ಬೆಂಬಲಿಗರು

ಶನಿವಾರ, ಜುಲೈ 13, 2013

ಪಲ್ಮನರಿ ಎಂಬೋಲಿಸಂ ಎಂಬ ಮಾರಣಾಂತಿಕ ಕಾಯಿಲೆ.

ದೇಹದಲ್ಲಿ ರಕ್ತ ಚಲನೆಯಲ್ಲಿ ಇರ ಬೇಕು .ಶುದ್ಧ ರಕ್ತ  ಹೃದಯದಿಂದ ಅಪಧಮನಿಗಳ ಮೂಲಕ ದೇಹದಾದ್ಯಂತ ಚಲಿಸಿ ಆಹಾರ

ಮತ್ತು ಆಮ್ಲಜನಕ ಸರಬರಾಜು ಮಾಡಿದರೆ ,ಅಭಿಧಮನಿಗಳ ಮೂಲಕ ಅಶುದ್ದ ರಕ್ತ ಹೃದಯಕ್ಕೆ ಬಂದು ಅಲ್ಲಿಂದ

ಶುದ್ದೀಕರಣಕ್ಕಾಗಿ ಶ್ವಾಸಕೋಶಕ್ಕೆ ರವಾನೆ ಆಗುವುದು.ಇದು ನಿರಂತರ ಕ್ರಿಯೆ.ಅದೇ ರೀತಿ ರಕ್ತನಾಳಗಳಿಗೆ ಗಾಯವಾದರೆ


ಕೂಡಲೇ ರಕ್ತ ಹೆಪ್ಪು ಗಟ್ಟಿ ರಕ್ತ ಸೋರುವಿಕೆ ನಿಲ್ಲ ಬೇಕು .ಈ ಹೆಪ್ಪು ಗಟ್ಟಲು ಬೇಕಾದ ಕಚ್ಚಾ ವಸ್ತುಗಳು ರಕ್ತದಲ್ಲಿಯೇ


ಅಡಕವಾಗಿವೆ.ಚಲನೆ ಮತ್ತು ಹೆಪ್ಪುಗಟ್ಟುವ ಕ್ರಿಯೆಯ ಸಮತೋಲನ ಆರೋಗ್ಯಕ್ಕೆ ಅತೀ ಆವಶ್ಯ.


ಕೆಲವು ಸಂದರ್ಭಗಳಲ್ಲಿ ಕಾಲಿನ ಮೀನ ಖಂಡದ   ಅಭಿಧಮನಿಗಳಲ್ಲಿ ರಕ್ತ  ಹೆಪ್ಪುಗಟ್ಟುವುದು.ಉದಾ;ರೋಗದಿಂದ ಕಾಲಿನ


ಚಲನೆಯಿಲ್ಲದೆ ಮಲಗಿರುವವರು ( ಮೂಳೆ ಮುರಿತ,ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದವರು ,),ಹೆಪ್ಪು ಗಟ್ಟುವಿಕೆಯ ಅಂಶ


ಹೆಚ್ಹು ಇರುವ ಗರ್ಬಿಣಿ ಸ್ತ್ರೀಯರು,ಗರ್ಭ ನಿರೋಧಕ ಗುಳಿಗೆ ಸೇವಿಸುವವರು,ಕೆಲವು ಕ್ಯಾನ್ಸರ್ ಕಾಯಿಲೆಯಿಂದ ಬಳಲುವವರು

.

ಇಂತಹವರಲ್ಲಿ ಹೆಪ್ಪುಗಟ್ಟಿದ ರಕ್ತ ದ  ಗಟ್ಟಿ ಅಬಿಧಮನಿಗಳ ಮೂಲಕ ಹೃದಯವನ್ನು ಹಾಯ್ದು ಶ್ವಾಶ ಕೋಶದ  ಅಪಧಮನಿ


ಪ್ರವೇಶಿಸಿ ಶ್ವಾಸ ಕೋಶಕ್ಕೆ ರಕ್ತ ಸಂಚಾರ ವ್ಯತ್ಯಯ ಮಾಡುವುದು.ಇದನ್ನೇ ಪಲ್ಮನರಿ ಎಂಬೋಲಿಸಂ ಎಂದು ವೈದ್ಯಕೀಯ


ಭಾಷೆಯಲ್ಲಿ ಕರೆಯುತ್ತಾರೆ.ಇಲ್ಲಿ ರಕ್ತದ ಗಟ್ಟಿ ಸಾಕಷ್ಟು ದೊಡ್ಡದಿದ್ದರೆ ಶ್ವಾಸ ಕೋಶದ ರಕ್ತ ಸರಬರಾಜು ಸಂಪೂರ್ಣ ನಿಂತು


ಸೆಕೆಂಡುಗಳಲ್ಲಿ ರೋಗಿ ಸಾವನ್ನಪ್ಪುವನು.

ರೋಗ ಲಕ್ಷಣಗಳು 



 ಕಾಲಿನ ರಕ್ತ ನಾಳಗಳಲ್ಲಿ ರಕ್ತ ಹೆಪ್ಪು ಗಟ್ಟಿದರೆ ಕಾಲು ಊದಿ ಕೊಂಡು ನೋವು ಇರಬಹುದು.ಅಥವಾ  ಯಾವುದೇ ಲಕ್ಷಣ


  ಇಲ್ಲದೇ  ಇರಬಹುದು. ಸಂಶಯ ಬಂದಾಗ ಡಾಪ್ಲರ್ ಪರೀಕ್ಷೆಯೆಂಬ



ಸ್ಕ್ಯಾನ್ ಮಾಡಿ ಪತ್ತೆ ಹಚ್ಚ ಬಹುದು.


ಶ್ವಾಸ ಕೋಶದ ರಕ್ತ ನಾಳ ಬ್ಲಾಕ್ ಆದರೆ  ಏಕಾ ಏಕಿ ದಮ್ಮು ಕಟ್ಟುವುದು.ಆಮ್ಲ ಜನಕ ಕಮ್ಮಿಯಾಗಿ ಶರೀರ ನೀಲ ವರ್ಣಕ್ಕೆ



ತಿರುಗಿ ರೋಗಿ ಸಾವನ್ನೂ ಅಪ್ಪ ಬಹುದು .ಆದುದರಿಂದ ಮೇಲೆ ಹೇಳಿದ ವ್ಯಕ್ತಿಗಳಲ್ಲಿ ಯಾವುದೇ ಕಾರಣವಿಲ್ಲದೆ,(ಅಂದರೆ

ಮೊದಲೇ ಅಸ್ಥಮಾ ,ಹೃದಯ ಕಾಯಿಲೆ ಇಲ್ಲದಿದ್ದರೆ ) ದಮ್ಮು ಕಟ್ಟಲು ಶುರುವಾದರೆ ಪಲ್ಮನರಿ ಎಂಬೋಲಿಸಂ ಇರಬಹುದೆಂದು


ಸಂಶಯಿಸ ಬೇಕು. ರೋಗ ಪರೀಕ್ಷಣೆಗೆ  ಸಮಯ ಕೊಟ್ಟರೆ ರಕ್ತ ಪರೀಕ್ಷೆ ,ಸಿ ಟಿ ಸ್ಕ್ಯಾನ್ ,ಎಂ ಅರ ಐ ಸ್ಕ್ಯಾನ್ ಮೂಲಕ


ರೋಗ  ಖಚಿತ ಪಡಿಸಿ ಕೊಳ್ಳ ಬಹುದು .


ಚಿಕಿತ್ಸೆ.

ರೋಗವು ಚಿಕಿತ್ಸೆಗೆ ಸಮಯ ಕೊಟ್ಟರೆ ಕೂಡಲೇ ತುರ್ತು ಚಿಕಿತ್ಸಾ ಕೊಡದಿಯಲ್ಲಿ ಅಮ್ಲನಕ ಕೊಟ್ಟು, ಹೆಪ್ಪು ಕರಗಿಸುವ ಔಷಧಿ

ಆರಂಬಿಸುವರು.

ದೀರ್ಘ ಕಾಲ ಚಲನೆಯಿಲ್ಲದೆ ಇರುವ ರೋಗಿಗಳಿಗೆ ಹೆಪಾರಿನ್ ಎಂಬ ಹೆಪ್ಪು ಪ್ರತಿ ಬಂಧಕ ಔಷಧಿ ಕೊಡುವರು.ಇದರಿಂದ

ಕಾಲಿನಲ್ಲಿ ರಕ್ತ  ಹೆಪ್ಪುಗಟ್ಟುವುದನ್ನು ತಡೆಗಟ್ಟಿ ಪಲ್ಮನರಿ ಎಂಬೋಲಿಸಂ ಬರದಂತೆ ನೋಡಿಕೊಳ್ಳ ಬಹುದು.

ಗಮನಿಸಿ

                ಕೆಲವೊಮ್ಮೆ ಗರ್ಬಿಣಿ ಸ್ತ್ರೀ ಗಳಲ್ಲಿ(ಮತ್ತು ಹೆಪ್ಪುಗಟ್ಟುವ ಆತಂಕವಿರುವ ಇತರರಲ್ಲಿ) ಈ ರೋಗ ಪ್ರಕಟವಾಗಿ 

ನೋಡುವುದರೊಳಗೆ ಸಾವನ್ನಪ್ಪ ಬಹುದು .ಆಗ  ಅದಕ್ಕಿಂತ ಸ್ವಲ್ಪ ಮೊದಲು ಕೊಟ್ಟ ಇಂಜೆಕ್ಷನ್ ,ಅಥವಾ ಇನ್ನಾವುದೋ 

ಮಾಮೂಲಿ ಔಷಧಗಳೋ ಇದಕ್ಕೆ ಕಾರಣ ಎಂದು ರೋಗಿಗಳ ಬಂಧುಗಳು ತಿಳಿಯುವುದುಂಟು.



ಶುಕ್ರವಾರ, ಜುಲೈ 12, 2013

ನನ್ನ ಅಜ್ಜ ಮತ್ತು ಪುತ್ತೂರು ಪೇಟೆ


ಹಿಂದೆ ಹಳ್ಳಿಯಲ್ಲಿ ಆಢ್ಯ ವ್ಯಕ್ತಿಗಳು ನಗರಕ್ಕೆ ಆಗಾಗ ಭೇಟಿ ಕೊಡಲು ಒಂದೋ ಎರಡನೇ ಸಂಭಂಧ ,ಇಲ್ಲವಾದರೆ ಕೋರ್ಟ್ ಕೇಸ್

ಇಟ್ಟುಕೊಳ್ಳುತ್ತಿದ್ದರು.ಕೆಲವರಿಗೆ ಎರಡೂ ಇತ್ತು.ಆಗಿನ ಸನ್ನಿವೇಶದಲ್ಲಿ ಎರಡೂ ಅಸ್ಟು ವಿಚಿತ್ರವೆನಿಸುತತ್ರಲಿಲ್ಲ.

ನನ್ನ ಅಜ್ಜನೂ ಎರಡನೇ ವ್ಯಸನ ಇದ್ದವರು.ಕೋರ್ಟ್ ಕೇಸ್ ಗೆ ಇಲ್ಲದ ನೀರಿನ ಮೂಲವೋ ,ಬೇಡದ ನಿರುಪದ್ರವಿ ಮರದ ಮೇಲಿನ ಹಕ್ಕು

ಸಾಧನೆಯೋ ಸಾಕಾಗುತ್ತಿತ್ತು.ನಮ್ಮ ಗದ್ದೆಗೆ ತಾಗಿ ಒಂದು ನೀರಿನ ಮೂಲ ಇತ್ತು.ಅದು ನಮ್ಮದೆಂದು ಅಜ್ಜನೂ ,ಅವರದೆಂದು ಪಕ್ಕದ

ಮನೆಯವರದೂ ವಾದ .ಸರಿ ,ಪುತ್ತೂರು ಕೋರ್ಟ್ ಹತ್ತಿತು ವಿವಾದ.ಕೇಸ್ ನ ಹಿಯರಿಂಗ್ ಗೆ ಅಜ್ಜ ಹೋಗಿ ಬಂದು ರಾತ್ರಿ ಸ್ನಾನದ


ಮನೆಯಲ್ಲಿ ಅಲ್ಲಿಯ ಕತೆಗಳನ್ನು ರೋಚಕವಾಗಿ ಹೇಳುವರು.ನಾವು ಬಿಸಿ ನೀರ ಒಲೆಯ ಬಳಿ ಮೈ ಕಾಯಿಸುತ್ತಾ ಕಣ್ಣು ಬಾಯಿ ಬಿಟ್ಟು


ಕೇಳುತ್ತಿದ್ದೆವು.ಸದಾಶಿವ ರಾಯರು ಹಾಕಿದ ಪೈಂಟಿಗೆ(point) ಜಡ್ಜರು ತೆರೆದ ಬಾಯಿ ಮುಚ್ಚಲೇ ಇಲ್ಲ ಎನ್ನುವರು.ಅವರ ಲೀಗಲ್


ವೊಕ್ಯಾಬುಲರಿ ಯಲ್ಲಿ  ಹೆರಿಂಗ್ ,ಕೈಪೇತು(ಕೇವಿಯಟ್),ಕ್ರಾಸ್ (ಕ್ರಾಸ್ ಎಕ್ಷ್ಜಾಮಿನೇಶನ್),ಡಿಕ್ರೀ,ಇಂಜಕ್ಶನ್ ಇಂತಾದ ಶಬ್ದಗಳು


ಮೇಲಿಂದ ಮೇಲೆ ಬರುತ್ತಿದ್ದವು.ವಕೀಲರ ಮನೆಗೆ ಹೋಗುವಾಗ ಫೀಸಿನ ಜತೆ ಬಾಳೆಗೊನೆ ,ಮನೆಯಲ್ಲಿ ಬೆಳೆದ ತರಕಾರಿ

ಕೊಂದೊಯ್ಯುವುದೂ ಇತ್ತು.ವಕೀಲ ಕಕ್ಷಿ ಸಂಬಂಧದಲ್ಲಿ ಒಂದು ಆತ್ಮೀಯತೆ ಇತ್ತು.


ವಕೀಲ ಸದಾಶಿವ ರಾಯರ ಮನೆ ದಾರಿಯಲ್ಲಿ ಕುಂಬ್ಳೆಕಾರ್ಸ್ ಎಂಬ ಬಟ್ಟೆ ಅಂಗಡಿ ಇತ್ತು. ಅದರ ಎದುರಿಂದ ಹಾಯುವಾಗ


ಅಂಗಡಿ ಧಣಿಗಳು  ‘ಭಟ್ರೇ ಒಳ್ಳೆಯ ಕೋಮಣ ಬಟ್ಟೆ ಬಂದಿದೆ ಕೊಂಡು ಹೋಗುವಿರೋ ಎಂದು ಈಗಿನ ಮೊಬೈಲ್ ಅಂಗಡಿಯವರು


ಹೊಸ ಮಾಡೆಲ್ ಬಂದಿದೆ ಎಂದು ಗಿರಾಕಿಗಳನ್ನು ಸೆಳೆಯುವಂತೆ ಕೇಳುತ್ತಿದ್ದರು. ಕೌಪೀನ ಹಳ್ಳಿಯ ಅಧಿಕೃತ ಉಡುಪು ಆಗಿದ್ದ ಕಾಲ.


ಕೆಲವೊಮ್ಮೆ ಅಜ್ಜನ ಜೊತೆ ನಾವೂ ಪುತ್ತೂರಿಗೆ ಬರುವುದಿತ್ತು.ಬಸ್ ಸ್ಟಾಂಡ್ ನ ಎದುರು ಜನತಾ ಫುಟ್ ವೇರ್ ಅಂದಡಿಯಿತ್ತು .ಈಗಲೂ


ಇದೆ .ಅಲ್ಲಿ ಅಬ್ದುಲ್ ಖಾದರ್ ಎಂಬ ಸಜ್ಜನ ಇದ್ದರು.ಮಕ್ಕಳನ್ನು ಸುಮ್ಮನೆ ನಡೆಸುವುದು ಬೇಡ ಎಂದು ನಮ್ಮನ್ನು ಈ ಅಂಗಡಿಯಲ್ಲಿ

ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೋದವರು ಗಂಟೆ ಯಾದರೂ ಬರುತ್ತಿರಲಿಲ್ಲ .ನಮಗೋ ಪೇಟೆಯವರನ್ನು ಕಂಡರೆ ಭಯ.

ಆಗ ಇಂತಹ ಅಂಗಡಿಗಳು ಹಳ್ಳಿಯವರ ಕ್ಲಾಕ್ ರೂಂ ಗಳೂ ಆಗಿರುತ್ತಿದ್ದವು.ಅಂಗಡಿಯವರು ಅಲ್ಲಿ ಇಟ್ಟ ಸಾಮಗ್ರಿಗಳನ್ನು ಯಾವುದೇ


ಫೀ ಇಲ್ಲದೆ ಜೋಪಾನ ವಾಗಿ ಇಡುತ್ತಿದ್ದರು.ಈ ಜನಾಬ್ ಅಬ್ದುಲ್ ಖಾದರ್ ಬಗ್ಗೆ ಒಂದು ಮಾತು ಹೇಳಬೇಕು .ನಾವು ರಜೆಯಲ್ಲಿ


ನೆಂಟರ ಮನೆಗೆ ಹೋಗುವ ದಾರಿಯಲ್ಲಿ ಚಪ್ಪಲಿ ಬೇಕೆನಿಸಿದರೆ ಸೀದಾ ಅವರ ಅಂಗಡಿಗೆ ಹೋಗಿ ಇಂತಹ ಚಪ್ಪಲಿ ಬೇಕೆಂದು ಆಯ್ದು


ಕಾಲಿಗೆ ಹಾಕಿ ಕೊಂಡು ಹೋಗುವುದೇ.ಹಣ ತಂದೆ ಕೊಡುತ್ತಾರೆ ಎಂದು ಹೇಳುತ್ತಿದ್ದೆವು .ನಿಮ್ಮ ತಂದೆ ಯಾರು ,ಯಾವಾಗ ಕೊಡುತ್ತಾರೆ

ಎಂದು ಅವರು ಕೇಳಿದವರಲ್ಲ.ಅದೇ ರೀತಿ ಬಸ್ ಸ್ಟಾಂಡ್ ನಲ್ಲಿ ಕಿತ್ತಳೆ ಮಾರುವ ಮಹನೀಯರಿದ್ದರು.ಹಳ್ಳಿಯವರಿಗೆ ಅವರವರಿಗೆ ಬೇಕಾದ


ಬಸ್ ತೋರಿಸುವರು.ಅವರ ಸಮಾಜ ಸೇವೆ ಸ್ಮರಿಸುವಂತಹುದು.


ನನ್ನ ಅಜ್ಜ ಇಳಿ ವಯಸ್ಸಿನಲ್ಲೂ ಕೈಯಲ್ಲಿ ಬೆತ್ತ ಹಿಡಿದು ಪುತ್ತೂರು ಪೇಟೆಯಿಡೀ ನಡೆದೇ ಹೋಗುತ್ತಿದ್ದರು.ಬಹಳ ದಿನ ಕೋರ್ಟ್

ಕೇಸ್ ಇಲ್ಲದಿದ್ದರೆ ಇಲ್ಲದ ಕಾಯಿಲೆಯನ್ನು ಊಹಿಸಿ ಕೊಂಡು ಕೋರ್ಟ್ ರಸ್ತೆಯ ಪ್ರಸಿದ್ದ್ದ ವೈದ್ಯ ಸುಂದರ ರಾಯರ ಬಳಿಗೆ ಸವಾರಿ ಇಡುತ್ತಿದ್ದರು.

 . ಡಾಕ್ಟರ್ ಅಲ್ಲಿ ಮುಟ್ಟಿ ನೋಡಿದರು ,ಇಲ್ಲಿ ಕುಟ್ಟಿ ನೋಡಿದರು ಎಂದು ವರ್ಣಮಯವಾಗಿ ವಿವರಿಸುತ್ತಿದ್ದರು.ಸುಂದರ ರಾಯರು


 ಕೊಟ್ಟ ಟಾನಿಕ್ ಶ್ರದ್ದೆಯಿಂದ ಕುಡಿಯುತ್ತಿದ್ದರು.

ಮೊಮ್ಮಕ್ಕಳನ್ನು ಹೋಟೆಲ್ ಗೆ ಕರೆದೊಯ್ದು  ಇವರಿಗೆ ಬೇಕಾದ್ದೆಲ್ಲ ಕೊಡಿ ಎಂದು ಅದೇಶಿಸುತ್ತಿದರು.

ಬಾಲಂಗೋಚಿ.:

ವಕೀಲ ಸದಾಶಿವ ರಾಯರು ಇಳಿ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.ಅವರು ನಡೆದೇ

ಹೋಗುತ್ತಿದ್ದರು .ಅವರ  ನಂತರದ ತಲೆಮಾರಿನ ಬೋಳಂತ ಕೋಡಿ  ಈಶ್ವರ ಭಟ್ಟರೂ ಕನ್ನಡ ಸಂಘದ ಕಾರ್ಯ ಕೋರ್ಟ್ ಆಫೀಸ್

ಪತ್ರಿಕೋದ್ಯಮ ಕೆಲಸ ಎಂದು ನಡೆದು ಕೊಂಡೆ ಓಡಾಡಿದವರು .ಶಿವರಾಮ ಕಾರಂತರು  ಪರ್ಲಡ್ಕ ಮನೆಯಿಂದ ಪೇಟೆಗೆ ನಡೆದು


ಬಂದು ಹೋಗುತ್ತಿದ್ದರು.ಈಗ ನಮಗೆ ನಡೆಯುವುದಕ್ಕೆ ಅಭಿಮಾನ ಬಿಡುವುದಿಲ್ಲ.ಒಂದು ವೇಳೆ ಬಿಟ್ಟರೆ ರಸ್ತೆಯಲ್ಲಿ ಪಾದಚಾರಿಗಳಿಗೆ


ನಡೆಯಲು ಫುಟ್ ಪಾತ್ ಇಲ್ಲ ನಾನು ಈಗ ಎಲ್ಲಿಯಾದರೂ ಪೇಟೆಯಲ್ಲಿ ನಡೆಯುವುದು ಕಂಡ ಪರಿಚಿತರು  ಡಾಕ್ಟರ್ ಕಾರ್


ತರಲಿಲ್ಲವೆ ಎಂದು ಕೇಳುತ್ತಾರೆ ,ಕೆಲವರು ಏನು ನಡೆಯುವುದು ,ಪ್ರಾಕ್ಟೀಸ್ ಸರಿಯಾಗಿ ನಡೆಯುತ್ತ ಇಲ್ಲವೇ ಎಂದು ಪ್ರಶಿಸುತ್ತಾರೆ.

ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು.ನಮ್ಮ ಮತ್ತು ಅಜ್ಜನ ಸಂಭಾಷಣೆಯಂತೆ.
ಬಾಲಂಗೋಚಿ 
ಇದನ್ನು ಪೋಸ್ಟ್ ಮಾಡಿದ ಮೇಲೆ ಈಗಿನ ತಲೆಮಾರಿನ ಕೆಲವರು ಕೋಮಣ ಎಂದರೆ ಏನೂ ಎಂದು ನನ್ನಲ್ಲಿ ವಿಚಾರಿಸಿದರು .ಇದು ಆಗ ನಾವು ಮಾನ ಮುಚ್ಚಲು  ಬಳಸುತ್ತಿದ್ದ  ಬಟ್ಟೆ  ಮಕ್ಕಳು ಹಳೇ ಬಿಳಿ ಪಂಚೆಯನ್ನು ಆಯತ ಆಕಾರದಲ್ಲಿ ಕಟ್ ಮಾಡಿ ಉಡಿದಾರಕ್ಕೆ ಸಿಕ್ಕಿಸಿ ಕೊಳ್ಳುತ್ತಿದ್ದೆವು .ಹಿರಿಯರು  ಈ ಆಕಾರದ ಕೋರಾ ಬಟ್ಟೆಯ ಸಿದ್ದ ವಸ್ತ್ರ .ಮತ್ತು ಹೆಚ್ಚು ಜನಪ್ರಿಯ ಚೌಕಕಾರದ ಕೆಂಪು ಬಿಳಿ ಬಣ್ಣದ  ಕೌಪೀನ (ಸಂಸ್ಕೃತ) ಉಡುತ್ತಿದ್ದರು .
              ಕೆಳಗೆ ತೋರಿಸಿದ  ಡಿಸೈನ್ ಆಕಾರ ಚೌಕ
ಈ ಚೌಕ  ಬಟ್ಟೆ ಬಹುಪಯೋಗಿ .ಉಟ್ಟರೆ ಕೌಪೀನ ವಾದೆ ,ಕರದಲ್ಲಿ ಕರವಸ್ತ್ರ ವಾದೆ ,ತಲೆಗಿಟ್ಟರೆ ಟೋಪಿಯದೆ ,ಅಡಿಗೆ ಮನೆಯಲ್ಲಿ ಚಹಾ ,ಕಾಯಿ ಹಾಲು ಸೋಸು ವ  ಅರಿಪ್ಪೆಯಾದೆ .ನೀ ನಾರಿ ಗಾದೆಯೋ ಎಲೆ ಮನವಾ -ಇದನ್ನು ನೀನು ಅರಿಗಾದೆಯೋ ,ನೀ  ನಾರಿ(ಹೆಣ್ಣು )ಗಾದೆಯೋ ಎಂದು ಅವರವರ ಭಾವಕ್ಕೆ ಸರಿಯಾಗಿ ವಿಮರ್ಶೆ ಮಾಡುವರು.  ಕೌಪೀನ ಮತ್ತು ಮೇಲೆ ಒಂದು ತುಂಡು ಬಟ್ಟೆ ಕೃಷಿಕರಿಗೆ   ಬಹಳ ಅನುಕೂಲ .ಅದೇ  ನಮ್ಮ ಕಾಲದ ವಿ ಐ ಪಿ ,ಜೋಕಿ .ಅದನ್ನು ಉಟ್ಟು ಕೊಂಡು ನಾವು ಕ್ರಿಕೆಟ್ ,ಕಬಡ್ಡಿ ಆಡಿದ್ದೇವೆ .
ನಮ್ಮ ಅಜ್ಜಿ ಮಾಂಬಳ ಎರೆದು ಒಣಗಿಸಿ ಆಯತ  ಕೋಮಣ ರೂಪದಲ್ಲಿ ತುಂಡು ಮಾಡಿ ಶೇಖರಿಸುತ್ತಿದ್ದರು ನಾವು ಅವರನ್ನು ನನಗೊಂದು ಕೋಮಣ ನನಗೊಂದು ಎಂದು ಪೀಡಿಸುತ್ತಿದ್ದೆವು ..ನೀವು ನಮ್ಮನ್ನು ತಮಾಷೆ ಮಾಡಬೇಡಿ .ಈ ತುಂಡು ಬಟ್ಟೆ ಆಗ ನಮ್ಮ ಮಾನ ಸರಿಯಾಗಿ  ಮುಚ್ಚುತ್ತಿತ್ತು .ಈಗಿನ ಫ್ಯಾಷನ್ ಬಟ್ಟೆಗಳು ಮುಚ್ಚುವುದಕ್ಕಿಂತ ಹೆಚ್ಚು ಪ್ರದರ್ಶಿಸುತ್ತವೆ ಎಂದು ಅಜ್ಜರ ಸಂಘದ ಆರೋಪ .
ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ

ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ

ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ

ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ

 

ಡೆಂಗು (ಡೆಂಗೆ) ಜ್ವರ


ಇತ್ತೀಚಿಗೆ  ಸುದ್ದಿಯಲ್ಲಿ ಇರುವ ವ್ಯಾಧಿ. ಇದು ವೈರಸ್ ನಿಂದ ಬರುವ ಕಾಯಿಲೆ .ರೋಗ ಪೀಡಿತ

ವ್ಯಕ್ತಿಯ ರಕ್ತ ಹೀರಿದ  ಈಡಿಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವ ಕಾಯಿಲೆ.


ಸೊಳ್ಳೆ ಕಡಿದು ನಾಲ್ಕರಿಂದ ಏಳು ದಿನಗಳಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತವೆ.
ರೋಗ ಲಕ್ಷಣಗಳು

ಜ್ವರ ,ತಲೆ ನೋವು ,ಮೈಕೈ ನೋವು ,ಸಂಧಿ ನೋವು ,ಹೊಟ್ಟೆ ನೋವು ,ವಾಂತಿ ಮುಖ್ಯ

ಲಕ್ಷಣಗಳು.ಎಲುಬೇ ಒಡೆದು ಹೋಗುವಷ್ಟು ನೋವು ಇರುತ್ತಾದ್ದರಿಂದ ಬ್ರೇಕ್ ಬೋನ್ ಫೀವರ್

ಎಂದೂ ಈ ರೋಗವನ್ನು ಕರೆಯುವುದುಂಟು.ಕೆಲವರಿಗೆ ಮೈಮೇಲೆ ಕೆಂಪು ಬೀಳ ಬಹುದು.ಅದು

ತುರಿಕೆ ಉಂಟು ಮಾಡಲೂ ಬಹುದು.ತೀವ್ರ ತರ ರೋಗ ದಲ್ಲಿ ರಕ್ತ ಸ್ರಾವ ,ರಕ್ತದ ಒತ್ತಡ ಕುಸಿತ

ಉಂಟಾಗ ಬಹುದು.
                                         
                                                           ಡೆಂಗು ವಿನಲ್ಲಿ ಬಿದ್ದ ಕೆಂಪು

ಪರೀಕ್ಷಣಗಳು

ರಕ್ತದಲ್ಲಿ ಬಿಳಿ ಕಣಗಳು ,ಪ್ಲೇಟಿಲೆಟ್ ಕಣಗಳು ಕಮ್ಮಿಯಾಗಿರುತ್ತವೆ. ಡೆಂಗು ರೋಗದ ಕಾರ್ಡ್

ಟೆಸ್ಟ್ ಸಾಮಾನ್ಯವಾಗಿ ಎಲ್ಲೆಡೆ ಲಭ್ಯವಿರುತ್ತದೆ. ಇದು ರೋಗ ಲಕ್ಷಣ ಗಳನ್ನು ಗಮನಕ್ಕೆ

ತೆಗೆದುಕೊಂಡು ನಿರ್ದರಿಸಿದರೆ ವಿಶ್ವಾಸಾರ್ಹ .ಇದರಲ್ಲಿ NS1 ಆಂಟಿಜನ್ ರೋಗ ಲಕ್ಷಣಗಳು

ಕಂಡೊಡನೆ  ಪೋಸಿಟಿವ್ ಆಗಿರುವುದು.    IgM ಆಂಟಿಬಾಡಿ ನಂತರ ಬರುವುದು.ಕೊನೆಗೆ

ದಿನಗಳ ನಂತರ IgM  ಆಂಟಿಬಾಡಿ ಕಂಡು ಬಂದು ರೋಗ ಗುಣವಾದ ಮೇಲೂ ವರ್ಷಗಳ

ತನಕ ರಕ್ತದಲ್ಲಿ ಇರುವುದು.ಆದುದರಿಂದ IgG ಮಾತ್ರ ಪೊಸಿಟಿವ್ ಇದ್ದರೆ ಅದನ್ನು ಈಗಿನ

ಕಾಯಿಲೆಯ ಅಧಾರ ಆಗಿ ಪರಿಗಣಿಸುವುದು ಕಷ್ಟ.ಇದೇ ಅಂಶಗಳನ್ನು ಎಲಿಸಾ ಎಂಬ

ಪರೀಕ್ಷೆಯಲ್ಲಿ ಮಾಡುತ್ತಾರೆ ,ಇದು ಹೆಚ್ಚು ವಿಶ್ವಾಸಾರ್ಹ .ಈ ಪರೀಕ್ಷನವನ್ನೇ ಸರಕಾರವೂ

ಅಂಕಿ ಅಂಶಗಳಿಗೆ ಪರಿಗಣಿಸುತ್ತದೆ.

ರೋಗದ ಉಪಚಾರ
ಇದು ವೈರಸ್ ನಿಂದ ಉಂಟಾಗುವ ಕಾಯಿಲೆ .ಹೆಚ್ಚಿನವರಲ್ಲಿ ತನ್ನಿಂದ ತಾನೇ ಗುಣವಾಗುವುದು.

ಜ್ವರ ಮೈಕೈ ನೋವಿಗೆ ಪ್ಯಾರಸಿಟಮಾಲ್ ಮಾತ್ರೆ ಕೊಡುತ್ತಾರೆ. ದೈಕ್ಲೊಫೆನಕ್,ಇಬುಫ್ರೋಫೇನ್

ನಂತಹ  ಔಷಧಿಗಳು ಪ್ಲಾಟಿಲೆಟ್ ಕಣಗಳ ಮೇಲೆ ವ್ಯತಿರಿಕ್ತ  ಪರಿಣಾಮ ಬೀರುವುದರಿಂದ

ಅವುಗಳನ್ನು ದೂರವಿಡಬೇಕು.ಅತಿ ವಾಂತಿ ಇದ್ದರೆ ಡ್ರಿಪ್ ಮೂಲಕ ಆಹಾರ ಕೊಡುವರು.

ಆಂಟಿಬಯೋಟಿಕ್ ಗಳು ಪರಿಣಾಮ ಕಾರಿ ಅಲ್ಲ.ಚರ್ಮದಲ್ಲಿ ತೀವ್ರ ತುರಿಕೆ ಇದ್ದರೆ ಶಮನಕ್ಕೆ

ಮಾತ್ರೆ ಕೊಡುವರು.ರಕ್ತ ಸ್ರಾವ ಇದ್ದರೆ ಮತ್ತು ಪ್ಲಾಟಿ ಲೆಟ್ ಬಹಳ ಕಡಿಮೆ ಆದರೆ –(ಎಂದರೆ

ಘನ ಮಿಲಿ ಲೀ ಯಲ್ಲಿ ೧೦೦೦೦ ಕ್ಕಿಂತ ಕಡಿಮೆ- ) ಪ್ಲಾಟಿ ಲೆಟ್ ಕೊಡಬೇಕಾಗ ಬಹುದು.

ವಿಶ್ವ ಆರೋಗ್ಯ ಸಂಘ ದ ಮಾರ್ಗ ಸೂಚಿಯಂತೆ ರಕ್ತ ಸ್ರಾವ ಮುಂತಡೆಯಲು ಪ್ಲಾಟಿ ಲೆಟ್

ಕೊಡುವ ಅವಶ್ಯವಿಲ್ಲ .

ಪ್ಲಾಟಿಲೆಟ್ ಗಳ ಬಗ್ಗೆ ನನ್ನ ಬ್ಲಾಗ್ “ಪ್ಲಾಟಿಲೆಟ್  ಗಳೆಂಬ ರಕ್ತ ಸ್ಥಂಭಕ “ ಓದಿರಿ.

ಕೆಲವೊಮ್ಮೆ ಡೆಂಗು ಜ್ವರದಲ್ಲಿ ರಕ್ತ ನಾಳ ಗಳಿಂದ ನೀರು ಸೋರಿ ಹೊಟ್ಟೆ ,ಎದೆಗಳಲ್ಲಿ

ತು೦ಬುವುದಲ್ಲದೆ ರಕ್ತ ದೊತ್ತದ ಕುಸಿದು ರೋಗಿ ಅಪಾಯ ಕ್ಕೊಳಗಾಗುವನು .ಇಂತಹವರನ್ನು

ತೀವ್ರ ನಿಗಾ ದ ಲ್ಲಿ ಇಟ್ಟು ಉಪಚರಿಸುವರು.ಆದರೆ ಇಂತಹ ಸಂಭವ ಬಹು ಕಡಿಮೆ.

ಡೆಂಗು ಜ್ವರ  ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವುದಿಲ್ಲ .ಒಮ್ಮೆ ಡೆಂಗು ಬಂದರೆ ಆ

ಜಾತಿಯ ಡೆಂಗು ಪುನಃ ಬರುವುದು ಕಮ್ಮಿ.ಆದರೆ ವೈರಾಣುಗಳು ಆಗಾಗ್ಗೆ ವೇಷ

ಬದಲಿಸುತ್ತಿರುವುದರಿಂದ  ಇನ್ನೊಮ್ಮೆ ಬರದು ಎನ್ನಲಾಗದು.ಪಥ್ಯ ದ ಅಗತ್ಯ ಇಲ್ಲ.

ರೋಗ ಬರದಂತೆ ಚುಚ್ಚು ಮದ್ದು ಇಲ್ಲ. ಸೊಳ್ಳೆ ಕಚ್ಚದಂತೆ ನೋಡಿ ಕೊಳ್ಳಬೇಕು.

ಈಡಿಸ್ ಸೊಳ್ಳೆಯ ಬಗ್ಗೆ ನನ್ನ ಬ್ಲಾಗ್ ಓದಿರಿ.

ಗುರುವಾರ, ಜುಲೈ 11, 2013

ಈಡಿಸ್ ಈಜಿಪ್ಟಿಯಿ ಸೊಳ್ಳೆ

                                                         
ಈಡಿಸ್ ಸೊಳ್ಳೆ


ಈ ಸೊಳ್ಳೆ  ದೇವರಿಂದ ಸೃಷ್ಟಿಸಲ್ಪಟ್ಟು ಸ್ವಚ್ಚಂದವಾಗಿ ಬದುಕಿಕೊಂಡು ಇತ್ತು. ಯಾರಿಗೂ ಅದರ ಇರುವಿನ ಅರಿವು ಇರಲಿಲ್ಲ.

ಹೂವಿನ ಮಕರಂದ ಅವುಗಳ ಆಹಾರ. ಆದರೆ ಹೆಣ್ಣು  ಸೊಳ್ಳೆಗೆ ಮೊಟ್ಟೆಗಳನ್ನು ಪೋಷಿಸಲು  ಸಸ್ತನಿಗಳ 

ರಕ್ತ ಬೇಕು. ಅದಕ್ಕೆ ಸಿಕ್ಕುವುದು ಬಡಪಾಯಿ ಮನಷ್ಯರು. ಸೊಳ್ಳೆಗಳಲ್ಲಿ ಇದು ಮೇಲ್ಜಾತಿಯದು ಎನ್ನ ಬಹುದು.ಏಕೆಂದರೆ 

ಅದಕ್ಕೆ ಕೊಳಕು ನೀರು ಆಗದು .ಶುದ್ದ ನೀರೆ ಬೇಕು.ಕ್ಲೋರಿನೇಟೆದ್  ನೀರೂ ಆಗಬಹುದು.ಡಬ್ಬ ,ಹೂ ಚಟ್ಟಿ ,ಮರದ ಪೊಟರೆ

ಟಾಯ್ಲೆಟ್ ಗುಂಡಿ ಯಂತಹ ಕಡೆ ನಿಂತ ಶುದ್ದ  ನೀರಿನಲ್ಲಿ ಮೊಟ್ಟೆ ಇಡುವುದು.

ಮೊಟ್ಟೆ ,ಲಾರ್ವಾ ಹಂತ ದಾಟಿ ಸೊಳ್ಳೆ ರೂಪ ಧರಿಸುವುದು.ಹೆಣ್ಣು ಸೊಳ್ಳೆ ಮಾತ್ರ ನಮಗೆ ಕಚ್ಚುವುದು. ಅದೂ 

ತನ್ನ ಮೊಟ್ಟೆಗಳ ಆರೈಕೆಗಾಗಿ. ಈಡಿಸ್ ಸೊಳ್ಳೆ  ಸಂಗೀತ ಪ್ರೇಮಿ ಅಲ್ಲ. ಆದುದರಿಂದ ಅನಾಫಿಲಿಸ್ ಸೊಳ್ಳೆಯಂತೆ 

ನಮ್ಮ ಕಿವಿಯ  ಹತ್ತಿರ  ಆಲಾಪನೆ ಮಾಡುವುದಿಲ್ಲ.ಹಲವರು ಸೊಳ್ಳೆ ಕಡಿತವನ್ನಾದರೂ ಸಹಿಸಿಯಾರು ,ಆದರೆ 

ಅದರ ಸಂಗೀತವನ್ನಲ್ಲ.ನಸುಕು ಮತ್ತು ಸಂಧ್ಯೆ  ಇದು ರಕ್ತಕ್ಕಾಗಿ ಧಾಳಿ ಇಡುವುದು.ಮುಗಿಲು ಮತ್ತು ರಾತ್ರಿ ಮಂದ 

ಬೆಳಕು ಇದ್ದರೆ  ವೇಳೆ ತಪ್ಪಿ  ಕಡಿಯ ಬಹುದು. ಜಯಧ್ರಥನ ನೆನಪಾಗುತ್ತಿದೆಯೇ?

ಆದರೆ ಎಲ್ಲರೂ ತನ್ನ ಇರುವಿಕೆಯನ್ನು ಕಡೆಗಣಿಸಿದುದರಿಂದ  ಈಗ  ಈ ಸೊಳ್ಳೆ ತನ್ನ ಕಡಿತದೊಂದಿಗೆ 

ಡೆ೦ಗು ವೈರಸ್ ನ್ನು ಉಚಿತ ಕೊಡುಗೆ ಯಾಗಿ ಕೊಡುತ್ತಿದೆ. ಇದು(ದರ) ಕಡಿತದ ವ್ಯಾಪಾರ .ಡೆಂಗು ರೋಗಾಣುಗಳನ್ನು 

ಈಡಿಸ್ ಸೊಳ್ಳೆಗಳು ಉತ್ಪತ್ತಿ ಮಾಡಲಿಲ್ಲ . ಮಾನವನ ರಕ್ತದಿಂದಲೇ ಅದಕ್ಕೆ ಬಂದ ಬಳುವಳಿ.ಅದು 

ನಿಸರ್ಗದ ಆಣತಿಯಂತೆ ಮನುಷ್ಯನನ್ನು ಕಚ್ಚಿದಾಗ ವೈರಸ್ ಹರಡುವುದು.

ಈಡಿಸ್ ಸೊಳ್ಳೆ ತುಂಬಾ ಎತ್ತರ ,ದೂರ ಹಾರದು . ಮನುಷ್ಯನ ಕಾಲಿಗೆ ,ಕುರ್ಚಿಗಳ ರಂಧ್ರದ ಮೂಲಕ 

ತೊಡೆ  ಬಾಗಕ್ಕೆ ಕಚ್ಚುವುದು ಹೆಚ್ಚು.

ಡೆ೦ಗು ,ಚಿಕೂನ್ಗುನ್ಯಾ ಕಾಯಿಲೆ ಪ್ರಸಾರದಿಂದ ಪ್ರಸಿದ್ದಿಗೆ ಬಂದ ಈ ಸೊಳ್ಳೆಗೆ ಮನೆ ಸುತ್ತ ನೀರು ನಿಲ್ಲದಂತೆ ಮಾಡಿದರೆ 

ಒಂದು ವೇಳೆ ನೀರು ನಿಲ್ಲಲೇ ಬೇಕಾದರೆ ಗಪ್ಪಿ ಮೀನುಗಳನ್ನು  ಸಾಕಿದರೆ ಹತೋಟಿಯಲ್ಲಿ ಇದ ಬಹುದು.

ಎಲ್ಲೆಡೆ ನೀರು ನಿಲ್ಲುವ ಕರಾವಳಿ ಜಿಲ್ಲೆಯಲ್ಲಿ ಇದು ಎಷ್ಟು ಸಾಧ್ಯ?
(ಆಫ್ರಿಕಾದಲ್ಲಿ ಹಳದಿ ಜ್ವ್ರರ ಹರಡುವುದೂ ಇದೇ ಸೊಳ್ಳೆ)

ಬುಧವಾರ, ಜುಲೈ 10, 2013

ಪ್ರೊಫೆಸ್ಸರ್ ಡಾ ಕೌಲ್ ಗುಡ್

ನಾನು ಎಂ ಬಿ ಬಿ ಎಸ  ಓದಿದ್ದು ಕೆ ಎಂ ಸಿ ಹುಬ್ಬಳ್ಳಿ ಎಂದರೆ ಈಗಿನ ಕಿಮ್ಸ್ ನಲ್ಲಿ . ೧೯೭೬ -೮೧. ಅದು ಈ ಸಂಸ್ಥೆಯ ಸುವರ್ಣ

ಯುಗ ಅಂತ್ಯವಾಗುತ್ತಿದ್ದ ದಿನಗಳು.ಉತ್ತರ ಕರ್ನಾಟಕದ ಹೆಮ್ಮೆಯ ಮೆಡಿಕಲ್  ಕಾಲೇಜ್.ಅದರ ಕಟ್ಟಡಗಳು ಖ್ಯಾತ

ಸಿವಿಲ್ ಇಂಜಿನಿಯರ್ ಪ್ರೊಫ್  ಅಡ್ಕೆಯವರ ಮಾರ್ಗದರ್ಶನದಲ್ಲಿ ನಿರ್ಮಿತವಾಗಿದ್ದು ಇಡೀ ಕ್ಯಾಂಪಸ್ ನೂರಾರು ಎಕರೆ

ಪ್ರದೇಶದಲ್ಲಿ ಹರಡಿದೆ.ಹುಬ್ಬಳ್ಳಿ ಯಾ ವಿದ್ಯಾ ನಗರದ ಈ ಜಾಗ ಹೂ ತೋಟಗಳಿಂದ ತುಂಬಿ ನೋಡಲು ನಯನ ಮನೋಹರ.

ದಾರಿಯುದ್ದಕ್ಕೂ ಮೇ ಫ್ಲವರ್ ಮತ್ತು ಗುಲ್ ಮೊಹರ್ ಗಿಡಗಳು ಸರತಿಯಲ್ಲಿ ವರುಷವಿಡೀ ಹೂಗಳಿಂದ ಕಂಗೊಳಿಸುತ್ತಿದ್ದವು.

                                             ಕಾಲೇಜ್ ಕಟ್ಟಡದ ವಿಹಂಗಮ ನೋಟ                                                                                            

ಕ್ಯಾಂಪಸ್ ರಸ್ತೆಗಳು


ಕಾಲೇಜ್ ನ  ಹೆಬ್ಬಾಗಿಲು ಪ್ರವೇಶಿಸುವಾಗ ರೋಮಾಂಚನ ಆಗುತ್ತಿತ್ತು

ನಾನು ಅಲ್ಲಿ ಕಲಿಯುತ್ತಿದ್ದ ವೇಳೆ ಕೌಲ್ಗುಡ್ ಸಹೋದರರೆಂದು ಪ್ರಖ್ಯಾತರಾದ  ಡಾ ಎಸ ಆರ್ ಕೌಲ್ ಗುಡ್ ಮತ್ತು 

ಎಸ ಏನ್ ಕೌಲ್ ಗುಡ್ ನಮ್ಮ ಪ್ರಾಧ್ಯಾಪಕರಾಗಿದ್ದ್ದರು. ಮೊದಲನೆಯವರು ಸರ್ಜರಿ ವಿಭಾಗದಲ್ಲಿ ಇದ್ದರೆ 

ಇನ್ನೊಬ್ಬರು  ಗೈನಕೊಲೋಜಿ ಪ್ರೊಫೆಸ್ಸರ್.ಸರ್ಜರಿಯವರು ಸ್ತಿತ ಪ್ರಜ್ನ ,ಮಿತ ಭಾಷಿ .ಗ್ಯ್ನೆನಕೊಲೋಜಿ ಯವರು 

ಭಾವ ಜೀವಿ ,ಮಾತುಗಾರ .ಇಬ್ಬರೂ ಅತ್ಯುತ್ತಮ ಅಧ್ಯಾಪಕರೂ ,ಶಸ್ತ್ರ ಚಿಕಿತ್ಸಾ ನಿಪುಣರೂ ಆಗಿದ್ದರು.ನನ್ನ 

ಭಾಗ್ಯವೆಂದರೆ ಇವರಿಬ್ಬರ ಯೂನಿಟ್ ನಲ್ಲಿ ಮೊದಲು ವಿದ್ಯಾರ್ಥಿಯಾಗಿ ,ನಂತರ  ಹೌಸ್ ಸರ್ಜನ್ ಆಗಿ 

ಕೆಲಸ ಮಾಡುವ ಸುಯೋಗ ಲಭಿಸಿದ್ದುದು.ಇವರಲ್ಲಿ  ಡಾ ಎಸ ಆರ್ ಕೌಲ್ ಗುಡ್  ಈಗಲೂ ಧಾರವಾಡದಲ್ಲಿ 

ಸೇವೆ ಸಲ್ಲಿಸುತ್ತಿದ್ದಾರೆ.ಸರಳ ಜೀವಿಗಳು ,ಶುದ್ದ ಹಸ್ತರೂ ಆಗಿದ್ದ  ಇವರಲ್ಲಿ ಇದ್ದ ವಾಹನ ಸ್ಕೂಟರ್.

ಗ್ಯ್ನೆಕೊಲೋಜಿ  ಕೌಲ್ ಗುಡ್ ಅವರ  ಓ ಪಿ ಡಿ ಬೆಳಿಗ್ಗೆ ಎಂಟರಿಂದ ಆರಂಭವಾಗಿ   ಸಾಯಕಾಲ  ಮೂರಾದರೂ 

ಮುಗಿಯುತ್ತಿರಲಿಲ್ಲ.ಎಲ್ಲಾ ರೋಗಿಗಳಿಗೂ ಅವರೇ ಆಗ ಬೇಕು .ಎಷ್ಟು ಹೊತ್ತು ಕಾಯಲೂ ತಯಾರಿದ್ದರು.ಓ ಪಿ ಡಿ ಮುಗಿಸಿ 

ಮನೆಗೆ ತೆರಳಿ ಊಟದ ಶಾಸ್ತ್ರ ಮುಗಿಸಿ  ರೌಂಡ್ಸ್ ಗೆ ಬರುತ್ತಿದ್ದರು .ಅಶ್ಟರಲ್ಲಿ  ಪಿ.ಜಿ . ಮತ್ತು  ಇಂಟರ್ನ್ಗಳು 

ಅಡ್ಮಿಟ್ ಆದ ಕೇಸುಗಳ  ವಿವರ ರಡಿ ಮಾಡಿ ಇದ ಬೇಕು.ಸಣ್ಣ ಲೋಪಗಲಿದ್ದರೂ  ಚಾವಣಿ ಹಾರುವಂತೆ 

ಆವೇಶದಿಂದ ಬೈಯುವರು.ಅದೇ  ವಿದ್ಯಾರ್ಥಿಗಳು ಕಲಿಯುವಾಗ ಅಕಾಸ್ಮಾತ್ ದೊಡ್ಡ ತಪ್ಪುಗಳಾದರೆ ತಾಳ್ಮೆಯಿಂದ 

ಹೇಳಿಕೊಟ್ಟು ತಿದ್ದುತ್ತಿದ್ದರು.ಅವರ ರೋಗಿಗಳು ಸ್ತ್ರೀಯರು ಮಾತ್ರ .ಎಲ್ಲಿಯಾದರೂ ಗಂಡಂದಿರು ಹೆಂಡತಿಗೆ 

ರಕ್ತ ಕೊಡಲು ನಿರಾಕರಿಸಿದರೆ ಸಿಟ್ಟಿಗೆದ್ದು ಹೊಡೆದದ್ದೂ ಉಂಟು.ಇಲ್ಲವಾದರೆ ನಾನೇ ರಕ್ತ ಕೊಡುತ್ತೇನೆ ಎಂದು ಕೊಟ್ಟದ್ದು 

ನೂರಾರು ಭಾರಿ.ಇವರು ಎಷ್ಟು ಶುದ್ದ ಹಸ್ತರೆಂದರೆ  ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ಮಾಡಿದ್ದಕ್ಕೆ ಸರಕಾರ 

ಕೊಡ ಮಾಡುತ್ತಿದ್ದ ಹಣವನ್ನು ತೆಗೆದು  ಕೊಳ್ಳದೇ ಬಡ ರೋಗಿಗಳ  ನಿಧಿಗೆ ಸಮರ್ಪಿಸುತ್ತಿದ್ದರು. ಖ್ಯಾತ ಲೇಖಕಿ 

ಸುಧಾ ಮೂರ್ತಿಯವರ ಅಕ್ಕ ಸುನಂದಾ ಕುಲಕರ್ಣಿ ಇವರ ವಿಭಾಗ ದಲ್ಲಿ ಲೆಕ್ಚರರ್ ಆಗಿ ಕೆಲಸ  ಮಾಡುತ್ತಿದ್ದರು.

ಇವರು ಪಾಠ ಮಾಡುವಾಗ  I may not be that good but I am Koulgud ಎಂದು ತಮಾಷೆಗೆ ಹೇಳುತ್ತಿದ್ದರು.ಇವರು 

ಮೈಸೂರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.ಹಗಲು ರಾತ್ರಿಯೆನ್ನದೆ 

ವಿಶ್ರಾನ್ತಿಯಿಲ್ಲದೆ  ಬಡ ರೋಗಿ ಮತ್ತು (ಬಡ) ವಿದ್ಯಾರ್ಥಿಗಳ ಸೇವೆಯಲ್ಲಿ ಜೀವ ತೇದ ಅವರ ನೆನಪಿಗೆ 

ವಂದನೆಗಳು.

ಇಬ್ಬರು ಕೌಲ ಗುಡ್ ಇದ್ದುದರಿಂದ ಕನ್ಫ್ಯೂಷನ್ ಇರುತ್ತಿತ್ತು.ಅದಕ್ಕಾಗಿ ಅವರನ್ನು ಪಿ.ಆರ್  ಮತ್ತು ಪಿ ವಿ ಕೌಲ್ ಗುಡ್ ಎಂದೂ 

ವಿದ್ಯಾರ್ಥಿಗಳು ಗುರುತಿಸುತ್ತಿದ್ದರು.

ಬಾಲಂಗೋಚಿ:  ಕ್ಯಾಲಿಕಟ್ ಮೆಡಿಕಲ್ ಕಾಲೇಜ್ ನಲ್ಲಿ ಇಬ್ಬರು  ಡಾಕ್ಟರ  ಭಟ್ ಇದ್ದರು.ಒಬ್ಬರು  ಯುರೋಲೋಜಿ 

ವಿಭಾಗದಲ್ಲಿ ಇದ್ದಾರೆ ಇನ್ನೊಬ್ಬರು ಕಣ್ಣಿನ ತಜ್ಞರು. ಆದ್ದರಿಂದ  ನೀವು ಡಾ ಭಟ್ ರನ್ನು ವಿಚಾರಿಸಿದರೆ  "ನಿನ್ಗಳುಕ್ಕು 

ಮೂತ್ರ ಭಟ್ ವೇನೋ ಅಲ್ಲ ನೇತ್ರ ಭಟ್ ವೇನೋ (ನಿಮಗೆ ಮೂತ್ರ ಭಟ್ ಬೇಕೋ ಅಲ್ಲ ನೇತ್ರ ಭಟ್ ಬೇಕೋ?)

ಎಂದು ಅಲ್ಲಿಯ ಸಿಬ್ಬಂದಿ ಕೇಳುತ್ತಿದ್ದರು!

ಭಾನುವಾರ, ಜುಲೈ 7, 2013

ಹಲಸಿನ ಮೇಳ

                                                 

ಈದಿನ  ಅಡ್ಯನಡ್ಕದಲ್ಲ್ಲಿ  ಹಲಸಿನ ಮೇಳಕ್ಕೆ  ಹೋಗಿದ್ದೆ. ಬಂಧು  ಮುಳಿಯ ವೆಂಕಟ ಕೃಷ್ಣ ಶರ್ಮ ಮೊದಲೇ 

ಇಂತಹ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಿದ್ದರು. ಅವರು ಪ್ರಗತಿಪರ ಕೃಷಿಕ. ವೈಜ್ಞಾನಿಕ ವಾಗಿ  ದೊಡ್ಡ ಮಟ್ಟದಲ್ಲಿ 

ಹಲಸಿನ ಕೃಷಿ ಕೈಕೊಂಡಿದ್ದಾರೆ.ಕಳೆದ ವರ್ಷ ನ್ಯಾಚುರಲ್ ಐಸ್ ಕ್ರೀಂ ನವರಿಗಾಗಿ ೨೭ ಟನ್ ಹಲಸಿನ ಹಣ್ಣು 

ಮಾರಾಟ ಮಾಡಿದ್ದಾರೆ.ಅಡಿಕೆ ಪತ್ರಿಕೆ ,ವಾರನಾಶಿ ಪ್ರತಿಸ್ತಾನ  ಗಳ ಪ್ರಯೋಜಕತೆ ಯಲ್ಲಿ  ಖ್ಯಾತ ಪರಿಸರ ,ಕೃಷಿ ತಜ್ಞ 

ಶ್ರೀ  ಪಢ್ರೆಯ ವರ  ಮುಂದಾಳುತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಡಿ ಮಳೆಯನ್ನೂ ಲೆಕ್ಕಿಸದೆ  ಸಾವಿರಾರು ಮಂದಿ 

ಆಸಕ್ತರು ಬಂದಿದ್ದರು.

ಶ್ರೀ   ಪಢ್ರೆ

ಹಲಸು ಒಂದು ಕಲ್ಪ ವೃಕ್ಷ .ಅದರ ಎಲೆಯನ್ನು ದೊ ನ್ನೆ ತಯಾರಿಸಲು, ಕಡುಬು ಸುತ್ತಲು ,ಕಟ್ಟಿಗೆ ಹೋಮಕ್ಕೆ ,ಮರ ಬಾಗಿಲು 

ಪೀತೊಪಕರಣ  ತಯಾರಿಸಲು,  ಎಳೆಯ ಹಲಸಿನ ಕಾಯಿ ಪಲ್ಯಕ್ಕೆ ,ಬಲಿತ ಕಾಯಿ ಪಲ್ಯ,ದೋಸೆ ,ಚಿಪ್ಸ್ ,ಹಪ್ಪಳ ಇತ್ಯಾದಿ 

ಮಾಡಲು ಹಣ್ಣು ತಿನ್ನಲು ,ಪಾಯಸಕ್ಕೆ ,ಸುಟ್ಟವು, ಹಣ್ಣನ್ನು ಕಾಯಿಸಿ  ಪೆರಟಿ ಮಾಡಿ  ಕಾದಿರಿಸಿ ಪಾಯಸ ಮಾಡಿ ಇಲ್ಲವೇ ಹಾಗೆಯೇ 

ತಿನ್ನುತ್ತಾರೆ. ಇನ್ನು ಹಲಸನ್ನು ಉಪ್ಪಿನಲ್ಲಿ ಹಾಕಿ  ಶೇಖರಿಸಿದರೆ  ಅದು ಆಪತ್ಭಾಂಧವ ತರಕಾರಿ , ಅದರಿಂದ ಪಲ್ಯ ,ರೊಟ್ಟಿ

ಉಂಡಲ ಕಾಳು ಎಂಬ ತಿನಿಸು ಮಾಡುತ್ತಾರೆ.ಹಲಸಿನ  ಬೀಜವೂ ಸಸಾರಜನಕ ಯುಕ್ತ  ಪೌಸ್ತಿಕ ವಸ್ತು.ಅದನ್ನೂ 

ಪಲ್ಯ ,ಹೋಳಿಗೆ ಮಾಡಲು ಬಳಸುತ್ತಾರೆ.ಹಿಂದಿನ ಕಾಲದಲ್ಲಿ  ಮನೆ ಹೆಣ್ಣು ಮಕ್ಕಳು ಹಲಸಿನ  ಬೀಜ ಕೊಟ್ಟು 

ಒಲಿ ಚಾಪೆ ,ತಡ್ಪೆ ಇತ್ಯಾದಿಗಳನ್ನು ಬಾರ್ಟರ್ ಪದ್ದತಿಯಲ್ಲಿ ಕೊಳ್ಳುತ್ತಿದ್ದರು.ಹಲಸಿನ ಮಯಣವನ್ನು ಒಂದು ಕೋಲಿನ ತುದಿಗೆ 

ಉಂಡೆಯಾಗಿ ಶೇಖರಿಸಿ ಪಾತ್ರೆಗಳ  ತೂತು ಗಳನ್ನ ಮುಚ್ಚಲು ಬಿಸಿ ಮಾಡಿ ಬಳಸುತ್ತಿದ್ದರು .






ಎಸ್ಟೋ ಹಲಸಿನ ಹಣ್ಣುಗಳು ಕೊಳೆತು ಹೋಗುತ್ತವೆ. ಅವುಗಳ ಮೌಲ್ಯ ವರ್ಧನೆ ,ಶೇಖರಣೆ 

ಇತ್ಯಾದಿಗಳ ಬಗ್ಗೆ  ಉಪಾನ್ಯಾಸ ,ಪ್ರಾತ್ಯಕ್ಷಿಖೆ  ಗಳು ಇದ್ದವು .ಮದ್ಯಾಹ್ನ  ಊಟಕ್ಕೆ  ಹಲಸಿನ ಗಸಿ.

ಮಜ್ಜಿಗೆ ಹುಳಿ, ಹಲಸಿನ ಪಾಯಸ ,ಹಲಸಿನ ಹಣ್ಣು ,ಕೊನೆಗೆ ಎಲ್ಲರಿಗೂ  ನ್ಯಾಚುರಲ್ ಐಸ್ ಕ್ರೀಂ ಅವರ 

ಸ್ವಾದಿಸ್ಥ್ಯ ಮಾಯ ಹಲಸಿನ ಹಣ್ಣಿನ ಐಸ್ಕ್ರೀಂ.

ಹಲಸಿನ  ಹಣ್ಣಿನ  ವೈಜ್ಞಾನಿಕ ಹೆಸರು  ಆರ್ಕರ್ಟೋಕಾರ್ಪಸ್ ಹಿಟಿರೋಫಿಲಾಸ್.

ಅದರ ಲ್ಲಿ  ಇರುವ  ಅಹಾರಾಂಶಗಳು 

     
                                  
ಹಲಸಿನ ಕಾಯಿಯ  ಅಹಾರಾ೦ಶಗಳು 

Nutritional value per 100 g (3.5 oz)
Energy397 kJ (95 kcal)
Carbohydrates23.25 g
Sugars19.08 g
Dietary fiber1.5 g
Fat0.64 g
Protein1.72 g
Vitamin A equiv.5 μg (1%)
beta-carotene61 μg (1%)
lutein and zeaxanthin157 μg
Thiamine (vit. B1)0.105 mg (9%)
Riboflavin (vit. B2)0.055 mg (5%)
Niacin (vit. B3)0.92 mg (6%)
Pantothenic acid (B5)0.235 mg (5%)
Vitamin B60.329 mg (25%)
Folate (vit. B9)24 μg (6%)
Vitamin C13.7 mg (17%)
Vitamin E0.34 mg (2%)
Calcium24 mg (2%)
Iron0.23 mg (2%)
Magnesium29 mg (8%)
Manganese0.043 mg (2%)
Phosphorus21 mg (3%)
Potassium448 mg (10%)
Sodium2 mg (0%)
Zinc0.13 mg (1%



ಶನಿವಾರ, ಜುಲೈ 6, 2013

ಸ್ಟ್ರೋಕ್ ಅಥವಾ ಮೆದುಳಿನ ಆಘಾತ

ನಮ್ಮ ಶರೀರದ ಸಕಲ ಕಾರ್ಯಗಳನ್ನು ನಿಯಂತ್ರಿಸುವುದು ಮೆದುಳು. ದೊಡ್ಡ ಮೆದುಳಿನಲ್ಲಿ ಎಡ ಮತ್ತು ಬಲ ಎಂಬ ಎರಡು

ಭಾಗಗಳಿರುತ್ತವೆ.ಎಡದ ಮೆದುಳು ಶರೀರದ ಬಲದ ಭಾಗವನ್ನೂ ,ಮಾತನ್ನೂ ನಿಯಂತ್ರಿಸುತ್ತದೆ.ಬಲದ ಭ್ಹಾಗ  ಶರೀರದ ಎಡ

ಪಾರ್ಶ್ವವನ್ನು ನಡೆಸುತ್ತದೆ.ಮೆದುಳಿನ ಮುಂಬಾಗದಲ್ಲಿ ಚಲನೆಯ ಕೇಂದ್ರ ಇದ್ದರೆ ಪಾರ್ಶ್ವ ಶ್ರವಣ ,ಭಾವನೆ ಮತ್ತು ,ಸ್ಪರ್ಶದ

ಜ್ಞಾನ ಶೇಖರಿಸಿ ನಿಯಂತ್ರಿಸುತ್ತದೆ..ಹಿಂದಿನ ಭಾಗದಲ್ಲಿ ದೃಷ್ಟಿ ಗ್ರಹಣ ಕೇಂದ್ರ ಇದೆ.



ಮೆದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರ ಧಿಡಿರನೆ ವ್ಯತ್ಯಯವಾದರೆ ಸ್ಟ್ರೋಕ್ ಅಥವಾ ಮೆದುಳಿನ ಆಘಾತ 

ಸಂಭವಿಸುತ್ತದೆ.  ಅದು ಎಡ ಭಾಗದ ಚಲನ ಕೇಂದ್ರ ಕ್ಕಾದರೆ (ಮೋಟಾರ್ ಏರಿಯ )ಬಲ ಭಾಗದ ಪಾರ್ಶ್ವ ವಾಯು 

ಉಂಟಾಗುವುದು.ಮಾತೂ ನಿಲ್ಲ ಬಹುದು.ಮೆದುಳಿನ ಹಿಂಬಾಗ ದ ರಕ್ತ ಸಂಚಾರ ಚ್ಯುತಿಯಾದರೆ ಕಣ್ಣು ಸರಿಯಿದ್ದರೂ 

ದೃಷ್ಟಿ ಹೋಗುವುದು.ಇದನ್ನು ಕಾರ್ಟಿಕಲ್  ಬ್ಲೈಂಡ್ ನೆಸ್ ಎನ್ನುವರು.

ಸ್ಟೋಕ್ ಗೆ ಕಾರಣಗಳು

ಅತಿ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದಯ ಕಾಯಿಲೆಗಳು ,ಕೆಲವೊಮ್ಮೆ ಜನ್ಮತಾ 

ಮೆದುಳಿನ ರಕ್ತ ನಾಳಗಳ  ರಚನಾ ಕೊರತೆಗಳು ಕಾರಣವಾಗ ಬಹುದು.

ರೋಗ ಲಕ್ಷಣಗಳು. 

 ಧಿಡೀರನೆ ಒಂದು ಪಾರ್ಶ್ವದಲ್ಲಿ ಬಲವಿಲ್ಲದೆ ಆಗುವುದು.ಮಾತು ತೊದಲುವುದು, ಮಾತು 

ಇಲ್ಲದಾಗುವುದು,ತಲೆನೋವು, ಅಪಸ್ಮಾರ ಮತ್ತು ಪ್ರಜ್ಞೆ ತಪ್ಪುವುದು .ರಕ್ತ ಸಂಚಾರ  ತೊಡಕಾದ  ಭಾಗವನ್ನು ಹೊಂದಿ 

ಕೊಂಢು ರೋಗ ಲಕ್ಷಣ ಇರುತ್ತದೆ.

ಪರೀಕ್ಷೆಗಳು   

ವೈದ್ಯರು ರೋಗಿಯ  ಪರೀಕ್ಷೆ ಮಾಡಿ  ಸ್ಟ್ರೋಕ್ ನ   ಸಂಭವನೀಯ ಕಾರಣ ಮತ್ತು ಅದು ಆಕ್ರಮಿಸಿದ ಮೆದುಳಿನ ಭಾಗವನ್ನು 

ನಿರ್ಧರಿಸುತ್ತಾರೆ.ಸಾಮಾನ್ಯ ದೇಹ ಸ್ತಿತಿ  ,ಬಿ.ಪಿ. ರಕ್ತದ  ಸಕ್ಕರೆ ಪ್ರಮಾಣ ಇತ್ಯಾದಿ ಪರೀಕ್ಷಿಸುತ್ತಾರೆ.

ಮೆದುಳಿನ  ಸ್ಕ್ಯಾನ್  (ಸಿ.ಟಿ. ಅಥವಾ ಎಂ ಅರ ಐ ) ಮಾಡಿ ಮೆದುಳಿನಲ್ಲಿ  ಆದುದು ರಕ್ತ  ಹೆಪ್ಪುಗಟ್ಟುವಿಕೆಯೋ 


ಅಲ್ಲಾ  ರಕ್ತ ಸ್ರಾವವೋ ,ಮತ್ತು ಅದು ಆದ ಭಾಗ, ಅದರ ತೀವ್ರತೆ  ನಿಶ್ಚಯಿಸುತ್ತಾರೆ.


ಮೆದುಳಿನ ರಕ್ತ ಸ್ರಾವ  (ಸಿಟಿ ಸ್ಕ್ಯಾನ್ )



ಮೆದುಳಿನ ರಕ್ತ  ಹೆಪ್ಪುಗಟ್ಟುವಿಕೆ.

ರಕ್ತ ದ ಹೆಪ್ಪನ್ನು ತೆಗೆಯುವ ಚಿಕಿತ್ಸೆ ಈಗೆ ಇದೆ .ಆದರೆ ಕೂಡಲೇ ಆಸ್ಪತ್ರೆ ಗೆ ಬರಬೇಕು.ವೈದ್ಯರು ರಕ್ತ ಹೆಪ್ಪು ನಿರೋಧಕ 

ಔಷಧಿಗಳನ್ನು ನೀಡುವರು.ರಕ್ತ ಸ್ರಾವ  ಕ್ಕೆ  ಚಿಕಿತ್ಸೆ ಬೇರೆ.

ಮುಖ್ಯವಾಗಿ ಇಲ್ಲ್ಲಿ ಕಾಯಿಲೆ  ಇರುವುದು ಮೆದುಳಿನಲ್ಲಿ .ಅದಕ್ಕೆ ಪಾರ್ಶ್ವ ವಾಯು ಯಾದ ಅಂಗಕ್ಕೆ ಔಷಧಿ ಹಾಕಿ ಪ್ರಯೋಜನ 

ಇಲ್ಲ. ಮೇನ್  ಫ್ಯೂಸ್ ಹೋದರೆ ಬಲ್ಬ್ ಬದಲಾಯಿಸಿ ಪ್ರಯೋಜನವಿಲ್ಲ.ಆದರೆ ಮೆದುಳು ಅಘಾತದಿಂದ ಹೊರ ಬರುವ ತನಕ 

ಬಲ ಹೀನತೆಯಿರುವ ಅಂಗಾಂಗಗಳಿಗೆ ವ್ಯಾಯಾಮ ಕೊಡಬೇಕು .ಇಲ್ಲದಿದ್ದರೆ  ಅವು  ಕೆಲಸವಿಲ್ಲದೇ ಕ್ಷೀಣಿಸಿ ಮುಂದೆ 

ಮೆದುಳು ಸರಿಯಾದರೂ ತಾವು ಕೆಲಸ ಮಾಡ ಲೊಲ್ಲವು.ಅದನ್ನೇ ಪಿಸಿಯೋತೆರಪಿ ಎನ್ನುವುದು.
ಪಾರ್ಶ್ವ ವಾಯು ಅಥವಾ ಶರೀರದ ಒಂದು ಬದಿ ಬಲ ಕಡಿಮೆ ಒಂದು ರೋಗ ಲಕ್ಷಣ ವೇ ಹೊರತು ರೋಗವಲ್ಲ ,ರೋಗ ಹೆಚ್ಚಾಗಿ ಮೆದುಳಿನ ಆಘಾತ

(ಮೇಲಿನ ಚಿತ್ರಗಳ ಮೂಲಕ್ಕೆ ಆಭಾರಿ)