಲೆಯಿಂದ ಕಾಣಿಚಾರ್ ಬೈಲು ಮೂಲಕ ಅಂಗ್ರಿಗೆ ಹೋಗುವಾಗ ಹೇಳುತ್ತಿದ್ದೆವು ) .ಅರೇಬಿಯಾದಲ್ಲಿ ನನ್ನ ಮನೆಯ ಹಿಂದೆ ಇದ್ದ ಶಾಲೆಯಲ್ಲಿ 'ವಾಹದ್ ಇತನೇನ್  ತಾಲತಾ ಅರ್ಬಾ 'ಎಂದು ಅವರ ಭಾಷೆಯಲ್ಲಿ ಮಾಡಿಸುತ್ತಿದ್ದರು . ಕನ್ನಡಲ್ಲಿ ಒಂದು ಎರಡು ಮೂರು ನಾಲ್ಕು ಎಂದು ಮಾಡಿಸಿದ್ದನ್ನು ಕಾಣೆ . 

ಶಾಲೆ ಬಳಿ ತಿಂಡಿ ಕಡಲೆ ಮಾರುವ ಅಂಗಡಿಗಳು ಇಲ್ಲ .ಯಾಕೆ ಸನಿಹದಲ್ಲಿ ಯಾವುದೇ ಅಂಗಡಿಗಳು ಕಾಣೆ .ಏನಾದರೂ ಬೇಕಾದರೆ  ನಾಲ್ಕು ಕಿಲೋಮೀಟರು ಹೋಗ ಬೇಕು . ಅಧ್ಯಾಪಕರು ಹೆಚ್ಚಿನವರು ಕಾರಿನಲ್ಲಿ ಬರುತ್ತಾರೆ .ವಿದ್ಯಾರ್ಥಿಗಳು ನಡೆದು ಕೊಂಡು ,ಬೈಸಿಕಲ್ ಮತ್ತು ಕಾರ್ ನಲ್ಲಿ .ಹಳದಿ ಬಣ್ಣದ ಶಾಲಾ ಬಸ್ ಕೂಡಾ ಇದ್ದು ಅದರ ಡ್ರೈವರ್ ಮಹಿಳೆ ಆಗಿದ್ದಾರೆ .ಮಕ್ಕಳನ್ನು ಪ್ರೀತಿಯಿಂದ ಜೋಪಾನವಾಗಿ ಕೊಂಡೊಯ್ಯಲು  ಸ್ತ್ರೀ ಯರೇ ಒಳ್ಳೆಯದು ಎಂಬ ಉದ್ದೇಶ ಇರ ಬಹುದು . 




ಗುರುವಾರ, ಜೂನ್ 22, 2023

 ಅಮೆರಿಕಾ ಪ್ರವಾಸ ಕೊನೆಯ ಕಂತು 

ನನಗೆ  ಇದು ಎರಡನೇ ಬಾರಿ ಅಮೇರಿಕಾ ಪ್ರವಾಸ .ಮೊದಲನೇ ಸಲದ ಕುತೂಹಲ ಮತ್ತು ಸಂಭ್ರಮ ಈ ಬಾರಿ ಏಕೋ ಇರಲಿಲ್ಲ .ಮೊಮ್ಮಗನ ಜತೆ ಕೆಲ ವಾರಗಳನ್ನು ಕಳೆಯುವ ಅಸೆ ಮಾತ್ರ ಇತ್ತು . ಅದು ಈಡೇರಿತು . 

ಇನ್ನು ಅಮೆರಿಕಾ ದೇಶ ದ  ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿರುವ ನೆಂಟರ ಪೈಕಿ ಕ್ಯಾಲಿಫೋರ್ನಿಯಾ ದಿಂದ ನನ್ನ ಸೋದರ ಭಾವ ಸಂಗೀತಾಭಿಮಾನಿ ಮತ್ತು ಕಲಾವಿದ ರವಿ ಜೋಶಿ ಮತ್ತು  ನ್ಯೂಯೋರ್ಕ್ ಪಕ್ಕ ಇರುವ ನನ್ನ ಪತ್ನಿಯ ಚಿಕ್ಕಮ್ಮನ ಮಗಳು ನನ್ನ ಫೇಸ್ಬುಕ್ ಫ್ರೆಂಡ್ ಲಲಿತಾ ಜಯರಾಮ್ ತಮ್ಮಲ್ಲಿಗೆ ಬರುವಂತೆ ಅಹ್ವಾನ ಕೊಟ್ಟಿದ್ದರು .ಜತೆಗೆ ಕೆನಡಾ ದಲ್ಲಿ ನನ್ನ ತಮ್ಮನ ಮಗ ಪವನ್ ಮತ್ತು ಸೊಸೆ ಸ್ವೀಕೃತಾ ಅಲ್ಲಿಗೆ ಭೇಟಿ ನೀಡುವಂತೆ  ಬಹು ಪ್ರೀತಿಯಿಂದ ಉತ್ತಾಯ ಮಾಡಿದ್ದರು ಅಲ್ಲದೆ ನಮ್ಮಲ್ಲಿ ಕೆನಡಾ ವೀಸಾ ಕೂಡಾ ಇತ್ತು ..ಆದರೆ ನನ್ನ ಅರೋಗ್ಯ ದೃಷ್ಟಿಯಿಂದ ಎಲ್ಲಿಗೂ ಹೋಗದೆ ಮಗನ ಮನೆಯಲ್ಲೇ ಇದ್ದೆವು . 

ಇಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಆಗಿ ಹಕ್ಕಿಗಳ ಚಿಲಿಪಿಲಿ ಆರಂಭ ಆಗುವುದು .ಎದ್ದು ಓಡಾಡಿದರೆ ಇಡೀ ಮನೆಯಲ್ಲಿ ಅಜನೆ ಆಗುವುದು ಏಕೆಂದರೆ ಇಲ್ಲಿ ಎಲ್ಲಾ ಮರದ ಮನೆಗಳು .ಮಕ್ಕಳು ಮೊಮ್ಮಗುವಿನ ನಿದ್ರೆಗೆ ತೊಂದರೆ ಆಗುವುದು .ಆದುದರಿಂದ ಸುಮಾರು ಆರೂವರೆ ಗಂಟೆಗೆ ಎದ್ದು ಕೆಳಗೆ ಚಾವಡಿಗೆ  ಹೋಗುವುದು .ಮೊದಲು ಬೀರನನ್ನು ಹೊರಬಿಟ್ಟು ಒಳಗಡೆ ಮಾಡುವದು . ಆಮೇಲೆ ಒಂದು ಗಂಟೆ ವಾಕಿಂಗ್ ,ಕೆಲವೊಮ್ಮೆ ತಿಂಡಿ ಆದ ಮೇಲೆ . ಮಗು ನಿದ್ದೆ ಮಾಡುತ್ತಿದ್ದ ವೇಳೆ ಟಿವಿ ಯಲ್ಲಿ ಯೌಟ್ಯೂಬ್ ಮೂಲಕ ಸಂಗೀತ ಮತ್ತು ಯಕ್ಷಗಾನ ನೋಡುವುದು ,ಕೇಳುವುದು .ಮಗು ಚಾವಡಿಗೆ ಬಂದಮೇಲೆ ಟಿವಿ ಕಡ್ಡಾಯ ಬಂದ್ .(ಇದು ನಿಜಕ್ಕೂ ಒಳ್ಳೆಯದು )

        ಮಗು ಎದ್ದು ಬಂದಾಗ ಅವನ ಜತೆ ಆಡುವುದು .ಮಧ್ಯಾಹ್ನ ಭರ್ಜರಿ ಊಟ ,ನಿದ್ದೆ .ಸಾಯಂಕಾಲ ಚಹಾ ಆದಮೇಲೆ ಮಗು ನಾಯಿ ಬೀರ ಮತ್ತು ಕುಟುಂಬದ ಸರ್ವರೂ ಸೇರಿ ವಾಕಿಂಗ್ .ರಾತ್ರಿ ಊಟ ,ನಿದ್ದೆ . ವಾರಾಂತ್ಯ ರಜೆಯಲ್ಲಿ ಮಕ್ಕಳು  ನಮ್ಮನ್ನು ವಿಹಾರಕ್ಕೆ ಪಾರ್ಕ್ ಗಳಿಗೆ ಕರೆದು ಕೊಂಡು ಹೋಗುವರು .ವಾಷಿಂಗ್ಟನ್ ರಾಜ್ಯದಲ್ಲಿ ಮೂರು  ನ್ಯಾಷನಲ್ ಪಾರ್ಕ್ ಗಳು ಇವೆ .ಅವುಗಳಲ್ಲಿ ಪ್ರಸಿದ್ದವಾದ ಮೌಂಟ್ ರೈನಿಯರ್ ಗೆ ಕಳೆದ ಬಾರಿ ಹೋಗಿದ್ದ ನೆನಪು .ಈ ಸಲ ನಾರ್ತ್ ಕ್ಯಾಸ್ಕೇಡ್ ನ್ಯಾಷನಲ್ ಪಾರ್ಕ್ ಮತ್ತು ಅದಕ್ಕೆ ತಾಗಿ ಇರುವ ಡಯಾಬ್ಲೊ ಸರೋವರ ಕ್ಕೆ ಹೋದೆವು .ಇದು ನಮ್ಮ ಲಡಾಕ್ ತರಹ ಇದೆ ಎಂದು ಅಲ್ಲಿಗೂ ಹೋಗಿದ್ದ ನನ್ನ ಬೀಗರು ಹೇಳಿದರು . ಈ ರಾಜ್ಯದಲ್ಲಿ ಉದ್ದುದ್ದಕೆ ಬೆಳೆದಿರುವ ಪೈನ್ ವೃಕ್ಷ ಗಳನ್ನೇ ಕಂಡುದು ಹೆಚ್ಚು .ಅವುಗಳ ಹೂ ಪರಾಗ ಗಾಳಿಯಲ್ಲಿ ಹತ್ತಿಯಂತೆ ತೇಲುತ್ತಿದ್ದು ,ನನಗೆ ಅದರ ಅಲ್ಲರ್ಜಿ ಎಂಬ ಸಂದೇಹ ಉಂಟಾದುದರಿಂದ ಮಾಸ್ಕ ಹಾಕಿಕೊಂಡೇ ಸಂಚಾರ . 

ಒಂದು  ಸಂಜೆ ಟ್ಯೂಲಿಪ್ ಹೂ ತೋಟಕ್ಕೆ ಹೋಗಿ ಅಲ್ಲಿ ಯ ವಿಶಾಲ ವರ್ಣರಂಜಿತ ಪುಷ್ಪರಾಜಿ ಯನ್ನು ಕಣ್ಣು ತುಂಬಿ ಕೊಂಡೆವು

ಬೇರೆ ಬೇರೆ ತರಹದ ಆಹಾರ ವನ್ನು ಸವಿಸಿದರು . ನನ್ನ ಮೊಮ್ಮಗನ ಸಂಗೀತ ಶಾಲೆಗೆ ಸೊಸೆ ಕರೆದು ಕೊಂಡು ಹೋದಳು . ಟೀಚರ್ ಬ್ರೆನ್ನಾ  ತುಂಬಾ ಉತ್ಸಾಹ ಭರಿತ ಮತ್ತು ಪುಟ್ಟ ಮಕ್ಕಳ ಆಸಕ್ತಿ ಕುದುರಿಸುವ ,ಸ್ನೇಹ ಮಯಿ ವ್ಯಕ್ತಿ . 

ಮೊಮ್ಮಗನ ಹುಟ್ಟಿದ ಹಬ್ಬದ ಆಚರಣೆ ಗೌಜಿಯಾಗಿ ಒಂದು ಪಾರ್ಕ್ ಸಭಾಂಗಣ ದಲ್ಲಿ ನಡೆಯಿತು .ನಮ್ಮ ದೇಶದ ಮತ್ತು ರಾಜ್ಯದ  ಹಲವು ಮಿತ್ರರು ಭಾಗವಹಿಸಿ ಶುಭ ಕೋರಿದರು . ಒಂದು ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಚರಣೆ ;  ಪುತ್ತಿಗೆ ಮಠದ  ಪುರೋಹಿತರು . ಸಜ್ಜನರು .ಒಂದು ದಿನ ಮಠ ಕ್ಕೂ ಆಹ್ವಾನಿಸಿ ಪ್ರಸಾದ ಕೊಟ್ಟು ಹರಸಿದರು .

ಇದರ ಹೊರತಾಗಿ ಭಾರತದಲ್ಲಿ ಜೀವಮಾನ ಬಹುಪಾಲು ಕಳೆದ ನಮ್ಮಂತಹವರಿಗೆ ಅಲ್ಲಿ ಸಮಯಾಲಾಪನೆ ಸ್ವಲ್ಪ ಕಷ್ಟವೇ . ಮಕ್ಕಳು ಶಕ್ತಿ ಮೀರಿ ನಮ್ಮನ್ನು ಖುಶಿಯಾಗಿ ಇಡಲು ಶ್ರಮಿಸಿದರು . 

ಹೀಗೆ ಒಂದೂವರೆ ತಿಂಗಳು ಕಳೆದು ಹೋದ ದಾರಿಯಲ್ಲೇ ಅದೇ ಕಂಪನಿ ವಿಮಾನ ದಲ್ಲಿ ವಾಪಾಸು .ವಿಮಾನ ನಿಲ್ದಾಣದಲ್ಲಿ ಪತ್ನಿ ಮಗ ಸೊಸೆ ಮತ್ತು ಮುಖ್ಯವಾಗಿ ಮೊಮ್ಮಗ ವಿಮಾನದ ಬಾಗಿಲಿನ ವರೆಗೆ ಬಂದು ಬೀಳ್ಕೊಟ್ಟರು .ಮೊಮ್ಮಗನಿಗೆ ಟಾಟಾ ಮಾಡುವಾಗ ಹೃದಯ ಭಾರವಾಯಿತು . (ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಕೊಂಡು ಒಳಗೆ ಹೋಗುವ ಅವಕಾಶ ಇದೆ . ನಮ್ಮಲ್ಲಿ ಇದು ಇಲ್ಲ ). 






 



ಮಂಗಳವಾರ, ಜೂನ್ 20, 2023

ಸಾದರ ಸ್ವೀಕಾರ
ಹಿರಿಯ ಲೇಖಕ ,ಪ್ರಾಧ್ಯಾಪಕ ಮಿತ್ರ ತಮ್ಮ ಎರಡು ಕೃತಿಗಳನ್ನು ಪ್ರೀತಿ ಪೂರ್ವಕ ತಲುಪಿಸಿದ್ದಾರೆ .ಸೋನ್ಸ್ ಫಾರ್ಮ್ಸ್ ಮತ್ತು ಜೇನೇ ಜೀವನ .ಡಾ ಎಲ್ ಸಿ ಸೋನ್ಸ್ ಅವರನ್ನು ನಾನು ಅವರ ಫಾರ್ಮ್ಸ್ ನಲ್ಲಿ ಮತ್ತು ಮೊಗಶಾಲೆಯವರ ಕಾಂತಾವರ ದಲ್ಲಿ ಕಂಡು ಮಾತನಾಡಿದ್ದೆ . ಕಾಂತಾವರದ ನನ್ನ ಒಂದು ಭಾಷಣ ಕಾರ್ಯಕ್ರಮ ಕ್ಕೆ ಸೋನ್ಸ್ ದಂಪತಿಗಳು ಬಂದಿದ್ದು ಸಕ್ರಿಯವಾಗಿ ಪಾಲು ಗೊಂಡಿದ್ದರು .ಅವರ ಸರಳತೆ ಮತ್ತು ಮುಗ್ಧ ಕುತೂಹಲ ಬಹಳ ಆಪ್ತವಾಯಿತು .ನನ್ನ ಪ್ರೀತಿಯ ಕಾಣಿಕೆಯಾಗಿ ಒಂದು ಒಳ್ಳೆಯ ಇಂಗ್ಲಿಷ್ ಕೃತಿ ಅಂಚೆ ಮೂಲಕ ಕಳುಹಿಸಿದ್ದೆ .ಈಚೆಗೆ ಅವರು ತೀರಿಕೊಂಡರು .ಈ ಕೃತಿ ರಚನೆ ಮೊದಲೇ ಆದುದು .ಪುಸ್ತಕ ಬಹಳ ಚೆನ್ನಾಗಿ ಬಂದಿದ್ದು ,ಚಿತ್ರ ಗಳು ನಯನ ಮನೋಹರ . ಇಂತಹ ಪುಸ್ತಕ್ಗಗಳ ಭಾಗಶಃ ಇಲ್ಲವೇ ಪೂರ್ಣ ಶಾಲೆಗಳಲ್ಲಿ ಪಠ್ಯ ವಾಗಿಯೋ ಉಪ ಪಠ್ಯ ವಾಗಿಯೋ ಕೊಡಬೇಕು ಎಂದು ನನ್ನ ಅಭಿಪ್ರಾಯ .
ಇನ್ನೊಂದು ಮತ್ತೊಬ್ಬ ಜೇನು ಕೃಷಿ ಸಾಧಕ ಮನಮೋಹನ ಅವರ ಜೇನೇ ಜೀವನ .ಇದು ಕೂಡಾ ಸಚಿತ್ರ ,ಸೊಗಸಾಗಿ ಮೂಡಿಬಂದಿದೆ
 


ಅಮೇರಿಕಾ ವಾಸ -ಶ್ವಾನ ಮಿತ್ರ ಬೀರ

ಅಮೇರಿಕಾ ವಾಸ -ಶ್ವಾನ ಮಿತ್ರ ಬೀರ 

ನನ್ನ ಮಗ ಸೊಸೆ ಇಬ್ಬರೂ ಪ್ರಾಣಿ ಪ್ರಿಯರು  . ಮನೆಯಲ್ಲಿ ಒಂದು ಸಾಕು ನಾಯಿ ಇಟ್ಟು ಕೊಂಡಿದ್ದಾರೆ . ಗೋಲ್ಡನ್ ರಿಟ್ರೀವರ್ ಜಾತಿಯ ಬಿಳಿ ಶ್ವಾನ . ಅದರ ಹೆಸರು ಬೀರ . (ಟೈಗರ್ ಜಾನಿ ಇತ್ಯಾದಿ ಇಡಲಿಲ್ಲ ). ಅದು ದ್ವಿಭಾಷಾ ನೀತಿ ಪಾಲಿಸುತ್ತಿದ್ದು . ಮೊದಲು ಟ್ರೈನರ್ ಕಳಿಸಿದ ಇಂಗ್ಲಿಷ್ ಆದೇಶ ಗಳನ್ನು ಉದಾ ಸಿಟ್ ,ಗೋ ಕೆನ್ನೆಲ್ (ಗೋಡಿಗೆ ಹೋಗು ),ಯಸ್ (ಆಹಾರ ಇಟ್ಟು ಯಸ್ ಅಂದರೆ ಅದರ ಆಹಾರ  ಮಾತ್ರ ತಿನ್ನುವುದು  .ನಮ್ಮ ದೋಸೆ ಇಡ್ಲಿ ಗೆ ಇದು ಅನ್ವಯ ಆಗುವುದಿಲ್ಲ . ಇನ್ನು ನಮ್ಮಹೋಗು  ಬಾ ಬೇಡ ಇತ್ಯಾದಿ ಕೂಡಾ ಅರ್ಥ ಆಗುವುದು . 

ಮನೆಯ ಒಳಗೆ ಒಂದು ಗೂಡು ಇದೆ .ಮತ್ತು ಸನಿಹದಲ್ಲಿ ಹೊರಗಡೆ ಒಂದು ಹಾಸಿಗೆ ಕೂಡಾ . ರಾತ್ರಿ ಮಾತ್ರ ಗೂಡಿನಲ್ಲಿ ಕೂಡಿ ಹಾಕಿ ಬೆಳಗ್ಗೆ  ಹೊರಗೆ ಬಿಡುವರು .ಮನೆಯಲ್ಲಿ ಎಲ್ಲಿ ಬೇಕಾದರೂ ಸಂಚರಿಸುವ ಸ್ವಾತಂತ್ರ್ಯ ಅದಕ್ಕೆ ಇದೆ . ಮುಂಜಾನೆ ನಾವು ಎದ್ದ  ಒಡನೆ ಅದನ್ನು ಗೂಡಿನಿಂದ ಬಿಟ್ಟು ಮನೆಯ ಹಿಂದಿನ  ಅಂಗಳಕ್ಕೆ ಬಿಡುವುದು .ಅಲ್ಲಿ ಅದು ಮೂರು ನಾಲ್ಕು ಸುತ್ತು ಹಾಕಿ ಹುಲ್ಲು ಹಾಸನ್ನು ಮೂಸಿ ನೋಡಿ ಯೋಗ್ಯ ಜಾಗದಲ್ಲಿ ಮೂತ್ರ ಸಿಂಚನ ಮಾಡುವುದು . ಮತ್ತೆ ದಿನದಲ್ಲಿ ಮೂತ್ರ ಶಂಕೆ ಆದರೆ ಮನೆಯಲ್ಲಿ ಯಾರಾದರೂ ಇದ್ದರೆ ಬೌ ಎಂದು ಒಂದೇ ಬಾರಿ ಬೊಗಳುವುದು .ಆಗ ನಾವು ಹೊರಗೆ ಕರೆದು ಕೊಂಡು ಹೋಗ ಬೇಕು .ತಪ್ಪಿಯೂ ಮನೆಯ ಒಳಗೆ ಮಾಡದು . ಇನ್ನು ಮುಂಜಾನೆ ಮತ್ತು ಸಂಜೆ ಮಕ್ಕಳು ಅದನ್ನು ವಾಯು ವಿಹಾರಕ್ಕೆ ಕೊಂಡು ಹೋಗುವರು .ಆಗ ಅದು ಕಕ್ಕ ಮಾಡುವದು ,ಅದನ್ನು ನಾವೇ ಎತ್ತಿ ಅಲ್ಲಲ್ಲಿ ಇಟ್ಟ ಪೆಟ್ಟಿಗೆಯೊಳಗೆ ಹಾಕುವುದು ,ಹಾಕುವ ಚೀಲ ಕೂಡಾ ಅಲ್ಲಲ್ಲಿ ಇಟ್ಟಿರುವರು .. ವಾಕಿಂಗ್ ಹೋಗವುವಾಗ ಇದರ ಮಿತ್ರರು ನಿಕ್ಕಿದರೆ ಭಾರೀ ಸಂಭ್ರಮ ,ಹಾರುವುದೇನು ?ಕುಣಿಯುವುದೇನು ?ಅದೇ ರೀತಿ ಮಿತ್ರ ನಾಯಿಯ ಧಣಿಗಳು ಮನೆಗೆ ಬಂದಾಗ ಕೂಡಾ ವಾಸನೆಯಲ್ಲಿ ಕಂಡು ಹಿಡಿದು ಸ್ವಾಗತ ಮಾಡುವುದು ,

ಮನೆಯಲ್ಲಿ ಮೊನ್ನೆ ಮೊನ್ನೆ ವರ್ಷ ದಾಟಿದ ಮೊಮ್ಮಗ ಇದ್ದಾನೆ .ಅವನದ್ದು ಮತ್ತು ಬೀರನದ್ದು ಪೀಸ್ ಫುಲ್ ಕೋ ಎಕ್ಸಿಸ್ಟೆನ್ಸ್ . ಇಬ್ಬರೂ ಅವರಷ್ಟಕ್ಕೆ ಓಡಾಡಿ ಕೊಂಡು ಇದ್ದು ,ಒಮ್ಮೊಮ್ಮೆ ಪರಸ್ಪರ ತಡವಿ ಪ್ರೀತಿ ಪ್ರಕಟಿಸುವರು .,ಮೊಮ್ಮಗ ಅವನನ್ನು ಮುಟ್ಟಿ ಪಾಪ ಎನ್ನುವನು . ನಡೆದಾಡುವಾಗ ಮಗುವಿನ ಮೇಲೆ ಕಾಲು ಉರದಂತೆ ನೋಡಿ ಕೊಳ್ಳುವುದು .ಮೊಮ್ಮಗ ಊಟದ ಕುರ್ಚಿಯಲ್ಲಿ ಕುಳಿತ ಒಡನೆ ಸಿಂಡಿಕೇಟ್ ಬ್ಯಾಂಕ್ ನಾಯಿಯಂತೆ ಬುಡದಲ್ಲಿ ಹಾಜರ್ .  ಅವನು ತನ್ನ ದೋಸೆ ಇಡ್ಲಿ ಹಣ್ಣಿನ ತುಂಡು ಕೆಳಗೆ  ಹಾಕುವುದು ,ಅದು ಗಬಕ್ಕನೇ ತಿನ್ನುವುದು .  ತಿಂದಿತೋ ಎಂದು ಬಗ್ಗಿ ಖಾತರಿ ಪಡೆದು ಕೊಳ್ಳುವನು . 

ನಾಯಿ ಬಹಳ ಸೂಕ್ಷ್ಮ ಮತಿ .ಒಂದು ಸಾರಿ ಸೊಸೆ ಲ್ಯಾಪಟಾಪ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಅಲ್ಲಿ ಲಾಗ ಹಾಕುವ ಭರದಲ್ಲಿ ಕಪ್ ನಲ್ಲಿ ಇದ್ದ ಟೀ ಲ್ಯಾಪ್ಟಾಪ್ ಮೇಲೆ ಚೆಲ್ಲಿತು ,ತತ್ಕ್ಷಣ ಬೀರ ನನ್ನ   ಲ್ಯಾಪ್ಟಾಪ್ ಹಾಳು ಮಾಡಿದಿಯಲ್ಲೋ ಎಂದು ಬೇಸರದಲ್ಲಿ ಹೇಳಿ ಅದನ್ನು ಒಣಗ ಬಿಟ್ಟು ಏನೋ ಕೆಲಸಕ್ಕೆ ಮೇಲೆ ಹೋದರೆ ಅದೂ ಸಪ್ಪೆ ಮೋರೆ ಮಾಡಿಕೊಂಡು ಸಾರೀ ಎನ್ನುವಂತೆ ಹ್ಯಾಪ್ ಮೋರೆ ಮಾಡಿ ಹಿಂದೆಯೇ ಹೋಗಿ ,ಆಕೆ ಮೈದಡವಿ ಸರಿ ನಮಗೆ ರಾಜಿ ಎಂದ ಮೇಲೆ ಹಿಂದೆ ಬಂತು . 

        ಅದು ಬೊಗಳುವುದು ಕಡಿಮೆ .ಒಂದು ನಾನು ಮೇಲೆ ಹೇಳಿದ ಕಾರಣಕ್ಕೆ .ಇನ್ನೊಂದು ಹಿತ್ತಿಲಿಗೆ ಮೊಲ ಗಳು ಬಂದಾಗ . ನನ್ನ  ಮೊಮ್ಮಗನಿಗೆ ಮೊಲ ಕಂಡರೆ ಇಷ್ಟ .ಅದು ಹುಲ್ಲು ತಿನ್ನುವುದು ಕಂಡು ಬೆರಳು ತೋರಿಸಿ  ಮಮ್ಮಮ್ಮ ಎನ್ನುವನು .ನಾಯಿಯ ಬೊಗಳು  ಕೇಳಿ ಮೊಲ ಓಡುವುದು .ಇದೊಂದು ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನ ಮತ . 

ಮನೆಯವರು ದಿನಕ್ಕಿಂತ ಹೆಚ್ಚು ಹೊರಗಡೆ ಹೋಗುವಾಗ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವುವ ತಾಣಗಳು ಅಲ್ಲಲ್ಲಿ ಇವೆ ,ಅಲ್ಲದೆ ಅವುಗಳಿಗೆ ಅಭ್ಯಂಜನ ಮಾಡುಸುವವರೂ .ಅವರ ಜೀವನ ನೋಡಿ ನಾಯಿ ಪಾಡು ಎನ್ನುವಂತೆ ಇಲ್ಲ .