ಬೆಂಬಲಿಗರು

ಗುರುವಾರ, ಜೂನ್ 29, 2023





ನಮ್ಮ ಆಸ್ಪತ್ರೆ ಕ್ಯಾಂಟೀನ್ ಹರೀಶಣ್ಣ ಒಂದು ಮಾತು ಹೇಳಿದರು . ರೋಗಿಗಳು ಮತ್ತು ಸಂಬಂದಿಕರು ಬದನೆ ಕಾಯಿ ಮತ್ತು ಕ್ಯಾಬೇಜ್ ಸುತರಾಂ ಇಷ್ಟ ಪಡುವುದಿಲ್ಲ ಮತ್ತು ಮೂಗು ಮುರಿಯುತ್ತಾರೆ .ಆದುದರಿಂದ ಅವುಗಳ ಪದಾರ್ಥ ಮಾಡುವುದೇ ಇಲ್ಲ . ತರಕಾರಿ ಬೆಲೆ ಗಗನಕ್ಕೆ ಏರಿರುವ ಈ ದಿನಗಳಲ್ಲಿ ಇವು ನಿಜಕ್ಕೂ ಆಪತ್ ಬಾಂಧವರು . ಈ ಎರಡು ತರಕಾರಿಗಳು ಪೂರ್ವಗ್ರಹ ದಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಪಪ್ರಚಾರಕ್ಕೆ ಒಳಗೆ ಆಗಿವೆ .ಯಾವಾಗಲೂ ಅಸತ್ಯ ಬೇಗ ಹರಡುವುದು ಮತ್ತು ಜನ ಮಾನಸದಲ್ಲಿ ಗಟ್ಟಿಯಾಗಿ ನಿಲ್ಲುವುದು .ನನ್ನ ಮಾತಿನಲ್ಲಿ ವಿಶ್ವಾಸ ಇಲ್ಲದಿದ್ದರೆ ಇಂಟರ್ನೆಟ್ ಗೆ ಹೋಗಿ ಈ ತರಕಾರಿಗಳ ಬಗ್ಗೆ ಜಾಲಾಡಿರಿ .ಏನಾದರೂ ಸಿಕ್ಕಿದರೆ ತಿಳಿಸಿರಿ . 

   ಕ್ಯಾಬೇಜ್ ನಮ್ಮ ಊರಿಗೆ ಬಂದುದು ನನಗೆ ಒಂದು ಹತ್ತು ಹನ್ನೆರಡು ವರ್ಷ ಪ್ರಾಯ ವಾದ  ಮೇಲೆ . ಅಪರೂಪಕ್ಕೆ ಅದನ್ನು ತರುತ್ತಿದ್ದು ಅದರ ಸಾಂಭಾರ್ ಮತ್ತು ಪಲ್ಯ ಎಲ್ಲರಿಗೂ ಇಷ್ಟ ವಾಗಿತ್ತು .ಈಗೀಗ ಅದರ ಬಜ್ಜಿ ಮತ್ತು ಪತ್ರೊಡೆ ಕೂಡಾ ಮಾಡುವರು . ಈಗ ಮನೆಯಲ್ಲಿ ನಿತ್ಯಕ್ಕೆ ಮತ್ತು ಸಮಾರಂಭಗಳಲ್ಲಿ ಅದು ಕಾಣೆಯಾಗಿದೆ . ಅಲ್ಲದೆ ಯಾವುದೇ ಕೆಲಸ ಗೋಜಲು ಮಾಯವಾಗಿ ಮಾಡಿದರೆ ಅವನು ಅದನ್ನು ಕ್ಯಾಬೇಜ್ ಮಾಡಿದಾ ಮಾರಾಯ ;ಪೇಷಂಟ್ ಆ ಆಸ್ಪತ್ರೆಗೆ ಹೋಗಿ ಈಗ ಕ್ಯಾಬೇಜ್ ಆಗಿದ್ದಾನೆಯ ಇತ್ಯಾದಿ ಅನ್ನುವರು 

ಇನ್ನು ಬದನೆ ;ಇದನ್ನು ಮನೆಗಳಲ್ಲಿ ಈಗಲೂ ಮಾಡಿದರೂ ರೋಗಿಗಳಿಗೆ ಮತ್ತು ಬಾಳಂತಿಯರಿಗೆ ನಂಜು ಎಂದು ಕೊಡರು . ಈ ತರಕಾರಿಯ ಮೇಲೆ ಸುಖಾ ಸುಮ್ಮನೇ ನಂಜು ಕಾರಿದವರು ಯಾರು ?

ನನಗೆ ತರಕಾರಿ ಎಂದರೆ ಬಹಳ ಇಷ್ಟ .ಪಲ್ಯ ಮತ್ತು ಸಾಂಬಾರು ಹೋಳುಗಳನ್ನು ಪುನಃ ಪುನಃ ಹಾಕಿಸಿ ಕೊಳ್ಳುವೆನು .ಬಾಲ್ಯದಲ್ಲಿ ನಾನು ಊಟಕ್ಕೆ ಕುಳಿತಾಗ ಅಮ್ಮ ಎಚ್ಚರಿಸುತ್ತಿದ್ದರು 'ಮೇಲಾರ ಬಾಗ ಎಲ್ಲಾ ಮನಾರ ಮಾಡ ಬೇಡ ಮಗಾ ;ಯಾರಾದರೂ ನೆಂಟರು ಬಂದರೆ ಅವರಿಗೆ ಸ್ವಲ್ಪ ಇರಲಿ "ಆಗಿನ ಕಾಲದಲ್ಲಿ ಮನೆಯಲ್ಲಿ ಹಠಾತ್  ಆಗಮಿಸ ಬಹುದಾದ  ನೆಂಟರಿಗಾಗಿ ಯಾವತ್ತೂ ಅನ್ನ ಮತ್ತು ಪದಾರ್ಥ ತೆಗೆದು ಇಟ್ಟು ಕೊಳ್ಳುತ್ತಿದ್ದರು .ಒಂದು ವೇಳೆ ಬರದಿದ್ದರೆ ಮರುದಿನಕ್ಕೆ ತಮಗೇ . ಇನ್ನು ಕೆಲವೊಮ್ಮೆ ನನ್ನ ಅಕ್ಕ ,ಅತ್ತಿಗೆ ನಾನು ಊಟಕ್ಕೆ ಕುಳಿತಾಗ ಒಳಗೆ ಸಾಕಷ್ಟು ಶೇಖರಿಸಿಟ್ಟು ಉಳಿದುದನ್ನು ಮಾತ್ರ ನನ್ನ ಎದುರು ಇಡುವರು .ಅದಕ್ಕೆ ಪ್ರತೀಕಾರ ವಾಗಿ ನಾನು ಈಗ ದಿನಾಲೂ ಅರ್ಧ ಕಿಲೋ ಪಲ್ಯ ಮಾಡಿ ಗುಳು೦ಕಾಯಿಸುವೆನು 

ಸೋಮವಾರ, ಜೂನ್ 26, 2023


 ಇಂದು ಇಂದು ಮುಂಜಾನೆ ನಾನೇ ಅಡಿಗೆ  ಪುಸ್ತಕ  ನೋಡದೆ ತಯಾರಿಸಿದತಿಂಡಿ  ಸಜ್ಜಿಗೆ ಅವಲಕ್ಕಿ ಅಥವಾ ಸಜ್ಜಿಗೆ ಬಜಿಲು . ನಮ್ಮ ಊರಿನ ಐಕಾನ್ ತಿಂಡಿ . ಹಿಂದೆ ಮದುವೆ  ಇತ್ಯಾದಿ ಸಮಾರಂಭಗಳಲ್ಲಿ  ಮುಂಜಾನೆ ಖಡ್ಡಾಯ ಒಂದೇ ಒಂದು ತಿಂಡಿ ಅವಲಕ್ಕಿ ಸಜ್ಜಿಗೆ ಮತ್ತು ಬಾಳೆ  ಹಣ್ಣು .ಮೊಸರು ಉಪ್ಪಿನ ಕಾಯಿ ಇಲ್ಲ .ಈಗ ಅದರ ಸ್ಥಾನ  ಇಡ್ಲಿ ದೋಸೆ ಬನ್ಸ್ ಪೂರಿ  ಇತ್ಯಾದಿ ಆವರಿಸಿ ಕೊಂಡಿವೆ . ಹೋಟೆಲ್ ಗಳಲ್ಲಿ ಜನಪ್ರಿಯ ಆಗಿದ್ದ ಇದು ಮಂಗಳೂರಿನ ಇಂದ್ರ ಭವನನಂತಹ  ಹೋಟೆಲ್ ಗಳಲ್ಲಿ ಮಾತ್ರ ಸಿಗಬಹುದು . ಬೇಂದ್ರೆ ಯವರ ಇನ್ನೂ ಯಾಕೆ ಬರಲಿಲ್ಲಾವ  ಹುಬ್ಬಳ್ಳಿಯಾವ  ಕವನ ದಲ್ಲಿ  ಚಹಾ ದ ಕೂಡಾ ಚಿವುಡ (ಹುರಿದ ಮಸಾಲೆ ಅವಲಕ್ಕಿ )ದಾಂಗ ಎಂದು  ವರ್ಣಿಸಿದ ಹಾಗೆ ನಮ್ಮಲ್ಲಿ  ಚಹಾ ದ  ಕೂಡಾ ಅವಲಕ್ಕಿ ಸಜ್ಜಿಗೆ ಹಾಂಗಾ ಎಂದು ಧಾರಾಳ ಹೇಳ ಬಹುದಾದ ಕಾಲ ಒಂದಿತ್ತು

ಒಂದು ಚಿಂತನೆ

 

ಅಮೇರಿಕಾ ದಲ್ಲಿ ಮೊಮ್ಮಗ ಮಲಗಿರುವಾಗ ಸಮಯ ಕಳೆಯಲು   ಯು ಟ್ಯೂಬ್ ನಲ್ಲಿ ಸಂಗೀತ ,ಚಲನ ಚಿತ್ರ ಮತ್ತು ಸಂದರ್ಶನ ಇತ್ಯಾದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ . ಯಾವುದೋ ಮಲಯಾಳಂ ಚಾನೆಲ್ ನಲ್ಲಿ ಮಲಯಾಳಂ ನ ಹಿರಿಯ ಮತ್ತು ನನ್ನನ್ನೂ ಸೇರಿ ವೀಕ್ಷಕರ ಅಚ್ಚು ಮೆಚ್ಚಿನ ನಟಿ  ಕವಿಯೂರು ಪೊನ್ನಮ್ಮ ಅವರ ಸಂದರ್ಶನ ಬರುತ್ತಿತ್ತು . ಕನ್ನಡದಲ್ಲಿ ಹಿಂದೆ ಪಂಡರೀ ಬಾಯಿ ಇದ್ದಂತೆ ಇವರ ತಾಯಿ ಪಾರ್ಟ್ ಟ್ರೇಡ್ ಮಾರ್ಕ್ .ಮೋಹನ ಲಾಲ್ ಅವರಿಗೆ ಅನೇಕ ಚಿತ್ರಗಳಲ್ಲಿ ತಾಯಿ ಆಗಿ ಅಭಿನಯಿಸಿದ್ದಾರೆ . ಹಣೆಯಲ್ಲಿ ರುಪಾಯಿ ಗಾತ್ರದ ಕುಂಕುಮ ಬೊಟ್ಟು ,ಮುಖದಲ್ಲಿ ಮುಗ್ದ ಪರಿಶುದ್ಧ ಮಾತೃಛಾಯೆ . 

ಸಂದರ್ಶನದಲ್ಲಿ ಅವರ ತಾಯಿ ಪಾತ್ರ ಗಳ ಯಶಸ್ವಿಗೆ ಕತೆ ,ತಮ್ಮ ನಟನೆ ಯ ಜತೆ ಸಮಾಜದಲ್ಲಿ (ಮನೆಯಲ್ಲಿ ) ಹಿಂದೆ  ತಾಯಿಗೆ ಇದ್ದ  ಗೌರವ ಸ್ಥಾನ ಕೂಡಾ ಮುಖ್ಯ ಕಾರಣ ಎಂದು ಹೇಳಿದ್ದು ನನ್ನ ಮನಸಿಗೆ ನಾಟಿತು . ಅದೇ ಹಿರಿಯರ ಸ್ಥಾನಮಾನ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಈಗಿನ ತಲೆಮಾರಿನವರಿಗೆ ಅಷ್ಟೇ ಅಪೀಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ  ಎಂಬುದು ಚಿಂತನೆಗೆ ಹಚ್ಚಿತು 

ಶನಿವಾರ, ಜೂನ್ 24, 2023

ಚೌ ಚೌ ಬಾತ್

ನನ್ನ ಸಲಹಾ ಕೊಠಡಿಯ ಹೊರಗೆ ಇಲ್ಲಿ ಕಾಣಿಸಿದ ಫಲಕ ಹಾಕಿದ್ದೇನೆ . ಕಳೆದ ತಿಂಗಳು ಒಬ್ಬರು ಒಳಗೆ ಬಂದು 'ಇಲ್ಲಿ ಚೌ ಚೌ ಬಾತ್ ಸಿಗುತ್ತದೆಯೇ ;ಮಗು ಹಸಿದು ಅಳುತ್ತಿದೆ ' ಎಂದರು .ಮೊನ್ನೆ ಓರ್ವ ಮಹಿಳೆ ಇದು ಅಡಿಗೆ ಪುಸ್ತಕ ,ಇದರಲ್ಲಿ ಆರೋಗ್ಯದಾಯಕ ತಿನಿಸುಗಳ ರೆಸಿಪಿ ಇರಬಹುದು ಎಂದು ವಿಚಾರಿಸಿ ನಿರಾಸೆ ಗೊಂಡರು . 

  ನನ್ನ ಪುಸ್ತಕಗಳನ್ನು ಕುತೂಹಲದಲ್ಲಿ ಮತ್ತು ಆಸಕ್ತಿಯಿಂದ ಕೊಂಡವರು ಬಹುತೇಕ ಜನ ಸಾಮಾನ್ಯರು . ಸಾಹಿತ್ಯ ಕಲಿಯುವವರು ಮತ್ತು ಕಲಿಸುವವರು ಬಹಳ ಕಡಿಮೆ . ನನ್ನ ಬಳಿಗೆ ಸಲಹೆಗೆ ಬಂದವರ ವೃತ್ತಿ ಕನ್ನಡ ಕಲಿಸುವುದು ಎಂದಾದರೆ ನನಗೆ ಸಂತೋಷ ವಾಗಿ ಗೌರವ ಹೆಚ್ಚುವುದು .ಆದರೆ ಅವರಲ್ಲಿಯೇ ಹೆಚ್ಚಿನವರಿಗೆ ತಮ್ಮ ವೃತ್ತಿಯಲ್ಲಿ ಅಭಿಮಾನ ಆಸಕ್ತಿ ಇದ್ದಂತೆ ಕಾಣಿಸುವುದಿಲ್ಲ .ಇದು ದುರದೃ ಷ್ಟಕರ 
 

ಶುಕ್ರವಾರ, ಜೂನ್ 23, 2023

ಏಕ್ ದೊ ತೀನ್ ಚಾರ್

 ಅಮೇರಿಕಾದಲ್ಲಿ ಮಗನ ಮನೆಯ ಹತ್ತಿರ ಒಂದು  ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಇದ್ದು ನಾನು ಪ್ರತಿನಿತ್ಯ  ಅವುಗಳ ಸುತ್ತ ವಾಕಿಂಗ್ ಹೋಗುತ್ತಿದ್ದೆ .ಶಾಲಾ  ಸಮಯದಲ್ಲಿ ಕಾಂಪೌಂಡ್ ಪ್ರವೇಶಿಸ ಬಾರದು ಎಂದು ತೆಲುಗು ತಮಿಳು ಹಿಂದಿ ಚೈನೀಸ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಬೋರ್ಡ್ ಹಾಕಿರುವರು . ಉಳಿದಂತೆ ಅಲ್ಲಿ ಒಳಗೆ ಹೋಗ ಬಹುದು .ಆಟದ ಮೈದಾನದಲ್ಲಿ ಆಟ ವಾಡ ಬಹುದು .ಕ್ರೀಡೆ ಸಂಗೀತ ಮತ್ತು ನಾಟಕ ಗಳಿಗೆ ಬಹಳ ಮಹತ್ವ ನೀಡುವಂತೆ ಕಾಣುತ್ತದೆ .ಹೈ ಸ್ಕೂಲ್ ಆವರಣದಲ್ಲಿ ಶಾಲೆಯ  ನಾಮಫಲಕ ಕಂಡೆ .ಪ್ರೈಮರಿ ಯಲ್ಲಿ ಇಲ್ಲ . ಶಾಲೆಗೆ ತಾಗಿಕೊಂಡು  ರಸ್ತೆ ಬದಿಯಲ್ಲಿ ಬೇಸ್ ಬಾಲ್ ,ಫುಟ್ ಬಾಲ್ ತರಬೇತಿ ಕೊಡಲಾಗುವುದು ಸಂಪರ್ಕಿಸಿರಿ ಎಂದು ಬಹಳ ಸಣ್ಣ ಜಾಹಿರಾತು ಫಲಕಗಳನ್ನು ಕಂಡೆ . ಇಂಗ್ಲಿಷ್ ,ಗಣಿತ ,ಸಿಈ ಟಿ ಇತ್ಯಾದಿ ಟ್ಯೂಷನ್ ಗಳ ಬಗ್ಗೆ ಒಂದೂ ಕಾಣಿಸಲಿಲ್ಲ . 

ಆಟದ ಮೈದಾನದಲ್ಲಿ ಪಿ ಟಿ ಟೀಚರ್ ಒನ್ ಟೂ ಥ್ರೀ ಫೋರ್ ಎಂದು ಡ್ರಿಲ್ ಮಾಡಿಸುವಾಗ ಬಾಲ್ಯ ನೆನಪಾಯಿತು . ನಮ್ಮ  ಪಿ ಟಿ ಮಾಷ್ಟ್ರು ರಾಮರಾಯರು ಏಕ್ ದೋ ತೀನ್ ಚಾರ್ ಎಂದು ಮಾಡಿಸುತ್ತಿದ್ದರು.(ಇದನ್ನೇ ಅನುಕರಿಸಿ ನಾವು ಏಕ್ ದೋ ತೀನ್ ಚಾರ್ ಇತ್ತೆ  ಪೋಪುನೆ ಕಾಣಿಚಾರ್ ಎಂದು ಶಾಲೆಯಿಂದ ಕಾಣಿಚಾರ್ ಬೈಲು ಮೂಲಕ ಅಂಗ್ರಿಗೆ ಹೋಗುವಾಗ ಹೇಳುತ್ತಿದ್ದೆವು ) .ಅರೇಬಿಯಾದಲ್ಲಿ ನನ್ನ ಮನೆಯ ಹಿಂದೆ ಇದ್ದ ಶಾಲೆಯಲ್ಲಿ 'ವಾಹದ್ ಇತನೇನ್  ತಾಲತಾ ಅರ್ಬಾ 'ಎಂದು ಅವರ ಭಾಷೆಯಲ್ಲಿ ಮಾಡಿಸುತ್ತಿದ್ದರು . ಕನ್ನಡಲ್ಲಿ ಒಂದು ಎರಡು ಮೂರು ನಾಲ್ಕು ಎಂದು ಮಾಡಿಸಿದ್ದನ್ನು ಕಾಣೆ . 

ಶಾಲೆ ಬಳಿ ತಿಂಡಿ ಕಡಲೆ ಮಾರುವ ಅಂಗಡಿಗಳು ಇಲ್ಲ .ಯಾಕೆ ಸನಿಹದಲ್ಲಿ ಯಾವುದೇ ಅಂಗಡಿಗಳು ಕಾಣೆ .ಏನಾದರೂ ಬೇಕಾದರೆ  ನಾಲ್ಕು ಕಿಲೋಮೀಟರು ಹೋಗ ಬೇಕು . ಅಧ್ಯಾಪಕರು ಹೆಚ್ಚಿನವರು ಕಾರಿನಲ್ಲಿ ಬರುತ್ತಾರೆ .ವಿದ್ಯಾರ್ಥಿಗಳು ನಡೆದು ಕೊಂಡು ,ಬೈಸಿಕಲ್ ಮತ್ತು ಕಾರ್ ನಲ್ಲಿ .ಹಳದಿ ಬಣ್ಣದ ಶಾಲಾ ಬಸ್ ಕೂಡಾ ಇದ್ದು ಅದರ ಡ್ರೈವರ್ ಮಹಿಳೆ ಆಗಿದ್ದಾರೆ .ಮಕ್ಕಳನ್ನು ಪ್ರೀತಿಯಿಂದ ಜೋಪಾನವಾಗಿ ಕೊಂಡೊಯ್ಯಲು  ಸ್ತ್ರೀ ಯರೇ ಒಳ್ಳೆಯದು ಎಂಬ ಉದ್ದೇಶ ಇರ ಬಹುದು . 




ಗುರುವಾರ, ಜೂನ್ 22, 2023

 ಅಮೆರಿಕಾ ಪ್ರವಾಸ ಕೊನೆಯ ಕಂತು 

ನನಗೆ  ಇದು ಎರಡನೇ ಬಾರಿ ಅಮೇರಿಕಾ ಪ್ರವಾಸ .ಮೊದಲನೇ ಸಲದ ಕುತೂಹಲ ಮತ್ತು ಸಂಭ್ರಮ ಈ ಬಾರಿ ಏಕೋ ಇರಲಿಲ್ಲ .ಮೊಮ್ಮಗನ ಜತೆ ಕೆಲ ವಾರಗಳನ್ನು ಕಳೆಯುವ ಅಸೆ ಮಾತ್ರ ಇತ್ತು . ಅದು ಈಡೇರಿತು . 

ಇನ್ನು ಅಮೆರಿಕಾ ದೇಶ ದ  ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿರುವ ನೆಂಟರ ಪೈಕಿ ಕ್ಯಾಲಿಫೋರ್ನಿಯಾ ದಿಂದ ನನ್ನ ಸೋದರ ಭಾವ ಸಂಗೀತಾಭಿಮಾನಿ ಮತ್ತು ಕಲಾವಿದ ರವಿ ಜೋಶಿ ಮತ್ತು  ನ್ಯೂಯೋರ್ಕ್ ಪಕ್ಕ ಇರುವ ನನ್ನ ಪತ್ನಿಯ ಚಿಕ್ಕಮ್ಮನ ಮಗಳು ನನ್ನ ಫೇಸ್ಬುಕ್ ಫ್ರೆಂಡ್ ಲಲಿತಾ ಜಯರಾಮ್ ತಮ್ಮಲ್ಲಿಗೆ ಬರುವಂತೆ ಅಹ್ವಾನ ಕೊಟ್ಟಿದ್ದರು .ಜತೆಗೆ ಕೆನಡಾ ದಲ್ಲಿ ನನ್ನ ತಮ್ಮನ ಮಗ ಪವನ್ ಮತ್ತು ಸೊಸೆ ಸ್ವೀಕೃತಾ ಅಲ್ಲಿಗೆ ಭೇಟಿ ನೀಡುವಂತೆ  ಬಹು ಪ್ರೀತಿಯಿಂದ ಉತ್ತಾಯ ಮಾಡಿದ್ದರು ಅಲ್ಲದೆ ನಮ್ಮಲ್ಲಿ ಕೆನಡಾ ವೀಸಾ ಕೂಡಾ ಇತ್ತು ..ಆದರೆ ನನ್ನ ಅರೋಗ್ಯ ದೃಷ್ಟಿಯಿಂದ ಎಲ್ಲಿಗೂ ಹೋಗದೆ ಮಗನ ಮನೆಯಲ್ಲೇ ಇದ್ದೆವು . 

ಇಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಆಗಿ ಹಕ್ಕಿಗಳ ಚಿಲಿಪಿಲಿ ಆರಂಭ ಆಗುವುದು .ಎದ್ದು ಓಡಾಡಿದರೆ ಇಡೀ ಮನೆಯಲ್ಲಿ ಅಜನೆ ಆಗುವುದು ಏಕೆಂದರೆ ಇಲ್ಲಿ ಎಲ್ಲಾ ಮರದ ಮನೆಗಳು .ಮಕ್ಕಳು ಮೊಮ್ಮಗುವಿನ ನಿದ್ರೆಗೆ ತೊಂದರೆ ಆಗುವುದು .ಆದುದರಿಂದ ಸುಮಾರು ಆರೂವರೆ ಗಂಟೆಗೆ ಎದ್ದು ಕೆಳಗೆ ಚಾವಡಿಗೆ  ಹೋಗುವುದು .ಮೊದಲು ಬೀರನನ್ನು ಹೊರಬಿಟ್ಟು ಒಳಗಡೆ ಮಾಡುವದು . ಆಮೇಲೆ ಒಂದು ಗಂಟೆ ವಾಕಿಂಗ್ ,ಕೆಲವೊಮ್ಮೆ ತಿಂಡಿ ಆದ ಮೇಲೆ . ಮಗು ನಿದ್ದೆ ಮಾಡುತ್ತಿದ್ದ ವೇಳೆ ಟಿವಿ ಯಲ್ಲಿ ಯೌಟ್ಯೂಬ್ ಮೂಲಕ ಸಂಗೀತ ಮತ್ತು ಯಕ್ಷಗಾನ ನೋಡುವುದು ,ಕೇಳುವುದು .ಮಗು ಚಾವಡಿಗೆ ಬಂದಮೇಲೆ ಟಿವಿ ಕಡ್ಡಾಯ ಬಂದ್ .(ಇದು ನಿಜಕ್ಕೂ ಒಳ್ಳೆಯದು )

        ಮಗು ಎದ್ದು ಬಂದಾಗ ಅವನ ಜತೆ ಆಡುವುದು .ಮಧ್ಯಾಹ್ನ ಭರ್ಜರಿ ಊಟ ,ನಿದ್ದೆ .ಸಾಯಂಕಾಲ ಚಹಾ ಆದಮೇಲೆ ಮಗು ನಾಯಿ ಬೀರ ಮತ್ತು ಕುಟುಂಬದ ಸರ್ವರೂ ಸೇರಿ ವಾಕಿಂಗ್ .ರಾತ್ರಿ ಊಟ ,ನಿದ್ದೆ . ವಾರಾಂತ್ಯ ರಜೆಯಲ್ಲಿ ಮಕ್ಕಳು  ನಮ್ಮನ್ನು ವಿಹಾರಕ್ಕೆ ಪಾರ್ಕ್ ಗಳಿಗೆ ಕರೆದು ಕೊಂಡು ಹೋಗುವರು .ವಾಷಿಂಗ್ಟನ್ ರಾಜ್ಯದಲ್ಲಿ ಮೂರು  ನ್ಯಾಷನಲ್ ಪಾರ್ಕ್ ಗಳು ಇವೆ .ಅವುಗಳಲ್ಲಿ ಪ್ರಸಿದ್ದವಾದ ಮೌಂಟ್ ರೈನಿಯರ್ ಗೆ ಕಳೆದ ಬಾರಿ ಹೋಗಿದ್ದ ನೆನಪು .ಈ ಸಲ ನಾರ್ತ್ ಕ್ಯಾಸ್ಕೇಡ್ ನ್ಯಾಷನಲ್ ಪಾರ್ಕ್ ಮತ್ತು ಅದಕ್ಕೆ ತಾಗಿ ಇರುವ ಡಯಾಬ್ಲೊ ಸರೋವರ ಕ್ಕೆ ಹೋದೆವು .ಇದು ನಮ್ಮ ಲಡಾಕ್ ತರಹ ಇದೆ ಎಂದು ಅಲ್ಲಿಗೂ ಹೋಗಿದ್ದ ನನ್ನ ಬೀಗರು ಹೇಳಿದರು . ಈ ರಾಜ್ಯದಲ್ಲಿ ಉದ್ದುದ್ದಕೆ ಬೆಳೆದಿರುವ ಪೈನ್ ವೃಕ್ಷ ಗಳನ್ನೇ ಕಂಡುದು ಹೆಚ್ಚು .ಅವುಗಳ ಹೂ ಪರಾಗ ಗಾಳಿಯಲ್ಲಿ ಹತ್ತಿಯಂತೆ ತೇಲುತ್ತಿದ್ದು ,ನನಗೆ ಅದರ ಅಲ್ಲರ್ಜಿ ಎಂಬ ಸಂದೇಹ ಉಂಟಾದುದರಿಂದ ಮಾಸ್ಕ ಹಾಕಿಕೊಂಡೇ ಸಂಚಾರ . 

ಒಂದು  ಸಂಜೆ ಟ್ಯೂಲಿಪ್ ಹೂ ತೋಟಕ್ಕೆ ಹೋಗಿ ಅಲ್ಲಿ ಯ ವಿಶಾಲ ವರ್ಣರಂಜಿತ ಪುಷ್ಪರಾಜಿ ಯನ್ನು ಕಣ್ಣು ತುಂಬಿ ಕೊಂಡೆವು

ಬೇರೆ ಬೇರೆ ತರಹದ ಆಹಾರ ವನ್ನು ಸವಿಸಿದರು . ನನ್ನ ಮೊಮ್ಮಗನ ಸಂಗೀತ ಶಾಲೆಗೆ ಸೊಸೆ ಕರೆದು ಕೊಂಡು ಹೋದಳು . ಟೀಚರ್ ಬ್ರೆನ್ನಾ  ತುಂಬಾ ಉತ್ಸಾಹ ಭರಿತ ಮತ್ತು ಪುಟ್ಟ ಮಕ್ಕಳ ಆಸಕ್ತಿ ಕುದುರಿಸುವ ,ಸ್ನೇಹ ಮಯಿ ವ್ಯಕ್ತಿ . 

ಮೊಮ್ಮಗನ ಹುಟ್ಟಿದ ಹಬ್ಬದ ಆಚರಣೆ ಗೌಜಿಯಾಗಿ ಒಂದು ಪಾರ್ಕ್ ಸಭಾಂಗಣ ದಲ್ಲಿ ನಡೆಯಿತು .ನಮ್ಮ ದೇಶದ ಮತ್ತು ರಾಜ್ಯದ  ಹಲವು ಮಿತ್ರರು ಭಾಗವಹಿಸಿ ಶುಭ ಕೋರಿದರು . ಒಂದು ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಚರಣೆ ;  ಪುತ್ತಿಗೆ ಮಠದ  ಪುರೋಹಿತರು . ಸಜ್ಜನರು .ಒಂದು ದಿನ ಮಠ ಕ್ಕೂ ಆಹ್ವಾನಿಸಿ ಪ್ರಸಾದ ಕೊಟ್ಟು ಹರಸಿದರು .

ಇದರ ಹೊರತಾಗಿ ಭಾರತದಲ್ಲಿ ಜೀವಮಾನ ಬಹುಪಾಲು ಕಳೆದ ನಮ್ಮಂತಹವರಿಗೆ ಅಲ್ಲಿ ಸಮಯಾಲಾಪನೆ ಸ್ವಲ್ಪ ಕಷ್ಟವೇ . ಮಕ್ಕಳು ಶಕ್ತಿ ಮೀರಿ ನಮ್ಮನ್ನು ಖುಶಿಯಾಗಿ ಇಡಲು ಶ್ರಮಿಸಿದರು . 

ಹೀಗೆ ಒಂದೂವರೆ ತಿಂಗಳು ಕಳೆದು ಹೋದ ದಾರಿಯಲ್ಲೇ ಅದೇ ಕಂಪನಿ ವಿಮಾನ ದಲ್ಲಿ ವಾಪಾಸು .ವಿಮಾನ ನಿಲ್ದಾಣದಲ್ಲಿ ಪತ್ನಿ ಮಗ ಸೊಸೆ ಮತ್ತು ಮುಖ್ಯವಾಗಿ ಮೊಮ್ಮಗ ವಿಮಾನದ ಬಾಗಿಲಿನ ವರೆಗೆ ಬಂದು ಬೀಳ್ಕೊಟ್ಟರು .ಮೊಮ್ಮಗನಿಗೆ ಟಾಟಾ ಮಾಡುವಾಗ ಹೃದಯ ಭಾರವಾಯಿತು . (ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಕೊಂಡು ಒಳಗೆ ಹೋಗುವ ಅವಕಾಶ ಇದೆ . ನಮ್ಮಲ್ಲಿ ಇದು ಇಲ್ಲ ). 






 



ಮಂಗಳವಾರ, ಜೂನ್ 20, 2023

ಸಾದರ ಸ್ವೀಕಾರ
ಹಿರಿಯ ಲೇಖಕ ,ಪ್ರಾಧ್ಯಾಪಕ ಮಿತ್ರ ತಮ್ಮ ಎರಡು ಕೃತಿಗಳನ್ನು ಪ್ರೀತಿ ಪೂರ್ವಕ ತಲುಪಿಸಿದ್ದಾರೆ .ಸೋನ್ಸ್ ಫಾರ್ಮ್ಸ್ ಮತ್ತು ಜೇನೇ ಜೀವನ .ಡಾ ಎಲ್ ಸಿ ಸೋನ್ಸ್ ಅವರನ್ನು ನಾನು ಅವರ ಫಾರ್ಮ್ಸ್ ನಲ್ಲಿ ಮತ್ತು ಮೊಗಶಾಲೆಯವರ ಕಾಂತಾವರ ದಲ್ಲಿ ಕಂಡು ಮಾತನಾಡಿದ್ದೆ . ಕಾಂತಾವರದ ನನ್ನ ಒಂದು ಭಾಷಣ ಕಾರ್ಯಕ್ರಮ ಕ್ಕೆ ಸೋನ್ಸ್ ದಂಪತಿಗಳು ಬಂದಿದ್ದು ಸಕ್ರಿಯವಾಗಿ ಪಾಲು ಗೊಂಡಿದ್ದರು .ಅವರ ಸರಳತೆ ಮತ್ತು ಮುಗ್ಧ ಕುತೂಹಲ ಬಹಳ ಆಪ್ತವಾಯಿತು .ನನ್ನ ಪ್ರೀತಿಯ ಕಾಣಿಕೆಯಾಗಿ ಒಂದು ಒಳ್ಳೆಯ ಇಂಗ್ಲಿಷ್ ಕೃತಿ ಅಂಚೆ ಮೂಲಕ ಕಳುಹಿಸಿದ್ದೆ .ಈಚೆಗೆ ಅವರು ತೀರಿಕೊಂಡರು .ಈ ಕೃತಿ ರಚನೆ ಮೊದಲೇ ಆದುದು .ಪುಸ್ತಕ ಬಹಳ ಚೆನ್ನಾಗಿ ಬಂದಿದ್ದು ,ಚಿತ್ರ ಗಳು ನಯನ ಮನೋಹರ . ಇಂತಹ ಪುಸ್ತಕ್ಗಗಳ ಭಾಗಶಃ ಇಲ್ಲವೇ ಪೂರ್ಣ ಶಾಲೆಗಳಲ್ಲಿ ಪಠ್ಯ ವಾಗಿಯೋ ಉಪ ಪಠ್ಯ ವಾಗಿಯೋ ಕೊಡಬೇಕು ಎಂದು ನನ್ನ ಅಭಿಪ್ರಾಯ .
ಇನ್ನೊಂದು ಮತ್ತೊಬ್ಬ ಜೇನು ಕೃಷಿ ಸಾಧಕ ಮನಮೋಹನ ಅವರ ಜೇನೇ ಜೀವನ .ಇದು ಕೂಡಾ ಸಚಿತ್ರ ,ಸೊಗಸಾಗಿ ಮೂಡಿಬಂದಿದೆ
 


ಅಮೇರಿಕಾ ವಾಸ -ಶ್ವಾನ ಮಿತ್ರ ಬೀರ

ಅಮೇರಿಕಾ ವಾಸ -ಶ್ವಾನ ಮಿತ್ರ ಬೀರ 

ನನ್ನ ಮಗ ಸೊಸೆ ಇಬ್ಬರೂ ಪ್ರಾಣಿ ಪ್ರಿಯರು  . ಮನೆಯಲ್ಲಿ ಒಂದು ಸಾಕು ನಾಯಿ ಇಟ್ಟು ಕೊಂಡಿದ್ದಾರೆ . ಗೋಲ್ಡನ್ ರಿಟ್ರೀವರ್ ಜಾತಿಯ ಬಿಳಿ ಶ್ವಾನ . ಅದರ ಹೆಸರು ಬೀರ . (ಟೈಗರ್ ಜಾನಿ ಇತ್ಯಾದಿ ಇಡಲಿಲ್ಲ ). ಅದು ದ್ವಿಭಾಷಾ ನೀತಿ ಪಾಲಿಸುತ್ತಿದ್ದು . ಮೊದಲು ಟ್ರೈನರ್ ಕಳಿಸಿದ ಇಂಗ್ಲಿಷ್ ಆದೇಶ ಗಳನ್ನು ಉದಾ ಸಿಟ್ ,ಗೋ ಕೆನ್ನೆಲ್ (ಗೋಡಿಗೆ ಹೋಗು ),ಯಸ್ (ಆಹಾರ ಇಟ್ಟು ಯಸ್ ಅಂದರೆ ಅದರ ಆಹಾರ  ಮಾತ್ರ ತಿನ್ನುವುದು  .ನಮ್ಮ ದೋಸೆ ಇಡ್ಲಿ ಗೆ ಇದು ಅನ್ವಯ ಆಗುವುದಿಲ್ಲ . ಇನ್ನು ನಮ್ಮಹೋಗು  ಬಾ ಬೇಡ ಇತ್ಯಾದಿ ಕೂಡಾ ಅರ್ಥ ಆಗುವುದು . 

ಮನೆಯ ಒಳಗೆ ಒಂದು ಗೂಡು ಇದೆ .ಮತ್ತು ಸನಿಹದಲ್ಲಿ ಹೊರಗಡೆ ಒಂದು ಹಾಸಿಗೆ ಕೂಡಾ . ರಾತ್ರಿ ಮಾತ್ರ ಗೂಡಿನಲ್ಲಿ ಕೂಡಿ ಹಾಕಿ ಬೆಳಗ್ಗೆ  ಹೊರಗೆ ಬಿಡುವರು .ಮನೆಯಲ್ಲಿ ಎಲ್ಲಿ ಬೇಕಾದರೂ ಸಂಚರಿಸುವ ಸ್ವಾತಂತ್ರ್ಯ ಅದಕ್ಕೆ ಇದೆ . ಮುಂಜಾನೆ ನಾವು ಎದ್ದ  ಒಡನೆ ಅದನ್ನು ಗೂಡಿನಿಂದ ಬಿಟ್ಟು ಮನೆಯ ಹಿಂದಿನ  ಅಂಗಳಕ್ಕೆ ಬಿಡುವುದು .ಅಲ್ಲಿ ಅದು ಮೂರು ನಾಲ್ಕು ಸುತ್ತು ಹಾಕಿ ಹುಲ್ಲು ಹಾಸನ್ನು ಮೂಸಿ ನೋಡಿ ಯೋಗ್ಯ ಜಾಗದಲ್ಲಿ ಮೂತ್ರ ಸಿಂಚನ ಮಾಡುವುದು . ಮತ್ತೆ ದಿನದಲ್ಲಿ ಮೂತ್ರ ಶಂಕೆ ಆದರೆ ಮನೆಯಲ್ಲಿ ಯಾರಾದರೂ ಇದ್ದರೆ ಬೌ ಎಂದು ಒಂದೇ ಬಾರಿ ಬೊಗಳುವುದು .ಆಗ ನಾವು ಹೊರಗೆ ಕರೆದು ಕೊಂಡು ಹೋಗ ಬೇಕು .ತಪ್ಪಿಯೂ ಮನೆಯ ಒಳಗೆ ಮಾಡದು . ಇನ್ನು ಮುಂಜಾನೆ ಮತ್ತು ಸಂಜೆ ಮಕ್ಕಳು ಅದನ್ನು ವಾಯು ವಿಹಾರಕ್ಕೆ ಕೊಂಡು ಹೋಗುವರು .ಆಗ ಅದು ಕಕ್ಕ ಮಾಡುವದು ,ಅದನ್ನು ನಾವೇ ಎತ್ತಿ ಅಲ್ಲಲ್ಲಿ ಇಟ್ಟ ಪೆಟ್ಟಿಗೆಯೊಳಗೆ ಹಾಕುವುದು ,ಹಾಕುವ ಚೀಲ ಕೂಡಾ ಅಲ್ಲಲ್ಲಿ ಇಟ್ಟಿರುವರು .. ವಾಕಿಂಗ್ ಹೋಗವುವಾಗ ಇದರ ಮಿತ್ರರು ನಿಕ್ಕಿದರೆ ಭಾರೀ ಸಂಭ್ರಮ ,ಹಾರುವುದೇನು ?ಕುಣಿಯುವುದೇನು ?ಅದೇ ರೀತಿ ಮಿತ್ರ ನಾಯಿಯ ಧಣಿಗಳು ಮನೆಗೆ ಬಂದಾಗ ಕೂಡಾ ವಾಸನೆಯಲ್ಲಿ ಕಂಡು ಹಿಡಿದು ಸ್ವಾಗತ ಮಾಡುವುದು ,

ಮನೆಯಲ್ಲಿ ಮೊನ್ನೆ ಮೊನ್ನೆ ವರ್ಷ ದಾಟಿದ ಮೊಮ್ಮಗ ಇದ್ದಾನೆ .ಅವನದ್ದು ಮತ್ತು ಬೀರನದ್ದು ಪೀಸ್ ಫುಲ್ ಕೋ ಎಕ್ಸಿಸ್ಟೆನ್ಸ್ . ಇಬ್ಬರೂ ಅವರಷ್ಟಕ್ಕೆ ಓಡಾಡಿ ಕೊಂಡು ಇದ್ದು ,ಒಮ್ಮೊಮ್ಮೆ ಪರಸ್ಪರ ತಡವಿ ಪ್ರೀತಿ ಪ್ರಕಟಿಸುವರು .,ಮೊಮ್ಮಗ ಅವನನ್ನು ಮುಟ್ಟಿ ಪಾಪ ಎನ್ನುವನು . ನಡೆದಾಡುವಾಗ ಮಗುವಿನ ಮೇಲೆ ಕಾಲು ಉರದಂತೆ ನೋಡಿ ಕೊಳ್ಳುವುದು .ಮೊಮ್ಮಗ ಊಟದ ಕುರ್ಚಿಯಲ್ಲಿ ಕುಳಿತ ಒಡನೆ ಸಿಂಡಿಕೇಟ್ ಬ್ಯಾಂಕ್ ನಾಯಿಯಂತೆ ಬುಡದಲ್ಲಿ ಹಾಜರ್ .  ಅವನು ತನ್ನ ದೋಸೆ ಇಡ್ಲಿ ಹಣ್ಣಿನ ತುಂಡು ಕೆಳಗೆ  ಹಾಕುವುದು ,ಅದು ಗಬಕ್ಕನೇ ತಿನ್ನುವುದು .  ತಿಂದಿತೋ ಎಂದು ಬಗ್ಗಿ ಖಾತರಿ ಪಡೆದು ಕೊಳ್ಳುವನು . 

ನಾಯಿ ಬಹಳ ಸೂಕ್ಷ್ಮ ಮತಿ .ಒಂದು ಸಾರಿ ಸೊಸೆ ಲ್ಯಾಪಟಾಪ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಅಲ್ಲಿ ಲಾಗ ಹಾಕುವ ಭರದಲ್ಲಿ ಕಪ್ ನಲ್ಲಿ ಇದ್ದ ಟೀ ಲ್ಯಾಪ್ಟಾಪ್ ಮೇಲೆ ಚೆಲ್ಲಿತು ,ತತ್ಕ್ಷಣ ಬೀರ ನನ್ನ   ಲ್ಯಾಪ್ಟಾಪ್ ಹಾಳು ಮಾಡಿದಿಯಲ್ಲೋ ಎಂದು ಬೇಸರದಲ್ಲಿ ಹೇಳಿ ಅದನ್ನು ಒಣಗ ಬಿಟ್ಟು ಏನೋ ಕೆಲಸಕ್ಕೆ ಮೇಲೆ ಹೋದರೆ ಅದೂ ಸಪ್ಪೆ ಮೋರೆ ಮಾಡಿಕೊಂಡು ಸಾರೀ ಎನ್ನುವಂತೆ ಹ್ಯಾಪ್ ಮೋರೆ ಮಾಡಿ ಹಿಂದೆಯೇ ಹೋಗಿ ,ಆಕೆ ಮೈದಡವಿ ಸರಿ ನಮಗೆ ರಾಜಿ ಎಂದ ಮೇಲೆ ಹಿಂದೆ ಬಂತು . 

        ಅದು ಬೊಗಳುವುದು ಕಡಿಮೆ .ಒಂದು ನಾನು ಮೇಲೆ ಹೇಳಿದ ಕಾರಣಕ್ಕೆ .ಇನ್ನೊಂದು ಹಿತ್ತಿಲಿಗೆ ಮೊಲ ಗಳು ಬಂದಾಗ . ನನ್ನ  ಮೊಮ್ಮಗನಿಗೆ ಮೊಲ ಕಂಡರೆ ಇಷ್ಟ .ಅದು ಹುಲ್ಲು ತಿನ್ನುವುದು ಕಂಡು ಬೆರಳು ತೋರಿಸಿ  ಮಮ್ಮಮ್ಮ ಎನ್ನುವನು .ನಾಯಿಯ ಬೊಗಳು  ಕೇಳಿ ಮೊಲ ಓಡುವುದು .ಇದೊಂದು ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನ ಮತ . 

ಮನೆಯವರು ದಿನಕ್ಕಿಂತ ಹೆಚ್ಚು ಹೊರಗಡೆ ಹೋಗುವಾಗ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವುವ ತಾಣಗಳು ಅಲ್ಲಲ್ಲಿ ಇವೆ ,ಅಲ್ಲದೆ ಅವುಗಳಿಗೆ ಅಭ್ಯಂಜನ ಮಾಡುಸುವವರೂ .ಅವರ ಜೀವನ ನೋಡಿ ನಾಯಿ ಪಾಡು ಎನ್ನುವಂತೆ ಇಲ್ಲ .



ಭಾನುವಾರ, ಜೂನ್ 18, 2023

ಅಮೇರಿಕಾದಲ್ಲಿ ಪಂಪನ ನೆನಪು

ಅಮೇರಿಕಾದಲ್ಲಿ ಪಂಪನ ನೆನಪು  

ಮೇಲಿನ ಶೀರ್ಷಿಕೆ ಓದಿದೊಡನೆ  ಭಟ್ಟರಿಗೆ ಅಮೇರಿಕಾ ಕ್ಕೆ ಹೋದಾಗ ಊರ ನೆನಪು ಗಾಢ ವಾಗಿ ನೆನೆವುದೆನ್ನ ಮನಂ ಪುತ್ತೂರು  ನಗರಮಮ್ ಎಂದು ಮನಸು ಹೇಳುತ್ತಿತ್ತು ಎಂದು ಬರೆಯುತ್ತೇನೆ ಎಂದು ಭಾವಿಸಿದರೆ ಅದು ತಪ್ಪು . ಅಲ್ಲಿ ನನ್ನ ಮಗನ ಮಿತ್ರರು ಒಬ್ಬರು ಪರಿಚಯ ಆಯಿತು ;ಕನ್ನಡಿಗರು ಸ್ನೇಹಮಯಿ ನಗುಮುಖ . ತಂತ್ರಜ್ಞರು .ಅವರ ಹೆಸರು ಅಲಂಪು . ಈ ಹೆಸರು ಕೇಳಿದಾಗಲೇ ನಾನು ನನ್ನ ಸೊಸೆಯ ಬಳಿ ಕೇಳಿದೆ .ಅವರ ತಂದೆ ಕನ್ನಡ ಪ್ರಾಧ್ಯಾಪಕರೇ ?ಎಂದು .ಅದಕ್ಕೆ ಸಕಾರಾತ್ಮಕ ಉತ್ತರ ಬಂದಿತು ;ಅದನ್ನು ಅವರ ಬಳಿಯೇ ಕೇಳಿ ದೃಢ ಪಡಿಸಿಕೊಂಡೆ . 

ಅಲಂಪು ಶಬ್ದ ನಮಗೆ ಪಂಪನ  ವಿಕ್ರಮಾರ್ಜುನ ವಿಜಯ  ಅಥವಾ ಪಂಪ ಭಾರತ ದಲ್ಲಿ ಬರುವ ಒಂದು ಪದ್ಯ ನಮಗೆ ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಕ್ಕೆ ಇದ್ದು ಅದರಲ್ಲಿ ಬರುವುದರಿಂದ ಅದನ್ನು ಕೇಳಿದೊಡನೆ ಕಿವಿ ಕುತ್ತ ಆಯಿತು .

 ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೋ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್


ಇದರಲ್ಲಿ ಮೊದಲ ಸಾಲಿನಲ್ಲಿ ಗೊಟ್ಟಿಯಲಂಪು ಎಂದು ಬರುತ್ತದೆ . ಶಬ್ಧ ಕೋಶದ ಪ್ರಕಾರ 

ಅಲಂಪು

  1. ಸೌಂದರ್ಯ,ಚೆಲುವು,ಚೆನ್ನು,ಕೋಲ,ಅಣ,ಚೆಲುವಿಕೆ,ಎಸಕ,ನೆಟ್ಟಿ,ಹಸನು,ಅಲ್ಲಣಿ,ಅಲ್ಲಣಿಗೆ
  2. ಇಳಿಲು,ನಿರತೆ,ಸಮಂತು,ಮೀಟು,ಮಾಸರ,ಹೊಂಪು,ಗಾಡಿ,  ಇವುಗಳಲ್ಲಿ ಕೆಲವು ಅರ್ಥ ಗಳನ್ನು ಮನನ ಮಾಡಲು ಇನ್ನೊಮ್ಮೆ ಶಬ್ದ ಕೋಶ ನೋಡ ಬೇಕಾಗ ಬಹುದು .ಆದುದರೊಂದ ಮೊದಲ ಮೂರು ಅರ್ಥ ಗಳನ್ನು ಒಪ್ಪಿ ಕೊಳ್ಳೋಣ .  
ಇದರೊಡನೆ ತ್ಯಾಗ ಸಂಸ್ಕೃತ  ಚಾಗ ತಧ್ಭವ ,ಗೋಷ್ಠಿ  ಸಂಸ್ಕೃತ  ಗೊಟ್ಟಿ ತಧ್ಭವ ಎಂದು ಬಾಯಿಪಾಠ ಹಾಕಿದ ನೆನಪೂ ಬಂತು . 
ಮತ್ತೊಂದು ಕುತರ್ಕ ದ ಪ್ರಶ್ನೆ ಬರುತ್ತಿತ್ತು . ತೆಂಕಣ ಗಾಳಿ ಸೊಂಕೋದೊಡ ಎಂದು ಆರಂಭವಾಗುವ ಇದರ ಮುಂದಿನ ಪದ್ಯ ದಲ್ಲಿ ಆರಂಕುಸವಿಟ್ಟೊಡಮ್ ನೆನೆವುದೇನ್ನ ಮನಮ್  ಬನವಾಸಿ ದೇಶಮಂ ಎಂದು ಬರುತ್ತದಷ್ಟೆ .ಅದು ಸಂಖ್ಯೆ ಆರು ವೋ ಯಾರು ಅಂಕುಶ ವಿಟ್ಟರೂ ಎಂದೋ ಎಂದು . ಕೆಲವು ವಿದ್ವಾಂಸರು ಆರ ಎಂಬುದು ಒಂದು ಮರದ ಹೆಸರು ಅದರ ಹೂವಿನ ಪರಿಮಳ ಮೂಗಿಗೆ ಬಿದ್ದೊಡನೆ ಬನವಾಸಿ ನೆನಪು ಬರುವುದು ಎಂದು ಅರ್ಥೈಸಿದ್ದಾರೆ ಎಂದು ಓದಿದ ನೆನಪು .
ಶ್ರೀ ಅಲಂಪು ಅವರ ತಂದೆಯವರ ಬಳಿ ಮಕ್ಕಳ ಹೆಸರಿಡಲು ಸಲಹೆ ಕೇಳಿ ಅನೇಕರು ಬರುತ್ತಿದ್ದರು ಎಂದು ಹೇಳಿದರು .ಅವರ ಪತ್ನಿ ಹೇಮಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದು ಇವರಂತೆ ಸ್ನೇಹಮಯಿ .
                         ರಾಷ್ಟ್ರ ಕವಿ ಕುವೆಂಪು ತನ್ನ ಪುತ್ರರಿಗೆ  ಪೂರ್ಣ ಚಂದ್ರ ತೇಜಸ್ವಿ ಮತ್ತು  ಕೋಕಿಲೋದಯ ಚೈತ್ರ ಎಂದು ಹೆಸರು ಇಟ್ಟದ್ದು ನೆನಪಾಯಿತು .

ಗುಡ್ ಸಮರಿಟನ್ ಮೋಹನ ರಾವುಗಾರು

ಅಮೇರಿಕಾ ಪ್ರವಾಸದ ಮುಖ್ಯ ಉದ್ದೇಶ ಮೊಮ್ಮಗನ ಮೊದಲನೇ ಹುಟ್ಟು ಹಬ್ಬದಲ್ಲಿ ಭಾಗಿಯಾಗುವುದು ಮತ್ತು ಮಕ್ಕಳೊಡನೆ ಕೆಲ ದಿನಗಳನ್ನು ಕಳೆಯುವುದು . ನನ್ನ ಸೊಸೆಯ ತಂದೆ ತಾಯಿ ಕೂಡಾ ಬಂದಿದ್ದರು . ನನ್ನದು ಇದು ಈ ದೇಶದ ಎರಡನೇ ಭೇಟಿ ಯಾದುದರಿಂದ ಇಲ್ಲಿಯ ರೀತಿ ರಿವಾಜು ಪರಿಚಯ ಇತ್ತು . ಮಗನ ಮನೆ ವಾಷಿಂಗ್ಟನ್ ರಾಜ್ಯ (ರಾಜಧಾನಿ ವಾಷಿಂಗ್ಟನ್ ಡಿ ಸಿ ಅಲ್ಲ ,ಅಲ್ಲಿಯೂ ನನ್ನ ತಂಗಿ ಮಗ ಇದ್ದಾನೆ ) ದ ಬಾಥೆಲ್ ಜಿಲ್ಲೆಯಲ್ಲಿ .ಇದು ರಾಜ್ಯದ ರಾಜಧಾನಿ ಸಿಯಾಟಲ್ ಗೆ ತಾಗಿ ಇದೆ . ಈ ರಾಜ್ಯವು ಹಸಿರು ರಾಜ್ಯ ಎಂದು ಕರೆಯಲ್ಪಡುತ್ತಿದ್ದು ಎಲ್ಲೆಡೆ ವೃಕ್ಷ ರಾಜಿಗಳು ಇದ್ದು ಅವನ್ನು ಜತನದಿಂದ ಕಾಪಾಡಿಕೊಂಡು ಬಂದಿರುವರು . 

ಒಂದು ನಗರ  ಸುತ್ತ ಹಲವು ಉಪನಗರ ಗಳು .ಉಪನಗರದಲ್ಲಿ  ಗೃಹ ಸಂಕುಲಗಳು (ಕಮ್ಯೂನಿಟಿ ),ಪ್ರತಿಯೊಂದಕ್ಕೆ ಒಂದು ಪಾರ್ಕ್ ,ಹಲವು ಕಮ್ಯೂನಿಟಿ ಗಳಿಗೆ ಒಂದು ಶಾಲೆ . ಬೇರೆ ಗೂಡಂಗಡಿ ,ಅಂಗಡಿ ಇತ್ಯಾದಿ ಇಲ್ಲದೆ ಸಣ್ಣ ಸಾಮಾನು ಬೇಕಾದರೂ ಐದು ಕಿಲೋಮೀಟರು ದೂರ ನಮ್ಮ ವಾಹನದಲ್ಲಿ ಹೋಗ ಬೇಕು . 

ಇಲ್ಲಿ ಹೆಚ್ಚಿನವರು ವಲಸಿಗರಾಗಿದ್ದು ಭಾರತ ದ್ದು ಸಿಂಹ ಪಾಲು . ಇವರಲ್ಲಿ ಬಹುಮತ ತೆಲುಗರದ್ದು ,ಉಳಿದಂತೆ ಕನ್ನಡಿಗರೂ ಸೇರಿ ಎಲ್ಲಾ ಭಾಷಿಗರೂ ಇರುವರು . ನಾವು ಹೋದಾಗ  ನಾಲ್ಕು ಗಂಟೆಗೆ ಸೂರ್ಯೋದಯ ವಾಗಿ  ಸಾಯಂಕಾಲ ಒಂಬತ್ತು  ಗಂಟೆಗೆ ಕತ್ತಲೆ ಆಗುವುದು .ದಿನ ದೊಡ್ಡದು .ಯಾವಾಗಲೂ ಮಬ್ಬು ಕವಿದ ವಾತಾವರಣ ,ಕೆಲವೊಮ್ಮೆ ತುಂತುರು ಮಳೆ . ಇನ್ನು ಕೆಲವು ದಿನ ಇಳಿ ಬಿಸಿಲು . ಈಗ ಹೆಚ್ಚಿನವರೂ ವರ್ಕ್ ಫ್ರಮ್ ಹೋಂ ಆದುದರಿಂದ ಹೊರಗೆ ರಸ್ತೆಯಲ್ಲಿ ಯಾರೂ ಕಾಣರು .ಒಂದು ತರಹ ಕರ್ಫ್ಯೂ ವಾತವರಣ . ರಸ್ತೆಗಳು ದಿನವಿಡೀ ಬಿಕೋ ಎನ್ನುತ್ತಿದ್ದು ಪಕ್ಕದ ಮನೆಯವರ ಜತೆ ಹರಟೆ ಹೊಡಿಯುವ ದೃಶ್ಯ ಕಾಣದು ,ಬೀದಿಗೆ ಇಳಿದ ಕೂಡಲೇ ನಮಸ್ಕಾರ ತಿಂಡಿ ಆಯ್ತಾ ಎಂದು ಕೈಯಲ್ಲಿ ಚೀಲ ಪೇಪರ್ ಹಿಡಿದು ಕೊಂಡು ಕೇಳುವ ರಾಮರಾಯರು ಶಾಮಣ್ಣ ಇಲ್ಲ . ಅಲ್ಲಲ್ಲಿ ಒಬ್ಬರು  ನಾಯಿ ಜತೆ ಅಥವಾ ಇಲ್ಲದೇ  ವಾಕಿಂಗ್ ಹೋಗುವವರು .ಇವರಲ್ಲಿ ಹಲವರು  ಭಾರತದಿಂದ ಮಕ್ಕಳ ಮನೆಗೆ ನಮ್ಮಂತೆ ಕೆಲ ತಿಂಗಳುಗಳಿಗೆ  ಅಥವಾ ಖಾಯಂ ವಾಸಕ್ಕೆ ಬಂದವರು . 

            ನಮಗೆ ಮೊಮ್ಮಗನ ಜತೆ  ಆಟ ಅಡಿ ಸಮಯ ಹೋಗ ಬೇಕು ತಾನೇ ?ಅವನು ನಿದ್ದೆ ಮಾಡಿದಾಗ ಏನು ಮಾಡುವುದು ?ನನ್ನ ಬೀಗರು ನನ್ನನ್ನು ವಾಕಿಂಗ್ ಕರೆದು ಕೊಂಡು ಅಲ್ಲಿಯ ಮಾರ್ಗಗಳ ಪರಿಚಯ ಮಾಡಿಸಿದರು . (ಅವರು ಮೊದಲು ಎರಡು ಬಾರಿ ಅಲ್ಲಿಗೆ ಬಂದಿದ್ದರು ).  ನಾವು ಮೆಚ್ಚ ಬೇಕಾದ ಪಾಶ್ಚಿಮಾತ್ಯ ದೇಶಗಳ ಒಂದು ವೈಶಿಷ್ಟ್ಯ ಅಲ್ಲಿ ಪಾದಚಾರಿಗಳಿಗೆ ಇರುವ ಪ್ರಾಶಸ್ತ್ಯ . ರಸ್ತೆ ದಾಟುವ ಸ್ಥಳ ಗಳಲ್ಲಿ ವಾಹನ ಚಾಲಕರು ನಿಲ್ಲಿಸಿ ಪಾದಚಾರಿಗಳಿಗೆ ದಯವಿಟ್ಟು ಹೋಗಿರಿ ಎಂದು ವಿನಂತಿ ಮಾಡಿ ಅವರು ದಾಟಿದ ಮೇಲೆಯೇ ಹೋಗುವರು . ನಮ್ಮಲ್ಲಿಯ ಹಾಗೆ ಎರ್ರಾ ಬಿರ್ರಿ ಹೋಗಿ ಪಾದಚಾರಿಗಳಿಗೆ ಮನೆಯಲ್ಲಿ ಹೇಳಿ ಬಂದಿದ್ದೀರಾ ಎಂದು ದಬಾಯಿಸುವದು ಇಲ್ಲವೇ ಇಲ್ಲ .ಪುತ್ತೂರಿನಲ್ಲಿ ನಾನು ಪಾದಚಾರಿಗಳಿಗೆ ನಿಲ್ಲಿಸಿದರೆ ಹಿಂದಿನ ವಾಹನ ದವರು ಇವನಿಗೆ ಮಂಡೆ ಸಮ ಇಲ್ಲ ಎಂದು ಹಾರ್ನ್ ಮಾಡುವರು ,ದ್ವಿಚಕ್ರಿಗಳು ಎಡ ಬಲ ಎಂದು ನೋಡದೆ ನನ್ನನ್ನು ಕನಿಕರದಿಂದ ನೋಡಿಕೊಂಡು ಮುನ್ನುಗ್ಗುವರು .ನಾನು ಅಮೇರಿಕಾದಲ್ಲಿ ಈ ಬಾರಿ ಇದ್ದ ಒಂದೂವರೆ ತಿಂಗಳಿನಲ್ಲಿ ನಾನು ಒಂದೇ ಒಂದು ಬಾರಿ ಹಾರ್ನ್ ಶಬ್ದ ಕೇಳಿದ್ದು . 

ವಾಕಿಂಗ್ ಹೋಗುವಾಗ ನಾನು ಗಮನಿಸಿದ್ದು ,ಸ್ಥಳೀಯರು ನಮ್ಮನ್ನು ಕಂಡರೆ ಹಾಯ್ ಗುಡ್ ಮಾರ್ನಿಂಗ್ ಎಂದು ವಿಶ್ ಮಾಡಿ ತಮ್ಮಷ್ಟಕ್ಕೆ ಹೋಗುವರು .ಭಾರತದಿಂದ ಬಂದವರು ಮುಖ ಕೂಡಾ ನೋಡರು .ಬಹುಶ ಪರವೂರಿನಲ್ಲಿ  ಅಪರಿಚಿತರ ಸಂಗ ಅಪಾಯಕಾರಿ ಎಂದು ಇರ ಬಹುದು . ಇಂತಹ ವಾತಾವರಣದಲ್ಲಿ ನಮಗೆ ಪರಿಚಯ ಆದುದು ಶ್ರೀ ಮೋಹನ ರಾವು ಅವರು .ಇವರು ಮೂಲತಃ ಆಂಧ್ರ ದವರು ,ಒರಿಸಾ ಇವರ ಕರ್ಮಭೂಮಿ .ಅಲ್ಲಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರು . ಅವರ ಪತ್ನಿ ತೀರಿ ಹೋಗಿದ್ದು ಮಗ ಸೊಸೆ ಇಲ್ಲಿ ಕೆಲಸದಲ್ಲಿ ಇರುವರು .ಜೀವನ ಬಹುಪಾಲು ನಮ್ಮ ದೇಶದಲ್ಲಿ ಕಳೆದವರಿಗೆ ಇಲ್ಲಿ ಬಹಳ ಕಷ್ಟೆ .ಇಲ್ಲಿ ಪೇಪರ್ ಇಲ್ಲ ,ಹೊರಗಡೆ ಮಿತ್ರರು ಇಲ್ಲ ,ಊರ ಮನರಂಜನಾ ಕಾರ್ಯಕ್ರಮಗಳು ಕಡಿಮೆ .ಒಂದು ತರಹ ಡಿಪ್ರೆಶನ್ ಬಂದು ಬಿಡ ಬಹುದು . 

ರಾಯರು ವಾಕಿಂಗ್ ಮುಗಿಸಿ ಮರಳುತ್ತಿದ್ದ ನಮ್ಮನ್ನು ಕರೆದು ನೀವು ಉಭಯ ಕುಶಲೋಪರಿ ಪರಿಚಯ ಮಾಡಿಕೊಂಡು ಅವರ ಕಮ್ಯೂನಿಟಿ ಯ ಪಾರ್ಕ್ ಗೆ ಆಹ್ವಾನಿಸಿದರು .ಅಲ್ಲಿ ಇವರೇ ಮುಂದಾಳು ತನ ವಹಿಸಿ ಗೆಳೆಯರ ಗುಂಪು ರಚಿಸಿ ದಿನವೂ ಎರಡು ಮೂರು ಗಂಟೆ ಸೇರಿ ಹರಟೆ ಹೊಡೆಯುವರು . ವಾರಕ್ಕೆ ಒಂದು ವಿವಾಹ ವಾರ್ಷಿಕೋತ್ಸವ ,ಹೊಸಬರಿಗೆ ಸ್ವಾಗತ ಇಲ್ಲವೇ ವಿದಾಯ ಕೂಟ . ಇಲ್ಲಿ ಎಲ್ಲಾ ಭಾರತೀಯ ಹಿರಿಯ ನಾಗರಿಕರು . ಎಂಬತ್ತು ದಾಟಿದ ಈ ಹಿರಿಯರ ನಾಯಕತ್ವ ದಲ್ಲಿ  ಬಹಳ ಚನ್ನಾಗಿ ನಡೆಯುತ್ತಿದ್ದು ನಾನು ಕೆಲ ದಿನ ಅವರ ಸ್ನೇಹ ಸಾಹಚರ್ಯ ಸಂಪಾದಿಸಿದೆನು .;ಪಾರ್ಟಿ ಯಲ್ಲಿ ಸವಿದೆನು . ಇಂತಹ ಒಂದು ಕೂಟ ಉಳಿದ ಕಮ್ಯೂನಿಟಿ ಗಳಲ್ಲಿ ಕಂಡು ಬರಲಿಲ್ಲ .ನಾನು ದೇಶಕ್ಕೆ ಮರಳುವ ಮುನ್ನಾ  ಅವರ ಮನೆ ಪಕ್ಕ ದಿನ ಹುಬ್ಬಳ್ಳಿಯ ಟಿಕಾರೆ ಎಂಬವರ ಗೃಹ ಪ್ರವೇಶ ಇದ್ದು ನನ್ನನ್ನು ಅವರೇ ಅಲ್ಲಿ ಕರೆದು ಕೊಂಡು ಹೋಗಿ ಪ್ರಸಾದ ಸಿಹಿ ತಿಂಡಿ ಕೊಡಿಸಿದರು . 

ಇಂತಹ ಮೋಹನ ರಾಯರು ಅಲ್ಲಲ್ಲಿ ಇದ್ದರೆ  ಹಿರಿಯ ನಾಗರಿಕರ ಬಾಳು ಸ್ವಲ್ಪ ಸಹನೀಯ ಆದೀತು .ಇಂದು (ಇಂಡಿಯಾ ವೂ ಸೇರಿ ).ಅವರಿಗೆ ನೂರು ನಮನಗಳು .




ಶನಿವಾರ, ಜೂನ್ 17, 2023

ವೈದ್ಯರು ರೋಗಿಗಳ ಜತೆ ವೃತ್ತಿ ಪರ ಸಂಬಂಧ  ಇಟ್ಟು ಕೊಳ್ಳುತ್ತಾರಲ್ಲದೆ ತೀರಾ ಧೈರ್ಯ ವೈಯುಕ್ತಿಕ ಭಾವನಾತ್ಮಕ ವಾಗಿ ಬಹಳ ಕಡಿಮೆ . ಕೆಲವೊಮ್ಮೆ ತೀರಾ ಆಪ್ತರಾದವರು ಗತಿಸಿದಾಗ ಆದ ನೋವನ್ನು ನಾನು ಹಂಚಿಕೊಂಡಿದ್ದನ್ನು ನೀವು ಗಮನಿಸಿರಬಹುದು . 

           ಶ್ರೀಮತಿ ಜೋಹರಾಬಿ ನನ್ನ ಆರೈಕೆಯ ಪರಿಧಿಯಲ್ಲಿ ಇದ್ದವರು ಊರಲ್ಲಿ ನನ್ನ ಅನುಪಸ್ಥಿತಿ ವೇಳೆ ಕೊನೆಯುಸಿರು ಎಳೆದರು .ತೀರಾ ಸಂಕಟದ ವೇಳೆ ಕೂಡಾ ನನ್ನನ್ನು ಒಮ್ಮೆ ನೋಡಬೇಕು ಎಂದು ಬಯಸಿದರಂತೆ .  

ವರ್ಷದ ಹಿಂದೆ ಅವರ ಮಗ ಬಂದು ತನ್ನ ತಾಯಿಗೆ ವಾಸಿಯಾಗದ ಉದರ ಸಂಬಂಧಿ ಕಾಯಿಲೆ ಇದೆ ಎಂದು ಮಂಗಳೂರಿನ ತಜ್ಞ ವೈದ್ಯರು ತಿಳಿಸಿರುವರು ,ಅವರಿಗೆ ನೋವು ಅಶಕ್ತಿ ಜಾಸ್ತಿ ಆದಾಗ ನಿಮ್ಮಲ್ಲಿ ಬಂದು ತಾತ್ಕಾಲಿಕ ಶಮನ ಕ್ಕೆ ಉಪಚಾರ ಮಾಡಿಸಿ ಕೊಳ್ಳ ಬಹುದೇ ?ಎಂದು ವಿಚಾರಿಸಿದರು . ಇಂತಹ ಸಂದರ್ಭ ನಾವು ಪಾಲಿಯೇಟಿವ್ ಕೇರ್ ಅಥವಾ ಶಮನ 

ಉಪಚಾರ ಕೊಡುತ್ತೇವೆ . ಆದಷ್ಟು ಧೈರ್ಯ ತುಂಬುತ್ತೇವೆ . ವೈಯುಕ್ತಿಕವಾಗಿ ನನಗೆ ಇಂತಹವರ ಬಗ್ಗೆ ಕಾಳಜಿ ಅಧಿಕ . ನಾನು ಕೂಡಲೇ ಅದಕ್ಕೆ ಸಮ್ಮತಿಸಿ ನಮ್ಮ ಸಿಬ್ಬಂದಿಗಳಿಗೆ ಯಾವುದೇ ಸಮಯ ಅವರು ಬಂದರೂ ಅವರನ್ನು ದಾಖಲು ಮಾಡಿಕೊಂಡು ಕೊಡ ಬೇಕಾದ ಚಿಕಿತ್ಸೆ ಬಗ್ಗೆ  ತಿಳಿ ಹೇಳಿದೆ .ಹೀಗೆ ಅವರು ೨೦ ಕ್ಕೂ ಜಾಸ್ತಿ ಬಂದಿರ ಬಹುದು . ಅವರ ಮಕ್ಕಳು  ಪ್ರತಿ ಬಾರಿಯೂ ಯಾವುದೇ ಸಿಡಿ ಮಿಡಿ ಇಲ್ಲದೆ ಪ್ರೀತಿಯಿಂದ ಅವರನ್ನು ಕರೆತಂದು ಅವರ ಜತೆ ಇರುವರು . ದಿನವೂ ಸಾಯುವವರಿಗೆ ಅಳುವವರು ಯಾರು ಎಂದು  ಒಂದೆರಡು ಸಂದರ್ಭದ ನಂತರ ಮನೆಯವವರು ಉದಾಸೀನ ತೋರುವುದು ಈಗಂತೂ ಸಾಮಾನ್ಯ ..ಇವರ ಬಂಧುಗಳು ಇದಕ್ಕೆ ಅಪವಾದ . ಅಲ್ಲದೆ ಪುನಃ ಪುನಃ ಆಸ್ಪತ್ರೆಗೆ ಬರುವವರು ಸಿಬ್ಬಂದಿ ಜತೆ ಮನಸ್ತಾಪ ಮಾಡಿಕೊಳ್ಳುವುದು ಸಾಮಾನ್ಯ . ಕೊನೆಯ ವರೆಗೂ ನಮ್ಮ ನರ್ಸ್ ಮತ್ತು ಇತರರ ಮೇಲೆ ಯಾವುದೇ ತಕರಾರು ಇರಲಿಲ್ಲ ಮಾತ್ರ ಪರಸ್ಪರ ಸ್ನೇಹ ಕಾಳಜಿ ಉಳಿಸಿ ಕೊಂಡಿದ್ದರು .. 

ನಾನು ರೌಂಡ್ಸ್ ನಲ್ಲಿ ಅವರ ಜತೆ ಕುಶಲೋಪರಿ ವಿಚಾರಿಸುವೆನು .ಅವರು ತಮ್ಮ ತೀವ್ರ ತರ ನೋವನ್ನು ಪ್ರಕಟ ಪಡಿಸದೆ ಹಸನ್ಮುಖ ರಾಗಿ ಇರುವರು .ಇಂತಹ ಪಕ್ವತೆ ಬಹಳ ಕಡಿಮೆ ಮಂದಿಯಲ್ಲಿ ಕಂಡಿರುವೆನು . ನಡುವೆ ನಾನು ಕಾಯಿಲೆ ಬಿದ್ದು ಗುಣಮುಖನಾದ ವಿಷಯ ಅವರಿಗೆ ತಿಳಿದು ,ಪ್ರತಿ ಭಾರಿ ಅವವನ್ನು ನೋಡ ಹೋದಾಗ ನೀವು ಹೇಗಿದ್ದೀರಿ ಡಾಕ್ಟ್ರೇ ಎಂದು ಕಾಳಜಿಯಿಂದ ಕೇಳುವರು ..ನಾನು ಅವರಿಗೆ ಸಮಾಧಾನ ಹೇಳುವೊದೋ ಅವರು ನನಗೋ ?ಎಂದು ಗಲಿಬಿಲಿ ಆಗುತ್ತಿತ್ತು . 

ಇಲ್ಲಿ ಅವರ ಮಕ್ಕಳು (ಕಲ್ಲಡ್ಕ ದಲ್ಲಿರುವ ಮಗಳೂ ಸೇರಿ )ಅವರನ್ನು ನೋಡಿಕೊಂಡ ಪರಿ ಇತ್ತೀಚಿಗೆ ಅಪರೂಪವಾಗುತ್ತಿಯುವ ಸೇವೆ . ಅವರಿಗೆ ಒಳ್ಳೆಯದಾಗಲಿ . ಪಡುತ್ತಿದ್ದ ಕಷ್ಟ ದೇವರು ಕೊನೆಗಾಣಿದರೂ ಕಷ್ಟ ಸುಖಗಗಳನ್ನು ,ಲೋಕ ಬಂಧಗಳನ್ನು ಮೀರಿ ಯೋಗಿಯಂತೆ  ಇದ್ದ ಒಬ್ಬ ಸಹೋದರಿಯನ್ನು ನಾನು ಕಳೆದು ಕೊಂಡ ಭಾವನೆ . 

(ಇಲ್ಲಿ ಅವರ ಹೆಸರು ಬಳಸಲು ಅನುಮತಿ ನೀಡಿದ ಮಗಳಿಗೆ ಪ್ರತ್ಯೇಕ ಧನ್ಯವಾದ )


ಶುಕ್ರವಾರ, ಜೂನ್ 16, 2023

ಅಮೆರಿಕಾ ಪಯಣ ೧

ಅಮೆರಿಕಾ ಪ್ರವಾಸದ ಬಗ್ಗೆ ಬರೆಯಿರಿ ಎಂದು ಮಿತ್ರರು ಕೋರಿದ ಕಾರಣ ತೊಡಗಿರುವೆನು . ಈಗ ಹೆಚ್ಚಿನವರು ವಿದೇಶ ಪ್ರಯಾಣ ಮಾಡಿ ಅನುಭವ ಇರುವವರಾದರೂ ಇಲ್ಲದ ಕೆಲವರಿಗಾಗಿ  ಮುದಲಿಂದ ತೊಡಗುವೆನು . ಮಕ್ಕಳ ಮನೆಗೆ ಹೋಗುವಾಗ ತಾಯಂದಿರ ತಯಾರಿ ತಿಂಗಳುಗಳ ಮೊದಲೇ ಆರಂಭ .ಉಪ್ಪಿನಕಾಯಿ ,ಹಪ್ಪಳ ,ಸೆಂಡಿಗೆ ,ಸಿಹಿತಿಂಡಿ ಇತ್ಯಾದಿಗಳ ತಯಾರಿ ಮತ್ತು ಪ್ಯಾಕಿಂಗ್ ,ಕುಕ್ಕರ್ ,ಕಾವಲಿಗೆ ,ಶ್ಯಾವಿಗೆ ಮುಟ್ಟು ನಂತಹ ಪಾತ್ರೆ ಪರಡಿ ,ಸೀರೆ ಗಳು ಕೂಡಾ . ಸಾಮಾನ್ಯ ವಿದೇಶ ಪ್ರಯಾಣದಲ್ಲಿ ೨೨ ಕಿಲೋ ದೊಡ್ಡ ಪೆಟ್ಟಿಗೆ ಲಗೇಜ್ ಕೋಣೆ ಯಲ್ಲಿ ಉಚಿತ ವಾಗಿ  ಬಿಡುವರು .ಅದನ್ನು ನಾವು ನಿಲ್ದಾಣದಲ್ಲಿ ವಿಮಾನ ಸಂಸ್ಥೆಯ ಕೌಂಟರ್ ನಲ್ಲಿ  ಕೊಡ ಬೇಕು  ,ನಡುವೆ ಇನ್ನೊಂದು ನಿಲ್ದಾಣದಲ್ಲಿ ಅದೇ  ಸಂಸ್ಥೆಯ ವಿಮಾನವನ್ನು ಹಿಡಿಯುವುದಾದರೆ ಅವರೇ ಅದನ್ನು ಬದಲಾಯಿಸುವರು . ಇನ್ನೊಂದು ನಮ್ಮ ಕೈಯ್ಯಲ್ಲಿ ಅಥವಾ ಬೆನ್ನಲ್ಲಿ ಹಾಕಿಕೊಂಡು ವಿಮಾನದ ಒಳಗೆ ಕೊಂಡು  ಹೋಗುವ ಬ್ಯಾಗ್ .ಇದು ಸಾಮಾನ್ಯ ಏಳು ಕಿಲೋ ಇರಬಹುದು . ಲ್ಯಾಪಟಾಪ್ ಕೂಡಾ ಒಳಗಡೆ ಕೊಂಡು ಹೋಗ ಬಹುದು. ೧೦೦ಮಿಲಿ ಗಿಂತ ಅಧಿಕ ಟೂತ್ ಪೇಸ್ಟ್ ಇತ್ಯಾದಿ ಕೊಂಡು ಹೋಗಲು ಬಿಡರು .ಅದೇ ರೀತಿ ಚಾಕು ಚೂರಿ ಇತ್ಯಾದಿ  . ಎಲ್ಲಾ ಸಾಮಾನು ಕಟ್ಟಿ ಮನೆಯಲ್ಲಿಯೇ ತೂಗಿಕೊಂಡು ಹೋಗುವುದು ಸಾಮಾನ್ಯ . ಲಗೇಜ್ ತೂಕ ಲೆಕ್ಕಕ್ಕಿಂದ ಇದ್ದರೆ ಬಹಳ ಅಧಿಕ ಹಣ ಕಕ್ಕ ಬೇಕಾಗುವುದು . 

ಬೆಂಗಳೂರಿನಿಂದ ಎಮಿರೇಟ್ಸ್ ಸಂಸ್ಥೆಯ ವಿಮಾನ ಮುಂಜಾನೆ    4.45 ಕ್ಕೆ .ಸಾಮಾನ್ಯ ಎರಡು  ಮೂರು ಗಂಟೆ ಮೊದಲೇ  ನಿಲ್ದಾಣ ದಲ್ಲಿ ಹಾಜರಿರ  ಬೇಕಾದುದರಿಂದ ರಾತ್ರಿ ನಿದ್ದೆ ತ್ಯಾಗ ಮಾಡ ಬೇಕಾಯಿತು . ನಮ್ಮ ಸೂಟ್ಕೇಸ್ ಗಳನ್ನು  ಎಮಿರೇಟ್ಸ್ ಕೌಂಟರ್ ನಲ್ಲಿ  ಒಪ್ಪಿಸಿ  ಬೋರ್ಡಿಂಗ್ ಪಾಸ್ ತೆಗೆದು ಕೊಂಡೆವು . ಆಮೇಲೆ ಕೈಚೀಲ (ಕ್ಯಾಬಿನ್ ಬ್ಯಾಗ್ )ಸಹಿತ ವಲಸೆ ಅಧಿಕಾರಿಗಳ ಬಳಿಗೆ .ಅವರು ನಮ್ಮ ಭಾವಚಿತ್ರ ತೆಗೆದು ,ಪಾಸ್ಪೋರ್ಟ್ ನಲ್ಲಿ ಮೊಹರು ಜಡಿದು ಒಳ ಬಿಡುವರು . ಇಲ್ಲಿ ಬರೀ ಜನ ಗುಂಗುಳಿ ಇತ್ತು . ಆಮೇಲೆ  ಸುರಕ್ಷಾ ತಪಾಸಣೆ .ನಾನು ಕಂಡಂತೆ ಬೆಂಗಳೂರಿನಂತಹ  ಕಠಿಣ ಮತ್ತು ಸಮಯ ತೆಗೆದು ಕೊಳ್ಳುವ ಸೆಕ್ಯೂರಿಟಿ ಚೆಕ್ ಬೇರೆಲ್ಲೂ ಇರದು .ಇಲ್ಲಿ ಹೆಚ್ಚಿನವರು ಹಿಂದಿ ಭಾಷಿಗರು . ನಮ್ಮ ಶೂ ,ಬೆಲ್ಟ್ ,ಪರ್ಸ್ ,ಮೊಬೈಲ್ ಮತ್ತು ಕೈಚೀಲ ಒಂದು ತಟ್ಟೆಯಲ್ಲಿ ಹಾಕಿ ,ನಾವು ಪರಿಶೋಧಕರ ಲೋಹ ಪರಿಶೋಧನೆ ಗೆ ಒಳಗಾಗಬೇಕು . ಪಿ ಟಿ ಮಾಸ್ತ್ರ ಹಾಗೆ ಅವರು ನಮ್ಮ ನ್ನು ಕೈ ಎತ್ತಿಸಿ ,ಹಿಂದೆ ಮುಂದೆ ತಿರುಗಿಸಿ ನೋಡಿ  ನಡೀರಿ ಎಂದು ಗದರುವರು .ನಮ್ಮ ಬ್ಯಾಗ್ ಪರಿಶೋಧಕ ಯಂತ್ರದ ಮೂಲಕ ಬಂದು ನಮ್ಮನ್ನು ಸೇರುವದು . ಈ ಬೆಲ್ಟ್ ಬಿಚ್ಚುವ ಕೆಲಸವೇ ಬೇಡ ಎಂದು ನಾನು ಎಲಾಸ್ಟಿಕ್ ಇರುವ ಪ್ಯಾಂಟ್ ತೊಟ್ಟಿದ್ದು ಬಹಳ ಅನುಕೂಲ ಆಯಿತು . ಯಾಕೆಂದರೆ  ಮುಂದೆ ದುಬೈ ಯಲ್ಲಿ ವಿಮಾನ ಬದಲಿಸುವಾಗ ಪುನಃ ಇಂತಹದೇ ಎರಡು ಪರಿಶೀಲನೆ ಇತ್ತು .

ಈ ಅಗ್ನಿ ಪರೀಕ್ಷೆಗಳನ್ನು ದಾಟಿ ನಾವು ವಿಮಾನದ ಒಳಗೆ ಪ್ರವೇಶಿಸುವಾಗ ಸುಂದರಿಯರಾದ ಗಗನ ಸಖಿಯರು ಮುಗುಳು ನಗುವಿನೊಡನೆ ಸ್ವಾಗತಿಸುವಾಗ ನಮ್ಮ ಅಲ್ಲಿಯ ವರೆಗಿನ ಮಾರ್ಗಾಯಾಸ ಪರಿಹಾರ ಆಗುವುದು .  ಬೆಂಗಳೂರಿನಿಂದ ದುಬೈಗೆ ಮೂರೂವರೆ ಗಂಟೆ ಪಯಣ , ಆದರೆ ಪಶ್ಚಿಮಕ್ಕೆ ಹೋದಂತೆ ಸಮಯ ಹಿಂದೆ ಹೋಗುವುದರಿಂದ ನಮ್ಮ ಕೈಗಡಿಯಾರ ಆಗಾಗ ಹೊಂದಿಸಿ ಕೊಳ್ಳ ಬೇಕಾಗುವದು . ವಿಮಾನದಲ್ಲಿ ಸ್ವಾಗತ ಪಾನೀಯ ಮತ್ತು  ಭಾರೀ ಎನ್ನ ಬಹುದಾದ    ಬ್ರೇಕ್ ಫಾಸ್ಟ್ ಆಯಿತು . ಪುನಃ ದುಬೈಯಲ್ಲಿ ಅವರ ಸಿಯಾಟಲ್ ವಿಮಾನ ಏರಿದಾಗ ಮತ್ತೊಂದು ಬ್ರೇಕ್ ಫಾಸ್ಟ್ . ಸಮಯ ವಲಯ ಬದಲಾವಣೆ ಯಿಂದ  ಯಾವತ್ತಿನ  ಊಟದ ಸಮಯ ಬ್ರೇಕ್ ಫಾಸ್ಟ್ ಮತ್ತು ತಿಂಡಿ  ಅಥವಾ ನಿದ್ದೆಯ ಸಮಯ ಊಟ ಬಂದು ಹೊಟ್ಟೆಗೆ ಗಲಿಬಿಲಿ ಆಗುವುದು . 

ದುಬಾಯ್ ನಿಲ್ದಾಣ ನಿಮಗೆ ಪರಕೀಯ ಅನಿಸುವುದಿಲ್ಲ .ಅಲ್ಲಿಯ ಬಹುಪಾಲು ನೌಕರರು ಭಾರತ ಉಪಖಂಡ ದವರಾಗಿದ್ದು ಹಿಂದಿ ಭಾಷೆ ಬಲ್ಲವರು ಮತ್ತು ಸಹಾಯಕ್ಕೆ ಸದಾ ಸಿದ್ದರು . ದುಬಾಯಿ ಯಿಂದ ಸಿಯಾಟಲ್ ಗೆ ೧೪ ಗಂಟೆಗಳ ಸುಧೀರ್ಘ ಪಯಣ . ಸೀಟಿನ ಮುಂದೆ ಇರುವ   ಪರ ದೆ  ಯಲ್ಲಿ  ಭಾರತೀಯ ಮತ್ತು      ವಿದೇಶಿ ಚಲಚಿತ್ರ ನೋಡ ಬಹುದು . ಆದರೆ ೧೪ ಗಂಟೆ ಕುಳಿತು ಕೊಂಡು ಮಾಡುವ ಪ್ರಯಾಣ ತ್ರಾಸ ದಾಯಕ .  ನಮಗೆ ಕಾಲು ಚಾಚ  ಬಲ್ಲ ಅನುಕೂಲ ಇರುವ ಸೀಟ್ ಕಾದಿರಿಸಿದ್ದು ತುಂಬಾ ಅನುಕೂಲ ಆಯಿತು

ಬುಧವಾರ, ಜೂನ್ 14, 2023

 ಕೋಳಿ ಕೂಗದೇ ಬೆಳಗಾಗದೇ ?

ನನ್ನ ಮೊಮ್ಮಗನ ಪ್ರಥಮ ಹುಟ್ಟು ಹಬ್ಬ ಆಚರಣೆ ಮತ್ತು ಕೆಲ ದಿನ ಅವನ  ಬಾಲ ಲೀಲೆಗಳನ್ನು ಸಂತೋಷಿಸುತ್ತಾ ಕಳೆಯಲು ನಾನೂ ನನ್ನ ಮನೆಯವರು  ಅಮೇರಿಕಾ ದೇಶದ ಸಿಯಾಟಲ್ ನಗರಕ್ಕೆ ಹೋಗಿದ್ದೆವು . ನನ್ನ ಲ್ಯಾಪ್ಟಾಪ್ ಕೊಂಡು ಹೋಗಿಲ್ಲದ ಕಾರಣ  ಫೇಸ್ ಬುಕ್ ನಲ್ಲಿ ನಮ್ಮ ನಿಮ್ಮ ಭೇಟಿ ಒಂದೂವರೆ ತಿಂಗಳು ಇಲ್ಲದಾಗಿದ್ದಕ್ಕೆ ಬೇಸರ ಇದೆ . ಅಲ್ಲಿಯ ಬಗ್ಗೆ ಬರೆಯುವೆ .

ಇನ್ನು ವಾಪಸು ಬರುವಾಗ ನನ್ನ ಧರ್ಮ ಪತ್ನಿ ಅಲ್ಲೇ ಉಳಿದು ಕೊಂಡ ಕಾರಣ ನಾನು ಒಬ್ಬನೇ . ತಾಯಂದಿರು ಗಂಡ ಅಥವಾ ಮೊಮ್ಮಗ ನಲ್ಲಿ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದರೆ  ಬಹುಪಾಲು ಮೊಮ್ಮಗನನ್ನೇ ಆಯ್ಕೆ ಮಾಡಿಕೊಳ್ಳುವರು . 

ಸರಿ ,ನಾನೊಬ್ಬನೇ ಬರುವುದು ಆದ ಕಾರಣ ನನ್ನವರಿಗೆ ಟೆನ್ಶನ್ .ಈಗಿನ ಪಿ ಯು ಸಿ ಪರೀಕ್ಷೆ ಬರೆಯಲು ಮಕ್ಕಳು ಹೋಗುವಾಗ ತಾಯಂದಿರಿಗೆ ಇರುವಂತೆ . ಪ್ರಶ್ನೆಗಳನ್ನು  ಸರೀ ಓದು ,ಗಡಿಬಿಡಿ ಬೇಡ , ಇತ್ಯಾದಿ ಇತ್ಯಾದಿ ಉಪದೇಶ ಪುನಃ ಪುನಃ ಕೊಟ್ಟು ಮಕ್ಕಳ ತಲೆ ಚಿಟ್ಟು ಹಿಡಿಯುವುದು . ಹಾಗೇ ನನಗೂ ನನ್ನಾಕೆ ,"ಮನೆಯನ್ನು ದಿನವೂ ಗುಡಿಸಿ ,ಬಲೆ ತೆಗೆಯಿರಿ ,ಡಬ್ಬಿಯಲ್ಲಿ ಅವಲಕ್ಕಿ ಇದೆ ,ಉಪ್ಪಿನಕಾಯಿ ಕಪಾಟಿನಲ್ಲಿ ಇದೆ ,ಆದರೆ ಜಾಸ್ತಿ ತಿನ್ನ ಬೇಡಿ . ಹೂವಿನ ಗಿಡಗಳಿಗೆ ನೀರು ಸರಿಯಾಗಿ ಹಾಕಿ ಇತ್ಯಾದಿ ಹತ್ತು ಹನ್ನೆರಡು ಸಲಹೆ (ಆರ್ಡರ್ ?)ಕೊಟ್ಟಾಗ ನಾನು ಕೋಲೆ ಬಸವನಂತೆ ತಲೆ ಆಡಿಸುವೆ ."ನೀವು ಸುಮ್ಮನೇ ತಲೆ ಆಡಿಸ ಬೇಡಿ .ನಾನು ಬರುವಾಗ ಮನೆ ಆರೂಪ ಆದ್ರೆ ನೋಡಿ "ಎಂಬ ಎಚ್ಚರಿಕೆ ." ಅವಳು ತಿಳಿದು ಕೊಂಡಿದ್ದಾಳೆ ತಾನು ಇದ್ದರೆ ಮಾತ್ರ ಮನೆ ನಡೆಯುವುದು . ಕೋಳಿ ತಾನು ಕೂಗಿದರೆ ಮಾತ್ರ ಬೆಳಗು ಆಗುವುದು ಎಂದು ಕೊಂಡಿತಂತೆ "ಎಂದು ಮನಸಿನಲ್ಲೇ ನಕ್ಕೆ . 

 ಬೆಳ್ಳಂ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ದಿಂದ ಮನೆಗೆ ಬರುವಾಗ ದಾರಿಯಲ್ಲಿ ಒಂದು ಲೀಟರ್ ಹಾಲು ಕೊಂಡು ಕೊಂಡೆ ಚಹಾ ಮಾಡಿ ಕುಡಿಯಲು . ಬಾಗಿಲು ತೆರೆದು ಮನೆ ಪ್ರವೇಶಿಸದಾಗ ನೆಲ ,ಪೀಠೋಪಕರಣ ಗಳಲ್ಲಿ ಧೂಳು ,ಅಲ್ಲಲ್ಲಿ ಜೇಡರ ಬಲೆ ,ಕ್ರಿಮಿ ಕೀಟ ,ಜಿರಳೆಗಳು ಸ್ವಚ್ಚಂದ ವಾಗಿ ಓಡಾಡುತ್ತಿದ್ದು ,ನನ್ನನ್ನು ಆಗಂತುಕ ನೆಂದು ಸ್ವಾಗತಿಸಿದವು . ಗೋಡೆ ಗಡಿಯಾರ ನಿಂತಿತ್ತು . ಶೀತ ಪ್ರದೇಶ ದಿಂದ ಬಂದವನಾದುದರಿಂದ ಸಿಕ್ಕಾ ಬಟ್ಟೆ ಸೆಖೆ ,ಫ್ಯಾನ್ ಹಾಕಿದರೆ ಧೂಳು ಏಳುವುದು . ರಣರಂಗಕ್ಕೆ ಹೊಕ್ಕ ಉತ್ತರ ಕುಮಾರ ನಂತೆ ಆಯಿತು . ತಂದ ಸೂಟ್ಕೇಸ್ ತೆರೆದು ಬಟ್ಟೆ ಬರೆ ಇತ್ಯಾಗಿ ಹೊರ ಬಂದಾಗ ಇವುಗಳನ್ನು ತೊಳೆಯುವದು ಎಂದು ಕೊಂಡೆ ,ಆದರೆ ಒಂದು ಚಹಾ ಕುಡಿದರೆ ಶಕ್ತಿ ಬಂದೀತು ಎಂದು ಹಾಲು ಒಲೆಯಲ್ಲಿ ಇಟ್ಟೆ . ವಾಲ್ ಕ್ಲಾಕ್ ಗೆ ಬ್ಯಾಟರಿ ಹೊಸತು ಹಾಕುವಾ ಎಂದು ಹುಡುಕಾಡಿ ಹಾಕಿ ಗಂಟೆ ಸರಿ ಮಾಡಿ ಅಡಿಗೆ ಮನೆಗೆ ಬಂದರೆ ಹಾಲು ಉಕ್ಕಿ ಚೆಲ್ಲಿತ್ತು .  ಸಮುದ್ರ ಲಂಘಿಸಿದ ತಪ್ಪಿಗೆ ಎರಡನೇ ಗೃಹ ಪ್ರವೇಶ  ಎಂದು ಕೊಂಡು ಚೆಲ್ಲಿದ್ದನು ಒರಸಿ ,ಉಳಿದ ಹಾಲಿನಲ್ಲಿ ಚಹಾ ಮಾಡಿ ಕುಡಿದಾಗ ಸ್ವಲ್ಪ ಶಕ್ತಿ ಬಂತು . ಇನ್ನು ಖಾಲಿಯಾದ ಸೂಟ್ಕೇಸ್ ಅಟ್ಟದಲ್ಲಿ ಇಡಲು ಹೋದರೆ ಅಲ್ಲಿ ಶೇಖರಿಸಿ ಇಟ್ಟಿದ್ದ ಹಳೇ ಮಯೂರ ,ಅನಿಕೇತನ  ಮಾಸಿಕಗಳು ಧೂಳು ಮಯವಾಗಿ ಇರುವುದ ಕಂಡು ಅವುಗಳನ್ನು ಕೊಡಹಿ ,ಇವುಗಳನ್ನು ನಾಳೆ ಆಸ್ಪತ್ರೆಗೆ ಕೊಂಡು ಹೋಗಿ ಸಿಸ್ಟೆರ್ ಗಳಿಗೆ ಕೊಟ್ಟರೆ ಅವರು ಓದಿಯಾರು ಅಥವಾ ರೋಗಿಗಳ ಜತೆಗೆ ಇರುವವರಿಗೆ ಕೊಡ ಬಹುದು ಎಂದು  ಒಂದು ಚೀಲದಲ್ಲಿ ಹಾಕಿ ಕೊಂಡೆ . ಅಟ್ಟಣಿಗೆ ಬಾಗಿಲು ತಾಟಿ ಮೊಳಕೈ ಗಾಯ ವಾಯಿತು . ಅದಕ್ಕೆ ಮುಲಾಮು ಹಚ್ಚಿ ,ಜೆಟ್ ಲ್ಯಾಗ್ ನಿಂದ ತೂಗುತ್ತಿದ್ದ ನಿದ್ದೆಯ ಮಂಪರಿನಲ್ಲಿ ಇನ್ನೇನು ಮಾಡುವುದು ?ಗುಡಿಸಿ ಒರೆಸಲೇ ,ಅಲ್ಲ ನಾಳೆಗೆ ಇಡಲೇ ?ಎಂದು ಗಾಢ ವಾಗಿ ಯೋಚಿಸುತ್ತಾ ಸೋಫಾ ದಲ್ಲಿ ಕುಳಿತೆ ..ಟಿವಿ ಸರಿ ಉಂಟಾ ನೋಡ ಬೇಕು ,ರಾತ್ರಿ ಊಟಕ್ಕೆ ಹೋಟೆಲ್ ಗೆ ಹೋಗ ಬೇಕು ;ನಾಳೆ ಅಡ್ವಾನ್ಸ್ ಟ್ಯಾಕ್ಸ್ ,ಕರೆಂಟ್ ,ಫೋನ್ ಬಿಲ್ ಇತ್ಯಾದಿ ಪಾವತಿಸ ಬೇಕು ಎಂದು  ಪ್ಲಾನ್ ಹಾಕಿದ್ದವನಿಗೆ ತೂಕಡಿಕೆ ಬಂತು . 

ಎಚ್ಚರ ವಾಗಿ ನೋಡುತ್ತೇನೆ ರಾತ್ರಿ ಒಂಬತ್ತು ಗಂಟೆ .ಮಧ್ಯಾಹ್ನ ಊಟವೂ ಇಲ್ಲ ,ರಾತ್ರಿಯೂ ಉಪವಾಸವೇ ಎಂದು ಸ್ವಲ್ಪ ಅವಲಕ್ಕಿ ನೀರಲ್ಲಿ ಚಂಡಿ ಮಾಡಿ ಉಪ್ಪಿನಕಾಯಿ ಜತೆ ತಿಂದು ಸ್ನಾನ ಮಾಡಿ ಧೂಳು ತುಂಬಿದ ಹಾಸಿಗೆಯಲ್ಲಿ ಪವಡಿಸುವಾಗ ಹೆಂಡತಿಯೊಬ್ಬಳು ಮನೆಯೊಳಗಿಗಿದ್ದರೆ ಎಂಬ ಕವನ ನೆನಪಾಯಿತು