ಬೆಂಬಲಿಗರು

ಸೋಮವಾರ, ಜುಲೈ 10, 2023

 



ನಾವು ಪ್ರತಿಯೊಬ್ಬರು ತಮ್ಮ ಅಧ್ಯಯನ ಮತ್ತು ಜೀವನಾನುಭವ ದಿಂದ ಒಂದೊಂದು ವಿಚಾರಧಾರೆ ಯನ್ನು ಹೊಂದಿರುತ್ತೇವೆ ಯಾದರೂ ಹಲವಾರು ಕಾರಣಗಳಿಂದ ಅದನ್ನು ನೂರಕ್ಕೆ ನೂರು ಅದನ್ನುನಿತ್ಯ ಜೀವನದಲ್ಲಿ ಆಚರಿಸಲು ಆಗದೆ ಒಳಗೊಳಗೇ ಪರಿತಪಿಸುತ್ತಿರುತ್ತೇವೆ . ಕುಟುಂಬ ಮತ್ತು ಸಾಮಾಜಿಕ ಕಾರಣಗಳಿಂದ ಹಲವು ಕಾಂಪ್ರೊಮೈಸ್ ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ . ಇನ್ನು ಹಲವರು ಮನಸಾರೆ ಆಡುವುದೊಂದು ಮಾಡುವುದೊಂದು ಮಾಡುತ್ತಿರುತ್ತಾರೆ ;ಅದು ಆಷಾಢಭೂತಿ ತನ . ಇವೆಲ್ಲಕ್ಕೂ ಮೀರಿ ಅಪರೂಪಕ್ಕ್ಕೆ ಕೈಬೆರಳು ಎಣಿಕೆಯಲ್ಲಿ ಒಬ್ಬರು ಇದ್ದಾರೆ .ಅಂತಹವರ ಪೈಕಿ ಒಬ್ಬರು ಶ್ರೀ ಗೋಪಾಲಕೃಷ್ಣ ಉಪಾಧ್ಯಾಯರು . 

ನಿನ್ನೆ ಅವರು ತಮ್ಮ ಪೋಸ್ಟ್ ನಲ್ಲಿ  ಒಂದು ಮಾತು ಬರೆದಿರುವರು . "ತಾವು ಪ್ರಕೃತಿ ಮತ್ತು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವನು ." ಈ ವಿಷಯವನ್ನು ಅಕ್ಷರಶಃ ಜೀವನದಲ್ಲಿ ಪಾಲಿಸಿದವರು . ಬಸವಣ್ಣದವರ ಕಾಯಕವೇ ಕೈಲಾಸ . ಈಯೆರಡರಲ್ಲಿ ಚ್ಯುತಿ ಕಂಡರೆ ಕೂಡಲೇ ತಮ್ಮ ಅಸಂತೋಷ ವ್ಯಕ್ತ ಪಡಿಸುವರು . ನನಗೇ ಹಲವು ಬಾರಿ ತಾವು ಸರಕಾರಿ ನೌಕರಿಯಲ್ಲಿ ಇದ್ದು ಅನಾವಶ್ಯಕ ಅಪಾಯ ಎಳೆದು ಕೊಳ್ಳುತ್ತೋದ್ದರೋ ಎಂದು .ಆದರೆ ಅವರ ಅಭಿಪ್ರಾಯಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದರೆ ಅವರಲ್ಲಿ ಜಾತಿ ,ಪಕ್ಷ ಅಥವಾ ಲಿಂಗ ತಾರತಮ್ಯ ದ ಪೂರ್ವಾಗ್ರಹ ಗಳು ಕಾಣಿಸದೆ ವಿವೇಕಾನಂದ ,ಕುವೆಂಪು ಮತ್ತು ಎಚ್ ನರಸಿಂಹಯ್ಯ ನವರ ದಾರಿ ಯಲ್ಲಿ ನಡೆಯಯುವರಂತೆ ಕಾಣಿಸುತ್ತಾರೆ . 

ಈ ಉಪಾಧ್ಯಾಯ ಸರ್ ನೇಮ್ ಅನ್ನು ತಮಗೆ ಸಮರ್ಥವಾಗಿ ಅನ್ವರ್ಥ ಮಾಡಿಕೊಂಡವರು . (ನಾನು ಕಂಡಂತೆ ಮತ್ತು ಗೋಪಾಲ ಕೃಷ್ಣರು ಮೂಢನಂಬಿಕೆ ಎಂದು ಹೇಳಬಹುದಾದಂತೆ ಈ ಸರ್ ನೇಮ್ ಇರುವವರು ಬಹಳ ಮಂದಿ ಜೆನೆಟಿಕಲಿ ಬುದ್ದಿವಂತರು ).. ಇವರು ಒಳ್ಳೆಯ ಅಧ್ಯಾಪಕರು ಇರಬೇಕಾದಂತೆ ಸದಾ ಕಲಿಯುವುದಕ್ಕೆ ತೆರೆದು ಕೊಂಡು ಇರುವವರು . ಸುತ್ತ ಮುತ್ತ ಸಾಹಿತ್ಯ,ಸಾಂಸ್ಕೃತಿಕ  ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ   ಇವರು  ಹಾಜರಿ .ರಾಮಕೃಷ್ಣ ಮಿಷನ್ ನವರು ಸ್ವಚ್ಛ ಪುತ್ತೂರು ಅಭಿಯಾನ ನಡೆಸಿದಾಗ ತಾವೂ ಪೊರಕೆ ಹಿಡಿದು ಗುಡಿಸುವದು ನಾನೇ ಕಣ್ಣಾರೆ ಕಂಡಿದ್ದೇನೆ . ಮೃದು ಭಾಷಿ ಮತ್ತು ಹೊರನೋಟಕ್ಕೆ ಸಂಕೋಚ ಸ್ವಭಾವದವರಂತೆ ಕಾಣುವ ಇವರು ಮೊದಲೇ ತಿಳಿಸಿದಂತೆ ಒಂದು ರೀತಿಯಲ್ಲಿ ಖಡಾಖಡಿ . ಇವರ ಮನೆಯ ಹತ್ತಿರ ಇದ್ದ ಶಿವರಾಮ ಕಾರಂತರ ಗಾಳಿ ಬೀಸಿರ ಬಹುದು . 

ಒಟ್ಟಿನಲ್ಲಿ ಉಪಧ್ಯಾಯರನ್ನು ಕಂಡರೆ ನನಗೆ ಅಭಿಮಾನ ,ಸಂತೋಷ ಮತ್ತು ಸ್ವಲ್ಪ ಮಟ್ಟಿನ ಅಸೂಯೆ .ಅಸೂಯೆ ಮನಸು ಒಪ್ಪುವಂತೆ ನಡೆ ನುಡಿ ಬಾಳು ಅವರಂತೆ ನನಗೆ ನಡೆಸಲು ಆಗುತ್ತಿಲ್ಲವಲ್ಲ ಎಂದು . 

ಅರುವತ್ತು ತುಂಬಿದ ಇವರಿಗೆ ಶುಭಾಶಯಗಳು .ನಿವೃತ್ತಿ ನಂತರ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲಿ ಇನ್ನೂ ಸಕ್ರಿಯವಾಗಿ ಕಾಣಿಸಲಿ . 

ಬುಧವಾರ, ಜುಲೈ 5, 2023

ಕುಟುಂಬ ನಾಮ ಪುರಾಣ

 

ನನ್ನ ಮಾತಪಿತ ರಿಗೆ  ಹತ್ತು ಮಕ್ಕಳು .ಮೊದಲನೇ ಮಗನಿಗೆ ಮನೆ ಅಜ್ಜನ ಹೆಸರು ಮಹಾಬಲ . ಅಜ್ಜಿ,ತಾಯಿ ಮತ್ತು ಚಿಕ್ಕಮ್ಮ ಅಜ್ಜನ ಹೆಸರು ಹೇಳುವಂತಿಲ್ಲ ವಾದುದರಿಂದ  ಅವನನ್ನು ಮಾಣಿ ಎಂದು ಕರೆಯುತ್ತಿದ್ದರು.ನಾವು ಕಿರಿಯರು ದೊಡ್ಡಣ್ಣ ಎಂದು .ನಂತರ ನನ್ನ ಅಕ್ಕ . ಆಕೆಗೆ ಮನೆ ಅಜ್ಜಿಯ ಹೆಸರು  ಪರಮೇಶ್ವರಿ ಎಂದು ,ನಮ್ಮನ್ನು ಸಹಿತ ಹಿರಿ ಕಿರಿಯರು ಎಲ್ಲರೂ ಅಕ್ಕ ಎನ್ನುವರು . ಇಲ್ಲಿ ಕೂಡಾ ತಾಯಿ ಚಿಕ್ಕಮ್ಮ ಅತ್ತೆ ಹೆಸರು ಹೇಳುವಂತಿಲ್ಲ ತಾನೇ . ನಂತರದವರು ಅಣ್ಣ.ಅವರಿಗೆ ಅಜ್ಜನ ಮನೆ ಅಜ್ಜನ ಹೆಸರು ಕೃಷ್ಣ ಎಂದು .ಅಜ್ಜನ ಮನೆ ಅಜ್ಜಿ ಮತ್ತು ಅಮ್ಮ ಮಾತ್ರ ಅವರನ್ನು ಮೇಲೆ ಹೇಳಿದ ಕಾರಣ ಕ್ಕಾಗಿ ಮುದ್ದು ಎಂದು ಕರೆದರೆ ಉಳಿದವರು ಹೆಸರು ಹಿಡಿದು ಕರೆಯುತ್ತಿದ್ದರು .ಕಿರಿಯರಿಗೆ ಅವರು ಪುಟ್ಟಣ್ಣ . ನಮ್ಮ ಪೈಕಿ ಬುದ್ದಿಶಾಲಿ ಯೂ ,ಮಿತ ಭಾಷಿಯೂ ಆಗಿದ್ದು ಸುರತ್ಕಲ್ ನಲ್ಲಿ ಇಂಜಿನೀರಿಂಗ್ ಮಾಡಿ  ಜಗತ್ತಿನೆಲ್ಲೆಡೆ ಕೆಲಸ ಮಾಡಿ ಈಗ ಸುರತ್ಕಲ್ ನಲ್ಲಿಯೇ  ನೆಲೆಸಿರುವರು.ಆಮೇಲೆ ಅಣ್ಣ ಗಣಪತಿ ಭಟ್ . ನಾವೆಲ್ಲಾ ಕುಞ್ಞಣ್ಣ ಎಂದು ಕರೆಯುವೆವು  , ಮೊದಲಿನವರು ನಮಗಿಂತ ವಯಸಿನಲ್ಲಿ ತುಂಬಾ ದೊಡ್ಡವರು ಆದುದರಿಂದ ನಮಗೆ ಬಹಳ  ಸಲುಗೆ ಮತ್ತು ಕ್ಲೋಸ್ ಆಗಿ ಇರಲಿಲ್ಲ ಎಂದೇ ಹೇಳ ಬಹುದು .ಪ್ರೀತಿ ,ಭಯ ಭಕ್ತಿ ಇದ್ದುವು . ಕುಞ್ಞಣ್ಣ ನನಗೆ , ಚಿಕ್ಕಪ್ಪನ ಮಕ್ಕಳೂ ಸೇರಿ ಕಿರಿಯರಿಗೆನಾಯಕ . ಶಾಲೆಗೆ ಹೋಗುವಾಗ ನಮ್ಮ ಮಕ್ಕಳ ಸೈನ್ಯ ಅವನ ಅಂಕೆಯಲ್ಲಿ .ಪೇಟೆಯಲ್ಲಿ ಏನಾದರೂ ನಮಗೆ ಕೊಳ್ಳ ಬೇಕಿದ್ದರೆ ದುಡ್ಡು ಅವನ ಬಳಿ  ಕೊಡುತ್ತಿದ್ದರು .ನಾವು ಏನಾದರೂ  ಮಂಗ ಬುದ್ದಿ ಮಾಡಿದರೆ ಮನೆಯಲ್ಲಿ ಅವನು ರಿಪೋರ್ಟ್ ಮಾಡಬೇಕಿತ್ತು . ಅವನು ಹೇಳಿಕೊಟ್ಟ ಕೆಲವು ಈಗಲೂ ನೆನಪಿವೆ .ಉದಾ ಉಪಕಾರೋಪಿ ನೀಚಾನಮ್ ಅಪಕಾರಾಯ ಕಲ್ಪತೆ ಪಯಪಾನಾಮ್ ಭುಜಂಗಮ್ ಕೇವಲ ವಿಷ ವರ್ಧನಮ್ (ಪಂಚತಂತ್ರ ದಶ್ಲೋಕ ; ನೀಚರಿಗೆ ಉಪಕಾರ ಮಾಡಿದರೆ ಅಪಕಾರವನ್ನೇ ಮಾಡುವರು . ಹಾವಿಗೆ ಹಾಲು ಎರೆದರೂ ವಿಷವು ಏರುವಂತೆ .),ಇನ್ನೊಂದು ಶ್ಲೋಕ ಅವನಿಗೆ ಅರ್ಥವಾಗದ ಕಾರಣ  ತಾನೇ ಅದನ್ನು ಮಾರ್ಪಡಿಸಿ ಹೇಳುತಿದ್ದನು . ಅದು ನಹಿ ಜ್ಜ್ನಾನೇನ ಸದೃಶಮ್ (ಮೈಸೂರ್ ವಿಶ್ವವಿದ್ಯಾಲಯ ಲಾಂಛನ ದಲ್ಲಿ ಇದೆ ).ಅದನ್ನು ಆತನು ನಹಿ ಜ್ಜ್ನಾನೇನ ಮೃಗ ಸದೃಶಮ್ ಎಂದರೇ ಜ್ನಾನ ಹೀನನು ಪಶು ಸಮಾನ ಎಂದು ವಿವರಿಸುತ್ತಿದ್ದನು .ಮೂಲ ಶ್ಲೋಕದ ಅರ್ಥ  ಅರಿವಿಗೆ ಸಮಾನವಾದ್ದು ಇಲ್ಲ ಎಂದು ಆಗ ಬೇಕು ಎಂದು ತೋರುತ್ತದೆ .ಈತನೇ ನಮ್ಮ ಕೊತ್ತಣಿಕೆ  ಕ್ರಿಕೆಟ್ ಟೀಮ್ ಕ್ಯಾಪ್ಟನ್ ಕಮ್ ಅಂಪೈರ್ .ಅವನ ಬಳಿ ಒಂದು ಬೀಗ ಹಾಕುವ  ಡೆಸ್ಕ್ ಇತ್ತು.ಅದರಲ್ಲಿ ಮಸ್ತ್ ಎಂಬ ಸೋಡಾ ಮಾತ್ರೆ ಇದ್ದು ಅದನ್ನು ನೀರಿಗೆ ಹಾಕಿದಾಗ ಬುಳುಬುಳು ಎಂದು ಗ್ಯಾಸ್ ಬಂದು ಶರ್ಬತ್ ಆಗುವದು ,ಅದನ್ನು ಕುಡಿಯುವುದು .ನಾವೆಲ್ಲಾ ನಮಗೊಂದು ಕೊಡು ಎಂದು ದುಂಬಾಲು ಬೀಳುತ್ತಿದ್ದೆವು  .ಈತನ ಕೈಬರಹ ಬಹಳ ಛಂದ(ನನ್ನದು ಕಾಗೆ ಕಾಲು ).ಲೆಕ್ಕ ಪತ್ರಗಳು ಚೊಕ್ಕ ಮತ್ತು up to date . ಮನ ಬಿಚ್ಚಿ ಕೈಕರಣ ಮಾಡಿ ಮಾತನಾಡುವನು . ಕ್ಯಾಮ್ಕೋ ಉದ್ಯೋಗಿಯಾಗಿ ನಿವೃತ್ತನಾಗಿ ನನ್ನ ಮನೆಯ ಸಮೀಪ ವಾಸವಿರುವನು. ಈಗಲೂ ನನ್ನ ಗಾರ್ಡಿಯನ್  ಆಗಿದ್ದು ನನಗೆ ಪಕ್ಕದಲ್ಲಿ ಅಣ್ಣ ಇದ್ದಾನೆ ಎಂಬ ಧೈರ್ಯ  .ಅವನ ಪತ್ನಿ ಸುಬ್ಬು ಲಕ್ಷ್ಮಿ ಅಧ್ಯಾಪಕಿ ಯಾಗಿ ಉಳ್ಳೆಯ ಹೆಸರು ಗಳಿಸಿ ಈಗ ನಿವೃತ್ತ ಜೀವನ .ನೆಹರೂ ನಗರದಿಂದ ಪುತ್ತೂರು ಪೇಟೆಗೆ ನೆಡೆದು ಕೊಂಡೇ ಹೋಗುವರು . ಮುಂಜಾನೆ ವಾಕಿಂಗ್ ಸಮಯ ನಮ್ಮ ಭೇಟಿ ಆಗುವುದು .ಅವನಿಗೆ ದಾರಿಯಲ್ಲಿ ಸಿಗುವ ಎಲ್ಲರೂ ಮಿತ್ರರು . ಅವರೊಡನೆ ಉಭಯ ಕುಶಲೋಪರಿ ಮಾಡಿಯೇ ಮುಂದುವರಿಯುವುದು . 

ಆಮೇಲೆ ನನ್ನ ಅಕ್ಕ ಭಾಗ್ಯ ಲಕ್ಷ್ಮಿ .ಅಜ್ಜನ ಮನೆ ಅಜ್ಜಿ ಹೆಸರು .ಎಲ್ಲರೂ ಒಪ್ಪಕ್ಕ ಎಂದು ಕರೆಯುವುದು .ಇವರ ಬಗ್ಗೆ ಹಿಂದೆ ಬರೆದಿದ್ದೇನೆ .ನನ್ನಿಂದಲೇ ಅಕ್ಕ ಆದ  ಕಾರಣ ನನ್ನಲ್ಲಿ ಬಳಕೆ ಹೆಚ್ಚು .ಎರಡು ಜಡೆ ಹಾಕಿಕೊಂಡು ನನ್ನ ಕೈ ಹಿಡಿದು ಜೋಪಾನವಾಗಿ ಹೆಮ್ಮೆಯಿಂದ ಶಾಲೆಗೆ ಕರೆದು ಕೊಂಡು ಹೋಗುತ್ತಿದ್ದ ಚಿತ್ರಣ ಮಸುಕು ಮಸುಕಾಗಿ ಯಾದರೂ ಆಪ್ತವಾಗಿ ನೆನಪಿದೆ . ಆಕೆಗೆ ಒತ್ತಿನ ನಾನು ಪದ್ಮನಾಭ ..ಹಿರಿಯರು ಪದ್ಮ ಎಂದೂ ಕಿರಿಯರು ಪದ್ದನ್ನ ಎಂದೂ ಕರೆಯುವರು .ಶಾಲೆಯಲ್ಲಿ ಅಂಕ ಕಡಿಮೆ ಬಂದರೆ ಪೆದ್ದಣ್ಣ ಎನ್ನುವರು ,ಈಗ ನಾನು  ಎ  ಪಿ ಭಟ್ ಆಗಿದ್ದೇನೆ . ಪಠ್ಯೇತರ ಪುಸ್ತಕಗಳನ್ನು ಓದುವ ಹುಚ್ಚು ಇದ್ದ ನಾನು ಮನೆಗೆ ಮತ್ತು ಮನೆಯವರಿಗೆ ಆಗಿ ಬಂದದ್ದು ಕಡಿಮೆ . 

ನನ್ನ ತಮ್ಮ ಲಕ್ಷ್ಮಿ ನಾರಾಯಣ .ಕರೆಯುವುದು ನಾರಾಯಣ ಎಂದು ,ಕಿರಿಯರಿಗೆ ನಾನೆಣ್ಣ  . ತುಂಬಾ ಧೈರ್ಯ ಶಾಲಿ ಮತ್ತು ಪ್ರಾಣಿ ಪ್ರಿಯ . ವ್ಯವಹಾರ ಜಾಣ  .ಎಂಜಿನೀರ್ ಆಗಿ ಉಡುಪಿಯಲ್ಲಿ ಇದ್ದು ,ನನ್ನ ಸಾಕು ನಾಯಿ ಬಗ್ಗೆ ಪುಸ್ತಕ ಬರೆದಿದ್ದು ಅದು ಆಸಕ್ತರ  ಮೆಚ್ಚುಗೆ ಗಳಿಸಿದೆ .. ಕೊನೆಯ ತಮ್ಮ ಶ್ರೀನಿವಾಸ .ಎಲ್ಲರೂ ತಮ್ಮ ಎಂದು ಕರೆಯುವರು ,ಅಕ್ಕಂದಿರ ಮಕ್ಕಳು ತಮ್ಮ ಮಾವ ಎಂದು ಕರೆಯುವರು !. ನಾವು ಎರಡು ಅಣ್ಣಂದಿರಿಗಿಂತ ಮೊದಲೇ ಕೆಲಸಕ್ಕೆ ಸೇರಿದವನು ಮಾತ್ರವಲ್ಲ ನನಗೆ ವಾಹನ ಖರೀದಿಸಲು ಹಣ ಸಹಾಯ ಮಾಡಿದ್ದಲ್ಲದೇ ನನಗೆ ಬೈಕ್ ಸವಾರಿ ಕಲಿಸಿಕೊಟ್ಟವನು . ಸಾಧು ಸ್ವಭಾವ ,ಏಲ್ಲರಿಗೂ ಸಹಾಯ ಹಸ್ತ . ಬೆಂಗಳೂರಿನಲ್ಲಿ ನೆಲೆಸಿದ್ದು ದುರದೃಷ್ಟ ವಶಾತ್ ಅನಾರೋಗ್ಯದಿಂದ ನಮ್ಮನ್ನು ಅಗಲಿದ .ಅವನ ಸರ್ ನೇಮ್ ಮೂರ್ತಿ . ಮನೆಯಲ್ಲಿ ಮತ್ತು ಬಳಗದಲ್ಲಿ ಬಹಳ ಮಂದಿ ಮೂರ್ತಿ ಎಂದು ಕರೆಯುತ್ತಿದ್ದರು . 

ಕೊನೆಗೆ ಇಬ್ಬರು ತಂಗಿಯರು ,ಪದ್ಮಾವತಿ ಮತ್ತು ವೀಣಾ . ಪದ್ಮಾವತಿ ಯ ಗಂಡ ಮುಂಬೈ ಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಇದ್ದು ಅಲ್ಲಿನ ಪ್ರತಿಷ್ಠಿತ ಬಾಂದ್ರಾ  ರಿಕ್ಲ ಮೇಷನ್ ಬಳಿ ವಸತಿ ಗೃಹದಲ್ಲಿ ಇದ್ದರು .ಮುಂಬೈ ಗೆ ಹೋದ ಅನೇಕರಿಗೆ ಉಪಚಾರ ಮಾಡಿರುವರು .ಈಗ ಪುತ್ತೂರಿನಲ್ಲಿ ನೆಲೆಸಿರುವರು . ಕೊನೆಯವಳು ವೀಣಾ ವಿಜ್ಞಾನಿ ಯಾಗಿ ಬೆಂಗಳೂರಿನಲ್ಲಿ ವಾಸ .ಇವರಿಬ್ಬರೂ ತಮ್ಮ ಹೆಸರಿನಿಂದ ಕರೆ ಯಲ್ಪಡುವರು . 

ಇದನ್ನೆಲ್ಲಾ ಬರೆಯಲು ಕಾರಣ ಇಂದು ಮುಂಜಾನೆ ಜಡಿ ಮಳೆಗೆ ಕುಞ್ಞಣ್ಣ  ಮನೆಯಲ್ಲಿ ಮಾಡಿದ ಬಿಸಿ ಬಿಸಿ ಹಲಸಿನ ಹಣ್ಣಿನ ಕೊಟ್ಟಿಗೆ (ಕಡುಬು )ತಮ್ಮನಿಗೆ ಎಂದು ತಂದು ಕೊಟ್ಟುದು ,ಅದನ್ನು ತಿನ್ನುವಾಗ ಪರಿಮಳದೊಂದಿಗೆ ಹಳೇ ನೆನಪುಗಳು ಬಂದವು ..ಕೆಳಗೆ ಇರುವುದು ಅವನ ಚಿತ್ರ 




 

 

ಸೋಮವಾರ, ಜುಲೈ 3, 2023

ಭಾಷಾಂತರ

 ನನಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ ಎಂಬ ಕೀಳರಿಮೆ ಇಲ್ಲದಿದ್ದರೂ ಬೇಸರ ವಿದೆ . ಇನ್ನೊಬ್ಬರು ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವಲ್ಲಾ ಎಂದು ಮಾತ್ರ .ಆದರೆ ಕನ್ನಡ ಚೆನ್ನಾಗಿ ಬರುವುದಿಲ್ಲ ಎಂಬುದು ಎರಡೂ ಇದೆ . ಏಕೆಂದರೆ ಅದು ಮಾತೃ ಭಾಷೆ . 

ಮೊನ್ನೆ ದುಬಾಯಿ ಯಿಂದ ಬೆಂಗಳೂರಿಗೆ ವಿಮಾನ ತಲುಪಿದಾಗ ಗಗನ ಸಖಿ ನನ್ನನ್ನು ನೋಡಿ "ಆರ್ ಯು ಕೆ ,ಆರ್ಯು ಕೆ ಎಂದು ಕೇಳಿದಳು .ನಾನು ನೋ ನೋ ಐ ಆಮ್ ಎ ಪಿ ಎಂದೆ .ಆಕೆ ತಲೆ ಅಲ್ಲಾಡಿಸಿ ಪುನಃ ಪುನಃ ಅದೇ ಪ್ರಶ್ನೆ ಕೇಳಿದಳು .ನನ್ನ ಪಕ್ಕದಲ್ಲಿ ಇದ್ದ ಪ್ರಯಾಣಿಕರು ನನ್ನ ಭಾಷಾ ಅಜ್ಞಾನ ಕ್ಕೆ ಕನಿಕರ ಪಟ್ಟು 'ಶಿ ಐಸ್ ಆಸ್ಕಿ೦ಗ್  ಆರ್ ಯು ಓಕೆ ?"ಎಂದರು .ನಾನು ಓಕೆ ಓಕೆ ಈ ಆಮ್ ಓಕೆ ಥಾಂಕ್ ಯು "ಎಂದೆ . 

ನಮ್ಮಂತಹ ಕನ್ನಡ ಮೀಡಿಯಂ ಗಿರಾಕಿಗಳ ಕಷ್ಟ ಇದು . ನಾನು ಹಿಂದೊಮ್ಮೆ ನಮ್ಮ ಪಕ್ಕದ ಮನೆಯ ಹುಡುಗಿಗೆ' ಯು ಆರ್ ಗುಡ್ ಗರ್ಲ್' ಎಂದಾಗ ಆಕೆ 'ಈ ಮಾಮನಿಗೆ ಇಂಗ್ಲಿಷ್ ಸರಿ ಬರುವುದಿಲ್ಲ ವಾಟ್ ಗರ್ಲು  ದಟ್ ಐಸ್ ಗಲ್ . ' ಅದೇ ರೀತಿ ಬರ್ಡ್ ಇತ್ಯಾದಿ ಗಳನ್ನು ಉಚ್ಚರಿಸುವಾಗ ರ ಅರ್ಧ ಮಾತ್ರ ಬರಬೇಕಂತೆ . ಒಂದು ಮಲಯಾಳ ಸಿನೆಮಾದಲ್ಲಿ  ನಟನೊಬ್ಬನು ಕೆನಡಾ ದೇಶದಲ್ಲಿ ಇಂಗ್ಲಿಷ್ ಮಾತನಾಡುವಾಗ ಬಾಯಲ್ಲಿ ಒಂದು ಚಮಚ ಇಟ್ಟುಕೊಂಡು ಮಾತನಾಡಿದರೆ ನಮ್ಮ ಇಂಗ್ಲಿಷ್ ಅವರ ಇಂಗ್ಲಿಷ್ ಆಗಿ ಮಾರ್ಪಡುವುದು ಎಂದು ತೋರಿಸಿದ್ದನ್ನು ನೋಡಿದ್ದೇನೆ . 

ಮೊನ್ನೆ ಅಮೇರಿಕಾದಲ್ಲಿ ಮಕ್ಕಳ ಜೊತೆ ವಾಕಿಂಗ್ ಹೋಗುವಾಗ ನಮ್ಮ ನಾಯಿ ಎದುರಿನಿಂದ ಬರುತ್ತಿರುವ ಅದರ ಮಿತ್ರನನ್ನು ಕಂಡು ಅದರ ಜತೆ ಲಾಗ ಹಾಕತೊಡಗಿತು .ಆಗ ಅಲ್ಲೇ ಬರುತ್ತಿದ್ದ ಸ್ಥಳೀಯ ವ್ಯಕ್ತಿ ನನ್ನ ಬಳಿ :"ದೆ ಆರ್ ಬಡ್ಡಿಸ್ ?"ಎಂದು ನಕ್ಕ . ಈ ಬಡ್ಡಿ ,ಗೈ ಡ್ಯೂಡ್ ಇತ್ಯಾದಿ ಶಬ್ದಗಳನ್ನು ನಮಗೆ ಯಾರೂ ಕಲಿಸಿಲ್ಲ ವಲ್ಲ ಎಂದು ಬೇಸರ ಪಟ್ಟೆ .ಮಾಡಿದ ಮತ್ತು ಮಾಡದ ತಪ್ಪಿಗೆ ಮಾಷ್ಟ್ರು ನಮಗೆ ಬಡ್ಡಿ ಮಗನೆ ಎಂದು ಬೆನ್ನಿಗೆ ಎರಡು ಬಿಗಿದದ್ದು ಉಂಟು . 

ಬಂಗಾಳದ ಒಬ್ಬ ಯುವತಿ ಬ್ಯಾಂಕ್ ಉದ್ಯೋಗಿ .ಬೆಂಗಾಲಿಗಳ ಜತೆ ನಾನು ಹಿಂದಿ ಮಾತನಾಡುವುದು . ಬಂಗಾಳಿಯಲ್ಲಿ ಕಾ ವನ್ನು ಕೋ ,ದಾ ವನ್ನು ದೋ ಮಾಡಿದರೆ ಆಯಿತು ಎಂದು ತಿಳಿದಿದ್ದೆ .ನೋವು ಇದೆಯಾ ಎಂದು ಕೇಳುವುದಕ್ಕೆ ದೋರ್ದ್ ಹೈ ಎಂದುದಕ್ಕೆ ಅವಳು ಇಂಗ್ಲಿಷ್ ನಲ್ಲಿ ಅದು ಸರಿಯಾದ ಶಬ್ದ ಅಲ್ಲ ,ಎಂದು ಬೇರೆ ಏನೋ ಹೇಳಿದಳು . ತಾನು ವಿಭಾಗೀಯ ಕಚೇರಿಯಲ್ಲಿ ಇರುವುದು ಅದೃಷ್ಟ ,ಭಾಷೆ ಪ್ರಶ್ನೆ ಬಾರದು ಎಂದಳು .ನಾನು "ನಿಮ್ಮ ಅದೃಷ್ಟ ವಲ್ಲ ,ಬ್ರಾಂಚ್ ನಲ್ಲಿ ಇದ್ದರೆ ನೀವು ಕಷ್ಟ ಪಟ್ಟಾದರೂ ಒಂದು ಭಾಷೆ ಕಲಿಯುತ್ತಿದ್ದೀರಿ "ಎಂದೆ .ನಗುತ್ತಾ ಹೌದು ಎಂದಳು . 

https://fb.watch/lxZ_eMZlD1/

ಶನಿವಾರ, ಜುಲೈ 1, 2023

 ಸಂಕಟದಲ್ಲಿರುವ ಜೀನ್ಸ್ 

ಕಳೆದ ಬಾರಿ ಅಮೇರಿಕಾ ದೇಶಕ್ಕೆ ಹೋಗಿದ್ದಾಗ  ನಾನು ಆಸ್ಪತ್ರೆಗೆ ಧರಿಸುವ  ಹಲವು ಜತೆ  ಪ್ಯಾಂಟ್ ಶರ್ಟ್ ಗಳನ್ನು ಚೆನ್ನಾಗಿ ಇಸ್ತ್ರಿ ಮಾಡಿ ಕೊಂಡು ಹೋದರೆ ಅವು ಬ್ಯಾಗಿನ ತೂಕ ಹೆಚ್ಚಿಸಿದವೇ ವಿನಃ ಉಪಯೋಗಕ್ಕೆ ಬಂದುದು ಕಡಿಮೆ . ಯಾಕೆಂದರೆ ಅಲ್ಲಿ ಪ್ಯಾಂಟ್ ಆಗ ಬೇಕು ಎಂದು ಇಲ್ಲ .ಚಡ್ಡಿಯೂ ನಡೆಯುತ್ತದೆ ..ಮಗನ ಚಡ್ಡಿಯೇ ಉಪಯೋಗಕ್ಕೆ ಬಂದಿತು .ಅಲ್ಲದೆ ಅಲ್ಲಿ ಇಸ್ತ್ರಿ ಹಾಕುವ ಅವಶ್ಯಕತೆ ಇಲ್ಲ .ತೊಳೆದ ಪ್ಯಾಂಟ್ ಅಂಗಿ ಹಾಗೇಯೇ ಹಾಕಿಕೊಂಡು ಹೋಗ ಬಹುದು .ಪಾಶ್ಚಾತ್ಯರು ನಮಗೆ ಕೋಟ್ ಟೈ ಇತ್ಯಾದಿ ಕಲಿಸಿ ತಾವು ಮಾತ್ರ ಕೆಲವರನ್ನು ಮತ್ತು ಕೆಲವು ಸಂದರ್ಭ ಬಿಟ್ಟರೆ ಸಾದಾ ಉಡುಗೆಯಲ್ಲಿ ಇರುತ್ತ್ತಾರೆ ,.ನಾವು ಮಾತ್ರ ಇಲ್ಲಿಯ ಸೆಖೆಯಲ್ಲಿಯೂ ಕೋಟ್ ಟೈ ಇತ್ಯಾದಿ ಗೆ ಜೋತು ಬಿದ್ದಿದ್ದೇವೆ . 

ಈ ಬಾರಿ ನಾನು ಎರಡು ಮೂರು ಜತೆ ಸಾದಾ ಉಡುಗೆಯಲ್ಲಿ ಸುಧಾರಿಸಿದೆ ..ಒಂದು ಬಾರಿಯೂ ಇಸ್ತ್ರೀ ಹಾಕಲಿಲ್ಲ . 

ನಾನು ಯಾವ ಫ್ಯಾಷನ್ ಗೂ ವಿರೋಧಿ ಅಲ್ಲ . ಅದು ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಷಯ .ಆದರೆ ನಮ್ಮಲ್ಲಿಯೂ ಈಗ ವ್ಯಾಪಕವಾಗಿರುವ ಮತ್ತು ಅಮೇರಿಕಾ ದಲ್ಲಿ ಎಲ್ಲಾ ಕಡೆ ಕಾಣುವ ಹರಿದ ಬಟ್ಟೆಯ ಫ್ಯಾಷನ್ ಮಾತ್ರ ನನಗೆ ಸೋಜಿಗ ಉಂಟು ಮಾಡಿದೆ . ಹುಡುಗರು ಮತ್ತು ಹೆಚ್ಚಾಗಿ ಹುಡುಗಿಯರು ಹರಿದ ಜೀನ್ಸ್ ಪ್ಯಾಂಟ್ ಮತ್ತು ಚಡ್ಡಿ ಹಾಕಿಕೊಂಡು ವಿಜೃಂಬಿಸುವುದು . ಮೊದಲು ಮೊದಲು ಇವರು ಸಮಾಜವಾದಿಗಳು ,ಬಡ ತನದಿಂದ  ಹರಿದ ಬಟ್ಟೆ ಹಾಕಿ ಕೊಂಡಿರುವ ಜನರೊಂದಿಗೆ ತಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡುವರು ಎಂದು ಕೊಂಡಿದ್ದೆ .ಆಮೇಲೆ ತಿಳಿಯಿತು ಅದು ಅಲ್ಲಾ ಎಂದು .ಅಂಗಾಂಗಗಳ ತುಣುಕು ತುಣುಕು ಪ್ರದರ್ಶಿಸಿ ಕುತೂಹಲ ಹುಟ್ಟಿಸುವುದು ,ಮತ್ತು ಹರಕು ಮುರುಕು ಬಟ್ಟೆಯ ಜತೆ ಹೋಲಿಸಿದಾಗ ಇರುವುದಕ್ಕಿಂತಲೂ ಸೌಂದರ್ಯ ಅಧಿಕ ಕಾಣುವದು . ಅದು ಬಿಟ್ಟು ಒಳಗೆ ಗಾಳಿಯಾಡಲಿ ಎಂದು ಇರಲಿಕ್ಕಿಲ್ಲ . ನನಗೊಂದು ಚಿಂತೆ ಈ ಉಡುಪುಗಳನ್ನು ಹೊಲಿದ ಮೇಲೆ ಹರಿಯುತ್ತಾರೋ ?ಅಲ್ಲ ಬಟ್ಟೆ ಹರಿದ ಮೇಲೆ ಹೊಲಿಯುತ್ತಾರೋ ?ಇಲ್ಲಿ ನೀವು ಕಂಡಿರಬಹುದು :ಹರಿಯುವಿಕೆಯಲ್ಲಯೂ ಒಂದು ಕ್ರಮ ಇದೆ .ಮೆಥಡ್ ಫಾರ್ ಮ್ಯಾಡ್ ನೆಸ್ ಎನ್ನುವಂತೆ . ಹರಿಯಲ್ಪಟ್ಟ ಬಟ್ಟೆಯ ಮಾರ್ಜಿನ್  ನೇರವಾಗಿ ಇರದೇ ಚಿಂದಿ ಚಿಂದಿಯಾಗಿ ಆದಷ್ಟು ಚಂದ ಎನ್ನುವರು   .ಇದನ್ನು ಡಿಸ್ಟ್ರೆಸ್ಸ್ಡ್ (ಸಂಕಟದಲ್ಲಿರುವ )ಜೀನ್ಸ್ ಬಟ್ಟೆ ಎಂದು ಕರೆಯುವರು .ಧರಿಸುವವರ ಸಂಕಟವೋ ,ನೋಡುಗರದ್ದೋ ಅಥವಾ ತಯಾರಿಸುವವರೋದ್ದೋ ನಾನರಿಯೆ .ಬಟ್ಟೆಯ  ಕೆಲವು ಭಾಗಗಳನ್ನು ಹಳತಾಗಿ ಮತ್ತು ಹರಿದಂತೆ ಮಾಡಿ ಉಡುಪು ತಯಾರು ಮಾಡುವದು . ಉಡುಪಿನ  ಕೈ ಮತ್ತು ಸೊಂಟದಲ್ಲಿ ಆಯಕಟ್ಟಿನ ಜಾಗದಲ್ಲಿ ರಂದ್ರ ಇದ್ದರೆ  ನರ್ಸ್ ನವರಿಗೆ ಇಂಜೆಕ್ಷನ್ ಕೊಡುವುದು ಸುಲಭ 

ಅಮೆರಿಕಾ ದಲ್ಲಿಯೂ ನಿರ್ಗತಿಕರು ಇದ್ದಾರೆ .ತಮ್ಮ ಹಳೇ ಉಡುಪುಗಳನ್ನು ಅವರಿಗೆ ದಾನ ಮಾಡಲು ಇಚ್ಚಿಸುವವರು  ಪೆಟ್ರೋಲ್ ಬಂಕ್ ಗಳಂತಹ  ಜಾಗಗಳಲ್ಲಿ ಇಟ್ಟಿರುವ ಪೆಟ್ಟಿಗೆಗಳಲ್ಲಿ ಅದನ್ನು ಹಾಕಿದರೆ ,.ರೋಗಾಣು ನಾಶ ಮಾಡಿ ,ತೊಳೆದು ಅರ್ಹರಿಗೆ ಕೊಡುವರಂತೆ . 

(ಚಿತ್ರಗಳು ಸಾಂಧರ್ಭಿಕ )