ಬಹಳ ರೋಚಕವಾದ ಇನ್ನೊಂದು ಆತ್ಮ ಕತೆ ಓದಿ ಮುಗಿಸಿದ್ದೇನೆ .ಡಾ ಲಿಂಡಿ ರಾಜನ್ ಕಾರ್ಟ್ನರ್ ಅವರ ತ್ರೀ ಕಂಟ್ರೀಸ್ ತ್ರೀ ಲೈವ್ಸ್ (ಮೂರು ದೇಶ ಮೂರು ಜೇವಿತ ).ತಾತ ತೂತು ಕುಡಿ ಮೂಲದವರು .ಸ್ವಾತಂತ್ರ್ಯ ಪೂರ್ವದ ಬರ್ಮಾ ದೇಶದಲ್ಲಿ ವೈದ್ಯ ವೃತ್ತಿ .ಲೇಖಕಿಯ ಜನನ ಅಲ್ಲಿಯೇ .ಮೊದಲ ಶಾಲೆ ಕೂಡಾ . ಎರಡನೇ ಮಹಾಯುದ್ದದ ಸಮಯ . ಧಾಳಿಯಿಂದ ತಪ್ಪಿಸಿ ಕೊಳ್ಳಲು ಆಗಾಗ ಊರು ಬದಲಾವಣೆ . ಕೊನೆಗೆ ಬೇಸತ್ತು ಮದ್ರಾಸ್ ನಗರಕ್ಕೆ ಆಗಮಿಸಿ ಅಲ್ಲಿಯೇ ವಾಸ . ಅವರ ಅಜ್ಜನ ಹೆಸರಿನಲ್ಲಿ ಒಂದು ರಸ್ತೆ ಕೂಡಾ ಚೆನ್ನೈ ಟಿ ನಗರ ದಲ್ಲಿ ಇರಬೇಕು . ಬ್ರಾಹ್ಮಣರೇ ಅಧಿಕ ಸಂಖ್ಯೆಯಲ್ಲಿ ಇದ್ದ ಪ್ರದೇಶ . ಪ್ರಾಥಮಿಕ ಶಿಕ್ಷಣ ತರುವಾಯ ಬೆಂಗಳೂರಿನ ಬಿಷಪ್ ಕಾಟನ್ ಹೈ ಸ್ಕೂಲ್ . ಅಂದಿನ ಬೆಂಗಳೂರಿನ ಚಿತ್ರಣ ಇದೆ . ಆಗೆಲ್ಲಾ ಮಿಷನ್ ಶಾಲೆಗಳಲ್ಲಿ ವಿದೇಶಿ ಅಧ್ಯಾಪಕರು ಅಧಿಕ .
ಕಾಲೇಜು ವಿದ್ಯಾಭ್ಯಾಸಕ್ಕೆ ಲಕ್ನೋ ನಗರದ ಒಂದು ಮಿಷನ್ ಕಾಲೇಜು . ಈ ಸಂಸ್ಥೆಗಳು ಎಲ್ಲಾ ಅಮ್ಮನ ಆಯ್ಕೆ .ಮಗಳಿಗೆ ಅತ್ಯತ್ತಮ ಶಿಕ್ಷಣ ದೊರೆಯಲಿ ಎಂಬ ಹಾರೈಕೆಯಲ್ಲಿ .ಆ ಕಾಲದ ಗ್ರಾಂಡ್ ಟ್ರಂಕ್ ಎಕ್ಸ್ಪ್ರೆಸ್ ಪ್ರಯಾಣದ ವಿವರ ಚೆನ್ನಾಗಿದೆ . ಆ ಕಾಲೇಜು ಎಲ್ಲಾ ವಿಧದಲ್ಲಿ ಚೆನ್ನಾಗಿತ್ತು .ಆದರೆ ಒಂದು ಎಡವಟ್ಟು .ಹಿಂದಿ ಕಡ್ಡಾಯ . ಮೊದಲನೇ ಸಲ ಹಿಂದಿಯಲ್ಲಿ ಅನುತ್ತೀರ್ಣ ಆದ ಕಾರಣ ಪ್ರಸಿದ್ಧ ವೆಲ್ಲೂರ್ ಸಿ ಎಂ ಸಿ ಮೆಡಿಕಲ್ ಕಾಲೇಜು ಅಡ್ಮಿಶನ್ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ .ಛಲ ಬಿಡದೆ ಪುನಃ ಕುಳಿತು ಉತ್ತೀರ್ಣ . ವೆಲ್ಲೂರ್ ಕಾಲೇಜಿಗೆ ಸೇರ್ಪಡೆ .
ವೆಲ್ಲೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಜೀವನ .,ಅಲ್ಲಿಯ ಶಿಸ್ತು , ಕಾಯಕ ಸಂಸ್ಕೃತಿ ಮತ್ತು ಅಧ್ಯಾಪಕ ವೃಂದದ ಸೇವಾ ಬದ್ಧತೆ ಯ ವಿವರ ಇದೆ . ಅಲ್ಲಿಯೇ ಸೀನಿಯರ್ ಆಗಿದ್ದ ಮೈಕೆಲ್ ಎಂಬ ಆಂಗ್ಲೋ ಇಂಡಿಯನ್ ಜತೆ ಮದುವೆ .ಮತ್ತು ಇಂಗ್ಲೆಂಡ್ ಗೆ ಪ್ರಯಾಣ .ಅಲ್ಲಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ .ವರ್ಣ ಭೇಧ ನೀತಿಯಿಂದ ಬೇಸರ . ಮೈಕೆಲ್ ಎಫ್ ಆರ್ ಸಿ ಎಸ್ ಪದವಿ ಗಳಿಸಿದ ಒಡನೆ ಖಾಯಂ ನೆಲಸುವ ಉದ್ದೇಶದಿಂದ ಭಾರತಕ್ಕೆ ಆಗಮಿಸಿ ಕರ್ನಾಟಕ ಕೋಲಾರದಲ್ಲಿ ಮಿಷನ್ ಆಸ್ಪತ್ರೆಯಲ್ಲಿ ಕೆಲಸ . ಆದರೆ ತನ್ನ ಜ್ಞಾನದ ಸದುಪಯೋಗ ಮಾಡುವ ವಾತಾವರಣ ಇಲ್ಲದೇ ಬೇಸತ್ತು ಇಂಗ್ಲೆಂಡ್ ಮರುಪಯಣ . ಅಲ್ಲಿ ಹಲವು ಆಸ್ಪತ್ರೆಗಳಲ್ಲಿ ಕೆಲಸ . ನಡುವೆ ಪುತ್ರಿ ಕಿರಣಳ ಜನನ . ಇನ್ನೇನು ಮೈಕೆಲ್ ಗೆ ತಜ್ಞ ವೈದ್ಯ ಉಪಾಧಿ ಸಿಕ್ಕು ,ಮನೆ ಮಾಡಿ ಸೆಟ್ಲ್ ಆದಿವಿ ಎಂದು ಕೊಳ್ಳುವಾಗ ಹೃದಯಾಘಾತದಿಂದ ಆತ ಅಸ್ವಸ್ಥ . ಮುಂದೆ ಪೂರ್ಣ ಚೇತರಿಸಿ ಕೊಳ್ಳಲೇ ಇಲ್ಲ . ತಾನು ಮನಸಿಲ್ಲದ ಮನಸಿನಲ್ಲಿ ಗಂಡನ ಪ್ರೋತ್ಸಾಹದಿಂದ ರಕ್ತ ಶಾಸ್ತ್ರ (ಹಿಮಟೋಲೊಜಿ )ಯಲ್ಲಿ ರಾಯಲ್ ಕಾಲೇಜು ಫೆಲೋಶಿಪ್ ಗಳಿಸಿ ಜೇವನ ಮುಂದುವರಿಕೆ ..ಮುಂದೆ ಅಲ್ಲಿ ಪರಿಚಯ ಆದ ಇತಿಹಾಸಜ್ಞ ಅಲನ್ ಪೈಪರ್ ಜತೆ ಪುನರ್ವಿವಾಹ .
ಲಿಂಡಿ ಅವರ ಸಹೋದರಿ ವೆಲ್ಲೂರು ಮತ್ತು ಅಮೇರಿಕಾ ದಲ್ಲಿ ನರ್ಸಿಂಗ್ ಕಲಿತು ,ಹೃದ್ರೋಗ ತಜ್ಞರನ್ನು ಮದುವೆಯಾಗಿ ಅಲ್ಲಿಯೇ ಸೇವೆ .
ಅಲನ್ ಪೈಪರ್ ಜತೆ ಚೈನಾ ಯಾತ್ರೆಯಲ್ಲಿ ,ತಾನು ಅಲ್ಲಿಯ ನೈರ್ಮಲ್ಯ ,ಶಿಸ್ತು ನೋಡಿ ನಮ್ಮ ಭಾರತದಲ್ಲಿ ಇವುಗಳು ಯಾಕೆ ಇಲ್ಲಾ ಎಂದು ಕೇಳಿದಾಗ ಅಲನ್ ಅಂದರಂತೆ 'ಅಲ್ಲಿ ಒಂದು ಆತ್ಮ ಇದೆ(ಇಲ್ಲಿ ಇಲ್ಲದ ) "