ಬೆಂಬಲಿಗರು

ಭಾನುವಾರ, ಸೆಪ್ಟೆಂಬರ್ 15, 2024

ಮರೆಯಾದ ಅಕ್ಕ


     

ನನ್ನ ಹಿರೀ ಅಕ್ಕ ಪರಮೇಶ್ವರಿ ನಮ್ಮನ್ನು ಬಿಟ್ಟು ಇಂದು ಅಗಲಿದರು.ನಿನ್ನೆಯೇ ಸ್ವಲ್ಪ ಹೊಟ್ಟೆ ನೋವು ಎಂದು ನನ್ನ ಮನೆಯವರಲ್ಲಿ ತಿಳಿಸಿದ್ದು ಕಡಿಮೆ ಆಗದಿದ್ದರೆ ಇಂದು ಆಸ್ಪತ್ರೆಗೆ ಬರುವ ಯೋಚನೆ ಎಂದು . ರಾತ್ರಿ ನೋವು ಉಲ್ಬಣವಾದರೂ ತಮ್ಮನಿಗೆ ತೊಂದರೆ ಕೊಡುವುದು ಬೇಡ ಎಂದು ಸಹಿಸಿ ಇಂದು ಮುಂಜಾನೆ  ಆಸ್ಪತ್ರೆಗೆ ಬಂದವರೇ ಹೃದಯಾಘಾತ ದಿಂದ ಆಸು ನೀಗಿದರು . ಅದು ತಾಯಿ ಹೃದಯ ;ತಮ್ಮ ಪಾಪ ದಿನವಿಡೀ ಆಸ್ಪತ್ರೆ ಯಲ್ಲಿ ದುಡಿದು ದಣಿದು ಬಂದಿರುತ್ತಾನೆ ;ಸ್ವಲ್ಪ ವಿಶ್ರಮಿಸಲಿ ಎಂದು .

ಅಕ್ಕ  ನನಗಿಂತ ಹತ್ತು ವರ್ಷಗಳ ಹಿರಿಯಳು. ಬಾಲ್ಯದಲ್ಲಿ ಅವಳನ್ನು ನಮ್ಮ ಮನೆಯಲ್ಲಿ ಕಂಡ ನೆನಪು ಇಲ್ಲ . ಏನಿದ್ದರೂ ಅವಳ ಮದುವೆಯಾಗಿ ಹೋದ ಮೇಲೆ ಅಕ್ಕನ ಮನೆಯಲ್ಲಿಯೇ ಒಡನಾಟ . ಒಡ ಹುಟ್ಟಿದವರು ಎಂದರೆ ಪ್ರೀತಿ . ಅವಳ ಮದುವೆಯಾದ ಕಾಲದಲ್ಲಿ ಉಪ್ಪಿನಂಗಡಿ ಯಿಂದ ಆರು ಮೈಲು ನಡೆದೇ ಹೋಗ ಬೇಕು . ನಾಗರೀಕತೆ ಗಾಳಿ ಬೇಸದಿದ್ದ ಊರು ಆದುದರಿಂದ ಮಾನವೀಯತೆ ಯಥೇಷ್ಟ ಇತ್ತು . ನನ್ನ ಬಾವ ಪ್ರಾಥಮಿಕ ಶಾಲೆ ಅಧ್ಯಾಪಕರು .ಅಕ್ಕನದೇ ಕೃಷಿ ವ್ಯವಸಾಯ ಉಸ್ತುವಾರಿ . ನಾಲ್ಕು ಹೆಣ್ಣು ಮಕ್ಕಳು .ಎಲ್ಲರಿಗೂ ಯೋಗ್ಯ ವಿದ್ಯಾಭ್ಯಾಸ ಕೊಡಿಸಿ ನೆಲೆ ಮುಟ್ಟಿಸಿ ,ಬಾವ ತೀರಿ ಹೋದ ಮೇಲೂ ತಾನು  ಮನೆಯನ್ನು ಬಿಡಲು ಸಮ್ಮತಿಸದೆ  ಕೊನೆಯುಸಿರು ತನಕ ತನ್ನ ಕರ್ಮ ಭೂಮಿಯಲ್ಲಿ ನೆಲೆ ನಿಂತರು .

ಅಕ್ಕ ಸಂಗೀತ ಪ್ರೇಮಿ .ಗುತ್ತು ಗೋವಿಂದ ಭಟ್ ಮತ್ತು  ಕಾಂಚನ ಐಯ್ಯರ್ ಅವರಲ್ಲಿ ಸಂಗೀತ ಅಧ್ಯಯನ .ಮಗಳು ,ಮೊಮ್ಮಗಳೂ ಅದೇ ದಾರಿ . ಗ್ರಾಮೀಣ ಭಾಗ ಉರುವಾಲಿನಲ್ಲಿ  ಸಂಗೀತ ಶಾಲೆ  ಆರಂಬಿಸುವ ಹಿಂದೆ  ಅವರ ಪರಿಶ್ರಮ ಇತ್ತು . ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ನಮಗೂ ಸಂಗೀತ ಗಾಳಿ .

         ನಮ್ಮ ಏಳಿಗೆ ಕಂಡು ಹೆಮ್ಮೆ.    ನಾವು ಅಕ್ಕನ ಮನೆಗೆ ರಜೆಯಲ್ಲಿ ಹೋದಾಗ ಸಂಭ್ರಮ .  . ಕೋಟಿ ಚೆನ್ನಯ ಚಿತ್ರದ ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ ಅಕ್ಕ ಪಂಡ್ಡು ಪಂಮೀನೆಕ್ಲು ಬತ್ತೇರಿತ್ತೆಲಾ ನೆನಪಿಸುವ ಚಿತ್ರಗಳು .

ನಮ್ಮ ತಲೆಮಾರಿನವರಿಗೆ  ಹಿರಿಯರೊಡಗಿನ ಸಂಬಂಧಗಳು ಕಿರಿಯರೊಡನೆ ಇರುವುದಕ್ಕಿಂತ  ಹೆಚ್ಚು ದಟ್ಟವಾಗಿ  ಇತ್ತು .