ಬೆಂಬಲಿಗರು
ಭಾನುವಾರ, ಡಿಸೆಂಬರ್ 31, 2023
ಬುಧವಾರ, ಡಿಸೆಂಬರ್ 27, 2023
ಪುಣ್ಯ ಪುರುಷರ ದೇವ ಕಾರ್ಯ
ಕಾರ್ಮಿಕರ ಮಕ್ಕಳ ಸಂಕಟ ನೋಡಿ ಹುಟ್ಟಿತು :
1953ರಲ್ಲಿ ಪುತ್ತೂರಿನ ಎ ಸಿ ಕೋರ್ಟಿನಲ್ಲಿ ಬೆಂಚ್ ಕ್ಲಕ್ ಆಗಿದ್ದ ಬಪ್ಪನಾಡು ಲಕ್ಷ್ಮಿನಾರಾಯಣ ರಾವ್. ರಾಯರು ಕಚೇರಿಗೆ ಹೋಗುವ ದಾರಿಯಲ್ಲಿ ರಸ್ತೆಗೆ ಡಾಮರು ಹಾಕುವ ಕಾರ್ಮಿಕರ ಇಬ್ಬರು ಮಕ್ಕಳು ಜಲ್ಲಿ ಮೇಲೆ ಮಲಗಿರುವುದನ್ನು ಕಂಡು ಮರುಗಿದರು. ಕೊಯಮುತ್ತೂರು ಮೂಲದ ದಂಪತಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹಿದ ಬಿ.ಎಲ್. ರಾಯರೇ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರು. ಆಗಿನ ಹಿರಿಯ ನ್ಯಾಯವಾದಿ ಎಂ. ಸದಾಶಿವ ರಾಯರು ಬಿ.ಎಲ್. ರಾಯರ ಜೊತೆ ಸೇರಿ ಸಮಾಜಕ್ಕೆ ವಿಶಿಷ್ಟ ರೂಪು ನೀಡಿದರು. ಸದಾಶಿವ ರಾಯರು ಸ್ಥಾಪಕಾಧ್ಯಕ್ಷರಾಗಿ ಮತ್ತಷ್ಟು ಅನಾಥ ಮಕ್ಕಳನ್ನು ಸಾಕಿದರು. ಇಬ್ಬರೂ ಸೇರಿ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ದಾನಿಗಳಿಂದ ಸಂಗ್ರಹಿಸಿ ಮೊದಲ ಹಂತದಲ್ಲಿ ಒಂಬತ್ತು ಮಕ್ಕಳನ್ನು ಸಾಕಿದರೆ, ಸಂಸ್ಥೆಗೆ ತಾಯಿಯ ರೂಪದಲ್ಲಿ ಬಂದವರು ಮಂಜಕ್ಕೆ ಎಂಬವರು. 1957ರಲ್ಲಿ ಬಿ.ಎಲ್. ರಾಯರು ಆಶ್ರಮದ ಮಕ್ಕಳನ್ನು ಕೊಯ್ಲಕ್ಕೆ ಪಿಕ್ನಿಕ್‌ಗೆ ಕರೆದುಕೊಂಡು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟರು.
55 ವರ್ಷಗಳ ಹಿಂದೆ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಬಲ್ಲ ಹಾಗೂ ಅಗತ್ಯವಾಗಿದ್ದ ನಮ್ಮ ಒಟ್ಟು ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ಯೋಗ್ಯವಾದ ಮೌಲ್ಯಾಧಾರಿತ, ವಿದ್ಯಾಭ್ಯಾಸ, ಪೋಷಣೆ, ಆರೋಗ್ಯ ನೀಡಿ ಅವರನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸಲು ಹಾಗೂ ನೆರವು ನೀಡಲು ಹುಟ್ಟಿಕೊಂಡ ಶ್ರೀ ರಾಮಕೃಷ್ಣ ಸೇವಾ ಸಮಾಜ’ ಮುಂದೆ ನಡೆದು ಬಂದಂತಹ ದಾರಿ ಸುಲಭದ್ದಾಗಿರಲಿಲ್ಲ. ಇದರ ಹಿಂದೆ ನೂರಾರು ಮಂದಿ ಸೇವಾ ಮನೋಭಾವದ ಹಿರಿಯರ ಶ್ರದ್ಧೆ, ನಿಷ್ಠೆ, ತ್ಯಾಗ ಮನೋಭಾವ ಇಲ್ಲಿ ತುಂಬಾ ಕೆಲಸ ಮಾಡಿದೆ. ಈ ಸಂಸ್ಥೆ ಸ್ಥಾಪಿಸಲು ಪ್ರಥಮದಲ್ಲಿ ತೊಡಗಿಸಿಕೊಂಡವರು ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿ| ಎಂ. ಸದಾಶಿವ ರಾವ್ ಹಾಗೂ ದಿ| ಬಿ.ಎಲ್.ರಾವ್ ಇವರ ಕನಸಿನ ಕೂಸು ನಮ್ಮ ಈ ಸಮಾಜ ಆಗಿರುತ್ತದೆ. ನಂತರ ಇವರೊಂದಿಗೆ ಕೈಜೋಡಿಸಿ ದುಡಿದವರಲ್ಲಿ ಈಗ ನಮ್ಮೊಂದಿಗೆ ಇಲ್ಲದ ದಿ|ಪಿ. ವಿಠ್ಠಲ್ ಪೈ ಮತ್ತು ದಿ| ಎಂ. ಮಾಧವ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಣಾರ್ಹ .ಆನಂದ ಆಶ್ರಮ ಸ್ಥಾಪಕಿ ಡಾ ಗೌರಿ ಪೈ ಈ ಸಂಸ್ಥೆಯಲ್ಲಿ ಕೂಡಾ ಕ್ರಿಯಾಶೀಲೆ . ಕೊಳತ್ತಾಯ ಅವರು ಇದನ್ನು ಉಲ್ಲೇಖ ಮಾಡಿ ಅವರ ಸೇವಾ ಮನೋಭಾವ ಮತ್ತು ಸಂಘಟನಾ ಚತುರತೆ ಕೊಂಡಾಡಿದರು.
ಸಮಾಜವು ಆರ್ಥಿಕವಾಗಿ ತೀರಾ ದುರ್ಬಲರು ಹಾಗೂ ತಂದೆ/ತಾಯಿ ಇಲ್ಲದ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ರಕ್ಷಣೆ, ವಿದ್ಯೆ, ಊಟ-ಉಪಚಾರ, ವಸತಿ, ಉಡುಗೆ-ತೊಡುಗೆ, ಔಷಧಿ ಇತ್ಯಾದಿಗಳನ್ನು ಉಚಿತವಾಗಿ ನೀಡಿ ಇಂತಹ ಮಕ್ಕಳನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವಂತೆ ಹಾಗೂ ಮುಂದಕ್ಕೆ ಯೋಗ್ಯ ಪ್ರಜೆಗಳಾಗಿ ಬೆಳೆಯಲು ಅನುಕೂಲವಾಗುವಂತೆ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಈ ಸಮಾಜದಲ್ಲಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಇದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗೋಸ್ಕರ ಒಂದು ವಸತಿ ಗೃಹವನ್ನು ನಿರ್ಮಿಸಿ ಹಾಗೂ ನಮ್ಮ ಸಮಾಜದ ಇತರ ಪೂರಕ ಚಟುವಟಿಕೆಗಳನ್ನು ಕೈಗೊಂಡು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಸಹಸಂಸ್ಥೆಗಳನ್ನು ನಾವು ನಡೆಸುತ್ತಾ ಬರುತ್ತಿದ್ದಾರೆ .
1. ಸ್ವಾಮಿ ವಿವೇಕಾನಂದ ಗ್ರಂಥಾಲಯ:
2. ಮಾ ಶಾರದಾಮಣಿ ಅನಾಥಾಲಯ :
3. ಮಂಜಕ್ಕ ನಿರ್ಗತಿಕ ಕುಠೀರ:
4. ಕಸ್ತೂರ್ಬಾ ಉದ್ಯೋಗಸ್ಥ ಮಹಿಳೆಯರ ವಸತಿಗೃಹ:
ಪುತ್ತೂರಿನ ಏಳಿಗೆಯಲ್ಲಿ ಪರವೂರಿನ ಗಣ್ಯರ ಪಾತ್ರ ಬಹಳ ಹಿರಿದು .ಮೊಳ ಹಳ್ಳಿ ಶಿವ ರಾವ್ , ಶಿವರಾಮ ಕಾರಂತ ,ಮಾಯಿರ್ಪಳ್ಳಿ ಸದಾಶಿವ ರಾವು ,ಮಾಯಿರ್ಪಳ್ಳಿ ಸುಂದರ ರಾವ್ ,ಬೈಂದೂರು ಪ್ರಭಾಕರ ರಾವ್ ಹೀಗೇ ಪಟ್ಟಿ ಮಾಡುತ್ತಲೇ ಹೋಗ ಬಹುದು .
ಕೃಶ ಕಾಯರಾದಸದಾಶಿವ ರಾಯರು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಟ್ರೇಡ್ ಮಾರ್ಕ್ ಖಾದಿ ಶರಟು ಮತ್ತು ಧೋತಿ ಉಡುಗೆಯಲ್ಲಿ ಮನೆಯಿಂದ ಆಶ್ರಮ ಕ್ಕೆ ನಡೆದು ಹೋಗುವುದನ್ನು ದಶಕಗಳ ಹಿಂದೆ ನೋಡಿದ್ದೆ . ಮೇಲೆ ಉಲ್ಲೇಖಿಸಿದವರು ಪುತ್ತೂರಿನ ಪುಣ್ಯ ಪುರುಷರು .
ಹಿರಿಯರಾದ ಶ್ರೀ ಚೆಟ್ಟಿಯಾರ್ ,ಕೇಶವ ಭಟ್ ,ವಿದುಷಿ ನಯನ ರೈ ಶ್ರೀಮತಿ ಶಂಕರಿ ಶರ್ಮ ಇಲ್ಲಿ ಮಕ್ಕಳಿಗೆ ವಿದ್ಯಾದಾನ ಕೈಂಕರ್ಯ ಮಾಡುತ್ತಿದ್ದಾರೆ. ಇನ್ನೂ ಹಲವರ ಹೆಸರು ಉಲ್ಲೇಖವಾಯಿತು .
ವಿವೇಕಾನಂದ ರಾಮಕೃಷ್ಣ ರ ಆದರ್ಶದಲ್ಲಿ ಹುಟ್ಟಿದ ಸಂಸ್ಥೆ .ವಿವೇಕಾನಂದ ಅವರು ದರಿದ್ರ ದೇವೋ ಭವ (ಬಡವರಲ್ಲಿ ದೇವರ ಕಾಣು )ಎಂದು ಸಾರಿದವರು .ಇಲ್ಲಿ ನಡೆಯುತ್ತಿರುವುದು ಪ್ರತಿಫಲ ಮತ್ತು ಪ್ರಚಾರ ಅಪೇಕ್ಷೆ ಇಲ್ಲದ ದೇವಕಾರ್ಯ ಎಂದು ಕೊಂಡೆನು.ವಾರ್ಷಿಕೋತ್ಸವದಲ್ಲಿ ಪುಟಾಣಿಗಳ ಹಾಡು ಕುಣಿತ ,ನಟನೆ ನೋಡಿ ಮನಸು ಮುದವಾಯಿತು . ದೊಡ್ಡ ಕೂಡು ಕುಟುಂಬದ ಸಂತೋಷವನ್ನು ಅವರು ಅನುಭವಿಸುತ್ತಿರುವಂತೆ ಕಂಡು ಬಂತು .
ಶುಕ್ರವಾರ, ಡಿಸೆಂಬರ್ 22, 2023
ಒಂದು ಸೂಕ್ಷ್ಮ ವಿಚಾರ
ದಶಕಗಳ ಹಿಂದೆ ನಡೆದ ಘಟನೆ . ಒಂದು ಬಡ ಕುಟುಂಬ .ಅಲ್ಲಿ ಒಬ್ಬಳು ಹೆಣ್ಣು ಮಗಳು .ಆಕೆ ನನ್ನ ಪೇಷಂಟ್ . ಕಾಯಿಲೆ ಅಸ್ತಮಾ . ಚಳಿಗಾಲದಲ್ಲಿ ಜಾಸ್ತಿ . ಔಷದೋಪಚಾರ ಗಳಿಂದ ಹತೋಟಿಯಲ್ಲಿ ಇತ್ತು . ತಂದೆ ತಾಯಿ ಹುಡುಗನನ್ನು ನೋಡಿ ,ಶಕ್ತಿ ಮೀರಿ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟರು . ಪತಿ ಗೃಹದಲ್ಲಿ ಇವಳಿಗೆ ಆಸ್ತಮಾ ಕಾಯಿಲೆ ಇರುವುದು ಕಂಡು ಗಂಡನೂ ಸೇರಿ ಎಲ್ಲರೂ ಸಿಟ್ಟಿಗೆದ್ದರು . ಶುರುವಾಯಿತು ಕಾಟ ,ರೋಗವನ್ನು ಮುಚ್ಚಿ ಬಿಟ್ಟು ಮದುವೆ ಮಾಡಿದ್ದಾರೆ . ಹೇಗೆ ಇವಳನ್ನು ಓಡಿಸುವುದು ?ಕೂತಲ್ಲಿ ನಿಂತಲ್ಲಿ ಸಹಸ್ರ ನಾಮ .ಹೊಗೆ ಒಲೆಯ ಬುಡದ ಕೆಲಸ ಇವಳೇ ಮಾಡುವಂತೆ ತಾಕೀತು ..ತಣ್ಣಿರಿನಲ್ಲಿಯೇ ಸ್ನಾನ ಮಾಡ ಬೇಕು ಇತ್ಯಾದಿ .ಬದುಕು ಅಸಹನೀಯ ಆದಾಗ ತವರು ಮನೆಗೆ ಓಡಿ ಬಂದಳು . ವರ್ಷಗಳ ನಂತರ ಒಂದು ದಿನ ಎಲ್ಲೋ ಪ್ರಯಾಣ ಮಾಡುತ್ತಿರುವಾಗ ಬಸ್ಸಿನಲ್ಲಿ ಸಿಕ್ಕಿದಳು . ಬೇರೊಂದು ಹುಡುಗನ ಜತೆ ಮದುವೆ ಆಗಿತ್ತು . ನಡುವಿನ ಮತ್ತು ನಂತರದ ಕತೆ ನನಗೆ ತಿಳಿದಿಲ್ಲ . ಸಂತೋಷವಾಗಿ ಇರಲಿ ಎಂಬ ಹಾರೈಕೆ ಮಾತ್ರ .
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ . ಇದರಲ್ಲಿ ಸುಳ್ಳು ಹೇಳದಿದ್ದರೂ ಸತ್ಯವನ್ನು ಬಚ್ಚಿಡುವುದು ಕೂಡಾ ಸೇರಿದೆ . ವಿವಾಹ ಬಂಧ ಮಾತುಕತೆ ಆಗುವಾಗ ಏನೆಲ್ಲಾ ಹೇಳ ಬೇಕು ?ಏನೆಲ್ಲಾ ಬಾರದು ?ಇದು ದೊಡ್ಡ ಪ್ರಶ್ನೆ . ಮೇಲೆ ಉಲ್ಲೇಖಿಸಿದ ಆಸ್ತಮಾ ಕಾಯಿಲೆ ದೊಡ್ಡ ದೇನೂ ಅಲ್ಲ .ಅದಕ್ಕೆ ಒಳ್ಳೆಯ ಔಷಧಿ ಕೂಡಾ ಇದೆ . ಅಪಸ್ಮಾರ ,ಸಕ್ಕರೆ ಕಾಯಿಲೆ ,ಮಾನಸಿಕ ಕಾಯಿಲೆ , ಮದ್ಯ ಇತ್ಯಾದಿ ವ್ಯಸನ ಇದ್ದರೆ ಮೊದಲೇ ಹೇಳ ಬೇಕೆ ?ಈ ವಿಚಾರ ಮುಚ್ಚಿಟ್ಟು ಅನೇಕ ಮದುವೆಗಳು ಮುರಿದಿವೆ .ವಿವಾಹ ಮೊದಲೇ ಇದ್ದ ಪ್ರೇಮ ಸಂಬಂಧ ಗಳನ್ನೂ ಸೇರಿಸ ಬಹುದು . ಈಗಂತೂ ಎಲ್ಲಾ ಸರಿ ಇದ್ದು ಆದ ವಿವಾಹ ಬಂಧಗಳೆ ಮುರಿದು ಬೀಳುತ್ತಿವೆ ,.
ಈಗ ನನ್ನ ಸಮಸ್ಯೆಗೆ ಬರೋಣ . ಮೊನ್ನೆ ಒಬ್ಬರು ಬಂದಿದ್ದರು.ಅವರ ಕುಟುಂಬ ನನ್ನ ಬಳಿಗೆ ವೈದ್ಯಕೀಯ ಸಲಹೆ ಗೆ ನನ್ನ ಬಳಿಗೆ ಬರುವುದು . ಅವರು ಒಬ್ಬ ಹುಡುಗನ (ಸ್ಥಿತಿ ವಂತನೆ )ಬಗ್ಗೆ ವಿಚಾರಿಸಿ ಅವನಿಗೆ ಆರೋಗ್ಯ ಸಮಸ್ಯೆ ಇದೆಯೇ ? ಪೊದು ಮಾತನಾಡಿಸ ಬಹುದೇ ?ಎಂದು ವಿಚಾರಿಸಿದರು .ಅವನ ಬಗ್ಗೆಯೂ ನನಗೆ ಮಾಹಿತಿ ಇದೆ .ಆದರೆ ವೈದ್ಯಕೀಯ ವೃತ್ತಿಯಲ್ಲಿ ನಾವು ಇದನ್ನು ಅನ್ಯರ ಬಳಿ ಹೇಳ ಬಾರದು.ಅದು ಗಂಭೀರ ಕಾಯಿಲೆ ಅಲ್ಲದಿದ್ದರೂ . ಆಸ್ಪತ್ರೆಯಲ್ಲಿ ನನ್ನ ಅರಿವಿಗೆ ಬಂದ ನಮ್ಮ ಸಂಬಂದಿಕರ ಅನಾರೋಗ್ಯ ಬಗ್ಗೆ ಕೂಡಾ ನಾನು ಮನೆಯಲ್ಲಿ ಕೂಡಾ ಪ್ರಸ್ತಾಪ ಮಾಡುವುದಿಲ್ಲ .
ಅರೋಗ್ಯ ವಿಮೆ ಮಾಡುವಾಗ ಇದ್ದ ಕಾಯಿಲೆಗಳನ್ನು ಘೋಷಿಸ ಬೇಕು ಎಂಬ ಷರತ್ತು ಇರುವುದು ಮತ್ತು ಒಂದು ಅವಧಿಯ ವರೆಗೆ ಆ ಕಾಯಿಲೆಗಳು ವಿಮಾತೀತ ಆಗಿರುತ್ತವೆ . ಅದೇ ರೀತಿ ಮದುವೆ ಸಂಬಂಧ ಏರ್ಪಡಿಸುವಾಗ ಉಭಯ ತರರೂ ಗಂಭೀರ ಅರೋಗ್ಯ ಸಮಸ್ಯೆ ಇದ್ದರೆ ಹೇಳಿ ಕೊಳ್ಳುವುದು ಉತ್ತಮ . ಇದರಲ್ಲಿ ವಂಶ ಪಾರಂಪರ್ಯ ಕಾಯಿಲೆಗಳನ್ನೂ ಸೇರಿಸ ಬಹುದು .
ಇಷ್ಟೆಲ್ಲಾ ಇದ್ದರೂ ಮದುವೆ ಪಶ್ಚಾತ್ ಮೊದಲೇ ಇದ್ದ ಕಾಯಿಲೆ ಬಗ್ಗೆ ತಿಳಿದು ಬಂದರೂ ,ಅನ್ಯೋನ್ಯವಾಗಿ ಇರುವ ದಂಪತಿ ಗಳನ್ನೂ ಕಂಡಿದ್ದೇನೆ
ಗುರುವಾರ, ಡಿಸೆಂಬರ್ 21, 2023
ಟಿ ಎನ್ ಸೀತಾರಾಂ ಅವರ ನೆನಪಿನ ಪುಟಗಳು
ಬಹಳ ದಿನಗಳ ನಂತರ ಒಂದು ಒಳ್ಳೆಯ ಕೃತಿ ಟಿ ಎನ್ ಸೀತಾರಾಂ ಅವರ ಆತ್ಮ ಚರಿತ್ರೆ 'ನೆನಪಿನ ಪುಟಗಳು " ಓದಿದ ಗುಂಗಿನಲ್ಲಿ ಇದ್ದೇನೆ .ನಿನ್ನೆ ಬಂದ ಪುಸ್ತಕ ಎಂದು ಸಂಜೆ ಗೆ ಒಂದೇ ಉಸಿರಿನಲ್ಲಿ ಎಂಬಂತೆ ಓದಿಸಿ ಕೊಂಡು ಹೋಯಿತು ಎನ್ನ ಬಹುದು
ಆರಂಭದಲ್ಲಿ '' ಸತ್ಯವನ್ನೇ ಹೇಳುತ್ತೇನೆ .ಬದುಕಿನ ಸರ್ವ ಸತ್ಯಗಳನ್ನೂ ಹೇಳ ಲಾರೆ .ಆದರೆ ಇಲ್ಲಿ ಹೇಳಿರುವುದಷ್ಟೂ ಸತ್ಯ " ಎಂದು ಹೇಳಿ ಕೊಂಡಿದ್ದು ಉದ್ದಕ್ಕೂ ಓದುವಾಗ ವೇದ್ಯ ವಾಗುವುದು .ಬೆನ್ನುಡಿಯಲ್ಲಿ ಜೋಗಿಯವರು 'ತನ್ನ ಕತೆಯನ್ನು ಮತ್ತೊಬ್ಬರ ಅನುಭವ ಅಗಿಸಲಿಕ್ಕೆ ಪ್ರಾಮಾಣಿಕತೆ ಇದ್ದರೆ ಸಾಕು "ಎಂದು ಬರೆದಿರುವುದು ಪುಟ ತಿರುವುತ್ತಿದಂತೆ ಆಗುವುದು .
ವಕೀಲ ,ನಾಟಕಕಾರ ,ನಟ ,ನಿರ್ದೇಶಕ ,ಕೃಷಿಕ ,ಸಾಹಿತಿ ,ಉದ್ಯಮಿ ಮತ್ತು ರಾಜಕಾರಿಣಿ ಯಾಗಿ ಅವರ ಬದುಕು ವರ್ಣರಂಜಿತ ವಾಗಿ ತೋರಿದರೂ ಎದುರಿಸಿದ (ಆರ್ಥಿಕ ) ಸಂಕಷ್ಟಳೇ ಅಧಿಕ .ಮುಖ್ಯವಾಗಿ ಕೃಷಿಕನಾಗಿ ಟೊಮಾಟೊ .ಮಾವು ಮತ್ತು ಹತ್ತಿ ಬೆಳೆ ಚೆನ್ನಾಗಿ ಬಂದರೂ ದಿಢೀರ್ ಬೆಳೆ ಕುಸಿತ ,ಅಕಾಲ ಮಳೆಯಿಂದ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಆದ ಪ್ರಸಂಗ ,ಸ್ನೇಹಿತನಿಗೆ ಸಹಾಯ ಮಾಡ ಹೋಗಿ ಕೈಗಾರಿಕೆಯ ಉರುಳು ಕೊರಳಿಗೆ ಹಾಕಿ ಕೊಂಡದ್ದು ಇತ್ಯಾದಿ .
ರಾಜಕೀಯದ ದಿನಗಳ ಬಗ್ಗೆ ಬರೆಯುತ್ತಾ '' ಮೊದಲು ದೇಶಪ್ರೇಮ ದಿಂದ ಜನರನ್ನು ಹತ್ತಿರ ಮಾಡಿ ಕೊಳ್ಳಬೇಕು ,ಆಮೇಲೆ ಪ್ರೀತಿಯಿಂದ ಜನರನ್ನು ಹತ್ತಿರ ಮಾಡಿಕೊಳ್ಳಬೇಕು ಎನ್ನುವುದಿತ್ತು ,ಮುಂದೆ ಸ್ನೇಹ ಜನರನ್ನು ಹತ್ತಿರ ತರುತ್ತದೆ ಎಂದಾಯಿತು .ನಂತರ ಹಣ ಇದ್ದರೆ ಮಾತ್ರ ಜನ ಬರುತ್ತಾರೆ ಎಂದಾಯಿತು .ಒಂದೊಂದು ಎಲೆಕ್ಷನ್ ಗೂ ಬದಲಾವಣೆ ಆಗಿರುವುದನ್ನು ನೋಡುತ್ತಾ ಬಂದಿದ್ದೇನೆ '
'ಜನರ ಪ್ರೀತಿಯೇ ನನ್ನ ಆಸ್ತಿ 'ಎಂಬ ಶೀರ್ಷಿಕೆಯ ಒಂದು ಅಧ್ಯಾಯ ಇದೆ .ಒಟ್ಟಿನಲ್ಲಿ ಇವರು ಆರ್ಥಿಕ ಐಶ್ವರ್ಯಕ್ಕಿಂತ ಸ್ನೇಹ ಸಂಪತ್ತು ಗಳಿಸಿದ್ದೇ ಹೆಚ್ಚು ಮತ್ತು ಅದಕ್ಕೆ ಸಂತಸ ಪಡುತ್ತಾರೆ .
ಟಿ ಎನ್ ಸೀತಾರಾಂ ಅವರ ಮುಕ್ತ ಮುಕ್ತ ನಾನು ನೋಡಿದ ಬೆರಳೆಣಿಕೆ ಧಾರಾವಾಹಿ ಗಳಲ್ಲಿ ಒಂದು
(ಕೆಲವು ಮುದ್ರಣ ತಪ್ಪುಗಳು ಇವೆ . ಕೆಲವು ಐತಿಹಾಸಿಕ ವಿವರಗಳೂ .ಉದಾ: ಇಂದಿರಾ ಗಾಂಧಿಯವರ ಚುನಾವಣೆ ಅಸಿಂಧು ತೀರ್ಪು ಕೊಟ್ಟವರು ನ್ಯಾ ಮೂ .ಕೆ ಎಸ್ ಹೆಗ್ಡೆ ಎಂದು ಬರೆದಿದ್ದು ಅದು ನ್ಯಾ ಮೂ ಸಿನ್ಹಾ ಎಂದು ಇರಬೇಕು ಅದೇ ರೀತಿ 1985 ರಲ್ಲಿ ತಾವು ಮುಖ್ಯ ಮಂತ್ರಿ ಆಗಿರುವಾಗ ನಡೆದ ಲೋಕ ಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗ್ಡೆ ಬಾಗಲಕೋಟೆ ಕ್ಷೇತ್ರದಿಂದ ಸಿದ್ದು ನ್ಯಾಮೆ ಗೌಡರೆದುರು ಸೋತರು ಎಂದಿದೆ .ಆಗ ಅವರು ಲೋಕ ಸಭೆಗೆ ಸ್ಪರ್ದಿಸಿರಲಿಲ್ಲ .ಅವರು ಸೋತುದು 1991 ರಲ್ಲಿ )
ಶುಕ್ರವಾರ, ಡಿಸೆಂಬರ್ 15, 2023
ಪ್ರಾರ್ಥನೆ
ಬುಧವಾರ, ಡಿಸೆಂಬರ್ 13, 2023
ರೋಗಿ ತಾನೇ ಮೊದಲ ಗುರುವು
ಸರ್ ವಿಲಿಯಂ ಒಸ್ಲರ್ ಅವರನ್ನು ಆಧುನಿಕ ವೈದ್ಯ ಶಾಸ್ತ್ರದ ತಂದೆ ಎಂದು ಕರೆಯುತ್ತಾರೆ . ವೈದ್ಯಕೀಯ ಶಿಕ್ಷಣ ವನ್ನು ನಾಲ್ಕು ಗೋಡೆಗಳ ಕ್ಲಾಸ್ ರೂಮ್ ಗಳಿಂದ ರೋಗಿಗಳ ಬಳಿಗೆ ,ಬೆಡ್ ಸೈಡ್ ಕ್ಲಿನಿಕಲ್ ಪಾಠಗಳ ಮೂಲಕ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ . "ಪಠ್ಯ ಪುಸ್ತಕಗಳಿಲ್ಲದೆ ವೈದ್ಯ ಶಾಸ್ತ ಅಧ್ಯಯನ ,ನಕ್ಷೆಯಿಲ್ಲದ ಸಮುದ್ರ ಯಾನದಂತೆ ; ನಿಜ ರೋಗಿಗಳ ಪರೀಕ್ಷಾ ಅಧ್ಯಯನ ಸಮುದ್ರಕ್ಕೇ ಹೋಗದಂತೆ "( He who studies medicine without books sails an uncharted sea, but he who studies medicine without patients does not go to sea at all”)
ಒಳ್ಳೆಯ ವೈದ್ಯನಾಗಿ ರೂಪಿತನಾಗಲು ವಿದ್ಯಾರ್ಥಿ ದೆಸೆಯಲ್ಲಿ ವಿಧ ವಿಧದ ರೋಗಗಳ ರೋಗಿಗಳನ್ನು ನೋಡಿರ ಬೇಕು . ಮನವರಿಯದ್ದು ಕಣ್ಣು ಕಾಣದು ಎಂಬ ನುಡಿ ಗಟ್ಟು ಇದೆ . ಹಿಂದೆ ಕಂಡ ಕಾಯಿಲೆಗಳ ಪತ್ತೆ ಹಚ್ಚುವುದು ಸುಲಭ . ಪುಸ್ತಕದಲ್ಲಿ ಓದಿದ್ದರೂ ಕಂಡಿರದ ಕಾಯಿಲೆಗಳ ಡಯಾ ಗ್ನೋಸಿಸ್ ಸುಲಭವಲ್ಲ .
ಸರಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಈ ವಿಷಯದಲ್ಲಿ ಅದೃಷ್ಟ ವಂತರು . ಅಲ್ಲಿ ಹಣ ತೆತ್ತು ಚಿಕಿತ್ಸೆ ಪಡೆಯುವವರು ಕಡಿಮೆ . ಉಚಿತ ಚಿಕಿತ್ಸೆ ಪಡೆಯುವ ರೋಗಿಗಳು ವಿದ್ಯಾರ್ಥಿ ಗಳು ಪರೀಕ್ಷೆ ಮಾಡುವುದಕ್ಕೆ ಆಕ್ಷೇಪ ಮಾಡುವುದು ಕಡಿಮೆ . ರೋಗದ ವಿವಿಧ ಲಕ್ಷಣಗಳು ಇರುವ ಪೇಷಂಟ್ ಇದ್ದರೆ ಎಲ್ಲಾ ವಿದ್ಯಾರ್ಥಿಗಳೂ ಅವನ ಬಳಿ ಬಂದು ರೋಗ ಚರಿತ್ರೆ ಕೇಳುವರು .ಪರೀಕ್ಷೆ ಮಾಡುವರು .ಹೇಳಿದ್ದನ್ನೇ ಹೇಳಿ ಹೇಳಿ ಅವರೂ ಸುಸ್ತು ಆಗುವುದು ಉಂಟು .ಅಲ್ಲದೆ ಪರೀಕ್ಷಕರ ಸ್ಪರ್ಶ ,ಮರ್ದನ ಇತ್ಯಾದಿ ಗಳಿಗೆ ಒಳಗಾಗ ಬೇಕಾಗುವುದು . ಕೆಲವು ರೋಗಿಗಳು ತಪ್ಪಿಸಲು ಬಾತ್ ರೂಮ್ ನಲ್ಲಿ ಅಡಗುವರು ,ಇನ್ನು ಕೆಲವರು ತೀವ್ರ ಅಸೌಖ್ಯ ನಟಿಸುವರು .
ವಿಶ್ವ ವಿದ್ಯಾಲಯ ಪರೀಕ್ಷೆಗೆ ಕೆಲ ದಿನ ಮೊದಲು ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ವಾರ್ಡ್ ಗೆ ಪ್ರವೇಶ ನಿಷೇಧ(Out of Bounds ) .ಪರೀಕ್ಷೆಗೆ ಇಡುವ ರೋಗಿಗಳ ವಿವರ ತಿಳಿಯದಿರಲಿ ಎಂಬ ಉದ್ದೇಶ .ಆದರೆ ರಾತ್ರೋ ರಾತ್ರಿ ವಿದ್ಯಾರ್ಥಿಗಳು ಕಣ್ಣು ತಪ್ಪಿಸಿ ಹೋಗಿ ಪರೀಕ್ಷಾ ಕೇಸ್ ಗಳನ್ನು ನೋಡುವುದುಂಟು . ಹೌಸ್ ಸರ್ಜನ್ ,ಪಿ ಜಿ ಗಳು ಇಂತಿಂತಹ ಕೇಸ್ ಇದೆ ಎಂಬ ಸೂಚನೆ ಕೊಡುವರು .ಕೆಲವೊಮ್ಮೆ ಈ ಮುನ್ಸೂಚನೆಗಳು ತಪ್ಪಾಗಿ ಪರೀಕ್ಷಾ ರ್ಥಿ ಗಳು ಪೇಚಿಗೆ ಸಿಗುವದು ಉಂಟು . ಉದಾಹರಣೆಗೆ ಒಂದು ಸಾರಿ ಪರೀಕ್ಷೆಗೆ ಬಲ ಬದಿಯ ಪಾರ್ಶ್ವ ವಾಯು ಕೇಸ್ ಇಟ್ಟಿದ್ದರು . ಮುನ್ಸೂಚನೆ ಕೊಡುವ ಹಿರಿಯರು ಪರೀಕ್ಷಾರ್ಥಿಗಳಿಗೆ 'ಬಲ ಬದಿ ಪಾರ್ಶ್ವ ವಾಯು ರೋಗಿಗೆ ಹೈಡ್ರೋಸೀಲ್(ವೃಷಣ ಚೀಲದ ನೀರು ) ಕೂಡಾ ಇದೆ . ತಪ್ಪಿದರೆ ಫೇಲ್ ಆದೀತು .; ಎಂಬ ಎಚ್ಚರಿಕೆ ಕೊಟ್ಟರು . ಅವರ ಮಾತು ಕೇಳಿ ಪರೀಕ್ಷಾರ್ಥಿ ಮುಖ್ಯ ರೋಗವಾದ ಪಾರ್ಶ್ವ ವಾಯು ಗಿಂತಲೂ ಹೈಡ್ರೊ ಸೀಲ್ ನ್ನೇ ಹುಡುಕಿ ಸಿಗದೇ (ರಾತ್ರೋ ರಾತ್ರಿ ರೋಗಿಯನ್ನು ಬದಲಿಸಿದ್ದರು ) ಪರೀಕ್ಷಕರು ಡಯ ಗ್ನೋಸಿಸ್ ಕೇಳಿದಾಗ ರೈಟ್ ಸೈಡ್ ಹೆಮಿಪ್ಲಿಜಿಯ (ಪಾರ್ಶ್ವ ವಾಯು )ವಿಥ್ ಔಟ್ ಹೈಡ್ರೊ ಸೀಲ್ ಎಂದಾಗ ಪರೀಕ್ಷಕರಿಗೆ ಸೋಜಿಗ .
ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು ಎಂಬಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೂ ,ವೈದ್ಯರಿಗೂ ರೋಗಿಯೇ ಮೊದಲ ಗುರು . ರೋಗಿಯಿಂದ ಪಾಠ ಕಲಿತ ವೈದ್ಯರು ಮತ್ತು ಅವರಿಂದ ಚಿಕಿತ್ಸೆ ಪಡೆಯುವವರು ಧನ್ಯರು
ಮಂಗಳವಾರ, ಡಿಸೆಂಬರ್ 12, 2023
ಪಂಚಮಂ ಕಾರ್ಯ ಸಿದ್ದಿ
ವಾರದ ಹಿಂದೆ ಒಬ್ಬರು ಬಂದಿದ್ದರು . "ಡಾಕ್ತ್ರೆ ನಾನು ಜ್ವರ ತಲೆನೋವು ಎಂದು "ಗ " ಡಾಕ್ಟರ್ ಬಳಿ ಹೋಗಿದ್ದೆ . ಅವರ ಮದ್ದು ನಾಲ್ಕು ಡೋಸ್ ತಿಂದರೂ ಕಡಿಮೆ ಆಗಿಲ್ಲ ಎಂದು "ಮ " ಅವರ ಬಳಿಗೆ ಹೋದೆ .ಅವರ ಮದ್ದಿನಲ್ಲಿ ಜ್ವರ ಸ್ವಲ್ಪ ಕಡಿಮೆ ಆಯಿತು ಆದರೂ ಉಷ್ಣ ಆಗಿ ಗ್ಯಾಸ್ತ್ರಿಕ್ ಆಯಿತು .ಹಾಗೆ "ಭಾ "ಅವರ ಬಳಿ ಹೋದೆ ,ಅವರ ಔಷಧಿ ಯಲ್ಲಿ ಏನೂ ಕಮ್ಮಿ ಇಲ್ಲ ,ಎಂದು ಹೋಮಿಯೋ ಡಾಕ್ತ್ರ ಬಳಿ ಚಿಕಿತ್ಸೆ ಮಾಡಿಸಿದೆ . ಹೊಟ್ಟೆ ನೋವು ಹಾಗೇ ಇದೆ ; ನಿಮ್ಮ ಮದ್ದು ನನಗೆ ಹಿಡಿಯುತ್ತದೆ .ಹಾಗೆ ಬಂದೆ "ಅಂದರು . ನಾನು ನಗುತ್ತಾ ಹೇಳಿದೆ ನಿಮಗೆ ಖಂಡಿತಾ ಗುಣ ಆಗುವುದು .ಯಾಕೆಂದರೆ ಹಿರಿಯರು ಹೇಳುವರು 'ಪಂಚಮಂ ಕಾರ್ಯ ಸಿದ್ಧಿ '
ಇಂತಹವರು ಎಲ್ಲಾ ವೃತ್ತಿಯವರ ಬಳಿಗೂ ಬರುವರು . ನಮ್ಮನ್ನು ಸಂತೋಷ ಪಡಿಸಲೋ ಎಂಬಂತೆ ಸ್ವಲ್ಪ ಮಸಾಲೆ ಸೇರಿಸಿ ನಮ್ಮ ವೃತ್ತಿ ಮಿತ್ರರನ್ನು ತೆಗಳುವರು ,ನಮ್ಮನ್ನು ಹೊಗಳುವರು .ಈ ಚಕ್ರ ಮುಂದುವರಿಯುವುದು .ರೋಗಿಗಳಿಗೆ ನನ್ನ ಸಲಹೆ ಯಾವಾಗಲೂ ವಿಶ್ವಾಸದಿಂದ ಒಬ್ಬ ವೈದ್ಯರ ಬಳಿಗೆ ಹೋಗ ಬೇಕು . ಆಮೇಲೆ ಅವರ ಉಪಚಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅವರ ಬಳಿಗೆ ಹೋಗಿ ಪರಿಹರಿಸಿ ಕೊಳ್ಳಬೇಕು . ತುರ್ತು ಪರಿಸ್ಥಿತಿ ಯಲ್ಲಿ ಬೇರೆ ಆಸ್ಪತ್ರೆಗೆ ಹೋಗ ಬಹುದು . ಒಂದು ಎರಡು ದಿನದ ಔಷಧಿ ತೆಗೆದು ಕೊಂಡು ಕೈ ನೋಡುವಾ ಎಂದು ಬಂದವರನ್ನು ನಾನು ವಿನಯದಿಂದ ಮರಳಿ ಕಳುಹಿಸಿದ್ದೇನೆ . ಕೆಲವರಿಗೆ ಇದು ಪಥ್ಯವಾಗದು. ಯಾವುದೇ ವೃತ್ತಿಯವರು ತಮ್ಮ ಬಳಿ ಬಂದು ಅನ್ಯರ ಹಳಿವವರ ಬಗ್ಗೆ ಜಾಗರೂಕ ಇರಬೇಕು .
ಬಾಲಂಗೋಚಿ : ನಾನು ಐದನೇ ವೈದ್ಯನಾದ ಕಾರಣ ಖಂಡಿತ ಗುಣವಾಗುವುದು ಗಾದೆ ಸುಳ್ಳು ಆಗದಿದ್ದರೆ .ಅದರಂತೆ ಸರ್ಜನ್ ಒಬ್ಬರು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ರೋಗಿಗೆ ಧೈರ್ಯ ಹೇಳುತ್ತಾ' ನೀನು ಖಂಡಿತಾ ಗುಣ ಮುಖ ನಾಗುವಿ.ಸರ್ಜರಿ 100% ಸಕ್ಕೆಸ್ಸ್ . "ಎಂದಾಗ ರೋಗಿ ಅದು ಹೇಗೆ ಅಷ್ಟು ಖಡಾಕಡಿ ಹೇಳುವಿರಿ "ಎನ್ನುವರು .ಅದಕ್ಕೆ ವೈದ್ಯರು ವೈದ್ಯ ಶಾಸ್ತ್ರದ ಪ್ರಕಾರ ಈ ಶಸ್ತ್ರ ಕ್ರಿಯೆಯ ಸಕ್ಸೆಸ್ ರೇಟ್ 10%.ನಾನು ಈಗಾಗಲೇ ಆಪರೇಷನ್ ಮಾಡಿದ ಒಂಭತ್ತು ಮಂದಿ ಕೊಂಪ್ಲಿ ಕೇಶನ್ ನಿಂದ ದೇವರ ಪಾದ ಸೇರಿದ್ದು ನೀನು ಹತ್ತನೆಯವನು . ಆದುದರಿಂದ ನೀನು ಗುಮಾಮುಖ ನಾಗುವುದು ಶತ ಸಿದ್ಧ
ಬುಧವಾರ, ಡಿಸೆಂಬರ್ 6, 2023
ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಲ್ ಅವರ ಆತ್ಮ ಚರಿತ್ಮಾತ್ಮಕ ಕೃತಿ "A Walk Up The Hill .Living With People and Nature " ಈಗ ತಾನೇ ಓದಿ ಮುಗಿಸಿದೆ . ಪರಿಸರ ಪ್ರೇಮಿಗಳು ಅತ್ಯಾವಶ್ಯ ಓದ ಬೇಕಾದ ಕೃತಿ .
೧೯೪೨ ರಲ್ಲಿ ಪಶ್ಚಿಮ ಘಟ್ಟಗಳ ಮಡಿಲಲ್ಲಿ ಜನಿಸಿದ ಇವರ ವಿದ್ಯಾಭ್ಯಾಸ ಪುಣೆ ,ಮುಂಬೈ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ .ಇವರ ಪಿ ಎಚ್ ಡಿ ಪ್ರಬಂಧ ಪರಿಸರ ಗಣಿತ(Mathematical Ecology ).ಅಮೆರಿಕಾದಲ್ಲಿನ ಉದ್ಯೋಗಾವಕಾಶ ಬಿಟ್ಟು ಭಾರತಕ್ಕೆ ಬಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ೩೧ ವರ್ಷಗಳ ಸೇವೆ ಸಲ್ಲಿಸಿದ್ದು ,ಅಲ್ಲಿ ಪರಿಸರ ವಿಜ್ಞಾನ ಕೇಂದ್ರ ಸ್ಥಾಪಿಸಿದರು . ಖ್ಯಾತ ವಿಜ್ಞಾನಿ ಆಡಳಿತಗಾರ ಪ್ರೊ ಸತೀಶ್ ಧವನ್ ಇವರಿಗೆ ಬೆನ್ನೆಲುಬಾಗಿ ನಿಂತವರು . ಈ ಕೇಂದ್ರದ ಮೂಲಕ ಆದಿವಾಸಿಗಳು ,ರೈತರು ,ಕುರುಬರು ಮತ್ತು ಮೀನುಗಾರರ ಬಗ್ಗೆ ನೈಜ ಅಧ್ಯಯನ ,ಇವರು ಕುರ್ಚಿ ಗೆ ಸೀಮಿತ ವಿಜ್ಞಾನಿ ಅಲ್ಲ . ತಮ್ಮ ಅಧ್ಯಯನಕ್ಕೆ ಕಾಲ್ನಡಿಗೆ ,ಸೈಕಲ್ ಮೈಲುಗಳನ್ನು ಕ್ರಮಿಸಿ ,ತಾವು ಹೋದಲ್ಲಿ ಸಿಕ್ಕಿದ ಆಹಾರ ಪ್ರೀತಿಯಿಂದ ಸೇವಿಸಿ ಜನರೊಳಗೊಂದಾಗಿ ಮಾಹಿತಿ ಸಂಗ್ರಹ . ಕರ್ನಾಟಕ ದಲ್ಲಿ ಪಶ್ಚಿಮ ಘಟ್ಟದ ಮೂಲೆ ಮೂಲೆ ಮತ್ತು ದೇಶದಾದ್ಯಂತ ಪ್ರವಾಸ . ಭಾರತ ಸರಕಾರಕ್ಕೆ ಪರಿಸರ ವಿಷಯದಲ್ಲಿ ಸಲಹೆಗಾರ ಆಗಿ ಯೂ ಸೇವೆ . ಮರಾಠಿಯ ಖ್ಯಾತ ಅಂತ್ರೋಪೋಲೊಜಿಸ್ಟ್ ಮತ್ತು ಲೇಖಕಿ ಕುಟುಂಬ ಸ್ನೇಹಿತರು ಆಗಿದ್ದು ಅವರಿಂದ ಪ್ರೇರಣೆ .. ಖ್ಯಾತ ಪಕ್ಷಿ ವಿಜ್ಞಾನಿ ಸಲೀಮ್ ಅಲಿ ಕೂಡಾ ಆಪ್ತರಾಗಿದ್ದು ಅವರ ಪ್ರಭಾವ ಕೂಡಾ
ಶುಕ್ರವಾರ, ಡಿಸೆಂಬರ್ 1, 2023
ಸಾಮೂಹಿಕ ಗಾಯ ಮಜ್ಜನ
ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅಧಿಕ ಇರುವುದು ಸಾಮಾನ್ಯ . ವಾರ್ಡ್ ಗಳಲ್ಲಿ ಅಕ್ಯೂಟ್ ಕೇಸಸ್ ಮತ್ತು ಕ್ರಾನಿಕ್ ಕೇಸುಗಳು ಎಂದು ಎರಡು ವಿಧ . ಅಕ್ಯೂಟ್ ಅಲ್ಪ ಸಮಯದ ಇತಿಹಾಸ ಉಳ್ಳ ಕಾಯಿಲೆ . ಕ್ರಾನಿಕ್ ಎಂದರೆ ಹಲವು ದಿನ,ವಾರ ,ತಿಂಗಳು ಅಥವಾ ವರ್ಷಗಳಿಂದ ಬಳುವಳಿಯಾಗಿ ಬಂದ ರೋಗ .
ಇದರಲ್ಲಿ ಕ್ರಾನಿಕ್ ರೋಗಿಗಳು ಪುನಃ ಪುನಃ ಆಸ್ಪತ್ರೆಗೆ ದಾಖಲು ಆಗುವರು . ಆಸ್ಫತ್ರೆಯ ಒಳ ಹೊರಗು ಅರಿತವರು . ಹೆಚ್ಚಿನವರು ಬಹಳ ಡಿಮ್ಯಾಂಡಿಂಗ್ ಟೈಪಿನವರು . ಪ್ರತಿಯೊಂದರಲ್ಲೂ ಕೊರತೆ ಕಂಡು ಹಿಡಿಯುವ ಇವರನ್ನು ಸಂಭಾಳಿಸುವುದು ಸ್ವಲ್ಪ ಕಷ್ಟ . ಹಳೆಯ ಯೋಗಿಯು ಹೊಸಾ ವೈದ್ಯನಿಂಗಿಂತ ಉತ್ತಮ ( ರೋಗದ ಬಗ್ಗೆ ಹೆಚ್ಚು ಅರಿವು ಉಳ್ಳವನು )ಎಂಬ ನುಡಿಗಟ್ಟು ಇದೆ . ಇವರ ಕೈಯಲ್ಲಿ ಹೊಸಾ ಹೌಸ್ ಸರ್ಜನ್ ,ನರ್ಸ್ ಸಿಕ್ಕಿದರೆ ಗೋಳು ಹೊಯ್ದು ಬಿಡುತ್ತಾರೆ . ಇಂಜೆಕ್ಷನ್ ಕುತ್ತಿದ್ದು ಸರಿಯಾಗಿಲ್ಲ ,ಮಾತ್ರೆ ಬದಲು ಆಗಿದೆ ,ಡ್ರೆಸ್ಸಿಂಗ್ ಮಾಡಿದ್ದು ತಪ್ಪಾಗಿದೆ ಇತ್ಯಾದಿ .
ಇಂತಹ ರೋಗಿಗಳು ಒಂದು ಉಪಯೋಗಕ್ಕೆ ಬರುವರು .ಅವರನ್ನು ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಎಕ್ಸಾಮ್ ಕೇಸ್ ಎಂದು ಇಡುವರು . ವಿದ್ಯಾರ್ಥಿಗಳು ಇವರ ರೋಗ ಇತಿಹಾಸ ಕೇಳಿ ,ಪರೀಕ್ಷೆ ಮಾಡಿ ಇಂತಹ ಕಾಯಿಲೆ ಏನು ಚಿಕಿತ್ಸೆ ಇತ್ಯಾದಿ ಹೇಳಬೇಕು . ಇಂತಹ ರೋಗಿಗಳಿಗೆ ವಿಶೇಷ ಪರೀಕ್ಷಾ ಭತ್ಯೆ ಸಿಗುವುದು ,ಕೆಲವೊಮ್ಮೆ ಅವರ ಬಾಯಿ ಸರಿಯಾಗಿ ಬಿಡಿಸಲು ಪರೀಕ್ಷಾರ್ಥಿಗಳೇ ಟಿಪ್ಸ್ ಕೊಡುವರು . ಕಾಯಿಲೆಯ ಡೈಯ ಗ್ನೋಸಿಸ್ ಕೂಡಾ ಅವರೇ ಹೇಳುವರು . ಪರೀಕ್ಷಾರ್ಥಿ ಸರಿಯಾಗಿ ಗಮನಿಸದಿದ್ದರೆ ,'ನೋಡಪ್ಪಾ ನನ್ನ ಬೆನ್ನ ಹಿಂದೆ ಒಂದು ಗಡ್ಡೆ ಇದೆ ,ಪರೀಕ್ಷಕರು ಕೇಳುವರು ,ಅದು ಲೈಪೊಮ . ಇತ್ಯಾದಿ ಹಿಂಟ್ ಕೊಡುವರು .ಕೆಲವೊಮ್ಮೆ ಇದು ತಪ್ಪು ಇರಬಹುದು .
ಸರ್ಜಿಕಲ್ ವಾರ್ಡ್ ನಲ್ಲಿ ಹಳೇ ಗಾಯದ ರೋಗಿಗಳ ಸಾಲು ಇರುವುದು . ನಾವು ಹೌಸ್ ಸರ್ಜನ್ ಆಗಿದ್ದಾಗ ಮುಂಜಾನೆ ಇಂಜೆಕ್ಷನ್ ಕೊಟ್ಟಾದ ಮೇಲೆ ಸಾಮೂಹಿಕ ಗಾಯ ಸ್ನಾನ . ನಮ್ಮ ಹಿಂದೆ ಒಬ್ಬ ಡ್ರೆಸ್ಸರ್ ಒಂದು ತಳ್ಳು ಟ್ರಾಲಿ ಯಲ್ಲಿ ಗಾಯ ತೊಳೆಯುವ ದ್ರಾವಣ ,ಪರಿಕರಗಳು ,ಮುಲಾಮು ಇತ್ಯಾದಿ ,ಇನ್ನೊಂದರಲ್ಲಿ ಕೈ ಶುದ್ಧ ಮಾಡುವ ಡೆಟಾಲ್ ದ್ರಾವಣ ಮತ್ತು ಕೈ ಒರಸುವ ಬಟ್ಟೆ ಸಹಿತ ಹಿಂಬಾಲಿಸುವರು . ಆಸ್ಪತ್ರೆಯ ಟ್ರೇಡ್ ಮಾರ್ಕ್ ವಾಸನೆ ಅಥವಾ ಪರಿಮಳ ಡೆಟಾಲ್ ಒಂದು ಕಾರಣ
ಹಲವು ವಾರಗಳಿಂದ ಇರುವ ರೋಗಿಗಳ ನೋಟ್ಸ್ ಬರೆಯುವಾಗ ಅಲ್ಸರ್ ರೈಟ್ ಫುಟ್ .ಕ್ಲೀನ್ ಅಂಡ್ ಡ್ರೆಸ್ ಆರಂಭದಲ್ಲಿ ಎಂದು ಆರಂಭದಲ್ಲಿ ಬರೆದರೂ ಕೊನೆ ಕೊನೆಗೆ ಶಾರ್ಟ್ ಫಾರಂ c &d ಎಂದು ಗೀಚುತ್ತಿದ್ದೆವು . ಅಲ್ಸರ್ ಎಂದ ಒಡನೆ ಸಿ ಅಂಡ್ ಡಿ ಬರುತ್ತಿತ್ತು . ಒಮ್ಮೆ ಒಂದು ರೋಗಿಯು ಹಲವು ವಾರಗಳಿಂದ ಹೊಟ್ಟೆಯ ವೃಣ ಅಥವಾ ಪೆಪ್ಟಿಕ್ ಅಲ್ಸರ್ ಚಿಕಿತ್ಸೆಗೆ ಅಡ್ಮಿಟ್ ಆಗಿದ್ದರು . ಹೌಸ್ ಸರ್ಜನ್ ಆರಂಭದಲ್ಲಿ ಪೆಪ್ಟಿಕ್ ಅಲ್ಸರ್ ಎಂದು ಆರಂಭಿಸಿ ಕೊನೆಗೆ ಅಲ್ಸರ್ ಮಾತ್ರ ಬರೆಯುತ್ತಿದ್ದರು .ಹೌಸ್ ಸರ್ಜನ್ ಬದಲು ಆದಾಗ ಅವರು ಅಲ್ಸರ್ -ಕ್ಲೀನ್ ಅಂಡ್ ಡ್ರೆಸ್ ಎಂದು ಬರೆದರು ಎಂದು ಕತೆ
ಗಾಯವನ್ನು ಸ್ವಚ್ಛ ಮಾಡಿ ಬ್ಯಾಂಡೇಜ್ ಮಾಡುವುದಕ್ಕೂ ಕ್ರಮ ಇದೆ .ತೊಳೆಯುವಾಗ ಒಳಗಿಂದ ಹೊರಕ್ಕೆ ಎಂಬ ನಿಯಮ ಮುಖ್ಯ ,ಬ್ಯಾಂಡೇಜ್ ಗಳಲ್ಲಿ ಹಲವು ವಿಧ .ನಮಗೆ ಇದನ್ನು ಅನುಭವಿ ನರ್ಸ್ ಮತ್ತು ಡ್ರೆಸ್ಸರ್ ಗಳು ತಿಳಿಸಿ ಕೊಡುತ್ತಿದ್ದರು .
ಈಗ ಹೌಸ್ ಸರ್ಜನ್ ಗಳು ಖಾಸಗಿ ಕಾಲೇಜು ಗಳಲ್ಲಿ ಇಂತಹ ಸಾಮೂಹಿಕ ಗಾಯ ಮಜ್ಜನ ಮಾಡುವುದು ವಿರಳ .