ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 27, 2019

ಅಕ್ಕಿ ಪುರಾಣ

ನಮ್ಮ ಭಾಗದಲ್ಲಿ ಊಟಕ್ಕೆ ಕುಚ್ಚಲು ಅಕ್ಕಿ ಬಳಸುವರು .ಮದುವೆ ಸಮಾರಂಭಗಳಲ್ಲಿ  ಬಿಳಿ ಅಕ್ಕಿ

ಅಥವಾ ಬೆಳ್ತಿಗೆ ಅಕ್ಕಿ ಉಪಯೋಗಿಸುವ ವಾಡಿಕೆ .ಆರೋಗ್ಯಕ್ಕೆ ಕುಚ್ಚಲು ಅಥವಾ ಕುಸುಬುಲು ಅಕ್ಕಿ

ಉತ್ತಮ .ಇದು ಬೇಯಲು ಹೆಚ್ಚು ಸಮಯ ತೆಗೆದು ಕೊಳ್ಳುವುದು .ಇದು ವರ್ಣ ಭೇದ ನೀತಿಯೋ ಶಾಸ್ತ್ರ ಬದ್ದವೋ ಅಲ್ಲ ,ಅನುಕೂಲ ಶಾಸ್ತ್ರ
                        ಬಹಳ ಮಂದಿ ಸಮಾರಂಭಗಳಲ್ಲಿ ಅಥವ  ದೇವಸ್ಥಾನದಲ್ಲಿ  ಊಟ ಮಾಡಿದ ಮೇಲೆ

ನೀರಡಿಕೆ ಜಾಸ್ತಿ ,ಹೊಟ್ಟೆ ಉರಿ ಆರಂಭವಾಗಿದೆ .ಇದಕ್ಕೆ ಬೆಳ್ತಿಗೆ ಅಕ್ಕಿ ಊಟ ಕಾರಣ ಎಂದು

ಆರೋಪಿಸುವರು .ಇದು ಸರಿ ಎಂದು ಕಾಣುವುದಿಲ್ಲ .ಮದುವೆ ಮುಂಜಿ ಔತಣ ಊಟದಲ್ಲಿ ಹೆಚ್ಚು

ವ್ಯಂಜನ ಗಳು ಇರುತ್ತವೆ .ದಿನ ನಿತ್ಯ ಮನೆ ಊಟಕ್ಕೆ ಒಂದು ಪಲ್ಯ ,ಒಂದು ಸಾಂಭಾರ್ ಇದ್ದರೆ

ಔತಣ ಊಟಕ್ಕೆಹಲವು ಪಲ್ಯ ,ಸಾರು ,ಸಾಂಭಾರ್ ಇತ್ಯಾದಿ ಇರುತ್ತವೆ .ಸಹಜವಾಗಿ ಹೆಚ್ಚುಉಪ್ಪು

ಮತ್ತು  ಖಾರ ಹೊಟ್ಟೆ ಸೇರುತ್ತದೆ .ಇದರಿಂದ  ಹೊಟ್ಟೆ ಉರಿ ಮತ್ತು  ನೀರಡಿಕೆ ಉಂಟಾಗುವುದು .

ಜತೆಗೆ ಪಾಯಸ ಸಿಹಿ ತಿಂಡಿ ಗಳ ಸಕ್ಕರೆ ಯೂ ರಕ್ತಸೇರುತ್ತದೆ .ಉಪ್ಪು ಮತ್ತು  ಸಕ್ಕರೆ  ರಕ್ತದ

ಸಾಂದ್ರತೆ ಹೆಚ್ಚಿಸುವವು .ಹೆಚ್ಚಿದ  ಸಾಂದ್ರತೆಯ ರಕ್ತ ಮೆದುಳಿನಲ್ಲಿ  ಬಾಯಾ ರಿಕೆ ಉಂಟುಮಾಡುವ

ಕೇಂದ್ರವನ್ನುಪ್ರಚೋದಿಸಿ ನೀರು ಕುಡಿಯುವಂತೆ ಮಾಡುವುದು .ನೀರಡಿಕೆ ನಿವಾರಣೆಗೆ ನೀರೇ

ಉತ್ತಮ .ಕಬ್ಬಿಣ ಹಾಲು ,ಹಣ್ಣಿನ ರಸ  ರಕ್ತದ ಸಾಂದ್ರತೆ  ಹೆಚ್ಚಿಸುವವು . ಅವುಗಳ ಸೇವನೆ

ಬಾಯಾರಿಕೆ ನೀಗುವುದಕ್ಕೆ ಉತ್ತಮ  ಮಾರ್ಗ ಅಲ್ಲ .

                 ನಾವು  ಔತಣ ಕೂಟಗಳಲ್ಲಿ  ನಿತ್ಯ ದ ಆಹಾರಕ್ಕಿಂತ ಹೆಚ್ಚಿನpಪ್ರಮಾಣದಲ್ಲಿ ತಿನ್ನುವೆವು .

ಇದೇ ಕಾರಣಕ್ಕೆ  ಸಕ್ಕರೆ ಕಾಯಿಲೆ ಇರುವವರಿಗೆ ನಿಯಂತ್ರಣ ತಪ್ಪುವುದು ,ಅವರು ಸಿಹಿ ತಿಂಡಿ

ಪಾಯಸ  ಸೇವಿಸದಿದ್ದರೂ .

ಗುರುವಾರ, ಸೆಪ್ಟೆಂಬರ್ 19, 2019

ಆಹಾರ ಬಗ್ಗೆ ಕೆಲವು ನಂಬಿಕೆಗಳು ಸತ್ಯಾಸತ್ಯತೆ

ಮೊನ್ನೆ ಓರ್ವ ತಾಯಿ ಬಂದಿದ್ದರು .ತನಗೆ ಸಣ್ಣ ಮಗು ಇದೆ ,ಮೊಲೆ ಹಾಲು  ಸಾಕಾಗುವುದಿಲ್ಲ ,

ಅದಕ್ಕೆ ಹೆಚ್ಚು ಹಾಲು ಸೇವಿಸಿ  ಕಫ  ಆಗಿದೆ , ಔಷದಿ ಕೊಡಿ ಎಂದರು.

ನಾನೆಂದೆ " ನೋಡಿ ಅಮ್ಮ ಹಾಲು ಆಗಲು ಹೆಚ್ಚು ಸಸಾರಜನಕ (ಪ್ರೋಟೀನ್) ಇರುವ ದ್ವಿದಳ ಧಾನ್ಯ

ಸೇವಿಸಿ .ರಾಸುಗಳಿಗೆ ನಾವು ಪ್ರೋಟೀನ್ ಯುಕ್ತ ಹಿಂಡಿ ಹಾಕುವೆವು .ಮತ್ತೆ ಹಾಲು ಕುಡಿದು ಕಫ

ಆದದ್ದೂ ಇರಲಿಕ್ಕಿಲ್ಲ .ಗಾಳಿಯಲ್ಲಿ ಬಂದ ಸೋಂಕಿನಿಂದ ಕಫ ಆಗಿರ ಬೇಕು ."

ಬಹಳ ಮಂದಿ ಕಫ ಬಿಳಿ ಇದೆ .ಅದ್ದರಿಂದ  ಹಾಲು ಕುಡಿದರೆ ಜಾಸ್ತಿ ಆಗುವುದು ಎಂದು ಭಾವಿಸುತ್ತಾರೆ .
           
           ಹಲವರು  ಡಾಕ್ಟರ್ ನಿನ್ನೆ  ಮದುವೆಯಲ್ಲಿ  ಕೋಲ್ಡ್ ಕುಡಿದು ಶೀತ ಆಗಿದೆ ,ಕೆಮ್ಮು ಆಗಿದೆ

ಎನ್ನುವರು .ಸಮಾರಂಭಕ್ಕೆ ಬಂದ ವರಲ್ಲಿ  ಶೀತ ಆದವರು ಇರುವರು .ಅವರ ಉಸಿರಲ್ಲಿ  ವೈರಸ್

ಇರಬಹುದು ,ಅದರಿಂದ  ನಮಗೆ ಹರಡುವ ಸಾಧ್ಯತೆ ಜಾಸ್ತಿ. ತಿನ್ನುವ ಅಥವಾ ಕುಡಿಯುವ 

ಆಹಾರದಿಂದ  ಹೊಟ್ಟೆ ನೋವು ಭೇದಿ ಬರಬಹುದು .ಅಮೇರಿಕಾ ದ  ಸೋಂಕು ನಿವಾರಕ ಕೇಂದ್ರ

(CDC) ಸಲಹೆ ಪ್ರಕಾರ  ಗಂಟಲು ನೋವು ಕಿರಿ ಕಿರಿ ಗೆ  ಐಸ್ ತುಂಡು ಚೀಪ ಬಹುದು .

                       ಇನ್ನು ಕೆಲವರು  ಕಾಯಿಲೆ ಬಂದಾಗ  ಎಳನೀರು ಬಿಸಿ ಮಾಡಿ ಕುಡಿಯುವರು .ಇದು

ಅನವಶ್ಯಕ .ಅಲ್ಲದೆ ಅದರಲ್ಲ್ಲಿ ಏನಾದರೂ ಪೌಷ್ಟಿಕ ಅಂಶ ಇದ್ದರೆ ನಾಶವಾಗುವುದು . ಏಳ

ನೀರಿನಲ್ಲಿ  ನಾವು ತಿಳಿದು ಕೊಂಡಂತೆ ಭಾರೀ ಪೌಷ್ಟಿಕ ದಾಯಕ ಅಂಶಗಳು ಇಲ್ಲ .ಅದು ಶುದ್ಧ

ದ್ರವಾಹಾರ .ಅದೇ ರೀತಿ ಶೀತ ಆಗಿದೆ ಎಂದು ಮಜ್ಜಿಗೆ ಬಿಸಿ ಮಾಡಿ ಉಪಯೋಗಿಸುವರು  ಇದ್ದಾರೆ

.ಇದೂ ಸರಿಯಲ್ಲ .

                       ಬಹಳ ಮಂದಿ  ನಾನು  ಅನ್ನಾನೆ ಊಟ ಮಾಡುವುದು , ರಾಗಿ ಮುದ್ದೇನೆ ತಿನ್ನುವುದು

ಅದರಿಂದ ಆರೋಗ್ಯವಾಗಿದ್ದೇನೆ ಎನ್ನುವರು .ಆಹಾರ ಯಾವಾಗಲು ಸಮ ತೂಕ ಆಗಿರಬೇಕು .

ಅದರಲ್ಲಿ ಏಕದಳ ,ಮತ್ತು ದ್ವಿದಳ ಧಾನ್ಯಗಳು , ಹಣ್ಣು ,ತರಕಾರಿ ಅವಶ್ಯ .ಬರೀ ಅಕ್ಕಿ ಅಥವಾ ರಾಗಿ ,

ಗೋಧಿ  ತಿನ್ದಿಗಳಿ೦ತ  ಇಡ್ಲಿ ಉದ್ದಿನ ದೋಸೆ ಹೆಚ್ಚು ಪೌಷ್ಟಿಕ . ಕಷ್ಟ ಪಟ್ಟು ಬ್ರೆಡ್ ತಿನ್ನುವುದಕ್ಕಿಂತ

ರೋಗಿಗಳು ಮತ್ತು ಇತರರು ಇಡ್ಲಿ ತಿನ್ನುವುದು ಉತ್ತಮ .

                                     ಇನ್ನು  ಬಾಣಂತಿ ಯರು ಸಮತೂಕದ ಆಹಾರ ತಿನ್ನುವುದು ಹೆಚ್ಚು ಅವಶ್ಯಕ

ಅವರಿಗೆ ಕೇವಲ ಹಾಲು ತುಪ್ಪ ತಿನಿಸುವರು .ಇದರಿಂದ ತೂಕ ಹೆಚ್ಚುವುದು .ದ್ವಿದಳ ಧಾನ್ಯ

ಮೀನು ,ಮಾಂಸ ಹಣ್ಣುತರಕಾರಿ ಉತ್ತಮ .

                      ಹಣ್ಣು ತಿಂದರೆ ಕಫ ಆಗದು .ಕಫ ಇದ್ದದ್ದು ಹೆಚ್ಚು ಆಗುವುದಿಲ್ಲ .


ಡೆಂಗ್ಯು ಜ್ವರ ಬಗ್ಗೆ ಇನ್ನಷ್ಟು

ಈ ಕಾಯಿಲೆ ಬಗ್ಗೆ ನನ್ನ ಹಿಂದಿನ ಪೋಸ್ಟ್ ಗಳಲ್ಲಿಬರೆದಿದ್ದೆ . ಈಗ ಡೆಂಗ್ಯು ಸೀಸನ್ ನಮ್ಮ ಊರಲ್ಲಿ

(ದಕ್ಷಿಣ ಕನ್ನಡ )ದಲ್ಲಿ  ಕಡಿಮೆ ಆಗುತ್ತಾ ಬಂದಿದೆ .ಈ ವರುಷ  ಮಂಗಳೂರು ನಗರ ಪ್ರವೇಶಿಸಿ

ತುಂಬಾ ಆತಂಕ  ಉಂಟು ಮಾಡಿದೆ .ಇದು ವರೆಗೆ  ಅಲ್ಲಿ ಮಲೇರಿಯ ಜ್ವರದ ಕಾಟ ಮಾತ್ರ

ಇತ್ತು.ಬೆಂಗಳೂರು ಮಂಗಳೂರು ನಂತಹ ನಗರಗಳಿಗೆ ಇಂತಹ ಕಾಯಿಲೆಗಳು ಬಂದರೆ  endemic

ಎಂದರೆ  ಸರ್ವ ಋತು ವಿನಲ್ಲಿಯೂ ಕಾಡುವ  ಸಾಧ್ಯತೆ ಇದೆ .ಹಳ್ಳಿ ಗಳಲ್ಲಿ ಕೆಲವು  ತಿಂಗಳು ಮಾತ್ರ

ಇದರ ಹಾವಳಿ  ಇರುತ್ತದೆ .

                ವರುಷ ವರುಷ ಕಾಯಿಲೆ ಸೀಸನ್ ನಲ್ಲಿ ದೊಡ್ಡ ಸುದ್ದಿಆಗುತ್ತದೆ .ಎಲ್ಲರೂ ಸೊಳ್ಳೆ ಮತ್ತು

 ಅರೋಗ್ಯ ಇಲಾಖೆಯನ್ನುಬೈಯುತ್ತಾರೆ .ಆ ಮೇಲೆ ಮರೆಯುತ್ತ್ತಾರೆ . ಪುನರಪಿ ಸ್ಮರಣಂ  ಪುನರಪಿ

ಶಪನಂ . ನಮ್ಮ  ಹಳ್ಳಿಗಳಲ್ಲಿ  ಸೊಳ್ಳೆ ನಿಯಂತ್ರಣ ಕಷ್ಟ .ಮನೆಗಳು ದೂರ ದೂರ ಇರುತ್ತವೆ

.ಮನೆಯ ಎದುರು ತೋಟ ಗದ್ದೆ.ಅಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡುವುದು ಅಸಾಧ್ಯ .

ಅರೋಗ್ಯ ಇಲಾಖೆ ಯವರು ಏನು ಮಾಡಿಯಾರು ?ಜನ ಬೈಯುತ್ತಾರೆ ಎಂದು ಫಾಗ್ಗಿಂಗ್ ಮಾಡಿದರೆ

ಅದರ ಪರಿಣಾಮ ಒಂದೆರಡು ದಿನ ಇದ್ದೀತು.ಆದರೆ ನಗರ ಗಳಲ್ಲಿ ನೀರು ನಿಲ್ಲದಂತೆ ಮಾಡುವುದು

ಅಸಾಧ್ಯ ಅಲ್ಲ .ಆದರೆ ಎಲ್ಲರೂ ತಮ್ಮ ಮನೆಗೆ ರೋಗbಬಂದಾಗ ಮಾತ್ರ ಎಚ್ಚೆತ್ತು ಕೊಳ್ಳುತ್ತಾರೆ .


                     ಡೆಂಗ್ಯು ಕಾಯಿಲೆ ಗೆ ಔಷಧಿ ಇಲ್ಲ . ತನ್ನಿಂದ ತಾನೇ ಅದು ವಾಸಿಯಾಗ ಬೇಕು .ಜ್ರರ

ನೋವಿಗೆ  ಪ್ಯಾರಸಿಟಮಾಲ್  ಮಾತ್ರೆ  ಅಥವಾ ಇಂಜೆಕ್ಷನ್  ಕೊಡುವರು .

                          ಈ ಕಾಯಿಲೆಯಲ್ಲಿ ಪ್ಲೇಟ್ ಲೆಟ್ ಎಂಬ ರಕ್ತ ಕಣಗಳು ಕಮ್ಮಿ ಯಾಗುತ್ತವೆ .ಆದರೆ

ಇದಕ್ಕೂ ರೋಗದ  ತೀವ್ರತೆಗೂ ನೇರ ಸಂಬಂಧ ಇದ್ದ ಹಾಗೆ ಇಲ್ಲ .ಕಮ್ಮಿಯಾದ  ಸಂಖ್ಯೆ ತಾನೇ

ಸರಿಯಾಗುವುದು .ಇದರ ಸಂಖ್ಯೆ  ೧೦೦೦೦ ಕ್ಕಿಂತ ಕಮ್ಮಿ ಯಾದರೆ ಅಥವಾ ರಕ್ತ ಸ್ರಾವ ಇದ್ದರೆ

ಪ್ಲೇಟ್ ಲೆಟ್  ಕೊಡುವರು .


                    ಹಾಗಾದರೆ ಈ ಕಾಯಿಲೆ  ತೀವ್ರ ತರ ರೂಪ  ಪಡೆಯುವುದು  ಹೇಗೆ ? ಕೆಲವೊಂದು

ರೋಗಿಗಳಲ್ಲಿ ಹಠಾತ್ ರಕ್ತದ ಒತ್ತಡ ಕಮ್ಮಿಆಗುವುದು .ಜ್ವರ ಬಿಟ್ಟ ಮೇಲೆಯೂ ಇದು ಅಗ ಬಹುದು

ಇದನ್ನು  ಡೆಂಗ್ಯು ಶಾಕ್ ಎನ್ನುವರು . ಅಪರೂಪಕ್ಕೆ ಕೆಲವರಲ್ಲಿ  ಕಾಯಿಲೆ ಮೆದುಳಿಗೆ ಬಂದು

ಪ್ರಾಣಾಪಾಯ  ಉಂಟಾಗುವುದು .







ಲೈಬ್ರರಿಯನ್ನೂ ಹೋಟೆಲ್ ಮಾಣಿಯೂ

ಚಿಕ್ಕಂದಿನಲ್ಲಿ  ನನಗೆ ಎರಡು  ಉದ್ಯೋಗಿಗಳ ಬಗ್ಗೆ ಅಸೂಯೆ .ಒಂದು ಹೋಟೆಲ್ ಮಾಣಿ

.ಹೋಟೆಲ್ನಲ್ಲಿ  ಗಮಗಮಿಸುವ ನೀರುಳ್ಳಿ ಬಜೆ ಗೋಳಿಬಜೆ ನಮಗೆ ಗಗನ ಕುಸುಮ .ಏಕೆಂದರೆ

ಕೈಯಲ್ಲಿ ಕಾಸಿಲ್ಲ ,ಇದ್ದರೂ ನಮ್ಮ ಅರ್ಥಿಕ ಸ್ಥಿತಿಗೆ ಒಂದು ಫುಲ್ ಪ್ಲೇಟ್ ಸಿಗಲಾರದು ,ಅರ್ಧ

ಪ್ಲೇಟ್ ಅಂತ  ಕೊಡುವುದಿಲ್ಲ. ಹೋಟೆಲ್ ಮಾಣಿ ಗಾದರೋ  ಉಳಿದ ನೀರುಳ್ಳಿ ಮತ್ತು ಗೋಳಿಬಜೆ

ತಿನ್ನುವ ಭಾಗ್ಯಇದೆಯಲ್ಲ .ದೊಡ್ಡವನಾದಾಗ ಹೋಟೆಲ್ ಕೆಲಸಕ್ಕೆ ಸೇರಬೇಕು .


      ಇನ್ನೊಂದು  ನಮ್ಮ ಪಂಚಾಯತ್ ಲೈಬ್ರರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ .ಆಗಿನ್ನೂ

ಲೈಬ್ರರಿಯನ್  ಹುದ್ದೆ ಇರಲಿಲ್ಲ .ವಾಚನಾಲಯದಲ್ಲಿ ಒಳ್ಳೆಯ ಕತೆ ಕಾದಂಬರಿ ಪುಸ್ತಕಗಳು

ಇದ್ದವು .ಕಾರಂತ,ಕುವೆಂಪು ,ರಾವ್ ಬಹಾದ್ದೂರ್ ,ಕಟ್ಟಿಮನಿ  ಅವರ ಕೃತಿಗಳಲ್ಲದೆ  ನರಸಿಂಹಯ್ಯ

ಅವರ  ರೋಚಕ ಪತ್ತೇದಾರಿ ಕಾದಂಬರಿಗಳನ್ನು  ಮೊದಲು ಓದಿದ್ದೇ ಅಲ್ಲಿ .ಆದರೆ ಒಮ್ಮೆಗೆ  ಎರಡೇ

ಪುಸ್ತಕ ಕೊಡುತ್ತಿದ್ದರು .ಅದು ಎರಡು ಮೂರು ದಿನದಲ್ಲಿ ಮುಗಿದು ಮುಂದಿನ ಪುಸ್ತಕಕ್ಕೆ ಒಂದು

ವಾರ  ಕಾಯಬೇಕಿತ್ತು .ಏಕೆಂದರೆ hಹಲವು ಜವಾಬ್ದಾರಿ ಹೊತ್ತ  ಸೆಕ್ರೆಟರಿ ಪುಸ್ತಕ ವಿತರಣೆಗೆ ಒಂದು

ದಿನ ನಿಗದಿ ಮಾಡಿದ್ದರು . ಹಲವು ಬಾರಿ ಆ ದಿನವೂ ಅವರು ರಜೆ ಮೇಲೆ ಇದ್ದರೆ ನಮ್ಮ ನಿರಾಸೆ

ಹೇಳತೀರದು .ಆದುದರಿಂದ  ಇಂತಹ ಲೈಬ್ರರಿ ಯ ಮೇಲ್ವಿಚಾರಕ ಕೆಲಸಕ್ಕೆ ಸೇರಬೇಕು ,ಅಂದರೆ

ಎಷ್ಟು ಪುಸ್ತಕ ಬೇಕಾದರೂ ಆದ ಬಹುದು ಎಂಬ ಯೋಚನೆ ಆಗಾಗ ಬರುತ್ತಿತ್ತು.

                      ಈಗ ನಮ್ಮಅರ್ಥಿಕ  ಸ್ಥಿತಿ ಸುದಾರಿಸಿದೆ. ನೀರುಳ್ಳಿ ಬಜೆ ಗೋಳಿಬಜೆ ಆಸೆ ಕಮ್ಮಿ ಯಾಗಿದೆ .

ಪುಸ್ತಕ ಓದುವ ಅಸೆ ಹಾಗೇ ಇದೆ.  ಬೇಕಾದ ಹೊಸ ಕೃತಿಗಳು ಆನ್ಲೈನ್ನಲ್ಲಿ ಸಿಗುತ್ತವೆ . ಹಳೆಯ ಕೆಲವು

ಹೊತ್ತಿಗೆಗಳು  ಅಂಗಡಿಯಲ್ಲ್ಲಿ ಯಲ್ಲಿ  ಸಿಗುತ್ತಿಲ್ಲ ,ಲೈಬ್ರರಿಗಳಲ್ಲೂ .






ಸೋಮವಾರ, ಮಾರ್ಚ್ 6, 2017

ಗುಡ್ಡದ ತುದಿಯಿಂದ

ಬೈರಿಕಟ್ಟೆ ಯಿಂದ  ದಕ್ಷಿಣಾಭಿಮುಖವಾಗಿ  ಮಣ್ಣಿನ ರಸ್ತೆ  ಬಲಕ್ಕೆ ತಿರುಗಿ ಪುನಃ ಗುಡ್ಡ 

ಆರೋಹಣ .ರಸ್ತೆ ಬದಿಯಲ್ಲಿ  ಸಣ್ಣ ಕಾಡು .ಒಂದು ಒಳ್ಳೆಯ ಕಾಟು ಮಾವಿನ ಹಣ್ಣಿನ 

ಮರ ಇದೆ .ಬೇಸಿಗೆಯಲ್ಲಿ  ಮರದ ಕೆಳಗೆ  ಬಿದ್ದ ಹಣ್ಣುಗಳನ್ನು ಹೆಕ್ಕಿ ತಿನ್ನುತ್ತಿದ್ದೆವು .

ಮಾರ್ಗದಲ್ಲಿ ನಡೆಯುವಾಗ  ಮಾವಿನ ಹಣ್ಣಿನ ಕಂಪು ನಮ್ಮನ್ನು  ಮರದ ಬುಡಕ್ಕೆ 

ಆಹ್ವಾನಿಸುವುದು .ಅದರಂತೆ  ಗೇರು ಹಣ್ಣುಗಳು.

ಮುಂದೆ  ಗುಡ್ಡದ ಶಿಖರ .ಮತ್ತೆ  ಇಳಿಜಾರು .ಮೇಲಿನಿಂದ   ಕೆಳಗಿನ  ಬಯಲಿನ  

ವಿಹಂಗಮ ನೋಟ .ಅಡಿಕೆ ಮರಗಳ  ತೋಟದ ಮರೆಯಲ್ಲಿ ಮನೆಗಳು .ಬಚ್ಚಲು 

ಮನೆಯಿಂದ ಅಥವಾ ಅಡಿಗೆ ಮನೆಯಿಂದ  ಏಳುತ್ತಿರುವ  ಹೊಗೆ ಮನುಜ ವಾಸದ 

ಸೂಚನೆ .ಹಗಲು ಹೊತ್ತಿನಲ್ಲಿ  ಕಲ್ಲಿಗೆ ಹೊಡೆದು ಬಟ್ಟೆ ತೊಳೆಯುವ  ,ತೋಟದ 

ಕೆರೆಯಿಂದ  ಡಿಸೇಲ್ ಪಂಪ್ ಶಬ್ದ  ಕೇಳಿಸ ಬಹುದು .ಬೇಸಾಯದ ಸಮಯದಲ್ಲಿ 

ದೂರದ ಹೊಲದಿಂದ  ಉಳುವ ರೈತನ  ರಾಗ ಬದ್ದ ಉದ್ಗಾರಗಳು ಕೇಳುವುವು .


                   ಸಂಜೆ ಹೊತ್ತು ಆದರೆ  ಮನೆಗೆ ಹಿಂತಿರುಗುವ   ದನ ಕರುಗಳ ಬ್ಯಾಂ 

ಗೂಡಿಗೆ ಮರಳುವ  ಹಕ್ಕಿಗಳ ಕಲರವ ಇವು ಸಾಮಾನ್ಯ .ರಾತ್ರಿ ಕಾಲಿಟ್ಟೊಡನೆ 

ಮನೆಗಳಿಂದ  ಮನುಷ್ಯರ  ಕೂಗು ,ನಾಯಿ ಗಳ ಬೊಗಳುವಿಕೆ  ಮತ್ತು  ನರಿಗಳ 

ಊಳಿದುವ  ಸಂಗೀತ  ಕೇಳಿಸುವುದು .ನರಿಗಳು  ಕೂಗಿಗೆ  ನಾಯಿಗಳು  ಉತ್ತರ 

ಕೊಡುವಂತೆ  ಬೊಗಳುವುವು .

                  ನಾವು  ಗುಡ್ಡದ ತುದಿಯಿಂದ  ಮಾತನಾಡುತ್ತಾ ಇಳಿಯುತ್ತಿದ್ದರೆ 

 ನಮ್ಮ  ಮನೆಯ  ನಾಯಿಗೆ  ಗುರುತು ಸಿಕ್ಕಿ ಓಡೋಡಿ ಬರುವುದು .ಮನೆಯ 

 ನಾಯಿಗಳು  ನಾವು ನೆಂಟರ ಮನೆಗೆ ಹೊರಟಾಗಲೂ  ನಮ್ಮೊಡನೆ ಬಂದು  ಬಸ್ 

ನಿಲ್ದಾಣದಿಂದ   ವಾಸನೆ ಗುರುತಿನಲ್ಲಿ  ಮನೆಗೆ ವಾಪಾಸ್ ಆಗುತ್ತಿದ್ದವು 

ಭಾನುವಾರ, ಮಾರ್ಚ್ 5, 2017

ಬೈರಿಕಟ್ಟೆ

ವಿಟ್ಲ ಮಂಜೇಶ್ವರ ರಸ್ತೆಯಲ್ಲಿ  ೫ ಕಿ ಮೀ ಹೋದರೆ ಕಲಂಜಿಮಲೆ ಸೆರಗಿನಲ್ಲಿ ಸಣ್ಣ 

ಪೇಟೆ ಬೈರಿಕಟ್ಟೆ .ಸ್ಥಳ ನಾಮ ಏಕೆ ಬಂತೋ ಗೊತ್ತಿಲ್ಲ .ಉತ್ತರಕ್ಕೆ  ತಲೆಯೆತ್ತಿ ನಿಂತ 

ಕಳಂಜಿಮಲೆ .ದಕ್ಷಿಣ ಕ್ಕೆ  ನಾಲ್ಕೈದು ಅಂಗಡಿಗಳು .ರಾಜಮಾರ್ಗಕ್ಕೆ ಸೇರುವ ರಸ್ತೆ 

ಒಂದೇ .ಅದು ಅರ್ಧ ಕಿ ಮೀ ದಕ್ಷಿಣಕ್ಕೆ  ಕವಲೊಡೆದು ಒಂದು ಅಂಗ್ರಿ ಬಯಲಿಗೂ 

ಇನ್ನೊಂದು  ಮಡೆಯಾಲ  ಕೇಕನಾಜೆ ಗೂ  ಹೋಗುವುದು .ಈ ಊರಿನವರು ಬಸ್ 

ಹಿಡಿಯಲು  ಬೈರಿಕಟ್ಟೆಗೆ ಬರಬೇಕು .
      
  ಕಳಂಜಿಮಲೆ  ರಕ್ಷಿತಾರಣ್ಯ .ಇಲ್ಲಿ  ಹುಲಿ ಚಿರತೆಗಳೂ ಇದ್ದವು ಎಂದು 

ಪ್ರತೀತಿ.ವರುಷಕ್ಕೊಮ್ಮೆ ಊರಿನಲ್ಲಿ  ಯಾರದಾದರೂ ಹಟ್ಟಿಗೆ ಬಂದು ದನವನ್ನೋ 

ಕರುವನ್ನೋ  ಬಲಿತೆಗೆದು ಕೊಳ್ಳುತ್ತಿದ್ದವು .ಹುಲಿ  ಪಶುವನ್ನು ಒಮ್ಮೆ ಕೊಂದು  ಬಿಟ್ಟು 

ಹೋಗಿ ಪುನಃ ತಿನ್ನಲು ಬರುವುದು ಎಂಬ ನಂಬಿಕೆಯಿಂದ  ಕೊಲ್ಲಲ್ಪಟ್ಟ  ಪಶುವಿನ 

ದೇಹಕ್ಕೆ  ವಿಷ ಹಾಕಿ ಜನ ಕಾಯುತ್ತಿದ್ದರು .ಆದರೆ ಇವರ ಉಪಾಯಕ್ಕೆ ಹುಲಿ 

 ಬಲಿಯಾದ  ಸಾಕ್ಷಿಯಿಲ್ಲ .

  ಕಳಂಜಿಮಲೆಯಿಂದ ಸೊಪ್ಪು  ಸೌದೆ ತರಲು  ರೈತಾಪಿ ಜನರು ಹೋಗುತಿದ್ದರು .

ಒಮ್ಮೊಮ್ಮೆ   ಫಾರೆಸ್ಟ್  ಗಾರ್ಡ್ ಗಳು  ಇವರು  ಮರ ಕಡಿಯುವರೆಂದು  

ಆರೋಪಿಸಿ ಇವರ ಅಯುಧವಾದ ಕುಡುಗೋಲನ್ನು (ಕತ್ತಿ) ವಶಪಡಿಸಿ  

ಓಡಿಸುತ್ತಿದ್ದರು . ಮೊದಲು  ದಟ್ಟ ಮರಗಳಿಂದ ತುಂಬಿದ್ದ  ಮಲೆಯನ್ನು  ಸವರಿ 

ವಾಣಿಜ್ಯ ಉದ್ದೇಶಕ್ಕಾಗಿ   ಅಕೇಶಿಯ  ನೆಟ್ಟಿರುವರು . ಈ  ಪರ್ವತ ಶ್ರೇಣಿಯಿಂದ 

ಹತ್ತಾರು  ನೀರ ತೊರೆಗಳು  ಹರಿದು  ಕೆಳಗಿನ ಬಯಲಿಗೆ  ನೀರುಣಿಸುವುವು .ಪುಣ್ಯ ,

ಸದ್ಯ ರಕ್ಷಿತಾರಣ್ಯದಲ್ಲಿ  ಹುಟ್ಟುವ ಕಾರಣ  ಆ ನೀರಿಗೆ ತೆರಿಗೆ  ಕೊಡಬೇಕೆಂದು 

ಸರಕಾರ ಹೇಳಿಲ್ಲ .

        ಬೈರಿಕಟ್ಟೆಯಲ್ಲಿ ಒಂದು ಹೋಟೆಲ್ .ಮರದ ಕಟ್ಟಿಗೆಯೇ ಉರುವಲು .ಇಂತಹ 

ಸಣ್ಣ  ಹೋಟೆಲ್ ಗಳಲ್ಲಿ  ಅಡುಗೆಯವನು ,ಕ್ಯಾಷಿಯರ್ ಮತ್ತು  ತಟ್ಟೆ ಎತ್ತುವವರು 

ಎಲ್ಲಾ ಒಬ್ಬರೇ .ಅವರೇ ಲೋಟ ತೊಳೆಯುವವರು .ಚಾ ದೊಡ್ಡ  ಗ್ಲಾಸ್ 

ಲೋಟದಲ್ಲ್ಲಿ.ಒಂದು  ಗ್ಲಾಸ್ ಚಾ  ಎನ್ನುತ್ತಿದ್ದರು .ಒಂದು ಕಪ್ ಚಾ ಇಲ್ಲಿ ಬಳಕೆಯಲ್ಲಿ 

ಇಲ್ಲ .ಇಲ್ಲಿ ಬಂದು ಚಾ ಕುಡಿಯಲು  ಕುಳಿತರೆ  ಊರ ಸಮಾಚಾರ  ಸಿಗುವುದು .

ರೇಶನ್ ಅಂಗಡಿಗೆ  ಅಕ್ಕಿ ಸಕ್ಕರೆ ಬಂದ ಸುದ್ದಿ ,  ರಾಂಪಣ್ಣ ನ ಬಸ್ಸು ಬಾಕ್ರಬೈಲು 

ಚಡವಿನಲ್ಲಿ  ಮಗುಚಿದ್ದು . ಪಟೇಲರ ಮನೆಗೆ ಹುಡುಗಿ ನೋಡಲು ಬಂದದ್ದು ಎಲ್ಲಾ 

ಇಲ್ಲಿ  ಸಿಗುವುದು .

ಇದು ಬಿಟ್ಟರೆ  ಒಂದು ಸಣ್ಣ ಬಟ್ಟೆ  ಅಂಗಡಿ .ಆಗೆಲ್ಲ  ಕ್ಯಾಶ್ ಕೊಟ್ಟು  ಬಟ್ಟೆ 

ಕೊಳ್ಳುತ್ತಿದ್ದುದು  ಕಡಿಮೆ  .ಎಲ್ಲಾ  ಉದ್ರಿ ಅಥವಾ ಸಾಲದ ಲೆಕ್ಕ .ದೀಪಾವಳಿ  

ಅಂಗಡಿ  ಪೂಜೆಗೆ  ಸಾಲ ಚುಕ್ತಾ ಮಾಡಿ ಹೊಸ ಲೆಕ್ಕ ಆರಂಬಿಸುವರು .

ಒಂದು  ಜೀನಸು ಅಂಗಡಿ ,ಅದಕ್ಕೆ ತಾಗಿ ರೇಶನ್ ಶಾಪ್ .ಕೆಂಪು ಬೋರ್ಡಿನ  

ಸರಕಾರಿ  ಸಾರಾಯಿ ಅಂಗಡಿ .ಬಸ್ ಸ್ಟಾಪ್ ಇದ್ದರೂ  ತಂಗುದಾಣ ಇರಲಿಲ್ಲ .

    ಈ  ರಸ್ತೆಯಲ್ಲಿ  ಇದ್ದುದು ಕೆಲವೇ ಬಸ್ ಗಳು .ಬಸ್ಗಳು  ಅವುಗಳ  ಡ್ರೈವರ್ 

ಹೆಸರಿನಿಂದ ಗುರುತಿಸಲ್ಪದುತ್ತಿದ್ದವು .ಉದಾ   ಪೀರ್ ಸಾಹೇಬರ ಬಸ್ ,ರಾಂಪಣ್ಣನ

ಬಸ್ , ಗೋಪಾಲನ ಬಸ್ , ಮಹಾಬಲ ರೈ ಬಸ್ ಇತ್ಯಾದಿ .ಬಸ್ ಬೈರಿಕಟ್ಟೆಗೆ 

ಬರುವಾಗ ಯಾವಾಗಲೂ   ಪ್ರಯಾಣಿಕರಿಂದ ತುಂಬಿರುತ್ತಿದ್ದವು . ಹಳ್ಳಿಯಿಂದ 

ಗಡಿಬಿಡಿಯಿಂದ  ಹೊರಟು ಬೆವರು ಸುರಿಸಿಕೊಂಡು  ಏದುಸಿರು ಬಿಡುತ್ತಾ   

ಮಾರ್ಗದ ಬಳಿಗೆ  ಇನ್ನೇನು ಎತ್ತಿದೆವು ಎನ್ನುವಷ್ಟರಲ್ಲಿ   ದೂಳು ಹಾರಿಸುತ್ತಾ 

ನಮ್ಮನು  ಹಂಗಿಸಿ ಎಂಬಂತೆ ಓಡಿ ಹೋಗುತ್ತಿದ್ದುದು  ಸಾಮಾನ್ಯ .

                    ಈ  ಬಸ್ಸಿನ ಚಾಲಕರು  ಫಲಾಪೇಕ್ಷೆ ಇಲ್ಲದೆ ಊರ ಜನರಿಗೆ 

 ಕುರಿಯರ್ ಸೇವೆ ಸಲ್ಲಿಸುತ್ತಿದ್ದರು . ಪೇಟೆಯಿಂದ  ಔಷಧಿ , ವಾರ್ತಾ ಪತ್ರ ಇತ್ಯಾದಿ 

 ತಂದು ಕೊಡುತ್ತಿದ್ದರು .

ಗುರುವಾರ, ಮಾರ್ಚ್ 2, 2017

ಟಾನಿಕ್ ,ಗ್ಲುಕೋಸ್ ಮತ್ತು ನಿತ್ರಾಣ

ಬಹಳಷ್ಟು ಜನರ ನಂಬಿಕೆ  ನಿಶ್ಶಕ್ತಿ ಗೆ  ಟಾನಿಕ್ ಅಥವಾ ಗ್ಲುಕೋಸ್ ತೆಗೆದು 

ಕೊಳ್ಳಲೇ ಬೇಕು .ವೈದ್ಯರ ಬಳಿಗೆ ಬಂದು ಒಂದು ಗ್ಲುಕೋಸ್ ಹಾಕಿ ಡಾಕ್ಟ್ರೆ ,ಒಂದು 

ಟಾನಿಕ್ ಬರೆದು ಕೊಡಿ ತುಂಬಾ ನಿತ್ರಾಣ ಎನ್ನುವವರು ಬಹಳ .

   ಇದು ಸರಿಯಲ್ಲ .ಉದಾಹರಣೆಗೆ  ಒಬ್ಬನಿಗೆ ಸಕ್ಕರೆ ಕಾಯಿಲೆ ಇದೆ .ಪಥ್ಯ 

ಮತ್ತು  ಔಷದೊಪಚಾರ ಸರಿ ಮಾಡುವುದಿಲ್ಲ .ಸಕ್ಕರೆ ಹತೋಟಿ ತಪ್ಪಿದರೆ  ನಿಶ್ಶಕ್ತಿ 

ಇರುವುದು .ಇದಕ್ಕೆ ಟಾನಿಕ್ ಕುಡಿಯುವುದು ಪರಿಹಾರ ಅಲ್ಲ .

ಇನ್ನೊಬ್ಬ ರೋಗಿಗೆ  ಅಸ್ತಮಾ ಕಾಯಿಲೆ .ಉಸಿರಾಟ ಸರಿ ಇಲ್ಲ .ಇದರಿಂದ  

ಅಂಗಾಂಗಳಿಗೆ ಪ್ರಾಣವಾಯು ಸರಬರಾಜು ವ್ಯತ್ಯಯ ಆಗುವುದು .ಅದರಿಂದ 

ನಿಶ್ಶಕ್ತಿ .ಇದಕ್ಕೆ ಟಾನಿಕ್ ಅಥವಾ ಗ್ಲುಕೋಸ್ ಪರಿಹಾರ ಅಲ್ಲ.

     ಅದರಂತೆ  ಹೃದಯ ,ಲಿವರ್ ಅಥವಾ ಮೂತ್ರಪಿಂಡ ರೋಗಗಳಿಂದ 

ಆಯಾಸ ಇರುವುದು .ಇವುಗಳಲ್ಲಿ ಮೂಲ ಕಾಯಿಲೆಗೆ  ಚಿಕಿತ್ಸೆ ಮಾಡಬೇಕೇ 

ಹೊರತು ಟಾನಿಕ್ ಪರಿಹಾರ ಅಲ್ಲ .

        ರೋಗಿ ಗೆ  ಕುಡಿದು ತಿನ್ನಲು ತೊಂದರೆ ಇಲ್ಲದಿದ್ದರೆ  ಗ್ಲುಕೋಸ್ ಡ್ರಿಪ್ 

ಕೊಡುವುದರಿಂದ ಹೆಚ್ಚು ಪ್ರಯೋಜನ ಇಲ್ಲ .ಅಲ್ಲದೆ ಮೂತ್ರಪಿಂಡ ವೈಫಲ್ಯ 

ಮತ್ತು ಹೃದಯ ಕಾಯಿಲೆ ಇರುವವರಿಗೆ  ಡ್ರಿಪ್ ಮೂಲಕ ಗ್ಲುಕೋಸ್ ಕೊಟ್ಟರೆ 

ಎದೆಯಲ್ಲಿ ನೀರು ನಿಂತು  ದಮ್ಮು ಕಟ್ಟುವ ಸಾಧ್ಯತೆ ಇದೆ .

                       ಸಮ ತೂಕದ ಆಹಾರ ವೇ ಟಾನಿಕ್ . ನಿರ್ದಿಷ್ಟ ವಿಟಮಿನ್ 

ಅಥವಾ ಆಹಾರದ ಅಂಶದ ಕೊರತೆ ಇದ್ದರೆ ವೈದ್ಯರೇ  ಅದನ್ನು ಬರೆದು 

ಕೊಡುವರು.ಸುಮ್ಮ ಸುಮ್ಮನೇ ಟಾನಿಕ್ ಕೇಳುವುದು ,ಗ್ಲುಕೋಸ್ ಹಾಕಿಸುವುದು 

ಸರಿಯಲ್ಲ ಮತ್ತು ಅನಾವಶ್ಯಕ  ಖರ್ಚಿಗೆ ದಾರಿ .

   ಡ್ರಿಪ್ ನಲ್ಲಿ ಹಾಕಿ ಕೊಡುವ  ಗ್ಲುಕೋಸ್ ನಲ್ಲಿ  ನೀರು ,ಉಪ್ಪು ಮತ್ತು( ಅಥವಾ )

ಗ್ಲುಕೋಸ್ ಇರುವುದು .ಇದನ್ನು ನಾವು ಬಾಯಲ್ಲಿ ಸೇವಿಸಿದರೂ ಶರೀರಕ್ಕೆ 

ಸೇರುವುದು .ಕುಡಿಯಲೇ ಆಗದ ಪರಿಸ್ಥಿತಿ ಇದ್ದರೆ ,ಅತಿಯಾದ ವಾಂತಿ ಇದ್ದರೆ 

ಮಾತ್ರ ನರಗಳ ಮೂಲಕ ಗ್ಲುಕೋಸ್ ಹಾಕುವರು .ಬಹಳ ಕಾಲ ಅಬೋಧಾವಸ್ಥೆ

ಇದ್ದರೆ  ನಾಸಿಕೋದರ ನಾಳದಿಂದ ಆಹಾರ ಕೊಡುವುದು ಕ್ಷೇಮ