ಬೆಂಬಲಿಗರು

ಸೋಮವಾರ, ಸೆಪ್ಟೆಂಬರ್ 21, 2015

ಅಮೇರಿಕಾ ಯಾತ್ರೆ ೭

ಸಿಯಾಟಲ್ ನಗರದಲ್ಲಿ ಸ್ಪೇಸ್ ನೀಡಲ್ (ಅಂತರಿಕ್ಷ ಸೂಜಿ )ಎಂಬ ಆಕರ್ಷಕ ಗಗನ 

ಚುಂಬಿ ಇದೆ .ಟಿಕೆಟ್ ಖರೀದಿಸಿ ಇದರ ಮೇಲೆ ಏರಿ ನಗರದ ವೀಕ್ಷಣೆ ಮಾಡ 

ಬಹುದು .


ಈ ಕಟ್ಟಡದ ಪ್ರತಿಬಿಂಬ ಸನಿಯದಲ್ಲಿ ಇರುವ ಗಾಜಿನ ಮನೆಯ ಗೋಲದ ಮೇಲೆ 

ಹೀಗೆ ಕಾಣುವುದು 


ಲಿಫ್ಟ್ ಮೂಲಕ ಈ ವಿಶಿಷ್ಟ ಶೈಲಿಯ ಕಟ್ಟಡ ಏರಿದೆವು ,ಅದರ ಮೇಲಿಂದ 

ಕಂಡ ಸಿಯಾಟಲ್ ನಗರದ ಕೆಲವು ದೃಶ್ಯಗಳು 



ಈ ಕಟ್ಟಡದ ಬಳಿ ಗಾಜಿನ ಕಲಾಕೃತಿಗಳ ಸಂಗ್ರಹಾಲಯ ಇದೆ .ಅದರ 

ಒಳಗೆ ಗಾಜಿನಿಂದ ತಯಾರಿಸಿದ ಮನ ಮೋಹಕ  ಕಲಾಕೃತಿಗಳು ಇವೆ .








ಈ ಕಟ್ಟಡದ ಸನಿಹದಿಂದ  ಡಕ್ ಟೂರ್ ಎಂಬ (ಬಾತುಕೋಳಿ ಯಾತ್ರೆ )

ಮೋಜು ಯಾತ್ರೆ ಏರ್ಪಡಿಸಿದ್ದಾರೆ .ಈ ವಾಹನ  ನೆಲದ ಮೇಲೂ ನೀರಿನಲ್ಲೂ

ಚಲಿಸುವುದು .ಇದರ ಚಾಲಕರು ಊರ ಪರಿಚಯ ಮಾಡಿ ಕೊಡುವುದರೊಂದಿಗೆ 

ಗಟ್ಟಿಯಾಗಿ ಹಾಡುವರು ,ಯಾತ್ರಿಕರು ಚಪ್ಪಾಳೆ ತಟ್ಟಿ ತಮ್ಮ ಹರ್ಷ ವ್ಯಕ್ತ 

ಪಡಿಸುವರು .



ನೀರಿನಲ್ಲಿ  ಈ ಬಾತುಕೋಳಿ ಸಂಚರಿಸುವಾಗ  ಸಮೀಪದಲ್ಲಿ  ದೋಣಿಯಲ್ಲಿ 

ವಿಹರಿಸುವ ಯಾತ್ರಿಗಳು .ದೋಣಿ ಮನೆಗಳು ಕಾಣ ಸಿಗುತ್ತವೆ .

ಇಲ್ಲೇ ಸಮೀಪದಲ್ಲಿ  ನೀರಿನಲ್ಲಿ ಇಳಿಯುವ ವಿಮಾನಗಳು ಬರುತ್ತಿರುತ್ತವೆ .

ಅವುಗಳೂ ನೋಡಲು ರೋಚಕ .




(ಚಿತ್ರಗಳ ಮೂಲಗಳಿಗೆ ಅಭಾರಿ )


ಗುರುವಾರ, ಸೆಪ್ಟೆಂಬರ್ 17, 2015

ಅಮೇರಿಕಾ ಯಾತ್ರೆ ೬ ನಯಾಗರಾ ಸಂದರ್ಶನ

ಚಿಕಾಗೋ ನಗರದಲ್ಲಿ ಮುರಳೀಧರ ಕಜೆ ದಂಪತಿಗಳ ಅತಿಥ್ಯ ಸವಿದು ಸಂಜೆ 

ವಿಮಾನದಲ್ಲಿ ಬಫೆಲೋ ನಗರ ಸೇರಿದಾಗ ಮೋಡ ಕವಿದ ವಾತಾವರಣ ,ತುಂತರು 

ಮಳೆ . ನಿಲ್ದಾಣದಿಂದ ಬಾಡಿಗೆ ಕಾರು ತೆಗೆದು ಕೊಂಡು ಮಗನೇ ಚಾಲಕನಾಗಿ 

ನಯಗರಾದತ್ತ ತೆರಳಿದೆವು .ಬಫೆಲೋ ದಿಂದ ನಯಾಗರಾ ಕ್ಕೆ ೨೫ ಮೈಲುಗಳು .


ಸಂಜೆ ಆರೂವರೆ ಗಂಟೆಗೆ ನಯಾಗರಾ ತಲುಪಿದಾಗ ಮಳೆ ಜೋರಾಗ ತೊಡಗಿತು .


ನಮ್ಮ ಊರಿನವರೇ ಆದ ಡಾ ಶಂಭು ಉಪಾಧ್ಯಾಯ ರು  ಬಫೆಲೋ 

ವಿಶ್ವವಿದ್ಯಾಲಯದಲ್ಲಿ  ಕಂಪ್ಯೂಟರ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು  ನಾವು 

ಬರುವ ವಿಚಾರ ಮೊದಲೇ ತಿಳಿಸಿದ್ದೆವು .ಶ್ರೀಯುತರು  ಮಾಧ್ಯಮಿಕ ಶಾಲೆಯಲ್ಲಿ 

ನನಗಿಂತ ಒಂದು ವರ್ಷ ಹಿರಿಯರು .ಆಗಲೇ ಅವರು ಜಾಣರೆಂದು ಗುರುತಿಸಿ 

ಕೊಂಡವರು.ಬಾಲಕನಾಗಿದ್ದಾಗ  ಕ್ರಿಕೆಟ್ ಮತ್ತು ಕನ್ನಡ ಚಲನಚಿತ್ರ ಗಳನ್ನು 

ಹಚ್ಚಿ ಕೊಂಡಿದ್ದವರು .

ನಾವು ನಯಗರಾದಿಂದ  ಅರ್ಧಕ್ಕೇ ಹಿಂತಿರುಗಿ  ಉಪಾಧ್ಯಾಯರ ಮನೆಗೆ  

ತೆರಳಿದೆವು .ವಿನೋದ ಪ್ರಿಯರಾದ (ಶಂಭು ಉಪಾಧ್ಯಾಯರ ಪತ್ನಿ 

ಹೆಸರು ವಿನೋದ ,ಹೆಸರಿಗೆ ತಕ್ಕಂತೆ ಮತ್ತು  ಸದಾ ಹಸನ್ಮುಖಿ ) ಉಪಾಧ್ಯಾಯರು 

ಮತ್ತು ನಾನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟೆವು .

   ಭರ್ಜರಿ ಭೋಜನ ವಾಯಿತು .ಸಂತ್ರುಪ್ತಿಯೊಡನೆ  ಮರಳಿ ನಯಾಗರ ದತ್ತ 

ತೆರಳಿದೆವು .ತುಂತುರು ಮಳೆ ಇತ್ತು .

    ನಯಾಗರಾ ಜಲಪಾತ ಅಮೇರಿಕಾ ಕೆನಡಾ ಗಡಿಯಲ್ಲಿದ್ದು  ಕೆನಡಾ ಭಾಗದಿಂದ 

ನೋಡಲು ಚಂದ .ಅದಕ್ಕೆಂದೇ ನಾವು ಕೆನಡಾ ವಿಸಾ ಮಾಡಿಸಿ ಕೊಂಡಿದ್ದೆವು ,

ರೈನ್ ಬೋ ಸೇತುವೆ  ಎರಡು ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆ .

                   


ನಾವು ವಲಸೆ ಅಧಿಕಾರಿಗಳ ಪರಿಶೀಲನೆ ಬಳಿಕ ಕೆನಡಾ ಪ್ರವೇಶಿಸಿ 

ಜಲಪಾತ ವೀಕ್ಷಣೆ ಗೆ ಹೋದೆವು .ಮಳೆಯಿದ್ದರೂ  ಬಹಳ ಯಾತ್ರಿಕರು ಇದ್ದರು .

ರಾತ್ರಿ ಜಲಪಾತಕ್ಕೆ ಬಣ್ಣದ ಬೆಳಕು ಹಾಯಿಸಿ ವರ್ಣರಂಜಿತವಾಗಿ ಕಾಣುವಂತೆ 

ಮಾಡುತ್ತಾರೆ .





ಮಳೆ ಇಲ್ಲದಿದ್ದರೆ ಇನ್ನೂ ಚೆನ್ನಾಗಿತ್ತೇನೋ ?ಅಂತೂ ರಾತ್ರಿ ಹನ್ನೊಂದಕ್ಕೆ 

ಉಪಾಧ್ಯಾಯರ  ಮನೆಗೆ ಮರಳಿದೆವು .

ಮುಂಜಾನೆ  ಹೊಟ್ಟೆ ತುಂಬಾ ಕಾಫಿ ತಿಂಡಿ ತಿಂದು ನಮ್ಮ ಅತಿಥೇಯರಿಗೆ

ವಂದಿಸಿ ಪುನಃ ನಯಾಗರಾ ದತ್ತ ತೆರಳಿದೆವು .

ಡಾ ಉಪಾಧ್ಯಾಯ ದಂಪತಿಗಳ ಜೊತೆ ಅವರ  ನಿವಾಸ ದ ಮುಂದೆ 

ನಯಾಗರಾ ವೀಕ್ಷಣೆಗೆ  ಮೆಯ್ಡ್ ಆಫ್ ಮಿಸ್ಟ್ (ಅಮೇರಿಕಾ ಬದಿಯಲ್ಲಿ )

ಎಂಬ ಯಾ೦ತ್ರಿಕ ದೋಣಿ ಯಲ್ಲಿ  ಹೋಗುವ ವ್ಯವಸ್ತೆ ಇದೆ .ಅವರೇ ಕೊಡುವ 

ನೀಲ ಬಣ್ಣದ ರೈನ್ ಕೋಟ್ ಧರಿಸಿ ದೋಣಿಯಲ್ಲಿ ನಮ್ಮನ್ನು  ಜಲಪಾತದ 

ಬುಡಕ್ಕೆ ಕೊಂಡೊಯ್ಯುವರು .ಸಮೀಪದಿಂದ ಭೋರ್ಗೆರೆದು ಬಿದ್ದು 

ರಜತ ಹನಿ ಗಳಾಗಿ ನಮ್ಮ ಮೇಲೆ  ಸಿಂಚನ ಮಾಡುವ  ದೃಶ್ಯ ಮತ್ತು 

ಅನುಭವ ರೋಚಕ .




ಕೆನಡಾ ಬದಿಯಿಂದ ಬರುವ ಯಾತ್ರಿಕರು ಕೆಂಪು ರೈನ್ ಕೋಟ್ ಧರಿಸಿರುವರು .


ಮುಂದೆ ಜಲಪಾತದ ಬಳಿಗೆ ಮೆಟ್ಟಲುಗಳ ಮೂಲಕ ಹೋಗುವ  ಕೇವ್ ಆಫ್ ವಿಂಡ್ಸ್ 

ಗೆ ಹೋದೆವು .ಇಲ್ಲಿ ನಮಗೆ ಒಂದು ಜತೆ ವಿಶೇಷ ಚಪ್ಪಲಿ ಮತ್ತು  ಹಳದಿ 

ಬಣ್ಣದ ರೈನ್ ಕೋಟ್ ಕೊಡುವರು ,ಅದನ್ನು ಧರಿಸಿ ಮಾನವ ನಿರ್ಮಿತ 

ಮೆಟ್ಟಲುಗಳ ಮೂಲಕ ಜಲಪಾತದ ಸನಿಹಕ್ಕೆ ಹೋಗಿ ನೀರ ಸಿಂಚನದ ಆನಂದ 

ಅನುಭವಿಸಿದೆವು .



ಇಷ್ಟೆಲ್ಲಾ ಆಗುವಾಗ ಮಧ್ಯಾಹ್ನ ಗಂಟೆ ಒಂದು ಆಯಿತು .ಪಂಜಾಬಿ ಹೋಟೆಲ್ 

ನಲ್ಲಿ ಭಾರತೀಯ ಬಫೆ ಊಟ ಮಾಡಿ ಪುನಃ ಕೆನಡಾ ಭಾಗಕ್ಕೆ ಹೋದೆವು .

ರಾತ್ರಿ ಕಂಡುದ್ದಕ್ಕಿಂತ ದೊಡ್ಡದಾಗಿ ಕಾಣುತ್ತಿದ್ದ ಜಲಪಾತ ದ ಬೇರೆ ಬೇರೆ 

ನೋಟವನ್ನು ಸವಿದೆವು 











ಕಣ್ಣು ತುಂಬಾ ನಯಾಗರಾ ತುಂಬಿ ಕೊಂಡು ಪುನಃ ಅಮೇರಿಕಾ ಪ್ರವೇಶಿಸಿ 

ನಮ್ಮ ಮುಂದಿನ  ತಾಣವಾದ ವಾಷಿಂಗ್ಟನ್ ಡಿ ಸಿ ಗೆ ವಿಮಾನ ಹಿಡಿಯಲು 

ಬಫೆಲೋ ನಗರದತ್ತ ತೆರಳಿದೆವು 

ವಲಸೆ ಚರಿತ್ರೆಯ ಎರಡು ಮುಖ್ಯ ದ್ವೀಪಗಳು

ಕೊಂಡೋಲಿಸಾ ರೈಸ್ ಅವರ ನೋ ಹೈಯರ್ ಹಾನರ್ ಪುಸ್ತಕ ಓದುತ್ತಿದ್ದೇನೆ .

ಜಗತ್ತಿನ ಪ್ರಮುಖ ಘಟನಾವಳಿಗಳಿಗೆ ಸಮೀಪದಿಂದ ಸಾಕ್ಷಿಯಾದವರು .ಜಾರ್ಜ್ 

ಬುಶ್ ಅವರ ಸಚಿವರಾಗಿದ್ದವರು .

ಬುಶ್ ಅವರ ಜೊತೆ ಆಫ್ರಿಕಾ ಪ್ರವಾಸ ದ ಅನುಭವ ಬಗ್ಗೆ ಬರೆಯುವಾಗ ತಮ್ಮ 

ಪ್ರಯಾಣವನ್ನು ಸೆನೆಗಲ್ ದೇಶದ ಮೂಲಕ ಆರಂಬಿಸಿದೆವು .ಅಲ್ಲಿ  ಗೋರೀ ದ್ವೀಪ 

ವಂಬುದಿದೆ.ಈ ದ್ವೀಪದ ಮೂಲಕ ಸಾವಿರಾರು ನೀಗ್ರೋ ಗುಲಾಮರನ್ನು 

ಅಮೇರಿಕಾ ದೇಶಕ್ಕೆ ಸಾಗಿಸಲಾಗುತ್ತಿತ್ತು .ರೈಸ್ ಅವರು ಈ ದ್ವೀಪದಲ್ಲಿ 

ನಡೆದಾಡುವಾಗ ಡಾ೦ಟೆ ಕವಿಯ 'ಎಲ್ಲಾ ಆಸೆ ಪ್ರತೀಕ್ಷೆಗಳಿಗೆ ಎಳ್ಳು ನೀರು ಬಿಟ್ಟು 

ಒಳಗೆ ಬಾ ಯಾತ್ರಿಕನೆ "ನೆನಪಾಯಿತು ಮತ್ತು ಇಲ್ಲಿಯ ಮುಖಾಂತರ ತನ್ನ 

ವಂಶಜರೂ ಸಾಗಿಸಲ್ಪಟ್ಟಿರ ಬಹುದೇ ಎಂಬ ಶಂಕೆಯೂ ಮೂಡಿತು ಎಂದು 

ಬರೆದಿದ್ದಾರೆ. ಇದೇ ಸಂದರ್ಭ ಅಧ್ಯಕ್ಷ ಬುಶ್ ತನ್ನ ಭಾಷಣದಲ್ಲಿ 'ಆಫ್ರಿಕಾದಿಂದ 

ಕಡಿಯಲ್ಪಟ್ಟ ಮಗ ಮತ್ತು ಮಗಳನ್ದಿರು ಅಮೆರಿಕಾದ ಆತ್ಮಸಾಕ್ಷಿಯನ್ನು 

ಬಡಿದೆಬ್ಬಿಸಿದರು.ಎಂದು ಹೇಳಿದರು ಎಂದಿದ್ದಾರೆ .

ಈ ದ್ವೀಪದಲ್ಲಿ ೧೭೮೦-೮೪ ರಲ್ಲಿ  ಕಟ್ಟಲ್ಪಟ್ಟ ಹೌಸ್ ಆಫ್ ಸ್ಲೇವ್ಸ್(ಗುಲಾಮ ಸದನ )
ಎಂಬ ಕಟ್ಟಡ ಇದೆ .ಇದರಲ್ಲಿ  ಹೊರಕಳಿಸಲು ಗುಲಾಮರನ್ನು ಕೂಡಿ ಹಾಕುತ್ತಿದ್ದರು .

ಈಗ ಈ ಕಟ್ಟಡ ಸ್ಮಾರಕವಾಗಿದೆ .





ಇದೇ ಪುಸ್ತಕದಲ್ಲಿ  ಲೈಬೇರಿಯಾ ದೇಶದ ಬಗ್ಗೆಯೂ ಒಂದು ಮಾಹಿತಿ ಸಿಕ್ಕಿದೆ .ಈ 

ದೇಶವು  ಅಮೇರಿಕಾ ಮತ್ತು ಕೆರಿಬ್ಬಿಯನ್ ದ್ವೀಪಗಳಿಂದ(ಅಮೇರಿಕಾ returnd)

ಮರಳಿದ ಆಫ್ರಿಕನರು ನಿರ್ಮಿಸಿದ ನಾಡು .ಇಲ್ಲಿಯ ಸಂವಿಧಾನ ಅಮೆರಿಕಾದ 

ಸಂವಿಧಾನವನ್ನು ಹೋಲುತ್ತದೆ .ಇಲ್ಲಿಯ ಪ್ರಮುಖ ನಗರಗಳಾದ  ಮೊನ್ರೋವಿಯಾ

ಮತ್ತು ವಾಷಿಂಗ್ಟನ್  ಅಮೆರಿಕಾದ ಮಾಜಿ ಅಧ್ಯಕ್ಷರಿಂದ ತಮ್ಮ ಹೆಸರು ಪಡೆದಿವೆ .

  

ಅದೇನೇ ಇರಲಿ .ಅಮೆರಿಕಾದ ನ್ಯೂ ಯಾರ್ಕ್ ಬಳಿ  ಇನ್ನೊಂದು ಚಾರಿತ್ರಿಕ ದ್ವೀಪ 

ಸ್ಮಾರಕ ಇದೆ .ಇತ್ತೀಚೆಗೆ ಅಮೇರಿಕಾ ಪ್ರವಾಸದ ವೇಳೆ  ಎಲ್ಲಿಸ್ ದ್ವೀಪ ಎಂದು 

ಪ್ರಸಿದ್ದಿ ಯಾಗಿರುವ ಇದನ್ನು ಸಂದರ್ಶಿಸುವ ಅವಕಾಶ ಸಿಕ್ಕಿತು .ನ್ಯೂ ಜೆರ್ಸಿ 

ಯಿಂದ  ಪ್ರವಾಸಿ ದೋಣಿ ಮೂಲಕ ಈ ದ್ವೀಪಕ್ಕೆ ಬಂದೆವು ,ದಾರಿಯಲ್ಲಿ ಸ್ವಾತಂತ್ರ್ಯ 

ದೇವತೆಯ ಮೂರ್ತಿ ಹೊತ್ತ ಇನ್ನೊಂದು ಸಣ್ಣ ದ್ವೀಪವೂ ಇದೆ .

೧೮೯೨ರಲ್ಲಿ ಎಲ್ಲಿಸ್ ದ್ವೀಪದಲ್ಲಿ ವಲಸೆಗಾರರ ಪರಿಶೀಲನಾ ಕೇಂದ್ರ 

ಆರಂಭವಾಯಿತು .ಯುರೋಪ್ ಮತ್ತು ಏಶಿಯಾದ  ಕ್ಷಾಮ ,ಕೆಟ್ಟ 

ಆಢಳಿತೆ,ನಿರೋದ್ಯೋಗ ಗಳಿಂದ  ಬಸವಳಿದು ಕನಸಿನ ನಾಡು ಅಮೆರಿಕಾಕ್ಕೆ 

ಹಡಗುಗಳ ಮೂಲಕ ಬಂದ ಹೆಂಗಸರು ,ಮಕ್ಕಳು ಮತ್ತು ಹಿರಿಯರು 

ಇಳಿಸಲ್ಪಡುತ್ತಿದ್ದ ದ್ವೀಪ .ಇಲ್ಲಿ ಬಂದವರಿಗೆ  ಕಣ್ಣಿನ ಕಾಯಿಲೆ ಟ್ರಕೋಮ ,ಕ್ಷಯ 

ಮಾನಸಿಕ ಕಾಯಿಲೆ ಇದೆಯೋ ಎಂದು ವೈದ್ಯರು ಪರಿಶೀಲಿಸಿದ ಬಳಿಕ ಅರೋಗ್ಯ 

ವಂತರನ್ನು ಮಾತ್ರ ಅಮೆರಿಕಾದ ಒಳಗೆ ಬಿಡುತ್ತಿದ್ದರು .ಕೆಲಸ ಮಾಡಲು ಆರೋಗ್ಯ 

ವಂತರು ಮಾತ್ರ ಆ ದೇಶಕ್ಕೆ ಬೇಕು.ಉಳಿದವರು ಬಂದ ದಾರಿಗೆ ಸುಂಕ ಕೊಟ್ಟು 

ವಾಪಸ್ಸು ಹೋಗಬೇಕು . ಎಷ್ಟೋ ಕುಟುಂಬಗಳು ತಮ್ಮ ಸದಸ್ಯರನ್ನು  ಖಾಯಂ 

ಆಗಿ ಕಳೆದು ಕೊಂಡುವು.ಈ ಜನರು ಪಟ್ಟ ಪಾಡುಗಳ ಬಗ್ಗೆ  ಎಲ್ಲಿಸ್ ದ್ವೀಪದ 

ಸ್ಮಾರಕದಲ್ಲಿ ಚಿತ್ರಣ ಇದೆ .ಈ ಬಗ್ಗೆ ಯಾತ್ರಿಕರಿಗೆ  ಇಲ್ಲಿ  ಸಾಕ್ಷ್ಯ ಚಿತ್ರ ತೋರಿಸುವ 

ವ್ಯವಸ್ಥೆ ಇದ್ದು ನಾವು ಅದನ್ನು ನೋಡಿದೆವು .

   


                                     ಎಲ್ಲಿಸ್ ದ್ವೀಪ 
               


     
                        ಎಲ್ಲಿಸ್ ದ್ವೀಪ ಸನಿಹ ನ್ಯೂ ಯಾರ್ಕ್ ಗಗನ ಚುಂಬಿಗಳು

      


                        ಸ್ವಾತಂತ್ರ್ಯ  ದೇವತೆಯ ಮೂರ್ತಿ

                   




ವಲಸೆಗಾರರ ಚಾರಿತ್ರಿಕ ಚಿತ್ರಗಳು 





ಗೋರೀ ದ್ವೀಪವು ಕನಸು  ಆಶೆಗಳ ಗೋರಿ ಮಾಡಿ ಶರೀರಗಳನ್ನು ಕಳುಹಿಸಿದ 

ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾದರೆ  ಎಲ್ಲಿಸ್ ದ್ವೀಪವು  ಹೊಸ ಆಸೆ 

ಕನಸುಗಳನ್ನು ಹುಟ್ಟು ಹಾಕಿದ ತಾಣ .ಎರಡೂ  ಅಮೇರಿಕಾ ನಾಡಿಗೆ 

ಕಾರ್ಮಿಕರನ್ನು ಒದಗಿಸುವುದಕ್ಕಾಗಿ  ,ಮಾರ್ಗಗಳು ಬೇರೆ ಅಷ್ಟೇ 

(ಚಿತ್ರಗಳ ಮೂಲಕ್ಕೆ ಅಭಾರಿ )

ಮಂಗಳವಾರ, ಸೆಪ್ಟೆಂಬರ್ 15, 2015

ನನ್ನ ತಂದೆಯಿಂದ ಬಂದ ಕನಸುಗಳು ಒಬಾಮಾ


ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೀವನ ಚರಿತ್ರೆ ಎನ್ನ ಬಹುದಾದ 

ಡ್ರೀಮ್ಸ್ ಫ್ರಮ್ ಮೈ ಫಾದರ್ ಪುಸ್ತಕ ಓದಿ ಮುಗಿಸಿದ್ದೇನೆ .ಇದರಲ್ಲಿ ಬಾಲ್ಯ .

ಚಿಕಾಗೊ ವೃತ್ತಿ ಜೀವನ ಮತ್ತು ಕಿನ್ಯಾ ಯಾತ್ರೆ ಎಂದು ಮೂರು ಮುಖ್ಯ 
ಕಾಂಡಗಳಿವೆ .

ಒಬಾಮಾ ಹುಟ್ಟಿದ್ದು ಹವಾಯಿ ದ್ವೀಪದ ಹೊನೊಲುಲು ನಗರದಲ್ಲಿ .ಅವರ ತಾಯಿ 

ಸ್ಟಾನ್ಲಿ ಅನ್ ಡನ್ಹ್ಯಾಮ್ ,ಈಕೆ ಬಿಳಿಯವಳಾಗಿದ್ದು ಐರಿಶ್ ಮೂಲದವಳು .ತಂದೆ 

ಕೆನ್ಯಾದ ಲುವೋ ಬುಡಗಟ್ಟು ಮೂಲದ  ಬರಾಕ್ ಹುಸ್ಸ್ಸೈನ್ ಒಬಾಮಾ.ಇವರಿಗೆ

 ಕಿನ್ಯಾದಲ್ಲಿ ಓರ್ವ ಪತ್ನಿ ಮತ್ತು ಮಕ್ಕಳು ಇದ್ದರೂ ,ಹವಾಯಿ 

ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ರಷ್ಯನ್ ಭಾಷಾ ತರಗತಿಯಲ್ಲಿ ಪರಿಚಯವಾದ 

ಆನ್ ಳನ್ನು  ಪ್ರೀತಿಸಿ ಹಿರಿಯರ ವಿರೋಧದ ನಡುವೆಯೂ ಮದುವೆ ಆಗುತ್ತಾರೆ .

ಒಬಾಮ ಜನನದ ಬಳಿಕ ವಿವಾಹ ಮುರಿದು ಬೀಳುತ್ತದೆ .ಅವರ ತಾಯಿ ಲೋ ಲೋ 

ಎಂಬ ಇಂಡೋನೇಷ್ಯನ್ ಪ್ರಜೆಯನ್ನು ವಿವಾಹವಾಗಿ ಬಾಲಕ ಒಬಾಮನೊಂದಿಗೆ 

ಜಕರ್ತಾಗೆ ತೆರಳುತ್ತಾಳೆ .ಮಲ ತಂದೆ ಒಬಾಮಾ ರನ್ನು ಚೆನ್ನಾಗಿ ನೋಡಿ 

ಕೊಳ್ಳುತ್ತಾರೆ .ಬಡತನ ,ಬಹು ಧರ್ಮೀಯ ,ಬಹು ಜನಾಂಗಿಯ ಸಂಸ್ಕೃತಿ ಯ

ಸಮೀಪ ಪರಿಚಯ ಒಬಾಮಾ ಪಡೆದು ಕೊಳ್ಳುತ್ತಾರೆ .

  ಮುಂದೆ ಅಮೇರಿಕಾ ಗೆ ಮರಳಿ  ತಾಯಿಯ ತಂದೆ ತಾಯಿ ,ಅಜ್ಜ ಅಜ್ಜಿಯರ 

ಆಶ್ರಯದಲ್ಲಿ ಅಧ್ಯಯನ ಮುಂದುವರಿಸುತ್ತಾರೆ .ಅವರೂ ಅಷ್ಟೇನೂ ಅನುಕೂಲ 

ವಂತರಲ್ಲದಿದ್ದರೂ ಮೊಮ್ಮಗನಿಗೆ ಯಾವುದೇ ಕೊರತೆ ಬರದಂತೆ ನೋಡಿ 

ಕೊಳ್ಳುತ್ತಾರೆ .ಬೆಳೆಯುವ ಹುಡುಗನಿಗೆ  ವರ್ಣ ಭೇದ ನೀತಿಯ ಭೀಕರತೆ 

ಕಣ್ಣಿಗೆ ರಾಚುತ್ತದೆ .ಕೆಲವು ಕಪ್ಪು ವರ್ಣೀಯರು ತಮ್ಮನ್ನು ಬಿಳಿ ಮಾಡಿಕೊಳ್ಳಲು 

ರಾಸಾಯನಿಕಗಳನ್ನ್ನು ಬಳಸಿ ರೋಗಿಗಳಾದುದನ್ನು ಬರೆಯುತ್ತಾರೆ ,

  ಮನಸಿನ ತುಮುಲಗಳಿಂದ ವಿಮುಖರಾಗಲು ತಾವು ಮದ್ಯ ಮತ್ತು ಮಾದಕ 

ದ್ರವ್ಯಗಳ ಮೊರೆ ಹೋದುದಾಗಿ ಬರೆಯುತ್ತಾರೆ .

ಮುಂದೆ ಲಾಸ್ ಅಂಜೆಲಿಸ್ನಲ್ಲಿ ಪದವಿ ಪಡೆದು ಸ್ವಲ್ಪ ಕಾಲ ನ್ಯೂ ಯಾರ್ಕ್ ನಗರದಲ್ಲಿ 

ಕೆಲಸ ಮಾಡುತ್ತಾರೆ ,ತಮ್ಮ ಮೊದಲ ದಿನ ಇರಲು ಜಾಗ ಇಲ್ಲದೆ ರಸ್ತೆ ಬದಿಯಲ್ಲಿ 

ಪವಡಿಸಿದ ವಿಚಾರ ಮತ್ತು ಮುಂದೆ ಪಾಕಿಸ್ತಾನಿ ಮಿತ್ರನೊಬ್ಬನ ಮನೆಯಲ್ಲಿ 

ವಾಸಿಸಿದುದ್ದನ್ನು ಹೇಳುತ್ತಾರೆ .

ಸಾಧಾರಣ ಸಂಬಳ ತರುವ ಕೆಲಸಗಳಲ್ಲಿ ಅವರ ಮನಸು ಇರಲಿಲ್ಲ .ಹಾಗೆ 

ಚಡಪಡಿಸುತ್ತಿರುವಾಗ  ಚಿಕಾಗೊ ನಗರದಲ್ಲಿ  ಸಾಮಾಜಿಕ ಸಂಘಟಕನ ಕೆಲಸ 

ಸಿಕ್ಕಿತು .ಅಲ್ಲಿಯ ನಿರ್ಲಕ್ಷಿತರ ಪರವಾಗಿ ಚರ್ಚ್ ಒಕ್ಕೂಟಗಳ ಮೂಲಕ 

ಹೋರಾಡಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದರು .

ಸಂಘಟಕನ ಬಡತನ ಅವನ  ಪ್ರಾಮಾಣಿಕತೆಯ  ಸೂಚಕ ಎಂದು ಬರೆಯುತ್ತಾರೆ .

          ಮುಂದೆ ಅವರ ತಂದೆಯ ಕಾಲಾನಂತರ  ತಮ್ಮ ಆಫ್ರಿಕಾದ ಮೂಲ 

ಹುಡುಕಿ ಕಿನ್ಯಾ ಪ್ರವಾಸಕ್ಕೆ ಹೋಗುತ್ತಾರೆ .ನೈರೋಬಿ ವಿಮಾನ ನಿಲ್ದಾಣದಲ್ಲಿ 

ಒಬಾಮ ಎಂಬ ತಮ್ಮ ಹೆಸರು ಕಂಡು ತಮ್ಮನ್ನು ಗುರುತಿಸಿದುದು ಅವರಿಗೆ 

ಸಂತೋಷ ಮತ್ತು ಆಶ್ಚರ್ಯ .ಅಮೆರಿಕಾದಲ್ಲಿ ತಾವು ಇಷ್ಟು ವರ್ಷ ಇದ್ದರೂ 

ಅಜ್ಞಾತ ,ಇಲ್ಲಿ ತಮ್ಮ ಕುಟುಂಬದ ಹೆಸರು ಎಲ್ಲರಿಗೂ ಪರಿಚಿತ !

ತಂದೆಯ ಮೊದಲ ಪತ್ನಿ ಯ ಮಗಳು ಅವುಂ ಒಬಾಮ ಅವರನ್ನು ಅತ್ತೆಯರು 


ಚಿಕ್ಕಮ್ಮ೦ದಿರು .ಅವರ ಮಕ್ಕಳು  ಎಲ್ಲರ ಮನೆಗೂ ಕೊಂಡೊಯ್ಯುತ್ತಾರೆ .ಎಲ್ಲರೂ 

ತಮ್ಮವನೆಂದು ಸಂಭ್ರಮಿಸುತ್ತಾರೆ  .ಈ ಪಯಣದಲ್ಲಿ  ಬಸ್ಸಿನಲ್ಲಿ ನಿಂತು 

ಸಂಚರಿಸಿದುದು ,ನೆಲದ ಮೇಲೆ ಚಾಪೆ ಹಾಸಿ ಮಲಗಿದ್ದುದು ಎಲ್ಲಾ ಅನುಭವ .

ಅವರ ತಂದೆ ಅಮೆರಿಕದಿಂದ  ಹಾರ್ವರ್ಡ ನಲ್ಲಿ  ಇರುವಾಗ ರುತ್ ಎಂಬ 

ಅಮೆರಿಕನ್ ಮಹಿಳೆಯನ್ನು ವಿವಾಹವಾಗಿ ತರುತ್ತಾರೆ ,ಅವಳಲ್ಲಿ ಎರಡು ಮಕ್ಕಳು .

ಎಣ್ಣೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಕಿನ್ಯಾ  ದೇಶಕ್ಕೆ ಸ್ವಾತಂತ್ರ್ಯ 

ಬಂದಾಗ ಅಧಿಕಾರದ ಹತ್ತಿರ ಬಂದು ಮಂತ್ರಾಲಯದಲ್ಲಿ ದೊಡ್ಡ ಕೆಲಸ ವಾಗುತ್ತದೆ .

ಬಂಧು ಮಿತ್ರರೆಲ್ಲಾ ಅವರ ಸಹಾಯ ಪಡೆಯುತ್ತಾರೆ .ಆದರೆ ಲುವೋ  ಬುಡಕಟ್ಟು 

ವಿಗೆ ಸೇರಿದ ಅವರು ಕಿಕುಯು ಜನಾಂಗದ ಅಧ್ಯಕ್ಷ  ಜೋಮೋ ಕೀನ್ಯಾಟರಿಂದ 

ತುಂಬಾ ಸಂಕಷ್ಟಕ್ಕೆ ಈಡಾಗುವರು.ಪತ್ನಿಯೂ ಅವರನ್ನು ತೊರೆದಾಗ ಕೆಲ ಕಾಲ ಮೊದಲ ಪತ್ನಿಯ ಜೊತೆ ಮತ್ತೆ ಒಳ್ಳೆಯ ಕಾಲ ಬಂದಾಗ ಇನ್ನೊಬ್ಬಳನ್ನು 

ಮದುವೆಯಾಗಿ ಕೊನೆಗೆ ಅವಘಡದಲ್ಲಿ ಸಾಯುವರು .

   ಒಬಾಮಾ ತಾಯಿಗೆ ಎರಡನೇ ಸಂಬಂಧದಲ್ಲಿ ಮಾಯಾ ಎಂಬ ಮಗಳು .

ಹೀಗೆ ತಮ್ಮ ಕುಟುಂಬ ಒಂದು ವಿಶ್ವಸಂಸ್ಥೆಯ೦ತೆ ಎಂದು ಒಬಾಮ ಹೇಳುತ್ತಾರೆ .

  ಮುಂದೆ ಒಬಾಮ ಹಾರ್ವರ್ಡ್ ವಿಶ್ವವಿದ್ಯಾಲಯದಿಂದಲೇ ಕಾನೂನು ಪದವಿ 

ಗಳಿಸಿ , ಮಿಚೆಲ್ ರನ್ನು ವಿವಾಹ ವಾಗಿ ವೃತ್ತಿ ಮತ್ತು ಸಂಸಾರ ಜೀವನ 
ಸಾಗಿಸುತ್ತಾರೆ .

ಒಟ್ಟಿನಲ್ಲಿ ಭಿನ್ನ  ಜೀವನ ಅನುಭವ  ಒಬಾಮಾ ಅವರನ್ನು ಸಾಮಾನ್ಯ ಜನರ ಅಧ್ಯಕ್ಷ 

ರನ್ನಾಗಿ ರೂಪಿಸುವುದಕ್ಕೆ ಕಾರಣ ವಾಗಿರ ಬೇಕು .

ಇಲ್ಲಿ ಪುಸ್ತಕದ ಹೆಸರು ತಂದೆಯ ಕನಸುಗಳಿಂದ ಎಂದು ಇದ್ದರೂ ತಂದೆ ,ತಾಯಿ 

ಮಲ ತಂದೆ .ಅಜ್ಜ ಅಜ್ಜಿ ಮತ್ತು ಬಳಗದವರು ತಮ್ಮ ಬಾಳ ಕನಸುಗಳನ್ನು ಹೇಗೆ 

ರೂಪಿಸಿದರು ಎಂಬುದನ್ನು ಹೃದಯಂಗಮವಾಗಿ ಬರೆದಿದ್ದಾರೆ


ಗುರುವಾರ, ಸೆಪ್ಟೆಂಬರ್ 10, 2015

ಅಮೇರಿಕಾ ಯಾತ್ರೆ ೫

ಡಾಲರ್ ಲೆಕ್ಕದಲ್ಲಿ ಅತೀ ಹೆಚ್ಚು ರಫ್ತು ಮೂಲಕ ಆದಾಯ ಇರುವ ,ಮತ್ತು 

ವಿಶ್ವದಾತ್ಯಂತ ಎರಡನೇ ದೊಡ್ಡ ರಕ್ಷಣಾ ಕಾಂಟ್ರಾಕ್ಟ್ ದಾರ ಕಂಪನಿ ಬೋಯಿಂಗ್ .


ಪ್ರಯಾಣಿಕ ,ಸರಕು ಸಾಗಣೆ ಮತ್ತು ಯುಧ್ಧ ವಿಮಾನ ರಂಗದಲ್ಲಿ ದೊಡ್ಡ ಹೆಸರು 

ಮಾಡಿದೆ .ಇದರ ಕಾರ್ಖಾನೆಯು ವಿಸ್ತಾರದಲ್ಲಿ ಜಗತ್ತಿನಲ್ಲಿಯೇ ಅತೀ ದೊಡ್ಡದೆಂಬ 

ಹೆಗ್ಗಳಿಕೆ ಗಳಿಸಿದೆ 

  

ಸಿಯಾಟಲ್ ಸಮೀಪ ಎವೆರೆಟ್ ಎಂಬಲ್ಲಿ ಇರುವ ಈ ಕಾರ್ಖಾನೆ ನೋಡಲು 

ಹೊರಟೆವು .ಅದಕ್ಕೆ ಮುಂಗಡ ಕಾಯ್ದಿರಿಸುವಿಕೆ ಇದೆ .ಒಳಗಡೆ ಮಾರ್ಗದರ್ಶಿ

ಸಹಿತ ತಂಡಗಳಲ್ಲಿ ಹೋಗುವ ವ್ಯವಸ್ತೆ ಕಾರ್ಖಾನೆ ವತಿಯಿಂದ ಇದೆ .ಒಳಗೆ 

ಹೋದ ಒಡನೆ ಒಂದು ವಿಮಾನಗಳಿಗೆ  ಸಂಬಂದಿಸಿದ ವಸ್ತು ಸಂಗ್ರಹಾಲಯ ಇದೆ .

ಇದರಲ್ಲಿ ವಿಮಾನದ ಮೂಲ ರಚನೆ ಮತ್ತು ಕೆಲವು ಹಳೇ ಮಾದರಿಗಳು 

ವಿಮಾನದ ಹಾಲಿ ಕೊಕ್ ಪಿಟ್ ಇತ್ಯಾದಿಗಳ ಪ್ರದರ್ಶನ .

 ಕಾರ್ಖಾನೆಯ ಸಂದರ್ಶನ ಒಂದು ಸಾಕ್ಷ್ಯ ಚಿತ್ರದ ವೀಕ್ಷಣೆ ಯೊಡನೆ ಆರಂಭ

ಸಿನೆಮಾ ನೋಡಿದ ನಂತರ ಬಸ್ಸಿನಲ್ಲಿ ನಮ್ಮನ್ನು ಫ್ಯಾಕ್ಟರಿ ಒಳಗಡೆ 

ಕೊಂಡೊಯ್ಯಲಾಯಿತು .ಇಲ್ಲಿ  ಬೋಯಿಂಗ್  ಬೇರೆ ಬೇರೆ 

ಮಾದರಿ ಗಳ ವಿವಿಧ ಹಂತದ ನಿರ್ಮಾಣದಲ್ಲಿ ಇರುವ  ವಿಮಾನಗಳ ದರ್ಶನ 

ಆಯಿತು .ಕಂಪ್ಯೂಟರ್ ಬಳಕೆ ಯಥೇಚ್ಚವಾಗಿ ಮಾಡುವುದು ಮೇಲ್ನೋಟಕ್ಕೆ 

ಕಾಣುವುದು ,ಬಿಡಿ ಭಾಗಗಳನ್ನು ಎತ್ತಲು ದೈತ್ಯ ಕ್ರೇನ್ ಗಳಿವೆ .

ಇತ್ತೀಚೆಗಿನ ಬೋಯಿಂಗ್ ೭೮೭ ಡ್ರೀಮ್ ಲೈನರ್ ಕಡಿಮೆ ಭಾರದ 

ಸಂಯುಕ್ತ ವಸ್ತುವಿನಿಂದ ತಯಾರಿಸಿದ ಕಡಿಮೆ ತೂಕದ ಬಾಡಿ ಹೊಂದಿದ್ದು 

ಇಂಧನ ಉಳಿತಾಯ ವಾಗುವುದು .

ವಿಲಿಯಂ ಬೋಯಿಂಗ್ ಎಂಬ ಇಂಜಿನಿಯರ್  ಸಿಯಾಟಲ್ ನಲ್ಲಿ ಪೆಸಿಫಿಕ್ ಏರೋ 

ಪ್ರಾಡಕ್ಟ್ಸ್ ಎಂಬ ಹೆಸರಿನಲ್ಲಿ ೧೯೧೬ರಲ್ಲಿ ಆರಂಬಿಸಿದರು ,ಅದು ವರೆಗೆ 

ಮರದ ಕಾರ್ಖಾನೆ ನಡೆಸಿದ ಅನುಭವ ಇದ್ದಿತು .ಮೊದಲು ತಯಾರಿಸಿದುದು 

ಸಮುದ್ರದಲ್ಲಿ ಇಳಿಯ ಬಹುದಾದ ಮಾದರಿ 


 ಈಗಲೂ ಸಿಯಾಟಲ್ ನಲ್ಲಿ ಸಮುದ್ರಲ್ಲಿ ಇಳಿಯುವ ವಿಮಾನಗಳು ಬರುವ ನಿಲ್ದಾಣ 

ಇದೆ .

ಮುಂದೆ ಈ ಕಂಪನಿ ಬೋಯಿಂಗ್ ಕುಟುಂಬದ  ಹತೋಟಿಯಿಂದ ಹೊರ ಬಂದು 

ಈಗ ಇರುವ ಸ್ಥಾನ ಕ್ಕೆ ಬಂದಿದೆ .

ವಿಮಾನ ಸಂಸ್ಥೆಯ ಆವರಣದಲ್ಲಿ  ನಿರ್ಮಾಣವಾದ ವಿಮಾನದ ಪರೀಕ್ಷಣಾ 

ಹಾರಾಟ ನಡೆಸಲು ಬೇಕಾದ ರನ್ ವೆ ಇದೆ .


ಅಂತೂ ವಿಮಾನದಲ್ಲಿ ಪ್ರಯಾಣಿಸಿದ್ದಲ್ಲದೆ ಅದನ್ನು ತಯಾರಿಸುವ  

ಕಾರ್ಖಾನೆಯನ್ನೂ ನೋಡಿ ಕೃತಾರ್ಥ ರಾದೆವು .

ಮಧ್ಯಾಹ್ನ ಹೊತ್ತು ನಗರದಲ್ಲಿ ಇರುವ ಪೈಕ್ ಪ್ಲೇಸ್ ಮಾರ್ಕೆಟ್ ದರ್ಶನಕ್ಕೆ 

ಹೊರಟೆವು .ಭಾನುವಾರ ವಾದ್ದರಿಂದ  ಜನ ಸಂದಣಿ ಇತ್ತು ,ಮೀನು ,ಮಾಂಸ 

ತರಕಾರಿ ಹಣ್ಣು ಇತ್ಯಾದಿಗಳನ್ನು ಕೊಳ್ಳಲು ಮತ್ತು ಬಹಳ ಮಂದಿ ನೋಡಲು 

ಬಂದಿದ್ದರು .ಒಳಗಡೆ ಹಬ್ಬದ ವಾತಾವರಣ .ಕೆಲವರು ಸಂಗೀತ ನುಡಿಸುತ್ತಿದ್ದರು .

ಆದರೆ ಎಲ್ಲೂ ಕಸ ಕಡ್ಡಿ  ಚೆಲ್ಲಿ ಕೊಂಡು ಕಾಣದು .ಇಲ್ಲಿಯೂ ಕ್ರೆಡಿಟ್ ಕಾರ್ಡ್ 

ವ್ಯವಹಾರ ದವರು ,ಕ್ಯಾಶ್ ಮಾತ್ರ ತೆಗೆದು ಕೊಳ್ಳುವವರು ಇದ್ದಾರೆ .
 ಹೊರಗಡೆ ಸ್ಟಾರ್ ಬಕ್ಹ್ಸ್ ನವರ  ಅತೀ ಹಳೆಯ ಅಂಗಡಿ ನೋಡಲು ಮತ್ತು 

ಛಾಯಾಗ್ರಹಣ ಮಾಡಲು ನೂಕುನುಗ್ಗಲು ಇತ್ತು .