ಈಗ ಎಲ್ಲೆಡೆ ಪ್ರಚಲಿತ ಆಗಿರುವ Q R Code (Quick Response Code )ನ ಕನ್ನಡ ರೂಪಾಂತರ ತ್ವರಿತ ಪ್ರತಿಕ್ರಿಯಾತ್ಮಕ ಸಂಕೇತ ಚಿಹ್ನೆ . ಮಾರ್ಗದ ಬಳಿ ಇರುವ ಕಬ್ಬಿನ ಹಾಲಿನ ಅಂಗಡಿಯವನ ಬಳಿ ಕೂಡಾ ಒಂದು ಕೋಡ್ ಇಟ್ಟಿದ್ದು ಅದರ ಮೂಲಕ ಫೋನ್ app ಪಾವತಿ ಮಾಡ ಬಹುದಾಗಿದೆ . ಯಥಾರ್ಥದಲ್ಲಿ ಚಿಲ್ಲರೆ ಅಭಾವ ಇರುವಾಗ ಸಣ್ಣ ವ್ಯಾಪಾರಿಗಳಿಗೇ ಅದು ಹೆಚ್ಚು ಅವಶ್ಯಕ .
ಆಮಂತ್ರಣ ಪತ್ರಿಕೆಗಳಲ್ಲಿ ಸಮಾರಂಭದ ಸ್ಥಳ ದ ಕೋಡ್ ಕೊಟ್ಟಿದ್ದು ಅದನ್ನು ಜಾಗತಿಕ ತಾಣ ನಿರ್ಧಾರಕ(ಜಿಪಿಎಸ್ ) ದ ಮೂಲಕ ಸ್ಕ್ಯಾನ್ ಮಾಡಿ ಅಲ್ಲಿಗೆ ಯಾರ ಸಹಾಯ ಇಲ್ಲದೆ ತಲುಪ ಬಹುದು . ಕಾನ್ಫರೆನ್ಸ್ ,ಪ್ರವೇಶ ದರ ಇರುವ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಒಳ ಬಿಡಲು ಮತ್ತು ಸಂಸ್ಮರಣಿಕೆ ಪಡೆಯಲು ಒಂದು ಕೋಡ್ ಕೊಡುವರು . ಇನ್ನು ಭೋಜನ ಶಾಲೆಗೆ ಪ್ರವೇಶಿಸುವಾಗ ಕಂಠ ಭೂಷಿತ QR ಪಟ್ಟಿ ಸ್ಕ್ಯಾನ್ ಮಾಡಿಯೇ ಒಳ ಬಿಡುವರು .
ಮದುವೆ ಇತ್ಯಾದಿ ಸಮಾರಂಭ ಗಳಲ್ಲಿ ಪುರೋಹಿತರಿಗೆ ದಕ್ಷಿಣೆ ಕೊಡಲೂ ಇದು ಬರಬಹುದು . ದಕ್ಷಿಣೆ ಕೊಡುವಾಗ ಎಲೆ ಅಡಿಕೆ ತೆಂಗಿನ ಕಾಯಿ ಇಡುವ ಕ್ರಮ ಇದೆ .ಅದನ್ನು ಸಾಂಕೇತಿಕ ವಾಗಿ ವಿಡಿಯೋ ಮಾಡಿ ಕೊಂಡು ಅದಕ್ಕೆ ಒಂದು ಕೋಡ್ ಕೊಟ್ಟರೆ ಆಯಿತು . ಊಟದ ದಕ್ಷಿಣೆ ಇತ್ಯಾದಿ ಗೆ ಅತಿಥಿಗಳು ತಮ್ಮ ಖಾತೆಯ ಕೋಡ್ ಎಡದ ಕೈ ಮೂಲಕ ಎತ್ತಿ ಹಿಡಿದರೆ ಆತಿಥೇಯರು ಸಾಲಾಗಿ ಸ್ಕ್ಯಾನ್ ಮಾಡ ಬಹುದು .
ಹಲವು ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು ಬಡವಾಗಿದ್ದು ಕತೆ ಕವನ ಇತ್ಯಾದಿಗಳ QR ಕೋಡ್ ಕೊಟ್ಟು ಬೇಕಾದರೆ ಸ್ಕ್ಯಾನ್ ಮಾಡಿ ಓದಿಕೊಳ್ಳಿ ಎಂದು ಕೈ ತೊಳೆದು ಬಿಡುವುದರಿಂದ ನಮ್ಮಂತಹ ವೃದ್ಧರಿಗೆ ನಿರಾಸೆ